ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಚರಕರ ವೈಜ್ಞಾನಿಕತೆಯ ಕತ್ತು ಹಿಚುಕಿದ ಬ್ರಾಹ್ಮಣ್ಯ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

51

ವೈದ್ಯಕೀಯ ಅಧ್ಯಯನಕ್ಕೆ ಒಬ್ಬ ವಿದ್ಯಾರ್ಥಿಯು ಗ್ರಂಥಗಳನ್ನು ಹೇಗೆ ಆಯ್ಕೆ ಮಾಡಬೇಕು ? ಚರಕ ಸಂಹಿತೆ ಈ ಬಗ್ಗೆ ವಿವರವಾದ ಮಾರ್ಗದರ್ಶನ ನೀಡುತ್ತದೆ ಎಂಬುದು ಬಹಳ ಆಸಕ್ತಿಕರ ಅಂಶ. ಈ ಮಾರ್ಗದರ್ಶನದ ಸ್ವರೂಪವನ್ನು ನೋಡಿದರೆ ಅದನ್ನು ವೈದ್ಯಕೀಯಕ್ಕೆ ಸೀಮಿತಗೊಳಿಸಬೇಕಾಗಿಲ್ಲ, ಯಾವುದೇ ವಿಜ್ಞಾನದ ಗಂಭೀರ ಅಧ್ಯಯನಕ್ಕೆ ಸೂಕ್ತವಾದ ಗ್ರಂಥಗಳ ಆಯ್ಕೆಗೆ ನೀಡಿದ ಮಾರ್ಗದರ್ಶನ ಎಂದು ಪರಿಗಣಿಸಬಹುದು. ಈ ಮಾರ್ಗದರ್ಶನವೇ ಚರಕ ಸಂಹಿತೆ ಹೇಗೆ ವೈಜ್ಞಾನಿಕ ಅಧ್ಯಯನದ ಪರಿಕಲ್ಪನೆಯನ್ನು ಈ ಗ್ರಂಥ ತನ್ನ ಜೀವಸಾರವಾಗಿ ಹೊಂದಿದೆ ಎಂಬುದನ್ನು ಕಾಣಬಹುದು.

ಅದರ ಪ್ರಕಾರ ಒಂದು ವೈದ್ಯಕೀಯ ಗ್ರಂಥವು ಈ ಕೆಳಗಿನ ಗುಣಗಳನ್ನು ಹೊಂದಿರಬೇಕು :
ಸುಮಹದ್ – ಸಮಗ್ರವಾಗಿ ವೈದ್ಯಕೀಯ ಜ್ಞಾನವನ್ನು ತಿಳಿಸುವಂತಿರಬೇಕು
ಯಶಸ್ವಿ – ಆಗಲೇ ವೈದ್ಯಕೀಯ ಚಿಕಿತ್ಸೆಯಲ್ಲಿ ಯಶಸ್ವಿ ಗ್ರಂಥ ಎಂಬ ಹೆಸರು ಗಳಿಸಿರಬೇಕು.
ಧೀರ ಪುರುಷ ಸೇವಿತಂ- ಚಿಕಿತ್ಸೆಯಲ್ಲಿ ತಜ್ಞರೆಂದು ಹೆಸರಾಂತ  ವೈದ್ಯರುಗಳು ಅನುಸರಿಸುತ್ತಿರುವ ಗ್ರಂಥವಾಗಿರಬೇಕು
ಅರ್ಥ ಬಾಹುಲ್ಯಮ್ – ವಿವರವಾದ ಅರ್ಥವನ್ನು ನೀಡುವುದಾಗಿರಬೇಕು.
ತ್ರಿವಿಧ ಶಿಷ್ಯ ಬುದ್ಧಿ ಹಿತಂ – ಜಾಣ ಹಾಗೂ ಅಷ್ಟೊಂದು ಜಾಣರಲ್ಲದ ಎರಡು ಸ್ತರಗಳೂ ಸೇರಿದಂತೆ ಮೂರು ವಿಧದ ವಿದ್ಯಾರ್ಥಿಗಳಿಗೂ ಅರ್ಥವಾಗುವಂತಿರಬೇಕು.

ಅಪಗತಂ ಪುನರುಕ್ತಿ ದೋಷಂ – ಮತ್ತೆ ಮತ್ತೆ ಒಂದೇ ವಿಷಯ ಹಲವು ಬಾರಿ ಪುನರಾವರ್ತನೆಯಾಗುವ ದೋಷರಹಿತವಾಗಿರಬೇಕು,
ಸುಪ್ರಣೀತ ಸೂತ್ರ ಭಾಷ್ಯ ಸಂಗ್ರಹ ಕ್ರಮಂ – ಸುಲಲಿತವಾದ ರೀತಿಯಲ್ಲಿ  ವಿವರಿಸಲ್ಪಟ್ಟಿರಬೇಕು. ಸರಿಯಾದ ಚರ್ಚೆ,ತೀರ್ಮಾನಗಳನ್ನು ಮುಂದಿಡಬೇಕು.

ಪತಿತ ಶಬ್ದಂ ಕಷ್ಟ ಶಬ್ದಂ- ಕಠಿಣವಾದ, ದುರ್ಬಲ ಪದಗಳಿರಬಾರದು.
ಪುಷ್ಕಲಾಭಿಧಾನಂ – ವಿಷಯದ ಬಗ್ಗೆ ಸಮಗ್ರ ಜ್ಞಾನವನ್ನು ಮುಂದಿಡಬೇಕು.
ಕ್ರಮಾಗತಾರ್ಥಂ – ವಿಷಯಗಳು ಅಧ್ಯಾಯಗಳಾಗಿ ವಿಭಜನೆಗೊಂಡು ಸರಿಯಾದ ಕ್ರಮದಲ್ಲಿರಬೇಕು.
ಅರ್ಥ ತತ್ವ ವಿನಿಶ್ಚಯ ಪ್ರಧಾನಂ- ವಿಷಯಗಳ ಸಾರವನ್ನು ಸಂದೇಹಗಳಿಗೆಡೆಯಿಲ್ಲದ ರೀತಿಯಲ್ಲಿ ಮುಂದಿಡುವುದೇ ಪ್ರಧಾನ ಗುರಿಯಾಗಿರಬೇಕು.
ಅಸಂಕುಲ ಪ್ರಕರಣಕಂ – ವೈದ್ಯಕೀಯ ವಿಷಯಗಳ ಜೊತೆಗೆ ಅಪ್ರಸ್ತುತ ,ಅನವಶ್ಯಕ ವಿಷಯಗಳನ್ನು ಬೆರೆಸಬಾರದು. ವೈದ್ಯಕೀಯ ಗ್ರಂಥ ವೈದ್ಯಕೀಯ ವಿಷಯಗಳ ಬಗ್ಗೆ ಮಾತ್ರ ಕೇಂದ್ರೀಕರಿಸಬೇಕು.
ಆಶು ಪ್ರಭೋದಕಂ- ಓದಿದ ಕೂಡಲೇ ಅರ್ಥವಾಗುವಂತಿರಬೇಕು.

ಲಕ್ಷಣಾವಚ್ಛೋದಾಹರಣ ವಚ್ಚ- ಸರಿಯಾದ ರೀತಿಯಲ್ಲಿ ಲಕ್ಷಣಗಳನ್ನು (definitions) ಸೂಕ್ತ ಉದಾಹರಣೆಗಳ ಸಹಿತ ವಿವರಿಸಬೇಕು. – (8.3ರೋಗ ಬಿಷಗ್ ಜಿತೀಯ ವಿಮಾನ ಅಧ್ಯಾಯ, ವಿಮಾನ ಸ್ಥಾನ ಚರಕ ಸಂಹಿತೆ.)

ಆಯುರ್ವೇದವೆಂದು ಕರೆಯಲ್ಪಡುವ ವೈದ್ಯಕೀಯದ ಗ್ರಂಥಗಳ ಆಯ್ಕೆಯ ಬಗೆಗಿನ‌ ಈ ಸೂಚನೆಗಳಲ್ಲಿ ಬೇರೆಲ್ಲದರಲ್ಲಿ ಅತ್ಯಂತ ಪೂಜನೀಯ ಭಾವದಿಂದ ಒತ್ತಿ ಹೇಳಲಾಗುವ ವೇದಾಧ್ಯಯನ, ಇತರ  ಧಾರ್ಮಿಕ ಗ್ರಂಥಗಳು, ಧರ್ಮಶಾಸ್ತ್ರದ ಗ್ರಂಥಗಳ ಅಧ್ಯಯನದ ಪೂರ್ವಾವಶ್ಯಕತೆಯ ಬಗ್ಗೆ ಕಿಂಚಿತ್ ಸೂಚನೆಯೂ ಇಲ್ಲ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ ವೈದ್ಯಕೀಯದ ವಿಷಯಗಳಿಗೆ ಮಾತ್ರ ಕೇಂದ್ರೀಕರಿಸಲ್ಪಡಬೇಕು. ಅದಕ್ಕೆ ಸಂಬಂಧವಿಲ್ಲದ ವಿಷಯಗಳನ್ನು ಸೇರಿಸಿ ಗೊಂದಲಗೊಳಿಸಬಾರದು ಎಂಬ ನಿರ್ದಿಷ್ಟ ಸೂಚನೆ ಮತ್ತೂ ವಿಶೇಷ. ಚರಕ ಸಂಹಿತೆಯ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಮತ್ತಷ್ಟು ವಿಷದವಾಗಿ ಹೇಳಲಾಗಿದೆ. ಉದಾಹರಣೆಗೆ ವಿಷಯಗಳನ್ನು ತಿಳಿಸುವುದರಲ್ಲಿ, ಚರ್ಚಿಸುವುದರಲ್ಲಿ ಇರುವ ದೋಷಗಳನ್ನು ಹೇಳುವಾಗ ನ್ಯೂನಮ್ ಮತ್ತು ಅಧಿಕಮ್ ಎಂಬ ದೋಷಗಳ ಬಗ್ಗೆ ಹೇಳುತ್ತದೆ. ಅದರಲ್ಲಿ ನ್ಯೂನಮ್ ಎಂದರೆ ವಿಷಯವನ್ನು ಮಂಡಿಸುವುದರಲ್ಲಿಯ ಕೊರತೆಯನ್ನು ಹೇಳುತ್ತಾ ಯಾವುದೇ ಸಿದ್ಧಾಂತವನ್ನು ಮಂಡಿಸುವುದರಲ್ಲಿ ಐದು ಅಂಶಗಳಿರಬೇಕು-  ಪ್ರಸ್ತಾವನೆ (ಪ್ರತಿಜ್ಞಾ – ನಾವು ಸಾಮಾನ್ಯವಾಗಿ ಉಪಯೋಗಿಸುವ ಪ್ರತಿಜ್ಞೆ ಎಂಬ ಅರ್ಥಕ್ಕಿಂತ ಭಿನ್ನವಾದುದು), ಕಾರಣ (ಹೇತು), ಉದಾಹರಣೆ (ಉದಾಹರಣ್), ಒಳ ಸಂಬಂಧಗಳ ನಿರೂಪಣೆ (ಉಪನಯ- correlation) ಮತ್ತು ತೀರ್ಮಾನ (ನಿಗಮನ conclusion) ಎಂದು ಹೇಳುತ್ತದೆ. ಇದು ಇಂದು ಸಂಶೋಧನಾ ಪ್ರಬಂಧಗಳನ್ನು ಬರೆಯುವಾಗ ಅಥವಾ ಪಿಎಚ್‌ಡಿ‌ಯಂತಹ ಮಹಾ ಪ್ರಬಂಧಗಳ ಬಗ್ಗೆ synopsis (ಸಾರಲೇಖ) ಸಲ್ಲಿಸುವಾಗ ಅನುಸರಿಸಬೇಕಾದ ವೈಜ್ಞಾನಿಕ  ಸೂಚನೆಗಳಂತಿದೆ. ಇದರಲ್ಲಿಯೂ ಯಾವುದೇ ಧರ್ಮಶಾಸ್ತ್ರ ಗ್ರಂಥಗಳ ಬಗೆಗೆ ಪ್ರಸ್ತಾಪವಿಲ್ಲದಿರುವುದನ್ನು ಗಮನಿಸಬಹುದು. ಇನ್ನು ಅಧಿಕಮ್ ಎಂಬ ದೋಷದ ಬಗ್ಗೆ ಹೇಳುವಾಗ ಬಹಳ ಸ್ಪಷ್ಟವಾಗಿಯೇ ವೈದ್ಯಕೀಯಕ್ಕೆ ಸಂಬಂಧವಿಲ್ಲದ ಯಾವುದೋ ಬೃಹಸ್ಪತ್ಯ ಅಥವಾ ಔಷಣ ಎಂಬುವರ ಗ್ರಂಥಗಳನ್ನು ಉಲ್ಲೇಖಿಸುವುದು ಒಂದು ಸಿದ್ಧಾಂತ ಮಂಡನೆಯ ದೋಷ ಎಂದು ಹೇಳಲಾಗಿದೆ ( ವಿಮಾನ ಸ್ಥಾನ,8- 54.)

ಅದೇ ಸಂದರ್ಭದಲ್ಲಿ ಚರಕ ಸಂಹಿತೆಯಲ್ಲಿ ಚರ್ಚೆ, ಸಂವಾದ, ವಾದ ವಿವಾದಗಳ ಮಹತ್ವದ ಬಗ್ಗೆ ಹಲವು ಕಡೆ ವಿವರವಾಗಿ ಪ್ರಸ್ತಾಪಿಸಲಾಗಿದೆ.
ಚರಕ ಸಂಹಿತೆ ವೈದ್ಯಕೀಯ ಪದ್ಧತಿಗಳಲ್ಲಿ ಮತ್ತು ವೈದ್ಯರುಗಳಲ್ಲಿ ಚಿಕಿತ್ಸೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಗುರುತಿಸುತ್ತದೆ (ವಿವಿಧಾನಿ ಹಿ ಶಾಸ್ತ್ರಾಣಿ ಬಿಷಜಾಂ ಪ್ರಚಾರಂತಿ ಲೋಕೇ – ವೈದ್ಯಕೀಯದ ಬಗ್ಗೆ ವಿವಿಧ ಶಾಸ್ತ್ರಗಳು ಲೋಕದಲ್ಲಿ ಪ್ರಚಾರದಲ್ಲಿವೆ ವಿಮಾನ ಸ್ಥಾನ,8.3 )  ಪರಿಣತ ವೈದ್ಯರ ನಡುವೆ, ವೈದ್ಯ ವಿದ್ಯಾರ್ಥಿಗಳ ನಡುವೆ ಕೂಡಾ ತದ್ವಿದ್ಯಾ ಸಂಭಾಷ ಬಹಳ ಅಗತ್ಯವೆಂದು ಸಾರುತ್ತದೆ. ಅದರ ಪ್ರಾಮುಖ್ಯತೆಯನ್ನು ಹೀಗೆ ವಿಷದೀಕರಿಸಿದೆ :
ಭಿಷಕ್ ಬಿಷಜ ಸಹ ಸಂಭಾ಼ಷೇತ – ವೈದ್ಯ ವೈದ್ಯರ ನಡುವೆ ಸಂಭಾಷಣೆ ನಡೆಯಬೇಕು.
*ಈ ತದ್ವಿದ್ಯಾ ಸಂಭಾಷದಿಂದ ವಿಷಯದ ಬಗೆಗಿನ ಅರಿವು ಹೆಚ್ಚುತ್ತದೆ, ಮತ್ತಷ್ಟು ಹೆಚ್ಚು ತಿಳಿಯಬೇಕೆಂಬ ಹಸಿವು ಹೆಚ್ಚುತ್ತದೆ,
* ವಿಷಯಗಳನ್ನು ಅಭಿವ್ಯಕ್ತಿಸುವ ನಮ್ಮ ಶಕ್ತಿ ಹೆಚ್ಚುತ್ತದೆ,
* ವೈದ್ಯಕೀಯ ಗ್ರಂಥಗಳಲ್ಲಿನ ವಿವರಣೆಗಳ ಬಗ್ಗೆ ನಮಗುಂಟಾದ ಸಂದೇಹ, ಸಂಶಯಗಳು ನಿವಾರಣೆಯಾಗುತ್ತವೆ,
* ಪದೇ ಪದೇ ವಿಷಯಗಳನ್ನು ಕೇಳುವುದರಿಂದ, ಸಂದೇಹಗಳ ನಿವಾರಣೆಯಿಂದ ವಿಷಯದ ಬಗೆಗಿನ ನಮ್ಮ ಸ್ಪಷ್ಟತೆ ಹೆಚ್ಚುತ್ತದೆ. ನಾವು ಹೆಚ್ಚು ಸ್ವ ವಿಶ್ವಾಸದಿಂದ ಕಾರ್ಯ ಪ್ರವೃತ್ತರಾಗುತ್ತೇವೆ,
* ನಮ್ಮ ಕೀರ್ತಿ ದೇದಿಪ್ಯಮಾನವಾಗಿ ಬೆಳಗುತ್ತದೆ,
* ಈ ಸಂಭಾಷದಲ್ಲಿ, ಇಲ್ಲಿಯವರೆಗೆ ತಿಳಿದಿರದ ಗ್ರಂಥಗಳಲ್ಲಿ ಕಾಣದ, ಅನೇಕ ಹೊಸ ಸಂಗತಿಗಳೂ ಹೊಸದಾಗಿ ತಿಳಿಯುತ್ತವೆ,
* ಗುರುಗಳು ತಮಗೆ ಬಹಳ ಪ್ರಿಯನಾದ ಶಿಷ್ಯನಿಗೆ ಮಾತ್ರ ಗುಟ್ಟಾಗಿ ಕಲಿಸಿದ ವಿಷಯಗಳನ್ನೂ ಅವನು ತನ್ನ ಹೆಚ್ಚಳಿಕೆಯನ್ನು ಪ್ರದರ್ಶಿಸಲು ಸಂಭಾಷದ ಭರದಲ್ಲಿ  ಹೇಳಿಬಿಡುತ್ತಾನೆ,(ಅದರಿಂದ ಕೂಡಾ ಹೊಸ ವಿಷಯಗಳು ತಿಳಿಯುತ್ತವೆ.)

ಇಲ್ಲಿಗೇ ನಿಲ್ಲದೆ ಸಂವಾದದ ಹಲವು ಬಗೆಗಳು, ಅದರಲ್ಲಿ ವಾದ ಮಂಡಿಸುವ ವೈಜ್ಞಾನಿಕ ವಿಧಾನಗಳು ಇತ್ಯಾದಿಗಳ ಬಗೆಗೇ ಅರ್ಧ ಶತಕದಷ್ಟು ಶ್ಲೋಕಗಳಿವೆ. ಅಷ್ಟೇ ಅಲ್ಲ ಚರಕ ಸಂಹಿತೆಯಲ್ಲಿಯೇ ಪ್ರಮುಖ ವೈದ್ಯ ನಿಪುಣರ, ವಿದ್ವಾಂಸರ ಸಂವಾದ, ವಾದ ವಿವಾದಗಳ ವಿವರಣೆ ಇದೆ ಅತ್ರೇಯ, ಭರದ್ವಾಜ ಎಂಬ ಹಲವರು ಇದರಲ್ಲಿ ಭಾಗವಹಿಸಿದ ಉದಾಹರಣೆ ನೀಡಲಾಗಿದೆ.

ಈ ಎಲ್ಲ ವಿದ್ವಾಂಸರ ಸಂವಾದ, ವಿದ್ಯಾರ್ಥಿಗಳ ಚರ್ಚೆಗಳಲ್ಲಿ ಚರ್ಚಿಸುವ ವಿಷಯಗಳ ಬಗ್ಗೆ ಮುಖ್ಯವಾದ ಎಚ್ಚರಿಕೆಯನ್ನು ಕೊಡುತ್ತದೆ : ವಾದಸ್ತು ಖಲು ಭಿಷಜಾಮ್ ಪ್ರವರ್ತಮಾನೋ ಪ್ರವರ್ತಾಯುರ್ವೇದ ಏವ ನನ್ಯತ್ರ ( ವಿಮಾನ ಸ್ಥಾನ 8-67)

ವೈದ್ಯರು ತೊಡಗುವ ಈ ವಾದಗಳಲ್ಲಿ ಆಯುರ್ವೇದಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಚರ್ಚಿಸಬೇಕು, ನನ್ಯತ್ರ- ಬೇರೆನನ್ನೂ ಅಲ್ಲ.
ಚರಕ ಸಂಹಿತೆ ವೈದ್ಯಕೀಯದಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ಗುರುತಿಸುತ್ತದೆ. ಇದು ಚಿಕಿತ್ಸೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದಾದ ಸಾಧ್ಯತೆಗಳ ಬಗೆಗೂ ಗಮನ‌ ಹರಿಸಿದೆ. ವಿಭಿನ್ನ ಚಿಕಿತ್ಸಾ ವಿಧಾನಗಳನ್ನು ಮೀರಿದ ಕೆಲವು ಸಾಮಾನ್ಯೀಕೃತವಾದ ಒಟ್ಟು ವೈದ್ಯಕೀಯಕ್ಕೇ ಅಂಗೀಕೃತವಾದ ಅಂಶಗಳಿರಬೇಕು. ಇಂತಹ ಅಂಶಗಳನ್ನು ಚರಕ ಸಂಹಿತೆ ಸರ್ವತಂತ್ರ ಸಿದ್ಧಾಂತ ಎಂದು ಗುರುತಿಸಿದೆ.

ನಿತ್ಯದ ಚಿಕಿತ್ಸೆಯ ವಿಧಾನಗಳ ಹಿನ್ನೆಲೆಯಲ್ಲಿರುವ ತಾತ್ವಿಕ ಆಧಾರವಾದ ಸಿದ್ಧಾಂತ ಎಂದರೇನೆಂದು ಹೇಳುತ್ತಾ –
ಸಿದ್ಧಾಂತ ನಾಮೋ ಸಯಃ ಪರೀಕ್ಷಾಕೈರ್ ಬಹುವಿಧಮ್ ಪರೀಕ್ಷ್ಯ ಹೇತುಬಿಷ್ಚ ಸಾಧಯಿತಾ ಸ್ಥಾಪ್ಯತೇ ನಿರ್ಣಯಃ
ಸಿದ್ಧಾಂತ ಎಂದರೆ ಬಹುವಿಧವಾದ ಪರೀಕ್ಷೆಗೊಳಪಡಿಸಿ , ಕಾರಣ ಸಹಿತವಾಗಿ  ಸ್ಥಾಪಿಸಿದ ನಿರ್ಣಯ.

ಇದರಲ್ಲಿ ಸ್ಪಷ್ಟವಾಗಿ ಬಹು ವಿಧ ಪರೀಕ್ಷೆ ಮತ್ತು ಕಾರಣ ನೀಡಿ ಸ್ಥಾಪಿಸಬೇಕು ಎಂದು ಹೇಳಿರುವುದು ಶಂಕರರೂ ಸೇರಿದಂತೆ ಮಹತ್ವದ ತತ್ವಶಾಸ್ತ್ರಜ್ಞರು ಪದೇ ಪದೇ ವೇದಗಳು, ಮನುಸ್ಮೃತಿ ಮೊದಲಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಎಂದು ಅವುಗಳ ಕಡೆ ಬೆರಳು ತೋರಿಸುತ್ತಾರೆ. ಆದರೆ ಚರಕ ಸಂಹಿತೆ  ವೈದ್ಯಕೀಯ ಗ್ರಂಥಗಳ ಕಡೆಗೂ , ಆಯುರ್ವೇದದ ಮೂಲ ಎಂದು ಘೋಷಿಸಲ್ಪಡುವ ಅಥರ್ವಣ ವೇದದ ಕಡೆಗಾಗಲೀ , ಧನ್ವಂತರಿ ಮೊದಲಾದ ಪೌರಾಣಿಕ ವೈದ್ಯರ ಕಡೆಗಾಗಲೀ ಬೆರಳು ತೋರಿಸುವುದಿಲ್ಲ. ಕೇವಲ ಪರೀಕ್ಷೆ ಮತ್ತು ಕಾರಣಗಳ ಕಡೆಗೆ ಮಾತ್ರ.

ಸರ್ವತಂತ್ರ ಸಿದ್ದಾಂತದ ಬಗ್ಗೆ ಹೀಗೆ ಹೇಳಿದೆ :
ವಿವಿಧ ವೈದ್ಯಕೀಯ ಪದ್ಧತಿಗಳ ಗ್ರಂಥಗಳು ಒಪ್ಪಿಕೊಂಡ ತತ್ವಗಳಿಗೆ ಸರ್ವತಂತ್ರ ಸಿದ್ಧಾಂತ ಎನ್ನುತ್ತಾರೆ. ಅವುಗಳೆಂದರೆ ರೋಗಗಳಿಗೆ ಕಾರಣಗಳಿವೆ, ಆ ಕಾರಣಗಳಿಂದ ರೋಗಗಳು ಉಂಟಾಗುತ್ತವೆ, ರೋಗಗಳಿಗೆ ಚಿಕಿತ್ಸೆಗಳಿವೆ. ಇದೂ ಕೂಡ ಕಾರಣ ಮತ್ತು ಅದರ ಆಧಾರದ ಮೇಲೆ ಚಿಕಿತ್ಸೆಯೇ ಹೊರತು ಯಾವುದೇ ನಂಬಿಕೆ, ಧರ್ಮ ಗ್ರಂಥಗಳ ಆಧಾರವನ್ನು ಅವಲಂಬಿಸುವುದಿಲ್ಲ.

ಹಿಂದಿನ ಲೇಖನಗಳಲ್ಲಿ ಹೇಳಿದಂತೆ ಬುದ್ಧನ ಕಾಲಕ್ಕಿಂತ ಮೊದಲೇ ರೂಪುಗೊಂಡಿದ್ದ ವೈಜ್ಞಾನಿಕ ವೈದ್ಯಕೀಯ ವೈದಿಕರ ತುಚ್ಛಿಕಾರವನ್ನು ಅನುಭವಿಸಿತು. ನಂತರ  ಬುದ್ಧನ ಕರುಣೆ, ಬೌದ್ಧಾರಾಮಗಳ ವಿರಾಗಿಗಳೇ ವೈದ್ಯಕೀಯವನ್ನು ಕಲಿತದ್ದು, ಅಶೋಕನ ಕಾಲದಲ್ಲಿ ಸಾರ್ವಜನಿಕ ಆಸ್ಪತ್ರೆಗಳ ಸ್ಥಾಪನೆಯಿಂದ ಮತ್ತಷ್ಟು ಪುಷ್ಟಿ ಪಡೆಯಿತು. ಆದರೆ ಭಾರತದಲ್ಲಿ ಬೌದ್ಧ ಧರ್ಮದ ಅವನತಿಯ ನಂತರ ಮತ್ತೆ ವೈದಿಕರ ಕಟ್ಟಪ್ಪಣೆಗಳ , ದಬ್ಬಾಳಿಕೆಯನ್ನು ಅನುಭವಿಸಿತು. ವೇದಗಳು, ಧರ್ಮಶಾಸ್ತ್ರ ಗ್ರಂಥಗಳಿಗೆ ಮಣೆ ಹಾಕದೆ ಕಾರಣಗಳು, ಪರೀಕ್ಷೆಗಳು ಇವುಗಳನ್ನು ಮಾತ್ರ ಆಧರಿಸಿ ಬೆಳೆಯುತ್ತಿದ್ದ ವಿಜ್ಞಾನಗಳು, ಗಣಿತ ಸಂಕಟವನ್ನು ಎದುರಿಸಿದವು.  ವೈದಿಕ ಮೌಢ್ಯಗಳಿಗೆ ಸೊಪ್ಪು ಹಾಕದೆ ಆರ್ಯಭಟ ಕೈಗೊಂಡ  ಅತ್ಯಂತ ಉನ್ನತ ಖಗೋಳ ವೈಜ್ಞಾನಿಕ ಶೋಧಗಳು ಅವಗಣನೆಗೆ ಒಳಗಾದವು. ಜ್ಯೋತಿಷ್ಯ ಮತ್ತು ಕಂದಾಚಾರವನ್ನು ಗಣಿತ,ಖಗೋಳ ವಿಜ್ಞಾನದೊಡನೆ ಕಲಬೆರಕೆ ಮಾಡಿದ ವರಾಹಮಿರನಿಗೆ ಸಿಕ್ಕ ಪ್ರಾಶಸ್ತ್ಯವನ್ನು ಹಿಂದಿನ ಲೇಖನದಲ್ಲಿ ವಿವರಿಸಲಾಗಿದೆ.

ಹಲವು ಶತಮಾನಗಳ ಕಾಲ ಭಾರತದಲ್ಲಿ  ವಿಜ್ಞಾನಗಳ ಬೆಳವಣಿಗೆಯ ಮುಂಚೂಣಿಯಲ್ಲಿದ್ದ ವೈದ್ಯಕೀಯ ವಿಜ್ಞಾನ ಗುಪ್ತರ ಕಾಲದ ನಂತರದ ವೈದಿಕ ಕಂದಾಚಾರಿ ಧಾಳಿಗೆ ತುತ್ತಾಯಿತು. ವೈದ್ಯರನ್ನು ಕೀಳ್ಗಳೆಯುವ ಮನುಸ್ಮೃತಿ ಮೊದಲಾದ ಧರ್ಮಶಾಸ್ತ್ರಗಳು, ಮೇಲ್ವರ್ಣಗಳು ಮುಖ್ಯವಾಗಿ ಬ್ರಾಹ್ಮಣರಿಗೆ ವೈದ್ಯಕೀಯ ವರ್ಜ್ಯ ಎಂಬ ಕಟ್ಟಲೆಗಳು ಹಿಂದೆಂದಿಗಿಂತಲೂ ಹೆಚ್ಚು ವ್ಯಾಪಕವಾಗಿ ಪಸರಿಸಿತು.

ಚರಕ ಸಂಹಿತೆ ಈ‌ ಕಂದಾಚಾರಿ ಧಾಳಿಗೆ  ಬಲಿಯಾಯಿತು. ಹಿಂದಿನ ವೈಜ್ಞಾನಿಕ ಚಿಂತನೆಗಳನ್ನೊಳಗೊಂಡ ಚರಕ ಮತ್ತು ಶುಶ್ರುತ ಸಂಹಿತೆಗಳು ಹಲವು ಭಾಗಗಳು ಪೂರ್ತಿಯಾಗಿ ನಷ್ಟವಾದವು. ಬಹಳಷ್ಟು ಅಲಭ್ಯವಾದವು.  ಅವುಗಳು ಎಷ್ಟು ಬಾರಿ ಪುನರ್ ರಚನೆಗೊಂಡಿರಬಹುದೋ ಗೊತ್ತಿಲ್ಲ. ಇಂತಹ ಪ್ರತಿ ಪುನರ್ ರಚನೆಯಲ್ಲಿಯೂ ಅದಕ್ಕೆ ಏನೇನು ಸೇರಿಸಲ್ಪಟ್ಟಿತು, ಯಾವ ಉದ್ದಿಶ್ಯದಿಂದ ಎಂಬುದು ತಿಳಿದಿಲ್ಲ.

ಇದೇ ಕಾಲಘಟ್ಟದಲ್ಲಿ ರಾಮಾಯಣ, ಮಹಾಭಾರತ ಕಾವ್ಯಗಳಿಗೆ ಹೇಗೆಲ್ಲ , ಏನೆಲ್ಲ ಸೇರಿಸಲ್ಪಟ್ಟವು ಎಂಬ ಬಗ್ಗೆ ತಿಳಿದಿದೆ. ವಿಷ್ಣುವಿನ ದಶಾವತಾರದ ಹೊಸ ಪುರಾಣ ಕತೆಗಳು, ಹೊಸ ಹೊಸ ಪುರಾಣಗಳು ಸೃಷ್ಟಿಯಾಗುತ್ತಿದ್ದ ಕಾಲ. ದೇಶಾದ್ಯಂತ ಬ್ರಾಹ್ಮಣ್ಯ ಜಾತಿ ವ್ಯವಸ್ಥೆಯನ್ನು ಹಬ್ಬಿಸುತ್ತಿದ್ದ ಕಾಲ ಅದು.

ಈಗ ನಮಗೆ ಲಭ್ಯವಿರುವ ಚರಕ ಸಂಹಿತೆಯ ರೂಪ ದೃಢಬಾಲರೆಂಬ ಕಾಶ್ಮೀರಿ ಶೈವನೊಬ್ಬನಿಂದ ರೂಪಿಸಲ್ಪಟ್ಟದ್ದು. ಅವರು ತಾವೇ ಬರೆದುಕೊಂಡಂತೆ ಚರಕ ಸಂಹಿತೆಯ ಮೂರನೇ ಒಂದು ಭಾಗ ಲುಪ್ತವಾಗಿ ಹೋಗಿತ್ತು. ದೃಢಬಾಲರು ಅದನ್ನು ಪುನರ್ ರಚಿಸಿದರು. ಹಾಗೇ ಮೂಲ ಭಾಗಗಳೇನು ಉಳಿದಿದ್ದವು ಅವುಗಳನ್ನೂ ಪುನ ಸಂಸ್ಕರಣಕ್ಕೆ ಒಳಪಡಿಸಿದರು.

ಹೀಗೆ ಇಂದು ಲಭ್ಯವಾಗಿರುವ ಚರಕ ಸಂಹಿತೆಯ ಮೂಲದ ಕೆಲವು ಭಾಗಗಳನ್ನು ಒಳಗೊಂಡ ಉಳಿದೆಲ್ಲವೂ ಪುನರ್ ರಚನೆ ಮಾಡಲ್ಪಟ್ಟ ಗ್ರಂಥ. ಈ ಗ್ರಂಥದಲ್ಲಿ ಮೂಲ ಕೃತಿಯ ಒಳಗೆ ಯಾವ ತತ್ವಗಳನ್ನು ವಿವರಿಸಲಾಗಿದೆಯೋ ಅದಕ್ಕೆ ನೂರಕ್ಕೆ ನೂರು ವಿರುದ್ಧವಾದ ಅಂಶಗಳು ಸಂಹಿತೆಯ ಒಳಗೆ ಸೇರಿಕೊಂಡಿವೆ. ಅವುಗಳಲ್ಲಿನ ಹಲವು ವಿರೋಧಾಭಾಸಗಳು ಹಾಸ್ಯಾಸ್ಪದ ಎನ್ನುವಂತಿವೆ.

ಇಂತಹ ಸೇರ್ಪಡೆಗಳಲ್ಲಿ ಪುನರ್ ರಚನೆ ಮಾಡಿದ ದೃಢಬಾಲರ ಧಾರ್ಮಿಕತೆ ಪಾತ್ರ ವಹಿಸಿದೆ. ಉದಾಹರಣೆಗೆ ಜ್ವರದ ವಿವಿಧ ರೂಪಗಳು, ಅದನ್ನು ಗುರುತಿಸುವ ವಿಧಾನಗಳು, ಜ್ವರದ ವಿವಿಧ ಹಂತಗಳು , ಅವುಗಳ ಚಿಕಿತ್ಸೆಯ ವಿಧಾನಗಳು ಮೊದಲಾದವನ್ನು ಅಂದಿನ ಜ್ಞಾನದ ಮಟ್ಟದಲ್ಲಿ ಸಾಧ್ಯವಾಗಬಹುದಾದ ವೈಜ್ಞಾನಿಕ ರೀತಿಯಲ್ಲಿ ವಿವರಿಸಿದೆ. ಆದರೆ ಅದರಲ್ಲಿ ಜ್ವರಕ್ಕೆ ನೀಡಿದ ಒಂದು ಕಾರಣ ಹೀಗಿದೆ :
ದಕ್ಷ ಯಜ್ಞದಲ್ಲಿ ತನಗೆ ಬೇರೆ ದೇವತೆಗಳಂತೆ ಹವಿಸ್ಸು ಸಿಗಲಿಲ್ಲವೆಂದು ಕೋಪಗೊಂಡ ಶಿವ ತನ್ನ ಕೋಪದ ರೂಒವಾಗಿ ವೀರಭದ್ರನನ್ನು ಸೃಷ್ಟಿಸಿದ. ವೀರಭದ್ರ ದಕ್ಷನ ಯಾಗವನ್ನು ಧ್ವಂಸಮಾಡುವುದಲ್ಲದೆ ದಕ್ಷನನ್ನು ಕೊಂದು ಪ್ರತೀಕಾರ ಮಾಡಿದ.

ನಂತರ ವೀರಭದ್ರ ಶಿವನ ಬಳಿ ಬಂದು ಮುಂದೆ ನನಗೇನು ಕರ್ತವ್ಯವೆಂದು ಕೇಳಿದನಂತೆ. ಆಗ ಶಿವ ಏನು ಹೇಳಿರಬಹುದು ? ಶಿವನ ಕೋಪದ ಲಕ್ಷಣವಾಗಿ ಲೋಕದ ಜನರಿಗೆ ಜ್ವರ ಉಂಟು ಮಾಡುವುದೇ ನಿನ್ನ ಕೆಲಸ ಎಂದು ಹೇಳಿದನಂತೆ ! ಇದೇ ಈಗ ಜನರಿಗೆ ಬರುವ ವಿವಿಧ ರೀತಿಯ ಜ್ವರಗಳಿಗೆ ಕಾರಣವಂತೆ‌!! ಹಾಗಾದರೆ ಚಿಕಿತ್ಸೆ ಏನು ? ಕಾರಣಕ್ಕೆ ಅನುಗುಣವಾಗಿ ಚಿಕಿತ್ಸೆ ಅಲ್ಲವೇ ? ಆದ್ದರಿಂದ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಸಾವಿರಾರು ಜಪಿಸುವುದು. ಶಿವ ಮಾತ್ರವಲ್ಲದೆ ಪಾರ್ವತಿ, ಅವರುಗಳ ಪರಿವಾರ, ಗಣಗಳಿಗೆ ಪೂಜೆ ಸಲ್ಲಿಸುವುದು.‌ ಹೇಗಿದೆ ಚಿಕಿತ್ಸೆ?ಮೇಲೆ ನೀವು ಓದಿದ ವೈಜ್ಞಾನಿಕ ವೈದ್ಯಕೀಯದ ತತ್ವಗಳೆಲ್ಲಿ ? ಈ ಮಹಾ ತತ್ವ ಮತ್ತು ಚಿಕಿತ್ಸೆ ಎಲ್ಲಿ ?
ಇಷ್ಟಕ್ಕೆ ಮುಗಿಯಿತೆ ? ಇಲ್ಲ. ಈ ಸಂಹಿತೆಗೆ ಮುಂದೆ ಭಾಷ್ಯ ಬರೆದವನೊಬ್ಬ ವಿಷ್ಣು ಭಕ್ತ. ಅವನು ಜ್ವರಕ್ಕೆ ವಿಷ್ಣುವೇ ಕಾರಣವೆಂಬಂತೆ  ಆದ್ದರಿಂದ ವಿಷ್ಣು ಸಹಸ್ರ ನಾಮ ಪಠಿಸಬೇಕು ಎಂಬ ಚಿಕಿತ್ಸೆ ವಿಧಿಸಿದ. ಮತ್ತೆ ಇನ್ಯಾರದರೂ ಬರೆದ ಭಾಷ್ಯಗಳಲ್ಲಿ ಮತ್ತೆ ಇನ್ಯಾವ ದೇವರ ಹೆಸರು ಹೇಳಿದ್ದಾರೋ ಗೊತ್ತಿಲ್ಲ.

ಇಡೀ ಚರಕ ಸಂಹಿತೆಯ ಮೂಲದ ಭಾಗಗಳಲ್ಲಿ ಕ್ಷಯ, ವಾತ ರೋಗ ಎದೆ ಮತ್ತು ಭುಜದ  ಮೊದಲಾದ ವಿವಿಧ ರೋಗಗಳಲ್ಲಿ ನಷ್ಟವಾಗುವ ಮಾಂಸಖಂಡಗಳನ್ನು ಪಡೆದುಕೊಳ್ಳಲು ಗೋ ಮಾಂಸ ಅತ್ಯಂತ ಉಪಯುಕ್ತ ಎಂದು ಪಥ್ಯ ವೈಜ್ಞಾನಿಕತೆ 90 ಪ್ರಾಣಿಗಳನ್ನು ಪಟ್ಟಿ ಮಾಡಿರುವ ಸಂಹಿತೆ ಅದನ್ನು ಐದು ವರ್ಗಗಳಾಗಿ ವಿಂಗಡಿಸಿದೆ. ಗೋವುಗಳು, ಕತ್ತೆ, ಹೇಸರಗತ್ತೆ, ಒಂಟೆ, ಕುದುರೆ, ಕೋತಿ, ನಾಯಿಗಳೂ ಸೇರಿರುವ ಪ್ರಸಹ ಎಂಬ ಗುಂಪಿಗೆ ಸೇರುತ್ತವೆ. ಹೀಗೆ ಗೋವು ಬಹಳ ಪವಿತ್ರ, ಪೂಜ್ಯ ಎಂಬ ವಿಶೇಷವೇನೂ ಇಲ್ಲದೆ ಅದು ಕತ್ತೆ, ನಾಯಿ, ಕೋತಿ, ಕುದುರೆಗಳಂತೆ ಮತ್ತೊಂದು ಪ್ರಾಣಿ ಎಂಬ ವೈಜ್ಞಾನಿಕ ಪರಿಕಲ್ಪನೆ ಇದೆ. ಈ ಗುಂಪಿನ ಪ್ರಾಣಿಗಳ ಮಾಂಸ ಪ್ರತಿ ದಿನ ವ್ಯಾಯಾಮ‌ ಮಾಡುವವರಿಗೆ ಮತ್ತು ಜೀರ್ಣಾಗ್ನಿ ಪ್ರಜ್ವಲಿಸುತ್ತಿರುವವರಿಗೆ ಪರಿಪೂರ್ಣ ಆಹಾರಗಳು ಎಂಬ ವೈದ್ಯಕೀಯ ಸಲಹೆ ನೀಡಲಾಗಿದೆ.

ಚರಕ ಸಂಹಿತೆಯನ್ನು ಮೂಲದಲ್ಲಿ ಉಪದೇಶಿಸಿದವರೆಂದು ದಾಖಲಿಸಲಾಗಿರುವ ಮಹರ್ಷಿ ಅತ್ರೇಯರು ಗೋ ಮಾಂಸದ ವಿಶಿಷ್ಟ ಗುಣಗಳನ್ನು ವಿವರಿಸುತ್ತಾ ವಾಯು ನೆಗಡಿ, ಒಣಕೆಮ್ಮು, ಆಯಾಸ, ಕಠಿಣ ದೈಹಿಕ ಶ್ರಮ ಪಡುವವರು, ಬಿಟ್ಟು ಬಿಟ್ಟು ಬರುವ ಜ್ವರ ಮುಂತಾದ ರೋಗಗಳಿಂದ ಮಾಂಸ ನಷ್ಟವಾಗಿ ಕೃಶವಾಗಿರುವವರಿಗೆ ಗೋವಿನ ಮಾಂಸ ಅತ್ಯಂತ ಉಪಯುಕ್ತ ಎಂದು ವಿಧಿಸಿದ್ದಾರೆ.

ಗೋ ಬ್ರಾಹ್ಮಣ ಪಾವಿತ್ರ್ಯವನ್ನು ಎಲ್ಲಕ್ಕಿಂತ ಮೇಲಿಟ್ಟು ಸಾರುವ ವೈದಿಕ ಧರ್ಮಶಾಸ್ತ್ರ ಗ್ರಂಥಗಳು ಗೋ ಹತ್ಯೆಗೆ ಮರಣ, ಚಿತ್ರ ಹಿಂಸೆ ಮೊದಲಾದ ಅತಿ ಕ್ರೂರ ಶಿಕ್ಷೆ ವಿಧಿಸುವ ಕಟ್ಟಲೆಗಳು, ರಾಜ ಶಾಸನಗಳನ್ನು ಹೇರಿರುವ ಸಂದರ್ಭದಲ್ಲಿ ಚರಕ ಸಂಹಿತೆಯ ಈ ವೈಜ್ಞಾನಿಕ ದೃಷ್ಟಿಯನ್ನು ಸಹಿಸಬಹುದೇ ?

ಆದರೆ ಅದೇ ಚರಕ ಸಂಹಿತೆಯ ವಿವಿಧ ಭಾಗಗಳಲ್ಲಿ ಗೋ, ಬ್ರಾಹ್ಮಣ ಪೂಜೆ ಇತ್ಯಾದಿಗಳನ್ನು ಮತ್ತೆ ಮತ್ತೆ ಹೇಳುತ್ತಾರೆ. ಇದು ಅದೇ ಸಂಹಿತೆಯಲ್ಲಿ ನೀಡಲಾಗಿರುವ ವೈಜ್ಞಾನಿಕ ತಿಳಿವಿಗೆ ಪೂರ್ಣವಾಗಿ ಅಸಂಗತ.

ಆದರೆ ಬ್ರಾಹ್ಮಣ್ಯದ ಕ್ರೋಧದಿಂದ ತಪ್ಪಿಸಿಕೊಂಡು ಚರಕ ಸಂಹಿತೆಯ ಮೂಲ ವೈಜ್ಞಾನಿಕ ತತ್ವ, ಚಿಕಿತ್ಸಾ ವಿಧಾನಗಳನ್ನು ಉಳಿಸಿಕೊಳ್ಳಲು ಇಂತಹ ಸ್ವ ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ದೃಢಬಾಲರ ನಂತರದ ಕಾಲದಲ್ಲಿ ಚರಕ ಸಂಹಿತೆಯ ಹೆಸರಿನಲ್ಲಿಯೇ ಅದನ್ನು ಪೂರ್ಣವಾಗಿ ವಿರೂಪಗೊಳಿಸಲಾಯಿತು.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

8 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading