ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್ : ಜಾತಿ, ಕುಲವೆಂಬ ಚರ್ಚೆ ಅಗತ್ಯವೇ?

ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ

ಅರುಣಕುಮಾರ ಹಬ್ಬು

ಮಾನ್ಯರೇ,

ಹನ್ನೆರಡನೇ ಶತಮಾನದ ಶರಣರ ವಚನಗಳನ್ನು ಆಧರಿಸಿ ಜಾತೀಯತೆ ಕುರಿತಂತೆ ಅನೇಕ ಕ್ರಿಯೆ ಹಾಗೂ ಪ್ರತಿಕ್ರ್ರಿಯೆಗಳನ್ನು ನೋಡಿ ನನಗೆ ಅನಿಸಿದ್ದು ಹೀಗೆ: ಬಸವಾದಿ ಪ್ರಮಥರು ಬರೆದ ವಚನಗಳನ್ನು ಕೇವಲ ಜಾತಿ ಅಥವಾ ಜಾತಿ ವಿರೋಧ ದೃಷ್ಟಿಯಿಂದ ಮಾತ್ರ ನೋಡದೇ ಅವುಗಳ ಮೂಲ ತತ್ವ ಹಾಗೂ ಅವುಗಳ ಉದ್ದೇಶಗಳನ್ನು ಕೂಲಂಕುಷವಾಗಿ ಅರೆದು ನೋಡಿ ಹೇಳಬೇಕಾದ ಅಗತ್ಯವಿದೆ. ಈಗ ಜುಗಾರಿ ಕ್ರಾಸ್ನಲ್ಲಿ ಝಳಕಿ ಅವರ ಪ್ರಜಾವಾಣಿಯ ಲೇಖನದ ಮೇಲೆ ಹಲವಾರು ಪತ್ರಗಳು ಪ್ರಕಟವಾಗಿವೆ. ಆದರೆ ಅವೆಲ್ಲವೂ ಜಾತಿಯ ಸುತ್ತಲೇ ಸುತ್ತುತ್ತಿರುವುದನ್ನು ನೋಡಿದರೆ ವಚನಗಳು ಕೇವಲ ಜಾತೀಯತೆ ಅಥವಾ ಜಾತಿ ವಿರೋಧಿ ವಿಚಾರಗಳನ್ನೇ ಎತ್ತಿ ಹಿಡಿದವೇ ಎನ್ನುವ ಶಂಕೆ ವ್ಯಕ್ತವಾಗುತ್ತದೆ.

ಶರಣರೆಲ್ಲ ಸಮಾಜ ಸುಧಾರಕರು. ಅವರ ವಚನಗಳು ಈ ಸಮಾಜದಲ್ಲಿ ಇರುವ ಹತ್ತು ಹಲವಾರು ಅನಿಷ್ಠಗಳನ್ನು ಎತ್ತಿ ಹಿಡಿದು ಜನರ ಕಣ್ಣನ್ನು ತೆರೆಸುವ ಉದ್ದೇಶ ಹೊಂದಿರುವುದು ಎನ್ನುವ ದೃಷ್ಟಿಯಿಂದ ಅಧ್ಯಯನ ಮಾಡಿದರೆ ಈ ಮೇಲಿಂದ ಮೇಲೆ ಪ್ರಸ್ತಾಪವಾಗುವ ಜಾತಿ ವಿಚಾರವನ್ನು ತೊಡೆದುಹಾಕಬಹುದೇನೋ. ಪದೇ ಪದೇ ಜಾತಿ ವಿಷಯವನ್ನು ಪ್ರಸ್ತಾಪಿಸಿ ಜನರ ಅಥವಾ ಓದುಗರ ಮನದಲ್ಲಿ ಇನ್ನಷ್ಟು ಜಾತಿಯೆಂಬ ವಿಷಬೀಜವನ್ನು ಬಿತ್ತುವ ಹುನ್ನಾರ ಇದಾಗಿದೆಯೇ ಎನ್ನುವ ಸಂಶಯವೂ ನನ್ನನ್ನು ಕಾಡುತ್ತದೆ.

ಯಾವುದೇ ಕೃತಿಯನ್ನು ಅಥವಾ ಸಾಹಿತ್ಯ ಸೃಷ್ಟಿಯನ್ನು ಜಾತಿ, ಮತ, ಪಂಥಗಳ ದೃಷ್ಟಿ ಕೋನದಿಂದಲೇ ನೋಡುವ ಇದೇ ದಿಕ್ಕಿನಿಂದ ಅಧ್ಯಯನ ಮಾಡುವ ಹವ್ಯಾಸ ಇಂದು ಬೆಳೆದುಬಂದಿರುವುದು ಈಗ ಪ್ರಕಟವಾಗುತಿರುವ ಪತ್ರಗಳು ಹಾಗೂ ಲೇಖನಗಳನ್ನು ನೋಡಿದರೆ ವೇದ್ಯವಾಗುತ್ತದೆ. ಶರಣರು ಬರೆದ ವಚನಗಳು ಕೇವಲ ಜಾತಿ ಪದ್ಧತಿಯತ್ತಲೇ ಗಿರಕಿಹೊಡೆಯದೇ ಸಮಾಜದಲ್ಲಿ ಇರುವ ಮೇಲು ಕೀಳೆಂಬ ಭಾವನೆಗಳ ವಿರುದ್ಧ ಹಾಗೂ ಅಸ್ತಿತ್ವದಲ್ಲಿರುವ ಅನಿಷ್ಠಗಳನ್ನು ತೊಡೆದುಹಾಕುವತ್ತ ತಮ್ಮ ಗಮನವನ್ನು ಹರಿಸಿವೆ. ಶ್ರೀಮಂತ, ಬಡವರೆಂಬ ಭಾವನೆಯನ್ನು ಅಳಿಸಿ ಇಡೀ ಮಾನವಕುಲವೇ ಒಂದು ಎಂದು ತಿಳಿಸುವ ಪ್ರಮಾಣಿಕ ಪ್ರಯತ್ನ ಇಲ್ಲಿ ಕಾಣುತ್ತಿದೆ. ಆದ್ದರಿಂದಲೇ ಬಸವಣ್ಣನವರು ಮಹಾ ಮಾನವತಾವಾದಿ ಎಂದು ಹೆಸರಾದರು. ಎಲ್ಲ ವಚನಗಳಲ್ಲಿ ಮಾನವ ಧರ್ಮವನ್ನೇ ಎತ್ತಿಹಿಡಿಯುವ ಪ್ರಯತ್ನ ಶರಣರದ್ದು ಎನ್ನುವುದೂ ಅಷ್ಟೇ ಸ್ಪಷ್ಟ.

ಬಸವಣ್ಣನವರ ವಚನಗಳಲ್ಲಿ ಕಾರ್ಲ್ ಮಾರ್ಕ್ಸ್ ಸಿದ್ದಾಂತವನ್ನು ಚಿಂತಕರು ಕಂಡಿದ್ದಾರೆ. ಹಾಗಿರುವಾಗ ಈ ಜಾತಿ, ಕುಲವೆಂಬ ಚರ್ಚೆ ಅಗತ್ಯವೇ? ಎನ್ನುವುದು ನನ್ನ ಪ್ರಶ್ನೆ. ಕುಲ ಕುಲ ಕುಲವೆಂದು ಬಡಿದಾಡದಿರಿ ನೀವು. ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ ಎಂದು ಕನಕದಾಸರು ತಮ್ಮ ದಾಸವಾಣಿಯಲ್ಲಿ ಕುಲದ ಕುರಿತು ಹೇಳಿದದ್ದು ಎಲ್ಲರಿಗೂ ಗೊತ್ತಿದೆ. ಹಾಗಿದ್ದಾಗಲೂ ಚಿಂತಕರಲ್ಲಿ ಹಲವರು ಪುರೋಹಿತಶಾಹಿಯಂಥ ಶಬ್ದಗಳನ್ನು ಬಳಸುತ್ತ 21 ನೇ ಶತಮಾನದಲ್ಲಿಯೂ ಜಾತೀಯತೆಯ ನೆಲೆಗಟ್ಟಿನಲ್ಲಿ ತರ್ಕ ವಿತರ್ಕಗಳನ್ನು ಮಾಡುವುದು ಎಷ್ಟು ಸರಿ? ಇದರಿಂದ ಮಹಾಮಾನವತಾವಾದಿ ಬಸವಣ್ಣನವರ ಒಂದು ಮನುಜಕುಲದ ತತ್ವಕ್ಕೆ ಬಾಧೆಯಾಗಲಾರದೇ? ಈ ಹಿನ್ನೆಲೆಯಲ್ಲಿ ಜಾತೀಯ ಚರ್ಚೆ ಮಾಡುವುದುನ್ನು ಬಿಟ್ಟು ಜಾತ್ಯತೀತ ಮತ್ತು ನೆಲೆಗಟ್ಟಿನಲ್ಲಿ ವಚನಗಳು, ದಾಸರ ಪದಗಳು ಹಾಗೂ ಇತರ ಇಂಥ ಸಾಹಿತ್ಯ ಕೃತಿಗಳ ಅಧ್ಯಯನ ಮಾಡುವುದು ಸೂಕ್ತವಲ್ಲವೇ? ಇದು ನನ್ನ ಅನಿಸಿಕೆಯಷ್ಟೇ.

 

 

‍ಲೇಖಕರು avadhi

24 April, 2013

2 Comments

  1. chalam

    ಒಬ್ಬ ನಮ್ಮ ಪುಸ್ತಕದಂಗಡಿಗೆ ನಾಮದಾರಿ ಬಂದ..ಓಹ್ ನಮ್ಮ ಭೈರಪ್ಪನವರ ಪುಸ್ತಕ ಅಂದ…ಸಿದ್ದಗಂಗಾ ಮಠದ ಸ್ವಾಮಿಯವರ ಮುಖವಿರುವ ಪುಸ್ತಕವನ್ನು ಅದರಲ್ಲಿ ಏನಿರಿ ಇಲ್ಲದಿರಲಿ ತೆಗೆದುಕೊಳ್ಳುತ್ತಾರೆ…ಹೀಗೆ ಪುಸ್ತಕ ಮಾರಾಟವಾಗುತ್ತಿದೆ.ಇವರು ಕೊಳ್ಳುವಾಗ ಮನಸ್ಥಿತಿ ಹೇಗಿರುತ್ತೆ ಅಂತ ಯೋಚನೆ ಮಾಡಲು ಹೆದರಿಕೆಯಾಗುತ್ತದೆ.ಎಲ್ಲರನ್ನು ಓದಿಸುವ ತೇಜಸ್ವಿ,ಲಂಕೇಶ್ ಯಾಕೆ ಮುಖ್ಯ ಅಂತ ಅರಿವಾಗುತ್ತದೆ.

  2. Vijendra

    ದೇವರಿದನೋ ಇಲ್ಲವೋ ಗೊತ್ತಿಲ್ಲ ,but ಇದ್ದರೂ ಅವನ್ಯಾಕೆ ಕಲ್ಲಾಗಿದ್ದಾನೆ ಅಂತ ನನ್ನಂತವರಿಗೆ ಖಂಡಿತ ಗೊತ್ತು .. ಪಾಪ ಬಸವಣ್ಣರು,ದಾಸರು ,ಕಬೀರರು ಇನ್ನು ಮುಂತಾದ ದಾರ್ಶನಿಕರು ಇ ದೇಶದಲ್ಲಿ ಹುಟ್ಟಭಾರಧಿತ್ತು !!!ಜೀವನ ಪೂರ್ತಿ ಯಾವುದನ್ನ ವಿರೋದಿಸಿ ನಿರ್ಮೂಲ ಮಾಡಲಿಕ್ಕೆ ಹೋರಾಡಿದರೊ ಅದರಲ್ಲೇ ಮಹನೀಯರನ್ನು ಬಂಧಿಸುವ ನಮ್ಮವರ ಪ್ರಯತ್ನ ಮೂರ್ಖತನದ ಪರಮಾವದಿ ಮತ್ತು ನ್ಯೆತಿಕತೆಯ ದುರಂತ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading