ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ

ವಿಜಾಪುರ ಸಮ್ಮೇಳನದ ಸಿಂಹಾವಲೋಕನ

ಮುಂದಿನ ಬಾರಿ ಅರ್ಥಪೂರ್ಣ ಸಾಹಿತ್ಯ ಸಮ್ಮೇಳನ

ಜೋಗಿ

1923ರಲ್ಲಿ ಸಿದ್ಧಾಂತ ಶಿವಶಂಕರ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪೂ ಇಲ್ಲದ ವಿಜಾಪುರದಲ್ಲಿ, 2013ರ ಸಾಹಿತ್ಯ ಸಮ್ಮೇಳನ ಮುಗಿದಿದೆ. ಒಂಬತ್ತು ಅನುಷ್ಠಾನಗೊಳ್ಳಬಹುದಾದ ನಿರ್ಣಯಗಳು ಮತ್ತು ಮುಂದಿನ ಸಮ್ಮೇಳನ ಕೊಡಗಿನಲ್ಲಿ ಎಂಬ ಖಚಿತ ತೀರ್ಮಾನದೊಂದಿಗೆ ಸಾಹಿತ್ಯಾಸಕ್ತರ ದಂಡು ವಿಜಾಪುರ ಬಿಟ್ಟಿದೆ.
ಹಲವು ಕಾರಣಗಳಿಗೆ ಈ ಸಮ್ಮೇಳನ ವಿಶಿಷ್ಟವಾಗಿತ್ತು ಅನ್ನುವ ಮಾತನ್ನು ವಿಜಾಪುರದ ಮಂದಿ ಹೇಳುತ್ತಾರೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಕಣ್ಣಾರೆ ನೋಡುವುದಕ್ಕೆ ಅವಕಾಶ ಮಾಡಿಕೊಟ್ಟ ಸಮ್ಮೇಳನ ಇದು ಎಂದು ವಿಜಾಪುರದ ಆಸುಪಾಸಿನ ಹಳ್ಳಿಗಳಿಂದ ಬಂದ ರೈತಾಪಿ ಜನರ ಅಭಿಪ್ರಾಯ. ಟೀವಿ ಕೂಡ ಇಲ್ಲದ, ಪತ್ರಿಕೆ ಕೂಡ ಓದದ ಅಸಂಖ್ಯಾತ ಬಡವರು. ರಾಜ್ಯದ ಮುಖ್ಯಮಂತ್ರಿ ಯಾರೆಂದು ಗೊತ್ತಿಲ್ಲದ ಅನಕ್ಷರಸ್ತರೆಲ್ಲ ಸಮ್ಮೇಳನದ ಅಂಗಳದಲ್ಲಿ ಸೇರಿದ್ದರು. ಸಾಹಿತಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಬಟ್ಟೆ ವ್ಯಾಪಾರಿಗಳು, ಚೈನಾ ಮಾಲುಗಳನ್ನು ಮಾರುವವರು ಸಮ್ಮೇಳನದ ಸುತ್ತ ಅಂಗಡಿ ಇಟ್ಟುಕೊಂಡು ಅಕ್ಷರಪ್ರೇಮಿಗಳಿಗೆ ಕನಸುಗಳನ್ನು ಮಾರಿದರು. ಅತೀ ಹೆಚ್ಚು ಮಾರಾಟವಾಗಿದ್ದು ಪುಸ್ತಕಗಳಲ್ಲ, ಸಾವಿರ ರುಪಾಯಿಗೆ ಸಿಮ್ ಕಾರ್ಡಿನ ಜೊತೆಗೆ ಕೊಟ್ಟ ಚೈನಾ ಮೇಡ್ ಮೊಬೈಲು ಅನ್ನುವುದು ಇತ್ತೀಚೆಗೆ ಬಂದ ಸುದ್ದಿ.

ಸಾಹಿತ್ಯ ಸಮ್ಮೇಳನ ಜಾತ್ರೆ ಅನ್ನುವುದನ್ನು ಒಪ್ಪುವುದಾದರೆ, ಜಾತ್ರೆ ಯಶಸ್ವಿಯಾಗಿದೆ. ಉಂಡ ಮನೆಗೆ ಎರಡು ಬಗೆಯದ ಮಂದಿಗೆ ಊಟ ಸಿಕ್ಕಿಲ್ಲ ಅನ್ನುವುದಕ್ಕೆ ತಕ್ಷಣ ಸೂಚಿತವಾದ ಪರಿಹಾರ ಎಂದರೆ ಮುಂದಿನ ವರುಷದಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ರದ್ದು ಮಾಡಬೇಕು ಎನ್ನುವ ಸಲಹೆ. ಕೊಡಲು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಅದು ತಮ್ಮ ನೆಲದ ಔದಾರ್ಯ ಮತ್ತು ಹೆಮ್ಮೆಯ ಪ್ರಶ್ನೆಯೂ ಆಗಿರುವುದರಿಂದ ಊಟ ಮುಂದುವರಿಯುವ ಸಾಧ್ಯತೆಗಳೇ ಹೆಚ್ಚಾಗಿವೆ.
ವಿಜಾಪುರದಲ್ಲಿ ಪುಸ್ತಕದ ಅಂಗಡಿಗಳೇ ಇಲ್ಲದ ಕಾರಣ, ಪುಸ್ತಕ ಮಾರಾಟ ಭರ್ಜರಿಯಾಗಿತ್ತು. ಸುಮಾರು ಮೂವತ್ತು ಲಕ್ಷ ವ್ಯಾಪಾರ ಕಂಡಿದೆ ಅನ್ನುವುದು ಪುಸ್ತಕ ವ್ಯಾಪಾರಿಗಳ ಲೆಕ್ಕಾಚಾರ. ಅವುಗಳಲ್ಲಿ ಅತಿ ಹೆಚ್ಚು ಮಾರಾಟವಾದದ್ದು, ಬದುಕಲು ಕಲಿಸುವ ಪುಸ್ತಕಗಳು, ಅಡುಗೆ ಪುಸ್ತಕಗಳು ಮತ್ತು ದೇಶಪ್ರೇಮದ ಪುಸ್ತಕಗಳು. ಅರ್ಥಪೂರ್ಣ ಕತೆ, ಕವಿತೆಗಳನ್ನು ತಂದಿದ್ದ ಬಳ್ಳಾರಿಯ ಚನ್ನಬಸಣ್ಣ, `ನಾನು ಬಂದಿದ್ದು ಎಲ್ಲಾ ಗೆಳೆಯರು ಸಿಗುತ್ತಾರೆ ಎಂಬ ಕಾರಣಕ್ಕೆ. ಪುಸ್ತಕ ವ್ಯಾಪಾರ ಪರವಾಗಿಲ್ಲ’ ಅಂತ ಕೊನೆಗೂ ಉಳಿಯುವ ಶಾಶ್ವತ ಸಾಹಿತ್ಯವಾದ ಕವಿತೆಗಳ ಬಗ್ಗೆ ತಮ್ಮ ಪ್ರೀತಿ ಬಿಟ್ಟುಕೊಡದೇ ಮಾತಾಡಿದರು.
ಗೋಷ್ಠಿಗಳಲ್ಲಿ ಜನ ಕಿಕ್ಕಿರಿದು ನೆರೆದದ್ದು, ಭಾಷಣಕಾರರನ್ನು ಉತ್ತೇಜಿತರನ್ನಾಗಿಸಿತು. ಹೀಗಾಗಿ ಆಕ್ರೋಶದ, ಆವೇಶದ, ಏರು ಧ್ವನಿಯ ಭಾಷಣಗಳು ಕೇಳಿ ಬಂದವು. ರಾಜಕೀಯ ನಾಯಕರನ್ನು ಮತ್ತು ಭ್ರಷ್ಟಾಚಾರವನ್ನು ಬೈಯುವುದು ಸಮ್ಮೇಳನದ ಅಜೆಂಡಾ ಆಗಿಬಿಟ್ಟಿತ್ತು. ಲೇಖಕ ಸಿದ್ಧರಾಮ ಉಪ್ಪಿನ ಈ ಸಮ್ಮೇಳನ ಸಾಹಿತಿಗಳ ಸಮ್ಮೇಳನ ಅಲ್ಲ, ಇಲ್ಲಿ ಸಾಹಿತಿಗಳನ್ನು ಭಿಕ್ಷುಕರಂತೆ, ಕೈದಿಗಳಂತೆ ನೋಡಲಾಗುತ್ತಿದೆ. ಇಲ್ಲಿ ಆತ್ಮಗೌರವವೇ ಇಲ್ಲ ಎಂದು ಚೀಟಿ ಬರೆದು ಅದನ್ನು ಎಲ್ಲ ಮಿತ್ರರಿಗೂ ಹಂಚುತ್ತಾ, ಪರ್ಯಾಯ ಚಳವಳಿಯನ್ನೇ ಆರಂಭಿಸಿದ್ದರು.
ಗೋಷ್ಠಿಗಳಲ್ಲಿ ಭಾಗವಹಿಸಿದ ಬಹುತೇಕ ಭಾಷಣಕಾರರು ಕನ್ನಡದಲ್ಲೇ ಮಾತಾಡಿದ್ದು ಈ ಸಲದ ವಿಶೇಷ. ವಿಮರ್ಶೆಯ ಪಾರಿಭಾಷಿಕ ಪದಗಳನ್ನು ಯಾರೂ ಬಳಸುವುದಕ್ಕೆ ಹೋಗಲಿಲ್ಲ. ಕೆಲವು ಗೋಷ್ಠಿಗಳನ್ನು ಹಾಸ್ಯಮೇಳದಂತೆ, ಮತ್ತೆ ಕೆಲವು ಗೋಷ್ಠಿಗಳನ್ನು ರಾಜಕೀಯ ಸಭೆಯಂತೆ, ಇನ್ನು ಕೆಲವನ್ನು ಕೃಷಿ ಇಲಾಖೆಯ ಮಾಹಿತಿ ನೀಡುವ ಕಾರ್ಯಕ್ರಮದಂತೆ ಮಂದಿ ಕೇಳಿಸಿಕೊಂಡರು.
ನಿಜಕ್ಕೂ ಸಾಹಿತ್ಯ ಸಮ್ಮೇಳನದ ರೂಪುರೇಷೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂಬ ಎಚ್ಚರವನ್ನು ಎಲ್ಲರಲ್ಲೂ ಮೂಡಿಸಿದವರು ಸಂಶೋಧಕ ಎಂ ಎಂ ಕಲಬುರ್ಗಿಯವರು. ಅವರು ಅತ್ಯುತ್ಸಾಹದಿಂದ ಮಾತಾಡುತ್ತಾ, ಏನೇನು ಸುಧಾರಣೆಗಳನ್ನು ಮಾಡಬಹುದು ಅನ್ನುವುದನ್ನು ಪರಿಷತ್ತಿನ ಗಣ್ಯರ ಜೊತೆ ಚರ್ಚಿಸುತ್ತಾ, ಮುಂದಿನ ಸಮ್ಮೇಳನದಲ್ಲಿ ಅವನು ಜಾರಿಗೆ ತರುವ ಚಿಂತನೆಯಲ್ಲಿದ್ದರು. ಈ ನಿಟ್ಟಿನಲ್ಲಿ ಕೊಡಗಿನ ಸಮ್ಮೇಳನ ಹೊಸ ದಿಕ್ಕಿನ ಚಿಂತನೆಗೆ ದಾರಿಮಾಡಿಕೊಡಲಿದೆ ಅನ್ನುವ ಭರವಸೆಯನ್ನಂತೂ ವಿಜಾಪುರ ಸಮ್ಮೇಳನ ಹುಟ್ಟಿಸಿದೆ.
ಸಮ್ಮೇಳನಾಧ್ಯಕ್ಷರು ಜ್ಞಾನವೃದ್ಧರೂ ವಯೋವೃದ್ಧರೂ ಆಗಿದ್ದಾಗ ಆಗಬಹುದಾದ ತೊಂದರೆಗಳನ್ನೂ ಸಮ್ಮೇಳನ ಕಣ್ಣಾರೆ ಕಂಡಿತು. ಕೋಚೆಯವರು ವೇದಿಕೆಯ ಮೇಲೆ ಹೆಚ್ಚು ಸಮಯ ಕಳೆಯಲು ಅವರ ಆರೋಗ್ಯ ಅವಕಾಶ ಮಾಡಿಕೊಡಲಿಲ್ಲ. ಅವರ ಜೊತೆಗಿನ ಸಂವಾದವೂ ಅದೇ ಕಾರಣಕ್ಕೆ ಕಳೆಕಟ್ಟಲಿಲ್ಲ. ಗಂಗಾವತಿ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಿ. ಪಿ.ಕೃಷ್ಣಕುಮಾರ್ ಸಮ್ಮೇಳನಕ್ಕೆ ಬಂದರೋ ಇಲ್ಲವೋ ಅನ್ನುವುದೂ ಗೊತ್ತಾಗದಷ್ಟು, ಅವರು ಹಿನ್ನೆಲೆಗೆ ಸರಿದಿದ್ದರು. ಈ ಎಲ್ಲವನ್ನೂ ಸರಿದೂಗಿಸಿಕೊಂಡು ಅತ್ಯುತ್ಸಾಹದಿಂದ ಭಾಗವಹಿಸಿದವರು ಪುಂಡಲೀಕ ಹಾಲಂಬಿ. ಯಡಿಯೂರಪ್ಪನವರು ಮಾಡಬೇಕಾದ ಸನ್ಮಾನವನ್ನೂ ಅವರೇ ಮಾಡಿ, ಅವಕಾಶ ಸಿಕ್ಕಲ್ಲೆಲ್ಲ ಭಾಷಣ ಮಾಡಿ ಸಾಹಿತ್ಯಾಸಕ್ತರಲ್ಲಿ ಉತ್ಸಾಹ ತುಂಬುವುದಕ್ಕೆ ಅವರು ಯತ್ನಿಸುತ್ತಿದ್ದರು.
ಗೋಷ್ಠಿಗಳಲ್ಲಿ ಭಾಗವಹಿಸಿದ ಸಾಹಿತಿಗಳನ್ನು ಬಿಟ್ಟರೆ, ಮತ್ಯಾರೂ ಸಮ್ಮೇಳನದ ಕಡೆಗೆ ಸುಳಿಯುವುದಿಲ್ಲ ಅನ್ನುವ ಭವ್ಯ ಸಾಹಿತ್ಯ ಪರಂಪರೆ ಈ ವರ್ಷವೂ ಮುಂದುವರಿಯಿತು. ಗೋಷ್ಠಿಗಳಲ್ಲಿ ಭಾಗವಹಿಸಿದವರು ಕೂಡ, ಮುಂದಿನ ಗೋಷ್ಠಿಯ ತನಕ ನಿಲ್ಲುವ ವ್ಯವಧಾನದಲ್ಲಿ ಇರಲಿಲ್ಲ. ವಿಜಾಪುರದ ಸೆಕೆ, ಜನರ ನೂಕುನುಗ್ಗಲು, ಓಓಡಿ ಬೇಡುವವರ ಕೂಗಾಟ, ಇದ್ದಕ್ಕಿದ್ದಂತೆ ಕೇಳಿಬರುತ್ತಿದ್ದ ಧಿಕ್ಕಾರ, ಇದ್ದಕ್ಕಿದ್ದ ಹಾಗೆ ಸಿಟ್ಟಿಗೆದ್ದು ಆರ್ಭಟಿಸುತ್ತಿದ್ದ ಗುಂಪುಗಳು ಯಾರ ಮಾತು ಯಾರಿಗೂ ಕೇಳಿಸದಂತೆ ಮಾಡಿದ್ದವು. ಪೊಲೀಸರಂತೂ ಸಾಹಿತಿಗಳನ್ನು ನಿಭಾಯಿಸುವುದು ಜಗತ್ತಿನ ಅತ್ಯಂತ ಕಷ್ಟದ ಕೆಲಸ ಎಂಬ ತೀರ್ಮಾನಕ್ಕೆ ಬರುವಷ್ಟರ ಮಟ್ಟಿಗೆ, ಪ್ರತಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪ್ರತಿಭಟನಾಕಾರರು ರಣೋತ್ಸಾಹದಿಂದ ಮುನ್ನುಗ್ಗುತ್ತಿದ್ದರು.
ಸಮ್ಮೇಳನವನ್ನು ಯಶಸ್ವಿಯಾಗಿಸಿದ್ದು ಜನಸಮೂಹ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರದೀಪ್ ಕುಮಾರ್ ಕಲ್ಕೂರರು ಹೇಳಿದಂತೆ, ನಾವು ಎಲ್ಲವನ್ನೂ ಚೆಂದವಾಗಿ ಮಾಡಬಲ್ಲೆವು. ಆದರೆ ಜನ ಬರುವಂತೆ ಮಾಡುವುದು ನಮ್ಮ ಕೈಲಿಲ್ಲ. ವಿಜಾಪುರದಲ್ಲಿ ಜನ ಬಂದೇ ಬಂದರು. ಮಿಕ್ಕಿದ್ದು ಹೇಗಾಗಬೇಕೋ ಹಾಗೇ ಆಯಿತು.

‍ಲೇಖಕರು G

13 February, 2013

3 Comments

  1. Kiran

    Ironically realistic! Am I sensing some cynicism here?

  2. R.RAJU

    ತುಂಬಾ ನೀರಸ ಪ್ರತಿಕ್ರಿಯೆ, ಸಂಮ್ಮೇಳನವನ್ನು ಲೇವಡಿ ಮಾಡಲೆಂದೇ ಬರೆದ ಲೇಖನ

  3. srinivas deshpande

    sammelanavannu bari jaathreya mattakke tandu nillisuvalli saahithigala paalu apaar.Ondede Dhaarawad saahithya sambhramada so called buddhijeevigala aakrandana. illi mobile maaratada santhe. Jai kannadambe!.
    Yaako Tejaswiyavaru tumba nenapaagutthiddare.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading