
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.
ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.
ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.
ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.
ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.
35
ಕನಸಿನ ಸ್ವರೂಪದ ಬಗ್ಗೆ ನರ ವಿಜ್ಞಾನ ಮತ್ತು ಮನಶ್ಶಾಸ್ತ್ರದ ಸಂಶೋಧನೆಗಳ ಬಗ್ಗೆ ನಾಲ್ಕು ವಾರಗಳ ಹಿಂದೆ ಬರೆದ ಅಂಶಗಳನ್ನು ಹಾಗೂ ಬುಡಕಟ್ಟು ಸಮುದಾಯಗಳಲ್ಲಿ ದೈವಗಳ ಉಗಮಕ್ಕೆ ಅವು ಕಾರಣವಾದ ವಿಷಯವನ್ನು ನೆನಪಿಸಬಯಸುತ್ತೇನೆ.
ಬುಡಕಟ್ಟು ಜನರಿಗೆ ತಾವು ಕಂಡ ಕನಸುಗಳಲ್ಲಿ ಇಲ್ಲವಾದ ತಮ್ಮ ಹಿರಿಯರನ್ನು ಕಂಡರು ಮಾತ್ರವೇ ಅಲ್ಲದೆ ಅವರೊಡನೆ ಸಂಭಾಷಣೆ ನಡೆಸಿದ್ದು ಸ್ವಾಭಾವಿಕವಾಗಿಯೇ ಅವರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತು. ಅವರೆಲ್ಲೋ ಇನ್ನೂ ಇದ್ದಾರೆ. ಆದರೆ ನಿದ್ದೆಯಲ್ಲಿ ಕಾಣುವವರು ಎಚ್ಚರವಾಗಿದ್ದಾಗ ಏಕೆ ಕಾಣುವುದಿಲ್ಲ. ಆದರೆ ಎಲ್ಲಿದ್ದಾರೆ, ಯಾವ ರೂಪದಲ್ಲಿದ್ದಾರೆ, ತಮ್ಮ ಕನಸಿನೊಳಗೆ ಹೇಗೆ ಬರುತ್ತಾರೆ. ಅವರೊಡನೆ ಮಾತನಾಡಿದ ತಾವು ಹೇಗೆ ಅವರನ್ನು ನೋಡಲು, ಮಾತನಾಡಲು ಸಾಧ್ಯವಾಯಿತು. ಸತ್ತ ಅವರು ಮನುಷ್ಯರ ರೂಪದಲ್ಲಿ ಇಲ್ಲದಿದ್ದರೆ ಅವರನ್ನು ಜೀವಂತವಿರುವ ತಾವು ಕಂಡು ಯಾವ ರೂಪದಲ್ಲಿ ಕಂಡು ಮಾತನಾಡಿದ್ದು.
ಕನಸುಗಳಲ್ಲಿ ಸತ್ತವರು ಮಾತ್ರವರು ಅಲ್ಲದೇ ಇದ್ದವರ ಜೊತೆ ಕೂಡಾ ಒಡನಾಡಿದ್ದೇವೆ. ಜಗಳ, ಗುದ್ದಾಟ ಕೂಡಾ ನಡೆಸಿದ್ದೇವೆ. ಹೆಂಗಸರು ಗಂಡಸರೊಡನೆ, ಗಂಡಸರು ಹೆಂಗಸರೊಡನೆ ಲೈಂಗಿಕ ಚಟುವಟಿಕೆ ನಡೆಸಿದ್ದೇವೆ. ಅದೂ ಕೂಡಾ ಬೇರೆಲ್ಲೋ ದೂರದಲ್ಲಿದ್ದವರೊಡನೆ ಇವೆಲ್ಲ ನಡೆಸಿದ್ದೇವೆ. ಎಚ್ಚರವಾಗಿ ನೋಡಿದರೆ ನಾವು ಮಲಗಿದಲ್ಲಿಯೇ ಮಲಗಿದ್ದೇವೆ. ಇವೆಲ್ಲ ಹೇಗೆ ಸಾಧ್ಯವಾಯಿತು ?
ಇಂತಹ ಪ್ರಶ್ನೆಗಳೇನೋ ಹುಟ್ಟಿದ್ದು ಸಹಜವಾದದ್ದೇ. ಆದರೆ ಅವುಗಳಿಗೆ ಉತ್ತರ ಕಂಡುಕೊಳ್ಳಲು ಅವಶ್ಯವಾದ ಪರಿಸ್ಥಿತಿ, ಸಾಧನ, ಜೀವಕ್ರಿಯೆಗಳ ಅರಿವು ಆಗ ಇರಲಿಲ್ಲವಲ್ಲ. ಆದ್ದರಿಂದ ನಮ್ಮದೇ ಒಂದು ಭಾಗ ಬೇರೆಯೇ ರೂಪದಲ್ಲಿ ದೇಹದಿಂದ ಹೊರಗೆ ಹೋಗಿ ಸಂಚರಿಸುತ್ತದೆ. ಪರಸ್ಥಳಗಳಿಗೆ ಮಾತ್ರವಲ್ಲ,ಇಲ್ಲವಾದವರು ಇರುವ ಪರಲೋಕಗಳಿಗೂ ಹೋಗುತ್ತದೆ ಎಂದು ಭಾವಿಸಿದರು. ಹೀಗೆ ಆತ್ಮದ ಕಲ್ಪನೆ ಮೂಡಿತು. ಇದು ಬುಡಕಟ್ಟು ಸಮಾಜದ ಸ್ಥಿತಿಯಲ್ಲಿ ವಿಶ್ವಾದ್ಯಂತದ ಜನರ ನಡುವೆ ಮೂಡಿದ ಭಾವನೆ.
ಬುಡಕಟ್ಟು ಜನರು ತಮ್ಮ ಮುಗ್ಧತೆಯಲ್ಲಿ ಕನಸಿನಲ್ಲಿ ಕಂಡ ಹಿರಿಯರ ನೆನಪಿನ ಆಚರಣೆಗಾಗಿ ರೂಪಿಸಿಕೊಂಡ ದೈವಗಳು ರಾಜ ಪ್ರಭುತ್ವದ ಉಗಮದೊಂದಿಗೆ ದೇವರುಗಳಾಗಿ ಬದಲಾದವು. ದೈವಗಳಿಗೆ ಸಂಬಂಧಿಸಿದ ಬುಡಕಟ್ಟು ಆಚರಣೆಗಳು ಯಾಗ, ಯಜ್ಞಗಳಾಗಿ ರಾಜರುಗಳನ್ನು ಪ್ರತಿಷ್ಟಾಪಿಸಲು ಬಳಕೆಯಾದವು. ಧಾರ್ಮಿಕ ಹಬ್ಬ,ಉತ್ಸವಗಳಾಗಿ ಹೊಸ ರೂಪ ಪಡೆದವು ಎಂಬುದನ್ನು ಹಿಂದಿನ ಮೂರು ಲೇಖನಗಳಲ್ಲಿ ಓದಿದ್ದೀರಿ. ಹಾಗೆಯೇ ದೇಹದಿಂದ ಹೊರ ಹೋಗಿ ಸಂಚರಿಸುವ ಆತ್ಮದ ಕಲ್ಪನೆಯನ್ನೂ ವಿಶ್ವದ ವಿವಿಧ ಧರ್ಮಗಳು ಆಯಾ ದೇಶ ಕಾಲಗಳ ಪರಿಸ್ಥಿತಿಗಳಿಗೆ ತಕ್ಕಂತೆ ತಂತಮ್ಮ ಉದ್ದೇಶಗಳಿಗಾಗಿ ಬಳಸಿಕೊಂಡಿವೆ. ತಮ್ಮ ಧರ್ಮದ ಸಿದ್ಧಾಂತ, ವಿಚಾರಗಳನ್ನು ಜನಮನದಲ್ಲಿ ಬೇರೂರಿಸಲು ಆತ್ಮದ ಕಲ್ಪನೆ ಬಹಳ ಉಪಯುಕ್ತ ಸಾಧನವಾಗಿ ಪರಿಣಮಿಸಿದೆ.

ಕನಸುಗಳ ಬಗೆಗಿನ ಯಾವ ಮುಗ್ಧ ನಂಬಿಕೆಗಳು ದೈವಗಳಿಗೆ ಜನ್ಮ ನೀಡಿದವೋ ಆ ಕನಸುಗಳು ಭಾರತದ ತತ್ವಶಾಸ್ತ್ರದ ಮಹತ್ವದ ಗ್ರಂಥಗಳಾದ ಉಪನಿಷತ್ತುಗಳಲ್ಲಿ ಹಲವು ಬಾರಿ ಉಲ್ಲೇಖಿಸಲ್ಪಟ್ಟಿವೆ ಎಂಬುದೊಂದು ಆಶ್ಚರ್ಯದ ಸಂಗತಿ. ಮಾಂಡೂಕ್ಯ ಉಪನಿಷತ್ ಎಂಬ ಒಂದು ಇಡೀ ಉಪನಿಷತ್ತು ಕನಸಿನ,ಕನಸುಗಳಿಲ್ಲದ ನಿದ್ದೆಯ ಮೀಮಾಂಸೆಗೇ ಮೀಸಲು. ಅದಕ್ಕೆ ಶಂಕರಾಚಾರ್ಯರ ಗುರು ಎಂಬ ಪ್ರತೀತಿಯುಳ್ಳ ಗೌಡಪಾದರ ಕಾರಿಕೆ ಎಂಬ ವಿವರಣೆಗಳು, ಯಾಜ್ಞವಲ್ಕ್ಯ -ಜನಕ – ಮೈತ್ರೇಯಿಗಳ ಪ್ರಸಿದ್ಧ ಸಂವಾದಗಳನ್ನೊಳಗೊಂಡ ಬೃಹದಾರಣ್ಯಕ ಉಪನಿಷತ್ತಿನ 30 ಕ್ಕೂ ಹೆಚ್ಚು ಶ್ಲೋಕಗಳು ಕನಸಿನ,ಕನಸುಗಳಿಲ್ಲದ ನಿದ್ದೆಯ ವಿವರಣೆಗಾಗಿಯೇ ಮೀಸಲಾಗಿವೆ. ನಚಿಕೇತನೆಂಬ ಬಾಲಕನಿಗೆ ಸಾಕ್ಷಾತ್ ಮೃತ್ಯು ದೇವತೆಯಾದ ಯಮನೇ ಸತ್ತ ನಂತರ ಮನುಷ್ಯರು ಏನಾಗುತ್ತಾರೆ ಎಂಬ ಬಗ್ಗೆ ಮಾಡಿದ ಉಪದೇಶವನ್ನು ಒಳಗೊಂಡ ಕಠೋಪನಿಷತ್ತು, ಮತ್ತೊಂದು ಮುಖ್ಯ ಉಪನಿಷತ್ತಾದ ಛಾಂದೋಗ್ಯ ಉಪನಿಷತ್ತು, ಪ್ರಶ್ನೋಪನಿಷತ್ತು, ತೈತ್ತೀರಿಯ ಉಪನಿಷತ್ತು, ಮೊದಲಾದ ಹಲವು ಉಪನಿಷತ್ತುಗಳಲ್ಲಿನ ಹೊಸ ತತ್ವಶಾಸ್ತ್ರದ ಅಡಿಪಾಯವೆಂಬ ರೀತಿಯಲ್ಲಿ ಕನಸುಗಳ ಪ್ರಸ್ತಾಪವಾಗಿದೆ. ತ್ರಿಮತಸ್ಥ ಆಚಾರ್ಯರುಗಳೆಂದು ಪ್ರಸಿದ್ಧರಾದ ಶಂಕರ, ರಾಮಾನುಜ, ಮಧ್ವ ಆಚಾರ್ಯರುಗಳು ಉಪನಿಷತ್ತುಗಳ ಮೇಲೆ, ಅಲ್ಲಿಯ ವಿಚಾರಗಳ ಮೇಲೆ ಬರೆದ ಭಾಷ್ಯಗಳಲ್ಲಿ ಕನಸಿನ ಮೀಮಾಂಸೆ ಮುಖ್ಯ ಭಾಗವಾಗಿದೆ.
ಕನಸಿನ ಮತ್ತು ಕನಸುಗಳಿಲ್ಲದ ನಿದ್ದೆಯ ಮೀಮಾಂಸೆಯ ಅಡಿಪಾಯದ ಮೇಲೆಯೇ ವೇದಾಂತ, ಅದರ ಶಾಖೆಗಳಾದ ಅದ್ವೈತ, ದ್ವೈತ, ವಿಶಿಷ್ಟಾದ್ವೈತ ಮೊದಲಾದ ಧಾರ್ಮಿಕ ಪಂಥಗಳು,ತತ್ವಜ್ಞಾನಗಳ ಬಹ ಮಹಡಿಗಳ ಮಹಲುಗಳು ಕಟ್ಟಲ್ಪಟ್ಟಿವೆ. ವೇದಾಂತದ ಆಚಾರ್ಯರುಗಳು ಮಾತ್ರವೇ ಅಲ್ಲದೆ ಅಸಂಗ, ವಸುಬಂಧು, ದಿಙ್ನಾಗ, ಧರ್ಮ ಕೀರ್ತಿ ಮೊದಲಾದ ಯೋಗಾಚಾರ, ವಿಜ್ಞಾನವಾದವೆಂಬ ತತ್ವಶಾಸ್ತ್ರದ ಪ್ರಮುಖರು ಮತ್ತಿನ್ನಿತರರು ಕೂಡ ಕನಸುಗಳನ್ನು ಆಧರಿಸಿ ತಮ್ಮ ತತ್ವಶಾಸ್ತ್ರವನ್ನು ನಿರೂಪಿಸಿದ್ದಾರೆ.
ಹೀಗೆ ಭಾರತೀಯ ತತ್ವಶಾಸ್ತ್ರ , ದರ್ಶನಗಳ ಬೆಳವಣಿಗೆಗೆ ಕನಸುಗಳ ಮೀಮಾಂಸೆ ಬಹು ಮುಖ್ಯ ಸ್ಥಾನವನ್ನು ಪಡೆದಿದೆ.
ಭಾರತದ ಕಾವ್ಯ,ನಾಟಕ, ಸಂಗೀತ, ಯಕ್ಷಗಾನ ಬಯಲಾಟ ಮೊದಲಾದ ಸಾಂಸ್ಕೃತಿಕ ಸಂಪತ್ತು ಕನಸಿನ ಅಡಿಪಾಯದ ಮೇಲೆ ರೂಪಿತವಾದ ಚಿಂತನೆಗಳನ್ನು ಜನಪ್ರಿಯಗೊಳಿಸಲೆಂದೇ ಹುಟ್ಟಿದೆಯೇನೋ ಎಂಬಂತಹ ಪ್ರಮಾಣದಲ್ಲಿ ಅವುಗಳನ್ನು ಪ್ರಭಾವಿಸಿವೆ. ಇವುಗಳ ಮೂಲಕ ಭಾರತದಲ್ಲಿ ನೂರಾರು ಕೋಟಿ ಜನ ಸಾಮಾನ್ಯರ ನಿತ್ಯ ಜೀವನವನ್ನು ಪ್ರಭಾವಿಸುತ್ತಿರುವ ನಂಬಿಕೆಗಳು ರೂಪುಗೊಂಡಿವೆ.
ಯಾಜ್ಞವಲ್ಕ್ಯರು ಕಂಡ ಕನಸಿನ ಸ್ವರೂಪ :
ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಜನಕ ರಾಜ ಮತ್ತು ಯಾಜ್ಞವಲ್ಕ್ಯರ ಸಂವಾದದಲ್ಲಿ ನಿದ್ರೆಯ ಕನಸು ಮೊದಲಾದ ಅವಸ್ಥಾ ತ್ರಯ ವಿಚಾರಕ್ಕೆ ಬಹು ಹೆಚ್ಚಿನ ಸ್ಥಾನವಿದೆ. ಯಾಜ್ಞವಲ್ಕ್ಯರು ನಿದ್ರೆಯ ಒಂದಯ ಹಂತವೆಂದು ಅವರು ವಿವರಿಸುವ ಸುಷುಪ್ತಿಯ ಆಧಾರದಿಂದಲೇ ತಮ್ಮ ಸಿದ್ಧಾಂತದ ಮುಖ್ಯ ಅಂಶಗಳನ್ನು ತಿಳಿಯಪಡಿಸಲು ಪ್ರಯತ್ನಿದ್ದಾರೆ. ಇವುಗಳಿಗೆ ಶಂಕರರು ಬರೆದ ಭಾಷ್ಯಗಳಲ್ಲಂತೂ ಕನಸುಗಳು,ಕನಸುಗಳಿಲ್ಲದ ನಿದ್ದೆಯ ಸ್ವರೂಪವೇ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ.
ಎಲ್ಲರಿಗೂ ಗೊತ್ತಿರುವಂತೆ ಸಾಮಾನ್ಯವಾಗಿ ಮಾನವರು ಹಗಲು ಎಚ್ಚರ ಅಥವಾ ಜಾಗ್ರತ ಮತ್ತು ರಾತ್ರಿ ನಿದ್ದೆ ಎಂಬ ಎರಡು ಸ್ಥಿತಿಯಲ್ಲಿ ಜೀವಿಸುತ್ತಾರೆ. ಯಾಜ್ಞವಲ್ಕ್ಯರು ಈ ಎರಡು ಸ್ಥಿತಿಗಳಲ್ಲಿ ನಿದ್ದೆಯ ಸ್ಥಿತಿಯ ವಿವರಣೆ ಮತ್ತು ವಿಶ್ಲೇಷಣೆಗೆ ಬಹಳ ಪ್ರಾಮುಖ್ಯತೆ ನೀಡಿದ್ದಾರೆ. ಏಕೆಂದರೆ ಜಾಗ್ರತಾವಸ್ಥೆಯ ಬದುಕಿನ ನಿತ್ಯದ ಅನುಭವಗಳ ಬಗೆಗೆ ಯಾಜ್ಞವಲ್ಕ್ಯರಿಗೆ ಸಂಪೂರ್ಣ ತಿರಸ್ಕಾರ. ನಿದ್ರಾವಸ್ಥೆಯನ್ನು ಪ್ರವೇಶಿಸುವ ಮನುಷ್ಯ ಈ ಲೋಕದ ಮೇರೆಗಳನ್ನು, ಮಿತಿಗಳನ್ನು ದಾಟಿ ಹೋಗುತ್ತಾನೆ. ಮರಣವನ್ನೂ ದಾಟಿ ಬಿಡುತ್ತಾನೆ. ಮತ್ತೊಂದು ಲೋಕವನ್ನೇ ಪ್ರವೇಶಿಸುತ್ತಾನೆ ಎಂದು ಅವರ ಭಾವನೆ.
ಅವರು ನಿದ್ದೆಯ ಅವಧಿಯನ್ನು ಮೂರು ಅವಸ್ಥೆಗಳನ್ನಾಗಿ ವಿಂಗಡಿಸಿದ್ದಾರೆ. ಸ್ವಪ್ನ, ಸುಷುಪ್ತಿ, ತುರೀಯ ಎಂದು. ಇವುಗಳಲ್ಲಿಯೂ ಕನಸುಗಳೇ ಇಲ್ಲದ ಸುಷುಪ್ತಿಯ ಅವಸ್ಥೆ ಮತ್ತು ಮನುಷ್ಯರ ಮಿತಿಗಳನ್ನೆಲ್ಲ ಧಿಕ್ಕರಿಸುವ ತುರಿಯಾವಸ್ಥೆ ಬಹಳ ಪ್ರಮುಖ.
ಸಪ್ನಾವಸ್ಥೆ ಎಂದರೆ ಕನಸುಗಳು ಬೀಳುವ ನಿದ್ದೆಯ ಭಾಗ. ಯಾಜ್ಞವಲ್ಕ್ಯರ ಪ್ರಕಾರ ಇದು ಜಾಗ್ರತ ಅವಸ್ಥೆ ಮತ್ತು ಕನಸುಗಳೇ ಇಲ್ಲದ ನಿದ್ದೆಯಾದ ಸುಷುಪ್ತಿಯ ಅವಸ್ಥೆಗಳ ನಡುವಣ ಮಧ್ಯಂತರದ ಅವಸ್ಥೆ. ಇದರಲ್ಲಿ ದೇಹ ಮತ್ತು ಇಂದ್ರಿಯಗಳು ಸಂಪೂರ್ಣವಾಗಿ ನಿಶ್ಚಲವಾಗಿರುತ್ತವೆ. ಇಂದ್ರಿಯಗಳು ಮನಸ್ಸಿನಲ್ಲಿ ಲೀನವಾಗಿರುತ್ತವೆ. ಜಾಗ್ರತ ಅವಸ್ಥೆಯಲ್ಲಿ ಮನಸ್ಸು ಇಂದ್ರಿಯಗಳು ಮತ್ತು ಅವುಗಳನ್ನು ಧರಿಸಿದ ದೇಹದ ಮೂಲಕ ಜಗತ್ತಿನ ಅನುಭವಗಳನ್ನು ಪಡೆಯುತ್ತದೆ. ಅದರ ಆಧಾರದ ಮೇಲೆ ತನ್ನ ಭಾವನೆಗಳನ್ನು ರೂಪಿಸಿಕೊಳ್ಳುತ್ತದೆ. ಸ್ವಪ್ನಾವಸ್ಥೆಯಲ್ಲಿ ಇಂದ್ರಿಯಗಳು ಮತ್ತು ದೇಹದ ಅವಲಂಬನೆ ಇಲ್ಲದೆ ತನ್ನಷ್ಟಕ್ಕೆ ತಾನೇ ವಿವಿಧ ರೂಪಗಳ ಜಗತ್ತೊಂದನ್ನು ಕಲ್ಪಿಸಿಕೊಳ್ಳುತ್ತದೆ. ಈ ಉದ್ದೇಶಕ್ಕೆ ನೋಡುವ ಮತ್ತು ಕೇಳುವ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ. ಸ್ವಪ್ನಗಳ ಮೂಲ ಸಾಮಗ್ರಿ ಜಾಗ್ರತಾವಸ್ಥೆಯ ಅನುಭವಗಳೇ ಆದರೂ ಸ್ವಪ್ನಗಳು ಬೇರೆಯೇ.

ಯಾಜ್ಞವಲ್ಕ್ಯರು ವಿವರಿಸುವಂತೆ “ಒಬ್ಬ ವ್ಯಕ್ತಿಯು ನಿದ್ರಿಸುವಾಗ ಎಲ್ಲದರಿಂದ ಕೂಡಿದ ಈ ಲೋಕದ ಸಾಮಗ್ರಿಗಳನ್ನು ತನ್ನೊಂದಿಗೆ ಒಯ್ಯುತ್ತಾನೆ. ತಾನೇ ಅದನ್ನು ಬೇರೆ ಬೇರೆಯಾಗಿಸುತ್ತಾನೆ. ತಾನೇ ಅದನ್ನು ನಿರ್ಮಾಣ ಮಾಡುತ್ತಾನೆ, ತನ್ನ ಸ್ವಯಂ ಪ್ರಕಾಶದಿಂದ, ತನ್ನ ಸ್ವಂತ ಬೆಳಕಿನಿಂದ ಕನಸು ಕಾಣುತ್ತಾನೆ. ಆಗ ವ್ಯಕ್ತಿಯು ತನ್ನ ಸ್ವಯಂ ಪ್ರಭೆಯಿಂದ ಬೆಳಗುತ್ತಾನೆ. ಅಲ್ಲಿ ರಥಗಳಿರುವುದಿಲ್ಲ. ಸೇತುವೆಗಳಿರುವುದಿಲ್ಲ, ದಾರಿಗಳೂ ಇರುವುದಿಲ್ಲ. ಆದರೆ ತಾನೇ ರಥಗಳನ್ನು, ಸೇತುವೆಗಳನ್ನು, ದಾರಿಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಅಲ್ಲಿ ಸುಖಗಳಿರುವುದಿಲ್ಲ, ಭೋಗಗಳಿರುವುದಿಲ್ಲ, ಸಂತೋಷಗಳಿರುವುದಿಲ್ಲ,. ಆದರೆ ಆತ ತನ್ನೊಳಗಿನಿಂದಲೇ ಸುಖಗಳನ್ನು, ಭೋಗಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಅಲ್ಲಿ ಕೆರೆಗಳಿರುವುದಿಲ್ಲ, ತಾವರೆಗಳಿಂದ ಕೂಡಿದ ಸರೋವರಗಳಿಲ್ಲ, ನದಿಗಳೂ ಇಲ್ಲ. ಆದರೆ ಆತ ತನ್ನೊಳಗಿನಿಂದಲೇ ಕೆರೆಗಳನ್ನೂ, ತಾವರೆಗಳನ್ನೂ, ನದಿಗಳನ್ನೂ ಸೃಷ್ಟಿಸಿಕೊಳ್ಳುತ್ತಾನೆ. ಏಕೆಂದರೆ ಅವನೊಬ್ಬ ಸೃಷ್ಟಿಕರ್ತನೇ ಆಗಿರುತ್ತಾನೆ.
ಈ ಬಗ್ಗೆ ಅವರು ಕೆಲವು ಪುರಾತನ ಶ್ಲೋಕಗಳನ್ನು ಉಲ್ಲೇಖಿಸುತ್ತಾರೆ :
ನಿದ್ರೆಯ ಸ್ಥಿತಿಯಲ್ಲಿ ಮೇಲಕ್ಕೆ ಏರುತ್ತ
ಕೆಳಗಿಳಿದು ಹೋಗುತ್ತ
ದೇವನಾಗುತ್ತಾನೆ. ತನ್ನ ಸಲುವಾಗಿ ಅನೇಕ ರೂಪಗಳನ್ನು ಸೃಷ್ಟಿಸುತ್ತಾನೆ.
ಈಗ ಸ್ತ್ರೀಯರೊಂದಿಗೆ ಸುಖ ಅನುಭವಿಸುವಂತೆ
ಈಗ ನಗುವಂತೆ
ಇನ್ನೊಮ್ಮೆ ಭಯಾನಕ ದೃಶ್ಯ ಕಾಣುವಂತೆ
ಅನಿಸುವ ರೀತಿಯಲ್ಲಿ.
ಈ ಮಾತುಗಳು ಸ್ಪಷ್ಟವಾಗಿ ಆದಿ ಮಾನವರ ಚಿಂತನೆಗಳ ಆದಿಮ ಸ್ವರೂಪವನ್ನು ಕಾಣಬಹುದು. ಆದರೆ ಆದಿಮ ಚಿಂತನೆಗಳನ್ನು ತಮ್ಮ ಧಾರ್ಮಿಕ ಸಿದ್ಧಾಂತಗಳಿಗೆ ಅನುಗುಣವಾಗಿ ಮಾರ್ಪಡಿಸಿಕೊಂಡಿರುವುದನ್ನೂ ಮೇಲೆ ಕಾಣಬಹುದು. ಸ್ವಪ್ನಗಳ ಬಗೆಗೆ ವಾಸ್ತವ ಸಂಗತಿಗಳನ್ನು ಹೇಳುತ್ತಲೇ ಅವುಗಳನ್ನು ಮಾರ್ಪಡಿಸಲಾಗಿದೆ. ಕನಸುಗಳಲ್ಲಿ ಕಾಣುವ ವಸ್ತುಗಳು ಮತ್ತು ಘಟನೆಗಳನ್ನು ತಾನೇ ಸ್ವಯಂ ಆಗಿ ತನಗೆ ಬೇಕಾದಂತೆ ಸೃಷ್ಟಿಸಿಕೊಳ್ಳುತ್ತಾನೆ. ಸ್ವಯಂ ಪ್ರಕಾಶನಾಗುತ್ತಾನೆ, ಸೃಷ್ಟಿಕರ್ತನೇ ಆಗುತ್ತಾನೆ ಎಂಬುದು ಸತ್ಯವಲ್ಲ ಎಂಬುದು ಎಲ್ಲ ಮುಷ್ಯರಿಗೂ ನಿತ್ಯ ಅನುಭವಕ್ಕೆ ಬರುವ ಸಂಗತಿಯೇ . ಕನಸುಗಳನ್ನು ಯಾವ ವ್ಯಕ್ತಿಯೂ ತನ್ನಿಚ್ಚೆಗೆ ಅನುಗುಣವಾಗಿ ರೂಪಿಸಿಕೊಳ್ಳಬರುವುದಿಲ್ಲ. ಇಂತಹ ಕನಸೇಕೆ ಬಿತ್ತು ಎಂಬುದು ಎಲ್ಲ ಮನುಷ್ಯರಿಗೂ ಅಚ್ಚರಿಯ, ಹಲವೊಮ್ಮೆ ಗಾಬರಿಯ ಆತಂಕದ ಸಂಗತಿಯೂ ಹೌದು. ಈ ನಿತ್ಯ ಅನುಭವವನ್ನು ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಪುಷ್ಟೀಕರಿಸುತ್ತವೆ. ನಿದ್ದೆಯ ಅವಸ್ಥೆಗಳನ್ನು ಸಂಶೋಧನೆಗಳು ವಿವರಿಸಿರುವಂತೆ ಕನಸುಗಳಲ್ಲಿ ಎರಡು ವಿಧ. ಒಂದರಲ್ಲಿ ಮನುಷ್ಯನ ಮನಸ್ಸು ಕೆಲ ಮಟ್ಟಿಗೆ ಮಧ್ಯ ಪ್ರವೇಶ ಸಾಧ್ಯ. ಆದರೆ ರೆಮ್ ( rapid eye movement ) ನಿದ್ದೆಯ ಹಂತದಲ್ಲಿ ಅದು ಸಾಧ್ಯವೇ ಇಲ್ಲ. ಅದು ಸುಪ್ತ ಪ್ರಜ್ಞೆಯಿಂದ ನಿಯಂತ್ರಿಸಲ್ಪಡುತ್ತದೆ.
ಮತ್ತೂ ಒಂದು ಮುಖ್ಯ ಸಂಗತಿ ಎಂದರೆ ಕನಸುಗಳು ದೇಹದ ಹೊರಗೆ ನಡೆಯುವ ಕ್ರಿಯೆಯಲ್ಲ. ದೇಹದ ಒಳಗೆ ದೇಹದ ಒಂದು ಅಂಗವಾದ ಮೆದುಳಿನ ಕೆಲವು ಭಾಗಗಳು ತಮ್ಮ ಕ್ರಿಯಾಶೀಲತೆಯ,ಸೃಜನಶೀಲತೆಯ ಬೆಳವಣಿಗೆ, ಪುನರ್ ಸಂಘಟನೆಗಾಗಿ ನಡೆಸುವ ಕ್ರಿಯೆಗಳೇ ಕನಸುಗಳು.
ಆದರೆ ಕನಸುಗಳ ಬಗೆಗಿನ ಈ ಸೃಷ್ಟಿಕರ್ತ, ಸ್ವಯಂ ಪ್ರಕಾಶ ಕಲ್ಪನೆ ಉಪನಿಷತ್ತುಗಳಲ್ಲಿ ಮತ್ತೂ ಅನೇಕ ಬಗೆಯ ಕಲ್ಪನೆಗಳಿಗೆ ಕಾರಣವಾಗಿದೆ. ಅದರ ಪ್ರಭಾವವನ್ನು ನಿದ್ರಾವಸ್ಥೆಯ ಉಳಿದ ಭಾಗಗಳನ್ನು ಉಪನಿಷತ್ತುಗಳಲ್ಲಿ ವಿವರಿಸಿದ ರೀತಿಯಲ್ಲಿ ಕಾಣಬಹುದು.
ಸುಷುಪ್ತಿಯ ಅವಸ್ಥೆ ಎಂದರೆ ಕನಸುಗಳಿಲ್ಲದ ನಿದ್ದೆಯ ಅವಸ್ಥೆ. ಈ ಸ್ಥಿತಿಯಲ್ಲಿ ಇಂದ್ರಿಯಗಳು ಮಾತ್ರವಲ್ಲದೆ ಮನಸ್ಸೂ ತಟಸ್ಥವಾಗಿರುತ್ತದೆ. ಆದ್ದರಿಂದ ಇಂದ್ರಿಯಗಳಿಂದ ಹುಟ್ಟುವ ಪ್ರಜ್ಞೆ ಸ್ಥಗಿತವಾಗಿರುತ್ತದೆ. ಈ ವಸ್ತು ಬೇರೆ, ಆ ವಸ್ತು ಬೇರೆ ಎಂಬ ತಿಳುವಳಿಕೆ ಇರುವುದಿಲ್ಲ. ತಿಳಿದುಕೊಳ್ಳುವ ವಸ್ತು ( ಜ್ಞೇಯ ) ತಿಳಿದುಕೊಳ್ಳುವ ಮನಸ್ಸು( ಜ್ಞಾತೃ ) ಎರಡೂ ಬೇರೆ ಬೇರೆ ಎಂದು ಕಾಣುವುದಾಗಲಿ ಇರುವುದಿಲ್ಲ.
ಅದೊಂದು ಚಿಂತನರಹಿತ ಅರಿವಿನ ಸ್ಥಿತಿ. ಈ ಸ್ಥಿತಿ ಎಲ್ಲ ಆಶೆಗಳನ್ನೂ ಮೀರಿದ್ದು. ಆದ್ದರಿಂದ ಅದೊಂದು ಆನಂದದ ಸ್ಥಿತಿ ಎನ್ನುತ್ತಾರೆ ಉಪನಿಷತ್ತುಗಳ ಚಿಂತಕರು.
ನಿದ್ದೆಯು ನಮ್ಮೆಲ್ಲರನ್ನೂ ಸಾರ್ವಭೌಮರನ್ನಾಗಿ ಮಾಡುತ್ತದೆ. ಸ್ವಪ್ನಾವಸ್ಥೆಯಲ್ಲಿ ಜಾಗ್ರತಾವಸ್ಥೆಯಲ್ಲಿ ನಮ್ಮಲ್ಲಿ ಉದಿಸುವ ಆಸಕ್ತಿಗಳು ಇಲ್ಲದಿರಬಹುದು. ಆದರೆ ಅದರಲ್ಲಿ ತನ್ನದೇ ನೋವು ನಲಿವುಗಳಂತೂ ಇರುತ್ತವೆ. ಆದರೆ ಸುಷುಪ್ತಿಯ ಲಕ್ಷಣ ಸಂಪೂರ್ಣ ಪ್ರಶಾಂತತೆ. ಎಚ್ಚೆತ್ತ ಮೇಲೆಯೂ ನಾವು ನಿದ್ದೆಯ ಪರಿಪೂರ್ಣ ಶಾಂತಿ ಅಥವಾ ಸುಖವನ್ನು ನೆನಪು ಮಾಡಿಕೊಳ್ಳುತ್ತೇವೆ. ಏಕೆಂದರೆ ನಿದ್ದೆ ಮಾಡಿದ್ದೇವೆ ಮಾತ್ರವಲ್ಲ ಗಾಢವಾಗಿ ನಿದ್ರಿಸಿದ್ದೇವೆ ಎಂಬ ಭಾವನೆ ಮೂಡುತ್ತದೆ.
ತುರೀಯಾವಸ್ಥೆ : ಇದು ಇಂದ್ರಿಯಗಳಿಂದ ಪಡೆಯುವ ಎಲ್ಲ ಅನುಭವಗಳನ್ನು , ಎಲ್ಲೆ ಕಟ್ಟುಗಳನ್ನು ಮೀರಿದುದು. ಒಂದು ಅನುಭಾವ ಸ್ಥಿತಿ. ಇದು ಸಾಮಾನ್ಯ ಮನುಷ್ಯರ ಅನುಭವದ ವ್ಯಾಪ್ತಿಗೆ ಮೀರಿದ್ದು. ಈ ಸ್ಥಿತಿಗೆ ಮುಟ್ಟುವುದೇ ಆಧ್ಯಾತ್ಮಿಕ ಸಾಧನೆಯ ಶಿಖರ ಎಂದು ಭಾವಿಸಲಾಗಿದೆ.
ಕನಸುಗಳ ಬಗ್ಗೆ, ನಿದ್ದೆಯ ವಿವಿಧ ಅವಸ್ಥೆಗಳ ಬಗ್ಗೆ ಆದಿಮ ಚಿಂತನೆಗಳನ್ನು ಬಳಸಿಕೊಂಡ ರೀತಿ, ಅವರು ಸೃಷ್ಟಿಸಿಕೊಂಡ ಕಲ್ಪನೆಗಳು ವೇದಾಂತದ ಬಹು ಪ್ರಮುಖ ತತ್ವಗಳು,ಪರಿಕಲ್ಪನೆಗಳಿಗೆ ಜನ್ಮ ನೀಡಿದೆ.
ಕನಸುಗಳಲ್ಲಿ ಕಾಣುವ ಯಾವ ವಸ್ತುವಿಗೂ ಅಸ್ತಿತ್ವ ಇರುವುದಿಲ್ಲ ಆದ್ದರಿಂದ ನಿಜ ಜೀವನದಲ್ಲಿ ಕಾಣುವ ವಸ್ತು ಪ್ರಪಂಚವೂ ಅಸ್ತಿತ್ವದಲ್ಲೇ ಇಲ್ಲ ಎನ್ನುವ ಮಾಯಾವಾದ , ಜಗನ್ಮಿಥ್ಯೆ ಎಂಬ ಬಹು ವ್ಯಾಪಕ ಚಿಂತನಾ ಸಮುಚ್ಚಯವನ್ನೂ ಸೃಷ್ಟಿ ಮಾಡಲಾಗಿದೆ.
ಆತ್ಮ, ಪರಮಾತ್ಮ, ಬ್ರಹ್ಮನ್, ಮೋಕ್ಷ, ಪುನರ್ಜನ್ಮ, ಪಾಪ,ಪುಣ್ಯಗಳ ಕರ್ಮ ಸಿದ್ಧಾಂತಗಳೂ ಈ ವಿಶ್ಲೇಷಣೆಗಳ ಮೂಸೆಯಿಂದ ಜನ್ಮ ತಾಳಿವೆ. ಮುಂದಿನ ಸಂಚಿಕೆಗಳಲ್ಲಿ ಈ ಪರಿಕಲ್ಪನೆಗಳ ಬಗ್ಗೆ ಚರ್ಚಿಸೋಣ.






0 Comments