ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಕಾಲಂ: ಆ ಗುಬ್ಬಿ ಮನಸ್ಸಿನೊಳಗೂ ಗೂಡು ಕಟ್ಟುತ್ತದೆ.

ತುಂತುರು ಮಳೆ ಬಂದು ಪವಾಡ ಜರುಗುತ್ತದೆ

ಇದ್ದಕ್ಕಿದ್ದಂತೆ ಮಳೆಗಾಲ ಮುತ್ತಿಕೊಂಡ ಮಧ್ಯಾಹ್ನ. ಪುಸ್ತಕದ ಕಪಾಟಿನಿಂದ ಯಾವುದಾದರೂ ಪುಸ್ತಕ ಎಳೆದುಕೊಂಡು ಓದುತ್ತಾ ಕೂರುವುದೊಂದೇ ಮಾರ್ಗ. ಹೊರಗಿನ ಪರಿಸರ ನಮ್ಮ ಮನೋಲಹರಿಯನ್ನೂ ಬದಲಾಯಿಸುತ್ತದೆ. ಬಿಸಿಲು ಬಿದ್ದ ಮುಂಜಾನೆ ಅರಳಿಸಿದರೆ, ಮಂದ ಬೆಳಕಿನ ಮುಸ್ಸಂಜೆ ಮುದುಡಿಸುತ್ತದೆ. ಅರೆಗತ್ತಲನ್ನು ಹಿಮ್ಮೆಟ್ಟಿಸುವುದಕ್ಕೆ ಇರುವ ಒಂದೇ ಮಾರ್ಗವೆಂದರೆ ನಡಿಗೆ. ಮೈಯೆಲ್ಲ ಬೆವರುವಂತೆ ನಡೆಯುತ್ತಾ ಹೋದರೆ, ಮತ್ತೆ ಹೊಸ ಹೊಳಹುಗಳು ಮೂಡುತ್ತಾ ಹೋಗುತ್ತವೆ.

ಬರೆಯುವ ಓದುವ ಕಷ್ಟವನ್ನಿಲ್ಲಿ ನಾನು ನೆನಪಿಸುತ್ತಿಲ್ಲ. ಮಾತು, ಓದು ಮತ್ತು ಏಕಾಂತ ಬರಹಗಾರನಿಗೆ ಅತ್ಯಗತ್ಯ. ಕತೆಯೆಂಬುದು ಏಕಾಂತದಲ್ಲಿ ಬರೆಸಿಕೊಳ್ಳುವುದು ನಿಜವಾದರೂ ಅದು ಹುಟ್ಟುವುದು ಮಾತ್ರ ಜಂಗುಳಿಯಲ್ಲೇ. ಕವಿಗಳು ಕಾರಲ್ಲಿ ಓಡಾಡತೊಡಗಿದ ಮೇಲೆ ಕವಿತೆ ಹುಟ್ಟುವುದು ಹೇಗೆ ಸಾಧ್ಯ ಅಂತ ಆಮೂರರು ಹೇಳಿದ್ದು ಅರ್ಧ ಸತ್ಯ. ಐಷಾರಾಮ ಕವಿಯನ್ನು ಕೊಲ್ಲುತ್ತದೆ ಎಂಬುದು ಬಹಳಷ್ಟು ಸಂದರ್ಭಗಳಲ್ಲಿ ನಿಜವಾಗಿದೆ. ತೇಜಸ್ವಿ ಪದೇ ಪದೇ ಅದನ್ನೇ ಹೇಳುತ್ತಿದ್ದರು. ಬೆಂಗಳೂರಿನಂಥ ಊರಲ್ಲಿ ಅಲ್ಲಾಡದೇ ಕೂತವರು ಅದೇನು ಬರಿಯೋದಕ್ಕೆ ಸಾಧ್ಯ? ಅದೇ ದಾರಿ, ಅದೇ ಲೈಟು ಕಂಬ, ಅದೇ ಸಿಗ್ನಲ್ಲು ನೋಡ್ಕೊಂಡಿದ್ರೆ ಕತೆ ಹುಟ್ಟುತ್ತಾ ಅಂತ ಹೊಸತೇನಾದರೂ ಹುಟ್ಟುವ ಸಾಧ್ಯತೆಯನ್ನು ಗಂಭೀರವಾಗಿ ತಳ್ಳಿ ಹಾಕುತ್ತಿದ್ದರು.

ಬರೀ ಐಷಾರಾಮ ಒಂದೇ ಅಲ್ಲ, ಜ್ಞಾನೋದಯದ ಸ್ಥಿತಿಯೂ ಸಾಹಿತಿಗೆ ಅಪಾಯಕಾರಿ. ಜ್ಞಾನೋದಯ ಹೊಂದಿದವನು ಎಲ್ಲವನ್ನೂ ಸಹಜ ಅಂತಲೇ ಸ್ವೀಕರಿಸುತ್ತಾನೆ. ಆತನಿಗೆ ಜಗತ್ತಿನಲ್ಲಿ ನಡೆಯುವ ಅಷ್ಟೂ ಸಂಗತಿಗಳೂ ಅಚ್ಚರಿ ಹುಟ್ಟಿಸುವುದಿಲ್ಲ. ಏನಾಗಬೇಕೋ ಅದೇ ಆಗುತ್ತದೆ. ಆಗುವುದನ್ನು ಯಾರೂ ತಡೆಯುವುದಕ್ಕೆ ಸಾಧ್ಯವಿಲ್ಲ. ಬರುವಾಗ ನಾವು ಏನೂ ತಂದಿಲ್ಲ,ಹೋಗುವಾಗ ಏನೂ ಒಯ್ಯುವುದಿಲ್ಲ. ಈ ಜಗತ್ತಿನ ಎಲ್ಲಾ ಘರ್ಷಣೆಗಳಿಗೂ ಕಾರಣ ನಮ್ಮ ಕಾಮ,ಕ್ರೋಧ, ಮದ, ಲೋಭ, ಮೋಹ, ಮಾತ್ಸರ್ಯ ಅಂತ ಅರ್ಥ ಮಾಡಿಕೊಂಡು ಬಿಟ್ಟರೆ ಮತ್ತೆ ಮಾತಿಲ್ಲ. ಹೀಗಾಗಿಯೇ ಜ್ಞಾನಿಗಳು ಕೇವಲ ಜ್ಞಾನಿಗಳು ಮಾತ್ರ. ಅವರು ಸೃಷ್ಟಿಸಲಾರರು. ಜೀವನದತ್ತ ಮುಖ ಮಾಡಿದವನು ಮಾತ್ರ, ತಲ್ಲಣಗೊಳ್ಳಬಲ್ಲವನು ಮಾತ್ರ, ತುಡಿಯಬಲ್ಲವನ್ನು ಮಾತ್ರ ಬರೆಯಬಲ್ಲ. ಯಾವುದಕ್ಕೂ ಸ್ಪಂದಿಸದೇ, ಪ್ರತಿಕ್ರಿಯಿಸದೇ, ತೀವ್ರವಾಗಿ ಅನುಭವಿಸದೇ ನಿರ್ಲಿಪ್ತನಾಗಿ ಕೂತು ಬರೆಯುತ್ತೇನೆ ಎಂದು ಹೊರಟರೆ ಆತ ಸೃಷ್ಟಿಸುವುದು ಕೂಡ ಬರಡಾಗಿಯೇ ಇರುತ್ತದೆ. ಗ್ರಾಫಿಕ್ ತಂತ್ರಜ್ಞಾನದಲ್ಲಿ ಸೃಷ್ಟಿಸಿದ ಕಾಡಿನಂತೆ.

ಮೊನ್ನೆ ಗೆಳೆಯ ಫೋನ್ ಮಾಡಿ, ನಮಗೆ ಜೀವನದಲ್ಲಿ ಅತ್ಯಂತ ಸಂತೋಷ ಕೊಟ್ಟದ್ದು ಏನು ಹೇಳು ನೋಡೋಣ ಅಂದ. ನಾನು ಪ್ರೇಮ, ಕಾಮ, ದುಡ್ಡು, ಕೆಲಸ, ಸ್ಥಾನಮಾನ, ಗೌರವ, ಅಹಂಕಾರ ಅಂತೆಲ್ಲ ಲೆಕ್ಕ ಹಾಕತೊಡಗಿದೆ. ಅವನು ಅವೆಲ್ಲವನ್ನೂ ತಳ್ಳಿ ಹಾಕಿದ. ನೆನಪಿಸಿಕೋ, ನಾವು ಓದಿದ ಕತೆಗಳೂ ಕವಿತೆಗಳೂ ತಾನೇ ನಮಗೆ ನಿರ್ಮಮವಾದ ಖುಷಿ ಕೊಟ್ಟದ್ದು. ನಾವು ಸುತ್ತಾಡಿದ ಕಾಡು, ನೋಡಿದ ಜಲಪಾತ, ಸುಸ್ತಾಗಿ ಬಿದ್ದುಕೊಂಡ ಮಧ್ಯಾಹ್ನ, ಬಸವಳಿದು ಹೋದ ಸಂಜೆ- ಇವೆಲ್ಲ ಕೊಟ್ಟ ಖುಷಿಯನ್ನು ಮರೆಯೋದಕ್ಕೆ ಸಾಧ್ಯವಾ? ಕತೆ, ಕತೆಯಂಥ ಸಂಗತಿಗಳು, ಆಗುಂಬೆಯ ಘಾಟಿಯಲ್ಲಿ ನಡುರಾತ್ರಿ ಮಳೆ ಸಿಕ್ಕಿ ಹಾಕಿಕೊಂಡದ್ದು, ಎಡಕುಮೇರಿಯ ಸುರಂಗದಲ್ಲಿ ರೇಲು ಕೆಟ್ಟು ನಿಂತು, ಮೂರು ಹಗಲು ಮೂರು ರಾತ್ರಿ ಅಲ್ಲೇ ಉಳಿಯಬೇಕಾಗಿ ಬಂದದ್ದು. ಭೀಕರ ಮಳೆಗೆ ರೇಲಿನಿಂದ ಇಳಿಯಲೂ ಆಗದೇ ಒದ್ದಾಡಿದ್ದು- ಹೀಗೆ ಘಟನೆಗಳು ಪಟಪಟನೆ ನೆನಪಾಗತೊಡಗಿದವು. ಒಂದು ಕತೆ ಓದುತ್ತಾ ಕೂತರೆ ಅಕೌಂಟಿನಲ್ಲಿರುವ ದುಡ್ಡು, ಕೊಂಡು ತಂದ ದುಬಾರಿ ಶರಟು, ಮನೆ ಮುಂದೆ ನಿಂತಿರುವ ಹೊಸ ಕಾರು, ನಮ್ಮ ಉದ್ಯೋಗ, ಎಂದೋ ಬಂದ ಪ್ರಶಸ್ತಿ ಯಾವುದೂ ನೆನಪಿಗೇ ಬರುವುದಿಲ್ಲ. ತೇಜಸ್ವಿಯವರ ನಿಗೂಢ ಮನುಷ್ಯರು ನೀಳ್ಗತೆಯನ್ನು ಮುಂದಿಟ್ಟುಕೊಂಡು ಕೂತುಬಿಟ್ಟರೆ, ಇಡೀ ಜಗತ್ತೇ ಮರೆತುಹೋಗುತ್ತದೆ. ನಾವು ನಮ್ಮ ಮನೆ, ಊರು ಎಲ್ಲ ಬಿಟ್ಟು ಅವರ ಜೊತೆ ಮೂಡಿಗೆರೆಯ ಕೆಟ್ಟುಹೋದ ರಸ್ತೆಯಲ್ಲಿ ಹಳೆಯ ಕಾರಲ್ಲಿ ಪ್ರಯಾಣ ಶುರುಮಾಡುತ್ತೇವೆ.

ಇದೆಲ್ಲ ನಮ್ಮನ್ನು ಈ ಜಗತ್ತಿನಿಂದ ಪಾರುಮಾಡುವ ಸಂಗತಿಗಳಂತೆ ಕಾಣುತ್ತವೆ. ಆಗಾಗ ಹಾಗೆ ಈ ಜಂಜಡದಿಂದ ಪಾರಾಗುವುದೇ ಹೋದರೆ ನಾವು ಜಡ್ಡುಗಟ್ಟುತ್ತಾ ಹೋಗುತ್ತೇವೆ. ಕಲೆಯೆಂಬ ಪವಾಡ ಸಂಭವಿಸಿದ್ದೇ ಅದೇ ಕಾರಣಕ್ಕೆ. ಮನುಷ್ಯ ಹುಟ್ಟಿರುವುದು ದುಡಿಯುವುದಕ್ಕೆ ಎಂದು ನಂಬಿರುವ ಹೊತ್ತಿಗೇ, ಆ ದುಡಿಮೆಯನ್ನು ಕಲಾಕೃತಿಯನ್ನಾಗಿ ಮಾಡುವುದು ಹೇಗೆ ಎಂದು ನಾವು ಯೋಚಿಸಬೇಕಾಗುತ್ತದೆ. ಪ್ರಕೃತಿಯ ಜೊತೆಗೇ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ನಮ್ಮ ಮುಂದೆ ದಿನಕ್ಕೊಂದು ಅಚ್ಚರಿ ಸಂಭವಿಸುತ್ತಿತ್ತು. ಇವತ್ತು ಬಿತ್ತಿತ ಬೀಜ, ನಾಳೆ ಮೊಳಕೆ ಒಡೆಯುವುದು, ಅದು ಗಿಡವಾಗುವುದು, ಮರವಾಗುವುದು, ಹೂ ಬಿಡುವುದು- ಇದೆಲ್ಲ ನಮ್ಮ ಶ್ರಮ ಮತ್ತು ಪ್ರೀತಿಯಿಂದಲೇ ಆಗುತ್ತದೆ ಎಂದು ನಂಬಬಹುದಾಗಿತ್ತು. ಸ್ಕೂಲಿಗೆ ಹೋಗುವ ದಿನಗಳಲ್ಲಿ ನಾವು ಕೊಯಿಲು ಮುಗಿದ ನಂತರ ಗದ್ದೆಗಳಲ್ಲಿ ಸೌತೆಕಾಯಿ ಬೆಳೆಯುತ್ತಿದ್ದೆವು. ಬೇಸಗೆ ಕೊನೆಯಾಗುತ್ತಿದ್ದಂತೆ ಗದ್ದೆಯಲ್ಲಿ ಸಾಲು ಮಾಡಿ ಸೌತೆ ಬೀಜ ಬಿತ್ತಿದರೆ, ನವೆಂಬರ್ ಹೊತ್ತಿಗೆ ಅದು ಬಳ್ಳಿಬಿಡುತ್ತಿತ್ತು. ನವೆಂಬರ್ ತಿಂಗಳ ಚಳಿಯನ್ನೂ ಲೆಕ್ಕಿಸದೇ, ಸುಮಾರು ಅರ್ಧ ಮೈಲಿ ದೂರದಿಂದ ಕೊಡಗಳಲ್ಲಿ ನೀರು ತಂದು ಸುರಿದು, ಬಳ್ಳಿ ಹಸಿರಾಗುವುದನ್ನೂ ಉದ್ದವಾಗುವುದನ್ನೂ ಹೂ ಬಿಡುವುದನ್ನೂ ನೋಡುತ್ತಾ ಸಂಭ್ರಮಿಸುತ್ತಿದ್ದೆವು. ಹಳದಿ ಬಣ್ಣದ ಹೂವುಗಳು ಅರಳಿ, ಅದರ ಸುತ್ತ ದುಂಬಿಗಳು ಹಾರಾಡಿ, ಸೌತೆಯ ಮಿಡಿಗಳು ಕಾಣಿಸಿಕೊಳ್ಳುತ್ತಿದ್ದವು. ಅವನ್ನು ಎಚ್ಚರದಿಂದ ಕಾಯುತ್ತಾ, ಯಾವಾಗ ಬೆಳಗಾಗುವುದೋ ಎಂದು ಕಾಯುತ್ತಾ ನಿದ್ದೆಗೆಡುತ್ತಿದ್ದ ರಾತ್ರಿಗಳಿದ್ದವು.

ಇವತ್ತು ನಮಗೂ ಸೌತೆಕಾಯಿಗೂ ಇರುವ ಸಂಬಂಧ ಮೂರು ಕಾಸಿನದ್ದು. ಒಮ್ಮೊಮ್ಮೆ ಪ್ಲಾಸ್ಚಿಕ್ ಕಾರ್ಡಿನದು. ಯಾವುದೋ ತರಕಾರಿ ಅಂಗಡಿಗೆ ಹೋಗಿಯೋ ಶಾಪಿಂಗ್ ಕಾಂಪ್ಲೆಂಕ್ಸಿಗೆ ಹೋಗಿಯೋ ಸೌತೆಕಾಯಿ ಕೊಂಡುಕೊಂಡು ಬರುವುದರಲ್ಲಿ ಯಾವ ಸಂತೋಷವಿದೆ ಎಂದು ನನಗೆ ಗೊತ್ತಿಲ್ಲ. ಆದರೆ ತರಕಾರಿ ಅಂಗಡಿಗಳಲ್ಲಿಟ್ಟ ಹಸಿರು ತರಕಾರಿ ನೋಡುತ್ತಿದ್ದರೆ, ಅದನ್ನು ಬೆಳೆದವನ ಸಾರ್ಥಕತೆ ಕಣ್ಮುಂದೆ ಬರುತ್ತದೆ.

ಮುಂಗಾರು ಮತ್ತು ಹಿಂಗಾರು ಕೈ ಕೊಟ್ಟಿದ್ದರಿಂದ ಇದೊಂದು ಮಳೆ ಬೇಕಾಗಿತ್ತು. ಒಂಚೂರು ಉಸಿರಾಡುವಂತಾಗಿದೆ. ತೋಟ ಒಣಗಿಹೋಗಿತ್ತು. ಈ ಬೇಸಗೆಯಲ್ಲಿ ನೀರು ಸಿಗುತ್ತದೋ ಇಲ್ಲವೋ ಅನ್ನುವ ಅನುಮಾನವಿತ್ತು. ಈಗ ಬಂದ ತುಂತುರು ಮಳೆ , ಈ ಬೇಸಗೆಯನ್ನು ತಂಪಾಗಿಸುತ್ತದೆ ಅಂತ ಗೆಳೆಯ ಗೋಪಿ ಫೋನಿಸಿದ. ಅದು ಲಾಭನಷ್ಟದ ಪ್ರಶ್ನೆ ಆಗಿರಲೇ ಇಲ್ಲ. ನೀವು ದಕ್ಷಿಣ ಕನ್ನಡದ ಸುಳ್ಯದತ್ತ ಹೋಗುತ್ತಿದ್ದರೆ, ಎರಡೂ ಬದಿಯಲ್ಲಿ ರಬ್ಬರ್ ಮರಗಳನ್ನೂ ಅವುಗಳಿಂದ ರಬ್ಬರ್ ತೆಗೆಯುತ್ತಿರುವ ಕೆಲಸಗಾರರನ್ನೂ ನೋಡುತ್ತೀರಿ. ಅವರು ಶ್ರೀಮಂತರಾಗಿದ್ದಾರೋ ಇಲ್ಲವೋ, ಸುಖವಾಗಂತೂ ಇದ್ದಾರೆ.

ತುಂತುರು ಮಳೆಯ ಈ ಮುಂಜಾನೆ ಕೈಗೆ ಸಿಕ್ಕಿದ್ದು ಬೆಳಗೆರೆ ಕೃಷ್ಣಶಾಸ್ತ್ರಿಯವರ ಮರೆಯಲಾದೀತೇ ಪುಸ್ತಕ. ಶಾಸ್ತ್ರಿಗಳು ಅವಧೂತರಲ್ಲ, ಪವಾಡಪುರುಷರಲ್ಲ, ಬಹುದೊಡ್ಡ ಲೇಖಕರೂ ಅಲ್ಲ ಅಂತ ವಾದಿಸುವವರಿದ್ದಾರೆ. ಅವರು ಅದೆಲ್ಲವನ್ನೂ ಮೀರಿದವರು ಅಂತ ಎಷ್ಟೋ ಸಲ ಅನ್ನಿಸುತ್ತದೆ. ಅವರ ಒಡನಾಟ ಮತ್ತು ಓಡಾಟಗಳು ಅವರನ್ನು ಮನುಷ್ಯರನ್ನಾಗಿಸಿವೆ. ಅವರು ನಗಬಲ್ಲ ಸನ್ಯಾಸಿ. ಅವರು ಮರುಗಬಲ್ಲ ಸನ್ಯಾಸಿ. ಯಾರಾದರೂ ಕಷ್ಟ ಹೇಳಿಕೊಂಡರೆ ಅವರು ಅದನ್ನು ದೇವರಿಗೋ ಕರ್ಮಕ್ಕೋ ಪೂರ್ವಜನ್ಮಕ್ಕೋ ವಗಾಯಿಸಿ ನಿರುಮ್ಮಳವಾಗಿರಲಾರರು. ಅವರ ಮನಸ್ಸು ಮರುಗುತ್ತದೆ. ಅವರು ಆರ್ದ್ರರಾಗುತ್ತಾರೆ.

ನಾವು ಯೋಗಿಗಳಾಗಬೇಕಿಲ್ಲ, ಎಲ್ಲವನ್ನೂ ಬಿಟ್ಟು ಬದುಕಬೇಕಿಲ್ಲ. ನಮ್ಮ ಮಿತಿ ನಮಗೆ ಗೊತ್ತು. ನಮ್ಮ ಉದ್ಯೋಗ, ನಮ್ಮ ನಗರವಾಸ, ನಮ್ಮ ನರಕದ ನಡುವೆಯೇ ಒಂದು ಸೊಗಸಾದ ಬದುಕು ಕಟ್ಟಿಕೊಳ್ಳುವುದು ಕಷ್ಟವೇನಲ್ಲ. ಅಷ್ಟಕ್ಕೂ ಸಂತೋಷವಾಗಿರುವುದಕ್ಕೆ ಏನು ಬೇಕು?

ತುಂತುರು ಮಳೆ, ಹದವಾದ ಬಿಸಿಲು, ಮಧ್ಯಾಹ್ನ ಬೀಸಿಬಂದು ತಂಪಾಗಿಸುವ ಗಾಳಿ, ಒಂದೊಳ್ಳೆಯ ಕತೆ, ಕುಡಿಯಲಿಕ್ಕೊಂದು ಬಿಸಿಬಿಸಿ ಟೀ ಮತ್ತು ಬನ್ನು. ಇಷ್ಟು ಹಸಿರು, ಒಂದಿಷ್ಟು ನಗು.

ಅದನ್ನು ಅನುಭವಿಸಲು ಕಲಿತರೆ ಅವನು ಅವಧೂತ. ಮಿಕ್ಕಿದ್ದೆಲ್ಲ ಪ್ಲಾಸ್ಟಿಕ್ಕು. ವಿದ್ಯೆ, ಅಹಂಕಾರ, ಪ್ರತಿಷ್ಠೆ ಮತ್ತು ನಿರ್ಲಿಪ್ತತೆ ಎಂಬ ಕನ್ನಡಕ ತೆಗೆದಿಟ್ಟು ನೋಡುವುದನ್ನು ಕಲಿತರೆ, ಗುಬ್ಬಿ ಗೂಡು ಕಟ್ಟುವುದು ಕಾಣಿಸುತ್ತದೆ.

ಆ ಗುಬ್ಬಿ ಮನಸ್ಸಿನೊಳಗೂ ಗೂಡು ಕಟ್ಟುತ್ತದೆ.

 

‍ಲೇಖಕರು G

22 November, 2012

6 Comments

  1. samyuktha

    The JOGI way! 🙂
    a neat write up!

  2. ಡಿ. ಎಸ್.ರಾಮಸ್ವಾಮಿ

    ಗುಬ್ಬಿಯೇನೋ ಗೂಡು ಕಟ್ಟಬಹುದು, ಪಾಪ ಅದಕ್ಕೆ ಪುರುಸೊತ್ತಿಲ್ಲ.
    ಎಂದಿನಂತೆ ಲವಲವಿಕೆಯ ಲೇಖನ, ಜೋಗಿ ಮನೆಯ ದಾರಿ ಮನಸ್ಸಿದ್ದವರಿಗೆ ದೂರವೇನೂ ಅಲ್ಲ!

  3. ಶಿವು ಮೋರಿಗೇರಿ

    ನಿಮ್ಮ ಲೇಖನದ ತುಂಬೆಲ್ಲಾ ತುಂಬಿಕೊಂಡ ಹಸಿರು ಕ್ರಾಂತಿಯ ಅಲ್ಲಲ್ಲಿ ಮಾರುದ್ದ ಮಾಲ್ ಗಳಲ್ಲಿ ಮಲಗಿದ ಹೈಬ್ರೀಡ್ ಭಾವನೆಗಳಿಗೆ ನಾವೆಲ್ಲಾ ಜೋತುಬಿದ್ದಿರುವುದು ಸುಳ್ಳಲ್ಲ.ಹಿಂಗಾರನ್ನು ಹಿಂದಿಕ್ಕಿ ಮುನ್ನುಗ್ಗಿ ಮತ್ತೆ ಮುಂಗಾರು ಮಿಂಚಿ ಬೆಚ್ಚನೆಯ ಕೌದಿಯ ಮೇಲೆ ಕುಳಿತ ನಮ್ಮಗಳ ಕೈಯೊಳಗೊಂದು ಪುಸ್ತಕ ಸಂಗಾತಿ,ಪಕ್ಕದಲ್ಲಿ ನಮ್ಮನ್ನೇ ಆಸೆ ಕಂಗಳಿಂದ ನೋಡುವ ಉರಿದ ಹುರಳಿಕಾಳು ,ದುಂಡುಗಡಲೆ,ಬೆಲ್ಲದ ಚಾ,ಖಾರ ಮಂಡಕ್ಕಿ ಸಿಕ್ಕಿದರಂತೂ ಕಡೆತನಕ ಮರೆಯಲ್ಲ ಜೋಗಿ….ಹಾಡು ನೆನಪಾಗಿ ಕಾಡುತ್ತೆ.ಆಮೇಲೆ ಗೂಡು ಕಟ್ಟದೇ ಸುಮ್ಮನಿರುತ್ತಾ ಗುಬ್ಬಿ….?

  4. ವಿದ್ಯಾಶಂಕರ್ ಹರಪನಹಳ್ಳಿ

    ಅಷ್ಟಕ್ಕೂ ಸಂತೋಷವಾಗಿರುವುದಕ್ಕೆ ಏನು ಬೇಕು? ಎಂದು ಕೇಳಿಕೊಂಡರೆ ದೊಡ್ಡ ಪಟ್ಟಿ ಸಿದ್ಧವಾಗುತ್ತದೆ! ಅದನ್ನು ಸಿದ್ಧಮಾಡಲು ಮತ್ತೆ ಹೋರಾಟ… ಸಂತೋಷವಾಗಿರುವುದಕ್ಕೆ ಎನೂ ಬೇಡ ಎಂದುಕೊಳ್ಳುವುದು ಉತ್ತಮ!

  5. bharathi bv

    Lekhana chennagide … aadre jogi, kaano kannu nodo mansidre kathe bengallooralloo huttutte ansodilva nimge?

  6. hemanth kumar s

    manushyara bavanegale haage ,concrete kaadalli satthu malgiruthave. nimmantha sahrudayi lekakarinda maaathra aa baradu bavanegaligelle jeeva thumbo kelasa sadya(entha lekanagalinda).

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading