
ಜಿ ಪಿ ಬಸವರಾಜು
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಅನೇಕ ಸೃಜನಶೀಲ ಬರಹಗಾರರು ನಮ್ಮಲ್ಲಿದ್ದಾರೆ. ಬೋಳುವಾರು, ಕಟ್ಪಾಡಿ, ಗೋಪಾಲಕೃಷ್ಣ ಪೈ, ಡುಂಡಿರಾಜ್, ಆನಂದರಾಮ ಉಪಾಧ್ಯ ಹೀಗೆ ಅನೇಕರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಈ ಕ್ಷೇತ್ರದಲ್ಲಾದ ಅನುಭವವನ್ನು ಎಷ್ಟು ಜನ ಬಳಸಿಕೊಂಡಿದ್ದಾರೆ, ಅವರ ಸೃಜನಶೀಲ ಕೃತಿಗಳ ಒಳಗೆ ಯಾವ ರೀತಿ, ಎಷ್ಟು ಪ್ರಮಾಣದಲ್ಲಿ ಈ ಅನುಭವಗಳು ಸೇರಿಕೊಂಡಿವೆ ಎಂದು ಹೇಳಲು ಬರುವುದಿಲ್ಲ. ಅದು ಅಷ್ಟು ಸುಲಭವಾಗಿ ಸಿಕ್ಕುವ ಲೆಕ್ಕವೂ ಅಲ್ಲ.
ಅಂಕಿ ಸಂಖ್ಯೆಗಳ ಜೊತೆ ವ್ಯವಹರಿಸುವುದು ತುಂಬ ರೇಜಿಗೆಯ ಕೆಲಸ ಎಂದವರಿದ್ದಾರೆ. ಡುಂಡಿರಾಜ್ ಕೆಲವು ಹನಿಗವಿತೆಗಳಲ್ಲಿ ಪನ್ ಮಾಡಲು ಈ ಕ್ಷೇತ್ರದ ಕೆಲವು ಅನುಭವಗಳ ಸ್ಯಾಂಪಲ್‌ಗಳನ್ನು ಬಳಸಿಕೊಂಡಿರುವುದು ಕಾಣಿಸುತ್ತದೆ. ಆದರೆ ಅದು ಕೇವಲ ಮೇಲ್ ಸ್ತರ ಮಾತ್ರ. ಆಳಕ್ಕಿಳಿದು ನೋಡಿದವರು ಬಹಳ ಕಡಿಮೆಯೇ.
ಈ ಕ್ಷೇತ್ರದ ಅನುಭವಗಳನ್ನು ತಮ್ಮ ಆತ್ಮಕಥೆಯಲ್ಲಿ ಬೆರಸಿ ಹೇಳಿರುವವರಂತೂ ತುಂಬ ಅಪರೂಪ. ಇದೀಗ ಮಿತ್ರರಾದ ವೆಂಕಟೇಶ್ ಎಂ.ಟಿ. ಪ್ರಕಟಿಸಿರುವ ʼವೃತ್ತಿ ವೃತ್ತʼ ಈ ಅನುಭವ ಕಥನಕ್ಕೇ ಮೀಸಲಾಗಿದೆ. ಈ ಕಾರಣದಿಂದಾಗಿಯೇ ʼವೃತ್ತಿ ವೃತ್ತʼ ಕುತೂಹಲ ಹುಟ್ಟಿಸುತ್ತದೆ. ನಿಜ, ಬ್ಯಾಂಕ್‌ನಲ್ಲಿ ಕೆಲಸ ಮಾಡುವವರು ನಿತ್ಯವೂ ಅಂಕಿ ಸಂಕೆಗಳ ಜೊತೆಯಲ್ಲಿಯೇ ವ್ಯವಹರಿಸಬೇಕು. ಕೂಡಿ ಕಳೆದು ಗುಣಿಸಿ ಭಾಗಿಸಿ ಹಣವನ್ನು ಎಣಿಸಿ ಚಿನ್ನಾಭರಣಗಳನ್ನು ನಿರ್ಭಾವದಿಂದ ಲಾಕರ್‌ನಲ್ಲಿಟ್ಟು ಬೀಗ ಹಾಕಬೇಕು.

ಮೇಲ್ನೋಟಕ್ಕೆ ಇದು ರೇಜಿಗೆಯ ಕೆಲಸ; ಆಸಕ್ತಿ ಹುಟ್ಟಿಸದ ಕೆಲಸವೂ ಹೌದು. ನಿತ್ಯವೂ ಇದೇ ಎಂದರೆ ಒಂದು ಬಗೆಯ ಏಕತಾನವೂ ಎದುರಾಗುವುದು ಸಹಜ. ಆದರೆ ಈ ಕೆಲಸವನ್ನೂ ಶ್ರದ್ಧೆಯಿಂದ, ಶಿಸ್ತಿನಿಂದ ಮತ್ತು ಪ್ರಾಮಾಣಿಕತೆಯಿಂದ ಮಾಡಲು ಸಾಧ್ಯ ಎಂಬುದನ್ನು ವೆಂಕಟೇಶ್ ತೋರಿಸಿಕೊಟ್ಟಿದ್ದಾರೆ. ಅಂಕಿ ಸಂಖ್ಯೆಗಳನ್ನು ದಾಟಿ,ಅದರಾಚೆ ಇರುವ ಮನುಷ್ಯರನ್ನು, ಅವರ ಕಷ್ಟ ಸುಖಗಳನ್ನು, ಅವರ ಹಲವು ಮುಖಗಳನ್ನು, ಮುಖವಾಡಗಳನ್ನು ನೋಡುವುದು ಸಾಧ್ಯವಾದಾಗ ಬೇರೆಯೇ ಆದ ಪ್ರಪಂಚ ಎದುರಾಗುತ್ತದೆ. ಹತ್ತಾರು ಜನ ಸಹೋದ್ಯೋಗಿಗಳ ಜೊತೆಗೆ ಕೆಲಸ ಮಾಡುವಾಗ ಅವರ ಸ್ವಭಾವಗಳು, ಚಹರೆಗಳು, ಏರಿಳಿವಿನ ಮನೋಧರ್ಮಗಳು ಹೀಗೆ ಮನುಷ್ಯರ ಅನಾವರಣವೇ ಆಗುತ್ತದೆ. ಇದನ್ನುನೋಡುವ ತಾಳ್ಮೆ, ವ್ಯವಹರಿಸುವ ಆಸಕ್ತಿ ಇದ್ದರೆ ಈ ಪ್ರಪಂಚದಲ್ಲಿ ಕೂಡಾ ಹಲವು ಬಣ್ಣಗಳು ಕಾಣಿಸುತ್ತವೆ. ವೆಂಕಟೇಶ್ ಅವರ ಕೃತಿ ಈ ನೋಟದ ಹಿನ್ನೆಲೆಯಲ್ಲಿ ರೂಪಿತವಾಗಿದೆ ಮತ್ತು ಈ ಎಲ್ಲ ರಂಗುಗಳನ್ನು ತುಂಬಿಕೊಂಡಿದೆ.
ನಾಲ್ಕು ದಶಕಗಳ ತಮ್ಮ ಅನುಭವವನ್ನು ವೆಂಕಟೇಶ್ ಸರಳ ಭಾಷೆಯಲ್ಲಿ, ನೇರವಾಗಿ ಕೂತೂಹಲಕಾರಿ ರೀತಿಯಲ್ಲಿ ಹೇಳಿದ್ದಾರೆ. ಯಾವುದನ್ನೂ ರೋಚಕಗೊಳಿಸದೆ, ಸತ್ಯ ಸಂಗತಿಳನ್ನು ತಿರುಚದೆ, ಬಣ್ಣಬಣ್ಣದ ಮಾತುಗಳಲ್ಲಿ ನಿಜ ಕತೆಯೇ ಕಳೆದುಹೋಗದಂತೆ ಅನುಭವಗಳನ್ನು ಮಂಡಿಸಿರುವ ರೀತಿ ಮೆಚ್ಚುವಂತಿದೆ.
ಈ ಕೃತಿಯ ಉದ್ದಕ್ಕೂ ಕಾಣಿಸುವ ಇನ್ನೊಂದು ಮಹತ್ವದ ಸಂಗತಿ ವೆಂಕಟೇಶ್ ಅವರ ಪ್ರಾಮಾಣಿಕತೆ, ವೃತ್ತಿಧರ್ಮದಲ್ಲಿ ಅವರು ಇಟ್ಟಿರುವ ಶ್ರದ್ಧೆ ಮತ್ತು ಗಾಢ ನಂಬಿಕೆ. ಹಾಗೆಯೇ ಮೈಗಳ್ಳತನ ತೋರದೆ ಶಿಸ್ತಿನಿಂದ ದುಡಿದ ರೀತಿಯೂ ಇಲ್ಲಿ ಕಾಣಿಸುತ್ತದೆ. ಪ್ರಾಮಾಣಿಕತೆ, ಶಿಸ್ತು, ದುಡಿಮೆಗಳ ಫಲವಾಗಿ ಬರುವ ದಿಟ್ಟತನ ಮತ್ತು ಎಂಥ ಸವಾಲುಗಳನ್ನೂ ಎದುರಿಸುವ ಛಾತಿ ವೆಂಕಟೇಶ್ ಅವರ ವೃತ್ತಿ ಜೀವನದಲ್ಲಿ ಸಹಜವಾಗಿ ತಲೆಎತ್ತಿ ಅವರ ವ್ಯಕ್ತಿತ್ವಕ್ಕೊಂದು ಘನತೆಯನ್ನು ತಂದುಕೊಟ್ಟಿದೆ. ಕಂಡದ್ದನ್ನು ಕಂಡ ಹಾಗೆ ಹೇಳುವ ಗುಣ ಅವರ ವೃತ್ತಿಜೀವನದ ಆರಂಭದಿಂದಲೂ ಇದ್ದದ್ದೇ ಅವರ ಮುನ್ನಡೆಗೆ ಕಾರಣವಾಗಿರುವುದನ್ನೂ ಈ ಕೃತಿ ತೋರಿಸುತ್ತದೆ.
ಅಲ್ಲಲ್ಲಿ ವೆಂಕಟೇಶ್ ಅವರು ತಮ್ಮನ್ನು ಹೀರೋ ರೀತಿಯಲ್ಲಿ ಬಿಂಬಿಸುತ್ತಿದ್ದಾರೇನೋ ಎಂಬ ಅನುಮಾನ ಬರುವುದು ಸಹಜ. ಆದರೆ ಸೂಕ್ಷ್ಮವಾಗಿ ಓದಿದರೆ, ಅವರ ವ್ಯಕ್ತಿತ್ವವನ್ನು ಪೂರ್ವಗ್ರಹಗಳಿಲ್ಲದೆ ಗ್ರಹಿಸಿದರೆ ಅಂಥದೇನೂ ಕಾಣಿಸದೆ ಕೆಲವು ಘಟನೆಗಳೇ ವೆಂಕಟೇಶ್ ಅವರನ್ನು ಹೀರೋ ಸ್ಥಾನದಲ್ಲಿ ನಿಲಿಸಿರುವುದು ಗೋಚರವಾಗುತ್ತದೆ. ಕೆಲಸ ಯಾವುದಾದರೇನು, ನಮಗೊಂದು ವ್ಯಕ್ತಿತ್ವ ಇದ್ದರೆ ನಾವು ಎಲ್ಲರ ಕಣ್ಣಲ್ಲೂ ʼಹೀರೋʼ ಆಗುವುದು ಸಾಧ್ಯ ಎಂಬುದನ್ನೂ ಈ ಕೃತಿ ತೋರಿಸಿಕೊಟ್ಟಿದೆ.
ಕೆಲವೆಡೆ ಮಾತುಗಳನ್ನು ಈ ಕೃತಿ ಚೆಲ್ಲಾಡಿದೆ. ಅಗತ್ಯಕ್ಕಿಂತ ಹೆಚ್ಚು ಹೇಳಿರುವುದೂ ಉಂಟು. ಕೆಲವು ಘಟನೆಗಳನ್ನು ಹೇಳಿ, ಕೊನೆಯಲ್ಲಿ ಈ ಘಟನೆಗಳ ಮೇಲೆ ಭಾಷ್ಯ ಬರೆದಂತೆ ಆಡಿರುವ ಮಾತುಗಳೂ ಇಲ್ಲಿವೆ. ಇದು ಅನಗತ್ಯವಾಗಿತ್ತು ಎಂದು ಈಗ ಹೇಳುವುದು ಸುಲಭ. ಆದರೆ ಮೊದಲ ಬಾರಿಗೆ ಲೇಖನಿ ಹಿಡಿದು ತಮ್ಮ ಅನುಭವ ಕಥನವನ್ನು ಬರೆಯುವ ಲೇಖಕ ತನಗೆ ತಿಳಿದ ದಾರಿಯಲ್ಲಿ ಸಾಗಿದ್ದಾರೆ ಎಂದಾಗ ಇಂಥ ಕೊರತೆಗಳು ದೊಡ್ಡವಾಗಿ ಕಾಣುವುದಿಲ್ಲ; ಕೊರತೆಯಂತೆಯೂ ಕಾಣಿಸುವುದಿಲ್ಲ. ಅಲ್ಲದೆ ಈ ಕೃತಿಯನ್ನು ಒಂದು ಧಾರವಾಹಿಯಾಗಿ ರೂಪಿಸಿದಾಗ, ಓದುಗರ ಕುತೂಹಲವನ್ನು ಉಳಿಸಲು ಕೆಲವು ಮಾತುಗಳನ್ನು ಮತ್ತೆ ಮತ್ತೆ ಆಡಬೇಕಾಗಿ ಬರುವುದು ಅನಿವಾರ್ಯವೂ ಆಗಿರುತ್ತದೆ.

ಇನ್ನೊಂದು ದೃಷ್ಟಿಯಿಂದಲೂ ಈ ಕೃತಿಗೆ ಮಹತ್ವ ಇದೆ. ಬ್ಯಾಂಕ್‌ಗಳು ಗಣಕೀಕರಣಗೊಳ್ಳುವ ಮುನ್ನ ಹೇಗೆ ಕೆಲಸ ಮಾಡುತ್ತಿದ್ದವು. ಎಂಥ ಪೇಚಿನಲ್ಲಿ ಸಿಕ್ಕಬೇಕಾದ ಸಂದರ್ಭಗಳು ಎದುರಾಗುತ್ತಿದ್ದವು ಮತ್ತು ಅಲ್ಲಿಯ ಸಿಬ್ಬಂದಿ ಎಂಥ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತಿತ್ತು ಎಂಬ ಚಿತ್ರಣ ಇಲ್ಲಿದೆ. ಹಾಗೆಯೇ ಒಂದು ಕಾಲದ ಬ್ಯಾಂಕಿನ ಕಾರ್ಯವೈಖರಿಯ ಸಂಕ್ಷಿಪ್ತ ಇತಿಹಾಸವೂ ಇಲ್ಲಿ ದಾಖಲಾಗಿದೆ.
ಮನುಷ್ಯರ ಬಗ್ಗೆ ಮೂಲಭೂತವಾಗಿ ಇರಬೇಕಾದ ಸಹಜ ಪ್ರೀತಿ ಮತ್ತು ಕಾಳಜಿಗಳು ಇದ್ದರೆ ಯಾವುದೇ ಕ್ಷೇತ್ರದಲ್ಲಿ ಅರ್ಥಪೂರ್ಣವಾದ ಕೆಲಸವನ್ನು ಮಾಡುತ್ತ ಪ್ರತಿಯೊಬ್ಬರೂ ಸಮಾಜಮುಖಿಯಾಗಿ ನಿಲ್ಲಬಹುದು ಎಂಬುದಕ್ಕೆ ಈ ಕೃತಿ ಸಮರ್ಥನೆಯನ್ನು ಒದಗಿಸುತ್ತದೆ.
ಒಂದೆರಡು ಸಂದರ್ಭದಲ್ಲಿ ತಾಂತ್ರಿಕ ಸಂಗತಿಗಳನ್ನು ವಿವರಿಸುವ ಕೆಲಸವನ್ನುಇಲ್ಲಿ ಮಾಡಲಾಗಿದೆ. ಅದು ಸಾಮಾನ್ಯ ಓದುಗರಿಗೆ ಒಂದಿಷ್ಟು ಕಿರಿಕಿರಿ ಉಂಟುಮಾಡಬಹುದು. ಇದು ಸಹಜವೇ. ಆದರೆ ತಾವು ಹೇಳಬೇಕಾಗಿರುವ ಸಂಗತಿಯನ್ನು, ಅದರ ಆಳ ಅಗಲಗಳನ್ನು ಓದುಗರಿಗೆ ಮುಟ್ಟಿಸಬೇಕೆಂಬ ಕಾಳಜಿಯಲ್ಲಿ ವೆಂಕಟೇಶ್ ಈ ತಾಂತ್ರಿಕ ಸಂಗತಿಗಳನ್ನು ಸಾಧ್ಯವಾದಷ್ಟೂ ಸರಳವಾಗಿ ಮಂಡಿಸಲು ನೋಡುತ್ತಾರೆ.
ಕನ್ನಡದಲ್ಲಿ ಇಂಥ ಕೃತಿಗಳು ಹೆಚ್ಚಿಲ್ಲ. ಇದರ ನಡೆ ಭಿನ್ನ; ಆಕಾರ, ಅನುಭವದ ಜಾಡು ಭಿನ್ನ. ಯಾವ ತೋರುಗಾಣಿಕೆಯ ಪೋಸುಗಳೂ ಇಲ್ಲದೆ, ನಿಜಾನುಭವದ ಕಥನಕ್ಕೆ ಧಕ್ಕೆ ತಾರದ ರೀತಿಯಲ್ಲಿ ಈ ಕೃತಿಯನ್ನು ಕಟ್ಟಿರುವುದು ಈ ಕೃತಿಯ ತೂಕವನ್ನು ಹೆಚ್ಚಿಸಿದೆ.
ನಾವು ಕೆಲಸ ಮಾಡುತ್ತಿರುವ ಕ್ಷೇತ್ರ ಯಾವುದೇ ಇರಲಿ, ಅದರ ಕೇಂದ್ರ ಮನುಷ್ಯನೇ ಆಗಿರುತ್ತಾನೆ. ಈ ಅರಿವಿನಿಂದ ರೂಪಿಸುವ ಎಲ್ಲ ಕೃತಿಗಳು ಸಹಜ ಕಾಂತಿಯಿಂದ ಬೆಳಗುತ್ತವೆ. ವೆಂಕಟೇಶ್ ಅವರ ಕೃತಿಗೂ ಈ ಕಾಂತಿ ಲಭ್ಯವಾಗಿದೆ.






0 Comments