ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಋಗ್ವೇದದಲ್ಲಿ ಮೋಕ್ಷದ ಪ್ರಸ್ತಾಪ ಎಲ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

12

ಋಗ್ವೇದದಲ್ಲಿ ಮೋಕ್ಷವಿದೆಯೇ ?
ಋಗ್ವೇದದಲ್ಲಿ ಮೋಕ್ಷದ ಪ್ರಸ್ತಾಪ ಎಲ್ಲಿಯಾದರೂ ಇದೆಯೇ ?
ಮೋಕ್ಷ ನೀಡದ ಧರ್ಮವೊಂದಿದೆಯೇ? ಧರ್ಮವೇ ಇಲ್ಲದೆ ದೇವರುಗಳುಂಟೇ ?

ತಾನೆನ್ಮ ( ಒಳ್ಳೆಯದಾಗಲಿ ),
ತರ್ಮಮ ( ದಯೆಯಿಂದ ಕೂಡಿರಲಿ ) ,
ಇರ್ ಕರ್ಕ್ ತಾನೆನ್ಮ ( ಎಮ್ಮೆಗಳು,ಕಡಸುಗಳು ಚೆನ್ನಾಗಿರಲಿ),
ನುವ್ ಆರ್ಕ್ ಮ ( ರೋಗವಿಲ್ಲದಿರಲಿ )
ನುದ್ರೇ ಆರ್ಕ್ ಮ ( ವಿಷಜಂತುಗಳು ಕಚ್ಚದಿರಲಿ),
ಕಾವೆಲ್ ಆರ್ಕ್ ಮ ( ಕಾಡು ಪ್ರಾಣಿಗಳಿಂದ ಹಾನಿಯಾಗದಿರಲಿ ) ,
ಪೆರ್ ಕರ್ತ್ ಪಾ ಮ ( ಕಡಿದಾದ ಬೆಟ್ಟದಿಂದ ಬೀಳದಿರಲಿ ),
ಪುಸ್ಥತ್ ಕರ್ತ್ ಪಾ ಮ ( ನೆರೆ ಬರದಿರಲಿ ),
ಮ ಉನ್ ಮ ( ಮಳೆ ಬೀಳಲಿ),
ಪುಲ್ ಪುವ್ ಮ ( ಹುಲ್ಲು ಸಮೃದ್ಧವಾಗಿರಲಿ),
ನೀರ್ ಉರ್ ಮ ( ನೀರಿನ ಸೆಲೆ ಇರಲಿ )
ಇತ್ಯಾದಿ.
ಇವು ನೀಲಗಿರಿಯ ತೋಡರು ( ತೊದವರು ) ಎಂಬ ಎಮ್ಮೆ ಸಾಕಾಣಿಕೆ ಮಾಡುವ ಬುಡಕಟ್ಟಿನ ಇಡಿತ್‌ಗಳು.‌
ಇದನ್ನು ಅವರು ಬೆಟ್ಟಗಳ ತುದಿಯಲ್ಲಿ ಇರುವವರೆಂದುಕೊಂಡಿರುವ , ತಮ್ಮ ಪೂರ್ವಜರೂ ಆಗಿರಬಹುದಾದ ಯಾರಿಗೋ ಕೇಳಿಕೊಳ್ಳುವ ಮಾತುಗಳು.

ಇವುಗಳನ್ನು ನೋಡಿದರೆ ಜಗತ್ತಿನ ಯಾವುದೇ ಭಾಗದ ಆದಿ ಮಾನವ ಸಮುದಾಯ ತಾವು ಮಾತು ಎಂಬುದನ್ನು ಕಂಡುಕೊಂಡ ಆದಿಮ ಶಬ್ದಗಳಲ್ಲಿ ಹೇಳಿಕೊಳ್ಳುವ ಅಥವಾ ಕೇಳಿಕೊಳ್ಳುವ ಬದುಕಿನ ಆಶಯಗಳು ಎಂಬಂತೆ ಕಾಣುತ್ತವೆ.

ಇವು ಸಾಮಾನ್ಯ ಜನರು ತಮ್ಮ ಬದುಕಿನ‌ ಸಂಕಟಗಳ ಬಗ್ಗೆ ಮಾಡಿಕೊಳ್ಳುವ ನಿವೇದನೆಗಳು ಇಂತೆಯೇ ಇರುತ್ತವೆ. ಅವರು ಯಾವುದೇ ದೇವತೆಗಳನ್ನು ಉದ್ದೇಶಿಸಿರಲಿ ಅಥವಾ ಯಾವುದೇ ಧರ್ಮದವರಾಗಿರಲಿ.
ನಮ್ಮ ಜಾನಪದರು –
“ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ ಎಳ್ಳು ಜೀರಿಗೆ ಬೆಳೆಯೋಳಾ ! ಭೂಮಿತಾಯ ! ಎದ್ದೊಂದು ಗಳಿಗೆ ನೆನೆದೇನಾ ! ! “
ಹೊತ್ತಿನಂತೆ ಎದ್ದು ಯಾರ್ಯಾರ ನೆನೆದೇನು ! ಕಲ್ಲು ಕಾವೇರಿ ಕಪನೀಯ !!

ಮಳೆರಾಯ  ಹುಯ್ಯಾಲಿ ಕೆರೆರಾಯ ತುಂಬಾಲಿ ! ಹನ್ನೆರಡು ಕೋಡಿ ಹರಿಯಾಲಿ ! ನಮ್ಮೂರ ಸಣ್ಣಕ್ಕಿ ಬಯಲು ಬೆಳಿಯಾಲಿ !!
ಅಪ್ಪ ನೀನಿಲ್ಲಾದೆ ಸೊಪ್ಪಾದೋ ಈ ಭೂಮಿ! ಸಪ್ಪೆ ದಂಟಾದೋ ದನಕರ! ಮಳೆರಾಯ ! ಅಪ್ಪ ರಾತುರಿಗೆ ಕರುಣಾಗೋ  !!

ಇಂತಹ ನೂರಾರು ಬಯಕೆಗಳು ಬದುಕಿನೊಳಗಿಂದ ಹುಟ್ಟುತ್ತವೆ. ತೊದವರಿಗಿಂತ ಸುಧಾರಿಸಿದ ಭಾಷೆ ,ಶೈಲಿ ಎನ್ಬುವುದನ್ನು ಬಿಟ್ಟರೆ ಆಶಯಗಳಲ್ಲಿ ವ್ಯತ್ಯಾಸವಿಲ್ಲ.

ಋಗ್ವೇದದಲ್ಲಿ ಆಶಯಗಳು :
ಮೇಲೆ ಕಂಡಂತಹ ತೊದವ ಬುಡಕಟ್ಟು ಸಮುದಾಯದ ಒಂದೊಂದು  ಆಶಯವೂ ಋಗ್ವೇದದ  ಒಂದೊಂದು ಮಂತ್ರವಾಗಲು ಸಾಧ್ಯ ಎನ್ನುತ್ತಾರೆ ಕೆಲವು ತತ್ವಶಾಸ್ತ್ರಜ್ಞರು.

ಕೆಲವು ಉದಾಹರಣೆಗಳನ್ನು ನೋಡೋಣ :
ಅಗ್ನಿಯೇ, ನಮಗೆ ವಿಪುಲವಾಗಿ ಅನ್ನವನ್ನು ದೊರಕಿಸಿಕೊಡು,  ಸಂಪತ್ತನ್ನು ನೀಡು ( ಋ,3.1.22)
ಬ್ರಹ್ಮಣಸ್ಪತಿಯೇ, ನಿಯತವಾಗಿ ಅನ್ನ ರೂಪದ ಸಂಪತ್ತು ನಮ್ಮದಾಗಲಿ,ಅನ್ನ ರೂಪದ ಮಕ್ಕಳನ್ನು ಪಡೆದು ವೀರರಲ್ಲಿ ವೀರರಾದ ಮಕ್ಕಳನ್ನು ಕೊಡು.( ಋ. 2.24.15)
ಅಶ್ವಿನಿ ದೇವತೆಗಳೇ, ಗೋವುಗಳು,ಗಂಡುಮಕ್ಕಳು, ರಥ,ಕುದುರೆಗಳು ಹಾಗೂ ಅನ್ನ ರೂಪದ ಸಂಪತ್ತನ್ನು ನಮಗೆ ತನ್ನಿ.

ಅನ್ನ, ಗೋವುಗಳಿಗಾಗಿ ತಪಿಸುವ ಇಂತಹ ನೂರಾರು ಮಂತ್ರಗಳು ಋಗ್ವೇದದಲ್ಲಿವೆ.
ಇನ್ನು ಮಳೆಯ ಬಗ್ಗೆ ವೇದಗಳಲ್ಲಿ ಮಳೆಯ ದೇವನಾದ ಇಂದ್ರನನ್ನು ಹೀಗೆ ಕೇಳಿಕೊಳ್ಳಲಾಗಿದೆ :
‘ಮೇಘಗಳ ಕೇಂದ್ರದಲ್ಲಿ ಹುದುಗಿರುವ ಅಚ್ಚರಿ ಎನಿಸುವಷ್ಟು ಅಪಾರ ಪ್ರಮಾಣದ ನೀರನ್ನು ನಮ್ಮ ಸಮೃದ್ಧ ಜೀವನಕ್ಕಾಗಿ ಕಳಿಸು’ ( ಋ,21.3.10)
ಮೇಘಗಳನ್ನು ಬೇಧಿಸು,ನೀರನ್ನು ಬಂಧನದಿಂದ ಮುಕ್ತಗೊಳಿಸು.ನೆಲದಲ್ಲಿ ಪ್ರವಾಹವೇ ಹರಿಯುವಂತೆ ಮಾಡು. (ಯಜು.132.6 ) ಹೀಗೆ ಹತ್ತಾರು ಮಂತ್ರಗಳು ವೇದಗಳಲ್ಲಿ ದೊರಕುತ್ತವೆ.

ಇವುಗಳಲ್ಲಿ ಅಡಕವಾಗಿರುವ ಕಲ್ಪನೆ ಎಂದರೆ ವೃತ್ರನೆಂಬವನಿಂದ ನೀರು ಮೋಡಗಳಲ್ಲಿ ಸೆರೆಯಾಗಿರುತ್ತದೆ. ಅದರಿಂದಾಗಿ ಬರಗಾಲವುಂಡಾಗಿ ಜನರು, ದನಗಳು ಹಸಿವಿನಿಂದ ನರಳುತ್ತಾರೆ. ಸಾಯುತ್ತಾರೆ. ಆಗ ಇಂದ್ರನು ಸಿಡಿಲು ಎಂಬ ವಜ್ರಾಯುಧವನ್ನು ಝಳಪಿಸಿದಾಗ ಅದು ಮಿಂಚಾಗಿ ಬೆಳಗುತ್ತದೆ. ಅವನ ಯುದ್ಧದ ಗರ್ಜನೆಯೇ  ಗುಡುಗಾಗಿ ಮೊಳಗುತ್ತದೆ. ಇಂದ್ರನು ಈ ಧಾಳಿಯಲ್ಲಿ ಜಯಶೀಲನಾಗಿ ಮೋಡಗಳಲ್ಲಿ ಸೆರೆಯಾಗಿರುವ ನೀರನ್ನು ಬಿಡಿಸಿ ಧಾರೆ ಧಾರೆಯಾಗಿ ಭೂಮಿಗೆ ಹರಿಸುತ್ತಾನೆ.‌ ಮಳೆ ಬಂದು ಬೆಳೆ ಬೆಳೆದು ಗೋವ್ಗಳು ಹಾಲನ್ನು ಕರೆಯುತ್ತವೆ.

ಋಗ್ವೇದದಲ್ಲಿ ಕಾಣುವ ಈ ಕಲ್ಪನೆಗಳಂತಹ ನೂರಾರು ಕತೆಗಳು ಮಳೆಯ ಬಗ್ಗೆ ಜಾನಪದರಲ್ಲಿ ಕಾಣುತ್ತವೆ. ಅಂತಹ ಕಲ್ಪನೆಗಳಿಗೆ ಅನುಗುಣವಾಗಿ  ಮಳೆ ತರಿಸುವ ಹಲವಾರು ಆಚರಣೆಗಳನ್ನೂ ನೋಡುತ್ತೇವೆ. ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ಕಪ್ಪೆಯಯನ್ನು ಹೊತ್ತು ಮನೆ ಮನೆಗೆ ಮೆರವಣಿಗೆ, ಜೋಕುಮಾರ ಎಂಬ  ಶಿಶ್ನ ದೇವತೆಯ ಪೂಜೆ, ಕನ್ಯೆಯರ ಬೆತ್ತಲೆ ಮೆರವಣಿಗೆ, ಬಾಲಕರ ಬೆತ್ತಲೆ ಮೆರವಣಿಗೆ, ಬೇವಿನ ಸೊಪ್ಪು ಮಾತ್ರ ಉಟ್ಟು ಬಾಲಕರ ಅಥವಾ ಬಾಲಕಿಯರ ಮೆರವಣಿಗೆ, ನಗ್ನ ಮಹಿಳೆ ಮಧ್ಯರಾತ್ರಿ ಹೊಲವನ್ನು ಉಳುವುದು, ಕನ್ಯೆಯರೇ ಎತ್ತುಗಳಾಗಿ ನೇಗಿಲು ಎಳೆದು ಉಳುವುದು ಇತ್ಯಾದಿ ಇತ್ಯಾದಿ.

ವಿಶೇಷವೆಂದರೆ ಇಂತಹ ಆಚರಣೆಗಳು ಮತ್ತು ಅವುಗಳ ಹಿನ್ನೆಲೆಯಲ್ಲಿನ ನಂಬಿಕೆಗಳು ಕೇವಲ ಭಾರತಕ್ಕೆ ಸೀಮಿತವಲ್ಲ. ಇಂತಹ ಮತ್ತು ಇದಕ್ಕಿಂತ ವಿಚಿತ್ರವೆಂಬಂತೆ ಕಾಣುವ ನೂರಾರು ಆಚರಣೆಗಳು ಯುರೋಪು, ಅರಬ್ ದೇಶಗಳು, ಆಫ್ರಿಕಾ, ಅಮೇರಿಕಾ ಖಂಡದ,ಆಸ್ಟ್ರೇಲಿಯಾಗಳ ಬುಡಕಟ್ಟುಗಳಲ್ಲಿ ಇನ್ನೂ ರೂಢಿಯಲ್ಲಿವೆ.
ಇವುಗಳ ಹಿಂದೆ ಆಯಾ ಸಮುದಾಯಗಳದೇ ಆದ ಊಹಾತ್ಮಕ ನಂಬಿಕೆಗಳಿವೆ.

ಇವುಗಳಲ್ಲಿ ಮಳೆಯನ್ನೇ ಅನುಕರಿಸುವ ಆಚರಣೆಗಳು ಹಲವು. ಒಂದು ದೇಶದಲ್ಲಿ ಮಳೆ ತರಿಸುವ ಆಚರಣೆ ಹೀಗಿದೆ. ಪವಿತ್ರ ಕಾಡಿನ ಒಂದು ಎತ್ತರದ ಮರ ಏರಿ ಡಬ್ಬಾದ ಮೇಲೆ ಬಡಿಯುವುದು ಶಬ್ದ ಮಾಡಿ ಗುಡುಗಿನ‌ ಅನುಕರಣೆ ಮಾಡುವುದು, ಮತ್ತೊಬ್ಬ ಅದೇ ಮರದ ಸ್ವಲ್ಪ ಕೆಳಗೆ ಎರಡು ಪಂಜುಗಳ ಉರಿಯನ್ನು ಪರಸ್ಪರ ಸೋಕಿಸಿ ಕಿಡಿಗಳು ಕಾಣುವಂತೆ ಮಾಡುವುದು, ಮತ್ತೊಬ್ಬ ಕೆಳಗೆ ನಿಂತು ಸೊಪ್ಪುಗಳನ್ನು ನೀರಿನಲ್ಲಿ ಅದ್ದಿ ನೀರನ್ನು ನೆಲದ ಮೇಲೆ ಚಿಮುಕಿಸುವುದು ಅಥವಾ ಜರಡಿಯ ಮೂಲಕ ನೀರು ಹನಿಸುವುದು. ಇದು ಪಕ್ಕಾ ಮಳೆ ಬೀಳುವುದರ ಅನುಕರಣೆ. ಹೀಗೆ ಮಾಡಿದರೆ ಮಳೆ ಬರುವುದೆಂಬ ನಂಬಿಕೆ. ಕನ್ಯೆಯರನ್ನು ಅಥವಾ ಹಿರಿಯ ಮಹಿಳೆಯನ್ನು ಅಥವಾ ಕ್ರಿಸ್ತ ಪಾದ್ರಿಗಳ ಮೇಲೆ ಜನರೆಲ್ಲ ಸೇರಿ ನೀರು ಹೊಯ್ದು ಅವರನ್ನು ಪೂರ್ಣವಾಗಿ ತೋಯಿಸಿಬಿಡುವುದು, ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಕಪ್ಪು ಬಣ್ಣದ ( ಮೋಡಗಳ ಕಪ್ಪು ಬಣ್ಣದ ಗುರುತಾಗಿ )  ಪ್ರಾಣಿಗಳನ್ನು ಬಲಿ ಕೊಡುವುದು  ಇತ್ಯಾದಿ ಹಲವು ಆಚರಣೆಗಳಿವೆ.

ಕಪ್ಪೆಗಳ ಮದುವೆ ಅಥವಾ ಕಪ್ಪೆಯ ಮೆರವಣಿಗೆ ಮಾಡುತ್ತಾ ಮನೆ ಮನೆಗೆ ಹೋಗಿ ಅದರ ಮೇಲೆ ನೀರು ಹೊಯ್ಯುವುದು ಇತ್ಯಾದಿಗಳು ಮಳೆ ಬಂದ ಕೂಡಲೇ ಕಪ್ಪೆಗಳು ಒಟ್ಟಿಗೆ ವಿವಿಧ ರೀತಿಯಲ್ಲಿ ಕೂಗುತ್ತಾ ಶಬ್ದ ಮಾಡುವುದು ಮಳೆರಾಯನಿಗೆ ಸ್ವಾಗತ ಬಯಸಿದಂತೆ ಆಗಿನ ಜನರಿಗೆ ಕಂಡಿದೆ.‌ಮಳೆಗೂ ಕಪ್ಪೆಗೂ ಏನೋ ಸಂಬಂಧ ಇದೆ ಎಂಬ ಭಾವನೆ ಈ ಆಚರಣೆಗಳಿಗೆ ಕಾರಣವಾಗಿದೆ. ಹಾಗೇಯೇ ಬೆತ್ತಲೆ ಮೆರವಣಿಗೆ, ಬೆತ್ತಲೆಯಾಗಿ ಭೂಮಿಯನ್ನು ಉಳುವುದು, ಜೋಕುಮಾರನ ಪೂಜೆ, ಜೋಕುಮಾರ ಮತ್ತು ಗಣೇಶ ಇಬ್ಬರ ನಡುವಿನ‌ ಸಂಬಂಧದ ಕತೆಗಳು ಇವೆಲ್ಲ ಲೈಂಗಿಕ ಸಂಭೋಗ ಮತ್ತು ಮಳೆಯ ನಡುವಿನ ಸಂಬಂಧವನ್ನು ಆಧರಿಸಿವೆ. ಆಕಾಶ ಮತ್ತು ಭೂಮಿಯ ನಡುವಣ ಸಂಭೋಗದ ಫಲ ಮಳೆ. ಮಳೆ ಎಂಬುದು ವೀರ್ಯದ ಹನಿಗಳು. ಅವು ಭೂಮಿಯನ್ನು ಬೆಳೆ ಎಂಬ ಗರ್ಭ ಧರಿಸುವಂತೆ ಮಾಡುತ್ತವೆ ಎಂಬ ನಂಬಿಕೆಗಳು ಇವುಗಳ ಹಿಂದಿವೆ.

ಬೆಳೆಗಳಲ್ಲಿ ಹೊಡೆ ಕಾಣಿಸುವಾಗ ಭೂಮಿ ಗರ್ಭಿಣಿ ಎಂಬಂತಹ, ಬೆಳೆ ಕುಯಿಲಿಗೆ ಬಂದಾಗ ಬಾಣಂತಿ ಎಂಬಂತಹ ಹಲವು ಕಲ್ಪನೆಗಳಿವೆ. ಅದಕ್ಕೆ ತಕ್ಕಂತೆ ಭೂಮಿಯ ಪೂಜೆ, ಬಲಿಗಳು ಇವೆ.‌ ಜನರ ಬದುಕಿನ ವಿವಿಧ ರೀತಿ,ವಿಧಾನ, ವಿವಿಧ ಋತುಗಳು ಮೊದಲಾದವುಗಳಲ್ಲಿ ಇಂತಹ ಸಾವಿರಾರು ಆಚರಣೆಗಳನ್ನು ನೋಡಬಹುದು.

ಇವು ಧರ್ಮವೆನಿಸುತ್ತದೆಯೇ ?

ಸಾವಿರಾರು “ಅಮ್ಮ” ಗಳ ಪೂಜೆ, ಮರಗಳು,ಪ್ರಾಣಿಗಳ ಪೂಜೆ, ಪ್ರಾಣಿಗಳನ್ನು ಸಾಕುವುದನ್ನು ಕಲಿಸಿದವನು, ಗೋಧಿ,ಬಾರ್ಲಿ ಕಂಡುಹಿಡಿದ ಮಹಿಳೆ ದ್ರಾಕ್ಷಿಯನ್ನು, ವಿವಿಧ ಹಣ್ಣುಗಳನ್ನು ಬೆಳೆಯುವುದನ್ನು ಕಲಿಸಿದ ಪುರುಷ ಕಬ್ಬಿಣವನ್ನು ಕಂಡುಹಿಡಿದ, ರೋಗಗಳಿಗೆ ಚಿಕಿತ್ಸೆ ಕಂಡುಹಿಡಿದ ಮಹಿಳೆ ಇವರುಗಳ ಪೂಜೆ ಅಂದಿನವರು ಧರ್ಮವೊಂದನ್ನು ಅನುಸರಿಸುತ್ತಿದ್ದರೆಂಬುದನ್ನು ಸೂಚಿಸುತ್ತದೆಯೇ ? ಈ ವ್ಯಕ್ತಿಗಳು ದೇವರುಗಳೇ ?
ಋಗ್ವೇದದ ಇಂದ್ರ,ಅಗ್ನಿ, ಸೂರ್ಯ, ವರುಣ,ವಾಯು ,ದ್ಯಾವಾ ಪಥ್ವಿ ಮೊದಲಾದ ದೇವತೆಗಳು, ವಿಶ್ವದ ವಿವಿಧ ಸಮುದಾಯಗಳು ಪೂಜಿಸಿದ ಪ್ರಕೃತಿಯ ವಿವಿಧ ಅಂಗಗಳು ಇವುಗಳು ಕೂಡಾ ಆ ಕಾಲದ ಮಾನವ ಸಮುದಾಯಗಳ ಧರ್ಮವನ್ನು ಸೂಚಿಸುತ್ತವೆಯೇ ? ಇವರು ದೇವರುಗಳೇ ?
ಈ ಪ್ರಶ್ನೆಗಳಿಗೆ ಭಾರತದಲ್ಲಿ ಬರುವ ಸಾಮಾನ್ಯ ಉತ್ತರ : ಹೌದು.
ಧರ್ಮ ಎಂದರೇನು ? ದೇವರುಗಳು ಎಂದು ಯಾರನ್ನು ಪರಿಗಣಿಸಬಹುದು ? ಈ ಮೂಲಭೂತ ಪ್ರಶ್ನೆಗಳನ್ನು ಮೇಲಿನ ಉತ್ತರ ಕೇಳಿಕೊಳ್ಳುವುದಿಲ್ಲ. ಏಕೆಂದರೆ ಭಾರತದಲ್ಲಿ ಮಾನವ ಸಮುದಾಯಗಳು ಇಂದು ಮಾಡುತ್ತಿರುವ ಎಲ್ಲ ಆಚರಣೆ, ಪೂಜೆಗಳನ್ನು ಧರ್ಮ ಎಂದು ಪರಿಗಣಿಸಲಾಗಿದೆ. ಈ ಎಲ್ಲವನ್ನೂ ವಿವಿಧ ರೀತಿಯಲ್ಲಿ, ವಿವಿಧ ಪ್ರಮಾಣದಲ್ಲಿ ಮಾರ್ಪಡಿಸಿ, ರೂಪಾಂತರಗೊಳಿಸಿ ಹಿಂದೂ ಧರ್ಮ ಎಂಬ ಸರ್ವಾಪೋಷಕ ಧರ್ಮದ ಭಾಗವಾಗಿ ಪರಿಗಣಿಸಲಾಗಿದೆ. ಆ ಪ್ರಕ್ರಿಯೆ ಎರಡು ಸಾವಿರ ವರ್ಷಗಳ ಹಿಂದೆಯೇ ಆರಂಭವಾಗಿ ಇನ್ನೂ ಮುಂದುವರೆಯುತ್ತಲೇ ಇದೆ. ಇವುಗಳಲ್ಲಿ ಮಾನವರು  ಇಲ್ಲಿಗೆ ಬಂದಂದಿನಿಂದ ಇಲ್ಲಿಯವರೆಗೆ ಮಾಡುತ್ತಾ ಬಂದ ಆಚರಣೆಗಳಲ್ಲಿ ಯಾವೆಲ್ಲಾ ಉಳಿದುಕೊಂಡು ಬಂದಿವೆಯೋ ಅವೆಲ್ಲ ಸೇರಿಬಿಡುತ್ತವೆ.
ಆದರೆ ವಿಶ್ವದ ಹಲವು ದೇಶಗಳಲ್ಲಿ ಇವೇ ಪ್ರಶ್ನೆಗಳಿಗೆ ಈ ಆಚರಣೆಗಳು ಧರ್ಮ ಅಲ್ಲ, ಈ ದೇವತೆಗಳು ದೇವರಲ್ಲ ಎಂಬ ಪೂರ್ಣ ನೇತ್ಯಾತ್ಮಕ ಉತ್ತರ ಸಿಗುತ್ತದೆ.

ಪರಸ್ಪರ ವಿರುದ್ಧವಾದ ಈ ಉತ್ತರಗಳು ಮತ್ತು ಅದರ ಹಿನ್ನೆಲೆಯ ವಿಚಾರಗಳಿಗೆ ಕಾರಣವೇನು ?
ಇದನ್ನು ಭಾರತೀಯ , ಭಾರತೀಯವಲ್ಲದ ಅಥವಾ ಪೌರ್ವಾತ್ಯ,ಪಾಶ್ಚಿಮಾತ್ಯಗಳ ನಡುವಣ ಭಿನ್ನತೆ ಎಂಬ ಬೈನರಿ, ದ್ವಿವಿಧ ವೈರುಧ್ಯಗಳ ಹೆಸರಿನಲ್ಲಿ ತಳ್ಳಿ ಹಾಕಿಬಿಡಬಹುದೇ ? ಅಥವಾ ಈ ಭಿನ್ನತೆಗಳಿಗೆ ಕಾರಣಗಳು, ಅವುಗಳ ಹಿಂದಿನ ಸಾಮಾಜಿಕ, ಐತಿಹಾಸಿಕ ಪ್ರಕ್ರಿಯೆಗಳನ್ನು ಮತ್ತಷ್ಟು ಆಳವಾದ ಅನ್ವೇಷಣೆಗೆ ಒಳಪಡಿಸಬೇಕೇ ?

ಈ ಆಚರಣೆಗಳು, ನಂಬಿಕೆಗಳ ಮುಖ್ಯ ಲಕ್ಷಣಗಳನ್ನ ಗಮನಿಸೋಣ.
* ಈ ಆಚರಣೆಗಳು ಮಾನವ ಸಮುದಾಯದ ವಿಕಾಸದ ಆರಂಭ ಘಟ್ಟದಲ್ಲಿ ಹತ್ತಾರು ಸಾವಿರ ವರ್ಷಗಳ ಹಿಂದೆ ಕಾಣಿಸಿಕೊಂಡಂತಹವು. ಧರ್ಮಗಳೆಂದು ಪರಿಗಣನೆಗೆ ಒಳಗಾದವು ಮೂರು ಸಾವಿರ ವರ್ಷಗಳ ಈಚಿನ ಬೆಳವಣಿಗೆಗಳು.

*  ಆ ಸಮಯದಲ್ಲಿ ಪೂಜೆಗೊಳಗಾದ ದೈವಗಳು ಹಲವು ಹತ್ತು ಸಾವಿರ ಮತ್ತು  ಆಚರಣೆಗಳು ಸಾವಿರಾರು. ವಿಶ್ವದ ವಿವಿಧ ಪ್ರದೇಶಗಳಲ್ಲಿನ ಒಂದೊಂದು ಬುಡಕಟ್ಟು, ಕುಲಗಳಿಗೂ ಬೇರೆ ಬೇರೆ. ಹೀಗಾಗಿ ಒಂದೊಂದು ದೈವವೂ ಕೆಲವೇ ಸಾವಿರ ಜನರಿಂದ ಪೂಜೆಗೊಳ್ಳುತ್ತಿದ್ದ ಸಂಭವವೇ ಹೆಚ್ಚು.

ಧರ್ಮಗಳೆಂದು ಪರಿಗಣಿತವಾದವುಗಳು ಏಕದೇವೋಪಾಸನೆಯನ್ನು ಅನುಸರಿಸುತ್ತವೆ. ಭಾರತದಲ್ಲಿ ಮಾತ್ರವೇ ವ್ಯಾಪಕ ಬಹುದೇವತಾರಾಧನೆ. ಅದರಲ್ಲಿಯೂ ವಿಷ್ಣು, ಶಿವ ಎಂಬ ಎರಡು ದೇವರುಗಳ ರೂಪಗಳಾಗಿ ಬಹು ದೊಡ್ಡ ಸಂಖ್ಯೆಯ ಜನರಿಂದ ಪೂಜೆಗೊಳಗಾಗಿವೆ.  ಅವರ ಪರಿವಾರ ದೇವತೆಗಳಾಗಿ ಮತ್ತೆ ಕೆಲವು ಪೂಜಿತವಾಗುತ್ತಿವೆ. ಇನ್ನುಳಿದಂತೆ ಸಾವಿರಾರು ಅಮ್ಮಗಳು, ಬುಡಕಟ್ಟು ವೀರರು ಆ ಆದಿಮ ಕಾಲದವು.

* ಆದಿಮ ದೈವಗಳು ಅಸಂಖ್ಯವಾದರೂ , ಆಚರಣೆಗಳು ವಿಭಿನ್ನವಾದರೂ ಅವುಗಳಿಗೆ ಆಧಾರವಾದ ಪ್ರಕ್ರಿಯೆ ಮತ್ತು ಮೂಲ ನಂಬಿಕೆ, ಚಿಂತನೆಗಳಲ್ಲಿ ಇಡೀ ವಿಶ್ವದಲ್ಲಿ ಏಕರೂಪತೆ ಇರುವುದನ್ನು ಕಾಣಬಹುದು.

* ಈ ದೈವಗಳಲ್ಲಿ ಎರಡು ವಿಧಗಳನ್ನು ಕಾಣುತ್ತೇವೆ. ಒಂದು ಮಾನವರೇ ದೈವಗಳೆಂದು ಪೂಜಿತವಾಗಿರುವುದು, ಮತ್ತೊಂದು ಪ್ರಕೃತಿಯ ಶಕ್ತಿಗಳು. ಇವು ಯಾವುವೂ ಎಲ್ಲ ಜಗತ್ತಿನ ಸೃಷ್ಟಿಕರ್ತರೆಂದು, ಜಗತ್ತಿನ ಎಲ್ಲ ಕ್ರಿಯೆಗಳ, ಮಾನವರ ಬದುಕಿನ ಎಲ್ಲದರ ನಿಯಾಮಕರೆಂದು ಪರಿಗಣಿತವಾದ ಸರ್ವ ಶಕ್ತ, ಸರ್ವಾಂತರ್ಯಾಮಿಗಳಲ್ಲ. ಸ್ವರ್ಗ ನರಕಗಳ, ಮೋಕ್ಷಗಳ ನಿರ್ದೇಶಕರಲ್ಲ. ಪ್ರಕೃತಿಯ ಶಕ್ತಿಗಳಾದ ಇಂದ್ರಾದಿಗಳೂ ತಂತಮ್ಮ ಪ್ರಾಕೃತಿಕ ನಿಯಮ,ಗುಣ ಸ್ವಭಾವವಗಳಿಗನುಸಾರವಾಗಿ ಆ ವಲಯಕ್ಕೆ ಮಾತ್ರ ಸೀಮಿತರು.

ವೇದಗಳ ಅಧ್ಯಯನ ಮಾಡಿದವರು ಕಂಡುಕೊಂಡಂತೆ ಋಗ್ವೇದದಲ್ಲಿ ಎಲ್ಲಿಯೂ ಮೋಕ್ಷದ ಪ್ರಸ್ತಾಪವಿಲ್ಲ. ಈ ಎಲ್ಲ ನರಕ, ಸ್ವರ್ಗಗಳು, ಮೋಕ್ಷಗಳು ಅವುಗಳ  ತೀರ್ಮಾನ ಎಲ್ಲವೂ  ಸಾವಿರ ವರ್ಷಗಳ ನಂತರ ಪುರಾಣ ಪ್ರಪಂಚದಲ್ಲಿ ಆರೋಪಿಸಲ್ಪಟ್ಟವು. ಧರ್ಮದ ಗುರಿಯೇ ಮೋಕ್ಷ, ಇಲ್ಲದಿದ್ದರೆ ನರಕ, ಪುನರ್ಜನ್ಮ. ಹೀಗೆ ಮೋಕ್ಷ, ಪುನರ್ಜನ್ಮಗಳ ಪ್ರಸ್ತಾಪವೇ ಇಲ್ಲದ  ಆಚರಣೆಗಳು ಧರ್ಮವಾಗುವುದೇ ?ಋಗ್ವೇದದ ಯಾವ ಯಜ್ಞ, ಯಾಗಾದಿಗಳೂ ಮೋಕ್ಷಕ್ಕಾಗಿ ಅಲ್ಲ. ಕೇವಲ ತಕ್ಷಣದ ಫಲಕ್ಕಾಗಿ ಅಷ್ಟೇ. ಮೇಲೆ ವಿವರಿಸಿದಂತೆ ಋಗ್ವೇದದ ಸೂಕ್ತಗಳಲ್ಲಿ ವ್ಯಕ್ತವಾದ ಬಯಕೆಗಳು ಮತ್ತು ತೊದವ ಬುಡಕಟ್ಟಿನ‌ ಬಯಕೆಗಳ ಸ್ವರೂಪದಲ್ಲಿ ಬಹಳ ವ್ಯತ್ಯಾಸವಿಲ್ಲ. 

ಒಟ್ಟಿನಲ್ಲಿ ಈ ಎಲ್ಲ ವಿವರಣೆಗಳು ತಿಳಿಸುವುದಿಷ್ಟೇ : ಆ ಆದಿಮ‌ಮಾನವ ಸಮುದಾಯಗಳು ತಮ್ಮ ಬದುಕಿನ ಬವಣೆಗಳ ಬಗ್ಗೆಯಷ್ಟೇ ಯೋಚಿಸುತ್ತಿದ್ದವರು. ಅಂದಿನ‌ ಅವರ ಅಳವಿಗೆ ಸಿಕ್ಕ ಅರಿವಿನ ಮಿತಿಗೆ ಮೀರಿದ ಸಂಗತಿ,ಘಟನೆಗಳನ್ನಷ್ಟೇ ತಮಗೆ ಮೀರಿದ್ದು ಎಂದು ಪರಿಗಣಿಸಿ ಅವುಗಳನ್ನು ಪ್ರಕೃತಿಯ ಶಕ್ತಿಗಳಲ್ಲಿ ಗುರುತಿಸಿದವರು. ಇನ್ನುಳಿದಂತೆ ತಮ್ಮ ಸಮುದಾಯಗಳ ಬೆಳವಣಿಗೆಗೆ ಸಹಾಯಕವಾದವರನ್ನು ಗುರುತಿಸಿ ನೆನಪಿಟ್ಟುಕೊಳ್ಳಬಯಸಿದವರು. 

ಸರಳ ಜೀವನದ ಸರಳ ಚಿಂತನೆಯ ಜೀವಿಗಳು. ಧರ್ಮಗಳು ಎಂಬುದು ಮುಂದೆ ನಿರ್ದಿಷ್ಟ ಪುರುಷಾಧಿಪತ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ ಉದ್ಭವಿಸಿತು. ಧರ್ಮಗಳು ತಮ್ಮ ಜನಪ್ರಿಯತೆಗಾಗಿ, ಸಾಮಾನ್ಯ ಜನರನ್ನು ಸೆಳೆಯುವುದಕ್ಕಾಗಿ ಆದಿ ಮಾನವ ಸಮುದಾಯಗಳ ಹಬ್ಬ, ಆಚರಣೆಗಳನ್ನು, ದೈವಗಳನ್ನು ಮಾರ್ಪಡಿಸಿ, ಹಲವು ಸಂದರ್ಭಗಳಲ್ಲಿ ವಿರೂಪಗೊಳಿಸಿ ಸೇರ್ಪಡೆ ಮಾಡಿಕೊಂಡಿವೆ. 

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

11 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading