ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಬಸವರಾಜು ಅವರು ಬರೆದ ಸಣ್ಣಕಥೆಗಳು

ಜಿ ಪಿ ಬಸವರಾಜು

ಕಾಣದೂರಿಗೆ ಖಾಲಿ ಕೈಮರ


ಮಧ್ಯರಾತ್ರಿ ಕಳೆದು ಎರಡು ಗಂಟೆ ದಾಟಿತ್ತು. ಈ ನಗರದಲ್ಲಿ ಹಗಲು ರಾತ್ರಿಗಳಿಗೆ ವ್ಯತ್ಯಾಸವೇ ಇಲ್ಲದಂತೆ ಲೆಕ್ಕವಿಲ್ಲದಷ್ಟು ಬೀದಿ ದೀಪಗಳು ಉರಿಯುತ್ತಿವೆ. ಬೆಳಕು ಪ್ರಖರವಾಗಿದೆ. ರಾತ್ರಿ ಪಾಳಿಯನ್ನು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದೆ. ತೆಳ್ಳಗೆ ಮಂಜು ಸುರಿಯುತ್ತಿತ್ತು; ಚಳಿಗಾಳಿಯೂ ಬೀಸುತ್ತಿತ್ತು. ಜನ ಸಂಚಾರವೇನೂ ಇರಲಿಲ್ಲ. ಆಟೋಗಳು ಅಲ್ಲಲ್ಲಿ ಬೀದಿ ಬದಿಯಲ್ಲಿ ನಿಂತಿದ್ದವು. ಅವುಗಳ ಒಳಗೆ ತೆಳುವಾದ ಹೊದಿಕೆಯನ್ನು ಹೊದ್ದು ಡ್ರೈವರ್ಗಳು ಮಲಗಿರಬೇಕು; ಯಾರಾದರೂ ಬಂದು ಮುಟ್ಟಿದರೆ ಸಾಕು, ಥಟ್ಟನೆ ಎದ್ದು ಆಟೋ ಓಡಿಸಲು ಸಿದ್ಧವಿರುವ ಮಂದಿ.ಬೀದಿನಾಯಿಗಳೂ ನಾಪತ್ತೆಯಾದಂತೆ ಕಾಣಿಸುತ್ತಿದೆ. ಚಳಿಗೆ ಅವು ಎಲ್ಲಿಯೋ ಅಡಗಿಕೊಂಡಿರಬೇಕು. ಇಲ್ಲವಾದರೆ ಇಷ್ಟು ಹೊತ್ತಿಗೆ ಬೀದಿತುಂಬ ಕಹಳೆ; ಇಲ್ಲವೇ ಗುಂಪುಗುಂಪು ಸುತ್ತುವ ಕಾಮಕೇಳಿ. ಇದು ಯಾವುದೂ ಇಲ್ಲದ ಈ ಹೊತ್ತು ಕಲ್ಲು ನೀರು ಕರಗುವ ಹೊತ್ತೇ ಇರಬೇಕು. ಆದರೆ ಈ ನಗರದಲ್ಲಿ ಇಂಥ ಭಾವನೆಯೇ ಬರುವುದಿಲ್ಲ. ಕಲ್ಲು ನೀರುಗಳೆಲ್ಲ ಕರಗುವುದು ಹಳ್ಳಿಗಳಲ್ಲಿ; ಕತೆಗಳಲ್ಲಿ.
ಮನೆ ಬಂದದ್ದೇ ಗೇಟ್ ತೆಗೆದು ಒಳಹೋದೆ. ವೆರಾಂಡದ ಕುರ್ಚಿಯಲ್ಲಿ ಯಾರೋ ಕುಳಿತಂತಿತ್ತು. ಈ ಕೊರೆಯುವ ಚಳಿಯಲ್ಲಿ, ಹೊತ್ತಲ್ಲದ ಹೊತ್ತಲ್ಲಿ ಅದ್ಯಾರು ಕುಳಿತಿರಬಹುದು? ನನ್ನ ಕಡೆ ಬೆನ್ನು ಹಾಕಿ ಕುಳಿತಿರುವವರ ಬೆನ್ನೂ ಸರಿಯಾಗಿ ಕಾಣಿಸುತ್ತಿಲ್ಲ. ಕತ್ತಿನ ಮೇಲೆ ಪೇಟ ಮಾತ್ರ ಕಾಣಿಸುತ್ತಿತ್ತು. ಮದುಮಗನಂತೆ ಕುಳಿತಿರುವ ಈ ವ್ಯಕ್ತಿ ಯಾರಿರಬಹುದು ಎಂಬ ಕುತೂಹಲ ಹೊತ್ತು ಹತ್ತಿರ ಹೋದೆ. ಕುರ್ಚಿಯ ಮುಂಭಾಗಕ್ಕೆ ಹೋದರೆ ಅಜ್ಜ! ಅರೆ! ಇದೇನು? ಸೋಜಿಗವೋ ಸೋಜಿಗ. ‘ಅಜ್ಜ’ ಎಂದು ಎರಡೂ ಭುಜಗಳನ್ನು ಹಿಡಿದೆ. ಥಟ್ಟನೆ ಕತ್ತು ಜೋತುಬಿದ್ದಿತು; ಕುರ್ಚಿಯ ಹಿಡಿಕೆಯ ಮೇಲಿದ್ದ ಎರಡೂ ಕೈಗಳು ಜೋತುಬಿದ್ದವು. ಥಟ್ಟನೆ ಕೈಗಳನ್ನು ಹಿಂದಕ್ಕೆಳೆದುಕೊಂಡು ಗರಬಡಿದು ನಿಂತುಬಿಟ್ಟೆ. ಭಯವೆಂಬುದು ಮೈತುಂಬ ಹರಿದಾಡಿ ಸಣ್ಣಗೆ ನಡುಗಿದೆ. ಎಷ್ಟು ಹೊತ್ತು ಕಳೆಯಿತೋ. ಸಾವರಿಸಿಕೊಂಡೆ. ಜೋತುಬಿದ್ದಿದ್ದ ಅಜ್ಜನ ಕೈಗಳನ್ನು ನನ್ನ ಕೈಗಳಲ್ಲಿ ತೆಗೆದುಕೊಂಡೆ. ತಣ್ಣಗೆ ಕೊರೆಯುವ ಕೈಗಳು. ಎಷ್ಟೊಂದು ತಣ್ಣಗೆ ಕೊರೆಯುತ್ತಿದ್ದವು. ಬಾಲ್ಯದಲ್ಲಿ ಸುರಿಯುವ ಮಳೆಯಲ್ಲಿ ಓಡುತ್ತ, ಪೂರ್ಣ ಒದ್ದೆಯಾಗಿ ಬಂದು, ಗಡಗಡ ನಡುಗುತ್ತ ಸೂರಿನ ಅಡಿಯಲ್ಲಿ ನಿಂತಾಗ, ರಭಸದಿಂದ ಹೊಡೆಯುತ್ತಿದ್ದ ಮಳೆಯ ಜೊತೆಗೇ ಬೀಳುತ್ತಿದ್ದ ಆಲಿಕಲ್ಲುಗಳನ್ನು ಆರಿಸಿ ಕೈಯಲ್ಲಿ ಹಿಡಿದಾಗ ಅದು ತಣ್ಣಗೆ ಕೊರೆಯುತ್ತಿತ್ತು; ಕೈಯಲ್ಲಿ ಹಿಡಿಯಲಾಗದಷ್ಟು ತಣ್ಣಗೆ. ತಾತನ ಜೋತುಬಿದ್ದ ಕೈಗಳು ಅಷ್ಟು ತಣ್ಣಗಿದ್ದವು. ಬಿಡುತ್ತ, ಮುಟ್ಟುತ್ತ, ಮತ್ತೆ ಮತ್ತೆ ಅದನ್ನೆಲ್ಲ ಅರಿವಿಗೆ ತಂದುಕೊಳ್ಳುತ್ತ ನೋಡಿದೆ: ಜೋತುಬಿದ್ದ ಕತ್ತು, ಜೋತುಬಿದ್ದ ಕೈಗಳು; ಮರಗಟ್ಟಿದ ಮೈ.
ಇಲ್ಲಿಯವರೆಗೆ ಸಾವಿನ ಬಗ್ಗೆ ತಲೆ ಕೆಡಿಸಿಕೊಂಡೇ ಇರಲಿಲ್ಲ. ಅದು ನೋಟಕ್ಕೆ, ಸ್ಪರ್ಶಕ್ಕೆ ಸಿಗಬಹುದೇ ಎಂಬ ಕುತೂಹಲವೂ ಮೂಡಿರಲಿಲ್ಲ. ಮೊದಲ ಬಾರಿಗೆ ಇದೆಲ್ಲ ನನ್ನ ಅರಿವಿನ ಪರಿಧಿಯೊಳಗೆ ಹರಿದಾಡಿತು. ಒಂದು ಕಡೆ ಕುತೂಹಲ; ಮತ್ತೊಂದೆಡೆ ತಿಳಿಯದ ಭಯ. ಸಣ್ಣಗೆ ನಡುಕ, ಬೆವರು; ನಾಲಗೆ ಚಾಚುತ್ತಿರುವ ರಾತ್ರಿ. ನನ್ನ ಹತೋಟಿಯನ್ನು ಮೀರಿ ಹೆದರಿಕೆ ನನ್ನನ್ನು ಇಡಿಯಾಗಿ ನುಂಗಿಬಿಟ್ಟಿತು. ಎಲ್ಲವನ್ನೂ ಬಿಟ್ಟುಕೊಟ್ಟು ಓಡಿದೆ. ಮೊದಲ ಮಹಡಿಯಲ್ಲಿ ನನ್ನ ರೂಮಿತ್ತು. ಆ ಮೆಟ್ಟಿಲುಗಳನ್ನು ಹೇಗೆ ಏರಿ ಹೋದೆನೋ ಹೇಳಲಾರೆ. ಕೆಲವೇ ಸೆಕೆಂಡುಗಳಲ್ಲಿ ಮೇಲಿದ್ದೆ. ಧಡ್ಡನೆ ಬಾಗಿಲು ತೆರೆದು, ಅಷ್ಟೇ ವೇಗವಾಗಿ ಮುಚ್ಚಿ, ಚಪ್ಪಲಿಗಳನ್ನು ಎಸೆದು ಧೊಪ್ಪನೆ ಹಾಸಿಗೆ ಮೇಲೆ ಬಿದ್ದುಬಿಟ್ಟೆ.
ಸಾವೆಂಬುದು ಕಾಣದ ಭಯದಲ್ಲಿ ಸೇರಿಕೊಂಡಿರಬಹುದೇ. ಒಳಗಿತ್ತೊ, ಹೊರಗಿತ್ತೊ. ಬಾಗಿಲು ಮುಚ್ಚುವ ಮೊದಲೇ ಒಳ ಸೇರಿಕೊಂಡಿದ್ದರೆ. ನನ್ನ ದೇಹವನ್ನು, ಕೈಗಳನ್ನು ಮುಟ್ಟಿ ಮುಟ್ಟು ನೋಡಿಕೊಂಡೆ. ತಣ್ಣಗಿದ್ದವೊ, ಬಿಸಿ ಇದ್ದವೊ, ತಿಳಿಯಲಿಲ್ಲ. ಮಂಕು ಕವಿದಿತ್ತು; ಎದೆ ಹೊಡೆದುಕೊಳ್ಳುತ್ತಿತ್ತು. ಉಸಿರನ್ನು ನಿಯಂತ್ರಿಸಲು ನೋಡಿದೆ; ಭಯದಿಂದ ಹೊರಬರಲು ಪ್ರಯತ್ನಿಸಿದೆ.
ಅಜ್ಜ! ಅರೆ, ಅಜ್ಜ ಸತ್ತು ಎಷ್ಟೋ ವರ್ಷಗಳಾಗಿವೆಯಲ್ಲಾ! ಅಜ್ಜ ಈಗ ಈ ನಗರಕ್ಕೆ ಹೇಗೆ ಬಂದಾರು. ತಮ್ಮ ಜೀವಮಾನದಲ್ಲಿಯೇ ಅವರು ನಗರಕ್ಕೆ ಬಂದವರಲ್ಲ; ಕುರ್ಚಿಯಲ್ಲಿ ಕೂತವರಲ್ಲ. ಅದೇನಿದ್ದರೂ ನಮ್ಮೂರಿನ, ನಮ್ಮ ಮನೆಯ ಜಗಲಿಯ ಮೇಲೆ ಪದ್ಮಾಸನ ಭಂಗಿಯಲ್ಲಿ ಕೂತು, ಗೋಧೂಳಿಯ ಸಂಜೆಯಲ್ಲಿ ನಾಗಜ್ಜನ ಜೊತೆಯಲ್ಲಿ ಪಟ್ಟಾಂಗ; ಮಹಾಭಾರತದ ಚರ್ಚೆ. ಕೃಷ್ಣನೋ, ಅರ್ಜುನನೋ. ನಮ್ಮ ಊರಲ್ಲಿ ಯಾರ ಮನೆಯಲ್ಲಿಯೂ ಕುಚರ್ಿಯೇ ಇರಲಿಲ್ಲ. ಅಜ್ಜ ಪೇಟ ಕಟ್ಟಿ ಕೂತದ್ದಂತೂ ತೀರ ಅಪರೂಪ. ಜಾತ್ರೆಗೊ, ನೆಂಟರ ಮನೆಗೊ ಹೊರಡುವಾಗ ಪೇಟ ಸುತ್ತಿಕೊಳ್ಳುತ್ತಿದ್ದುದು ಬಿಟ್ಟರೆ ಉಳಿದಂತೆಲ್ಲ ಖಾಲಿ ಬುರುಡೆ.
ಮನಸ್ಸಿನ ಓಡ ಹೀಗೆಯೇ ಸಾಗಿತು. ಓಟ ಎಂದರೆ ಅದು ರೈಲಿನಲ್ಲಿ ಅಲ್ಲ; ಬಸ್ಸಿನಲ್ಲಿಯೂ ಅಲ್ಲ. ಮನಸ್ಸಿನ ಓಟಕ್ಕೆ ರೈಲೇನು, ಬಸ್ಸೇನು. ಅದು ಒಂದು ದಾರಿ ಹಿಡಿದು ಓಡುತ್ತಿತ್ತು. ಮುಂದೆಲ್ಲೋ ಒಂದು ಕೈಮರ ಕಾಣಿಸಿತು. ಕೈಮರ ತೋರಿಸುತ್ತಿದ್ದ ದಾರಿ ಎಲ್ಲಿಗೆ ಹೋಗುತ್ತದೆ? ಕೈಮರದಲ್ಲಿ ಅದನ್ನು ಕಾಣಿಸಿರಲಿಲ್ಲ. ಎಷ್ಟು ದೂರ? ಅದನ್ನೂ ನಮೂದಿಸಿರಲಿಲ್ಲ. ಕೈಮರ ಇದ್ದದ್ದು ನಿಜವೆನ್ನಿಸಿದರೂ ಅದು ಖಾಲಿ ಇದ್ದದ್ದು ಸ್ಪಷ್ಟವಾಗಿತ್ತು.

2

ಒಂದು ದಿನ ಪೇಟೆ ಬೀದಿಯಲ್ಲಿ ಹೋಗುತ್ತಿದ್ದವನು ಅಲ್ಲಿಯೇ ಇದ್ದ ಗೆಳೆಯನ ಅಂಗಡಿಗೆ ಹೋದೆ. ಇನ್ನೇನು ಕುಳಿತುಕೊಳ್ಳಬೇಕು, ಅಷ್ಟರಲ್ಲಿ ಗೆಳೆಯ ಅವಸರಿಸಿದ: ‘ಹೋಗು, ಬೇಗ ಮನೆಗೆ ಹೋಗು; ನಿನ್ನ ದೊಡ್ಡಪ್ಪನ ಸ್ಥಿತಿ ತೀರಾ ಹದಗೆಟ್ಟಿದೆಯಂತೆ.’ ಮನೆಯ ದಾರಿ ಹಿಡಿದು ಓಡಿದೆ.
ಮನೆಯ ತುಂಬ ಜನ; ದೊಡ್ಡಪ್ಪನ ಕೋಣೆಯಲ್ಲಿಯೂ ಜನ.
‘ಚಂದ್ರ ಬಂದ, ಚಂದ್ರ ಬಂದ’ ಎಂದು ಜನ ದಾರಿಬಿಟ್ಟರು. ದೊಡ್ಡಪ್ಪನ ಹತ್ತಿರ ಹೋದೆ. ಮುಖ ನೋಡಿದೆ. ಗುಳಿಬಿದ್ದ ಕಣ್ಣುಗಳನ್ನೆತ್ತಿ ದೊಡ್ಡಪ್ಪ ನನ್ನ ನೋಡಲು ಪ್ರಯತ್ನಿಸಿದರು. ಆ ಕಣ್ಣುಗಳ ಆಳಕ್ಕಿಳಿದೆ. ಅದು ಕತ್ತಲ ಕೂಪದಂತೆ ಕಂಡಿತು. ಬೆಳಕಿನ ಗೆರೆಯೂ ಇರಲಿಲ್ಲ. ಕತ್ತಲೆಯ ಆಳವೂ ತಿಳಿಯಲಿಲ್ಲ. ದೊಡ್ಡಪ್ಪನ ಕೈಗಳನ್ನು ಹಿಡಿದೆ. ತಣ್ಣಗಿವೆ ಎನ್ನಿಸಿತು.
ದೊಡ್ಡಪ್ಪ ಏನೋ ಹೇಳಲು ನೋಡಿದರು. ಮಾತುಗಳು ಹೊರಡಲಿಲ್ಲ. ಮತ್ತೆ ಅವರ ಕಣ್ಣುಗಳನ್ನೇ ದಿಟ್ಟಿಸಿದೆ. ಗವ್ವೆನ್ನುವ ಆಳದ ಕತ್ತಲ ಬಾವಿಯೊಳಕ್ಕೆ ಇಳಿದಂತಾಯಿತು.
ಇಬ್ಬರು ಅಜ್ಜಿಯರು ದೊಡ್ಡಪ್ಪನ ಎರಡೂ ಕೈಗಳನ್ನು ಹಿಡಿದು ನೀವುತ್ತಿದ್ದರು. ದೊಡ್ಡಮ್ಮ ಮತ್ತು ಚಿಕ್ಕಮ್ಮ ದೊಡ್ಡಪ್ಪನ ಕಾಲುಗಳನ್ನು ನೀವುತ್ತಿದ್ದರು. ಕಾಲುಗಳು ಕಪ್ಪಾಗಿದ್ದವು. ರಕ್ತಚಲನೆ ನಿಲ್ಲುವುದಕ್ಕೆ ಬಂದಿರಬೇಕು. ಕಾಲು ನೀವುತ್ತಿರುವುದು ರಕ್ತಚಲನೆಗೆ ನೆರವಾಗಲೆಂದೇ ಇರಬೇಕು.
ನರನಾಡಿಗಳಲ್ಲಿ ರಕ್ತ ಹರಿಯಬೇಕು. ರಕ್ತ ಹರಿದರೆ ಚಲನೆ; ಉಸಿರಾಟ; ಹೃದಯ ಬಡಿತ. ಜೀವ ಮಿಡಿಯುವುದು ಆಗಲೇ.
ರಕ್ತ ಹರಿಯುವುದೆಂದರೆ ಪಯಣ ಮುಂದೆ ಮುಂದೆ ಸಾಗಿದಂತೆ. ರಕ್ತ ಹರಿಯುವುದೆಂದರೆ ಈ ಭೂಮಿ, ಈ ಆಕಾಶ, ಈ ಚುಕ್ಕೆಗಳು, ಈ ಮರ ಗಿಡ ಹೂವು ಹಕ್ಕಿ, ಜೀವ ಸಂಕುಲ ಚೈತನ್ಯ ಪಡೆದಂತೆ. ರಕ್ತ ಹರಿಯುವುದೆಂದರೆ.. .. ..
ನನ್ನ ವಿಚಾರಗಳಿಗೆ ಬ್ರೇಕ್ ಹಾಕಿದೆ. ದೊಡ್ಡಪ್ಪನ ಸ್ಥಿತಿ ಗಂಭೀರವಾಗಿದೆ..
ಎಲ್ಲ ದೂರ ಸರಿಯಿರಿ, ಗಾಳಿ ಹಾಕಿ, ಗದ್ದಲ ಮಾಡಬೇಡಿ- ಯಾರೋ ದೊಡ್ಡ ಗಂಟಲಿನಲ್ಲಿಯೇ ಹೇಳುತ್ತಿದ್ದರು.
ಎಲ್ಲ ದೂರ ಸರಿದರು.
ಮಾತು ಬೇರೆಯೇ ಅರ್ಥವನ್ನು ಪಡೆದುಕೊಂಡಿರಬೇಕು. ಗುಸು ಗುಸು ಆರಂಭವಾಯಿತು. ಮಹಿಳೆಯರು ಬಿಕ್ಕಿದರು. ಅಳು ಜೋರಾಯಿತು. ಅಳು, ಆಲಾಪ, ಗುಣಗಾನ, ರೋದನ, ಎಲ್ಲ ಒಂದರೊಳಗೊಂದು ಬೆರೆತು ವರ್ತಮಾನ ಇತಿಹಾಸವಾಗುತ್ತಿತ್ತು.
ಗುಂಪು ದೊಡ್ಡದಾಗಿ ನೂಕಾಟ ಆರಂಭವಾದಂತೆ ಭಾಸವಾಯಿತು. ಹೊರಗೆ ಬಂದೆ.
ದೊಡ್ಡಪ್ಪನ ಕಣ್ಣುಗಳಲ್ಲಿ ಹೆಪ್ಪುಗಟ್ಟಿದ್ದ ಕತ್ತಲೆಯೇ ಅಡ್ಡಬಂದಂತಾಗಿ ನಿಂತುಬಿಟ್ಟೆ.
ಗಾಳಿ ಸೆರಗು ಬೀಸಿತು. ದೊರದ ಮರದಲ್ಲಿ ಹಕ್ಕಿ ಸಿಳ್ಳೆ ಹಾಕಿತು.

‍ಲೇಖಕರು G

9 February, 2015

3 Comments

  1. tirupati

    ಕಥೆ ಓದಿದೆ. ತುಂಬಾ ತಳಮಳ ಹುಟ್ಟಿಸಿ, ನನ್ನ ಬಾಲ್ಯದಲ್ಲಿ ನಾ ಕಣ್ಣಾರೇ ಕಂಡ ಅಜ್ಜ ಅಜ್ಜಿಯ ಸಾವಿನ ಸಂಗತಿಗಳು ನೆನಿಕೆಗೆ ಸಿಕ್ಕವು.

  2. mahesh kalal

    katha shyli thumba saralavagide yuvakarige margadarsiyanthide…..nija jivanadalli nadeda gataneyanthe vivarisiddi chennagide

  3. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ; ಕತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading