ಸಿದ್ದಯ್ಯ ಚಿಕ್ಕಮಾದೇಗೌಡ
ಬೂರ್ಖಾ ಹಾಕುವುದು ಸರಿಯೋ ತಪ್ಪೋ ಎಂದು ನಾನು ಇಲ್ಲಿ ವಾದಿಸುತ್ತಿಲ್ಲ. ಅದು ಅವರ ಇಚ್ಚೆಗೆ ಬಿಟ್ಟಿದ್ದು. ಬಿ ಎಂ ಬಶೀರ್ ರವರ ಸ್ವಷ್ಟತೆಯಿಲ್ಲದ ಬರಹಕ್ಕೆ ನನ್ನ ಪ್ರತಿಕ್ರಿಯೆಯಷ್ಟೆ.
ಬಿ ಎಂ ಬಶೀರ್ ರವರು “ ಒಂದೆಡೆ ಬರೆಯುತ್ತಾರೆ, “ಸ್ಕಾರ್ಫ್ ಧರಿಸದೇ ಒಬ್ಬ ಹೆಣ್ಣಿಗೆ ಹೊರಗೆ ಇಳಿಯಲು ಅಸಾಧ್ಯವಾಗುತ್ತದೆ ಎನ್ನುವುದಾದರೆ ಆ ಸಂವೇದನೆಯನ್ನು ನಾವು ಗೌರವಿಸಬೇಕು. ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಾದರೂ ಒಲಿಸಿ ಶಾಲೆ, ಕಾಲೇಜುಗಳಿಗೆ ಸೇರಿಸಿ ಎಂದು ನಮ್ಮ ಶಿಕ್ಷಣ ನೀತಿ ಹೇಳುತ್ತದೆ. ಸ್ಕಾರ್ಫ್ ಅವೈಚಾರಿಕ ಸಂಗತಿಯೇ ಆಗಿದ್ದರೆ, ಶಿಕ್ಷಣವೇ ಅವಳನ್ನು ಸ್ಕಾರ್ಫ್ ಹಾಕದಂತೆ ತಡೆಯುತ್ತದೆ….”

ಆದರೆ, ಹೆಣ್ಣು ತನ್ನ ಇಷ್ಟಕ್ಕೆ ಅನುಸಾರವಾಗಿ ವಸ್ತ್ರ ಧರಿಸಲು ಅಲ್ಲಿನ ಧಾರ್ಮಿಕ ಮುಖಂಡರು ಬಿಡುತ್ತಿಲ್ಲವೆಂಬುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿದೆ. ಇಂದು ಪ್ರತಿಷ್ಟಿತ ಶಾಲೆಗಳಲ್ಲಿ ಕಲಿಯುವ ವಿಧ್ಯಾರ್ಥಿನಿಯರು, ಮನೆಯಿಂದ ಶಾಲೆಗೆ ಹೊರಡುವಾಗ ಬೂರ್ಖಾ ದರಿಸಿಯೇ ಶಾಲೆಗೆ ಬರುತ್ತಾರೆ. ಹಾದಿಯಲ್ಲಿ ಅಥವಾ ಶಾಲೆ ಸಮೀಪಿಸುತ್ತಿದ್ದಂತೆ ಬೂರ್ಖಾ ತೆಗೆದು ಶಾಲೆಯ ಸಮವಸ್ತ್ರವಾದ ಅರ್ದ ಲಂಗ (ಸ್ಕರ್ಟ್) ಧರಿಸುತ್ತಾರೆ. ಮತ್ತು ಶಾಲೆಯಿಂದ ಹೊರಗೆ ತಮ್ಮವರ ಪರಿಚಯವಿಲ್ಲದ ಸ್ಥಳಗಳಲ್ಲಿ ಅವರು ಸ್ಕರ್ಟ್ ಧರಿಸಿಯೇ ಓಡಾಡುತ್ತಾರೆ. ಮನೆ ಸಮೀಪಿಸುತ್ತಿದ್ದಂತೆ ಬೂರ್ಖಾ ಧರಿಸುತ್ತಾರೆ. ಅದೇ ರೀತಿ ಗಾರ್ಮೆಂಟ್, ಕಾರ್ಖಾನೆ, ವ್ಯಾಪಾರ ಮಳಿಗೆ ಮತ್ತು ಇತರೆ ಉದ್ಯೋಗಗಳಿಗೆ ಹೋಗುವ ಹಲವು ಮಹಿಳೆಯರು ಮನೆಯಿಂದ ಹೊರಹೋಗುವಾಗ ಮತ್ತು ಮನೆಗೆ ಮರಳುವಾಗ ಮಾತ್ರ ಬೂರ್ಖಾ ಧರಿಸುತ್ತಾರೆ. ಈ ಬಗ್ಗೆ ಹಲವು ಮುಸ್ಲೀಂ ಸ್ನೇಹಿತರನ್ನು ಪ್ರಶ್ನಿಸಿದಾಗ, ಅವರ ಸ್ಥಳೀಯ ಧಾರ್ಮಿಕ ಮುಖಂಡರು ಇಂತಹ ಕಟ್ಟುಪಾಡು ವಿದಿಸಿರುವ ಬಗ್ಗೆ ತಿಳಿಸುತ್ತಾರೆ. ಇಂತಹ ಕಟ್ಟುಪಾಡುಗಳನ್ನು ಎದುರಿಸಿ ನಿಲ್ಲುವ ಧೈರ್ಯ ಸಾಲದೇ, ತಮಗಿಷ್ಟವಿಲ್ಲದಿದ್ದರೂ ಬೂರ್ಖಾ ಧರಿಸುವ ಒತ್ತಡಕ್ಕೆ ಮುಸ್ಲೀಂ ಮಹಿಳೆಯರು ಒಳಗಾಗುತ್ತಾರೆ. ಹಲವು ಕುಟುಂಬದ ಪುರುಷರೂ ತಮಗೆ ಇಷ್ಟವಿಲ್ಲದಿದ್ದರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಪರಿಸ್ಥಿತಿ ಹೀಗಿರುವಾಗ “…ಆ ಸಂವೇದನೆಯನ್ನು ನಾವು ಗೌರವಿಸಬೇಕು” ಎನ್ನುವ ಬಶೀರ್ ಅನಿಸಿಕೆಗೆ ಅರ್ಥವಿಲ್ಲವೆನಿಸುತ್ತದೆ. ಬೂರ್ಖಾ ಧರಿಸುವ ಹೆಣ್ಣಿನ ಸಂವೇದನೆಯನ್ನು ನಾವು ಗೌರವಿಸೋಣ. ಅದೇ ರೀತಿ ಬೂರ್ಖಾವನ್ನು ಧರಿಸಲು ಇಷ್ಟವಿಲ್ಲದ ಹೆಣ್ಣಿನ ಸಂವೇದನೆಯನ್ನೂ ನಾವು ಗೌರವಿಸೋಣ ಎಂಬ ಮಾತು ಬಶೀರ್ ರವರಿಂದ ಬರಬೇಕಿತ್ತು.






ಚರ್ಚೆಗಳು ಬಹಳವಾಗಿವೆ, ನೇರವಾಗಿ ಹೆಣ್ಣಿಗೆ, ಆಕೆಯ ಇಷ್ಟ ಬಂದಂತೆ ಇರಲು ಬಿಡುವುದು ಲೇಸು, ಚರ್ಚೆಗಳು, ಭಾಷಣಗಳಿಂದ, ವಾಸ್ತವತೆಯನ್ನು ಎಷ್ಟರ ಮಟ್ಟಿಗೆ ಸರಿ ಮಾಡಲಾಗುತ್ತದೆ ಎನ್ನುವುದು ಅನುಮಾನ,,,
ಧರಿಸುವ ವ್ಯಕ್ತಿಗೆ ಆ ಬಟ್ಟೆ ಇಶ್ಟವಾಗಿದ್ದಲ್ಲಿ, ಅದರಲ್ಲಿ ಯಾವುದೇ ತಪ್ಪಿಲ್ಲ ಎನ್ನುವುದು ವಯಕ್ತಿಕ ಅಭಿಪ್ರಾಯ,,