ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್: ಬಿಟ್ಟೆನೆಂದರೂ ಬಿಡದ ಮಾಯೆ- ಜಾತಿ

ಶರಣಪ್ಪ  ಬಾಚಲಾಪುರ ಅವರು ಕೊಪ್ಪಳದ ಈ ಟಿ ವಿ ವರದಿಗಾರರು. ಜಾತಿ ಬಗ್ಗೆ ಅವರ ಅನಿಸಿಕೆಗಳನ್ನು ಇಲ್ಲಿ ಮಂಡಿಸಿದ್ದಾರೆ. ‘ಸುತ್ತಲೂ ಇದೆ ಇನ್ನೂ ಜಾತಿಯತೆ’ ಎನ್ನುವ ಅವರ ಈ ಬರಹಕ್ಕೆ  ಪ್ರತಿಕ್ರಿಯೆ ನೀಡಿ.

ಶರಣಪ್ಪ ಬಾಚಲಾಪೂರ


ಜಾತಿ ಹೀನನ ಮನೆಯ
ಜ್ಯೋತಿ ತಾನು ಹೀನವೆ?
ಜಾತಿ ವಿಜಾತಿ ಎನ್ನಬೇಡ
ದೇವನೊಲಿದಾತನೆ ಜಾತ, ಸರ್ವಜ್ಷ.

ಇದು ಭಾಷಣ ಮತ್ತು ಲೇಖನಗಳಲ್ಲಿ ಉದಾಹರಿಸಲು ಮಾತ್ರ ಎನ್ನುವಂತೆ ಇದೆ. ಶತಮಾನಗಳಿಂದಲೂ ಆಚರಿಸಿಕೊಂಡು ಬಂದಿರುವ ಜಾತಿ ಪದ್ದತಿಯೂ ಇನ್ನು ಜೀವಂತವಾಗಿದೆ. ಅನೇಕ ಸುಶಿಕ್ಷಿತರು ಸಹ ಸಮಾಜದ ಕೆಲವು ಸಂಪ್ರಾದಾಯಸ್ಥರಿಗಾಗಿ ಜಾತಿ ಪದ್ದತಿಯನ್ನು ಜೀವಂತ ಇಟ್ಟುಕೊಂಡು ಬಂದಿದ್ದಾರೆ. ಈ ಜಾತಿ ಪದ್ದತಿಯಿಂದ ಸಹಪಂಕ್ತಿ ಭೋಜನದಲ್ಲಿ ಬ್ರಾಹ್ಮಣರು ಇತರ ಸಮಾಜದವರನ್ನು ಈಗಲೂ ಹೇಗೆ ಪ್ರತೇಕವಾಗಿ ನಡೆಸುತ್ತಾರೆ ಎಂಬುವದಕ್ಕೆ ನಾನು ಅನುಭವಿಸಿದ ಪ್ರಸಂಗವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.

ನಾನು, ನನ್ನ ಆತ್ಮೀಯ ಗೆಳೆಯ, ಆತ ಜಾತಿಯಿಂದ ಬ್ರಾಹ್ಮಣ, ಆದರೆ ಎಂದೂ ತಮ್ಮ ಮನೆಯಲ್ಲಿ ನನ್ನನ್ನು ಹೊರಗೆ ಇಟ್ಟಿಲ್ಲಾ. ಆತನ ಮನೆಯ ಪೂಜಾ ಗೃಹದವರಿಗೂ ಹೋಗಿ ಬಂದಿದ್ದೇನೆ. ಅದಕ್ಕೆ ಆತನಾಗಲಿ, ಆತನ ಕುಟುಂಭದ ಸದಸ್ಯರಾಗಲಿ ವಿರೋಧ ವ್ಯಕ್ತ ಪಡಿಸಿಲ್ಲಾ, ಆತನ ಮನೆಯಲ್ಲಿ ಎಷ್ಟೊ ಸಲ ನಾನು ಅವನ ಕುಟುಂಭದವರೊಂದಿಗೆ ಕುಳಿತು ಊಟ ಮಾಡಿದ್ದೇನೆ, ಆತನೂ ನಮ್ಮೊಂದಿಗೆ ಸಹಪಂಕ್ತಿಯಲ್ಲಿ ಕುಳಿತು ಊಟ ಮಾಡಿದ್ದಾನೆ. ಇದರಿಂದ ಆತ ಮತ್ತು ನನ್ನ ಮಧ್ಯೆ ಜಾತಿ ಮೀರಿದ ಸ್ನೇಹ ಸಂಬಂಧ ಬೆಳೆಸಿಕೊಂಡಿದ್ದೇವೆ. ಅಲ್ಲದೆ ಸಾಕಷ್ಟು ಸಲ ಜಾತಿಯ ಬಗ್ಗೆ ಚರ್ಚೆನೂ ಮಾಡಿದ್ದೇವೆ. ಆದರೆ ಇದು ಆತನ ಸ್ವಂತ ಮನೆಯಲ್ಲಿ ಮಾತ್ರ ಸಾಧ್ಯವಾಯಿತು. ಆದರೆ ಆತನ ಮನೆಯ ಖಾಸಗಿ ಕಾರ್ಯಕ್ರಮವನ್ನು ಸಾರ್ವಜನಿಕ ಸ್ಥಳದಲ್ಲಿ ಮಾಡಬೇಕಾದರೆ ಇದು ಆತನಿಗೆ ಸಾಧ್ಯವಾಗುತ್ತಿಲ್ಲಾ ಎಂಬುವದಕ್ಕೆ ಆತನ ಮಗನ ಉಪನಯನ ಕಾರ್ಯಕ್ರಮದಲ್ಲಿ ಬ್ರಾಹ್ಮಣರಲ್ಲದವರನ್ನು ಊಟಕ್ಕೆ ಕರೆದಾಗ ಆತ ಧರ್ಮಸಂಕಟ ಅನುಭವಿಸಿದ್ದನ್ನು ನಾನು ಕಂಡಿದ್ದೇನೆ.

ಇತ್ತೀಚಿಗೆ ಆತ ತನ್ನ ಮೊದಲು ಮಗನ ಉಪನಯನ ಕಾರ್ಯಕ್ರಮವನ್ನು ಮಾಡಿದ, ಈ ಕಾರ್ಯಕ್ರಮಕ್ಕೆ ಸಹಜವಾಗಿ ನನ್ನ ಮತ್ತು ನನ್ನ ಇತರ ಗೆಳಯರನ್ನು ಉಪನಯನ ಕಾರ್ಯಕ್ರಮದ ಊಟಕ್ಕೆ ಕರೆದಿದ್ದ, ಈ ಕಾರ್ಯಕ್ರಮವು ಒಂದು ದೇವಸ್ಥಾನದಲ್ಲಿತ್ತು. ಮುಂಜಾನೆ ಉಪನಯನದ ವಿಧಿ ವಿಧಾನಗಳು ಮುಗಿದವು. ಈ ಸಂದರ್ಭಕ್ಕೆ ನಾವು ಹೊಗಲು ಆಗಿರಲಿಲ್ಲಾ, ಆದರೆ ಮದ್ಯಾನ್ಹ ಊಟದ ಸಮಯಕ್ಕೆ ಸರಿಯಾಗಿ ನಾವೇಲ್ಲ ಗೆಳೆಯರು ಉಪನಯನ ನಡೆಯುವ ಸ್ಥಳಕ್ಕೆ ಹೋದೆವು. ಗೆಳೆಯ ಆತ್ಮೀಯವಾಗಿ ಸ್ವಾಗತಿಸುತ್ತಾನೆ ಆದರೆ ಉಪನಯನ ನಡೆಯುವ ಸ್ಥಳಕ್ಕೆ ಕರೆಯುತ್ತಿಲ್ಲಾ. ಇನ್ನೇನು ಉಪನಯನ ಮಾಡಿದ ಆಚಾರ್ಯರ ಊಟ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಜಾತಿಯಿಂದ ಬೇರೆ ಕುಲದವರಾದ ನಮ್ಮನ್ನು ಹೊರಗೆ ಕಳುಹಿಸವಂತೆ ಆತನ ಸಮಾಜದ ಹಿರಿಯರು ಒತ್ತಡ.

ಆದರೆ ಇಲ್ಲಿಯವರಿಗೂ ಜಾತಿ ಮೀರಿದ ಸಂಬಂಧ ಬೆಳೆಸಿದ ಗೆಳೆಯ ಯಾವ ರೀತಿ ನಮ್ಮನ್ನು ಹೊರಗೆ ಹೋಗು ಎನ್ನುತ್ತಾನೆ. ಆದರೆ ನಮ್ಮನ್ನು ಹೊರಗೆ ಕಳುಹಿಸದೆ ಇದ್ದರೆ ಅಲ್ಲಿಯ ಧಾರ್ಮಿಕ ಕಾರ್ಯಕ್ರಮ ಮಾಡುವವರು ಆತನ ಮೇಲೆ ತೀವ್ರ ಒತ್ತಡ ಇಂತಹ ಧರ್ಮ ಸಂಕಟದಿಂದ ಗೆಳೆಯ ಜರ್ಜರಿತನಾಗಿದ್ದ. ದೂರದ ಸಂಬಂಧಿಕರು ಬಂದಿದ್ದಾರೆ ಅವರಿಗೆ ಉಪನಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು, ಅಲ್ಲಿ ಆಚಾರ್ಯರು ಶೂದ್ರರನ್ನು ಹೊರಗೆ ಕಳುಹಿಸಿದರೆ ಆಗ ಮಾತ್ರ ಮುಂದಿನ ಕಾರ್ಯಕ್ರಮ ಎಂಬಂತೆ ತಮ್ಮ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ. ಅತ್ತ ಆಚಾರ್ಯರು ಮತ್ತು ತಮ್ಮ ಸಮಾಜದ ಹಿರಿಯರ ಮಾತು ಕೇಳಬೇಕಾ ಇತ್ತ ನಮ್ಮನ್ನು ಸಮಾದಾನದಿಂದ ಹೊರಗೆ ಕಳುಹಿಸಬೇಕಾ? ಇಂತಹ ಧರ್ಮಸಂಕಟ ಎಂದು ಬರಬಾರದು ಎಂಬಂತೆ ಒದ್ದಾಡುತ್ತಿದ್ದ.

ಈ ರೀತಿ ಧರ್ಮಸಂಕಟ ಅನುಭವಿಸುತ್ತಿದ್ದಿನಿ ಎಂದು ನಮಗೂ ಹೇಳಲಾಗದು, ಅತ್ತ ಇಲ್ಲಿ ಎಲ್ಲಾ ಜಾತಿಯೊಂದಿಗೆ ನಾನು ಬೆಳೆದಿದ್ದೇನೆ ಅದಕ್ಕಾಗಿ ಅವರನ್ನು ಹೊರಗೆ ಕಳುಹಿಸಲು ಸಾದ್ಯವಿಲ್ಲ ಎಂದು ಹೇಳುವ ಧೈರ್ಯವು ಸಾಲದು. ಈ ಧರ್ಮಸೂಕ್ಷ್ಮತೆಯನ್ನು ಗಮನಿಸಿದ ನಾವು ಪ್ರತಿಭಟಿಸಲು ಆಗದೆ ದೇವಾಲಯದ ಹೊರಭಾಗದಲ್ಲಿ ಹಾಳುಹರಟೆಯಲ್ಲಿ ಕಾಲಕಳೆದವು.

ಉಪನಯನ ಕಾರ್ಯಕ್ರಮ ಮುಗಿದು ಬ್ರಾಹ್ಮಣ ಜಾತಿಯವರ ಊಟವಾಗುವವರಿಗೂ ನಾವು ಹೊರಗೆ ಕುಳಿತುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಇತರ ಗೆಳೆಯರು ಸಹ ಬಂದು ನಮ್ಮೊಂದಿಗೆ ಮಾತನಾಡಿದರೆ, ಹೊರತು ತಮ್ಮೊಂದಿಗೆ ಸಹ ಪಂಕ್ತಿ ಭೋಜನಕ್ಕೆ ಕರೆಯಲಿಲ್ಲಾ. ಇದರಿಂದ ನನ್ನ ಕೆಲವು ಗೆಳೆಯರು ಅವಮಾನಿತರಾದಂತಾಗಿ ಊಟವೆ ಬೇಡವೆಂದು ತಮ್ಮ ಮನೆಗೆ ಹೊರಟು ಹೋದರು. ಆದರೆ ನನ್ನಂತಹ ಆತ್ಮೀಯರು ಇದನ್ನು ವಿರೋಧಿಸಿದರೆ ‘ಇಲಿಯಪ್ಪನಿಗೆ ಹೊಡೆಯುವ ಏಟು ಗಣಪನಿಗೆ ಬೀಳುತ್ತದೆ’ ಎನ್ನುವಂತೆ ಆಗುತ್ತದೆ ಎಂದುಕೊಂಡು ಗೆಳೆಯ ತಪ್ಪು ಮಾಡದಿದ್ದರೂ ಧರ್ಮಸಂಕಟದಲ್ಲಿ ಬಿದ್ದಿದ್ದಾನೆ ಎಂದುಕೊಂಡು ಕಾದು ಕುಳಿತು ಬ್ರಾಹ್ಮಣರ ಊಟದ ನಂತರ ಊಟ ಮಾಡಿ ಬಂದೆವು.

ಇನ್ನು ಕೆಲವು ಗೆಳೆಯರು ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಊಟಕ್ಕೆ ಕರೆದರೆ ಅವರು ಮೊದಲು ಬ್ರಾಹ್ಮಣರಿಗೆ ಊಟ ಮಾಡಿಸಿ ನಂತರದ ಅವಧಿಗೆ ಇತರ ಜಾತಿಯ ಗೆಳೆಯರು ಬರುವಂತೆ ಸಮಯವನ್ನು ನಿಗಿಧಿ ಮಾಡುತ್ತಾರೆ. ಆ ಸಮಯದಲ್ಲಿ ತಾವು ಸಹ ನಮ್ಮಂತ ಇತರ ಜಾತಿಯ ಗೆಳೆಯರೊಂದಿಗೆ ಕುಳಿತು ಊಟ ಮಾಡಿ ಸಹ ಪಂಕ್ತಿ ಭೋಜನದಲ್ಲಿ ಶಿಷ್ಟಾಚಾರವನ್ನು ಪಾಲಿಸುವಂತೆ ಇತರ ಜಾತಿಯ ಗೆಳೆಯರಿಗೂ ಅವಮಾನವಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಇತ್ತೀಚಿಗೆ ಪೇಜಾವರ ಸ್ವಾಮಿಗಳು ಬ್ರಾಹ್ಮಣರು ಸಹ ಪಂಕ್ತಿ ಬೋಜನ ಮಾಡಬಾರದು ಎಂದು ಹೇಳಿಕೆ ನೀಡಿದ್ದಾರೆ. ಅವರೆ ಕಳೆದ ಎರಡು ವರ್ಷಗಳ ಹಿಂದೆ ದಲಿತ ಕೇರಿಯಲ್ಲಿ ಪಾದಾಯಾತ್ರೆ ಮಾಡಿ ದಲಿತನ್ನೊಂದಿಗೆ ಬೆರೆತ್ತಿದ್ದೆವು. ತಾವು ಅಸ್ಪೃಶ್ಯತೆಯನ್ನು ಆಚರಿಸುತ್ತಿಲ್ಲ ಎಂಬಂತೆ ಮಾತನಾಡಿ ಹೊಸ ಹಾದಿಗೆ ನಾಂದಿ ಹಾಡಿದರು ಎಂದು ಬಹಳಷ್ಟು ಜನ ಅವರನ್ನು ಅಭಿನಂದಿಸಿದ್ದರು. ಆದರೆ ಅವರು ಇತ್ತೀಚಿಗೆ ಜಾತಿಯಿಂದ ಬ್ರಾಹ್ಮಣರು ಮತ್ತು ಇತರರು ಸಹ ಪಂಕ್ತಿ ಭೋಜನದ ಬಗ್ಗೆ ನೀಡಿರುವ ಹೇಳಿಕೆ ಅವರಲ್ಲಿಯ ದ್ವಂದ್ವವನ್ನು ಪ್ರತಿಬಿಂಭಿಸುತ್ತಿದೆ.

ಇದು ಇಂದಿನ ಕಂಪ್ಯೂಟರ್ ಯುಗದಲ್ಲಿ ಜಾತಿ ಪದ್ದತಿಯಲ್ಲಿ ಸಹಭೋಜನದಲ್ಲಿ ಜಾತಿ ವಿಜಾತಿಗಳನ್ನು ಹೇಗೆ ವಿಗಂಡಿಸುತ್ತಾರೆ ಎಂಬುವದಕ್ಕೆ ಉದಾಹರಣೆ ಅಷ್ಟೆ. ಇಂದು ನಗರ ಪ್ರದೇಶದಲ್ಲಿಯೂ ಈ ರೀತಿ ಸಹಪಂಕ್ತಿಭೋಜನ ವಿರೋಧವು ಬ್ರಾಹ್ಮಣ ಮಠಗಳಲ್ಲಿ ಕಂಡು ಬರುತ್ತಿದೆ. “ಮನುಷ್ಯ ತಾನೊಂದೆ ವಲಂ” ಎಂಬ ಕಲ್ಪನೆ ಎಂದು ಬರುತ್ತದೆ ಎಂಬುವದನ್ನು ಕಾದು ನೋಡಬೇಕು.

‍ಲೇಖಕರು avadhi

19 June, 2013

9 Comments

  1. nagraj.harapanahalli

    ಶರಣಪ್ಪ ಬ್ರಾಹ್ಮಣರಿಗೆ ಬದಲಾಗುವ ಮನಸ್ಸಿದ್ದರೂ, ಅವರ ಮಠಗಳ ಸ್ವಾಮಿಗಳು ಜಾತಿ ಬಿಡಬೇಡಿ ಅಂತಾ ಬಡುಕೋತಾ ಇದಾರೆ …ಉತ್ತರ ಕನ್ನಡದಲ್ಲಿ ಮೇಲ್ಜಾತಿಯ ಕೆಲವರಿಗೆ ಹೆಣ್ಣು ಸಿಗದೆ ದಾವಣಗೆರೆ ಅನಾಥ ಆಶ್ರಮದ ಹೆಣ್ಣು ಮಕ್ಕಳನ್ನು ಮದುವೆ ಯಾಗುತ್ತಿದ್ದಾರೆ. ಯಾಕೆಂದ್ರೆ ಅನಾಥರಿಗೆ ಎಲ್ಲಿಯ ಜಾತಿ…? ಇನ್ನು ಕೆಲ ಬ್ರಾಹ್ಮಣ್ರು ಲಿಂಗಾಯತ ಹುಡುಗಿಯರನ್ನು ಮದುವೆ ಆಗುತ್ತಿದ್ದರೆ. ಇನ್ನು ನೌಕರಿ ಇದ್ದರೆ ಜಾತಿ ಗೀತಿ ನೋಡದೆ ಮದುವೆ ಆಗಿ …ನಂತರ ವ್ಯವಸ್ಠಿತವಾಗಿ ಜಾತಿ ಅಚರಿಸುತ್ತಾರೆ..

  2. ಮಲ್ಲಿಕಾರ್ಜುನ ಎಂ. ಕೊತಬಾಳ, ಕೊಪ್ಪಳ

    ಆತ್ಮೀಯ ಶರಣಪ್ಪ ಬಾಚಲಾಪುರ ಅವರೇ,
    ತಾವು ಅನುಭವಿಸಿದ ಪ್ರಸಂಗಗಳನ್ನು ಶೂದ್ರ ಕುಲ(?) ದಲ್ಲಿ ಹುಟ್ಟಿದವರೆಲ್ಲರೂ (ಅದರಲ್ಲೂ ಆರ್ಥಿಕವಾಗಿ ಮಧ್ಯಮ ವರ್ಗಕ್ಕೇರಿದವರು) ಒಂದಲ್ಲ ಒಂದು ಬಾರಿ ಅನುಭವಿಸಿರುತ್ತಾರೆ. ನಾಗರಾಜ ಹರಪನಹಳ್ಳಿ ಅವರು ಹೇಳಿರುವಂತೆ ಕೆಲವರು ಪರಿವರ್ತನೆ ಬಯಸಿದರೂ, ಆದನ್ನು ಪಾಲಿಸದಂತೆ ಆಯಾ ಮೇಲ್ವರ್ಗ ಪಂಗಡದ ಅಂಧ ಧರ್ಮರಕ್ಷಕರು ತಡೆಯೊಡ್ಡತ್ತಲೇ ಇದ್ದಾರೆ. ಏಕೆಂದರೆ ಅವರು ಬ್ರಹ್ಮನ ತಲೆಯಿಂದ ಹುಟ್ಟಿದ್ದಾರೆ, ನಾವು ಶೂದ್ರರು ಬ್ರಹ್ಮನ ಕುಂಡಿಯಿಂದ ಹುಟ್ಟಿದ್ದೇವೆ ಎಂದು ಭ್ರಮಿಸಿ ಅದನ್ನೇ ಸತ್ಯವೆನ್ನುವಂತೆ ಪ್ರತಿಪಾದಿಸಿ ನಮ್ಮ ತಲೆಯ ಮೇಲೆ ಅಹಂ ನಿಂದ ತೇಲಾಡಲೆತ್ನಿಸುತ್ತಾರೆ. “ಕುಲ ಕುಲವೆಂದು ಹೊಡೆದಾಡುವಿರೇಕೆ? ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಬಲ್ಲಿರಾ?” ಎಂದು ಹೇಳಿದ ದಾಸಶ್ರೇಷ್ಠರ ತಿಳವಳಿಕೆಗಳನ್ನು ಗಾಳಿಗೆ ತೂರುತ್ತಾರೆ.
    ಬಸವಣ್ಣನವರ ವಿಶ್ವಪಥದಲ್ಲಿ ನಡೆದು ಬದುಕಬಲ್ಲ ನಾವು, ಈ ಅಜ್ಞಾನಿ, ಅವಿವೇಕಿಗಳ ಕಾಲ್ದಾರಿಯಲ್ಲಿ ತಪ್ಪಿಯೂ ನಡೆಯುವುದು ಬೇಡ ಎನ್ನಿಸುತ್ತದೆ.

  3. Shivakumara

    Never change castism in India

  4. ನಾಗರಾಜ್ ಹೆತ್ತೂರ್

    ಶರಣಪ್ಪ ಅವರಿಗೆ ನಮಸ್ಕಾರಗಳು ಜಾತಿ ವ್ಯವಸ್ಥೆ ಬಗ್ಗೆ ನಿಮ್ಮದೇ ಆದ ಬೆಳಕು ಚೆಲ್ಲಿದ್ದೀರಿ. ನಾವು ಜಾತಿ ವ್ಯವಸ್ಥೆ ಬಗ್ಗೆ ಹೀಗೆ ಹೇಳಿಕೊಳ್ಳುತ್ತಲೇ ನೋವು ನಿವೇಧನೆ ಮಾಡಿಕೊಳ್ಳಬೇಕಾದ ಸ್ಥಿತಿ ಇಂದು ಇದೆ ಮುಂದೆಯೂ ಇರುತ್ತದೆ. ಇದನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ನಗರ ಪ್ರದೇಶಗಳಲ್ಲಿ ಜಾತಿ ಹೆಸರು ಹೇಳಿಕೊಂಡು ಒಂದು ಬಾಡಿಗೆ ಮನೆಯಲ್ಲಿ ಸೇರಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಇದೆ. ದಲಿತರು ಸುಳ್ಳು ಜಾತಿ ಹೇಳಿಕೊಂಡೇ ಮನೆಯಲ್ಲಿ ಒಂದು ರೀತಿಯ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.ದೂಡುತ್ತಿದ್ದೇವೆ ಕೂಡ. ಬರೆಯುವುದಕ್ಕೂ ಅದನ್ನು ಅನುಭವಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಮೇಲ್ವರ್ಗದವರು ಎಷ್ಟೇ ಹೇಳಿದರೂ, ಸಮಾನತೆ ಎಂದು ಮಾತನಾಡಿದರೂ ವಾಸ್ತವದಲ್ಲಿ ಜಾರಿಗೆ ತರುವುದು ಕಷ್ಟ. ಒಂದೊಂದು ಸಾರಿ ಅನ್ನಿಸುತ್ತದೆ.ನಾವು ಈ ಬಗ್ಗೆ ಹೇಳಿಕೊಳ್ಳುವುದೇ ತಪ್ಪೇನು ಎಂದು… ಆದರೂ ಹೇಳಲೇಬೇಕು…

    • Somalinga Kharge

      I have lived all my life in rented houses in cities. Not even once the landlords asked me my caste nor did I ever tell them my caste. So I find your experience unbelievable. In cities, landlords ask for good rent, good advance, and some guarantee that you will not misuse the premises. Caste is never a factor. In fact, many landlords are themselves into inter caste marriages. I have seen Brahmin landlords having absolutely no problem with the tenant cooking non-veg in the premises. All they care about is timely payment of rent.

  5. Vijendra

    AS long as so called jagadgurugulu,pujarigalu,buta swamijigalu iruvavarege,avarige kara jodisuva jana iruva tanaka,daridrada rajakiya ……it wont go….

  6. Somalinga Kharge

    Upanayana is actually a ritual. It is the initiation of the boy to the study of Vedas.. It is not a social or public function. Sharanappa’s friend should not have invited Sharanappa and others (including those from his own caste) to the ritual. Only family members and close relatives should be invited. Sharanappa should refuse to attend Upanayana in the future.

  7. NNMurthy Pyati

    ಆತ್ಮೀಯ ಶರಣಪ್ಪ ಅವರೇ, ನಿಮ್ಮ ಲೇಖನ ಓದಿದೆ. ಇದು ನನ್ನಂಥ ಅನೇಕ ಬ್ರಾಹ್ಮಣರ ಸಮಸ್ಯೆಯೂ ಹೌದು. ಎಷ್ಟೋ ಸಂದರ್ಭದಲ್ಲಿ ನಾನು ಕೂಡ ಇಂಥ ಸಂದಿಗ್ದಕ್ಕೆ ಸಿಲುಕಿದ್ದೇನೆ. ಅದರೊಂದಿಗೆ ನನ್ನ ಕೆಲ ಸಮಸ್ಯೆಗಳನ್ನೂ ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ನನ್ನಂಥ ಅನೇಕರು ಜಾತಿಯಿಂದ ಮಾತ್ರ ಬ್ರಾಹ್ಮಣರು. ನಾವು “Who knows Brahma is called Brahmin’ ಅನ್ನೋ ಹೇಳಿಕೆಯನ್ನ ನಂಬಿದವರು. ಆದರೆ ನಾವು ಎಷ್ಟೇ ಜಾತಿ ವಿಷಯದಿಂದ ದೂರವಿದ್ದರೂ ನಮ್ಮನ್ನ ಮಾತ್ರ ನಮ್ಮ ಗೆಳೆಯರೇ ಬ್ರಾಹ್ಮಣರು ಎಂದು ಗುರುತಿಸುತ್ತಾರೆ. ನಮ್ಮನ್ನ ದ್ವೇಷಿಸುತ್ತಾರೆ. ನಾವು ಮಾಡೋ ವರದಿಯಲ್ಲಿ, ನಮ್ಮ ಆಚರಣೆಯಲ್ಲಿ ಬ್ರಾಹ್ಮಣ್ಯವನ್ನ ಹುಡುಕುವ ಜನರು (ಪತ್ರಕರ್ತರೂ ಸೇರಿದಂತೆ) ನಮ್ಮ ಮಧ್ಯೆ ಇದ್ದಾರೆ ಅನ್ನೋದು ನಿಮಗೂ ಗೊತ್ತು. ಇದರಿಂದಾಗಿ ‘ನಾವು ಜಾತಿ ಬಿಟ್ಟರೂ, ಜಾತಿ ನಮ್ಮನ್ನ ಬಿಡುತ್ತಿಲ್ಲ…’ಅನ್ನೋ ಮಾತನ್ನ ಕೆಲವರು ಹೇಳುತ್ತಿದ್ದಾರೆ. ಇನ್ನು ಪಂಕ್ತಿಬೇಧ ವಿಷಯದ ಬಗ್ಗೆ ಹೇಳೋದಾದ್ರೆ, ಅನೇಕ ಬ್ರಾಹ್ಮಣ ಯುವಕರು ನಿತ್ಯವೂ ರಾತ್ರಿ ಹೋಟೆಲ್ ನಲ್ಲಿ ಪಂಕ್ತಿ ಭೋಜನ ಮಾಡೋದು ನಿಮಗೆ ಗೊತ್ತು. ಕೇವಲ ಪಂಕ್ತಿ ಭೋಜನವಲ್ಲ, ಪಂಕ್ತಿ ತೀರ್ಥ ಸೇವನೆಯನ್ನೂ ಮಾಡುತ್ತಾರೆ. ಹೀಗಾಗಿ ನನ್ನಂಥವರು ನಿಮ್ಮ ಆರೋಪವನ್ನ ನಿರಾಕರಿಸುತ್ತಾರೆ. ನಿತ್ಯವೂ ‘ಪಂಕ್ತಿ ತೀರ್ಥ-ಭೋಜನ’ ನಡೀತಿರುವಾಗ, ಯಾರೋ ಕೆಲ ಸಂಪ್ರದಾಯಸ್ಥರು ಅದನ್ನ ವಿರೋಧಿಸುತ್ತಾರೆ ಅಂದ್ರೆ, ನಿವ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ. ಯಾವುದನ್ನ ಹೆಚ್ಚು ಹೆಚ್ಚು ವಿರೋಧಿಸಲಾಗುತ್ತೋ, ಅದು ಹೆಚ್ಚು ಹೆಚ್ಚು ಬಳಕೆಗೆ ಬರುತ್ತೆ ಅನ್ನೋದು ನನ್ನ ಅಭಿಪ್ರಾಯ. ನೀವು ಕೊಪ್ಪಳದ ರಾಘವೇಂದ್ರ ಸ್ವಾಮಿ ಮಠಕ್ಕೆ ಆರಾಧನೆ ಸಂದರ್ಭದಲ್ಲಿ ಹೋದಾಗ, ಅಲ್ಲಿ ನಡೆಯೋ ಭೋಜನದ ವೇಳೆ ಎಲ್ಲ ಜಾತಿಯವರೂ ಸೇರಿರುತ್ತಾರೆ. ಯಾರು ಎಲ್ಲರೊಂದಿಗೆ ಸೇರೋದಿಲ್ಲವೋ ಅವರು ಮನೆಗೆ ಹೋಗಿ ಊಟ ಮಾಡುತ್ತಾರೆ. ಅದು ಅವರವರ ವೈಯಕ್ತಿಕ ವಿಷಯ. ಈ ಮಠದಲ್ಲಿ ಯಾರೂ ಗಲಾಟೆ ಮಾಡದೇ, ಯಾರೂ ಪ್ರತಿಭಟನೆ ಮಾಡದೇ ಇಂಥದ್ದೊಂದು ಆಚರಣೆ ರೂಢಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಅದು ಎಲ್ಲೆಡೆ ಬರಬಹುದು. ಆದರೆ ಅದನ್ನೇ ಒಂದು ವಿಷಯವನ್ನಾಗಿ ಮಾಡಿಕೊಂಡು ವಾದ-ಪ್ರತಿವಾದ ಮಾಡುತ್ತಾ ಕುಳಿತುಕೊಳ್ಳೋದು ಎಷ್ಟರಮಟ್ಟಿಗೆ ಸರಿ? ಅಷ್ಟಕ್ಕೂ ನನ್ನಂಥ ಅನೇಕರು ಉಡುಪಿ ಹಾಗೂ ಮಂತ್ರಾಲಯಕ್ಕೆ ಹೋದಾಗ ಊಟವನ್ನು ಹೋಟೆಲ್ ನಲ್ಲಿ ಮಾಡಿಕೊಂಡು ಬರುತ್ತೇವೆ. ಅಷ್ಟಕ್ಕೂ ಅಲ್ಲಿಯೇ ಊಟ ಮಾಡಬೇಕೆಂದಾದರೆ, ಸಾಮಾನ್ಯರ ಪಂಕ್ತಿಯಲ್ಲಿ ಕುಳಿತು ಊಟ ಮುಗಿಸಿ ಬರುತ್ತೇವೆ. ಇದೇ ಕಾರಣಕ್ಕೆ ಪೇಜಾವರ ಶ್ರೀಗಳ ಪಂಕ್ತಿ ಭೋಜನ, ದಲಿತ ಕೇರಿಯಲ್ಲಿ ಓಡಾಟದ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡದೇ ನಾವು ನಮ್ಮ ದಾರಿಯಲ್ಲಿಯೇ ಸಾಗೋ ಕಾಲ ಬಂದಿದೆ. ಪೇಜಾವರ ಶ್ರೀಗಳಿಗೆ ವಯಸ್ಸಾಗಿದೆ. ಅವರು ಹಾಗೂ ಹೀಗೂ ಹೇಳಿಕೊಂಡು ಕಾಲ ಕಳೆಯಲಿ. ಆದರೆ ಬರೀ ಪಂಕ್ತಿ ಭೋಜನದ ವಿಷಯಕ್ಕೆ ಮಹತ್ವವನ್ನ ಕೊಟ್ಟು ಜಾತಿಯ ವಿಷವನ್ನ ಬಿತ್ತೋ ಕೆಲಸ ಆಗದಿರಲಿ. ಅಷ್ಟಕ್ಕೂ ‘ಬ್ರಾಹ್ಮಣಂ ಭೋಜನ ಪ್ರೀಯಂ..’ ಅಂತಾ ಹೇಳುತ್ತಾ ಅದೇ ಭೋಜನದ ವಿಷಯಕ್ಕೆ ಸಂಬಂಧಿಸಿದಂತೆ ಈ ವಿಷಯವನ್ನ ಮತ್ತೆ ಮತ್ತೆ ಏಕೆ ಕೆದಕುವುದು. ಎಲ್ಲಿ ಪಂಕ್ತಿ ಭೋಜನ ಇರೋದಿಲ್ಲವೋ ಅಲ್ಲಿಗೆ ಉಳಿದ ಜಾತಿಯವರು ಹೋಗದಿರಲು ನಿರ್ಧರಿಸಿದ್ರೆ, ಆಗ ತಾನಾಗಿಯೇ ಹೊಸದೊಂದು ಪರಿಹಾರವನ್ನ ಬ್ರಾಹ್ಮಣರು ಕಂಡುಕೊಳ್ಳಬಹುದು. ಹೇಗೆ ಬ್ರಾಹ್ಮಣರು ಬೇರೆಯವರೊಂದಿಗೆ ಭೋಜನ ಮಾಡಲು ಒಪ್ಪುವುದಿಲ್ಲವೋ, ಅದೇ ರೀತಿ ಉಳಿದವರೂ ಅವರೊಂದಿಗೆ ಭೋಜನ ಮಾಡಲು ಒಪ್ಪದಿದ್ದರೆ (ಕೆಲದಿನಗಳವರೆಗೆ) ಬಹುಶಃ ಬ್ರಾಹ್ಮಣರಿಗೆ ಆ ನೋವು ಅರ್ಥವಾದೀತೇನೋ? ಇದು ನನ್ನ ವೈಯಕ್ತಿಕ ಅಭಿಪ್ರಾಯ.

  8. Somalinga Kharge

    ಪ್ರಿಯ ಮಲ್ಲಿಕಾರ್ಜುನ ಎಂ. ಕೊತಬಾಳ, ಕೊಪ್ಪಳ ಅವರೇ, “ನಾವು ಶೂದ್ರರು ಬ್ರಹ್ಮನ ಕುಂಡಿಯಿಂದ ಹುಟ್ಟಿದ್ದೇವೆ ಎಂದು ಭ್ರಮಿಸಿ ಅದನ್ನೇ ಸತ್ಯವೆನ್ನುವಂತೆ ಪ್ರತಿಪಾದಿಸಿ ನಮ್ಮ ತಲೆಯ ಮೇಲೆ ಅಹಂ ನಿಂದ ತೇಲಾಡಲೆತ್ನಿಸುತ್ತಾರೆ.” ಅಂತ ಬರೆದಿದ್ದೀರಿ. is this true? ನಾನು ಅನೇಕ ಬ್ರಾಹ್ಮಣರ ಸ್ನೇಹ ಹಾಗೂ ಒಡನಾಟ ಇಟ್ಟುಕೊಂಡಿದ್ದೇನೆ. ಬ್ರಾಹ್ಮಣ ಸಂಪ್ರದಾಯಗಳ ಬಗ್ಗೆ ಅವರ ಜೊತೆ ಅನೇಕ ಬಾರಿ ಚರ್ಚೆ ಕೂಡ ನಡೆಸಿದ್ದೇನೆ. ನನ್ನ ಅನುಭವಕ್ಕೆ ಬಂದ ವಿಚಾರ ಏನೆಂದರೆ ಬಹುತೇಕ ಬ್ರಾಹ್ಮಣರಿಗೆ ಪುರುಷ ಸೂಕ್ತ ಗೊತ್ತೇ ಇಲ್ಲ. “ಶೂದ್ರರು ಬ್ರಹ್ಮನ ಕುಂಡಿಯಿಂದ ಹುಟ್ಟಿದ್ದಾರೆ” ಅಂತ ಅವರು ಖಂಡಿತ ನಂಬಿಲ್ಲ. ಬ್ರಾಹ್ಮಣರಷ್ಟೇ ಅಲ್ಲ, ನನ್ನ ಒಡನಾಟದ ಶೂದ್ರ ಹಾಗೂ ದಲಿತರು ಸಹ ಬ್ರಹ್ಮನ ಕುಂಡಿಯಿಂದ ಹುಟ್ಟಿದ್ದೇವೆ ಎಂದು ನಂಬಿಲ್ಲ.”ಶೂದ್ರರು ಬ್ರಹ್ಮನ ಕುಂಡಿಯಿಂದ ಹುಟ್ಟಿದ್ದಾರೆ” ಅಂತೆಲ್ಲ ಹೇಳಿದರೆ ಬ್ರಾಹ್ಮಣರೂ ಶೂದ್ರರೂ ನಗುತ್ತಾರೆ. ಪುರುಷ ಸೂಕ್ತ ಎಂಬುದು ನಮ್ಮ ಸಮಾಜದ ಬಹುವಾಸಿ ಮಂದಿಗೆ ಅಪರಿಚಿತ ಹಾಗೂ ಅಪ್ರಸ್ತುತವಾದ ಸಂಗತಿ. ವಸ್ತುಸ್ಥಿತಿ ಹೀಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading