ಜೋಗಿಮನೆ : ಕವಿಯೇ ಹಾಗೆ, ಅವನಿಗೆ ನೋವಾದರೆ ಜಗತ್ತಿಗೇ ನೋವಾಗುತ್ತದೆ

ನಾಲ್ಕು ಪ್ರಸಂಗಗಳು : ವಿನಾಕಾರಣ!

ಅವನು ತುಂಬ ಚೆಂದಕ್ಕೆ ಬರೆಯುತ್ತಾನೆ ಅಂತ ಜನ ಮಾತಾಡಿಕೊಂಡರು. ಎಷ್ಟೊಂದು ಬರೆಯುತ್ತಾನಲ್ಲ ಅಂತ ಬೆರಗಾದರು. ಎಷ್ಟೊಂದು ಅರ್ಥಪೂರ್ಣವಾಗಿ ಬರೆಯುತ್ತಾನೆ ಎಂದು ಮತ್ತೆ ಮತ್ತೆ ಓದಿದರು. ಬರೆಯುವುದು ಅವನಿಗೆ, ಓದುವುದು ಅವರಿಗೆ ಅಭ್ಯಾಸ ಆಗಿಹೋಯಿತು. ಆಯಾ ಸಂದರ್ಭಕ್ಕೆ ತಕ್ಕಂತೆ ಟಿಪ್ಪಣಿಗಳನ್ನು ಬರೆಯಬಲ್ಲವನಾಗಿದ್ದ. ಆಯಾ ಪರಿಸ್ಥಿತಿಯನ್ನು ಸೊಗಸಾಗಿ ವಿಶ್ಲೇಷಿಸುತ್ತಿದ್ದ. ಸೊಗಸಾದ ಭಾಷೆ, ವಿಸ್ತಾರವಾದ ಶಬ್ದಜಾಲ ಮತ್ತು ಸೂಕ್ತ ಪದಗಳ ಬಳಕೆ ಅವನಿಗೆ ಸಿದ್ಧಿಸಿತ್ತು. ಎಲ್ಲರೂ ಅವನನ್ನು ಕೊಂಡಾಡುತ್ತಿದ್ದರು.
ಅವನಿಗೆ ಮಾತ್ರ ಅದರಿಂದ ಸಂತೋಷ ಇದ್ದಂತಿರಲಿಲ್ಲ. ಯಾರೋ ಕೇಳಿದಾಗ ಆತ ಹೇಳಿದ: ಹೇಳಬೇಕಾದ್ದನ್ನು ಹೇಳಬಹುದಾದ್ದನ್ನು ಭಾಷೆಯ ಮೂಲಕ ಹೇಳಬಹುದು. ಈ ಜಗತ್ತಿನಲ್ಲಿ ಹೇಳಲಾಗದೇ ಇರುವಂಥದ್ದು ಸಾಕಷ್ಟಿದೆ. ನಾವು ಏನನ್ನೋ ದಾಟಿಸಲಿಕ್ಕೆ, ಏನನ್ನೋ ಮಾರುವುದಕ್ಕೆ, ಏನನ್ನೋ ಬಿಕರಿ ಮಾಡುವುದಕ್ಕೆ, ಏನನ್ನೋ ಯಾರಿಗೋ ಅರ್ಥ ಮಾಡಿಸುವುದಕ್ಕೆ ಭಾಷೆಯನ್ನು ಬಳಸುತ್ತಿದ್ದೇವೆ. ಅದಕ್ಕೆ ತಕ್ಕ ಭಾಷೆಯನ್ನು ಬೆಳೆಸಿಕೊಂಡಿದ್ದೇವೆ. ನೋಡು, ಇದು ಅತ್ಯಂತ ಸೊಗಸಾದ ಸಾಬೂನು, ಮಿಂದರೆ ಮೈ ಘಮಘಮಿಸುತ್ತದೆ. ನಿನ್ನನ್ನು ಇಡೀ ದಿನ ಆಹ್ಲಾದಕರವಾದ ಕಂಪೊಂದು ಆವರಿಸಿಕೊಂಡು ಸಂತೋಷದಿಂದ ಇಡುತ್ತದೆ ಎನ್ನುವ ಮಾತನ್ನು ಎಷ್ಟೇ ಸೊಗಸಾಗಿ ಬರೆದರೂ ಅಷ್ಟೇ. ಅದರ ಉದ್ದೇಶ ಆ ಸೋಪು ಮಾರಾಟವಾಗುತ್ತಿದ್ದಂತೆ ಸತ್ತು ಹೋಗುತ್ತದೆ. ಸುದ್ದಿಯನ್ನು ಧಾಟಿಸುವ, ಯಾವುದೋ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ, ಯಾವುದೋ ಧಾರಾವಾಹಿಯನ್ನು ವೀಕ್ಷಕ ನೋಡುವಂತೆ ಮಾಡುವ, ಚೆಂದದ ಕಾರನ್ನು ಯಾರೋ ಕೊಳ್ಳುವಂತೆ ಮಾಡುವ ತೀರಾ ಚಿಲ್ಲರೆ ಕೆಲಸಗಳಿಗಾಗಿ ಭಾಷೆ ಬಳಕೆಯೋ ದುರ್ಬಳಕೆಯೋ ಆಗುತ್ತಿದೆ.
ತುಂಬ ಚೆಂದದ ಲೇಬಲ್ಲು ಮಾಡಿಕೊಡುವವನಂತೆ, ತುಂಬ ಚೆಂದಕ್ಕೆ ಕಾರನ್ನು ಪೇಂಟ್ ಮಾಡುವವನಂತೆ, ಒಂದು ಸೋಪಿನ ಆಕಾರ ಆಕರ್ಷಕವಾಗಿರುವಂತೆ ಮಾಡುವ ವಿನ್ಯಾಸಗಾರನಂತೆ ಬರಹಗಾರ ಕೂಡ ಹೆಚ್ಚಿನ ಸಂದರ್ಭದಲ್ಲಿ ಬಳಕೆ ಆಗುತ್ತಾನೆ. ಅದು ಕೇಳುಗರಿಗೋ ನೋಡುಗರಿಗೋ ಓದುಗರಿಗೋ ಗೊತ್ತಾಗದೇ ಇರಬಹುದು. ಹಾಗೆ ಗೊತ್ತಾಗದೇ ಇದ್ದಾಗಲೂ ಆ ಮಾತಿನ, ಬರಹದ ಆಯಸ್ಸು ಅಷ್ಟೇ.
ಆದರೆ ಬರೆಯುವವನಿಗೆ ನಿಜಕ್ಕೂ ಒಂದು ಅಳಲಿರುತ್ತದೆ. ತಾನು ಹೇಳುತ್ತಿರುವುದು ಯಾರಿಗೂ ಗೊತ್ತಾಗುತ್ತಿಲ್ಲ, ಅರ್ಥವಾಗುತ್ತಿಲ್ಲ ಎಂಬ ಅಳಲು ಅಲ್ಲ ಅದು. ಅರ್ಥವಾಗಬೇಕು ಅಂತ ಬರೆಯುವವನು ಮತ್ತೆ ಅದೇ ವ್ಯಾಪಾರಿ ಬರಹಗಳ ಜಾಡಿಗೆ ಬೀಳುತ್ತಾನೆ. ಅದನ್ನೂ ಮೀರಿದ ತುಡಿತವೊಂದು ಬರೆಯುವವನಿಗೆ ಇರಬೇಕು. ಅದು ತಾನು ಬರೆದದ್ದು ಕಾವ್ಯವಾಗುತ್ತಿಲ್ಲ ಎಂಬ ದುಃಖ. ಕಾವ್ಯವೊಂದೇ ಉದ್ದೇಶವಿಲ್ಲದೇ ಇರುವಂಥದ್ದು. ಅದು ಯಾವುದನ್ನೋ ಮಾರುವುದಕ್ಕೋ ಯಾವುದನ್ನೋ ದಾಟಿಸುವುದಕ್ಕೋ ಯಾವುದನ್ನೋ ಯಾರಿಗೂ ತಗಲಿಹಾಕುವುದಕ್ಕೋ ಬರೆಸಿಕೊಂಡದ್ದಲ್ಲ. ಅದೊಂದು ಉದ್ಗಾರ. ನಿರುದ್ದಿಶ್ಯ ಉದ್ಗಾರ. ಮಾತು, ಬರಹ ಹಾಗಾಗದೇ ಹೋದರೆ ತಟ್ಟುವ ವಿಷಾದವನ್ನು ಒಬ್ಬ ಲೇಖಕ ತಾಳಿಕೊಳ್ಳಲಾರ. ನಾನೂ ನೀನೂ ಆನೂ ತಾನೂ ನಾಕು ನಾಕೇ ತಂತಿ…. ಅಂಥ ಬರೆದಾಗ ಅದನ್ನು ನಾವು ಯಾವ ತೃಣಮಾತ್ರದ ಲಾಭದ ಆಸೆಯೂ ಇಲ್ಲದೇ ಓದಿಕೊಳ್ಳುತ್ತೇವಲ್ಲ. ಅಂಥದ್ದು ಬರಹಕ್ಕೆ ಸಾಧ್ಯವಾಗಬೇಕು. ಯಾವುದನ್ನು ನಾವು ಮಾಹಿತಿಗೋ ಉಪಯೋಗಕ್ಕೋ ಓದಿಕೊಳ್ಳುವುದಿಲ್ಲವೋ ಅದು ಕಾವ್ಯ.

*****

ಅವನು ಧಗಧಗ ಉರಿಯುತ್ತಿದ್ದ. ಬೆಂಕಿಯಂತೆ ಝಳಪಿಸುತ್ತಿದ್ದ. ಸದಾ ಸಿಟ್ಟು. ಸದಾ ಆಕ್ರೋಶ. ವ್ಯವಸ್ಥೆಯ ವಿರುದ್ಧ, ಕೆಟ್ಟದ್ದರ ವಿರುದ್ಧ, ದುಷ್ಟತನದ ವಿರುದ್ಧ, ಕೇಡಿನ ವಿರುದ್ಧ ನಖಶಿಖಾಂತ ರೋಷ. ಹಾಗೆ ಜ್ವಾಲೆಯ ಹಾಗಿದ್ದವನನ್ನು ಕಾಲ ಹಿಂದಿಕ್ಕೆ ಮುಂದೆ ಸಾಗಿತು. ಅವನ ಸಿಟ್ಟನ್ನು, ಕ್ರೋಧವೆಂದು, ಅಸ್ವಸ್ಥ ಮನಸ್ಥಿತಿ ಎಂದು ಅವನ ಕಾಲದವರೇ ತಪ್ಪಾಗಿ ತಿಳಿದರು. ಅವನನ್ನು ದೂರ ಇಟ್ಟರು. ಅವನ ಪ್ರಶ್ನೆಗಳಿಗೆ ಸಿಕ್ಕಿಕೊಳ್ಳಲಿಲ್ಲ. ಅವನ ಉತ್ತರಗಳನ್ನೂ ಕೇಳಿಸಿಕೊಳ್ಳಲಿಲ್ಲ. ಅವನ ಸಹವಾಸವೇ ಬೇಡ ಎಂದು ಆತ ಸಾಯುವುದನ್ನೇ ಕಾಯತೊಡಗಿದರು.
ಆದರೆ ಅವನು ಪರಮ ಸತ್ಯಗಳನ್ನು ಹೇಳಬಲ್ಲವನೇ ಆಗಿದ್ದ. ದಾರಿ ತೋರಬಲ್ಲ ಸಾಮರ್ಥ್ಯವೂ ಅವನಿಗಿತ್ತು. ಅವನು ಬಿಡುಗಡೆಯ ಹಾದಿಯನ್ನು ಕಾಣಿಸಬಲ್ಲವನೂ ಆಗಿದ್ದ. ಆದರೆ ಅವನ ಸಿಟ್ಟಿನ ಬೆಂಕಿಯ ಝಳಕ್ಕೆ ಎಲ್ಲರೂ ಅಂಜುತ್ತಿದ್ದರು. ಅವನ ಸಮೀಪ ಸುಳಿಯುತ್ತಿರಲಿಲ್ಲ.
ಅವನ ಹೊತ್ತಿ ಉರಿಯುವ ಗುಣದಿಂದಾಗಿ ಅವನನ್ನು ಅಗ್ನಿಜ್ವಾಲೆ ಅಂದುಕೊಂಡರು. ಬೆಳಕು ಅಂತ ಯಾರೂ ಭಾವಿಸಲೇ ಇಲ್ಲ. ಅವನು ಧಗಧಗಿಸದೇ ಹೋದರೆ ದೀಪವಾಗುತ್ತಿದ್ದ, ಬೆಳಕಾಗುತ್ತಿದ್ದ. ಹೊತ್ತಿ ಉರಿದದ್ದರಿಂದ ಜ್ವಾಲಾಮುಖಿಯಾದ. ನಿಷ್ಪ್ರಯೋಜಕನಾದ.
ಧಗಧಗ ಉರಿಯುವ ಅಗ್ನಿಕುಂಡ ಬೆಳಕು ಅಂತ ಯಾರಿಗೂ ಅನ್ನಿಸುವುದೇ ಇಲ್ಲ. ಎಷ್ಟನ್ನು ಕಾಣಬೇಕೋ ಅಷ್ಟನ್ನೇ ಕಾಣಿಸುವ, ದೀವಿಗೆಯಷ್ಟೇ ನಮಗೆ ಬೇಕಾಗಿರುವುದು. ನಿನ್ನೊಳಗಿನ ಜ್ವಾಲೆ ನಿನ್ನಲ್ಲೇ ಇರಲಿ. ನಮ್ಮ ಪಾಲಿಗೆ ದೀಪವಾಗಿರು ಸಾಕು ಎಂದು ಅಂಥವರ ಬಳಿ ಕೇಳಿಕೊಳ್ಳೋಣ. ತುಂಬ ಎತ್ತರದಿಂದ ಬೀಳುವ ನೀರು ನೆಲವನ್ನೂ ಕೊರೆಯುತ್ತದೆ, ಕೈಗೂ ದಕ್ಕುವುದಿಲ್ಲ. ಅದು ಶಾಂತವಾಗಿ ಹರಿಯುವಾಗಲೇ ಉಪಯೋಗಕ್ಕೆ ಬರುತ್ತದೆ.

*****

ಕೃಷ್ಣಾಷ್ಟಮಿಯ ದಿನ ಕೃಷ್ಣದೇಗುಲದ ಮುಂದೆ ಮಲ್ಲಕಂಬ. ಅದಕ್ಕೆ ಮೆತ್ತಿದ ಗ್ರೀಸು. ಆ ಜಿಡ್ಡಿಗೆ ಜಾರುತ್ತಿರುವ ಕಂಬವನ್ನು ಏರಿದವನಿಗೆ ಬಹುಮಾನ. ಮೂರು ಹೆಜ್ಜೆ ಏರಿದರೆ, ನಾಲ್ಕು ಹೆಜ್ಜೆ ಜಾರುವ ಕಂಬದ ಜಿಡ್ಡನ್ನೆಲ್ಲ ಒರೆಸಿ ಒರೆಸಿ ಮೇಲಕ್ಕೇರುವ ಸಾಹಸಿಗಳು.
ಸಿದ್ಧಾಂತವೂ ಹಾಗೆ, ಒಂದಲ್ಲ ಒಂದು ಜಿಡ್ಡು ಮೆತ್ತಿದ ಕಂಬ. ಅದರ ಮುಂದೆ ನಿಂತು ನಾವು ಅದನ್ನು ಏರುವುದಕ್ಕೆ ಹೋಗುತ್ತೇವೆ. ಜಾರುತ್ತೇವೆ. ಅದನ್ನು ಮೆಟ್ಟಿ ನಿಲ್ಲುವುದು, ಹತ್ತಿ ಗೆಲ್ಲುವುದು ಸಾಧ್ಯವೇ ಆಗುವುದಿಲ್ಲ. ಆ ಸಿದ್ಧಾಂತದ ಪ್ರತಿಪಾದಕರಿಗಿಂತ ಹೆಚ್ಚಾಗಿ, ಅನುಯಾಯಿಗಳು ಅದಕ್ಕೆ ಒಂದು ರಾಶಿ ಜಿಡ್ಡು ಮೆತ್ತಿರುತ್ತಾರೆ. ಅದನ್ನು ಏರದಂತೆ ಮಾಡಿಬಿಟ್ಟಿರುತ್ತಾರೆ.
ನಾವು ಬರೀ ಅಷ್ಟಕ್ಕೇ ಸೀಮಿತವಾಗಿಲ್ಲ. ಮತ್ತೊಂದು ಸಿದ್ಧಾಂತವೆಂಬ ಜಿಡ್ಡನ್ನು ಮೈಗೂ ಬಳಕೊಂಡಿದ್ದೇವೆ. ಕಂಬದ ಜಿಡ್ಡೂ ಮೈಯ ಜಿಡ್ಡು ಸೇರಿಕೊಂಡು, ಏರಲೆತ್ನಿಸಿದವನನ್ನು ಕೆಳಗೆ ಜಗ್ಗುತ್ತಲೇ ಇರುತ್ತದೆ.
ಕೇವಲ ಕಂಬಕ್ಕೆ ಜಿಡ್ಡು ಮೆತ್ತಿದ್ದರೆ ಹೇಗೋ ಹತ್ತಬಹುದು. ಅದಲ್ಲದೇ ಹೋದರೆ ಮತ್ತೊಂದು ಕಂಬವನ್ನಾದರೂ ಹತ್ತಬಹುದು. ಆದರೆ ಮೈಗೇ ಜಿಡ್ಡು ಮೆತ್ತಿಕೊಂಡಿದ್ದರೆ ಮಾಡುವುದೇನು? ಯಾವ ಕಂಬವನ್ನೂ ಹತ್ತುವಂತಿಲ್ಲ. ಮೈಯ ಜಿಡ್ಡು ಹೋಗದೇ, ಕಂಬ ಏರಲಾಗದು. ಜಿಡ್ಡಿಲ್ಲದ ಕಂಬ ಸಿಕ್ಕಿದರೂ ನಮ್ಮ ಮೈಯ ಜಿಡ್ಡು ನಮ್ಮನ್ನು ಕೆಳಕ್ಕೆ ಸೆಳೆಯುತ್ತಲೇ ಇರುತ್ತದೆ.
ಜಿಡ್ಡೆಂಬುದು ದೇಹಕ್ಕೆ ಅಪಾಯಕಾರಿ. ಒಳಗಿದ್ದರೂ ಹೊರಗಿದ್ದರೂ.

*****

ಎಚ್ಚರಿಕೆಯಿಂದ ನಡೆಯಿರಿ ಅಂತ ಸಲಹೆ ಕೊಡುತ್ತಾರೆ. ಉಪದೇಶ ಮಾಡುತ್ತಾರೆ. ಸಂಪತ್ತು ಗಳಿಸು ಅನ್ನುತ್ತಾರೆ. ಯಶೋವಂತನಾಗು ಎಂದು ಹರಸುತ್ತಾರೆ. ಎಲ್ಲವೂ ಇಹಕ್ಕೆ ಸಂಬಂಧಿಸಿದ್ದು. ಯಾರೂ ಬೇಕಾದರೂ ಸಾಧಿಸಬಹುದಾದ ಸ್ಥಿತಿ ಅದು. ಅದನ್ನು ಸಾಧಿಸಿದ ನಂತರ ಮತ್ತೆ ಅದನ್ನು ಕಳಕೊಳ್ಳುತ್ತಾ ಹೋಗುವ ದಿನಗಳೇ ಸುಖಕರ. ಸಂಪಾದಿಸಿದೆ ಎಂಬ ಹಮ್ಮು, ಕಳಕೊಳ್ಳುತ್ತಿದ್ದೇನೆ ಎಂಬ ವಿಷಾದ. ಎತ್ತರದಿಂದ ಜಾರಿಬಿದ್ದಂತೆ. ನೆಲಮುಟ್ಟುವ ತನಕ ಮಾತ್ರ ಭಯ. ನೆಲಕ್ಕೆ ಬಿದ್ದ ನಂತರ ನಿರಾಳ. ಮತ್ತೆ ಬೀಳಲಿಕ್ಕೆ ಇಲ್ಲ, ಬಿದ್ದ ಗಾಯದ ಆರೈಕೆ ಅಷ್ಟೇ.
ವಿಷಾದ ಮತ್ತು ನೆಮ್ಮದಿ ಒಂದರ ಹಿಂದೊಂದು ಸಾಗುತ್ತಲೇ ಇರುತ್ತದೆ. ಯಾವುದು ಯಾವುದನ್ನು ಹಿಂಬಾಲಿಸುತ್ತದೆ ಅನ್ನುವುದು ಗೊತ್ತಿಲ್ಲ. ನೆಮ್ಮದಿಯ ಹಿಂದೆ ವಿಷಾದವೋ ವಿಷಾದದ ಹಿಂದೆ ನೆಮ್ಮದಿಯೋ ಎಂದು ಕೇಳಿದರೆ, ಬೇಡನೊಬ್ಬ ವಾಲ್ಮೀಕಿಯಾದ ಕತೆ ನೆನಪಾಗುತ್ತದೆ.
ಒಂದು ಕ್ರೌಂಚದ ದುಃಖವನ್ನು ಸಹಿಸದೇ ಕವಿಯಾದ ಬೇಡ, ಎಷ್ಟೊಂದು ದುಃಖದ ಕತೆಗಳನ್ನು ಹೇಳಿದ. ಎಷ್ಟೊಂದು ಮಂದಿಯನ್ನು ಅನಾಥರನ್ನಾಗಿ ಮಾಡಿದ. ರಾಮನಿಗೆ, ಸೀತೆಗೆ, ಲಕ್ಷ್ಮಣನಿಗೆ, ಊರ್ಮಿಳೆಗೆ, ಮಂಡೋದರಿಗೆ, ತಾರೆಗೆ- ಹೀಗೆ ಎಷ್ಟೊಂದು ಜೀವಗಳಲ್ಲಿ ವಿರಹವನ್ನು ತುಂಬಿದ.
ಕವಿಯೇ ಹಾಗೆ, ಅವನಿಗೆ ನೋವಾದರೆ ಜಗತ್ತಿಗೇ ನೋವಾಗುತ್ತದೆ.
 

‍ಲೇಖಕರು avadhi

September 30, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Girish

    ಕವಿಯೇ ಹಾಗೆ ಅವನಿಗೆ ನೋವಾದರೆ ಜಗತ್ತಿಗೆ ನೋವಾಗುತ್ತದೆ. 🙂

    ಪ್ರತಿಕ್ರಿಯೆ
  2. ಸುಧಾ ಚಿದಾನಂದಗೌಡ

    ಈ ಲೇಖನ ಬಸ್ನಲ್ಲಿ, ಅವಸರದಲ್ಲಿ ಓದಿದ್ದೆ.
    ಈಗ ಮತ್ತೊಮ್ಮೆ ಓದಿದಾಗ ಅನಿಸಿದ್ದು-
    ಮೊದಲ ಪ್ಯಾರಾದಲ್ಲಿ ಬರುವ ಲೇಖಕ ತನ್ನ ಅನಿಸಿಕೆಗಳ ಮೂಲಕ ಭಾವುಕತನದಿಂದ ಹತ್ತಿರವಾಗುತ್ತಾನೆ ಎಂದು. ಓದುಗರೊಂದಿಗೆ ಆಫ್ತಭಾವ ಸ್ಥಾಪಿಸಿಕೊಳ್ಳುತ್ತಾನೆ ಮತ್ತು ತನ್ನ ಸಾಮಾಜಿಕ, ಆರ್ಥಿಕ ಅರಿವಿನ ಮೂಲಕ ಅಚ್ಚರಿಯನ್ನೂ ಹುಟ್ಟಿಸುತ್ತಾನೆ.
    ನಿಜ, ಕವಿಗೆ ನೋವಾದಾಗ ನೋವನ್ನೇ ಹಂಚುತ್ತಾನೆ. similarly, ಕವಿಗೆ ಸಂತೋಷವಾದಾಗ ಲೋಕಕ್ಕೂ ಸಂತೋಷವಾಗುತ್ತದೆಯೇ? ತಿಳಿಯದು.
    ಆದರೆ ಆನಂದದಲ್ಲಿ ಕಾಣದ ಬಾಂಧವ್ಯ ನೋವಿನಲ್ಲಿ ಉಂಟಾಗುವ ಪವಾಡ ಸರ್ವಕಾಲಕ್ಕೂ
    ಸಲ್ಲುವಂಥದ್ದು.

    ಪ್ರತಿಕ್ರಿಯೆ
  3. ಹರೀಶ್‌ಬಸವರಾಜ್‌, ಹುಳಿಯಾರು

    ನಾನೂ ನೀನೂ ಆನೂ ತಾನೂ ನಾಕು ನಾಕೇ ತಂತಿ……ಅಂಥ ಬರೆದಾಗ ಅದನ್ನು ನಾವು ಯಾವ ತೃಣಮಾತ್ರದ ಲಾಭದ ಆಸೆಯೂ ಇಲ್ಲದೇ ಓದಿಕೊಳ್ಳುತ್ತೇವಲ್ಲ. ಅಂಥದ್ದು ಬರಹಕ್ಕೆ ಸಾಧ್ಯವಾಗಬೇಕು. ಯಾವುದನ್ನು ನಾವು ಮಾಹಿತಿಗೋ ಉಪಯೋಗಕ್ಕೋ ಓದಿಕೊಳ್ಳುವುದಿಲ್ಲವೋ ಅದು ಕಾವ್ಯ.
    ಬಹಳ ಒಳ್ಳೆಯ ಮಾತುಗಳು ಸಾರ್ ……..ಬರಹಕ್ಕೆ ಒಂದೊಳ್ಳೆ ವ್ಯಾಖ್ಯಾನ ಕೊಟ್ಟಿದ್ದೀರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: