ಜೋಗಿ ನೆನಪು: ಹೆಸರಿಲ್ಲದ ಡಾಕ್ಟರ್

images

ಒಂದು ದಿನ ಅಪ್ಪಯ್ಯ ಇದ್ದಕ್ಕಿದ್ದ ಹಾಗೆ ಒಬ್ಬರನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಇವರು ತಿಂಗಳಿಗೆ ಮೂರು ದಿನ ನಮ್ಮನೇಲಿ ಇರುತ್ತಾರೆ. ಅವರ ಊಟ ತಿಂಡಿ ಚೆನ್ನಾಗಿ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು. ಅಮ್ಮನಿಗೆ ಸಿಟ್ಟು ಬಂದಿರಬೇಕು. ಆದರೂ ತೋರಿಸಿಕೊಳ್ಳದೇ ಅವರನ್ನು ಆಪ್ತವಾಗಿ ವಿಚಾರಿಸಿಕೊಂಡರು. ಆಗ ಗೊತ್ತಾದದ್ದೇನೆಂದರೆ ಅವರು ಧಾರವಾಡದ ಕಡೆಯ ಡಾಕ್ಟರು. ಹಳ್ಳಿಗಳಲ್ಲಿ ಕಸ್ತೂರಿ ಮಾತ್ರೆ ಇತ್ಯಾದಿಗಳನ್ನು ಮಾರುತ್ತಾರೆ. ಅದಕ್ಕಾಗಿ ಊರೂರು ತಿರುಗುತ್ತಾರೆ. ಬ್ರಾಹ್ಮಣರಾದ್ದರಿಂದ ಬೇರೆ ಮನೆಗಳಲ್ಲಿ ಊಟ ಮಾಡುವುದಿಲ್ಲ. ತುಂಬ ಮಡಿವಂತರಾದ್ದರಿಂದ ಹೊಟೆಲುಗಳಲ್ಲಿ ತಿನ್ನುವುದಿಲ್ಲ. ಹೀಗಾಗಿ ಪ್ರತಿ ಊರಲ್ಲೂ ಊಟಕ್ಕೆ ಮನೆ ಹುಡುಕಿಕೊಳ್ಳುತ್ತಾರೆ. ಊಟದ ಖರ್ಚು ಕೊಟ್ಟು ಹೋಗುತ್ತಾರೆ.

ಊಟದ ಖರ್ಚು ಕೊಟ್ಟು ಹೋಗುತ್ತಾರೆ ಅಂತ ಹೇಳಿದ್ದರಿಂದ ಅಮ್ಮನ ಸಿಟ್ಟು ಸ್ವಲ್ಪ ಕಡಿಮೆ ಆಗಿರಬೇಕು. ಆದರೆ ಅದರಲ್ಲೂ ಅಮ್ಮನಿಗೆ ಪೂರ್ತಿ ನಂಬಿಕೆಯಿರಲಿಲ್ಲ. ದಾನಶೂರನ ವಂಶಕ್ಕೆ ಸೇರಿದ ಅಪ್ಪ ಅದನ್ನೂ ನಿರಾಕರಿಸುತ್ತಾನೆ ಅಂತ ಅವಳಿಗೆ ಗೊತ್ತಿತ್ತು. ಆವತ್ತು ಅಮ್ಮ ಮಾತಾಡಲಿಲ್ಲ. ಆದರೆ ಮನಸ್ಸಿನಲ್ಲೇ ಏನೇನೋ ಯೋಜನೆಗಳನ್ನು ಹಾಕಿದ್ದಳು ಎಂದು ಕಾಣುತ್ತದೆ.

w5ಚಿತ್ರ: ಸೃಜನ್

ಅವರ ಹೆಸರೇನೆಂದು ನಮಗೀವತ್ತಿಗೂ ನೆನಪಿಲ್ಲ. ರಂಗನಾಥ ದೇಶಪಾಂಡೆ ಎಂಬ ಹೆಸರೊಂದು ನನ್ನ ಮನಸ್ಸಿನ ಆಳದಲ್ಲಿ ಎಲ್ಲೋ ಕೇಳಿದಂತಿದೆ. ಅದು ಆ ಡಾಕ್ಟರ್ ಹೆಸರೇ ಇರಬೇಕು ಅನ್ನಿಸುತ್ತಿದೆ. ಆದರೆ ನಾವೆಲ್ಲರೂ ಅವರನ್ನು ಡಾಕ್ಟ್ರೇ ಎಂದೇ ಕರೆಯುತ್ತಿದ್ದೆವು.

ಡಾಕ್ಟರ ವರ್ತನೆಗಳು ನಮಗೆ ತಮಾಷೆಯಾಗಿ ಕಾಣಿಸುತ್ತಿದ್ದವು. ಅವರು ಪ್ರತಿಸಾರಿ ಬರುವಾಗಲೂ ಸೂಟ್-ಕೇಸಿನಂಥ ಒಂದು ಕಪ್ಪು ಬ್ಯಾಗನ್ನೂ ಮತ್ತೊಂದು ಕೈ ಚೀಲವನ್ನೂ ತರುತ್ತಿದ್ದರು. ಬ್ಯಾಗಿನಲ್ಲಿ ಮಾತ್ರೆಗಳ ಬಾಟಲು ಇರುತ್ತಿತ್ತು. ಕೈ ಚೀಲದಲ್ಲಿ ಅವರ ಬಟ್ಟೆ ಮತ್ತು ಮಾತ್ರೆಗಳ ದೊಡ್ಡ ಬಾಟಲಿಗಳು ಇರುತ್ತಿದ್ದವು. ನಮ್ಮ ಮನೆಗೆ ಬಂದು ದಣಿವಾರಿಸಿಕೊಂಡ ನಂತರ ಅವರು ಒಂದು ಮೂಲೆಯಲ್ಲಿ ಕುಳಿತುಕೊಂಡು ದೊಡ್ಡ ಬಾಟಲಿಯಲ್ಲಿರುವ ಮಾತ್ತೆಗಳನ್ನು ಬಲಗೈಗೆ ಸುರಿದುಕೊಂಡು ಎಣಿಸಿ ಎಣಿಸಿ ಸಣ್ಣ ಡಬ್ಬಗಳಿಗೆ ತುಂಬುತ್ತಿದ್ದರು. ಆಗೆಲ್ಲ ಅವರು ತಪಸ್ಸಿಗೆ ಕುಳಿತ ಋಷಿಯಂತೆ ಕಾಣಿಸುತ್ತಿದ್ದರು. ತುಟಿಗಳು ಸಣ್ಣಗೆ ಮಾತ್ರೆಗಳನ್ನು ಎಣಿಸುತ್ತಿದ್ದವು. ಕಣ್ಣು ಅರ್ಧ ಮುಚ್ಚಿರುತ್ತಿತ್ತು. ಕೈಯಲ್ಲಿ ಒಂದೊಂದೇ ಮಾತ್ರೆಗಳನ್ನು ಸಣ್ಣ ಡಬ್ಬಿಯೊಳಗೆ ಬಿಡುವಾಗ ಆರಂಭದಲ್ಲಿ ಜೋರಾಗಿಯೂ ನಂತರ ಸಣ್ಣಗೂ ಸದ್ದಾಗುತ್ತಿತ್ತು. ನಾವದನ್ನು ಅತ್ಯಂತ ಕುತೂಹಲದಿಂದ ನೋಡುತ್ತಾ ಕೂರುತ್ತಿದ್ದೆವು.

ಡಾಕ್ಟರ್ ಬಂದು ಹೋದ ಒಂದೆರಡು ದಿನ ನಮ್ಮನೆ ತುಂಬಾ ಅವರ ಮಾತ್ರೆಗಳ ಪರಿಮಳ ತುಂಬಿರುತ್ತಿತ್ತು. ಆಯುರ್ವೇದದ ಬಗ್ಗೆ ನನಗೆ ಅಲರ್ಜಿ ಬಂದದ್ದು ಆಗಲೇ ಎಂದು ಕಾಣುತ್ತದೆ.

w5

ಎಲ್ಲಿಂದಲೋ ಬಂದುಹೋದ ಅಪರಿಚಿತನೊಬ್ಬ ಎಂತೆಂಥಾ ಕತೆಗಳಿಗೆ ಕಾರಣನಾಗುತ್ತಾನೆ ಅನ್ನುವುದು ಗೊತ್ತಾದದ್ದೂ ಆಗಲೇ. ಡಾಕ್ಟರರಿಗೆ ಮದುವೆ ಆಗಿಲ್ಲ, ಹೆಣ್ಣೆ ಸಿಕ್ಕಿಲ್ಲ ಅಂತ ಕೆಲವರೂ, ಡಾಕ್ಟರ್ ಮದುವೆ ಆಗಿದ್ದಾರೆ, ಹೆಂಡತಿಯನ್ನು ಬಿಟ್ಟಿದ್ದಾರೆ ಅಂತ ಕೆಲವರೂ ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ಆ ಮಾತಿಗೆ ಆಧಾರ ಏನು ಅನ್ನುವುದು ನನಗೆ ಆಗ ಗೊತ್ತಾಗುತ್ತಿರಲಿಲ್ಲ. ಅವರ ಏಕಾಂಗಿತನ, ಖಯಾಲಿ, ಕಡಿಮೆ ಸಂಬಳ, ವರ್ಷವಿಡೀ ಊರೂರು ತಿರುಗುವ ವೃತ್ತಿಗಳಿಂದ ಅವರು ಸಂಸಾರಿಯಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ಊಹಿಸುವಷ್ಟು ಬುದ್ಧಿವಂತಿಕೆಯೂ ನಮಗಿರಲಿಲ್ಲ.

ಇವೆಲ್ಲದರ ಮಧ್ಯೆ ಡಾಕ್ಟರ್ ನಮಗೆ ಇಷ್ಟವಾಗುತ್ತಿದ್ದರು. ಪ್ರತಿಸಾರಿ ಬರುವಾಗಲೂ ನಕ್ಷತ್ರಾಕಾರದ ಚಾಕಲೇಟು ತರುತ್ತಿದ್ದರು. ಏನೇನೋ ಕತೆಗಳನ್ನು ಹೇಳುತ್ತಿದ್ದರು. ಒಬ್ಬರೇ ಕೂತಾಗ ವಚನಗಳನ್ನು ಗುನುಗುತ್ತಿದ್ದರು. ನಾನು ಮೊದಲ ಸಾರಿ ವಚನಗಳನ್ನು ಕೇಳಿದ್ದು ಅವರ ಬಾಯಿಯಿಂದಲೇ. ಅವರು ಮತ್ತೆ ಮತ್ತೆ ಗುನುಗುತ್ತಿದ್ದದ್ದು ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ. ನಮಗೆ ಅದು ಅರ್ಥವಾಗದೇ ಹೋದರೂ ಅದರ ಲಯ ಇಷ್ಟವಾಗುತ್ತಿತ್ತು. ನಾವೂ ಅವರು ಬಂದಾಗ ಹೋದಾಗೆಲ್ಲ ಇವನಾರವ, ಇವನಾರವ, ಇವನಾರವ ಎಂದು ಹೇಳಿಕೊಂಡು ಓಡಾಡುತ್ತಿದ್ದೆವು.

w5

ನಮ್ಮೂರಿನ ಅನೇಕ ಹುಡುಗರಿಗೂ ಡಾಕ್ಟರ್ ಇಷ್ಟವಾಗುತ್ತಿದ್ದರು. ಅದಕ್ಕೆ ಕಾರಣವೇನು ಎಂಬುದು ಗೊತ್ತಿರಲಿಲ್ಲ. ಅವರು ಪ್ರತಿಸಾರಿ ಮನೆಗೆ ಬಂದಾಗಲೂ ಒಂದಷ್ಟು ತರುಣರು ಬಂದು ಅವರನ್ನು ಮಾತಾಡಿಸಿ ಅವರ ಕೈಯಿಂದ ಅದ್ಯಾವುದೋ ಪುಸ್ತಕ ತೆಗೆದುಕೊಂಡು ಹೋಗುತ್ತಿದ್ದರು. ಆಗೆಲ್ಲ ಅವರು ಅಷ್ಟೊಂದು ಓದುತ್ತಾರಲ್ಲ ಅಂತ ಆಶ್ಚರ್ಯವಾಗುತ್ತಿತ್ತು.

ಆದರೆ ಅದು ಆ ಕಾಲಕ್ಕೆ ಅತ್ಯಂತ ಜನಪ್ರಿಯವಾದ ರಮಣಿ ಎಂಬ ಶೃಂಗಾರ ಮಾಸಪತ್ರಿಕೆ ಎನ್ನುವುದು ನನಗೆ ಗೊತ್ತಾದದ್ದು ತುಂಬಾ ವರ್ಷಗಳ ನಂತರ.

‍ಲೇಖಕರು avadhi

June 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

    • JOGI

      ಏನಿಲ್ಲ… ಹಳೆಯ ನೆನಪೊಂದು ಹಾಗೆ ಮಗುಚಿಕೊಂಡಿದೆ. ಸುಮ್ಮನೆ ಬರೆಯುತ್ತಾ ಹೋದೆ. ಒಂದು ನಿರುದ್ದಿಶ್ಯ ಬರಹ . ಇನ್ನೂ ಪೂರ್ತಿಯಾಗದ ಜ್ಞಾಪಕ ಚಿತ್ರಶಾಲೆಯ ಒಂದು ಅರೆಬರೆ ಅಧ್ಯಾಯ.

      ಪ್ರತಿಕ್ರಿಯೆ
      • ಕಂಡಕ್ಟರ್ ಕಟ್ಟಿಮನಿ 45E

        ಪ್ರಿಯ ಜೋಗಿ ಸರ್.
        ಕಳೆದ ಹತ್ತು ದಿನಗಳ ಹಿಂದೆ ಓದಿದ ಕಥೆ ‘ಚೂರಿ’ಯನ್ನು ಮರೆಯಲಾಗುತ್ತಿಲ್ಲ,ಹಾಗೆ’ಕಾರಣ’ ವಂತು ಕೌಟಂಬಿಕ ವಿಘಟನೆಗೆ ನೇರ ಕಾರಣವನ್ನು ಹುಡುಕಿದೆ.ಯಾಕೊ ಹೆಸಲ್ಲದ ಡಾಕ್ಟರರ ಕಥೆ ಇಷ್ಟವಗಲಿಲ್ಲ..
        ಕಂಡಕ್ಟರ್ ಕಟ್ಟಿಮನಿ 45E

        ಪ್ರತಿಕ್ರಿಯೆ
  1. ಪ್ರಸಾದ್.ಜಿ

    ಬಾಲ್ಯಗಳನ್ನು, ಅಲ್ಲಿ ಕಂಡ ವ್ಯಕ್ತಿಗಳನ್ನು, ಅನುಭವಗಳನ್ನು ನೆನಪಿಸಿಕೊಳ್ಳುವುದು ಒಂದು ಮಧುರ ಅನುಭೂತಿಯಾಗಿ ಕಾಡುತ್ತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: