ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಜೀವರತಿ’ ಕನ್ನಡ ಸಾಹಿತ್ಯದ ಇತ್ತೀಚಿನ ಕ್ಲಾಸಿಕ್

ಲೇಖಕಿ ಜ ನಾ ತೇಜಶ್ರೀ ಅವರ ಚೊಚ್ಚಲ ಕಾದಂಬರಿ ‘ಜೀವರತಿ’

ಅಮೂಲ್ಯ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ .

ಈ ಕಾದಂಬರಿ ಕುರಿತ ಜಯರಾಮಚಾರಿ ಅನಿಸಿಕೆ ಇಲ್ಲಿದೆ.

ದುಡು ದುಡು ಎಂದು ಓಡುತ್ತಿರುವ ಜಗತ್ತಿನಲ್ಲಿ ಸಾಹಿತ್ಯವೂ ಅದರಿಂದ ಹೊರತೇನಲ್ಲ. ಬಿಡುಗಡೆ ಮುಂಚೆಯೇ ಮರುಮುದ್ರಣ, ಪಿಒಡಿ ನೆಪದಲ್ಲಿ ವಾರಕ್ಕೊಂದು ಮುದ್ರಣ, ಸ್ಟೇಟಸ್ ರೀಲ್ಸ್ ಪೋಸ್ಟುಗಳಲ್ಲಿ ಕಳೆದು ಹೋದ ಸಾಹಿತ್ಯದಲ್ಲಿ ‘ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ’ ಎಂದು ಬಂದಿರುವ ಕೃತಿಗಳು ಕಮ್ಮಿ. ಅಂತದೊಂದು ಸಾಲಿಗೆ ‘ಜೀವರತಿ’ ಕಾದಂಬರಿಯನ್ನು ಸೇರಿಸಬಹುದು. ಈ ಕೃತಿಗೆ ಕನ್ನಡ ಮಹಾಕಾದಂಬರಿಗಳ ಪರಂಪರೆ ನೆರಳಿನ ಜೊತೆಗೆ ಕ್ಲಾಸಿಕ್ ಅನಿಸಿಕೊಳ್ಳುವ ಎಲ್ಲ ಗುಣವೂ, ವ್ಯಾಪ್ತಿಯೂ ಇದೆ.

ಒಂದು ತಲೆಮಾರು, ಒಂದು ದೊಡ್ಡಮನೆ, ದೊಡ್ಡಮನೆಯಿಂದ ಹೊಸಮನೆಗೆ ಸ್ಥಳಾಂತರವಾಗುವ ದೃಶ್ಯದಿಂದ ಆರಂಭವಾಗಿ, ರಸ್ತೆಯ ನಿರ್ಮಾಣಕ್ಕೆ ಕರೆದು ತರುವ ಆನೆಯೂ ಕೂಡ ನಮ್ಮ ಮನಸಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ.

ಒಂದು ಊರು ಊರಿಗೊಂದು ದೊಡ್ಡಮನೆ ದೊಡ್ಡಮನೆಯಲ್ಲಿ ಜನವೋ ಜನ, ದೊಡ್ಡಮನೆ ನೋಡಿಕೊಳ್ಳಲು ಜನ್ಮದಾಳುಗಳು, ಹೊರಗಿನಿಂದ ಬಂದ, ಉಳಿದು ಹೋದ ಆಳುಗಳು, ಆಲದಮರದ ಬಿಳಲುಗಳಂತೆ ಮಕ್ಕಳು, ಮರಿಮಕ್ಕ್ಳು, ತುಂಬಿದ ಮನೆ, ಹಿತ್ತಲಿನಲ್ಲಿ ಸದಾ ಅನ್ನ ಪಾಯಸ ಕಾಫಿ ಧಾರೆಯೆರೆವ ದೊಡ್ಡ ಕುಟುಂಬ.

ಒಂದು ತಲೆಮಾರಿನಲ್ಲಿ ಇದ್ದು ಹೋಗುವ ಎಲ್ಲ ಪಾತ್ರಗಳು ಇಲ್ಲಿ ಜೀವ ತಳೆದಿವೆ. ಮುಖ್ಯ ಪಾತ್ರ ದೊಡ್ಡಯ್ಯನ ಎದೆಯ ಗಾಯ, ಗಾಯಕ್ಕೆ ಬೇರೆ ಬೇರೆ ಜೇವಗಳಿಂದ ಮುಲಾಮು ಹಚ್ಚಿಸಿಕೊಂಡು ಗಾಯ ವಾಸಿಮಾಡಿಕೊಳ್ಳಲು ಒದ್ದಾಡುವ ಅವನ ಒದ್ದಾಟ, ಹೆಂಡ್ರು ಮಕ್ಕಳ ಕಣ್ಣಲಿ ಕಾಣುವ ದೊಡ್ಡಯ್ಯ, ಜನ್ಮದಾಳುಗಳು, ಆಳುಗಳ ಕಣ್ಣಲ್ಲಿ ಕಾಣುವ ದೊಡ್ಡಯ್ಯ. ಒಂದೇ ಪಾತ್ರ ಹಲವು ಬಗೆಯ ಕಣ್ಣುಗಳಿಂದ ನೋಡುವ ಹಾಗೆ ಹಲವು ಪಾತ್ರಗಳು ಕೂಡ ಹಲವು ಕಣ್ಣುಗಳಿಂದ ಅನಾವರಣಗೊಳ್ಳುವ ಕಾದಂಬರಿ.

ಮೊದಲನೇ ಹೆಂಡತಿಯ ಮುದ್ದು ಮತ್ತು ಪ್ರೀತಿ, ಎರಡನೇ ಹೆಂಡತಿ ಅವ್ವಕ್ಕನ ಕರ್ಮಯೋಗಿತನ  ಮತ್ತು ಇಡೀ ಮನೆಯನ್ನು ಬೆಳೆಸುವ ಮಕ್ಕಳನ್ನು ಬೆಳೆಸುವ ರೀತಿ, ದೊಡ್ಡಯ್ಯನ ಎದೆಯ ಗಾಯಕ್ಕೆ ಮುಲಾಮು ಹಚ್ಚಲು ಬರುವ ಕಲ್ಯಾಣಮ್ಮ, ಸುಶೀಲ, ಕುಂಟುತ್ತಾ ಬಂದು ಕುಂಟುವ ಕುರಿಮರಿಯ ಜೊತೆ ಬಾಡೂಟ ತಿನ್ನುವ ಆಳು, ಮೈನೆರೆದ ನೀಲುವನ್ನು ನೋಡಲು ಬಂದು ಹಲಸಿನ ಮರದಿಂದ ಬೀಳುವ ಪ್ರೇಮಿ, ಗೌರೀಶನ ಸಿಟ್ಟು ದುಕ್ಕ ಭಯ ಆ ಭಯವನ್ನು ಹೋಗಲಾಡಿಸುವ ಅರಸಿ, ಮಿಲಿಟರಿಯಿಂದ ಬಂದ ವೆಂಕು, ವೆಂಕುವಿಗೆ ಜೊತೆಯಾಗುವ ರತಿ, ರತಿಯ ಕಾಡುವ ಬಾಲ್ಯ, ರತಿಗಂಟಿಕೊಳ್ಳುವ ಚೇತನ, ಚೇತನಾಳ ಕುಟುಂಬ ಕಂಡ ಗಾಂಧೀ, ಅದೇ ಕುಟುಂಬದಲ್ಲಿ ಚಿರಂತನೆಂಬ ಹಸಿರು ಕಣ್ಣಿನ ಕ್ರೂರಿ, ಇಡೀ ಜನ್ಮ ದೊಡ್ಡವರಿಗಾಗಿ ಮುಡಿಪಾಗಿಡುವ ಐಯು ಮುತ್ತನಿ, ತನ್ನ ಜನಾಂಗಕ್ಕಾಗಿ ಗಟ್ಟಿಯಾಗಿ ನಿಂತ ಪುಟ್ಟ, ಹಲವು ಅವತಾರ ಎತ್ತುವ ಸ್ವಾಮಿ,ಅವನ ವಿಶಿಷ್ಟ ರೀತಿಯ ಸಾವು, ದೊಡ್ಡ ಮನೆ ಕಾಯುವ ಮಣಿ, ಮನ್ಮಣಿ ನಾಯಿಗಳು, ರತಿಯ ಚೆಲ್ವಿ ನಾಯಿ, ವೆಂಕುವಿನ ಕಜ್ಜಿ ನಾಯಿ, ಕೋಳಿ, ಇರುವೆ ಕೂಡ ಈ ಕಾದಂಬರಿಯಲ್ಲಿ ಕಾಡುವ ಪಾತ್ರಗಳಾಗಿಬಿಟ್ಟಿವೆ.

ಒಂದು ತಲೆಮಾರಿನ ನೂರು ವರ್ಷದ ಈ ದೀರ್ಘ ಕತೆಯನ್ನು ಯಾವ ಅವಸರವಿಲ್ಲದೆ ಕಣ್ಣಿಗೆ ಕಟ್ಟುವಂತೆ, ಎದೆಗೆ ಇಳಿಯುವಂತೆ ಜನಾ ತೇಜಶ್ರೀ ಕಟ್ಟಿಕೊಟ್ಟಿದ್ದಾರೆ. ಆ ಸೀಮೆಯ ಪಶು ಪಕ್ಷಿ ಗಿಡ ಮರ ಎಲ್ಲವನ್ನು ನೋಟವಾಗಿ, ದೃಶ್ಯವಾಗಿ, ರಾಗವಾಗಿ, ಬೆಳಕಾಗಿ, ಮಾತಾಗಿ, ಮೌನವಾಗಿ, ಹಸಿರಾಗಿ, ಬೆಂಕಿಯಾಗಿ, ಮಿಣುಕು ಹುಳುವಾಗಿ, ಸಾವಾಗಿ, ಪ್ರೀತಿಯಾಗಿ, ನೋವಾಗಿ, ದುಗುಡವಾಗಿ ನಮ್ಮೊಳಗೇ ಇಳಿಸುತ್ತ ಹೋಗುತ್ತಾರೆ. ಚಿಟ್ಟೆಯ ಹುಡಿ ಕೈಗಂಟಿದಂತೆ ಈ ಕಾದಂಬರಿಯ ಪಾತ್ರಗಳು ನಮ್ಮ ಎದೆಯೊಳಗೆ ನಿಂತುಬಿಡುತ್ತವೆ.

ಯಾವ ಅವಸರವಿಲ್ಲದೆ ನಿಧಾನವಾಗಿ ಓದುತ್ತ ಹೋದರೆ ಈ ಕಾದಂಬರಿಯ ಗುಂಗು ನಿಮ್ಮನ್ನು ಇನ್ನಿಲ್ಲದಂತೆ ಆವರಿಸುತ್ತದೆ.

ಮಲೆಗಳಲ್ಲಿ ಮದುಮಗಳು, ವಂಶವೃಕ್ಷ, ಮರಳಿ ಮಣ್ಣಿಗೆ, ಗ್ರಾಮಾಯಣ ದಂತಹ ಮಹಾನ್ ಕಾದಂಬರಿಗಳನ್ನು ಈ ಕಾದಂಬರಿ ನೆನಪಿಸಿಯುವುದಲ್ಲದೆ ಅದರ ಸಾಲಿಗೆ ಸೇರಿಹೋಗುವಷ್ಟು ಸಶಕ್ತವಾಗಿದೆ.

ತುಂಬಾ ವರ್ಷಗಳ ಮೇಲೆ ಒಂದೊಳ್ಳೆ ಕಾದಂಬರಿ ಓದಿದ ಸಾರ್ಥಕ ನನ್ನಲ್ಲಿ ಉಳಿದುಹೋಗಿದೆ

‍ಲೇಖಕರು Admin

5 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading