ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದ ನಿಮಗೆ ಗೊತ್ತಿಲ್ಲದ ಕುಚೇಲನ ಹೆಂಡತಿಯ ಕತೆ

ಜೋಗಿ

ಕುಚೇಲನಿಗೆ ಅವಲಕ್ಕಿ ಕಟ್ಟಿಕೊಟ್ಟು, ಅವನನ್ನು ದ್ವಾರಕೆಗೆ ಕಳಿಸಿದ ನಂತರ ಸುಶೀಲಳಿಗೆ ಬೇಸರ ಶುರುವಾಯ್ತು. ಗಂಡನನ್ನು ಕೃಷ್ಣನ ಬಳಿಗೆ ಕಳಿಸಬಾರದಿತ್ತು ಅಂದುಕೊಂಡಳು. ಆಗಲೇ ಅವನು ಹೊರಟಾಗಿತ್ತು. ಅರ್ಧದಾರಿ ಮುಟ್ಟಿದ್ದರೂ ಮುಟ್ಟಿರಬಹುದು. ಈಗ ಹೋಗಿ ತಡೆಯುವ ಹಾಗೂ ಇರಲಿಲ್ಲ.
ಕುಚೇಲನಿಗೆ ಗೆಳೆಯನನ್ನು ನೋಡಲು ಹೋಗುವುದು ಅವಮಾನ ಅಂತ ಅನ್ನಿಸಿರಲಿಲ್ಲ. ಆದರೆ ತಾನು ಹೋಗುವ ಉದ್ದೇಶದ ಬಗ್ಗೆ ಕೀಳರಿಮೆ ಇತ್ತು. ಕೃಷ್ಣ ದೊರೆ. ಅವನ ಜೊತೆಗೇ ಓದಿದ ತಾನು ಕಡುಬಡವ. ಕೃಷ್ಣನಿಗಿಂತ ತಾನು ಯಾವುದರಲ್ಲೂ ಕಡಿಮೆ ಇರಲಿಲ್ಲ. ಆದರೂ ಅವನು ಅರಸ, ತಾನು ಆಳು. ತನ್ನ ಶಾಸ್ತ್ರಗಳೆಲ್ಲ ಅವನ ಶಸ್ತ್ರಗಳ ಮುಂದೆ ಏನೇನೂ ಅಲ್ಲ ಅನ್ನಿಸತೊಡಗಿತ್ತು. ಹೀಗೆ ಹಿಡಿ ಅವಲಕ್ಕಿಯನ್ನು ಹಿಡಿದುಕೊಂಡು ಅವನ ಮುಂದೆ ಹಿಡಿದೇಹಿಯಾಗಿ ನಿಲ್ಲುವ ಬಗ್ಗೆ ಕುಚೇಲನಿಗೆ ಸಂಕೋಚ ಅನ್ನಿಸುತ್ತಿತ್ತು. ಅದನ್ನು ಅವನು ಹೇಳಿಕೊಂಡಿದ್ದ ಕೂಡ. ಹಾಗೆ ಹೇಳಿಯೇ ದ್ವಾರಕೆಗೆ ಹೊರಡುವುದನ್ನು ತಡ ಮಾಡಿದ್ದ.

ಚಿತ್ರ: ರೂಪಾ ಹಾಸನ್

ಸುಶೀಲಳಿಗೆ ಅದೆಲ್ಲ ನೆನಪಾಯಿತು. ತನ್ನ ಒತ್ತಾಯಕ್ಕೇ ಅವನು ಹೊರಟದ್ದು. ಕೃಷ್ಣನಿಂದ ಏನಾದರೂ ಸಹಾಯ ಸಿಗಬಹುದು. ನಾವೂ ಕೂಡ ಶ್ರೀಮಂತರಾಗಬಹುದು. ಎಲ್ಲರೆದುರು ತಲೆಯೆತ್ತಿ ಓಡಾಡಬಹುದು. ಮಕ್ಕಳಿಗೆ ಹೊಟ್ಟೆ ತುಂಬ ಊಟ ಹಾಕಬಹುದು. ಈ ಭಿಕಾರಿಯೆಂಬ ಬಿರುದಿನಿಂದ ಪಾರಾಗಬಹುದು ಎಂದು ಅವಳಿಗೆ ಪದೇ ಪದೇ ಅನ್ನಿಸುತ್ತಿತ್ತು.
’ಹೋಗಿ ಕೇಳಿ ಬನ್ನಿ. ಖಂಡಿತಾ ಅವನು ಸಹಾಯ ಮಾಡ್ತಾನೆ. ನಿಮ್ಮ ಗೆಳೆಯನಲ್ಲವೇ?’
ಗೆಳೆಯನ ಮುಂದೆ ಕೈಚಾಚಬಾರದು.
’ಮುಖ ತೋರಿಸಿ ಸಾಕು. ಅವನಿಗೇ ಅರ್ಥವಾಗುತ್ತದೆ. ಅವನಾಗಿಯೇ ಏನಾದರೂ ಸಹಾಯ ಮಾಡಬಹುದು. ನೀವಿಂಥ ಪರಿಸ್ಥಿತಿಯಲ್ಲಿ ಇದ್ದೀರೆಂದು ಅವನಿಗೆ ಗೊತ್ತಾಗುವುದಾದರೂ ಹೇಗೆ?
ಅವನಿಗೆ ಎಲ್ಲವೂ ಗೊತ್ತು. ನಾನು ಕೇಳಬೇಕೆಂದು ಅವನು ಕಾಯುತ್ತಿದ್ದಾನೆ. ಓದೋ ಹೊತ್ತಲ್ಲಿ ನಾನು ಬುದ್ಧಿವಂತನಾಗಿದ್ದೆ. ವೇದಮಂತ್ರಗಳೆಲ್ಲ ನನಗೇ ಚೆನ್ನಾಗಿ ಗೊತ್ತಿದ್ದವು. ಅವನಿಗೇನೂ ಗೊತ್ತೇ ಇರಲಿಲ್ಲ. ಆದರೆ ಅವನು ರಾಜನಾದ.’
’ಅದು ಅವನಿಗೆ ವಂಶಪಾರಂಪರ್ಯವಾಗಿ ಬಂದದ್ದು.’
ಏನಿಲ್ಲ, ಅವನು ಹೋರಾಡಿ ಗೆದ್ದದ್ದು. ಕಂಸನನ್ನು ಕೊಂದು ಪಡೆದದ್ದು. ಸ್ವಂತ ಸೋದರಮಾವನನ್ನೇ ಸಂಹಾರ ಮಾಡಿದವನು ಅವನು. ನನ್ನನ್ನು ಮಾತಾಡಿಸುತ್ತಾನಾ?
’ಪ್ರಯತ್ನಪಡಿ. ನೀವು ನಿಜಕ್ಕೂ ಅವನಿಗಿಂತ ಬುದ್ಧಿವಂತರೇ ಆಗಿದ್ದರೆ, ಅವನಿಗೆ ನಿಮ್ಮ ಮೇಲೆ ಗೌರವ ಇದ್ದೇ ಇರುತ್ತೆ.’
ಹೀಗೆ ಮಾತಾಗಿತ್ತು. ಕುಚೇಲ ಹೊರಟು ನಿಂತಿದ್ದ.
*****
ಕುಚೇಲ ಬರುವ ಹೊತ್ತಿಗೆ ಮನೆ ಬದಲಾಗಿತ್ತು. ಕೃಷ್ಣನ ಸೇವಕರು ಬಂದು ಅರಮನೆ ಕಟ್ಟಿ ಹೋಗಿದ್ದರು. ಮನೆಯೊಳಗೆ ರಾಜ ವೈಭೋಗ. ಕುಚೇಲನಿಗೆ ಅದು ತನ್ನ ಮನೆ ಅನ್ನುವುದು ಗುರುತೇ ಹತ್ತಲಿಲ್ಲ. ಮನೆಯ ಮುಂದೆ ಒಡವೆ ಹೊತ್ತು ನಿಂತಾಕೆ, ಮಹಾರಾಣಿಯಂತೆ ಕಾಣಿಸುತ್ತಿದ್ದಳು. ಅವಳು ಕರೆಯದೇ ಹೋಗಿದ್ದರೆ ಕುಚೇಲ ಅವಳ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಅವಳನ್ನು ನೋಡುತ್ತಿದ್ದಂತೆ ಕುಚೇಲನಿಗೆ ಗಾಬರಿಯಾಯಿತು. ನೂರಾರು ಮೈಲಿ ನಡಕೊಂಡು ವಾಪಸ್ಸು ಬರುವ ಹೊತ್ತಿಗೆ ಅವನು ಮತ್ತಷ್ಟು ಕಂಗಾಲಾಗಿದ್ದ. ಅವನ ಬಟ್ಟೆಗಳು ಗಲೀಜಾಗಿದ್ದವು. ಮನೆ ಮುಂದೆ ಬಂದು ನಿಲ್ಲುವ ತನಕ ಅವನಿಗೆ ಅಂಥದ್ದೊಂದು ಬದಲಾವಣೆ ಆಗಿದೆ ಅನ್ನುವುದೂ ಗೊತ್ತಿರಲಿಲ್ಲ.
ಸುಶೀಲ ಖುಷಿಯಾಗಿದ್ದಳು. ಮಕ್ಕಳು ಆಟ ಆಡುವುದರಲ್ಲಿ ನಿರತರಾಗಿದ್ದರು. ಮನೆಮುಂದೆ ರಥವೊಂದು ನಿಂತಿತ್ತು. ಅದಕ್ಕೊಬ್ಬ ಸಾರಥಿಯೂ ಇದ್ದ. ಕುಚೇಲ ಒಳಗೆ ಬರುತ್ತಿದ್ದಂತೆ ಮಕ್ಕಳು ಕೇಕೆ ಹಾಕುತ್ತಾ ರಥ ಏರಿದರು. ಊರು ಸುತ್ತಾಡಿ, ಜಾತ್ರೆಗೆ ಹೋಗಿ ಬರುತ್ತೇವೆಂದು ಹೋದರು. ಸುಶೀಲಳೂ ರಥ ಹತ್ತಿ ಹೊರಟಳು. ಕುಚೇಲ ಒಂಟಿಯಾಗಿ ಮನೆಯಲ್ಲೇ ಕೂತಿದ್ದ.
ನಂತರ ದಿನಗಳಲ್ಲಿ ಅದೇ ಮೊದಲಾಯಿತು. ಮನೆಯಲ್ಲಿ ತಿನ್ನುವುದಕ್ಕೆ ಉಣ್ಣುವುದಕ್ಕೆ ಅನುಭವಿಸುವುದಕ್ಕೆ ಯಾವ ಕೊರತೆಯೂ ಇರಲಿಲ್ಲ. ಆದರೆ ಹೆಂಡತಿ ಮಕ್ಕಳು ಕೈಗೇ ಸಿಗುತ್ತಿರಲಿಲ್ಲ. ಎಲ್ಲರೂ ಜೊತೆಗೆ ಕುಳಿತು ಊಟ ಮಾಡಿ ಅದೆಷ್ಟೋ ದಿನ ಆಗಿದೆ ಅನ್ನಿಸುತ್ತಿತ್ತು. ಮಕ್ಕಳು ಶಾಸ್ತ್ರಾಭ್ಯಾಸ ಮಾಡುವುದನ್ನು ಬಿಟ್ಟು ಬಿಟ್ಟಿದ್ದರು.
ಕುಚೇಲ ಮಕ್ಕಳನ್ನು ಕೂರಿಸಿಕೊಂಡು ಹೇಳಿದ. ’ಹೀಗೆ ಸುತ್ತಾಡಿ ಉಪಯೋಗ ಇಲ್ಲ. ನೀವು ಓದೋದು ಬೇಕಾದಷ್ಟಿದೆ. ನಾನು ಹನ್ನೆರಡು ವರುಷ ಅಭ್ಯಾಸ ಮಾಡಿದ್ದೇನೆ. ಇನ್ನೂ ಕಲಿಕೆ ಮುಗಿದಿಲ್ಲ ಅನ್ನಿಸುತ್ತಿದೆ.’
ಕಲಿತು ಏನು ಸಾಧಿಸಿದಿರಿ ಅಂತ ಮಕ್ಕಳು ನೇರವಾಗಿಯೇ ಕೇಳಿದರು. ಸುಶೀಲ ಕೂಡ ಅದೇ ಪ್ರಶ್ನೆ ಹಾಕಿದಳು. ಕುಚೇಲ ವಿದ್ಯೆಗೂ ಸಂಪತ್ತಿಗೂ ಸಂಬಂಧ ಇಲ್ಲ. ವಿದ್ಯೆ ಗೌರವ, ನೆಮ್ಮದಿ ತಂದುಕೊಡುತ್ತದೆ ಅಂತ ವಾದಿಸಿದ. ಸುಶೀಲಳಾಗಲೀ, ಮಕ್ಕಳಾಗಲಿ ಅದನ್ನು ಒಪ್ಪಲಿಲ್ಲ. ಮತ್ತೆ ಮತ್ತೆ ಹೇಳಿದಾಗ, ಸುಶೀಲ ಒಂದೇ ಮಾತು ಅಂದುಬಿಟ್ಟಳು.
ಇದೆಲ್ಲ ನೀವು ಸಂಪಾದಿಸಿದ್ದೇನಲ್ಲ. ನನ್ನ ಕಷ್ಟ ನೋಡಲಾರದೇ ನಿಮ್ಮ ಗೆಳೆಯ ಕೊಟ್ಟದ್ದು. ನಿಮ್ಮ ಗೆಳೆಯನನ್ನು ನೋಡುವಂತೆ ನಾನೇ ಹೇಳಿಕಳಿಸಿದ್ದು. ನಾನು ಮಾಡಿಕೊಟ್ಟ ಅವಲಕ್ಕಿಗೆ ಸಿಕ್ಕ ಪ್ರತಿ-ಲ ಇದು. ನೀವು ಇದಕ್ಕೆ ಕಟ್ಟುಪಾಡು ಹಾಕುವುದಕ್ಕೆ ಬರಬೇಡಿ.
ಹಾಗೇ ಕಾಲ ಉರುಳುತ್ತಿತ್ತು. ಮನೆಯಲ್ಲಿ ಎಲ್ಲರೂ ಸಂತೋಷವಾಗಿದ್ದರು. ಕುಚೇಲ ಮಾತ್ರ ಅದೇ ಹಳೇ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ. ಅವನನ್ನು ಯಜ್ಞ ಯಾಗಾದಿಗಳಿಗೆ ಕರೆಯುತ್ತಿದ್ದವರು ದೂರ ಮಾಡಿದರು. ತಾನು ಕಲಿತ ವಿದ್ಯೆಯನ್ನು ಪ್ರದರ್ಶಿಸುವುದಕ್ಕೆ, ತನ್ನಲ್ಲಿರುವ ಅಗಾಧ ಪ್ರತಿಭೆಯನ್ನು ಹೊರಹೊಮ್ಮಿಸುವುದಕ್ಕೆ ಅವನಿಗೆ ಅವಕಾಶವೇ ಇರಲಿಲ್ಲ. ಅವನನ್ನು ದೇವತಾಕಾರ್ಯಗಳಿಗೆ ಕರೆಯುತ್ತಿದ್ದವರೆಲ್ಲ ಈಗ ಅವನು ಕೋಟ್ಯಧೀಶ, ಅವನೆಲ್ಲಿ ಬರುತ್ತಾನೆ ಅಂತ ತಮಗೆ ತಾವೇ ಅಂದುಕೊಂಡಿದ್ದರು. ಆ ಸಂಪತ್ತು, ಸೌಕರ್ಯಗಳೇ ತನಗೆ ಶತ್ರುವಾಗಿದ್ದನ್ನು ಕುಚೇಲ ನೋಡುತ್ತಾ ಕೂತಿದ್ದ.
*****
ಕುಚೇಲನಿಗೂ ಸುಶೀಲೆಗೂ ಜಗಳವಾಯಿತು. ಇದೆಲ್ಲ ನಮಗೆ ಬೇಕಿರಲಿಲ್ಲ. ನಾವು ಬಡವರಾಗಿದ್ದಾಗಲೇ ಸಂತೋಷವಾಗಿದ್ದೆವು ಅಂತ ಕುಚೇಲ ರೇಗಿದ. ನೀವು ಬೇಕಿದ್ದರೆ ಬಡವರಾಗಿಯೇ ಇರಿ. ನನಗೆ ಅದು ಬೇಕಾಗಿಲ್ಲ. ಹೆಂಡತಿ ಮಕ್ಕಳು ಸಂತೋಷವಾಗಿದ್ದನ್ನು ನೋಡಿ ಸಂತೋಷಪಡುವವರಿದ್ದಾರೆ. ನೀವು ನೋಡಿದರೆ ಹೊಟ್ಟೆಕಿಚ್ಚು ಪಡುತ್ತಿದ್ದೀರಲ್ಲ. ನಿಮ್ಮ ವಿದ್ಯೆ, ಶಾಸಗಳಿಂದ ಏನು ಸಂಪಾದನೆಯಾಯಿತು. ಅದೆಲ್ಲ ಈ ಕಾಲಕ್ಕಲ್ಲ ಅಂತ ಸುಶೀಲ ಹಂಗಿಸಿ ಮಾತಾಡಿದಳು. ನಿಮ್ಮ ಗೆಳೆಯ ಉದಾರಿ ಎಂದು ಕೊಂಡಾಡಿದಳು.
ಕುಚೇಲ ಒಂದು ನಿರ್ಧಾರಕ್ಕೆ ಬಂದಿದ್ದ. ಈ ಸಂಪತ್ತನ್ನೆಲ್ಲ ಮರಳಿ ತೆಗೆದುಕೋ. ನನಗೆ ನನ್ನ ನೆಮ್ಮದಿಯನ್ನು ಕೊಡು ಎಂದು ಕೃಷ್ಣನ ಹತ್ತಿರ ಕೇಳಿಕೊಳ್ಳಬೇಕು ಅಂದುಕೊಂಡು ಮತ್ತೆ ದ್ವಾರಕೆಯತ್ತ ಪ್ರಯಾಣ ಬೆಳೆಸಿದ. ನೂರಾರು ಹರದಾರಿ ನಡೆದುಕೊಂಡು ಹೋಗಿ, ದ್ವಾರಕೆಯನ್ನು ತಲುಪಿದರೆ, ಅಲ್ಲಿ ಯಾದವರೆಲ್ಲ ಮೆರೆಯುತ್ತಿದ್ದರು. ರುಕ್ಮಿಣಿ, ಸತ್ಯಭಾಮೆ ಮತ್ತು ಕೃಷ್ಣನ ಅಸಂಖ್ಯ ಪತ್ನಿಯರು, ಸುಶೀಲಳ ಹಾಗೇ ಸಂತೋಷದಲ್ಲಿದ್ದರು. ಅವರಿಗೆ ಕುಚೇಲನ ಗುರುತು ಕೂಡ ಹತ್ತಲಿಲ್ಲ. ಕುಚೇಲ ಪರಿಚಯಿಸಿಕೊಂಡಾಗಲೂ ಅವರು ತಿರುಗಿ ನೋಡಲಿಲ್ಲ.
ಕುಚೇಲ ಅಲ್ಲಿದ್ದ ಸೈನಿಕನೊಬ್ಬನ ಹತ್ತಿರ ತಾನು ಕೃಷ್ಣನನ್ನು ನೋಡಬೇಕು ಅಂತ ಕೇಳಿಕೊಂಡ. ಸೈನಿಕ ಅವನನ್ನೇ ಅಚ್ಚರಿಯಿಂದ ನೋಡುತ್ತಾ, ದೊರೆಗಳು ಊರಲ್ಲಿಲ್ಲ. ಅವರು ಹಸ್ತಿನಾಪುರಕ್ಕೆ ಹೋಗಿದ್ದಾರೆ. ಅಲ್ಲಿ ಯುದ್ಧ ಶುರುವಾಗುತ್ತಿದೆ. ದೊರೆಗಳು ಅರ್ಜುನನ ರಥದ ಸಾರಥ್ಯ ವಹಿಸಿಕೊಳ್ಳಲು ಹೋಗಿದ್ದಾರೆ.
ದ್ವಾರಕೆಯ ದೊರೆ, ಅಪಾರ ಸಂಪತ್ತಿನ ಒಡೆಯ, ಎಲ್ಲವನ್ನೂ ಸಾಧಿಸಿದವನು ಒಬ್ಬ ಕ್ಷತ್ರಿಯನ ರಥದ ಸಾರಥಿಯಾಗುವುದೇ?
ಕುಚೇಲನಿಗೆ ಸಂಪತ್ತು, ವೈಭೋಗ, ರಾಜವೈಭವ, ದುಡಿಯದೇ ಬಂದ ಸಂಪತ್ತು ತಂದುಕೊಟ್ಟ ನಿರುದ್ಯೋಗ- ಇವೆಲ್ಲದರ ನಿರರ್ಥಕತೆ ಹೊಳೆಯಿತು. ಕೃಷ್ಣ ಎಲ್ಲವನ್ನೂ ಬಿಟ್ಟು ಯಾಕೆ ದುಡಿಯಲು ಹೋದ, ರಥ ಓಡಿಸುವ ಸಾರಥಿಯಾಗುವ ನಿಕೃಷ್ಟ ಕೆಲಸವನ್ನು ಯಾಕೆ ಒಪ್ಪಿಕೊಂಡ ಅನ್ನುವುದು ಅರ್ಥವಾಯಿತು.
****
ಮನೇಲಿ ಎಲ್ಲವೂ ಇದೆ. ಮಕ್ಕಳು ದುಡೀತಿದ್ದಾರೆ. ಮೂರು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿಯಿದೆ. ಇವರಿಗೆ ಅನುಭವಿಸೋದಕ್ಕೆ ಬರೋಲ್ಲ. ಈ ವಯಸ್ಸಲ್ಲೂ ಹಳೇ ಅಂಗಿ ಹಾಕಿಕೊಂಡು ತೋಟಕ್ಕೆ ಹೋಗುತ್ತಾರೆ. ತಾವೇ ಅಡಿಕೆ ಹೆಕ್ಕುತ್ತಾರೆ. ಗೊಬ್ಬರ ಹಾಕುತ್ತಾರೆ. ಇದೆಲ್ಲ ಬೇಕಾ ಅಂತ ಕೇಳಿದ ತಾಯೊಬ್ಬರಿಗೆ ಈ ಕತೆ ಹೇಳಿದೆ.
ಬಹುಶಃ ಇದು ಎಲ್ಲರ ಪ್ರಶ್ನೆ ಮತ್ತು ಉತ್ತರ ಅನ್ನಿಸುತ್ತದೆ.

‍ಲೇಖಕರು Avadhi

15 February, 2013

11 Comments

  1. chalam

    ನೆಮ್ಮದಿ ಅಂದರೆ ಏನು ಅಂತ ಗೊತ್ತಿಲ್ಲದ ಈ ಸಮಯದಲ್ಲಿ ಒಂದು ಸಂಯೋಚಿತ ಬರಹ.ದುಡಿಯುತ್ತೇವೆ…ಕೂಡಿಡುತ್ತೇವೆ.ಸಂಪತ್ತು ನಮ್ಮನ್ನು ಕಟ್ಡಿಹಾಕಬಲ್ಲುದು ಎಂಬುದನ್ನು ಮರೆತೇಬಿಡುತ್ತೇವೆ.ಕುಚೇಲನ ಬಡತನಕ್ಕೂ,ಕೃಷ್ಣನ ಸಿರಿವಂತಿಕೆಯ ನಡುವೆ ಇರುವ ನೆಮ್ಮದಿಯ ಗೆರೆಯನ್ನು ಹುಡುಕಿಕೊಳ್ಳಬೇಕು.

  2. Prasad V Murthy

    ಕಥೆ ಬಹಳ ಚೆನ್ನಾಗಿದೆ ಸರ್. ಬರಹಗಾರರಿಂದ ಪುರಾಣಗಳನ್ನು ವಿವಿಧ ಮಗ್ಗಲುಗಳಲ್ಲಿ ನೋಡುವ ಕೆಲಸವಾಗಬೇಕು ಆಗ ಒಂದೇ ಸನ್ನಿವೇಶದ ಹೊಸ ಹೊಸ ಹೊಳಹುಗಳು ಸಿಗುತ್ತಾ ಹೋಗುತ್ತವೆ ಎಂಬುದನ್ನು ಸುವಿಸ್ತಾರವಾಗಿ ಹರವಿದೆ ನಿಮ್ಮ ಕಥೆ.
    – ಪ್ರಸಾದ್.ಡಿ.ವಿ.

  3. Vasuki

    ಬಹಳ ಚನ್ನಾಗಿದೆ!

  4. sanath K

    ಕಥೆ ಚೆನ್ನಾಗಿದೆ.
    ಮಹಾಭಾರತ ತನ್ನಲ್ಲಿ ಎಷ್ಟು ಕಥೆಗಳನ್ನ ಅಡಗಿಸಿಟ್ಟಿದಿಯೋ, ಆ ಕಥೆಗಳಲ್ಲಿ ಏಷ್ಟು ಅರ್ಥ ಅಡಗಿದೆಯೋ?. ಅದನ್ನ ಸಂದರ್ಭಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳೋದು ನಮಗೆ ಬಿಟ್ಟದ್ದು.

  5. srinivas deshpande

    Dear Sir,
    it is too good

  6. ajay

    ಒಂದು ಕಥೆಯನ್ನು ವಿವಿಧ ಮಗ್ಗುಲಲ್ಲಿ ಸುಂದರವಾಗಿ ಯಾವರೀತಿ ವಾಸ್ತವಿಕ ನೆಲೆಗಟ್ಟಿನಲ್ಲಿ ವಿವರಿಸಬೇಕೊ ಹಾಗೇಯೆ ವಿವರಿಸಿದ್ದೀ

  7. chinnenahalli swamy

    toulanika drushti, kathe helida samaya ouchithyavagide. saarvakaalika satyavadaddu.

  8. sumathi

    ಬರೆದಿರುವ ಶೈಲಿಗೆ ಮೆಚ್ಚುಗೆ. ಇದು ನಮಗೆ ಗೊತ್ತಿಲ್ಲದ ಕುಚೇಲನ ಕಥೆ ಅ೦ತ ಆಗ್ಬೇಕಿತ್ತಲ್ವಾ.

    • ಆಸು ಹೆಗ್ಡೆ

      ಬರೆದವರಿಗಂತೂ ಗೊತ್ತಿತ್ತು. ಜೊತೆಗೆ ಅವಧಿಯ ಸಂಪಾದಕರಿಗೂ ಗೊತ್ತಿತ್ತು.
      ಹಾಗಾಗಿ “ನಿಮಗೆ (ನಿಮ್ಮ ನಮ್ಮಂಥ ಓದುಗರಿಗೆ) ಗೊತ್ತಿಲ್ಲದ ಕತೆ” ಅಂತಿದ್ದಾರೆ ಸಂಪಾದಕರು!

  9. ಆಸು ಹೆಗ್ಡೆ

    ಜೀವನದಲ್ಲಿ ಅತಿ ಸುಲಭವಾಗಿ, ಅತಿ ಶೀಘ್ರವಾಗಿ, ಅತಿ ಹೆಚ್ಚು ಸಿರಿ ದಕ್ಕಿದರೆ, ಮತಿ ಕೆಡುತ್ತದೆ ಅಂತಾರೆ!
    ಈ ಕತೆ ಅದಕ್ಕೊಂದು ದೃಷ್ಟಾಂತ!

  10. renuka manjunath

    awesome!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading