ನಮ್ಮೂರ ಬಂಡಿಯಲಿ ನಿಮ್ಮೂರ ಬಿಟ್ಟಾಗ….
– ಜೋಗಿ
ಉಪ್ಪಿನಂಗಡಿಯನ್ನು ಮುಂದಿಟ್ಟುಕೊಂಡು ಹೊರಟವನಿಗೆ ನೂರೆಂಟು ಪ್ರಶ್ನೆಗಳು. ಒಂದೇ ಹಿಡಿತಕ್ಕೆ ಕೈಗೆ ಸಿಗುವ ಊರಲ್ಲ ಅದು. ಹಾಗೆ ನೋಡಿದರೆ ಯಾವ ಊರೂ ಯಾವ ಕೇರಿಯೂ ನಮಗೆ ಪೂರ್ತಿಯಾಗಿ ದಕ್ಕಿರುವುದಿಲ್ಲ. ಮೊನ್ನೆ ದಾವಣಗೆರೆಗೆ ಹೋದಾಗ ಅಲ್ಲಿರುವ ಒಳ್ಳೆಯ ಬೆಣ್ಣೆ ಮಸಾಲೆ ಹೊಟೆಲು ಯಾವುದೆಂದು ಅದೇ ಊರಲ್ಲಿ ಹುಟ್ಟಿ ಬೆಳೆದವರನ್ನು ಕೇಳಿದೆ. ಅಲ್ಲಿ ಯಾರಿಗೂ ಗೊತ್ತಿರಲಿಲ್ಲ. ಯಾವುದೇ ಇದೆಯಂತೆ ಅಂತ ಹಾರಿಕೆಯ ಉತ್ತರ ಕೊಟ್ಟರು.
ಉಪ್ಪಿನಂಗಡಿಯಲ್ಲೊಂದು ಖಾಲಿದೋಸೆ ಹೊಟೆಲಿದೆ. ತುಂಬ ಚೆನ್ನಾಗಿದೆ ಅಂತ ನನಗೆ ಹೇಳಿದವರು ಸೂರಿ. ಅವರು ಯಾವತ್ತೋ ಅಲ್ಲಿ ದೋಸೆ ತಿಂದು ಮೆಚ್ಚಿಕೊಂಡಿದ್ದರು. ಉಪ್ಪಿನಂಗಡಿಯಲ್ಲಿ ಲಕ್ಷ್ಮೀನಿವಾಸ ಅನ್ನೋ ಹೊಟೇಲು ಈಗಲೂ ಇದೆಯಾ ಅಂತ ಇತ್ತೀಚೆಗೆ ಅಲ್ಲಿಗೆ ಹೋದಾಗ ಕೇಳಿದ್ದರು. ಅಲ್ಲೇ ಬೆಳೆದ ನಮಗೆ ಹೊಟೇಲಿಗೆ ಹೋಗುವ ಅಭ್ಯಾಸ ಇರಲಿಲ್ಲ. ಮನೆಯಲ್ಲಿ ದಿನವೂ ದೋಸೆ ಮಾಡುತ್ತಿದ್ದುದರಿಂದ ಹೊಟೆಲಲ್ಲಿ ದೋಸೆ ತಿನ್ನುವ ಪ್ರಸಂಗವೂ ಬರುತ್ತಿರಲಿಲ್ಲ. ಕಾಲಾಂತರದಲ್ಲಿ ಅದೆಲ್ಲ ಬದಲಾಗಿದೆ. ಆದಿತ್ಯ ಎಂಬ ಹೊಸ ಹೋಟೆಲು ಶುರುವಾಗಿ, ಅಲ್ಲಿಗೆ ಊರ ಮಂದಿಯೂ ಬರೋದಕ್ಕೆ ಶುರು ಮಾಡಿದ್ದಾರೆ.
ಊರಿನ ಬಗ್ಗೆ ಅತ್ಯದ್ಭುತವಾಗಿ ಬರೆದವರು ಗೊರೂರು. ಕೋಟೆಯ ಬಗ್ಗೆ ಹೇಗೆ ತರಾಸು ಬರೆದು ಕೋಟೆಯನ್ನು ಮತ್ತೊಮ್ಮೆ ಕಟ್ಟಿದರೋ ಹಾಗೆ ಗೊರೂರು ರಾಮಸ್ವಾಮಿ ಅಯ್ಯಂಗಾರರು ಕೂಡ ಊರನ್ನು ಮತ್ತೆ ಕಟ್ಟಿದವರು. ಅದೇ ಥರ ಹನೇಹಳ್ಳಿಯನ್ನು ಕಟ್ಟಿಕೊಟ್ಟವರು ಚಿತ್ತಾಲರು. ದೂರ್ವಾಸಪುರ ಕಲ್ಪನೆಯ ಊರು ಅಲ್ಲ, ಅಂಥದ್ದೊಂದು ಊರು ನಮ್ಮೂರಿನ ಪಕ್ಕದಲ್ಲೇ ಇದೆ ಅಂತ ತೀರ್ಥಹಳ್ಳಿಯವರೊಬ್ಬರು ತಿದ್ದಿದ್ದರು.
ಹೀಗೆ ಅವರವರ ಅಗತ್ಯಗಳಿಗೆ ತಕ್ಕಂತೆ, ಆಸಕ್ತಿಗಳಿಗೆ ತಕ್ಕಂತೆ ಆಯಾ ಊರು ಪರಿಚಿತವಾಗುತ್ತಾ ಹೋಗುತ್ತದೆ. ನಮ್ಮೂರಲ್ಲಿ ನಾವು ಅಷ್ಟಾಗಿ ಕಣ್ಣು ಹಾಯಿಸಿರುವುದಿಲ್ಲ. ಹೊರಗಿನಿಂದ ಬಂದವರು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋಗುತ್ತಾರೆ. ಒಂದು ಊರಿನ ಚರಿತ್ರೆಯನ್ನು ಇತಿಹಾಸಕಾರರು ಬರೆಯುವಂತೆ, ಆ ಊರಿನ ಐತಿಹ್ಯಗಳ ಕುರಿತು ಹೊರಗಿನಿಂದ ಬಂದವರು ಬರೆದರೆ ಅದರ ಮಜವೇ ಬೇರೆ. ಮಾರ್ಕ್ ಟುಲಿ ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯಾ ಬರೆದಾಗ ಭಾರತ ಹೀಗಿದೆಯಾ ಅನ್ನಿಸಿತ್ತು. ಅವನಿಗೆ ಕಂಡದ್ದು ನಮಗೇಕೆ ಕಾಣುವುದಿಲ್ಲ ಎಂದು ಅಚ್ಚರಿಯಾಗಿತ್ತು.
ಉಪ್ಪಿನಂಗಡಿಯನ್ನು ಹೇಗೆ ಹಿಡಿಯಬೇಕು ಅಂತ ಹೊರಟವನಿಗೆ ಒಂದಷ್ಟು ಪೂರಕ ಮಾಹಿತಿ ಕೊಟ್ಟವನು ಗೆಳೆಯ ಗೋಪಿ. ಅವನ ಪ್ರಕಾರ ಊರಿನಲ್ಲೊಂದು ವಾರ ಸುತ್ತು ಹಾಕದೇ ಬರೆಯುವುದು ಸರಿಯಲ್ಲ. ಆಗಿಂದೀಗ ಆದ ಬದಲಾವಣೆಗಳನ್ನು ನೋಡಿಕೊಳ್ಳುವುದು ಒಳ್ಳೆಯದೇ. ಆದರೆ ನನ್ನ ಉದ್ದೇಶ ಉಪ್ಪಿನಂಗಡಿಯನ್ನು ಕಟ್ಟಿಕೊಡುವುದೋ, ಅಂಥ ಅಸಂಖ್ಯಾತ ಹಳ್ಳಿಗಳನ್ನು ಪ್ರತಿನಿಧಿಸುವುದೋ ಅನ್ನುವುದನ್ನು ನಾನೇ ಸ್ಪಷ್ಪಪಡಿಸಿಕೊಳ್ಳಬೇಕಿದೆ.
ಅದೇ ಕಾರಣಕ್ಕೆ ನನ್ನ ಮೆಚ್ಚಿನ ಲೇಖಕರಾದ ಅರ್ಚಕ ಬಿ. ರಂಗಸ್ವಾಮಿ ಅವರ ಬಂಡಿಹೊಳೆಯ ಕುರಿತ ಪುಸ್ತಕ ಓದುತ್ತಾ ಕೂತೆ. ಅವರು ಬರೆಯುತ್ತಾರೆ:
‘ಬಂಡಿಹೊಳೆಯು ಸಣ್ಣ ಹಳ್ಳಿ; ನೂರೈವತ್ತೆರಡು ಮನೆಗಳು ಇರುತ್ತವೆ. ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬೈನೂರು. ಪೂರ್ವದಿಕ್ಕಿಗೆ ಬೆಟ್ಟದ ಸಾಲು. ಉಳಿದ ದಿಕ್ಕುಗಳಲ್ಲಿ ಹೇಮಾವತಿ ನದಿ ಈ ಊರಿನ ಎಲ್ಲೆಯೆಂದು ಹೇಳಬಹುದು. ಊರಿನ ಸುತ್ತಲೂ ಪೈರುಪಚ್ಚೆಗಳಿಂದ ತುಂಬಿದ ಹೊಲಗದ್ದೆಗಳೂ ಹಸುರು ಹುಲ್ಲಿನ ಗೋಮಾಳಗಳೂ ಪ್ರಕೃತಿಯ ದಿನಕ್ಕೊಂದು ವಿಧವಾದ ಸೊಬಗಿನ ನೋಟವೂ ನಮ್ಮೂರಿನ ಕಳೆಯನ್ನು ಹೆಚ್ಚಿಸಿದ್ದವು. ಊರಿನ ಸುತ್ತಲೂ ಕಳ್ಳಿಬೂತಾಳೆಗಳ ಬಲವಾದ ಬೇಲಿಗಳಿದ್ದವು. ಇತ್ತೀಚೆಗೆ ಅದು ಕಮ್ಮಿಯಾಗುತ್ತಿದೆ. ಹೊರ ಊರುಗಳಿಂದ ಬರುವ ದಾರಿಗಳಲ್ಲಿ ಹೇಮಗಿರಿಯಿಂದ ಬರುವ ದಾರಿಯೇ ಸ್ವಲ್ಪ ಸುಮಾರಾಗಿತ್ತು. ಇದೇ ಹೆದ್ದಾರಿ. ಈ ಮಾರ್ಗವಾಗಿ ಬರುವಾಗ ಬಲಗಡೆ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನವು ಸಿಕ್ಕುವುದು. ಇದನ್ನು ಕಟ್ಟಿ ನೂರಾರು ವರ್ಷಗಳಾದವು. ಆಳಿದ ಮಹಾಸ್ವಾಮಿಯವರರಾದ ಮುಮ್ಮಡಿ ಕೃಷ್ಣರಾಜ ಒಡೆಯರವರ ತಾಯಿಯವರಾದ ಮಾತೃಶ್ರೀ ದೇವರಾಜಮ್ಮಣ್ಣಿಯವರು ಈ ದೇವಸ್ಥಾನವನ್ನು ಕಟ್ಟಿಸಿ ಇದರ ಸೇವೆಗಾಗಿ ವೃತ್ತಿಗಳನ್ನು ಬಿಟ್ಟಿರುವರು. ಈ ಪುಣ್ಯಾತ್ಮರ ವಿಗ್ರಹವೂ ಅವರ ಜ್ಞಾಪಕಾರ್ಥವಾಗಿ ಇದೇ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವುದು.
ಊರಿನ ದಕ್ಪಿಣ ಭಾಗದಲ್ಲಿ ಸ್ವಲ್ಪ ದೂರವಾಗಿ ಏಳೂರಮ್ಮನ ತೋಪು ಮತ್ತು ಗುಡಿಗಳಿವೆ. ಪೂರ್ವಕಾಲದಲ್ಲಿ ಇಲ್ಲಿಗೆ ಸುತ್ತುಮುತ್ತಲಿನ ಏಳೂರು ಶಿಡಿ ತೇರುಗಳು ಬಂದು ದೊಡ್ಡ ಜಾತ್ರೆಯಾಗಿ ಕುಸ್ತಿ ದೊಂಬರಾಟ ಎಲ್ಲ ಆಗುತ್ತಿದ್ದವಂತೆ. ಈಗ ಏನೂ ಇಲ್ಲ. ಗುಡಿಯ ಮುಂದೆ ಏಳು ಕಲ್ಲುಗಳಿವೆ. ಒಳಗೆ ಏಳು ದೇವರುಗಳಿವೆ. ನಮ್ಮೂರಿನಲ್ಲಿ ಐದಾರು ಮನೆಗಳು ಬ್ರಾಹ್ಮಣರದು. ಉಳಿದದ್ದೆಲ್ಲಾ ಒಕ್ಕಲು ಮಕ್ಕಳದು. ಬಡಗಿಗಳು ಅಕ್ಕಸಾಲಿಗಳು, ವಾದ್ಯದವರು, ಅಗಸರು, ಕುಂಬಾರರ ಒಂದೆರಡು ಮನೆಗಳಿದ್ದವು.ಊರ ಹೊರಗೆ ದಕ್ಪಿಣ ದಿಕ್ಕಿನಲ್ಲಿ ಹದಿನಾರು ಗುಡಿಸಲುಗಳಿದ್ದವಲ್ಲ ಅವೆಲ್ಲಾ ಹೊಲೆಯರದು. ಇವರು ತಮ್ಮ ಗುಡಿಸಲುಗಳ ಮಧ್ಯೆ ಒಂದು ಹೆಂಚಿನ ಮನೆಯನ್ನು ಕಟ್ಟಿ ಅದರಲ್ಲಿ ಮಾಯಮ್ಮ ದೇವರನ್ನಿಟ್ಟು ಪೂಜಿಸುತ್ತಿದ್ದರು.
ಊರಿನ ಹವಾಗುಣವು ಆರೋಗ್ಯವಾಗಿದ್ದಿತು. ವ್ಯವಸಾಯವೇ ಮುಖ್ಯವಾಗಿದ್ದುದರಿಂದ ತಿಪ್ಪೇಗುಂಡಿಗಳು ಊರಿಗೆ ಸಮೀಪವಾಗಿದ್ದವು. ಹಳೇ ಸಂಪ್ರದಾಯದ ಬೀದಿಗಳೂ ಕೆಲವಿದ್ದವು. ಬೆಳಕಿಗೆ ಅನುಕೂಲ ಕಮ್ಮಿ. ದನಕರುಗಳನ್ನು ಮನೆಯೊಳಗೆ ಕಟ್ಟುತ್ತಿದ್ದರು. ಇತ್ತೀಚೆಗೆ ಗ್ರಾಮಪಂಚಾಯ್ತಿ ಏರ್ಪಾಡಾಗಿ ಮೇಲಿನ ಕಷ್ಟಗಳೆಲ್ಲ ನಿವಾರಣೆಯಾಗುತ್ತಲಿವೆ. ಬಾಲ್ಯದಲ್ಲಿ ನೋಡಿದ ಬಂಡಿಹೊಳೆಯು ಈಗೀಗ ಗುಣಮುಖನಾದ ರೋಗಿಯು ಹಾಸಿಗೆಯಿಂದೆದ್ದು ತಿರುಗಾಡುವಂತೆ ಕಾಣುತ್ತಿದ್ದಿತು. ಊರೊಳಗೆ ಕಾಹಿಲೆ ಹರಡಿದಾಗ ಆರು ಮೈಲಿ ಆಚೆಗಿರುವ ವೈದ್ಯರು ಬಂದು ಔಷಧಿಗಳನ್ನು ಕೊಡುತ್ತಿದ್ದರು. ರೈತರು ವ್ಯವಸಾಯಕ್ಕಾಗಿ ಊರಿಗೆ ದೂರವಾದ ಬೈಲುಗಳಲ್ಲೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದುದರಿಂದ ಅನಾರೋಗ್ಯಕ್ಕೆ ಅವಕಾಶವು ಕಮ್ಮಿಯಾಗಿತ್ತು.
***
ಇದು ಕೆ. ಆರ್. ಪೇಟೆ ತಾಲೂಕಿನ ಬಂಡಿಹೊಳೆ ಎಂಬ ಗ್ರಾಮದ ಕುರಿತು ರಂಗಸ್ವಾಮಿ ಬರೆದಿರುವ ಈ 200 ಪುಟಗಳ ಪುಸ್ತಕ. ಇದನ್ನು ತೀನಂಶ್ರೀ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜೀಶಂಪ ಮುಂತಾದವರು ಮೆಚ್ಚಿಕೊಂಡಿದ್ದರು ಅನ್ನುವುದು ಅವರು ಬರೆದ ಪತ್ರದಿಂದ ಗೊತ್ತಾಗುತ್ತದೆ. ಗೊರೂರು 1933ರಲ್ಲೇ ಇದನ್ನು ಆಕಸ್ಮಿಕವಾಗಿ ಓದಿ ಸಂತೋಷಪಟ್ಟದ್ದನ್ನು ಲೇಖಕರಿಗೆ ಬರೆದು ತಿಳಿಸಿದ್ದೂ ಪುಸ್ತಕದ ಕೊನೆಯಲ್ಲಿದೆ.
ಉಪ್ಪಿನಂಗಡಿಯ ಬಗ್ಗೆ ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ವಿವರಗಳೂ ಕುತೂಹಲಕಾರಿ ಆಗಿವೆ. ಎರಡು ನದಿಗಳು ಸುತ್ತುವರಿದ ಉಪ್ಪಿನಂಗಡಿ ಅನಾದಿಕಾಲದಲ್ಲಿ ಮಂಗಳೂರಿಗೂ ಮಲೆನಾಡಿಗೂ ಸಂಪರ್ಕಸೇತು ಆಗಿತ್ತು. ಆಗಿನ್ನೂ ಬೀರೂರು ಜಂಕ್ಷನ್ ಆಗಿರಲಿಲ್ಲ. ರೇಲುಗಾಡಿಗಳು ಶುರು ಆಗಿರಲಿಲ್ಲ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಗೆ ಸೇತುವೆಯನ್ನೂ ಕಟ್ಟಿರಲಿಲ್ಲ. ಆಗ ಹಡಗಿನಲ್ಲಿ ಬರುತ್ತಿದ್ದ ಸರಂಜಾಮುಗಳನ್ನು ಇಡೀ ಘಟ್ಟ ಪ್ರದೇಶಕ್ಕೆ ಕೊಂಡೊಯ್ಯಬೇಕಾದರೆ ಉಪ್ಪಿನಂಗಡಿಯ ಮೂಲಕವೇ ಹಾದು ಹೋಗಬೇಕಾಗುತ್ತಿತ್ತು. ಮುಖ್ಯವಾಗಿ ಮಂಗಳೂರಿನಿಂದ ಬರುವ ಉಪ್ಪನ್ನು ನದೀ ತೀರದ ತನಕ ಗಾಡಿಗಳಲ್ಲಿ ತಂದು, ನಂತರ ದೋಣಿಯ ಮೂಲಕ ಅವನ್ನೆಲ್ಲ ನದಿ ದಾಟಿಸಿ, ಮತ್ತೆ ಗಾಡಿಗಳಲ್ಲಿ ಒಯ್ಯುತ್ತಿದ್ದರು. ಉಪ್ಪು ಹೀಗೇ ಸಾಗಬೇಕಾದ್ದು ಅನಿವಾರ್ಯ ಆದ್ದರಿಂದ ಅದನ್ನು ಉಪ್ಪಿನ ಗಂಡಿ ಅಂತ ಕರೆದರು ಎಂಬುದು ಒಂದು ಕತೆ. ಗಂಡಿ ಅಂದರೆ ತುಳುವಿನಲ್ಲಿ ಓಣಿ. ಅದು ಉಪ್ಪಿನ ಗಾಡಿ, ಉಪ್ಪಿನ ಗಡಿ ಅಂತಲೂ ಹೇಳುವವರಿದ್ದಾರೆ.
ಹೀಗೆ ಉಪ್ಪನ್ನು ತನ್ನ ಹೆಸರಲ್ಲಿಟ್ಟುಕೊಂಡ ಊರು ಕ್ರಮೇಣ ಬೆಳೆಯುತ್ತಾ ಬಂತು. ಹಾಗೆ ಬೆಳೆದು ಕೋರ್ಟು ಕಛೇರಿಗಳನ್ನೂ ಹೊಂದತೊಡಗಿತ್ತು. ಆದರೆ 1923ರಲ್ಲಿ ಬಂದ ಭೀಕರ ನೆರೆಗೆ ಇಡೀ ಊರು ಕೊಚ್ಚಿಹೋಗಿ ಅಲ್ಲಿ ಮನುಷ್ಯರು ವಾಸ ಮಾಡುತ್ತಿದ್ದ ಕುರುಹೂ ಇಲ್ಲದಂತೆ ಆಯ್ತು. ಆಗ ಇಡೀ ಊರನ್ನು ಸಮೀಪದ ಪುಟ್ಟ ಊರಿಗೆ ಸ್ಥಳಾಂತರ ಮಾಡಲಾಯಿತು. ಕೋರ್ಟು ಕಛೇರಿಗಳೆಲ್ಲ ಆ ಪುಟ್ಟ ಊರು ಸೇರಿಕೊಂಡವು. ಅದೇ ಪುತ್ತೂರು.
ಮತ್ತೊಮ್ಮೆ ಅಂಥದ್ದೇ ಭೀಕರ ಮಳೆಗಾಲವನ್ನು ಊರು ಕಂಡದ್ದು 1974ರಲ್ಲಿ.
ಉಪ್ಪಿನಂಗಡಿಯ ಸೇತುವೆಯನ್ನು ಕಟ್ಟಲು ಬ್ರಿಟಿಷರು ತುಂಬ ಕಾಲ ತೆಗೆದುಕೊಂಡರೆಂದೂ ಅದಕ್ಕೆ ನೂರಾರು ನರಬಲಿ ಕೊಡಬೇಕಾಯಿತೆಂದೂ ಕತೆಗಳಿವೆ. ಕೊನೆಗೆ ಊರನ್ನು ರಕ್ಷಿಸಲು ಮುಂದಾದದ್ದು ಕಾಳಿಕಾಂಬ ಎನ್ನುವುದು ಒಂದು ಕತೆ. ಸಹಸ್ರಲಿಂಗ ದೇವರು ಊರನ್ನು ಕಾಪಾಡಿದ ಎಂದು ಇನ್ನೊಂದು ಪ್ರತೀತಿ. ಆದರೆ ಕ್ರಮೇಣ ಉಪ್ಪಿನಂಗಡಿ ಹೇಗೆ ಚೇತರಿಸಿಕೊಂಡಿತು ಎಂದರೆ ವಿನಾಕಾರಣ ಅದು ಪುತ್ತೂರಿಗಿಂತ ಪ್ರಸಿದ್ಧವಾಯಿತು. ಅದಕ್ಕೆ ಕಾರಣ ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿಯನ್ನು ಸೀಳಿಕೊಂಡು ಹೋದದ್ದು.
****
ನಾಸ್ಟಾಲ್ಜಿಯ ಯಾರೆಷ್ಟೇ ಕೆಟ್ಟದು ಎಂದರೂ ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ರಂಗಸ್ವಾಮಿ ಪುಸ್ತಕವನ್ನು ಓದುತ್ತಾ ಇದ್ದರೆ ಕಾಲದ ಕಾಲುವೆಯಲ್ಲಿ ಹಿಂದಕ್ಕೆ ಪ್ರಯಾಣ ಮಾಡಿದಂತೆ ಭಾಸವಾಗುತ್ತದೆ. ಬೆಂಗಳೂರಿನ ಜನಜಂಗುಳಿ, ಟೀವಿ, ಸಿನಿಮಾ, ಮೆಜೆಸ್ಟಿಕ್ಕಿನ ಗದ್ದಲ, ಕ್ರಿಕೆಟ್ ಮ್ಯಾಚು ಎಲ್ಲವನ್ನೂ ಮರೆತುಬಿಡಬೇಕು ಅನ್ನಿಸುತ್ತದೆ. ಊರ ತುಂಬ ದನಕರುಗಳು, ಗಾಳಿ ಮಳೆ ಬಿಸಿಲಿಗೆ ಜಪ್ಪಯ್ಯ ಎನ್ನದೆ ನಿಂತ ಮಾವಿನ ತೋಪು, ಆಷಾಢದ ಗಾಳಿಗೆ ಮನೆಯೊಳಗೆ ನುಗ್ಗಿಬರುವ ಕಸಕಡ್ಡಿ ಮರಳು ಮಣ್ಣು, ಬೇಸಗೆಯಲ್ಲೂ ತಣ್ಣಗಿರುವ ಹೊಳೆ, ಚಪ್ಪಲಿ ಹಾಕದ ಕಾಲಿಗೆ ಹಿತವಾಗಿ ಒದಗುವ ಹಳ್ಳಿಯ ನೆಲ, ಮುದ್ದೆ, ಅನ್ನ, ಸಾರು, ಚಟ್ನಿಯ ಊಟ. ಜಗಲಿಯಲ್ಲಿ ಗಾಳಿಗೆ ಕಾಯುತ್ತಾ ಮಲಗಿ ಸುಖಿಸುವ ಅಪರಾಹ್ಣ, ಶಾಲೆಯಲ್ಲಿ ಕನ್ನಡದಲ್ಲಿ ಪಾಠ ಓದುತ್ತಾ ಕನ್ನಡ ಹಾಡು ಹೇಳುವ ಮಕ್ಕಳು, ಹಬ್ಬ ಬಂದಾಗ ಹೊಸ ಬಟ್ಟೆ ತೊಟ್ಟು ಕುಣಿಯುವ ಮಕ್ಕಳು, ಹೊಳೆದಂಡೆಯಲ್ಲಿ ಗುಟ್ಟಾಗಿ ಜಿನುಗುವ ಪ್ರೀತಿ, ಧೋ ಎಂದು ಸುರಿಯವ ಮಳೆಗೆ ಸೋರುವ ಮನೆಯೊಳಗೆ ಆಡುವ ಆಟ…
ನಾಗರಿಕತೆ ಎಲ್ಲವನ್ನೂ ಮರೆಸುತ್ತದೆ. ಹಳ್ಳಿಗಳಲ್ಲೇ ಉಳಿದುಬಿಟ್ಟವರಿಗೆ ಇವು ಲಕ್ಪುರಿಯಲ್ಲ. ಆದರೆ ನಗರಕ್ಕೆ ಬಂದು ಬೀರುಬಾರುಗಳ, ಕ್ರೆಡಿಟ್ ಕಾರ್ಡುಗಳ, ಏಸಿ ರೂಮುಗಳ, ಚಿಕ್ ಬಿರಿಯಾನಿಗಳ ಲೋಕಕ್ಕೆ ಸಂದವರಿಗೆ ಹಳ್ಳಿಯ ಕಷ್ಟಕಾರ್ಪಣ್ಯದ ದಿನಗಳ ನೆನಪೇ ಒಂದು ಲಕ್ಪುರಿ. ಆದರೆ ಅಂಥ ವ್ಯಕ್ತಿ ಕೊಂಚ ಸೃಜನಶೀಲನೂ ಮಾನವೀಯನೂ ಆಗಿದ್ದರೆ ನೆನಪುಗಳಲ್ಲೇ ಆತ ಮರುಹುಟ್ಟು ಪಡೆಯಬಲ್ಲ ಕೂಡ.
ಹಾಗೆ ಮರುಹುಟ್ಟಿಗೆ ಕಾರಣವಾಗುವ ಶಕ್ತಿ ಅರ್ಚಕ ರಂಗಸ್ವಾಮಿಯವರ ಕೃತಿಗಿದೆ. ಉಪ್ಪಿನಂಗಡಿಯ ಕುರಿತು ಅಂಥದ್ದೊಂದು ಪುಸ್ತಕ ಬರೆಯಬೇಕು ಅನ್ನುವುದು ಆಶೆ.]]>




ನಾಸ್ಟಾಲ್ಜಿಯದಿಂದ ಯಾರೂ ಸುಲಭವಾಗಿ ತಪ್ಪಿಸಿಕೊಳ್ಳಲಾರರು ಎಂಬ ತಮ್ಮ ಮಾತು ನೂರಕ್ಕೆ ನೂರರಷ್ಟು ನಿಜ ಸರ್. ನಾವು ಮರೆತೇಬಿಟ್ಟೆವೆಂಬ ಊರು, ಮರೆಯಲು ಪ್ರಯತ್ನಿಸಿದ ಊರು ಬದುಕಿನ ಯಾವುದೋ ತಿರುವಿನಲ್ಲಿ ಚಿಕ್ಕದ್ಯಾವುದೋ ಘಟನೆಯ ನೆಪದಿಂದ ನೆನಪಾಗಿ ಕಾಡಲಾರಂಭಿಸುತ್ತದೆ.
ಉಪ್ಪಿನಂಗಡಿಯ ಕುರಿತ ನಿಮ್ಮ ಪುಸ್ತಕ ಆದಷ್ಟು ಬೇಗ ನಮ್ಮನ್ನು ತಲುಪಲಿ.
ಡಾ. ಅಶೋಕ್.ಕೆ.ಆರ್
ಗುರುಗಳೇ, ಸೂಪರ್ ಬರಹ..
Excellent introduction of 2 cities…..
ಬಂಡಿಹೊಳೆ ಮತ್ತು ಉಪ್ಪಿನಂಗಡಿಯ ಬಗ್ಗೆ ಓದಿ ತಕ್ಷಣವೇ ನನ್ನ ಊರು ಅಡ್ಯನಡ್ಕಕ್ಕೆ ಹೋಗಿ ಬಂದೆ.
chakkne nenappaigidhu namma nelyadi saar!
sadabhiruchiya baraha…. jogi nimma barahagalannu oduvudu tumba sadagarada sangati..