ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಯಾವುದು ಅರಿವು ? ಯಾವುದು ಸತ್ಯ ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

30

ಯಾವುದು ಅರಿವು ? ಯಾವುದು ಸತ್ಯ ?
ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸತ್ಯ ಇರುತ್ತದೆಯೇ ?
ಅವರು ಕೆಲಸಾ ಮಾಡದಿದ್ರೆ ಏನು ಮಾಡ್ಬೇಕು ? ಆಗ ಒಡಿತೀವಿ, ಬಡೀತೀವಿ ? ನನ್ನ ಹೆಂಡ್ರನ್ನಾ ನಾನು ಒಡಿತೀನಿ ನೀನ್ಯಾರು ಒಡಿಬೇಡ ಅನ್ನೋಕೆ? ಒಡೀಬೇಡ ಅಂದ್ರೆ ನೀನು ಬಂದು ಬಟ್ಟೆ ಒಕ್ಕೊಡ್ತೀಯಾ?

ಇದು ಮದ್ದೂರಿನಲ್ಲಿ ನಡೆದ ಒಂದು ಬಹಿರಂಗ ಸಭೆಯಲ್ಲಿ ಮಾತಾಡುತ್ತಿರುವಾಗ ನನಗೆ ಎದುರಾದ ಪುಂಖಾನುಪುಂಖ ವಾಗ್ಝರಿ.
ಅವತ್ತು ಸಭೆಯಲ್ಲಿ ಇದ್ದವರು ಬಹಳಷ್ಟು ಮಂದಿ ಮಹಿಳೆಯರೇ. ಕೆಲವು ಪುರುಷರು ಅಂಚಿನಲ್ಲಿ ನಿಂತಿದ್ದರು. ನಾನು ಅಂದು ಹೇಳಿದ್ದಿಷ್ಟು :
ಗಂಡು ಹೆಣ್ಣು ಇಬ್ಬರೂ ಸಮಾನ. ಗಂಡಸರಿಗೆ ಹೆಂಡತಿಯರನ್ನು ಹೊಡೆಯುವ ಯಾವುದೇ ಹಕ್ಕಿಲ್ಲ. ಏನೇ ಸಮಸ್ಯೆ ಇದ್ರೂ ಮಾತಾಡಿ ಬಗೆ ಹರಿಸ್ಕೋಬೇಕು. ಗಂಡಂದಿರು ಹೊಡೆದ್ರೆ ಹೆಂಡತಿಯರಿಗೂ ತಿರುಗಿಸಿ ಹೊಡೆಯೋ ಹಕ್ಕಿದೆ ಎಂದೆ.

ತಹೊಳ್ಳಿ ಅಂಚಿನಲ್ಲಿದ್ದ ಗಂಡಸರು ಕೂಗಾಡಲು ಶುರು ಮಾಡಿದ್ರು. ವೇದಿಕೆ ಮೇಲೆ ನುಗ್ಗುವವರಂತೆ ಮುಂದಕ್ಕೆ ಬಂದ್ರು. ಇಷ್ಟೆಲ್ಲಾ ಆದ್ರೂ ಅಷ್ಟೊಂದು ಜನ ಹೆಂಗಸರಲ್ಲಿ ಒಬ್ಬ ಮಾರಾಯ್ತಿಯೂ ಅದ್ಯಾಕೆ ಕೂಗಾಡ್ತೀರಿ, ಅವರು ಹೇಳಿದ್ದು ಸರಿ ಅನ್ಬೇಕಲ್ಲಾ, ಉಹುಂ. ನೋಡುತ್ತಾ ಇದ್ದರು.
ಇದು ಇಪ್ಪತ್ತೊಂದನೆಯ ಶತಮಾನದಲ್ಲೂ, ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನ ಆದ ಮೇಲೂ ಇರುವ ವಾಸ್ತವ.
ಇದರಲ್ಲಿ ನಾನು ಹೇಳಿದ್ದು ಸತ್ಯವೋ, ಗಂಡಸರು ಹೇಳಿದ ಮಾತು ಸತ್ಯವೋ ಅಥವಾ ಹೆಂಗಸರ ಮೌನವೇ ಸತ್ಯವನ್ನು ಹೇಳಿದೆಯೋ ?
ಅಥವಾ ಇತ್ತೀಚಿಗೆ ನವ್ಯೋತ್ತರ,ಸತ್ಯೋತ್ತರ ಎನ್ನುವವರು ಹೇಳುವಂತೆ ಅವರವರಿಗೆ ಅವರವರದೇ ಸತ್ಯವೋ ?
ಈ ಪ್ರಶ್ನೆ ಇಂದು ನಿನ್ನೆಯದಲ್ಲ ಸಾವಿರಾರು ವರ್ಷಗಳದ್ದು.

ಹೆಣ್ಣು ಹೆಣ್ಣೆಂದೇಕೆ ಕೀಳುಗಳೆವರು ಕಣ್ಣು ಕಾಣದ ಗಾವಿಲರು  ಕುವರಿಯಾದೊಡೆ ಕುಂದೇನು ?
ಇದು ಸಂಚಿಯ ಹೊನ್ನಮ್ಮ ಮಾತ್ರ ಕೇಳುತ್ತಿರುವ ಪ್ರಶ್ನೆಯಲ್ಲ. ಸ್ತ್ರೀ ಸಮುದಾಯದ ಹಲ ಹಲವರು ಕೇಳುತ್ತಿರುವ ಪ್ರಶ್ನೆ. ಅದೇ ಸಮಯದಲ್ಲಿ ಸ್ತ್ರೀಯರನೇಕರೂ ಸೇರಿ ಪುರುಷರು ಹೆಣ್ಣು ಹುಟ್ಟಿತಲ್ಲಾ ಎಂದು ಮರುಗುವುದು ಮಾತ್ರವಲ್ಲ ಹೆಣ್ಣು ಹೆತ್ತ ಹೆಣ್ಣನ್ನೇ ಸಾವಿರಾರು ವರ್ಷಗಳಿಂದ ದೂಷಿಸುತ್ತಾ, ಕಿರುಕುಳ ನೀಡುತ್ತಾ ಬಂದಿದ್ದಾರೆ.

ಈ ಎರಡು ಸಂಗತಿಗಳಲ್ಲಿ ಯಾವುದು ಸತ್ಯ ?
ಇತ್ತೀಚೆಗೆ ಮೈಸೂರಿನ ನನ್ನ ಬಾಲ್ಯ ಸ್ನೇಹಿತನೊಬ್ಬನ ಮನೆಯಲ್ಲಿ ಎರಡು ದಿನ ತಂಗಿದ್ದೆವು. ಅವನು ಸ್ವತಃ ತಾನೇ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಉಣಬಡಿಸಿದ. ಅವನು ತಾನು ಮಾಡಿದ ಉಪ್ಪಿಟ್ಟಿನ ಘಮಲು ಸುತ್ತ ನೂರಾರು ಅಡಿ ದೂರಕ್ಕೆ ಹರಡದಿದ್ದರೆ ಅದು ಉಪ್ಪಿಟ್ಟೇ ಅಲ್ಲ ಎನ್ನುತ್ತಿದ್ದ. ನನ್ನ ಶ್ರೀಮತಿ ಅವನು ಮಾಡಿದ ತಿನಿಸುಗಳನ್ನೆಲ್ಲಾ ಹೇಗೆ ಮಾಡಿದ್ದು, ಸಾಧಾರಣ ಉಪ್ಪಿಟ್ಟಿಗೆ ಕೂಡಾ ಯಾವ ರವೆಯನ್ನು ಬಳಸಬೇಕು , ಎಷ್ಟು ಹೊತ್ತು ಉರಿಯಬೇಕು? ಯಾತರಲ್ಲಿ ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಮಾಹಿತಿ ಪಡೆದುಕೊಳ್ಳುತ್ತಿದ್ದಳು. ನಾನು ನನಗೂ ಅವರ ಸಂವಾದಕ್ಕೂ ಏನೂ ಸಂಬಂಧವಿಲ್ಲದವನಂತೆ ಯಾವಾಗ ಅಡಿಗೆ ತಟ್ಟೆಗೆ ಬೀಳುತ್ತದೆ ಎನ್ನುವುದರಲ್ಲಿಯೇ ಆಸಕ್ತನಾಗಿದ್ದೆ.  ನಮ್ಮ ದೇಶದ ಬಹು ಸಂಖ್ಯೆಯ ಗಂಡಸರದು ಇದೇ ವರ್ತನೆ.

ಗಂಡಸರಿಗೆ ಇದು  ಜ್ಞಾನವೆನಿಸುವುದಿಲ್ಲ. ಕಾರು, ಮೋಟಾರು ಬೈಕಿನ ಗಾಳಿ ಎಷ್ಟಿದೆ ? ಎಷ್ಟು ದೂರ ಹೋಗಲು ಎಷ್ಟು ಪೆಟ್ರೋಲ್ ಹಾಕಬೇಕು ಎಂಬುದು ಮಾತ್ರ ಜ್ಞಾನವೆನಿಸುತ್ತದೆ.

ಹೆಂಗಸರು ಒಂದೆಡೆ ಸೇರಿದರೆ ಅದೇ ಅಡಿಗೆಗಳ,ಸೀರೆ,ಒಡವೆಗಳ ಮಾತು ಎಂದು ಕೀಳ್ಗಳೆಯುವ ಗಂಡಸರು ಕಾರಿನ ವಿಧ ವಿಧಗಳ ಬಗ್ಗೆ ಅಥವಾ ಟಿಎ,ಡಿಎ,ಪ್ರೊಮೋಷನ್, ಸಂಬಳಗಳ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಿರುತ್ತಾರೆ. ಹೀಗೆ ಅವರ ಜ್ಞಾನ  ಬೇರೆ,ಇವರ ಜ್ಞಾನ ಬೇರೆಯಾಗಿದೆ.

ಹೊಸ ಕಾರಿನಲ್ಲಿನ ಸಣ್ಣ ಬದಲಾವಣೆಯನ್ನೂ ಕೊಂಡಾಡುವವರು ಹೊಸ ತಿನಿಸಿನ ಹೊಸ ರುಚಿಯನ್ನು ಗಮನಿಸುವುದೂ ಇಲ್ಲ. ಇಡ್ಲಿಯಾಗಲಿ, ಹೋಳಿಗೆಯಾಗಲೀ,ಹೋಗಲಿ ನಿತ್ಯದ ರಾಗಿ ಮುದ್ದೆ ಮಾಡುವುದಾಗಲಿ ಸಾವಿರಾರು ವರ್ಷಗಳು ಪಡಿಪಾಟಲು ಪಟ್ಟು ಮಾನವರು ರೂಪಿಸಿದ ಹೊಸ ಆವಿಷ್ಕಾರಗಳು. ಇಂದಿನ ರಸಾಯನ ವಿಜ್ಞಾನ, ಬಯೋ ಟೆಕ್ನಾಲಜಿಯ ಹೊಸ ಶೋಧಗಳಿಗೆ ಸಮನಾದ ಶೋಧಗಳಲ್ಲವೇ !  ಅವುಗಳನ್ನು ತಯಾರಿಸುವುದನ್ನು ಕಲಿಯುವುದು ಒಂದು ಸತತ ಅಭ್ಯಾಸ ಬೇಡುವ ಕಲಿಕೆ ಎಂಬುದನ್ನು, ಅದರ ಹಿಂದಿನ ಆಸಕ್ತಿ,ಪಡೆದ ಪರಿಣತಿಯನ್ನು ಬಹುತೇಕ ಪರಿಗಣನೆಗೇ ತೆಗೆದುಕೊಳ್ಳುವುದಿಲ್ಲ.

ಗಂಡಸರು ಮತ್ತು ಹೆಂಗಸರ ನಡುವೆ ಅರಿವು ವಿಭಜನೆಗೊಂಡಿದೆ. ಗಂಡಸಿಗ್ಯಾಕೆ ಗೌರಿ ದುಃಖ ಎಂದು ಹೆಂಗಸರೇ ಎಷ್ಟೋ ಬಾರಿ ಗಂಡಸರನ್ನು ಹೊರಗಿಡುವುದೂ ಇದೆ.

ಅರಿವಿನ ಭಿನ್ನತೆ ಮಾನವರಲ್ಲಿ ಸಾಮಾನ್ಯ. ತಾವು ಯಾವ ಕೆಲಸದಲ್ಲಿ ತೊಡಗಿರುತ್ತಾರೋ ಅದರಲ್ಲಿ ಪರಿಣತಿ ಪಡೆಯುವುದೂ ಸಾಮಾನ್ಯ. ಬೇರೆ ಬೇರೆಯವರ ಅನುಭವ, ಅರಿವು ಪರಸ್ಪರ ಗೌರವವನ್ನು ಬೆಳೆಸಬೇಕು. ಹಾಗೇ ತಮ್ಮ ಅರಿವಿನ ಬಗ್ಗೆ ಸ್ವವಿಶ್ವಾಸವನ್ನು ಬೆಳೆಸಬೇಕು.
ಇಂತಹ ಪರಸ್ಪರ ಗೌರವ, ಸ್ವ ವಿಶ್ವಾಸ ಸಾಮಾನ್ಯವಾಗಿ ಹಲವು ಸಂದರ್ಭಗಳಲ್ಲಿ ಕಾಣುತ್ತೇವೆ. ಆದರೆ ಗಂಡಸರು ಹೆಂಗಸರ ಅರಿವು ಅನುಭವಗಳಿಗೆ  ಗೌರವ ನೀಡುವುದಿಲ್ಲ ಮಾತ್ರವಲ್ಲ ಕೀಳಾಗಿ ಕಾಣುತ್ತಾರೆ ಎಂಬುದೇ ಸಮಸ್ಯೆ. ಅದೇ ವಿಷಮವಾದದ್ದು . ಗಂಡಸರೇ ಮಾಡಬೇಕಾದ್ದು ಎಂದು ವಿಧಿಸಲ್ಪಟ್ಟಿರುವ ಕೆಲಸಗಳಿರಲಿ, ಸಾಮಾಜಿಕ ಆರ್ಥಿಕ ವ್ಯವಹಾರಗಳಿರಲಿ, ಹೆಂಗಸರ ಬದುಕಿಗೂ ಸಂಬಂಧಪಟ್ಟ ವಿಷಯಗಳ ಬಗ್ಗೆ ಕೂಡಾ ನಿನಗೇನು ಗೊತ್ತಾಗುತ್ತೆ ಸುಮ್ಕಿರು , ಹೆಂಗಸರ ಬುದ್ಧಿ ಮೊಳಕಾಲ್ ಕೆಳಗೆ ಎಂಬ ಮಾತುಗಳು ಇಂದೂ ಸಾಮಾನ್ಯ. ಮಧ್ಯಮ ವರ್ಗದ ಹಲವು ಕುಟುಂಬಗಳು ಮಾತ್ರ ಇತ್ತೀಚೆಗೆ ಈ ಮನಸ್ಥಿತಿಯಿಂದ ಹೊರಬರುತ್ತಿವೆ.

ನನಗೆ ಒಬ್ಬ ಅಮೇರಿಕನ್ ಸಮಾಜ ವಿಜ್ಞಾನಿ ಗೆಳತಿಯಿದ್ದಾರೆ. ಅವರು ಒಮ್ಮೆ ತಮ್ಮ ಗಂಡ ಮದುವೆಯ ನಂತರ ಹೊಸದಾಗಿ ಮನೆ ಮಾಡಿದಾಗ ಮಾಡಿದ ಎಲ್ಲ ಫರ್ನೀಚರ್‌ಗಳ ಚಿತ್ರಗಳನ್ನು ಫೇಸ್‌ಬುಕ್‌‌ನಲ್ಲಿ ಹಾಕಿದ್ದರು. ಪ್ರತಿಯೊಂದೂ ಬಹಳ ಚೆನ್ನಾಗಿದ್ದವು. ಅವರ ಅಗತ್ಯ ಮತ್ತು ಮನೆಯ ಸ್ಥಳಾವಕಾಶಕ್ಕೆ ಬಹಳ ಸೂಕ್ತವೆನಿಸುವಂತೆ ಡಿಸೈನ್ ಮಾಡಲಾಗಿತ್ತು. ಅವರ ಗಂಡನದು ಬಡಗಿ ವೃತ್ತಿ ಇರಬಹುದು ಎಂದುಕೊಂಡಿದ್ದೆ. ಹಾಗೇ ಕಾಮೆಂಟ್ ಮಾಡಿದಾಗ ಗೊತ್ತಾಗಿದ್ದು ಅವರು ಒಬ್ಬ ಪ್ರಸಿದ್ಧ ಆರ್ಕಿಟೆಕ್ಟ್. ಇಲ್ಲಿ ನನಗೆ ಗೊತ್ತಿರುವ ಯಾವ ಆರ್ಕಿಟೆಕ್ಟಿಗೂ ಬಡಗಿ ಮುಂತಾದ ಕೆಲಸ ಗೊತ್ತಿರುವುದು ಕಂಡಿಲ್ಲ. ಅದಕ್ಕೆ ಅವರು ಅಮೇರಿಕದಲ್ಲಿ ಹಲವರು ಇಂಜನಿಯರ್‌ಗಳು, ವಿಜ್ಞಾನಿಗಳು ಇತ್ಯಾದಿ ಒಳ್ಳೆಯ ಕುಶಲ ಕರ್ಮಿಗಳೂ ಆಗಿರುತ್ತಾರೆ. ಅದು ಅವರ ವ್ಯಕ್ತಿತ್ವದ ಒಂದು ಅಂಶ ಎಂದರು. ಇರಬಹುದು, ನನಗೆ ಹೆಚ್ಚು ಅದರ ಬಗ್ಗೆ ಗೊತ್ತಿಲ್ಲ.

ಆದರೆ ಕೂಡಲೇ ನನಗೆ ನೆನಪಿಗೆ ಬಂದದ್ದು ಅದೇ ಅಮೇರಿಕದ ಒಂದು ಕಾದಂಬರಿ ಮಾಲೆ. ಲಾರಾ ಇಂಗಲ್ಸ್ ವೈಲ್ಡರ್ ಬರೆದ ಹುಲ್ಲುಗಾವಲಿನಲ್ಲಿ ಪುಟ್ಟ ಮನೆ, ಪ್ಲಂ ನದಿಯ ದಡದಲ್ಲಿ ಮುಂತಾದ ಕಾದಂಬರಿಗಳಲ್ಲಿ ಲಾರಾಳ ತಂದೆ, ತಾಯಿ ತಮ್ಮ ವಾಸಕ್ಕೆ ಬೇಕಾದ ಮನೆಯನ್ನು ತಾವೇ ಕಟ್ಟಿಕೊಳ್ಳುವುದು, ಫರ್ನಿಚರ್ ಮಾಡಿಕೊಳ್ಳುವುದು, ಬಾವಿ ತೋಡಿಕೊಳ್ಳುವುದು ಮಾಡುತ್ತಾರೆ. ಆ ಎಲ್ಲವನ್ನೂ ಚೆನ್ನಾಗಿಯೇ ಕಲಿತಿರುತ್ತಾರೆ ಎಂಬ ಚಿತ್ರಣ ಇದೆ.

ಆದರೆ ಭಾರತದಲ್ಲಿ ಉನ್ನತ ವಿದ್ಯಾವಂತರು ಕುಶಲ ಕರ್ಮಗಳನ್ನು ಮಾಡುವುದನ್ನು ಅಪರೂಪಕ್ಕೆ ಮಾತ್ರ ಕಾಣಬಹುದು. ಅದೂ ತಮ್ಮ ಬಟ್ಟೆ ತಾವೇ ಹೊಲಿದುಕೊಳ್ಳುವುದು, ತಮ್ಮ ವಾಹನ ತಾವೇ ಒಂದು ಹಂತದವರೆಗೆ ರಿಪೇರಿ ಮಾಡಿಕೊಳ್ಳುವುದನ್ನು  ಮಾತ್ರ. ಆದರೆ ಚಮ್ಮಾರರ ಹೊರತಾಗಿ ನಾವ್ಯಾರೂ ಚಪ್ಪಲಿ ಹೊಲಿಯುವುದನ್ನು  ಕನಸಿನಲ್ಲೂ ಯೋಚಿಸಲು ಸಾಧ್ಯವಿಲ್ಲ.

ನನ್ನ ತಮ್ಮ ಸ್ವಾಮಿ ಮತ್ತು  ನೊಮಿಟೋರವರ ಮಗ ಪ್ರೇಮ್ಜಿ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದವನು.‌ಅವನು ಕಮ್ಮಾರಿಕೆ ಕಲಿಯಬೇಕೆಂದು ಸ್ವತಃ ನೆರೆಯ ಒಬ್ಬ ಕಮ್ಮಾರನ ಮನೆಗೆ ತಿಂಗಳುಗಟ್ಟಲೆ ಹೋಗಿ ಪ್ರತಿಯೊಂದು ಪ್ರಕ್ರಿಯೆನ್ನೂ ಕಲಿತ. ಅವನಿಗೇನು ಬಂತು ಕಮ್ಮಾರಿಕೆ ಕಲಿಯುವುದಕ್ಕೆ ಎಂದು ಎಲ್ಲರೂ ಒಂತರಾ ನೋಡುವವರೇ. ಸ್ವತಃ ಕಮ್ಮಾರರ ಕುಟುಂಬಕ್ಕೂ ಕೂಡಾ ಇವರಿಗ್ಯಾಕೆ ಬೇಕು ಇದೆಲ್ಲ ಎಂಬ ಭಾವನೆ.

ಆದರೆ ಚರ್ಮ ಹದ ಮಾಡುವುದು ಒಂದು ಮುಖ್ಯ ವಿಜ್ಞಾನ. ಹಾಗೆಯೇ ಅದಿರಿನಿಂದ ಕಬ್ಬಿಣ ತಯಾರಿಸುವುದೂ ಕೂಡಾ. ನಂತರ ಅವುಗಳಿಂದ ಚಪ್ಪಲಿ,ನೇಗಿಲ ಗುಳ, ಕುಡುಗೋಲು ಮೊದಲಾದವನ್ನು ತಯಾರಿಸುವುದು ಬಹಳ ಶ್ರಮ, ಆಸಕ್ತಿ ಬೇಡುವ ಕಲೆ. ಇವುಗಳನ್ನು ಕೀಳಾಗಿ ನೋಡುವುದು ಬೇರೆಲ್ಲರಿಗೂ ರಕ್ತಗತವಾಗಿದೆ. ಬ್ರಾಹ್ಮಣರಂತೂ ತಾವು ಅದನ್ನು ಮಾಡುವ ಬಗ್ಗೆ ಯೋಚಿಸುವುದೂ ಸಾಧ್ಯವಿಲ್ಲ. ಚೀ ಛೀ ಅಸಹ್ಯ!

ಅದೇ ಇವುಗಳಿಗೆ ಮೆಟಲರ್ಜಿ, ಲೆದರ್ ಟೆಕ್ನಾಲಜಿ ಎಂಬ ಹೆಸರು ಕೊಟ್ಟು ಇಂಜನಿಯರಿಂಗ್ ಕಾಲೇಜಿನಲ್ಲಿ ಕಲಿಸ ಹತ್ತಿದರೆ ಅವುಗಳ ಪದವೀಧರರಲ್ಲಿ ಬ್ರಾಹ್ಮಣರು, ಶೂದ್ರರಲ್ಲಿ ಮೇಲ್ ಸ್ತರದವರೇ ಹೆಚ್ಚು. ಚಮ್ಮಾರರೂ ಕಾಣಲಿಕ್ಕೇ ಇಲ್ಲ.

ನಮ್ಮ ದೇಶದ ವರ್ಣ- ಜಾತಿ ಪದ್ಧತಿ ಹೀಗೆ ಅರಿವನ್ನು ವಿಭಜಿಸಿದೆ. ಆಗಲೇ ಹೇಳಿದಂತೆ ಅರಿವಿನ ಭಿನ್ನತೆ ಬೇರೆ. ವಿಭಜನೆ ಬೇರೆ. ಈ ಅರಿವು ಕೀಳು.ಅದು ಅವರಿಗೇ ಸರಿ. ನಾವು ಅದನ್ನು ಕಲಿಯಬಾರದು ಎಂಬ ಬೇಲಿ ಅಲ್ಲಲ್ಲ ಗೋಡೆ ಅರಿವಿನ ವಿಭಜನೆಗೆ ಕಾರಣವಾಗಿದೆ. ಇದೇ ಅರಿವಿನ ವಿಭಜನೆ ಈ ಜ್ಞಾನ ನಮಗೆ ಮಾತ್ರ, ಅವರಿಗೆ ಅದರಲ್ಲಿ ಪ್ರವೇಶವಿಲ್ಲ ಎಂಬ ಬಿಗಿಯಾದ ಕಟ್ಟಲೆಗಳನ್ನೂ ರೂಪಿಸಿದೆ.

ಇದು ಜ್ಞಾನವಲ್ಲ, ಇದು ಜ್ಞಾನವಲ್ಲ :
ಈ ಅರಿವಿನ ವಿಭಜನೆಯ ಮನಸ್ಥಿತಿ ಯಾವ ಹಂತಕ್ಕೆ ಹೋಗಿದೆಯೆಂದರೆ ವೇದ ವಿದ್ಯಾಭೂಷಣ, ಮಹಾ ಮಹೋಪಧ್ಯಾಯರೆಂಬ ಬಿರುದಾಂಕಿತರೊಬ್ಬರು ಬರೆಯುತ್ತಾರೆ :
ಬ್ರಹ್ಮ ಜ್ಞಾನವೊಂದನ್ನು ಬಿಟ್ಟು ಇನ್ನುಳಿದ ಅಸಂಖ್ಯಾತ ಜ್ಞಾನಗಳನ್ನು ತಿಳಿಸಲು ಲೋಕದಲ್ಲಿ ನೂರಾರು,ಸಹಸ್ರಾರು ಶಾಸ್ತ್ರಗಳಿರುತ್ತವೆ. ಈ ಜ್ಞಾನಗಳಿಗೆಲ್ಲ ವೇದಾಂತದಲ್ಲಿ ಅಜ್ಞಾನ ಎಂದೇ ಹೆಸರು.ಜ್ಞಾನ ಎಂದರೆ ಬ್ರಹಜ್ಞಾನ ಎಂದೇ.

ನಹಿ ಜ್ಞಾನೇನ ಸದೃಶಂ – ಇದು ಇಂದು ಅನೇಕ ಬಾರಿ ಉಲ್ಲೇಖಿಸುವ ಒಂದು ಸಂಸ್ಕೃತ ವಾಕ್ಯ. ಗೀತೆಯದು. ವಿಶ್ವ ವಿದ್ಯಾಲಯವೊಂದು ಇದನ್ನು ತನ್ನ ಘೋಷ ವಾಕ್ಯವನ್ನಾಗಿ ಮಾಡಿಕೊಂಡಿದೆ. ಆದರೆ ಗೀತೆಯಲ್ಲೂ, ಬೇರೆ ಸಂಸ್ಕೃತ ಗ್ರಂಥಗಳಲ್ಲಿಯೂ ಇದರ ಅರ್ಥ ಮೇಲಿನಂತೆ. ಅಂದರೆ ಈ ಘೋಷವಾಕ್ಯ ಉಳ್ಳ ಸಂಸ್ಥೆಯೂ ಸೇರಿ ವಿಶ್ವವಿದ್ಯಾಲಯಗಳಲ್ಲಿ ಕಲಿಸುವುದೆಲ್ಲ ಕೇವಲ ಅಜ್ಞಾನ. ನಾವು ನೀವು‌ ಕಲಿತಿರುವುದು,ಕಲಿಸುವುದೆಲ್ಲ ಅಜ್ಞಾನ. ಇಂತಹ ದುರಂತದ ಹಂತವನ್ನು ಮುಟ್ಟಿದೆ ಅರಿವಿನ ವಿಭಜನೆ.

ಮೇಲಿನ ವೇದ ವಿದ್ಯಾಭೂಷಣರು ಮಾತ್ರವಲ್ಲ ಅವರಿಗೆ ಮತ್ತವರ ಹಿರಿಯರಿಗೆ ಸಾವಿರಾರು ವರ್ಷಗಳಿಂದ ಕಲಿಸಿರುವುದೇ ಹೀಗೆ.ಉಪನಿಷತ್ತುಗಳು ಸಾರಿದ “ಸತ್ಯ” ಇದು  ನಾವು ಇಂದು ವಿದ್ಯೆ ಎಂದು ಏನೆಲ್ಲ ಕಲಿಯುತ್ತೇವೋ ಅವೆಲ್ಲ ಅವಿದ್ಯೆ.  ಇದನ್ನೇ ಪರಾ ವಿದ್ಯೆ ಅಪರಾ ವಿದ್ಯೆ ಎಂದೂ ವಿಭಜಿಸಲಾಗಿದೆ.

ಹೀಗೆ ಹೆಂಗಸರು ಕಲಿಯುವುದೆಲ್ಲ, ಎಲ್ಲರಿಗೂ ಜೀವಿಸಲು ಅತ್ಯವಶ್ಯಕವಾದ ಅಡಿಗೆಯ ವಿಜ್ಞಾನವೆಲ್ಲ,ಬಟ್ಟೆ ಶುಚಿ ಮಾಡುವ ವಿಜ್ಞಾನವೆಲ್ಲ ಅವಿದ್ಯೆ. ಆದ್ದರಿಂದ ಕೀಳು. ಅದೇ ಸಮಯದಲ್ಲಿ ಆವರಿಗೆ ವೇದಾಧಿಕಾರವಿಲ್ಲ. ಅವರು ಅಶುದ್ಧಿ. ಮುಟ್ಟಾಗುವವರು. ಹೀಗೆ ಅವರು ಯಾವಜ್ಜೀವ ಅವಿದ್ಯೆಯಲ್ಲೇ ಮುಳುಗಿರ ಬೇಕು. ಈ ಕೀಳು ವಿದ್ಯೆ ಕಲಿತು ನಿರಂತರ ಕೀಳೆಂದು ಬಾಳಬೇಕು.
ಅದೇ ರೀತಿ ಮೆಲ್ ಸ್ತರದ ಶೂದ್ರರೂ ಸೇರಿದಂತೆ ತಳ ಸಮುದಾಯಗಳು ಕಲಿವುದೆಲ್ಲ ಅವಿದ್ಯೆ. ಅವರು ಕಲಿತ, ಮಾಡುವ ಎಲ್ಲವೂ ಕೀಳು. ಅವರೂ ಕೀಳು.

ಇದೇ ಸತ್ಯ,ಪರಮ ಸತ್ಯ. ಇಂದಿನ‌ ವಿಜ್ಞಾನ ಯುಗದಲ್ಲಿಯೂ ಈ ಮನಸ್ಥಿತಿ ತುಂಬಿ ತುಳುಕಾಡುತ್ತಿದೆ.
ಹೀಗಾಗಿ ಯಾವುದು ಅರಿವು, ಯಾವುದು ಜ್ಞಾನ, ಯಾವುದು ಸತ್ಯ,  ಅರಿವ ಬೆಡಗಿನ ಪಯಣದಲ್ಲಿ ಈ ಪ್ರಶ್ನೆಗಳು ಪ್ರಧಾನ ಸ್ಥಾನ ಪಡೆಯುತ್ತದೆ.

ಸಮಾಜದ ವಿಭಜನೆ ಮತ್ತು ಅರಿವಿನ ವಿಭಜನೆ :
ಪುರುಷಾಧಿಪತ್ಯ ಸ್ಥಾಪನೆಯಾಗಿ , ಹೆಣ್ಣು ಪುರುಷನಿಗೆ ಅಧೀನ, ಆಕೆ ಯಾವತ್ತಿದ್ದರೂ ಇನ್ನೊಬ್ಬರ ಮನೆಗೆ ಹೋಗುವವಳು ಎಂಬ ಸಾಮಾಜಿಕ ವ್ಯವಸ್ಥೆ ರೂಪುಗೊಂಡ ನಂತರ ಸತ್ಯ ಯಾವುದು ಎಂಬ ಪ್ರಶ್ನೆ ಹುಟ್ಟಿತು. ಹೆಣ್ಣಿನ ಸತ್ಯ ಬೇರೆ , ಪುರುಷಾಧಿಪತಿಗಳ ಸತ್ಯ ಬೇರೆಯೇ ?
ಈ ಕಾರಣದಿಂದ ಹೆಣ್ಣಿನ ಬದುಕು ಎಷ್ಟೊಂದು ಬದಲಾಯಿತು !

ಲಕ್ಷಾಂತರ ವರ್ಷ‌ಕಾಲ ಈ ರೀತಿಯ ವ್ಯತ್ಯಾಸವಿಲ್ಲದುದು ಮಾತ್ರವಲ್ಲ, ಹೆಣ್ಣಿಗೆ ಜನ್ಮ ನೀಡುವ ವಿಶೇಷ ಸಾಮರ್ಥ್ಯ ಇದೆಯೆಂದು ಹೆಚ್ಚಿನ ಗೌರವಕ್ಕೆ ಅರ್ಹಳಾಗಿದ್ದಳು. ಪೂಜಿತಳೂ ಆದಳು.

ಅದೇನಾದರೂ ಬದಲಾಯಿತೇ ? ಹೆಣ್ಣಿಗೆ ಜನ್ಮ ನೀಡುವ ಸಾಮರ್ಥ್ಯ ಇಲ್ಲವಾಯಿತೇ ?
ಹೀಗೆ ಜನ್ಮ ನೀಡುವ ಸತ್ಯ ಅಂದೂ ಒಂದೇ  ಇಂದೂ ಒಂದೇ ! ಅಂದೂ ಹೆಣ್ಣು ಹೆಣ್ಣು ಮಗುವಿಗೂ ಜನ್ಮ ನೀಡುತ್ತಿದ್ದಳು,ಗಂಡು ಮಗುವಿಗೂ ಜನ್ಮ ನೀಡುತ್ತಿದ್ದಳು. ಇದರಲ್ಲೂ ವ್ಯತ್ಯಾಸವಿಲ್ಲ.

ಹಾಗಾದರೆ ವ್ಯತ್ಯಾಸವಾದುದೇನು ? ಸಮಾಜದ ರಚನೆ ಮಾತ್ರ.
ಅದೇ ರೀತಿ ಬುಡಕಟ್ಟು ಜನರನ್ನು  ಜೀತಗಾರರು, ಗುಲಾಮರನ್ನಾಗಿ ಮಾಡಿದ ನಂತರ ಏನಾಯಿತು ?
ಜೀತಗಾರರ ಒಡೆಯರಿಗೆ ಪುಷ್ಕಳವಾದ ವಿವಿಧ ಬಗೆಯ ಷಡ್ರಸಪೂರಿತವಾದ ಆಹಾರ ದೊರೆಯಿತು. ಕೈಗೊಬ್ಬ ಆಳು, ಕಾಲಿಗೊಬ್ಬ ಆಳು.
ಜೀತಗಾರರಿಗೆ ತಂಗಳು, ಹಲವೊಮ್ಮೆ ಹಳಸಿದ ಏನೋ ಒಂದಿಷ್ಟು, ಜೀವ ಹಿಡಿದುಕೊಂಡಿರುವುದಕ್ಕೆ ಮಾತ್ರ ಎಂಬಷ್ಟು. ಅವರ ಅತಿ ದುಡಿಮೆಯ ಕಾರಣದಿಂದ  ಆದರೆ ಅವರ ದೇಹ ರಚನೆ ಮತ್ತು ಆಹಾರದ ಅಗತ್ಯ ಮತ್ತಷ್ಟು ಹೆಚ್ಚು. ಆದರೆ ದೊರೆಯುವುದು ಅತ್ಯಂತ ಕಡಿಮೆ,ಪುಷ್ಟಿಕರವಲ್ಲದ್ದು.
ಜಾತಿ ವ್ಯವಸ್ಥೆ ಸ್ಥಾಪಿತವಾದ ನಂತರ ಸತ್ಯ ಆಯಾ ಜಾತಿಗನುಸಸಾರವಾಗಿ ಬೇರೆ ಬೇರೆಯಾಗುವುದೇ ?

ಆ ಬಹಿರಂಗ ಸಭೆಯಲ್ಲಿ ಬಂದ ವಿಚಾರಗಳಲ್ಲಿ ಯಾವುದು ಸತ್ಯ ? ಅಲ್ಲಿಯ ಪುರುಷರು ಹೇಳಿದ್ದೂ ಸತ್ಯ.  ಅವರಿಗದೇ ಸತ್ಯ . ನಾನು ಹೇಳಿದ್ದೂ ಸತ್ಯ, ಅದು ನನಗೆ ಮಾತ್ರ, ಇನ್ನು‌ ಮೌನವಾಗಿದ್ದ ಹೆಂಗಸರದೂ ಸತ್ಯ ಎಂದು ವಾದಿಸಬಹುದೇ ?

ಹಾಗಾದರೆ ಶಿಕ್ಷಣ, ಶಿಕ್ಷಣದಲ್ಲಿ ಕಲಿಯುವ ಮೌಲ್ಯಗಳು, ಸಮಾನತೆ,ಪ್ರಜಾಪ್ರಭುತ್ವ ಎಂಬುದಕ್ಕೆ ಅರ್ಥವಿದೆಯೇ ? ಸಮಾನತೆ ಇಲ್ಲದ ಮೇಲೆ ಮಹಿಳೆಯರಿಗೆ ಶಿಕ್ಷಣ ಏಕೆ,ತಳ ಸಮುದಾಯಗಳಿಗೆ ಶಿಕ್ಷಣ ಏಕೆ ಎಂಬ ಸಾವಿರಾರು ವರ್ಷಗಳ “ಸತ್ಯ” ಕ್ಕೇ ಮರಳುವುದಿಲ್ಲವೇ ?
ಆದ್ದರಿಂದ ಈ ಸಂದರ್ಭದಲ್ಲಿ ಸತ್ಯ ಒಂದೇ. ಸಮಾನತೆಯೇ ಸತ್ಯ. ಒಬ್ಬರಿಗೊಂದು ಸತ್ಯ, ಮತ್ತೊಬ್ಬರಿಗೆ ಮತ್ತೊಂದು ಸತ್ಯ ಎಂಬುದಿಲ್ಲ.

ಪುರುಷರು ಈ‌ ಸತ್ಯ ವನ್ನು ಮನಗಾಣಬೇಕಾಗಿದೆ. ಮಹಿಳೆಯರಲ್ಲಿ ಹಲವರು ಪುರುಷಾಧಿಪತ್ಯದ ವಿಚಾರವನ್ನೇ ಮೈಗೂಡಿಸಿಕೊಂಡಿರುವವರೂ ಇದನ್ನು ಮನಗಾಣಬೇಕಾಗಿದೆ. ಅಲ್ಲಿದ್ದ ಮಹಿಳೆಯರಲ್ಲಿ ಈ ಸಮಾನತೆಯ ಸತ್ಯವನ್ನು ಒಪ್ಪಿಕೊಂಡವರೂ ಕೂಡಾ ಅದನ್ನು ಹೇಳುವ ಪರಿಸ್ಥಿತಿಯಲ್ಲಿಲ್ಲ. ಅಂದ ಮಾತ್ರಕ್ಕೇ ಅವರಿಗೇ ಆ ಸತ್ಯ ಬೇಕಾಗಿಲ್ಲ. ಆದ್ದರಿಂದ ಅವರನ್ನು ಕೇಳಿ. ಅವರೊಪ್ಪಿಕೊಂಡರೆ ಮಾತ್ರ ಅದು ಅವರ ಸತ್ಯವಾಗುತ್ತದೆ ಎಂಬ ಆಧುನಿಕೋತ್ತರವಾದವನ್ನು ಸತ್ಯದ ಸ್ಥಾಪನೆಗಾಗಿ ತಿರಸ್ಕರಿಸಬೇಕಾಗಿದೆ. ಇಂತಹ ವಾದಗಳು ಸಮಾಜದಲ್ಲಿ ಮೇಲು ಕೀಳುಗಳ ಯಥಾಸ್ಥಿತಿಯನ್ನು ಉಳಿಸಿ ಬೆಳೆಸುವ ವಾದಗಳು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

29 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading