ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್‌ : ’ಮಲೆಗಳಲ್ಲಿ ಮದುಮಗಳು' ನಾಟಕವಾಗಬಾರದೆ?’

ಇತ್ತೀಚಿಗೆ ಕಂಬಾರರು ’ಮಲೆಗಳಲ್ಲಿ ಮದುಮಗಳು’ ಕಾದಂಬರಿ ನಾಟಕವಾಗುವುದನ್ನು ಒಪ್ಪದೆ ಹೇಳಿಕೆ ನೀಡಿದ್ದರು.

ಈ ಬಗ್ಗೆ ಡಾ ಬಿ ಆರ್ ಸತ್ಯನಾರಾಯಣ ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ.

ಈ ವಿಷಯದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ.

– ಡಾ ಬಿ ಆರ್  ಸತ್ಯನಾರಾಯಣ

ಮಾನ್ಯರೆ,

ಶ್ರೀಯುತ ಕಂಬಾರರು ತಮ್ಮ ಸಂದರ್ಶನದಲ್ಲಿ (ವಿವಾ16/01/15) ಒಂದು ಕಡೆ ಸಾಹಿತ್ಯ ಅಕಾಡೆಮಿ ನಾಟಕೋತ್ಸವವನ್ನು ಮಾಡುವುದನ್ನು ಸಮರ್ಥಿಸುತ್ತಾರೆ. ಇನ್ನೊಂದು ಕಡೆ, ಸಾಹಿತ್ಯ ಕೃತಿಯೊಂದು ನಾಟಕವಾಗುವುದನ್ನು ವಿರೋಧಿಸುತ್ತಾರೆ! ತಮ್ಮ ಸಮರ್ಥನೆಗೆ, ಕಾವ್ಯ, ನಾಟಕ, ಕಾದಂಬರಿ, ಕತೆ ಎಲ್ಲವೂ ಸಾಹಿತ್ಯದ ಅವಿಭಾಜ್ಯ ಅಂಗಗಳು ಎಂದು ಹೇಳಿರುವ ಅವರೇ ಮಲೆಗಳಲ್ಲಿ ಮದುಮಗಳು ಕಾದಂಬರಿ ನಾಟಕವಾಗುವುದನ್ನು ಒಪ್ಪದೆ ದ್ವಂದ್ವ ನಿಲುವನ್ನು ಪ್ರದರ್ಶಿಸಿದ್ದಾರೆ. ಸಾಹಿತ್ಯ ಕೃತಿಯೊಂದು ನಾಟಕ ಆಗಬಾರದು ಎಂದರೆ, ಬಿ.ಎಂ.ಶ್ರೀಯವರ ಅಶ್ವತ್ಥಾಮನ್, ಗದಾಯುದ್ಧ (ರನ್ನನ ಸಾಹಸ ಭೀಮವಿಜಯಂ ಕಾವ್ಯದಿಂದ ಪ್ರೇರೇಪಿತ) ನಾಟಕಗಳು ಬರುತ್ತಿರಲಿಲ್ಲ. ತೇಜಸ್ವಿಯವರ ಬಹುತೇಕ ಕತೆ ಕಾದಂಬರಿಗಳು ನಾಟಕವಾಗಿ ಯಶಸ್ವಿಯಾಗುತ್ತಿರಲಿಲ್ಲ. ಕುವೆಂಪು ಮಲೆಗಳಲ್ಲಿ ಮದುಮಗಳು ಕೃತಿಯನ್ನು ನಾಟಕ ರೂಪದಲ್ಲಿ ಬರೆದಿಲ್ಲವೆಂದ ಮಾತ್ರಕ್ಕೆ ಅದು ನಾಟಕವೇ ಆಗಬಾರದು ಎಂಬುದು ಖಂಡದೃಷ್ಟಿಯಲ್ಲದೆ, ಪೂರ್ಣದೃಷ್ಟಿಯಲ್ಲ! ಸಾಹಿತಿಯಾದವನಿಗೆ ಮುಖ್ಯವಾಗಿ ಇರಬೇಕಾದದ್ದೇ ಪೂರ್ಣದೃಷ್ಟಿ ಎಂಬುದನ್ನು ಶ್ರಿ ಕಂಬಾರರು ಮರೆತರೆ?
 
 

‍ಲೇಖಕರು G

27 January, 2015

6 Comments

  1. ಅಕ್ಕಿಮಂಗಲ ಮಂಜುನಾಥ

    ಸಮರ್ಥ ನಿರ್ದೇಶಕರು ಕೈಗೆತ್ತಿಕೊಂಡರೆ ಯಾವುದೇ ವಿಷಯವನ್ನೂ , ಘಟನೆಯನ್ನೂ ಒಳ್ಳೆಯ ಕಲಾಕೃತಿಯನ್ನಾಗಿ ಮಾಡಲು ಸಾಧ್ಯ ಎಂಬುದು ಗೊತ್ತಿರುವ ವಿಚಾರವೇ. ಕೇವಲ ಉಪ್ಪು ಹುಳಿ ಬಳಸಿ ರುಚಿಯಾದ ಖಾದ್ಯ ತಯಾರಿಸುವ ಅನೇಕರ ಮದ್ಯೆ ಜುಗಾರಿಕ್ರಾಸ್ ನಂಥ ಜನಪ್ರಿಯ ಮತ್ತು ಶ್ರೇಷ್ಠ ಕೃತಿ ಬಳಸಿ ನಾಟಕ ಮಾಡಲು ಸಾಧ್ಯವಿಲ್ಲವೇ ? ಪ್ರತಿಯೊಬ್ಬ ಮನುಷ್ಯನ ದೃಷ್ಟಿಕೋನಗಳೂ ಬೇರೆ ಬೇರೆಯಾದ ಕಾರಣ ಕಂಬಾರರಿಗೆ ಹಾಗೆ ಅನ್ನಿಸಿರಬಹುದು ಮತ್ತು ನಿಮಗೆ ಈ ರೀತಿ ಅನ್ನಿಸಿರಬಹುದು .

  2. mayya

    ಜುಗಾರಿ ಕ್ರಾಸ್ ನ್ನು ಈಗಾಗಲೇ ಹಿರಿಯ ರಂಗತಜ್ಞ, ನಿರ್ದೆಶಕ ಗೆಳೆಯ ನಟರಾಜ ಹೊನ್ನವಳ್ಳಿ ಯವರು ಬೆಂಗಳೂರು ಸಮುದಾಯ ಹಾಗೂ ಹೆಗ್ಗೋಡಿನ ನೀನಾಸಂ ಹಿರಿಯರ ತಂಡಗಳ ಮೂಲಕ ಯಶಸ್ವಿಯಾಗಿ ರಂಗಕ್ಕೆ ತಂದಿದ್ದಾರೆ . ಸಾಹಿತಿಗಳು ಹಾಗೂ ಚಿಂತಕರು ಕನ್ನಡ ರಂಗಭೂಮಿಯನ್ನು ಸರಿಯಾಗಿ ಗಮನಿಸುತ್ತಿಲ್ಲವೆಂಬುದು ಮತ್ತೆ ಮತ್ತೆ ಸಾಬೀತುಪದಿಸುತ್ತಿದ್ದಾರೆ.

    • ಸತ್ಯನಾರಾಯಣ

      ಅಕ್ಕಿಮಂಗಲ ಮಂಜುನಾಥ ಮತ್ತು mayya ಅವರೆ, ಇಲ್ಲಿ ಕೃತಿಯ ಉಲ್ಲೇಖವಾಗಿರುವುದು ಮಲೆಗಳಲ್ಲಿ ಮದುಮಗಳು ಮಾತ್ರ! ಜುಗಾರಿ ಕ್ರಾಸ್ ಎಂಬುದು ಈ ಅಂಕಣದ ಹೆಸರು.

  3. t.n. vasudevamurthy

    ಕತೆ, ಕಾದಂಬರಿಗಳ ರಂಗಪ್ರಯೋಗ ಸ್ವಾಗತಾರ್ಹವೇ ಸರಿ. ಆದರೆ ಸರ್ಕಾರೀ ಪ್ರಾಯೋಜಿತ ರಂಗ ಪ್ರಯೋಗಗಳನ್ನು ಆಡಳಿತಶಾಹಿಯ ನಿಯಮ ನಿಬಂಧನೆಗಳ ಹಿನ್ನೆಲೆಯಲ್ಲೂ ನೋಡಬೇಕಾಗುತ್ತದೆ. ಯಾವುದೇ ಉದ್ಯಮಕ್ಕೆ ಸರ್ಕಾರ ಲಕ್ಷ ಲಕ್ಷ ಹಣ ಹೂಡುವಾಗ ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಇತ್ಯಾದಿಗಳು ನಡೆಯಬೇಕು, ಆದರೆ ಸರ್ಕಾರದ ಈ ಯಾವ ನಿಯಮಾವಳಿಗಳನ್ನೂ ಪರಿಗಣಿಸದೆ ಅನುದಾನ ಪಡೆದ ರಂಗ ಪ್ರಯೋಗದ ಆಯೋಜಕರು ಸರ್ಕಾರೀ ಹಣವನ್ನು ಖರ್ಚು ಮಾಡಿರುವರು ಎಂದು ನನ್ನ ಕೆಲವು ಸ್ನೇಹಿತರು ಹೇಳಿರುವರು (ಈ ಕುರಿತು ಕೆಲವು ಪತ್ರಿಕೆ ಹಾಗು ಬ್ಲಾಗ್‌ಗಳಲ್ಲೂ ಬರೆದಿರುವರು). ಈಗಾಗಲೇ ಮೈಸೂರು, ಬೆಂಗಳೂರುಗಳಲ್ಲಿ ನಡೆದ ಇದರ ಒಂದೊಂದು ಪ್ರಯೋಗಕ್ಕೂ ಲಕ್ಷಾಂತರ ರೂಪಾಯಿಗಳ ವ್ಯಯವಾಗಿದ್ದು ಅದರ ಹೂಡಿಕೆಯ ಅರ್ಧದಷ್ಟು ಮೊತ್ತವೂ ಸರ್ಕಾರದ ಬೊಕ್ಕಸಕ್ಕೆ ಹಿಂದಿರುಗಿ ಬಂದಿಲ್ಲ ಎಂಬ ಸುದ್ದಿಯೂ ಜನಜನಿತವಾಗಿದೆ. ಈ ಎಲ್ಲ ಗೊಂದಲಗಳ ಹಿನ್ನೆಲೆಯಲ್ಲಿ ಕಂಬಾರರು ಹಾಗೆ ಅಭಿಪ್ರಾಯ ಪಟ್ಟಿರಬಹುದೇನೋ.
    ಸರ್ಕಾರೀ ಹಣದ ದುರುಪಯೋಗ ಅಥವಾ ಅಪಮಾರ್ಗದ ಬಳಕೆಯಲ್ಲಿ ಅಧಿಕಾರಿಗಳು ಹಾಗು ರಾಜಕಾರಿಣಿಗಳೊಂದಿಗೆ ಕಲಾವಿದರೂ ಪೈಪೋಟಿಗೆ ನಿಂತಾಗ,
    ಇಂತಹ ಅಪವಾರ್ತೆಗಳಿಗೆ ಸಮಜಾಯಿಷಿ ನೀಡುವ ನ್ಶೆತಿಕತೆ ಹೊಣೆಗಾರಿಕೆಯನ್ನೂ ತೋರಿಸದೆ ನಿರ್ಲಕ್ಷ್ಯ ಅಥವಾ ಕಿವುಡುತನವನ್ನು ಪ್ರದರ್ಶಿಸ ತೊಡಗಿದಾಗ
    ಈ ಬಗೆಯ ಮೆಗಾ ರಂಗಪ್ರಯೋಗಗಳಿಂದ ಲಭಿಸುವ ಯಾವುದೇ ಪ್ರಶಸ್ತಿ ಹೆಗ್ಗಳಿಕೆಗಳೂ ಇಂತಹ ಕಳಂಕಗಳನ್ನು ಅಳಿಸಲಾರವು ಎಂಬ ವಿವೇಕವನ್ನು ಇವರುಗಳು ಬೆಳೆಸಿಕೊಳ್ಳದಿದ್ದಾಗ,
    ಇಂತಹ ರಂಗಪ್ರಯೋಗಗಳು ಸರ್ಕಾರೀ ಪ್ರಾಯೋಜಿತ ಸಾಹಿತ್ಯ ಸಮ್ಮೇಳನಕ್ಕಿಂತಲೂ ಕರ್ಕಶವಾದ ಗದ್ದಲದಂತೆ ಕೇಳಿಸುತ್ತದೆ.
    ಒಟ್ಟಾರೆ ನಮ್ಮ ಸಾಂಸ್ಕೃತಿಕ ವಾತಾವರಣದ ಬಗ್ಗೆ ಸಾಮಾನ್ಯ ನಾಗರಿಕರಿಗೆ ದಿಗಿಲು ಹುಟ್ಟುತ್ತದೆ.

    • ಸತ್ಯನಾರಾಯಣ

      ವಾಸುದೇವಮೂರ್ತಿಯವರೆ,
      “ಹೊಸ ಪ್ರಯೋಗವಾಬೇಕು ಅಂತ ಹೇಳಿದ್ರಿ. ಮುಂದಿನ ತಿಂಗಳು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕ ಪ್ರದರ್ಶನವಾಗುತ್ತಿದೆ. ಇದು ಹೊಸ ಪ್ರಯೋಗ ಅಲ್ವಾ?” ಇದು ಕಂಬಾರರಿಗೆ ಕೇಳಿರುವ ಪ್ರಶ್ನೆ. ಅದಕ್ಕೆ ಅವರು ಕೊಟ್ಟಿರುವ ಉತ್ತರ: “ಪ್ರಯೋಗ ಮಾಡಬೇಕು ಅಂತ ಏನೇನೋ ಮಾಡಬಾರದು. ಯಾವ ಭಾಷೆಯಲ್ಲಿ ನಾಟಕಗಳು ಹುಟ್ಟಲು ಸಾಧ್ಯವಿಲ್ಲವೋ ಅಂಥ ಭಾಷೆಯವರು ಕಾದಂಬರಿಗಳನ್ನೇ ನಾಟಕವಾಗಿ ಮಾಡುತ್ತಾರೆ. ಆದರೆ ನಮ್ಮಲ್ಲಿ ನಾಟಕ ಸೃಷ್ಟಿಗೇನೂ ಕೊರತೆಯಿಲ್ಲವಲ್ಲ. ಮಲೆಗಳಲ್ಲಿ ಮದುಮಗಳು ಕೃತಿಯನ್ನು ನಾಟಕವಾಗಿ ಮಾಡಲು ಬರುವಂತಿದ್ದರೆ ಅದನ್ನು ಕುವೆಂಪು ಕಾದಂಬರಿಯಾಗಿಸುತ್ತಿರಲಿಲ್ಲ…”
      ಇನ್ನೊಂದು ಪ್ರಶ್ನೆಗೆ ಅವರು ಕೊಟ್ಟಿರುವ ಉತ್ತರ: ನೋಡಿ.. ಕಾವ್ಯ, ನಾಟಕ, ಕಾದಂಬರಿ, ಕತೆ ಎಲ್ಲವೂ ಸಾಹಿತ್ಯದ ಅವಿಭಾಜ್ಯ ಅಂಗಗಳು………. ಪ್ರೇಕ್ಷರಿಗೆ ಹೊಸತನ ಬೇಕಾಗಿದೆ. ಕಂಪೆನಿ ನಾಟಕಗಳು ನಾಟಕವನ್ನು ಸಿನಿಮಾ ರೀತಿ ತೋರಿಸುವುದಾದರೆ ಅದಕ್ಕೆ ಟೀವಿ ಇದೆಯಲ್ಲ, ನಾಟಕ ಯಾಕೆ ಬೇಕು? ನಾಟಕವೊಂದು ಸಮೂಹ ಕಲೆ. ಅದೇ ರಂಗಭೂಮಿಯ ವೈಶಿಷ್ಟ್ಯತೆ…… ಸಾಹಿತ್ಯದ ಕಡೆಯಿಂದ ರಂಗಭೂಮಿಯನ್ನು ಉಳಿಸಲು ಯಾವ ಕೆಲಸವಾಗಬೇಕೋ ಅದನ್ನು ಮಾಡುತ್ತಿದ್ದೇವೆ. ರಂಗಭೂಮಿಯ ವೈಭವವನ್ನು ಪುರುಜ್ಜೀವನಗೊಳಿಸುವ ಸಾಧ್ಯತೆಯತ್ತ ನಾವು ಯೋಚಿಸುತ್ತಿದ್ದೇವೆ.”
      ಈ ಉತ್ತರಗಳಲ್ಲಿ ಎಷ್ಟೊಂದು ವಿರೋಧಾಭಾಸಗಳಿವೆಯಲ್ಲೆವ?
      ಈಗ ಹೇಳಿ, ಕಂಬಾರರ ಅಭಿಪ್ರಾಯದಲ್ಲಿ ನೀವು ಹೇಳಿರುವಂತಹ ಯಾವ ಹಿನ್ನೆಲೆಯಿದೆ?

  4. ಅನು

    ಕಥೆ, ಕಾದಂಬರಿ ಅಷ್ಟೇ ಯಾಕೆ ಕವಿತೆಗಳೂ ಸಹ ಅದ್ಭುತ ನಾಟಕವಾಗಿರುವುದನ್ನು ನಾವು ನೋಡಿದ್ದೇವೆ. ವೈದೇಹಿಯವರ ಕವಿತೆಗಳ ನಾಟಕ, ಮೈಸೂರು ಮಲ್ಲಿಗೆ ಇವೆಲ್ಲಾ ಕವಿತೆಗಳನ್ನಾಧರಿಸಿದ ನಾಟಕಗಳು. ಕಾದಂಬರಿ, ಕಥೆಗಳು ನಾಟಕವಾದಾಗ ಅವು ಮತ್ತಷ್ಟು ಹೊಸನೋಟಗಳನ್ನು, ಒಳನೋಟಗಳನ್ನು ಪಡೆದುಕೊಳ್ಳುತ್ತದೆ. ಹಾಗೆ ಎಲ್ಲಾ ಪ್ರಯೋಗಗಳಿಗೂ ರಂಗಭೂಮಿ ತೆರೆದುಕೊಳ್ಳುತ್ತದೆ. ಮಲೆಗಳಲ್ಲಿ ಮದುಮಗಳು ಅದಕ್ಕೊಂದು ಸುಂದರ ಉದಾಹರಣೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading