ಜಿ ಪಿ ಬಸವರಾಜು ಹೊಸ ಕವಿತೆ- ಕೊನೆಯ ಭೇಟಿ

ಜಿ. ಪಿ . ಬಸವರಾಜು

**

ಜನ ಗುರುತಿಟ್ಟುಕೊಂಡಿರುತ್ತಾರೆ
ತಾವು ವಾಸವಿರುವ ಊರನ್ನು
ಬೀದಿಯನ್ನು ಗಲ್ಲಿಯನ್ನು ಮೂಲೆಯ
ಪೆಟ್ಟಿಗೆ ಅಂಗಡಿಯನ್ನು, ಆಗಾಗ
ಎದುರಾಗುವ ತಿರುವುಗಳನ್ನು

ನೆನಪಿರುತ್ತಾರೆ ಅವರಿಗೆ
ಪ್ರೀತಿ ತೋರಿದವರು, ಜಗಳವಾಡಿದವರು
ಸುಮ್ಮನೆ ಬದುಕಿ ಯಾರಿಗೂ ಭಾರವಾಗದವರು
ಕಟ್ಟೆಗೆ ಕೂತು ಪಟ್ಟಾಂಗ ಹೊಡೆಯುವವರು
ಆಗಾಗ ಸುಳಿದಾಡುವ ಚೆಲುವಾದ ಹುಡುಗಿಯರು
ದುಡಿಯುವವರು ದಣಿಯುವವರು ಬೆವರು ಹರಿಸುವವರು
ತನ್ನ ತುತ್ತನ್ನೆ ಎಲ್ಲರಿಗು ಹಂಚಿದವರು


ಹೀಗೆ ತಿರುಗಿ ಹಾಗೆ ಹೋಗಿ, ದೂರವಿಲ್ಲ
ಹತ್ತಿರ ನಾಕು ಹೆಜ್ಜೆ,
ನಸು ಬೆಳಕಿನ ಮುಂಜಾವಿನಲ್ಲಿ
ಮಂಜು ಕವಿದ ದಾರಿಯಲ್ಲಿ
ದಾರಿ ಪತ್ತೆಯಾಗುವುದಿಲ್ಲ ಸುಲಭದಲ್ಲಿ

ಹೆಜ್ಜೆ ಹೆಜ್ಜೆಗೆ ನಿಂತು ಕೇಳಿದರೆ
ಹೇಳುತ್ತಾರೆ ನಿಸೂರಾಗಿ
ತಮ್ಮದೇ ಓಣಿ ತಮ್ಮದೇ ಗಲ್ಲಿ;
ನಿಲ್ಲಿ ಬಂದೆ ಎಂದು ಬಂದವರು
ಕರೆದೊಯ್ಯುತ್ತಾರೆ ನೇರ
ಮನೆಗೆ, ಬಾಗಿಲು ಬಡಿದು
ಮನೆಯವರ ಹೊರ ಕರೆದು
ತೋರಿಸುತ್ತಾರೆ ನಮ್ಮನ್ನು


ವಿಷ್ಣುನಾಯ್ಕರೆಂದರೆ
ವಿಷ್ಣುವೇ
ಎಷ್ಟೊಂದು ಅವತಾರ

ಹನಿ ಹನಿಯ ಬೆವರು ಹರಿದು
ಕುಣಿದು ದಣಿದು ಗಂಟಲು ಹರಿದು
ಹಾಡಿದ್ದೆಲ್ಲ ಅದೇ ಹಾಡು ತಮ್ಮವರ
ಹಾಡು
ಸಂಜೆ ರಾತ್ರಿಗಳು ಸರಿದು ನಸುಕು
ಹರಿದು ಬೆಳ್ಳಂಬೆಳಗಾದರೂ
ಮುಗಿಯದ ಪಾಡು

ಕತೆಯೊ ಕವಿತೆಯೊ ಆತ್ಮನಿವೇದನೆಯೊ
ಅಂಗಳದಲ್ಲೇ ಕುಳಿತು ಆಡಿದ ಎಂದೂ
ಮುಗಿಯದ
ಮಾತುಕತೆಯೊ

ದಾಟುವುದು ಹೇಗೆ ಈ ನದಿಯನ್ನು ಈ
ಕಡಲನ್ನು ಉಕ್ಕುಕ್ಕಿ ಬರುವ ಅದರ ಬಿರುಸನ್ನು
ಹೊಯ್ದಾಡುವ ಪುಟ್ಟ ದೋಣಿ
ನಡೆದಷ್ಟೆ ದಾರಿ
ಬಿರುಗಾಳಿ ಕರುಣೆಯ ಬೇಡಿ
ಸಾಗಬೇಕು ಮುಂದೆ ಮುಂದೆ


ಹಚ್ಚಿದ ಬಣ್ಣ ಅಳಿಸಿರಲಿಲ್ಲ
ಆಟವಿನ್ನೂ ಬಾಕಿಯಿತ್ತು
ರಕ್ಕಸ ಪಾತ್ರಗಳ ಜೊತೆ ಕಾದಾಡಿ
ಹಣ್ಣಾಗಿತ್ತು ಮೈಯ್ಯಿ

ಎತ್ತಲಾಗದ ಕೈಯ್ಯಿ
ಬಿಡಲಾಗದ ಕಣ್ಣು
ಕೊನೆಯ ಸೆಣಸಾಟ

ಕಡುಕತ್ತಲಲ್ಲಿ ಹುಡುಕುತ್ತ
ದಾರಿಯನು
ಮೋರೆ ತಿರುವಿದರೆ
ಬೆಳಕಿನ ಕಿರಣವಿಲ್ಲ
ಕತ್ತಲೆಯೆ ಎಲ್ಲೆಲ್ಲು

‍ಲೇಖಕರು avadhi

February 18, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: