’ವಿ ಶಲ್ ಓವರ್ಕಮ್ ಎಂದು ಹಾಡಿ, ನಮ್ಮ ಆಸೆಗಳಲ್ಲಿ, ಹುರುಪಿನಲ್ಲಿ, ನಿಶ್ಚಯದಲ್ಲಿ ಒಡಮೂಡಿದ್ದ ಪೀಟ್ ಸೀಗರ್ ಇನ್ನಿಲ್ಲ
ಅಜ್ಜನ ನೆನಪಿನಲ್ಲಿ ಈ ಹಿಂದೆ ಅವಧಿಯಲ್ಲಿ ಪ್ರಕಟವಾಗಿದ್ದ ಜಿ ಎನ್ ಮೋಹನ್ ಅವರ ಲೇಖನವನ್ನು ಮತ್ತೆ ಪ್ರಕಟಿಸುತ್ತಿದ್ದೇವೆ
ನೆನಪುಗಳಲ್ಲಿ ಸದಾ ಉಳಿಯುವ ಈತನ ನೆನಪಿನಲ್ಲಿ ’ಅವಧಿ’ಯ ಕಂಬನಿ
ಜಿ ಎನ್ ಮೋಹನ್
‘ಇಲ್ಲ ಅದು ನನಗೆ ಸಿಗುವವರೆಗೆ ನಾನಿಲ್ಲಿಂದ ಕದಲುವುದೇ ಇಲ್ಲ’ ಎಂದು ರಚ್ಚೆಹಿಡಿದು ಕೂತುಬಿಟ್ಟಿದ್ದೆ. ಸದಾ ನಿದ್ರೆಯ ಸ್ಥಿತಿಯಲ್ಲಿರುವ ಅಟ್ಲಾಂಟಾದಿಂದ ಮಾರು ದೂರದಲ್ಲಿರುವ, ನೂರಾರು ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದ್ದ ಬೃಹತ್ ಮಾಲ್ ನಿಂದ ನಾನು ಕಾಲು ತೆಗೆಯಲು ಸಿದ್ಧವೇ ಇರಲಿಲ್ಲ. ಜಪಾನಿನ ಮೆಗ್, ರುಮೇನಿಯಾದ ಕ್ರಿಸ್ಟಿ, ಜೆಕ್ ನ ಮೆರೆಕ್, ಸ್ಲೊವೇನಿಯಾದ ಪೋಲಾಂಕಾ, ಆಸ್ಟ್ರೇಲಿಯಾದ ಗೆರ್ದಾ, ದಕ್ಷಿಣ ಆಪ್ರಿಕಾದ ಶಬಲಾಲ, ಇರಾನ್ ನ ಹಮೀದ್, ಕೆನ್ಯಾದ ಏಂಜೆಲೋ ಎಲ್ಲರೂ ನನ್ನನ್ನು ಸುತ್ತುವರಿದಿದ್ದರು. ನಾನೋ ಮಿಠಾಯಿಗೆ ಹಠ ಹಿಡಿದು ಕೂತ ಮಗುವಿನಂತೆ ಕೂತುಬಿಟ್ಟಿದ್ದೆ. ಆ ವೇಳೆಗೆ ನಾನು ಬೆಂಗಳೂರಿನ ಎಲ್ಲಾ ಅಂಗಡಿಗಳನ್ನೂ ಗರಗರನೆ ಸುತ್ತಿ ಮುಗಿಸಿದ್ದೆ. ಇಲ್ಲ ಎನಿಸಿಕೊಂಡರೂ ತರಿಸಿಕೊಡಿ ಎಂದು ಬೆನ್ನುಬಿದ್ದಿದ್ದೆ. ದೂರ ದೇಶದ ಹಲವರಿಗೆ ಮೇಲ್ ಮಾಡಿ ಸಿಕ್ಕರೆ ಖಂಡಿತಾ ಕಳಿಸಿಕೊಡಿ ಎಂದು ವಿನಂತಿಸಿದ್ದೆ. ಈಗ ಈ ಅಮೇರಿಕಾದ ನೆಲದಲ್ಲಲ್ಲದಿದ್ದರೆ ಇನ್ನೆಲ್ಲೂ ನನಗೆ ಅದು ಸಿಗಲು ಸಾಧ್ಯವೇ ಇಲ್ಲ ಎಂದು ಗೊತ್ತಾಗಿ ಹೋಗಿತ್ತು. ಹಾಗಾಗಿ ನಾನು ಪಟ್ಟು ಹಿಡಿದು ಕೂತಿದ್ದೆ. ಆ ವೇಳೆಗಾಗಲೇ, ಮಾಲ್ ಅನ್ನು ಶರವೇಗದಲ್ಲಿ ಸುತ್ತಿ ಇದ್ದ ಹತ್ತಾರು ಬೂಟುಗಳ ಪಟ್ಟಿಗೆ ಇನ್ನಷ್ಟನ್ನು ಜೋಡಿಸಿಕೊಂಡಿದ್ದ ಆಸ್ಟ್ರೇಲಿಯಾದ ಗೆರ್ದಾ, ಒಳ್ಳೆಯ ಟಾಪ್ ಗಳಿಂದ ಮಿಂಚುತ್ತಿದ್ದರೂ ಇನ್ನಷ್ಟು ಟಾಪ್ ಗಳ ಬೇಟೆ ಮಾಡಿದ್ದ ದಕ್ಷಿಣ ಆಫ್ರಿಕಾದ ಶಬಲಾಲ, ಕ್ಯಾಮೆರಾಗಳ ಬೆನ್ನ ಹಿಂದೆಯೇ ಇದ್ದ ಜೆಕ್ ನ ಮೆರೆಕ್, ಮಕ್ಕಳಿಗೆ ಟಾಯ್ಸ್ ಎಂದು ಓಡಾಡುತ್ತಿದ್ದ ಇರಾನ್ ನ ಹಮೀದ್, ಎಲ್ಲರೂ ನಾನು ಹೀಗೆ ಹಠಕ್ಕೆ ಬಿದ್ದು ಕೂತಿರುವ ವಸ್ತುವಾದರೂ ಯಾವುದು ಎನ್ನುವ ಕುತೂಹಲಕ್ಕೆ ಬಿದ್ದಿದ್ದರು. ನಾನು ಹುಡುಕುತ್ತಿದ್ದುದು ಒಂದು ಸಿ.ಡಿ. ಮಾತ್ರ.

ಇವನ ಆಸೆ ಈಡೇರಿಸದಿದ್ದರೆ ಇವತ್ತಿನ ‘ಹ್ಯಾಪಿ ಹವರ್ಸ್’ ಗೆ ದೊಡ್ಡ ನಾಮ ಎಂದು ಎಲ್ಲರಿಗೂ ಅರಿವಾಯಿತೇನೋ.. ಇಬ್ಬಿಬ್ಬರಂತೆ ಎಲ್ಲರೂ ಆ ಬೃಹ…ತ್ ಮಾಲ್ ನ ದಶದಿಕ್ಕುಗಳಲ್ಲಿ ಹರಡಿಹೋದೆವು. ಇದ್ದಬದ್ದ ಅಂಗಡಿಗಳನ್ನೆಲ್ಲಾ ಹುಡುಕಿ ತಡಕಿದಾಗ ಒಂದು ಮೂಲೆಯಲ್ಲಿ ಸಿಕ್ಕೇಬಿಟ್ಟದ್ದು ಆ ಅಜ್ಜ. ಬೊಚ್ಚುಬಾಯಿಯ ತುಂಬಾ ನಗೆ ಉಕ್ಕಿಸುತ್ತಿದ್ದ, ಜಗತ್ತು ಬದಲಿಸಿಯೇ ಸೈ ಎಂದು ಸಿದ್ಧವಾದ’ ಅಜ್ಜ ಪೀಟ್ ಸೀಗರ್, ಎಂತಹ ಸಂಕಷ್ಟವೇ ಆದರೂ ಸರಿ ‘ಗೆದ್ದೇ ಗೆಲ್ಲುವೆವು’ ಎಂಬ ಹುಮ್ಮಸ್ಸನ್ನು ಜಗತ್ತಿಗೆ ತುಂಬಿದ ಅಜ್ಜ, ‘ವಿ ಶಲ್ ಓವರ್ ಕಮ್’ ಹಾಡನ್ನು ಜಗತ್ತಿನ ರಾಷ್ಟ್ರಗೀತೆಯಾಗಿಸಿದ ಪೀಟ್ ಸೀಗರ್.
ಹುರ್ರೇ! ಎನ್ನುತ್ತಾ ಎಲ್ಲರೂ ವ್ಯಾನ್ ಏರಿದೆವು. ನಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಸಂಜೆ ಒಂದು ಗಂಟೆ ಪುಕ್ಕಟೆಯಾಗಿ ಕೊಡುವ ಬಿಯರ್ ನ್ನು ಈ ದಿನ ದಯಪಾಲಿಸಿರುವುದು ನಾನೇ ಎನ್ನುವ ಕೃತಜ್ಞತಾಭಾವ ಅವರ ಕಣ್ಣುಗಳಿಂದ ತುಳುಕುತ್ತಿತ್ತು. ವ್ಯಾನ್ ಆ ಉದ್ದೋಉದ್ದ ರಸ್ತೆಗಳಿಗೆ ತೆಕ್ಕೆ ಬಿದ್ದದ್ದೇ ತಡ ಎಲ್ಲರಿಗೂ ಅದ್ಯಾವುದಪ್ಪಾ ಅಂತ ಘನಂದಾರಿ ಕ್ಯಾಸೆಟ್, ನಾನು ಹಾಗೆ ಹಠ ಹಿಡಿದು ಕೂತಿದ್ದು,. ಎನಿಸಿತೇನೋ ವ್ಯಾನ್ ನಲ್ಲಿಯೇ ಕೇಳಿಬಿಡುವ ಹುಕಿಗೆ ಬಿದ್ದರು. ಪ್ಲೇಯರ್ ಒಳಹೊಕ್ಕ ಸಿ.ಡಿ ಹಾಡನ್ನು ಹೊರಗೆ ತುಳುಕಿಸಿದ್ದೇ ತಡ ಗೆರ್ಡಾಳ ಮುಖದ ಆಕಾರವೇ ಬದಲಾಯಿತು ‘ಏನಿದು, ಚರ್ಚ್ ಹಾಡು ಕೇಳಲು ಇಷ್ಟು ಸ್ಟ್ರೈಕ್ ಮಾಡಿದೆಯಾ?’ ಎಂದಳು. ಸಿ.ಡಿ ಆ ವೇಳೆಗೆ ಎರಡನೇ ಹಾಡಿಗೆ ದಾಟಿಕೊಂಡಿತ್ತು. ‘ಅಯ್ಯೋ ಇದು ಜೋಗುಳದ ಹಾಡು, ಲಲಬಿ..’ ಎಂದು ಸ್ಲೋವೇನಿಯಾದ ಪೋಲಂಕಾ ಆಕಳಿಸಿಯೇಬಿಟ್ಟಳು. ಒಂದೊಂದು ಹಾಡೂ ಪ್ಲೇಯರ್ ನಿಂದ ಹೊರಗೆ ಜಿಗಿಯುತ್ತಿದ್ದಂತೆಯೇ ಒಬ್ಬೊಬ್ಬರೂ ನನ್ನ ಮುಖ ನೋಡತೊಡಗಿದರು. ಆ… ಆ ವೇಳೆಗೇ ಆ ಹಾಡು ಹೊರಬಿತ್ತು. ವಿ ಶಲ್ ಓವರ್ ಕಂ… ಅರೆ! ಇಡೀ ವ್ಯಾನ್ ನ ವಾತಾವರಣವೇ ಬದಲಾಗಿ ಹೋಯಿತು. ಆಸ್ಟ್ರೇಲಿಯಾ, ಕೆನ್ಯಾ, ಜಪಾನ್, ಸ್ಲೋವೇನಿಯಾ, ರುಮೇನಿಯಾ, ಇರಾನ್, ಜೆಕ್, ದಕ್ಷಿಣ ಆಫ್ರಿಕಾ ಎಂಬ ಗಡಿಗಳನ್ನು ಅಳಿಸಿಹಾಕಿ ಆ ಹಾಡು ಎಲ್ಲರ ಬಾಯಲ್ಲೂ ಮೊಳಗುತ್ತಿತ್ತು. ಅದು ನೋಡ ನೋಡುತ್ತಿದ್ದಂತೆಯೇ ಈ ಎಲ್ಲರೂ ಒಂದಾಗಿ ಹೋಗಿದ್ದರು. ದೇಶದ ಗಡಿ ಇಲ್ಲವಾಗುತ್ತಾ ಆಗುತ್ತಾ ಒಂದು ಜಗತ್ತು ಆ ಪುಟ್ಟ ವ್ಯಾನ್ ನಲ್ಲಿ ಅರಳಿಕೂತಿತ್ತು. ಅದು ಪೀಟ್ ಸೀಗರ್. ಜಗತ್ತಿಗೇ ಒಂದು ಹಾಡು ಮೊಗೆದುಕೊಟ್ಟಾತ.
ನನ್ನ ಶಾಲೆಯ ಕಿಟಕಿಯಿಂದ ಇಣುಕಿದರೆ ಸಾಕು ಅನತಿ ದೂರದಲ್ಲಿ ಗುಡ್ಡಗಳ ಸಾಲು ಕಾಣುತ್ತಿತ್ತು. ಬೆಟ್ಟಕ್ಕೆ ಚಾರಣ ಹೋಗಿಯೇ ಬಿಡೋಣ ಎಂದು ಮಾಸ್ತರರು ನಮ್ಮನ್ನು ಹೊರಡಿಸಿಕೊಂಡು ನಡೆದೇಬಿಟ್ಟರು. ದಾರಿ ಸಾಗಲು ಒಂದು ಹಾಡು ಬೇಕಿತ್ತು. ಆಗ ಚಿಮ್ಮಿದ್ದು ಅದೇ ಹಾಡು ‘ವಿ ಶಲ್ ಓವರ್ ಕಮ್’, ಅಲ್ಲಿಂದ ಜಿಗಿದು ಹೈಸ್ಕೂಲ್ ಗೆ ಬಂದಾಗ ಶ್ರಮದಾನಕ್ಕಾಗಿ ಇನ್ನೊಂದು ಊರು ಸೇರಿಕೊಂಡೆವು. ರಾತ್ರಿ ಕ್ಯಾಂಪ್ ಫೈರ್ ನಂದಿಸುವ ಸಮಯ. ಅದಕ್ಕೂ ಮುನ್ನ ನಮ್ಮೆಲ್ಲರ ಕಂಠದಿಂದ ಮೊಳಗಿದ್ದು ಅದೇ ‘ವಿ ಶಲ್ ಓವರ್ ಕಮ್’. ಕಾಲೇಜು ಎನ್ ಸಿ ಸಿಯಲ್ಲಿಯೂ ಅದೇ ಹಾಡು- ವಿ ಶಲ್ ಓವರ್ ಕಮ್ , ಇದೆಲ್ಲಾ ಆಗಿ ನಾನು ಕ್ಯೂಬಾಗೆ ಬಂದಿಳಿದೆ. ಜಗತ್ತಿನ ಎಲ್ಲೆಡೆಯ ಕನಸುಗಾರರು ಒಂದೆಡೆ ಸೇರಿದ್ದವು. ಅಲ್ಲಂತೂ ನಾವು ಬೇರೆ ಹಾಡನ್ನು ಯೋಚಿಸುವ ಸಾಧ್ಯತೆಯೇ ಇರಲಿಲ್ಲ. ಏಕೆಂಧರೆ ಜಗತ್ತಿನ ಕನಸುಗಾರರಿಗೆ ಹುಮ್ಮಸ್ಸು ತಂಬಲು ಒಂದು ಹಾಡು ಎಂದು ಇದ್ದರೆ ಅದು ‘ವಿ ಶಲ್ ಓವರ್ ಕಮ್’ ಮಾತ್ರ.

ಸಂಗೀತಗಾರರ, ಸಂಗೀತ ಶಾಸ್ತ್ರಜ್ಞರ ಕುಟುಂಬದಲ್ಲಿ ಹುಟ್ಟಿದ ಪೀಟರ್ ಸೀಗರ್ ಗೆ ನಾಲ್ಕು ಗೋಡೆಯ ಒಳಗಿನ ಪಾಠಕ್ಕಿಂತ ಬಯಲೇ ಕೈಬೀಸಿ ಕರೆಯಿತೇನೋ. ಬಾಸ್ಟನ್ ನಲ್ಲಿ ಓದುತ್ತಿದ್ದ ಆತ ಓದಿಗೆ ಶರಣು ಹೇಳಿ ಸಿಕ್ಕ ಸಿಕ್ಕ ರೈಲು ಹತ್ತಿ ಊರೂರು ಸುತ್ತಲು ಶುರುಮಾಡಿದ. ಹೋದೆಡೆಯೆಲ್ಲಾ ಕೇಳಿದ ಜನಪದ ಹಾಡುಗಳು ಅವನೊಳಗೆ ಒಬ್ಬ ಹಾಡುಗಾರನನ್ನು ಹುಟ್ಟುಹಾಕಲುತೊಡಗಿದವು. ಹಾಗೆ ಹಾಡುಗಳನ್ನು ಸೂರೆಗೊಳ್ಳುತ್ತಾ ಇರುವಾಗಲೇ ಅವರ ಕಣ್ಣಿಗೆ ಬಿದ್ದದ್ದು ಬ್ಯಾಂಜೋ… ಐದು ತಂತಿಗಳ ಬ್ಯಾಂಜೋ ಗಿರಿಜನರ ಕೈಯಲ್ಲಿ ಹೊರಡಿಸುತ್ತಿದ್ದ ಸಂಗೀತ ಇವರಿಗೆ ಕಿನ್ನರ ಗಾನವಾಗಿ ಕೇಳಿಸಿತು. ಅದನ್ನು ಕೈಗೆತ್ತಿಕೊಂಡರು. ಅಷ್ಟೇ ಅಲ್ಲ ಅದನ್ನು ತನಗೆ ಬೇಕಾದಂತೆ ಹಿಗ್ಗಿಸಿ ಪಳಗಿಸಿಕೊಂಡರು. ಈ ಬ್ಯಾಂಜೋ ಎಷ್ಟು ಜನಪ್ರಿಯವಾಯಿತೆಂದರೆ ಅಮೇರಿಕದೆಲ್ಲೆಡೆ ಈಗ ಇದು ‘ಪೀಟ್ ಬ್ಯಾಂಜೋ’ ಎಂದೇ ಹೆಸರುವಾಸಿ.
ಪೀಟ್ ಸೀಗರ್ ಗೆ ಇದು ಸಂಗೀತ ವಾದ್ಯವಲ್ಲ. ಅದು ಅಸ್ತ್ರ. ದ್ವೇಷವನ್ನು ಸುತ್ತುಗಟ್ಟಿ ಮಣಿಸುವ ಅಸ್ತ್ರ. ಪೀಟ್ ಬಾರಿಸುವ ಬ್ಯಾಂಜೋದ ಮೇಲೆ ಈ ಸಾಲುಗಳು ಸದಾ ಕಾಣಿಸುತ್ತದೆ. ಪೀಟ್ ಗೆ ಗೊತ್ತಿತ್ತು ನಾನು ಹಾಡಹೊರಟಿರುವುದು ಜಗತ್ತಿನ ವಿಷಾದವನ್ನು, ಹಾಡ ಹೊರಟಿರುವುದು ನೊಂದವರ ಕಥೆಗಳನ್ನು, ಪೀಟ್ ಹಾಡಿನ ಮೂಲಕ ಕಣ್ಣೀರ ಕಥೆಗಳನ್ನು ಕೇಳಿಸುವ, ಹಾಡಿನ ಮೂಲಕವೇ ಆ ಕಣ್ಣೀರನ್ನು ಒರೆಸುವ, ಹಾಡಿನ ಮೂಲಕವೇ ಒಂದು ಪುಟ್ಟ ವಿಶ್ವಾಸ ಹೊಳೆಯುವಂತೆ ಮಾಡುವ, ಹಾಡಿನ ಮೂಲಕವೇ ಜಗತ್ತನ್ನು ಗೆಲ್ಲುವ ಕೆಲಸಕ್ಕೆ ಇಳಿದೇಬಿಟ್ಟರು. ವಿಯೆಟ್ನಾಂ ಯುದ್ಧದ ವಿರುದ್ಧ, ವಾಟರ್ ಗೇಟ್ ನ ನಿಕ್ಸನ್ ವಿರುದ್ಧ, ಮಲಗುಂಡಿಗಳಂತೆ ಕಾಣುವ ಹೊಳೆ ನದಿಗಳ ವಿರುದ್ಧ, ಆಫ್ರಿಕಾದ ಚಿನ್ನದ ಗಣಿಗಳ ಶೋಷಕರ ವಿರುದ್ಧ, ಯುದ್ಧಕ್ಕೆ ಹಸಿದವರ ವಿರುದ್ಧ ಹಾಡುಗಳನ್ನು ಕಟ್ಟಿದರು. ಮಾರ್ಟಿನ್ ಲೂಥರ್ ಕಿಂಗ್ ಜನರನ್ನು ಮುನ್ನಡೆಸುತ್ತಾ ಹೊರಟಾಗ ಜೊತೆಯಲ್ಲಿ ಹಾಡುಗಳನ್ನು ಹೊತ್ತ ಪೀಟ್ ಸೀಗರ್ ಇದ್ದರು.
ಪೀಟ್ ಸೀಗರ್ ಬೈಬಲ್ ಗಳ ಪುಟಗಳಿಂದಲೂ ಹಾಡು ಸೃಷ್ಟಿಸಿದರು. ತಾಯಂದಿರು ಹಾಡುವ ಜೋಗುಳದಲ್ಲಿ ಹಾಡು ಕಂಡರು, ಅಪ್ರೋ- ಅಮೇರಿಕನ್ ಜನರ ಕಾಲೋನಿಗಳಿಂದ ಹಾಡು ಹೆಕ್ಕಿ ತಂದರು, ಕೊನೆಗೆ ರಷ್ಯನ್ ಕಾದಂಬರಿಕಾರ ಶೋಲೋಕೋವ್ ನ ಕಾದಂಬರಿಗಳಿಂದಲೂ ಹಾಡು ಉಕ್ಕಿಸಿದರು. ಪೀಟ್ ಗೆ ಜನರ ಎದೆ ಬಡಿತ ಗೊತ್ತಿತ್ತು. ಅತ್ಯಂತ ಸರಳ ಶಬ್ದಗಳನ್ನು ಹಿಡಿದು ಅವರಲ್ಲಿ ನೋವನ್ನೂ, ಭರವಸೆಯ ಕಿರಣಗಳನ್ನೂ ಬೆಸುಗೆ ಹಾಕುತ್ತಿದ್ದರು. ಹಾಗಾಗಿ ಪೀಟ್ ಸೀಗರ್ ಹಾಡು ಅವರ ಸ್ವತ್ತಾಗಿ ಮಾತ್ರ ಉಳಿಯಲಿಲ್ಲ. ಅವರ 1700 ಹಾಡುಗಳೂ ದೇಶದಿಂದ ದೇಶಕ್ಕೆ ವಲಸೆ ಹೋಗುವ ಹಕ್ಕಿಗಳಂತೆ ಪಟ ಪಟ ರೆಕ್ಕೆ ಬಡಿಯುತ್ತಾ ಹಾರುತ್ತಾ ಹೋದವು. ಪೀಟ್ ಹಾಡುಗಳು ಅದು ಎಂದೂ ಒಬ್ಬರ ಹಾಡು ಅಲ್ಲವೇ ಅಲ್ಲ. ಯಾವುದೇ ಕಡೆ ಆ ಹಾಡಿನ ಸೊಲ್ಲು ಶುರುವಾದರೆ ಇಡೀ ಸಭಾಂಗಣವೇ ದನಿಗೂಡಿಸುತ್ತದೆ. ಪೀಟ್ ಯುದ್ಧಕ್ಕೆ ಹೋಗುವ ಯೋಧರ ಬಗ್ಗೆ ನಿಸ್ಸಾಹಕತೆಯಿರುವ ಹಾಡು ಬರೆಯುತ್ತಾರೆ, ಶಾಲೆಯ ಪಾಠಗಳು ಹೇಳಿಕೊಡುವ ಕಟು ಸುಳ್ಳುಗಳ ಬಗ್ಗೆ ಬರೆಯುತ್ತಾರೆ, ರಾಜಕಾರಣಿಗಳ ಮುಖವಾಡಗಳ ಬಗ್ಗೆ, ಇಂಗ್ಲಿಷ್ ಎಂಬ ಹುಚ್ಚಾಟದ ಬಗ್ಗೆ, ಕೊನೆಗೆ ಕಿಟಕಿಯಿಂದ ಕಂಡ ಸುಂದರ ನೋಟದ ಬಗ್ಗೆಯೂ ಬರೆಯುತ್ತಾರೆ.
ಪೀಟ್ ಸೀಗರ್ ಗೆ ಭಾಷೆ ಎಂದೂ ಮಿತಿಯಾಗಿರಲಿಲ್ಲ. ‘ಭಾಷೆ ಎನ್ನುವುದು ಸೋತಾಗ ನಾದದ ಬೆನ್ನತ್ತಿ, ಭಾಷೆ ಎನ್ನುವುದು ಸೋತಾಗ ಕುಣಿತದ ಬೆನ್ನತ್ತಿ’ ಎನ್ನುತ್ತಿದ್ದರು. ಅದು ಹೌದು ಎನ್ನುವಂತೆ ಅವರು ಕೊಲ್ಕೊತ್ತಾ, ಬೆಂಗಳೂರು, ತಿರುವನಂತಪುರಕ್ಕೆ ಬಂದಾಗ ಅವರ ಹಾಡುಗಳು ಭಾಷೆಯನ್ನು ಮೀರಿ ನಾದದ ಅಲೆಗಳನ್ನು ಎಬ್ಬಿಸುತ್ತಿದ್ದವು. ‘ಇಷ್ಟೆಲ್ಲಾ ಹಾಡಿದ್ದೀರಿ, ಇಷ್ಟು ವರ್ಷ ಹಾಡಿದ್ದೀರಿ, ಇಷ್ಟೆಲ್ಲಾ ಜನರ ಮುಂದೆ ಹಾಡಿದ್ದೀರಿ, ಆದದ್ದೇನು?’ ಎನ್ನುವ ಪ್ರಶ್ನೆಯನ್ನು ಕೇಳಿದಾಗ ಪೀಟ್ ನಕ್ಕು ‘ಎಷ್ಟೊಂದು ಪುಟ್ಟ ಪುಟ್ಟ ವಿಜಯಗಳು ಸಿಕ್ಕಿವೆ ಗೊತ್ತಾ’ ಎಂದರು.
ಕೊಲ್ಕೊತ್ತಾದ ವೇದಿಕೆಯ ಮೇಲೆ ಬ್ಯಾಂಜೋ ಹಿಡಿದು ನಿಂತ ಪೀಟ್ ಸೀಜರ್ ಗೆ ಸಭಿಕರೊಬ್ಬರು ಕೂಗಿ ಕೇಳಿದರು- ‘ಭಾರತವನ್ನು ಬಡಿದೆಬ್ಬಿಸಿದ ಒಂದು ಪ್ರತಿಭಟನಾ ಗೀತೆ ಎಂದು ನೀವು ಯಾವುದನ್ನು ಆರಿಸುತ್ತೀರಿ?’. ಪೀಟ್ ಬ್ಯಾಂಜೋ ತಂತಿಗಳನ್ನು ಶೃತಿಮಾಡಿ, ಗಂಟಲನ್ನು ಸರಿಮಾಡಿಕೊಂಡು- ‘ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ’ ಹಾಡಲು ಶುರುಮಾಡಿದರು. ಸಭೆ ತನಗೇ ಗೊತ್ತಿಲ್ಲದಂತೆ ದನಿಗೂಡಿಸಿತ್ತು. ಗಾಂಧಿ ಎಂಬ ಆ ದೊಡ್ಡ ಪ್ರತಿಭಟನಾಕಾರನ ಜೊತೆ ಪೀಟ್ ಸೀಗರ್ ಹೆಜ್ಜೆ ಹಾಕುತ್ತಿದ್ದರು. ಮೊನ್ನೆ ಮೊನ್ನೆ ತಾನೇ ಮೇ ದಿನಾಚರಣೆ ಮುಗಿಯಿತಲ್ಲಾ ಪೀಟ್ ಸೀಗರ್ ನೆನಪಿಗೆ ಬಂದರು.







ಮೋಹನ್ ಸರ್,
ಪೀಟ್ ಸೀಗರ್ ಚಿತ್ರಣವನ್ನು, ಅವನ ಸ್ಋಜನಾತ್ಮಕ ಮನಸನ್ನು ವಿವರಿಸಲು ನೀವು ಬಳಸಿದ ಪ್ರತಿಯೊಂದು ಪದಗಳು ಸೀಗರ್ ವ್ಯಕ್ತಿತ್ವವನ್ನು ಗಾಢವಾಗಿ ಕಟ್ಟಿಕೊಟ್ಟಿವೆ. ಸೀಗರ್ ಧ್ವನಿಯಲ್ಲಿ ರಘುಪತಿ ರಾಘವ ಹಾಡು ಕೇಳುವಾಗಿನ ಅನುಭೂತಿಯೇ ಬೇರೆ.
ನಿನ್ನೆ ವಿ.ಕ.ದಲ್ಲಿ ವಿ ಶಲ್ ಓವರ್ ಕಮ್ ಲೇಖನ ಓದಿದ್ದೇ ಹಾಡಿನ ಸಾಹಿತ್ಯವನ್ನು ಹುಡುಕಿ ಮತ್ತೆ ಮತ್ತೆ ಓದಿದ್ದೆ. ಮಗ ಶಾಲೆಯಿಂದ ಬಂದಿದ್ದೇ ಅವನಿಗೂ ಓದಿಸಿದ್ದೆ.ದೇಶ-ಗಡಿಗಳ ಮೀರಿ,
ಜಾತಿ-ಬಣ್ಣ,ಬಡವ-ಬಲ್ಲಿದ, ಹೆಣ್ಣು-ಗಂಡು ಭೇದಗಳಿಂದ ಹೊರಗೆ ಬಂದು ಮನುಷ್ಯ ಕೈ ಕೈ ಹಿಡಿದು ನಡೆಯುವುದು ಯಾವಾಗ ಅನಿಸಿತು.
ಅನುಪಮಾ ಪ್ರಸಾದ್.
ವಿ ಶೆಲ್ ಓವರ್ ಕಮ್…ಗೆದ್ದೇ ಗೆಲ್ಲುವೆವು ಒಂದು ದಿನ..ಹಾಡು ಅದೆಷ್ಟು ಬಾರಿ ನನ್ನನ್ನು ಎದ್ದು ನಿಲ್ಲಿಸಿದೆಯೋ…ಕೆಲವು ವಿಚಾರಗಳೇ ಹಾಗೆ ಅವನ್ನು ತುಂಬಾ ಮೆಚ್ಚಿಕೊಂಡು ಆರಾದಿಸಿರುತ್ತೇವೆ.ಆದರೆ ಅದರ ಕತೃ ಯಾರು…..ಯಾವಾಗಿನದು ಅಂತಲೇ ಗೊತ್ತಿರುವುದಿಲ್ಲ.ಪೀಟ್ ಸೀಗರ್ ಎಂಬ ಅದ್ಬುತ ಮಾಂತ್ರಿಕನ ಜತೆಗೆ ಪರಿಚಯಿಸಿ ಉಪಕಾರ ಮಾಡಿದ ಮೋಹನ್ ಸರ್ ಗೆ ಧನ್ಯವಾದಗಳು.
We Shall overcome
ನಮ್ಮ ಶಾಲೆಯ ದಿನಗಳಲ್ಲಿ ನಮಗೆ ಹಾಡಿಸುತ್ತಿದ್ದ ಹಾಡು.
ನಾವು ಗೆದ್ದೆ ಗೆಲ್ತೀವಿ
ನಾವು ಗೆದ್ದೆ ಗೆಲ್ತೀವಿ
ನಾವು ಗೆದ್ದೆ ಗೆಲ್ತೀವಿ ಒಂದು ದಿನ – ಹೀಗೆ ಕನ್ನಡಕ್ಕೆ ತರ್ಜುಮೆ ಮಾಡಿ ಕೂಡ ಹಾಡಿಸುತ್ತಿದ್ದರು. ಇಂದು ಹಾಡಿನ ಬಗ್ಗೆ ಹೆಚ್ಚು ತಿಳಿದುಕೊಂಡಂತಾಯಿತು. ಧನ್ಯವಾದಗಳು ಸರ್… 🙂
ಬರೀ ಹಾಡು, ಬರೆದವರ ಬಗ್ಗೆ ಹೇಳಿ ಸುಮ್ಮನಾಗುವುದು ಮೋಸ. ನಾವು ನಮ್ಮ ದೇಶೀಯ ಹಾಡುಗಾರರ ಕಂಠದಿಂದ ಹಾಡು ಕೇಳಿದ್ದೀವಿ. ನೀವು ಅಪ್ಲೋಡ್ ಮಾಡಿದ್ದೀರಿ. ನಮ್ಮಲ್ಲಿ ಯೂಟ್ಯೂಬ್ ಮತ್ತೆ ಫ್ಲಾಶ್ ಫ್ಲೇಯರ್ ಸೌಲಭ್ಯವಿಲ್ಲ. ಹಾಗಾಗಿ ಅಜ್ಜನ ಕಂಠದಿಂದ ಆ ಹಾಡನ್ನು ಒಮ್ಮೇ ಕೇಳೋಣ. ಕೊಡಿಸಿ. ಅದು ನಾವು ನಿಮ್ಮ ಹಿಂದೆ ಬೀಳುವ ಮೊದಲು
baraha bahala chennagide.odisikondu hoyitu.
‘ಇಷ್ಟೆಲ್ಲಾ ಹಾಡಿದ್ದೀರಿ, ಇಷ್ಟು ವರ್ಷ ಹಾಡಿದ್ದೀರಿ, ಇಷ್ಟೆಲ್ಲಾ ಜನರ ಮುಂದೆ ಹಾಡಿದ್ದೀರಿ, ಆದದ್ದೇನು?’ ಎನ್ನುವ ಪ್ರಶ್ನೆಯನ್ನು ಕೇಳಿದಾಗ ಪೀಟ್ ನಕ್ಕು ‘ಎಷ್ಟೊಂದು ಪುಟ್ಟ ಪುಟ್ಟ ವಿಜಯಗಳು ಸಿಕ್ಕಿವೆ ಗೊತ್ತಾ’ ಎಂದರು.
ವಾಹ್! ಈ ಪುಟ್ಟ ಪುಟ್ಟ ವಿಜಯಗಳ ಬೆಟ್ಟದ ಸಾಲುಗಳು ಎಷ್ಟೊಂದು ಅಲ್ವಾ!
ಈ ಹಾಡು ಹಾಡಿದಷ್ಟೂ ಹೊಸತನದ ಹೊಳಹೇ ಹೊರತು ಬೇಸರಕೆ ಛಾನ್ಸೇ ಇಲ್ಲ
ಮೋಹನ್ ಜಿ, ನಮಸ್ಕಾರ, ಹಮ್ ಹೋಂಗೆ ಕಾಮಯಾಬ್ ಹಾಡು ಹೀಗೆ ಮೂಡಿದ್ದು ಎಂದು ಇಂದೇ ತಿಳಿದಿದ್ದು ಸರ್. ಲೇಖನದ ಆಳ ವಿಸ್ತಾರ ಅಗಾಧ. ಯಾವ ಯಾವ ಮನಸ್ಸುಗಳ ಮಧ್ಯದಲ್ಲಿದ್ದು ಈ ಹಾಡಿನ ಅನುಭೂತಿಯನ್ನು ಜಾಗತಿಕ ಬೇಲಿ ಮೀರಿ ಒರೆಗೆ ಹಚ್ಚಿದ ತಮ್ಮ ಅನುಭವ ದಿವ್ಯ. ಹಾಗೆಯೇ ಪೀಟ್ ಸಿಗರ್ ನಮ್ಮೆಲ್ಲರ ಮನದಲ್ಲಿ ಊರಿದ್ದೂ ಕೂಡ ಹೀಗೆಯೇ, ಒಬ್ಬ ಬೇಲಿಯಿಲ್ಲದ ದೇಶಗಳ ಗೆಳೆಯನಾಗಿ, ಶಾಂತಿಯ ಹರಿಕಾರನಾಗಿ ನಮ್ಮೊಳಗೆ ಇಳಿಯುವುದು ತಡವಾಗಲಿಲ್ಲ ನೋಡಿ……….ಇಂತಹವನ ಪರಿಚಯ ಮಾಡಿಕೊಟ್ಟಿದ್ದಕ್ಕೆ ಕೃತಜ್ಞ ಸರ್ ಜಿ.
sikapatte ishtavaaythu ee baraha
Gedde geluvevu ondu dina gellale beku olletana…
superb write up
Hope, heaps of hope, flow through the song! Hope is the only path of life.
Thanks a lot on behalf of the delayed readers, like me, of Avadhi!
ಸಾವಿಲ್ಲದ ಹಾಡುಗಳನ್ನು ಹಾಡಿದ ಪೀಟ್ ಸಾವಿಗೆ ಶರಣಾಗಿದ್ದಾನೆ. ಒಂಟಿ ಒಬ್ಬಂಟಿ ನಾವಲ್ಲ ೆಂದಿಗೂ ನಾವು ಒಂಟಿ ನಡೆಯುವ ಪಯಣಿಗರೇ ಅಲ್ಲ ೆಂದ ಪೀಟ್ ಒಂಟಿಯಾಗಿ ನಡೆದೇ ಬಿಟ್ಟ ಜಗತ್ತನ್ನೇ ಒಗ್ಗೂಡಿಸಿದ ಹಾಡುಗಳನ್ನು ನಮಗೆ ಬಿಟ್ಟು.
ಇತ್ತೀಚೆಗೆ ಅಮೆರಿಕದಲ್ಲಿ occupy wall street ಹೋರಾಟ ಚಿಮ್ಮಿ ಬಂದಾಗ ಆ ಜನ ಸಾಗರದೊಳಕ್ಕೆ 90 ವರ್ಷದ ಅಜ್ಜ ಪೀಟ್ ಎರಡೂ ಕೈಗಳಲ್ಲಿ ಕೋಲನ್ನೂರುತ್ತಾ ತನ್ನ 5 ದಶಕಗಳ ಜೊತೆ ಹಾಡುಗಾರ ಗುತ್ರೀ ಯೊಂದಿಗೆ ಯವ್ವನದ ಉತ್ಸಾಹದೊಂದಿಗೆ ‘ ಧುಮುಕಿಯೇ ‘ ಬಿಟ್ಟ.
ಈ ಕ್ರಾತಿಕಾರೀ ಹಾಡುಗಾರನನ್ನು ಅಮೆರಿಕ ಅನ್ ಅಮೆರಿಕನ್ ಚಟುವಟಿಕೆಗಳಗಾಗಿ ಬಂಧಸಿ ಜೈಲಿಗೆ ಹಾಕಿತ್ತು. ಚಾರ್ಲಿ ಚಾಪ್ಲಿನ್ ನ ಮೇಲೂ ಇದೇ ಅಪಾದನೆ ಹೊರಿಸಿ ಅಮೆರಿಕದ ಹೊರ ಹಾಕಲಾಗಿತ್ತು. ಅವನ ಅಪರಾಧವೆಂದರೆ ಅವನು ಕಾರ್ಮಿಕ ಹೋರಾಟಗಳಲ್ಲಿ ಭಾಗವಹಿಸಿದ್ದು, ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಿದ್ದು
Dear G N Mohan, this is one of your best write-ups.
Regards,
Mahamud
ಒಪ್ಪುವಂತಹ ಮಾತು
ಜಗತ್ತಿನ ಕ್ರಾಂತಿಕಾರಿ ಚಳುವಳಿಗೆ ಮ್ಯಾಕ್ಸೀಂಗಾರ್ಕಿ ತನ್ನ ತಾಯಿ ಕಾದಂಬರಿ ಮೂಲಕ ಕಾವು ನೀಡಿದ.ಪೀಟ್ ಸೀಗರ್ ‘ವೀ ಶಲ್ ಓವರ್’ ಗೀತೆಯ ಮೂಲಕ ಹೋರಾಟಗಾರರಿಗೆ ಸದಾ ಹುಮ್ಮಸ್ಸು ತುಂಬಿದ್ದ, ಈ ಹಾಡನ್ನು ಬರೆದು ಜೀವ ತುಂಬಿದವನು ಇವನೇ ಎಂಬ ಸತ್ಯ ಅಕ್ಷರಶಃ ಇವನ ಹಾಡನ್ನು ಸದಾ ಮೈಯಾಗಿಸಿ ಹಾಡುವ ಎಷ್ಟೋ ಕಲಾವಿದರಿಗೆ ಗೊತ್ತೇ ಇಲ್ಲ. ತನ್ನ ನಾಮ ತಿಳಿಯದಿದ್ದರೂ ತನ್ನ ಗಾನದ ಮೂಲಕ ಜೀವ ತುಂಬುತ್ತಿದ್ದ ಪೀಟ್ ಸೀಗರ್.ಸಾವಿರ ಸಾವಿರ ಹೋರಾಟಗಳಿಗೆ ಬೆನ್ನುಡಿಯಾಗಿ ನಿಂತ ಆ ಹಾಡಿಗೆ ನಮ್ಮ ಕೆಂಪು ನಮನ. ಹೋಗಿ ಬಾ ಸಂಗಾತಿ..
ಈ ಹಾಡನ್ನು ಹಾಡಿ ಜಗತ್ತಿಗೆಲ್ಲಾ ಪರಿಚಯಿಸಿದವನು ಪೀಟ್ ಅದರೂ ಬರೆದವನು ಅವನಲ್ಲ. ೀ ಹಾಡಿನ ಬಗ್ಗೆ ಪೀಟ್ ಹೇಳಿದ್ದು: ಈ ಹಾಡಿಗೆ ನನ್ನ ಕಾಣಿಕೆಯೊಂದೇ . ಅದು we will overcome ಎಂದು ಇದ್ದುದನ್ನು we shall ಎಂದು ಬದಲಾಯಿಸಿದ್ದು . ಈ ಹಾಡು 68 ರ ಕಪ್ಪು ಜನರ ನಾಗರಿಕ ಹಕ್ಕಿನ ಚಳುವಳಿಯಲ್ಲಿ ಜನಪ್ರಿಯವಾಯಿತು. ಆಗ ವಿಶ್ವದಾದ್ಯಂತ ಹಬ್ಬಿದ ಯುಜನರ,ವಿದ್ಯಾರ್ಥಿಗಳ ಹಾಗೂ ವಿಯೆತ್ನಾಂ ಯುದ್ಧ ವಿರೋಧೀ ಚಳುವಳಿಯಲ್ಲಿ ಜಗತ್ತಗೆಲ್ಲಾ ಹಬ್ಬಿತು.
ಈ ಮಹಾನ್ ವ್ಯಕ್ತಿಗೊಂದು ನನ್ನ ಕಂಬನಿ ..ವಿಕದಲ್ಲಿ ‘ಜಿಎನ್ಮೊ’ ಕೊಲಾಜ್ ಈ ಹಿಂದೆ ಬರೆದದ್ದು ನೆನಪಾಯ್ತು ” ವಿ ಶಲ್ ಓವರ್ ಕಮ್ ಎಂದಾತನ ಬೆನ್ನು ಹತ್ತಿ ….
Tumba ishtavaytu baraha!
ಶ್! ತನ್ನ ಹಾಡುಗಳ ಮೂಲಕ ಜಗತ್ತನ್ನೇ ಬಡಿದೆಬ್ಬಿಸಿದ ಈತ ಮೌನವಾಗಿ ಮಲಗಿದ್ದಾನೆ. ಅದರೆ ಅತನ ಪೀಟ್ ಬ್ಯಾಂಜೋ ಅಗೋ ಅಲ್ಲಿದೆ. ಹಾಗೇ ಕೈಗೆತ್ತಿಕೊಂಡು ಒಂದು ಶ್ರುತಿ ಹಾಕಿ, ಹಾಗೇ ನಿಮಗೂ ಕೇಳಿಸದಂತೆ ಪಿಸುಮಾತಿನಲ್ಲಿ ಹೇಳಿ
ಗೆದ್ದೇ ಗೆಲ್ಲುವುವು ಒಂದು ದಿನ…….
ಅಂದ ಹಾಗಿ ಇಲ್ಲಿ ಹೂಗಳನ್ನು ಹಾಕಬೇಡಿ, ನೋಡಿ ಅಲ್ಲಿ ದುರುಳರು ಹುಡುಗಿಯರ ಮುಡಿಯಿಂದ ಹೂ ಕಿತ್ತಿದ್ದಾರೆ. ಇಲ್ಲಿ ಹಾಕುವ ಹೂಗಳನ್ನು ಆ ಬರಿದಾದ ಮುಡಿಗೆ ಮುಡಿಸಿ
– ಪೀಟ್ ಸೀಗರ್ ಕುರಿತು ತಾವು ಬರೆದ ಲೇಖನ ಓದಿ ಹೃದಯ ತುಂಬಿ ಬಂತು ಆತನ ಕುರಿತು ತಾವು ಬರೆಯುವ ಬರಹದಲ್ಲಿಯೆ ಒಂದು ತಾಕತ್ತು ಇದೆ ಅದು ಮನ ಮುಟ್ಟುವಂತಹುದು.
Sir u r just awesome!!!
Lovely article
peeter seeger, innu matte sigar!! mnatte baarada lokakke telraliruva peeter repeater aguvaro? illavo? –
ee haaDugaarana aatmakke chira shanati sigali !!
Great article sir — enjoyed it