ಜೋಗಿ ಕತೆ ‘ಅಮರ್ತ್ಯ’

 

ಸೆಪ್ಟೆಂಬರ್ 24ರ ಭಾನುವಾರ ಬಿಡುಗಡೆ ಆಗುತ್ತಿರುವ ಅಂಕಿತ ಪುಸ್ತಕ ಪ್ರಕಟಿಸುತ್ತಿರುವ ಜೋಗಿ ಅವರ  ‘ಉಳಿದ ವಿವರಗಳು ಲಭ್ಯವಿಲ್ಲ’ ಪುಸ್ತಕದ ಒಂದು ಆಖ್ಯಾನ;

ಅಮರ್ತ್ಯ

ತನ್ನ ಮೊದಲನೇ ಮಗನಿಗೆ ಅಮರ್ತ್ಯ ಅಂತ ಹೆಸರಿಡಬೇಕು ಅಂತ ಸುಹಾಸಿನಿಗೆ ಆಸೆಯಿತ್ತು. ಅದಕ್ಕೆ ಅವಳ ಗಂಡನ ಮನೆಯವರು ಅವಕಾಶ ಮಾಡಿಕೊಟ್ಟಿರಲಿಲ್ಲ. ಅಮರ್ತ್ಯ ಅನ್ನೋದೂ ಒಂದು ಹೆಸರಾ? ನಮ್ಮೂರಲ್ಲಿ ಅದು ಯಾರ ನಾಲಗೆಯಲ್ಲಾದರೂ ಹೊರಳುತ್ತದಾ? ಅಮೃತಾ ಅಂತಲೋ ಅಮಾತ್ರ ಅಂತಲೋ ಕರೀತಾರೆ. ಅಷ್ಟಕ್ಕೂ ಅಮರ್ತ್ಯ ಅನ್ನೋ ಪದಕ್ಕೆ ಅರ್ಥವಾದರೂ ಏನು? ಒಂದು ದೇವರ ಹೆಸರಾ, ದೈವದ ಹೆಸರಾ, ತಗೀ ಅದನ್ನ ಅಂತ ಸುಧಾಕರನ ಅಕ್ಕ-ತಂಗಿಯರೆಲ್ಲ ಪಟ್ಟು ಹಿಡಿದು ಕೂತು ಸುಹಾಸಿನಿಗೆ ಒಂಚೂರು ಇಷ್ಟವಿಲ್ಲದ ರಂಗನಾಥ ಅನ್ನುವ ಹೆಸರಿಟ್ಟು ಧನ್ಯರಾದರು. ರಂಗನಾಥ ತಮ್ಮ ಮನೆದೇವರು ಅನ್ನುವ ಹೆಮ್ಮೆಯ ಮುಂದೆ ಸುಹಾಸಿನಿಯ ಮಾತಿಗೆ ಬೆಲೆಯಿರಲಿಲ್ಲ. ಮುಖ ಸಣ್ಣಗೆ ಮಾಡಿಕೊಂಡು ಕೂತಿದ್ದ ಸುಹಾಸಿನಿಯ ಹತ್ತಿರ ಸುಧಾಕರ ಬಂದು, ಹೋಗ್ಲಿ ಬಿಡೇ, ಅದ್ಯಾಕೆ ಎಲ್ಲಾ ಮುಗಿದೇಹೋಯ್ತು ಅನ್ನೋ ಥರ ಕೂತಿದ್ದೀ. ಏನೋ ಒಂದು ಹೆಸರು ಇಟ್ಕೊಳ್ಳಲಿ ಬಿಡು. ಆಮೇಲೆ ಬದಲಾಯಿಸೋಣಂತೆ, ಸ್ಕೂಲಿಗೆ ಸೇರಿಸೋ ಹೊತ್ತಿಗೆ ನಮಗೆ ಬೇಕಾದ ಹೆಸರಿಟ್ಟುಕೊಳ್ಳಬಹುದು, ನಡಿಯೇ ಅಂತ ಪೂಸಿಹೊಡೆದು ಅವಳನ್ನು ನಾಮಕರಣದ ದಿನ ಸಮಾಧಾನ ಮಾಡಿದ್ದ.

ಅಮರ್ತ್ಯ ಅಂತಲೇ ಯಾಕೆ ಹೆಸರಿಡಬೇಕು ಅಂತ ತಾನು ಹಟ ಹಿಡಿದೆ ಅನ್ನುವುದು ಸುಹಾಸಿನಿಗೆ ಕೊನೆಗೂ ಹೊಳೆದಿರಲಿಲ್ಲ. ರಂಗನಾಥ ಅಂತ ಹೆಸರಿಟ್ಟು, ಅದೇ ಹೆಸರಲ್ಲಿ ಬರ್ತ್ ಸರ್ಟಿಫಿಕೇಟನ್ನೂ ಮಾಡಿಸಿ,ಸ್ಕೂಲಿಗೆ ಸೇರಿಸುವಾಗಲೂ ಪಿ ಎಸ್ ರಂಗನಾಥ ಅಂತಲೇ ಬರೆಸಿ ಬರುವಾಗಲೂ ಸುಹಾಸಿನಿ ಹೆಸರು ಬದಲಾಯಿಸುವ ಪ್ರಸ್ತಾಪ ಮಾಡಿರಲೇ ಇಲ್ಲ. ಸುಧಾಕರನಿಗಂತೂ ಆವತ್ತು ಹೇಳಿದ ಮಾತು ಮರೆತೇ ಹೋಗಿತ್ತು. ಒಂದು ವೇಳೆ ತಾನು ನೆನಪಿಸಿದ್ದರೂ ಅವನೇನೂ ಹೆಸರು ಬದಲಾಯಿಸುವ ತೊಂದರೆ ತೆಗೆದುಕೊಳ್ಳುತ್ತಿರಲಿಲ್ಲ  ಅಂತ ಸುಹಾಸಿನಿಗೆ ಆಗಾಗ ಅನ್ನಿಸುತ್ತಿರುತ್ತದೆ. ಹೆಸರು ಬದಲಾಯಿಸಬೇಕಾದರೆ ಮತ್ತೆ ಜನನ ಪತ್ರ ಬದಲಾಯಿಸಬೇಕು, ಅಫಿಡವಿಟ್ ಕೊಡಬೇಕು ಅಂತ ನೂರಾರು ರಗಳೆ ಇರುವಾಗ, ಸುಧಾಕರ ಅಂಥದ್ದಕ್ಕೆಲ್ಲ ಕೈ ಹಾಕುತ್ತಿರಲಿಲ್ಲ ಎಂಬುದು ಅವಳಿಗೆ ಖಾತ್ರಿಯಿತ್ತು.

ಸುಹಾಸಿನಿ ಮಾತ್ರ ಮಗನನ್ನು ರಂಗನಾಥ ಅಂತ ಒಂದು ಸಲವೂ ಕರೆಯಲಿಲ್ಲ. ಯಾರಾದರೂ ಏನ್ ಹೆಸರು ಪುಟ್ಟಂದು ಅಂತ ಕೇಳಿದಾಗ, ನಮ್ಮನೆ ದೇವರ ಹೆಸರಿಟ್ಟಿದ್ದೀವಿ ಅಂತ ಹೇಳುತ್ತಿದ್ದಳು. ಹೆಚ್ಚಿನ ಮಂದಿ ಆ ಉತ್ತರಕ್ಕೆ ಸುಮ್ಮನಾಗಿ, ನಿಮ್ಮ ಮನೆದೇವರು ಯಾರು ಅಂತ ಕೇಳುವ ಗೋಜಿಗೇ ಹೋಗುತ್ತಿರಲಿಲ್ಲ. ಹಾಗೊಂದು ವೇಳೆ ಯಾರಾದರೂ ಕೇಳಿದರೆ ರಂಗನಾಥಸ್ವಾಮಿ ಅಂತ ಚುಟುಕಾಗಿ ಉತ್ತರಿಸುತ್ತಿದ್ದಳು. ಹಾಗೆ ಉತ್ತರಿಸುವಾಗೆಲ್ಲ ತಾನು ಮಗನ ಹೆಸರು ಹೇಳುತ್ತಿಲ್ಲ, ಮನೆ ದೇವರ ಹೆಸರು ಹೇಳುತ್ತಿದ್ದೇನೆ ಎಂಬ ದೃಢವಾದ ನಂಬಿಕೆ ಅವಳ ಮುಖದಲ್ಲಿ ನೆಲೆಸಿರುತ್ತಿತ್ತು.

ರಂಗನಾಥ ಐದನೇ ಕ್ಲಾಸು ಮುಗಿಸುವ ಹೊತ್ತಿಗೆ ಅವನನ್ನು ಪಾಂಡವಪುರದ ಶಾಲೆಯಿಂದ ಮೈಸೂರಿಗೆ ವರ್ಗ ಮಾಡಲು ಸುಧಾಕರ ನಿರ್ಧರಿಸಿದ. ಪಾಂಡವಪುರದಲ್ಲಿರುವ ಶಾಲೆಯಲ್ಲಿ ಇಂಗ್ಲಿಷ್ ಚೆನ್ನಾಗಿ ಕಲಿಸುವುದಿಲ್ಲ. ಅಲ್ಲಿ ಓದಿದರೆ ಮಗ ಮಿಕ್ಕ ಮಕ್ಕಳ ಹಾಗೆ ಶತದಡ್ಡನಾಗಿಯೇ ಬೆಳೆಯುತ್ತಾನೆ. ಅದರ ಬದಲು ಮೈಸೂರಿನ ಕಾನ್ವೆಂಟ್ ಸ್ಕೂಲಲ್ಲಿ ಓದಲಿ ಅಂತ ಹೇಳಿ ಸುಧಾಕರ ಮಗನನ್ನು ಕರೆದುಕೊಂಡು ಹೋಗಿ ಮರಿಮಲ್ಲಪ್ಪ ಸ್ಕೂಲಿಗೆ ಸೇರಿಸಿ ಬಂದ. ಸುಹಾಸಿನಿಗೆ ಅದು ಕಿಂಚಿತ್ತೂ ಇಷ್ಟವಿರಲಿಲ್ಲ. ಮಗ ಪಾಂಡವಪುರದಲ್ಲೇ ಇದ್ದುಕೊಂಡು ಅಷ್ಟೋ ಇಷ್ಟೋ ಕಲಿತು ಕಬ್ಬಿನ ತೋಟ, ಗದ್ದೆ ನೋಡಿಕೊಂಡಿದ್ದರೆ ಸಾಲದೇ ಅಂತ ಅವಳಿಗೆ ಅನ್ನಿಸುತ್ತಿತ್ತು. ಅವಳು ಅದನ್ನು ಹೇಳಿದಾಗಲೂ ಸುಧಾಕರನ ಅಕ್ಕತಂಗಿಯರು  ಮತ್ತೆ ಕ್ಯಾತೆ ತೆಗೆದರು. ಏನೋ ನಿನ್ನ ಹೆಂಡ್ತಿ. ಮಗ ಹಳ್ಳಿಗುಗ್ಗು ಆಗ್ಲಿ ಅಂತ ಆಸೆಪಡ್ತಾಳಲ್ಲೋ? ನನ್ನ ಮಗ ನಾಲ್ಕನೇ ಕ್ಲಾಸಿಗೇ ಪಟಪಟಾಂತ ಇಂಗ್ಲಿಷ್ ಮಾತಾಡ್ತಿದ್ದ ಗೊತ್ತೇನೋ? ಇವನಿಗೆ ಓ ಅಂದ್ರೆ ಠೋ ಅನ್ನಕ್ಕೆ ಬರೋದಿಲ್ಲಲ್ವೋ ಸುಧೀ, ನಿನ್ನ ಹೆಂಡ್ತಿ ಮಾತು ಕೇಳಿದ್ರೆ ನೀನು ಉದ್ದಾರ ಆದಂಗೇನೇ ಅಂತ ಅಂದೂ ಅಂದೂ ಕೊನೆಗೂ ಸುಧಾಕರ, ಮಗನನ್ನು ಕರೆದುಕೊಂಡು ಮರಿಮಲ್ಲಪ್ಪ ಸ್ಕೂಲಿಗೆ ಸೇರಿಸಿಯೇಬಿಟ್ಟ. ಸುಧಾಕರನ ತಂಗಿ ಶೈಲಜಾಳ ಮನೆ ಮೈಸೂರಲ್ಲೇ ಇದ್ದರೂ, ಶೈಲಜಾ ಮಾತ್ರ ಅವನು ನಮ್ಮನೇಲಿ ಇರೋದು ಬೇಡ ಸುಧಣ್ಣ. ಮನೇಲಿದ್ರೆ ಮುದ್ದು ಮಾಡಿ ಮಾಡಿ ಮಕ್ಕಳು ಕೆಡ್ತವೆ. ಹಾಸ್ಟೆಲಿಗೇ ಸೇರ್ಸು. ಬೇರೆ ಮಕ್ಕಳೊಟ್ಟಿಗೆ ಚೆನ್ನಾಗಿ ಬೆಳೀತವೆ. ಸ್ವತಂತ್ರವಾಗಿ ಬದುಕೋದಕ್ಕೂ ಗೊತ್ತಾಗ್ತದೆ ಅಂತ ದಬಾಯಿಸಿ, ಮರಿಮಲ್ಲಪ್ಪ ಶಾಲೆಯ ಪಕ್ಕದಲ್ಲೇ ಇರುವ ಹಾಸ್ಟೆಲ್ಲಿಗೆ ಸೇರುವಂತೆ ಮಾಡಿದ್ದಳು.

ಮೈಸೂರಿಗೆ ಹೋಗುವ ದಿನ ರಂಗನಾಥ ಇಡೀ ದಿನ ಅತ್ತಿದ್ದ. ನಾನು ಹೋ…ಗಲ್ಲಾ…. ನಾ… ನು.. ಹೋಗಲ್ಲಾ ಅಂತ ಲಯಬದ್ಧವಾಗಿ ಅಳೋದಕ್ಕೆ ಶುರುಮಾಡಿದವನ್ನು ಸುಹಾಸಿನಿ ಸಮಾಧಾನ ಮಾಡಿದಳೇ ವಿನಾ ಅವನನ್ನು ಮೈಸೂರಿಗೆ ಕಳಿಸೋದು ಬೇಡ ಅಂತ ಒಂದು ಮಾತೂ ಆಡಲಿಲ್ಲ. ಅದನ್ನೇ ಇಟ್ಟುಕೊಂಡು ಸುಧಾಕರ ಆಗಾಗ ಅವಳನ್ನು ಹಂಗಿಸುವುದುಂಟು. ನೀನೊಂದು ಮಾತು ಬ್ಯಾಡ ಅಂದಿದ್ರೆ, ನಾನು ಮೈಸೂರಿಗೆ ಕಳಿಸ್ತಾನೇ ಇರ್ಲಿಲ್ಲ ಅವನನ್ನ. ನೀನೂ ಏನೂ ಅನ್ನಲಿಲ್ಲ. ನಿಂಗೂ ಮಗ ಇಂಗ್ಲಿಷ್ ಕಲೀಲಿ ಅನ್ನೋ ಆಸೆ ಇತ್ತು. ನಂಗೊತ್ತು ಅಂತ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಾ ಅವಳನ್ನು ಆಡಿಕೊಳ್ಳುವುದಿದೆ. ಅವಳು ಅದಕ್ಕೇನೂ ಪ್ರತಿಕ್ರಿಯಿಸುವುದಿಲ್ಲ.  ನಾನು ಬ್ಯಾಡ ಅಂದ್ರೆ ನೀವು ಕಳಿಸ್ತಿರಲಿಲ್ವಾ ಮೈಸೂರಿಗೆ, ನನ್ನ ಮಾತು ಕೇಳ್ತಿದ್ರಾ ನೀವು. ನಿಮ್ಮ ಅಕ್ಕ ತಂಗಿ ಹೇಳ್ದಂಗೆ ತಾನೇ ನೀವು ಕುಣಿಯದು ಅನ್ನುವ ಮಾತು ಬಾಯಿತುದಿಯ ತನಕ ಬರುತ್ತದಾದರೂ ಅವಳು ಅದನ್ನು ಯಾವತ್ತೂ ಹೊರಗೆ ಹಾಕಿಲ್ಲ.

ಅಮರ್ತ್ಯ ಅಂತಲೇ ಹೆಸರಿಡಬೇಕು ಅಂತ ನಿಂಗೆ ಯಾಕನ್ನಿಸ್ತೇ ಅಂತ ಒಂದೆರಡು ಸಲ ಸುಧಾಕರ ಅವಳ ಹತ್ತಿರ ಕೇಳಿದ್ದಿದೆ. ಅದಕ್ಕೆ ಸುಹಾಸಿನಿ ಏನೂ ಉತ್ತರ ಕೊಟ್ಟಿರಲಿಲ್ಲ. ಅವಳೊಳಗೆ ಉತ್ತರಗಳೂ ಇರಲಿಲ್ಲ. ಅದ್ಯಾಕೋ ಆ ಹೆಸರು ಅವಳಿಗೆ ಆ ಹೊತ್ತಿಗೆ ಇಷ್ಟವಾಗಿಬಿಟ್ಟಿತ್ತು. ಆ ಹೆಸರಿನ ಅರ್ಥವಾಗಲೀ, ಅದು ಯಾವ ದೇವರ ಹೆಸರೆಂಬುದಾಗಲೀ ಸುಧಾಕರನಿಗೆ ಅರ್ಥವೇ ಆಗಿರಲಿಲ್ಲ. ಅವನು ಅದನ್ನು ಅಮಾತ್ರ್ಯ ಅಂತಲೇ ಉಚ್ಚರಿಸುತ್ತಿದ್ದ. ಯಾವುದೋ ಸಾಬರ ಕಡೆ ಹೆಸರಿದ್ದಂಗಿದ್ಯಲ್ಲೇ ಅಂತ ಒಂದಷ್ಟು ಸಲ ಗೊಣಗಿಕೊಂಡಿದ್ದ.

-2-

ಒಂದು ಹೆಸರಿಗಾಗಿ ಸುಹಾಸಿನಿ ತನ್ನನ್ನು ಬಿಟ್ಟುಹೋಗುತ್ತಾಳೆ ಅಂತ ಕನಸಿನಲ್ಲೂ ಸುಧಾಕರ ಅಂದುಕೊಂಡಿರಲಿಲ್ಲ. ಒಂದು ದಿನ ಬೆಳಗ್ಗೆ ಸುಧಾಕರ ಏಳುವ ಹೊತ್ತಿಗೆ ಸುಹಾಸಿನಿ ಮನೆಯಲ್ಲಿರಲಿಲ್ಲ. ಸುಧಾಕರ ಬೆಳಗಾಗೆದ್ದು, ತನ್ನ ಮೂಲವ್ಯಾಧಿ ಪೀಡಿತ ಅಂಡಿಗೆ ಬಿಸಿನೀರು ಎರಚಿಕೊಂಡು, ಬಾಯಿಗೆ ಉಪ್ಪುನೀರು ಸುರಿದುಕೊಂಡು ಗೊಳಗೊಳಗೊಳಗೊಳ ಮಾಡಿ, ಮೊಬೈಲು ಚಾರ್ಜಿಗೆ ಹಾಕಿ,  ಸ್ಕೂಟರ್ ಒರೆಸಿ ಒಳಗೆ ಬರುವ ಹೊತ್ತಿಗೆ ಸುಹಾಸಿನಿ ಟೇಬಲ್ಲಿನ ಮೇಲೆ ಆಗಷ್ಟೇ ತಂದಿಟ್ಟ ಬಿಸಿಬಿಸಿ ಚಹಾ ಕುಡಿದು ಸ್ನಾನಕ್ಕೆ ಹೋಗುವುದು ರೂಢಿ. ಆವತ್ತೂ ಅದ್ಯಾವುದಕ್ಕೂ ಭಂಗ ಬಂದಿರಲಿಲ್ಲ. ಸ್ಕೂಟರ್ ಒರೆಸಿ, ಆ ಬಟ್ಟೆಯನ್ನು ಸ್ಕೂಟರಿನ ಮೇಲೆಯೇ ಒಣಗಲು ಹಾಕಿ ಒಳಗೆ ಬಂದು ಟೇಬಲ್ಲು ನೋಡಿದರೆ ಚಹಾ ಅಲ್ಲರಲಿಲ್ಲ. ಸುಧಾಕರನಿಗೆ ಚಹಾ ಕುಡಿಯಲೇಬೇಕು ಅಂತೇನಿರಲಿಲ್ಲ. ಸುಹಾಸಿನಿ ಅಲ್ಲಿ ಚಹಾ ತಂದಿಡುವುದು ಎಷ್ಟು ಯಾಂತ್ರಿಕವಾಗಿತ್ತೋ ಸುಧಾಕರ ಅಷ್ಟೇ ಯಾಂತ್ರಿಕವಾಗಿ ಅದನ್ನು ಕುಡಿಯುತ್ತಿದ್ದ.

ಸುಧಾಕರ ಚಹಾ ಕುಡಿಯದೇ ಸ್ನಾನದ ಮನೆಗೆ ಹೋಗಿ, ಮೈತೊಳೆದುಕೊಂಡು ಬಂದು, ಪೂಜೆಗೆ ಕೂತಾಗಲೂ ಸುಹಾಸಿನಿ ಕಾಣಿಸಿಕೊಳ್ಳಲಿಲ್ಲ. ದೇವರ ಮುಂದೆ ತಟ್ಟೆಯಲ್ಲಿ ಅಬ್ಬಲ್ಲಿಗೆ, ನಂದಿಬಟ್ಟಲು, ಗೋರಟೆ, ದಾಸವಾಳ ಹೂವುಗಳನ್ನು ಸುಹಾಸಿನಿಯೇ ಕೊಯ್ದು ತಂದಿಟ್ಟಿದ್ದಳು. ಅವನ್ನೆಲ್ಲ ದೇವರಿಗಿಟ್ಟು ಅಲಂಕಾರ ಮಾಡಿ, ಸೈಕಲ್ ಬ್ರಾಂಡ್ ಊದುಬತ್ತಿಯಿಂದ ಆರತಿಯೆತ್ತಿ, ಹಣೆಗೆ ವಿಭೂತಿ ಹಚ್ಚಿಕೊಂಡು ಆಫೀಸಿಗೆ ಹೊರಡಲು ಸಿದ್ಧನಾಗಿ ಬರುವ ತನಕ ಎಲ್ಲವೂ ಅನೂಚಾನವಾಗಿಯೇ ನಡೆದಿತ್ತು. ಸುಹಾಸಿನಿ ಮನೆಯಲ್ಲಿಲ್ಲ ಎಂಬ ಸುಳಿವು ಸುಧಾಕರನಿಗೆ ಮೊದಲಿಗೆ ಸಿಕ್ಕಿದ್ದು, ಟೇಬಲ್ಲಿನ ಮೇಲೆ ಇದ್ದ ಉಪ್ಪಿಟ್ಟನ್ನು ಬಡಿಸಿಕೊಂಡು ಎರಡು ತುತ್ತು ಬಾಯಿಗಿಟ್ಟ ನಂತರವೇ.

ಅಲ್ಲೇ ಎಲ್ಲಿಗೋ ಹೋಗಿರುತ್ತಾಳೆ. ಕೊತ್ತಂಬರಿ ಸೊಪ್ಪು ತರೋದಕ್ಕೋ, ಬಟ್ಟೆ ಸೋಪು ತರೋದಕ್ಕೋ ಅಂಗಡಿಗೆ ಹೋಗಿರಬಹುದು. ರೇಷನ್ ಕೊಡುವ ದಿನವಾಗಿದ್ದರೆ ರೇಷನ್ ಅಂಗಡಿಗೆ ಹೋಗಿದ್ದಾಳು. ಅಥವಾ ಯಾರೋ ಶೂಟಿಂಗಿನವರು ಬಂದಿರಬಹುದು. ಅವರನ್ನು ನೋಡಲು ಹೋಗಿದ್ದಾಳೋ ಏನೋ? ಅರಳಿಕಟ್ಟೆ ಶಿವಲಿಂಗಿಯ ಅಮ್ಮನಿಗೆ ಕಾಯಿಲೆ ಉಲ್ಬಣಿಸಿ, ಇವತ್ತೋ ನಾಳೆಯೋ ಅಂತಿದ್ದಳು. ಅವಳೇನಾದರೂ ನೆಗೆದುಬಿದ್ದು, ಶಿವಲಿಂಗಿಯನ್ನು ಸಂತೈಸೋದಕ್ಕೇನಾದರೂ ಹೋಗಿರಬಹುದೇ?

ಉಪ್ಪಿಟ್ಟು ತಿಂದು ಮುಗಿಸಿ, ಎಷ್ಟೊತ್ತಾದರೂ ಸುಹಾಸಿನಿ ಬರಲಿಲ್ಲ. ಆಫೀಸಿಗೆ ಲೇಟಾಗುತ್ತದೆ ಅಂತ ಗೊಣಗಿಕೊಳ್ಳುತ್ತಲೇ ಸುಧಾಕರ ಹಿತ್ತಲು, ಎದುರುಬಾಗಿಲು, ಕಾಂಪೋಂಡು, ಗೇಟು- ಹೀಗೆಲ್ಲ ಸುತ್ತಾಡಿದ. ಚಾರ್ಚಿಗಿಟ್ಟ ಮೊಬೈಲು ಎತ್ತಿ ಜೋಬಿಗಿಟ್ಟುಕೊಂಡ. ಪರ್ಸು ತೆಗೆದು ಅದರೊಳಗಿದ್ದ ಬೇಡದ ಕಾಗದಗಳನ್ನೂ ಬಿಲ್ಲುಗಳನ್ನೂ ವಿಸಿಟಿಂಗ್ ಕಾರ್ಡುಗಳನ್ನೂ ಒಂದೊಂದಾಗಿ ತೆಗೆದು ಹಸನುಮಾಡುತ್ತಾ ಕೂತ.

ಆವತ್ತು ಸುಧಾಕರ ಆಫೀಸಿಗೆ ಹೋಗಲಿಲ್ಲ. ಸುಹಾಸಿನಿ ಮರಳಿ ಬರಲಿಲ್ಲ. ಅವಳು ಬರುತ್ತಾಳೆ ಅಂತ ಸುಧಾಕರ ಕಾಯುತ್ತಲೇ ಇದ್ದ. ಮಧ್ಯಾಹ್ನವಾಯಿತು, ಸಂಜೆಯಾಯಿತು, ರಾತ್ರಿಯಾಯಿತು, ಮತ್ತೆ ಬೆಳಗಾಯಿತು. ಸುಧಾಕರನಿಗೆ ಅವಳು ಮನೆಬಿಟ್ಟ ಹೋಗಿದ್ದಾಳೆಂಬುದು ಎರಡು ದಿನಗಳ ಮೇಲಷ್ಟೇ ಖಾತ್ರಿಯಾಯಿತು. ಆ ಸುದ್ದಿಯನ್ನು ಯಾರಿಗೂ ಹೇಳದೇ ಅವಳು ಅಣ್ಣನ ಮನೆಗೆ ಹೋಗಿದ್ದಾಳೆ ಅಂತ ಸುಧಾಕರ ಕೇಳಿದವರಿಗೆಲ್ಲ ಸುಳ್ಳು ಹೇಳಿದ. ಅವಳ ಅಣ್ಣನಿಗೆ ಸೀರಿಯಸ್ಸು. ತುಮಕೂರಲ್ಲೇ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಅತ್ತಿಗೆಗೆ ಡೆಂಗ್ಯು ಬಂದು ಕೈ ಕಾಲು ಹಿಡ್ಕಂಡು ಬಿಟ್ಟಿದೆ. ಮನೇಲಿ ಕೆಲಸ ಮಾಡೋದಕ್ಕೆ ಯಾರೂ ಇಲ್ಲ ಅಂತ ತಾನೇ ಒಂದು ಕತೆ ಕಟ್ಟಿ, ಕೇಳಿದವರಿಗೆ ಕೇಳದವರಿಗೆಲ್ಲ ಹೇಳುತ್ತಾ ಬಂದ. ತಾನು ಹೇಳುತ್ತಿದ್ದದ್ದು ಸುಳ್ಳಾದ್ದರಿಂದ ಕೇಳಿದವರು ಅದನ್ನು ನಂಬಲಿ ಅಂತ ಕೊಂಚ ಹೆಚ್ಚಿಗೇ ಮಾತಾಡುತ್ತಿದ್ದ.

ಈ ಸುಳ್ಳನ್ನೇ ನಾಲ್ಕೈದು ದಿವಸ ಹೇಳಿದ ನಂತರ ಅದೇ ನಿಜವಿರಬಹುದೇನೋ ಅಂತ ಸುಧಾಕರನಿಗೇ ಅನ್ನಿಸತೊಡಗಿತು. ಒಂದಿಬ್ಬರು ಸಹಜವಾಗಿ, ನೀವು ಹೋಗಿಲ್ವಾ ನಿಮ್ಮ ಭಾವಯ್ಯನ ನೋಡೋದಕ್ಕೆ, ಈಗ ಹೇಗಿದ್ದಾರಂತೆ ಅಂತೆಲ್ಲ ಕೇಳಿ, ತಾನು ಹೇಳಿದ ಸುಳ್ಳಿಗೆ ಮತ್ತೊಂದಷ್ಟು ಅಯಾಮಗಳಿವೆ ಅನ್ನುವುದನ್ನು ಸೂಚಿಸಿದ್ದರು.

ಸುಧಾಕರನಿಗೆ ಸುಹಾಸಿನಿಯನ್ನು ಎಲ್ಲೆಲ್ಲ ಹುಡುಕಬೇಕು ಅನ್ನುವುದು ಥಟ್ಟನೆ ಹೊಳೆಯಲಿಲ್ಲ. ಅವಳು ಮಹಾನ್ ಸ್ವಾಭಿಮಾನಿ ಆಗಿದ್ದರಿಂದ ತನ್ನವರ ಮನೆಗೆ ಹೋಗಿರುವ ಸಾಧ್ಯತೆಯಿಲ್ಲ ಅಂತ ಸುಧಾಕರ ಅಂದುಕೊಂಡಿದ್ದ. ಆದರೂ ಪ್ರಯತ್ನಿಸಿಯೇ ಬಿಡೋಣ ಅಂದುಕೊಂಡು ಸುಹಾಸಿನಿಯ ಸಂಬಂಧಿಕರ ಮನೆಗಳಿಗೆಲ್ಲ ಫೋನ್ ಮಾಡಿ ಲೋಕಾಭಿರಾಮ ಮಾತಾಡಿದ. ಅವರಿಗೆಲ್ಲ ಸುಧಾಕರ ಯಾವತ್ತೂ ಫೋನ್ ಮಾಡಿರಲಿಲ್ಲ. ಎಲ್ಲೋ ಯಾವುದೋ ಮದುವೆಯಲ್ಲೋ ತಿಥಿಯಲ್ಲೋ ಸಿಕ್ಕಾಗ ಮಾತಾಡಿದ್ದು ಬಿಟ್ಟರೆ ಅವರ ಜೊತೆ ಜಾಸ್ತಿ ಬಳಕೆಯೂ ಇರಲಿಲ್ಲ. ಹೀಗಾಗಿ ಸುಧಾಕರ ಫೋನ್ ಮಾಡಿದಾಗ ಅವರಿಗೆ ಅಚ್ಚರಿಯೂ ಅನುಮಾನವೂ ಒಟ್ಟಿಗೆ ಹುಟ್ಟಿ, ಏನು ಮಾತಾಡಬೇಕೆಂದು ತಿಳಿಯದೇ, ಮಗ ಚೆನ್ನಾಗವ್ನಾ, ಸುಹಾಸಿನಿ ಚೆನ್ನಾಗವ್ಳಾ, ಎಷ್ಟನೇ ಕ್ಲಾಸು ಮಗಾ, ಮನೆ ಕಡಿಕ್ಕೆ ಯಾವತ್ತಾರೂ ಬರ್ರ್ರಲ ಅಂತೆಲ್ಲ ಸಪಾಟಾಗಿ ಮಾತಾಡುತ್ತಿದ್ದರು. ಅವರೇ ಮುಂದಾಗಿ ಸುಹಾಸಿನಿಯ ಬಗ್ಗೆ ವಿಚಾರಿಸಿದ ತಕ್ಷಣ ಸುಹಾಸಿನಿ ಅಲ್ಲಿಗೆ ಹೋಗಿಲ್ಲ ಅಂತ ಖಾತ್ರಿಯಾಗಿ ಸುಧಾಕರ ಮತ್ತೊಂದು ನಂಬರ್ ಒತ್ತಲು ಶುರುಮಾಡುತ್ತಿದ್ದ.

ಹೀಗೊಂದು ಸುತ್ತಿನ ಸಂಶೋಧನೆ ಮುಗಿಯುವ ಹೊತ್ತಿಗೆ ಸುಧಾಕರನಿಗೊಂದು ಪತ್ರ ಬಂತು. ಈ ಕಾಲದಲ್ಲೂ ಯಾರಪ್ಪ ಪತ್ರ ಬರೆಯೋರು ಅಂತ ಸುಧಾಕರ ಪತ್ರ ಒಡೆದು ಓದಿದರೆ, ಸುಹಾಸಿನಿ ನಾಲ್ಕೇ ಸಾಲು ಬರೆದಿದ್ದಳು:

ಅಲ್ಲಿ ಇರಕ್ಕಾಗ್ತಾ ಇಲ್ಲ. ನನ್ನ ಮಾತಿಗೆ ಅಲ್ಲಿ ಬೆಲೆ ಇಲ್ಲ. ನನ್ನ ಮಗನಿಗೆ ನನ್ನಿಷ್ಟದ ಹೆಸರಿಡಕ್ಕೆ ಆಗದೇ ಇದ್ದ ಮೇಲೆ ಅದು ನನ್ನ ಮನೆ ಅಂತ ಅನ್ನಿಸ್ತಿಲ್ಲ. ನನ್ನ ಹುಡುಕಬೇಡಿ. ನಿಮ್ಮ ಮಗ ನೀವು ಸುಖವಾಗಿರಿ. ಸುಹಾಸಿನಿ.

ಅದನ್ನು ಓದಿದ ನಂತರವೇ ಸುಧಾಕರ ಗಾಬರಿಯಾದದ್ದು. ಮಗನಿಗೆ ಅವಳು ಹೇಳಿದ ಹೆಸರಿಡಲಿಲ್ಲ ಅಂತ ಮನೆಬಿಟ್ಟು ಹೋಗ್ತಾಳಾ? ಅವಳಿಗೇನಾದ್ರೂ ಹುಚ್ಚುಗಿಚ್ಚು ಹಿಡೀತಾ? ಅಥವಾ ಬೇರೇನಾದರೂ ಕಾರಣ ಇರಬಹುದಾ? ಯಾರ ಮೇಲಾದ್ರೂ ಮನಸ್ಸು ಹುಟ್ಟಿ ಮನೆ ಬಿಟ್ಟಿರಬಹುದಾ? ಈಗ ತಾನೇನು ಮಾಡಬೇಕು? ಪೊಲೀಸರಿಗೆ ಹೇಳಬೇಕಾ? ಸುಹಾಸಿನಿಯ ಅಣ್ಣನಿಗೇನು ಹೇಳಬೇಕು? ಇದೇ ಕಾರಣಕ್ಕೆ ಅವಳು ಮನೆ ಬಿಟ್ಟು ಹೋದಳು ಅಂದರೆ ಯಾರಾದರೂ ನಂಬುತ್ತಾರಾ? ಬೇರೇನೋ ನಡೆದಿರಬೇಕು ಅಂತ ಅನುಮಾನಪಡಲಿಕ್ಕಿಲ್ಲವೇ?

ಅವಳು ಮಗನಿಗೆ ಹೆಸರಿಡುವುದನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ ಅಂತ ಗೊತ್ತಿದ್ದರೆ, ಅವಳು ಹೇಳಿದ ಸುಡುಗಾಡು ಹೆಸರನ್ನೇ ಇಟ್ಟು ಸಾಯಬಹುದಿತ್ತು ಅಂತ ಸುಧಾಕರ ಮನಸ್ಸಿಗೆ ಬೇಸರ ಮಾಡಿಕೊಂಡು, ಆಮೇಲಾದರೂ ತನಗೆ ಹೇಳಿದ್ದರೆ ಅಫಿಡವಿಟ್ ಕೊಟ್ಟಾದರೂ ಹೆಸರು ಬದಲಾಯಿಸಬಹುದಿತ್ತು, ಮನೆಬಿಟ್ಟು ಹೋಗಿ ರಗಳೆ ಮಾಡಿಬಿಟ್ಟಳು ಎಂದು ಬೈದುಕೊಂಡ.

ಸುಧಾಕರ ಇದನ್ನು ಯಾರಿಗೂ ಹೇಳಲಿಕ್ಕೆ ಹೋಗಲಿಲ್ಲ. ಆದರೆ ಹದಿನೈದೇ ದಿನಕ್ಕೆ ಈ ಸುದ್ದಿ ಊರುತುಂಬ ಹಬ್ಬಿ ಸುಧಾಕರನ ಅಕ್ಕತಂಗಿಯರಿಗೆಲ್ಲ ಗೊತ್ತಾಗಿ, ಅವರು ಮನೆಗೆ ಬಂದು ಸುಹಾಸಿನಿಯ ಜನ್ಮಜಾಲಾಡಿ, ಅನುಭವಿಸಿ ಸಾಯ್ತಾಳೆ ಬಿಡೋ, ಅಷ್ಟು ಅಹಂಕಾರ ಇರೋರು ಈ ಮನೇಲಿ ಇರಬಾರದು. ಬರೀ ಹೆಸರಿಗೋಸ್ಕರ ತಲೆ ನೆಟ್ಟಗಿರೋರು ಹೀಗೆಲ್ಲ ಆಡ್ತಾರಾ, ನಾವೆಲ್ಲ ನಮ್ ನಮ್ ಗಂಡಂದ್ರ ಮನೇಲಿ ಮುಚ್ಕೊಂಡು ಬಿದ್ದಿಲ್ವಾ, ಹೊಡೆದ್ರೂ ಬಡದ್ರೂ ಅಂದ್ರೂ ಸಹಿಸ್ಕೊಂಡಿಲ್ವಾ? ಏನೇ ಹೇಳು ಸುಧೀ, ನೀನು ಸದರ ಕೊಟ್ಟಿದ್ದು ಜಾಸ್ತಿಯಾಯ್ತು. ನಾಲ್ಕು ಬಿಗಿದು ಹದ್ದುಬಸ್ತಲ್ಲಿಟ್ಟುಕೊಂಡಿದ್ರೆ ಹೇಳಿದ ಹಾಗೆ ಕೇಳ್ಕೊಂಡು ಬಿದ್ದಿರೋಳು ಎಂದೆಲ್ಲ ಕೂಗಾಡಿ ಸುಹಾಸಿನಿಯ ಗಾಂಚಲಿತನವನ್ನೂ ಸುಧಾಕರನ ಹೆಬಗತನವನ್ನೂ ಆಡಿಕೊಂಡು ವಾಪಸ್ಸು ಹೋದರು.

ಅದಾದ ಮೇಲೆ ಸುಧಾಕರನಿಗೆ ಯಾಕೋ ಮನಸ್ಸು ಮುರಿದುಹೋಯಿತು.  ಸುಹಾಸಿನಿಯ ಅಣ್ಣ ಬಂದು ಎರಡು ದಿನ ಇದ್ದು ಸುಧಾಕರನಿಗೆ ಸಮಾಧಾನ ಮಾಡಿ ಹೋದ. ಸುಹಾಸಿನಿ ನಮ್ಮನೆಗೇನಾದ್ರೂ ಬಂದ್ರೆ ಕರಕೊಂಡು ಬರ್ತೀನಿ. ಅವಳು ಹಾಗೆ ಮಾಡಿದ್ದು ತಪ್ಪು. ನೀನೇನೂ ಮನಸ್ಸು ಕೆಡಿಸ್ಕೋಬೇಡ.  ಮತ್ತೊಂದು ಮದುವೆ ಆಗ್ತೀಯೇನು, ನಾನೇ ಹುಡುಗಿ ನೋಡ್ಲೇನು ಅಂತೆಲ್ಲ ಗೌರವದಿಂದಲೂ ಪ್ರೀತಿಯಿಂದಲೂ ಮಾತಾಡಿ ಹೋದಮೇಲೂ ಸುಧಾಕರನಿಗೆ ಉಲ್ಲಾಸ ಮೂಡಲಿಲ್ಲ.

-3-

ತನ್ನ ಅಮ್ಮ ತನ್ನನ್ನು ಬಿಟ್ಟುಹೋದ ಸುದ್ದಿ ರಂಗನಾಥನಿಗೆ ಗೊತ್ತಾದದ್ದು ನಾಲ್ಕೈದು ತಿಂಗಳ ನಂತರ. ಮನೆಯಲ್ಲಿ ಅಮ್ಮ ಕಾಣಿಸದೇ ಇದ್ದದ್ದು ನೋಡಿ ಅಪ್ಪನನ್ನು ಕೇಳಿದಾಗ ಸುಧಾಕರ ಮಗನ ಕೈಗೆ ಅಮ್ಮ ಬರೆದ ಪತ್ರ ಕೊಟ್ಟ ಅಲ್ಲಿಂದ ಎದ್ದು ಹೋಗಿಬಿಟ್ಟ.

ಸುಹಾಸಿನಿ ಮನೆ ಬಿಟ್ಟು ಹೋಗುವ ಹೊತ್ತಿಗೆ ರಂಗನಾಥ ಎಂಟನೇ ಕ್ಲಾಸು ಓದುತ್ತಿದ್ದ. ಮೂರು ವರ್ಷಗಳಿಂದ ಅವನಿಗೆ ಅಮ್ಮನಿಲ್ಲದೇ ಬದುಕುವುದು ಅಭ್ಯಾಸ ಆಗಿಬಿಟ್ಟಿತ್ತು. ಮೈಸೂರಿನಲ್ಲಿ ಅವನಿಗೆ ಅವನದೇ ವಯಸ್ಸಿನ ಗೆಳೆಯರು ಸಿಕ್ಕಿದ್ದರು. ಅಪ್ಪ ಓದು ಅಂತ ಕಾಟ ಕೊಡುತ್ತಿರಲಿಲ್ಲ. ಅಮ್ಮನೂ ಜಾಸ್ತಿ ಮಾತಾಡುತ್ತಿರಲಿಲ್ಲ. ರಜೆಯಲ್ಲಿ ಪಾಂಡವಪುರಕ್ಕೆ ಬಂದರೂ ರಂಗನಾಥ ಮನೆಯಲ್ಲೇನೂ ಇರುತ್ತಿರಲಿಲ್ಲ. ಪಾಂಡವಪುರದಲ್ಲಿ ಒಂದಲ್ಲೊಂದು ಶೂಟಿಂಗ್ ನಡೆಯುತ್ತಲೇ ಇರುತ್ತಿತ್ತು. ಅದನ್ನು ನೋಡುತ್ತಾ ಅವರ ತಂಡದೊಂದಿಗೆ ಸುತ್ತಾಡುತ್ತಾ, ಅವರು ಹೇಳಿದ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಾ ರಂಗನಾಥ ಸಂತೋಷವಾಗಿದ್ದ. ಹೀಗಾಗಿ ಅಮ್ಮ ಮನೆ ಬಿಟ್ಟು ಹೋದರು ಎಂಬ ಸುದ್ದಿ ಅವನನ್ನು ಅಷ್ಟೇನೂ ಕಾಡಲಿಲ್ಲ. ಅವನು ಅದಕ್ಕಿಂತ ಹೆಚ್ಚು ವಿಚಲಿತನಾದದ್ದು ಅಮ್ಮ ತನಗಿಟ್ಟ ಹೆಸರಿಗೋಸ್ಕರ ಮನೆಬಿಟ್ಟು ಹೋದರು ಎಂದ ಗೊತ್ತಾದ ನಂತರ. ಆ ಸತ್ಯವನ್ನು ಅರಗಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ.

ಕ್ರಮೇಣ ಅವನಿಗೂ ಅಪ್ಪನಿಗೂ ಇರುವ ಬಂಧವೂ ಸಡಿಲಾಗುತ್ತಾ ಹೋಯಿತು. ಸುಧಾಕರ ದುಡ್ಡು ಕಳುಹಿಸುತ್ತಿದ್ದ. ರಂಗನಾಥ ಓದುತ್ತಿದ್ದ. ಎಷ್ಟೋ ಸಲ ರಜೆ ಇದ್ದಾಗ ಮನೆಗೆ ಬರದೇ ಗೆಳೆಯರ ಜೊತೆ ಸುತ್ತಾಡುತ್ತಿದ್ದ. ಕ್ರಮೇಣ ಕುಡಿಯುವುದಕ್ಕೂ ಶುರುಮಾಡಿದ. ತನ್ನ ಸಂತೋಷವನ್ನು ಎಲ್ಲೆಲ್ಲೋ ಹುಡುಕುವುದಕ್ಕೆ ಯತ್ನಿಸುತ್ತಿದ್ದವನಂತೆ ಕಾಣಿಸುತ್ತಿದ್ದ. ತಾನೇನೋ ಕಳಕೊಂಡಿದ್ದೇನೆ ಅಂತಲೂ ಅವನಿಗೆ ಅನ್ನಿಸುತ್ತೆಂದು ತೋರುತ್ತದೆ. ಹೀಗಾಗಿ ಸುಮ್ಮಸುಮ್ಮನೆ ರೇಗುತ್ತಿದ್ದ. ರಂಗನಾಥ ಅಂತ ಯಾರಾದರೂ ಕರೆದರೆ ಅದು ತನ್ನ ಹೆಸರಲ್ಲೇವೇನೋ ಎಂಬಂತೆ ಪೆಚ್ಚಾಗಿ ನೋಡುತ್ತಾ ನಿಂತುಬಿಡುತ್ತಿದ್ದ. ಯಾರಾದರೂ ಹೆಸರು ಕೇಳಿದರೆ ತಡಬಡಾಯಿಸುತ್ತಿದ್ದ. ಯಾವುದಾದರೂ ಅರ್ಜಿತುಂಬಬೇಕಾಗಿ ಬಂದಾಗ ಹೆಸರು ಎಂದಿರುವ ಕಡೆಯಲ್ಲಿ ಬರೆದು ಹೊಡೆದು ಚಿತ್ತುಮಾಡಿ ಎಲ್ಲರಿಗೂ ಅನುಮಾನ ಬರುವಂತೆ ಮಾಡುತ್ತಿದ್ದ.

ಇದು ಅತಿರೇಕಕ್ಕೆ ಹೋದದ್ದು ಅವನು ಬೆಂಗಳೂರಿಗೆ ಬಂದಾಗ. ಒಂದು ರಾತ್ರಿ ಕುಡಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವನನ್ನು ಪೊಲೀಸೊಬ್ಬ ಹಿಡಿದು ನಿಲ್ಲಿಸಿ, ಯಾರು ನೀನು, ಇಷ್ಟೊತ್ತಲ್ಲಿ ಏನ್ ಮಾಡ್ತಿದ್ದೀಯ ಎಂದೆಲ್ಲ ವಿಚಾರಿಸುತ್ತಾ, ನಿನ್ನ ಹೆಸರೇನು ಅಂತ ಕೇಳಿದ. ರಂಗನಾಥ ತನ್ನ ಹೆಸರೇನು ಅಂತ ಯೋಚಿಸುತ್ತಾ ತುಂಬ ಹೊತ್ತು ಹಾಗೆಯೇ ನಿಂತಿದ್ದ. ಪೊಲೀಸು ಜೋರಾಗಿ ಗದರಿ ಕೇಳಿದಾಗ ರ…ರ…ರಂಗನಾಥ ಅಂದ. ಪೊಲೀಸನಿಗೆ ಅದೇನು ಅನುಮಾನ ಬಂತೋ ಏನೋ? ಅವನು ತಡಬಡಾಯಿಸಿ ಉತ್ತರ ಹೇಳಿದ್ದರಿಂದ ಅದು ಸುಳ್ಳು ಹೆಸರೇ ಇರಬೇಕೆಂದುಕೊಂಡು ಜೀಪಿಗೆ ದಬ್ಬಿ ಪೊಲೀಸ್ ಸ್ಟೇಷನ್ನಿಗೆ ಒಯ್ದ. ಆಗಷ್ಟೇ ಮದುವೆಯಾದ ಕಾನ್‌ಸ್ಟೇಬಲ್ ಒಬ್ಬ ರಾತ್ರಿಯಿಡೀ ಪೊಲೀಸ್ ಸ್ಟೇಷನ್ನಿನಲ್ಲೇ ಉಳಿಯಬೇಕಾದ ಕರ್ಮಕ್ಕೆ ಸರ್ವದೇವರನ್ನು ಶಪಿಸುತ್ತಾ ಕೂತಿದ್ದವನು, ರಂಗನಾಥನ ಕೇಸು ಕೈಗೆ ಸಿಗುತ್ತಲೇ ಅವನನ್ನು ಹಿಗ್ಗಾಮಗ್ಗಾ ಜಪ್ಪಿ ತನ್ನ ನಿಷ್ಕರ್ಮ ಕಾಮದ ಬರಪೀಡಿತ ದುರ್ದೈವದ ಮೇಲೆ ಸೇಡುತೀರಿಸಿಕೊಂಡ.

ಅವನ ಪೆಟ್ಟಿನ ಬಿರುಸು, ಬೈಗುಳ ಮಳೆ ಮತ್ತು ರೋಷತಪ್ತ ಹೂಂಕಾರಗಳ ಕ್ರೌರ್ಯಕ್ಕೆ ಕೊನೆಗೂ ಬಸವಳಿದು ಪ್ರಜ್ಞೆ ತಪ್ಪುವಂತಾದ ರಂಗನಾಥನ ಮುಖಕ್ಕೆ ಒಂದು ಚೊಂಬು ತಣ್ಣೀರು ಎರೆಚಿ, ಬೊಗಳೋ ಏನು ನಿನ್ನ ಹೆಸರು ಅಂತ ಕಾನ್‌ಸ್ಟೇಬಲ್ ಮತ್ತೊಮ್ಮೆ ಕೇಳಿದ.

ರಕ್ತಒಸರುತ್ತಿದ್ದ ತುಟಿಯನ್ನು ಅಲುಗಾಡಿಸಲಿಕ್ಕೂ ಆಗದೇ ರಂಗನಾಥ ಮೆಲುದನಿಯಲ್ಲಿ ‘ಅಮರ್ತ್ಯ’ ಅಂದ.

 

‍ಲೇಖಕರು avadhi

September 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: