ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀವನಪ್ರೀತಿಯನ್ನು ಹುಡುಕುತ್ತಾ..

ಡಾ. ನಾಗಮಣಿ.ವಿ

ಮಧ್ಯಪ್ರದೇಶ

ನಮ್ಮ ಪಬ್ಲಿಕ್ ಸೆಕ್ಟರ್ ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರಲ್ಲಿ ನಮ್ಮ ಕಾಲೊನಿಯವರಲ್ಲದೆ ಸುತ್ತಮುತ್ತಲ ಹಳ್ಳಿಯವರೂ ಇರುತ್ತಾರೆ.ಅವರಲ್ಲಿ ಅನಕ್ಷರಸ್ಥರು ಅಥವಾ ಸಹಿ ಮಾಡಲಷ್ಟೇ ಕಲಿತಿರುವವರೇ ಹೆಚ್ಚು.ಇಂಥವರಲ್ಲಿ ಕೆಲವರಾದರೂ ದೀರ್ಘ ಕಾಲದ ಚಿಕಿತ್ಸೆಗಾಗಿ ನಮ್ಮ ಬಳಿ ಆಗಾಗ ಬರಬೇಕಾಗುತ್ತದೆ.ಹೀಗೆ ಬರುವಾಗ ತಮ್ಮ ರೋಗಕ್ಕೆ ಸಂಬಂಧಿಸಿದ ಹಳೆಯ ದಾಖಲೆಗಳನ್ನು ಒಂದೇ ಮರೆತುಬರುವುದೋ ಇಲ್ಲವೇ ಕಳೆದುಹಾಕುವುದೋ ಸಾಮಾನ್ಯ.ಎಲ್ಲೋ ಕೆಲವರು ಮುತುವರ್ಜಿಯಿಂದ ಎಲ್ಲವನ್ನೂ ತರುತ್ತಾರಾದರೂ ಹೆಚ್ಚಿನವರು ಖಾಲಿ ಕೈಯಲ್ಲಿ ಬರುವುದೂ,ವಿವರಗಳಿಲ್ಲದೆ ನಾವು ಪರದಾಡುವುದೂ ತಪ್ಪಿದ್ದಲ್ಲ.ಇದಕ್ಕಾಗಿಯೇ ಎಲ್ಲ ವಿವರಗಳನ್ನು ಕಂಪ್ಯೂಟರ್ ನಲ್ಲಿ ಸುರಕ್ಷಿತವಾಗಿ ದಾಖಲಿಸಿಡುವ ಯೋಜನೆ ಜಾರಿಯಲ್ಲಿದೆಯಾದರೂ ಅದಿನ್ನೂ ಆರಂಭದ ಹಂತದಲ್ಲಿದೆ.
ಅಂದೂ ಹಾಗೆಯೇ ಆಯಿತು.ಸುಮಾರು ಹದಿನೇಳು-ಹದಿನೆಂಟು ವರ್ಷದ ಕಾಲೇಜ್ ವಿದ್ಯಾರ್ಥಿಯೊಬ್ಬ ಒಳಬಂದ.ಅದು ಅವನ ಎರಡನೆಯ ಭೇಟಿ.’ಹಳೆಯ ಕಾಗದ ತೋರಿಸು’,ಎಂದೆ.’ಇಲ್ಲ’ ಎಂದ.’ಯಾಕೆ ತಂದಿಲ್ಲ?ಬೇಕಾಗುತ್ತದೆಂದು ನಿನಗೆ ಗೊತ್ತು ತಾನೆ ?ಜೋಪಾನವಾಗಿಟ್ಟುಕೊಳ್ಳಲು ಹೇಳಿದ್ದೆನಲ್ಲ? ‘,ಎಂದು ಕೇಳಿದಾಗ,’ಕಳೆದು ಹೋಗಿರಬಹುದು,ಗೊತ್ತಿಲ್ಲ’,ಎಂಬ ಉತ್ತರ ಬಂದಿತು.ತಾಳ್ಮೆ ಕಳೆದುಕೊಳ್ಳದೆ,’ಹೋಗಲಿ,ಕಳೆದ ಸಲ ನಾನು ಬರೆದುಕೊಟ್ಟ ಔಷಧಿಯ ಹೆಸರನ್ನಾದರೂ ಹೇಳು’,ಎಂದೆ.ಕಡೆಯ ಪಕ್ಷ ನೆನಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ ‘ಪಟ್’ ಎಂದು ‘ಗೊತ್ತಿಲ್ಲ’,ಎಂದಾಗ ಮೈ ಪರಚಿಕೊಳ್ಳುವಂತಾಯಿತು.ಅವನ ಮುಖದಲ್ಲಿ ‘ಇದು ಮುಖ್ಯ ವಿಷಯವಲ್ಲ’,ಅಥವಾ, ‘ಇದಕ್ಕೂ ನನಗೂ ಸಂಬಂಧವೇ ಇಲ್ಲ’,ಎಂಬಂಥ ಭಾವ.ಕಳೆಯುವುದು,ಮರೆಯುವುದು ಹೊಸದೇನಲ್ಲದಿದ್ದರೂ ಆ ಹುಡುಗನಿಂದ ನಾನಿದನ್ನು ನಿರೀಕ್ಷಿಸಿರಲಿಲ್ಲ.’ಓದುವ ವಯಸ್ಸಿನಲ್ಲಿ ಒಂದೆರಡು ಔಷಧಿಗಳ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಲಾಗುವುದಿಲ್ಲವೆಂದರೆ,ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದಿಲ್ಲವೆಂದರೆ, ಇದೆಂಥ ಬೇಜವಾಬ್ದಾರಿ’,ಎಂದುಕೊಳ್ಳುತ್ತಲೇ ಅವನನ್ನು ಪರೀಕ್ಷಿಸಿ ಔಷಧಿ ಬರೆದುಕೊಟ್ಟು ಕಳಿಸಿದೆ.

ನಂತರ ಒಳಬಂದವರು ಸುಮಾರು ಎಂಭತ್ತರ ವೃದ್ಧರು.ಮಗನ ಕೈ ಹಿಡಿದು ನಿಧಾನವಾಗಿ ನಡೆದು ಬಂದು ಕುಳಿತರು.ಅವರೂ ಒಂದು ತಿಂಗಳ ಹಿಂದೆ ನನ್ನ ಬಳಿ ಬಂದಿದ್ದವರೇ. ಯಥಾಪ್ರಕಾರ ಹಳೆಯ ಚೀಟಿಗಳನ್ನು ತಂದಿರಲಿಲ್ಲ.’ಸಿಟ್ಟು ಮಾಡಬೇಡಿ ಅಮ್ಮ,,ಮಗಳ ಮನೆಗೆ ಹೋಗಿದ್ದೆ,ಅಲ್ಲೇ ಉಳಿದು ಹೋಯಿತು’,ಎಂದು ಪ್ರಾಮಾಣಿಕವಾಗಿ ನುಡಿದರು.ಇಂತಹ ವಿನಯದ ಮೂರ್ತಿಯ ಮೇಲೆ ಸಿಟ್ಟಾದರೂ ಹೇಗೆ ಬಂದೀತು?ಔಷಧಿಗಳ ಹೆಸರನ್ನು ಕೇಳಿದರೆ ಇನ್ನೂ ತಬ್ಬಿಬ್ಬಾದಾರು ಎಂದುಕೊಂಡು,’ಅಜ್ಜಾ,ಕಳೆದ ಸಲ ಬರೆದುಕೊಟ್ಟಿದ್ದ ಮಾತ್ರೆ ಗುಂಡಗಿತ್ತೋ ಉದ್ದವಾಗಿತ್ತೋ?ಬೆಳ್ಳಗಿತ್ತೋ ಗುಲಾಬಿ ಬಣ್ಣದ್ದಾಗಿತ್ತೋ?ಹೇಗೆ ತೆಗೆದುಕೊಳ್ಳಲು ಹೇಳಿದ್ದೆ?….’ಎಂದು ಆರಂಭಿಸುವಷ್ಟರಲ್ಲಿ,’ಆ ಔಷಧಿಗಳ ಹೆಸರು ——.ಹೀಗೆ ತೆಗೆದುಕೊಳ್ಳಲು ಹೇಳಿದ್ದಿರಿ’,ಎಂದು ನಾಲ್ಕೈದು ಔಷಧಿಗಳ ಬಗ್ಗೆ ಒಂದಿಷ್ಟೂ ತಪ್ಪಿಲ್ಲದಂತೆ ಒಪ್ಪಿಸಿದಾಗ ತಬ್ಬಿಬ್ಬಾದದ್ದು ನಾನು!ತಾವು ಹೆಚ್ಚು ಓದಿಲ್ಲದಿದ್ದರೂ ಮಗನಿಂದ ಕೇಳಿ ಜ್ಞಾಪಕದಲ್ಲಿಟ್ಟುಕೊಂಡಿದ್ದರು.ಅವರನ್ನು ಬಾಯ್ತುಂಬ ಹೊಗಳಿ,ಪರೀಕ್ಷಿಸಿ,ಕಳಿಸುತ್ತಾ ಅವರ ಮಗನೊಂದಿಗೆ,’ನಿಮ್ಮ ತಂದೆಯಿಂದ ನಾನು ಕಲಿಯಬೇಕಾದ್ದು ಬಹಳಷ್ಟಿದೆ’,ಎಂದಾಗ ಅವರು ತಮಾಷೆಯಾಗಿ,’ ನಿಮಗೆ ಅಷ್ಟು ಇಷ್ಟವಾದರೆ ಬಾಬೂಜಿಯನ್ನು ಇಲ್ಲೇ ಬಿಟ್ಟು ಹೋಗಲಾ ಮೇಡಂ?ಸಂಜೆಯವರೆಗೆ ಮಾತಾಡಿಕೊಂಡಿರಿ’,ಎನ್ನುತ್ತಾ ನಗುನಗುತ್ತಲೇ ತಂದೆಯೊಂದಿಗೆ ತೆರಳಿದರು.
ಒಂದರ ಹಿಂದೊಂದರಂತೆ ನಡೆದ ಈ ತದ್ವಿರುದ್ಧ ಘಟನೆಗಳನ್ನೇ ಮೆಲುಕು ಹಾಕುತ್ತಿದ್ದೆ.ಆ ವಯೋವೃದ್ಧರಲ್ಲಿದ್ದ ಆಸಕ್ತಿ, ಶ್ರದ್ಧೆ ಆ ಹುಡುಗನಲ್ಲಿರಲಿಲ್ಲ.ಹಳೆಯ ದಾಖಲೆಯನ್ನು ಕಳೆದುಹಾಕಿದ ಎನ್ನುವುದಕ್ಕಿಂತ ಅವನ ನಿರುತ್ಸಾಹ,ಉದಾಸೀನ,ಎಲ್ಲಕ್ಕಿಂತ ಹೆಚ್ಚಾಗಿ ನಿರ್ಲಿಪ್ತವೆನ್ನಬಹುದಾದ ಮನೋಭಾವ ಮನಸ್ಸನ್ನು ಕಾಡುತ್ತಿತ್ತು.ಅಂತಹ ವರ್ತನೆಯನ್ನು ಅವನೊಬ್ಬನಲ್ಲೇ ಅಲ್ಲ,ಅವನ ವಯಸ್ಸಿನ ಇನ್ನೂ ಕೆಲವರಲ್ಲಿ ಕಂಡಿದ್ದೆ.ಏನಾಗಿದೆ ಇವರಿಗೆಲ್ಲ?ಅರಿವಿನ ಅಭಾವವೇ ಅಥವಾ ಮಾರ್ಗದರ್ಶನದ ಕೊರತೆಯೇ ?ಉತ್ಸಾಹದಿಂದ ಪುಟಿಯುತ್ತಿರಬೇಕಾದ ದಿನಗಳಲ್ಲಿ,ಒಂದು ಹೇಳಿದರೆ ಹತ್ತು ಕಲಿಯುವ ಆಸಕ್ತಿ ತೋರಬೇಕಾದ ವಯಸ್ಸಿನಲ್ಲಿ ಈ ನಿರಾಸಕ್ತಿ ಏಕೆ?ಇನ್ನು ಮುಂದಿನ ಜೀವನದಲ್ಲೂ ಎಲ್ಲ ವಿಷಯಗಳ ಬಗ್ಗೆಯೂ ಇವನ ಧೋರಣೆ ಹೀಗೆಯೇ ಇದ್ದೀತಾ ಅಥವಾ ಜವಾಬ್ದಾರಿಯನ್ನು ಅಪೇಕ್ಷಿಸುವ ಕೆಲಸಗಳ ಬಗ್ಗೆ ಮಾತ್ರ ಹೀಗಾ?ಅವನ ವರ್ತನೆಯನ್ನು ಜೀರ್ಣಿಸಿಕೊಳ್ಳಲಾರದೆ,’ಈಗಿನ ಮಕ್ಕಳೇ ಹೀಗೆ’, ಎಂದು ಸಾರಾಸಗಟಾಗಿ ತೆಗಳಲೂ ಮನಸ್ಸು ಬಾರದೆ ತಲೆ ಗೊಂದಲದ ಗೂಡಾಯಿತು.
ಇನ್ನೊಂದು ದಿನ-ಹೊಸದೊಂದು ಕಥೆ.ಅದೇ ಹೊರರೋಗಿಗಳ ವಿಭಾಗ.ಒಳಬಂದಿದ್ದು ವೃದ್ಧರೊಬ್ಬರೊಂದಿಗೆ ಹದಿನಾಲ್ಕು-ಹದಿನೈದರ ಹುಡುಗಿ.”ಮೇಡಂ,ಇಲ್ಲಿ ಅಜ್ಜ,ಅಜ್ಜಿ ಇಬ್ಬರೇ ಇರುತ್ತಾರೆ.ನಾವಿರುವುದು ಬೇರೆ ಊರಿನಲ್ಲಿ,ಸಧ್ಯಕ್ಕೆ ರಜೆಯಲ್ಲಿ ಇಲ್ಲಿಗೆ ಬಂದಿದ್ದೇವೆ.ಅಜ್ಜನಿಗೆ—- ಈ ತೊಂದರೆಯಾಗಿದೆ,ತಮ್ಮ ಆರೋಗ್ಯವನ್ನು ಸ್ವಲ್ಪ ಮಟ್ಟಿಗೆ ನಿರ್ಲಕ್ಷಿಸುತ್ತಾರೆ.ಇವರನ್ನು ನೋಡಿ,ಅಗತ್ಯವಿರುವ ಪರೀಕ್ಷೆಗಳನ್ನು ಬರೆದುಕೊಡಿ,ನಾವಿಲ್ಲಿರುವಂತೆಯೇ ಅದನ್ನೆಲ್ಲ ಮಾಡಿಸುತ್ತೇವೆ”,ಎಂದು ಕಾಳಜಿಯಿಂದ ನುಡಿದಾಗ,ಆ ಪುಟ್ಟ ಹುಡುಗಿಯ ಬಾಯಲ್ಲಿ ಅಷ್ಟು ಜವಾಬ್ದಾರಿಯ ಮಾತು ಕೇಳಿ,”ಭಲೇ”,ಎನ್ನುವಂತಾಯಿತು.ಅವರನ್ನು ಪರೀಕ್ಷಿಸಿ,ಸ್ವಲ್ಪ ಹೆಚ್ಚು ಹೊತ್ತೇ ಕುಳ್ಳಿರಿಸಿ ಮಾತಾಡಿಸಿ,”ನಿಮ್ಮ ಈ ಅಜ್ಜ,ಮೊಮ್ಮಗಳ ಬಾಂಧವ್ಯ ಹೀಗೆಯೇ ಇರಲಿ”,ಎಂದು ಹಾರೈಸಿ ಕಳಿಸಿದೆ.
ಮೊದಲೇ ಹೇಳಿದಂತೆ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸುತ್ತಮುತ್ತಲ ಹಳ್ಳಿಗಳಿಂದಲೂ ಸಾಕಷ್ಟು ಜನರು ಬರುವುದರಿಂದ ಯಾವುದೇ ಸಮಯದಲ್ಲಿ ಎಲ್ಲಾ ವೈದ್ಯರ ಕೋಣೆಯ ಮುಂದೆ ಜನದಟ್ಟಣೆ ಇರುತ್ತದೆ.ಬಂದವರೆಲ್ಲರಿಗೂ ವೈದ್ಯರು ತನ್ನನ್ನೇ ಬೇಗ ನೋಡಲೆಂಬ ಆತುರ,ಬಂದ ಕೆಲಸವನ್ನು ಬೇಗ ಮುಗಿಸಿಕೊಂಡು ಹೋಗಬೇಕೆಂಬ ತರಾತುರಿ.ಎಷ್ಟೇ ಕ್ಯೂ,ಟೋಕನ್,ಕುರ್ಚಿಗಳ ವ್ಯವಸ್ಥೆ ಮಾಡಿದರೂ,’ನಾ ಮೊದಲು,ತಾ ಮೊದಲು’,ಪೈಪೋಟಿ ತಪ್ಪಿದ್ದಲ್ಲ.ಇಂಥದ್ದೇ ಒಂದು ಬಿಡುವಿಲ್ಲದ ದಿನ ಒಬ್ಬರಾದ ಮೇಲೆ ಇನ್ನೊಬ್ಬರೆಂಬಂತೆ ನೋಡುತ್ತಿದ್ದಾಗ ತನ್ನ ಸರದಿಯಂತೆ ಒಳಬಂದ ಹುಡುಗಿಯೊಬ್ಬಳು ಹೇಳಿದ್ದು,”ಮೇಡಂ,ಹೊರಗೆ ಕಾಯುತ್ತಿರುವವರ ಪೈಕಿ ಒಬ್ಬ ಹಿರಿಯರಿಗೆ ಹೆಚ್ಚಿನ ತೊಂದರೆ ಇರುವಂತಿದೆ.ಕುಳಿತುಕೊಳ್ಳಲೂ ಕಷ್ಟ ಪಡುತ್ತಿದ್ದಾರೆ.ಅವರ ಜೊತೆಗೆ ಯಾರೂ ಇಲ್ಲ.ಮೊದಲು ಅವರನ್ನು ನೋಡಿ,ನಾನು ಕಾಯುತ್ತೇನೆ,ಪರವಾಗಿಲ್ಲ”,ಎಂದು. ತತ್ಕ್ಷಣವೇ ಆ ಹಿರಿಯರನ್ನು ಕರೆದು ನೋಡಿದಾಗ ಅವರಿಗೆ ನಿಜವಾಗಿಯೂ ಹೆಚ್ಚಿನ ತೊಂದರೆ ಇದ್ದಿದ್ದರ ಅರಿವಾಯಿತು.ಹೊರಗೆ ಕಾಯುತ್ತಿದ್ದ ಇನ್ನಿತರರು ನೋಡದಿದ್ದ ಅಥವಾ ನೋಡಿಯೂ ನೋಡದಂತಿದ್ದ ಸಂಗತಿಯನ್ನು ಇವಳು ಗಮನಿಸಿದ್ದಳು.ಸಾಮಾನ್ಯವಾಗಿ ಇಂತಹ ಸಂಗತಿಗಳನ್ನು ತತ್ಕ್ಷಣವೇ ನನ್ನ ಗಮನಕ್ಕೆ ತರುವ ಆಸ್ಪತ್ರೆಯ ಸಿಬ್ಬಂದಿವರ್ಗದವರ ಕಣ್ಣಿಗೂ ಇದು ಬಿದ್ದಿರಲಿಲ್ಲ.’ತಮ್ಮ ಕೆಲಸವಾದರೆ ಸಾಕು,ಬೇರೆಯವರ ಗೊಡವೆ ತಮಗೇಕೆ’ ಎಂಬ ಮನೋಭಾವದವರ ಮಧ್ಯೆ ಈ ಹುಡುಗಿ ವಿಶಿಷ್ಟವಾಗಿ ಕಾಣಿಸಿದಳು.ಒಳಕರೆದು ಅವಳ ಬೆನ್ನುತಟ್ಟಿ ಕಳಿಸಿದೆ.
ಮತ್ತೊಂದು ಸಂಜೆ,ಇಲ್ಲಿಯ ತರಬೇತಿ ಕೇಂದ್ರದಿಂದ ಹೊರಬರುತ್ತಿದ್ದಾಗ ಅಲ್ಲೇ ಎದುರಿಗಿದ್ದ ಖಾಲಿ ಜಾಗದಲ್ಲಿ ಯುವಕನೊಬ್ಬ ತನ್ನ ಸುತ್ತಲೂ ಸುಮಾರು ಹದಿನೈದು -ಇಪ್ಪತ್ತು ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿಕೊಂಡಿರುವುದು ಕಾಣಿಸಿತು.ಎಲ್ಲರ ಕೈಯಲ್ಲೂ ಪುಸ್ತಕಗಳು.ನನ್ನ ಜೊತೆಯಲ್ಲೇ ಹೊರಬಂದ ತರಬೇತಿ ಕೇಂದ್ರದ ಅಧಿಕಾರಿ,”ಈತ ಇದೇ ವರ್ಷ ಎಂಜಿನಿಯರಿಂಗ್ ಪದವಿ ಪಡೆದು,ಇಲ್ಲಿ ತರಬೇತಿ ಹೊಂದುತ್ತಿರುವ ತಂಡಕ್ಕೆ ಸೇರಿದವರು.ಹಾಸ್ಟೆಲ್ ನಲ್ಲಿದ್ದಾರೆ.ಸಂಜೆ ಆಫೀಸಿನಿಂದ ಬಂದ ಮೇಲೆ ಹಾಸ್ಟೆಲ್ ನ ಕೆಲಸದವರ, ಅಡಿಗೆಯವರ,ಧೋಬಿಯ ಮಕ್ಕಳನ್ನು ಸೇರಿಸಿಕೊಂಡು ಪಾಠ ಹೇಳಿಕೊಡುತ್ತಾರೆ,ಆಟ ಆಡಿಸುತ್ತಾರೆ,ಹಾಡುಗಳನ್ನೂ ಹೇಳಿಕೊಡುತ್ತಾರೆ.ಬಿಡುವಿನ ಸಮಯವನ್ನು ಇವರಂತೆಯೇ ಕಳೆಯುವವರು ಇವರ ಗುಂಪಿನಲ್ಲಿ ಇನ್ನೂ ಒಂದಿಬ್ಬರಿದ್ದಾರೆ”,ಎಂದು ಹೇಳಿದರು.’ಸಮಯದ ಸದ್ವಿನಿಯೋಗವೆಂದರೆ ಇದೇ ಅಲ್ಲವೇ,ಮಕ್ಕಳೊಂದಿಗೆ ಹೀಗೆ ಉಪಯುಕ್ತವಾಗಿ ಕಾಲ ಕಳೆಯುವುದಕ್ಕಿಂತ ಇನ್ನೇನು ಬೇಕು’, ಎಂದುಕೊಳ್ಳುತ್ತ ಮುಂದೆ ನಡೆದೆ.
ಸ್ವಲ್ಪ ದೂರದಲ್ಲೇ ಅದೇ ಗುಂಪಿನ ಕೆಲವು ಯುವಕ,ಯುವತಿಯರು ಉತ್ಸಾಹದಿಂದ ಚರ್ಚಿಸುತ್ತಾ ನಿಂತಿರುವುದು ಕಾಣಿಸಿತು.ಪರಿಚಯದ ನಗೆ ಬೀರಿದ ಕೆಲವರನ್ನು ವಿಚಾರಿಸಿದೆ,”ಏನು ನಡೆಯುತ್ತಿದೆ ?”ಎಂದು.”ಚಳಿ ಸಿಕ್ಕಾಪಟ್ಟೆ ಇದೆಯಲ್ಲ ಮೇಡಂ,ಅಗತ್ಯವಿರುವವರಿಗೆ ಕಂಬಳಿಗಳನ್ನು ಹಂಚೋಣವೆಂದುಕೊಂಡಿದ್ದೇವೆ.ಅದರ ರೂಪರೇಷೆ ಸಿದ್ಧ ಪಡಿಸುತ್ತಿದ್ದೇವೆ”,ಎಂದರು.”ಓ,ಇದೂ ನಿಮ್ಮ ತರಬೇತಿಯ ಅಂಗವಾಗಿರಬೇಕು”,ಎಂದೆ ಆ ಅವಧಿಯಲ್ಲಿ ಅವರು ಪ್ರಸ್ತುತಪಡಿಸುವ ನಾಟಕವೇ ಮೊದಲಾದ ಇನ್ನಿತರ ಚಟುವಟಿಕೆಗಳನ್ನು ನೆನೆಯುತ್ತ .”ಇಲ್ಲ ಇಲ್ಲ ,ಇದು ನಾವೇ ಎಲ್ಲ ಸೇರಿ ಮಾಡುತ್ತಿರುವುದು”,ಎಂದಾಗ ಬಹಳ ಸಂತೋಷವಾಯಿತು.’ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಶುಭವಾಗಲಿ”,ಎಂದು ಹಾರೈಸಿ ಅಲ್ಲಿಂದ ಹೊರಟೆ.
ಇದೆಲ್ಲಕ್ಕೂ ತಿಲಕವಿಟ್ಟಂತೆ ನಡೆಯಿತು ಮರುದಿನದ ಘಟನೆ.ಬೆಳಿಗ್ಗೆಯೇ ಬಂದ ಆ ನಗುಮುಖದ ಹುಡುಗ.ಶಾಲಾ ವಾರ್ಷಿಕೋತ್ಸವದ ನಾಟಕವೊಂದರಲ್ಲಿ ಸೂತ್ರಧಾರನ ಪಾತ್ರ ವಹಿಸಿ, ವಯಸ್ಸಿಗೆ ಮೀರಿದ ಅಭಿನಯ ನೀಡಿದ್ದನೆಂದು ನಾನು ಮೆಚ್ಚುಗೆ ಸೂಚಿಸಿದಾಗಿನಿಂದ ಅವನಿಗೆ ನನ್ನಲ್ಲಿ ಸ್ವಲ್ಪ ಸಲುಗೆ ಮೂಡಿತ್ತು.ನನ್ನ ಬಳಿ ಬಂದಾಗಲೆಲ್ಲ,”ಕವಿತೆ ಬರೆದಿದ್ದೇನೆ,ಕೇಳ್ತೀರಾ ಆಂಟಿ?’,ಎಂದು ಸಂಕೋಚದಿಂದಲೇ ಕೇಳಿ,”ಕವಿತೆಯನ್ನು ಅರ್ಥೈಸಿಕೊಳ್ಳುವಷ್ಟು ಹಿಂದಿಯ ಜ್ಞಾನ ನನಗಿಲ್ಲ ಮಹಾರಾಯ”,ಎಂದರೂ ಕೇಳದೆ,”ಸರಳವಾಗಿದೆ,ಕೇಳಿ”,ಎಂದು ತಾನು ಬರೆದ ಕವನಗಳನ್ನು ವಾಚಿಸಿ ಹೋಗುತ್ತಿದ್ದ.ಚೆನ್ನಾಗಿಯೇ ಬರೆಯುತ್ತಿದ್ದ.ಅಂದು ಬಂದಾಗ,”ಏನಾದರೂ ಹೊಸದಾಗಿ ಬರೆದಿದ್ದೀಯಾ?”ಎಂದು ಕೇಳಿದಾಗ,”ಕೇಳಿ ಆಂಟಿ,ಹೊಸ ಕವಿತೆ”,ಎಂದು ಹೇಳಿ,”ಹೂವು,ಮರ,ಸೂರ್ಯ,ಚಂದ್ರ ಎಲ್ಲ ತಮ್ಮ ತಮ್ಮ ಧರ್ಮವನ್ನು ಪಾಲಿಸುತ್ತಿರುವಾಗ ಮಾನವ,ನೀನೇಕೆ ನಿನ್ನ ಧರ್ಮವನ್ನು ಮರೆತಿರುವೆ?”,ಎಂಬರ್ಥ ಬರುವಂಥ ಪ್ರಾಸಬದ್ಧವಾದ ಕವಿತೆಯನ್ನು ತನ್ನದೇ ಆದ ಶೈಲಿಯಲ್ಲಿ ವಾಚಿಸಿ ನನ್ನಿಂದ ಶಹಭಾಸ್ ಗಿರಿ ಗಿಟ್ಟಿಸಿಕೊಂಡು ಹೋದ.ಇಷ್ಟು ಚಿಕ್ಕ ಹುಡುಗನ ಹೃದಯದಲ್ಲಿ ಇಷ್ಟೆಲ್ಲ ಭಾವನೆಗಳು ಅಡಗಿವೆಯೇ ಎನಿಸಿತು.
ನನ್ನ ಸುತ್ತ ಜೀವಂತಿಕೆ ತುಂಬಿ ತುಳುಕಾಡುತ್ತಿತ್ತು!ಜೀವನಾಸಕ್ತಿ,ಜೀವನಪ್ರೀತಿಯುಳ್ಳ ಎಳೆಯರು ನನ್ನ ಬಳಿಯೇ ಇದ್ದರು.ಭಿನ್ನವಾಗಿ ಯೋಚಿಸುವ,ಯೋಚಿಸಿದ್ದನ್ನು ಸಾಧಿಸುವವರ ದಂಡೇ ಇತ್ತು.ಇಷ್ಟು ಸಂವೇದನಾಶೀಲತೆ,ಸಹೃದಯತೆ ಇದ್ದರೆ ಬೇಕಾದಷ್ಟಾಯಿತು.ಉತ್ತಮ ಮನುಷ್ಯರಾಗಿ ಬಾಳಲು ಬೇಕಾದ ಪ್ರಾಥಮಿಕ ಅಗತ್ಯವಂತೂ ಇದ್ದಂತಾಯಿತಲ್ಲ ಎಂದೆನಿಸಿ ಮನಸ್ಸು ನಿರಾಳವಾಯಿತು.ಆ ದಾಖಲೆಗಳನ್ನು ಕಳೆದುಕೊಂಡ ಹುಡುಗ ಅಥವಾ ಅಂತಹವರು ಮತ್ತೊಮ್ಮೆ ನನ್ನ ಬಳಿ ಬಂದಾಗ ಇನ್ನೂ ಚೆನ್ನಾಗಿ ಮನವರಿಕೆಯಾಗುವಂತೆ ಸಲಹೆ ಕೊಟ್ಟರಾಯಿತು,ಪರಿಣಾಮಕಾರಿಯಾದರೂ ಆಗಬಹುದು ಎಂದುಕೊಳ್ಳುತ್ತಿರುವಂತೆಯೇ ಆಶ್ಚರ್ಯಕರ ರೀತಿಯಲ್ಲಿ ಹೃದಯ ಹಗುರಾಗಿತ್ತು.
 

‍ಲೇಖಕರು G

7 February, 2013

8 Comments

  1. ಶ್ರೀವತ್ಸ ಜೋಶಿ

    ಬದುಕಿನ ತುಣುಕುಗಳು (slice of life) ಮಾದರಿಯ ಈ ಲೇಖನ ಬರಹಗಾರ್ತಿಯ ಜೀವನಪ್ರೀತಿಯನ್ನಷ್ಟೇ ಅಲ್ಲ, ಓದುಗನ ಜೀವನಪ್ರೀತಿಯನ್ನೂ ಹೆಚ್ಚಿಸಿದೆ. ಋಣಾತ್ಮಕ (negative)ಅಂಶಗಳನ್ನು ಗಮನಿಸಬೇಕು, ತಿದ್ದುಪಡಿಯಾಗುವಂತೆ ಮಾಡಬೇಕು ನಿಜ, ಆದರೆ ಆ ಭರದಲ್ಲಿ ಧನಾತ್ಮಕ ಅಂಶಗಳತ್ತ (positive aspects) ನಾವು ಗಮನವನ್ನೇ ಕೊಟ್ಟಿರುವುದಿಲ್ಲ. ಹಾಗಾಗಬಾರದು ಎನ್ನುವುದನ್ನು ಲೇಖಕಿ ನಿಜಜೀವನ ಉದಾಹರಣೆಗಳಿಂದ ಚೆನ್ನಾಗಿ ಮನದಟ್ಟು ಮಾಡಿದ್ದಾರೆ. ವೈದ್ಯಕೀಯ ವೃತ್ತಿಜೀವನದಲ್ಲಿರುವ, ಕನ್ನಡ ಓದು-ಬರಹದ ಒಳ್ಳೆಯ ಸಂಸ್ಕಾರವನ್ನು ಈಗಲೂ ಮುಂದುವರಿಸಿಕೊಂಡುಬಂದಿರುವ ಡಾ.ನಾಗಮಣಿ ಅವರು ಇನ್ನೂ ಹೆಚ್ಚುಹೆಚ್ಚು ಬರಹಗಳನ್ನು ಬರೆಯಬೇಕು ಎಂದು ನನ್ನ ಆಶಯ.

  2. ಡಾ.ನಾಗಮಣಿ.ವಿ.

    ಜೋಶಿಯವರೆ,ನಿಮ್ಮ ಪ್ರತಿಕ್ರಿಯೆ ನನ್ನ ಹುಮ್ಮಸ್ಸನ್ನು ಹೆಚ್ಚಿಸಿದೆ.ಬಹಳ ಸಂತೋಷವಾಯಿತು.ವಂದನೆಗಳು.

  3. Sandhya, Secunderabad

    Mani Madam, Tumba hrudayasparshiyaagi barediddiri. Nimma maatugalante barahavoo sundaravaagide.

  4. Jyothi Kadladi

    Mani, neeu Anupama Niranjanara thhara doctor-barahagarthi aagabeku.. howdu. jeevanada positive vishayagalannu eshtu channagi highlight maadiddeeri…

  5. Paresh Saraf

    ಉತ್ತಮ ಲೇಖನ. ಜೀವನ ಪ್ರೀತಿ ಎಲ್ಲರಲ್ಲೂ ಬರಬೇಕು. ಚಿಕ್ಕ ಚಿಕ್ಕ ವಿಷಯಗಳಲ್ಲೂ ಖುಷಿ ಪಡಬೇಕು. ಕೈಲಾದ ಸಹಾಯ ಮಾಡುವುದು, ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ಸದಾ ಚುರುಕಾಗಿರುವುದು ಬಹಳ ಅತ್ಯಗತ್ಯ. ಹಣ, ಸವಲತ್ತುಗಳು ಎಷ್ಟೇ ಇದ್ದರು ಜೀವನದಲ್ಲಿ ಮುಖ್ಯವಾದುದು “ತೃಪ್ತಿ”. ಅದಿದ್ದರೆ ಬಾಳಿಗೆ ಒಂದು ಅರ್ಥ. ಒಳ್ಳೆಯ ಲೇಖನದೊಂದಿಗೆ ನಮ್ಮ ಜೀವನ ಪ್ರೀತಿ ಹೆಚ್ಚಿಸಿದ್ದಕ್ಕೆ ಧನ್ಯವಾದಗಳು

  6. veda

    Chendada baraha Mani. Nanu kooda yake eegina maklu heege, unnata vichara beliskondilla? ello kaledu hoda hagirtare antella avara negative aspectsgala baggene yochitirtidde. Nimma baraha adannu dooramaditu.Nimma Innashtu, mattashtu anubhavagalannu barahakke ilisi.

  7. malathi S

    chandada write up nagamani. Love you
    last para is ‘sone pe suhaaga’..write more and we will make a compilation of ur write ups..
    ee haadu nenapaytu’badi badi kushiyaan hai choti choti baaton mein)
    😉
    ms

  8. ಡಾ.ನಾಗಮಣಿ.ವಿ.

    ಎಲ್ಲರಿಗೂ ವಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading