ಜೋಗಿ ಬರೆದಿದ್ದಾರೆ: ಆಕಾಶ ಎಂಬ ಬಯಲು, ಹಕ್ಕಿಯೆಂಬ ಆಲಯ

 
jjjjj1 
 
 
ಯಾರು ಅವಿದ್ಯೆಯನ್ನು ಉಪಾಸನೆ ಮಾಡುತ್ತಾರೋ ಅವರು ಕತ್ತಲಲ್ಲಿರುತ್ತಾರೆ. ಯಾರು ವಿದ್ಯೆಯಲ್ಲಿ ನಿರತರಾಗಿದ್ದಾರೋ ಅವರು ಇನ್ನೂ ಹೆಚ್ಚಿನ ಕತ್ತಲೆಯಲ್ಲಿ ಇರುತ್ತಾರೆ.
ಈಶಾವಾಸ್ಯ ಉಪನಿಷತ್ತಿನ ಈ ಮಾತು ಬೆಚ್ಚಿಬೀಳಿಸುವಂತಿದೆ. ಇದಕ್ಕೆ ಸಂಬಂಧಿಸಿದ ಇದರ ಉಲ್ಲೇಖಗಳನ್ನೆಲ್ಲ ಬದಿಗಿಟ್ಟು ಈ ಎರಡು ಸಾಲುಗಳನ್ನಷ್ಟೇ ಓದಿ. ಇದರ ವಿರೋಧಾಭಾಸದಲ್ಲಿ ಜೀವನದ ಅರ್ಥವಿದೆ. ಅವಿದ್ಯೆ ಮತ್ತು ವಿದ್ಯೆ ಎರಡೂ ಒಂದೇ. ಅದರಲ್ಲೂ ವಿದ್ಯೆ ಅವಿದ್ಯೆಗಿಂತ ಕೆಟ್ಟದ್ದು ಅನ್ನುವ ಅರ್ಥವನ್ನು ಹೊರಡಿಸುವಂತಿದೆ ಈ ಸಾಲು.
ತುಂಬ ಓದಿಕೊಂಡವನು ತಿಳಿದುಕೊಳ್ಳದೇ ಹೋದಾಗ ಹೀಗಾಗುವುದು ಸಹಜ. ಓದು ಬೇರೆ ತಿಳುವಳಿಕೆ ಬೇರೆ. ಅರಿತುಕೊಳ್ಳುವುದಕ್ಕೆ ಶಾಸ್ತ್ರ, ತಿಳಿದುಕೊಳ್ಳುವುದಕ್ಕೆ ಉಪನಿಷತ್ತು ಅನ್ನುವ ಮಾತಿದೆ. ಶಾಸ್ತ್ರವನ್ನು ಓದಿಕೊಂಡವನು ಬುದ್ಧಿವಂತನಾಗುತ್ತಾನೆ. ಅದನ್ನ ಮೀರಿದವನು ಜ್ಞಾನಿ ಅನ್ನಿಸಿಕೊಳ್ಳುತ್ತಾನೆ.
pic-mdlಶಾಸ್ತ್ರ ಎಂದರೆ ನಮ್ಮ ದೈನಂದಿನ ಕಾರ್ಯಗಳಿಗೆ ಬೇಕಾದ ಜ್ಞಾನ. ಉದಾಹರಣೆಗೆ ವೈದ್ಯಶಾಸ್ತ್ರ, ಸಮಾಜಶಾಸ್ತ್ರ, ಕಾನೂನು, ಅಕೌಂಟೆನ್ಸಿ.ಇದನ್ನು ಯಾರು ಬೇಕಾದರೂ ಓದಿ ತಿಳಿದುಕೊಳ್ಳಬಹುದು. ಓದಿ ತಿಳಿದುಕೊಳ್ಳದೇ ಹೋದರೂ ಅದು ಪುಸ್ತಕದಲ್ಲಿ ಸಿಗುತ್ತದೆ. ಯಾವಾಗ ಬೇಕಾದರೂ ಓದಬಹುದು. ಆದರೆ ಉಪನಿಷತ್ತು ನೀಡುವ ತಿಳುವಳಿಕೆ ಅಂಥದ್ದಲ್ಲ. ಅದನ್ನು ಯಾವಾಗ ಬೇಕಾದರೂ ಓದಿ ತಿಳಿದುಕೊಳ್ಳಲಾಗುವುದಿಲ್ಲ. ಅದು ಮನಸ್ಸಿನ ಒಳ ಹೊಕ್ಕುವುದಕ್ಕೊಂದು ಸುಮುಹೂರ್ತ ಬೇಕಾಗುತ್ತದೆ. ಶಾಸ್ತ್ರದ ಮೂಲದ ಜ್ಞಾನವನ್ನೂ ಪಡೆದುಕೊಳ್ಳುವ ಹಾಗಿದ್ದರೆ ಬುದ್ದ ಜ್ಞಾನೋದಯ ಆಗುವುದಕ್ಕೆ ಅಷ್ಟೊಂದು ವರುಷ ಕಾಯಬೇಕಾಗಿರಲಿಲ್ಲ.
ಇದನ್ನೇ ನಮ್ಮ ಹಿರಿಯರು ಕಲೆ ಅಂತ ಕರೆದರು. ಅರುವತ್ತನಾಲ್ಕು ವಿದ್ಯೆಗಳಲ್ಲಿ ಎಲ್ಲಕ್ಕೂ ಕಲೆಯ ಸ್ವರೂಪ ಕೊಟ್ಟರು. ಕಲೆಯನ್ನು ಕಲಿಯಬಹುದೇ, ಕಲಿಸಬಹುದೇ ಅಥವಾ ಅದು ಮೈಗೂಡಬೇಕೆ ಅನ್ನುವುದು ಬೇರೆ ಪ್ರಶ್ನೆ. ಹಾಗೆ ನೋಡಿದರೆ ಕಲೆ ಜ್ಞಾನದ ಹಾಗೆ ಒಳಗಿನಿಂದ ಬರುವಂಥದ್ದುವಿಜ್ಞಾನ ಹೊರಗಿನಿಂದ ಬರುವಂಥದ್ದು. ಆದ್ದರಿಂದಲೇ ವಿಜ್ಞಾನದಲ್ಲಿ ಹೊಸದನ್ನು ಕಂಡುಹಿಡಿಯುತ್ತಾರೆ, ಅದು ಸಂಶೋಧನೆ. ಕಲೆಯನ್ನು ಹೊಸದನ್ನು ಸೃಷ್ಟಿಸುತ್ತಾರೆ, ಅದು ಸೃಜನಶೀಲತೆ. ಸಂಶೋಧನೆ ಅಂದರೆ ಇದ್ದಿದ್ದನ್ನು ಹುಡುಕುವುದು. ವಿಜ್ಞಾನ ಶೂನ್ಯದಿಂದ ಏನನ್ನೂ ಸೃಷ್ಟಿಸಲಾರೆವು ಅನ್ನುತ್ತದೆ. ಆದರೆ ಕಲೆ ಶೂನ್ಯದಿಂದಲೇ ಸೃಷ್ಟಿಸುತ್ತದೆ.
                                                                   ********
ಈ ಪ್ರಸ್ತಾಪ ಕಾರಣ ಥಟ್ಟನೆ ಹೊಳೆದ ಒಂದು ಪ್ರಶ್ನೆ. ನಾವೇಕೆ ಸದಾ ವಿಷಾದಗೀತೆಗಳನ್ನೇ ಇಷ್ಟಪಡುತ್ತೇವೆ? ಯಾಕೆ ಸದಾ ಸಾವಿನ ಬಗ್ಗೆಯೇ ಚಿಂತಿಸುತ್ತಿರುತ್ತೇವೆ. ಬದುಕನ್ನು ಸದಾ ಸಾವಿನ ಬೆಳಕಲ್ಲೇ ಯಾಕೆ ನೋಡುತ್ತೇವೆ? ಇದು ಆಯಾ ವ್ಯಕ್ತಿಯ ಕಲಾತ್ಮಕತೆಗೆ ಸಂಬಂಧಿಸಿದ್ದು. ಅತ್ಯಂತ ಪರಿಪೂರ್ಣ ಕಲೆ ಅಂದರೆ ಸಾವು. ಸಾವಿನಂಥ ಸೊಗಸಾದ ಆರ್ಟ್ ವರ್ಕ್ ಮತ್ತೊಂದಿಲ್ಲ. ಅದು ಪ್ರತಿಯೊಂದು ಕೃತಿಗೂ ಒಂದು ಅದ್ಭುತವಾದ ಫಿನಿಷಿಂಗ್ ಟಚ್ ಕೊಡುತ್ತದೆ. ಅದನ್ನು ಊಹಿಸಿಕೊಂಡು ನಾವು ಬದುಕುತ್ತೇವೆ. ಸಾವು ಇಲ್ಲದೇ ಹೋಗಿದ್ದರೆ ಬಹುಶ ಬದುಕು ಇಷ್ಟು ಜೀವಂತಿಕೆಯಿಂದ ಕೂಡಿರುತ್ತಿರಲಿಲ್ಲ. ಯಾಕೆಂದರೆ ಜೀವಂತಿಕೆ ಮತ್ತು ನಿರ್ಜೀವವನ್ನು ಬೇರ್ಪಡಿಸುವ ಬಿಂದುವೇ ಇರುತ್ತಿರಲಿಲ್ಲ.
 ಬೇಕಿದ್ದರೆ ನೋಡಿ; ಅತ್ಯಂತ ತೀವ್ರವಾಗಿ ಈ ಬದುಕನ್ನು ಆನುಭವಿಸುವ ಮಂದಿ ಎಲ್ಲರಿಗಿಂತ ಹೆಚ್ಚು ಫಿಲಾಸಪಿಕಲ್ ಆಗಿರುತ್ತಾರೆ. ಉದಾಹರಣೆಗೆ ಯೇಟ್ಸ್, ಬೋಧಿಲೇರ್ . ಜ್ಙಾನವೈರಾಗ್ಯ ಅನ್ನುವ ಮಾತೊಂದು ನಮ್ಮಲ್ಲಿದೆ. ಜ್ಞಾನದ ಜೊತೆಗೆ ವೈರಾಗ್ಯವೂ ಬರಬೇಕು. ಆ ವೈರಾಗ್ಯ ಬಂದಾಗ ಜ್ಞಾನ ಏನೂ ಅಲ್ಲ ಅನ್ನುವುದು ಗೊತ್ತಾಗಬೇಕು. ಮತ್ತೆ ಅಜ್ಞಾನಿಯಾಗಬೇಕು ಅನ್ನಿಸಬೇಕು. ಅದು ಪದಬಂಧವನ್ನು ಬಿಡಿಸಿದಂತೆ. ಬಿಡಿಸುವ ಮುನ್ನ ಕುತೂಹಲ, ಬಿಡಿಸಿದ ನಂತರ ಮುಗಿಯಿತಲ್ಲ ಅನ್ನುವ ನಿರಾಸೆ.

 

 ಸಾವನ್ನು ಎದುರಿಗಿಟ್ಟು ನೋಡದೇ ಹೋದರೆ ಈ ಬದುಕು ಎಷ್ಟು ನೀರಸವಾಗುತ್ತಿತ್ತು ಊಹಿಸಿ. ಇವತ್ತಲ್ಲ ನಾಳೆ ಸಾಯುತ್ತೇವೆ ಅನ್ನುವ ಭರವಸೆಯೆ ನಮ್ಮನ್ನು ಬದುಕುವುದನ್ನೂ ಪ್ರೇರೆಪಿಸುತ್ತದೆ. ಆ ಕಾರಣಕ್ಕೇ ಸಾವಿನಂಥ ಪ್ರೇರಕಶಕ್ತಿ ಮತ್ತೊಂದಿಲ್ಲ. ಸಾವು ಪ್ರೇರಕ ಶಕ್ತಿ ಆಗಿರದೇ ಹೋಗಿದ್ದರೆ, ಯಾರೂ ಬದುಕುತ್ತಲೇ ಇರಲಿಲ್ಲ. ನಾಳೆ ಸಾಯ್ತೀವಿ ಅನ್ನೋ ದುಃಖಕ್ಕೆ ಎಲ್ಲರೂ ಇವತ್ತೇ ಸಾಯುತ್ತಿದ್ದರು. ತ್ಸುನಾಮಿ ಅಲೆ ಬಂದು ಅಪ್ಪಳಿಸಿದ ಎರಡೇ ದಿನಕ್ಕೆ ಮತ್ತೆ ತೀರ ಗಿಜಿಗುಡುತ್ತದೆ. ಅಲ್ಲೊಂದು ಪ್ರೇಮ ಅರಳುತ್ತದೆ. ಅದು ಬದುಕನ್ನು ಕಟ್ಟುವ ಮಾತಾಡುತ್ತದೆ. ಹಿಂದಿನ ದಿನ ಸವರಿಕೊಂಡು ಹೋದ ಸಾವಿನ ಕೈಯಲ್ಲಿ ಮಾರನೆಯ ಬೆಳಗ್ಗೆ ಮಲ್ಲಿಗೆಯ ಮಾಲೆಯಿರುತ್ತದೆ.

 

 ಅದಕ್ಕೇ ನಾವು ಈ ಬದುಕು ನಶ್ವರ ಅನ್ನುವ ಗೀತೆಗಳನ್ನು ಮೆಚ್ಚುತ್ತೇವೆ. ಶ್ರೀಮಂತ ಮತ್ತು ಕಡುಬಡವ ಇಬ್ಬರೂ ಈ ಜೀವನ ಇಷ್ಟೇ ಗುರೂ. ಇವತ್ತು ಬಂದಿದ್ದನ್ನು ಅನುಭವಿಸೋಣ. ನಾಳೆ ಯಾರು ಬದುಕಿರ್ತೀವೋ ಯಾರಿಗೆ ಗೊತ್ತುಅನ್ನುತ್ತಲೇ ಬದುಕುತ್ತಾರೆ. ಒಂದೊಂದು ದಿನವೂ ನಮ್ಮನ್ನು ಸಾವಿನರಮನೆಯ ಹೊಸ್ತಿಲಿನತ್ತ ಕರೆದೊಯ್ಯುತ್ತದೆ ಅಂಥ ಗೊತ್ತಿದ್ದೂ ತೀವ್ರವಾಗಿ ಬದುಕುತ್ತಾ ಹೋಗುತ್ತೇವೆ.

 ಹಾಗೆ ನೋಡಿದರೆ ನಾವು ಪಶ್ಚಾತ್ತಾಪ ಪಡದಿರುವ ಏಕೈಕ ಕ್ರಿಯೆ; ಸಾವು. ಗೋರಿಯಲ್ಲಿ ಮಲಗಿದ ಯಾರೂ ಛೇ, ಸಾಯಬಾರದಿತ್ತು ನಾನುಅಂದುಕೊಳ್ಳುವುದಿಲ್ಲ. ಹೀಗಾಗಿ ಅದು ಎಲ್ಲರೂ ಕಾಯಾವಾಚಾಮನಸಾ ಒಪ್ಪಕೊಂಡು ಮಡುವ ಕೆಲಸ!

 

ಅಮರತ್ವದ ಆಶೆ ಮತ್ತು ಸಾವಿನ ಸೆಳೆತ-ಎರಡರಲ್ಲಿ ಯಾವುದು ನಮೆಗೆ ಹತ್ತಿರ ಅಮರರಾಗುವ ಆಶಯದಲ್ಲೇ ಸಾವಿನ ಬೀಜ ಇದೆ.

                                               2

ಆಕಾಶ ನೋಡುವುದಕ್ಕೇ ನೂಕುನುಗ್ಗಲೇ ಎನ್ನುವ ಗಾದೆಯೊಂದು ಚಾಲ್ತಿಯಲ್ಲಿದೆ. ಅದರ ಅರ್ಥ ಆಕಾಶ ವಿಶಾಲವಾಗಿದೆಯೆಂದೋ ಅದನ್ನು ನೋಡುವುದೂ ಅಂಥ ವಿಶೇಷ ಅಲ್ಲವೆಂದೂ ಆಕಾಶವನ್ನು ಯಾರು ಯಾವಾಗ ಬೇಕಾದರೂ ನೋಡಬಹುದೆಂದೂ ಇರಬಹುದು. ಈ ಮಾತಿನಲ್ಲಿ ಆಕಾಶದ ಬಗ್ಗೆ ನಮಗೆಷ್ಟು ಕೀಳುಭಾವನೆ ಇದೆ ಅನ್ನುವುದೂ ಗೊತ್ತಾಗುತ್ತದೆ. ಆಕಾಶ ನೋಡುವುದು ನಮ್ಮ ಮಟ್ಟಿಗೆ ಒಂದು ಅರ್ಥಹೀನ ಕ್ರಿಯೆ. ತಲೆಯೆತ್ತಿ ನೋಡಿದರೆ ಆಕಾಶ ಕಾಣುತ್ತದೆ ಎಂಬಲ್ಲಿಗೆ ಮುಗೀತು.

 ಆಕಾಶ ಒಂದು ಬೋಧಿವೃಕ್ಷ. ನನಗೆ ಸುದ್ದಿ ಕೊಡೋದು ಆ ಆಕಾಶ ಅನ್ನುವ ಅರ್ಥ ಬರುವ ಸಾಲೊಂದನ್ನು ತಮಿಳು ಚಿತ್ರ ಕವಿ ವೈರಮುತ್ತು ಬರೆದಿದ್ದರು. ನಾವು ಏನೂ ಹೊಳೆಯದಿದ್ದಾಗ ಆಕಾಶ ನೋಡುತ್ತೇವೆ. ಗೊತ್ತಿಲ್ಲದ ಪ್ರಶ್ನೆ ಎದುರಾದಾಗ ಆಕಾಶ ನೋಡುತ್ತೇವೆ. ಗೊತ್ತಿಲ್ಲದ ವ್ಯಕ್ತಿಯಾದ ದೇವರ ಪ್ರಸ್ತಾಪ ಬಂದಾಗ ಆಕಾಶ ನೋಡುತ್ತೇವೆ. ಹೀಗಾಗಿ ಆಕಾಶ ಎನ್ನುವುದು ನಮ್ಮ ಪಾಲಿಗೆ ಗೊತ್ತಿಲ್ಲದ ಎಲ್ಲದಕ್ಕೂ ಉತ್ತರ ಸಿಗುವ ಇನ್ಫಾಮರ್ೇಶನ್ ಸೆಂಟರ್; ಮಾಹಿತಿ ಕೇಂದ್ರ ಇರಬಹುದೇ?

ನಾವು ಆಕಾಶವನ್ನು ತುಂಬ ಕಡೆಗಣಿಸುತ್ತೇವೆ ಅನ್ನುವುದಂತೂ ನಿಜ . ಸದಾ ತಲೆಮೇಲಿರುತ್ತೆ ಅನ್ನುವ ಉಡಾಫೆ . ಯಾವತ್ತೂ ಕಳಚಿಬೀಳೋದಿಲ್ಲ ಅನ್ನುವ ಅಭಯ. ನನ್ನೊಬ್ಬದೇನಲ್ಲವಲ್ಲ ಎಂಬ ನಿರ್ಲಕ್ಷ್ಯ. ಯಾರಪ್ಪನ ಸೊತ್ತೂ ಅಲ್ಲವಲ್ಲ ಎಂಬ ಧೈರ್ಯ. ಯಾವಾಗ ಬೇಕಾದರೂ ನೋಡ್ಕೋಬಹುದು ಅನ್ನುವ ನಿರಾಳ. ಇವೆಲ್ಲ ಸೇರಿ ನಮ್ಮನ್ನು ಆಕಾಶ ನೋಡುವುದಕ್ಕೆ ಅವಕಾಶ ಮಾಡಿಕೊಡುವುದೇ ಇಲ್ಲ . ಬೆಂಗಳೂರಿನಂಥ ಊರುಗಳಲ್ಲಿ ಆಕಾಶ ನೋಡುವುದಕ್ಕೆಂದೇ ನೆಹರೂ ಪ್ಲಾನಟೇರಿಯಮ್ಮಿಗೆ ಹೋಗುವವರಿದ್ದಾರೆ. ಕಣ್ಣೆತ್ತಿನೋಡಿದರೆ ಕಾಣುವುದಕ್ಕೆ ತಾರಾಲಯಕ್ಕೆ ಯಾಕೆ ಹೋಗಬೇಕು. ತಾರಮ್ಮಯ್ಯ ತಂದು ತೋರಮ್ಮಯ್ಯ ಅಂತ ಆಕಾಶವನ್ನು ಯಾರಾದರೂ ತೋರಬೇಕೇ ?
ಆಕಾಶದ ಬಗ್ಗೆ ಯಾರು ಏನೇನು ಬರೆದಿದ್ದಾರೆ ಅಂತ ಹುಡುಕಿದರೆ ಸಿಕ್ಕಿದ್ದು ಕೆಲವೇ ಕೆಲವು ಪ್ರಾಸಂಗಿಕ ಉಲ್ಲೇಖಗಳು ಮಾತ್ರ. ಖಗೋಲ ವಿಜ್ಞಾನಿಗಳಿಗೆ ಆಕಾಶ ಮುಗಿಯದ ಪ್ರಶ್ನೆಗಳ ಸೆರಮಾಲೆ. ಕವಿಗಳಿಗೆ ಆಕಾಶ ಕವಿಸಮಯ. ವಿಜ್ಞಾನಿಗಳು ಮತ್ತು ಕವಿಗಳನ್ನು ಬಿಟ್ಟರೆ ಎಲ್ಲವನ್ನೂ ಬೆರಗಿನಿಂದ ನೋಡುವವರು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲವೇನೋ ಅನ್ನಿಸುತ್ತದೆ. ಇವರಿಬ್ಬರ ನಡುವೆ ಒಂದೇ ಒಂದು ವ್ಯತ್ಯಾಸವೆಂದರೆ ಕವಿಗಳು ಬೆರಗು ಹುಟ್ಟಿಸುತ್ತಾರೆ; ವಿಜ್ಞಾನಿಗಳು ಬೆರಗು ಕಳೆದು ಬೆತ್ತಲಾಗಿಸುತ್ತಾರೆ. ಬಾನಿನಲ್ಲಿ ಒಂಟಿತಾರೆ, ಸೋನೆ ಸುರಿವ ಇರುಳ ಮೋರೆ, ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ ಎಂದು ಲಕ್ಷ್ಮೀನಾರಾಯಣ ಭಟ್ಟರು ಬರೆದ ಸೊಗಸಾಗ ಗೀತೆ ವಿಜ್ಞಾನಿಯ ಕೈಗೆ ಸಿಕ್ಕರೆ ಬಾನು, ಒಂಟಿತಾರೆ, ಸೋನೆ, ಇರುಳು,ನೀರೆ ಇಲ್ಲವೂ ವ್ಯಾಖ್ಯಾನಕ್ಕೆ ಒಳಗಾಗಿ ಚಿಂದಿಯಾಗುತ್ತದೆ. ವಿಜ್ಞಾನಿಯ ಪಾಲಿಗೆ ಚಂದ್ರಮಂಚವೂ ಇಲ್ಲ,ಚಕೋರವೂ ಇಲ್ಲ.ಚಾತಕ ಪಕ್ಷಿಯು ಇಲ್ಲ. ಬೆರಗು ಉಲಿಯಬೇಕಿದ್ದರೆ ಅಜ್ಞಾನಿಯಾಗಿರುವುದೇ ವಾಸಿ.
ಮತ್ತೆ ಆಕಾಶಕ್ಕೆ ಬಂದರೆ ಅದನ್ನು ಇನ್ನಿಲ್ಲದಂತೆ ಬಳಸಿಕೊಂಡದ್ದು ಸಿನಿಮಾ ಸಾಹಿತಿಗಳು. ಒಂದು ಕಾಲದಲ್ಲಿ ಆಕಾಶ ಎಂಬ ಪದವಿಲ್ಲದೆ ಚಿತ್ರಗೀತೆಗಳು ಮುಗಿಯುತ್ತಿರಲಿಲ್ಲ;ಶುರುವಾಗುತ್ತಿರಲಿಲ್ಲ.ಹೆಣ್ಣಿನ ಕೈಬಿಡುವುದಿಲ್ಲ ಅನ್ನುವುದಕ್ಕೂ ಆಕಾಶದ ಹೋಲಿಕೆ, ಪ್ರೇಯಸಿ ಆಕಾಶದೀಪ, ಮದುವೆಯಾಗುವ ಹುಡುಗಿ ಆಕಾಶದಿಂದ ಧರೆಗಿಳಿದ ರಂಭೆ, ಪ್ರಿಯಕರ ಆಕಾಶದಲ್ಲಿರುವ ರವಿ.. ಹೀಗೆ ಮಾತು ಮಾತಿಗೆ ಆಕಾಶದ ಪ್ರಸ್ತಾಪ . ಬಹುಶ ಪ್ರೇಮಿಗಳಂಥ ಆಕಾಶಕಾಯ ಮತ್ತೊಂದಿಲ್ಲ!
ಕನ್ನಡ ಕವಿಗಳೂ ಆಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಕಾಡಮೂಲಕವೆ ಪಥ ಆಗಸಕ್ಕೆ, ಧ್ರುವನಕ್ಷತ್ರಕ್ಕೆ ಅನ್ನುವ ಅಡಿಗರ ಸಾಲು ನಮ್ಮ ಕಷ್ಟಕಾರ್ಪಣ್ಯದ ಹಾದಿ ಕೊನೆಗೆ ಶ್ರೇಷ್ಠತೆಯತ್ತ ನಮ್ಮನ್ನು ಒಯ್ಯುವುದರ ಕುರಿತಾಗಿತ್ತು. ಕೆಎಸ್ ನರಸಿಂಹಸ್ವಾಮಿಯವರಂತೂ ಆಕಾಶಕ್ಕೇ ಕಣ್ಣುನೆಟ್ಟು ಕೂತವರ ಹಾಗೆ ಪ್ರತಿಯೊಂದು ಕವಿತೆಯಲ್ಲೂ ಆಕಾಶವನ್ನೇ ತಂದರು.ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಾಗ ರಾಯರು ಮಾವನ ಮನೆಗೆ ಬರುತ್ತಾರೆ. ಕೋಟಿಕಂಗಳ ಥಳಥಳಿಪ ತಾರೆಯಲಿ ಸ್ವಪ್ನ ಸುಂದರಿ ಕಾಣಿಸುತ್ತಾಳೆ. ಅವರಿಗೆ ಕಂಡ ಮೋಡಗಳಲ್ಲೂ ಪ್ರೇಮಪಲ್ಲವ;  
ಶ್ರೀ ಕೃಷ್ಣನಂತೊಂದು ಮುಗಿಲ
ರಾಧೆಯಂತಿನ್ನೊಂದು ಮುಗಿಲು
ಹೊಳೆದಾರಿ ಕಾಯುವ ಮುಗಿಲು
ಜರತಾರಿ ಸೆರಗಿನ ಮುಗಿಲು
ಕೆನ್ನೆ ಕೆಂಪಾದೊಂದು ಮುಗಿಲು ಎಲ್ಲಿ
ಇನ್ನೊಂದು ಮುತ್ತೆನುವ ಮುಗಿಲು!
ಆಕಾಶದಂಥ ಮುಕ್ತ ಮನಸ್ಸು ಮತ್ತೊಂದಿಲ್ಲ. ಅಲ್ಲಿ ನೀವು ಏನನ್ನೂ ಬಚ್ಚಿಡಲಾರಿರಿ. ಎಂಥ ಜಿಪುಣನೂ ದುಡ್ಡನ್ನು ಹುಗಿದಿಡುವುದು ಈ ನೆಲದೊಳಗೇ!

 

 *   *     *    *      *

ಆಕಾಶದಲ್ಲೇನಿದೆ ವೈವಿಧ್ಯ ಎಂದು ಕೇಳಬೇಡಿ. ಆಕಾಶಕ್ಕೋ ಕ್ಷಣಕೊಂದು ಬಣ್ಣ. ಸಂಜೆಗೆಂಪಿನ ಆಕಾಶ, ಶಿಶಿರದ ನೀಲಾಕಾಶ, ಆಷಾಡದ ಬರಿ ಆಕಾಶ, ಶ್ರಾವಣದ ಕಪ್ಪು ಮೋಡ ಮುಂಗುರುಳ ಆಕಾಶ, ಬೆಳಗಿನ ಸ್ತಬ್ಧ ಆಕಾಶ, ಸಂಜೆಯ ಮುಗ್ಧ ಆಕಾಶ, ಮಧ್ಯಾಹ್ನದ ಕ್ರೂರ ಆಕಾಶ, ರಾತ್ರಿಯ ನಿಗೂಢ ಆಕಾಶ-ಹೀಗೆ ಆಕಾಶಕ್ಕೆ ಹಲವು ಮುಖಗಳು. ಕಂಡವರಿಗಷ್ಟೇ ಕಂಡೀತು, ಆದರೆ ಎಲ್ಲರಿಗೂ ಉಂಟು ಕಾಣುವುದಕ್ಕೆ ಅವಕಾಶ.

 ಹಾಗೆ ನೋಡಿದರೆ ಅವತ್ತಿನ ನಮ್ಮ ಭಾವ ಲಹರಿಯನ್ನು ನಿಯಂತ್ರಿಸುವುದು ಆಕಾಶವೇ. ಆಕಾಶ ಮೋಡ ಕವಿದುಕೊಂಡು ಬಿಮ್ಮಗಿದ್ದರೆ ಮನಸ್ಸೂ ಬಿಮ್ಮಗೆ ಇದ್ದುಬಿಡುತ್ತದೆ. ಆಕಾಶ ನೀಲಿಯಾಗಿ ಥಳಥಳಿಸುತ್ತಿದ್ದರೆ, ಮನಸ್ಸು ಪ್ರಫುಲವಾಗಿರುತ್ತದೆ. ಅಲ್ಲಲ್ಲಿ ಮೋಡಗಳು ತೇಲುತ್ತಾ ಆಕಾಶ ಕಡಲಿನ ಹಾಗಿದ್ದರೆ ಮನಸ್ಸು ಹಾಯಿ ಹಡಗಿನ ಹಾಗೆ ತೇಲುತ್ತದೆ. ದಿಗಿಲಿಲ್ಲದ ಆಕಾಶದಲ್ಲಿ ಮನ ಮುಗಿಲಾಗುತ್ತದೆ.

 

 ನಾವು ಆಕಾಶ ನೋಡದೆ ಅದೆಷ್ಟು ವರುಷಗಳಾದವೋ ಏನೋ? ಆಕಾಶ ನೋಡುವುದಕ್ಕೂ ನಮಗೆ ವ್ಯವಧಾನವಿಲ್ಲ. ಆಗೀಗ ಆಕಾಶದಲ್ಲಿ ಹಾರುವ ವಿಮಾನವನ್ನು ನೋಡುತ್ತೇವೆ; ಆಗೀಗ  ನಾವೇ ಆಕಾಶಕ್ಕೆ ಹಾರುತ್ತೇವೆ. ಗಗನಗಾಮಿಯಾದವನಿಗೆ ಆಕಾಶ ಖಂಡಿತಾ ಕಾಣುವುದಿಲ್ಲ. ಯಾಕೆಂದರೆ ಅವನೂ ಆಕಾಶದ ಒಂದು ಭಾಗವಾಗಿ ಬಿಡುತ್ತಾನೆ.

 

 ಆದರೆ ಆಕಾಶದಿಂದ ಬಂದಿಳಿಯುವ ಅನ್ಯಗ್ರಹ ಜೀವಿಗಳ ಕತೆಯಿಂದ ಹಿಡಿದು ಆಕಾಶದಲ್ಲಿ ನಿಂತುಕೊಂಡು ಪುಷ್ಟವೃಷ್ಟಿಗೈಯುತ್ತಿದ್ದ ದೇವತೆಗಳ ತನಕ, ಈ ಆಕಾಶವನ್ನು ನಮ್ಮ ಇತಿಹಾಸ ಪುರಾಣ ಕತೆಗಳು ಆವರಿಸಿಕೊಂಡಿವೆ. ಇವತ್ತಿಗೂ ಸತ್ತವನು ಮೇಲೆ ಹೋದ ಅನ್ನುತ್ತಾರೆ. ದೇವರೆಲ್ಲಿದ್ದಾನೆ ಅಂದರೆ ಆಕಾಶ ತೋರಿಸುತ್ತಾರೆ. ಆಕಾಶದ ಬೀದಿಯಲ್ಲಿ ನಿತ್ಯ ಸಂಚರಿಸುವ ಸೂರ್ಯ, ಚಂದ್ರರಿದ್ದಾರೆ. ಆಕಾಶ ಮಳೆಗಾಲದಲ್ಲಿ ಮುನಿಸಿಕೊಂಡ ಪ್ರೇಯಸಿಯ ಹಾಗೆ, ಬೇಸಿಗೆಯಲ್ಲಿ ದುಷ್ಟ ಯಜಮಾನನ ಹಾಗೆ, ಮಳೆಗಾಲದಲ್ಲಿ ಸೋರುವ ಛತ್ರಿಯ ಹಾಗೆ, ಕಾತರ್ೀಕದಲ್ಲಿ ದೀಪ ಹಚ್ಚಿಟ್ಟ ಅಂಗಳದ ಹಾಗೆ ಭಾಸವಾಗುತ್ತದೆ. ನಾವೂ ಆಕಾಶದ ಒಂದು ಭಾಗವಾಗಬೇಕು ಅನ್ನಿಸುತ್ತದೆ. ಅನಂತ ಅವಕಾಶಕ್ಕೆ ಸ್ಕೈ ಈಸ್ ದಿ ಲಿಮಿಟ್ ಅಂತಾರೆ. ಅದು ಸರಿಯಾದ ಉಪಮೆ ಹೌದೋ ಅಲ್ಲವೋ ಗೊತ್ತಿಲ್ಲ. ಯಾಕೆಂದರೆ ನಮ್ಮ ನಮ್ಮ ಆಕಾಶ ನಮ್ಮದು. ಎಲ್ಲಾ ಆಕಾಶವೂ ನಮ್ಮದಾಗುತ್ತದೆ ಅನ್ನುವ ನಂಬಿಕೆಯೂ ಇರಕೂಡದು. ನಮ್ಮ ಹುಟ್ಟಿದೂರಿಗೆ ಆಕಾಶಕ್ಕಾಗಿ ಮುಂದೊಂದು ದಿನ ಮತ್ತೊಂದೂರಲ್ಲಿ ಹುಡುಕಿದರೆ ಸಿಕ್ಕೀತು ಅನ್ನುವ ಭರವಸೆಯಿಲ್ಲ.

 

 ಆಕಾಶ ಎಲ್ಲಾಕಡೆ ಒಂದೇ ಥರ ಅನ್ನುತ್ತಾರೆ. ಅದೂ ಸುಳ್ಳು. ನೀವು ಬಾಲ್ಯದಲ್ಲಿ ಕಂಡ ಆಕಾಶ, ಈಗ ನಿಮಗೆ ಕಾಣದು. ನಮ್ಮೂರಲ್ಲಿ ಸ್ಕೂಲಿಗೆ ಹೋಗುತ್ತಾ ತಲೆಯೆತ್ತಿ ನೋಡಿದಾಗ ಕಂಡ ಆಕಾಶಕ್ಕಾಗಿ ಹುಡುಕುತ್ತಲೇ ಇದ್ದೇನೆ. ಅದು ಮತ್ತೇಲ್ಲೂ ಕಾಣಿಸಿಲ್ಲ.

 

 ನಮ್ಮ ಬಾಲ್ಯದ ಆಕಾಶ ಈಗ ಕಾಣುವುದಿಲ್ಲ ಅನ್ನೋದಂತೂ ನಿಜ. ಕಣ್ಮರೆಯಾದದ್ದು ಆಕಾಶವೋ ಅದನ್ನು ನೋಡುವ ಮನಸ್ಸೋ? ಮನವಿಲ್ಲದವರನ್ನು ಆಕಾಶವಾದರೂ  ಏನು ಮಾಡೀತು? 

 

 

 

‍ಲೇಖಕರು avadhi

April 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. santhosh

    “ಅಮರತ್ವದ ಆಶೆ ಮತ್ತು ಸಾವಿನ ಸೆಳೆತ-ಎರಡರಲ್ಲಿ ಯಾವುದು ನಮೆಗೆ ಹತ್ತಿರ ಅಮರರಾಗುವ ಆಶಯದಲ್ಲೇ ಸಾವಿನ ಬೀಜ ಇದೆ.”
    Excellent…Wonderful……Keep Rocking…..
    Jai…Ho….
    — Santhosh Ananthapura

    ಪ್ರತಿಕ್ರಿಯೆ
  2. sunil

    ನಮಸ್ಕಾರ,
    “ವಿಜ್ಞಾನ ಶೂನ್ಯದಿಂದ ಏನನ್ನೂ ಸೃಷ್ಟಿಸಲಾರೆವು ಅನ್ನುತ್ತದೆ. ಆದರೆ ಕಲೆ ಶೂನ್ಯದಿಂದಲೇ ಸೃಷ್ಟಿಸುತ್ತದೆ.”
    “ಹಿಂದಿನ ದಿನ ಸವರಿಕೊಂಡು ಹೋದ ಸಾವಿನ ಕೈಯಲ್ಲಿ ಮಾರನೆಯ ಬೆಳಗ್ಗೆ ಮಲ್ಲಿಗೆಯ ಮಾಲೆಯಿರುತ್ತದೆ.”
    “ಬೆರಗು ಉಲಿಯಬೇಕಿದ್ದರೆ ಅಜ್ಞಾನಿಯಾಗಿರುವುದೇ ವಾಸಿ.”
    “ಜ್ಞಾನದ ಜೊತೆಗೆ ವೈರಾಗ್ಯವೂ ಬರಬೇಕು. ಆ ವೈರಾಗ್ಯ ಬಂದಾಗ ಜ್ಞಾನ ಏನೂ ಅಲ್ಲ ಅನ್ನುವುದು ಗೊತ್ತಾಗಬೇಕು. ಮತ್ತೆ ಅಜ್ಞಾನಿಯಾಗಬೇಕು ಅನ್ನಿಸಬೇಕು”
    ಎಷ್ಟು ಚೆಂದದ ಸಾಲುಗಳಿವು…..ನಿಜಕ್ಕೂ ಇಷ್ಟವಾದವು…ಅರ್ಥಪೂರ್ಣ ಅನ್ನಿಸಿದವು…ಮನ ಮುಟ್ಟಿದವು 🙂
    ಹಾಗೇನೇ,
    “ಹಾಗೆ ನೋಡಿದರೆ ನಾವು ಪಶ್ಚಾತ್ತಾಪ ಪಡದಿರುವ ಏಕೈಕ ಕ್ರಿಯೆ; ಸಾವು. ಗೋರಿಯಲ್ಲಿ ಮಲಗಿದ ಯಾರೂ ‘ಛೇ, ಸಾಯಬಾರದಿತ್ತು ನಾನು‘ ಅಂದುಕೊಳ್ಳುವುದಿಲ್ಲ. ಹೀಗಾಗಿ ಅದು ಎಲ್ಲರೂ ಕಾಯಾವಾಚಾಮನಸಾ ಒಪ್ಪಕೊಂಡು ಮಡುವ ಕೆಲಸ!”
    ಇದು ಯಾಕೋ ನಿಜ ಅನ್ನಿಸ್ತಿಲ್ಲ….ಮನುಷ್ಯ ಆ ಥರ “ಕಾಯಾವಾಚಾಮನಸಾ” ಒಪ್ಪಿಕೊಂಡು ಸಾಯ್ತಾನ? ಏನೋ ಹಾಗನ್ನಿಸ್ತಿಲ್ಲ.
    ಸಮಗ್ರವಾಗಿ, ಅತ್ತ್ಯುತ್ತಮ ಲೇಖನ.ಖುಷಿಕೊಟ್ಟ ಲೇಖನ.
    ಇನ್ನಷ್ಟು ಬರಲಿ ಇಂಥವು.
    ಅಭಿನಂದನೆಗಳೊಂದಿಗೆ,ಪ್ರೀತಿಯಿಂದ,
    ಸುನಿಲ್.

    ಪ್ರತಿಕ್ರಿಯೆ
  3. malathi S

    ಬಯಲು, ಆಲಯ…..
    ಸೌತಡ್ಕ ಗಣೇಶ ದೇವಾಲಯ ನೆನಪಿಗೆ ಬಂತು. ಎಷ್ಟು ಚೆನ್ನಗಿತ್ತು ಆ open air ದೇವಸ್ಥಾನ. ಇತ್ತೀಚಿಗೆ ಹೋದಾಗ ಅದೂ commercialise ಆಗಿ ಹೋಗಿದ್ದು ಯಾಕೋ ಬೇಸರ ಅನ್ನಿಸಿತು. ಜನರು ಆ ಜಾಗವನ್ನು ಪ್ಲಾಸ್ಟಿಕ್ ಚೀಲ, ಬಾಟಲಿಗಳಿಂದ ತುಂಬಾ ಗಲೀಜು ಮಾಡಿದ್ದಾರೆ. ಸಭೆ ಸಮಾರಂಭ ನಡೆಸಲು ಅಲ್ಲಿ ಹಸಿರು ಪ್ಲಾಸ್ಟಿಕ್ ಶೀಟ್ ತೊಡಿಸಿದ ಮಂಟಪವನ್ನೂ ಕಟ್ಟಿದ್ದಾರೆ. ಯಾಕೋ ಅಲ್ಲಿನ sanctity ನೇ ಹೋಗಿದೆ. ಉಜಿರೆಯಲ್ಲಿದ್ದಾಗ ಅದು ನನ್ನ favorite spot ಆಗಿತ್ತು.
    ಮಾಲತಿ ಎಸ್.

    ಪ್ರತಿಕ್ರಿಯೆ
  4. malathi S

    My earlier comment has nothing to do with the write up. for i have yet to read it.. the words ‘bayalu’ and aalaya’ prompted me into nostalgia and i commented in haste
    kindly excuse
    🙂
    malathi S

    ಪ್ರತಿಕ್ರಿಯೆ
  5. ಜೈಕುಮಾರ್

    ಜೋಗಿಯವರ ಬರಹಗಳಲ್ಲಿ ಒಂದು ರೀತಿಯ ಆಕರ್ಷಣೆ ಹುಟ್ಟಿಸಬಲ್ಲ ಶೈಲಿ ಇದೆ ಎಂಬ ಬಗ್ಗೆ ಅನುಮಾನವೇನೂ ಇಲ್ಲ. ಆದರೆ ಜೋಗಿಯವರ ಪ್ರಸ್ತುತ ಲೇಖನದ ಎರಡು ಭಾಗಗಳು ಒಂದಕ್ಕೊಂದು ಸಂಬಂಧವಿಲ್ಲ ಎನಿಸಿತು.
    ಲೇಖನದಲ್ಲಿ ಬರುವ “ಉಪನಿಷತ್ತು ನೀಡುವ ತಿಳುವಳಿಕೆ ಅಂಥದ್ದಲ್ಲ. ಅದನ್ನು ಯಾವಾಗ ಬೇಕಾದರೂ ಓದಿ ತಿಳಿದುಕೊಳ್ಳಲಾಗುವುದಿಲ್ಲ. ಅದು ಮನಸ್ಸಿನ ಒಳ ಹೊಕ್ಕುವುದಕ್ಕೊಂದು ಸುಮುಹೂರ್ತ ಬೇಕಾಗುತ್ತದೆ. ” ಎನ್ನುವ ಮಾತುಗಳಲ್ಲಿ ಬರುವ ಸುಮುಹೂರ್ತ ಜ್ಯೋತಿಷ್ಯದೆಡೆಗೆ ದಿಕ್ಕು ತೋರುವಂತಿದೆ.
    “ಕಲೆ ಜ್ಞಾನದ ಹಾಗೆ ಒಳಗಿನಿಂದ ಬರುವಂಥದ್ದು, ವಿಜ್ಞಾನ ಹೊರಗಿನಿಂದ ಬರುವಂಥದ್ದು. ಆದ್ದರಿಂದಲೇ ವಿಜ್ಞಾನದಲ್ಲಿ ಹೊಸದನ್ನು ಕಂಡುಹಿಡಿಯುತ್ತಾರೆ, ಅದು ಸಂಶೋಧನೆ. ಕಲೆಯನ್ನು ಹೊಸದನ್ನು ಸೃಷ್ಟಿಸುತ್ತಾರೆ, ಅದು ಸೃಜನಶೀಲತೆ” ಈ ಮಾತುಗಳು ಆಡಂಬರಕ್ಕಾಗಿ ಕಟ್ಟಿದ ಶಬ್ದ ಭಂದಾರಗಳಂತೆ ಪೇಲವವಾಗಿ ಕಾಣುತ್ತವೆ. ವಾಸ್ತವವಾಗಿ ಕಲೆ ಕೂಡ ಒಂದು ವಿಜ್ಞಾನವೇ. ಕಲೆ ಮತ್ತು ವಿಜ್ಞಾನ ಎರಡೂ ಕೂಡ ನಿಸರ್ಗ ಮತ್ತು ಮನುಷ್ಯನ ಕ್ರಿಯೆಯ ನಡುವೆ ನಡೆಯುವ ಕೊಡು-ಕೊಳ್ಳುವಿಕೆಯ ದ್ವಂದ್ವತ್ಮತೆಯಿಂದ ರೂಪುಗೊಳ್ಳುವಂತಹವು.
    ಕಡುಬಡವ ‘ಪಾಲಿಗೆ ಬಂದದ್ದು ಪಂಚಾಮೃತ’, ಹಣೆ ಬರೆಹ, ಇತ್ಯಾದಿಗಳ ಭಾರದಲ್ಲಿ ನಜ್ಜುಗುಜ್ಜಾಗಿ ಹೆಚ್ಚೇನೂ ಬಯಸದೆ ಬದುಕುತ್ತಾನಾದರೂ ಶ್ರೀಮಂತನ ಕುರಿತು ಅದೇ ಮಾತು ಹೇಳಲು ಬಾರದು. ಈ ಹಿನ್ನೆಲೆಯಲ್ಲಿ ಈ ಸಾಲುಗಳ ಸತ್ವ ಗಾಳಿಯಲ್ಲಿ ತೋರಿ ಹೂಗುವಂತಿವೆ: “ಶ್ರೀಮಂತ ಮತ್ತು ಕಡುಬಡವ ಇಬ್ಬರೂ ‘ಈ ಜೀವನ ಇಷ್ಟೇ ಗುರೂ. ಇವತ್ತು ಬಂದಿದ್ದನ್ನು ಅನುಭವಿಸೋಣ. ನಾಳೆ ಯಾರು ಬದುಕಿರ್ತೀವೋ ಯಾರಿಗೆ ಗೊತ್ತು‘ ಅನ್ನುತ್ತಲೇ ಬದುಕುತ್ತಾರೆ.”
    ಮತ್ತೂ ಮುಂದುವರಿದ “ಹಾಗೆ ನೋಡಿದರೆ ಅವತ್ತಿನ ನಮ್ಮ ಭಾವ ಲಹರಿಯನ್ನು ನಿಯಂತ್ರಿಸುವುದು ಆಕಾಶವೇ. ಆಕಾಶ ಮೋಡ ಕವಿದುಕೊಂಡು ಬಿಮ್ಮಗಿದ್ದರೆ ಮನಸ್ಸೂ ಬಿಮ್ಮಗೆ ಇದ್ದುಬಿಡುತ್ತದೆ. ಆಕಾಶ ನೀಲಿಯಾಗಿ ಥಳಥಳಿಸುತ್ತಿದ್ದರೆ, ಮನಸ್ಸು ಪ್ರಫುಲವಾಗಿರುತ್ತದೆ. ಅಲ್ಲಲ್ಲಿ ಮೋಡಗಳು ತೇಲುತ್ತಾ ಆಕಾಶ ಕಡಲಿನ ಹಾಗಿದ್ದರೆ ಮನಸ್ಸು ಹಾಯಿ ಹಡಗಿನ ಹಾಗೆ ತೇಲುತ್ತದೆ. ದಿಗಿಲಿಲ್ಲದ ಆಕಾಶದಲ್ಲಿ ಮನ ಮುಗಿಲಾಗುತ್ತದೆ.” ಎಂಬ ಮಾತುಗಳು ಆಕಾಶ ನಮ್ಮನ್ನು ನಿಯಂತ್ರಕ ಎಂಬ ಸಂದೇಶ ಹೊರಡುಸುತ್ತಿವೆ. ದುಡಿಮೆಗಾರನೋಬ್ಬನಿಗೆ ಅನ್ನ ನಿಯಂತ್ರಕ , ರೈತನಿಗೆ ಅನ್ನವನ್ನು ಉತ್ಪಾದಿಸುವ ಹಣ ನಿಯಂತ್ರಕ, ಬಂಡವಾಳಗಾರನಿಗೆ ಬಂಡವಾಳ ನಿಯಂತ್ರಕ, – ಹೀಗೆ ಆಕಾಶ ನಿಯಂತ್ರಕವೆಂಬ ರೂಪಕವಾಗಿ ನಿಲ್ಲಲಸಾಧ್ಯ. ಹೊಟ್ಟೆ ತುಂಬಿದ ಮನುಜಗೆ ಮಾತ್ರ ಆಕಾಶ ನಿಯಂತ್ರಕ ಆಗಬಲ್ಲುದು. ಇಲ್ಲದಿದ್ದಲ್ಲಿ ಭೂಮಂಡಲದ ಘಟನಾವಳಿಗಳು ಪ್ರತಿಯೊಬ್ಬ ಮನುಷ್ಯನನ್ನು ಕಿತ್ತುತಿನ್ನುತ್ತಿರುವುದು ಕಾಣದೆ ಇರಲಾರದು.

    ಪ್ರತಿಕ್ರಿಯೆ
  6. manjunatha ms

    ವ್ಯವಧಾನವಿಲ್ಲದ ಈ ಆಧುನಿಕ ಪ್ರಪಂಚದಲ್ಲಿ ಆಕಾಶ ಕೂಡ ನೋಡ್ಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂಥ ನೀರಸ ಬದುಕುಗಳಲ್ವಾ ನಮ್ಮದು? ಆಕಾಶ ನೋಡುವ ಬಗೆಯನ್ನ ಕಲಿಸಿದ ಜೋಗಿಯವರಿಗೆ ಅನಂತ ಧನ್ಯವಾದ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: