ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ:ಸಂತಾಪ


ರಸ್ತೆಯ ಎರಡೂ ಬದಿಯಲ್ಲಿ ಹಸಿರು ಹೊಲ. ನಾಗರಾಜ ಕುಳಿತ ಕಾರು ಹಸಿರನ್ನೂ ಬಿಸಿಲನ್ನೂ ಕಾತರವನ್ನೂ ಹಿಮ್ಮೆಟ್ಟಿಸುತ್ತಾ ಧಾವಿಸುತ್ತಿತ್ತು. ನಿರ್ಮಲಾ ಜೋಷಿಯ ಸಾವಿನಿಂದ ತಾನು ಅಷ್ಟೇನೂ ಕಂಗಾಲಾಗಿಲ್ಲ ಎಂದು ನಂಬಿಸಿಕೊಳ್ಳುತ್ತಾ, ಆಗಾಗ ಮಂಜು ಮಂಜಾಗುತ್ತಿದ್ದ ಕನ್ನಡಕವನ್ನು ಒರೆಸಿಕೊಳ್ಳುತ್ತಾ ನಾಗರಾಜ ಸಂತಾಪ ಸೂಚಕ ಸಭೆಯಲ್ಲಿ ಏನೇನು ಮಾತಾಡಬಹುದು ಎಂದು ಮನಸ್ಸಿನಲ್ಲೇ ಟಿಪ್ಪಣಿ ಮಾಡಿಕೊಳ್ಳತೊಡಗಿದ.

ನಿರ್ಮಲಾ ಜೋಷಿಯನ್ನು ನೋಡಿ ಹತ್ತೋ ಹನ್ನೆರಡೋ ವರ್ಷವಾಗಿರಬೇಕು. ಅವಳ ಹೆಣ ನೋಡುವುದಕ್ಕೂ ತಾನು ಹೋಗಲಾಗಲಿಲ್ಲ. ಹೋಗಿದ್ದರೆ ಹೆಂಡತಿ ಸಂಧ್ಯಾ ಕೈಲಿ ಬೈಸಿಕೊಳ್ಳಬೇಕಾಗಿತ್ತು. ಮಗ ದಿಲೀಪ ಚುಚ್ಚಿ ಮಾತಾಡುತ್ತಿದ್ದ. ಅದರಿಂದೆಲ್ಲ ಪಾರಾಗಲೆಂಬಂತೆ ನಿರ್ಮಲಾ ಜೋಷಿ ಸತ್ತ ಸುದ್ದಿ ಬಂದದ್ದೇ ತಡ, ಅದೊಂದು ಮಹತ್ವದ ಸುದ್ದಿಯೇ ಅಲ್ಲ ಎಂಬಂತೆ ನಾಗರಾಜ ವರ್ತಿಸಿದ್ದ. ದುರದೃಷ್ಟವಶಾತ್ ಆ ಸುದ್ದಿಯನ್ನು ಶೈಲಜಾ ಜೋಷಿ ಮನೆಗೇ ಫೋನ್ ಮಾಡಿ ಹೇಳಿದ್ದಳು. ಫೋನ್ ಸ್ವೀಕರಿಸಿದವಳು ಸಂಧ್ಯಾ. ಅಕ್ಕ ಹೋಗಿಬಿಟ್ಳು ಅಂತ ಭಾವಂಗೆ ಹೇಳಿಬಿಡಿ ಎಂದು ಅತ್ಯಂತ ಅನಾಗರಿಕ ಭಾಷೆಯಲ್ಲಿ ಸುದ್ದಿ ಮುಟ್ಟಿಸಿದ್ದಳು. ಶೈಲಜಾ ತನ್ನನ್ನು ಭಾವ ಅಂತ ಕರೆದದ್ದಕ್ಕೇ ಸಂಧ್ಯಾಗೆ ಸಿಟ್ಟು ಬಂದಿರುತ್ತೆ. ಆದರೂ ಸಂಧ್ಯಾ ಒಳ್ಳೆಯವಳು. ಸಂಜೆ ಆಫೀಸಿನಿಂದ ಬರುತ್ತಲೇ, ನಿರ್ಮಲಾ ಜೋಷಿ ಹೋಗಿಬಿಟ್ಳಂತೇರಿ ಎಂದು ಅದರಿಂದ ತನಗೆ ಕಿಂಚಿತ್ತೂ ಸಂತೋಷವಾಗಿಲ್ಲ ಎಂಬ ಧಾಟಿಯಲ್ಲಿ ಹೇಳಿದ್ದಳು. ಅವಳಿಗೆ ದುಃಖವೂ ಆಗಿರಲ್ಲ ಎನ್ನುವುದು ನಾಗರಾಜನಿಗೆ ಗೊತ್ತಿತ್ತು. ಆ ಕುರಿತು ಮತ್ತೊಂದಷ್ಟು ವಿವರಗಳನ್ನು ಕೇಳಬೇಕು ಎನ್ನಿಸಿದರೂ ನಾಗರಾಜನೂ ತೀರ ಸಹಜವಾಗಿ ಹೌದಾ ಎಂದಷ್ಟೇ ಹೇಳಿದ್ದ. ಅವನಿಂದ ಇನ್ನೂ ಆಘಾತಕರ ಪ್ರತಿಕ್ರಿಯೆ ನಿರೀಕ್ಷಿಸಿದ್ದ ಸಂಧ್ಯಾ ಯಾಕ್ರೀ ನಿಮಗೆ ಮೊದಲೇ ಗೊತ್ತಾಗಿತ್ತೇನು. ಶೈಲಜಾ ನಿಮಗೂ ಫೋನ್ ಮಾಡಿದ್ಲಾ ಎಂದು ಅನುಮಾನಖಚಿತ ದನಿಯಲ್ಲಿ ಕೇಳಿದ್ದಳು. ಅವಳ ಹತ್ರ ನನ್ನ ನಂಬರ್ ಇಲ್ಲ ಎಂದಿದ್ದ ನಾಗರಾಜ. ನಿಮಗೆ ತುಂಬ ಬೇಕಾದವಳಲ್ವಾ, ಕೊನೇ ಸಲ ನೋಡ್ಕೊಂಡು ಬನ್ನಿ. ಹೆಣ ಎತ್ತೋದು ನಾಳೆ ಬೆಳಗ್ಗೆ ಅಂತೆ.  ಹತ್ತಿರದವರಿಗೆಲ್ಲ ಅನುಕೂಲ ಆಗ್ಲಿ ಅಂತ ಹಾಗೆ ಮಾಡಿರಬೇಕು ಎಂದಿದ್ದಳು. ಆ ಮಾತಲ್ಲೂ ನಾಗರಾಜನಿಗೆ ಕೊಂಕು ಹುಡುಕುವ ಹುಮ್ಮಸ್ಸಿರಲಿಲ್ಲ. ನಾನು ಹೋಗೋಲ್ಲ ಎಂದಷ್ಟೇ ಹೇಳಿ ಸುಮ್ಮನಾಗಿದ್ದ.

ನಾಗರಾಜ ಜಗಳೂರಿಗೆ ಹೋಗದೇ ವರ್ಷಗಳೇ ಸಂದಿದ್ದವು. ಹಳೆಯ ಕೆಟ್ಟ ರಸ್ತೆ ಪೂರ್ತಿ ಬದಲಾಗಿತ್ತು. ದಾರಿಯಲ್ಲಿ ಎದುರಾಗುತ್ತಿದ್ದ ಊರುಗಳೆಲ್ಲ ಕಣ್ಮರೆಯಾಗಿದ್ದವು. ಅರ್ಧಕ್ಕರ್ಧ ಗದ್ದೆಗಳೂ ಮಾಯವಾಗಿ ಕಟ್ಟಡಗಳು ತಲೆಯೆತ್ತಿದ್ದವು. ಗುಬ್ಬಿಯಿಂದ ಜಗಳೂರಿಗೆ ಹೋಗುವ ಹಾದಿಯಲ್ಲಿ ಹಳದಿ ಹಳದಿಯಾಗಿ ಕಾಣಿಸುತ್ತಿದ್ದ ಸೂರ್ಯಕಾಂತಿ ಬೆಳೆ ಕಾಣಿಸಲಿಲ್ಲ. ಅಲ್ಲಿ ಮತ್ತೇನೋ ಬೆಳೆದಿದ್ದರು. ಆಲೂಗಡ್ಡೆಯೋ ನೆಲಕಡಲೆಯೋ ಇರಬೇಕು ಎಂದು ಕಾರಿನ ಗಾಜಿನಿಂದಲೇ ನೋಡಲು ಯತ್ನಿಸಿದ. ಕಾರು ಓಡುತ್ತಿರುವ ವೇಗಕ್ಕೆ ಹಸಿರು ಕಲಸಿಹೋಗಿ ಯಾವುದೂ ಸ್ಪಷ್ಟವಾಗುತ್ತಿರಲಿಲ್ಲ.

ನಿರ್ಮಲಾ ಜೋಷಿ ಅಷ್ಟೊಂದು ಜನಪ್ರಿಯಳಾಗಿದ್ದಾಳೆ ಅನ್ನುವುದೂ ನಾಗರಾಜನಿಗೆ ಗೊತ್ತಿರಲಿಲ್ಲ. ಅವಳ ಹೆಣ ಇಟ್ಟುಕೊಂಡು ನಾಗರಾಜ ಬರುತ್ತಾನೆಂದು ಮಧ್ಯಾಹ್ನದ ತನಕವೂ ಕಾದಿದ್ದರಂತೆ. ನಾಗರಾಜನ ಮನೆಗೂ ನಾಲ್ಕೈದು ಸಲ ಫೋನ್ ಮಾಡಿದ್ದರಂತೆ. ಸಂಧ್ಯಾ ಅವರಿಗೆ ಆಫೀಸಲ್ಲಿ ಯಾವುದೋ ಮೀಟಿಂಗಿದೆಯಂತೆ. ಅದು ಬೇಗ ಮುಗಿದರೆ ಹೊರಡ್ತೀನಿ ಅಂದಿದ್ದಾರೆ. ನೀವು ಯಾವುದಕ್ಕೂ ಕೆಲಸ ಮುಂದುವರಿಸಿ. ಅವರಿಗೋಸ್ಕರ ಕಾಯಬೇಡಿ ಎಂದು ಹೇಳಿ ನಾಗರಾಜನನ್ನು ಕಾಪಾಡಿದ್ದಳು. ನಿರ್ಮಲಾ ಜೋಷಿ ಸಂತಾಪಸೂಚಕ ಸಭೆಗೆ ಹೋಗುವಂತೆ ಒತ್ತಾಯ ಮಾಡಿದವಳೂ ಅವಳೇ.  ಅಷ್ಟೊಂದು ಪ್ರೀತಿಯಿಂದ ಕರೀತಿದ್ದಾಳೆ ಶೈಲಜಾ. ಇಂಥ ಹೊತ್ತಲ್ಲಿ ಹೋಗದೇ ಇರೋದು ಸರಿಯಲ್ಲ. ಹೋಗಿ ಬನ್ನಿ ಅಂತ ಬೆಳಗ್ಗೆ ತಿಂಡಿ ತಿನ್ನುವಾಗ ಆದೇಶ ಹೊರಡಿಸಿದ್ದಳು. ನಿರ್ಮಲಾ ಜೋಷಿಗೆ ಪೊಂಗಲ್ ಇಷ್ಟ. ಮೂರು ಹೊತ್ತು ಪೊಂಗಲ್ ತಿನ್ನುತ್ತಿದ್ದಳು ಎಂಬ ವಿವರಗಳೆಲ್ಲ ನಾಗರಾಜನಿಗೆ ನೆನಪಾಗತೊಡಗಿದ್ದವು. ಸಂತಾಪ ಸೂಚಕ ಸಭೆಯಲ್ಲಿ ಪೊಂಗಲ್ ಬಗ್ಗೆ ಮಾತಾಡಬಹುದೋ ಬಾರದೋ ಎನ್ನುವುದು ಥಟ್ಟನೆ ಹೊಳೆಯಲಿಲ್ಲ.

ನಿರ್ಮಲಾ ಜೋಷಿ ಮತ್ತು ನಾಗರಾಜ ಮೂರು ವರ್ಷ ಜೊತೆಗೆ ಕೆಲಸ ಮಾಡಿದವರು. ದಾವಣಗೆರೆ ಹರಿಹರ ರಸ್ತೆಯಲ್ಲಿರುವ ದೊಡ್ಡಬಾತಿಯಲ್ಲಿ ಹೊಸದಾಗಿ ಆರಂಭವಾದ ಕೆನರಾ ಬ್ಯಾಂಕ್ ಶಾಖೆಗೆ ನಾಗರಾಜನನ್ನು ವರ್ಗಾ ಮಾಡಿದ್ದರು. ಅಲ್ಲಿಗೆ ಹೊಸದಾಗಿ ಬಂದವಳು ನಿರ್ಮಲಾ. ಆಗಷ್ಟೇ ಶುರುವಾದ ಬ್ರಾಂಚ್ ಆಗಿದ್ದರಿಂದ ಇಬ್ಬರಿಗೂ ಸಿಕ್ಕಾಪಟ್ಟೆ ಕೆಲಸ ಇರುತ್ತಿತ್ತು. ಹೀಗಾಗಿ ರಾತ್ರಿ ಎಂಟರ ತನಕನೂ ನಾಗರಾಜ ಬ್ಯಾಂಕಿನಲ್ಲೇ ಇದ್ದುಬಿಡುತ್ತಿದ್ದ. ಆ ಹೊತ್ತಿಗೆ ಸಂಧ್ಯಾ ದಿಲೀಪನ ಹೆರಿಗೆಗೆಂದು ತಾಯಿ ಮನೆ ಸೇರಿಕೊಂಡಿದ್ದಳು. ಹೀಗಾಗಿ ನಾಗರಾಜನಿಗೆ ಊಟ ತಿಂಡಿ ತಂದುಕೊಡುತ್ತಿದ್ದದ್ದು ನಿರ್ಮಲಾ ಜೋಷಿಯೇ.

ಅವರಿಬ್ಬರ ಮಧ್ಯೆ ಆತ್ಮೀಯತೆ ಇದ್ದರೂ ಅದು ಪ್ರೇಮವೋ ಕಾಮವೋ ಆಗಿ ರೂಪಾಂತರಗೊಂಡಿರಲಿಲ್ಲ. ನಿರ್ಮಲಾ ಜೋಷಿ ಪಕ್ಕಾ ಹೋರಾಟಗಾರ್ತಿಯಂತೆ ನಾಗರಾಜನಿಗೆ ಕಾಣಿಸಿದ್ದಳು.  ನಾಗರಾಜ ಕೂಡ ಹೆಣ್ಮಕ್ಕಳ ವಿಚಾರದಲ್ಲಿ ಕೊಂಚ ಹಿಂಜರಿಕೆಯ ಸ್ವಭಾವದವನೇ. ನೀಟಾಗಿ ಡ್ರೆಸ್ ಮಾಡಿಕೊಂಡು ಗಂಭೀರವಾಗಿ ಕೂತಿರುತ್ತಿದ್ದ ಅವನು ಹೆಣ್ಮಕ್ಕಳ ಜೊತೆಗೆ ಭಯಂಕರ ಸಜ್ಜನನಂತೆ ನಡೆದುಕೊಳ್ಳುತ್ತಿದ್ದ. ಯಾರಿಗೇ ಆದರೂ ಬೋರು ಹೊಡೆಸುವಷ್ಟು ಶಿಸ್ತಿನ ಮನುಷ್ಯನಾಗಿದ್ದ. ಐದಾರು ತಿಂಗಳು ಜೊತೆಗೇ ಕೆಲಸ ಮಾಡಿದ ನಂತರ ಕೂಡ ನಿರ್ಮಲಾ ಜೋಷಿಯ ಸೌಂದರ್ಯ ಅವನ ಕಣ್ಣಿಗೆ ಬಿದ್ದಿರಲಿಲ್ಲ. ಅವಳನ್ನು ಬೇರೆ ಥರ ನೋಡಬಹುದು ಅಂತಲೂ ಅವನಿಗೆ ಅನ್ನಿಸಿರಲಿಲ್ಲ.

ಅವರಿಬ್ಬರ ಸಂಬಂಧ ಹೊಸ ರೂಪ ಪಡಕೊಂಡದ್ದಕ್ಕೆ ಮುಖ್ಯ ಕಾರಣ ಸಂಧ್ಯಾಳೇ. ನಿರ್ಮಲಾ ಜೋಷಿಯನ್ನು ಪ್ರೀತಿಸಬಹುದು, ಕಾಮಿಸಬಹುದು ಅನ್ನುವುದನ್ನು  ನಾಗರಾಜನಿಗೆ ಹೇಳಿಕೊಟ್ಟದ್ದೂ ಅವಳೇ. ಸಂಧ್ಯಾ ಬಾಣಂತನ ಮುಗಿಸಿಕೊಂಡು ದಾವಣಗೆರೆಯ ಲಾಯರ್ ರೋಡಿನಲ್ಲಿರುವ ಶಂಕರ ಮಠದ ಹಿಂಭಾಗದ ಮನೆಗೆ ಬಂದು ನೆಲೆಸಿದ ಮಾರನೆಯ ದಿನ ನಿರ್ಮಲಾ ಜೋಷಿಯನ್ನೂ ಕರೆದುಕೊಂಡು ನಾಗರಾಜ ಮನೆಗೆ ಬಂದ. ನಿರ್ಮಲಾ ಜೋಷಿಯೇ ಮಗುವನ್ನು ನೋಡೋಕೆ ಬರುತ್ತೇನೆ ಎಂದಿದ್ದಳು.

ಮನೆಗೆ ಬಂದು ಮಗುವನ್ನು ನೋಡಿ, ಮುದ್ದಾಡಿ, ಮಗುವಿನ ಕೈಗೆ ನೂರು ರುಪಾಯಿ ಕೊಟ್ಟು ನಿರ್ಮಲಾ ಜೋಷಿ ವಾಪಸ್ಸು ಹೋದ ನಂತರ ಸಂಧ್ಯಾ ಕೆಲವು ಪ್ರಶ್ನೆಗಳನ್ನು ಕೇಳಿದ್ದಳು;  ಯಾರವಳು. ಅವಳಿಗೆಷ್ಟು ಸಂಬಳ. ಅಷ್ಟೊಂದು ಕಡಿಮೆ ಸಂಬಳ ಇರೋಳು ನೂರು ರುಪಾಯಿ ಯಾಕೆ ಕೊಡ್ತಾಳೆ. ತುಂಬ ನುಲೀತಾಳಲ್ಲ. ನಿಮಗೂ ಅವಳಿಗೂ ಏನು ಸಂಬಂಧ. ಬ್ಯಾಂಕಲ್ಲಿ ಕೆಲಸ ಮಾಡೋಳನ್ನು ಮನೆಗೆ ಯಾಕೆ ಕರಕೊಂಡು ಬರಬೇಕಾಗಿತ್ತು. ಬ್ಯಾಂಕಲ್ಲಿ ಎಷ್ಟು ಜನ ಇದ್ದಾರೆ. ಅವರನ್ನೆಲ್ಲ ಬಿಟ್ಟು ಇವಳೊಬ್ಬಳನ್ನೇ ಕರಕೊಂಡು ಬಂದಿದ್ದು ಯಾಕೆ. ಅವಳ ಮನೆ ಎಲ್ಲಿ.  ಹೊಕ್ಕಳ ಕೆಳಗೆ ಸೀರೆ ಉಡ್ತಾಳಲ್ಲ, ಅವಳಿಗೆ ಮಾನ ಮರ್ಯಾದೆ ಇಲ್ವ?

ಈ ಪ್ರಶ್ನೆಗಳಲ್ಲಿ ಕೆಲವಕ್ಕೆ ನಾಗರಾಜನ ಬಳಿ ಉತ್ತರ ಇತ್ತು. ಕೆಲವಕ್ಕೆ ಇರಲಿಲ್ಲ. ಅವಳು ಕೇಳಿದ ಧಾಟಿಯಿಂದಾಗಿ ಉತ್ತರ ಗೊತ್ತಿದ್ದ ಪ್ರಶ್ನೆಗಳಿಗೂ ಉತ್ತರ ಕೊಡಬೇಕು ಅಂತ ನಾಗರಾಜನಿಗೆ ಅನ್ನಿಸಲೇ ಇಲ್ಲ. ಅದನ್ನೆಲ್ಲ ಕಟ್ಕೊಂಡು ಏನು ಮಾಡ್ತೀಯಾ. ಬರ್ತೀನಿ ಅಂದ್ಳು, ಬಾ ಅಂದೆ ಎಂದು ಒಂದೇ ಮಾತಲ್ಲಿ ಹೇಳಿ ಸುಮ್ಮನಾಗಿದ್ದ.  ಅವಳೊಬ್ಬಳೇ ಯಾಕೆ ಬರ್ತೀನಿ ಅಂದ್ಳು. ಬೇರೆಯವರು ಯಾಕೆ ಬರಲಿಲ್ಲ ಅಂತ ನಿರ್ಮಲಾ ಕೇಳಿದ್ದಳು.

ಜಗಳೂರು ಕ್ರಾಸ್ ಬಂತು ಸಾರ್. ಇಲ್ಲಿಂದ ಎಲ್ಲಿಗೆ ಹೋಗಬೇಕು ಅಂತ ಡ್ರೈವರ್ ಕೇಳಿದ.  ಬಸವೇಶ್ವರ ಕಲಾಕೇಂದ್ರ ಎಲ್ಲಿದೆ ಅಂತ ಯಾರನ್ನಾದರೂ ಕೇಳು ಎಂದು ನಾಗರಾಜ್ ಹೊರಗೆ ಕಣ್ಣು ಹಾಯಿಸಿದ. ಜಗಳೂರು ಕೂಡ ಬದಲಾಗುವ ಹಂತದಲ್ಲಿತ್ತು. ಹಳೇ ಕಟ್ಟಡಗಳನ್ನು ಒಡೆದು ಹಾಕಿದ್ದರು. ಹಾಗೇ ನೋಡುತ್ತಿದ್ದಾಗ ಬಸ್ ನಿಲ್ದಾಣದ ಪಕ್ಕದಲ್ಲೇ ಹಾಕಿದ ವಿನೈಲ್ ಕಾಣಿಸಿತು.

ಸುಪ್ರಸಿದ್ಧ ಕವಯಿತ್ರಿ ನಿರ್ಮಲಾ ಜೋಷಿ ಅವರಿಗೆ ಶ್ರದ್ಧಾಂಜಲಿ. ಕವಿ ರಂಗ, ಜಗಳೂರು ಎಂದು ಬರೆದು ನಿರ್ಮಲಾ ಜೋಷಿಯ ಹಳೆಯ ಫೋಟೋ ಹಾಕಿದ್ದರು. ನಾಗರಾಜ ಫೋಟೋ ನೋಡುತ್ತಾ ಅದರಲ್ಲೇ ಮಗ್ನನಾದ.

(ಮುಂದುವರಿಯುತ್ತದೆ)

 

 

 

‍ಲೇಖಕರು G

12 August, 2011

3 Comments

  1. Pradeep

    character tale olge kai haaki maathu tegdu bariteera…. tumba chennagide..

  2. anudutt m s

    ಎಲ್ಲ OK; ‘to be continued..’ ಯಾಕೆ? ಜಾಗ ಇತ್ತಲ್ಲ! 🙂

  3. RNGowda

    ಹೌದು, ಜಾಗ ಇತ್ತಲ್ವ?. ನಮ್ಮ ಇಂಟ್ರೆಸ್ಟ್ ಬೇರೆ ಉಕ್ಕಿ ಹರೀತಿತ್ತು. ಪಾಪ ಜೋಗಿಯವ್ರ್ಗೆ ಟೈಮ್ ಇರ್ಲಿಲ್ವೇನೋ?. ಇರ್ಲಿ ಬಿಡಿ ಕಾಯೋಣ, ಕಾದಾಗಲೇ ಗ್ರೇಟು ಅಂತಾರಲ್ಲ. ಅತ್ವಾ… ಜೋಗಿಯವ್ರು ಬೇಕಂತಾನೇ ಬ್ರೇಕ್ ತಗೊಂಡ್ರ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading