ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್ : ಜಿ ಎನ್ ನಾಗರಾಜ್ ಉತ್ತರಿಸುತ್ತಾರೆ

(ವಚನ ಚಳುವಳಿಯ ಬಗ್ಗೆ, ಜಾತಿ ಪದ್ಧತಿಯನ್ನು ಅವು ವಿರೋಧಿಸಿದ್ದರ ಬಗ್ಗೆ ಜಿ ಎನ್ ನಾಗರಾಜ್‌ರವರ ಲೇಖನ ಸರಣಿ ಅವಧಿಯಲ್ಲಿ ಪ್ರಕಟವಾಗಿತ್ತು. ಅದರ ಒಂದು ಕೊಂಡಿ ಇಲ್ಲಿದೆ. ಆ ಲೇಖನದ ಬಗ್ಗೆ ಕಿರಣ್ ತಮ್ಮ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದರು ಹಾಗು ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಚರ್ಚೆಯ ಮುಂದಿನ ಭಾಗವಾಗಿ ಜಿ ಎನ್ ನಾಗರಾಜ್‌ರವರ ಲೇಖನ ಇಲ್ಲಿದೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ)

“ವಚನ ಗೌರಿಶಂಕರವನ್ನೇರುವ ಸಾಹಸ ಮತ್ತು ಸಂತಸ”ದಲ್ಲಿ ತಾವೂ ಜೊತೆಗೂಡುವ ಉತ್ಸುಕತೆಯನ್ನು ತೋರಿದ ಎಲ್ಲ ಅರಿವ ಬೆಡಂಗ / ಬೆಡಗಿಯರಿಗೆ ನನ್ನ ವಂದನೆಗಳು. ಈ ಲೇಖನ ಮಾಲೆಯ ಮೊದಲ ಭಾಗದಲ್ಲಿ ವಿವರಿಸಿದಂತೆ ಈ ಏರುವಿಕೆಯಲ್ಲಿ ನಾನು ಆರಿಸಿದ ದಾರಿ ದುರ್ಗಮವಾದದ್ದು. ಆ ಕಾರಣಕ್ಕಾಗಿಯೇ ಅನೇಕರು ಸಂತೋಷ ಹಾಗೂ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ನೆರೆಯ ಬೆಟ್ಟವನ್ನೇರುವಾಗಲೂ ಒಂಟಿ ಏರಾಟ ಬಹಳ ಕಷ್ಟ ಮತ್ತು ಏರಾಟದ ಸಂತಸವನ್ನು ಹಂಚಿಕೊಳ್ಳಲು ಯಾರೂ ಜೊತೆಗಿಲ್ಲದೆ ಉತ್ಸಾಹ ಕುಗ್ಗುವ ಸಂದರ್ಭಗಳಿವೆ. ಅಲ್ಲಿ ವಿವರಿಸಿದಂತೆ ವಚನಗಳ ಅಧ್ಯಯನ ಬಹುಮುಖಿಯಾದದ್ದು. ಈ ಅಧ್ಯಯನದ ಎಲ್ಲ ಹೊಣೆ, ಹೊರೆಗಳನ್ನು ಇಲ್ಲಿಯವರೆಗೆ ಸಾಹಿತಿಗಳೇ ಹೊತ್ತುಕೊಂಡಿದ್ದಾರೆ. ಇತಿಹಾಸ ಶಾಸ್ತ್ರಜ್ಞರು ಬಹುಭಾಗದ ಭಾರವನ್ನು ಹೊರಬೇಕಾಗಿತ್ತು. ಆದರೆ ಅವರು ವಚನಗಳ ಅಧ್ಯಯನದ ಬಗ್ಗೆ ತಮಗೆ ಜವಾಬ್ದಾರಿಯೇ ಇಲ್ಲವೇನೋ ಎಂದು ಕೈ ತೊಳೆದುಕೊಂಡಂತಿದ್ದಾರೆ. ಸಮಾಜ ಶಾಸ್ತ್ರಜ್ಞರು, ಅರ್ಥ ಶಾಸ್ತ್ರಜ್ಞರು, ಜಾನಪದ ತಜ್ಞರು ಇತರ ಸಮಾಜ ವಿಜ್ಞಾನಿಗಳು ಕೂಡ ಈ ಅಧ್ಯಯನದಲ್ಲಿ ಭಾಗವಹಿಸಬೇಕಾಗಿದೆ. ಅದರೆ ಎಲ್ಲಕ್ಕಿಂತ ಮುಖ್ಯವಾಗಿ ತತ್ವಶಾಸ್ತ್ರದ ಅಧ್ಯಯನ ಅವಶ್ಯವಾಗಿದೆ. ಒಂದು ವಚನೋತ್ಸಾಹೀ ಸಮಾನ ಮನಸ್ಕರ ತಂಡ ಸಿದ್ಧವಾದರೆ ಈ ಏರಾಟವನ್ನು ಶಿಖರದೆತ್ತರಕ್ಕೆ ಕೊಂಡೊಯ್ಯಬಹುದು. ಇದಕ್ಕೆ ಜೊತೆಗೂಡುವವರು ಇದ್ದಾರೆಯೇ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ. ಯಾರಾದರೂ ಜೊತೆಗೂಡುವಿರಾ? ಈ ಚರ್ಚೆಯಿಂದ ಉತ್ಸಾಹಿಗಳು ಮುಂದೆ ಬಂದರೆ ಪರಸ್ಪರ ಒಗ್ಗೂಡಿ ಕೆಲಸ ಮಾಡಿ ಬಹುಮುಖಿ ಅಧ್ಯಯನದ ಕೊರತೆಯನ್ನು ಗಣನೀಯವಾಗಿ ತುಂಬಬಹುದು. ಅದೇ ಒಂದು ದೊಡ್ಡ ಲಾಭ . ಮುಂದೆ ಬರುವವರು ಅವಧಿಗೆ ತಿಳಿಸಿ.

ಈ ಲೇಖನ ಮಾಲೆ ಬರೆವಲ್ಲಿ ಇದ್ದ ಉದ್ದೇಶ:
ಪ್ರಜಾವಾಣಿ ಪತ್ರಿಕೆಯಲ್ಲಿ ಪದೇ ಪದೇ ಕಂಡ “ಕೇವಲ ಎಂಟು ಹತ್ತು ವಚನಗಳನ್ನು ಮಾತ್ರ ಆಧರಿಸಿ ಸಾಹಿತಿಗಳು ವಚನಗಳನ್ನು ಜಾತಿ ವಿರೋದಿ”  ಎಂದು ಬಣ್ಣಿಸುತ್ತಾ ಬರುತ್ತಿದ್ದಾರೆ. “ಕೇವಲ 72(ಶೇ. 0.33 ) ವಚನಗಳು ಮಾತ್ರ ಜಾತಿ ವಿರೋಧಿ ಚರ್ಚೆಗೆ ಉಳಿದುಕೊಳ್ಳುವುವು”. “ಉಳಿದ ಶೇ. 99 ಭಾಗದ ವಚನಗಳಲ್ಲಿ ಏನು ಹೇಳುತ್ತಿದ್ದಾರೆ ಎಂಬುದೇ ಇವರಿಗೆ ಮುಖ್ಯವಾಗುವುದಿಲ್ಲವೇಕೆ?”  “ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಿದಾಗ”  ವಚನಗಳು ಜಾತಿ ವಿರೋಧ ಎಂಬುದೆಲ್ಲಾ ಮಾಯವಾಗಿ ಬಿಡುತ್ತದೆ ಎಂಬ ವಾದಗಳಿಗೆ, ಒಂದು ರೀತಿಯಲ್ಲಿ ಕನ್ನಡ ಭೌದ್ಧಿಕ ಲೋಕದ ಚಿಂತನೆಯನ್ನು “ಅಸಂಬದ್ಧ”  ಎಂದು ಹಂಗಿಸುವಂತೆ ಕಂಡ ವಾದಗಳಿಗೆ ಸರಿಯಾದ ಉತ್ತರ ನೀಡುವ ತವಕ. ಈ ಬರಹಗಳ ವ್ಯಂಗ್ಯವೆಂದರೆ ವಚನಗಳ ಹೂರಣವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದೆ ಸಂಶೋಧನೆ, ಸಂಶೋಧನೆ ಎಂದು ಬಡಬಡಿಸುತ್ತಿದ್ದುದು. ಭಾರತದ ಆಧ್ಯಾತ್ಮ ಪರಂಪರೆಯ, ಅದರಲ್ಲಿ ವಚನಗಳ ಸ್ಥಾನದ, ವಚನಗಳ ಆಧ್ಯಾತ್ಮದ ಒಳ ಹೋಗದೆ ಆಧ್ಯಾತ್ಮವನ್ನು ಒಂದು ವಿಜಯದ ದಾಳವೆಂಬಂತೆ ಉರುಳಿಸುತ್ತಿದ್ದುದು . ಆದರೆ ಈ ಚರ್ಚೆ ಪ್ರಜಾವಾಣಿಯಲ್ಲಿ ನಡೆವಾಗ ನನಗೆ ತುರಿಸಿಕೊಳ್ಳಲೂ ಪುರುಸೊತ್ತಿಲ್ಲದ ತಿರುಗಾಟ – ಚುನಾವಣೆಯ ಸಂದರ್ಭ. ಆ ಗಡಿಬಿಡಿಯೆಲ್ಲ ಮುಗಿದ ನಂತರ ಈ ಕಡೆ ತಿರುಗಿ ನೋಡುವಷ್ಟರಲ್ಲಿ ಈ ಚರ್ಚೆ ಮುಗಿದು ಹೋಗಿತ್ತು. ಆದರೆ ಇಲ್ಲಿ ಉದ್ಧರಿಸಿದ ಹಲ ವಾದಗಳಿಗೆ ಯಾರು ಉತ್ತರ ನೀಡಿರಲಿಲ್ಲ. ಈ ಕೊರತೆಯನ್ನು ಗಮನಿಸಿ ನಾನು ಈ ಲೇಖನ ಮಾಲೆ ಬರೆಯುವುದಕ್ಕೆ ಕೈಹಾಕಬೇಕಾಯಿತು.
ಆದ್ದರಿಂದ ಬಾಲು ತಂಡ ಯಾವ ವಿಷಯಗಳನ್ನು ಪ್ರಜಾವಾಣಿಯಲ್ಲಿ ಪ್ರಧಾನವಾಗಿ ಚರ್ಚೆಗೆ ತಂದಿದ್ದರೋ , ವಿವರಿಸಿದ್ದರೋ ಆ ವಚನಗಳ ಜಾತಿ ವಿರೋಧಿತ್ವದ ಪಶ್ನೆಯನ್ನು ಮಾತ್ರ ಇಲ್ಲಿಯವರೆಗಿನ ಲೇಖನಗಳಲ್ಲಿ ಎತ್ತಿಕೊಳ್ಳಲಾಗಿದೆ. ಇನ್ನು ಇಲ್ಲಿ ಪ್ರತಿಕ್ರಿಯೆ ನೀಡಿದ ಒಬ್ಬಿಬ್ಬರು ಬಾಲು ತಂಡ ಪ್ರಜಾವಾಣೆಯಲ್ಲಿ ಚರ್ಚೆಗೆ ತರದೆ ಕೇವಲ ಹೇಳಿಕೆಗಳಿಗೆ ಸೀಮಿತವಾದದುದನ್ನು, ಬೇರೆಲ್ಲಿಯೋ ಬರೆದುದನ್ನು ಓದಬೇಕಾಗಿತ್ತೆಂದು ಅಪ್ಪಣೆ ಕೊಡಿಸಿದ್ದಾರೆ. ಅವರುಗಳೇ ಚರ್ಚೆಗೆ ತರದೇ ಕೇವಲ ಹೇಳಿಕೆಗೆ ಸೀಮಿತವಾದದ್ದರ ಬಗ್ಗೆ ಬೇರೆಯವರು ಚರ್ಚೆಗೆ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುತ್ತಾರೆ?
ಆದರೆ ಇಲ್ಲಿ ಚರ್ಚೆಗೆ ಬಂದ ಪ್ರಮುಖ ವಿಷಯಗಳಾದ ಬಹು ಸಂಖ್ಯೆಯ ವಚನಗಳು ಜಾತಿ ವಿರೋಧವನ್ನು ಸಾರುವ ಬಗ್ಗೆ ಹಾಗೂ ವಚನಗಳ ‘ಆಧ್ಯಾತ್ಮ’ದ ಬಗ್ಗೆ , ಅದೂ ಕೂಡ ಜಾತಿ ವಿರೋಧಕ್ಕೆ ಸೈದ್ಧಾಂತಿಕ ಅಡಿಪಾಯವಾಗಿರುವುದರ ಬಗ್ಗೆ ಪ್ರತಿಕ್ರಿಯೆಕಾರರು ಒಂದೆರಡು ಪ್ರತಿಕ್ರಿಯೆಗಳ ಹೊರತಾಗಿ ಮೌನ ವಹಿಸಿದ್ದಾರೆ.
ಜಾತಿ ವ್ಯವಸ್ಥೆ ಎಂಬುದೇ ಇಲ್ಲ ಎಂಬ ಬಗ್ಗೆ ಪ್ರಜಾವಾಣಿಯ ಚರ್ಚೆಯಲ್ಲಿ ಯಾವ ಹೇಳಿಕೆಗಳನ್ನು ಯಾವ ರೂಪದಲ್ಲಿ ಈ ತಂಡದ ವಿವಿಧ ಸದಸ್ಯರು ಮಂಡಿಸಿದ್ದಾರೆಯೋ ಅದನ್ನು ನನ್ನ ಲೇಖನದಲ್ಲಿ ಸಾರಾಂಶಿಕರಿಸಲಾಗಿದೆ. ಉದಾಹರಣೆಗೆ ಅವರ ಹೇಳಿಕೆಗಳು “ಇಲ್ಲದ ಜಾತಿ ವ್ಯವಸ್ಥೆಯ ಕುರಿತೂ ಹೇಳುತ್ತಿರಲಿಲ್ಲ”, ಭಾರತೀಯ ಸಮಾಜದಲ್ಲಿ ಅನೈತಿಕ ಜಾತಿ ವ್ಯವಸ್ಥೆಯೊಂದು ಇದೆ ಎಂದು ಎನ್ನವುದಕ್ಕೆ ಪುರಾವೆಯಾಗಿ ನೋಡಲು ಕಲಿತದ್ದು ಯಾವಾಗ? ಯಾರಿಂದ? ಹೇಗೇ? “ನಮ್ಮ ಸಂಶೋಧನೆಯ ಪ್ರಕಾರ ಇದೆಲ್ಲಾ ನಡೆದದ್ದು ವಸಾಹತುಶಾಹೀ ಪ್ರಜ್ಞೆಯ ಪ್ರಭಾವದಡಿ”,  ” ಭಾರತದಲ್ಲಿ ಒಂದು ಜಾತಿವ್ಯವಸ್ಥೆ ಇದೆ. ಅದು ಅನೈತಿಕವಾದುದು ಮತ್ತು ಅದರ ವಿರುದ್ಧ ಹೋರಾಡುವುದು ಪ್ರಗತಿಪರವಾದದ್ದು ಎಂಬ ವಿಚಾರವನ್ನು ನಮಗೆ ಕಲಿಸಿಕೊಟ್ಟವರು ಯುರೋಪಿನ ಚಿಂತಕರು. ಭಾರತೀಯ ಚಿಂತಕರು ಇದನ್ನು ಯಾವುದೇ ತಹರಾರಿಲ್ಲದೇ ಒಪ್ಪಿಕೊಂಡದ್ದರಿಂದ ತಮ್ಮನ್ನು ತಮ್ಮಲ್ಲಿರುವುದನ್ನೆಲ್ಲಾ ಪ್ರಗತಿಪರವಾದದ್ದು ಎಂದು ತೋರಿಸುವ ಒತ್ತಡಕ್ಕೆ ಒಳಗಾದರು. ಆಧುನಿಕ (ಶಿಕ್ಷಿತ) ಲಿಂಗಾಯತ ಸಮಾಜದವರೂ ಇದಕ್ಕೆ ಹೊರತಲ್ಲ” ಈ ಹೇಳಿಕೆಗಳನ್ನು ಮಾನ್ಯ ಕಿರಣ ರವರು ತಮ್ಮ ಪ್ರತಿಕ್ರಿಯೆಯಲ್ಲಿ ’ಉದ್ಧರಿಸಿ’ದಂತೆ ನನ್ನ ಲೇಖನದಲ್ಲಿ ಹೀಗೆ ಹೇಳಲಾಗಿದೆ.
“ಕನ್ನಡದ ಜನಪ್ರಿಯ ದಿನ ಪತ್ರಿಕೆ ಪ್ರಜಾವಾಣಿಯಲ್ಲಿ ವಚನ ಚಳುವಳಿಯ ಬಗ್ಗೆ ಒಂದು ದೀರ್ಘ ಚರ್ಚೆ ನಡೆಯುತ್ತಿದೆ. ಅದರಲ್ಲಿ ಬಾಲ ಗಂಗಾಧರ್ ಎಂಬ ಜರ್ಮನಿಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಜೊತೆಗೂಡಿರುವ ಬುದ್ಧಿಜೀವಿಗಳ ತಂಡವೊಂದು ಭಾರತದಲ್ಲಿ ಜಾತಿ ವ್ಯವಸ್ಥೆ ಎಂಬುದೇ ಇಲ್ಲ. ಅದೆಲ್ಲವೂ ಬ್ರಿಟಿಷರ ಸೃಷ್ಠಿ. ವಚನ ಚಳುವಳಿ ಜಾತಿ ವ್ಯವಸ್ಥೆಯ ವಿರುದ್ಧ ದನಿಯೆತ್ತಿದೆ ಎಂಬುದು ಕೂಡ ಬ್ರಿಟಿಷರ ಹಾಗೂ ಅವರ ತೀರ್ಮಾನಗಳನ್ನು ಕುರುಡಾಗಿ ಅನುಸರಿಸುತ್ತಿರುವ ಕನ್ನಡ ವಿದ್ವಾಂಸರ ತಪ್ಪು ತಿಳುವಳಿಕೆ ಎಂದು ಬಲವಾಗಿ ವಾದಿಸುತ್ತಿದ್ದಾರೆ”
ಇದನ್ನು ಕಿರಣರವರು ಯಾರ ಸಂಶೋಧನೆಯೋ ಗೊತ್ತಿಲ್ಲ ಎಂದು ಹಂಗಿಸಿ ಈ ರೀತಿ ಘೋಷಣೆ ಮಾಡಿದ್ದಾರೆ.
“ ಮಾನ್ಯ ಜಿ.ಎನ್ ನಾಗರಾಜ್ ರವರೆ ಮೇಲಿನ ತಮ್ಮ ಸಾಲುಗಳು ಯಾರ ಸಂಶೋಧನೆಯೋ ಗೊತ್ತಿಲ್ಲ ಆದರೆ ಅದು ಬಾಲು ಮತ್ತು ಅವರ ತಂಡದ ಸಂಶೋಧನಾ ಹೇಳಿಕೆಗಳು ಮಾತ್ರ ಖಂಡಿತಾ ಅಲ್ಲ.  ಅದಕ್ಕೆ ನಾನು ೧೦೦% ಗ್ಯಾರೆಂಟಿ ಕೊಡುತ್ತೇನೆ. ತಾನು ವಾದಕ್ಕಿಳಿಯುವ ವಿಚಾರಗಳ ಕುರಿತು ಸ್ವಲ್ಪವು ಓದದೆ ಅವರಿವರು ಹೇಳಿದ್ದನ್ನೆ ಕೇಳಿ ಮಾತನಾಡುವವರು ಮಾತ್ರ ತಮ್ಮ ಮಾದರಿಯಲ್ಲಿ ಮಾತನಾಡಲು ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ. (ತಾವು ಓದಿದ್ದರೆ ದಯಮಾಡಿ ಬಾಲು ಮತ್ತು ಅವರ ತಂಡದ ಯಾವ ಯಾವ ಲೇಖನಗಳ ಆಧಾರದ ಮೇಲೆ ಮೇಲಿನ ತಮ್ಮ ಹೇಳಿಕೆ ನಿಂತಿದೆ ಎಂಬುದನ್ನು ಮುಂದಿನ ಕಂತಿನಲ್ಲಿ ಬರೆಯಿರಿ).”
ಹೀಗಾಗಿ ನನ್ನ ಲೇಖನಗಳಿಗೆ ಈ ವಿಷಯವೇ ನೇರವಾಗಿ ಸಂಬಂಧಿಸಿದ್ದಲ್ಲವಾದರೂ ಈ ವಿವರಗಳಿಗೆ ಸಮಯ ನೀಡಬೇಕಾಗಿದೆ, ಈ ವಿಷಯದಲ್ಲಿ ನಾನು ಮಾನ್ಯ ಕಿರಣರವರೇ ತಮ್ಮ ಕ್ಷಮೆಯನ್ನು ಕೆಲವು ವಿಷಯಗಳ ಬಗ್ಗೆ ಕೇಳಬೇಕಾಗಿದೆ. ನಿಮ್ಮ ಗುರು ವರ್ಯರುಗಳು, ತಂಡದ ಇತರರು ಅಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಬರೆದದ್ದೆಲ್ಲವನ್ನೂ ನಾನು ಮೇಲೆ ಉಲ್ಲೇಖಿಸಲಾಗಿಲ್ಲ . ಅವನ್ನೆಲ್ಲಾ ಹುಡುಕುವಷ್ಟು ಸಮಯ ನನಗೆ ಇರಲಿಲ್ಲ. ಇನ್ನು ನನ್ನ ಲೇಖನ ಮಾಲೆಯಲ್ಲಿ ಇವುಗಳನ್ನು ಹಾಗೆಯೇ ಡೈರೆಕ್ಟ್ ಸ್ಪೀಚ್ ನಲ್ಲಿ ಹೇಳದೇ ಅದನ್ನು ಇನಡೈರೆಕ್ಟ್ ಸ್ಪೀಚ್ ನಲ್ಲಿ ನನ್ನ ಮೂಢ ಮತಿಗೆ ತಿಳಿಯುವಷ್ಟು ಸಾರಾಂಶೀಕರಿಸಿದ್ದೇನೆ. ಇಲ್ಲಿಯೂ ಕೂಡ ಅದನ್ನು ಟೈಪಿಸುವಾಗ ಒಂದು ದ ಕಾರದ ಒತ್ತು ಒಂದು ಪದದಿಂದ ತಪ್ಪಿಸಿಕೊಂಡು ಎಲ್ಲಾ ಪದಗಳ ಬುಡಕ್ಕೂ ಪ್ರಯಾಣ ಮಾಡುತ್ತಿತ್ತು ಅದು ಎಲ್ಲಿಯೋ ಹುದುಗಿ ಬಿಟ್ಟಿದೆ. ನನ್ನ ಕಂಪ್ಯೂಟರ್ ಅಜ್ಞಾನದಿಂದ ಅದನ್ನು ಸಂಶೋಧನೆ ಮಾಡಿ ತೆಗೆದುಹಾಕಲಾಗಲಿಲ್ಲ. ಹಾಗೆಯೇ ಒಂದು ಸೊನ್ನೆಗೆ ಬದಲಾಗಿ ಮ ಕಾರ ಅವತರಿಸಿಬಿಟ್ಟಿದೆ ದಯವಿಟ್ಟು ‘ ಸ್ವಲ್ಪವೂ ಓದದೇ ಅವರಿವರ ಮಾತು ಕೇಳಿಯೇ ‘ ನಾನು ಹೀಗೆ ಮಾಡಿದ್ದೇನೆಂದು ತಿಳಿದುಕೊಳ್ಲಬಾರದೆಂದು , ( ಹಿಂದಿನ ಪದದಲ್ಲಿಯೂ ಒಂದು ಲ ಒತ್ತು ಹೀಗೆಯೇ ಪ್ರಯಾಣ ಮಾಡಿಬಿಟ್ಟಿದೆ ) ಅದನ್ನು ತಮ್ಮ ಹೊಟ್ಟೆಗೆ ಹಾಕಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.
ಇನ್ನ ನಿಮ್ಮ 100% ಗ್ಯಾರಂಟಿ ವಿಷಯ ಅದನ್ನು ನಿಮ್ಮ ಅಂತ ಸಾಕ್ಷಿಗೂ, ಓದುಗರಿಗೂ ಬಿಟ್ಟು ಬಿಡುತ್ತೇನೆ. ಇಲ್ಲಿಯ ಅಕ್ಷರಗಳ ಸ್ವರೂಪವೂ ಕೂಡ ಅದು ಹೇಗೋ ಬದಲಾಗಿ ಬಿಟ್ಟದೆ. ನಾನು ಉದ್ದೇಶ ಪೂರ್ವಕವಾಗಿ ಇಟಾಲಿಕ್ ಹಾಕಿದ್ದೇನೆಂದು ತಿಳಿಯ ಬೇಡಿ. ಈ ಕಂಪ್ಯೂಟರ್ ಅಜ್ಞಾನಿಯನ್ನು ಮನ್ನಿಸಿ.

ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಂದು ಬಾಲು ವಾದಿಸುತ್ತಾರೆ ಎಂಬುದನ್ನು ಒಪ್ಪಿದರೂ ನನಗೆ ಅರ್ಥವಾದಂತೆ ಅವರ ಪೂರ್ಣವಾದ ಇಂದಿನ ಜಾತಿಯ ಕುರಿತಾದ ಸಮಾಜ ಶಾಸ್ತ್ರೀಯ ವಿವರಣೆ ನಿಜವಾದ ಅರ್ಥದಲ್ಲಿ ಇಲ್ಲಿನ ಜಾತಿಗಳನ್ನು ಮತ್ತು ಅದರ ಸಮಾಜಿಕ ನಡವಳಿಕೆಗಳನ್ನು ಪ್ರತಿನಿಧಿಸುತ್ತಿಲ್ಲ. ಹಾಗಂತ ಭಾರತದಲ್ಲಿ ಜಾತಿಗಳೇ ಇಲ್ಲ, ಜಾತಿ ಆಧಾರದಲ್ಲಿ ಅವಮಾನ, ಅಪಮಾನ ಮತ್ತು ಶೋಷಣೆಗಳು ನಡೆದೆ ಇಲ್ಲ ಅಂತಲ್ಲ! ಅವೆಲ್ಲವೂ ಅಂದು ಇದ್ದವು. ಬದಲಾದ ಇಂದಿನ ಸಮಾಜದಲ್ಲಿಯು ಬೇರೆ ಬೇರೆ ರೂಪದಲ್ಲಿ ಇವೆ.
ಇನ್ನು ಮೇಲಿನ ಹೇಳಿಕೆಗಳು ಪ್ರಜಾವಾಣಿಯಲ್ಲಿ ಎಲ್ಲಿಯೂ ಬಂದಿರಲಿಲ್ಲ ಎಂದು ನನ್ನ ನೆನಪು. ಅದರಿಂದಾಗಿ ಅದನ್ನು ‘ಸ್ವಲ್ಪವೂ ಓದದೆ’ ಬರೆಯುವ ಅವಕಾಶ ದೊರೆಯಲಿಲ್ಲ. ಹಾಗೂ ಅವರಿವರ ಮಾತನ್ನು ಈ ಬಗ್ಗೆ ಕೇಳುವ ಅವಕಾಶವೂ ದೊರೆತಿರಲಿಲ್ಲ. ಹೀಗಾಗಿ ‘ ಇಲ್ಲದ ಜಾತಿ ವ್ಯವಸ್ಥೆಯ ಸಿದ್ಧಾಂತವನ್ನು ಇದೆ ಎಂದು ನಂಬಿಸಿ ಬೇಳೆ ಬೇಯಿಸಿಕೊಳ್ಳಲು ‘ ಮತ್ತಷ್ಟು ಅವಕಾಶ ಮಾಡಿಕೊಟ್ಟಿದಾರೆ ನಿಮ್ಮ ಗುರುವರ್ಯರು. (ಏಕೆಂದರೆ ಈ ವಿಷಯ ಪ್ರಜಾವಾಣಿಯ ಓದುಗರಿಗೆ ಗೊತ್ತಾಗಿದ್ದರೆ ಬೇಳೆ ಬೇಯಿಸಿಕೊಳ್ಳಲು ನಮಗೆ ಕಷ್ಟವಾಗುತ್ತಿತ್ತು) ಅವರಿಗೆ ವಂದನೆಗಳು.
ಇನ್ನು ಕಿರಣ್ ಅವರೇ ನಿಮ್ಮ ಹಾಸ್ಟೆಲ್ ವಿದ್ಯಾರ್ಥಿಗಳ ಉದಾಹರಣೆ, ಜಾತಿ ವ್ಯವಸೆ ಇದೆಯೆ ಎಂಬ ಪ್ರಶ್ನೆ ಈ ಬಗ್ಗೆ ಕೆಲವರು ಒಂದು -ಅದಕ್ಕೆ ಲಿಂಕ್ ಎನ್ನತ್ತಾರೆನೋ, ಕೊಟ್ಟಿದ್ದಾರೆ ಅದು ಈ ಲೇಖನ ಮಾಲೆಗೆ ಹೊರತಾದ- ವಚನಗಳು ಜಾತಿ ವಿರೋಧವೇ ಎಂಬ ವಿಷಯಕ್ಕೆ ಹೊರತಾದ ಪ್ರಶ್ನೆ. ಅದನ್ನು ಪ್ರತ್ಯೇಕವಾಗಿ ಎತ್ತಿಕೊಳ್ಳೋಣ.ಈ ಲೇಖನ ಮಾಲೆಯಲ್ಲಿ ಎತ್ತಿಕೊಂಡಿರುವ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡುವುದು, ಇತರ ಪ್ರಶ್ನೆಗಳು ಅವು ಎಷ್ಟೇ ಪ್ರಮುಖ ವಾದದ್ದಾದರೂ ಅಂತಹ ದಿಕ್ಕು ತಪ್ಪಿಸುವ ಪ್ರಶ್ನೆಗಳಿಂದ ದಾರಿ ತಪ್ಪದಿರುವುದು ಇದು ಒಂದು ಸಂಶೋಧಕ ಶಿಸ್ತು ಎಂದು ಭಾವಿಸುತ್ತೇನೆ. ಹಾಗೆಂದು ಆ ‘ ಸಂಶೋಧನೆ ‘ ಎಂಬ ಹೆಸರಿನ ಮೂಗಿನ ನೇರದ ಹೇಳಿಕೆಗಳಿಂದ ಪಲಾಯನ ಎಂದು ತಪ್ಪು ಭಾವಿಸಿ ಮತ್ತಷ್ಟು ವೈಯುಕ್ತಿಕ ಕುಚೇಷ್ಟೆಗಳನ್ನು ಆರಂಭಿಸಿ ಬಿಟ್ಟೀರಿ. ಅದಂತೂ ‘ಸಂಶೋಧಕ’ರ ಸಲ್ಲಕ್ಷಣವೇ ಸರಿ. ಏಕೆಂದರೆ ಚರ್ಚೆಯಲ್ಲಿ ರಂಗಕ್ಕೇ ಬಾರದ ವಿಷಯಗಳ ಬಗ್ಗೆ ಕೂಡ ಸರಿಯಾಗಿ ಗ್ರಹಿಸಿ ಪ್ರಶ್ನೆಗಳನ್ನೆತ್ತಿ, ಎಂಬ ಆದೇಶ ಸಿಕ್ಕಿದೆ. ಅದನ್ನೇ ಅವರಿಗೆ ಮರು ಕೇಳ್ವಿಯಾಗಿ ಕೇಳಬಹುದು. ಅದನ್ನು ಅವರ ಚಿಂತನಾ ಮುಕ್ತತೆಗೆ ಬಿಡುತ್ತೇನೆ. ಯಾರದ್ದೋ ಗಂಪಿನ ಹೆಸರು ಹೇಳಿ ಹೆಸರು ಸಂಪಾದಿಸಿ ಬೇಡ ಎನ್ನುವುದಿಲ್ಲ ಎಂಬ ಉದಾರತೆಯನ್ನೂ ತೋರಿದ್ದಾರೆ ಒಬ್ಬ ಆ ಗುಂಪಿನ ರಹಸ್ಯ ಸದಸ್ಯರು.
ತಮಾಶೆಯೆಂದರೆ ವಚನಗಳ ಬಗೆಗಿನ ಚರ್ಚೆಯಲ್ಲಿ ವಚನಗಳನ್ನು ‘ ಉಪಯೋಗಿಸಿ ಉಪದೇಶ ಕೊಡುವುದರಿಂದ ವೈಜ್ಙಾನಿಕ ಜ್ಞಾನ ಬೆಳೆಯದು ಎನ್ನುವ ಉಪದೇಶ ನೀಡಿದ್ದಾರೆ ಅವರಿಗೆ, ಹಾಗೂ ಇಡೀ ಗುಂಪಿಗೆ ತಾವು ಉಪಯೋಗಿಸುತ್ತಿರುವ ಸಂಶೋಧನಾ ವಿಧಾನ, ವಿಜ್ಞಾನ ಇವು ಸೆಮೆಟಿಕ್, ಐರೋಪ್ಯ, ವಸಾಹತುಶಾಹಿ ಬಳುವಳಿ ಎನಿಸುತ್ತಿಲ್ಲವೇ ? ದಿನನಿತ್ಯ ಅವಹೇಳನದಲ್ಲಿ ತೊಡಗುತ್ತಿರುವವರು ‘ ನಂಬಿಸಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ‘ ಇತ್ಯಾದಿ ಇಡೀ ಸಾಮಾಜಿಕ ಚಳುವಳಿಗಾರರನ್ನೆಲ್ಲ ಒಮ್ಮೆಯೇ ನಿಂದಿಸುವವರು ‘ ಕಣ್ಣಿಗೆ ಮಣ್ಣು ತೂರಿದಂತೆ ‘ ಎಂದು ಅವಹೇಳನ ಮಾಡಬೇಡಿ ಎಂದು ನೀತಿ ಪಾಠ ಹೇಳುತ್ತಾರೆ. ಈ ಗುಂಪು ಇಂತಹ ಕೆಲಸಕ್ಕೇ ಕೆಲವರನ್ನು ನೇಮಿಸಿಬಿಟ್ಟದೆಯೇನೋ ಎಂಬ ಸಂಶಯ ಬರುವಂತಿದೆ.
ಇನ್ನು ನನ್ನ ಲೇಖನ ಮಾಲೆಗೆ ಬಂದ/ ಬಾರದ ಪ್ರಶ್ನೆಗಳು – ಉತ್ತರಗಳು
ಈ ಲೇಖನ ಮಾಲೆಗೆ ಹಲವು ಪ್ರಶ್ನೆಗಳನ್ನು ನಿರೀಕ್ಷಿಸಿದ್ದೆ. ಪ್ರಜಾವಾಣಿಯಲ್ಲಿ ಮಂಡಿತವಾದ ವಾದಗಳ ಶಕ್ತಿಯನ್ನಲ್ಲದಿದ್ದರೂ ಅಪಾದನಾ ಶೈಲಿಯ ಬಿರುಸನ್ನು ನೋಡಿದರೆ ಹಾಗೆನ್ನಿಸುತ್ತಿತ್ತು. ಆದರೆ ಬಹಳ ಕಡಿಮೆ ಪ್ರಶ್ನೆಗಳಷ್ಟೇ ಬಂದಿವೆ. ನಾನು ನಿರೂಪಿಸಿದ ಸಂಶೋಧನಾ ಮಾರ್ಗದ ಬಗ್ಗೆ ಕೂಡ ಪ್ರಶ್ನೆಗಳನ್ನು ಎತ್ತಬಹುದಾಗಿತ್ತು, ಸಲಹೆಗಳನ್ನು ನೀಡಬಹುದಾಗಿತ್ತು. ಹಾಗೆ ಬಾರದಿರುವುದು ನಮ್ಮ ಸಂಶೋಧನಾ ಲೋಕದ ಮುಖ್ಯ ಕೊರತೆಗಳನ್ನು ಎತ್ತಿ ತೋರಿಸುವಂತಿದೆ ಎನ್ನದೆ ವಿಧಿಯಿಲ್ಲ. ಸಂಶೋಧನಾ ರಂಗದಲ್ಲಿ ಅನುಭವ, ಆಸಕ್ತಿ ಇರುವವರಲ್ಲಿ ಕೆಲವರು ಮಾತ್ರ ಕಂಪ್ಯುಟರ್ ಲೋಕದೊಳಗೆ ಪ್ರವೇಶ ಪಡೆದಿದ್ದಾರೆ. ಹಾಗೆ ಪ್ರವೇಶ ಪಡೆದವರಲ್ಲಿ ಬಾಲು ತಂಡದವರೂ ಸೇರಿ ಕರ್ನಾಟಕದ ಇತಿಹಾಸದ ಮಹತ್ತರ ವಿಷಯಕ್ಕೆ ಸಂಬಂಧಿಸಿ ಮುಕ್ತ ಮನಸ್ಸಿನಿಂದ ಸಲಹೆ ನೀಡುವ ಮನಸ್ಸನ್ನು ಇನ್ನೂ ಬೆಳೆಸಿಕೊಳ್ಳಬೇಕಾಗಿದೆ.
ಸಂಶೋಧನಾ ವಿಧಾನವೇ ಸಂಶೋಧನೆಯ ಫಲಿತಾಂಶವನ್ನು ಬಹಳ ಮಟ್ಟಗೆ ನಿರ್ಧರಿಸುವುದರಿಂದ ಆ ಹಂತದಿಂದಲೇ ಅವುಗಳನ್ನು ಕನ್ನಡ ಸಾರಸ್ವತ ಲೋಕದ ಮುಂದೆ ಮಂಡಿಸಿ ಅವುಗಳ ಬಗ್ಗೆ ಮುಕ್ತ ಚರ್ಚೆ ನಡೆಸಿ ಎಲ್ಲ ಆರೋಗ್ಯಕರ ಸಲಹೆಗಳನ್ನು ಪರಿಗಣಿಸಿ ಮಾರ್ಗವನ್ನು ನಿಶ್ಚಯಿಸಿಕೊಳ್ಳುವ ಪ್ರವೃತ್ತಿಯನ್ನು ವಿಸ್ತರಿಸಿಕೊಳ್ಳಬೇಕಾಗಿದೆ. ಇಂದಿನ ಹೊಸ ಮಾಧ್ಯಮಗಳ, ಫೇಸ್ ಬುಕ್ ಯುಗದಲ್ಲಿ, ಕೇವಲ ಅವರವರ ವಿವಿ ವಿಭಾಗ ಅಥವಾ ಗುಂಪಿಗೆ ಸೀಮಿತ ಗೊಳಿಸದೆ ಇಡೀ ಕನ್ನಡನಾಡಿಗೇ ವಿಸ್ತರಿಸ ಬಹುದು. ವಿಶ್ವಕ್ಕೂ ಕೂಡ. ಆದ್ದರಿಂದ ಇನ್ನಾದರೂ ಈ ಲೇಖನಗಳನ್ನು ಓದಿದವರು ದಯವಿಟ್ಟು ತಪ್ಪಿದ್ದರೆ ತಿದ್ದಿ, ಸಲಹೆ ನೀಡಿ ಎಂದು ಮನವಿ ಮಾಡುತ್ತೇನೆ.
ವಚನಗಳ ಸರ್ವಾಂಗವೂ ಜಾತಿ ವಿರೋಧವೇ
ಈ ಭಾಗದಲ್ಲಿ ಹೇಗೆ ಕುಲ ಜಾತಿ ಎಂಬ ಪದಗಳ, ಜಾತಿಗಳ ಹೆಸರುಗಳ ಪ್ರಸ್ತಾಪವೂ ಇಲ್ಲದೆ ವಚನ ಸಾಹಿತ್ಯ ಜಾತಿ ವಿರೋಧ ಮಾತ್ರವಲ್ಲ ಮಹಿಳಾ ಸಮಾನತೆಯನ್ನೂ ಕೂಡ ಪ್ರಬಲವಾಗಿ ಪ್ರತಿಪದಿಸುತ್ತವೆ ಎಂಬುದನ್ನು ಆಧಾರ ಸಮೇತ ತೋರಿಸಿದ್ದೆ. ಷಟ್ಭ್ರಮೆ, ಪಂಚ ಸೂತಕ, ತಟ್ಟು ಮುಟ್ಟು ತಾಗು ನಿರೋಧ ಇಂತಹ ಅಪೂರ್ವ ಪರಿ ಕಲ್ಪನೆಗಳು. ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತಿದ್ದೆ. ಬಾಲು-ಝಳಕಿ ಸಂಶೋಧನೆಯಲ್ಲಿ ಅವರು ಲೆಕ್ಕಿಸಿದ 72 ವಚನಗಳು ಯಾವುವು ? ಜಾತಿ ಕುಲಗಳ ಪ್ರಸ್ತಾಪ ಮಡುವ 458 ವಚನಗಳು ಯವುವು ? ಯಾವ ಆಧಾರದ ಮೇಲೆ ಇವುಗಳನ್ನು ಲೆಕ್ಕಿಸಲಾಯಿತು ? ಈ ಪ್ರಶ್ನೆಗಳಿಗೆ ಉತ್ತರ ಸಿಗುವುದೆಂದು ಭಾವಿಸಿದ್ದೆ. ಇದರಿಂದ ಸಂಶೋಧನೆಯನ್ನು ಮುಂದುವರೆಸಲು ಕನ್ನಡ ಬಲ್ಲ ಯಾರಿಗಾದರೂ ಸಹಾಯವಾಗಬಹುದೆಂದು ನಿರೀಕ್ಷಿಸಿದ್ದೆ. ಕನಿಷ್ಠ ಒಂದು ಲಿಂಕ್ ಆದರೂ ಯಾರಾದರೂ ನೀಡುತ್ತಾರೆಂದು ನಿರೀಕ್ಷಿಸಿದ್ದೆ. ಆದರೆ ಇಲ್ಲಿಯವರೆಗೆ ಕಂಡುದಿಲ್ಲ. ಅವರೇ ಹೇಳುವಂತೆ ಕನ್ನಡ ಲೋಕ ಕೇವಲ ಎಂಟು ಹತ್ತು ವಚನಗಳ ಮೇಲೆಯೇ ಅವಲಂಬಿಸುವುದು ಬಿಟ್ಟು ಆ ಕಣಜವನ್ನು 72 ಕ್ಕೆ ವಿಸ್ತರಿಸಲು ಸಾಹಿತಿಗಳಿಗೆ ಇತರರಿಗೆ ಸಹಾಯ ಮಾಡಿದಂತಾಗುತ್ತಿತ್ತು. ಇನ್ನಾದರೂ ಇಲ್ಲಿ ಈ ಗುಂಪಿನ ವಾದಗಳನ್ನು ಸಮರ್ಥಿಸಿ ಕೊಳ್ಳುತ್ತಿರುವವರು, ಅವರ ಸಂಶೋಧನೆಯ ಸಹಾಯಕರು- ಕಿರಣರವರೂ ಸೇರಿ ಈ ಮಾಹಿತಿ ಒದಗಿಸುವಂತೆ ತಮ್ಮ ತಂಡದ ನಾಯಕರ ಮನವೊಲಿಸಬಹುದೇ ?
ಇನ್ನು ಇಷ್ಟ ಲಿಂಗದ ಪರಿಕಲ್ಪನೆ ಹೇಗೆ ವಚನಗಳ ಯಾವುದೇ ತತ್ವಗಳಿಗಿಂತ ಲಿಂಗಾಯತ ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರಿದೆ ? ಹೇಗೆ ಮಹಿಳೆಯರಿಗೆ ತಮ್ಮ ದೇಹವನ್ನು ಇಡೀ ಸಮಾಜ ಮೈಲಿಗೆ ಎಂದು ಭಾವಿಸುವುದರಿಂದ ವಿಮೋಚನೆ ನೀಡಿದೆ ? ಅದರ ಸಾಮಾಜಿಕ ಪರಿಣಾಮಗಳೇನು ? ಸಾದರು, ನೊಣಬರು ಪಂಚಮ ಶಾಲೀ ಜನರ ಮೂಲವೇನು ? ಹಿಂದೆ ಯಾವ ಜಾತಿಯಗಿದ್ದರು ? ಈಗ ಅವರ ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿದೆ ? ಅಥವಾ ಏನೂ ಆಗಿಲ್ಲವೇ ? ಅವರ ಮಠಗಳು ಹೇಗೆ ರೂಪುಗೊಂಡವು ? ಇವುಗಳಿಂದ ಹಿಂದೆ ಮತ್ತು ಇಂದು ಅವರ ಮೇಲೆ ಬೀರಿರುವ ಪರಿಣಾಮವೇನು? ಹೀಗೆ ಹಲವು ಪ್ರಶ್ನೆಗಳಿವೆ ಅವುಗಳ ಬಗ್ಗೆ ಈ ತಂಡ ಸಂಶೋಧನೆ ಮಾಡಿ ಬೆಳಕು ಚೆಲ್ಲ ಬಹುದೇ ? ಈ ಸಂಶೋಧನೆಗೆ ಯಾರು ಮುಂದೆ ಬಂದರೂ ನಾನು ನನ್ನ ಸಹಾಯ, ಸಲಹೆ ನೀಡಲು ಸಿದ್ಧನಿದ್ದೇನೆ .
ಇದೇ ಸಂಶೋಧನೆಯನ್ನು ಇತರ ಪರಿಕಲ್ಪನೆಗಳ ಬಗೆಗೂ ವಿಸ್ತರಿಸಬಹುದು. ಇಷ್ಟ ಲಿಂಗದಂತೆಯೇ ವ್ಯಾಪಕ ಪರಿಣಾಮ ಬೀರದಿದ್ದರೂ . ಉದಾಹರಣೆಗೆ ರಜಸ್ಸೂತಕ, ಜನನ ಸೂತಕ, ಮರಣ ಸೂತಕಗಳನ್ನು ಇಂದು ಯಾವ ರೀತಿಯಲ್ಲಿ ಪರಿಭಾವಿಸಲಗಿದೆ ? ಇತ್ಯಾದಿ.
ಹೀಗೆ ಲೇಖನದಲ್ಲಿ ಹೇಳಿದಂತೆ ಸಿಪ್ಪೆಯನ್ನು ಎಣಿಸಿ ಅದನ್ನೇ ನಮಗೆ ಉಣಬಡಿಸುವುದನ್ನು ಬಿಟ್ಟು ತಿರುಳಿನ ಸವಿ ಸಿಗಬಹುದೇ ? ಈ ದಿಶೆಯಲ್ಲಿ ನಮ್ಮ ವಿವಿಗಳ ಕನ್ನಡ, ಸಮಾಜ ಶಾಸ್ತ್ರ, ಇತಿಹಾಸ ಇತ್ಯಾದಿ ವಿಭಾಗಗಳು ತಮ್ಮ ಸಂಶೋಧನೆಗಳ ತೆಕ್ಕೆಯೊಳಗೆ ಈ ಪ್ರಶ್ನೆಗಳನ್ನು ತೆಗೆದುಕೊಂಡರೆ ನಾನು ಈ ಲೇಖನ ಮಾಲೆಯಲ್ಲಿ ಆಶಿಸಿದಂತೆ ವಚನಗಳ ಬಗೆಗಿನ ಈ ಚರ್ಚೆ ಹೊಸ ಬೆಳಗನ್ನು ಮೂಡಿಸಲು ನೆರವಾಗುತ್ತದೆ.
(ಇನ್ನೂ ಇದೆ…)

‍ಲೇಖಕರು G

25 July, 2013

10 Comments

  1. ಸಹನಾ

    ನಾಗರಾಜ್ ಸರ್, ವಚನಗಳ ಚರ್ಚೆಯ ಸಂಧರ್ಭದಲ್ಲಿ ಬಾಲು ಗುಂಪಿನ ೧೫ಕ್ಕೂ ಮಿಕ್ಕಿದ ಲೇಖನಗಳಲ್ಲಿ ಕೇವಲ ನೆಪಕ್ಕೆ ೩-೪ ಲೇಖನಗಳನ್ನು ಮಾತ್ರವೇ ಪ್ರಕಟಿಸಿರುವುದು ನಿಲುಮೆ ತಾಣದಲ್ಲಿ ಪ್ರಕಟವಾದ (ಪ್ರಜಾವಾಣಿಯಲ್ಲಿ ಪ್ರಕಟವಾಗದ) ಲೇಖನಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಹೀಗಾಗಿ ಆ ಪತ್ರಿಕೆಯಲ್ಲಿನ ಲೇಖನಗಳನ್ನು ಮಾತ್ರವೇ ಆದರಿಸಿದರೆ ಏಕಮುಖವೂ ಅಪೂರ್ಣವೂ ಆದ ಚಿತ್ರಣವಷ್ಟೇ ಲಭ್ಯವಾಗುವುದು. ” ಇಂದಿನ ಹೊಸ ಮಾಧ್ಯಮಗಳ, ಫೇಸ್ ಬುಕ್ ಯುಗದಲ್ಲಿ,” ಈ ಕೊರತೆಯನ್ನು ತುಂಬಿಕೊಂಡು ಆ ಗುಂಪಿನ ಆ ಎಲ್ಲಾ ಲೇಖನಗಳನ್ನು ಗಮನಿಸಿ ಬರೆಯುವ ಬದಲಿಗೆ ಆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳಿಗೆ ಮಾತ್ರ ಗೌರವ ಎಂದುಕೊಂಡರೆ ಹೇಗೆ? ಆ ಪತ್ರಿಕೆಯ ಧೋರಣೆಯೇ ತಮ್ಮದೂ ಆಗುತ್ತದೆ ಅಲ್ಲವೇ?

  2. Anonymous

    ಒಂದು ಉತ್ತಮ ಚರ್ಚೆಗೆ ಮುನ್ನುಡಿಯಾಗುತ್ತಿದೆ.

  3. vageesh

    naanu ee charcheyannu odudutiddene. nanage arthavagada vishaya andre KIRAN haagu G N NAGARAJ ibbaroo charche maduvaga aarogyakara charche maadabeke vinaha VYANGYAgalannu yaake taruttare (parokshavagi tingle maaduvudu)? avaravara drustikonavannu sabyavaagi, gambeeryadinda baribahudalla ? kiran nnage parichayavilla, aadare hiriyarada G.N. Nagaraj kooda ee rithiya shabda (ex-NIMMA GURUVARYARU)balasi ghanatege kundu tandukollabeku ?

  4. ಚೈತನ್ಯ

    ನಾಗರಾಜ್,
    ಪ್ರಜಾವಾಣಿಯ ಲೇಖನಗಳ ಮೇಲೆ ನಿಮ್ಮ ಸಂಶೋಧನೆಯನ್ನು ಆಧಾರವಾಗಿಸುವ ಬದಲಾಗಿ ಪ್ರೋಫೆಸರ್ ಬಾಲಗಂಗಾಧರರ Reconceptualizing India Studies ಪುಸ್ತಕದ ಮೇಲೆ ಆಧರಿಸುವುದು ಸೂಕ್ತ. ಪ್ರಜಾವಾಣಿಯ ಲೇಖನ ಮಾಲೆಯನ್ನು ಪ್ರೋಫೆಸರ್ ಬಾಲಗಂಗಾಧರರು ಶುರು ಮಾಡಿದ್ದಲ್ಲ. ಎಚ್. ಎಸ್. ಶಿವಪ್ರಕಾಶರು ತಮಗಿಷ್ಟಬಂದಂತೆ ತಿರುಚಿ ತಮಗರ್ಥವಾದಷ್ಟನ್ನು ಒಂದು ಅಂಕಣ ಲೇಖನವನ್ನಾಗಿಸುವ ಮೂಲಕ ಆ ಸರಣಿಯು ಆರಂಭವಾಯಿತು. ಅಲ್ಲಿನ ಬಹುಪಾಲು ಲೇಖಕರು ಶಿವಪ್ರಕಾಶರ ಅಂಕಣಕ್ಕೆ ಸ್ಪಂದನೆಯಾಗಿ ಬರೆದರೆ ಹೊರತು ಬಾಲಗಂಗಾಧರರ ಸಂಶೋಧನೆಯನ್ನು ಕುರಿತಾಗಿ ಅಲ್ಲ. ಬಾಲಗಂಗಾಧರರ ಪುಸ್ತಕದಲ್ಲಿ ಜಾತಿ ವ್ಯವಸ್ಥೆಯ ಕುರಿತಾಗಿ ನಮ್ಮ ಅನೇಕ ತಪ್ಪು ತಿಳುವಳಿಕೆಗಳು ವಸಹಾತುಶಾಹಿ ಎರವಲು ಜ್ಞಾನದಿಂದ ಬಂದವು ಎನ್ನುವ ವಿಚಾರವಾಗಿ ಸುಧೀರ್ಘ ಚರ್ಚೆಯಿದೆ.
    ಇನ್ನು ಎಷ್ಟು ವಚನಗಳು ಜಾತಿಯ ಬಗ್ಗೆ ಮಾತನಾಡುತ್ತಿವೆ ಎನ್ನುವ ವಿಚಾರ. ಆ ಬಗ್ಗೆ ಝಳಕಿಯವರು ಪ್ರಜಾವಾಣಿಯಲ್ಲಿ ವಿವರವಾಗಿ ಉತ್ತರಿಸಿದ್ದಾರೆ. ಸಂಖ್ಯೆಗಳ ಮುಖಾಂತರ ಉತ್ತರದತ್ತ ಸಾಗುವುದೂ ಒಂದು ವೈಜ್ಞಾನಿಕ ಉಪಕರಣವೇ. ಹಾಗೆಂದು ಅವರ ವಾದದಲ್ಲಿ ಅದೊಂದೇ ಇಲ್ಲ. ಅದೂ ಒಂದನ್ನು ವಾದದಲ್ಲಿ ಬಳಸಲಾಗಿದೆ ಅಷ್ಟೇ. ಎಚ್. ಎಸ್. ಶಿವಪ್ರಕಾಶರು ಅದೊಂದನ್ನೇ ತಮ್ಮ ಅಂಕಣದಲ್ಲಿ ಬರೆದರು ಮತ್ತು ಆ ಬರಹದ ಅನುಯಾಯಿಗಳು (ನಿಮ್ಮನ್ನೂ ಸೇರಿ) ಸಂಶೋಧನೆಯ ಮೂಲ ಅಕರಗಳನ್ನು ಓದದೆ ಅದೊಂದೇ ಲಾಜಿಕ್ಕಿನ ಮೇಲೆ ಮಾತನಾಡುತ್ತಿದ್ದೀರಿ. ರಂಜಾನ್ ದರ್ಗಾರೂ ಮಾಡಿದ್ದು ಅಷ್ಟೇ. ಇದನ್ನು ಯಾವ ಬಗೆಯ ಚರ್ಚೆ ಎನ್ನಬೇಕೋ ನನಗೆ ತಿಳಿಯುತ್ತಿಲ್ಲ.
    – ಚೈತನ್ಯ

  5. DR. KIRAN .M GAJANUR

    ಸಹನಾ
    ನಾಗರಾಜ್ ಅವರು ತಮ್ಮನ್ನು ಸಂಶೋಧಕ ಎಂದೆ ಕರೆದುಕೊಳ್ಳುತ್ತಾರೆ ಅದರ ಜೋತೆ ಜೋತೆಗೆ ಪ್ರಜಾವಾಣಿಯಲ್ಲಿನ ಲೇಖನಗಳೇ ನನ್ನ ಆಕರಗಳು ಎನ್ನುತಾರೆ ಒಂದು ವಿಷಯದ ಕುರಿತು ಪ್ರಮುಖ ಬ್ಲಾಗ್ ಒಂದರಲ್ಲಿ ಚರ್ಚಿಸುವ ಮನಸ್ಸು ಮಾಡಿರುವ ನಾಗರಾಜ್ ರಂತಹ ಸಂಶೋಧಕರಿಗೆ ತಾವು ಮಾತನಾಡುತ್ತಿರುವ ವಿಷಯದ ಕುರಿತ ಒಂದೇ ಒಂದು ಮೂಲ ಲೇಖನ ಅಥವಾ ಕೃತಿಯನ್ನು ಒದಿ ಪ್ರತಿಕ್ರೀಯಿಸಬೇಕು ಎಂಬುದು ತಿಳಿಯದಿದ್ದದ್ದು ನಿಜಕ್ಕೂ ಬೇಜಾರಿನ ಸಂಗತಿ ನಾನು ನನ್ನ ಪ್ರತಿಕ್ರೀಯೆಯಲ್ಲಿ ಅವರಿಗೆ ೨ ಮುಖ್ಯ ಪ್ರಶ್ನೆ ಕೇಳಿದ್ದೆ ೧) ತಮ್ಮ ವಾದಕ್ಕೆ ತಾವು ಬಳಸಿರುವ ಆಕರ ಲೇಖನಗಳ/ಪುಸ್ತಕಗಳ ಪಟ್ಟಿ ಕೋಡಿ ಎಂಬುದು
    ೨) ಜಾತಿ ವ್ಯವಸ್ಥಿ ಇದೆ ಎಂದು ವಾದಿಸುತ್ತಿರುವ ನಿವು ಆ ವ್ಯವಸ್ಥೆಯು ದಲಿತರನ್ನು ಎಕೆ ಕೇಳಗಿಟ್ಟಿದೆ ಎಂಬ ವಿವರಣೆಯನ್ನು ಒಪ್ಪುತ್ತಿರಾ ಎಂದು
    ಎರಡಕ್ಕೂ ಉತ್ತರಿಸದ ನಾಗರಾಜ್ರವರು ತಮ್ಮ ಕಂಪ್ಯೂಟರ್ ಅಜ್ಞಾನವನ್ನು ಮಾತ್ರ ಹೇಳಿಕೊಂಡಿದ್ದಾರೆ. . .ಆದರೂ ನನ್ನ ಪ್ರಕಾರ ಈ ಲೇಖನ ಒಂದು ಒಳ್ಳೆಯ ಚರ್ಚೆಯನ್ನು ಮುಂದುವರೆಸುವ ಉದ್ದೇಶವನ್ನಂತು ಹೊಂದಿದೆ ಆ ಕಾರಣಕ್ಕೆ ನಾಗರಾಜ್ ಅವರು ಅಭಿನಂದನಾರ್ಹರು

  6. ಕಟ್ಟಿಮನಿ

    ಶ್ರೀ ಜಿ. ಎನ್. ನಾಗರಾಜ ಅವರಿಗೆ ಕೆಲವು ಪ್ರಶ್ನೆಗಳು:
    ಅ) ವಚನಗಳು ಹಾಗೂ ಜಾತಿವ್ಯವಸ್ಥೆ ಕುರಿತು ಶ್ರೀ ಝಳಕಿ ಅವರು ಅನೇಕ ವರ್ಷಗಳ ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಬರೆದ ಪಿ. ಎಚ್. ಡಿ. ಗ್ರಂಥವನ್ನು ತಾವು ಓದಿದ್ದೀರಾ? ಪ್ರಜಾವಾಣಿಯಲ್ಲಿ ಬಂದ ಲೇಖನಗಳಿಗಿಂತ ಹೆಚ್ಚು ಆಳವಾಗಿ ಹಾಗೂ ವಿಸ್ತಾರವಾಗಿ ಶ್ರೀ ಝಳಕಿ ಅವರ ಪಿ. ಎಚ್. ಡಿ. ಗ್ರಂಥವು ಚರ್ಚೆಯ ವಸ್ತುವಿನ ಬಗ್ಗೆ ತನ್ನ ವಾದವನ್ನು ಮಂಡಿಸಿದೆ.
    ಆ) ಅಕಸ್ಮಾತ್ ಓದಿಲ್ಲದಿದ್ದರೆ, ಓದುತ್ತೀರಾ? ಓದಿ ಚರ್ಚೆಯನ್ನು ಮುಂದುವರೆಸುತ್ತೀರಾ? ” ನಾನು ನಿರೂಪಿಸಿದ ಸಂಶೋಧನಾ ಮಾರ್ಗದ ಬಗ್ಗೆ ಕೂಡ ಪ್ರಶ್ನೆಗಳನ್ನು ಎತ್ತಬಹುದಾಗಿತ್ತು, ಸಲಹೆಗಳನ್ನು ನೀಡಬಹುದಾಗಿತ್ತು. ಹಾಗೆ ಬಾರದಿರುವುದು ನಮ್ಮ ಸಂಶೋಧನಾ ಲೋಕದ ಮುಖ್ಯ ಕೊರತೆಗಳನ್ನು ಎತ್ತಿ ತೋರಿಸುವಂತಿದೆ ಎನ್ನದೆ ವಿಧಿಯಿಲ್ಲ. ” ಎಂದು ತಮ್ಮ ಸಂಶೋಧನಾ ಮಾರ್ಗದ ಬಗ್ಗೆ ಹೇಳಿರುವ ತಾವು ಶ್ರೀ ಝಳಕಿ ಅವರ ಸಂಶೋಧನಾ ಮಾರ್ಗದ ಸ್ಥೂಲವಾದ ಪರಿಚಯವನ್ನಾದರೂ ಮಾಡಿಕೊಳ್ಳತಕ್ಕದ್ದಲ್ಲವೇ? ಶ್ರೀ ಝಳಕಿ ಅವರ ಪಿ. ಎಚ್. ಡಿ. ಗ್ರಂಥದ ಈ-ಕಾಪಿ ಅನ್ನು ನಾನು ಕಳುಹಿಸಿಕೊಡುತ್ತೇನೆ, ತಮ್ಮ ಈಮೈಲ್ ವಿಳಾಸ ಕೊಡಿ.
    ಇ) “[ ಬಾಲು] ಅವರ ಸಮಾಜ ಶಾಸ್ತ್ರೀಯ ವಿವರಣೆ ನಿಜವಾದ ಅರ್ಥದಲ್ಲಿ ಇಲ್ಲಿನ ಜಾತಿಗಳನ್ನು ಮತ್ತು ಅದರ ಸಮಾಜಿಕ ನಡವಳಿಕೆಗಳನ್ನು ಪ್ರತಿನಿಧಿಸುತ್ತಿಲ್ಲ.” ನಿಮ್ಮ ಅಭಿಪ್ರಾಯ ಸರಿ ಇರಬಹುದು. ಆದರೆ ಅದು ಸರಿಯೋ ಅಲ್ಲವೋ ಅಂತ ಓದುಗರಾದ ನಮಗೆ ಹೇಗೆ ಗೊತ್ತಾಗಬೇಕು? “ನಿಜವಾದ ಅರ್ಥ” ಅಂದರೆ ಏನು? ಏಕೆ ಪ್ರತಿನಿಧಿಸುತ್ತಿಲ್ಲ? ಬಾಲು ಅವರ ವಿವರಣೆಯಲ್ಲಿ ಇರುವ ಲೋಪದೋಷಗಳು ಯಾವುವು? “ಭಾರತದಲ್ಲಿ ಜಾತಿಗಳೇ ಇಲ್ಲ, ಜಾತಿ ಆಧಾರದಲ್ಲಿ ಅವಮಾನ, ಅಪಮಾನ ಮತ್ತು ಶೋಷಣೆಗಳು ನಡೆದೆ ಇಲ್ಲ ಅಂತಲ್ಲ” ಎಂಬ ತಮ್ಮ ಹೇಳಿಕೆಗೆ ಕಾರಣವಾದ ಬಾಲು ಅವರ ವಿವರಣೆ ಯಾವುದು?
    ಈ) “ಇಡೀ ಗುಂಪಿಗೆ ತಾವು ಉಪಯೋಗಿಸುತ್ತಿರುವ ಸಂಶೋಧನಾ ವಿಧಾನ, ವಿಜ್ಞಾನ ಇವು ಸೆಮೆಟಿಕ್, ಐರೋಪ್ಯ, ವಸಾಹತುಶಾಹಿ ಬಳುವಳಿ ಎನಿಸುತ್ತಿಲ್ಲವೇ ?” ಸೆಮೆಟಿಕ್ == ಐರೋಪ್ಯ == ವಸಾಹತುಶಾಹಿ ಎಂಬ ಸಮೀಕರಣ ತಮ್ಮದಿರಬಹುದು. ಆದರೆ ನನಗೆ ತಿಳಿದ ಮಟ್ಟಿಗೆ (ನಾನು ಬಾಲಗಂಗಾಧರ ಅವರ ಸಂಶೋಧನಾ ಗುಂಪಿನವನಲ್ಲ, ಆನು ಹೊರಗಣನವನು ;)) ಬಾಲಗಂಗಾಧರ ಅವರು ಮಾಡಿಲ್ಲ. ಸೆಮೆಟಿಕ್ ಮತಗಳಾದ ಇಸ್ಲಾಂ ಹಾಗೂ ಯಹೂದಿ ಖಂಡಿತ ಯೂರೋಪಿನಲ್ಲಿ ಹುಟ್ಟಿದವು ಅಲ್ಲ. ಬಾಲಗಂಗಾಧರ ಅವರ ಸಂಶೋಧನ ವಿಧಾನವು ತಮಗೇಕೆ ವಸಾಹತುಶಾಹಿ ಅಥವಾ ಸೆಮೆಟಿಕ್ ಬಳುವಳಿ ಅಂತ ಮೊದಲು ಹೇಳಿ.

    • C P NAGARAJA

      ಮಾನ್ಯ ಶ್ರೀ ಕಟ್ಟಿಮನಿ ಅವರಿಗೆ ,
      ಶ್ರೀ ಝಳಕಿ ಅವರ Ph.D., ಗ್ರಂಥದ ಈ-ಕಾಪಿ ಅನ್ನು ಈ ಕೆಳಕಂಡ ಈ-ಮೈಲ್ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ .
      ಸಿ ಪಿ ನಾಗರಾಜ
      ngy7777@gmail.com

      • ಕಟ್ಟಿಮನಿ

        ಓಕೆ.

  7. ಕೃಷ್ಣೇಗೌಡ ಟಿ.ಎಲ್.

    ಶ್ರೀಮಾನ್ ಝಳಕಿಯವರ Phd ಪ್ರಬಂದವನನ್ನು ನನಗೊಂದು forward ಮಾಡಿ ಕಟ್ಟಿಮನಿರವರೆ..
    krishnegowdatl@gmail.com

    • ಕಟ್ಟಿಮನಿ

      ಸರಿ.

Trackbacks/Pingbacks

  1. ’ಇಷ್ಟ ಲಿಂಗವೆಂದರೆ ಜಾತಿಯ ಗುರುತಿನ ಚೀಟಿ ಮಾತ್ರವೇ?’ – ಜಿ ಎನ್ ನಾಗರಾಜ್ « ಅವಧಿ / avadhi - [...] ’ಇಷ್ಟ ಲಿಂಗವೆಂದರೆ ಜಾತಿಯ ಗುರುತಿನ ಚೀಟಿ ಮಾತ್ರವೇ?’ – ಜಿ ಎನ್ ನಾಗರಾಜ್ July 26, 2013 by G (ಲೇಖನದ ಮೊದಲ ಭಾಗ) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading