ನಾವು ಏನನ್ನು ಮೀರಲು ಯತ್ನಿಸುತ್ತಿರುತ್ತೇವೆ?
ಹಾಗೊಂದು ಪ್ರಶ್ನೆಯನ್ನು ಮುಂದಿಟ್ಟು ಗುರುಗಳು ಸುಮ್ಮನಾದರು. ಅವರ ಮಟ್ಟಿಗೆ ಅದು ಉತ್ತರವಿಲ್ಲದ ಪ್ರಶ್ನೆಯೇ ಆಗಿದ್ದಿರಬಹುದು. ನಮಗೆ ಅರ್ಥವೇ ಆಗಲಿಲ್ಲ. ಮೀರುವುದು ಎಂದರೇನು ಎಂದು ನಾನು ಯೋಚಿಸುತ್ತಿದ್ದೆ. ಮೀರುವುದೆಂದರೆ ದಾಟುವುದು. ಹಾಗಂತ ಮಿತಿಮೀರಿದರೆ ಅದೂ ತಪ್ಪು. ಎಲ್ಲೆ ಮೀರಿದರೆ ಅಪರಾಧ.
ಸದ್ಯದ ಸ್ಥಿತಿಯನ್ನು ಮೀರಬೇಕು ಅನ್ನುವುದು ನಮ್ಮೆಲ್ಲರ ಆಸೆ ಎನ್ನುವುದನ್ನು ನಿರಾಕರಿಸುವ ಸ್ಥಿತಿಯಲ್ಲಿ ನಾವಿರಲಿಲ್ಲ. ನಾವೆಲ್ಲ ಹಾತೊರೆಯುತ್ತಿದ್ದದ್ದು ಅದಕ್ಕೇನೇ. ಅದರ ಕುರಿತೇ ಮಾತಾಡಬೇಕು ಅಂದುಕೊಳ್ಳುತ್ತಿರುವಾಗಲೇ ಗುರುಗಳು ನಮ್ಮ ಮನಸ್ಸಿನಲ್ಲಿದ್ದ ಪ್ರಶ್ನೆಯನ್ನು ಕೆಣಕುವಂತೆ ಪ್ರಶ್ನೆ ಹಾಕಿದ್ದರು. ಒಂದು ಕ್ಷಣ ನಾವೆಲ್ಲ ಗಲಿಬಿಲಿಯಾಗಿ ಕೂತೆವು.
ಚಿತ್ರ: ಶುಭಾಂಕರ್
ಏನನ್ನು ಮೀರುವುದು ಗುರುಗಳೇ? ಕುಂಟಿನಿ ಗೋಪಾಲಕೃಷ್ಣ ಕೇಳಿದ. ನಮ್ಮ ಜೊತೆಗಿದ್ದವರಿಗೆ ನಾವು ಹೀಗೆಲ್ಲ ಮಾತಾಡುವುದು ಕೇಳಿ ನಗು ಬರುತ್ತಿತ್ತು. ನಾವೋ ಅತ್ಯಂತ ಗಂಭೀರವಾಗಿ ಕೂತು ಕೇಳಿಸಿಕೊಳ್ಳುತ್ತಿದ್ದೆವು. ಅವರು ಕೇಳಿದ ಪ್ರಶ್ನೆ ನಮ್ಮದೂ ಆಗಿದೆಯಲ್ಲ ಎಂದು ಕ್ರಮೇಣ ಅನ್ನಿಸತೊಡಗಿತ್ತು.
ಸುಮಾರು ಹದಿಮೂರು ವರ್ಷಗಳ ಹಿಂದಿನ ಮಾತುಕತೆಯನ್ನು ಮತ್ತೆ ದಾಖಲಿಸುವುದಕ್ಕೆ ಕಾರಣಗಳಿವೆ. ನಮ್ಮೆಲ್ಲರ ಗೆಳೆಯ ಪುತ್ತೋಳಿ ಕೊಲೆಯಾಗಿದ್ದ. ಅವನು ಕೊಲೆಯಾಗಿದ್ದ ಅನ್ನುವುದೂ ನಮಗೆ ಖಾತ್ರಿ ಇರಲಿಲ್ಲ. ಬಹುಶಃ ಊರು ಬಿಟ್ಟು ಹೋಗಿರಬಹುದು, ಎಲ್ಲೋ ಬಂಧನದಲ್ಲಿರಬಹುದು, ಯಾರೋ ದೇಶಾಂತರ ಕಳಿಸಿರಬಹುದು ಎಂಬ ವಿಚಿತ್ರ ಕಲ್ಪನೆಗಳು ನಮ್ಮಲ್ಲಿ ಸುಳಿಯುತ್ತಿದ್ದವು. ನಮ್ಮ ಮಿತ್ರಮಂಡಳಿಯಲ್ಲಿ ಅಪ್ರತಿಮ ಮಾತುಗಾರನಾಗಿದ್ದ ಪುತ್ತೋಳಿಗೆ ಸಹಜವಾಗಿಯೇ ಅಸಂಖ್ಯ ಪ್ರೇಯಸಿರಿದ್ದಾರೆ ಎಂಬ ಗುಮಾನಿಯಲ್ಲಿ ನಾವಿದ್ದೆವು.
ನಮಗೆಲ್ಲ ಬಿಡುಬೀಸು ಬದುಕಿನ ಕನಸು ಹಂಚಿದವನು ಪುತ್ತೋಳಿ. ಅವನಿಗೆ ಮಹತ್ವಾಕಾಂಕ್ಷೆ ಹಾಗಿರಲಿ, ನಾಳೆಯ ಚಿಂತೆಯೇ ಇರಲಿಲ್ಲ. ತುಂಬ ದಿನ ಮನಸ್ಸಿನಲ್ಲಿ ಉಳಿಯುವಂತೆ, ನಾವೆಲ್ಲ ನೆನೆನೆದು ಅಸೂಯೆಪಡುವಷ್ಟು ಚೆನ್ನಾಗಿ ಮಾತಾಡುತ್ತಿದ್ದ ಅವನಿಗೆ ಬರೆಯುವ ಚಟವೂ ಇರಲಿಲ್ಲ. ನಮ್ಮೂರ ಕಾಲೇಜಿನಲ್ಲೊಮ್ಮೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿತ್ತು. ಕಾಲೇಜು ವಾರ್ಷಿಕೋತ್ಸವದ ರಾತ್ರಿ ಇದ್ದಕ್ಕಿದ್ದಂತೆ ಇನ್ನೊಂದು ಗುಂಪಿಗೆ ಸೇರಿದವರು ಕೈಯಲ್ಲಿ ತಲವಾರುಗಳನ್ನು ಹಿಡಕೊಂಡು ನುಗ್ಗಿ ಬಂದು ನಮ್ಮ ಗುಂಪಿಗೆ ಸೇರಿದವರನ್ನೆಲ್ಲ ಕೊಚ್ಚತೊಡಗಿದ್ದರು. ನಾವೊಂದಷ್ಟು ಮಂದಿ ಆ ಅಪರಾತ್ರಿಯಲ್ಲಿ ನೇತ್ರಾವತಿ ನದಿಗೆ ಜಿಗಿದು ತಪ್ಪಿಸಿಕೊಂಡಿದ್ದೆವು. ಒಂದಷ್ಟು ಮಂದಿಗೆ ಮಾರಣಾಂತಿಕ ಗಾಯಗಳಾಗಿದ್ದವು.
ಆಸ್ಪತ್ರೆ, ಪೊಲೀಸು, ಕೇಸು ಎಂದೆಲ್ಲ ಉಳಿದವರು ಓಡಾಡುತ್ತಿದ್ದರೆ, ಮಾರನೆಯ ದಿನ ಕಾಲೇಜಿಗೆ ಬಂದ ಪುತ್ತೋಳಿ ಅಲ್ಲಿದ್ದ ಒಂದು ದಿಬ್ಬದ ಮೇಲೆ ನಿಂತು ಗಂಭೀರವಾಗಿ ಕಾರ್ಮಿಕ ನಾಯಕನ, ಶೋಷಿತನ ರೀತಿಯಲ್ಲಿ ಭಾಷಣ ಶುರು ಮಾಡಿದ್ದ. ಒಂದಷ್ಟು ಮಂದಿಯನ್ನು ಕಲೆ ಹಾಕಿ ಇಡೀ ಪ್ರಸಂಗಕ್ಕೆ ಬೇರೆಯೇ ರೂಪ ಕೊಟ್ಟಿದ್ದ. ಅದು ರಾಜಕೀಯ ಪ್ರೇರಿತ ಹಲ್ಲೆ ಎಂದು ದೂರಿದ್ದ. ಪೊಲೀಸರಿಗೆ ಮಾಹಿತಿ ಇದ್ದರೂ ಅವರು ನೆರವಿಗೆ ಬರಲಿಲ್ಲ ಎಂದೆಲ್ಲ ಆಕ್ಷೇಪಿಸಿದ್ದ. ನಾವೆಲ್ಲ ಕೇಳಿದ ಮೊಟ್ಟ ಮೊದಲ ಪರಿಣಾಕಾರಿ ಭಾಷಣ ಅದು. ವಿನ್‌ಸ್ಟನ್ ಚರ್ಚಿಲ್ ಅದ್ಭುತವಾಗಿ ಮಾತಾಡುತ್ತಿದ್ದರು ಎಂದು ಓದಿದಾಗ ನನಗೆ ನೆನಪಾಗುತ್ತಿತ್ತು ಈ ಪುತ್ತೋಳಿಯೇ.
ಅವನ ಕೊಲೆಗಾರರಿಗೆ ಶಿಕ್ಷೆಯಾಗಿದೆ ಅಂತ ಮೊನ್ನೆ ಮಧ್ಯಾಹ್ನ ಕುಂಟಿನಿ ಫೋನ್ ಮಾಡಿ ಹೇಳಿದಾಗ ಹಳೆಯದೆಲ್ಲ ನೆನಪಾಯಿತು. ಆ ಪ್ರಸಂಗವನ್ನು ಎತ್ತಿ ಹಿಡಿದು, ಕೇಸು ದಾಖಲಾಗುವಂತೆ ಮಾಡಿದ್ದರಲ್ಲಿ ರವಿ ಬೆಳಗೆರೆಯವರದ್ದು ದೊಡ್ಡ ಪಾತ್ರವಿದೆ. ಸುದ್ದಿ ತಿಳಿಯುತ್ತಲೇ ಅವರು ಉಪ್ಪಿನಂಗಡಿಗೆ ಧಾವಿಸಿಬಂದಿದ್ದರು. ಪುತ್ತೂರಿನ ಹೊಟೆಲ್ ರಾಮದಲ್ಲಿ ಕುಳಿತು ಇಡೀ ವಿವರಗಳನ್ನು ಕೇಳಿಸಿಕೊಂಡಿದ್ದರು. ಆರೋಪಿಗಳ ಮನೆಗೆ ನಾನು ಮಾರುವೇಷದಲ್ಲಿ ಹೋಗಿ ಯಾವುದೋ ಇಂಗ್ಲಿಷ್ ಪತ್ರಿಕೆಯ ವರದಿಗಾರ ಎಂದು ಹೇಳಿಕೊಂಡು ಅವರ ಸಂದರ್ಶನ ಮಾಡಿಕೊಂಡು ಬಂದಿದ್ದೆ. ಸಂದರ್ಶನ ಮುಗಿಯಿತು ಅನ್ನುವ ಹೊತ್ತಿಗೆ ಅವನ ಹೆಂಡತಿಗೆ ನನ್ನ ಗುರುತು ಹತ್ತಿ ಮತ್ತೇನೋ ಅನಾಹುತ ಆಗುವುದರಲ್ಲಿತ್ತು.
ಆ ಘಟನೆ ನಮ್ಮನ್ನು ಎಷ್ಟೆಲ್ಲ ಕಾಡಿತ್ತೆಂದರೆ ಸುಮಾರು ವರ್ಷ ಗಾಂಪಾ ಗೆಳೆಯರಾದ ಅಶ್ರಫ್, ಆಂಟನಿ, ಶಾಹುಲ್ ಹಮೀದ್, ಕಿಶೋರ್ ಮುಂತಾದವರೆಲ್ಲ ಅದರ ಬೆನ್ನುಬಿದ್ದಿದ್ದರು. ಇನ್ನೇನು ಅಪರಾಧಿಗಳು ತಪ್ಪಿಸಿಕೊಂಡರು ಎಂದು ನಾವು ನಿರಾಶೆಯ ಅಂಚು ತಲುಪುತ್ತಿದ್ದಂತೆ ಅವರಿಗೆ ಶಿಕ್ಷೆಯಾದ ಸುದ್ದಿ ಬಂದಿದೆ. ಅದೇ ಘಟನೆಯನ್ನಿಟ್ಟುಕೊಂಡು ನಾನು ನದಿಯ ನೆನಪಿನ ಹಂಗು’ ಎಂಬ ಕಾದಂಬರಿಯೊಂದನ್ನು ಬರೆದೇ ಹತ್ತು ವರ್ಷವಾಗಿದೆ.
ಈ ಘಟನೆ ನಡೆದ ದಿನಗಳಲ್ಲೇ ನಾನು, ಕುಂಟಿನಿ ಮತ್ತೊಂದಷ್ಟು ಗೆಳೆಯರು ಆ ಅಪರಿಚಿತ’ ಗುರುಗಳನ್ನು ಭೇಟಿಯಾದದ್ದು. ಅವರು ನಮ್ಮ ನೋವಿನ ಕತೆಯನ್ನು ಸಾವಧಾನದಿಂದ ಕೇಳಿದ್ದರು. ಕೇಳಿದ ನಂತರ ಹಾಗೊಂದು ಅರ್ಥವಾಗದ ಪ್ರಶ್ನೆ ಕೇಳಿದ್ದರು. ನಾವು ಏನನ್ನು ಮೀರಲು ಯತ್ನಿಸುತ್ತಿದ್ದೇವೆ ಎಂಬ ಆ ಪ್ರಶ್ನೆ ಸರಿಯಾಗಿ ನಾಟಿದ್ದು, ನನಗೂ ಕುಂಟಿನಿಗೂ ಮಾತ್ರವೇ ಇರಬೇಕು.
ಆಗೆಲ್ಲ ನಾವು ಸದ್ಯದ ಸ್ಥಿತಿಯನ್ನು ಮೀರುವ ಹುನ್ನಾರಗಳಲ್ಲಿ ತೊಡಗಿಕೊಂಡಿದ್ದೆವು. ನಮ್ಮ ಸ್ಥಿತಿ ಸರಿಯಿಲ್ಲ ಎಂಬುದು ಅರ್ಥವಾಗಿತ್ತು. ಅದನ್ನು ಹೇಗೆ ಮೀರಬೇಕು ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಮೀರುವುದು ಅಂದರೆ ಏನು ಅನ್ನುವುದು ಕೂಡ ಸ್ಪಷ್ಟವಾಗಿರಲಿಲ್ಲ. ಆದರೆ ನಾವು ಕೂಡ ನಮ್ಮ ಹಿರಿಯರ ಹಾಗೆ ಅದದೇ ನೈಮಿತ್ತಿಕಗಳನ್ನು ಮಾಡಿಕೊಂಡು ಸರ್ವನಾಶ ಆಗಲಿದ್ದೇವೆ ಎಂಬ ಸೂಚನೆಯನ್ನಂತೂ ನಮ್ಮ ಪರಿಸರ ಕೊಡುತ್ತಲೇ ಇತ್ತು.
ಕೊನೆಗೂ ಏನಾಗಬಹುದು. ನಾನು ಅಡಕೆ ತೋಟ ನೋಡಿಕೊಂಡೋ ಪುಟ್ಟದೊಂದು ಅಂಗಡಿಯನ್ನೋ ಹೊಟೆಲನ್ನೋ ಇಟ್ಟುಕೊಂಡೋ ಇರುತ್ತೇನೆ. ಕುಂಟಿನಿ ತನ್ನ ಸಮೃದ್ಧವಾದ ತೋಟ ನೋಡಿಕೊಳ್ಳುತ್ತಿರುತ್ತಾನೆ. ಆಗೀಗ ಒಂದೆರಡು ಕತೆಗಳನ್ನು ಬರೆದು ಪರಸ್ಪರ ಓದಿಕೊಳ್ಳುತ್ತೇವೆ. ಅದೃಷ್ಟ ಚೆನ್ನಾಗಿದ್ದರೆ ಅವು ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಪ್ರಕಟವಾದರೂ ಆಗಬಹುದು. ಅದನ್ನು ಅದೃಷ್ಟವಶಾತ್ ಯಾರಾದರೂ ಓದಬಹುದು. ಅದರಾಚೆಗೆ ಏನೂ ಸಾಧ್ಯವಾಗುವುದಿಲ್ಲ ಎಂಬ ನಂಬಿಕೆಯೂ ಸಾಧ್ಯವಾಗಬೇಕು ಎಂಬ ಛಲವೂ ಬೆರೆತವರಂತೆ ನಾವು ಬದುಕುತ್ತಿದ್ದೆವು.
ಅಂಥ ಹೊತ್ತಲ್ಲಿ ಗುರುಗಳು ಆ ಪ್ರಶ್ನೆ ಕೇಳಿದ್ದು. ದೈನಿಕದ ಜಂಜಡದಲ್ಲಿ ಬಿದ್ದು ತೊಳಲಾಡಬೇಡಿ ಎಂದು ಅವರು ಹೇಳಲಿಲ್ಲ. ಏನನ್ನಾದರೂ ಸಾಧಿಸಿ ಎಂದೂ ಅವರು ಬೋಧಿಸಲಿಲ್ಲ. ತೀರ ಸಹಜವಾಗಿ, ನಮಗೆ ಅರಿವಾಗುವ ಹಾಗೆ ಇರುವ ಸ್ಥಿತಿಯನ್ನು ಮೀರಲು ಯತ್ನಿಸುತ್ತಿರಿ ಎಂದಿದ್ದರು. ಹಾಗೇ, ನಾವು ಏನನ್ನು ಮೀರಲು ಯತ್ನಿಸುತ್ತಿದ್ದೇವೆ ಎಂಬುದು ನಮಗೆ ಗೊತ್ತಿರಬೇಕು ಎಂದು ಹೇಳಿ ಸಣ್ಣಗೆ ನಕ್ಕಿದ್ದರು.
ನೇತ್ರಾವತಿ ನದಿ ಶ್ರಾವಣ ಭಾದ್ರಪದದ ಮಳೆಗೆ ತುಂಬಿ ಹರಿದು ತನ್ನ ಪಾತ್ರವನ್ನು ಮೀರುತ್ತಿತ್ತು. ದಡದಾಚೆಗೂ ಹರಿದು ಹೊಳೆ ಮತ್ತಷ್ಟು ಅಗಲವಾಗಿ ಕಾಣಿಸುತ್ತಿತ್ತು. ಒಂದು ದಿನ ಅದನ್ನು ನೋಡುತ್ತಾ ಕೂತಿದ್ದ ನಮಗೆ, ಮೀರಿದರೆ ಹಾಗೆ ಮೀರಬೇಕು ಅನ್ನುವುದು ಹೊಳೆಯಿತು.
ಈಗ ಕುಳಿತು ಯೋಚಿಸಿದರೆ ಅದೆಲ್ಲ ತಮಾಷೆಯಾಗಿ ಕಾಣಿಸುತ್ತದೆ. ಪುತ್ತೋಳಿ ಕೂಡ ದೈನಿಕದ ನಿರ್ಜೀವ ಅವಸ್ಥೆಯನ್ನು ಮೀರಲು ಯತ್ನಿಸುತ್ತಿದ್ದನೇನೋ? ಆದರೆ ಮೀರುವ ಕ್ರಮದಲ್ಲಿ ಏನೋ ತಪ್ಪಾಗಿರಬೇಕು. ಅವನನ್ನು ಪ್ರೀತಿಸಿದ ಅವಳೂ ಅದನ್ನೇ ಮಾಡಿರಬಹುದು. ದಾಂಪತ್ಯದಲ್ಲಿ ಮೀರುವುದು ಕೂಡ ಕೆಲವರಿಗೆ ಸಣ್ಣಮಟ್ಟಿನ ಸಂತೋಷವನ್ನು ಕೊಡುತ್ತದೇನೋ?
ಒಳಗಿನಿಂದ ಮೀರಬೇಕೋ ಹೊರಗಿನಿಂದಲೋ? ಮೀರಿದರೂ ಸ್ವಂತಿಕೆ ಉಳಿಸಿಕೊಳ್ಳುವುದು ಹೇಗೆ? ನಾವು ಮಿಲಿಟರಿ ಹೊಟೆಲುಗಳಲ್ಲಿ ಊಟ ಮಾಡುತ್ತಾ, ಕದ್ದು ಬಿಯರ್ ಕುಡಿಯುತ್ತಾ, ಸಿಗರೇಟು ಸೇದುತ್ತಾ ಇದ್ದದ್ದು ಕೂಡ ಮೀರುವ ಒಂದು ಪ್ರಯತ್ನವೂ ಇರಬಹುದು. ಯೌವನಪೂರ್ವದ ಹುಚ್ಚಾಟಗಳಿಗೆ ಅರ್ಥವೇ ಇರುವುದಿಲ್ಲ. ಗುರುಗಳಿಗೆ ಇದನ್ನೆಲ್ಲ ಹೇಳಿದರೆ ಅವರು ಇದನ್ನು ಉಲ್ಲಂಘನೆ ಎಂದು ಗಂಭೀರವಾಗಿ ಕರೆದು ನಮ್ಮನ್ನು ಕಂಗಾಲು ಮಾಡುತ್ತಿದ್ದರೇನೋ?
ಮೊನ್ನೆ ಉಪ್ಪಿನಂಗಡಿಗೆ ಹೋದಾಗ, ಸಹಸ್ರಲಿಂಗೇಶ್ವರ ದೇವಸ್ಥಾನದ ಕಟ್ಟೆಯಲ್ಲಿ ಕೂತು ನೇತ್ರಾವತಿ ಮತ್ತು ಕುಮಾರಧಾರೆ ಸಂಗಮಿಸುವ ಜಾಗದಲ್ಲಿ ಮೂಡಿದ ಚಕ್ರಸುಳಿಯನ್ನು ನೋಡುತ್ತಿದ್ದೆವು. ಹಿಂದಿನ ರಾತ್ರಿಯಷ್ಟೇ ಮಳೆಯಾಗಿತ್ತು. ಎರಡೂ ನದಿಗಳು ಅರ್ಭಟಿಸುತ್ತಿದ್ದವು. ಆ ಪ್ರವಾಹದಲ್ಲಿ ಸಿಲುಕಿಕೊಂಡು ತೇಲುಮುಳುಗು ಸ್ಥಿತಿಯಲ್ಲಿ ತೇಲುತ್ತಿದ್ದ ದನವೊಂದು ಕಾಣಿಸಿತು. ಅದು ಸತ್ತೇಹೋಗಿರಬೇಕು ಎಂದುಕೊಳ್ಳುತ್ತಿದ್ದಂತೆ, ಆ ದನ ಇದ್ದೆಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ಕೊನೆಯ ಪ್ರಯತ್ನವೆಂಬಂತೆ ದಡದತ್ತ ಈಜತೊಡಗಿತು. ನಾವು ನೋಡುತ್ತಿದ್ದ ಹಾಗೇ, ದಡ ಸೇರಿ, ತುಂಬಿ ಹರಿಯುತ್ತಿದ್ದ ಹೊಳೆಯನ್ನು ನಿರ್ಲಕ್ಷ್ಯದಿಂದ ಎಂಬಂತೆ ನೋಡಿ ನಿಧಾನವಾಗಿ ಹುಲ್ಲು ಮೇಯತೊಡಗಿತು.
ಮೀರುವುದು ಅಂತರಂಗದ ಅನಿವಾರ್ಯ ಎನ್ನುವುದು ಮತ್ತೊಮ್ಮೆ ಖಾತ್ರಿಯಾಯಿತು. ಎಂಥ ಎತ್ತರಕ್ಕೇರಿದರೂ, ಯಾವ ಪಾತಾಳದಲ್ಲಿ ಹುದುಗಿದ್ದರೂ ಮೀರುವುದು ಜೀವನಪ್ರೀತಿ, ಮೀರದೇ ಹೋದರೆ ನಾವು ಬರೀ ಸುವರ್ಣಪುತ್ಥಳಿ
ಜೋಗಿ ಬರೆದಿದ್ದಾರೆ: ದಾಟದಂತೆ ಮೀರುವಾ..ಮೀರದಂತೆ ದಾಟುವಾ..
ನಿಮಗೆ ಇವೂ ಇಷ್ಟವಾಗಬಹುದು…



ನಿರ್ವಾತದಿ೦ದ ಏನೆಲ್ಲಾ ಸೃಷ್ಟಿಸುತ್ತೀರಿ, ಜೋಗಿಯಲ್ಲಿ ಇ೦ದ್ರಜಾಲಿಕನೂ ಇದ್ದಾನೆ. ! ವ೦ದನೆಗಳು. ಜಿ೦ಕೆ ಸುಬ್ಬಣ್ಣ, ಪುತ್ತೂರು.
ಜೋಗಿ ಸರ್ ಆಧ್ಯಾತ್ಮದತ್ತ ವಾಲ್ತಾ ಇದಾರಾ?! ಚಿಂತನೆಗೊಳಪಡಿಸುವಂಥ ಬರಹ..
sir namonamaha:)
ಇದೆಲ್ಲ ಹೀಗೆಯೇ, ಆದರ್ಶಗಳು ಗುಳಿಗೆಗಳಂತೆ ಮಾರಾಟಕ್ಕೆ ಸಿಗುವ
ಸುಲಭದ ದಿನಗಳಿವು. ಒಂದಷ್ಟು ಮಾತುಗಳು ಬಾಯಲ್ಲಿ ಬರಹಗಳು ಪೆನ್ನಲ್ಲಿ
ಬಿಕ್ಕುತ್ತಿದ್ದರೆ ಶೂನ್ಯದಿಂದ ಸಂಪಾದಿಸಬಹುದು. ನೀವೆಲ್ಲ ಎಲ್ಲಿಯವರು?ಜೋಗಿ !
ಆ ಊರಿನವರೋ..? ಈ ಊರಿನವರೋ..?
ನೆನಪುಗಳು ತಂಪಾಗಿದ್ದರೆ ಸುಖ, ಕೆಂಪಾಗಿದ್ದರೆ ಕಾಟ.
ಅನು-ಭವ ಚೆನ್ನಾಗಿದೆ, ಇನ್ನೂ ಹಾಗಿರಲಿ.
ಮೀರುವುದರ ಎಲ್ಲೆ ಮತ್ತು ಮಿತಿಯನ್ನ ನಿಮ್ಮ ಬರಹ ಗುರುತಿಸುತ್ತದೆ.
Good one 🙂
super article.keep it up.baari sokule eldhire aava.ninde evudema kande orme undu aava.
ಜೋಗಿ,ಈ ಸಾಲು “ದಾಟದಂತೆ ಮೀರುವಾ..ಮೀರದಂತೆ ದಾಟುವ”ನನಗೆ ಅಲ್ಲಮ್ಮನ ವಚನಗಳ ಸಾಲಿನಂತೆ ಭಾಸವಾಗುತ್ತಿದೆ.ಲೇಖನದ ಕೊನೆಯ ಮೂರು ವಾಕ್ಯಗಳಂತೂ ನನಗೆ ಬೇರೆ ಬೇರೆ ಅರ್ಥಗಳ್ನ ಹೊಳೆಸುತ್ತಿವೆ.ಇದು ಲೇಖನದ ಮೋಡಿ ಇರಬಹುದೇ…?