ಡಾ.ಟಿ.ಆರ್. ಚಂದ್ರಶೇಖರ್
ವಚನ ಸಂಸ್ಕೃತಿಯ ಜಾತಿ ವಿರೋಧಿ ಪ್ರಣಾಳಿಕೆಯನ್ನು ಪ್ರಶ್ನೆ ಮಾಡುವ ಸಂಶೋಧಕರ ಗುಂಪೊಂದರ ಸೈದ್ಧಾಂತಿಕ ಪ್ರತಿಪಾದನೆ ಕುರಿತಂತೆ ಕರ್ನಾಟಕಸ್ಥರು ನಡೆಸುತ್ತಿರುವ ಚರ್ಚೆಯು ಕೇವಲ ಅವರ ಚಾರಿತ್ರ ಹರಣದಲ್ಲಿ ನಿರತವಾಗಿರುವ ಕಾಲಹರಣ ಕ್ರಿಯೆ ಮತ್ತು ಅವರದು ವಿತಂಡವಾದ ಎಂಬ ಆಪಾದನೆಯನ್ನು ಶ್ರೀ ಎಸ್.ಎನ್.ಬಾಲಗಂಗಾಧರ ಅವರು ತಮ್ಮ ಪ್ರಜಾವಾಣಿ ಲೇಖನದಲ್ಲಿ (ದಿ:18.04.2013) ಅನವಶ್ಯಕವಾಗಿ ಮಾಡಿದ್ದಾರೆ. ಪ್ರಜಾವಾಣಿಯು ವಾದ-ಸಂವಾದ ನಡೆಸುವಾಗ ಅಂತಹ ಚಾರಿತ್ರ ಹರಣ ಕ್ರಿಯೆಗೆ ಯಾವತ್ತೂ ಅವಕಾಶ ನೀಡಿಲ್ಲ ಎಂಬುದು ಅದರ ಪರಂಪರೆಯಲ್ಲಿ ಬೆಳೆದು ಬಂದವರಿಗೆ ತಿಳಿದಿದೆ.
ಪ್ರಸ್ತುತ ಚರ್ಚೆಯ ಸಂದರ್ಭದಲ್ಲೂ ಬಹಳ ಜವಾಬುದಾರಿಯಿಂದ ಕರ್ನಾಟಕದ-ಕನ್ನಡದ ವಿದ್ವಾಂಸರು ತಮ್ಮ ಅಭಿಮತ-ಭಿನ್ನಮತವನ್ನು ಇಲ್ಲಿ ಮಂಡಿಸುತ್ತಿದ್ದಾರೆ. ಶ್ರೀ ಎಸ್.ಎನ್ ಬಾಲಗಂಗಾಧರ ಅವರು ತಮ್ಮ ಆಧಾರ ರಹಿತ ಆಪಾದನೆಯನ್ನು ಹಿಂತೆಗೆದುಕೊಳ್ಳುವುದು ಲೇಸು. ಈ ಚರ್ಚೆಯಲ್ಲಿ ಭಾಗವಹಿಸಿರುವ ಎಲ್ಲರೂ ಕರ್ನಾಟಕದ ಅತ್ಯತ್ತಮ ಮಟ್ಟದ ನಾಗರಿಕ ಚಿಂತಕರು ಎಂಬುದನ್ನು ಅವರು ಗಮನಿಸಬೇಕು. ಈ ಚರ್ಚೆಯಲ್ಲಿ ಭಾಗವಹಿಸಿದವರ ಅಭಿಪ್ರಾಯಗಳ ಪ್ರಭಾವವು ಬಾಲಗಂಗಾಧರ ಅವರ ಚಿಂತನೆಯ ಮೇಲೂ ಆಗಿದೆ ಎಂಬುದನ್ನು ಅವರ ಲೇಖನದಲ್ಲಿ ಗುರುತಿಸಬಹುದಾಗಿದೆ.
ಶ್ರೀಎಸ್.ಎನ್ ಬಾಲಗಂಗಾಧರ ಮತ್ತು ಅವರ ಸಹಸಂಶೋಧಕರು ಪ್ರಸ್ತುತ ನಡೆಯುತ್ತಿರುವ ಚರ್ಚೆಯಲ್ಲಿ ಒತ್ತಿ ಒತ್ತಿ `ಭಾರತೀಯ ಆಧ್ಯಾತ್ಮಿಕ ಪರಂಪರೆ’ಯ ಬಗ್ಗೆ ಮಾತನಾಡುತ್ತಾರೆ. ಸಮಸ್ಯೆ ಉದ್ಭವಿಸುವುದು ಇಲ್ಲೆ ಎಂಬುದು ನಮ್ಮ ನಿಲವು. ಭಾರತದಲ್ಲಿ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಭಕ್ತಿ ಚಳುವಳಿಗಳು ಮತ್ತು ವಚನ ಸಂಸ್ಕೃತಿ ಇವರು ಹೇಳುವ `ಭಾರತೀಯ ಆಧ್ಯಾತ್ಮಿಕ ಪರಂಪರೆ’ಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾವೆ. ಇವರು ಹೇಳುವ ಏಕಘನಾಕೃತಿಯ ಸಂಸ್ಕೃತಿಯನ್ನು ಭಕ್ತಿ ಪರಂಪರೆಗಳು ಪ್ರಶ್ನಿಸಿದವು ಮತ್ತು ತಿರಸ್ಕರಿಸಿದವು. ಇದು ವಸಾಹತುಶಾಯಿಯಿಂದ ಕಲಿತುಕೊಂಡ ಪಾಠವೂ ಅಲ್ಲ ಅಥವಾ ಪಾಶ್ಚಿಮಾತ್ಯ ಅಧ್ಯಯನ ವಿಧಾನದ ಅನುಕರಣೆಯೂ ಅಲ್ಲ. ಇವೆಲ್ಲ ವಸಾಹತುಪೂರ್ವದಲ್ಲೇ ಮಂಡಿತವಾದ ಸಂಗತಿಗಳು. ಭಾರತೀಯ ಆಧ್ಯಾತ್ಮಿಕ ಪರಂಪರೆಯು ಸಂಸ್ಕೃತವನ್ನು ನೆಮ್ಮಿಕೊಂಡಿದ್ದರೆ ವಚನಕಾರರು ಕನ್ನಡವನ್ನು ಅಪ್ಪಿಕೊಂಡರು.
ಇದು ಕೇವಲ ಭಾಷೆಗೆ ಸಂಬಂಧಿಸಿದ ಸಂಗತಿಯಲ್ಲ ಎಂಬುದನ್ನು ಅನುಭಾವ ಕುರಿತಂತೆ ಸೂಕ್ಷ್ಮ ಚಿಂತನೆಯನ್ನು ಹರಿ ಬಿಟ್ಟಿರುವ ಬಾಲಗಂಗಾಧರ ಅವರಿಗೆ ತಿಳಿಸಿಕೊಡಬೇಕಾದ ಅಗತ್ಯವಿಲ್ಲ ಎಂದು ನಾನು ಭಾವಿಸಿದ್ದೇನೆ. ಶ್ರೀ ಬಾಲಗಂಗಾಧರ ಅವರು ಮಾತನಾಡುತ್ತಿರುವ ಕರ್ಮ, ಜ್ಞಾನ, ಮಾರ್ಗ, ಸತ್ಯ, ನಿರ್ವಾಣ, ಸಮಾಧಿ ಮುಂತಾದವುಗಳನ್ನು ಒಳಗೊಂಡ ಪರಿಭಾಷೆಯ ವಿರುದ್ಧವೇ (ಈ ದೇವ ಪರಿಭಾಷೆಯನ್ನು ಅಲ್ಲಮ `ಕೊಲುವ ಭಾಷೆ’ ಎಂದು ಕರೆಯುತ್ತಾನೆ) ವಚನಕಾರರನ್ನು ಸೇರಿಸಿಕೊಂಡು ಭಕ್ತಿ ಪರಂಪರೆಯ ಎಲ್ಲ ಚಿಂತಕರು ಸಿಡಿದೆದ್ದರು(ಭಕ್ತರದ್ದು ‘ಗೆಲುವ ಭಾಷೆ’ ಎಂದು ಅಲ್ಲಮ ಕರೆಯುತ್ತಾನೆ). ಇವರು `ಮಾರ್ಗ’ದ ಬಗ್ಗೆ ತುಂಬಾ ಮಾತನಾಡುತ್ತಾರೆ. ಅದು ಮೊದಲೇ ಹೇಳಿದಂತೆ ಏಕಘನಾಕೃತಿಯ ಸಂಗತಿ. ಅದನ್ನು ಮುರಿಯುವ ಒಂದು ಕ್ರಮವನ್ನು ವಚನಕಾರರು ರೂಪಿಸಿದರು. ಪ್ರಪಂಚವನ್ನು ಬದಲಾಯಿಸುವುದು ಮುಖ್ಯವೇ ವಿನಾ ಅದನ್ನು ಕೇವಲ ಅರ್ಥ ಮಾಡಿಕೊಳ್ಳ್ಳುವುದಲ್ಲ’ ಎಂಬ ಸೂತ್ರವನ್ನು ವಚನ ಶಾಸ್ತ್ರದ ವಿದ್ಯಾರ್ಥಿಗಳು ಮಾರ್ಕ್ಸನಿಂದ ಕದ್ದಿದ್ದಾರೆ ಎಂದು ಬಾಲಗಂಗಾಧರ ನಂಬಿರುವಂತೆ ಕಾಣುತ್ತಿದೆ. ಇದು ಪೂರ್ಣ ಸತ್ಯವಲ್ಲ. ಇಲ್ಲದಿದ್ದರೆ `ತೊಟ್ಟಿಲ ಮುರಿದು, ನೇಣ ಹರಿದು, ಜೋಗುಳ ನಿಂದಲ್ಲದೆ’ ಸತ್ಯ ಕಾಣುವುದಿಲ್ಲ ಎಂಬ ಮಾತನ್ನು ಅಲ್ಲಮ ಹೇಳುವುದು ಸಾಧ್ಯವಿರಲಿಲ್ಲ. ಅವರ ಪ್ರತಿಕ್ರಿಯೆಯಲ್ಲಿ ಕಂಡು ಬರುವ ಪ್ರಧಾನ ಸಂಗತಿಯೆಂದರೆ `ಸಾಮಾಜಿಕತೆ’ಯ ಬಗ್ಗೆ ಸಂಪೂರ್ಣ ನಿರಪೇಕ್ಷ ನಿಲವು. ಇದನ್ನು ಅವರು ವಸಾಹತುಶಾಯಿ ಪರಿಭಾಷೆ ಎಂದು ಟೀಕಿಸಬಹುದು. ಆದರೆ ವಚನ ಸಂಸ್ಕೃತಿಯ ರವಷ್ಟು ಪರಿಜ್ಞಾನ ಇರುವವರಿಗೂ ತಿಳಿದಿರುವಂತೆ ಅಲ್ಲಿ ಎಲ್ಲರೂ ‘ನೆಲದ’ ಮೇಲೆ ನಿಂತು ಮಾತನಾಡಿದರೆ ವಿನಾ ಸಾಯುಜ್ಯ, ಸಮಾಧಿ, ಮೋಕ್ಷ ಮುಂತಾದವುಗಳನ್ನು ಪ್ರತಿಪಾದಿಸಲಿಲ್ಲ.
ನನಗೆ ಪರಮಾಶ್ಚರ್ಯ ಉಂಟು ಮಾಡಿದ ಸಂಗತಿಯೆಂದರೆ `ಭಾರತೀಯ ಆಧ್ಯಾತ್ಮಿಕ ಪರಂಪರೆ’ ಎಂಬುದರ ಬಗ್ಗೆ ಅವರಾಡುತ್ತಿರುವ ಮಾತು. ಅದರ ಚೌಕಟ್ಟಿನಲ್ಲಿಟ್ಟುಕೊಂಡು ವಚನ ಸಂಸ್ಕೃತಿಯನ್ನು ಅಧ್ಯಯನ ಮಾಡಿದರೆ `ಸತ್ಯ’ವೆನ್ನುವುದು ಗೋಚರಿಸುತ್ತದೆ ಎಂಬ ಅವರ ನಿರ್ಣಯ ಕೇವಲ ಒಂದು ಅಜೆಂಡಾ ಆಗಬಹುದೇ ವಿನಾ ಸಿದ್ಧಾಂತವಾಗಲಾರದು. ಯಾಕೆ ಇಲ್ಲಿ `ಅಜೆಂಡ’ ಎಂಬ ಪದವನ್ನು ಬಳಸಬೇಕಾಯಿತೆಂದರೆ ಶ್ರೀ ಬಾಲಗಂಗಾಧರ ಮತ್ತು ಅವರ ಸಹಸಂಶೋಧಕರು ಕರ್ನಾಟಕದಲ್ಲಿ ಯಾವ ಯಾವ ಸಂಘಟನೆಗಳ ಜೊತೆ ಸಹಯೋಗವಿಟ್ಟುಕೊಂಡಿದ್ದಾರೆ ಎಂಬುದು ಇಂದು ರಹಸ್ಯವಾಗೇನು ಉಳಿದಿಲ್ಲ. ಅವರು ಯಾವ ಸಂಘ-ಸಂಸ್ಥೆಗಳ ಜೊತೆ ಸೇರಿ ಕಾರ್ಯಗಾರಗಳನ್ನು ಮತ್ತು ವಿಶೇಷ ಉಪನ್ಯಾಸಗಳನ್ನು ನಡೆಸುತ್ತಾರೆ ಮತ್ತು ಏರ್ಪಡಿಸುತ್ತಾರೆ ಎಂಬುದು ಗಮನಿಸ ಬೇಕಾದ ಸಂಗತಿಯಾಗಿದೆ.
ತಮ್ಮ ಲೇಖನದ ಒಂದು ಕಡೆ ಶಂಕರಾಚಾರ್ಯರ ಹುಡುಕಾಟ ಮತ್ತು ಅಲ್ಲಮನ ಹುಡುಕಾಟವನ್ನು ಒಂದೇ ನೆಲೆಯಲ್ಲಿಟ್ಟು ಅವರು ಚರ್ಚೆ ಮಾಡುತ್ತಾರೆ. ಲಿಂಗ ಪ್ರತಿಷ್ಠಾಪನೆ ಮಾಡಿದವರಿಗೆ `ನಾಯಕ ನರಕ’ ಎಂದ ಅಲ್ಲಮನನ್ನು ಲಿಂಗ ಪ್ರತಿಷ್ಠಾಪನೆಯನ್ನು ಅಧಿಕೃತಗೊಳಿಸಿದ ಶಂಕರಾಚಾರ್ಯರ ಜೊತೆಗಿಟ್ಟು ನೋಡುವ ಕ್ರಮವನ್ನು ಒಪ್ಪುವುದು ಸಾಧ್ಯವಿಲ್ಲ. ‘ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಸೇರುವ ಮುನ್ನ ಭಕ್ತಿಯ ಮಾಡಬಲ್ಲಡೆ ಆತನೇ ದೇವಾ ಗುಹೇಶ್ವರಾ’ ಎಂಬುದು ಅಲ್ಲಮನ ತತ್ವಜ್ಞಾನ. ಇದನ್ನು ಶಂಕರಾಚಾರ್ಯರ ತತ್ವದ ಜೊತೆಯಲ್ಲಿ ತುಲನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ?
ತಮ್ಮ ಪ್ರತಿಕ್ರಿಯೆಯಲ್ಲಿ ಬಾಲಗಂಗಾಧರ ಅವರು `ವಚನಗಳು ಜಾತಿ ಕುಲ ಭೇದಗಳನ್ನು ಅಲ್ಲಗಳೆಯುತ್ತವೆ ವಿನಾ ಅವು ಜಾತಿ ವಿರೋಧಿ ಅಲ್ಲ’ ಎಂಬುದು ನನ್ನ ವಾದ ಎಂಬ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಹ ಮಾತನಾಡುತ್ತಾರೆ. ಮುಂದುವರಿದು ಪ್ರಜಾವಾಣಿಯಲ್ಲಿನ ವಚನ ಸಂಸ್ಕೃತಿ ಕುರಿತ ಚರ್ಚೆಯು `ನಮ್ಮ ವಿಚಾರಗಳನ್ನು ತಿದ್ದಿಕೊಳ್ಳಲು ಮತ್ತು ನಮ್ಮೆಲ್ಲರ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಸಹಕರಿಸಬೇಕು’ ಎಂಬ ಮಾತನಾಡಿದ್ದಾರೆ. ಇದನ್ನು ಯಾರೂ ಅಲ್ಲಗಳೆಯಲು ಬರುವುದಿಲ್ಲ. ವಚನ ಸಂಸ್ಕೃತಿಯು ಜಾತಿ ವಿರೋಧಿ ಪ್ರಣಾಳಿಕೆಯಲ್ಲ ಎಂಬ ವಾದ ಮಾಡುತ್ತಿರುವ ಚಿಂತಕರು ತಿದ್ದಿಕೊಳ್ಳಬೇಕಾದ ಮತ್ತು ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಮಾತ್ರ ಇಲ್ಲಿ ಹೇಳಬಹುದು.
ಜಾತಿ, ಕುಲ, ಲಿಂಗ ಭೇದಗಳನ್ನು ವಚನ ಸಂಸ್ಕೃತಿಯು ಅಲ್ಲಗಳೆಯುತ್ತದೆ ಎಂಬುದನ್ನು ಬಾಲಗಂಗಾಧರ ಒಪ್ಪುತ್ತಾರೆ. ಜಾತಿಯನ್ನು ಮೀರಿ ಉನ್ನತ ಆಧ್ಯಾತ್ಮಿಕ ಸಾಧನೆಯ ಬಗ್ಗೆ ವಚನಕಾರರು ಚಿಂತಿಸಿದ್ದಾರೆ ಎಂಬುದನ್ನು ಅವರು ಅಲ್ಲಗಳೆಯುತ್ತಿಲ್ಲ (ಪ್ರಾಸಂಗಿಕವಾಗಿ ಬಾಲಗಂಗಾಧರ ಮತ್ತು ಅವರ ಸಹಸಂಶೋಧಕರು ಯಾರೂ ತಮ್ಮ ಪ್ರತಿಕ್ರಿಯೆಯಲ್ಲಿ ಲಿಂಗ ಭೇದದ ವಿಚಾರವಾಗಿ ಅಪ್ಪಿ ತಪ್ಪಿಯೂ ಮಾತನಾಡುವುದಿಲ್ಲ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ `ಲಿಂಗ’ದ ಪ್ರಶ್ನೆಯು ಯಾಕೆ ಮುಖ್ಯವಾಗಿಲ್ಲ ಎಂಬುದನ್ನು ನಾವು ಪ್ರಧಾನವಾಗಿ ಪರಿಗಣಿಸಬೇಕು). ಜಾತಿ-ಕುಲ-ಲಿಂಗ ಭೇದಗಳನ್ನು ಮೀರುವುದು ಮತ್ತು ಜಾತಿಯನ್ನು ವಿರೋಧಿಸುವುದು ಎಂಬುದರ ನಡುವಿನ ಭಿನ್ನತೆ ಏನು? ಅನುಭಾವಕ್ಕೆ ಜಾತಿ ಅಡ್ಡಿ ಎಂದರೆ ಅದನ್ನು ತಿರಸ್ಕರಿಸುವುದು-ವಿರೋಧಿಸುವುದು ಎಂದೇ ಅರ್ಥ ತಾನೆ? ಅವು ಆಧ್ಯಾತ್ಮಿಕ ಸಾಧನೆಗೆ ಅಡ್ಡಿ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದ್ದರಿಂದ ಅವುಗಳನ್ನು ವಚನ ಸಂಸ್ಕೃತಿಯು ವಿರೋಧಿಸುತ್ತಿದೆ ಎಂಬುದು ಖಚಿತವಾಗಿ ಗೋಚರಿಸುವ ಸಂಗತಿ. ಇದನ್ನು ವಸಾಹತಿಶಾಯಿಯು ಹೇಳಿಕೊಟ್ಟ ಪಾಠ ಎಂಬ ಟೀಕೆಯನ್ನು ಕುರಿತಂತೆ ನಾವು ಮತ್ತೊಮ್ಮೆ ಯೋಚಿಸುವ ಅಗತ್ಯವಿದೆ.
ಜಾತಿಯನ್ನು ವಚನಕಾರರು ಅಲ್ಲಗಳೆದರು ಎಂಬುದನ್ನು ಬಾಲಗಂಗಾಧರ ಒಪ್ಪುತ್ತಲೇ ಅದನ್ನು ಅವರು ವಿರೋಧಿಸಲಿಲ್ಲ ಎಂಬ ಅವರ ನಿಲವಿನ ಬಗ್ಗೆ ನಾವು ಸೂಕ್ಷ್ಮವಾಗಿ ಚಿಂತಿಸಬೇಕು.
ಅನುಭಾವ ಎಂಬುದರ ಬಗ್ಗೆ ಅವರು ಬಹಳ ಸೂಕ್ಷ್ಮವಾದ ಬೆಳಕು ಬೀರಿದ್ದಾರೆ. ಆದರೆ ಅದು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿನ `ಅನುಭಾವ’ವೋ ಅಥವಾ ಸ್ಥಳೀಯ ಸಂಸ್ಕೃತಿಗಳು ಮಾತನಾಡುವ ಅನುಭಾವವೋ? ಈ ಪ್ರಶ್ನೆಯನ್ನು ವಸಾಹತುಶಾಯಿ ಚಿಂತನೆಯ ಚೌಕಟ್ಟಿನಿಂದ ಅತೀತರಾಗಿ ಚಿಂತಿಸುವ ಅಗತ್ಯವಿದೆ. ಆಧ್ಯಾತ್ಮಿಕತೆ ಎನ್ನುವುದು ಭಾರತದಲ್ಲಿ ಒಂದೇ ಆಗಿರಲಿಲ್ಲ. ವಚನ ಸಂಸ್ಕೃತಿಯನ್ನೇ ತೆಗೆದುಕೊಂಡರೆ ಅಲ್ಲಿ ಕಾಯಕವು ಆಧ್ಯಾತ್ಮದ ಸಾಧನವಾಗಿತ್ತು ಅಥವಾ ಸರಿಯಾಗಿ ಹೇಳಬೇಕೆಂದರೆ ಕಾಯಕವೇ ಆಧ್ಯಾತ್ಮವಾಗಿತ್ತು.
ಜಾತಿಯನ್ನು ಅಲ್ಲಗಳೆಯುವುದು ಎಂದರೆ ಅದು ಪೋಷಿಸುವ ಅಸಮಾನತೆ, ಅಸ್ಪೃಶ್ಯತೆ, ಅಸ್ವಾತಂತ್ರ್ಯ ಮತ್ತು ಸಾಮಾಜಿಕ ಹೊರಗಣತನವನ್ನು ತಿರಸ್ಕರಿಸುವುದು ಎಂದೇ ಅರ್ಥ ತಾನೆ? ಈ ಸಂಗತಿಗಳನ್ನು ಪೋಷಿಸುತ್ತಿದ್ದ ಜಾತಿಯನ್ನು ತಿರಸ್ಕರಿಸುವುದು ಎಂದರೆ ಅದನ್ನು ವಿರೋಧಿಸುವುದು ಎಂದೇ ತಿಳಿಯಬೇಕು. ಸಾಮಾಜಿಕ ಹೊರಗಣತನ ಎಂಬುದನ್ನು ವಸಾಹತುಶಾಯಿ ಹೇರಿದ ಒಂದು ಸೈದ್ಧಾಂತಿಕ ಪರಿಭಾಷೆ ಎಂದು ಭಾವಿಸಬೇಕಾಗಿಲ್ಲ. ಏಕೆಂದರೆ ವಚನಕಾರರು ಇದನ್ನು ಅತ್ಯಂತ ಸ್ಪಷ್ಟ ರೀತಿಯಲ್ಲಿ ತಮ್ಮ ವಚನಗಳಲ್ಲಿ ಚರ್ಚಿಸಿದ್ದಾರೆ(ನೋಡಿ: ಬೊಂತಾದೇವಿಯ ವಚನ).
ಈ ಹಿನ್ನೆಲೆಯಲ್ಲಿ ಶ್ರೀ ಬಾಲಗಂಗಾಧರ ಮತ್ತು ಅವರ ಸಹಸಂಶೋಧಕರು ಹೇಳುತ್ತಿರುವುದು ಹೊಸತೇನಲ್ಲ. ಆದರೆ ಅವರು ಪ್ರತಿಪಾದಿಸುತ್ತಿರುವಂತೆ ಇದು ಕ್ರೈಸ್ತ್ರ ಥಿಯಾಲಜಿಗೆ ಅತೀತವಾಗಿ ಕಂಡುಕೊಂಡ ಸತ್ಯ ಎಂಬುದನ್ನು ಒಪ್ಪುವುದು ಸಾಧ್ಯವಿಲ್ಲ. ಜಾತಿ, ಕುಲ, ಮೇಲು-ಕೀಳು ಮತ್ತು ಗೊಡ್ಡು ಆಚರಣೆಗಳು ಮುಂತಾದವು ಆಧ್ಯಾತ್ಮಿಕ ಸಾಧನೆಗೆ ಅಡ್ಡಿ ಎಂಬುದನ್ನು ಸಾವಿರಾರು ವರ್ಷಗಳಿಂದ ಚಿಂತಕರು ಪ್ರತಿಪಾದಿಸುತ್ತಾ ಬಂದಿದ್ದಾರೆ. ವಚನಕಾರರು ಅತ್ಯಂತ ಉಗ್ರ ರೀತಿಯಲ್ಲಿ ಇದನ್ನು ಪ್ರತಿಪಾದಿಸಿದ್ದಾರೆ. ಆದರೆ ಭಾರತೀಯ ಪರಂಪರೆಯು ಅದನ್ನು ಜನರ ಮೇಲೆ, ಸಮಾಜದ ಮೇಲೆ ಹೇರುತ್ತಲೇ ಬಂದಿದೆ. ಏಕೆಂದರೆ ಬಾಲಗಂಗಾಧರರಂತೆ ಅದನ್ನು ವಿರೋಧಿಸುವುದಕ್ಕೆ ಪ್ರತಿಯಾಗಿ ಕೇವಲ ಅಲ್ಲಗಳೆಯುವವರ ಗುಂಪು ಎಲ್ಲ ಕಾಲದಲ್ಲೂ ಜಾಗೃತವಾಗಿತ್ತು. ಆದರೆ ವಚನಕಾರರಂತೆ ಅನೇಕ ಸ್ಥಳೀಯ ಆಧ್ಯಾತ್ಮಿಕವಾದಿಗಳು ಅದನ್ನು ಎಲ್ಲ ಕಾಲದಲ್ಲೂ ವಿರೋಧಿಸುತ್ತಾ ಬಂದಿದ್ದಾರೆ. ವಚನಕಾರರು ಅದನ್ನು ವಿಸ್ತೃತ ನೆಲೆಯಲ್ಲಿ ಮಾಡಿದ್ದಾರೆ. ಇದನ್ನು ಬಾಲಗಂಗಾದರ ಅವರು ತಿರಸ್ಕಕರಿಸುತ್ತಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ಅತ್ಯಂತ ಪ್ರಚೋದನಕಾರಿ ಮತ್ತು ಆಸ್ಪೋಟಕಾರಿ ಸ್ವರೂಪಿ ವಿಷಯದ ಬಗ್ಗೆ ಆರೋಗ್ಯಕಾರಿಯಾಗಿ ಮತ್ತು ಅಕೆಡಿಮಿಕ್ ಚೌಕಟ್ಟಿನಲ್ಲಿ ಚರ್ಚೆಯನ್ನು ನಡೆ ಸುತ್ತಿರುವುದು ಹೊಸ ಸಾಧ್ಯತೆಗಳಿಗೆ ದಾರಿ ಮಾಡಿದೆ.







When will we come out of all these? Contemporary world is moving so fast that one has to keep running to stay where they are. If we keep binding ourselves to what happened in past, will we not lose vision of present and prospects of future? Why are the so-called learned minds getting so mean?
ಸರ್, ಪ್ರತಿಕ್ರಿಯೆ ಚೆನ್ನಾಗಿದೆ. ಬಸವಣ್ಣನ ಮೇಲೆ ದಾಳಿ ಮಾಡಿ ಅವನನ್ನು ” ಕುಲಗೆಡಿಸಲು ಯತ್ನಿಸಿ ವಿಫಲವಾದ ನಂತರ ಬಹುಸೂಕ್ಷ್ಮವಾಗಿ ಒಂದು ಪರಂಪರೆಯ ಮೇಲೆ ದಾಳಿ ಮಾಡಲು ಯತ್ನಿಸುತ್ತಿರುವುದನ್ನು ಈ ಚಚರ್ೆಗಳಲ್ಲಿ ಕಾಣಬಹುದು.
ವಚನ ಸಂಸ್ಕೃತಿಯನ್ನು ಬಲವಾಗಿ ಪ್ರತಿಪಾದಿಸುವವರ ಚಿಂತನೆಗಳು ಸತ್ಯವಾದವು ಎಂಬುದು ಅವರೂ ಸೇರಿದಂತೆ ಎಲ್ಲರಿಗೂ ಗೊತ್ತು. ಆದರೆ ಈ ಚಿಂತನೆ ವಸಾಹತುಶಾಹಿ ಹಿನ್ನೆಲೆ ಎಂದು ಹೇಳತೊಡಗಿದರೆ ನಂಬುವ ಗುಂಪು ಬಹಳ ದೊಡ್ಡದಿದೆ. ಹಾಗಾಗಿ ಎಲ್ಲವನ್ನೂ ದೇಶೀಯ ಚಿಂತನೆ(ಮನುವಿನದ್ದು) ಹಿನ್ನೆಲೆಯಲ್ಲಿ ತೋರಿಸುವ ಯತ್ನ ಇದು. ವಚನ ಸಂಸ್ಕೃತಿ ಅಪ್ಪಟ ಮಣ್ಣಿನದ್ದು, ಆಹಾರ ಹುಡುಕುತ್ತಾ ಖೈಬರ್ ಕಣಿವೆ ಮೂಲಕ ಭಾರತಕ್ಕೆ ಬಂದುದಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಿದೆ. ಸಂಸ್ಕೃತವನ್ನು ಹೇರಿ ಪ್ರಾಕೃತವನ್ನು ತುಳಿದಂತೆ ಆಧ್ಯಾತ್ಮದ ಹೆಸರಿನಲ್ಲಿ ವಚನ ಸಂಸ್ಕೃತಿಯನ್ನು ತುಳಿಯಲು ಬಿಡುವುದಿಲ್ಲ. ಅದಕ್ಕೆ ಪ್ರತಿ ಕಲ್ಯಾಣ ಕ್ರಾಂತಿಯನ್ನಾದರೂ ಮಾಡಿಯಾವು.
ಡಾ. ಟಿ ಆರ್ ಚಂದ್ರಶೇಖರರ ಅಭಿಪ್ರಾಯಗಳನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ವಚನಗಳು ಜಾತೀಯತೆಯನ್ನು ವಿರೋಧಿಸುತ್ತವೆ ಎಂಬುದನ್ನು ಅರಿಯಲು ನಮಗೆ ವಸಾತುಷಾಹಿ ಕ್ರಿಶ್ಚಿಯನ್ ತಾತ್ವಿಕತೆಯ ಹಂಗು ಇಲ್ಲ. ಜಾತಿವಿರೋಧವು ಅಧ್ಯಾತ್ಮಿಕ ಸಾಧನೆಗೆ ಲಿಂಗ ಅಸಮಾನ ನತೆಯ ವಿರೋಧವು ಕೂಡಾ ಅಧ್ಯಾತ್ಮಿಕ ಸಾಧನೆಗೆ ಭಕ್ತಿ ಮಾರ್ಗಕ್ಕೆ ಪೂರಕ ಎಂಬ ನೆಲೆಯಲ್ಲಿಯೇ ವಚನ ಚಳವಳಿ ಕನ್ನಡದಲ್ಲಿ ನೆಲೆಯೂರಿದ್ದು ನಮ್ಮ ಭಾಗ್ಯವೆಂದೇ ತಿಳಿದಿದ್ದೇನೆ. ಜಗತ್ತು ಇಷ್ಟೊಂದು ಮುಂದುವರಿಯುತ್ತಿರುವಾಗ ನಾವು ಇನ್ನೂ ಇನ್ನೂ ಜಾತಿಯ ಕೆಂಡವನ್ನು ‘ಬಿಟ್ಟೇನೆಂದರೂ ಬಿಡದೀ ಮಾಯೆ’ ಎನ್ನುವ ರೀತಿಯಲ್ಲಿ ನಮ್ಮ ಸೆರಗಿನಲ್ಲಿ ಗಟ್ಟಿಯಾಗಿ ಕಟ್ಟಿಕೊಂಡಿದ್ದೇವೆ. ಉದಯಕುಮಾರ ಹಬ್ಬು ಕಿನ್ನಿಗೋಳಿ