
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.
ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.
ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.
ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.
ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.
ಉತ್ತಮ ಮಂತ್ರಿಮಂಡಲ ಹೇಗಿರಬೇಕು ?
‘ಎಲ್ಲರೂ ಜಿಗಣೆಗಳೆ ನಮ್ಮ ನೆತ್ತರಿಗೆ ‘
ಬಸವರಾಜ ಬೊಮ್ಮಾಯಿಯವರ ಮಂತ್ರಿ ಮಂಡಲ ಪ್ರಸವವಾಗಿದೆ. ಆದರೆ ವೇದನೆ ಈಗಷ್ಟೇ ಶುರುವಾಗಿದೆ. ಖಾತೆಗಳ ಹಂಚಿಕೆ ಈಗಷ್ಟೇ ನಡೆಯುತ್ತಿದೆ. ಜನತೆ ಪ್ರವಾಹ, ಮನೆಗಳ ಕುಸಿತ, ಸಾವುಗಳು, ರಸ್ತೆ ಕುಸಿತ, ಬೆಳೆ ನಾಶ ಇತ್ಯಾದಿ ಸಂಕಟಗಳಲ್ಲಿ ಬಾಧೆ ಪಡುತ್ತಿರುವಾಗ ಸರ್ಕಾರವೇ ಸ್ಥಗಿತವಾಗುವ ಹಳೆಯ ಸರ್ಕಾರವನ್ನು ಅಸ್ಥಿರಗೊಳಿಸುವ, ಹೊಸ ಸರ್ಕಾರ ರಚಿಸುವ ಪ್ರಕ್ರಿಯೆ ಆರಂಭವಾದದ್ದು, ವಾರಗಟ್ಟಲೆ ಸಚಿವ ಸಂಪುಟ ರಚನೆ, ಖಾತೆ ವಿಂಗಡಣೆ, ಗದ್ದಲ, ಗೊಂದಲ, ಶಾಸಕರ ನಿಷ್ಕ್ರಿಯತೆಗಳು ಪ್ರಜಾಪ್ರಭುತ್ವದ ಅಪಹಾಸ್ಯ. ಇದೇ ರೀತಿಯ ಪ್ರವಾಹದ ಸಂದರ್ಭದಲ್ಲಿ ಅಸ್ಥಿರತೆ ಉಂಟು ಮಾಡಿಯೇ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದದ್ದು ಎಂಬುದನ್ನು ನೆನಪಿಸಿಕೊಳ್ಳೋಣ.
ಮಂತ್ರಿ ಮಂಡಲ ರಚನೆಯಾಗಿದೆ. ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುವಾಗುವಂತೆ ದಕ್ಷ ಮಂತ್ರಿಮಂಡಲ ರಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇಂತಹ ಮಾತುಗಳಿಗೆ ಬರವೂ ಇಲ್ಲ. ಜನತೆಯ ಬಳಿ ಅವಕ್ಕೆ ಬೆಲೆಯೂ ಇಲ್ಲ. ಮಂತ್ರಿಮಂಡಲದೊಳಗೆ ಸೇರಿರುವ ಹಳೆಯ, ಹೊಸ ಮುಖಗಳನ್ನು ನೋಡಿದರೆ ಸಾಕು ಅದು ಇದು ಎಷ್ಟು ಜನಪರವಾಗಿರುತ್ತದೆ ಎಂದು ಜನರಿಗೆ ತಂತಾನೆ ವೇದ್ಯವಾಗುತ್ತದೆ.
ಬಹಳಷ್ಟು ಜನ ಭೂಮಾಫಿಯಾ,ಗಣಿ ಮಾಫಿಯಾದ ಭಾಗೀದಾರರು, ಸಕ್ಕರೆ ಕಾರ್ಖಾನೆ, ಶಿಕ್ಷಣ, ಆಸ್ಪತ್ರೆ ದಂಧೆಗಳ ಮಾಲೀಕರು. ಸರ್ಕಾರದ ವಿವಿಧ ಹೊಣೆಗಳನ್ನು ನಿರ್ವಹಿಸಲು ಅಗತ್ಯವಾದ ಯಾವ ತಿಳುವಳಿಕೆಯೂ, ಆಸಕ್ತಿಯೂ ಇಲ್ಲದವರು. ಇವರ ಹೆಸರುಗಳನ್ನು ಪರಿಗಣಿಸುವಾಗ ಯಾವ ಖಾತೆಯ ನಿರ್ವಹಣೆಗೆ ಯಾರು ಸೂಕ್ತವಾಗಬಹುದು ಎಂಬ ಮಾನದಂಡಗಳನ್ನು ಬಗ್ಗೆ ಕ್ಷಣ ಮಾತ್ರವಾದರೂ ಯೋಚಿಸಿದ್ದಾರೆಯೇ ? ಕೇವಲ ಜಾತಿ, ಪ್ರಾದೇಶಿಕ ಪ್ರಾತಿನಿಧ್ಯದ ಅಗತ್ಯದ ಕಾರಣಕ್ಕಾಗಿ ಮಾತ್ರ ಸ್ಥಾನ ಪಡೆದವರು.

ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಸ್ಪರ್ಧೆ ಮಾಡುತ್ತಿದ್ದ ಶಾಸಕ ಮಹೋದಯರಲ್ಲಿ ಇವರು ಇಂತಹ ಖಾತೆ ನಿರ್ವಹಿಸಲು ಅತ್ಯಂತ ಸೂಕ್ತ ವ್ಯಕ್ತಿ. ಆ ಖಾತೆಗೆ ಸಂಬಂಧಪಟ್ಟ ವಿಷಯದ ಬಗ್ಗೆ ತಜ್ಞರು. ಅಂತಹವರನ್ನು ಸಚಿವರನ್ನಾಗಿ ಮಾಡಲಿಲ್ಲವಲ್ಲ ಎಂದು ಜನತೆ ಹಳಹಳಿಸುವಂತಹ ಶಾಸಕರು ಒಬ್ಬರಾದರೂ ಇದ್ದಾರೆಯೇ? ಹಾಗಾದರೆ ಯಾವ ಅಭಿವೃದ್ಧಿಗಾಗಿ ಶಾಸಕರ ನಡುವೆ ಇಷ್ಟೊಂದು ಸ್ಫರ್ಧೆ? ಇದಕ್ಕಂತೂ ರಾಜ್ಯದ ಬಾಲಕ ಬಾಲಕಿಯರೂ ಉತ್ತರ ಹೇಳಬಲ್ಲರು, ಕೇವಲ ಸ್ವಂತ ಅಭಿವೃದ್ಧಿ ಎಂದು. ತಮ್ಮ ದಂಧೆಗಳಲ್ಲಿ ನಡೆಯುವ ಅಕ್ರಮ ವ್ಯವಹಾರಗಳು ನಿರಾತಂಕವಾಗಿ ಸಾಗಲು, ಮತ್ತಷ್ಟು ದೊಡ್ಡ ಪ್ರಮಾಣದ ಅಕ್ರಮ ಎಸಗಲು ಮಂತ್ರಿ ಸ್ಥಾನದ ರಕ್ಷಣೆ ಬೇಕು. ಅಪರಿಮಿತ ಭ್ರಷ್ಟಾಚಾರ ಎಸಗಲು, ಅಕ್ರಮ ಆಸ್ತಿ ಸಂಪಾದಿಸಲು ಮಂತ್ರಿಸ್ಥಾನ ತುರ್ತು ಅಗತ್ಯ.
ತಮ್ಮ ಜಾತಿಯ ಬಲಾಢ್ಯರ, ತಮ್ಮ ಆಪ್ತರ ಅಕ್ರಮಗಳಿಗೆ ರಕ್ಷಣೆ ನೀಡುವುದು, ಸರ್ಕಾರಿ ಕಂಟ್ರಾಕ್ಟ್‌ಗಳು, ವಿವಿಧ ಲೈಸೆನ್ಸ್‌ಗಳನ್ನು ದೊರಕಿಸಿಕೊಡುವುದು, ತಮ್ಮ ಜಾತಿಯ ಅಧಿಕಾರಿಗಳಿಗೆ ಅಕ್ರಮ ಸಂಪಾದನೆಯ ಆಯಕಟ್ಟಿನ ಸ್ಥಾನಗಳು, ಅವರ ಭ್ರಷ್ಟಾಚಾರಗಳಿಗೆ ಶ್ರೀರಕ್ಷೆ ನೀಡುವುದು, ಆ ಮೂಲಕ ತಮ್ಮ ಜಾತಿಯ ಏಕಮೇವ ನಾಯಕರಾಗಿ ಬಿಂಬಿಸಿಕೊಳ್ಳುವುದು, ತಮ್ಮ ಜಾತಿ,ಪ್ರದೇಶದ ರಾಜಕೀಯ ಎದುರಾಳಿಗಳನ್ನು ತುಳಿಯುವುದು ಮೊದಲಾದ ಘನಂದಾರಿ ಕೆಲಸಗಳಿಗೆ ಕೂಡಾ ಮಂತ್ರಿಸ್ಥಾನ ಬೇಕು.
ತಮ್ಮ ಖಾತೆಯ ನಿರ್ವಹಣೆಗೆ ಅಗತ್ಯ ತಜ್ಞತೆ ಇಲ್ಲದ, ಅದನ್ನು ಹೇಗೋ ನಿಭಾಯಿಸಿದರಾಯಿತು ಎನ್ನುವ ಮಂತ್ರಿಗಳಿಂದ ರಾಜ್ಯದ ಯಾವ ಅಭಿವೃದ್ಧಿ, ಜನತೆಯ ಯಾವ ಸಂಕಟಗಳ ಪರಿಹಾರ ಸಾಧ್ಯ? ಇದು ಕೇವಲ ಬಸವರಾಜ ಬೊಮ್ಮಾಯಿಯವರ ಸರ್ಕಾರದ ಸ್ಥಿತಿ ಮಾತ್ರವಲ್ಲ. ಹಿಂದಿನ ಮೂರು ದಶಕಗಳ ಸರ್ಕಾರಗಳಿಗೆ ರಾಜ್ಯವನ್ನಾಳಿದ ಮೂರೂ ಪಕ್ಷಗಳಿಗೆ ಸಮಾನವಾದ ಅಂಶಗಳಿವು.
ಪೊಳ್ಳು ಭರವಸೆಗಳು, ಒಂದಷ್ಟು ಮೂಗಿಗೆ ತುಪ್ಪ ಸವರುವ ಜನಪ್ರಿಯ ಕಾರ್ಯಕ್ರಮಗಳು, ಅವುಗಳ ಅಬ್ಬರದ ಪ್ರಚಾರ, ಜೊತೆಗಿಷ್ಟು ಜಾತಿ ದ್ವೇಷ, ಧರ್ಮ ದ್ವೇಷ ಇಷ್ಟು ಸಾಕು ಆಯ್ಕೆಯಾಗಿ ಅಧಿಕಾರಕ್ಕೆ ಬರುವುದಕ್ಕೆ. ಇದರಲ್ಲಿ ಮಾತ್ರ ಬಿಜೆಪಿ, ಕಾಂಗ್ರೆಸ್, ಜನತಾದಳಗಳ ನಡುವೆ ಒಂದಷ್ಟು ಭಿನ್ನತೆಯನ್ನು ಕಾಣಬಹುದು. ಗೆಲುವಿಗಾಗಿ ಹಣದ ದುರುಪಯೋಗ ಸಾಮಾನ್ಯ ಅಂಶವಾದರೂ ಹಣದ ಹೊಳೆಯ ಹರಿವಿನ ಪ್ರಮಾಣದಲ್ಲಿ ಕೂಡಾ ವ್ಯತ್ಯಾಸ ಕಾಣುತ್ತದೆ. ಈ ಪಕ್ಷಗಳು ಆಳುತ್ತಿರುವ ಇತರ ರಾಜ್ಯಗಳ ಕತೆಯೂ ಹೌದು.
ಅಷ್ಟೇ ಅಲ್ಲ, ಈ ಮಂತ್ರಿ ಮಂಡಲ ಕೇವಲ ಎರಡು ವರ್ಷಗಳ ಕಾಲಕ್ಕಾಗಿ ಮಾತ್ರ. ಹಿಂದಿನ ಮಂತ್ರಿಮಂಡಲವೂ ಕೂಡ ಎರಡು ವರ್ಷದ್ದು. ಅದರ ಹಿಂದಿನದು ಒಂದು ವರ್ಷದ್ದು. 2008 ರಲ್ಲಿ ಅಧಿಕಾರಕ್ಕೆ ಬಂದ ಮೊದಲ ಬಿಜೆಪಿ ರಾಜ್ಯ ಸರ್ಕಾರವೂ ಕೂಡಾ ಮತ್ತೆ ಮತ್ತೆ ಅಸ್ಥಿರಗೊಳಿಸಲ್ಪಟ್ಟ ಸರ್ಕಾರಗಳು. ಆಗಿನ ಯಡಿಯೂರಪ್ಪ ಸರ್ಕಾರ ಮೂರು ವರ್ಷದ್ದು. ಸದಾನಂದ ಗೌಡರದು, ಜಗದೀಶ್ ಶೆಟ್ಟರದು ಉಳಿದ ಎರಡು ವರ್ಷಗಳಲ್ಲಿ ಹಂಚಿಕೊಂಡದ್ದು. ಹೀಗೆ ಏಕಪಕ್ಷ ಬಹುಮತದ ಸರ್ಕಾರಗಳ ಕತೆಯೇ ಹೀಗಾದರೆ ಇನ್ನು ಸಮ್ಮಿಶ್ರ ಸರ್ಕಾರಗಳ ಕತೆಯೇನು? ಎಷ್ಟು ತಿಂಗಳ ಅವಧಿಯ ಸರ್ಕಾರ ಎಂದು ಕೇಳಬೇಕಾಗುತ್ತದೆ ?

ಒಬ್ಬನೇ ಮುಖ್ಯಮಂತ್ರಿಯಾಗಿರುವಾಗಲಾದರೂ ಅವರ ಅವಧಿ ಮುಗಿಯುವವರೆಗೆ ಮಂತ್ರಿಗಳು ತಮ್ಮ ಖಾತೆಗಳನ್ನು ನಿರ್ವಹಿಸಲು ಅವಕಾಶವಿದೆಯೇ? ಅದೂ ಇಲ್ಲ. ಪದೇ ಪದೇ ಮಂತ್ರಿಮಂಡಲದ ಪುನರ್ರಚನೆಗಳು, ಖಾತೆಗಳ ಬದಲಾವಣೆಗಳು. ಸಿದ್ಧರಾಮಯ್ಯ ಸರ್ಕಾರ, ಎಸ್.ಎಂ ಕೃಷ್ಣ ಸರ್ಕಾರ ಐದು ವರ್ಷ ಕಾಲ ಪೂರೈಸಿದ ಸರ್ಕಾರಗಳಲ್ಲಿ ಈ ಅಸ್ಥಿರತೆ ಸ್ವಲ್ಪ ತಪ್ಪಿದರೂ ಮಂತ್ರಿ ಮಂಡಲ ಪುನರ್ರಚನೆ ಎಂಬ ಅವಾಂತರ ಪೂರ್ತಿ ತಪ್ಪಲಿಲ್ಲ. ಹಿಂದಿನ ಕೆಲವು ವಾರಗಳಲ್ಲಿ ಕರ್ನಾಟಕ ಮಾತ್ರವಲ್ಲದೆ ಉತ್ತರ ಖಂಡ, ಯುಪಿ,ಪಂಜಾಬ್, ರಾಜಾಸ್ಥಾನ, ನಾಲ್ಕಾರು ರಾಜ್ಯಗಳಲ್ಲಿ ಹಲವು ತಿಂಗಳುಗಟ್ಟಲೆ ಗೊಂದಲ ಎಬ್ಬಿಸಲಾಗಿದೆ. ಕೊರೋನಾ ಪೀಡೆಯ ಸಂಕಟಗಳ ದುರಿತ ಸಮಯದಲ್ಲಿ ಸರ್ಕಾರಗಳು ನಿಷ್ಕ್ರಿಯವಾಗುವಂತಹ ಪರಿಸ್ಥಿತಿ.
ಅನೇಕ ಬಾರಿ ಒಂದು ಖಾತೆಯ ಅಧಿಕಾರ ವಹಿಸಿ ಅದರ ಕುರ್ಚಿಯಲ್ಲಿ ಕುಳಿತು ಏನಿದು ಖಾತೆ, ಅದರ ವ್ಯಾಪ್ತಿ ಎಷ್ಟು ಎಂದು ತಿಳಿದುಕೊಳ್ಳುವುದರೊಳಗೆ ಮತ್ತೊಂದು ಖಾತೆ. ಇನ್ನು ಆಡಳಿತ ಹೇಗಾಗಬೇಕು? ಇಂತಹ ಪರಿಸ್ಥಿತಿ ಸೃಷ್ಟಿಸಿದ, ಸೃಷ್ಟಿಸುತ್ತಿರುವ ಆಳುವ ರಾಜಕೀಯ ಪಕ್ಷಗಳ ಹೈ ಕಮಾಂಡ್ ಮತ್ತು ಲೋ ಕಮಾಂಡ್‌ಗಳಿಗೆ ಜನಪರ ಆಡಳಿತ ನೀಡುವುದಿರಲಿ, ಸರಿಯಾದ ಆಡಳಿತ ನಡೆಸಬೇಕೆಂಬುದಾದರೂ ಮನಸ್ಸಿನಲ್ಲಿದೆಯೇ?
ಮಂತ್ರಿಗಳನ್ನು ಆಯ್ಕೆ ಮಾಡಲು ಮಾನದಂಡಗಳೇನು? ಬೊಮ್ಮಾಯಿ ಮಂತ್ರಿಮಂಡಲವೂ ಸೇರಿದಂತೆ ಇತ್ತೀಚಿನ ಹಲವು ಸರ್ಕಾರಗಳ ಮಂತ್ರಿಮಂಡಲಗಳ ಆಯ್ಕೆಯನ್ನು ನೋಡಿದರೆ ಮುಂದಿನ ಚುನಾವಣೆಗಳಲ್ಲಿ ಗೆಲ್ಲವುದಕ್ಕೆ ಬೇಕಾದ ಜಾತಿ ಕಾಂಬಿನೇಷನ್, ಹಣವನ್ನು ಚೆಲ್ಲಬಹುದಾದ ಸಾಮರ್ಥ್ಯ, ಜಾತಿ ನಾಯಕತ್ವ, ಈ ಸರ್ಕಾರದ ಅವಧಿ ಪೂರ್ಣವಾಗುವವರೆಗೆ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಚತುರತೆ, ಇಂತಹವೇ ಆಯ್ಕೆಯ ಮಾನದಂಡಗಳು.
ಮಂತ್ರಿ ಪದವಿಗೆ, ನಂತರ ಖಾತೆಗಳಿಗೆ ಕಿತ್ತಾಡುವ ಶಾಸಕರಿಗೂ ಒಳ್ಳೆಯ ಆಡಳಿತ ನೀಡುವ ಉದ್ದೇಶವೇನೂ ಇಲ್ಲ. ಅವರನ್ನು ಆಯ್ಕೆ ಮಾಡುವ ಪಕ್ಷದ ಹೈ, ಲೋ ಕಮಾಂಡ್‌ಗಳಿಗೂ, ಮುಖ್ಯಮಂತ್ರಿಗೂ ಒಳ್ಳೆಯ ಆಡಳಿತ ನೀಡುವುದು ಮುಖ್ಯ ಉದ್ದೇಶವಲ್ಲ. ಕೇವಲ ಸ್ವಾರ್ಥ, ಮಂತ್ರಿಗಳಾಗ ಬಯಸುವವರ ಹಾಗೂ ರಾಜಕೀಯ ಪಕ್ಷಗಳ ಧನ,ಸಂಪತ್ತುಗಳ ದಾಹ, ಚುನಾವಣೆ ಗೆಲ್ಲುವುದು, ಅಧಿಕಾರದ ಮೇಲೆ ಹಿಡಿತ ಸ್ಥಾಪಿಸುವುದು. ಆದರೂ ಹೇಗೋ ಆಡಳಿತ ನಡೆಯುತ್ತಿದೆ. ಹೇಗೆ ಹೇಗೋ ನಡೆಯುತ್ತಿದೆ.
ಈಗ ನಡೆಯುತ್ತಿರುವಂತೆಯೇ ನಡೆಯಲಿ ಎಂಬ ‘ಸಂತೃಪ್ತ’ ಭಾವನೆ ಸಾರ್ವತ್ರಿಕವಾಗಿದೆ. ಶಾಸಕರಲ್ಲಿ, ಆಳುವ ಪಕ್ಷಗಳಲ್ಲಿ ಮಾತ್ರವಲ್ಲ ಜನ ಸಾಮಾನ್ಯರಲ್ಲಿಯೂ. ಜನ ಸಾಮಾನ್ಯರೂ ಇಂತಹ ಆಡಳಿತದ ನಿರ್ವಾತ ಸ್ಥಿತಿ, ಕೆಟ್ಟ ಆಡಳಿತವನ್ನು ಸಹಜ ಎನ್ನುವಂತೆ ಸ್ವೀಕರಿಸಿದ್ದಾರೆನ್ನುವಂತೆ ಕಾಣುತ್ತಿದೆ.
ಚುನಾವಣೆಯ ಸಮಯದಲ್ಲಿ ಒಟ್ಟಾರೆಯಾಗಿ ಶಿಕ್ಷೆ ನೀಡುವುದನ್ನು ಹೊರತು ಪಡಿಸಿ ಈ ನಿರ್ದಿಷ್ಟ ಸಮಸ್ಯೆಗೆ ಸಮಾಜದ ವಿವಿಧ ವಲಯಗಳಿಂದ ಪ್ರತಿರೋಧ ಕಾಣುತ್ತಿಲ್ಲ. ಈ ಬಗ್ಗೆ ಸಾರ್ವಜನಿಕ ಚರ್ಚೆಗಳು ಕೂಡಾ ನಡೆಯುತ್ತಿಲ್ಲ. ಒಂದು ಉತ್ತಮ ಆಡಳಿತ ಎಂದರೇನು, ಅದನ್ನು ನೀಡಬಹುದಾದ ಸಚಿವ ಸಂಪುಟ ಹೇಗಿರಬೇಕು ಎಂಬ ಬಗ್ಗೆ ಯೋಚಿಸುವುದನ್ನು ಜನರು ಕೈ ಬಿಟ್ಟಿದ್ದಾರೆ ಎಂದು ಅರ್ಥವೇ ?

ಉತ್ತಮ ಸಚಿವ ಸಂಪುಟ ಹೇಗಿರಬೇಕು?
ಪ್ರಜಾಪ್ರಭುತ್ವದ ಆಶಯ, ಸಂವಿಧಾನ ನಿರೂಪಿಸಿದ ನಿರ್ದೇಶಕ ತತ್ವಗಳು ಇವುಗಳಿಗೆ ಅನುಸಾರವಾಗಿ ಜನಪರ ಆಡಳಿತ ನೀಡಬಲ್ಲ ಸರ್ಕಾರದ ಸಚಿವ ಸಂಪುಟ ಹೇಗಿರಬೇಕು ಎಂಬ ಬಗ್ಗೆ ಜನರಲ್ಲಿ ಕಲ್ಪನೆಯಾದರೂ ಮೂಡಬೇಕಲ್ಲವೇ? ಈ ಅಂಶಗಳ ಬಗ್ಗೆ ಅಧ್ಯಯನ ಮಾಡುವುದು, ಚರ್ಚಿಸುವುದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ರಾಜಕೀಯ ವಿಜ್ಞಾನ, ಸಮಾಜ ವಿಜ್ಞಾನ, ಸಮಕಾಲೀನ ಇತಿಹಾಸ ಮೊದಲಾದ ವಿಭಾಗಗಳ ಹೊಣೆಗಾರಿಕೆಯಲ್ಲವೇ? ಹತ್ತು ಹಲವು ಪ್ರಶ್ನೆಗಳ ಬಗ್ಗೆ ಪೊಳ್ಳು ಚರ್ಚೆ ಎಬ್ಬಿಸುವ ಮಾಧ್ಯಮಗಳು, ಪತ್ರಿಕೆಗಳಾದರೂ ಸಚಿವ ಸಂಪುಟ ಎಂತಹದ್ದಿರಬೇಕು,ಎಂತಹ ಸಂಪುಟ ಅಸ್ತಿತ್ವಕ್ಕೆ ಬಂದಿದೆ ಎಂಬ ಬಗ್ಗೆ ಚರ್ಚೆ ಮಾಡುತ್ತಿವೆಯೇ ? ಒಟ್ಟಿನಲ್ಲಿ ಜನರ ಮನಸ್ಸಿನಲ್ಲಿ ಇಂತಹ ಪ್ರಶ್ನೆಗಳೇ ಮೂಡಿಸಬಾರದೆಂಬ ಅಘೋಷಿತ ಒಪ್ಪಂದಕ್ಕೆ ಎಲ್ಲರೂ ಬಂದಿದ್ದಾರೆಂಬ ತೀರ್ಮಾನಕ್ಕೆ ಬರುವುದು ಅನಿವಾರ್ಯವಾಗಿದೆ.
ಉತ್ತಮ ಆಡಳಿತ ನೀಡಲು ಸಚಿವರು ಯಾರು ಎಂದು ನೇಮಿಸಿ ನಂತರ ಯಾರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ಅವರ ಸ್ವಾರ್ಥೈಕ ಒತ್ತಡಕ್ಕೆ ಸಿಲುಕಿ ಒದ್ದಾಡುವುದಲ್ಲ. ಇದು ಕುದುರೆಯನ್ನು ಗಾಡಿಯ ಹಿಂದೆ ಕಟ್ಟುವುದು ಎನ್ನುವ ಇಂಗ್ಲಿಷ್ ಗಾದೆಯಂತೆ. ಮೇಲೆ ಸೂಚಿಸಿದಂತೆ ಯಾವ ಸಚಿವ ಖಾತೆಗೆ ಯಾರು ಸೂಕ್ತ ಎಂದು ಆರಿಸಿಕೊಳ್ಳಬೇಕು. ಆಯಾ ಖಾತೆಯ ಬಗ್ಗೆ ತಜ್ಞರಾದವರು – ಆಳವಾಗಿ ಅಧ್ಯಯನ ಮಾಡಿರುವವರು, ಅದರ ವಿವಿಧ ಆಯಾಮಗಳ ಬಗ್ಗೆ ಅರಿವಿರುವವರು, ಆ ಖಾತೆಯ ಒಂದು ವಿಭಾಗದ ತಜ್ಞತೆಗಿಂತ ಅದರ ಸಮಗ್ರ ಅರಿವು ಉಳ್ಳವರು, ಜೊತೆಗೆ ಹತ್ತಾರು ವರ್ಷ ಆ ವಿಷಯದಲ್ಲಿ ಕೆಲಸ ಮಾಡಿ ಅನುಭವ ಇರುವವರನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ರಾಜ್ಯದ ಜನತೆಯ ಬದುಕಿನ ಒಟ್ಟಂದದ ಅರಿವು, ಅದರಲ್ಲಿ ನಿರ್ದಿಷ್ಟ ಖಾತೆಯ ಪಾತ್ರದ ಬಗ್ಗೆ ಸ್ಪಷ್ಟತೆ ಬೇಕು.
ವಿಷಯದ ಅರಿವಿನ ಜೊತೆಗೆ ಆಯಾ ವಿಷಯದ ಬಗ್ಗೆ ಜನಪರ ದೃಷ್ಟಿಕೋನ, ಜನರಿಗೆ ಬದ್ಧವಾಗಿ ಕೆಲಸ ಮಾಡಿದ ಬಗ್ಗೆ ಸಾರ್ವಜನಿಕರ ನಡುವೆ ಸದಭಿಪ್ರಾಯ ಇರುವವರನ್ನು ಆಯ್ಕೆ ಮಾಡಬೇಕು. ರಾಜ್ಯದ ವಿವಿಧ ಪ್ರದೇಶಗಳ ವೈವಿಧ್ಯತೆಯ, ಸಾಮಾಜಿಕ ರಚನೆಯ ಅರಿವು, ತಮ್ಮ ಖಾತೆಯಲ್ಲಿ ಕೈಗೊಳ್ಳಬೇಕಾದ ಯೋಜನೆ, ನೀತಿಗಳು ಈ ವೈವಿಧ್ಯತೆ, ರಚನೆಯ ಮೇಲೆ ಬೀರಬಹುದಾದ ಪರಿಣಾಮದ ಕಲ್ಪನೆ ಇರುವಂತಹವರಾಗಿರಬೇಕು. ಕೇವಲ ತಜ್ಞರಾಗಿ technocrat, bureaucrat ಮನೋಭಾವಕ್ಕೆ ಸಂಕುಚಿತಗೊಳ್ಳದೆ ತಮಗಮ ವಿಷಯದಲ್ಲಿ ಜನಸಾಮಾನ್ಯರೊಡನೆ ಪರಿಣಾಮಕಾರಿಯಾಗಿ ಸಂವಾದ, ಸಂವಹನ ಮಾಡುವ, ಜನರ ಸಲಹೆ ಪಡೆಯುವ ಮನಸ್ಸಿನವರಾಗಿರಬೇಕು. ಇವೆಲ್ಲದರ ಜೊತೆಗೆ ಎಲ್ಲ ಖಾತೆಗಳವರಿಗೂ ಪ್ರಾಮಾಣಿಕತೆ, ದಕ್ಷತೆ ಮುಖ್ಯ.
ಒಳ್ಳೆಯ ಆಡಳಿತ ನೀಡಲು ಸಚಿವರುಗಳಿಗೆ ಇರಬೇಕಾದ ಈ ಅರ್ಹತೆಗಳ ಪಟ್ಟಿಯನ್ನು ನೋಡಿದರೆ ಇದೊಂದು Utopia, ಕನಸಿನ ಲೋಕದ ವಿಹಾರ ಎಂದೆನ್ನಿಸುವುದು ಸಹಜ. ಇಷ್ಟೊಂದು ಅರ್ಹತೆಗಳು ಅನವಶ್ಯಕ ಎಂಬ ಕಾರಣಕ್ಕಲ್ಲ. ಈ ಅರ್ಹತೆಗಳುಳ್ಳ ಕಚ್ಛಾ ವಸ್ತು – ಶಾಸಕರು ದೊರೆಯುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ.
ಬೇವ ಬಿತ್ತಿ ಮಾವ ಬೆಳೆಯಬಹುದೇ ?
ಒಂದು ಭಿನ್ನ ಮಾದರಿ
ಸಚಿವ ಸಂಪುಟ ರಚನೆ, ಆಡಳಿತ ನಿರ್ವಹಣೆಯಲ್ಲಿ ಕೇರಳದ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರದ್ದು ಒಂದು ಭಿನ್ನ ಮಾದರಿ. ಚುನಾವಣೆಗಳ ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ಮುಖ್ಯ ಮಂತ್ರಿಯೊಡನೆಯೇ ಎಲ್ಲ ಸಂಪುಟ ಸದಸ್ಯರ ಪ್ರಮಾಣ ವಚನ. ಸರಿಸುಮಾರು ಅದೇ ದಿನವೇ ಯಾವ ಗೊಂದಲಗಳಿಲ್ಲದೆ. ಖಾತೆಗಳ ಹಂಚಿಕೆ. ಏಕೆಂದರೆ ಖಾತೆಗಳಿಗೆ ಅವರ ಸೂಕ್ತತೆಯನ್ನು ಗಮನದಲ್ಲಿಟ್ಟುಕೊಂಡೇ ಸಚಿವರ ಆಯ್ಕೆ. ಸಚಿವತಾಗಬೇಕೆಂಬುವರ ಯಾವ ಪ್ರತಿಭಟನೆಗಳಿಗೂ ಆಸ್ಪದವಿಲ್ಲ. ಹಾಗೆಯೇ ವಾರಗಟ್ಟಲೆ ಸನ್ಮಾನ ಸಮಾರಂಭಗಳು, ಸಚಿವರ ಕುರ್ಚಿ ಪೂಜೆ, ಕಚೇರಿ, ಮನೆಗಳ ವಾಸ್ತು ಬದಲಾವಣೆಗಳಿಗೂ ಜಾಗವಿಲ್ಲ.

ಇಡೀ ಸಚಿವ ಸಂಪುಟ ಮೊದಲ ದಿನದಿಂದಲೇ ಆರಂಭಿಸಿ ಐದೂ ವರ್ಷ ಆಡಳಿತ ನಡೆಸುತ್ತದೆ. ಸಂಪುಟ ಪುನರ್ರಚನೆ, ಖಾತೆ ಬದಲಾವಣೆಗಳೂ ಇರುವುದಿಲ್ಲ. ಸಾವು ಮುಂತಾದ ಅನಿರೀಕ್ಷಿತ ಸಂಭವಗಳ ಹೊರತು. ಈ ಅಂಶಗಳೇ ಸಚಿವರಿಗೆ ತಮ್ಮ ಖಾತೆಯ ನಿರ್ವಹಣೆ, ದಕ್ಷ ಅಧಿಕಾರ ನೀಡುವಿಕೆಗೆ ಒಂದು ಮುಖ್ಯ ಕೊಡುಗೆ. ಇವುಗಳ ಜೊತೆಗೆ ರಾಜಧಾನಿಯಲ್ಲಿರುವ ಪ್ರತಿ ಸಚಿವರೂ ಪ್ರತಿ ದಿನವೂ ಸಭೆ ಸೇರಿ ತಮ್ಮ ಖಾತೆಗಳ ಆಗು ಹೋಗುಗಳು, ರಾಜ್ಯದ ಪರಿಸ್ಥಿತಿಯ ಬಗ್ಗೆ ಒಂದು ಗಂಟೆ, ಅರ್ಧ ಗಂಟೆಯಾದರೂ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ವಿವಿಧ ಇಲಾಖೆಗಳು ಪರಸ್ಪರ ವಿರುದ್ಧ ಕೆಲಸ ಮಾಡುವ ಪ್ರಸಂಗಗಳನ್ನು ತಪ್ಪಿಸುವುದು ಮಾತ್ರವಲ್ಲದೆ ಒಂದು ಇಲಾಖೆಯ ಕಾರ್ಯಕ್ರಮ, ಯೋಜನೆಗಳಿಗೆ ಅವಶ್ಯಕವಾದ ಇತರೆಲ್ಲ ಇಲಾಖೆಗಳೂ ಪರಸ್ಪರ ಪೂರಕವಾಗಿ, ಇಡೀ ಸರ್ಕಾರ ಒಂದಾಗಿ ಕೆಲಸ ಮಾಡಲು ಸಹಾಯಕವಾಗುತ್ತದೆ.
ಸಚಿವರುಗಳಿಗೆ ಅವರ ಖಾತೆಯ ಕೆಲಸದ ಬಗ್ಗೆ ದಶಕಗಳ ಕಾಲದ ಅನುಭವ ಇರುತ್ತದೆ. ಅವರು ಸಚಿವರು, ಶಾಸಕರಾಗುವ ಮೊದಲೇ ರೈತ, ಕೂಲಿಕಾರರ, ಕಾರ್ಮಿಕರ ಸಂಘ, ವಿದ್ಯಾರ್ಥಿ, ಮಹಿಳಾ, ಯುವಜನ, ಬಾಲಕರ, ಶಾಲಾ ಅಧ್ಯಾಪಕರ, ಕಾಲೇಜು ಉಪನ್ಯಾಸಕರ ಸಂಘಟನೆಗಳ ಮೂಲಕ ಹಲವು ಇಲಾಖೆಗಳೊಂದಿಗೆ ಒಡನಾಡಿರುತ್ತಾರೆ. ಆ ಇಲಾಖೆಗಳ ಬಗ್ಗೆ ಅಧ್ಯಯನ ಮಾಡಿರುತ್ತಾರೆ. ಅವುಗಳ ಯೋಜನೆಗಳ ಜಾರಿಗಾಗಿ ಕೆಲಸ ಮಾಡಿರುತ್ತಾರೆ. ಅವುಗಳ ಲೋಪದೋಷಗಳನ್ನು ಗುರುತಿಸಿ ಪ್ರಶ್ನೆಗಳನ್ನು ಎತ್ತಿರುತ್ತಾರೆ. ಇರುವ ಯೋಜನೆಗಳ ಜಾರಿ ಮಾತ್ರವೇ ಅಲ್ಲದೆ ನೀತಿಗಳ ಬಗ್ಗೆ, ಹೊಸ ಯೋಜನೆಗಳನ್ನು ಆರಂಭಿಸುವ ಬಗ್ಗೆ ಸರ್ಕಾರಗಳಿಗೆ ಸಲಹೆ ನೀಡಿರುತ್ತಾರೆ. ಅವುಗಳ ಸಲುವಾಗಿ ಹಲವಾರು ಹೋರಾಟಗಳನ್ನೂ ಕೂಡಾ ಸಂಘಟಿಸಿರುತ್ತಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ವಿವಿಧ ಜಿಲ್ಲೆ,ಪ್ರದೇಶಗಳ ಭಿನ್ನ ಸ್ವರೂಪಗಳ ಪರಿಚಯವೂ ಇರುತ್ತದೆ.
ಉದಾಹರಣೆಗೆ ರೈತ ಸಂಘಟನೆಯಲ್ಲಿ ದಶಕಗಟ್ಟಲೆ ಜಿಲ್ಲಾ ಹಾಗೂ ಮುಂದೆ ರಾಜ್ಯ ಮಟ್ಟಗಳಲ್ಲಿ ದುಡಿದವರೇ ಮಂತ್ರಿಗಳಾಗುತ್ತಾರೆಯೇ ಹೊರತು ಏನಕೇನ ಪ್ರಕಾರೇಣ ಅಲ್ಲ. ಅವರು ಕೃಷಿ , ಪಶುಸಂಗೋಪನೆ, ಗ್ರಾಮೀಣ ಅಭಿವೃದ್ಧಿ, ಪಂಚಾಯತ ರಾಜ್ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಲು ಬೇಕಾದ ತಜ್ಞತೆ ಮತ್ತು ಅನುಭವ ಹೊಂದಿರುತ್ತಾರೆ. ಶಿಕ್ಷಣ ಖಾತೆಯ ಮಂತ್ರಿಗಳು ಸ್ವತಃ ಶಿಕ್ಷಕರಾಗಿ ಕೆಲಸ ಮಾಡಿದವರು , ಶಿಕ್ಷಕರ ಯಾ ಉಪನ್ಯಾಸಕರ ಅಥವಾ ವಿದ್ಯಾರ್ಥಿಗಳ ಸಂಘಟನೆಯಲ್ಲಿ ದುಡಿದವರಾಗಿರುತ್ತಾರೆ. ಮಹಿಳಾ ಖಾತೆಯ ಸಚಿವರು ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡಿದವರಾಗಿರುತ್ತಾರೆ.
ಕರ್ನಾಟಕ ಮತ್ತು ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ಮೊದಲಾದ ಪಕ್ಷಗಳಲ್ಲಿಯೂ ರೈತ, ವಿದ್ಯಾರ್ಥಿ, ಮಹಿಳಾ ಮೊದಲಾದ ವಿಭಾಗಗಳಿರುತ್ತವೆ. ಎನ್‌ಎಸ್‌ಯುಐ ರೀತಿ. ಆದರೆ ಅವುಗಳ ನಾಯಕರುಗಳಿಗೆ ಕಮ್ಯುನಿಸ್ಟ್ ಪಕ್ಷಗಳ ನೇತೃತ್ವದ ವಿದ್ಯಾರ್ಥಿ ಚಳುವಳಿಗಳಂತೆ ನಿರಂತರ ಚಟುವಟಿಕೆ, ಹೋರಾಟಗಳಲ್ಲಿ ತೊಡಗಿರುವುದಿಲ್ಲ. ಹೀಗಾಗಿ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ಇರುವುದಿಲ್ಲ. ಕಮ್ಯುನಿಸ್ಟ್ ನೇತೃತ್ವದ ಸಂಘಟನೆಗಳ ನಾಯಕರು ಅಧ್ಯಯನ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಅವರ ಜ್ಞಾನದ ಬಗ್ಗೆ ಜನಮಾನ್ಯತೆ ಪಡೆದವರಾಗಿರುತ್ತಾರೆ. ಎಬಿವಿಪಿ ಮೊದಲಾದ ಆರೆಸ್ಸೆಸ್ ಪರಿವಾರದ ಕೆಲ ಸಂಘಟನೆಗಳು ಕ್ರಿಯಾಶೀಲವಾಗಿದ್ದರೂ ಜಗವರಿಯೆ ಅವರ ಕ್ರಿಯೆಗಳ ಗುರಿ, ಆಸಕ್ತಿಗಳು ಪೂರ್ತಿ ಬೇರೆ .
ಅಷ್ಟೇ ಅಲ್ಲದೇ ಈ ಸಂಘಟನೆಗಳ ನಾಯಕರು ಸಚಿವರುಗಳಾದ ಮೇಲೂ ತಮ್ಮ ಸಂಘಟನೆಗಳ ಮುಖ್ಯ ಸ್ಥಾನಗಳಲ್ಲಿ ಮುಂದುವರೆಯುತ್ತಾರೆ. ಹೀಗಾಗಿ ತಮ್ಮ ಸಚಿವ ಖಾತೆಯ ನೀತಿ, ಧೋರಣೆಗಳನ್ನು ಈ ಸಂಘಟನೆಗಳಲ್ಲಿ ಚರ್ಚೆಗೊಡ್ಡುವ ಮೂಲಕ ಅವುಗಳ ಬಗ್ಗೆ ಸಂಘಟನೆಗಳಲ್ಲಿ ಇತರ ಅನುಭವಸ್ಥರ ಸಲಹೆ, ಅಭಿಪ್ರಾಯಗಳೂ ಮಾತ್ರವಲ್ಲದೆ ಜಿಲ್ಲಾ ಮತ್ತಿತರ ಹಂತಗಳಲ್ಲಿಯೂ ಚರ್ಚೆಗೆ ತಂದು ಜನಾಭಿಪ್ರಾಯ ಸಂಗ್ರಹಿಸುತ್ತಾರೆ. ಇದರಿಂದಾಗಿ ರೂಪಿಸಿದ ಯೋಜನೆ, ಕಾರ್ಯಕ್ರಮಗಳು, ನೀತಿಗಳು ಹೆಚ್ಚು ಪರಿಪೂರ್ಣತೆಯನ್ನು ಪಡೆಯುತ್ತವೆ. ಅವುಗಳ ಜಾರಿ ಪರಿಣಾಮಕಾರಿಯಾಗುತ್ತದೆ.
ಮತ್ತೊಂದು ವಿಶೇಷ ಸಂಗತಿ ಎಂದರೆ ಕರ್ನಾಟಕ ಮೊದಲಾದ ರಾಜ್ಯಗಳಂತೆ ಎಡರಂಗಗಳ ಸಚಿವರ ಮನೆಗಳ ಮುಂದೆ ಬೆಳಗಿನಿಂದ ಸಂಜೆಯವರೆಗೆ, ಅವರು ಹೋದಲ್ಲೆಲ್ಲ ಅವರ ಖಾತೆಯ ಜನ ಮುಕುರುವ ಪ್ರಸಂಗವೇ ಇಲ್ಲ. ಇತರ ರಾಜ್ಯಗಳಲ್ಲಿ ಸಚಿವರನ್ನು ಭೇಟಿ ಮಾಡಲು ಕಾದು ಸುಸ್ತಾಗಿ ಭೇಟಿಯಾಗದ, ಭೇಟಿಯಾದರೂ ಮುಖ್ಯ ವಿಷಯಗಳನ್ನು ವಿವರಿಸಲು ಸಮಯ ಸಿಗದ ಸ್ಥಿತಿಯನ್ನು ಕಾಣುತ್ತೇವೆ.
ಒಮ್ಮೆ ಹೀಗಾಯ್ತು, ಒಮ್ಮೆ ಎಡರಂಗದ ಸಚಿವರೊಬ್ಬರು ಕರ್ನಾಟಕಕ್ಕೆ ಭೇಟಿ ಕೊಟ್ಟ ಸಮಯದಲ್ಲಿ ಇಲ್ಲಿಯ ಸರ್ಕಾರ ಅವರನ್ನು ಕುಮಾರ ಕೃಪಾದಲ್ಲಿ ಉಳಿಸಿದ್ದರು. ಅವರ ಇಲ್ಲಿಯ ವಾಸ್ತವ್ಯದ ಎರಡು ದಿನಗಳಲ್ಲಿ ಶಾಂತವಾಗಿದ್ದ ಕುಮಾರ ಕೃಪಾದಲ್ಲಿ ಇದ್ದಕ್ಕಿದ್ದಂತೆ ಗಜಿಬಿಜಿ, ಗದ್ದಲ ಉಂಟಾಯಿತು. ಅಸ ಸಚಿವರು ಅಲ್ಲಿ ಅವರೊಡನಿದ್ದ ನನ್ನನ್ನು ಕೇಳಿದರು. ಏನಿದು ಇದ್ದಕ್ಕಿದ್ದಂತೆ ಈ ಗದ್ದಲ,ಗೌಜು ಎಂದು.
ನಾನು ವಿಚಾರಿಸಲಾಗಿ, ಮುಖ್ಯಮಂತ್ರಿಗಳು ತಮ್ಮ ಕಛೇರಿಯಲ್ಲಿ ಮುಕುರಿದ ಜನಗಳ ಒತ್ತಡದಲ್ಲಿ ಹಲವು ವಾರಗಳಿಂದ ಮುಖ್ಯ ಕಡತಗಳನ್ನು ಪರಿಶೀಲಿಸಿ ಅನುಮೋದನೆ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ ಜನ ಸಂದಣಿ ಸೇರುವುದರಿಂದ ತಪ್ಪಿಸಿಕೊಂಡು ವಿರಾಮವಾಗಿ ಸರ್ಕಾರದ ಮುಖ್ಯ ಕೆಲಸಗಳನ್ನು ಮಾಡಲು ಯಾರಿಗೂ ಹೇಳದೆ ಇಲ್ಲಿಗೆ ಬಂದಿದ್ದಾರೆಂದೂ, ಆದರೂ ಮಾಹಿತಿ ತಿಳಿದುಕೊಂಡ ಹಲವು ಜನ ಇಲ್ಲಿಗೆ ಧಾವಿಸಿ ಬಂದಿದ್ದಾರೆಂದೂ ಹೇಳಿದೆ. ಆಗ ಅವರು ಇಂತಹ ಪರಿಸ್ಥಿತಿ ಯಲ್ಲಿ ಮುಖ್ಯ ವಿಷಯಗಳನ್ನು ಶಾಂತವಾಗಿ , ವಿವರವಾಗಿ ಪರಿಶೀಲನೆ ನಡೆಸಿ ,ಚಿಂತಿಸಿ ನಿರ್ಧಾರ ತೆಗೆದುಕೊಳ್ಳುವುದು ಹೇಗೆ ಸಾಧ್ಯ.
ನಮ್ಮ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಕಛೇರಿಯ ಮುಂದಾಗಲೀ ಬೇರಾವ ಸಚಿವರ ಕಛೇರಿಯ ಮುಂದಾಗಲೀ ಹೀಗೆ ಜನ ಸಂದಣಿ ಸೇರುವ ಪ್ರಸಂಗವೇ ಬಾರದು. ನಮ್ಮ ಖಾತೆಗಳ ನೀತಿ, ಧೋರಣೆ, ಯೋಜನೆಗಳನ್ನು ರೂಪಿಸುವುದು, ಜಾರಿಯ ಸಮಸ್ಯೆಗಳನ್ನು ಪರಿಹರಿಸುವುದು ಇದಕ್ಕೇ ನಮ್ಮ ಸಮಯ ಮೀಸಲು. ನಮ್ಮ ಜಾತಿಯ, ಕ್ಷೇತ್ರದ, ಜಿಲ್ಲೆಯ ಜನರು ನಮ್ಮನ್ನು ಹುಡುಕಿ ರಾಜಧಾನಿಗೆ ಬರುವ ಪ್ರಸಂಗಗಳೇ ಇಲ್ಲ. ಅವರ ಕೆಲಸಗಳೆಲ್ಲ ಪಂಚಾಯತ್, ತಾಲ್ಲೂಕು ಮಟ್ಟಗಳಲ್ಲಿಯೇ ಪರಿಹಾರವಾಗುತ್ತವೆ. ಜಿಲ್ಲಾ ಮಟ್ಟಕ್ಕೆ ಬರುವುದೂ ಅಪರೂಪ ಎಂದರು.
ಇದರಿಂದಾಗಿ ಎಡರಂಗಗಳ ಸಚಿವರು ಅನ್ಯ, ಅನವಶ್ಯಕ ವಿಷಯಗಳಿಗೆ ಸಮಯ ವ್ಯರ್ಥ ಮಾಡದೆ ತಮ್ಮ ಖಾತೆಯ ಮುಖ್ಯ ವಿಷಯಗಳಿಗೆ ಗಮನ ನೀಡುವ ಮೂಲಕ ಹೆಚ್ಚು ದಕ್ಷತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇನ್ನು ಪ್ರಾಮಾಣಿಕತೆಯ ವಿಷಯಕ್ಕೆ ಬಂದರೆ ಸಿಪಿಎಂನಲ್ಲಿ ಪ್ರತಿವರ್ಷವೂ ಸಚಿವರು, ಶಾಸಕರು ಮಾತ್ರವೇ ಅಲ್ಲದೆ ಪಕ್ಷದ ಪ್ರತಿ ಜಿಲ್ಲಾ ಸಮಿತಿಯ ಸದಸ್ಯ ಮತ್ತು ಅದಕ್ಕಿಂತ ಮೇಲಿನ ಸಮಿತಿಗಳ ಸದಸ್ಯರ ಆದಾಯ, ಆಸ್ತಿಗಳ ಬಗ್ಗೆ, ಐದು ಸಾವಿರಕ್ಕಿಂತ ಹೆಚ್ಚು ಬೆಲೆ ಬಾಳುವ ಆಭರಣ, ಮೊಬೈಲ್ ಫೋನ್, ಕಂಪ್ಯೂಟರ್ ಇತ್ಯಾದಿಗಳ ಬಗ್ಗೆಯೂ ವಿವರ ನೀಡಬೇಕು. ಅದು ಆಯಾ ಸಮಿತಿಗಳ ಪರಿಶೀಲನೆಗೆ ಒಳಪಡುತ್ತದೆ.

ಇವುಗಳ ಮೇಲೆ ರಾಷ್ಟ್ರ ಮಟ್ಟದಲ್ಲಿ ಪಕ್ಷದೊಳಗೇ ಒಂದು ಭ್ರಷ್ಟಾಚಾರ ತನಿಖಾ ಸಮಿತಿಯೂ ಇದೆ. ಯಾರು ಬೇಕಾದರೂ ಅದಕ್ಕೆ ದೂರು ನೀಡಬಹುದು. ಹೀಗೆ ಬಹಳ ಕಟ್ಟು ನಿಟ್ಟಾದ ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆ ಇದೆ. ಅಕ್ರಮಗಳನ್ನು ತನಿಖೆ ಮಾಡಿ ಪಕ್ಷದಿಂದ ಉಚ್ಛಾಟನೆ, ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು. ಇಂತಹ ಅನೇಕ ಪ್ರಕರಣಗಳಿವೆ. ಆದ್ದರಿಂದ ಸಿಪಿಎಂನ ಸಚಿವರು, ಶಾಸಕರು, ಭ್ರಷ್ಟಾಚಾರ ಮುಕ್ತರಾಗಿರುತ್ತಾರೆ.
ಉಳಿದ ಪಕ್ಷಗಳ ಅನೇಕ ನಾಯಕರು ಕಮ್ಯುನಿಸ್ಟರಿಗಷ್ಟೇ ಈ ಕಾರ್ಯ ವಿಧಾನ, ಕಟ್ಟು ನಿಟ್ಟಿನ ಕ್ರಮಗಳು ಸಾಧ್ಯ ಎಂದು ಹೇಳಿ ಕೈ ತೊಳೆದುಕೊಂಡು ಬಿಡುತ್ತಾರೆ. ಆ ಪಕ್ಷಗಳಲ್ಲಿ ಈ ವಿಷಯಗಳಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಮೊದಲೇ ಸಾರಿಬಿಡುತ್ತಾರೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್, ಜನತಾದಳಗಳಂತಹ ಪಕ್ಷಗಳ ಒಳಗೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಾರ್ಗ ಮುಚ್ಚಿ ಹೋಗಿದೆ.
ಹಾಗಾದರೆ ಜನರು ಅದಕ್ಷ, ಭ್ರಷ್ಟ, ದುರಾಡಳಿತವನ್ನು ಸಹಿಸಿಕೊಂಡೇ ಇರಬೇಕೇ ? ಒಂದು ಪಕ್ಷ ಸರಿಯಿಲ್ಲವೆಂದು ಮತ್ತೊಂದು ಪಕ್ಷವನ್ನು ಆರಿಸಿ ತಂದರೆ ಸಚಿವ ಸಂಪುಟ ರಚನೆ, ದಕ್ಷತೆ, ಪ್ರಾಮಾಣಿಕತೆ,ಕೆಲಸದ ವಿಧಾನಗಳಲ್ಲಿ ಯಾವ ಬದಲಾವಣೆಯೂ ಬರುವುದಿಲ್ಲ.
ಹಾಗಾದರೆ ಈ ಬೃಹತ್ ಸಮಸ್ಯೆಯ ನಿವಾರಣೆಯ ಮಾರ್ಗವೇನು ? ಇದು ನಮ್ಮ ನಿಮ್ಮಂತಹವರೆಲ್ಲರ ಪ್ರಶ್ನೆ. ಜನ ಸಾಮಾನ್ಯರ ಅಳಲು. ಆದ್ದರಿಂದ ಪಕ್ಷಗಳ ಹೊರಗೆ ಪ್ರಜಾಪ್ರಭುತ್ವವನ್ನು ಉತ್ತಮ ಪಡಿಸುವ ಮಾರ್ಗಗಳನ್ನು ಹುಡುಕಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದ ಒಳಗೇ ಪರಿಹಾರ ಮಾರ್ಗವೂ ಇದೆ.
ಉತ್ತಮ ಸಚಿವ ಸಂಪುಟ ರಚಿಸಲು ಅನುವಾಗುವಂತೆ, ಜಾತಿ, ಹಣ, ಅಕ್ರಮಗಳ ಪ್ರಭಾವ ಕುಗ್ಗಿಸುವಂತೆ proportional representation (ಓಟು ಸಿಕ್ಜಷ್ಟು ಸೀಟು, ಪ್ರಮಾಣಾತ್ಮಕ ಪ್ರತಿನಿಧಿತ್ವ) right to recall ( ಚುನಾಯಿತ ಪ್ರತಿನಿಧಿಗಳನ್ನು ವಾಪಸ್ಸು ಕರೆಸಿಕೊಳ್ಳುವ ಹಕ್ಕು) ಎಂಬ ಎರಡು ಮುಖ್ಯ ವಿಧಾನಗಳಿವೆ.
ಈ ವಿಧಾನಗಳನ್ನು ವಿವರವಾಗಿ ಚರ್ಚಿಸಬೇಕಾಗಿರುವುದರಿಂದ ಅದನ್ನು ಮತ್ತೊಂದು ವಾರ ಕೈಗೆತ್ತಿಕೊಳ್ಳೋಣ. ಇಲ್ಲಿ ಅದರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಪದ್ಧತಿಯಲ್ಲಿ ಚುನಾವಣೆಗೆ ನಿಲ್ಲುವುದು ವ್ಯಕ್ತಿಗಳಲ್ಲ. ಹೀಗಾಗಿ ಟಿಕೆಟು ಪಡೆದ ಅಭ್ಯರ್ಥಿ ಇರುವುದಿಲ್ಲ. ಬದಲಾಗಿ ಪಕ್ಷಗಳು ಮಾತ್ರ ಚುನಾವಣೆಯಲ್ಲಿ ತಮ್ಮ ನಿರ್ದಿಷ್ಟ ಕಾರ್ಯಕ್ರಮ, ಪ್ರಣಾಳಿಕೆಗಳನ್ನು ಮುಂದಿಟ್ಟು ಚುನಾವಣೆಗಳಲ್ಲಿ ಸ್ಪರ್ಧಿಸುತ್ತವೆ.
ಇಡೀ ರಾಜ್ಯ ಅಥವಾ ಇಡೀ ದೇಶ ಒಂದೇ ಕ್ಷೇತ್ರವೆಂಬಂತೆ ಪಕ್ಷಗಳಿಗೆ ಮತದಾನ ಮಾಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿ, ಅವರ ಜಾತಿ, ಮತ ಗಣನೆಗೆ ಬರುವುದಿಲ್ಲ. ಆದರೆ ಚುನಾವಣೆಗೆ ಮೊದಲೇ ಪ್ರತಿ ಪಕ್ಷವೂ ತನಗೆ ಸಿಕ್ಕಷ್ಟು ಮತಗಳ ಪ್ರಮಾಣಕ್ಕನುಗುಣವಾಗಿ ವಿಧಾನ ಸಭಾ ಅಥವಾ ಲೋಕಸಭಾ ಸದಸ್ಯರಾಗುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.
ಈ ಪಟ್ಟಿಯಲ್ಲಿ ಇಂಜಿನಿಯರುಗಳು, ವೈದ್ಯರು, ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ಸಮಾಜ ವಿಜ್ಞಾನಿಗಳು ಮೊದಲಾದ ವಿವಿಧ ಖಾತೆಗಳ ದಕ್ಷ, ಪರಿಣಾಮಕಾರಿ ಕೆಲಸಕ್ಕೆ ಅಗತ್ಯವಿರುವ ತಜ್ಞರನ್ನು ಸೂಚಿಸಬಹುದು. ಇಂತಹ ಪದ್ಧತಿಯಲ್ಲಿ ದಲಿತರ, ಮಹಿಳೆಯರ, ರೈತರ, ಕಾರ್ಮಿಕರ ನಿರ್ದಿಷ್ಟ ಪ್ರಮಾಣ ಇರಬೇಕೆಂಬ ಮೀಸಲಾತಿ ತರಬಹುದು. ಕ್ಷೇತ್ರಗಳಲ್ಲಿ ಬಲಾಢ್ಯ ಜಾತಿಗಳ ಬಲಾಢ್ಯರು ಮಾತ್ರ ಆಯ್ಕೆಯಾಗುವ ಇಂದಿನ ಅನಿವಾರ್ಯತೆ ತಗ್ಗುತ್ತದೆ.

ಸಚಿವರಾದ ಮೇಲೆ, ಶಾಸಕರಾಗಿ ಆಯ್ಕೆಯಾದ ಮೇಲೆ ಅವರು ದಕ್ಷರಾಗಿ ಕೆಲಸ ಮಾಡದಿದ್ದರೆ, ಭ್ರಷ್ಟರಾದರೆ ಅವರನ್ನು ವಾಪಸು ಕರೆಸಿಕೊಳ್ಳುವ ತಮ್ಮ ಹಕ್ಕು ಚಲಾಯಿಸಿ ಮರು ಚುನಾವಣೆ ನಡೆಸಬೇಕೆಂದು ಚುನಾವಣಾ ಕಮಿಷನ್‌ಗೆ ಅರ್ಜಿ ಕೊಡಬಹುದು. ಈ ಭಯದ ಕತ್ತಿ ಚುನಾಯಿತ ಪ್ರತಿನಿಧಿಗಳ ಮೇಲೆ ಯಾವಾಗಲೂ ತೂಗುತ್ತಿರುತ್ತದೆ.
ಈ ಪದ್ಧತಿಗಳು ಈಗಾಗಲೇ ವಿವಿಧ ರೂಪಗಳಲ್ಲಿ 80 ಕ್ಕಿಂತ ಹೆಚ್ಚು ದೇಶಗಳಲ್ಲಿ ಜಾರಿಯಲ್ಲಿವೆ. ಇಂತಹ ಕ್ರಮಗಳು ಪ್ರಜಾಪ್ರಭುತ್ವವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸಹಾಯ ಮಾಡುತ್ತವೆ. ಭ್ರಷ್ಟತೆ, ಬಲಾಢ್ಯರ ಹಿತಗಳಿಗಾಗಿ ಕೆಲಸ ಮಾಡುವ ರಾಜಕೀಯ ಪಕ್ಷಗಳು ಈ ಪದ್ಧತಿಯನ್ನು ತಾವಾಗಿ ತರಲಾರವು. ಆದ್ದರಿಂದ ಜನತೆ ಒಕ್ಕೊರಲಿನಿಂದ ಇಂತಹ ಪರಿಣಾಮಕಾರಿ ಪದ್ಧತಿಗಳು ಜಾರಿಗೆ ಬರಬೇಕೆಂದು ಒತ್ತಾಯ ಹೇರಬೇಕಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಜನತೆಯ ಹೋರಾಟಗಳಿಂದ ವೆನೆಜುವೆಲಾ ಮತ್ತು ಬೊಲಿವಿಯಾದಲ್ಲಿ ಈ ಪದ್ಧತಿಗಳು ಜಾರಿಯಲ್ಲಿವೆ. ಚಿಲಿ ದೇಶ ಹೊಸ ಸಂವಿಧಾನ ರಚಿಸಿ ಈ ಪದ್ಧತಿಗಳನ್ನು ಜಾರಿಗೆ ತರಲು ಹೊರಟಿದೆ. ಈ ಅನುಭವಗಳಿಂದ ಭಾರತದ ಜನತೆ ಸ್ಫೂರ್ತಿ ಪಡೆಯಲಿ. ಹೋರಾಟದಿಂದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲಿ ಎಂದು ಹಾರೈಸೋಣ. ಅದಕ್ಕಾಗಿ ಜನರಲ್ಲಿ ಅರಿವು ಮೂಡಿಸೋಣ.






0 Comments