ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಮೋಹನ್ ಮತ್ತು ಡಿ ಎಸ್ ಚೌಗಲೆ ಅವರಿಗೆ ಸಂಸ ರಂಗ ಪುರಸ್ಕಾರ

ಕಳೆದ ನಾಲ್ಕು ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ಹೊಸತಿನ ಹುಡುಕಾಟದಲ್ಲಿ ತೊಡಗಿಸಿಕೊಂಡಿರುವ ಸಂಸ ರಂಗ ಬಳಗವು ಪ್ರತಿ ವರ್ಷ ಸಂಸ ರಂಗಪುರಸ್ಕಾರಗಳನ್ನು ನೀಡುತ್ತಾ ಬರುತ್ತಿದೆ. ಅದರಂತೆ ಈ ವರ್ಷವೂ ಈ ಟಿವಿ ಸುದ್ದಿವಾಹಿನಿಯ ಸಂಪಾದಕರೂ,  ಹಿರಿಯ ಪತ್ರಕರ್ತರೂ ಆದ  ಜಿ.ಎನ್.ಮೋಹನ್ ಅವರಿಗೆ ‘ಸಂಸ ರಂಗ-ಮಾಧ್ಯಮ ಪುರಸ್ಕಾರ-2014’ ಹಾಗೂ ನಾಟಕಕಾರ ಡಾ.ಡಿ.ಎಸ್.ಚೌಗಲೆ ಅವರಿಗೆ ‘ಸಂಸ ರಂಗ-ಸಾಹಿತ್ಯ ಪುರಸ್ಕಾರ-2014’ಕ್ಕೆ ಆಯ್ಕೆ ಮಾಡಲಾಗಿದೆ. ಪುರಸ್ಕಾರವು ೧೦ ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಪತ್ರವನ್ನು ಹೊಂದಿದೆ. ಏಪ್ರಿಲ್ 9ರಿಂದ 11ರವರೆಗೆ ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸಂಸ ಬಳಗದ ಸಂಚಾಲಕರಾದ ಸುರೇಶ ಸಿ.ಎಂ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***

ಜಿ ಎನ್ ಮೋಹನ್

ರಂಗಭೂಮಿ ವಿಷಯವನ್ನೇ ಪದವಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಜಿ ಎನ್ ಮೋಹನ್ ಅವರು ಪ್ರಥಮ Rank ಮತ್ತು ಎರಡು ಸ್ವರ್ಣ ಪದಕಗಳೊಂದಿಗೆ ಪದವಿ ಗಳಿಸಿದರು. ಬಾಲ್ಯದಲ್ಲಿಯೆ ರಂಗದ ಕಡೆಗೆ ಆಕರ್ಷಿತರಾದ ಇವರು ಖ್ಯಾತ ನಿರ್ದೇಶಕರಾದ ಎನ್ ಎಸ್ ವೆಂಕಟರಾಮ್, ಬಿ ಜಯಶ್ರೀ ಗರಡಿಯಲ್ಲಿ ಪಳಗಿದರು. ಬಾಲಭವನದ ಮೂಲಕ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಖ್ಯಾತ ನಿರ್ದೇಶಕ ಎಂ ವಿ ಸುಬ್ಬಣ್ಣ ಇವರ ಹೈಸ್ಕೂಲ್ ದಿನಗಳಲ್ಲಿ ರಂಗ ಪ್ರೀತಿಗೆ ನೀರೆರೆದರು.
ಸಮುದಾಯ ರಂಗ ತಂಡವು ಸಿಜಿಕೆ ಮತ್ತು ಪ್ರಸನ್ನರ ನೇತೃತ್ವದಲ್ಲಿ ಆರಂಭಿಸಿದ ಸಾಂಸ್ಕೃತಿಕ ಜಾಥಾದಿಂದ ಪ್ರಭಾವಿತರಾಗಿ ರಂಗ ಚಳವಳಿಯ ಜೊತೆ ಗುರುತಿಸಿಕೊಂಡರು. ಎರಡನೆಯ ಜಾಥಾದಲ್ಲಿ ಭಾಗವಹಿಸಿ ಬೆಂಗಳೂರಿನ ಮೂಲೆ ಮೂಲೆಯ ಗ್ರಾಮಗಳಲ್ಲಿ ನಾಟಕದಲ್ಲಿ ಅಭಿನಯಿಸಿದರು. ಎಸ್ ಮಾಲತಿ, ಸಿ ಜಿ ಕೃಷ್ಣಸ್ವಾಮಿ ನಿರ್ದೇಶನದ ನಾಟಕಗಳಲ್ಲಿ ಇವರು ಪ್ರಧಾನ ಪಾತ್ರ ವಹಿಸಿದರು. ಇದು ಮುಂದುವರೆದು ಪದವಿ ತರಗತಿಯಲ್ಲಿರುವಾಗಲೇ ಎಮ್ ಇ ಎಸ್ ಸಂಜೆ ಕಾಲೇಜಿಗೆ ಕತ್ತಲೆ ರಾಜ್ಯ ನಾಟಕ ನಿರ್ದೇಶಿಸಿ ಪ್ರಥಮ ಪ್ರಶಸ್ತಿ ಗಳಿಸಿದರು. ಪದವಿ ಭಾಗವಾಗಿ ಎಂ ವ್ಯಾಸರ ಬೇರು ಕಥೆಯನ್ನು ರಂಗಕ್ಕೆ ಅಳವಡಿಸಿದರು.
ರಂಗ ವಿಮರ್ಶೆಗೆ ಜಿ ಎನ್ ಮೋಹನ್ ಕೊಟ್ಟ ಕೊಡುಗೆ ಅಪಾರ. ನೀನಾಸಂ ನ ತಿರುಗಾಟ, ಸಮುದಾಯದ ಸಾಂಸ್ಕೃತಿಕ ಉತ್ಸವಗಳು, ಬೆಂಗಳೂರಿನಲ್ಲಿ ಜರುಗಿದ ಬಹುತೇಕ ನಾಟಕಗಳ ವಿಮರ್ಶೆಯನ್ನು ಇವರು ಮಾಡಿದ್ದಾರೆ. ಮಾಧ್ಯಮ ಜಗತ್ತಿಗೆ ಕಾಲಿಟ್ಟ ಮೇಲೆ ರಂಗಭೂಮಿಯ ನಂಟನ್ನು ಉಳಿಸಿಕೊಂಡೇ ಬಂದಿದ್ದಾರೆ ಇಂದಿಗೂ ಕಲಾಕ್ಷೇತ್ರ, ಕೆ ಎಚ್ ಕಲಾಸೌಧ, ರಂಗಶಂಕರದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಪತ್ರಿಕೋದ್ಯಮದ ಕೆಲವೇ ಕೆಲವರಲ್ಲಿ ಜಿ ಎನ್ ಮೋಹನ್ ಸಹ ಒಬ್ಬರು.
ಬೀದಿ ನಾಟಕಗಳ ಬಗ್ಗೆ ಗಂಭೀರ ಅಧ್ಯಯನ ನಡೆಸಿ ಮೊದಲಬಾರಿಗೆ ಬೀದಿನಾಟಕಗಳ ಬೆಳವಣಿಗೆಯನ್ನು ದಾಖಲಿಸಿದ್ದಾರೆ. ಇವರ ’ಸಮೂಹದಿಂದ ಸಮೂಹಕ್ಕೆ ಬೀದಿ ನಾಟಕ’ ಪುಸ್ತಕ ಈ ದಿಸೆಯಲ್ಲಿ ಕನ್ನಡದ ಮೊದಲ ಪುಸ್ತಕ. ಈ ಪುಸ್ತಕದ ಬಗ್ಗೆ ಮಾತನಾಡುತ್ತಾ ಪುರುಷೋತ್ತಮ ಬಿಳಿಮಲೆ ಅವರು, “ಬೀದಿ ರಂಗ ಪ್ರಕಾರದ ಬಗೆಗೆ ಏನೇನೂ ಮಾಹಿತಿಗಳು ಇಲ್ಲದೇ ಇದ್ದಾಗ ಮೋಹನರು ಇಷ್ಟು ವಿಷಯಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಕೃತಿಗೆ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ“ ಎಂದು ಬರೆದಿದ್ದಾರೆ.ಪ್ರಜಾವಾಣಿಯಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲಿದ್ದ ಲಲಿತ ಕಲಾ ಸಂಘದಲ್ಲಿ ತುಂಬು ಚಟುವಟಿಕೆಯಿಂದ ತೊಡಗಿಸಿಕೊಂಡವರು. ಪ್ರಸನ್ನರ ’ತದ್ರೂಪಿ’, ನಿಸರ್ಗಪ್ರಿಯ ಅವರ ’ಬೆನಕನ ಕೆರೆ’ ನಾಟಕದಲ್ಲಿ ಪಾತ್ರ ವಹಿಸಿ ಅದನ್ನು ರಾಜ್ಯದ ಹಲವಾರು ಕಡೆ ಪ್ರದರ್ಶಿಸಿದ್ದಾರೆ. ನಾಟಕ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದರು.
ನಂತರ ಈಟಿವಿಯ ಮುಖ್ಯಸ್ಥರಾಗಿದ್ದಾಗ ಸಹ ಕರ್ನಾಟಕದ ರಂಗ ಚಟುವಟಿಕೆಗಳಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೇದಿಕೆ ಒದಗಿಸಿದವರು. ರಾಜಕೀಯ ಸುದ್ದಿಗಳ ತಲೆಬರಹದ ನಡುವೆ ಸಹ ರಂಗಭೂಮಿಯ ಕದಲಿಕೆಗಳನ್ನು ದಾಖಲುಗೊಳಿಸಿದ್ದರು. ಅಲ್ಲಿ ರಂಗ ಪುಸ್ತಕ ಭಂಡಾರ ಸ್ಥಾಪಿಸಿ ರಂಗಭೂಮಿಯ ಬಗ್ಗೆ ಗಂಭೀರ ಅಧ್ಯಯನವನ್ನು ಸಾಧ್ಯವಾಗಿಸಿದ್ದರು. ಇನ್ನು ಇವರು ಪ್ರಧಾನ ಸಂಪಾದಕರಾಗಿದ್ದ ‘ಅವಧಿ’ ಅಂತರ್ಜಾಲ ಪತ್ರಿಕೆಯಂತೂ ಕರ್ನಾಟಕದ ಎಲ್ಲಾ ರಂಗಚಟುವಟಿಕೆಗಳಿಗೆ ಮುಖಪುಟ, ರಿಹರ್ಸಲ್ ನಿಂದ ಹಿಡಿದು, ನಾಟಕದ ಸಿದ್ಧತೆ, ಪ್ರದರ್ಶನ, ಪ್ರದರ್ಶನದ ಚಿತ್ರಗಳು, ವಿಮರ್ಶೆ ಎಲ್ಲಕ್ಕೂ ಅಲ್ಲಿ ಒಂದು ಜಾಗ ಮೀಸಲು. ಅಷ್ಟೇ ಅಲ್ಲ ಮೊದಲ ಬಾರಿ ಒಂದು ವಿದ್ಯುನ್ಮಾನ ವಾಹಿನಿಯಿಂದ ನೀನಾಸಂ ರಸಗ್ರಹಣ ಶಿಬಿರಕ್ಕೆ ಶಿಭಿರಾರ್ಥಿಗಳನ್ನು ಕಳುಹಿಸಿ ಸಂಸ್ಕೃತಿಯ ರಸಗ್ರಹಣವೂ ಮಾಧ್ಯಮದ ಭಾಗವೇ ಎಂದು ಪ್ರತಿಪಾದಿಸಿದವರು.
ಸಿಜಿಕೆ, ಕೆ ವಿ ಸುಬ್ಬಣ್ಣ ಮೊದಲಾದ ರಂಗ ಚೇತನಗಳ ಶುಭಾಶಯ ಕಾರ್ಡ್ ಗಳನ್ನು ತಯಾರಿಸಿ, ವಿತರಿಸಿದ್ದು ಇವರ ರಂಗಪ್ರೇಮಕ್ಕೆ ಒಂದು ಉದಾಹರಣೆ ಮಾತ್ರ. ಇಷ್ಟೇ ಅಲ್ಲದೆ ರಂಗಭೂಮಿಯ ಬಗ್ಗೆ ಇವರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಮತ್ತು ಕೈಪಿಡಿಗಳಲ್ಲಿ ಪ್ರಕಟವಾಗಿದೆ.

ಡಾ ಡಿ ಎಸ್ ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ’ಕಸ್ತೂರಬಾ’, ’ಉಧ್ವಸ್ಥ’ ಅವರ ಬಹುಚರ್ಚಿತ ನಾಟಕಗಳು. ’ಉಚಲ್ಯಾ’, ಇತ್ತೀಚೆಗೆ ಬಂದ ರೂಪಾಂತರ ನಾಟಕ. ೧೯೯೮ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ’ಗಾಂಧಿ ವರ್ಸಸ್ ಗಾಂಧಿ’, ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವುಂಟು ಮಾಡಿತು. ’ಗಾಂಧಿ-ಅಂಬೇಡ್ಕರ್’, ’ಪೇಯಿಂಗ್ ಗೆಸ್ಟ್’,’ಕಿರುವಂತ’, ’ಚದುರಂಗ ಮತ್ತು ಕತ್ತೆ’, ’ಶುದ್ಧವಂಶ’ ಇವರ ಇತರ ಅನುವಾದಿತ ನಾಟಕಗಳು. ’ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಈಚೆಗೆ ಬಂದ ಕೃತಿ. ’ನೆರಳುಗಳು’ (ಕಾದಂಬರಿ), ’ನಿನ್ನ ಮೇಲೆ ಸಿಟ್ಟಿಲ್ಲ ಮಾಯಿ’, ಆಯ್ದ ಮರಾಠಿ ಕತೆಗಳು, ’ಮರಾಠಿ ಕೈದಿಗಳ ಕವಿತೆಗಳು’ಇವು ಪ್ರಮುಖ ಅನುವಾದಿತ ಕೃತಿಗಳು.
’ವಾರಸಾ’, ’ಒಡಲ ಉರಿಯ ಹೊತ್ತು’, ಚೌಗಲೆ ಕತೆಗಳು’ ಮತ್ತು ’ಜಂಗು ಹಿಡಿದ ಬ್ಲೇಡು’ ಅವರ ಕಥಾ ಸಂಕಲನಗಳು. ನಟನ ತಂಡದ’ಗಾಂಧಿ-ಅಂಬೇಡಕರ’೧೦೦ ನೇ ಪ್ರಯೋಗ ಕಂಡಿದೆ. ಈ ವರ್ಷದ ನೀನಾಸಮ್ ತಿರುಗಾಟದಲ್ಲಿ ’ಗಾಂಧಿ ವಿರುದ್ಧ ಗಾಂಧಿ’ ಪ್ರಯೋಗ ಕಾಣುತ್ತಿದೆ. ’ದಿಶಾಂತರ’ವು ಮರಾಠಿ,ಇಂಗ್ಲೀಷ್ ಗೆ ಅನುವಾದಗೊಂಡಿದೆ.ಕನ್ನಡದಲ್ಲಿ ಏಳು ಆವೃತ್ತಿ ಕಂಡಿದೆ.ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಿ.ಎ ಕನ್ನಡ ಮೊದಲನೆ ಸೆಮಿಸ್ಟರ್ ಗೆ ಪಠ್ಯವಾಗಿದೆ. ’ಗಾಂಧಿ ವಿರುದ್ಧ ಗಾಂಧಿ’ ನಾಟಕವು ಬೆಂಗಳೂರು ವಿ.ವಿ. ಎಮ್.ಎ ಗೆ ಪಠ್ಯವಾಗಿದೆ.ರಂಗಭೂಮಿ ಹಾಗು ಚಿತ್ರಕಲೆಗೆ ಸಂಬಂಧಿಸಿದಂತೆ ಸೇರಿ ೨೫ ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.ಚಿತ್ರಕಲಾವಿದರಾದ ಇವರ ಪ್ರಮುಖ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು, ಮುಂಬೈ, ಪುಣೆ, ಕೊಚ್ಚಿನ್, ಚೆನ್ನೈ ಹಾಗೂ ಹೈದರಾಬಾದಿನಲ್ಲಿ ನಡೆದಿವೆ. ಚಿತ್ರಕಲೆ, ರಂಗಭೂಮಿ ಕುರಿತು ಕೃತಿಗಳನ್ನು ರಚಿಸಿರುವ ಅವರಿಗೆ ಕರ್ನಾಟಕ ನಾಟಕ ಅಕಾಡಮಿಯ ’ನಾಟಕಕಾರ ಪ್ರಶಸ್ತಿ’, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಿಶಾಂತರ ನಾಟಕಕ್ಕೆ ಪ್ರತಿಷ್ಠಿತ ’ಚದುರಂಗ’ ಪ್ರಶಸ್ತಿ ಮತ್ತು ’ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ’ ಸಂದಿವೆ. ಕನ್ನಡ-ಮರಾಠಿ ರಂಗಭೂಮಿ ಸೇವೆಗೆ ಮುಂಬೈ ಕರ್ನಾಟಕ ಸಂಘದ ’ವರದರಾಜ ಆದ್ಯ’ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ದಿಶಾಂತರ ನಾಟಕವು ಮರಾಠಿ ಭಾಷೆಗೆ ಅನುವಾದಗೊಂಡಿದೆ.
’ಕನ್ನಡ-ಮರಾಠಿ ಆಧುನಿಕ ರಂಗಭೂಮಿ: ತೌಲನಿಕ ಅಧ್ಯಯನ’ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿದೆ. ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ರಂಗಾಯಣ ರಂಗಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
 

‍ಲೇಖಕರು G

19 March, 2014

28 Comments

  1. Ashok Shettar

    ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು.

  2. soory hardalli

    abhinandanegalu.

  3. Nagaraj Vastarey

    Hearty Congrats

  4. ಹಿಪ್ಪರಗಿ ಸಿದ್ದರಾಮ್...

    ಹಿರಿಯ ಸಾಧಕರಿಗೆ ಅಭಿನಂಧನೆಗಳು….

  5. ಗವಿಸಿದ್ಧ ಹೊಸಮನಿ

    ಸರ್, ಅಭಿನಂದನೆಗಳು..

  6. bm basheer

    ಇಬ್ಬರಿಗೂ ಅಭಿನಂದನೆಗಳು.

  7. sudha chidanand gowd

    congratulations

  8. y k sandhya sharma

    haardika shubhaashayagalu.rangabhumige ide reetiya, nimma koduge munduvariyali.

  9. shwethamahendra

    Congrats

  10. jagadishkoppa

    ಈ ಇಬ್ಬರು ಗೆಳೆಯರ ನಾಟಕಗಳ ಮೇಲಿನ ಪ್ರೀತಿ ಮತ್ತು ಬದ್ಧತೆಗೆ ಸಂದ ಗೌರವ.

  11. lakshmishankarjoshi.

    G.N.MOHAN,SIR TUMBU HRUDAYADA ABHINANDANEGALU.

  12. parashuram boner

    ಜಿ.ಎನ್‌. ಮೋಹನ್‌ ಸರ್‌ . ನಿಮಗೆ ಪ್ರಶಸ್ತಿ ಸಿಕ್ಕ ವಿಷಯ ಕೇಳಿ ತುಂಭಾ ಖುಷಿಯಾಯಿತು ಸಾರ್‌…
    ಸರ್‌ ಇದೀಗ ತಾನೇ ರಾತ್ರಿ ಪಾಳೆಯಕ್ಕೆ ಬಂದೆ. ನಾನು ಯಾವ ಶಿಫ್ಟಿಗೆ ಬರಲಿ. ಮೊದಲು ನಾನು ಲಾಗಿನ್‌ ಆಗುವುದು ಅವಧಿಯಲ್ಲಿ! ಅದಾದ ನಂತರ ನನ್ನ ಕೆಲಸದ ಪಾಸ್‌ವಡ್Fನಲ್ಲಿ ಲಾಗಿನ್‌ ಆಗುವುದು. ಇದೀಗ ತಾನೇ ಬಂದೇ ಅವಧಿಯ ಮುಖಪುಟದ ತುಂಬ ನಿಮ್ಮದೇ ನಗುವು ತುಂಬಿದ ಬಿಂಬ! ಏನು ವಿಷಯ ಎಂದು ಕ್ಲಿಕ್‌ ಮಾಡಿದೆ.ಸಾರ್‌. ನಿಮಗೆ ೨೦೧೪ರ ರಂಗ ಮಾಧ್ಯಮ ಪುರಸ್ಕಾರ ಬಂದಿರುವ ವಿಷಯ ತಿಳಿಯಿತು ಸಾರ್‌. ನಾನು ಈ ಮೊದಲು ಅವಧಿಯಲ್ಲಿ ಇದ್ದಾಗ ನನ್ನನ್ನು ಎಷ್ಟೊ ನಾಟಕಕ್ಕೆ ಕರೆದುಕೊಂಡು ಹೋಗಿದ್ದೀರಿ. ಅದೇ ರೀತಿ ತೀರಾ ಬಹಳ ದಿನಗಳ ಹಿಂದೆ ರವೀಂದ್ರ ಕಲಾಕ್ಷೇತ್ರದಲ್ಲಿ “ಬುಡ್ಗ ನಾದ ನಾಟಕ ನೋಡಿದ್ದೇವು ಸಾರ್. ನಿಮಗೆ ಪ್ರಶಸ್ತಿ ಬಂದ ವಿಷಯ ಕೇಳಿ ತುಂಬಾ ಖುಷಿಯಾಯಿತು, ಸಾರ್‌.
    -ಪರಶುರಾಮ ಬೋನೇರ,ಗಂಗಾವತಿ

  13. shobhavenkatesh

    ಅಭಿನಂದನೆಗಳು.ವಿಜಯನಗರ ರಂಗಶಿಕ್ಶ್ನಣ ಕೇಂದ್ರದ ಸಲಹೆಗಾರರಾರು,ಅವಧಿಯಲ್ಲಿ ರಂಗಭೂಮಿಯ ಎಲ್ಲ ಪ್ರಾಕಾರಗಳ ಸುದ್ದಿಯನ್ನು ಯಶಸ್ವಿಯಾಗಿ ಪ್ರಕಟಿಸಿ ರಂಗಾಸಕ್ತರಿಗೆ ಅನುಕೂಲ ಮಾಡುತ್ತಿರುವ ಶ್ರೀ ಜಿ ಎನ್ ಮೋಹನ್ ಅವರಿಗೆ ಎಲ್ಲರ ಪರವಾಗಿ ಶುಭಾಶಯಗಳು.
    ಚೌಗಲೆ ಅವರಿಗೂ ಅಭಿನಂದನೆಗಳು

  14. kashyap

    ನಮ್ಮ ನಡುವಿನ ಈ ಇಬ್ಬರು ದಿಗ್ಗಜರಿಗೂ ಹೃತ್ಪೂರ್ವಕ ಅಭನಂದನೆಗಳು

  15. mmshaik

    haardika abhinandanegaLu shubhvaagali sir..

  16. Prabhakar Nimbargi

    Hearty congratulations to Shir. G. N. Mohan as well as Dr. Dadasaheb S. Chougale for the award. May you progress still more in the years to come!

  17. Anil Talikoti

    ಇಬ್ಬರಿಗೂ ಅಭಿನಂದನೆಗಳು!!

  18. bharathi

    Congrats

  19. Gopaal Wajapeyi

    ಇಬ್ಬರೂ ಆತ್ಮೀಯ ಮಿತ್ರರಿಗೆ ಹಾರ್ದಿಕ ಅಭಿನಂದನೆಗಳು… 🙂

  20. Raghunandan K

    ಅಭಿನಂದನೆಗಳು

  21. Mahesh Babu

    Dear Sir, Hearty Congratulations to both of you.

  22. Mahesh Babu

    Hearty Congratulations sir!

  23. Anonymous

    abhinandanegalu

  24. Anonymous

    ಇಬ್ಬರಿಗೂ ಅಭಿನಂದನೆಗಳು.

  25. Vidyarashmi Pelathadka

    ಇಬ್ಬರಿಗೂ ಅಭಿನಂದನೆಗಳು.

  26. Gubbachchi Sathish

    ಇಬ್ಬರಿಗೂ ಅಭಿನಂದನೆಗಳು.

  27. Sripathi Manjanabailu

    ibbaroo geleyarige shubhashayagalu.

  28. shobhavenkatesh

    congrats…. looking forward to many more laurels to you……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading