ಮನದಾಳದಿ ಇಳಿದು, ಕನಸುಗಳ ಕೆದಕಿದವಳೆ…

 ಜಿ ಎನ್ ಮೋಹನ್

ಒಂದು ಗುಲಾಬಿ ಕುಳಿತಿದ್ದ ಪ್ರೇಕ್ಷಕರ ಸಾಲಿನಿಂದ ತೂರಿ ಬಂತು. ಇದಕ್ಕೇ ಕಾದಿದ್ದರೇನೋ ಎಂಬಂತೆ ಜನ ಎದ್ದು ನಿಂತು ಗುಲಾಬಿಯನ್ನು ಅಂಗಳದೊಳಕ್ಕೆ ಎಸೆಯಲಾರಂಭಿಸಿದರು. ನೋಡ ನೋಡುತ್ತಿದ್ದಂತೆಯೇ ಅಲ್ಲಿ ಒಂದು ಗುಲಾಬಿ ಹೂಗಳ ಗುಡ್ಡವೇ ಸೃಷ್ಟಿಯಾಗಿ ಹೋಗಿತ್ತು. ಆ ಹುಡುಗಿ ಗುಲಾಬಿ ಹೂಗಳ ರಾಶಿಯ ನಡುವೆ ಪುಟ್ಟ ಹಕ್ಕಿ ಮರಿಯಂತಾಗಿ ಹೋಗಿದ್ದಳು. ಜನ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಲು ಶುರು ಮಾಡುತ್ತಿದ್ದಂತೆಯೇ ಮೊದಲ ಬಾರಿಗೆ ಆಕೆ ಕ್ರೀಡಾಂಗಣದಲ್ಲಿ ಕುಸಿದು ಕುಳಿತಳು. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಆಕೆ ನದಿಯಾ ಕಮಾನ್ಸೆ. ಆಕೆಯ ಹೆಸರಿನ ಸರಿಯಾದ ಉಚ್ಛಾರ ಏನು ಎಂಬುದನ್ನು ನಾನು ಇದುವರೆಗೂ ತಲೆ ಕೆಡಿಸಿಕೊಂಡಿಲ್ಲ. ಏಕೆಂದರೆ ನನಗೆ ಅವಳು ನದಿಯಂತೆಯೇ ಕಂಡಿದ್ದಾಳೆ. ’ಹರಿವ ನದಿಗೆ ಮೈಯೆಲ್ಲಾ ಕಾಲು’ ಎನ್ನುವಂತೆ ಆಕೆ ಕ್ರೀಡಾಂಗಣಕ್ಕಿಳಿದರೆ ಸಾಕ್ಷಾತ್ ನದಿಯೇ ಆಗಿ ಬದಲಾಗಿ ಹೋಗುತ್ತಾಳೆ. ಒಂದು ಜುಳು ಜುಳು ಹರಿವ ತೊರೆಯಂತೆ, ಧುಮ್ಮಿಕ್ಕಿ ಓಡುವ ಝರಿಯಂತೆ, ಪ್ರಶಾಂತ ನದಿಯಂತೆ…

ನದಿಯಾ ಕಮಾನ್ಸೆ

ಮನದಾಳದಿ ಇಳಿದು ಕನಸುಗಳ ಕೆದಕಿದವಳೆ

ಕಂಬಿ ಒಳಗೆ ಆತುಕೊಂಡು ಅತ್ತ ಇತ್ತ ತೂಗಿದವಳೆ

ನೆಲಕೆ ಕಾಲು ಸೋಕಿದಾಗ ಬಿಕ್ಕಿ ಬಿಕ್ಕಿ ಅತ್ತವಳೆ …

nadia11ಕವಿತೆಯೂ ಯಾರ ಹಂಗೂ ಇಲ್ಲದೆ ಹರಿಯತೊಡಗಿತ್ತು. ನಾನು ಆಗ ಕವಿತೆಯ ಕೈ ಹಿಡಿದಿದ್ದೆ. ಏಕೋ ಏನೋ ಗೊತ್ತಿಲ್ಲ, ಎಲ್ಲೋ ದೂರದಿ ನಾನು ಕಂಡು ಕೇಳರಿಯದ ನೆಲದಲ್ಲಿ ಜರುಗುತ್ತಿದ್ದ ಘಟನೆಗಳು ನನ್ನನ್ನು ಕಾಡಿಬಿಡುತ್ತಿದ್ದವು. ಲೆಬನಾನಿನಲ್ಲಿ ಯುದ್ಧ, ವಿಯಟ್ನಾಂ ನಲ್ಲಿ ಯುದ್ಧರಂಗಕ್ಕಿಳಿದ ಕೋವಿ ಹೊತ್ತ ಮಹಿಳೆಯರು, ಸೋವಿಯತ್ ದೇಶ ಹಾಗು ಭಾರತದ ನಡುವೆ ಆಗುತ್ತಿದ್ದ ಒಪ್ಪಂದ, ಕ್ಯೂಬ ಹಲ್ಲು ಕಚ್ಚಿ ಸೆಟೆದು ನಿಂತ ರೀತಿ, ಬಾಂಬು ಸಿಡಿಸಲು ಸಿದ್ಧವಾಗಿ ನಿಂತ ಯುದ್ಧಪಿಪಾಸು ರೇಗನ್, ದಕ್ಷಿಣ ಆಫ್ರಿಕಾದಲ್ಲಿನ ಸರ್ವಾಧಿಕಾರಿ ಬೋಥಾ ಪಡೆ, ಹೀಗೆ… ಹೀಗಿರುವಾಗಲೇ ಪತ್ರಿಕೆಯ ಪುಟದಲ್ಲಿ ಪ್ರಕಟವಾಗಿದ್ದ ಆ ಚಿತ್ರ ಕಣ್ಣಿಗೆ ಬಿತ್ತು. ಗುಲಾಬಿ ಹೂಗಳ ರಾಶಿಯ ಮಧ್ಯೆ ಒಬ್ಬ ಹುಡುಗಿ … ಏನೆಂದು ಪುಟ ತಿರುಗಿಸುತ್ತಿದ್ದಂತೆಯೇ ರೊಮೇನಿಯಾದ ನದಿಯಾ ಕಮಾನ್ಸೆ ನನ್ನ ಮನದಾಳದಲ್ಲಿ ಎದ್ದು ನಿಲ್ಲತೊಡಗಿದಳು.

೬ ವರ್ಷದ ಪುಟ್ಟ ಹುಡುಗಿಯೊಬ್ಬಳು ’ಹೋ’ ಎನ್ನುತ್ತಾ ಜಿಗಿದು, ಹಾರಿ, ಶಾಲೆಯ ಕೊಠಡಿಯೊಳಗೆ ತೂರಿ ಹೋದ ರೀತಿ ಅಲ್ಲಿಗೆ ಬಂದಿದ್ದ ಕೋಚ್ ಬೇಲಾ ಕರೋಲ್ಯಿ ಕಣ್ಣಿಗೆ ಬಿತ್ತು. ಕಾಲಲ್ಲಿ ಪಾದರಸ, ಮೈಯಲ್ಲಿನ ಬಳುಕು ಇಷ್ಟು ಸಾಕಾಯ್ತು. ಆರು ವರ್ಷದ ಪುಟ್ಟ ಹುಡುಗಿ ಮರುದಿನದಿಂದ ಸತತ ಎಂಟು ಗಂಟೆ ಮೈಯನ್ನು ಬಿಲ್ಲಾಗಿಸಿಕೊಳ್ಳತೊಡಗಿದಳು. ಕಾಲಿಗೆ ಬೆಕ್ಕನ್ನು ನಾಚಿಸುವ ನಡಿಗೆಯನ್ನು ಕೋಚ್ ಬೇಲಾ ಬೆಸುಗೆ ಹಾಕುತ್ತಿದ್ದರು. ಇನ್ನೆರಡು ವರ್ಷದಲ್ಲಿ ಆಕೆ ತನ್ನ ದೇಶದ ರಾಷ್ಟ್ರೀಯ ಪಂದ್ಯದಲ್ಲಿ ತಾನೂ ಒಬ್ಬ ಸ್ಪರ್ಧಿ ಎಂದು ಸಾರಿ ನಿಂತಳು. ಬಾರ್ ಗಳ ಮೇಲೆ ಜಿಗಿದು, ಕುಣಿದ ಆಕೆಗೆ ಸಿಕ್ಕಿದ್ದು ೧೩ನೆಯ ಸ್ಥಾನ. ೮ ವರ್ಷದ ಪುಟ್ಟ ಹುಡುಗಿ ಮನೆಗೆ ಹೋಗುವಾಗ ಕೋಚ್ ಬೇಲಾ ಒಂದು ಪುಟ್ಟ ಟೆಡ್ಡಿಬೇರ್ ಆಕೆಯ ಕೈಯಲ್ಲಿಟ್ಟರು. ’೧೩ ಬೇಡ ಮಗಳೆ, ಆ ಮೂರು ತೆಗೆದು ಹಾಕು, ಉಳಿಯುವುದು ಒಂದು. ನಂಬರ್ ೧’ ಎಂದರು. ಅಲ್ಲಿಂದ ಶುರುವಾಯ್ತು ಆ ಪುಟ್ಟ ಹುಡುಗಿಯ ಪಯಣ. ರೊಮೇನಿಯಾ ದಾಟಿ, ಅಂತರ ರಾಷ್ಟ್ರೀಯ ಕೂಟಕ್ಕೆ ನೆಗೆದು, ನದಿಯಾ ಚಿನ್ನ ಬಾಚತೊಡಗಿದಳು. ೧೩ರಲ್ಲಿ ೩ ಉದುರಿಹೋಗಿತ್ತು.

 

೧೯೭೬, ಜಗತ್ತು ಮಾಂಟ್ರಿಯಲ್ ಒಲಂಪಿಕ್ಸ್ ಗೆ ಸಜ್ಜಾಗುತ್ತಿತ್ತು. ಸ್ಕೋರ್ ಬೋರ್ಡ್ ಉತ್ಪಾದನೆ ಮಾಡುವ ಒಮೆಗಾ ಕಂಪನಿ ಬೋರ್ಡಿನಲ್ಲಿ ನಾಲ್ಕು ಅಂಕೆ ಇರಬೇಕಾ ಎಂದು ಕೇಳಿತು. ಒಲಂಪಿಕ್ಸ್ ಸಮಿತಿ ಗಹಗಹಿಸಿ ನಕ್ಕುಬಿಟ್ಟಿತು. ನಾಲ್ಕು ಅಂಕೆ ಅಂದರೆ ಹತ್ತು ಅಂಕ, ೧೦.೦೦, ಒಲಂಪಿಕ್ಸ್ ಎನ್ನುವುದೇನು ಗಲ್ಲಿ ಹುಡುಗರ ಕ್ರೀಡಾಕೂಟವಾ ಅಂತ. ಸರಿ ಎಂದು ಒಮೆಗಾ ಕಂಪನಿ ಮೂರು ಅಂಕಿಯ ಸ್ಕೋರ್ ಬೋರ್ಡ್ ತಯಾರಿಸಿ ಕಳಿಸಿತು. ರೊಮೇನಿಯಾದ ಪುಟ್ಟ ಹುಡುಗಿ ೧೪ ವರ್ಷದ ನದಿಯಾ ಕಮಾನ್ಸೆ ಬೆರಗು ಗಣ್ಣು ಹೊತ್ತು ಮೊದಲ ಬಾರಿ ಒಲಂಪಿಕ್ಸ್ ಅಂಗಳಕ್ಕೆ ಹೆಜ್ಜೆ ಇಟ್ಟಳು. ಹೆಜ್ಜೆ ಇಟ್ಟಿದ್ದು ಒಳಗೆ ಬರುವಾಗ ಮಾತ್ರ. ನಂತರ ಆಕೆ ಗಾಳಿಯಲ್ಲಿ ತೇಲಿದಳು, ಹಕ್ಕಿಯಂತೆ ರೆಕ್ಕೆಯನ್ನು ಪಟಪಟಿಸುತ್ತಾ… ಹಿಂದಕ್ಕೆ ಮುಂದಕ್ಕೆ ಜೋಲಿ ಹೊಡೆಯುತ್ತಾ…ಒಮೆಗಾ ಕಂಪನಿಯ ಮೆಶಿನ್ ಗರಗರನೆ ಅಂಕ ದಾಖಲಿಸುತ್ತಾ ಹೋಯಿತು … ೧,೨,೩… ನದಿಯಾ ಕಮಾನ್ಸೆ ಹಾಗೆ ಗಾಳಿಯಲ್ಲಿ ಹಾರಿ, ಜಿಗಿದು, ಕುಪ್ಪಳಿಸಿ ಪ್ರೇಕ್ಷಕರಿಗೆ ಬಾಗಿ ನಮಸ್ಕರಿಸಿದಾಗ ಪ್ರೇಕ್ಷಕರು ಗಾಬರಿಯಾಗಿದ್ದರು. ಏಕೆಂದರೆ ಸ್ಕೋರ್ ಬೋರ್ಡ್ ತೋರಿಸುತ್ತಿದ್ದ ಅಂಕ ೧, ಕೇವಲ ೧. ಕೋಚ್ ಗಳು ಬೆಚ್ಚಿಬಿದ್ದಿದ್ದರು, ಇಡೀ ರೊಮೇನಿಯಾ ಬೆಚ್ಚಿ ಬಿದ್ದಿತ್ತು. ಆಗ ಮೈಕ್ ನಲ್ಲಿ ದನಿ ಕೇಳಿಬಂತು. ’ಕ್ಷಮಿಸಿ, ನಮ್ಮ ಮೆಶೀನ್ ಗೆ ಸ್ಕೋರನ್ನು ದಾಖಲಿಸಿಕೊಳ್ಳಲಾಗಿಲ್ಲ. ಆಕೆ ಪಡೆದ ಅಂಕ ೧೦. Perfect ten!’ ಜನ ’ಹೋ’ ಎನ್ನುತ್ತಾ ದೀರ್ಘ ಕರತಾಡನ ಮಾಡಿದರು. ನಾಲ್ಕು ಅಂಕೆ ಅಂದರೆ ೧೦.೦೦ ತೋರಿಸುವ ಮೆಶೀನ್ ಬೇಕಾ ಎಂದು ಕೇಳಿದಾಗ ನಕ್ಕಿದ್ದ ಒಲಂಪಿಕ್ಸ್ ಸಮಿತಿಯನ್ನು ನೋಡಿ ಈಗ ನಗುವ ಸರದಿ ಒಮೆಗಾ ಕಂಪನಿಯದಾಗಿತ್ತು.

ಅದೆಲ್ಲಾ ಮುಗಿದು ಐದು ವರ್ಷಗಳಾಗಿತ್ತು. ನಾನು ಡಿಗ್ರಿ ಮೊದಲ ವರ್ಷಕ್ಕೆ ಕಾಲಿಟ್ಟಿದ್ದೆ. ಅಲ್ಲಿ ನದಿಯಾ ’ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ..’ ಎನ್ನುವಂತೆ ಒಲಂಪಿಕ್ಸ್ ನಲ್ಲಿ, ಎಲ್ಲೆಡೆಯೂ ಚಿನ್ನವನ್ನು ಬಾಚುತ್ತಾ, ಬಾಚುತ್ತಾ ಮುನ್ನಡೆದಿದ್ದಳು. ಸಾಕು ಅನ್ನಿಸಿಬಿಟ್ಟಿತ್ತೇನೋ, ಜಿಮ್ನಾಸ್ಟಿಕ್ ಗೆ ವಿದಾಯ ಹೇಳಲು ಸಜ್ಜಾದಳು. ಪರ್ಫೆಕ್ಟ್ ೧೦ ಹುಡುಗಿ ನೀಡುತ್ತಿದ್ದ ಕೊನೆಯ ಪ್ರದರ್ಶನವನ್ನು ಇಡೀ ಜಗತ್ತು ಉಸಿರು ಬಿಗಿಹಿಡಿದು ನೋಡಿತು. ಮರುದಿನ ಎಲ್ಲಾ ಮಾಧ್ಯಮದಲ್ಲೂ ಆಕೆಯೇ ಸುದ್ದಿ. ಹೂವಿನ ರಾಶಿಯ ಮಧ್ಯೆ ನದಿಯಾ ಕಮಾನ್ಸೆ.

 

21st July 1976: Nadia Comaneci, 14 year old Romanian gymnast, scored three maximum 10 out of 10 scores at the Montreal Olympics, the first perfect scores ever obtained by a gymnast in the Olympics. (Photo by Central Press/Getty Images)

21st July 1976: Nadia Comaneci, 14 year old Romanian gymnast, scored three maximum 10 out of 10 scores at the Montreal Olympics, the first perfect scores ever obtained by a gymnast in the Olympics. (Photo by Central Press/Getty Images)

ಇಲ್ಲಿ ನಾನು ಕವಿತೆ ಮುಂದುವರೆಸಿದೆ ….

’ಎದೆಯಲ್ಲಿ ಕಾವಾಗಿ

ಚಿಗುರೊಡೆದು ಮೊಗ್ಗಾಗಿ

ಒಮ್ಮೆ ನೋಡುವ ಮುನ್ನ ಮರೆಯಾಗಿ ಹೋದವಳೆ

ಎದೆಯ ಕಂಬಿಯ ಮೇಲೆ ವಾಲುತ್ತಾ ನಡೆಯುತ್ತಾ

ಎಷ್ಟೊಂದು ಕನಸುಗಳ ಅಳಿಸಿ ಮರೆಯಾದವಳೆ

ಎದೆಯಾಳ ಗೋರಿಯಲಿ ಕಮಾನ್ಸೆ ಅನುರಣನ

ಕನಸುಗಳು ಕುಡಿಯೊಡೆದು ನಿಶ್ಯಬ್ಧ ನಿರ್ಗಮನ…

ಸು ರಂ ಎಕ್ಕುಂಡಿ ನಾನು ಬರೆದ ಕವಿತೆಯನ್ನು ಕೈನಲ್ಲಿ ಹಿಡಿದು ಕೂತಿದ್ದರು. ಅವರ ಬೆರಗು ಗಣ್ಣುಗಳು ಇನ್ನೂ ಒಂದಿಷ್ಟು ಅರಳಿದ್ದವು. ’ಹೌದಲ್ಲ ಮೋಹನ್ … ಎಲ್ಲಿಯ ರೋಮೇನಿಯಾ, ಎಲ್ಲಿಯ ಬೆಂಗಳೂರು, ಎಲ್ಲಿಯ ನದಿಯಾ, ಎಲ್ಲಿಯ ನೀವು … ಇಡೀ ಜಗತ್ತಿನಲ್ಲಿ ಇಂತಹ ಕಾಣದ ಎಳೆಗಳು ಎಲ್ಲೆಲ್ಲಿಯೋ ಹರಡಿ ಹೋಗಿರುತ್ತವೆ. ಎನ್ನುವುದನ್ನು ಕೋಟ್ ಮಾಡಿದ್ದರು.

 

ಆ ಒಂದು ಪುಟ್ಟ ಫೋಟೋ ನನ್ನೊಳಗೆ ಅಗಾಧವಾಗಿ ನದಿಯಾ ಕಮಾನ್ಸೆ ಆಗಿ ಅರಳಿ ನಿಲ್ಲಲು ಕಾರಣವಾಗಿತ್ತು. ನಾನು ನದಿಯಾ ಕಮಾನ್ಸೆಯನ್ನು ಹುಡುಕುತ್ತಲೇ ಹೋದೆ. ಆಕೆಯ ಬಾಲ್ಯ, ಆಕೆಯ ಒಲಂಪಿಕ್ಸ್ ಕೂಟಗಳು, ಆ ಪರ್ಫೆಕ್ಟ್ ಟೆನ್, ಎಲ್ಲವೂ … ನದಿಯಾ ಕಮಾನ್ಸೆ ಎಂಬ ಪುಟ್ಟ ಹುಡುಗಿ ಮಾತ್ರ ಮೊದಲ ಬಾರಿಗೆ ಜಿಮ್ನಾಸ್ಟಿಕ್ ನಲ್ಲಿ ೧೦ ಅಂಕ ಪಡೆದು ಜಗತ್ತಿನ ಸ್ಪೂರ್ತಿಯಾಗಿ ಹೋದಳು. ನದಿಯಾ ಬಗೆಗಿನ ಮ್ಯೂಸಿಕ್ ಆಲ್ಬಂಗಳು ಹೊರಬಂದವು. ಸೋಪ್ ಒಪೆರಾಗಳು ಅವಳತ್ತ ಬಂದವು. ಆಕೆಯ ಬಗೆಗಿನ ಹಾಡು ಟಾಪ್ ಟೆನ್ ಪಟ್ಟಿಯಲ್ಲೂ ಮೊದಲ ಸ್ಥಾನ ಪಡೆದು ನಗೆ ಬೀರಿತು. ನಂತರ ಇದೇ ’ನಾಡಿಯಾ ಥೀಮ್’ ಎಂದೇ ಹೆಸರುವಾಸಿಯಾಯಿತು.

ಅಂತಹ ನದಿಯಾ ಕಮಾನ್ಸೆ ’ಇನ್ನು ಸಾಕು ’ ಎಂದು ಕ್ರೀಡೆಯ ಅಂಗಳದಿಂದ ಎದ್ದು ಹೋಗಲು ನಿರ್ಧರಿಸಿಬಿಟ್ಟಳಲ್ಲಾ …. ನನ್ನೊಳಗೆ ಮತ್ತೆ ಕವಿತೆ ಮೊರೆಯತೊಡಗಿತು.

ನಿನ್ನ ನೆನಪನು ಹೆಕ್ಕಿ ಹಲವು ರೆಕ್ಕೆಯ ಹಕ್ಕಿ

ಪುನಃ ತಂತಿಯ ಮೇಲೆ ಬಾಗಿ ಬಳುಕಿ

ಇಳೆಗೆ ತಾಕುವ ಮುನ್ನ, ಶಬ್ಧ ಜೀಕುವ ಮುನ್ನ

ಮತ್ತದೇ ಕ್ಷಣಗಳಲಿ, ನಿಶ್ಯಬ್ಧ ಮೌನದಲಿ

ತಣ್ಣನೆಯ ನಗೆ ಮಧ್ಯೆ, ನನ್ನೆದೆಯ ಪಲುಕುಗಳು ಬಿಕ್ಕಿ ಬಿಕ್ಕಿ.

ಈ ಬಾರಿ ನಾನು ನಿಂತಿದ್ದು ಎಚ್ ಎಸ್ ಶಿವಪ್ರಕಾಶರ ಎದುರು. ಮಿಲರೇಪದಿಂದ ಸುದ್ದಿ ಮಾಡುತ್ತಾ ಅವರು ಆಗತಾನೆ ’ಮಳೆ ಬಿದ್ದ ನೆಲದಲ್ಲಿ’ ಸಂಕಲನ ಹೊರತಂದಿದ್ದರು. ನಾನೂ ಅವರು ಬಿಟಿಎಸ್ ಬಸ್ಸಿನ ಸಹಪ್ರಯಾಣಿಕರು. ಇಂಗ್ಲಿಷ್ ಬೋಧಿಸುತ್ತಿದ್ದ ಅವರ ಬೆನ್ನು ಬಿದ್ದೆ. ನದಿಯಾ ಕಮಾನ್ಸೆ ಬಗ್ಗೆ ಬರೆದಿರುವ ನನ್ನ ಕವನವನ್ನು ಇಂಗ್ಲಿಷಿಗೆ ಅನುವಾದ ಮಾಡಿಕೊಡಿ ಅಂತ. ಅವರು ಆಗ ನನ್ನನ್ನು ನೋಡಿದ ನೋಟ ಇನ್ನೂ ನನ್ನ ಮನದಾಳದಲ್ಲಿ ಅಚ್ಚಾಗಿ ಕುಳಿತಿದೆ. ನಾನು ಆ ವೇಳೆಗೆ ಅವರ ಕವಿತೆಗಳ ಮೊದಲ ಕಿವಿಗಳಲ್ಲಿ ಒಬ್ಬ. ಹಾಗಾಗಿ ಇಲ್ಲ ಎನ್ನಲಾಗದೆ ಅವರು ಅನುವಾದ ಮಾಡಿಕೊಟ್ಟೇಬಿಟ್ಟರು.

ನಿಜವಾದ ಸಮಸ್ಯೆ ಶುರುವಾಗಿದ್ದು ಆಗ. ಕವನ ಬರೆದಿದ್ದಾಯ್ತು, ಬೆನ್ನು ಬಿದ್ದು ಅನುವಾದ ಮಾಡಿಸಿಕೊಂಡಿದ್ದಾಗಿತ್ತು, ಕಳಿಸುವುದು ಎಲ್ಲಿಗೆ?? ನನಗೋ ನದಿಯಾ ಕಮಾನ್ಸೆ ನನ್ನ ನೆರೆಯವಳೇನೋ ಎನ್ನುವ ಭಾವ. ಕವನ ಕಳಿಸುವುದರ ಬಗ್ಗೆ ನನಗೇನೂ ಗೊಂದಲವಿರಲಿಲ್ಲ. ಎಲ್ಲಿಗೆ ಕಳಿಸುವುದು ಎಂಬುದೇ ಪ್ರಶ್ನೆಯಾಗಿತ್ತು. ಏಕೆಂದರೆ ಆ ವೇಳೆಗೆ ನದಿಯಾ ರೊಮೇನಿಯಾ ತೊರೆದುಬಿಟ್ಟಿದ್ದಳು. ಜಗತ್ತು ರೊಮೇನಿಯಾದ ಕಮ್ಯುನಿಸ್ಟ್ ಸರ್ಕಾರ ಆಕೆಯನ್ನು ಬಾಳಲು ಬಿಡಲಿಲ್ಲ. ಹದ್ದಿನ ಕಣ್ಣಿಟ್ಟಿತು ಎಂದು ಸಾರಿ ಹೇಳಿಬಿಟ್ಟಿತ್ತು. ನಾಲ್ಕು ಕೋಳಿ ಒಂದೇ ಬಾರಿಗೆ ಕೂಗಿದಾಗ ಅದು ರಾತ್ರಿಯಾದರೂ ಬೆಳಗು ಎಂದು ನಂಬಲೇಬೇಕಾಗುತ್ತದೆ. ಆದರೆ ಆ ವೇಳೆಗೆ ಕ್ಯೂಬಾದ ಹಿಂದೆ ಬಿದ್ದಿದ್ದ ನನಗೆ, ಪ್ರತೀ ಒಲಂಪಿಕ್ಸ್ ನಡೆದಾಗಲೂ ಹೇಗೆ ಅಮೇರಿಕಾ ಹಣದ ಥೈಲಿ ಹಿಡಿದು ಕ್ಯೂಬಾದ ಕ್ರೀಡಾಪಟುಗಳ ಹಿಂದೆ nadia9ಬೀಳುತ್ತಾರೆ ಎಂದು ಗೊತ್ತಾಗಿತ್ತು. ಕ್ಯೂಬಾದ ಕ್ರೀಡಾಧಿಕಾರಿಗಳು ಒಲಂಪಿಕ್ಸ್ ನಲ್ಲಿ ಅಮೇರಿಕಾದ ಕ್ರೀಡಾಪಟುಗಳ ಮೇಲಲ್ಲ, ಡಾಲರ್ ಥೈಲಿಗಳನ್ನು ತಿರಸ್ಕರಿಸಿ, ಅವುಗಳ ಮೇಲೆ ಗೆದ್ದು ಬರಬೇಕಾದ ಪರಿಸ್ಥಿತಿ ಇತ್ತು. ಬಾರ್ಸಿಲೋನಾ ಒಲಂಪಿಕ್ಸ್ ನಲ್ಲಿ ಕ್ಯೂಬಾ ೩೧ ಪದಕ ಗೆದ್ದಿತು ಎನ್ನುವುದಕ್ಕಿಂತ ಅಲ್ಲಿಗೆ ಹೋದ ೨೦೦ ಮಂದಿ ಕ್ರೀಡಾಪಟುಗಳು ಎಲ್ಲರೂ ಹಿಂದಿರುಗಿ ಬಂದರು ಎನ್ನುವುದೇ ನಿಟ್ಟುಸಿರು ಬಿಡುವ ಸಂಗತಿಯಾಗಿತ್ತು. ಆಗಲೇ ಫಿಡೆಲ್ ಕಾಸ್ಟ್ರೋ ಹೇಳಿದ್ದು, ’ಹವಾನಾದ ಕ್ರಾಂತಿ ಚೌಕದಿಂದ ನೇರವಾಗಿ ಅಮೇರಿಕಾದ ವೈಟ್ ಹೌಸ್ ಗೇ ಜಾವಲಿನ್ ಎಸೆಯುವವರು ನಮ್ಮಲ್ಲಿದ್ದಾರೆ’.

ಆದರೆ ನದಿಯಾಗೆ ಗೆಲ್ಲಲಾಗಲಿಲ್ಲ. ನದಿಯಾಳ ಕೋಚ್ ಗಳು ಸಾಕಷ್ಟು ಮುಂಚೆಯೇ ಅಮೇರಿಕಾ ಪಾಲಾಗಿದ್ದರು. ನದಿಯಾ ರಾತ್ರೋರಾತ್ರಿ ಹಿಮಗುಡ್ಡಗಳಲ್ಲಿ ನಡೆದು ಆಸ್ಟ್ರಿಯಾ ಸೇರಿಕೊಂಡು ಅಲ್ಲಿಂದ ಅಮೇರಿಕಾದ ತೆಕ್ಕೆಗೆ ಬಿದ್ದಳು. ಡಾಲರ್ ಥೈಲಿ ನದಿಯಾಳನ್ನು ಗೆದ್ದುಕೊಂಡಿತೋ … ಇಲ್ಲ ರೊಮೇನಿಯಾವೇ ನರಕ ಸೃಷ್ಟಿಸಿತೋ.. ’ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರೆ ಕಾಮಾಕ್ಷಿಯೇ’ ಎನ್ನುವಂತಾಗಿತ್ತು.

ನಾನು ಇರಲಿ ಎಂದು ಕವನದ ಒಂದು ಪ್ರತಿಯನ್ನು ನದಿಯಾ ಕಮಾನ್ಸೆ, ರೋಮೇನಿಯಾ ಎಂದು ಇನ್ನೊಂದನ್ನು ನದಿಯಾ ಕಮಾನ್ಸೆ, ಅಮೇರಿಕಾ ಎಂದೂ ಬರೆದು ಪೋಸ್ಟ್ ಮಾಡಿಯೇಬಿಟ್ಟೆ. ಆ ನಂತರ ನನ್ನ ಕೆಲಸ ಪೋಸ್ಟ್ ಮನ್ ಬರುವುದನ್ನು ಕಾಯುತ್ತಾ ಕೂರುವುದೇ ಆಗಿಹೋಯ್ತು. ’ಅಂಚೆಯ ನೆಂಟನೆ ಓ ಗಡಿಯಾರ’ ಎನ್ನುವಂತೆ ನನ್ನ ಗಡಿಯಾರದ ಮುಳ್ಳುಗಳು ತಿರುಗಿದ್ದೇ ಬಂತು. ನದಿಯಾ ಕಮಾನ್ಸೆ ಕೆಮ್ಮಲಿಲ್ಲ. ನದಿಯಾ ಕಮಾನ್ಸೆ ಹೆಚ್ಚೋ, ನಾನು ಹೆಚ್ಚೋ ಎನ್ನುವಂತೆ ನಾನೂ ಅವಳ ಪತ್ರವನ್ನು ಎಷ್ಟೋಂದು ವರ್ಷಗಳು ಉಳಿದ ನಂತರವೂ ಕಾಯುತ್ತಾ ಕುಳಿತಿದ್ದೇನೆ.

ಮೊನ್ನೆ ಮತ್ತೆ ಪತ್ರಿಕೆ ತ್ರಿರುವಿ ಹಾಕುತ್ತಿದ್ದೆ. ಸಿಕ್ಕಿಹಾಕಿಕೊಂಡೇಬಿಟ್ಟಳು! ಅದೇ ನದಿಯಾ, ಜಾಕಿ ಒಳ ಉಡುಪುಗಳ ಜಾಹಿರಾತಿನಲ್ಲಿ. ನನ್ನ ಮನಸ್ಸು ಏಕೋ ವಿಲಿಗುಟ್ಟಿತು. ನೇಮಿಚಂದ್ರ ವ್ಯಾನ್ ಗೋ ನ ಬದುಕಿನ ಎಳೆ ಹಿಡಿದು ’ನೋವಿಗದ್ದಿದ ಕುಂಚ’ ಎನ್ನುವ ಬಯೋಪಿಕ್ ಕಾದಂಬರಿ ಬರೆದಿದ್ದಾರೆ. ನಾನೂ ಸಜ್ಜಾಗಿದ್ದೇನೆ …. ನದಿಯಾ ಕಾದಂಬರಿ ಅರಳಬಹುದೇನೋ……?

‍ಲೇಖಕರು admin

August 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. Raghunandan K

    ಬರಹ ಇಷ್ಟವಾಯಿತು, ಆದರೆ ನದಿಯಾ ಕಮಾನ್ಸೆ ಬದುಕು ಜಾಹಿರಾತಿನಲ್ಲಿ.. ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ, ನಿಮ್ಮ ಕಾದಂಬರಿಯಲ್ಲಿ ಅವಳಂತವರು ಗೆಲ್ಲುತ್ತಲೇ ಇರಲಿ.. ಕೊನೆವರೆಗೂ..

    ಪ್ರತಿಕ್ರಿಯೆ
  2. ಲಿಂಗರಾಜು ಬಿ.ಎಸ್.

    ಕಮಾನ್ಸೆ ಎದೆಯಾಳ ಗೋರಿಯಲಿ ನಿಶ್ಯಬ್ಧ ನಿರ್ಗಮನ…

    ಪ್ರತಿಕ್ರಿಯೆ
  3. nageshgubbi

    ಮಾಹಿತಿಪೂರ್ಣ ವಿಚಾರವೊಂದನ್ನು ಭಾವಪೂರ್ಣವಾಗಿ ವಿವರಿಸುತ್ತ ವಿಶಿಷ್ಟ ಅನುಭೂತಿಯೊಂದನ್ನು ಈ ಬರಹ ಕಟ್ಟಿಕೊಟ್ಟಿತು.

    ಪ್ರತಿಕ್ರಿಯೆ
  4. Sudha ChidanandaGowda

    ಫೋಟೋ ನೋಡಿ ನೆನಪಾಯಿತು…
    ಹಲವರ್ಷಗಳ ಹಿಂದೆ ದೂರದರ್ಶನದಲ್ಲಿ “ನಾಡಿಯಾ” ಎಂಬ ಧಾರಾವಾಹಿ ಬರುತ್ತಿತ್ತು.
    ಅದರ english accent ಅರ್ಥವಾಗದಿದ್ದರೂ ತಪ್ಪದೇ ನೋಡುತ್ತಿದ್ದೆ. ಇವಳು ಅವಳೇ !
    ಆದರೆ ಜಾಹೀರಾತಿನಲ್ಲಿ ಹೀಗೆ ಕಾಣಿಸಿಕೊಂಡಿರುವುದು ತಿಳಿದಿರಲಿಲ್ಲ.
    ಅದೇನು ಅಷ್ಟು ಆಶ್ಚರ್ಯದ್ದಲ್ಲ. ಯಶಸ್ಸಿನ ಹಿಂದೆ ಪತನವೂ ಅನೇಕ ಕ್ರೀಡಾಪಟುಗಳ ಬದುಕಿನಲ್ಲಿ ಸಹಜ ಎಂಬಂತಾಗಿಬಿಟ್ಟಿದೆ.
    ರುಮಾನಿಯಾದಲ್ಲಿ ಯಾವ ತೊಂದರೆಯೂ ಆದಂತೆ ಕಾಣಿಸುತ್ತಿಲ್ಲ ಸರ್.
    ಆಕೆ ಅಮೆರಿಕಾಕ್ಕೆ ಸ್ವ ಇಚ್ಚೆಯಿಂದ ಹೋಗಿರುವುದೇ ಸತ್ಯವೆಂದು ತೋರುತ್ತದೆ-evidently.
    ನಿಮ್ಮ ಕಾದಂಬರಿ ನೇತ್ಯಾತ್ಮಕ ಅಂಶಗಳೆಡೆಗೂ ಬೆಳಕು ಚೆಲ್ಲಲಿ.

    ಪ್ರತಿಕ್ರಿಯೆ
  5. shobhavenkatesh

    kayuthiddeve kadambarige.lekhana chennagide.nemichandra vango avara
    kadambari adarita nataka chennagi moodibandithu.next nimma kadambari next natakakke kayonove

    ಪ್ರತಿಕ್ರಿಯೆ
  6. Kiran

    Your writing is no doubt as beautiful as her. What is wrong in getting featured in an ad? Is the lingerie component bothering you? Why should she live upto our expectations of her? Should our respect and reverence for her persona get diluted by JOCKEY component? Why not still feel proud of her for what she achieved as a fellow human being?

    ಪ್ರತಿಕ್ರಿಯೆ
    • G

      dear Dr Kiran
      thanks for the feedback
      i think i have to elaborate my write up to make my point clear
      i will do that as a followup to this
      can expect next week
      thanks again

      ಪ್ರತಿಕ್ರಿಯೆ
  7. h g malagi, dharwad

    1976ralli nAninnU puc Oduttidde. nAdiyA mAnTriyal Olampiks nalli perfect 10 anka gaLisidAga tAvu baredante anka board nalli ‘1’ tOrisiddu paper nalli bandaddu nanaginnU nenapide. namma bijApura jilleyshtiruva A dEshavU nammashTE baDatanadindiddarU adu hEge A puTTa huDugi ‘perfect 10’ gaLisidaLu emba vishayada mEleyE nAvella accaripaTTukoMnDu charchisiddU nenapide. nAnu iduvaregU avaLu cikkavaLiddAgina photo gaLannE nODiddu, avaLa youvvanada photo nODiralilla. Ega adU entaha photo, manassu churr andaddu suLLalla!

    ಪ್ರತಿಕ್ರಿಯೆ
  8. s.p.vijayalakshmi

    ಎಷ್ಟು ಸುಂದರ ಬರಹ . ನಾದಿಯಾಬಳುಕುಗಳು ಕಾವ್ಯವಾಗಿ ಹರಿದ ರೀತಿ ಅದ್ಭುತ . ಕಣ್ಣೆದುರು ಚಿತ್ರಿಸುತ್ತಿದ್ದ ಅಕ್ಷರಗಳಲ್ಲಿ ಕಳೆದುಹೋಗಿ ಬಿಟ್ಟೆ . ಕೇವಲ ಒಂದು ಪುಟ್ಟ ಲೇಖನವೇ ನಮ್ಮನ್ನು ಈ ರೀತಿ ಕಲಕಿಬಿಡುವುದೆಂದರೆ , ಕಾದಂಬರಿ ಬಂದರೆ ಹೇಗಿದ್ದೀತು …? ಬೇಗ ಬರಲಿ, ಕಾಯುವಂತಾಗಿದೆ
    s.p.vijayalakshmi

    ಪ್ರತಿಕ್ರಿಯೆ
  9. ಲಿಂಗರಾಜು ಬಿ.ಎಸ್.

    ಲೇಖನ ಅದ್ಭುತವಾಗಿದೆ ಸರ್, ಹಿಂದೆ ಓದಿದ್ದರೂ ಅದೇ ಅಪ್ಯಾಯಮಾನ ಓದುವಂತಿದೆ. ತವರಿನ ಅಭಿಮಾನದ ಚಪ್ಪಾಳೆಯೇ ಬಹುದೊಡ್ಡ ಪ್ರಶಸ್ತಿ ಎನ್ನುವವರ ಮುಂದೆ ನಾದಿಯಾ ಯಾಕೋ ಮುಜುಗರಕ್ಕೀಡಾದಂತೆ ಕಾಣುತ್ತಿದ್ದಾಳೆ. ಆಕೆ ಮತ್ತೆಂದೂ ಗುಲಾಬಿ ಗುಡ್ಡವನ್ನು ನೋಡಲಾರಳು. ಎಷ್ಟೇ ಡಾಲರ್ ಪಡೆದರೂ ಆ ಗುಲಾಬಿ ಗುಡ್ಡೆ ಸಿಗಲಾರದು. ಜನರ ಹೃದಯದಿಂದ ಆಕೆ ನೇರವಾಗಿ ನಡೆದಿದ್ದು ಆಕೆಯ ಸಮಾಧಿಯೆಡೆಗೆ….

    ಪ್ರತಿಕ್ರಿಯೆ
  10. C. N. Ramachandran

    ಪ್ರಿಯ ಮೋಹನ್:
    ನದಿಯಾಳ ಕನಸು ಹಾಗೂ ಸಾಧನೆಗಳು ಎಷ್ಟು ರೋಚಕವಾಗಿವೆಯೋ ಅಷ್ಟೇ ನೀವು ಅವಳನ್ನು ಕುರಿತು ಬರೆದ ಕವನದ ಸಾಲುಗಳು ಮತ್ತು ಒಟ್ಟಾರೆಯಾಗಿ ಈ ಲೇಖನ ರೋಚಕವಾಗಿವೆ –ನಿಮ್ಮೊಳಗಿನ ’ಕ್ಯೂಬಾ’ ರೋಚಕವಾಗಿರುವಷ್ಟು. ಹಾರ್ದಿಕ ಅಭಿನಂದನೆಗಳು. ಅವಳನ್ನು ಹಾಗೂ ರುಮೇನಿಯಾವನ್ನು ಕುರಿತ ನಿಮ್ಮ ಕಾದಂಬರಿ ಆದಷ್ಟು ಬೇಗ ರೂಪು ತಾಳಲಿ; ನಾವೆಲ್ಲರೂ ಅದಕ್ಕಾಗಿ ಕಾಯುತ್ತಿರುತ್ತೇವೆ. ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: