ಜುಗಾರಿ ಕ್ರಾಸ್ ನಲ್ಲಿ ಚರಕದ ಬಗ್ಗೆ ಇನ್ನಷ್ಟು

ಚಲಂ  ‘ಚರಕ, ಸುಸ್ಥಿರ ಬದುಕಿನ ಬಗ್ಗೆ ಮತ್ತೊಂದಿಷ್ಟು…’ ಎನ್ನುವ ಲೇಖನ ಬರೆದಿದ್ದರು

ಇದಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ

ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ

ಲಲಿತಾ ಸಿದ್ಧಬಸವಯ್ಯ

ಪ್ರಸನ್ನಮಾರ್ಗ ಎಲ್ಲಿಗೆ ಬಂದು ನಿಲ್ಲುತ್ತದೊ ಗೊತ್ತಿಲ್ಲ. ಈ ಲೇಖನದ ಒಂದು ಮಾತು ನನಗೆ ವಾಸ್ತವ ಸತ್ಯ – “ರೈತಸಂಘ ಮುಂತಾದುವುಗಳು ಒಂದು ನಿರ್ದಿಷ್ಟ ರಾಜಕೀಯ ಗುರಿಯನ್ನು ಹೊಂದಿಲ್ಲದ ಕಾರಣ ಈಗಲೂ ರೈತ ಯಾವ ಬವಣೆಯಿಂದ ಬದುಕುತ್ತಿದ್ದಾನೆ ಎಂಬುದನ್ನು ನೋಡಬಹುದು.ನಮ್ಮ ರೈತನ ಈಗಿನ ಕಷ್ಟಕ್ಕೆ ರೈತಸಂಘದ ಕೊಡುಗೆ ಇಲ್ಲ ಅಂತ ಹೇಳುವುದು ಹೇಗೆ ” – ಇದು ನಿಜ. ಲಂಕೇಶ್ ಮತ್ತವರ ಪ್ರಗತಿರಂಗದ ಹಿಂದೆ ಹಿಂದುಮುಂದು ನೋಡದೆ ಬಿದ್ದವರೆಲ್ಲ ರೈತಸಂಘದ ಬಗ್ಗೆ ಅತೀ ಭರವಸೆಗಳನ್ನು ಬೆಳೆಸಿಕೊಂಡದ್ದು ಈಗ ಕಥೆ.
ಬಂಗಾರದಮನುಷ್ಯ ಸಿನಿಮಾ ನೋಡಿ ಕಡಿದಾಳು ಶಾಮಣ್ಣನವರು “ಈ ಸಿನಿಮಾ ತಿರುಗುಮುರುಗಾಗಿದ್ದರೆ ಸರಿಯಾಗಿರ್ತಿತ್ತು,ಮೊದಲು ನುಣ್ಣಗಿದ್ದ ಮನುಷ್ಯ ಬೇಸಾಯಕ್ಕಿಳಿ ಮೇಲೆ ತರಗೆದ್ದು ಹೋಗುತ್ತಾನೆ ಪಿಚ್ಚರಿನಲ್ಲಿದ್ದಂಗೆ ಬೇಸಾಯ ಮಾಡಿ ಬಂಗಾರವಾಗಿದ್ದು ಕಾಣೆ” ಎಂದರು ಅನ್ನುವ ‘ಮಾತು ಕಮ್ ಜೋಕು’ ಪ್ರಚಲಿತದಲ್ಲಿದೆ.(ಇದು ಕಲ್ಪಿತವೊ ನಿಜವೊ ತಿಳಿಯದು) ಈ ಜೋಕಿನಂತೆ ಎಂದೂ ಬೇಸಾಯ ಮಾಡದವರೆಲ್ಲ ಲಂಕೇಶರ ಸ್ಪೂರ್ತಿಯಲ್ಲಿ ರೈತಸಂಘದ ಕಟ್ಟಾಬೆಂಬಲಿಗರಾದೆವು. ಅಂದರೆ ಪುಗಸಟ್ಟೆ ಬೆಂಬಲ. ಮಾತಿಗೇನು ಖರ್ಚು ಮಾಡಬೇಕು? ಇದೇ ಅವಧಿಯಲ್ಲಿ ನಮ್ಮ ಮದುವೆ ಆಯಿತು. ಉತ್ತು ಬಿತ್ತು ಕೊಯ್ದು ಕಣಮಾಡಿ ಅಗೆಹಾಕಿ ಎರಡೂ ಕೈಯಿಂದ ಹೊಯ್ದುಕೊಂಡಿದ್ದ ನನ್ನ ಪತಿದೇವರು “ಯಾವ ಬೊಸುಡಿಮಗ ಮಾಡಿದ್ನೊ ಈ ಬೇಸಾಯ ಅಂಬದ” ಅನ್ನುವಷ್ಟು ರೋಸಿಹೋಗಿ ಇತ್ತ ಮೊಕ ಹಾಕಿ ಮಲಗುವುದಿಲ್ಲ ಅಂತ ಅವರಪ್ಪನ ಕೂಡೆ ವ್ಯಾಜ್ಯ ಮಾಡಿಕೊಂಡು ಬೆಂಗಳೂರು ಬಿದ್ದಿದ್ದರು. ಇಂಥ ವರನ ಧರ್ಮವಧುವಾದ ನಾನು ಇದ್ದ ಸರ್ಕಾರಿ ಕೆಲಸ ಬಿಟ್ಟು “ಹಳ್ಳಿಗೆ ಹೋಗೋಣ ಬೇಸಾಯ ಮಾಡೋಣ ಬಾ” ಅಂತ ಗಂಟುಬಿದ್ದೆ.
ನವದಂಪತಿ ನಡುವೆ ಆಗ ನಡೆದ ಧಾರಾವಾಹೀ ಜಗಳದ ಕೇಂದ್ರಬಿಂದು ಈ ರೈತಸಂಘ. ರೈತಸಂಘದ ಬಗ್ಗೆ ಬೇಳೆನುಚ್ಚಿನಷ್ಟೂ ಆದರವಿಟ್ಟುಕೊಳ್ಳದೆ ಅದನ್ನು ಅದರ ನಡೆಗಳನ್ನು ಕಟುವಿಮರ್ಶಿಸುವ ಗಂಡ ಮತ್ತು ಸಂಘದ ಬಗ್ಗೆ ಹತ್ತಿಹಿಂಜಿದಂತ ಕನಸುಗಳನ್ನು ಊದಿಊದಿ ಬಿಡುತ್ತಿದ್ದ ನಾನು,,,,! ಅದೂ ಆಯಿತು. ವರ್ಷದೊಳಗೆ ಮೇಟಿಯಿಂ ರಾಟಿ ನಡೆವ ಅಷ್ಟೂ ಪರಿಯನ್ನು ಕಣ್ಣಾರೆ ಕಂಡು ” ಕೆಲಸಕ್ಕೆ ಹೋಗೋಣ ಸಂಬಳ ಪಡೆಯೋಣ” ಎನ್ನುತ್ತ ಪೇಟೆಗೆ ಬಂದೆವು. ಅಲ್ಲಿಂದ ಕೆಲವೆ,ಕೆಲವೆ ವರ್ಷಗಳಲ್ಲಿ ರೈತಸಂಘ ಚಿಛ್ಚಿದ್ರವೆದ್ದು ಹೋಯಿತು.ಚಕ್ಕೆಸಿಬಿರಿನಂತೆ ರೈತಸಂಘ ಅದೆಷ್ಟು ಭಾಗಗಳೆದ್ದಿತೊ ಅಷ್ಟೂ ಭಾಗಗಳ ತಲಾ ನೇತಾರರು ಒಂದಿಲ್ಲೊಂದು ರಾಜಕೀಯ ಪಕ್ಷದ ಬಹಿರಂಗದ್ದೊ ಅಂತರಂಗದ್ದೊ ಬೆಂಬಲ ಪಡೆದು ಮುಂದುವರೆದಿದ್ದು ಮತ್ತು ಅದರೊಳಗೆ ಜಾತಿರಾಜಕಾರಣವೆ (ಮುಖ್ಯವಾಗಿ ರಾಜಕೀಯವಾಗಿ ಪ್ರಬುದ್ಧವಾಗಿದ್ದ ಜಾತಿಗಳ) ಮುಖ್ಯವಾದದ್ದು ಸಂಘ ಒಪ್ಪಿಕೊಂಡರೂ ಬಿಟ್ಟರೂ ನಿಜ.
ಇತ್ತ ಅದನ್ನೆ ನಂಬಿಕೊಂಡು ಊರಲ್ಲಿ ಅಧಿಕಾರಸ್ತರ, ಅವಸರಕ್ಕೆ ಸಾಲ ಕೊಡುತ್ತಿದ್ದವರ, ಕೊನೆಗೆ ಹೆಪ್ಪಿಗೆ ಮಜ್ಜಿಗೆ ಕೊಡುತ್ತಿದ್ದವರನ್ನೂ ಎದುರು ಹಾಕಿಕೊಂಡವರ ಸ್ಥಿತಿಯೇನು? ದೊಡ್ದ ಬದಲಾವಣೆ ಆಗುವಾಗ ಇದು ಸಹಜ ಅಂದುಬಿಡುತ್ತಾರೆ ಕೆಲವರು. ಆದರೆ ಸಣ್ಸಣ್ಣ ನೆಮ್ಮದಿಯ ಬದುಕುಗಳೆ ಇಂಥ ದೊಡ್ಡ ಬದಲಾವಣೆಗೆ ತಲೆದಂಡವಾಗುವುದನ್ನು ತಪ್ಪಿಸುವವರು ಯಾರು ಹೇಳಿ?

 

ಮಹೇಶ್ವರಿ ಯು
ಆತ್ಮವಿಮರ್ಶೆಯಿಂದ ಕೂಡಿದ ನಿಷ್ಠುರವಾದ ಆತ್ಮಾವಲೋಕನದೊಂದಿಗೆ ಸಾಗಬೇಕಾದ ಹೋರಾಟದ ಬಗ್ಗೆಯೇ ಪ್ರಸನ್ನ ಅವರು ಹೇಳಿದ್ದಾರೆಂದು ನಾನು ತಿಳಿದಿದ್ದೇನೆ.ದುಡಿಮೆಯ ಬದುಕಿನ ಘನತೆಯನ್ನು ಅರ್ಥೈಸುವುದು ,ಸಾಧ್ಯವಾದಷ್ಟೂ ಸರಳ ಜೀವನವನ್ನು ಆಶ್ರಯಿಸುವುದು., ನಮ್ಮ ಈ ಇಳೆಯ ಹಾಗೂ ಇಳೆಯ ಮಕ್ಕಳ ಜೀವಸತ್ವವನ್ನು ಕಾಪಾಡುವುದು- ಪ್ರಸನ್ನರ ಕಾಳಜಿ ಎಂಬುದಾಗಿ ನನ್ನ ಗ್ರಹಿಕೆ.ಪ್ರಗತಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಹುಚ್ಚುಕುದುರೆಯ ಓಟ ಎಲ್ಲರನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಯೋಚಿಸಿದರೆ ಅದು ರೊಮಾಂಟಿಕ್ ಆಗುತ್ತದೆಯೇನೋ?
ರೈತರ, ಬಡವರ , ದುಡಿಮೆಗಾರರ ಬದುಕಿನ ಬಗ್ಗೆ ಅವರ ಬವಣೆಯ ಬಗ್ಗೆ ಪ್ರಸನ್ನ ಅವರ ಸ್ಪಂದನವಿಲ್ಲವೆಂದು ಹೇಳಲು ಸಾಧ್ಯವೇ?ಶಬ್ದಗುಣ ಎಂಬ ಪತ್ರಿಕೆಯಲ್ಲಿ ಪ್ರಸನ್ನ ಅವರೊಂದಿಗೆ ನಡೆದ ಒಂದು ಸಂದರ್ಶನ ಪ್ರಕಟವಾಗಿತ್ತು- ಕೆಲವು ವರ್ಷಗಳಹಿಂದೆ.ಅದನ್ನು ಓದಿದ ಆಧಾರದಲ್ಲಿ ನನಗೆ ಅನಿಸಿದ್ದೇನೆಂದರೆ ಅವರ ಯೋಚನೆ ಮತ್ತು ಕಾರ್ಯಯೋಜನೆ ವಾಸ್ತವದ ಅರಿವಿಲ್ಲದ್ದೆ ಓಮ್ಮಿಂದೊಮ್ಮೆಲೆ ಮೂಡಿದ್ದಲ್ಲ.ಅದರ ಹಿಂದೆ ವರ್ತಮಾನದ ಮಾತ್ರವಲ್ಲ ನಾಳೆಯ ಬದುಕಿನ ಕುರಿತಾದ ಕಾಳಜಿಯೂ ಇದೆ.ಒಂದು ಸಮಗ್ರ ದೃಷ್ಟಿ ಇದೆ. ‘ಬಡವರಿಗೆ ನೀವು ಬಡವರಾಗಿಯೇ ಇರಿ ದುಡಿದು ದುಡಿದು ಸಾಯಿರಿ’ ಎಂಬಷ್ಟು ಸಂವೇದನಾಹೀನರಾಗಿ ನನಗೆ ಅವರು ಕಾಣಿಸಿಲ್ಲ.

ಸಿದ್ದಯ್ಯ ಕೆ ಈ
ಬದನವಾಳು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶದಲ್ಲಿ ಕೆಲವು ಪ್ರತಿಜ್ಞೆ ಕೈಗೊಳ್ಳಲಾಗಿದೆ. ಕೆಲ ಪ್ರತಿಜ್ಞೆಗಳು ಓಕೆ. ಆದರೆ ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಭಾಗವಹಿಸುತ್ತೇನೆ. ಗೃಹ ಮತ್ತು ಸ್ನಾನಕ್ಕೆ ಬಳಸಿದ ನೀರನ್ನು ಗಿಡಗಳಿಗೆ ಹಾಕುತ್ತೇನೆ ಎಂಬುದು ಸೇರಿದಂತೆ ಹಲವು ಅಂಶಗಳು ಅವೈಜ್ಞಾನಿಕವಾಗಿವೆ. ಅಂತೆಯೇ ಸಿರಿಧಾನ್ಯ ಬೆಳೆಸುವುದು ಮತ್ತು ಸೇವಿಸುವುದು ಕೂಡ ಬರೀ ಬೂಟಾಟಿಕೆ ಮಾತು.
ಸಿರಿಧಾನ್ಯ ಬೆಳೆಯುವವರು ಯಾರು ? ಭೂಮಿ ಎಲ್ಲಿದೆ. ಮಳೆ ಎಲ್ಲಿ ಬರುತ್ತಿದೆ. ಸಿರಿಧಾನ್ಯ ಬೆಳೆದರೆ ರೈತರು ಹಣ ಸಂಪಾದಿಸುವುದು ಹೇಗೆ? ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳುವುದಾದರೂ ಹೇಗೆ? ಸಿರಿಧಾನ್ಯ ಬಿತ್ತಲು ಎತ್ತುಗಳು ಬೇಕು. ಹೋರಿಗಳು ಬೇಕು. ಈಗ ರೈತರ ಬಳಿ ಎತ್ತು, ಹೋರಿ ಇಲ್ಲ. ಸಿರಿಧಾನ್ಯ ಬೆಳೆಯುವುದಾಗಿ ಬರೀ ಪ್ರತಿಜ್ಞೆ ಮಾಡಿದರೆ ಸಾಲದು. ಕಳೆದ 25 ವರ್ಷಗಳ ಹಿಂದ ನಮ್ಮ ಊರಿನಲ್ಲಿ ನವಣೆ, ಕೊರಲೆ, ಹಾರಕ, ಸಾವೆ, ಸಜ್ಜೆ ಬೆಳೆಯುತ್ತಿದ್ದೆವು. ನವಣೆ, ಸಜ್ಜೆ ನುಚ್ಚನ್ನೇ ಹಾಕಿ ಮುದ್ದೆ ಮಾಡುತ್ತಿದ್ದೆವು. ಹಬ್ಬಗಳಲ್ಲಿ ನವಣೆ ಅನ್ನ ಮಾಡುತ್ತಿದ್ದೆವು. ಇದು ನಮಗೆ ಪರಮಾನ್ನ. ಭತ್ತದ ಅಕ್ಕಿ ಅನ್ನವನ್ನು ಅಂದು ನೋಡಿದವರಲ್ಲ.(ಶ್ರೀಮಂತರನ್ನು ಹೊರತುಪಡಿಸಿ) ನಮ್ಮ ಮನೆಯಲ್ಲಿ ನವಣೆ ಅನ್ನ ಮಾಡಿದರೆ ನಮ್ಮ ನೆರೆ ಮನೆಯವರು ಆಡಿಕೊಳ್ಳುತ್ತಿದ್ದರು. ಈಗ ಕಾಲ ಬದಲಾಗಿದೆ.
ಶೋಕಿಗಾಗಿ ಮತ್ತು ಹೈಟೆಕ್ ಕಾಯಿಲೆ ತಡೆಗೆ ಕೆಲವರು ಸಿರಿಧಾನ್ಯದ ಪದಾರ್ಥಗಳನ್ನು ತಿನ್ನುವುದು ರೂಢಿ ಮಾಡಿಕೊಂಡಿದ್ದಾರೆ. ಈಗ ಭೂಮಿ ಇಲ್ಲ. ಬೆಳೆಯುವವರು ಇಲ್ಲ. ಸರ್ಕಾರದ ನೀತಿಗಳು ರೈತರ ಭೂಮಿ ಕಳೆದುಕೊಳ್ಳುವಂತೆ ಮಾಡಿವೆ. ಊರೆಲ್ಲ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈ ನಿರ್ಣಯವೇ ಅವೈಜ್ಞಾನಿಕವಾಗಿದೆ. ಇನ್ನು ಯುವ ಜನತೆ ನಗರ ಸೇರುತ್ತಿದೆ. ಗ್ರಾಮಗಳು ವೃದ್ಧರ ಆಶ್ರಯ ತಾಣಗಳಾಗಿವೆ. ಇಂತಹ ಹೊತ್ತಿನಲ್ಲಿ ಸಿರಿಧಾನ್ಯ ಬೆಳೆಯುವ ಪ್ರತಿಜ್ಞೆ ಎಷ್ಟು ಮಟ್ಟಿಗೆ ಸರಿ ಎಂಬುದರತ್ತ ಆಲೋಚಿಸಬೇಕು. ಪ್ರಸನ್ನ ಅವರ ಆಲೋಚನಾ ಕ್ರಮ ನಿಂತ ನೀರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು ಬದಲಾಗಬೇಕು. ಕೃಷಿ ಚಟುವಟಿಕೆ ವೃದ್ಧಿಸುವ ಕಡೆ ಗಮನ ಕೊಡಬೇಕು. ಸರ್ಕಾದ ನೀತಿಗಳು ಕೃಷಿಕರ ಪರವಾಗಿರಬೇಕು. ಇದಕ್ಕೆ ಒತ್ತಡ ಬೇಕು. ಆದರೆ ಪ್ರಸನ್ನ ರೈತರ ಪರವಾಗಿ ಮಾತನಾಡುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಜಾಗತೀಕರಣ ಅಪಾಯಗಳ ಕುರಿತು ಮನವರಿಕೆ ಮಾಡಿಕೊಡಬೇಕು ಮತ್ತು ಅಂತಹ ನೀತಿಗಳು ಜಾರಿಯಾಗದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ನೋಡುತ್ತ ಸುಮ್ಮನೆ ಕುಳಿತು ಸುಸ್ಥಿರ ಬದುಕು ಎಂದರೆ ಹೇಗೆ? ಇಂತಹ ಅಂಶಗಳ ಬಗ್ಗೆ ಚರ್ಚಿಸುವ ಅಗತ್ಯವಿದೆ.

 

‍ಲೇಖಕರು G

May 4, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. suvarna.c

    ವಿಶ್ವದಲ್ಲಿ ಆಗಿ ಇರುವುದು ಯಾವುದೂ ಇಲ್ಲ ೆಎಲ್ಲವೂ ಆಗುತ್ತಿರುವುದು ಇದೆ. . . .
    ಪ್ರಸನ್ನ ನಮ್ಮನ್ನು ತಟಸ್ಥವಾಗಿ ನೋಡಿಕೋಳ್ಳುವ ಆಗೆ ಎಲ್ಲಾ ಚತುರತೆಯನ್ನು ಉಪಯೋಗಿಸುತ್ತಿದ್ದಾರೆ. ಆಗುತ್ತಿರುವುದನ್ನು ಪರಿಗಣಿಸಬೇಕೆ ಹೋರತು ಆಗಿರುವುದನಲ್ಲ

    ಪ್ರತಿಕ್ರಿಯೆ
  2. Aravind

    What a comment from suvarna c. All in a rush to prove prasanna gang wrong? When are we going to have a meaningful debate?

    ಪ್ರತಿಕ್ರಿಯೆ
  3. suvarna.c

    ಅರವಿಂದ ಹೇಳಿದ್ದಂತೆ ನಾನು debate ಗೆ ಸಿದ್ದ. ಪ್ರಸನ್ನರಿಗೂ ನನಗೂ ವೈಯುಕ್ತಿಕ ದ್ವೇಷ ಇಲ್ಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: