ಹೊಸ ಅನುಭವ ನೀಡುವ ಜೋಗಿಯವರ ಕತೆಗಳು
– ವಿಭಾ
ಕೃಪೆ : ದ ಸ೦ಡೆ ಇ೦ಡಿಯನ್
ಮೊನ್ನೆಯಷ್ಟೇ ಪುಸ್ತಕರೂಪದಲ್ಲಿ ಬಂದ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ಕಥಾ ಸಂಕಲನ “ಫೇಸ್ಬುಕ್.ಕಾಮ್ /ಮಾನಸ ಜೋಷಿ”ಯಲ್ಲಿನ ಕಥೆಗಳು ಮತ್ತು ಕತೆಯಾಗದ ಕಥೆಗಳು ಅವುಗಳಲ್ಲಿನ ವಸ್ತು ಮತ್ತು ಶೈಲಿಯ ಕಾರಣಗಳಿಂದ ಹೊಸ ಅನುಭವ ನೀಡುತ್ತವೆ. ಬದಲಾಗುತ್ತಿರುವ ನಗರ ಜೀವನ, ಕುಟುಂಬ ವ್ಯವಸ್ಥೆ, ಚೌಕಟ್ಟನ್ನು ಬದಲಾಯಿಸಿರುವ ದಾಂಪತ್ಯ ಜೀವನ; ಹೆಣ್ಣು ಗಂಡು ಇಬ್ಬರ ಅಸ್ತಿತ್ವವೂ ಹಲವು ಸವಾಲುಗಳನ್ನು ಎದುರಿಸುತ್ತಲೇ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಅನಿವಾರ್ಯತೆ, ಮುಂತಾದವುಗಳು ಇಲ್ಲಿ ಕತೆಯಾಗಿವೆ. ಜೋಗಿಯವರು ಹೆಣ್ಣಿನ ಅಂತರಂಗದ ತುಮುಲದೊಂದಿಗೆ ಅತ್ತೆ ಸೊಸೆ, ಸಹೋದ್ಯೋಗಿಗಳು, ಮೀಡಿಯಾ ಇತರೆ ಉದ್ಯಮಗಳಲ್ಲಿ ತೊಡಗಿರುವ ಆಧುನಿಕ ಮನೋಭಾವದ ಯುವತಿಯರನ್ನು ವಸ್ತುನಿಷ್ಠವಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರ ಜೀವನದ ಒತ್ತಡ, ಯಾಂತ್ರಿಕತೆ, ಪೈಪೋಟಿ ಅಸಹನೆ ಇವೆಲ್ಲವುಗಳೊಂದಿಗೆ ವೃತ್ತಿ – ಕುಟುಂಬಗಳನ್ನು ಬೆಸೆಯುವ ಇಂದಿನ ಬದುಕನ್ನು ಕಂಪ್ಯೂಟರ್ ಯಂತ್ರದ ಮಾಯಾಜಾಲದೊಳಗೆ ಪ್ರತಿಫಲಿಸುವಂತೆ ಬೆರೆಸಿರುವ ತಂತ್ರಗಾರಿಕೆಯಲ್ಲಿ ಗೆದ್ದಿದ್ದಾರೆ. ಅಂತರ್ಜಾಲದಲ್ಲಿ ಮೈಮರೆತಿರುವ ಯುವಜನರನ್ನು ಫೇಸ್ಬುಕ್, ಬ್ಲಾಗ್ ಮುಂತಾದ ಕಿಟಕಿಗಳೂ ಸಹ ಪ್ರಾಮಾಣಿಕವಾಗಿ ಬೆಸೆಯಲಾರವು ಎಂಬ ವಾಸ್ತವವನ್ನು ತೋರಿಸಿದ್ದಾರೆ.
ಗುರುರಾಜನ ಸಮಾಜವಾದದ ಕಥೆಯಲ್ಲ್ಲಿ ಗುರುರಾಜ ಹಾಗೂ ಹೇರಂಬನ ನಡುವಿನ ವಾಗ್ವಾದ ಬಹಳ ಹಳೆಯದಾದರೂ ರಂಗನಾಥ ಮತ್ತು ರುಕ್ಮಯನ ಅಂತ್ಯ ಮಾತ್ರ ವಿಶಿಷ್ಟ. ಇಂದು ಜಾತಿಗಳು ರಾಜಕೀಯ ಗುಂಪುಗಳಾಗಿ ಧ್ರುವೀಕರಣಕ್ಕೆ ಒಳಗಾಗಿ ಬ್ರಾಹ್ಮಣ ಸಮಾಜ, ಲಿಂಗಾಯತ ಸಮಾಜ, ವೀರಶೈವ ಸಮಾಜ ಪರಿಶಿಷ್ಟರಲ್ಲೇ ಎಡ, ಬಲ ಸಮಾಜ ಹೀಗೆ ನೂರಾರು ಜಾತಿಗಳು, ಅವುಗಳ ಮಠಗಳು, ಅದಕ್ಕೆ ನಾಯಕರು ಅದಕ್ಕೆ ಆಯವ್ಯಯದಲ್ಲಿ ಬಜೆಟ್ಟು, ಅದಕ್ಕೆ ಪೂರಕವಾಗಿ ಬೆಳೆಯುವ ಹುನ್ನಾರಗಳು ಎಲ್ಲವೂ ಭ್ರಷ್ಟ ವ್ಯವಸ್ಥೆಯಲ್ಲಿ ವಿಷಬೇರುಗಳಾಗಿ ಇಳಿಯುತ್ತಾ ಮನುಷ್ಯ ಸಮಾಜದ ಸ್ವಾಸ್ಥ್ಯವನ್ನು ಹೀರುತ್ತಿರುವ ಸಂದರ್ಭದಲ್ಲಿ ಗುರುರಾಜನ ’ಸಮಾಜವಾದ’ ಪೇಲವಗೊಂಡಂತಿದೆ.
’ಸಂತಾಪ’ ಕತೆಯು ಗಮನ ಸೆಳೆಯುವುದು ಕಥೆಗಾರನ ಕಸುಬುಗಾರಿಕೆಗೆ ಎತ್ತಗೆಯಾಗಿ. ನಾಗರಾಜ ಮತ್ತು ನಿರ್ಮಲಾ ಜೋಷಿ ಒಡನಾಟ. ಸಂಧ್ಯಾ ಮತ್ತು ಶೈಲಜಾ ಜೋಷಿಯ ಪಾತ್ರಗಳು. ಇಡೀ ಕತೆ ನಿರ್ಲಿಪ್ತವಾಗಿ ಹೇಳುವ ದಾಟಿ. ಇಲ್ಲಿ ಕಥೆ ಕಾವ್ಯ ಸಂತಾಪಸೂಚಕ ಸಭೆ ಎಲ್ಲವೂ ಮನುಷ್ಯನ ಒಳಗಿನ ನಿಜ ಭಾವಗಳನ್ನು ಹೊರಹಾಕುವ ಸಾಧನವಾಗಿ ಬಳಸಿರುವುದು.
ಉಭಯ ಕುಶಲೋಪರಿ ಕತೆ ಜೀವನದಲ್ಲಿ ವಿದ್ಯೆ ಅಧಿಕಾರ, ಹಣ, ಯೌವ್ವನ, ವ್ಯಕ್ತಿ ಸ್ವಾತಂತ್ರ್ಯವನ್ನು ಮೀರಿಸುವ ಸ್ವೇಚ್ಚೆಯುತ ಬದುಕು ಇವೆಲ್ಲಾ ವ್ಯವಸ್ಥಿತವಾಗಿ ನಡೆಯದೆ ಚೂರು ಏರುಪಾರಾದರೆ ಏನಾಗಬಹುದು ಎಂಬ ಝಲಕ್ ನೀಡುತ್ತದೆ. ಕತೆಗಾರ ಪ್ರಯಾಣದ ಮಧ್ಯೆ ಕೇವಲ ೫೭ ನಿಮಿಷಗಳಲ್ಲಿ ಒಂದು ಹಾಟ್ ಬ್ರೇಕ್ ತಂದು ದಿಢೀರನೆ ಸುಹಾಸನ ಬದುಕನ್ನು ನಿಯಂತ್ರಿಸುವ ಅಥವಾ ಹುಳುವಂತೆ ಹೊಸಕಿ ಹಾಕಬಹುದಾದಂತಹ ಈ ಕ್ರೂರ ವ್ಯವಸ್ಥೆಯ ಮಧ್ಯೆ ಮನುಷ್ಯ ಎಷ್ಟು ಅಸಹಾಯಕ ಎಂಬುದನ್ನು ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ತೋರಿಸುವ ವಿರಾಟ್ ದರ್ಶನದಂತೆ ತೋರಿಸುತ್ತಾ ಮತ್ತೆ ೭-೪೫ಕ್ಕೆ ಕತೆಯೊಂದಿಗೆ ನಮ್ಮ ಹಾರ್ಟ್ ಬೀಟ್ಸ್ನ್ನು ನಾರ್ಮಲ್ ಮಾಡುತ್ತಾರೆ.
ಇನ್ನು ಅಂತ್ಯಸಂಸ್ಕಾರಂ/ಪತ್ತೇದಾರ ಪುರುಷೋತ್ತಮ ಇವು ಸಾಹಿತ್ಯ ದಿಕ್ಕು ಬದಲಾಯಿಸಿರುವ ಮಗ್ಗುಲುಗಳನ್ನು ನೆನಪಿಸುವ ಕತೆಗಳು. ಹಳೆಯ ಬೀಗದ ಕತೆ ಮಾತ್ರ ಯಾವುದೋ ರಷ್ಯನ್ ರಮ್ಯಕತೆಯನ್ನು ನೆನಪಿಸುವವಂತೆ ಮಾಡುವ ವಿಶಿಷ್ಟವಾದ ಕತೆ. ಇಂದಿನ ನಮ್ಮ ಜನರ ಮಾಧ್ಯಮಗಳ ಬುದ್ಧಿಜೀವಿಗಳ ಪೂರ್ವಾಗ್ರಹ ಪೀಡಿತ ಮನಸುಗಳ ಬಗ್ಗೆ ವ್ಯಂಗ್ಯವಾಗಿ ಚಿತ್ರಿಸುವ ಪರಿ ನಮ್ಮ ತುಟಿಯಂಚುಗಳಲ್ಲಿಯೂ ವ್ಯಂಗ್ಯದ ನಗೆಯನ್ನು ತುಳುಕಿಸುತ್ತದೆ.
ಮತ್ತೊಂದು ಕತೆಯಲ್ಲಿ ಕಾಡು ಹಸಿರು ಮಗು ತಾಯಿ ನವಿಲಿನ ಕೇಕೆ, ಸಂಜೆಯ ಹೊಂಬಿಸಿಲು, ಮೂಡಿದ ಚಂದ್ರನ ತಂಬೆಳಕು, ಬದಿಯ ಆಳದ ಕಣಿವೆ, ಅಲ್ಲೆ ಎಲ್ಲೋ ಜಲಪಾತದ ಸದ್ದು, ಗಿಡ ಹೂವು, ತಾಯಿ ಮಗುವಿನ ನಗು, ಮಾಸದಂತಹ ನಗು.. ನಮ್ಮೊಳಗೆ ಅದಮ್ಯವಾಗಿರುವ, ಸದಾ ಬದುಕುವ ಪ್ರೇರಣೆ ನೀಡುವ, ಸುಂದರ ಕನಸಿನಂತೆ ಭಾಸವಾಗುವ ದೃಶ್ಯಕಾವ್ಯದಂತಿದೆ.
ಜೋಗಿಯವರ ಈ ಕಥೆಗಳಲ್ಲಿ ಮಧ್ಯಮ ವರ್ಗದ ಯುವಕನ ಅನುಭವಗಳು, ತಲ್ಲಣಗಳು, ಪ್ರಶ್ನೆಗಳು, ಉತ್ತರದ ಹುಡುಕಾಟಗಳು ಕಾಣಸಿಗುತ್ತವೆ. ಹಳ್ಳಿಗಾಡಿನ ಮುಗ್ಧತೆಯ ಹುಡುಕಾಟದಿಂದ ನಗರದಲ್ಲಿ ನೆಲೆ ಹುಡುಕಿ ಏನನ್ನೋ ಕಳೆದುಕೊಂಡು ಮತ್ತೇನನ್ನೋ ಹುಡುಕಿಕೊಳ್ಳುವ ದಾರಿತಪ್ಪಿ ಅಲೆದವನು ದಡ ಹಿಡಿದು ಅಬ್ಬಾ ಎನ್ನುವ ಉದ್ಘಾರವಿದೆ. ಸಮಾಜದ ಇಡೀ ಕಟು ವಾಸ್ತವವನ್ನು ಕಟ್ಟಿಕೊಡಲು ನೆಲದ ಭಾಷೆಯ ಕಸುವು ಕಡಿಮೆಯಾದಂತೆನಿಸುವುದು ನಿಜ. ಆದರೆ ಎಲ್ಲಾ ಸಮಸ್ಯೆಗಳ ಮೇಲುಸ್ತರದ ಚಿಂತನೆಗಳನ್ನು ಒರೆಹಚ್ಚಿ ಮನ ಮುಟ್ಟಿಸುವ ಭಾವಗಳನ್ನು ಹೆಣೆದಿದ್ದಾರೆ.
ಕೃತಿಯ ಪುಟಗಳಿಂದ
“… ಈ ಜಗತ್ತಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಹಣ ಸಂಪಾದನೆ ಮಾಡುವುದು ಕಷ್ಟವೇನಲ್ಲ. ಆದರೆ ನಂಬಿಕೆ ಗಳಿಸಿಕೊಳ್ಳುವುದು ಕಷ್ಟ. ನಂಬಿಕೆ ಕೂಡ ಒಂದು ರೀತಿಯ ಆತ್ಮರತಿ, ಯಾರನ್ನೂ ತುಂಬಾ ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ಪ್ರತಿಯೊಬ್ಬರ ಒಳಗೂ ಮತ್ತೊಂದು ಜಗತ್ತಿರುತ್ತದೆ. ಆ ಜಗತ್ತಿನೊಳಗೆ ಯಾರೂ ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ…”
]]>






0 Comments