ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್: ನಾನು ಉಂಡೆದ್ದ ಮನೆಯಲ್ಲಿ ಜಾತಿಯ ಸೋಂಕಿರಲಿಲ್ಲ

ಡಾ.ಎನ್. ಜಗದೀಶ್ ಕೊಪ್ಪ

ಇತ್ತೀಚೆಗಿನ ದಿನಗಳಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಜಾತಿ ಕುರಿತಂತೆ ಗಂಭೀರವಾದ ಚರ್ಚೆಗಳಾಗುತ್ತಿವೆ. ಇದಕ್ಕೆ ಸೇರ್ಪಡೆಯಾಗುವಂತೆ ಅವಧಿಯಲ್ಲಿ ಹಾಸನದ ಕಿರಿಯ ಮಿತ್ರ ನಾಗರಾಜ್ ಹೆತ್ತೂರು ಬರೆದ ಆಹಾರ ಸಂಸ್ಕೃತಿ ಯ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಆಹಾರ ಸಂಸ್ಕೃತಿಯನ್ನು ಸಮರ್ಥಿಸಿಕೊಂಡ ಹಾಸನದ ಸಹೋದರಿ ರೂಪಾ ಹಾಸನ ನಗರದಲ್ಲಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಮೇಲು ನೋಟಕ್ಕೆ ಆಹಾರ ಸಂಸ್ಕೃತಿ ಬಗೆಗಿನ ಚರ್ಚೆಯಂತೆ ಕಂಡು ಬಂದರೂ ಒಳಗಿನ ಹೂರಣ ಮಾತ್ರ ಪರೋಕ್ಷವಾಗಿ ಜಾತಿ ಆಚಾರ, ವಿಚಾರ ಕುರಿತ ಚರ್ಚೆಯಂತೆ ಕಾಣುತ್ತಿದೆ. ಕೆಲವರಂತೂ ಹಾಸನದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈ ಮೇಲೆ ಕೆಂಡ ಸುರಿದುಕೊಂಡವರಂತೆ ಪ್ರತಿಕ್ರಿಯಿಸಿದ್ದಾರೆ.
ಜಾತಿ, ಧರ್ಮ, ದೇವರು ಇಂತಹ ಪರಿಕಲ್ಪನೆಗಳ ಪರಿಧಿಯ ಆಚೆ ಬೆಳೆದ ನನ್ನಂತಹವನಿಗೆ ಇದನ್ನು ಹೇಗೆ ಗ್ರಹಿಸಬೇಕು? ಅಥವಾ ಹೇಗೆ ಪ್ರತಿಕ್ರಿಯಸಬೇಕು ಅರ್ಥವಾಗುತ್ತಿಲ್ಲ ಏಕೆಂದರೆ ಜಾತಿ ಎನ್ನುವುದು ಮನುಷ್ಯನೊಬ್ಬನ ಮನಸ್ಥಿತಿ ಎಂದು ನಂಬಿಕೊಂಡು ಬೆಳೆದವನು ನಾನು.

ಕನರ್ಾಟಕದ ಬಲಿಷ್ಠ ಜಾತಿ ಸಮುದಾಯದಲ್ಲಿ ಹುಟ್ಟಿ ಬೆಳೆದನಾದರೂ ಬಾಲ್ಯದಲ್ಲಿ ನನ್ನಪ್ಪ ತೋರಿದ ಉದಾರತೆ ನನ್ನಲ್ಲಿ ಮನುಷ್ಯನನ್ನು ಕೇವಲ ಮನುಷ್ಯನಂತೆ ಮಾತ್ರ ನೋಡುವುದನ್ನು ಕಲಿಸಿದೆ. ನಾನು ನೋಡುವ ಅಥವಾ ಒಡನಾಡುವ ವ್ಯಕ್ತಿ ಯಾವ ಜಾತಿಯಿಂದ ಬಂದವನು ಎಂಬುವುದು ನನಗೆ ಈವರೆಗೆ ಮುಖ್ಯವಾಗಿ ಕಂಡಿಲ್ಲ. ಇದಕ್ಕೆ ನನ್ನ ಬಾಲ್ಯದ ಈ ಎರಡು ಅನುಭವದ ಘಟನೆಗಳು ಸಾಕ್ಷಿಯಾಗಿವೆ.
ನನ್ನಪ್ಪ 1940ರಿಂದ 1943ರವರೆಗೆ ಬೆಂಗಳೂರಿನ ನ್ಯ್ಯಾಷನಲ್ ಹೈಸ್ಕೂಲ್ನಲ್ಲಿ ಹತ್ತನೆ ತರಗತಿಯವರೆಗೆ ಓದಿದವರು. ನಂತರ ಸರ್ಕಾರಿ ಹುದ್ದೆಗೆ ಹೋಗುವ ಬದಲು ಊರಿಗೆ ಬಂದು ಬೇಸಾಯ ವೃತ್ತಿಯನ್ನು ಕೈಗೊಂಡಿದ್ದವರು. ಆ ಕಾಲಕ್ಕೆ ಇದ್ದ ಹದಿನಾರು ಎಕರೆ ನೀರಾವರಿ ಭೂಮಿಯನ್ನು ಬೇಸಾಯ ಮಾಡಲು ಬಾರದೆ, ನನ್ನೂರಿನ ಓರ್ವ ಹರಿಜನ ಕುಟುಂಬವನ್ನು ಮತ್ತು ತಮಿಳುನಾಡಿನ ತಿರುವಣಾಮಲೈನಿಂದ ವಲಸೆ ಬಂದಿದ್ದ ಆದಿದ್ರಾವಡರು ಎಂದು ಕರೆಸಿಕೊಳ್ಳುತ್ತಿದ್ದ ಕುಟುಂಬವೊಂದನ್ನು ಮನೆಯಲ್ಲಿ ಜೀತಕ್ಕಿರಿಸಿಕೊಂಡು ವ್ಯವಸಾಯ ಮಾಡುತ್ತಿದ್ದರು.
ನನ್ನೂರಿನ ಹರಿಜನ ಕುಟುಂಬದ ಪೈಕಿ ತಿಮ್ಮಮ್ಮ ಎಂಬ ನಲವತ್ತು ವರ್ಷದ ವಿಧವೆ, ಆಕೆಯ ತಮನಾದ ಕುಳ್ಳ ಮತ್ತು ಹತ್ತು ವರ್ಷದ ಹೆಣ್ಣು ಮಗಳು ಹೊನ್ನಿ ಎಂಬಾಕೆ ಇವರೆಲ್ಲರೂ ನಾನು ಬುದ್ಧಿ ಕಂಡ ದಿನಗಳಿಂದ ನನ್ನ ಮನೆಯಲ್ಲಿ ಕೆಲಸ ಮಾಡಿಕೊಂಡು ಬೆಳೆದವರು. ಬೆಳಿಗ್ಗೆ ಬಂದು ಸಂಜೆಯವರೆಗೆ ದುಡಿದು ರಾತ್ರಿ ಊಟ ಮಾಡಿ ತಮ್ಮ ಕೇರಿಗೆ ಹೋಗುತ್ತಿದ್ದರು.
ನಾನು ಕುಳ್ಳಣ್ಣ ಎಂದು ಕರೆಯುತ್ತಿದ್ದ ಕುಳ್ಳನಿಗೆ ಮದುವೆ ಮಾಡುವ ವಯಸ್ಸು ಬಂದಾಗ 1967ರಲ್ಲಿ ನನ್ನಪ್ಪ ಸ್ವತಃ ನಿಂತು ಮದುವೆ ಮಾಡಿದರು. ಆ ದಿನಗಳಲ್ಲಿ ಇಂತಹವರನ್ನು ಆಳು ಮಗ ಎಂದು ಕರೆಯುವ ವಾಡಿಕೆಯಿತ್ತು. ಇಂತಹ ಮಕ್ಕಳಿಗೆ ಮನೆಯ ಯಜಮಾನರು ಮದುವೆ ಮಾಡಬೇಕಾದ ನೈತಿಕ ಜವಬ್ದಾರಿಯನ್ನು ಹೊರುತ್ತಿದ್ದರು.
ಕುಳ್ಳಣ್ಣನ ಮದುವೆ ಸಮಯದಲ್ಲಿ ನನಗೆ ಹನ್ನೊಂದು ವರ್ಷ. ಆ ದಿನ ಶಾಲೆಗೆ ಚಕ್ಕರ್ ಹೊಡೆದು ಅಪ್ಪನ ಜೊತೆ ನಾನು ಸಹ ಮದುವೆಗೆ ಹೋಗಿದ್ದೆ. ಹರಿಜನ ಕೇರಿಯಲ್ಲಿ ಬೇವಿನ ಮರದ ಕೆಳೆಗೆ ಹಾಕಲಾಗಿದ್ದ ಹಸಿರು ಚಪ್ಪರದ ಕೆಳೆಗೆ ಬಾಲ್ಯದಲ್ಲಿ ಅಪ್ಪನನ್ನು ಕಳೆದುಕೊಂಡಿದ್ದ ಕುಳ್ಳಣ್ಣನಿಗೆ ನನ್ನಪ್ಪ ತಂದೆಯಂತೆ ನಿಂತು ಧಾರೆಯೆರದರು. ಹರಿಜನರ ಮದುವೆಗಳಲ್ಲಿ ಪುರೋಹಿತರು ಭಾಗವಹಿಸುತ್ತಿರಲಲ್ಲ ಆ ಸಮುದಾಯದ ಹಿರಿಯರು (ಯಜಮಾನರು) ನಿಂತು ವಿವಾಹ ಕಾರ್ಯಗಳನ್ನು ನೆರವೇರಿಸುತ್ತಿದ್ದರು. ಚಪ್ಪರದ ಕೆಳೆಗೆ ವಧೂ-ವರರ ಧಾರೆ ಕಾರ್ಯಕ್ರಮ ನೆರವೇರುತ್ತಿದ್ದರೆ, ಚಪ್ಪರದ ಆಚೆ ಬದಿ ಸಿದ್ಧವಾಗಿದ್ದ ಅವರೆಕಾಳಿನ ಸಾರು, ಬಿಸಿ ಬಿಸಿ ರಾಗಿಮುದ್ದೆ, ಪಾಯಸದ ವಾಸನೆ ಮೂಗಿಗೆ ಬಡಿಯುತ್ತಿತ್ತು. ಇವುಗಳನ್ನು ನೋಡಿ ನನ್ನ ಬಾಯಲ್ಲಿ ನೀರೂರಿತು. ನನ್ನ ಸ್ಥಿತಿ ಚಿತ್ತೆ ಮಳೆಯಲ್ಲಿ ಬೆದೆಗೆ ಬಂದ ನಾಯಿಯಂತಾಗಿತ್ತು. ಅಪ್ಪಾ, ನಾನು ಇಲ್ಲೇ ಉಣ್ತೀನಿ, ಅಪ್ಪಾ ನಾನು ಇಲ್ಲೆ ಉಣ್ತೀನಿ ಎಂದು ನನ್ನಪ್ಪನನ್ನು ಪೀಢಿಸತೊಡಗಿದೆ. ಚಪ್ಪರದ ಕೆಳಗೆ ನಿಂತಿದ್ದ ನನ್ನಪ್ಪ, ಮದು ಮಗ ಕುಳ್ಳಣ್ಣನ ಗೆಳಯರಾದ ವೆಂಕಟ, ನಾರಾಯಣ, ಮೇಲಗಿರಿ ಇವರನ್ನು ಲೇ ಬನ್ರಲಾ ಇಲ್ಲಿ ಎಂದು ಕರೆದರು. ಅವರು ಅಪ್ಪನ ಬಳಿ ಬರುತ್ತಿದ್ದಂತೆ, ಇವನಿಗೆ ಕರ್ಕೊಂಡು ಹೋಗಿ ಉಣ್ಣಕೆ ಇಕ್ರಲಾ ಎಂದರು. ಅವರೆಲ್ಲಾ ಆ ಕ್ಷಣಕ್ಕೆ ಕೆಂಡ ತುಳಿದವರಂತೆ ಬೆಚ್ಚಿ ಅಪ್ಪನ ಮುಖ ನೋಡುತ್ತಾ ನಿಂತರು. ನನ್ನಪ್ಪ ಶಾಂತವಾಗಿ ಲೇ ಹುಡುಗ್ರಾ ನಾನೇ ಹೇಳ್ತಾ ಇದ್ದೀನಿ ಇವನಿಗೆ ಹೊಟ್ಟೆತುಂಬಾ ಉಣಿಸಿ ಮನೆಗೆ ಕಳಿಸಿ ಎಂದು ಹೇಳಿ ಕೈಯಲ್ಲಿ ಹಿಡಿದಿದ್ದ ವೀಳೆೆಯದ ಎಲೆ ಮತ್ತು ಎರಡು ಬಾಳೆ ಹಣ್ಣುಗಳನ್ನು ತೆಗೆದುಕೊಂಡು ಪಂಚೆ ಎತ್ತಿಕಟ್ಟಿ ಮನೆಯತ್ತ ಹೆಜ್ಜೆ ಹಾಕತೊಡಗಿದರು. ಎಲ್ಲರೂ ಅಪ್ಪ ಹೋಗುವುದನ್ನೆ ನೋಡುತ್ತಿದ್ದರು. ನನ್ನಪ್ಪ ಪಂಚೆ ಎತ್ತಿ ಕಟ್ಟಿದ್ದ ರೀತಿ ಪಂಚಯೊಂದು ೆ ಪಟ್ಟಾ ಪಟ್ಟಿ ಚಡ್ಡಿಯೊಂದನ್ನು ಮರಿ ಹಾಕುತ್ತಿದೆಯೆನೊ’ ಎಂಬ ಗೊಂದಲವನ್ನು ಹುಟ್ಟಿ ಹಾಕಿತ್ತು. ನನ್ನಪ್ಪ ಅತ್ತ ಹೋಗುತ್ತಿದ್ದಂತೆ ಕುಳ್ಳಣ್ಣನ ಗುಡಿಸಲು ನಡುಮನೆಯಲ್ಲಿ ನನ್ನನ್ನು ಕೂರಿಸಿದ ಹರಿಜನ ಬಂಧುಗಳು ತೆಂಗಿನ ಚಿಪ್ಪಿನಿಂದ ತಯಾರಿಸಿದ ಸೌಟಿನ ತುಂಬಾ ಅವರೆಕಾಳು, ಮುದ್ದೆ, ಅನ್ನ, ಪಾಯಸ ಎಲ್ಲವನ್ನೂ ಹಾಕಿ ಹೊಟ್ಟೆ ತುಂಬಾ ಮತ್ತು ಮನದಣಿಯ ಉಣಬಡಿಸಿದರು. ಆದಿನ ನಾನು ಉಂಡೆದ್ದ ಮನೆಯಲ್ಲಿ ಜಾತಿ ಸೂತಕ ಇರಲಿಲ್ಲ. ಇದ್ದರೂ ನನಗೆ ಕಾಣ ಬರಲಿಲ್ಲ.
ಘಟನೆ ಎರಡು.= ನನ್ನೂರಿನಲ್ಲಿ ಬ್ರಾಹ್ಮಣರ ಬೀದಿಯ ನಂತರ ಒಕ್ಕಲಿಗರ ಬೀದಿ ಬರುತ್ತದೆ. ಬ್ರಾಹ್ಮಣರ ಮನೆಯ ಹಿತ್ತಲಲ್ಲಿ ನಿಂತರೆ ನನ್ನ ಮನೆ ಎಲ್ಲರಿಗೂ ಕಾಣುತ್ತಿತ್ತು. ನನ್ನ ಮನೆಯ ಮುಂದೆ ಜಾನಕಜ್ಜಿ ಎಂಬ ಬ್ರಾಹ್ಮಣ ವಿಧವೆ ಇದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಒಬ್ಬರು ಶಿಕ್ಷಕರಾಗಿ ತುಮಕೂರಿನಲ್ಲಿದ್ದರೆ, ಮತ್ತೊಬ್ಬರು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಮಂಡ್ಯ ನಗರದಲ್ಲಿ ವಾಸವಾಗಿದ್ದರು. ( ಕೃಷ್ಣಮೂರ್ತಿ ಎಂದು ಹೆಸರು. ಅವರು ನಮ್ಮ ಕನ್ನಡದ ಪ್ರಸಿದ್ದ ಕಥೆಗಾರರಾದ, ನನ್ನ ಹಿರಿಯಣ್ಣನಂತಿರುವ ಕೆ.ಸತ್ಯನಾರಾಯಣ ರವರ ತಂದೆ) ಜಾನಕಜ್ಜಿಗೂ ಮತ್ತು ನನ್ನ ಅಜ್ಜಿ ತಿಮ್ಮಮ್ಮ ಇಬ್ಬರಿಗೂ ಒಂದೇ ವಯಸ್ಸು, ಜೊತೆಗೆ ನನ್ನಪ್ಪ ತನ್ನವ್ವನನ್ನು ಗೌರವಿಸುವಂತೆ ಜಾನಕಜ್ಜಿಯನ್ನು ತುಂಬಾ ಗೌರವದಿಂದ ನೋಡಿಕೊಳ್ಳುತ್ತಿದ್ದರು. ಪ್ರತಿ ದಿನ ಬೆಳಿಗ್ಗೆ, ಸಂಜೆ ತಾನೇ ಹಸುವಿನಿಂದ ಹಾಲು ಕರೆದು ಒಂದು ಪಾವು ಹಾಲನ್ನು ಅವರಿಗೆ ಕೊಟ್ಟು ಬರುತ್ತಿದ್ದರು. ( ಒಂದು ಪಾವು ಎಂದರೆ, 250 ಎಂ.ಎಲ್)
ಆ ದಿನಗಳಲ್ಲಿ ಶೂದ್ರರು ಬೂದುಗುಂಬಳ ಕಾಯಿಯನ್ನು ತಿನ್ನಬಾರದು ಎಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು. ಹಾಗಾಗಿ ತೋಟದಲ್ಲಿ ಬೆಳೆದ ಬೂದುಗುಂಬಳವನ್ನು ತರುತ್ತಿದ್ದ ಅಪ್ಪ ಅವುಗಳನ್ನು ಎರಡು ಹೋಳು ಮಾಡಿ ಬ್ರಾಹ್ಮಣರ ಮನೆಗಳಿಗೆ ಹಂಚಿ ಬರುತ್ತಿದ್ದರು. ಜಾನಕಜ್ಜಿಯವರ ಮನೆಗೆ ಮಾತ್ರ ನಾನೇ ಬೂದುಗುಂಬಳ ತೆಗೆದುಕೊಂಡು ಹೋಗುತ್ತಿದ್ದೆ. ಅದಕ್ಕೊಂದು ಬಲವಾದ ಕಾರಣವೂ ಇತ್ತು.
ಶಾಲೆಯಿಂದ ಬಂದ ತಕ್ಷಣ ತುಂಬಾ ನನಗೆ ಹಸಿವಾಗುತ್ತಿತ್ತು. ಮನೆಯಲ್ಲಿ ತಿನ್ನಲು ಏನೂ ತಿಂಡಿ ಇರುತ್ತಿರಲಿಲ್ಲ, ಮನೆಯ ಮುಂಬಾಗಿಲಿನ ಒಂದು ಅಡಿ ಎತ್ತರದ ಹೊಸ್ತಿಲ ಮೇಲೆ ಎರಡು ಬದಿ ಕಾಲು ಇಳಿಬಿಟ್ಟು ಕುದುರೆ ಸವಾರಿ ಮಾಡುವವನಂತೆ ರಾಗವಾಗಿ ಅಳುತ್ತಾ ಕೂರುತ್ತಿದ್ದೆ. ಅಂತಹ ಸಮಯದಲ್ಲಿ ನನ್ನಜ್ಜಿ ಹಿಟ್ಟಿನ ಮಡಕೆಯಲ್ಲಿ ಅಂಟಿಕೊಂಡಿರುತ್ತಿದ್ದ ರಾಗಿ ಹಿಟ್ಟನ್ನು ಕೆರೆದು ಅದಕ್ಕೆ ಉಪ್ಪು, ಖಾರ, ಹಾಕಿ ಕಲಸಿ ಸಣ್ಣ ಉಂಡೆ ಮಾಡಿಕೊಡುತ್ತಿದ್ದಳು. ಅದು ಹೊಟ್ಟೆ ತುಂಬುತ್ತಿರಲಿಲ್ಲ. ಜಾನಕಜ್ಜಿ ಮನೆಗೆ ಹೋದರೆ ತಿನ್ನಲಿಕ್ಕೆ ಏನಾದ್ರು ಸಿಗುತ್ತೆ ಅಂತಾ ಆಸೆಯಾಗುತ್ತಿತ್ತು. ಹಾಗಾಗಿ ನಾನೇ ಬೂದುಗುಂಬಳ ಹಿಡಿದು ಅವರ ಮನೆಗೆ ಹೋಗಿ ಅಮ್ಮೊರೆ ಕುಂಬಳ ಕಾಯಿ ತಂದಿವ್ನಿ ಎಂದು ಕೂಗುತ್ತಿದ್ದೆ. ಆ ದಿನಗಳಲ್ಲಿ ಶಾಲೆಯಿಂದ ಬಂದ ತಕ್ಷಣ ಚಡ್ಡಿಯನ್ನು ಕಳಚಿ ಬಿಸಾಡುತ್ತಿದ್ದೆ. ಗುಂಡಿಯಿಲ್ಲದ ಒಂದು ಶಟರ್್ ನನ್ನ ಮೈ ಮೇಲೆ ಇರುತ್ತಿತ್ತು. ಅವರು ಬೂದುಗುಂಬಳವನ್ನು ತೆಗೆದುಕೊಂಡು ಇರೋ ಬಂದೆ ಎಂದು ಒಳಕ್ಕೆ ಹೋಗುತ್ತಿದ್ದರು. ಮನೆಯ ಹಿತ್ತಲಿಗೆ ಹೋಗಿ ಬಾಳೆ ಎಲೆ ಹರಿದು ತಂದು ಜಗುಲಿಯ ಮೇಲೆ ನನ್ನನ್ನು ಕೂರಿಸಿ; ರಾತ್ರಿ ಊಟಕ್ಕಾಗಿ ಅವರು ತಯಾರಿಸಿಕೊಂಡು ಇಟ್ಟುಕೊಂಡಿದ್ದ ಮೊಸರು, ಬೆಲ್ಲ, ತೆಂಗಿನಕಾಯಿಯ ತುರಿ ಮಿಶ್ರಣ ಮಾಡಿದ ಅವಲಕ್ಕಿಯನ್ನು ನನಗೆ ಬಡಿಸುತ್ತಿದ್ದರು. ಅದನ್ನು ತಿಂದರೆ ತೀರಿ ಹೂಗುತ್ತಲ್ಲಾ! ಎಂಬ ಸಂಕಟದಿಂದ ತಿನ್ನುತ್ತಿದ್ದೆ.
ಮನೆಗೆ ಬಂದ ತಕ್ಷಣ ಮಣ್ಣಿನಿಂದ ತಯಾರಿಸಿದ ಬೋಗುಣಿ (ಹಾಲಿನ ಪಾತ್ರೆಯಂತಹ ಅಗಲವಾದ ಬಾಯುಳ್ಳ ಮಣ್ಣಿನ ಮಡಕೆ. ಆದಿನಗಳಲ್ಲಿ ಅಲ್ಯುಮಿನಿಯಂ ಪಾತ್ರೆ ಹಳ್ಳಿಗಳಿಗೆ ಕಾಲಿಟ್ಟಿರಲಿಲ್ಲ ) ತೆಗೆದುಕೊಂಡು ಪುನಃ ಅವರ ಮನೆಯೆದುರು ಹಾಜರಾಗುತ್ತಿದೆ. ಜಾನಕಜ್ಜಿಯವರು ಮಾಡುತ್ತಿದ್ದ ಬೂದುಗುಂಬಳದ ಹುಳಿ ಎಂದರೆ ನನಗೆ ಪಂಚ ಪ್ರಾಣ. ಏಕೋ ಬಂದೆ? ಸಂಜೆ ಬಾ ಮಾಡಿಟ್ಟಿರುತ್ತೇನೆ ಎನ್ನುತ್ತಿದ್ದರು.
ನಾನು ಇಲ್ಲಾ ಅಮ್ಮೊರೆ ನೀವು ನಿಧಾನವಾಗಿ ಮಾಡಿ ನಾನು ಇಲ್ಲೆ ಕುಂತಿದ್ದು ಈಸ್ಕೊಂಡು ಹೋಯ್ತೀನಿ ಎಂದು ಹೇಳಿ ಅವರ ಮನೆಯ ಜಗುಲಿಯೇರಿ ಚಕ್ಕಂಬಕ್ಕಳ ಹಾಕಿ, ಮುಂದೆ ಮಡಕೆ ಇಟ್ಟುಕೊಂಡು ತಪಸ್ಸಿಗೆ ಕೂತವನಂತೆ ಕೂರುತ್ತಿದ್ದೆ. ಹಾಗೆ ಕಂಬಕ್ಕೆ ಒರಗಿ ನಿದ್ರೆಗೆ ಜಾರುತ್ತಿದ್ದೆ. ಜಾನಕಜ್ಜಿ ನನಗೋಸ್ಕರ ಅವಸರದಲ್ಲಿ ಸಾರು ತಯಾರಿಸಿ, ಮಡಕೆ ತುಂಬಾ ಕೊಡುತ್ತಿದ್ದರು. ಅದನ್ನು ಹುಷಾರಾಗಿ ಎದಗೆ ಒತ್ತಿ ಹಿಡಿದು ಮುಸ್ಸಂಜೆಯಲ್ಲಿ ನಿಧಾನವಾಗಿ ಹೆಜ್ಜೆಯೂರುತ್ತಾ ಮನೆಗೆ ಬರುತ್ತಿದ್ದೆ. ನನ್ನ ಮನೆಯ ಜಗುಲಿಯಲ್ಲಿದ್ದ ಮಂಚದ ಮೇಲೆ ಬರ್ಕಲಿ ಸಿಗರೇಟು ಸೇದುತ್ತಾ ಕೂತಿರುತ್ತಿದ್ದ ಅಪ್ಪ, ನನ್ನ ಅವತಾರ ನೋಡಿ ಥೂ ದರಿದ್ರ ಸೂಳೆ ಮಗನೆ ಎಂದು ಬೈದು ಜೋರಾಗಿ ನಕ್ಕು ಬಿಡುತ್ತಿದ್ದರು.
ಮನೆಯೊಳಕ್ಕೆ ಹೋದ ತಕ್ಷಣ ತಣಗೆ (ಹಿತ್ತಾಳೆ ತಟ್ಟೆ) ತೆಗೆದು ಕೊಂಡು ಅದರ ತುಂಬಾ ಅನ್ನ ಹಾಕಿಸಿಕೊಂಡು ಜಾನಕಜ್ಜಿ ಮಾಡಿಕೊಟ್ಟ ಬೂದುಗುಂಬಳದ ಹುಳಿ ಕಲೆಸಿಕೊಂಡು ಹನ್ನೆರೆಡು ವರ್ಷ ಅನ್ನ ಕಾಣದೆ ಕುಳಿತಿದ್ದವನಂತೆ ಆ ದಿನ ನಾನು ಅನ್ನ ಉಣ್ಣುತ್ತಿದ್ದೆ.
ಅಂದಿನ ದಿನಗಳಲ್ಲಿ ನನ್ನೂರು ಸಮೀಪದ ಶಿಂಷಾ ನದಿಯಾಚೆಗಿನ ಹಳ್ಳಿಗಳಿಂದ ಹೈಸ್ಕೂಲಿಗೆ ಬರುತ್ತಿದ್ದ 16 ವಿದ್ಯಾಥರ್ಿಗಳಿಗೆ ಮಧ್ಯಾಹ್ನದ ಊಟ ಹಾಕುತ್ತಿದ್ದ ನನ್ನ ಅಪ್ಪ, ತನ್ನ ಮಗ ಹರಿಜನರ ಮನೆಯಲ್ಲಿ ಉಣ್ಣುವುದು ಅಥವಾ ಬ್ರಾಹ್ಮಣರ ಮನೆಯಲ್ಲಿ ಭಿಕ್ಷೆಯಂತೆ ಸಾರು ತಂದು ಉಣ್ಣುವುದು ಅವಮಾನ ಎಂದು ಭಾವಿಸಲೇ ಇಲ್ಲ. ಏನೊಂದೂ ಅರಿಯದ ಆಗಿನ ನನ್ನ ಬಾಲ್ಯದ ಮುಗ್ಧ ಮನಸ್ಸಿನ ಎದೆಯೊಳಕ್ಕೆ ಜಾತಿ ಧರ್ಮದಂತಹ ವಿಷ ಬೀಜಗಳನ್ನು ಬಿತ್ತಲಿಲ್ಲ. ಅರ್ಧ ಶತಮಾನದ ಹಿಂದೆ ಹಳ್ಳಿಯಲ್ಲಿ ಅನಾಮಿಕನಂತೆ ಬದುಕಿದ್ದ ನನ್ನಪ್ಪನಿಗೆ ಇದ್ದಂತಹ ವಿವೇಕ ಈಗಿನ ಸಮಾಜಕ್ಕೆ ಯಾಕಿಲ್ಲ? ಇದು ಯಾವಾಗಲೂ ನನ್ನನ್ನು ಕಾಡುವ ಪ್ರಶ್ನೆ.
ಜಾತಿಯೆಂಬ ಸಾಂಕ್ರಾಮಿಕ ರೋಗ ಈ ದಿನ ಹಲವು ರೂಪಗಳಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತಿರುವಾಗ, ಯಾರಾದರೂ ನನ್ನೆದರು ಜಾತಿಯ ಬಗ್ಗೆ ಮಾತನಾಡುವಾಗ, ಅಥವಾ ಹಲವು ವಾಮ ಮಾರ್ಗದಲ್ಲಿ ಜಾತಿಯನ್ನು ಸಮಥರ್ಿಸಿಕೊಳ್ಳುವ ಲೇಖನ ಬರೆಯುವಾಗ,, ಅಂತಹವರು ನನ್ನ ಪಾಲಿಗೆ ಮನುಷ್ಯರಂತೆ ಕಾಣುವುದಿಲ್ಲ, ಬದಲಾಗಿ ಕ್ರಿಮಿ ಕೀಟಗಳಂತೆ ಗೋಚರಿಸುತ್ತಾರೆ.

‍ಲೇಖಕರು G

9 March, 2013

30 Comments

  1. bharathi bv

    Nimma lekhanadallina ondondu maathoo thattithu… chendakkide lekhana.adyaavaga ee jaathi paddathi tholaguttado … athava tholaguvude illavo anthella aathankavagutte eshtondu sala …

  2. Santhoshkumar LM

    ಜಗದೀಶ್ ಕೊಪ್ಪ ಸರ್,
    ನೀವು ಹರಿಜನರ ಮನೆಯಲ್ಲಿ ಊಟ ಮಾಡಿದ್ದು, ಜಾನಕಜ್ಜಿ ಕೊಟ್ಟ ಹುಳಿಯನ್ನು ಎದೆಗೊತ್ತಿಕೊಂಡು ತಂದು ತಿಂದದ್ದು ಕಣ್ಣ ಮುಂದೆಯೇ ಕಟ್ಟಿದಂತೆ ಹೇಳಿದ್ದೀರ. ಹಸಿವಿಗೆ ಜಾತಿಯ ಕಟ್ಟಿಲ್ಲ ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದ್ದೀರ. ನಿಮ್ಮ ತಂದೆ ಕುಳ್ಳಣ್ಣನ ಮದುವೆಯಲ್ಲಿ ‘ಇವನಿಗೆ ಕರ್ಕೊಂಡು ಹೋಗಿ ಉಣ್ಣಕೆ ಇಕ್ರಲಾ’ ಅಂತ ಹೇಳಿ ಪಂಚೆಯೆತ್ತಿ ಕಟ್ಟಿ ಹೊರಡುವಾಗ ಥೇಟ್ ಜಾತಿಪದ್ಧತಿಯನ್ನು ತುಳಿಯ ಹೊರಟ ಒಬ್ಬ ಹೀರೋ ಥರ ಕಾಣಿಸುತ್ತಾರೆ. ಎಲ್ಲರೂ ಯಾಕೆ ಈ ರೀತಿ ಪ್ರಯತ್ನಿಸಬಾರದು?

  3. prakash hegde

    ಈ ಲೇಖನ ತುಂಬಾ ಇಷ್ಟವಾಯ್ತು….

  4. Anil

    ಜಗದೀಶ್ ಸರ್,
    ಉತ್ತಮವಾದ ಲೇಖನ.
    ’ಜಾತಿ ಎ೦ಬುದು ಮನುಷ್ಯನೊಬ್ಬನ ಮನಸ್ಥಿತಿ’ ಎ೦ಬುದು ಈ ಲೇಖನದ, ನಿಮ್ಮ ವಿಚಾರಗಳ ಹರಳುಗಟ್ಟಿದ ರೂಪದ೦ತಿದೆ.
    ಬರೀತಿರಿ.
    ಅನಿಲ್

  5. ಸತ್ಯನಾರಾಯಣ

    ಸರ್ ಲೇಖನ ಚೆನ್ನಾಗಿದೆ. ನನಗೆ ನೆನಪಿರುವಂತೆ, ನಾನು ಮೂರನೇ ತರಗತಿ ಓದುವಾಗಿನಿಂದಲೇ ನನ್ನ ಸ್ನೇಹಿತರ ಮನೆಯಲ್ಲಿ ಊಟ ತಿಂಡಿ ಮಾಡುವುದು, ನನ್ನ ಸ್ನೇಹಿತರನ್ನು ನಮ್ಮ ಮನೆಗೆ ಊಟಕ್ಕೆ ಕರೆದು ತರುವುದು ಮಾಡುತ್ತಿದ್ದೇನೆ. ಹೈಸ್ಕೂಲಿನ ಹಾಸ್ಟೆಲ್ಲು ವಾಸದ ದಿನಗಳಲ್ಲಿ ನಾವೆಲ್ಲಾ ಸಹಪಂಕ್ತಿಭೋಜನ ಸ್ವೀಕರಿಸುತ್ತಿದ್ದೆವು. ಯಾರೂ ಯಾವ ಜಾತಿ ಎಂದು ನೋಡುತ್ತಿರಲಿಲ್ಲ. ಕಾಲೇಜು ಪ್ರವಾಸವೊಂದರಲ್ಲಿ ಒಂದೇ ದೊಡ್ಡ ತಟ್ಟೆಯಲ್ಲಿ ನಾಲ್ಕೈದು ಜನ ಒಟ್ಟಿಗೆ ಊಟ ಮಾಡಿದ್ದೆವು. ಅದರಲ್ಲಿ ನಾಲ್ವರು ನಾಲ್ಕು ಜಾತಿಯವರಿದ್ದೆವು. ಈಗಲೂ ನನ್ನ ಸ್ನೇಹಿತರ ಮನೆಗಳಿಗೆ ಹೋಗುತ್ತೇನೆ. ಊಟ ತಿಂಡಿ ಮಾಡುತ್ತೇನೆ. ನಮ್ಮ ಮನೆಗೆ ಬಂದಾಗ ಅವರೂ ಸಹಜವಾಗಿಯೇ ನಮ್ಮೊಂದಿಗೆ ಬೆರೆಯುತ್ತಾರೆ. ನಮ್ಮ ನಡುವೆ ಈ ಜಾತಿ ಭೂತ ಎಂದೂ ಬಂದೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಗರ ಜೀವನದಲ್ಲೇ ನನಗೆ ಜಾತಿಯ ಬಿಸಿ ತಟ್ಟಿದೆ. ಒಂದು ಕಡೆ ಮನೆ ಬಾಡಿಗೆಗೆ ಸಿಕ್ಕಿರಲಿಲ್ಲ. ಯಾವ ಜಾತಿ ಎಂದು ನೇರವಾಗಿಯೇ ಕೇಳಿದ್ದರು. ಇನ್ನೊಂದು ಕಡೆ ಉದ್ಯೋಗಕ್ಕೆ ಸಂದರ್ಶನಕ್ಕೆ ಹೋಗಿದ್ದಾಗ, ತುಂಬಾ ಆತ್ಮೀಯವಾಗಿ ಮಾತನಾಡಿಸಿದ ವ್ಯಕ್ತಿಯೊಬ್ಬರು ಬೆನ್ನ ಮೇಲೆ ಕೈಹಾಕಿ, ಸವರುತ್ತಾ ಆತ್ಮೀಯತೆ ಪ್ರದರ್ಶಿಸಿದ್ದರು. ನಂತರ ತಿಳಿಯಿತು ಅವರು ನನ್ನ ಶರ್ಟಿನ ಒಳಗೆ ಏನನ್ನೋ ಹುಡುಕುತ್ತಿದ್ದಾರೆ ಎಂದು. ಪತ್ರಿಕೆಯೊಂದರಲ್ಲಿ ನನ್ನದೊಂದು ಕತೆ ಬಂದಾಗ, ನಿಮ್ಮ ಹೆಸರಿನ ಬಲದಿಂದ ಆಯ್ಕೆಯಾಗಿದೆ ಅಷ್ಟೆ ಎಂದು ಒಬ್ಬ ವಿದ್ಯಾವಂತರು ಮೂದಲಿಸಿದ್ದರು! ಈ ಜಾತೀಯತೆಯ ಕಟ್ಟುಗಳು ನಗರಜೀವನದಲ್ಲಿ ಇನ್ನೂ ಬಿಗಿಯಾಗುತ್ತಿವೆಯೇ? ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಅದೇ ನಿಜವಾಗಿದ್ದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ ಎನ್ನಿಸುತ್ತದೆ.

  6. ಫ್ರಸಾದ್.ಡಿ.ವಿ.

    ಎಕ್ಸಲೆಂಟ್ ಸರ್, ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ಜಾತಿ ಧರ್ಮಗಳೆಂದು ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಉಳಿದವರನ್ನು ಕುರುಡರು ಎನ್ನುವವರಿಗೆ ಸರಿಯಾದ ಟಾಂಗ್ ಕೊಟ್ಟಿದ್ದೀರಿ.
    ನಿಜ ಜೀವನದ ಉದಾಹರಣೆಗಳು ಲೇಖನದ ಗಟ್ಟಿತನವನ್ನು ಹೆಚ್ಚಿಸಿವೆ.
    – ಪ್ರಸಾದ್.ಡಿ.ವಿ.

  7. ಮೋಹನ ಎಸ್ ಆರ್

    ಸಮಾನತೆಯೆಂಬ ಮರೀಚಿಕೆಯ ಬೆನ್ನುಹತ್ತದೆ, ಸಹಬಾಳ್ವೆಯೆಂಬ ವಾಸ್ತವದ ಬದುಕು ಸಾಧ್ಯವಿದೆ. ಮನೋಜ್ಞವಾಗಿ ಚಿತ್ರಿಸಿದ್ದೀರಿ

  8. Rj

    ಏನೊಂದೂ ಅರಿಯದ ಆಗಿನ ನನ್ನ ಬಾಲ್ಯದ ಮುಗ್ಧ ಮನಸ್ಸಿನ ಎದೆಯೊಳಕ್ಕೆ ಜಾತಿ ಧರ್ಮದಂತಹ ವಿಷ ಬೀಜಗಳನ್ನು ಬಿತ್ತಲಿಲ್ಲ. ಅರ್ಧ ಶತಮಾನದ ಹಿಂದೆ ಹಳ್ಳಿಯಲ್ಲಿ ಅನಾಮಿಕನಂತೆ ಬದುಕಿದ್ದ ನನ್ನಪ್ಪನಿಗೆ ಇದ್ದಂತಹ ವಿವೇಕ ಈಗಿನ ಸಮಾಜಕ್ಕೆ ಯಾಕಿಲ್ಲ? ಇದು ಯಾವಾಗಲೂ ನನ್ನನ್ನು ಕಾಡುವ ಪ್ರಶ್ನೆ.
    **ಸರಿಯಾದ ಮಾತಿದು.ನನಗೆ ಹಿಡಿಸಿದ ಲೇಖನವಿದು.ಒಮ್ಮೊಮ್ಮೆ ನನಗೆ ಅನಿಸುತ್ತದೆ:”ಎಲ್ಲವನ್ನೂ ಪ್ರಶ್ನಿಸಬಲ್ಲೆ..” ಎಂಬ ಧಿಮಾಕನ್ನು ಬೆಳೆಸಿಕೊಂಡ ಮನುಷ್ಯ ‘ಯಾವುದನ್ನು ಪ್ರಶ್ನಿಸಬೇಕು?’ ಎಂಬ ಅರಿವನ್ನು ಕಳೆದುಕೊಂಡು ಬಿಡುತ್ತಾನೇನೋ..
    -Rj

  9. Shreenidhids

    ತುಂಬ ಒಳ್ಳೆಯ ಬರಹ.

  10. ಶಮ, ನಂದಿಬೆಟ್ಟ

    “ಏನೊಂದೂ ಅರಿಯದ ಆಗಿನ ನನ್ನ ಬಾಲ್ಯದ ಮುಗ್ಧ ಮನಸ್ಸಿನ ಎದೆಯೊಳಕ್ಕೆ ಜಾತಿ ಧರ್ಮದಂತಹ ವಿಷ ಬೀಜಗಳನ್ನು ಬಿತ್ತಲಿಲ್ಲ. ಅರ್ಧ ಶತಮಾನದ ಹಿಂದೆ ಹಳ್ಳಿಯಲ್ಲಿ ಅನಾಮಿಕನಂತೆ ಬದುಕಿದ್ದ ನನ್ನಪ್ಪನಿಗೆ ಇದ್ದಂತಹ ವಿವೇಕ ಈಗಿನ ಸಮಾಜಕ್ಕೆ ಯಾಕಿಲ್ಲ? ಇದು ಯಾವಾಗಲೂ ನನ್ನನ್ನು ಕಾಡುವ ಪ್ರಶ್ನೆ.”
    ಕೋಟಿಗೊಂದು ಮಾತು ಸರ್.. ನಮ್ಮ ಬಾಲ್ಯದಲ್ಲಿ ಜಾತಿ ಪದ್ಧತಿಗಳ ಬಗ್ಗೆ ತಿಳಿದಿತ್ತಾದರೂ ಅದು ಯಾವತ್ತೂ ಸಂಬಂಧಗಳಿಗೆ ಮೀರಿದ್ದಾಗಿರಲಿಲ್ಲ.
    ನಿಜ ಹೇಳಬೇಕೆಂದರೆ “ವಿದ್ಯಾವಂತರ” ಸಂಖ್ಯೆ ಹೆಚ್ಚಿದಂತೆಲ್ಲ ಇಂಥ ಎಲ್ಲ ಅನಿಷ್ಟ ಪದ್ಧತಿಗಳು ಬಲವಾದವೇನೋ
    “ಸಂಬಂಜ ದೊಡ್ಡದು ಕನಾ” ಅನ್ನೋದು ಎಲ್ಲರ ಎದೆಯಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟ ದಿನ ನನ್ನ ನಾಡು ನನ್ನ ಹೆಮ್ಮೆ ಅಂತ ಕೂಗಿ ಹೇಳಬಹುದು..

  11. Mohan V Kollegal

    ಈ ಲೇಖನ ಓದಿ ಜಾತಿ ಬೆಂಬಲಿಸುವವರ ಕಣ್ಣು ತೆರೆದುಕೊಳ್ಳಲಿ. ಎಲ್ಲಾ ಜಾತಿಯವರ ರಕ್ತ ಕೇವಲ ಕೆಂಪು, ಒಂದೊಂದು ಜಾತಿಗೆ ಒಂದೊಂದು ಬಣ್ಣದ ರಕ್ತವಿಲ್ಲವೆಂಬುದನ್ನು ಅರ್ಥಮಾಡಿಕೊಂಡು ಇನ್ನಾದರೂ ಮಾನವ ಕುಲ ಮೆರೆಯಲಿ. ಇನ್ನು ಎಷ್ಟೋ ಜನ ಹಳೆಯ ಕಾಲದ ವಿಚಾರವನ್ನೇಕೆ ಇನ್ನೂ ಕೆದಕುತ್ತೀರಿ ಎಂದು ಪ್ರಶ್ನಿಸುತ್ತಾರೆ. ಆ ಜನಗಳು ಈಗಲೂ ನಮ್ಮ ಹಳ್ಳಿಗಳಿಗೆ ಬಂದು ನೋಡಿದರೆ, ಪ್ಯಾಚು ಪ್ಯಾಚುಗಳಂತೆ ಬೀದಿಗಳು ಕಾಣುತ್ತದೆ. ಹರಿಜನ, ಮಾದಿಗ ‘ಎನ್ನಿಸಿಕೊಂಡವರು’ ದೇವಸ್ಥಾನಕ್ಕೆ ನುಗ್ಗುವಂತಿಲ್ಲ(ದೇವರೂ ಮೌನ), ಹೋಟೆಲ್ ನಲ್ಲಿ ಎಲ್ಲರ ಸಮ್ಮುಖದಲ್ಲಿ ಕುಳಿತು ಟೀ ಕುಡಿಯುವಂತಿಲ್ಲ, ಎಲ್ಲರೂ ಬಳಸುವ ಲೋಟ ಬಳಸುವಂತಿಲ್ಲ, ಬೇರೆಯವರ ಬೀದಿಯ ಮನೆಗಳಿಗೆ ಹೋದರೆ ಹೊಸ್ತಿಲ ಬಳಿ ಕೂರಬೇಕು. ಏಕೆ ಹೀಗೆ? ಇದೇನಾದರೂ ಸೃಷ್ಟಿಪ್ರೇರಿತವಾಗಿದ್ದರೆ ಎಲ್ಲರೂ ಬಾಯಿಯಲ್ಲಿಯೇ ತಿನ್ನುವುದೇಕೆ? ಇಂಥಹ ತೊಡಕುಗಳನ್ನು ನಿವಾರಿಸಿ ಸಾಮರಸ್ಯ ತರಬೇಕಾದ ಸ್ವಾಮೀಜಿಗಳು ಸರ್ವಸಂಗ ಪರಿತ್ಯಾಗಿ ಎಂಬ ಸೋಗಿನಲ್ಲಿ ಜಾತಿಯ ಹೆಸರಿನಲ್ಲಿ ಮಠ, ಸಂಘ ಸಂಸ್ಥೆ ಕಟ್ಟಿಕೊಳ್ಳುವುದು ಏಕೆ? ನನ್ನ ಪುಣ್ಯಕ್ಕೆ ನನ್ನ ಮನೆಯವರು ಎಂದಿಗೂ ಜಾತಿಯನ್ನು ಎಣಿಸಿದವರಲ್ಲ. ನಮ್ಮ ತಂದೆ ಎಲ್ಲರನ್ನೂ ಮನೆಯ ಒಳಗಡೆ ಬಿಟ್ಟುಕೊಂಡವರು, ಊಟ ಹಾಕಿದವರು. ನಿಮ್ಮಂತೆಯೇ ನಾನು ಮೂರನೆ ತರಗತಿಯಲ್ಲಿದ್ದಾಗ ‘ಮಾದಿಗರೆನಿಸಿಕೊಂಡವರ’ ಮನೆಯಲ್ಲಿ ಹೋಗಿ ಊಟ ಮಾಡಿ ಬಂದಿದ್ದೆ, ಬೀದಿಯವರೆಲ್ಲಾ ಬೈದಿದ್ದರು. ಆಗ ಹಸಿವಷ್ಟೇ ನನ್ನನ್ನು ಮನುಷ್ಯನಾಗಿಸಿದ್ದು. ಇನ್ನೂ ಕೂಡ ಕೆಲವರು ಆ ಘಟನೆ ಮರೆತಿಲ್ಲ.
    ಕೊನೆಯದಾಗಿ, ನಿನ್ನೆ ವಿವೇಕಾನಂದರ ಬಗ್ಗೆ ಒಂದು ಲೇಖನ ಓದುವಾಗ, ವಿವೇಕಾನಂದರು ಜಪಾನ್ ನಲ್ಲಿದ್ದಾಗ, ಅಲ್ಲಿಂದ ತಮ್ಮ ಶಿಷ್ಯರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ ಸಾಲುಗಳು – “ಜಪಾನೀಯರ ಪಾಲಿಗಂತೂ ಭಾರತವೆಂದರೆ ಇನ್ನೂ ಎಲ್ಲ ಶ್ರೇಷ್ಠ-ಉನ್ನತ ವಿಚಾರಗಳ ಸ್ವಪ್ನ ಲೋಕವೇ ಆಗಿದೆ.ಆದರೆ ನೀವು?ನೀವೆಂಥವರು?… ಜೀವನವಿಡೀ ಕಾಡು ಹರಟೆಯಲ್ಲೇ ಮುಳುಗಿರುವವರು.ಕೇವಲ ಹರಟೆ ಮಲ್ಲರು.ಇನ್ನೆಂಥವರು ನೀವು? ಬನ್ನಿ ಇಲ್ಲಿಗೆ.ಈ ಜನರನ್ನು ನೋಡಿ ಬಳಿಕ ನಾಚಿಕೆಯಿಂದ ಮುಖ ಮುಚ್ಚಿ ಕುಳಿತುಕೊಳ್ಳಿ.
    ಸಮುದ್ರ ದಾಟಿದರೆ ನಿಮ್ಮ ಜಾತಿ ಕೆಟ್ಟು ಹೋಗುತ್ತದಲ್ಲವೇ…!? ಬುದ್ದಿ ಕೆಟ್ಟ ಅರಳು ಮರಳು ಜನಾಂಗ…! ಶತಶತಮಾನಗಳಿಂದಲೂ ಮೂಢನಂಬಿಕೆ-ಕಂದಾಚಾರಗಳ ಕಂತೆಗಳನ್ನೇ ತಲೆಯ ಮೇಲೆ ಹೊತ್ತು ಕುಳಿತಿರುವವರು…!
    ಈ ಆಹಾರವನ್ನು ಮುಟ್ಟಬಹುದೇ? ಆ ಆಹಾರವನ್ನು ಮುಟ್ಟಬಹುದೇ? ಎಂಬ ಬಹಳ ದೊಡ್ಡ ವಿಮರ್ಶೆಯಲ್ಲಿ ನೂರಾರು ವರ್ಷಗಳಿಂದ ಮುಳುಗಿದ್ದೀರಲ್ಲಾ-ಎಂಥ ಮನುಷರು ನೀವೆಲ್ಲ!

  12. ಶಮ, ನಂದಿಬೆಟ್ಟ

    ರಾಘವೇಂದ್ರ ಜೋಷಿ ಸರ್.. ನೀವು ಹೇಳಿದ್ದು ಅಕ್ಷರಶಃ ನಿಜ.. ಪ್ರಶ್ನೆ ಮಾಡಬಹುದಾದ ತಾಕತ್ತಿನ ಅಹಂ ಯಾವುದನ್ನ ಪ್ರಶ್ನೆ ಮಾಡಬೇಕು ಅದಕ್ಕೂ ಹೆಚ್ಚಾಗಿ ಯಾವುದನ್ನು ಪ್ರಶ್ನೆ ಮಾಡಬಾರದು ಎಂಬ ವಿವೇಕವನ್ನು ಕೊಂದಿದೆಯೇನೋ..

  13. Gopaal Wajapeyi

    ಸಂತ ಕಬೀರನ ಈ ದೋಹೆಯನ್ನು ಒಂದಿಷ್ಟು ನೋಡಿ :
    ವೀರ್ಯವೊಂದೇ, ಮಲಮೂತ್ರಾ ಒಂದೇ
    ತೊಗಲು ಒಂದೇ ತಲೆಯಾ ಮಿದುಳು ಒಂದೇ
    ಒಂದೇ ಜಾತಿಸಂಜಾತರು ನಾವೆಲ್ಲಾ
    ಬ್ರಾಹ್ಮಣ-ಶೂದ್ರಾ ಯಾಕಂದೆ?
    (‘ಸಂತ್ಯಾಗ ನಿಂತಾನ ಕಬೀರ’ ನಾಟಕದಿಂದ…)

  14. prakash hegde

    ನಿಜ
    ನಾನು ಬೆಳೆದ ಪರಿಸರವೂ ಹೀಗೆಯೇ ಇತ್ತು..
    ನನ್ನ ಹಿರಿಯರೂ ನನ್ನನ್ನು ಹೀಗೆಯೇ ಬೆಳೆಸಿದ್ದರು..
    ಈ ಜಾತಿಯತೆ ಎನ್ನುವ ಧರಿದ್ರ ಪಿಡುಗು ತೊಲಗಬೇಕು ಅಲ್ವಾ ?
    ಈ ಲೇಖನ ತುಂಬಾ ಇಷ್ಟವಾಯ್ತು…

  15. Sandhya Bhat

    ತುಂಬಾ ಒಳ್ಳೆಯ ಓದು . ಇಷ್ಟವಾಯ್ತು. ಮನುಷ್ಯರನ್ನು ಮೊದಲು ಮನುಷ್ಯರನ್ನಾಗಿ ನೋಡುವುದನ್ನು ಕಲಿಯಬೇಕಿದೆ.

  16. pravara

    ಸರ್, ಸುಮಾರು ಹದಿನೈದು ವರುಷಗಳ ಹಿಂದಿನ ಮಾತು, ಕಟ್ಟಿಗೆ ಕಡಿಯಲಿಕ್ಕೆ ಅಂತಾ ಬರುತಿದ್ದ ದುರುಗಪ್ಪ ಶೂದ್ರನೆಂಬ ಕಾರಣಕ್ಕೆ ಆತನಿಗೆ ಚಿಪ್ಪಿನಲ್ಲಿ ಕುಡಿಯಲೆಂದು ನೀರು ಕೊಡುತಿದ್ದರು, ಅದು ಹೊರಗಡೆ ಶೇಖರಿಸುತಿದ್ದ ನೀರು, ಒಮ್ಮೆ ನಾನೆ ಲೋಟದಲ್ಲಿ ಕುಡಿಯುವ ನೀರು ಕೊಟ್ಟಾಗ ತುಂಬಾ ಖುಷಿಯಾಗಿದ್ದ… ಓಣಿಯವರೆಲ್ಲಾ ನನ್ನನ್ನು ದುರುಗುಟ್ಟಿಕೊಂಡು ನೋಡಿದರು….. ಅತ್ಯುತ್ತಮ ಲೇಖನ ಸರ್

  17. ರಾಧಿಕಾ

    ಭೈರಪ್ಪನವರ ದಾಟು ಕಾದಂಬರಿಯನ್ನು ಇತ್ತೀಚೆಗೆ ಓದಿದೆ. 1970ರಲ್ಲಿ ಬರೆದಿರುವ ಪುಸ್ತಕದಲ್ಲಿ ಜಾತಿ ಆಧಾರಿತ ತಾರತಮ್ಯ, ಅಂತರ್ಜಾತಿ ವಿವಾಹ, ಎಲ್ಲ ಜಾತಿಯವರಿಗೂ ದೇವಸ್ಥಾನಕ್ಕೆ ಪ್ರವೇಶ ಇವೇ ಕಥಾ ಹಂದರ. ವಿಪರ್ಯಾಸವೆಂದರೆ ಇಂದಿಗೂ ಜಾತಿ ಭೂತ ಅಷ್ಟೇ ಪ್ರಬಲವಾಗಿರುವುದು. ಹಳ್ಳಿಗಳಲ್ಲಿ ಇಂದಿಗೂ ಕೆಲವು ಜಾತಿಯ ಮಂದಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ. ಅದನ್ನೆಲ್ಲ ನೋಡಿಯೂ ನೋಡದಂತಹ ನಿರ್ಲಿಪ್ತರು ನಾವುಗಳು.

  18. ಸುಧಾ ಚಿದಾನಂದಗೌಡ

    ಮನೆ ವಾತಾವರಣ, ಮನಃಸ್ಥಿತಿಗಳನ್ನು ಮೀರಿದ ಸಣ್ಣತನಗಳಿರುವುದರಿಂದ ಇರಬಹುದು
    ಈ ಜಾತಿ ಏನೆಲ್ಲ ವೇಷ ತೊಟ್ಟು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೆ ಇರುತ್ತದೆ.
    ತಿರಸ್ಕರಿಸಿ ಮುನ್ನಡೆಯುವುದೊಂದೇ ಮಾರ್ಗ.
    ಅವರವರಿಗೆ ಇಷ್ಟವಾದದ್ದನ್ನು ತಿನ್ನುವುದನ್ನು ತಪ್ಪೆಂದು ಹೇಳುವ ಹಕ್ಕು ಯಾರಿಗು ಇಲ್ಲ.

  19. adithyahk

    ನಿಮ್ಮ ವೈಯುಕ್ತಿಕ ಬದುಕಿನ ಸಂಗತಿಗಳನ್ನು ಹಂಚಿ ಕೊಂಡದಕ್ಕಾಗಿ ಅಭಿನಂದನೆಗಳು. ಓದಿದಾಗ ಅನಿಸಿದ್ದು ಅಂದು ಜಾತಿವಾದಿಗಳಿರಲಿಲ್ಲ ಆದರೆ ಜಾತಿ ಎಂಬುದು ಇದ್ದೆ ಇತ್ತು ಎಂದು .
    ನೀವೇ ಬರೆದಿರುವುದರಿಂದ ಹೇಳುತ್ತಿದ್ದೇನೆ, ನಿಮ್ಮ ತಂದೆ ನಿಮಗೆ ಮಾತ್ರ ಮದುವೆ ಮನೆಯಲ್ಲಿ ಉಣ್ಣುವ ಸ್ವಾತಂತ್ರನೀಡಿ ಅವರು ಮದವೆ ಮನೆಯ ಊಟ ಮಾಡದೇ ತಾಂಬೂಲ ಮಾತ್ರ ಸ್ವೀಕರಿಸಿದರು ಹಾಗು ನಿಮ್ಮೆದುರಿನ ಮನೆಯಲ್ಲಿ ನಿಮಗೆ ಜಗುಲಿಯವರಗೆ ಮಾತ್ರ ಪ್ರವೇಶವಿತ್ತೆ? ಇದು ಅವರವರ ವೈಯುಕ್ತಿಕ ಅಭಿಪ್ರಾಯ ಮತ್ತು ಅನಿಸಿಕೆಯ ವಿಷಯ ನಿಮ್ಮ ತಂದೆ ಊಟ ಮಾಡಲು ಬಯಸಿದ್ದರು ಸಮಾಜ ಒಪ್ಪುತ್ತಿರಲಿಲ್ಲ ಆದರೆ ಅವರು ನಿಮಗೆ ಅವಕಾಶ ಮಾಡಿಕೊಟ್ಟದ್ದನ್ನು ಮೆಚ್ಚಲೇಬೇಕು. ಸ್ವಾತಂತ್ರ್ಯಾನಂತರದ ನಮ್ಮ ಸಮಾಜ ಇದ್ದದ್ದೇ ಅಂತ ತೊಳಲಾಟದ (hanging on the edge situation) ಪರಿಸ್ತಿತಿಯಲ್ಲಿ ಹಂತ ಹಂತವಾಗಿ ಮೇಲೆಳೆಯ ಬೇಕಾಗಿದ್ದ ಸರ್ಕಾರ ಹಾಗು ರಾಜಕಾರಣಿಗಳು ನಮ್ಮ ಕೈ ಸೋಲಿಸಿದ್ದಾರೆ ನಾವು ಜಾತಿ ಕೂಪಕ್ಕೆ ಬಿದ್ದಿದ್ದೇವೆ.
    ನಮ್ಮೂರಿನಲ್ಲೂ ಮನೆಯಾಳುಗಳ ಕಷ್ಟ-ಸುಖಗಳ ಖರ್ಚನ್ನು ಯಜಮಾನನೆ ಭರಿಸುವ ಪದ್ಧತಿಯಿತ್ತು ಆದರೆ ಚೆಂಗೂಲಿ(contract) ಪದ್ಧತಿ ಹಾಗು ದಿನಗೂಲಿ ಅತಿ ದುಬಾರಿಯಾದಗಿನಿಂದ ಪಟ್ಟಿಯಾಳು ಪದ್ಧತಿ(payroll) ಕಡಿಮೆಯಾಗಿದೆ. ನಮ್ಮೂರಿನ ಮೂಲನಿವಾಸಿಗಳು ಮೂರು ಜಾತಿಯವರು ಜೇನುಕುರುಬರು(ಹರಿಜನ) ಕುಂಬಾರಶೆಟ್ಟರು ಮತ್ತು ಲಿಂಗಾಯತರು 19ನೇ ಶತಮಾನದಲ್ಲಿ ಕಾಫಿ ತೋಟಗಳಲ್ಲಿ ದುಡಿಯಲು ಘಟ್ಟದ ಕೆಳಗಿನಿoದ ಬಂದು ನೆಲೆಸಿರುವ ತುಳುಭಾಷಿಕರದು (ಗಿರಿಜನರು) ಊರಿಗೆ ಹೊಸಜಾತಿ. ಈ ನಾಲ್ಕೂ ಜಾತಿಗಳು ಇಂದಿಗೂ ವಾಸವಿರುವುದು ಬೇರೆ ಬೇರೆ ದಿಕ್ಕುಗಳಲ್ಲಿ, ಮೊದಲೆರಡು ಜಾತಿ ಬಿಡಿ ಕೆಲಸ ಮತ್ತು ವ್ಯವಹಾರದ ಹೊರತಾಗಿ ಹರಿಜನ-ಗಿರಿಜನರು ಒಬ್ಬರೊಡನೆ ಒಬ್ಬರು ಬೆರೆಯುವುದಿಲ್ಲ. 80-90 ರ ದಶಕದಲ್ಲಿ ಲಂಕೇಶ ಪತ್ರಿಕೆ ಮೆಚ್ಚುತ್ತಿದ್ದ, ಮಡಿ-ಮಡಿಯೆಂದು ಮೈಯುಜ್ಜದೆ ಕೇವಲ ನೀರಿನಲ್ಲಿ ಮುಳುಗೆಳುವವರನ್ನೂ ಕೂಡ ಅಸ್ವಚ್ಚರೆಂದು ಭಾವಿಸುತ್ತಿದ್ದ, ರಾಮಕೃಷ್ಣ ಹೆಗಡೆಯವರ ಜನತಾದಳಕ್ಕೆ ಮಾತ್ರ ಮತ ಚಲಾಯಿಸುತ್ತಿದ್ದ ನಮ್ಮ ಪೋಷಕರು ನಾನು ನಮ್ಮ ಅಜ್ಜಿಯ ವಯಸ್ಸಿನ ಗಿರಿಜನ ಮಹಿಳೆಯನ್ನು ಬಹುವಚನದಲ್ಲಿ ಸಂಭೋಧಿಸಿದಾಗ ಹಾಗೆ ಮಾಡಬಾರದೆಂದು ಊರವರು ನಗುತ್ತಾರೆಂದು ತಿಳಿ? ಹೇಳಿದ್ದರು. ನಮ್ಮಷ್ಟೆ ದೈಹಿಕ ಸ್ವಚ್ಚತೆ ಇದ್ದೂ ನಮ್ಮೊಡನೆ ಮನಯಲ್ಲೇ ನೆಲೆಸುವ ಕೆಲ ಆಳುಗಳಿಗೆ ಹಲವು ಕೋಣೆಗಳಿಗೆ ಪ್ರವೇಶವಿಲ್ಲ, ಇದನ್ನೆಲ್ಲಾ ನಂಬದ ಹಲವರಿದ್ದರೂ ಊರಿನವರ ಮಾತುಗಳಿಗೆ ಹೆದರಿ ಈ ಪದ್ದತಿಯನ್ನು ಇನ್ನು ಜಾರಿಯಲ್ಲಿಟ್ಟಿದ್ದಾರೆ.
    ನಾವು ಇಂದಿಗೆ ನೋಡುತ್ತಿರುವ ಸಮಾಜ ಹಾಗು ರಾಜಕಾರಣ ನಮ್ಮ ಹಿಂದಿನ ತಲೆಮಾರು ಬಿಟ್ಟುಹೋಗಿರುವ ಜಾತ್ಯಾತೀತೆಯ ಗೊಡ್ಡು ಅವತರಣಿಕೆ. ಅಮೆರಿಕಾದಲ್ಲಿ ಎಲೆಂದರಲ್ಲಿ ತಿಂದು ಎಲ್ಲರೊಡನೆ ಇದ್ದು ಬರುವ ನಾವು ಭಾರತಕ್ಕೆ ಕಾಲಿಟ್ಟೊಡನೆ ನಮ್ಮ ಸಂಸ್ಕೃತಿ ನಮ್ಮ ಆಚರಣೆ ಎಂಬ ಹೆಸರಿನಲ್ಲಿ ಜಾಣ ಕುರುಡಿನ ಜಾತಿವಾದಿಗಳಾಗಿದ್ದೇವೆ, ನಾವು ಕೆಳಗೆ ಬಿದ್ದಿರುವ ಪರಿ ಎಷ್ಟಿದೆಯೆಂದರೆ ಇನ್ನು ಮೇಲೇರಲು ನಮಗೆ ಕಾಲ್ಪನಿಕ ಚಿತ್ರಗಳಲ್ಲಿರುವ ಅತಿಮಾನುಷರಿಗಿರುವಂತಹ ರೆಕ್ಕೆಗಳೇ ಬೇಕಾಗಿವೆ

  20. ಹರಿ

    “ವಾಮ ಮಾರ್ಗದಲ್ಲಿ ಜಾತಿಯನ್ನು ಸಮರ್ಥಿಸಿಕೊಳ್ಳುವ ಲೇಖನ ಬರೆಯುವಾಗ,, ಅಂತಹವರು ನನ್ನ ಪಾಲಿಗೆ ಮನುಷ್ಯರಂತೆ ಕಾಣುವುದಿಲ್ಲ, ಬದಲಾಗಿ ಕ್ರಿಮಿ ಕೀಟಗಳಂತೆ ಗೋಚರಿಸುತ್ತಾರೆ.”
    ಹೆತ್ತೂರು ನಾಗರಾಜ್ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಬಹಳಷ್ಟು ಕ್ರಿಮಿ-ಕೀಟಗಳು ಕಂಡವು.
    ಇವರೆಲ್ಲ ಕೇವಲ ಕಲಿತವರು…ಸುಶಿಕ್ಷಿತರಲ್ಲ…
    ಇವರುಗಳೆಲ್ಲ ಇವರ ಹಿರಿಯರಿಂದ- ಬಾಲ್ಯದ ಜೀವನಾನುಭವದಿಂದ ಕಲಿಯದೇ ಇರಬಹುದು…ಆದರೆ ಶಿಕ್ಷಣದಿಂದಲಾದರೂ ಕಲಿಯ ಬಹುದಿತ್ತಲ್ಲ.
    ಈ ಕ್ರಿಮಿ-ಕೀಟಗಳಿಗೆ ನನ್ನದೂ ಒಂದು ಧಿಕ್ಕಾರ.

  21. Kumara Raitha

    ಜಾತಿ ಎನ್ನುವ ಪ್ರಶ್ನೆ ಬಂದಾಗ ಅಲ್ಲಿ ವೈಯಕ್ತಿಕ ನಿಲುವುಗಳಿಗಿಂತ ಸಮುದಾಯದ ನಿಲುವುಗಳು ಮುಖ್ಯ ಆಗುತ್ತವೆ. ಈ ಹಿನ್ನೆಲೆಯಲ್ಲಿ ನಿಮ್ಮದು ಭಾವನಾತ್ಮಕ ನೋಟವೇ ಹೊರತು ವಾಸ್ತವಿಕ ಅಲ್ಲ. ನನ್ನ ಅರಿವಿಗೆ ಬಂದ ಮಟ್ಟಿಗೆ ಕರ್ನಾಟಕದ ಸಂದರ್ಭದ ಮಟ್ಟಿಗೆ ಜಾತಿ ಉಳಿಯಬೇಕು;ತಮ್ಮ ಪ್ರಾಬಲ್ಯ ಮೆರೆಯಬೇಕು ಎಂದು ಬಯಸುವವರು ಬ್ರಾಹ್ಮಣರಲ್ಲ; ದಲಿತರೂ ಅಲ್ಲ. ಇನ್ನಿತರ ಮಧ್ಯಮ ಜಾತಿಯವರೂ ಅಲ್ಲ.
    ಕರ್ನಾಟಕದ ಸಾಂಸ್ಕೃತಿಕ ಪರಂಪರೆ ನೋಡಿದರೆ ಒಬ್ಬನೇ ಒಬ್ಬ ಬಲಿಷ್ಠ ಬ್ರಾಹ್ಮಣ ಜಾತಿಬೇಧದ ಪೋಷಣೆ ಮಾಡಿದ್ದನ್ನು ತೋರಿಸಲೂ ಸಾಧ್ಯ ಇಲ್ಲ. ವೀರಶೈವ ಧರ್ಮ ಸ್ಥಾಪಿಸಿದ ಅಣ್ಣಾ ಬಸವಣ್ಣಾ ಓರ್ವ ಬ್ರಾಹ್ಮಣ. ಅವರ ಕಾಲಘಟ್ಟದಲ್ಲಿ ತಳ ಸಮುದಾಯಗಳು ಆತ್ಮಭಿಮಾನ ಕಂಡುಕೊಂಡವು.
    ಮೂರು ದಶಕದ ಹಿಂದೆ ಮೈಸೂರು ಮಹಾರಾಜರ ಕುಟುಂಬದ ನೆಂಟುಳ್ಳ ಅರಸು ಸಮುದಾಯದ ದೇವರಾಜ ಅರಸು (ಬ್ರಾಹ್ಮಣರಲ್ಲ) ಅಧಿಕಾರವಧಿಯಲ್ಲಿ ಬಾಯಿ ಕಳೆದುಕೊಂಡಿದ್ದ ತಳ ಸಮುದಾಯಗಳಿಗೆ ಧ್ವನಿ ದೊರೆಯಿತು.
    ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಅಧಿಕಾರವಧಿಯಲ್ಲಿ ಅಬ್ದುಲ್‌ ನಜೀರ್ ಸಾಹೇಬರು, ಸಿದ್ದರಾಮಯ್ಯ, ಸಿಂಧ್ಯಾ ಇತ್ಯಾದಿ ಅನೇಕ ನಾಯಕರು ಬೆಳೆದರು.ಇಂಥ ಉದಾಹರಣೆಗಳು ರಾಷ್ಟ್ರೀಯ ಮಟ್ಟದಲ್ಲಿ ನೋಡಿದಾಗಲೂ ದೊರೆಯುತ್ತವೆ.
    ಸಮಕಾಲೀನ ಸಂದರ್ಭದಲ್ಲಿ ಜಾತಿ ಬಲಿಷ್ಠ ಆಗುತ್ತಿರುವುದಕ್ಕೆ, ಕಾರಣ ಏನು, ಕೈಯೊಡ್ಡೆದ ಜಾತಿ, ದಲಿತರ ಏಳಿಗೆಯನ್ನ ಅಸಹನೆ ಕಣ್ಣುಗಳಿಂದ ನೋಡುತ್ತಿರುವವರು ಯಾರು ಎಂಬುದನ್ನು ಕರಾರುವಾಕ್ಕಾಗಿ ಗ್ರಹಿಸಿದಾಗ ಮಾತ್ರ ಸಮಸ್ಯೆಗೆ ಉತ್ತರ; ಪರಿಹಾರ ದೊರೆಯುತ್ತದೆ.
    ವೈಯಕ್ತಿಕ ನೆಲೆಗಟ್ಟಿನಲ್ಲಿ ನಿಮ್ಮೊಳಗೆ ಜಾತಿ ವಿಷಬೀಜ ಬೆಳೆಯದಂತೆ ನೋಡಿಕೊಂಡ ನಿಮ್ಮ ತಂದೆ ಅವರನ್ನ ನಾನು ಮನಪೂರ್ವಕ ಅಭಿನಂದಿಸುತ್ತೇನೆ; ಗೌರವಿಸುತ್ತೇನೆ.

  22. adithyahk

    ಮತ್ತೊಬರನ್ನು ಅದು ತಿನ್ನಬೇಡಿ ಇದು ತಿನ್ನಬೇಡಿ ಎನ್ನುವವರನ್ನು ನೋಡಿ ಒಮ್ಮೆ ಗಹಗಹಿಸಿ ನಕ್ಕು ಸುಮ್ಮನಿರಬೇಕಾಗಿದೆ ಏಕೆಂದರೆ ಅಂತಹವರು ಅದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಗೆ ಅನರ್ಹರು.
    ಸರಕಾರವಂತೂ ಸಮಾಜವನ್ನು ಮತಾಂಧತೆಯಿಂದ ಹೊರತರಲು ಸೋತು ಕುಸಿದಿದೆ ಕೊನೆ ಪಕ್ಷ ತನ್ನ ಭವಿಷ್ಯದ ಪ್ರಜೆಗಳಿಗಾದರು ಜಾತ್ಯಾತೀತ ಶಿಕ್ಷಣ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಲಿ, ಜಾತಿ ವಾಸನೆಯಿರುವ ಅಂಶಗಳನ್ನು ಪಠ್ಯಕ್ರಮದಲ್ಲಿ ತೂರುಕದೆ, ಮತ ಹಾಗು ವೈಯುಕ್ತಿಕ ಹಿತಾಸಕ್ತಿಗಾಗಿ ಅವಶ್ಯಕವಲ್ಲದ ವಿಶ್ವವಿದ್ಯಾಲಯಗಳನ್ನು ಆರಂಭಿಸುವ ಕೆಲಸ ನಿಲ್ಲಿಸಬೇಕು. ಜಾತಿ ಪದ್ಧತಿಯನ್ನು ಅಗೋಚರವಾಗಿ ಆಚರಿಸುವ ಸಂಸ್ಥೆಗಳಿಗೆ ಅನುದಾನ ನೀಡುವ ದರಿದ್ರ ಪದ್ದತಿಯನ್ನು ಕೈಬಿಡಬೇಕು.

  23. adithyahk

    ಹಾವು ಒಂದೇ ಏಟಿಗೆ ತನ್ನ ಪೊರೆ ಕಳಚುತ್ತದೆ ನಾವು ಮನುಷ್ಯರೂ ನಮಗರಿವಿಲ್ಲದಂತೆ ಪ್ರತಿ 21 ದಿನಗಳಿಗೊಮ್ಮೆ ನಮ್ಮ ಅಡಿಯಿಂದ ಮುಡಿಯೋರೆಗಿನ ಪೊರೆ(ಮೇಲ್ಚರ್ಮ)ಕಳಚಿಡುತ್ತೇವೆ. ಜಾತಿ ತೊಡೆದುಹಾಕಲು ಬಂದ ಸರ್ಕಾರ ಒಂದೇ ಏಟಿಗೆ ಎಲ್ಲಾ ಬದಲಾಯಿಸಲು ಹೋಗಿ ಅರಿವು ಎಂಬುದರ ಅರ್ಥವೇ ಗೊತ್ತಿಲ್ಲದ ಶಿಕ್ಷಣವಿಲ್ಲದ ಜಾತಿವಾದಿಗಳಿಗೆ ಕಲ್ಚರಲ್ ಶಾಕ್ ಕೊಟ್ಟಿತು. ಇದರಿಂದ ಜಾತಿವಾದಿಗಳ ಧ್ರುವೀಕರಣವಾಗಿ ಜಾತಿ ಪದ್ಧತಿ ಇನ್ನೂ ಗಟ್ಟಿಗೊಂಡಿದೆ.
    ಹೇಗೂ ಮೊದಲಿನಿಂದಲೂ ವ್ಯವಸಾಯದೊಂದಿಗೆ ಹೆಚ್ಚು ಸಂಬಂಧ ಹೊಂದಿರದಿದ್ದ ಒಂದು ವರ್ಗ ಸ್ವಾತಂತ್ರ್ಯಾನಂತರ ಅತಿ ಸುಲಭವಾಗಿ ಪಟ್ಟಣಗಳಿಗೆ ವಲಸೆ ಬಂದಿತು, ಕೆಲವರ್ಗಗಳಿಗೆ ಸರ್ಕಾರ ಕೊಡಮಾಡುವ ಮೀಸಲು ಪದ್ದತಿಯನ್ನು ಯಾವ ರೀತಿಯಲ್ಲಿಯೂ ಒಪ್ಪದ ಈ ವರ್ಗ ಸಾವಿರಾರು ವರ್ಷಗಳಿಂದ ತನ್ನ ಕುಲಕ್ಕೆ ಮಾತ್ರ ಮೀಸಲಾಗಿದ್ದ ಶಿಕ್ಷಣ ಪದ್ಧತಿಯಿಂದ ಶಿಕ್ಷಿತರು( ಆದರೆ ಬುದ್ಧಿವಂತರಲ್ಲ) ಎಂಬ ಹಣೆ ಪಟ್ಟಿಯೊಂದಿಗೆ ಇಂದು ಸಾಹಿತ್ಯವಲಯದಲ್ಲಿ ತುಂಬಿ ಹೋಗಿದೆ, ಈ ವರ್ಗ ಇಂತಹ ಎಡವಟ್ಟುಗಳನ್ನು ಮಾಡಿಕೊಳ್ಳುವುದು ಅಸಹಜವೇನಲ್ಲ. ಈ ವರ್ಗ ಸಮಾಜದ ಇತರೆ ವರ್ಗದ ಅಶಿಕ್ಷಿತ ಜಾತಿವಾದಿಗಳನ್ನು ತನ್ನತ್ತ ಸೆಳೆದುಕೊಂಡು ವಾತಾವರಣವನ್ನೇ ಹಾಳುಗೆಡವುತ್ತಿದೆ.

    • adithyahk

      ವಿನಂತಿ: ಕಲ್ಚರಲ್ ಶಾಕ್ ಅನ್ನು ಕಲ್ಚರ್ ಶಾಕ್ ಎಂದು ಓದಿ.

  24. ಉಷಾಕಟ್ಟೆಮನೆ

    ಜಾತೀಯ ಕೇರಿಗಳಿರುತ್ತವೆ ಎಂಬುದನ್ನು ಪುಸ್ಟಕದಲ್ಲಿ ಓದಿ ತಿಳಿದುಕೊಂಡವಳೇ ಹೊರತು ಅದನ್ನು ಪ್ರತ್ಯಕ್ಷವಾಗಿ ಬಾಲ್ಯದಲ್ಲಿ ಕಂಡವಳಲ್ಲ. ಹಾಗಾಗಿ ಜಾತಿ ಎಂಬುದು ನನಗೆ ದೊಡ್ಡ ಸಮಸ್ಯೆಯಾಗಿ ಎಂದೂ ಕಾಡಿದ್ದಿಲ್ಲ. ಆದರೆ ಇತ್ತೀಚೆಗೆ ಸ್ನೇಹ ಸಂಬಂಧಗಳೂ ಸೇರಿದಂತೆ ಎಲ್ಲಾ ಸಾಮಾಜಿಕ ಸಂಬಂಧಗಳೂ ಜಾತೀಯ ನೆಲೆಯಲ್ಲೇ ಗುರುತಿಸಲ್ಪಡುತ್ತಿವೆ. ಈ ಪೇಸ್ ಬುಕ್ಕಿಗೆ ಬಂದರಂತೂ ನನಗೆ ನನ್ನ ಜಾತಿ ಯಾವುದೆಂಬುದರ ನೆನಪು ಅಡಿಗಡಿಗೂ ಬರುತ್ತಿದೆ.
    ಕೊಪ್ಪ ಅವರೇ, ನೀವು ಹೇಳಿದ ’ಆಳು ಮಗ’ ಎಂಬ ಸಂಬಂಧವನ್ನು ನಾನೂ ನನ್ನಪ್ಪನ ಬಾಯಿಯಿಂದ ಕೇಳಿದ್ದೇನೆ.ಹಾಗೆ ಕರೆಸಿಕೊಳ್ಳುತ್ತಿದ್ದ, ನನ್ನನ್ನು ಹೆಗಲ ಮೇಲೆ ಹೊತ್ತು ಹೊಳೆದಾಟಿಸುತ್ತಿದ್ದ, ಹರಿಜನನಾದ ನಮ್ಮೆಲ್ಲರ ಪ್ರೀತಿಯ ಮಂಜ ಕಳೆದ ತಿಂಗಳು ತೀರಿಕೊಂಡಾಗ ನನ್ನಮ್ಮ ಪೋನ್ ಮಾಡಿ ನನಗೆ ತಿಳಿಸಿದ್ದರು.

  25. nagarajhettr

    Anna istu saku atmasakshi eccarisalu kelavara mukavaadavadaru kalachi biddide. Anta adbuta baraha jaativadigallu matte matte odikollali. Nimma tande k t shivaprasad jaathi meerida karanakke doddavaraaguttare. Adu geleyaru helidante krimigalige arthavagabekaste. Thank u anna

  26. Lingaraju bs

    ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ ಎಂದ ಬಸವಣ್ಣ ಹುಟ್ಟಿದ ನಾಡೇ ಇದು ಎಂದು ಕೇಳಬೇಕಿದೆ. ಹಸಿವು ಮತ್ತು ಕಾಲ ಜಗತ್ತನ್ನು ಬದಲಿಸುವ ಎರಡು ವಿಶ್ವವಿದ್ಯಾಲಯ ಎಂಬ ಕಾಲರ್್ ಮಾಕ್ಸರ್್ನ ಮಾತುಗಳು ಎಂದಿಗೂ ನಿಜವಾಗುತ್ತವೆ. ಮಾವೋನ ಒಂದು ಮಾತಿದೆ.ಸರಿಯಾದ ಆಲೋಚನೆಗಳು ಹುಟ್ಟುವುದು ಸಮಾಜದಿಂದಲೇ ಎಂಬುದು ಆ ಮಾತು .ಹಾಗಾಗಿ ಜಗದೀಶ್ ಕೊಪ್ಪ ಅವರ ತಂದೆಯವರ ವಿಶಾಲ ದೃಷ್ಟಿಕೋನ ಮೆಚ್ಚತಕ್ಕದ್ದು.

  27. k.satyanarayana

    Today morning L.C. Sumitra madam telephoned and mentioned about reference made by Jagadeesh to my Grandmother Janakamma.I am really touched by this reference. Since Jagadeesh lived in the village continuously he has more and detailed memories of our house, garden, and my grandmother. I have to also mention that my grandmother was living in village alone and was lokked after by neighbours.All of them knew about their caste but were not caste conscious.Dr. Ramesh, Who occupied senior positions in District Congress and DCC Bank and was one of mentors and relative OF S. M. Krishna use to come on foot and attend to mygrandmother, One of touching moments in my life was to sit next to Dr. Ramesh in Taluk Sahitya Sammelana procession where i was made president mostly because of efforts of Jagadeesh and Srikantegoda.
    discussion on casteism is ok. But ordinary human beings like allof us transcend it in our ownway within our limimits. We may not be centpercent radical always but human in our own small way. We dont write about it. Jagadeesh by drawing attention to his father and my grandmother has added a new dimension to discussion.Incidentally my fathers annual Thithi is only 10 days away and when all family members gather we will greatfully discuss about our earlier days- thanks to this article.

  28. prakashchandra

    Dear Jagadish koppa….lekhana sandarbhochithavaagide. sidlaghattadalli nammadu bada kutumbavaadaroo manege banda yaava jaathiyavarigoo bhojana illave upahara kodade kaluhisuthiralilla naavu. bandavaru kooda yaava jaathi namma thaayi keluthale iralilla. naano kooda ella jaathi, dharmada maneyalli santhoshavaagi aahara sevisiddene. eegaloo nanna maneyalli ellarigoo muktha swaagatha…avaru ichepattare naavu balasuva thatteyanne koduva paddhathi anusarisikondu baruthiddene. idakke nanna hethavaru haakikotta sampradaayave kaarana endu nanna bhaavane.

  29. ಪಂಡಿತಾರಾಧ್ಯ ಮೈಸೂರು

    ಪ್ರಿಯ ಸಂಪಾದಕರಲ್ಲಿ ವಿನಂತಿ.
    ನನ್ನ ಪತ್ರದಲ್ಲಿರುವ ಬೆರಳಚ್ಚಿನ ತಪ್ಪುಗಳನ್ನು ಸರಿಪಡಿಸಿರುವೆ.
    ದಯವಿಟ್ಟು ಈಗಿರುವುದರ ಬದಲು ಇದನ್ನು ಪ್ರಕಟಿಸಿ.
    ಅನನುಕೂಲತೆಗೆ ವಿಷಾದಿಸುವೆ.
    ಪಂಡಿತಾರಾಧ್ಯ ಮೈಸೂರು
    1 ಏಪ್ರಿಲ್ 2013
    ಪ್ರಿಯ ಜಗದೀಶ ಕೊಪ್ಪ ಅವರಿಗೆ ಅಭಿನಂದನೆಗಳು.
    ನಿಮ್ಮ ಲೇಖನ ಎಷ್ಟು ಜನರಲ್ಲಿರುವ ಮಾನವೀಯತೆಗೆ ಬಾಯಿಕೊಟ್ಟಿತು. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಚರ್ಚೆಗಳಲ್ಲಿ ಮನುಷ್ಯತ್ವ ಮರೆತ ತರ್ಕ ಪ್ರಾವೀಣ್ಯ ಮೆರೆಯುತ್ತಿದ್ದುದನ್ನು ನೋಡಿ ಮನಸ್ಸು ಮುದಿಡಿತ್ತು. ನಿಮ್ಮ ಲೇಖನ ಅವನ್ನೆಲ್ಲ ಗುಡಿಸಿಹಾಕಿ ಮಾನವೀಯತೆಯನ್ನು ಸ್ವಾಗತಿಸಿತು. ನಿಮ್ಮ ತಂದೆಯವರು ತಾವು ಮಾತ್ರ ಏಕೆ ಊಟ ಮಾಡಲಿಲ್ಲ ಎಂದು ಪ್ರಶ್ನಿಸುವಲ್ಲಿ ತರ್ಕ ತಲೆ ಎತ್ತಿದ್ದರೂ ತನ್ನ ಪ್ರಶ್ನೆಗೆ ತಾನೇ ಉತ್ತರಿಸಿ ಮಾನವೀಯತೆಗೆ ದಾರಿಮಾಡಿಕೊಟ್ಟಿರುವುದು ಮೆಚ್ಚುವ ಸಂಗತಿ. ತಮ್ಮ ಸಂವೇದನೆಗಳಿಗೆ ಮುಕ್ತ ಅಭಿವ್ಯಕ್ತಿ ನೀಡಿದ ಎಲ್ಲರಿಗೂ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading