'ಜುಗಾರಿ ಕ್ರಾಸ್'ನಲ್ಲಿ ವಚನಗಳು

ಉದಯಕುಮಾರ ಹಬ್ಬು ಕಿನ್ನಿಗೋಳಿ

ಮೊನ್ನೆ 3ನೇ ತಾರೀಕಿನ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ಡಂಕಿನ್ ಝಳಕಿ ಯವರ ಲೇಖನದ ಕುರಿತು ನನ್ನ ಅಭಿಪ್ರಾಯ ಹೀಗಿದೆ. ಅವರ ಮೊದಲ ವಾದ :” ವಚನಗಳು ಜಾತಿಯ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಒಂದು ಅಸಂಬದ್ಧವಾದ ವಾದ.” ವಚನಗಳನ್ನಾಗಲಿ ಇನ್ನಿತರ ಯಾವುದೇ ಸಾಹಿತ್ಯ ಪ್ರಕರವನ್ನಾಗಲಿ ಮರುಓದಿಗೆ ಒಳಪಡಿಸುವುದು ಅತ್ಯಂತ ಆರೋಗ್ಯಕರವಾದ ಸಂಗತಿಯಾಗಿದೆ. ನಾನು ಝಳಕಿಯವರನ್ನು ಹಾಗಾಗಿ ಅಭಿನಂದಿಸುತ್ತೇನೆ. ಆದರೆ ಆ ಮರುಓದು ಆಯಾ ಗ್ರಂಥಗಳಿಗೆ ನ್ಯಾಯವನ್ನೊದಗಿಸಬೇಕಲ್ಲವೇ?
ವಚನಗಳ ಅನೇಕ ಉದ್ದೇಶಗಳಲ್ಲಿ ಜಾತಿವ್ಯವಸ್ಥೆಯ ವಿರೋಧವೂ ಒಂದು.ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಅಲ್ಲವೇ? ಸಾಕಷ್ಟು ವಚನಗಳು ಅದರ ಪುರಾವೆಯಾಗಿ ಇವೆ. ಅದಷ್ಟಲ್ಲದೆ ಅಂತರಂಗ ಬಹಿರಂಗ ಶುದ್ಧಿ, ಆಡಂಬರದ ಭಕ್ತಿಯ ವಿಡಂಬನೆ, ಸ್ವಾತಂತ್ರ್ಯ, ಸಮಾನತೆ, ಬಂಧುಬಾಂಧತ್ವದ ಅಧಾರದ ಮೇಲೆ ನಿಂತ ಹೊಸ ಸಮಾಜ ನಿರ್ಮಾಣ ಲಿಂಗಧಾರಣೆಯ ಮಹತ್ವವನ್ನು ಎತ್ತಿ ಹಿಡಿಯುವುದು ಏಕದೇವೋಪಾಸನೆ, ಸಮಾಜದ ನೈತಿಕತೆಯನ್ನು ಕಾಪಾಡಿಕೊಳ್ಳುವುದರ ಕುರಿತಾದ ಅನೇಕ ಸಲಹೆಗಳನ್ನೊಳಗೊಂಡ ನಿಯಮಗಳುಸ್ತ್ರೀ ಸ್ವಾತಂತ್ರ್ಯ ಸಮಾನತೆ ಇತ್ಯಾದಿ ಅವುಗಳ ಉದ್ದೇಶಗಳಾಗಿದ್ದವು. ವಚನಗಳು ಜಾತಿವಿರೋಧವನ್ನು ಮಾಡುವುದಿಲ್ಲ ಎನ್ನುವುದೇ ನಾವು ಅವುಗಳಿಗೆ ಮಾಡುವ ಅಪ್ಚಾರ ಎಂದು ನನಗೆ ಅನಿಸುತ್ತದೆ. ವೀರಶೈವ ಧರ್ಮ ಒಮ್ಮಿಂದೊಮ್ಮೆಲೆ ಆವಿರ್ಭೂತವಾದ ಧರ್ಮವಲ್ಲ. ಭಾರತೀಯ ಅಧ್ಯಾತ್ಮಿಕ ಪರಂಪರೆಯ ವಿಕಾಸದಲ್ಲಿ ಇದೊಂದು ಮೈಲುಗಲ್ಲು. ಶಂಕರ ಮೊಕಾಶಿ ಪುನೇಕಾರ ಇವರು ತಮ್ಮ “ಮಧ್ಯ ಯುಗೀನ ಅಂತ್ಯಜರ ತತ್ವ ಚಿಂತನೆ” ಪುಸ್ತಕದಲ್ಲಿ ನಮೂಡಿಸಿದ ಹಾಗೆ ವೀರಶೈವ ಧರ್ಮವು ಕಾಶ್ಮೀರಿನ ಶೈವ ಮತ ಮತ್ತು ತಮಿಳುನಾಡಿನ ಭಕ್ತಿಪಂಥದ ಸಮ್ಮಿಲನದಿಂದ ಉದ್ಭವಿಸಿದ ಮತವಾಗಿದೆ. ಇವೆರಡೂ ಅಧ್ಯಾತ್ಮಿಕ ಮಾರ್ಗಗಳು ಜಾತ್ಯಾತೀತವಾಗಿದ್ದವು. ಅಂತೆಯೇ ನಾಥ ಪಂಥದಿಂದಲೂವೀರಶೈವವು ಪ್ರಭಾವಿತಗೊಂಡಿದೆ. ನಾಥ ಪಂಥವು ‘ಅಹಂ ಬ್ರಹ್ಮಾಸ್ಮಿ’ ಎಂಬ ಅದ್ವಿತ ಧೋರಣೆ, ತನ್ನನ್ನು ತನರಿವ ಪ್ರವೃತ್ತಿ ಭಾರತದ ಎಲ್ಲ ಅವಧೂತದ ಪಂಥಗಳ ನಿಲುವು. ಇದು ಜಾತಿಪದ್ಧತಿ,ವೇದವಿರೋಧಿ, ಮತ್ತು ಪುರೋಹಿತಶಾಹಿ ನಿಲುವುಗಳನ್ನು ತಿರಸ್ಕರಿಸಿ ಮುನ್ನಡೆದು ನಿಲ್ಲಬಲ್ಲ ತತ್ವ, ನಾಥ,ಸೂಫಿ, ದತ್ತ ಮುಂತಾದ ಎಲ್ಲ್ಕ ಅವಧೂತ ಪಂಥಗಳ ಮುಖ್ಯ ನಿಲುವಿದು. ನಾಥ ಪಂಥದ ‘ಹಠ ಪ್ರದೀಪಿಕೆ’ ಯಲ್ಲಿ ಅಲ್ಲಮನ ಹೆಸರಿರುವುದನ್ನು ನಾವೆಲ್ಲ ಬಲ್ಲೆವು. ಇದರಲ್ಲಿ ವಚನ ಚಳುವಳಿಯಲ್ಲಿ ಮಹತ್ತರ ಪಾತ್ರವಹಿಸಿದ್ದ ಬಸವಣ್ಣನ ಹೆಸರಿಲ್ಲ. ಅಲ್ಲಮ ಪ್ರಭುವಿನೊಂದಿಗೆ ರೇವಣಸಿದ್ಧ, ಮರುಳಸಿದ್ಧ, ಸಿದ್ಧರಾಮ ಮೊದಲಾದವರು ಈ ಪರಂಪರೆಗೆ ಸೇರಿದವರೆಂದು ಭಾವಿಸಬಹುದು. ಸಾಧನೆಯ ಮಾರ್ಗದಲ್ಲಿ ಈ ಶೈವ ಪರಂಪರೆಯ ನಾಥರು ಅನುಭವಿಸಿದ ಸೋಲು ವೀರಶೈವದ ಉಗಮಕ್ಕೆ ಕಾರಣವಾಗಿರಬಹುದು..
ಇನ್ನೂ ಅವರ ಇನ್ನೊಂದು ಹೇಳಿಕೆ ಹೀಗಿದೆ:”ಭಾರತದಲ್ಲಿ ಒಂದು ಜಾತಿವ್ಯವಸ್ಥೆ ಇದೆ. ಅದು ಅನೈತಿಕವಾದುದು ಮತ್ತು ಅದರ ವಿರುದ್ಧ ಹೊರಾಡುವುದು ಪ್ರಗತಿಪರವಾದುದು ಎಂಬ ವಿಚಾರವನ್ನು ನಮಗೆ ಕಲಿಸಿಕೊಟ್ಟವರು ಯುರೋಪಿನ ಚಿಂತಕರು” ಇದನ್ನು ಹೀಗೆಂದು ನಾವು ತಿಳಿದುಕೊಳ್ಳಬಹುದು. ವಸಾತುಶಾಹಿ ಆಡಳಿತ ಬರುವವರೆಗೆ ಭಾರತೀಯರಿಗೆ ಜಾತಿ ವ್ಯವಸ್ಥೆ ಇದೆ ಎಂದು ಗೊತ್ತಿರಲಿಲ್ಲ ಎಂಬುದಾಗುತ್ತದೆ. ಆದ್ರೆ ಈ ಹೇಳಿಕೆಯನ್ನು ಒಪ್ಪಲು ಸಾಧ್ಯವೇ? ‘ಕಾಳಿದಾಸನು ‘ರಘುವಂಶ’ದಲ್ಲಿ ಹೀಗೆ ಹೇಳಿದ್ದಾನೆ:”ಗ್ರಹಗಳ ಭುಕ್ತಿ ಮತ್ತು ಚಲನೆಯು ಹೇಗೆ ಭಗವಂತನ ನಿಯಂತ್ರಣದಲ್ಲಿದೆಯೋ, ಅದೇ ಪ್ರಕಾರವಾಗಿ ರಘುವಂಶದ ವಿರಪುತ್ರರ ಅನುಸರಣೆಯನ್ನು ಅವರ ಅನುಯಾಯಿಗಳು ಮನುವಿನ ಅಪ್ಪಣೆಗೆ ಅನುಸಾರವಾಗಿ ಮಾಡುತ್ತಾರೆ. ಏಕೆಂದರೆ ರಘುವಂಶದ ರಾಜರು ಮಾತ್ರ ಮನು ತೋರಿದ ಮಾರ್ಗಕ್ಕೆ ದಾರಿ ದೀಪವಾಗಬಲ್ಲರು. ರಘುವಂಶದ ಕೊನೆಯ ಅರಸನು ಯಾವಾಗ ಮನುವಿನಿಂದ ಹೇಳಲ್ಪಟ್ಟ ಮಾರ್ಗದಿಂದ ಬೇರೆಯಾದನೋ ಆಗ ಅವನು ಅಕಾಲ ಮ್ಱತ್ಯುನೈದಿದನು. ಮತ್ತು ಅಂದಿಗೆ ರಘುವಂಶದ ಕೊನೆಯು ಒದಗಿ ಬಂದಿತು.”
ಈ ವಿಚಾರಧಾರೆಯು ಕೇವಲ ಕಾಳಿದಾಸನದು ಮಾತ್ರ ಆಗಿರಲಿಲ್ಲ. ಅಂದಿನ ಸಂಪೂರ್ಣ ಸಮಾಜದ್ದಾಗಿತ್ತು. ಮತ್ತು ಅಂದಿನ ಈ ಧ್ಯೇಯಗಳನ್ನು ಒಳಗೊಂಡ , ಮನುವು ರಚಿಸಿದ್ದ “ಕ್ಷಾತ್ರಧರ್ಮ” ಮತ್ತು ಅದರ ಕಠಿಣ ನಿಯಮಗಳನ್ನು ಪೂರ್ಣವಾಗಿ ನಂಬಿತ್ತು. ಒಂದೇ ಬಗೆಯ ಅಪರಾಧಕ್ಕೆ ಬೇರೆ, ಬೇರೆ ಜಾತಿಯ ಜನರಿಗೆ ಬೇರೆ , ಬೇರೆ ಶಿಕ್ಷೆಯನ್ನು ವಿಧಿಸುವ ವ್ಯವಸ್ಥೆಯುಳ್ಳ ಮನುಸ್ಮೃತಿಯ ನಿಯಮಗಳನ್ನು ಮಾನ್ಯ ಮಾಡಲಾರೆವು. ಅದಕ್ಕೆ ನಾವು ಮನುಸ್ಮೃತಿಯನ್ನು ದೂಷಿಸುವಂತಿಲ್ಲ. ನಿಜವಾದ ವಿಷಯವೆಂದರೆ ಅಂದಿನ ಸಮಾಜವು ಈ ರೀತಿಯಲ್ಲಿಯೇ ವಿಚಾರ ಮಾಡುತ್ತಿತ್ತು. ಇಂದಿನ ಆಧುನಿಕ ಸಮಾಜವು ಕ್ಷಾತ್ರಧರ್ಮದ ಧ್ಯೇಯಗಳನ್ನು ಅಥವಾ ಮನ್ನಣೆ ಮಾವುವ ಸ್ತಿಯಲ್ಲಿಲ್ಲ.” (ಈವಿಷ್ಟನ್ನೂ ಬಾಬು ಜಗಜೀವನ ರಾಮ್ ಅವರ ಗ್ರಂಥ ‘ಭಾರತದ ಜಾತಿಪದ್ಧತಿಯ ಸವಾಲುಗಳು” ಇದರಿಂದ ಆಯ್ಕೆ ಮಾಡಿದ್ದಾಗಿದೆ.) ಉದಯಕುಮಾರ ಹಬ್ಬು ಕಿನ್ನಿಗೋಳಿ
ಉದಯಕುಮಾರ ಹಬ್ಬು ಕಿನ್ನಿಗೋಳಿಯವರೆ,
ಡಂಕಿನ್ ಝಳಕಿಯವರ ವಾದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ಗಮನಿಸಿದರೆ, “ವಚನಗಳನ್ನಾಗಲಿ ಇನ್ನಿತರ ಯಾವುದೇ ಸಾಹಿತ್ಯ ಪ್ರಕರವನ್ನಾಗಲಿ ಮರುಓದಿಗೆ ಒಳಪಡಿಸುವುದು ಅತ್ಯಂತ ಆರೋಗ್ಯಕರವಾದ ಸಂಗತಿಯಾಗಿದೆ. ನಾನು ಝಳಕಿಯವರನ್ನು ಹಾಗಾಗಿ ಅಭಿನಂದಿಸುತ್ತೇನೆ. ಆದರೆ ಆ ಮರುಓದು ಆಯಾ ಗ್ರಂಥಗಳಿಗೆ ನ್ಯಾಯವನ್ನೊದಗಿಸಬೇಕಲ್ಲವೇ?” ಇದರರ್ಥ ವಚನಗಳು ಜಾತಿವ್ಯವಸ್ಥೆಯ ವಿರೋಧಿಸುತ್ತಿದ್ದವು ಎಂದು ಹೇಳಿದರೆ ಮಾತ್ರವೇ ಆ ಗ್ರಂಥಗಳಿಗೆ ನ್ಯಾಯವನ್ನೊದಗಿಸಿದಂತಾಗುತ್ತದೆ ಎಂದು ಹೇಳುವಂತಿದೆ. ಒಂದೊಮ್ಮೆ ಹಾಗೇ ಆಗಿದ್ದರೇ, ವಚನಗಳನ್ನು ಮರು ಓದಿಗೆ ಒಳಪಡಿಸುವ ಅಗತ್ಯವೇ ಇಲ್ಲವಲ್ಲ. ಕಾರಣ ಸ್ಪಷ್ಟವಾಗಿಯೇ ಇದೆ,ಆಧುನಿಕ ವಿದ್ವಾಂಸರು ವಚನಗಳನ್ನು ಹಾಗೆಯೆ ಗುರಿತಿಸಿದ್ದಾರೆ.
ವಚನಗಳು ಜಾತಿವ್ಯವಸ್ಥೆಯನ್ನು ವಿರೋಧಿಸತ್ತಿದ್ದವು ಎಂದು ಹೇಳಲು ಸಾಕಷ್ಟು ಪುರಾವೆಗಳಿವೆ ಆದ್ದರಿಂದ ಅವು ಜಾತಿವಿರೋಧಿಗಳೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎನ್ನುತ್ತೀರಿ. ಡಂಕಿನ್ ರವರು ಈಗಾಗಲೇ ಅವರ ವಾದವನ್ನು ಪುರಾವೆ ಸಹಿತ ಪ್ರಸ್ತುತ ಪಡಿಸಿರುತ್ತಾರೆ. ಆದ್ರಿಂದ ದಯವಿಟ್ಟು ತಾವೂ ಸಹ ವಚನಗಳು ಜಾತಿವಿರೋಧಿ ಎನ್ಪುನುವುದಕ್ಕೆ ಸಾಕಷ್ಟು ವಚನಗಳು ಜಾತಿವಿರೋಧವಾಗಿ ಮಾತನಾಡುತ್ತವೆ ಎನ್ನುವುದರ ಬದಲಾಗಿ ಅವು ಯಾವುವು, ಜಾತಿವ್ಯವಸ್ಥೆಯ ಕುರಿತು ಎನು ಹೇಳುತ್ತವೆ,ಏಂಬುದಕ್ಕೆ ಪುರಾವೆಯನ್ನು ತೋರಿಸಿಕೊಟ್ಟರೇ ನಮ್ಮಂತ ಸಾಮಾನ್ಯ ಓದುಗರಿಗೆ ವಚನಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಸಹಾಯವಾಗತ್ತದೆ.
ಇನ್ನೂ ನಿಮ್ಮ ಪ್ರತಿಕ್ರಿಯೆಯ ಎರಡನೇ ಅಂಶ ಡಂಕಿನ್ ಅವರು ತಿಳಿಸುವಂತೆ ಭಾರತದಲ್ಲಿ ಜಾತಿವ್ಯವಸ್ಥೆಯ ಚಿತ್ರಣ ವಸಹಾತುಶಾಹಿಯ ಬಳುವಳಿ ಎಂಬುದನ್ನು ಪ್ಪುವುದು ಆಸಾದ್ಯ. ಕಾರಣ ಭಾರತದಲ್ಲಿ ವಸಹಾತು ಪೂರ್ವದಲ್ಲೇ ಜಾತಿವ್ಯವಸ್ಥೆಯಿತ್ತು, ಅದಕ್ಕೆ ಸಾಕ್ಷಿ ಮನುಧರ್ಮಶಾಸ್ತ್ರದ ಅಥವಾ ಮನುಸ್ಮ್ರತಿಯ ಪ್ರಕಾರ ಅಂದಿನ ಸಮಾಜ ನೆಡೆಯುತ್ತತ್ತು ಎಂಬುದಾಗಿ ಕಾಳಿದಾಸನ ರಘುವಂಶವನ್ನು ಆಧಾರವಾಗಿ ಕೊಡುತ್ತೀರಿ, ಹಾಗೆಯೇ ‘ಆಧುನಿಕ ಸಮಾಜವು ಮನುವಿನ ಧ್ಯೇಯಗಳನ್ನು ಮನ್ನಣೆ ಮಾಡುತ್ತಿಲ್ಲ ಎಂಬ ಬಾಬು ಜಗಜೇವನ ರಾಮ್ ಅವರ ಅಭಿಪ್ರಾಯವನ್ನು ಒಪ್ಪುತ್ತೀರಿ. ಆದರೆ ಆಧುನಿಕ ಸಮಾಜದಲ್ಲಿಯೂ ಜಾತಿವ್ಯವಸ್ಥೆಯಿದೆಯೆಂದು,ಅದನ್ನು ನಾಶ ಮಾಡಬೇಕೆಂಬ ಚಳುವಳಿಗಳು ನೆಡೆಯುತ್ತಲೇ ಇವೆ. ಆದರೆ ಜಾತವ್ಯವಸ್ಥೆ ಭಾರತದಲ್ಲಿ ಮೊದಲಿನಿಂದಲೂ ಇತ್ತು ಎಂದು ವಿವರಿಸಲು ಬಳಸುತ್ತಿರುವ ಮನುಧರ್ಮಶಾಸ್ತ್ರದ ಬಗ್ಗೆ ಮಾತ್ರ ಈ ಸಮಾಜದಲ್ಲಿ ಬದುಕುತ್ತಿರುವ ಸಾಮಾನ್ಯರಿಗೆ ಗತ್ತಿಲ್ಲ ಅದರ ಪ್ರಕಾರ ಬದುಕುತ್ತಿಲ್ಲ. ಇದರಲ್ಲೇನೋ ಸಮಸ್ಯೆಯಿದೆಯೆಂದು ಅನಿಸುತ್ತದೆ…

ನಾನು ಝಳಕಿಯವರ ಲೇಖನವನ್ನು ಚಿಂತನಬಯಲು’ ಪತ್ರಿಕೆಯಲ್ಲಿ ಪೂರ್ಣ ಪ್ರಮಾಣದ ಲೇಖನವನ್ನು ಓದಿದ್ದೇನೆ. ‘ಪ್ರಜಾವಾಣಿ’ ಯಲ್ಲಿ ಹೇಳಿದ್ದರಿಗಿಂತ ಅದು ಭಿನ್ನವಾಗಿಲ್ಲ. ವೀಣಾ ಅವರುಕೇಳಿದ ವಚನಗಳ ಪುರಾವೆ ಕೊಡುತ್ತಿದ್ದೇನೆ. ಮೊದಲ ವಚನ ‘ಬಸವಣ್ಣನವರ ವಚನ ‘ ಎಂತಹನಾದರೇನು ಲಿಂಗ ಮುಟ್ಟದವನೇ ಕೀಳು ಜಾತಿ. 2ನೇ ವಚನ ‘ ವ್ಯಾಸ ಬೋಯಿತಿಯ ಮಗ ….ಕುಲವನರಸದಿರಿಂ ಭೋ ಶ್ವಪಚ್ಚೋಪಾದಿಯಾದರೇನು ! ಶಿವಭಕ್ತನೇ ಕುಲಜನು..’3ನೇ ವಚನ ‘ ಕಾಶಿ ಕಮ್ಮರನಾದ …ಇತ್ಯಾದಿ.

4ನೇ ವಚನನ ‘ಜಾತಿವಿಡಿದು ಸೂತಕವನರಸುವೆ ಜ್ಯೋತಿವಿಡಿದು ಕತ್ತಲೆಯನರಸುವೆ ಇದೇಕೋ ಮರುಳ ಮಾನವಾ? ಜಾತಿಯಲಿ ಅಧಿಕನೆಂಬೆ ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನು? ಭಕ್ತ ಶಿಖಾಮಣಿ ಎಂದುದು ವಚನ…ಇತ್ಯಾದಿ 5ನೇ ವಚನ ‘ ಜಾತಿ ವಿಜಾತಿಯಾದರೇನು? ಅಜಾತ ಶರಣೆನ್ನದವನು ಆತನೇ ಹೊಲೆಯಾ 6ನೇ ವಚನ ‘ಚತುರ್ವೇದಿಯಾದರೇನು? ಲಿಂಗವಿಲ್ಲದವನೇ ಹೊಳೆಯ. ಅವ ಕುಲವಾದರೇನು ಶಿವಲಿಂಗವಿದ್ದವನೇ ಕುಲಜನು…ಕುಲವಾನರಸುವರೆ ಶರಣರಲ್ಲಿ ವರ್ಣ ಸಂಕರನಾದ ಬಳಿಕ?
7ನೇ ವಚನ ದೇವ ದೇವಾ ಬಿನ್ನವಧಾರು ವಿಪ್ರ ಮೊದಲು ಅಂತ್ಯಜ ಕ್ಡೆಯಾಗಿ ಶಿವಭಕ್ತರಾದವರನ್ನೆಲ್ಲನೊಂದೆ ಎಂಬೆ. ಉಯಿನ್ನು ಸಿದ್ಧರಾಮರ ವಚನಗಳು’ ಕುಲವೆಂದು ಹೋರಾಡುವ ಅಣ್ಣಗಳಿರಾ ಕೇಳಿರೋ ಕುಲವೆ ದೋಹರಣ, ಕುಲವೆ ಮಾದಾರಣ, ಕುಲವೇ ದೂರ್ವಾಸನ, ಕುಲವೆ ವ್ಯಾಸನ, ಕುಲವೇ ವಾಲ್ಮೀಕನ, ಕುಲವೇ ಕೌಂಡಿನ್ಯನನ ಕುಲವನೋಳ್ಪರೆ ಹುರುಳಿಲ್ಲ. ಅವರ ನಡೆ ನೋಳ್ಪರೆ ನಡೆಯುವವರು ತ್ರಿಲೋಕದಲ್ಲಿಲ್ಲ ನೋಡಾ ಅಂಬಿಗರ ಚೌಡಯ್ಯ ‘ ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣವ ಕೊಂಡುಹೋಗುವ ಗುರುವಿನ ಕಂಡರೆ ಕೆಡವಿಹಾಕಿ ಮೂಗನೇ ಕೊಯ್ದು….ಇತ್ಯಾದಿ. ‘ನನ್ನ ಕುಲ ಹೆಚ್ಚು ನಿನ್ನ ಕುಲ ಕಡಿಮೆ ಎಂಬುವರನು ಮೆಚ್ಚ ನಮ್ಮ ಅಂಬಿಗರ ಚೌಡಯ್ಯ. ಸೋದ್ದಳಾ ಬಾಚರಸನ ವಚನ ‘ ಬ್ರಾಹ್ಮಣನೇ ಅಧಿಕವೆಂದೆಂಬಿರಿಭೋ, ಅದು ಮಿಥ್ಯ ‘ವರ್ಣಾನಾಮ್ ಬ್ರಾಹ್ಮಣೋ ದೈವ’ ‘ವರ್ಣಾನಂ ಬ್ರಾಹ್ಮಣೋ ಗುರುಃ’ ಎಂಬ ಶ್ರುತಿಯನರಿಡು ದ್ವಿಜರು ತಾವು ಗುರುವೆಂಬ ಪರಿಯ ನೋಡಾ …ಎಂತು ಕುಲದೊಳಗೆ ಇದ್ದು ಏ ಕುಲದ ಮಾತಾಡುವ ದ್ವಿಜ ಭ್ರಮಿತರರೇನೆಂಬೆ ಸೋದ್ದಳಾ.’ ಈವಿಷ್ಟಲ್ಲದೆ ಇನ್ನೂ ಅನೇಕ ವಚನಗಳಿರಬಹುದು.
ನಾನೇನು ಸರ್ವಜ್ನನಲ್ಲ.ಆದರೂ ನಾನು ವಚನಗಳ ಕುರಿತು ಅವುಗಳು ಕೇವಲ ಜಾತಿ ವಿರೋಧವನ್ನು ಮಾತ್ರ ಹೇಳಿಲ್ಲ ಇನ್ನಿತರ ವಿಷಯಗಳ ಕುರಿತಾಗಿಯೂ ಹೇಳಿವೆ ಎಂದು ನನ್ನ ಪತ್ರದಲ್ಲಿ ಹೇಳಿದ್ದೇನೆ. ವಚನಗಳು ಸುಂದರ ಕಾವ್ಯವನ್ನಾಗಿಯೇ ನಾವು ಸ್ವೀಕರಿಸಿ ಅವುಗಳ ಸಾಹಿತ್ಯಿಕ ಮೌಲ್ಯಗಳ ಕುರಿತು ಚರ್ಚಿಸಿದರೆ ಅವುಗಳು ಕೊಡುವ ಅನುಭಾವಗಳನ್ನು ಮನಾಗತ ಮಾಡಿಕೊಂಡರೆ ಈ ಜಾತಿ ವಿಷಯ ಬಿಟ್ಟು ಬಿಟ್ಟರೆ ನಮಗೆ ಸ್ಂಶೋಧನೆ ಮಾಡಲು ಸಾಕಷ್ಟು ವಿಷಯಗಳಿವೆ. ಅಲ್ಲವೇ?

‍ಲೇಖಕರು G

April 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. ಪು. ಸೂ . ಲಕ್ಷ್ಮೀನಾರಾಯಣ ರಾವ್

    ‘ದಯವಿಲ್ಲದಾ ಧರ್ಮವಾವುದಯ್ಯ ?’ ,’ಕುಲವೇನೋ ಅವನ್ದಿರ ಕುಲವೇನೋ ?’ ಎಂಬ ಬಸವಣ್ಣನವರ ಪ್ರಶ್ನೆಯ ಹಿಂದೆ ಆಗಿನ ಸಮಾಜದಲ್ಲಿ
    ದೇವರು, ಧರ್ಮ,ಕುಲ ,ಮತ ಮುಂತಾದವುಗಳ ಹೆಸರಲ್ಲಿ ಆಗಬಾರದ್ದು ಆಗುತ್ತಿತ್ತು ಅದಕ್ಕೆ ಅದನ್ನು ಪ್ರಶ್ನಿಸುವ ಅನಿವಾರ್ಯತೆ ಉಂಟಾಯಿತು ಅಂತ ಗೊತ್ತಾಗುತ್ತೆ .
    ಇನ್ನೂ ಮೊದಲೇ ಪಂಪನು’ ಕುಲಂ ಕುಲಮಲ್ತು ,ಚಲಂ ಕುಲಂ ,ಗಣಂ ಕುಲಂ ,ಅಭಿಮನಮೊಂದೆ ಕುಲಂ ,ಅಣ್ಮು ಕುಲಂ ‘ಎಂದು ಆರ್ಭಟಿಸಿದ್ದು
    ಕೂಡ ಹತ್ತನೇ ಶತಮಾನದಲ್ಲಿಯೂ ಈ ಕುಲದ ಹೆಸರಲ್ಲಿ ಶೋಷಣೆ ನಡೆಯತ್ತಿತ್ತು ಅಂತ ಸೂಚನೆಯಲ್ಲವೇ ? ಈ ತರದ ಉದಾಹರಣೆಗಳು
    ನಮ್ಮ ಇತಿಹಾಸದುದ್ದಕ್ಕೂ ಹೇರಳವಾಗಿ ಸಿಗುತ್ತಿದ್ದರೂ ವಸಾಹತುಕಾಲಮಾನದಲ್ಲಿಯೇ ಈ ಜಾತಿವಿರೋಧ ಚಿಂತನೆ ಹುಟ್ಕೊಂಡಿದ್ದು ಅಂತ
    some ಶೋಧನೆ ಮಾಡುವುದರ ಹಿಂದೆ ಇರುವ ಉದ್ದೇಶ ಸುಸ್ಪಷ್ಟ !
    ಅದರಲ್ಲಿಯೂ ವಚನಗಳು ಹುಟ್ಕೊಂಡಿದ್ದೆ ವೈದಿಕಧರ್ಮದ ದುರುಪಯೋಗದ ಪುರೋಹಿತಶಾಹಿಯನ್ನು ವಿರೋಧಿಸಲು .(ಯದಾ ಯದಾ ಹಿ ಧರ್ಮಸ್ಯ
    ಗ್ಲಾನಿರ್ಭವತಿ ಭಾರತ ……). ಇಂತಹ ಸತ್ಯವೊಂದನ್ನು ತಮ್ಮ ಅತಿಬುಧ್ದಿವಂತಿಕೆಯ ಕುತರ್ಕದ ಕಸರತ್ತಿನಲ್ಲಿ ಅಳಿಸಿಹಾಕಲು ಪ್ರಯತ್ನಿಸುವುದು
    ಗಾಬರಿಹುಟ್ಟಿಸುವಂತಹ ನೀಚತನದ್ದು ,ಹೃದಯರಾಹಿತ್ಯದ್ದು ಅಂತ ನಾನು ಭಾವಿಸ್ತೀನಿ .ಈ ಸಂದರ್ಭದಲ್ಲಿ ದೊಡ್ಡವರೆಲ್ಲ ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಬೇಕಾಗುತ್ತೆ .ಪ್ರಜಾವಾಣಿಯ ‘ಸಂಗತ ‘ಅಂಕಣದಲ್ಲಿ ಬಹಳ ಒಳ್ಳೆಯ ಚೆರ್ಚೆಯಾಗುತ್ತಿದೆ .ಆಸಕ್ತರೆಲ್ಲರು ದಯವಿಟ್ಟು ಅತ್ತ ಗಮನ ಹರಿಸಿರಿ

    ಪ್ರತಿಕ್ರಿಯೆ
  2. Dunkin Jalki

    ನಮಸ್ಕಾರ,
    ನೀವು “ವಚನಗಳನ್ನಾಗಲಿ ಇನ್ನಿತರ ಯಾವುದೇ ಸಾಹಿತ್ಯ ಪ್ರಕರವನ್ನಾಗಲಿ ಮರುಓದಿಗೆ ಒಳಪಡಿಸುವುದು ಅತ್ಯಂತ ಆರೋಗ್ಯಕರವಾದ ಸಂಗತಿಯಾಗಿದೆ” ಎಂದು ನನ್ನನ್ನು ಅಭಿನಂದಿಸುತ್ತಲೇ “ವಚನಗಳ ಅನೇಕ ಉದ್ದೇಶಗಳಲ್ಲಿ ಜಾತಿವ್ಯವಸ್ಥೆಯ ವಿರೋಧವೂ ಒಂದು. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ” ಎಂಬ ನಿರ್ಣಯಕ್ಕೆ ಬರುತ್ತೀರಿ. ಇಲ್ಲೊಂದು ವೈರುಧ್ಯ ನಿಮಗೆ ಕಾಣುವುದಿಲ್ಲವೇ? ಹಾಗೆಯೇ ಒಂದು ಮರುಓದು ಆಯಾ ಗ್ರಂಥಗಳಿಗೆ ನ್ಯಾಯವನ್ನೊದಗಿಸಬೇಕು ಎಂಬ ನಿಮ್ಮ ಮಾತಿನ ಅರ್ಥವೂ ಒಂದು ಸಂಧಿಗ್ದತೆಯನ್ನು ಹುಟ್ಟುಹಾಕುತ್ತದೆ: ಮತ್ತೆ ಮತ್ತೆ ಅದೇ (ವಚನಗಳು ಜಾತಿವಿರೋಧಿ ಎಂಬ) ನಿರ್ಣಯಕ್ಕೆ ನಾವು ಬರದೆ ಹೋದರೆ ನಿಮ್ಮ ಪ್ರಕಾರ ವಚನಗಳಿಗೆ ನ್ಯಾಯವನ್ನೊದಗಿಸುವುದು ಸಾಧ್ಯವೇ ಇಲ್ಲ. ಅಲ್ಲವೇ? ಹಾಗಾದರೆ, ವಚನಗಳನ್ನು ಮರುಓದಿಗೆ ಒಳಪಡಿಸುವುದು ಎಂದರೆ ನಿಮ್ಮ ಪ್ರಕಾರ ಏನು? ಇರುವ ಹಳೇಯ ನಿರ್ಣಯವನ್ನು ಚಕಾರವೆತ್ತದೆ ಒಪ್ಪಿಕೊಳ್ಳುವುದೇ?
    ಸಾಕಷ್ಟು ವಚನಗಳು ಅವುಗಳು ಜಾತಿವಿರೋಧ ಎಂಬುದಕ್ಕೆ ಪುರಾವೆಯಾಗಿ ಇವೆ ಎನ್ನುತ್ತೀರಿ. ಬಹುಶಃ ನೀವು ನನ್ನ ಲೇಖನವನ್ನು ಓದಿಯೇ ಇಲ್ಲ ಅನಿಸುತ್ತದೆ ನನಗೆ. ಏಕೆಂದರೆ ನಾನಲ್ಲಿ ಈ ರೀತಿಯ ಪುರಾವೆಗಳು ಇಲ್ಲ ಎಂದೇ ತೋರಿಸುವುದು. ೨೧ ಸಾವಿರಕ್ಕೂ ಮೇಲ್ಪಟ್ಟು ಇರುವ ವಚನಗಳಲ್ಲಿ ನೀವು ನಾಕೈದು ವಚನಗಳನ್ನು ತೆಗೆದು ಪುರಾವೆಯಾಗಿ ತೋರಿಸಿದಿರಿ ಎಂದಿಟ್ಟುಕೊಳ್ಳಿ, ಮಹಿಳೆಯರನ್ನು ಅಥವಾ ಹೊಳೆಯರನ್ನು ಬಯ್ಯುವ ರೀತಿ ಇರುವ ಅದಕ್ಕೂ ದುಪ್ಪಟ್ಟು ವಚನಗಳನ್ನು ನಾನು ತೆಗೆದು ತೋರಿಸಿದರೆ ನಿಮ್ಮ ವಾದವೇನಾಯಿತು? ವಚನಗಳು ಮಹಿಳಾ ಮತ್ತು ಹೊಲೆಯರ ವಿರುದ್ಧವಿರುವ ಸಾಹಿತ್ಯವೆಂದು ಒಪ್ಪಿಕೊಳ್ಳುತ್ತೀರ?
    ವಸಾತುಶಾಹಿ ಆಡಳಿತ ಬರುವವರೆಗೆ ಭಾರತೀಯರಿಗೆ ಜಾತಿ ವ್ಯವಸ್ಥೆ ಇದೆ ಎಂದು ಗೊತ್ತಿರಲಿಲ್ಲ ಮಾತ್ರವಲ್ಲ ಅಂತಹ ಜಾತಿ ವ್ಯವಸ್ಥೆ ಹಿಂದೂ ಇರಲಿಲ್ಲ ಮತ್ತು ಈಗಲೂ ಇಲ್ಲ ಎಂದೇ ನಮ್ಮ ವಾದ. ನೀವು ನಾನು ಸಂಪಾದಿಸಿದ ‘ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೇ?’ ಎಂಬ ಕೃತಿಯನ್ನು ಓದಿ ನೋಡಿ. ಅಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕೊಟ್ಟಿದ್ದೇನೆ.
    ನೀವು ‘ಕಾಳಿದಾಸನು ‘ರಘುವಂಶ’ದಲ್ಲಿ ಹೇಳಿದ ಮಾತನ್ನು ಒಪ್ಪಿಸುತ್ತಾ ಭಾರತದಲ್ಲಿ ಜಾತಿವ್ಯವಸ್ಥೆ ಇದೆಯಲ್ಲಾ ಎನ್ನುತ್ತೀರಾ? ಮನುವನ್ನು ಅಪ್ಪಣೆಯ ಮೇರೆಗೆ ಯಾರಾದರು ನಡೆದುಕೊಂಡರೆ ಅದು ಜಾತಿವ್ಯವಸ್ಥೆ ಇದೆ ಎನ್ನುವುದಕ್ಕೆ ಪುರಾವೆ ಹೇಗಾದೀತು?
    ವಚನಗಳು ಸುಂದರ ಕಾವ್ಯವನ್ನಾಗಿಯೇ ನಾವು ಸ್ವೀಕರಿಸಿ ಅವುಗಳ ಸಾಹಿತ್ಯಿಕ ಮೌಲ್ಯಗಳ ಕುರಿತು ಚರ್ಚಿಸೋಣ ಎನ್ನುತ್ತೀರಿ. ಇದಕ್ಕೆ ಬೇಡವೆಂದು ಹೇಳುವವರಾರು? ವಚನಗಳು ಜಾತಿ-ವಿರೋಧಿ ಎಂಬ ಪ್ರಚಲಿತ ಓದಿನ ವಿರುದ್ಧ ತಾನೇ ನಾವು ನಮ್ಮ ವಾದವನ್ನು ಮಂಡಿಸಿದ್ದು. ಅಂದಮೇಲೆ, ನಿಮ್ಮ ಈ ಸಲಹೆ ಯಾರಿಗೆ ತಲುಪಬೇಕೋ ಅವರಿಗೆ ಇನ್ನೂ ತಲುಪಿಲ್ಲ ಅಂತ ತಾನೇ?
    ಏನಂತೀರ?

    ಪ್ರತಿಕ್ರಿಯೆ
  3. ವೀಣಾ

    ಉದಯಕುಮಾರ್ ಹಬ್ಬುರವರೆ,
    ನೀವು ಕಿರಣ್ ಗಾಜನೂರು ರವರ ಲೇಖನಕ್ಕೆ ನೀಡಿದ ಪ್ರತಿಕ್ರಿಯೆಯನ್ನು,ವಚನಗಳ ಕುರಿತ ನಿಮ್ಮ ಅಭಿಪ್ರಾಯ
    ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಇಲ್ಲಿ ಉಲ್ಲೇಖಿಸುವ ಸಂಧರ್ಭದಲ್ಲಿ ನನ್ನ ಮೊದಲ
    ಪ್ರತಿಕ್ರಿಯೆಯನ್ನು ಇಲ್ಲಿ ಉಲ್ಲೇಖಿಸಿರುತ್ತೀರಿ ಅದಕ್ಕೆ ಧನ್ಯವಾದಗಳು. ಆದರೆ ನಂತರದ ನನ್ನ ಪ್ರತಿಕ್ರಿಯೆಗೆ
    ಹಿಂದಿನ ಲೇಖನದಲ್ಲೇ ಆಗಲೀ ಅಥವಾ ಇಲ್ಲಾಗಲೀ ನೀವು ಉತ್ತರಿಸಿರುವುದಿಲ್ಲ. ನನ್ನ ಪ್ರತಿಕ್ರಿಯೆ ಈ ಮುಂದಿನಂತಿದೆ..
    ವಚನಗಳ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಗಮನಿಸಿದರೆ, ನಿಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ವಚನಗಳು
    ಜಾತಿವಿರೋಧಿಯೆಂದು ಭಾವಿಸಿದರೇ ಮಾತ್ರ ಅವುಗಳಿಗೆನ್ಯಾಯವದಗಿಸಿದಂತೆ ಎಂಬಂತೆ ತಿಳಿಸುತ್ತೀರಿ. ಹಾಗೆಯೇ ನಂತರದ ಪ್ರತಿಕ್ರಿಯೆಯಲ್ಲಿ “ವಚನಗಳು ಸುಂದರ ಕಾವ್ಯವನ್ನಾಗಿಯೇ ನಾವು ಸ್ವೀಕರಿಸಿ ಅವುಗಳ ಸಾಹಿತ್ಯಿಕ ಮೌಲ್ಯಗಳ ಕುರಿತು ಚರ್ಚಿಸಿದರೆ ಅವುಗಳು ಕೊಡುವ ಅನುಭಾವಗಳನ್ನು ಮನಾಗತ ಮಾಡಿಕೊಂಡರೆ ಈ ಜಾತಿ ವಿಷಯ ಬಿಟ್ಟು ಬಿಟ್ಟರೆ ನಮಗೆ ಸಂಶೋಧನೆ ಮಾಡಲು ಸಾಕಷ್ಟು ವಿಷಯಗಳಿವೆ. ಅಲ್ಲವೇ?” ಎಂದು ವಿವರಿಸುತ್ತೀರಿ.
    ಇದು ನಿಮ್ಮ ಅಭಿಪ್ರಾಯದಲ್ಲೇ ಇರುವ ತದ್ವಿರುದ್ಧ ನಿಲುವುಗಳಾಗಿವೆ. ಆದರೂ ಡಂಕಿನ್ ಝಳಕಿಯವರು ತಮ್ಮ ವಾದದ ಮೂಲಕ ವಚನಗಳ ಬಗ್ಗೆ ತಿಳಿಸುತ್ತಿರುವುದು, ನಿಮ್ಮ ಈ ಎರಡನೇಯ ಪ್ರತಿಕ್ರಿಯೆಯನ್ನೇ ಅನಿಸುತ್ತದೆ ಅಲ್ಲವೇ?

    ಪ್ರತಿಕ್ರಿಯೆ
  4. ಉದಯಕುಮಾರ್ ಹಬ್ಬು

    ಮಾನ್ಯ ಝಳಕಿಯವರು ಮಂಡಿಸಿದ ವಾದಕ್ಕೆ ನನ್ನ ಉತ್ತರ ಹೀಗಿದೆ: ವಚನಗಳು ಭಾರತದ ಅಧ್ಯಾತ್ಮಿಕ ವಿಕಾಸದ ಚರಿತ್ರೆಯಲ್ಲಿ ಒಂದು ಘಟ್ಟ. ದಿನಬೆಳಿಗ್ಗೆದ್ದರೇ ನಾವು ನಿತ್ಯ ಜೀವನದಲ್ಲಿ ಜಾತಿ ಎಂಬ ಶಬ್ದವನ್ನು ತುಂಬಾ ಸಲ ಬಳಸಿದ್ದನ್ನು ನಾವು ಕಾಣಹುದಾಗಿದೆ. ನಾನು ಹೇಳಿದ್ದು ವಚನಗಳ ಸಂಖ್ಯೆಯ ಆಧಾರದ ಮೇಲೆ ಅವುಗಳು ಜಾತಿವಿರೋಧವಲ್ಲ ಎನ್ನುವುದು ಒಂದು ವಾದ. ಆದರೆ ಅದಕ್ಕೆ ತದ್ವಿರುದ್ಧವಾದ ಅನೇಕ ವಾದಗಳು ಪ್ರಚಲಿತದಲ್ಲಿವೆ. ಆದರೆ ಅವಷ್ಟೆ ನಾವು ಹೇಳಿದ್ದೆ ಸತ್ಯ ಎನ್ನುವುದೂ ಎಷ್ಟು ಸತ್ಯ? ಜಾತಿ ವಿರೋಧಿ ವಚನಗಳಿದ್ದಷ್ಟೆ ಸಕಲ ಜನರಿಗೆ ಲೇಸಬಯಸುವ ವಚನಗಳೂ ಇವೆ. ನಮ್ಮ ಸಂವಿಧಾನದಲ್ಲಿಯೇ ಜಾತಿಯ ಕುರಿತು ಮೀಸಲಾತಿ ಕುರಿತು ಸಾಕಷ್ಟು ವಿವರಗಳಿವೆ. ಒಬ್ಬನ ಜಾತಿಯೊಂದಿಗೆ ಹಲವು ಗುಣಗಳನ್ನು, ಅವಗುಣಗಳನ್ನು ಆರೋಪಿಸಲಾಗುತ್ತದೆ. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎಂದರೆ ಅಥವಾ ಇರಲಿಲ್ಲ ಎಂದರೆ ಒಪ್ಪದ ವಿಷಯ. ಗಾಂಧೀಜಿ ಅಸ್ಪ್ರಷ್ಯತೆಯ ಕುರಿತು ಹೇಳಿದ್ದು ಮತ್ತು ಅವರನ್ನು ಹರಿಜನ ಹೇಳಿದ್ದು ಯಾಕಿರಬಹುದು? ನಾನು ಮುಂದಿನ ಜನ್ಮ ಅಂತಿದ್ದಾರೆ ಭಂಗಿಯಾಗಿ ಹುಟ್ಟಬೇಕು ಎಂದು ಗಾಂಧೀಜಿ ಹೇಳಿದರಂತೆ. ನಾನು ಅನುಭವಿಸಿದ್ದನ್ನು ಕಂದದ್ದನ್ನು ಹೇಳಿದೆನೆ ಹೊರತೂ ಯಾವುದೇ ಸಿದ್ಧಾಂತಕ್ಕೆ ಬದ್ಧನಾಗಿ ಹೇಳಲ್ಲೂ ನನಗೆ ಕಷ್ಟ ಸಾಧ್ಯ. ವಚನಗಳು ಕೇವಲ ಜಾತಿ ವ್ಯವಸ್ಥೆ ವಿರುದ್ಧ ಹೇಳುತ್ತಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಅದು ಪ್ರಸ್ತುತಪಡಿಸುವ ಹಲವಾರು ಮಾನವ್ಯ ಸಿದ್ಧಾಂತಗಳಲ್ಲಿ ಜಾತಿಯ ಹೆಸರಿನಲ್ಲಿ ಮಾಡಿದ ಅಪಚಾರಗಳ ಖಂಡನೆ ಇವೆ. ಇಷ್ಟು ಮಾತ್ರ ಹೇಳಬಲ್ಲೆ. ಉದಯಕುಮಾರ ಹಬ್ಬು ಕಿನ್ನಿಗೋಳಿ

    ಪ್ರತಿಕ್ರಿಯೆ
    • ಡಂಕಿನ್ ಝಳಕಿ

      ಹೌದು, ತಡಿವಿರುದ್ಧವಾದ ಹಲವು ವಾದಾಗಳಿವೆ. ಹೀಗಿರುವಾಗ ಸರಿಯಾದ ವಾದ ಯಾವುದು ಎಂಬ ಪ್ರಶ್ನೆ ಹುಟ್ಟುವುದು ಸಹಜ. ಆಗ ನಾವು ತತ್ವ ಶಾಸ್ತ್ರದ ಮೊರೆ ಹೋಗ ಬೇಕಾಗುತ್ತದೆ. ಅದು ಇಂತಹ ಸಮಯದಲ್ಲಿ ಯಾವ ವಾದವನ್ನು ಏಕೆ ಹೆಚ್ಚು ಸರಿ ಎಂದು ಒಪ್ಪಿಕೊಳ್ಳಬಹುದು ಎಂಬುದನ್ನು ವಿವರಿಸುತ್ತದೆ. ಅಂದರೆ ಈ ರೀತಿಯ ಚರ್ಚೆಯಲ್ಲಿ ಇಳಿಯಲು ತತ್ವಶಾಸ್ತ್ರದ ಮತ್ತು ತರ್ಕದ ಜ್ಞಾನ ಬಹು ಮುಖ್ಯ.
      “ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎಂದರೆ ಅಥವಾ ಇರಲಿಲ್ಲ ಎಂದರೆ ಒಪ್ಪದ ವಿಷಯ.” ಬರೀ ಹೀಗೆ ಹೇಳಲಿಕ್ಕೆ ಬಹಳ ಹೇಳಬಹುದು. ಮಾಡಿದ ವಾದವನ್ನು ಸಮರ್ಥನೆ ಕೂಡ ಮಾಡಬೇಕು.
      ಗಾಂಧಿಯವರು ಹೇಳಿದರು ಎಂಬ ಒಂದೇ ಕಾರಣಕ್ಕೆ ಅದು ನಿಜವಾಗಲು ಸಾಧ್ಯವಿಲ್ಲವಲ್ಲ.

      ಪ್ರತಿಕ್ರಿಯೆ
  5. ಉದಯಕುಮಾರ್ ಹಬ್ಬು

    ಮಾನ್ಯರೇ, ಈ ಒಂದು ವಚನ ಹೇಳುವುದನ್ನು ನೋಡಿ.’ ಹೊಲೆಯೊಳಗೆ ಹುಟ್ಟಿ ಕುಲವನರಸುವುದಿಲ್ಲವೋ, ಮಾತಂಗಿಯ ಮಗ ನೀನು! ಸತ್ತುದವನೆಳೆವನೆತ್ತಣ ಹೊಳೆಯ? ಹೊತ್ತು ಕೊಂಡು ನೀವು ಕೋಲುವಿರಿ. ಶಾಸ್ತ್ರವೆಂಬುದು ಹೋತಿಂಗೆ ಮಾರಿ. ವೇದವೆಂಬುದು ನಿಮಗೆ ತಿಳಿಯದು. ನಮ್ಮ ಕೂಡಲಸಂಗಮದೇವನ ಶರಣಾರೂ ಕರ್ಮವೀರಹಿತರು. ಶರಣಸನ್ನಿಹಿತರು, ಅನುಪಮ ಚರಿತ್ರರೂ. ಅವರಿಗೆ ತೋರಲು ಪ್ರತಿ ಇಲ್ಲವೋ!’ ಹುಟ್ಟುವುದೇ ಎಲ್ಲರೂ ಮೈಲಿಗೆಯಲ್ಲಿ. ಹೀಗಿರುವಾಗ ಕುಲವನ್ನು ಹುಡುಕಲು ಹೊರಟಿರುವ ನೀನೇ ಚಂಡಾಳ ಸ್ತ್ರೀಯ ಮಗ. ಸತ್ತಂತಹ ಪ್ರಾಣಿಯನ್ನು ಎಳೆದು ತರುವವನು ಚಂಡಾಲನಲ್ಲ. ಜೀವವುಳ್ಳ ಪ್ರಾಣಿಯನ್ನು ತಂದು ನಿಕ್ಷ್ಕಾರಣವಾಗಿ ಅವನ್ನು ಯಜ್ನ, ಯಾಗಾದಿಗಳಲ್ಲಿ ಬಲಿ ಕೊಡುವ ನೀವು ಹೊಲೆಯರು. ನಿಮ್ಮ ಶಾಸ್ತ್ರ ವು ಹೋತನಿಗೆ ಮೃತ್ಯುವಾಗಿದೆ.’ವೇದ’ ಎಂಬುದು ನಿಮಗೆ ವೈದಿಕರೆನಿಸಿರುವ ನಿಮಗೆ ತಿಳಿಯದು. ನಮ್ಕೂಡಲಸಂಗನ ಶರಣರು ಇಂತಹ ಯಾವ ದುಷ್ಕರ್ಮವನ್ನು ಮಾಡದ ಭಕ್ತರು. ಅವರಿಗೆಸರಿತೂಗುವ ಗುಣಸಾಮರ್ಥ್ಯ ಬೇರೆ ಯಾರಿಗೂ ಕಾಣದು.’ ಈ ವಚನವು ವೇದದಲ್ಲಿನ ಕರ್ಮಕಾಂಡದಲ್ಲಿರುವ ಯಜ್ನದಲ್ಲಿ ಪ್ರಾಣಿಬಲಿಯನ್ನು ಖಂಡಿಸಿ ಬರೆದ ವಚನ. ಮಹಾಭಾರತದಲ್ಲಿನ ಅರಣ್ಯ ಪರ್ವದಲ್ಲಿನ ಒಂದು ಕಥೆ ಹೀಗಿದೆ: ಗಂಧಮಾದನ ಪರ್ವತದಲ್ಲಿ ಕಾಡಿನಲ್ಲಿ ಬೇಟೆಗೆ ಹೋಗಿದ್ದಾಗ ಒಂದು ಅಜಗರದ ಕೈಗೆ ಸಿಕ್ಕಿಬಿದ್ದನು. ಆಗ ಧರ್ಮರಾಜನು ಭೀಮನನ್ನು ಹುಡುಕುತ್ತಾ ಬಂದಾಗ ಏ ಅಜಗರವು ಅದು ಕೇಳುವ ಪ್ರಶ್ನೆಗೆ ಉತ್ತರಗಳನ್ನು ಕೊಟ್ಟರೆ ಭೀಮನನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತು. ಅದರ ಪ್ರಶ್ನೆ:” ಬ್ರಾಹ್ಮಣನು ಯಾರು? ಅವ್ನು ತಿಳಿದುಕೊಳ್ಳಬೇಕಾದದ್ದೇನು? ಉತ್ತರ-” ಸತ್ಯ, ದಾನ,ಶೀಲಾ, ದಮ, ದಯೆ ಇವು ಯಾರಲ್ಲಿ ಕಂಡುಬರುತ್ತವೆಯೋ ಅವನೇ ಬ್ರಾಹ್ಮಣ. ಅಜಗರ-“ಶೂದ್ರನಲ್ಲಿ ಸತ್ಯ ದಾನ ಮುಂತಾದ ಗುಣಗಳು ಇರುತ್ತವೆ. ಯುಧಿಷ್ಠಿರ_” ಶೂದ್ರನಲ್ಲಿ ಅವು ಇದ್ದು, ಬ್ರಾಹ್ಮಣನಲ್ಲಿ ಇಲ್ಲದಿದ್ದರೆ ಅಂತ ಶೂದ್ರನು ಶೂದ್ರನೂ ಅಲ್ಲ, ಅಂತ ಬ್ರಾಹ್ಮಣ ಬ್ರಾಹ್ಮಣನೂ ಅಲ್ಲ. ಅಜಗರೆ-:” ಬ್ರಾಹ್ಮಣನಿಗೆ ವಿಶೇಷ ಕರ್ಮವೇನೂ ಇಲ್ಲದೆ ಅವನನ್ನು ಅವನ ನಡತೆಯಿಂದಲೇ ನಿರ್ಣಯಿಸಬೇಕಾದರೆ ಜಾತಿಯು ವ್ಯರ್ಥವಾಗುತ್ತದಲ್ಲಾ? ಯುಧಿಷ್ಠಿರ-:” ಎಲ್ಲರಲ್ಲಿಯೂ ಎಲ್ಲರೂ ಮಕ್ಕಳನ್ನು ಪಡೆದು ವರ್ಣಗಳು ಬೆರೆತು ಹೋಗಿರುವುದರಿಂದ ಹುಟ್ಟುಜಾತಿಯಿಂದಲೇ ಪರೀಕ್ಷಿಸಿ ಇದನ್ನು ನಿರ್ಣಯಮಾಡುವುದಕ್ಕಾಗುವುದಿಲ್ಲ. ಆದ್ದರಿಂದ ಶೀಲವೇ ಮುಖ್ಯ.’
    ಇನ್ನೂ ‘ಮನುಸ್ಮೃತಿ’ ಯಿಂದ ಉದಾಹರಣೆಗಳು: 10ನೇ ಅಧ್ಯಾಯ 1ನೇ ಶ್ಲೋಕ ‘ತಮ್ಮ ತಮ್ಮ ಜಾತಿ (ವರ್ಣ)ಗಳಿಗೆ ವಿಹಿತವಾದ ಕರ್ತವ್ಯಗಳನ್ನು ಅಚ್ಚರಿಸುತ್ತಿರುವ ದ್ವಿಜಾತಿಯವರು – ಬ್ರಾಹ್ಮಣ- ಕ್ಷತ್ರಿಯ- ವೈಶ್ಯರೂ ವೇದಾಧ್ಯಯನ ಮಾಡಬೇಕು. ಬ್ರಾಹ್ಮಣನು ಮಾತ್ರ ವೇದಗಳನ್ನು ಕಲಿಸಬೇಕು. ಉಳಿದ ಜಾತಿಯವರು ಕಲಿಸಬಾರದು. ಇದು ಶಾಸ್ತ್ರ ನಿರ್ಣಯವು.
    ಜನ್ಮದಿಂದ ಶ್ರೇಷ್ಠನಾಗಿರುವುದರಿಂದ ವಿಷಿಷ್ಠವಾದ ಯೋಗ್ಯತೆಯನ್ನು ಹೊಂದಿರುವುದರಿಂದ ಶ್ರೇಷ್ಕವಾದ ಧರ್ಮನಿಯಮಗಳನ್ನು ಆಚರಿಸುವುದರಿಂದ ವಿಶೇಷವಾದ ಸಂಸ್ಕಾರ ಪಡೆದಿರುವುದರಿಂದ ಬ್ರಾಹ್ಮಣನು ಉಳಿದ ಜಾತಿಯವರಿಗೆಲ್ಲ ಪ್ರಭುವಾಗುತ್ತಾನೆ. 3ನ3 ಶ್ಲೋಕ
    ನಾಲ್ಕು ವರ್ಣಗಳ ಪುರುಷರು, ಅಕ್ಷತಯೋನಿಯಾದ ಶುದ್ಧರಾದ ಸ್ತ್ರೀಯರಲ್ಲಿ ಹುಟ್ಟಿಸಿದಂಥ ಮಕ್ಕಳು ತಂದೆ-ತಾಯಿಯ ಜಾತಿಯವರೆ ಆಗುತ್ತಾರೆ.5ನೇ ಶ್ಲೋಕ.
    ಕ್ರಮವಾಗಿ ತಮಗಿಂತ ಒಂದೊಂದು ಕೆಳಜಾತಿಯ ಸ್ತ್ರೀಯರಲ್ಲಿ ಬ್ರಾಹ್ಮಣಾದಿಗಳಿಂದ ಹ್ಗುಟ್ಟಿದ ಮಕ್ಕಳು ತಂದೆಗಳ ಸೃದೃಶರೆಂದುಆದರೆ ತಂದೆಯ ಜಾತಿಯವರೆ ಆಗಲಾರರು) ಎಕೆಂದರೆ ತಾಯಂದಿರು ಕೆಳಜಾತಿಯವರೂ ದೋಷಯುಕ್ತರೂ ಆಗಿರುತ್ತಾರೆ.
    ಬ್ರಾಹ್ಮಣ ಕನ್ಯೆಯಲ್ಲಿ ಕ್ಷತ್ರಿಯನಿಂದ ಹುಟ್ಟಿದ ಮಗುವಿಗೆ ಸೂತನೆನ್ನುತ್ತಾರೆ. ಬ್ರಾಹ್ಮಣಿಯಲ್ಲಿ ಶೂದ್ರನಿಗೆ ಹುಟ್ಟಿದವನು ಚಾಂಡಾಲ ಎನ್ನಿಸಿಕೊಳ್ಳುತ್ತಾನೆ. 11. 12ನೇ ಶ್ಲೋಕ. ಬಹುಶಃ ನಾನು ಏನು ಹೇಳಲು ಹೊರಟಿದ್ದೇನೆಂದರೆ ಝಳಕಿಯವರ ವಾದವನ್ನು ಸಮರ್ಥಿಸಲು ಇನ್ನೂ ಕೆಲವು ವಿಚಾರಗಳ ಸ್ಪಷ್ಟತೆ ಬೇಕಾಗಬಹುದು. ಉದಯಕುಮಾರ ಹಬ್ಬು, ಕಿನ್ನೀಗೋಳಿ

    ಪ್ರತಿಕ್ರಿಯೆ
  6. ಉದಯಕುಮಾರ್ ಹಬ್ಬು

    ಮಾನ್ಯರೇ ನಾನು ಪದವಿ ತರಗತಿಯಲ್ಲಿ ತರ್ಕಶಾಸ್ತ್ರದ ವಿದ್ಯಾರ್ಥಿಯಾಗಿದ್ದೆ. ಅಲ್ಲಿ ನಾನು ಕಲಿತ ದಿಡಕ್ಟಿವ್ ಲಾಜಿಕ್ ಮತ್ತು ಇಂದಕ್ಟಿವ್ ಲಾಜಿಕ್ ಎಂಬ ಎರಡು ತರ್ಕಶಾಸ್ತ್ರ ವಿಭಾಗವನ್ನು ಕಲಿಯಲಿಕ್ಕಿತ್ತು ದಿಡಕ್ಟಿವ್ ತರ್ಕದ ಒಂದು ಉದಾಹರಣೆ. ಎಲ್ಲ ಮನುಷ್ಯರಿಗೆ ರೆಕ್ಕೆಗಳಿವೆ. ಸಾಕ್ರೆಟೀಸ್ ಒಬ್ಬ ಮನುಷ್ಯ ಆದ್ದರಿಂದ ಸಾಕ್ರೆಟೀಸ್ ನಿಗೆ ರೆಕ್ಕೆಗಳಿವೆ. ಇದು ಒಂದು ಬಗೆಯ ತರ್ಕ ಇನ್ನೊಂದು ತರ್ಕ ಇಂದಕ್ಟಿವ್ ತರ್ಕ. ಇದು ಅನುಭವಧಾರಿತ ತರ್ಕ. ನಾನು ಅನುಭವಧಾರಿತ ತರ್ಕವನ್ನು ಮಾಡುವವನು. ಕೇವಲ ಕೆಲವು ವಚನಗಳಲ್ಲಿ ಮಾತ್ರ ಜಾತಿವಿರೋಧವಾದ ಮಾತುಗಳಿವೆ ಎಂದಾಕ್ಷಣ ವಚನಗಳು ಜಾತಿ ವಿರೋಧದ ಕುರಿತು ಏನನ್ನು ಹೇಳುವುದಿಲ್ಲ ಎಂದರೆ ಹೇಗೆ? ಉಳಿದ ವಚನಗಳು ಬಹಳಷ್ಟನ್ನು ಹೇಳಿರಬಹುದು. ಆದರೆ ಜಾತಿ ವಿರೋಧ ಕುರಿತು ಹೇಳಿದ ವಚನಗಳನ್ನು ಏನು ಮಾಡೋಣ? ಮತ್ತು ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಇರಲಿಲ್ಲ ಎಂದರೆ ಇಂದಿನ ಜಾತಿಸಂಘಗಳು ಎನನ್ನು ಹೇಳುತ್ತಿವೆ? ಮರ್ಯಾದಾ ಹತ್ಯೆ ಯಾಕಾಗುತ್ತಿದೆ? ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಮೀಸಲಾತಿ ಹೇಗೆ ನುಸುಳಿತು? ಹಿಂದೆ ಏಕಲವ್ಯನ ಕಥೆ ಏನನ್ನು ಹೇಳುತ್ತದೆ? ಕರ್ಣನ ಕಥೆಯು ಕೂಡ ಏನನ್ನು ಹೇಳುತ್ತಿದೆ? ನಾನು ಕೂಡ ಜಾತಿ ವ್ಯವಸ್ಥೆಯಿಂದ ನೊಂದವನೆ ಅಂದರೆ ಹೇಗಾದೀತು? ನಾನು ಒಂದು ಜಾತಿಸಂಘದ ಸಭೆಗೆ ಹೋದೆ. ಅಲ್ಲಿ ನೆರೆದವರು ನನ್ನನ್ನು ಅವರ ಜಾತಿಯವನೆಂದೆ ತಿಳಿದರು. ನಾನು ಅವರಲ್ಲಿ ಅವರ ಜಾತಿಯವನಲ್ಲ ಎಂದಾಗ ಅವರು ನನ್ನನ್ನು ಬೇರೆಯಾಗಿ ಕಂಡರು. ದಯಾನಂದ ಸರಸ್ವತಿಯವರು ಯಾಕೆ ವಿಷಪ್ರಾಶನದಿಂದ ಹತ್ಯೆಯಾದರು? ಹಗಲನ್ನು ಹಗಲು ಎಂದು ಸಾಬೀತುಪಡಿಸಲು ಉರಿವ ಸೂರ್ಯ, ಬೆಳಗುವ ಬೆಳಕು ಸಾಕ್ಷಿ.ಹಾಗಿರುವಾಗ ಇದು ಹಗಲಲ್ಲ ರಾತ್ರಿ ಎಂದರೆ ಯಾರು ನಂಬುತ್ತಾರೆ? ತರ್ಕಕ್ಕೂ ಒಂದು ಸಾಧಾರಬೇಕಲ್ಲವೇ?ಆ ಆಧಾರ ಗಟ್ಟಿಯಾಗಿರಬೇಕಲ್ಲವೇ? ಉದಯಕುಮಾರ ಹಬ್ಬು ಕಿನ್ನಿಗೋಳಿ

    ಪ್ರತಿಕ್ರಿಯೆ
    • ವೀಣಾ.

      ಉದಯಕುಮಾರ್ ಅವರೆ,
      ನಿಮ್ಮ ಪ್ರಶ್ನೆಗಳಿಗೆ ಡಂಕಿನ್ ಝಳಕಿಯವರು ತಮ್ಮ ವಾದದಲ್ಲಿ ಉತ್ತರಿಸಿದ್ದಾರೆ.ಅದೆನೆಂದರೆ, ವಸಹಾತುಶಾಹಿ ಪ್ರಜ್ಞೆಯಿಂದಾಗಿ ನಮ್ಮ ಅನುಭವಗಳನ್ನೇ ನಾವು
      ಸರಿಯಾಗಿ ಗ್ರಹಿಸಲು ವಿಫಲವಾಗುತ್ತಿದ್ದೇವೆಯೆಂದು. ಆದ್ದರಿಂದ ನಮ್ಮ ಅನುಭವಧಾರಿತ ತರ್ಕದ ಸೂತ್ರ ಯಾವುದು ಎಂಬುದನ್ನು ಗುರುತಿಸುವ ಅಗತ್ಯವಿದೆ.
      ಜಾತಿವ್ಯವಸ್ಥೆಯೆಂಬುದು ವಸಹಾತುಶಾಹಿಯ ಕೊಡುಗೆಯಾಗಿರುವಾಗ ಅದರ ಚೌಕಟ್ಟಿನಲ್ಲಿ ವಚನಗಳನ್ನು ಗ್ರಹಿಸಿದಾಗ ಅವು ಜಾತಿ ವಿರೋಧಿ ಚಳುವಳಿಗಳಂತೆ
      ಗುರುತಿಸಲಾಗಿದೆ. ಅದೇ ರೀತಿ ಅಸ್ತಿತ್ವದಲ್ಲಿರುವ ಜಾತಿ ಸಂಘಗಳು ಸಹ ಈ ಚೌಕಟ್ಟಿನಲ್ಲಿಯೇ ಇಲ್ಲಿನ factಗಳನ್ನು ಗ್ರಹಿಸಿ
      ಅಸ್ತಿತ್ವಕ್ಕೆ ಬಂದಿವೆ. ನಮ್ಮ ಸಂವಿಧಾನವು ಸಹ ವಸಹಾತುಶಾಹಿ ಕಾಲದ ನಂತರದಲ್ಲಿ ರಚನೆಯಾಗಿದ್ದೂ ಪಾಶ್ಚಾತ್ಯ ರಾಷ್ಟ್ರಗಳಿಂದ ಹಲವಾರು ಅಂಶಗಳನ್ನು
      ಎರವಲು ಪಡೆದುಕೊಂಡಿರುವುದನ್ನು ಗಮನಿಸಬಹುದು. ಹಾಗೆಯೆ ಮರ್ಯಾದ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ, ಒಂದೇ ಜಾತಿಯೊಳಗೆ ಈ ರೀತಿಯ ಘಟನೆಗಳು
      ನಡೆಯುತ್ತಿರುತ್ತವೆ.ಆದರೆ, ಬೇರೆ ಬೇರೆ ಜಾತಿಗಳ ನಡುವೆ ನೆಡೆದಾಗ ಅದೊಂದು “ಮರ್ಯಾದ ಹತ್ಯೆ” ಎಂಬ ಹಣೆಪಟ್ಟಿಯೊಂದಿಗೆ ಸಾಮಾಜಿಕ ಸಮಸ್ಯೆಗೆ
      ,ಜಾತಿ ವ್ಯವಸ್ಥೆಗೆ ಸಾಕ್ಷಿಯಾಗತ್ತದೆ ಏಕೆ? ಇನ್ನೂ ಏಕಲವ್ಯ, ಕರ್ಣನ ಸಂದರ್ಭವನ್ನು ಪ್ರತ್ಯೇಕವಾಗಿ ತಿಳಿಸುವ ಅಗತ್ಯವಿಲ್ಲ ಎನಿಸುತ್ತದೆ.ಪೌರಾಣಿಕ ಕಥೆಗಳನ್ನು ಸಹ
      ಇದೇ ಚೌಕಡ್ಡಿನಿಂದಲೇ ವಿವರಿಸುತ್ತಿರುವುದು ಗೋಚರಿಸುತ್ತದೆ.
      ದನ್ಯವಾದಗಳು

      ಪ್ರತಿಕ್ರಿಯೆ
  7. ಉದಯಕುಮಾರ್ ಹಬ್ಬು

    ಕೇರಳದಲ್ಲಿ ಜಾತೀಯತೆ :” ಬಾಬು ಶಿವು ಪೂಜಾರಿಯವರ ಗ್ರಂಥ ಶ್ರೀ ನಾರಾಯಣ ಗುರು ವಿಜಯ ದರ್ಶನ’ ದಲ್ಲಿ ಜಾತಿ ಪದ್ಧತಿ ಕೇರಳದಲ್ಲಿ ಎಷ್ಟೊಂದು ಕ್ರೂರವಾಗಿತ್ತು ಎಂಬುದರ ವಿವರಣೆ ಇದೆ. ಅವರ ಮಾತುಗಳಲ್ಲಿ ” ಜಾತಿ ಕ್ತ್ತುಗಳ ಅಸ್ಪ್ರಷ್ಯತೆಯ ಭ್ರಮೆಯಿಂದ ಹುಚ್ಚಾಗಿದ್ದ ಕೇರಳದಲ್ಲಿ ನಂಬೂದಿರಿಗಳಿಂದ ಪರಯ್ಯ 64 ಹೆಜ್ಜೆ, ಪುಲಯ್ಯ 54 ಹೆಜ್ಜೆ, ಮತ್ತು ಈಳವರು 36 ಹೆಜ್ಜೆಗಳ ಅಂತರದ ದೂರಸರಿದು ನಿಲ್ಲಬೇಕಿತ್ತು. ಐ ಸಂಪ್ರದಾಯವನ್ನು ಮೀರಿದವರು ಘೋರ ಶಿಕ್ಷೆಗೆ ಗುರಿಯಾಗುತ್ತಿದ್ದರು.
    ಎಂ. ಕೆ. ನಾರಾಯಣನ್ ಎನ್ನುವ ಕಂದಾಯ ನಿರೀಕ್ಷಕ ಅಧಿಕಾರಿ ತಂಬಾಕು ಅಂಗಡಿಯೊಂದನ್ನು ವೀಕ್ಷಿಸಲು ಸರಕಾರಿ ಕರ್ತವ್ಯದಲ್ಲಿ ಹೋಗುತ್ತಿದ್ದಾಗ ಕೊಂಕಣಿ ಬ್ರಾಹ್ಮಣರಹೋಟೆಲಿನ ಬದಿಯಿಂದಲೇ ನಡೆದುಕೊಂಡು ಹೋಗಬೇಕಿತ್ತು. ಹೋಟೆಲಿನ ಬದಿಯಲ್ಲಿ ನಡೆದುದರಿಂದ ಹೋಟೆಲಿನ ಒಳಗಿದ್ದ ತಿಂಡಿ, ತಿನಿಸುಗಳು ಮೈಲಿಗೆ ಅದುವೆಂದು ನ್ಯಾಯಾಲ್ಯಯದಲ್ಲಿ ದಾವೆ ದಾಖಲಾಯಿತು. ಹೋಟೆಲಿನ ಮಾಲಿಕನ ದೂರನ್ನು ಎತ್ತಿಹಿಡಿದ ನ್ಯಾಯಾಲಯವು 300 ರೂಪಾಯಿಗಳ ದಂಡವನ್ನು ಆವರ್ಣರಾದ ಎಂ. ಕೆ. ನಾರಾಯಣನ್ರಿಗೆ ವಿಧಿಸಲಾಯಿತು.
    ಈಳವ ಮತ್ತುಳಿದ ಆವರ್ಣರು ‘ಕಥಕ್ಕಳಿ’ ನೃತ್ಯನಾಟಕದಲ್ಲಿ ವೇಷ ಹಾಕುವುದು, ಅದನ್ನು ಆಡುವುದು ಧರ್ಮ ನಿಷೇಧವಾಗಿತ್ತು. ಕಥಕ್ಕಳಿಯನ್ನು ಆಡಲು ಈಳವರಿಗೆ ಅವಕಾಶ ಕೊಡಬೇಕೆಂದು ಅರತ್ತುಪುಳಿ ವೇಲಾಯುಧ ಪಣಿಕ್ಕರರು ಸರಕಾರವನ್ನು ಒತ್ತಾಯಿಸಿದರು. ಪಾಣಿಕ್ಕರರ ಬೇಡಿಕೆಯು ಧರ್ಮ ವಿರುದ್ಧವೆಂದು ಈಳವರಿಗೆ ಕಥಕ್ಕಳಿಯಲ್ಲಿ ಭಾಗವಹಿಸುವ ಹಕ್ಕು ಕೊಡಬಾರದೆಂದು ಮೇಲ್ವರ್ಗದವರು ತಿರುವಾಂಕೂರ್ ದಿವಾನರಿಗೆ ಮನವಿಯನ್ನು ಸಲ್ಲಿಸಿದರು.
    ನಾಯರರು ತಮ್ಮ ಮನವಿಯಲ್ಲಿ :” ಹಿಂಡುಗಳಾದ ನಾವು ಶೂದ್ರರು. ನಮ್ಮಿಂದ ಹದಿನಾರು ಹೆಜ್ಜೆಗಳ ಬ್ರಾಹ್ಮಣರಿಂದ ಮೂವತ್ತೆರಡು ಹೆಜ್ಜೆಗಳ, ಅಂತರದಲ್ಲಿ ನಿಲ್ಲತಕ್ಕ ಅಸ್ಪ್ರಷ್ಯರು ಈಳವರು. ಜಾತಿಕಟ್ಟಿನ ಈ ಉಲ್ಲಂಘನೆ ಶಿಕ್ಷಾರ್ಹ. ಬ್ರಾಹ್ಮಣರನ್ನು ಆವರ್ಣರು ಮುಟ್ಟಿದರೆ ಅವರನ್ನು ಕತ್ತರಿಸುವ ಅಧಿಕಾರ ಶೂದ್ರರಾದ ನಮಗೆ ಇರುವುದರಿಂದ ಆವರ್ಣರಾದ ಈಳವರಿಗೆ ಕಥಕ್ಕಳಿಯ ವೇಷ ಹಾಕಲು ಅವಕಾಶ ಕೊಡ ಕೂಡದು.” ಈ ಎರಡು ಉದಾಹರಣೆಗಳು ಬಹುಶಃ ಝಳಕಿಯವರಿಗೆ ಉತ್ತರ ಕೊಡಲು ಸಾಕು ಎಂದು ನಾನು ಅಂದುಕೊಂಡಿದ್ದೇನೆ. ದಯವಿಟ್ಟು ಬಾಬು ಶಿವು ಪೂಜಾರಿಯವರ ಗ್ರಂಥವನ್ನು ತಾವೆಲ್ಲ ಓದಬೇಕು ಎಂದು ನಾನು ಪ್ರಾರ್ಥಿಸುತ್ತೇನೆ. ಉದಯಕುಮಾರ ಹಬ್ಬು ಕಿನ್ನಿಗೋಳಿ

    ಪ್ರತಿಕ್ರಿಯೆ
  8. Kavitha

    ಉದಯಕುಮಾರ ಅವರೆ,
    ’ಅನುಭವಾಧಾರಿತ ತರ್ಕವನ್ನು ಮಾಡುವವನು ನಾನು” ಎಂದು ನೀವೇ ಹೇಳಿಕೊಂಡಿದ್ದೀರಿ. ಈ ವಾಖ್ಯಕ್ಕೂ ಹಾಗೂ ತಾವು ನೀಡಿರುವ ಉದಾಹರಣೆಗಳಿಗೂ ಸಂಬಂಧಿಸಿದಂತೆ ನನಗೆ ಸ್ಪಷ್ಟತೆ ಬೇಕಿದೆ.
    ನನಗಿರುವ ಅಸ್ಪಷ್ಟತೆ;
    ನಿಮ್ಮ ಬರವಣಿಗೆಯಲ್ಲಿ ನೀವು ಅನೇಕ ಉದಾಹರಣೆಗಳನ್ನು ನೀಡಿದ್ದೀರಿ. ಈ ಎಲ್ಲ ಉದಾಹರಣೆಗಳಲ್ಲೂ ಯಾವುದು ನಿಮ್ಮ ಅನುಭವವನ್ನು ಆಧರಿಸಿಲ್ಲ, ಒಂದನ್ನು ಹೊರತು ಪಡಿಸಿ ; ಜಾತಿ ಸಂಘದ ಘಟನೆ, ಆದರೆ ಆ ಘಟನೆಯನ್ನು ತಾವು ತೇಲಿಸಿ ಹೇಳಿದ್ದೀರೆ ಹೊರತು ಸ್ಪಷ್ಟವಾಗಿ ವಿವರಿಸಿಲ್ಲ. ಇನ್ನೂ ಉಳಿದಂತೆ ತಾವು ಕರ್ಣ, ಏಕಲವ್ಯ, ಶಿವು ಪೂಜಾರಿ, ದಯಾನಂದ ಸರಸ್ವತಿ, ನಾಯರರು. . . ಉದಾಹರಣೆಗಳನ್ನು ನೀಡಿದ್ದೀರಿ.
    ಇದರಿಂದ ಎರಡು ಅಂಶಗಳು ಸ್ಪಷ್ಟವಾಗುತ್ತವೆ;
    ೧. ತಾವು ತಮ್ಮ ಅನುಭವವನ್ನು ಆಧರಿಸಿ ಏನನ್ನು ಹೇಳುತ್ತಿಲ್ಲ.
    ೨. ಕರ್ಣ, ಏಕಲವ್ಯ, ಪೂಜಾರಿ ಇವರ ಅನುಭವ ತಮ್ಮ ಅನುಭವವಾಗಲು ಸಾಧ್ಯವೇ ಇಲ್ಲ.
    ಅಂದರೆ, ತಾವು ಜಾತಿ ವ್ಯವಸ್ಥೆಯ ಅಸ್ತಿತ್ವದ ಕುರಿತಂತೆ ಮಾತನಾಡುತ್ತಿರುವುದು ಕೇಳಿದ ಕಥೆಗಳ (ನೀವು ನೀಡಿರುವ ಉದಾಹರಣೆಗಳು) ಆಧಾರದ ಮೇಲೆ ಎಂದಾಯಿತು. ಕಥೆಗಳ ಸ್ವರೂಪ ತಮಗೆ ತಿಳಿದೆ ಇದೆ. ಆ ಕಥೆಗಳನ್ನು ಯಾರು ಬೇಕಾದರೂ, ಹೇಗೆ ಬೇಕಾದರೂ ವಿವರಿಸಿಕೊಳ್ಳಬಹುದು. ಅದಕ್ಕೆ ಯಾವುದೇ ಒಂದು ಪ್ರಮಾಣ, ಸ್ಪಷ್ಟತೆ ಎನ್ನುವುದು ಇರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಕೈಗೆಟುಕಿದ ಉದಾಹರಣೆಗಳನ್ನು ತೆಗೆದುಕೊಂಡು ಜಾತಿ ವ್ಯವಸ್ಥೆ ಅಸ್ಥಿತ್ವದಲ್ಲಿದೆ ಎಂದು ವಾದಿಸುವುದು ಎಷ್ಟು ಸೂಕ್ತ? ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎನ್ನುವುದನ್ನು ಮೊದಲು ಸೈದ್ಧಾಂತೀಕರಿಸಿ ತೋರಿಸಿ, ಆಮೇಲೆ ಈ ಉದಾಹರಣೆಗಳ ಕುರಿತು ಚರ್ಚಿಸಿದರಾಯಿತು.
    ನೇರವಾಗಿ ಹೇಳುವುದಾದರೆ ತಾವು ಇತರೆ ಕಥೆಗಳನ್ನು ಆಧರಿಸಿ ಅದು ನಿಮ್ಮ ಅನುಭುವ ಎನ್ನುತ್ತಿದ್ದೀರಿ ಹೊರತು ಅವುಗಳೆಲ್ಲವೂ ನಿಮ್ಮ ಅನುಭವವೇ ಎಂದೊಮ್ಮೆ ಪ್ರಶ್ನಿಸಿಕೊಳ್ಳಿ ಹಾಗೂ ಯಾವುದೇ ಕಲ್ಪಿತ ಚೌಕಟ್ಟಿಗೆ (ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ) ಆಸ್ಪದ ಕೊಡದೆ ಚಿಂತಿಸಿ.
    ಧನ್ಯವಾದಗಳು

    ಪ್ರತಿಕ್ರಿಯೆ
  9. chaitra

    ಉದಯ್ ಕುಮಾರ್ ರವರೆ,
    ನೀವು ಜಾತಿ/ಜಾತಿವ್ಯವಸ್ಥೆ ಯ ನಡುವಿನ ವ್ಯತ್ಯಾಸವನ್ನು ಅರ್ಥಯಿಸಿ ಕೊಳ್ಳವಲ್ಲಿ ಗೊಂದಲಕ್ಕೊಳಗಾಗಿದ್ದಿರಿ, ಪ್ರಸ್ತುತ ಸಂಶೋಧನೆ ಜಾತಿಗಳಿಲ್ಲ ಎಂಬುದಾಗಿ ಎಂದೂ ಹೇಳಿಲ್ಲ ಜಾತಿಗಳು ಇವೆ ಹಾಗೂ ಇಂತಹ ಹಲವಾರು ಘಟನೆಗಳೂ ನೆಡೆಯುತ್ತಿವೆ ಆದರೆ ಅವುಗಳು ನೀವು ಹೇಳುತ್ತಿರುವ ಜಾತಿವ್ಯವಸ್ಥೆಯೊಳಗಿಲ್ಲ ಎಂಬುದಾಗಿದೆ.
    ನೀವು ನೀಡಿರುವ ಘಟನೆಗಳಂತೆ ನಮ್ಮ ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಅನೇಕ ತಾರತಮ್ಯಗಳನ್ನು ಕಾಣುತ್ತೇವೆ ಆದರೆ ಅವುಗಳು ಏಕೆ ಶೋಷಣೆ ಎಂದೂ ಅನಿಸುವುದಿಲ್ಲ, ನಿಮ್ಮ ಉದಾಹರಣೆಗಳನ್ನೆ ತೆಗೆದುಕೊಂಡಲ್ಲಿ ಅಂತಹ ಘಟನೆಗಳನ್ನು ಶೋಷಣೆ ಎಂಬ ಪರಿಕಲ್ಪನೆಯಿಂದ ಹೊರನಿಂತು ನೋಡಿದರೆ ಅವುಗಳು ಯಾವ ಅರ್ಥವನ್ನು ಕೊಡುತ್ತವೆ? ಘಟನೆಗಳನ್ನು ಶೋಷಣೆಯೊಂದಿಗೆ ಸಮೀಕರಿಸಿದಾಗ ಮಾತ್ರವೆ ಜಾತಿವ್ಯವಸ್ಥೆಯೊಂದಿಗೆ ಸಂಬಂದ ಕಲ್ಪಿಸ ಬಹುದೇ ಹೊರತು ಘಟನೆಗಳಿಂದಲ್ಲ.
    ಇಂತಹ ಹಲವಾರು ಘಟನೆಗಳು ನಡಿಯುತ್ತಿರುತ್ತವೆ ಆದರೆ ಅವುಗಳು ಸಂದಾರ್ಭಾನುಸಾರವಾಗಿರುತ್ತವೆ ನೀವು ನೀಡಿರುವ ಘಟನೆಗಳ ಸಂಧರ್ಭ ತಿಳಯದು ಹಾಗೆಯೆ ನೀವು ಸೂಚಿಸಿರುವ ದೂರ ನಿಲ್ಲುತ್ತಿದ್ದ ನಿರ್ದಿಷ್ಠ ಜಾತಿಯ ಜನರು ಬ್ರಾಹ್ಮಣರೆನಿಸಿಕೊಂಡವರ್ಯಾರೇ ಬಂದರು ಹಾಗೆಯೇ ನಿಲ್ಲುತಿದ್ದರೆ ಅಥವಾ ಕೆಲವು ಬ್ರಾಹ್ಮಣರಿಗೆ ಮಾತ್ರ ಹಾಗ? ನಿರ್ದಿಷ್ಟ ಜಾತಿಯ ಜನರು ಎಲ್ಲೆಲ್ಲಿದ್ದರು ಅಲ್ಲೆಲ್ಲ ಇದೆ ಪದ್ದತಿ ಜಾರಿಯಲ್ಲಿತ್ತೆ? ಇದಕ್ಕೆಲ್ಲಾ ಆಧಾರಗಳಿವೆಯೆ? ಆ ರೀತಿಯ ಪದ್ದತಿ ಆ ಜಾತಿಯ ಆಚರಣೆಯೆಂದ್ಯಾಕೆ ತಿಳಿಯ ಬಾರದು ಹೀಗೆ ನೀವು ನೀಡಿರುವ ಘಟನೆಗಳಿಗೆ ನನ್ನ ಗ್ರಹಿಕೆಯ ಆಧಾರದ ಮೇಲೆ ಈಗಾಗಲೆ ನೀಡಿರುವ ವಿವರಣೆಗಳಿಗಿಂತ ವಿರುದ್ದವಾದ ವಾದಗಳನ್ನು ಇಟ್ಟು ವಿವರಿಸಬಹುದು.
    ಹೀಗಿದ್ದಾಗ ಜಾತಿವ್ಯವಸ್ಥೆಯೊಳಗೆ ಶೋಷಣೆ ನಡೆದಿದೆ ಎಂದೂ ಹೇಳಲು ಘಟನೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ನಾವ್ಯಾರು ನೋಡಿಲ್ಲ ಆ ಘಟನೆಗಳನ್ನು ಶೋಷಣೆಯೆಂದೆ ತಿಳಿದಿದ್ದರೆ ಎಂಬುದಾಗಿ ತಿಳಿಯಲು ಆಗಲ್ಲ ಆದಾಗ್ಯೂ ಜಾತಿವ್ಯವಸ್ಥೆಯ ಶೋಷಣೆಯೆಂದೆ ಗ್ರಹಿಸ ಬಹುದೇ?.

    ಪ್ರತಿಕ್ರಿಯೆ
  10. ಉದಯಕುಮಾರ್ ಹಬ್ಬು

    ಮಾನ್ಯ ಕವಿತಾರವರು ‘ಅನುಭವ’ ದ ಪ್ರಶ್ನೆ ಎತ್ತಿದ್ದಾರೆ. ‘ಓದಿನ ಅನುಭವ’ ಎಂಬುದೊಂದಿದೆ. ಮಾನ್ಯ ಝಳಕಿಯವರು ತಮ್ಮ ಅಪಾರ ಓದಿನ ಅನುಭವದಿಂದಲೇ ವಸಾಹತುಷಾಹಿ ಪ್ರಭಾವವು ನಮ್ಮ ಜಾತಿ ವ್ಯವಸ್ಥೆಯ ಕುರಿತಾದ ತಿಳಿವಳಿಕೆಯ ಕುರಿತಾಗಿ ಬರೆದಿದ್ದಾರೆ. ಹಿಂದೆ ಇತಿಹಾಸದಲ್ಲಿ ನಡೆದ ಎಷ್ಟೋ ಘಟನೆಗಳನ್ನು ನಮ್ಮ ಓದಿನ ಅನುಭವದಿಂದಲೇ ನಮ್ಮ ಅನುಭವವನ್ನಾಗಿಸಿಕೊಳ್ಳುತ್ತೇವೆ. ಇರಲಿ. ಈಗ ನನ್ನ ಪ್ರಶ್ನೆ.: ಯಜುರ್ವೇದದಲ್ಲಿ ಈ ಶ್ಲೋಕ ಏನನ್ನು ಹೇಳುತ್ತದೆ?” ಬ್ರಾಹ್ಮಣೋ$ಸ್ಯ ಮುಖಮಾಸೀದ್ಭಾಹೂ ರಾಜನ್ಯಃಕೃತಃ| ಊರು ತದಸ್ಯ ಯಾದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಯತ||’ ನನ್ನ ದೃಷ್ಟಿಯಲ್ಲಿ ‘ಮನುಸ್ಮೃತಿ’ಯು ವರ್ಣ ವ್ಯವಸ್ಥೆಯ ಕುರಿತಾಗಿರುವ ಗ್ರಂಥ. ಉದಯಕುಮಾರ ಹಬ್ಬು, ಕಿನ್ನಿಗೋಳಿ

    ಪ್ರತಿಕ್ರಿಯೆ
  11. ಉದಯಕುಮಾರ್ ಹಬ್ಬು

    ಮಾನ್ಯರೇ ಡಾ. ಸಿದ್ಧಲಿಂಗಯ್ಯ ಬರೆದ ‘ಗ್ರಾಮ ದೇವತೆಗಳು’ ಸಂಶೋಧನ ಗ್ರಂಥದಲ್ಲಿ ‘ಮಾರಮ್ಮನನ್ನು ಕುರಿತ ಪುರಾಣಗಳು ಅಧ್ಯಾಯದಲ್ಲಿ ಮಾರಿದೇವತೆಯ ಕುರಿತಾದ ಪುರಾಣದ ವ್ಯಾಖ್ಯಾನವನ್ನು ಮಾಡುತ್ತಾ ”ಆಸಾದಿಗಳು ಗ್ರಾಮದೇವತೆಯ ಹಬ್ಬದಲ್ಲಿ ಮಾರಮ್ಮನ ಕಥೆಯನ್ನು ವಿಸ್ತಾರವಾಗಿ ಹೇಳುತ್ತಾರೆ. ಬ್ರಾಹ್ಮಣ ಕನ್ಯೆ ಶ್ರೀ ಬಾಲಗೌರಿಯು ಮಾದೀಗ ಗಂಡನಿಂದ ಐದು ಜನ ಮಕ್ಕಳನ್ನು ಪಡೆದ ವರ್ಣಸಂಕರದ ಸುದ್ದಿ ಕಾಲಾಂತರದಲ್ಲಿ ಅವಳ ಅತ್ತೆಯ ಮೂಲಕ ಗೊತ್ತಾಗಿ ಕೆಂಡಾಮಂಡಳಳಾಗಿ ಉಪಾಯವಿಲ್ಲದೆ ತನ್ನ ಗಂಡನಿಗೂ, ಮಕ್ಕಳಿಗೂ ಶಾಪವಿಕ್ಕುತ್ತಾಳೆ. ಮುಂದೆ ಅವಳು ಮಾರಿದೇವತೆಯಾಗಿ ಅವತರಿಸಿದಾಗ ತನ್ನ ಗಂಡನು ಪಟ್ಟದ ಕೋಣನಾಗಿ ತನಗೆ ಬಲಿಯಾಗುವಂತೆಯೂ ಮೊದಲ ನಾಲ್ಕು ಗಂಡು ಮಕ್ಕಳು ಬಣದ ಮಾರಿಕೋಣಗಳಾಗಿ ಕಡಿಸಿಕೊಳ್ಳುವಂತೆಯೂ ಶಾಪ ಕೊಡುತ್ತಾಳೆ. ಕೊನೆಯ ಮಗನಿಗೆ ಪ್ರೀತಿಯ ಮಗನಾದ್ದರಿಂದ ‘ನೀನು ಆಸಾದಿಯಾಗಿ ಲೋಕದ ಮೆಳೆನನ್ನ ಹೆಶ್ರು ಹೇಳುತ್ತಾ ನನ್ನ ಎದೆ ಮೇಗಳ ಕೂಳು ತಿನ್ನುತ್ತಾ ಭಿಕ್ಷೆ ಬೇಡುತ್ತಾ ಬದುಕ್ಕೋ ಹೋಗು’ ಎಂದು ಹೇಳುತ್ತಾಳೆ ‘ದೊಡ್ಡ ಬಾಡು’ ಗೆ ಅತ್ತೆ ಕದರಮ್ಮನ ನಾಲಿಗೆಗೆ ಶ್ರೀ ಬಾಲಗೌರಿಯ ಪುಳುಚಾರಿನ ಊಟ ರುಚಿಸದೆ ಹೋಗಿ ಮೌನ ಮುರಿದು’ಏನೋ ಕದರಾ, ಒಂದು ಕರುವಿನ ಕಾಲು ಕಡಿದೆ ರುಚಿ ಸಮ ಇಲ್ವಲ್ಲೋ ಈ ಊಟ’ ಎಂದು ಅಬ್ಬರಿಸುತ್ತಾಳೆ. ನಾಲಿಗೆ ಕುಲವನರುಹಿತು ಎನ್ನುವ ಹಾಗೆ ಬಾಲಗೌರಿಯ ಗಂಡನ ಬಣ್ಣ ಬಯಲಾಗುತ್ತದೆ.’ ಅವಳು ತನ್ನ ಗಂಡನಿಗೆ ಮತ್ತು ಮಕ್ಕಳಿಗೆ ಶಾಪ ಹಾಕುತ್ತಾಳೆ.” ಸಿದ್ಧಲಿಂಗಯ್ಯನವರ ವ್ಯಾಖ್ಯಾನ ಹೀಗಿದೆ:” ಕೆಳಜಾತಿಯ ಹುಡುಗನೊಬ್ಬ ತನ್ನ ಸಾಮಾಜಿಕ ಸ್ಠಾನಮಾನವನ್ನು ಎತ್ತರಿಸಿಕೊಳ್ಳಲು ಮಾಡಿದ ಪ್ರಯತ್ನ ಮತ್ತು ಸಾಹಸವೆ ಗ್ರಾಮದೇವತೆಯ ಪುರಾಣದ ಮೂಲ ಆಶಯವಾಗಿದೆ. ಮಾದಿಗರ ಹುಡುಗ ಶಾಲೆಯಲ್ಲಿ ದೂರ ಕೂರಿಸುತ್ತಾರೆಂಬ ನೋವಿನಿಂದ ಶಾಲೆ ಹೋಗುವುದನ್ನು ನಿಲ್ಲಿಸುವುದು ನಂತರ ತಾಯಿಯಿಂದ ಹೊಡೆತ ತಪ್ಪಿಸಿಕೊಳ್ಳಲು ಉರನ್ನೇ ತೊರೆಯುವುದು ಮತ್ತು ವೇದಾಂತವನ್ನು ಬ್ರಾಹ್ಮಣನ ಮನೆಯಲ್ಲಿ ಓದಿ ಊಟದ ಎಲೆಯಲ್ಲಿ ಬರೆದ ಅವನ ಬುದ್ಧಿ ಶಕ್ತಿಯೇ ಅವನಿಗೆ ಬೆಂಬಲವಾಗುವುದು ‘ ಇತ್ಯಾದಿ ಬರೆದಿರುತ್ತಾರೆ. ಈ ಗ್ರಾಮದೇವತೆಯ ಪುರಾಣವು ಏನನ್ನು ಹೇಳುತ್ತದೆ? ಈ ಹಿಂದೆ ಇದ್ದ ಜಾತಿವ್ಯವಸ್ಥೆಯನ್ನು ಹೇಳುವುದಲ್ಲವೇ? ಉದಯಕುಮಾರ ಹಬ್ಬು ಕಿನ್ನಿಗೋಳಿ

    ಪ್ರತಿಕ್ರಿಯೆ
  12. ಉದಯಕುಮಾರ್ ಹಬ್ಬು

    ಮನುಷ್ಯ ಮನುಷ್ಯರನ್ನು ಜಾತಿ ಹೆಸರಿನಲ್ಲಿ ತಾನು ಶ್ರೇಷ್ಠ,ಇತರರು ಕೀಳು, ಎಂಬ ಶ್ರೇಷ್ಟತೆಯ ವ್ಯಸನದಿಂದ ಬಿಡುಗಡೆಗೊಂದು ಎಲ್ಲರನ್ನು ಸಮಾನವಾಗಿ ಮಾನವೀಯ ನೆಲೆಯಲ್ಲಿ ನೋಡಬೇಕಾದದ್ದು ಪ್ರಜ್ಜ್ಜ್ಣಾವಂತರ ಮಾನವೀಯ ಧರ್ಮ ಎಂದು ನಾನು ಅಂದುಕೊಂಡಿದ್ದೇನೆ.ಆ ನಿಟ್ಟಿನಲ್ಲಿ ಚೈತ್ರರವರು ಹೇಳಿದ ಅದನ್ನು ಆಯಾ ಜಾತಿಯ ಆಚರಣೆ ಎಂದು ಯಾಕೆ ತಿಳಿದುಕೊಳ್ಳಬಾರದು? ಎಂದು ಹೇಳಿದ್ದನ್ನು ಚಿಂತನೆ ಮಾಡಬೇಕಾದ ವಿಷಯವೇ ಹೌದು?ಕೊರಗರು ಈ ಹಿಂದೆ ಎಂಜಲೆಲೆಗಳನ್ನು ಎತ್ತುತ್ತಿದ್ದರು ಎನ್ನುವದು ಅವರ ಆಚರಣೆ. ಆದರೆ ಆ ಆಚರಣೆ ಮಾನವಿಯವಾದ ಆಚರಣೆ ಅಲ್ಲವಾಗಿತ್ತು.ಎಂಬುದು ಸತ್ಯ. ಈ ಹಿನ್ನೆಲೆಯಲ್ಲಿ ರಾಮಮನೋಹರ ಲೋಹಿಯಾ ತಮ್ಮ ‘ಜಾತಿ: ಎರಡು ಟಿಪ್ಪಣೆಗಳು’ಲೇಖನದಲ್ಲಿ ಹೀಗೆ ಹೇಳುತ್ತಾರೆ:” ಜಾತಿಪದ್ಧತಿಯ ಮೇಲೆ ಸಾವಿರಾರು ವರ್ಷಗಳಿಂದ ಒಂದೇ ಸವನೆ ಆಕ್ರಮಣಗಳಾಗುತ್ತ ಬಂದಿದ್ದರೂ, ಇದನ್ನು ತೊಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಈ ಜಾತಿ ಪದ್ಧತಿಯು ಅನಂತಕಾಲದವರೆಗೂ ಇದ್ದುಬಿಡುವವೋ ಎಂಬ ಅನುಮಾನ ಉಂಟಾಗುತ್ತಿದೆ. ಕೆಳ ಜಾತಿಯ ಮತ್ತು ಮೇಲ್ಜಾತಿಯ ಬಡವರು ಒಗ್ಗೂಡಿ ನಾಯಕತ್ವ ವಹಿಸಿದಾಗ ಮಾತ್ರ ನಿಜವಾದ ಹಾಗೂ ಆಧುನಿಕ ಕ್ರಾಂತಿಯಾಗುತ್ತದೆ. ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಜಾತಿ ವ್ಯವಸ್ಥೆಯನ್ನು ಮೂರು ನಾಲ್ಕು ವರ್ಷಗಳಲ್ಲಿ ಒಡೆಯಲು ಬಯಸುವ ಹಾಗೂ ಆ ಮೂಲಕ ಆಡಳಿತ ಸೂತ್ರವನ್ನು ಹಿಡಿಯಲು ಇಚ್ಛಿಸುತ್ತಿರುವ ಜನ ಇದೊಂದು ದೀರ್ಘ ಪ್ರಯತ್ನ ಎಂಬುದನ್ನೂ ತಿಳಿದು ಕೊಳ್ಳಬೇಕು.” “ಜನ ಯುರೋಪ್ ಮತ್ತು ಬಿಳಿಯರಿಂದ ಕಲಿತಿರುವ ಸಮಾನ ಅವಕಾಶಗಳ ಸಿದ್ಧಾಂತಗಳ ಮಾತುಗಳನ್ನು ಆಡುತ್ತಾರೆ. ಅಷ್ಟಕ್ಕೂ ಇವರು ಫ್ರಾನ್ಸ್ ರಷ್ಯಾ ದಂತಹ ದೇಶಗಳಿಂದ ತಾನೇ ತಮ್ಮ ಕ್ರಾಂತಿಯನ್ನು ಕಲಿತಿರುವುದು. ಜಾತಿಪ್ರಧಾನವಾದ ಭಾರತ ಎಂದರೇನು ಎಂಬುದು ಅವರಿಗೆ ಗೊತ್ತಿಲ್ಲ. ಎಷ್ಟೋ ಸಾವಿರ ವರ್ಷಗಳಿಂದ ಜಾತಿ ಆಧಾರಿತ ಶ್ರಮವಿಭಜನೆಯಿಂದಾಗಿ ಯೋಗ್ಯತೆ, ಗುಣ, ಮತ್ತು ಸಂಸ್ಕಾರಗಳ ಮಧ್ಯೆ ಸರಿಪಡಿಸಲಾಗದ ಬಿರುಕುಗಳಾಗಿವೆ.” ಲೋಹಿಯಾರವರೂ ಕೂಡ ಜಾತಿವ್ಯವಸ್ಥೆ ಅತಿ ಹಿಂದಿನಿಂದಲೂ ನಡೆದು ಬಂದದ್ದು ಎಂದು ಅಭಿಪ್ರಾಯಪಡುತ್ತಾರೆ. ವಿವೇಕಾನಂದರು ಕೇರಳದ ಜಾತಿಪದ್ಧತಿಯನ್ನು ಆ ಹೆಸರಿನಲ್ಲಿ ನಡೆಯುತ್ತಿದ್ದ ಕ್ರೌರ್ಯವನ್ನು ಕಂಡು ಕೇರಳವನ್ನು ‘ಹುಚ್ಚರ ಆಸ್ಪತ್ರೆ ಎಂದು ಕರೆದರು.ಉದಯಕುಮಾರ ಹಬ್ಬು, ಕಿನ್ನಿಗೋಳಿ

    ಪ್ರತಿಕ್ರಿಯೆ
  13. ಉದಯಕುಮಾರ್ ಹಬ್ಬು

    ಮಾನ್ಯರೇ 18-04-2013ರ ‘ಪ್ರಜಾವಾಣಿ’ಯಲ್ಲಿ ಮಾನ್ಯ ಬಾಲಗಂಗಾಧರ ಇವರು ತಮ್ಮನಿಲುವಿನ ಕುರಿತಾಗಿ ಸ್ಪಷ್ಟ ಅಬಿಪ್ರಾಯವನ್ನು ಕೊಟ್ಟಿರುತ್ತಾರೆ. “ವಚನಗಳಲ್ಲಿರುವ ಜಾತಿವಿರೋಧಿ ಹೇಳಿಕೆಗಳು ನಾವು ತಿಳಿದುಕೊಂಡಂತೆ ಜಾತಿವಿರೋಧಿ ಹೇಳಿಕೆಗಳಲ್ಲ. ಅವು ಅನುಭಾವಕ್ಕೆ ಅಡ್ಡಿಯಾಗಬಹುದಾದದ ಎಲ್ಲ ರಚನೆಗಳನ್ನು ಅಲ್ಲಗಳೆಯುತ್ತವೆ.” ಬಹುಶಃ ಮಾನ್ಯ ಝಳಕಿ ಮತ್ತು ಮಾನ್ಯ ಬಾಲಗಂಗಾಧರ ಅವರ ಮೊದಲ ಹೇಳಿಕೆಗಳಲ್ಲಿ ಈ ಸ್ಪಷ್ಟತೆ ಇರಲಿಲ್ಲವೇನೋ? ಭಾರತೀಯ ಅಧ್ಯಾತ್ಮಿಕ ವಿಕಾಸದ ಇತಿಹಾಸದಲ್ಲಿ ವಚನ ಚಳವಳಿ ಒಂದು ಮಹತ್ತರ ಘಟ್ಟ ಎಂದು ನಾನು ಈಗಾಗಲೇ ಹೇಳಿದ್ದೇನೆ. ಮತ್ತು ಮತ್ತು ಜಾತಿಯ ಸುತ್ತಲೇ ನನ್ನ ವಾದದ ಖಂಡನೆ ಮಾಡಿದ ವಿದ್ವಾಂಸರು ಪ್ರತಿಪಾದಿಸಿದರು.ಆದರೆ ನಾನು ಹೇಳಿದ ಪೂರ್ಣ ವಾದವನ್ನು ಲಕ್ಷಿಸಲಿಲ್ಲ. ಜಾತಿವ್ಯವಸ್ಥೆ ಇದೆಯೆಂಬುದನ್ನು ಸೈದ್ಧಾಂತಿಕವಾಗಿ ತೋರಿಸಿ ಎಂದು ಹೇಳಿದಾಗ ನಾನು ಹಲವಾರು ಉದಾಹರಣೆಗಳನ್ನು ಕೊಟ್ಟೆ. ‘ಐರೋಪ್ಯೆರು ಕ್ರೈಸ್ಥ ಥಿಯೊಲೋಜಿಯ ಆಧಾರದ ಮೇಲೆ ಭಾರತೀಯ ಅಧ್ಯಾತ್ಮಿಕ ಪರಂಪರೆಯನ್ನು ಪ್ರಪ್ರಥಮವಾಗಿ ಸಮಾಜ ವಿಜ್ನಾನದ ಪರಿಭಾಷೆಯಲ್ಲಿ ಇಟ್ಟು, ತಮಗೆ ಗೊತ್ತಿದ್ದ ಒಂದೇ ಒಂದು ಪರಿಭಾಷೆಯ ಲೋಕದಿಂದ ವರ್ಣಿಸಿದರು.’ ಎಂಬ ಗಂಗಾಧರರ ಹೇಳಿಕೆಯನ್ನು ವಿದ್ವಾಂಸರು ಪುಯನರಾವಲೋಕನಕ್ಕೆ ಪುನರಾಧ್ಯಯನಕ್ಕೆ ಒಳಪಡಿಸುವ ಅಗತ್ಯವಿದೆ ಎಂದು ನನಗನಿಸಿದೆ.ವಚನಗಳು ಖಂಡಿತವಾಗಿ ಅಧ್ಯಾತ್ಮಿಕ ವಿಚಾರಗಳನ್ನೇ ಹೆಚ್ಚಾಗಿ ಹೇಳುತ್ತವೆ. ಅಧ್ಯಾತ್ಮಿಕ ಸಾಧನೆಗೆ ಅಡ್ಡಿಯಾಗುವ ಜಾತಿ, ಸಾಂಸಾರಿಕ ವ್ಯಾಮೋಹ ಅರಿಷದ್ವೈರಿಗಳು ಮನಸ್ಸಿನ ಚಾಂಚಲ್ಯ ಸ್ತ್ರೀ ಮತ್ತು ಧನದವ್ಯಾಮೋಹ, ಧರ್ಮದ ಹೆಸರಿನಲ್ಲಿ ನಡೆಯುವ ಕೆಟ್ಟ ಆಚರಣೆಗಳು ಉದಾಹರಣೆಗಾಗಿ ಪ್ರಾಣಿಬಲಿ ಇತ್ಯಾದಿಗಳ ಕುರಿತಾಗಿಯೇ ವಚನಗಳು ಹೇಳುತ್ತವೆ. ಭಕ್ತಿಯ ಹೆಸರಿನಲ್ಲಿ ನಡೆಯುವ ಡಂಬಾಚಾರ ಮನುಷ್ಯನ ಸ್ವಾರ್ಥ ಈ ಎಲ್ಲವನ್ನೂ ವಚನಗಳು ಹೇಳುತ್ತವೆ. ವೇದಗಳಲ್ಲಿರುವ ಕೆಲವು ವಿಚಾರಗಳನ್ನು ಉಪನಿಷತ್ತಿನ ಹಲವಾರು ವಿಚಾರಗಳನ್ನು ವಚನಗಳಲ್ಲಿ ಚಿಂತನೆ ನಡೆಸಲಾಗಿವೆ. ಜಾತಿಯ ಹೆಸರಿನಲ್ಲಿ ಮಾಡುವ ಮೇಲೂ ಕೀಳು, ಶ್ವಪಚ, ಬ್ರಾಹ್ಮಣ ಈ ವ್ಯವಸ್ಥೆಯ ಅಸಮಾನತೆಯನ್ನು ಒಪ್ಪಿಕೊಳ್ಳುವುದಿಲ್ಲ. ಅಧ್ಯಾತ್ಮಿಕ ಸಾಧನೆಯಲ್ಲಿ ಎಲ್ಲರೂ ಒಂದೇ ಅದರಲ್ಲಿ ತರತಮ್ಯತೆ ಬೇಡ ಎಂದು ವಚನಗಳು ಹೇಳುತ್ತವೆ. ಭವಿಗೂ.ಭಕ್ತನಿಗೂ ಇರುವ ವ್ಯತ್ಯಾಸಗಳ ಕುರಿತಾಗಿ ಹೇಳುತ್ತವೆ. ಅಷ್ಟು ಮಾತ್ರವಲ್ಲ, ಅಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಭಕ್ತನ ಮಾನಸಿಕ ತುಮುಲಗಳ ಕುರಿತಾಗಿ, ದೇವರು ಮತ್ತು ಭಕ್ತನ ನಡುವೆ ನಡೆಯಬಹುದಾದ ಸಂವಾದಗಳು ಮತ್ತು ವಿವಾದಗಳ ಬಗ್ಗೆ ಕೂಡಾ ವಚನಗಳು ಬೆಳಕನ್ನು ಚೆಲ್ಲುತ್ತವೆ. ವಿಶೇಷವಾಗಿ ಪರಸ್ತ್ರೀ, ಪರಾಧನದಾಸೆ ಅಧ್ಯಾತ್ಮಿಕ ಸಾಧನೆಗೆ ಅತಿ ದೊಡ್ಡ ಆತಂಕಗಳನ್ನು ತಂದೊಡ್ಡುವುದನ್ನು ವಚನಗಳು ಸವಿಸ್ತಾರವಾಗಿ ಓರ್ವ ತಜ್ನ ಮನಃಶಾಸ್ತ್ರಜ್ನನಂತೆ ಮನವರಿಕೆ ಮಾಡಿಕೊಡುತ್ತವೆ. ಉದಯಕುಮಾರ ಹಬ್ಬು, ಕಿನ್ನಿಗೋಳಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: