ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಇಂದಿನ ಆಯುರ್ವೇದದ ದುಸ್ಥಿತಿ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

54


ಇತ್ತೀಚಿನ ಎರಡು ಆಯುರ್ವೇದ ವೈದ್ಯದ ಸಂಶೋಧನ ಪ್ರಬಂಧಗಳು, ಅಂತಾರಾಷ್ಟ್ರೀಯ ಸಂಶೋಧನಾ ಪ್ರಬಂಧಗಳ ಪತ್ರಿಕೆ ಎಂದು ಹೇಳಿಕೊಳ್ಳುವುಗಳಲ್ಲಿ ಪ್ರಕಟವಾದವುಗಳ “ಸಂಶೋಧನೆ”ಯಲ್ಲಿ ರೋಗಗಳ ಕಾರಣಗಳ ವಿವರ ಹೀಗಿವೆ:

ಮೂಲವ್ಯಾಧಿ – ಪೈಲ್ಸ್‌ಗೆ ಹಿಂದಿನ ಜನ್ಮದಲ್ಲಿ ಸೋದರರಿಗೆ ಆಸ್ತಿ ವಂಚನೆ ಮಾಡುವುದು ಮತ್ತು ಕೊಲ್ಲುವುದು ಸರ್ಪರೋಗ – ಹರ್ಪಿಸ್ – ಹಿಂದಿನ ಜನ್ಮದಲ್ಲಿ ರಾಜನ,  ಒಡೆಯರ ಕೊಲೆ ಗುಲ್ಮ, ಹೊಟ್ಟೆಯಲ್ಲಿ ದೊಡ್ಡ ಗಡ್ಡೆ-ಹಿಂದಿನ ಜನ್ಮದಲ್ಲಿ ತಂದೆಗೆ ಗೌರವ ಕೊಡದಿರುವುದು, ಬೈಯ್ಯುವುದು, ಸರಿಯಾಗಿ ಊಟ, ಬಟ್ಟೆ ಕೊಡದಿರುವುದು, ಮನೆಯಿಂದ ಹೊರಹಾಕುವುದು

ಉದರ, ಹೊಟ್ಟೆಯಲ್ಲಿ ನೀರು ವಾಯು ತುಂಬಿ ಊದಿಕೊಳ್ಳುವುದು ಇತ್ಯಾದಿ-ತಾಯಿಗೆ ಗೌರವ ಕೊಡದಿರುವುದು, ಊಟ, ಬಟ್ಟೆ ಕೊಡದಿರುವುದು ಹೊರ ಹಾಕುವುದು ಇತ್ಯಾದಿಪ್ರದರ, ಯೋನಿಯಿಂದ ಅತಿಹೆಚ್ಚು ಬಿಳಿ ದ್ರವ, ರಕ್ತ ಬರುವುದು- ಗಂಡನಿಗೆ ಗೌರವ ಕೊಡದಿರುವುದು, ಸರಿಯಾಗಿ ಊಟ ಕೊಡದಿರುವುದು, ಗಂಡನ ಸೇವೆ ಮಾಡದಿರುವುದು ಇತ್ಯಾದಿ ಯಕೃತ್, ಲಿವರ್ ರೋಗ – ಗರ್ಭಪಾತ ಮಾಡಿಸಿಕೊಳ್ಳುವುದು.

ಮಧುಮೇಹ, ಸಕ್ಕರೆಕಾಯಿಲೆ-ಉಪಾಧ್ಯಾಯರಿಗೆ ಗೌರವ ಕೊಡದಿರುವುದು, ಉಪಾಧ್ಯಾಯರ ಆಸ್ತಿಯನ್ನು ಆಕ್ರಮಿಸುವುದು, ಅವರ ಮನೆಯನ್ನು ಸುಡುವುದು, ಅವರ ಬಂಧುಗಳನ್ನು ಕೊಲೆ ಮಾಡುವುದು.

ಹೀಗೆ ಹಲ ಹಲವು ಹಿಂದಿನ ಜನ್ಮದ ಕರ್ಮಗಳಿಗೆ ಮುಂದಿನ‌ ಜನ್ಮಗಳಲ್ಲಿ ಉಂಟಾಗುವ ರೋಗಗಳ ವಿವರಗಳಿವೆ. ಈ ರೋಗಗಳು ಒಂದು ಜನ್ಮದಲ್ಲಿ ಬಾಧಿಸಿ ನಿಲ್ಲುವುದಿಲ್ಲವಂತೆ. ಹಲವು ಜನ್ಮಗಳಲ್ಲಿ ಬಾಧಿಸುತ್ತವಂತೆ. ಅವುಗಳ ಕೆಲವು ಉದಾಹರಣೆಗಳು ಹೀಗಿವೆ:

ಲಿವರ್ ರೋಗ – 3 ಜನ್ಮ
ಮೂಲವ್ಯಾಧಿ (ಪೈಲ್ಸ್) ರಕ್ತಬೇಧಿ, ಸರ್ಪಸುತ್ತು – 4 ಜನ್ಮ
ಯೋನಿಸ್ರಾವ, ಹುಚ್ಚುತನ, ನಿತ್ಯ ಕೆಮ್ಮು – 5 ಜನ್ಮ
ಕಾಮಾಲೆ ರೋಗ (ಜಾಂಡೀಸ್), ಹೊಟ್ಟೆನೋವು, ಕಣ್ಣಿನ ರೋಗಗಳು, ಬಂಜೆತನ – ಜನ್ಮ
ಗರ್ಭದ ರೋಗಗಳು – 9 ಜನ್ಮ
ಹೊಟ್ಟೆಯ ಗಡ್ಡೆ, ಹೊಟ್ಟೆ ಊದಿಕೊಳ್ಳುವುದು – 12 ಜನ್ಮ
ಕುಷ್ಟರೋಗ, ಮಧುಮೇಹ – 20 ಜನ್ಮ

ಇನ್ನೂ ಹೀಗೆ ಬಂಜೆತನಕ್ಕೆ ಮೊದಲ ಜನ್ಮದಲ್ಲಿ, ಎರಡನೆಯ ಜನ್ಮ ಹೀಗೆ ಎಂಟನೆಯ ಜನ್ಮದಲ್ಲಿ ಯಾವ್ಯಾವ ರೂಪದಲ್ಲಿ ಕಾಡುತ್ತದೆ. ಬರೀ ಹೆಣ್ಣುಮಕ್ಕಳೇ ಹುಟ್ಟುವುದು, ಮಕ್ಕಳೆಲ್ಲ ಹುಟ್ಟಿ ಸಾಯುವುದು, ಮಕ್ಕಳೇ ಹುಟ್ಟದಿರುವುದು ಇತ್ಯಾದಿ ವಿವಿಧ ರೂಪಗಳನ್ನು ಕೂಡಾ ವಿವರಿಸಲಾಗಿದೆ.

ಇದು ಕಶ್ಯಪ ಸಂಹಿತೆ ಎಂಬ ಗ್ರಂಥದ ವಿವಿಧ ಹಸ್ತಪ್ರತಿಗಳನ್ನು ಅಧ್ಯಯನ ಮಾಡಿದಾಗ ಅವುಗಳಲ್ಲಿನ‌ ಅಪ್ರಕಟಿತ ಭಾಗದಲ್ಲಿ ಇದೆ ಎಂದು ಈ ಸಂಶೋಧಕರು ಕಂಡುಕೊಂಡ ವಿವರಣೆ. ಈ ಕಶ್ಯಪ ಸಂಹಿತೆಯನ್ನು, ಇಂದಿನ ಆಯುರ್ವೇದ ವಿದ್ವಾನ್‌ಗಳು, ಆಯುರ್ವೇದ ಕಾಲೇಜು, ವಿವಿಗಳು ಚರಕ, ಶುಶ್ರುತರ ಸಂಹಿತೆಯ ಜೊತೆಯಲ್ಲಿಯೇ ಪ್ರಸ್ತಾಪ ಮಾಡುತ್ತಾರೆ. ಅದನ್ನು ಈ ಸಂಸ್ಥೆಗಳ ಪದವಿಗಳ ಒಂದು ಪಠ್ಯ ಪುಸ್ತಕವಾಗಿಸಿದ್ದಾರೆ.  ಆದ್ದರಿಂದ ಈ ಸಂಹಿತೆಯನ್ನು ಗಮನಿಸುವುದು ಅಗತ್ಯವಾಗಿದೆ. ಚರಕ, ಶುಶ್ರುತ ಸಂಹಿತೆಗಳು ಮತ್ತು ಪ್ರಾಚೀನ ವೈದ್ಯಕೀಯದ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಿದವರು ಈ ಸಂಹಿತೆಗಳು ಪ್ರಾಚೀನ ಕಾಲದ ಗ್ರಂಥಗಳಲ್ಲ, ತೀರಾ ಇತ್ತೀಚಿನದು ಎಂದು ಹೇಳಿದ್ದಾರೆ. ಆದರೆ ಈ ಹೊಸ ಆಯುರ್ವೇದ ಪ್ರಬಂಧದಲ್ಲಿ ಇದರಲ್ಲಿರುವ ಮಾಹಿತಿಗಳು ಓಲೆ ಗರಿ ಗ್ರಂಥಗಳಲ್ಲಿ ಅಡಗಿದ್ದು ಅಪ್ರಕಟಿತವಾದಂತಹವು. ಈಗ ಹೊಸತಾಗಿ ಅದರ ಅಧ್ಯಯನ ಮಾಡಿದ್ದೇವೆ ಎಂದು ಅವುಗಳನ್ನು ಮಂಡಿಸಿದ್ದಾರೆ. ಮುಂದಿನ 20 ಜನ್ಮಗಳವರೆಗೂ ಯಾವ ಯಾವ ಜನ್ಮಗಳಲ್ಲಿ ಏನಾಗುತ್ತದೆ ಎಂಬ ಸಂಗತಿಗಳನ್ನು ಕಶ್ಯಪ ಮಹರ್ಷಿಗಳು ಹೇಗೆ ಕಂಡುಕೊಂಡರೋ ಏನೋ. ಚರಕ, ಶುಶ್ರುತ ಸಂಹಿತೆಗಳು ಇಂತಹ ಸಂಶೋಧನೆಗಳಿಗೆ ಕೈ ಹಾಕಿಲ್ಲ. ಅದರಲ್ಲಿ ರಾಜರ, ಪುರೋಹಿತರ ಬಹಿಷ್ಕಾರದಿಂದ ತಪ್ಪಿಸಿಕೊಳ್ಳಲು ಒಂದಿಷ್ಟು ಕಂದಾಚಾರಗಳ ಮೇಲೊಗ್ಗರಣೆ ಸೇರಿಸಿದ್ದರೂ ಈ ಪ್ರಮಾಣದಲ್ಲಿ ಖಂಡಿತಾ ಇಲ್ಲ.

ಯಾವ ಪಾಪಕರ್ಮದಿಂದ ಯಾವ ರೋಗ ಉಂಟಾಗುತ್ತದೆಂಬ ಮೇಲಿನ ವಿವರಗಳನ್ನು ನೋಡಿದರೆ ಮುಂದಿನ ಜನ್ಮಗಳಲ್ಲಿ ರೋಗದ ಭಯ ಹುಟ್ಟಿಸುವ ಮೂಲಕ ತಂದೆ, ತಾಯಿ, ಸೋದರ, ಗುರು ಇವರಿಗೆ ಬದುಕು ಗೌರವ ತೋರುವಂತೆ  ಮಾಡಬೇಕು ಎಂಬ ಉದ್ದೇಶವಿದೆ ಎಂದೇನಾದರೂ ಸಮರ್ಥನೆ ಮಾಡಿಕೊಳ್ಳಬಹುದಾಗಿತ್ತೇನೋ! ಆದರೆ ಅದರ ಫಲವಾಗಿ ಈ ಜನ್ಮದಲ್ಲಿಯಾದರೂ ತಂದೆ, ತಾಯಿಗಳಿಗೆ, ಗುರುವಿಗೆ ಗೌರವ ತೋರಿಸಿರಿ ಎಂಬ ಉಪದೇಶವಾದರೂ ಇದೆಯೇ? ಈ ಪ್ರಬಂಧದ ಕತೃಗಳು ಅದರ ಬಗ್ಗೆ ಏನೂ ಹೇಳಿಲ್ಲ.

ಬದಲಾಗಿ  ಹಿಂದಿನ ಜನ್ಮದ ಪಾಪಕರ್ಮಗಳ ಫಲವಾಗಿ ಕಾಡುತ್ತಿರುವ ಈ ರೋಗಗಳಿಗೆ ಪರಿಹಾರವೇನು ಎಂದರೆ ದಾನಕರ್ಮ.
ರೋಗ ಪರಿಹಾರದ ನಿರ್ದಿಷ್ಟ ಉದ್ದೇಶಕ್ಕಾಗಿ ಈ ಕೆಳಗಿನಂತೆ ವಸ್ತುಗಳನ್ನು ನೈಮಿತ್ತಿಕ ದಾನ ಮಾಡಬೇಕಂತೆ:

ಮೂತ್ರ ರೋಗ – ಮಂಚ, ಛತ್ರಿ, ಹೋರಿ, ಬೆಲ್ಲ ಹಾಗೂ ಸೇವಕರ ದಾನ.
ನಿತ್ಯ ಕೆಮ್ಮು – ಸೇವಕ, ಮೇಕೆ, ಉದ್ದು ಧಾನ್ಯ, ಬೆಲ್ಲ ಲಿವರ್ ರೋಗ – ಪಾದರಸ, ಎಮ್ಮೆ, ಮೇಕೆ, ತಾಮ್ರದಿಂದ ಮಾಡಿದ ಶಿವನ ಮೂರ್ತಿ, ಒಂದು ಪಾತ್ರೆಯ ತುಂಬಾ ಎಳ್ಳು.

ಹೀಗೆ ಹಲವು ರೋಗಗಳಿಗೆ ಬ್ರಾಹ್ಮಣರಿಗೆ ಮಾಡುವ ದಾನವೇ ಹಿಂದಿನ ಜನ್ಮದ ಪಾಪಕರ್ಮವನ್ನು ತೊಡೆದು ರೋಗ ನಿವಾರಣೆಯ ದಾರಿ. ಇದಕ್ಕೆ ಪರ್ಯಾಯವಾಗಿ ಶಿವನಿಗೆ  ವಿವಿಧ ಪ್ರಮಾಣದ ರುದ್ರಾಭಿಷೇಕ, ವಿಷ್ಣುವಿಗೆ ತುಳಸಿ ಮತ್ತು ಹೂಗಳಿಂದ ಪೂಜೆಯನ್ನು ಕೂಡಾ ಸೂಚಿಸಲಾಗಿದೆ. ಆದರೆ ಅದರ ಪ್ರಮಾಣ ದಂಗುಬಡಿಸುವಂತಹುದು. ಮಧುಮೇಹಕ್ಕೆ 4 ಲಕ್ಷ ಕೊಡ ನೀರನ್ನು ಶಿವನ ಪಂಚಾಕ್ಷರಿ ಮಂತ್ರದ (ನಮಃ ಶಿವಾಯ) ಜಪ ಮಾಡುತ್ತಾ ಲಿಂಗದ ತಲೆಯ ಮೇಲೆ ಅಭಿಷೇಕ ಮಾಡಬೇಕು. ಶ್ವಾಸರೋಗಕ್ಕೆ 2 ಲಕ್ಷ ಕೊಡ.

ವಿಷ್ಣುವಿಗೆ ಬಂಜೆತನ, ಹೊಟ್ಟೆಯ ಗಡ್ಡೆ, ಹೊಟ್ಟೆ ಊದಿಕೊಳ್ಳುವುದು ಇವುಗಳ ಪರಿಹಾರಕ್ಕೆ ಕೇವಲ ಒಂದು ಕೋಟಿ ಬಾರಿ ತುಳಸಿ ಎಲೆಗಳು ಮತ್ತು ಹೂವಿನ ಪೂಜೆ, ಮತ್ತೆ ಕೆಲವು ರೋಗಗಳಿಗೆ 16 ಲಕ್ಷ ಬಾರಿ, ಮತ್ತೆ ಕೆಲವಕ್ಕೆ 8 ಲಕ್ಷ ಬಾರಿ.

ಈ ಪ್ರಮಾಣದ ಪರಿಹಾರಗಳ ಸೂಚನೆಗಳನ್ನು ನೋಡಿದರೆ ‘ಸಾಕಪ್ಪಾ ಸಾಕು, ನಿಮಗೆ ಅದೇನು ಎಮ್ಮೆಯೋ, ಆಡೋ, ಹೋರಿಯೋ, ದನವೋ ಮತ್ತೇನೋ ದಾನ ಮಾಡಿಬಿಡುವುದೇ ಇವುಗಳಿಗಿಂತ ಸರಳ’ ಎನ್ನುವ ಭಾವನೆ ಉಂಟು ಮಾಡುವ ಉದ್ದೇಶ ಕಶ್ಯಪ ಸಂಹಿತೆಯ ಕತೃವಿನದು ಎಂಬುದು ಎದ್ದು ಕಾಣುತ್ತದೆ.

ಒಂದು ರೋಗಕ್ಕೆ ಎಮ್ಮೆ ಮತ್ತೊಂದು ರೋಗಕ್ಕೆ ಹೋರಿ, ಮತ್ತೊಂದಕ್ಕೆ ಆಡು, ಎಷ್ಟು ಲಕ್ಷ ಬಾರಿ ರುದ್ರಾಭಿಷೇಕ ಎಂಬುದನ್ನು ಕಶ್ಯಪ ಮಹರ್ಷಿಗಳು ತಮ್ಮ ಅಂತಃಚಕ್ಷುವಿನಿಂದ ಹೇಗೆ ಲೆಕ್ಕಿಸಿ ಕಂಡುಕೊಂಡರೋ ಅದರ ವಿವರಗಳು ಆ ಸಂಹಿತೆಯಲ್ಲಿ ಇದ್ದಂತಿಲ್ಲ.

ಇಲ್ಲಿ ಸೂಚಿತವಾದ ಪ್ರಾಯಶ್ಚಿತ್ತಗಳ ಪ್ರಮಾಣದಲ್ಲಿ ಎಷ್ಟು ಕಡಿಮೆಯಾದರೆ ಈ ರೋಗದ ಎಷ್ಟು ಪ್ರಮಾಣ ಇನ್ನೂ ಉಳಿದು ರೋಗಿಯನ್ನು ಕಾಡುತ್ತದೆ ಎಂಬ ವಿವರಣೆಯೂ ಇಲ್ಲ.

ಈ ಪ್ರಬಂಧಕಾರರು ಈ ಸಂಹಿತೆಯ ಪ್ರತಿಗಳನ್ನು ಶೋಧಿಸಿ ಅವುಗಳಲ್ಲಿ ಅವರಿಗೆ ಕಂಡದ್ದನ್ನು ಮುಂದಿಟ್ಟಿದ್ದಾರೆ. ಇದು ಚರಕ ಸಂಹಿತೆಯಲ್ಲಿ, ವಾಗ್ಭಟರ ಅಷ್ಟಾಂಗ ದರ್ಶನದಲ್ಲಿ ಒಂದೆರಡು ವಾಕ್ಯಗಳಲ್ಲಿ ಹೇಳಿರುವ ಅಂಶಗಳ ವಿಸ್ತಾರ ವಿವರಣೆ ಇದು. ಇದರ ಮೇಲೆ ವೇದಗಳಲ್ಲಿರುವ ಸಂಕ್ಲಿಷ್ಟ ಶ್ಲೋಕಗಳನ್ನು ಸಾಮಾನ್ಯ ಜನರಿಗೆ ಅರ್ಥೈಸಲೆಂದು ವೇದವ್ಯಾಸರೇ ರಚಿಸಿರುವ ಪುರಾಣಗಳು ಮುಖ್ಯವಾಗಿ ಭಾಗವತ ಮತ್ತು ಗರುಡ ಪುರಾಣಗಳ ಪ್ರಭಾವ ಇದೆಯೆಂದು ನಮ್ರವಾಗಿ ಸೂಚಿಸಿದ್ದಾರೆ.

ಈ ಪ್ರಬಂಧದ ಕತೃಗಳಲ್ಲಿ ಒಬ್ಬರು ಗುಜರಾತ್  ಆಯುರ್ವೇದ ವಿಶ್ವವಿದ್ಯಾಲಯದ, ಮತ್ತೊಬ್ಬರು ಕೇರಳದ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಮತ್ತೊಬ್ಬರು ಪಿಎಚ್‌.ಡಿ ವಿದ್ಯಾರ್ಥಿನಿ.

ಮತ್ತೊಂದು ಪ್ರಬಂಧದ ಬಗ್ಗೆ ಹೆಚ್ಚು ವಿವರಿಸ ಹೋಗುವುದಿಲ್ಲ. ಇದೇ ಧಾಟಿಯಲ್ಲಿ ಇರುವ ದೇವರು, ಕರ್ಮ, ಪ್ರಾಯಶ್ಚಿತ್ತಗಳನ್ನು ರೋಗದ ಕಾರಣ, ಪರಿಹಾರಗಳನ್ನಾಗಿ ವಿವರಿಸುತ್ತದೆ. ಆದರೆ ಈ‌ ಪ್ರಬಂಧಕಾರರು ಬಹಳ ಸ್ಪಷ್ಟವಾಗಿ ರೋಗಗಳ ಪರಿಹಾರಕ್ಕೆ ತ್ರಿವಿಧ ಚಿಕಿತ್ಸೆಗಳನ್ನೂ ಕೈಗೊಳ್ಳಬೇಕು. ಅಂದರೆ ಚರಕ, ಶುಶ್ರುತ ಸಂಹಿತೆಗಳ ವೈಜ್ಞಾನಿಕ ವೈದ್ಯಕೀಯದ ಜೊತೆಗೆ ದೈವ ವ್ಯಾಪಾಶ್ರಯದ (ದೇವರನ್ನು ಆಧರಿಸಿದ ಮಂತ್ರ, ಪೂಜೆ ಇತ್ಯಾದಿಗಳ) ಚಿಕಿತ್ಸೆಯನ್ನೂ ಕೈಗೊಂಡರೆ ಮಾತ್ರ ರೋಗ ಪರಿಹಾರ ಎಂದು ಸೂಚಿಸುತ್ತಾರೆ. ಬೇರೆ ಕೆಲವು ರೀತಿಯ ಪ್ರಾಯಶ್ಚಿತ್ತದ ವಿಧಾನಗಳನ್ನು ಸೂಚಿಸಿದ್ದಾರೆ.

ಈ ಪ್ರಬಂಧದ ಪ್ರಬಂಧಕಾರರು ಉತ್ತರ ಪ್ರದೇಶದ ಆಯುರ್ವೇದ ಕಾಲೇಜುಗಳ ಮೂರು ಸಹಾಯಕ ಪ್ರಾಧ್ಯಾಪಕರು ಮತ್ತು ಒಬ್ಬರು ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು.

ಈ ಪ್ರಬಂಧಕಾರರಿಗೆ ಅವರ ನಿರೀಕ್ಷೆಯ ಪದೋನ್ನತಿಗಳು ದೊರಕಿವೆಯೋ ಇಲ್ಲವೋ ಎಂಬುದು ಬೇರೆ “ಸಂಶೋಧನೆ”ಯ ವಿಷಯ.
ಆದರೆ ಆಯುರ್ವೇದಕ್ಕೆ ವಿಶ್ವಮಾನ್ಯತೆ ದೊರಕಿಸಿಕೊಡಬೇಕೆಂದು ತವಕಿಸುವ ಸಮಯದಲ್ಲಿ ಇಂತಹ ಸಂಶೋಧನೆಗಳು ಪ್ರಾಧ್ಯಾಪಕರು, ಸಹಪ್ರಾಧ್ಯಾಪಕರಿಂದ ಉದುರಿದರೆ ವಿಶ್ವದ ವೈದ್ಯಕೀಯ ಸಮೂಹ ಗಹಗಹಿಸಿ ನಗುವುದಿಲ್ಲವೇ?

ಇಂತಹ ಪ್ರಬಂಧಗಳ ಹುಲುಸಾದ ಕಳೆ ಬೆಳೆಯತೊಡಗಿದ್ದು ಇತ್ತೀಚಿನ ವರ್ಷಗಳಲ್ಲಿ. ಇದರಿಂದ ಭಾರತದ ಹಲವು ಪ್ರಾಮಾಣಿಕ ಆಯುರ್ವೇದ ವೈದ್ಯರು, ವಿದ್ವಾಂಸರುಗಳು ಆಯುರ್ವೇದಕ್ಕೆ ವಿಶ್ವಮಾನ್ಯತೆ ದೊರಕಿಸಿಕೊಳ್ಳಲು ಆರೇಳು ದಶಕಗಳಿಂದ ನಡೆಸುತ್ತಿರುವ ಅವಿರತ ಪ್ರಯತ್ನಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ.

ಮೋದಿಯವರ ಸಂಶೋಧನೆಗಳು-
ಈ ಹುಲುಸು ಕಳೆಯ ಬೆಳವಣಿಗೆಗೆ ನೀರು, ಗೊಬ್ಬರ ಹಾಕಿದ್ದು ಈಗಿನ ಪ್ರಧಾನಿಯವರು, ತಾವು ಪ್ರಧಾನಿಯಾದ ಕೆಲವೇ ತಿಂಗಳುಗಳಲ್ಲಿ 2014ರಲ್ಲಿ. ಭಾರತದ ಪ್ರಜ್ಞಾವಂತರೆಲ್ಲರಿಗೂ ನೆನಪಿರಬಹುದು ಒಂಬತ್ತು ವರ್ಷಗಳ ಹಿಂದೆ ಮೋದಿಯವರು ಮುಂಬಯಿಯಲ್ಲಿ ವೈದ್ಯರ ಸಮ್ಮುಖದಲ್ಲಿ ಗಣೇಶನ ತಲೆಯ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಹಾಗೂ ಗರ್ಭದ ಆಚೆ ಜನಿಸಿದ ಕರ್ಣನ ಕಾಲದ ಜೆನೆಟಿಕ್ ವಿಜ್ಞಾನದ ಬಗ್ಗೆ, ಆ ಕಾಲದ ವಿಜ್ಞಾನದ ಉನ್ನತ ಬೆಳವಣಿಗೆಯ ಬಗ್ಗೆ ಭಾರತ ಹೆಮ್ಮೆಪಡಬೇಕು ಎಂದು ಘೋಷಿಸಿದ್ದು.

ಪ್ರಧಾನಿಯಂತಹ ದೇಶದ ಅತ್ಯಂತ ಮಹತ್ವದ ಸಾಂವಿಧಾನಿಕ ಹುದ್ದೆಯನ್ನಲಂಕರಿಸಿದವರ ಬಾಯಿಂದ ಇಂತಹ ಮುತ್ತುಗಳು ಉರುಳಿದ್ದೇ ತಡ, ತಕ್ಕೋ ಶುರುವಾಯ್ತು ಇಂತಹ ಮಾತುಗಳ ಮಹಾಪೂರ. ಎರಡು ಕಡೆಯಿಂದ ಎರಡು ರೀತಿಯ ವ್ಯಕ್ತಿಗಳಿಂದ. ಒಂದು ನಾವೆಲ್ಲರೂ ಊಹಿಸುವಂತೆ ಬಿಜೆಪಿಯ ರಾಜಕಾರಣಿಗಳಿಂದ. ಇದಕ್ಕೆ ಮೊದಲು ಬಿಜೆಪಿ ದಶಕಗಟ್ಟಲೆ ಆಡಳಿತ ನಡೆಸಿದ ರಾಜ್ಯಗಳಲ್ಲಾಗಲಿ, ಹಿಂದಿನ ವಾಜಪೇಯಿ ಪ್ರಧಾನಿತ್ವದ ಕೇಂದ್ರ ಸರ್ಕಾರದ ಮಂತ್ರಿಗಳ ಎದೆಯೊಳಗಿದ್ದರೂ ಬಾಯಿಂದ ಇಂತಹ ಮಾತುಗಳು ಉದುರುತ್ತಿರಲಿಲ್ಲ. ಈಗ ಉತ್ತರಾಖಂಡ, ತ್ರಿಪುರಾ ಮೊದಲಾದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಶಿಕ್ಷಣ, ಆರೋಗ್ಯ, ಕೃಷಿ ಮಂತ್ರಿಗಳು, ರಾಜ್ಯಗಳ ಶಿಕ್ಷಣ ಮತ್ತು ಇತರ ಕೆಲವು ಖಾತೆಗಳ ಮಂತ್ರಿಗಳು ತಾವು ವಿಜ್ಞಾನಕ್ಕೆ, ಶಿಕ್ಷಣಕ್ಕೆ ಸಂಬಂಧಿಸಿದ ಸಭೆ, ವಿಚಾರಸಂಕಿರಣಗಳನ್ನು ಉದ್ಘಾಟಿಸುವಾಗ ಇಂತಹ ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ದಾಖಲಾದ “ಮಹಾಶೋಧ”ಗಳ ಬಗ್ಗೆ ಹೆಮ್ಮೆಯಿಂದ ಹೇಳುವುದು ಮಾತ್ರವಲ್ಲ, ಇವುಗಳ ಬಗ್ಗೆ ಸಂಶೋಧನೆ ನಡೆಸಬೇಕೆಂದು ಸೂಚನೆ, ನಿರ್ದೇಶಗಳನ್ನು ಕೊಡತೊಡಗಿದರು. ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಭಾರತದ ಇತಿಹಾಸ ಸಂಶೋಧನಾ ಪರಿಷತ್ತು ಮತ್ತು ಇತರ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳ ಪಠ್ಯಕ್ರಮ ನಿರೂಪಕ ಸಮಿತಿಗಳಿಗೆ ಇಂತಹ ಸಂಶೋಧನೆಗಳಿಗೆ ಪ್ರಾಶಸ್ತ್ಯ ನೀಡುವವರ ನೇಮಕಗಳಾದವು. ಈ ಸಂಸ್ಥೆಗಳಿಂದ  ಈ ವಿಷಯಗಳಿಗೆ ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳು ಹೊರಡತೊಡಗಿದವು, ನಿಯಮಗಳಾಗತೊಡಗಿದವು. ಜ್ಯೋತಿಷ್ಯದಂತಹ ವಿಷಯಗಳು ಸ್ನಾತಕೋತ್ತರ ವಿಭಾಗಗಳ ಅಧ್ಯಯನ ವಿಷಯವಾಯಿತು.

ರಾಜಕಾರಣಿಗಳ ಹಾಗೂ ಸರ್ಕಾರಿ ಸಂಸ್ಥೆಗಳ ಇಂತಹ ನಡೆ ಒಂದು ಕಡೆಯಾದರೆ ವಿಜ್ಞಾನಿಗಳದೇ ಆದ ಭಾರತದ ವಿಜ್ಞಾನ ಮಹಾಧಿವೇಶನಗಳಲ್ಲಿ, ಇತಿಹಾಸ ಮಹಾ ಸಮ್ಮೇಳನಗಳಲ್ಲಿ  ವಿಜ್ಞಾನಿಗಳೆನಿಸಿಕೊಂಡ ಕೆಲವರಿಂದ ಇಂತಹ “ಸಂಶೋಧನಾ ಪ್ರಬಂಧಗಳು” ಮಂಡಿಸಲ್ಪಡತೊಡಗಿದವು. ಈ ಮಹಾ ಸಂಶೋಧನೆಗಳಿಗೆ ವಿಜ್ಞಾನಿಗಳೆಲ್ಲರೂ ಸಹಮತರಾಗಿರಲಿಲ್ಲ ನಿಜ. ಆದರೆ ಬಹುಸಂಖ್ಯಾತರು ದನಿ ಎತ್ತುವ ಧೈರ್ಯ ತೋರದೆ ಮೌನವಾಗುಳಿದು ಈ ವಾತಾವರಣಕ್ಕೆ ಪೂರಕವಾಗಿ ವರ್ತಿಸಿದರು, ವರ್ತಿಸುತ್ತಿದ್ದಾರೆ.

ಇಂತಹ ವಾತಾವರಣದಲ್ಲಿ ಆಯುರ್ವೇದ ಚರಕ, ಶುಶ್ರುತ ಸಂಹಿತೆಗಳು ಹಾಕಿಕೊಟ್ಟ ವೈಜ್ಞಾನಿಕ ಶೋಧದ ದಾರಿ ತಪ್ಪತೊಡಗಿದೆ. ಭಾರತದಲ್ಲಿ ಆಯುರ್ವೇದದ ಬಗೆಗಿನ ಎಂಎಸ್ಸಿ, ಪಿಎಚ್‌.ಡಿ ಸಂಶೋಧನಾ ಪ್ರಬಂಧಗಳ ಸಂಖ್ಯೆ 2020ರ ವೇಳೆಗೆ 20,000 ದಾಟಿದೆಯಂತೆ. ಇವುಗಳಲ್ಲಿ ರೋಗಗಳಿಗೆ  ಕರ್ಮಫಲದ ಕಾರಣ ಅನ್ವೇಷಿಸುವ ಹಾಗೂ ದಾನ, ಮಂತ್ರ, ಅಭಿಷೇಕ, ಮಹಾ ಪೂಜೆ, ವ್ರತಗಳ ಪ್ರಾಯಶ್ಚಿತ್ತದ ವಿಧಾನಗಳನ್ನು ಅನ್ವೇಷಣೆ ನಡೆಸಿದ ಮಹಾಪ್ರಬಂಧಗಳೆಷ್ಟೋ ತಿಳಿಯದು. ಇವು ಒಂದು ಕಡೆಯಾದರೆ ಇದೇ ದಾರಿಯಲ್ಲಿ ವಿಶ್ವದ ಅತ್ಯಂತ ಮಹತ್ವದ, ತೀರಾ ಇತ್ತೀಚಿನ ಸಂಶೋಧನೆಗಳೆಲ್ಲವೂ ಭಾರತ ಪ್ರಾಚೀನ ಕಾಲದಲ್ಲಿಯೇ ಸಾಧಿಸಿಬಿಟ್ಟಿದೆ. ಕ್ಯಾನ್ಸರ್ ಸೇರಿದಂತೆ ಎಲ್ಲ ಅಸಾಧ್ಯ ರೋಗಗಳಿಗೂ ಆಯುರ್ವೇದದಲ್ಲಿ, ಯೋಗಾಭ್ಯಾಸಗಳ ಮೂಲಕ ಚಿಕಿತ್ಸೆ ಇದೆ ಎಂಬ ಪೊಳ್ಳು ಹೆಬ್ಬುಬ್ಬೆಯ ಮಾತುಗಳು, ಸಂಶೋಧನೆಗಳು ಮೆರೆಯತೊಡಗಿವೆ. ಇವು ಭಾರತದ ನೈಜ ವೈದ್ಯಕೀಯ ಹಾಗೂ ಇತರ ವಿಜ್ಞಾನಗಳ ಐತಿಹಾಸಿಕ ಮಹತ್ವದ ಶೋಧಗಳಿಗೆ ಕುಂದು ಬರತೊಡಗಿದೆ. ಯಾವುದೇ ಪ್ರಾಥಮಿಕ ಜ್ಞಾನವಿಲ್ಲದೆ ಗಳಹುವುದೇ ಸಂಶೋಧನೆ ಎನಿಸತೊಡಗಿದೆ.

ಆದರೆ ಇಂದಿನ ವಿಶ್ವದಲ್ಲಿ ವೈದ್ಯಕೀಯ ರಂಗದ ಖಾಸಗೀಕರಣ, ಅದರ ಫಲವಾದ ಲಾಭಾತುರತೆ, ದರ್ಲಾಭಾತುರತೆ, ಅನವಶ್ಯಕ ಚಿಕಿತ್ಸೆಗಳು, ಕಾರ್ಪೋರೇಟ್ ಅಧೀನವಾದ ಔಷಧಿಗಳ ಮಿತಿಮೀರಿದ ಬೆಲೆ, ಕಾರ್ಪೋರೇಟ್ ಹಾಗೂ ಇತರ ಖಾಸಗಿ ಆಸ್ಪತ್ರೆಗಳಲ್ಲಿ  ಮನೆಮಾರು ಮಾರಬೇಕೆಂಬಷ್ಟು ವಿಪರೀತ ಚಿಕಿತ್ಸಾ ವೆಚ್ಚ, ಚಿಕಿತ್ಸಾ ವಿಧಾನಗಳ ಅಡ್ಡಪರಿಣಾಮಗಳು ಇವು ಪಾರಂಪರಿಕವಾದ ಅಗ್ಗದ ಸಸ್ಯಾಧಾರಿತ ವೈದ್ಯಕೀಯಕ್ಕೆ ಹೆಚ್ಚು ಆಕರ್ಷಣೆ ಉಂಟಾಗಿದೆ. ಅದರ ಪರಿಣಾಮವಾಗಿ ಚೀನಿ ಅಕ್ಯುಪಂಕ್ಚರ್ ಹಾಗೂ ವೈದ್ಯಕೀಯ, ಭಾರತದ ಯೋಗ ಹಾಗೂ ಆಯುರ್ವೇದ ಇವುಗಳು ಜನಪ್ರಿಯವಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ, ವಸಾಹತು ಆಡಳಿತವನ್ನು ಕಿತ್ತೊಗೆದ ನಂತರ ಚೀನಾ ತನ್ನ ಪಾರಂಪರಿಕ ವೈದ್ಯಕೀಯದ ಉಪಯೋಗ, ಸಂಶೋಧನೆ ಹಾಗೂ ಬೆಳವಣಿಗೆಗೆ, ಚೀನಿ ಔಷಧಿಗಳಿಗೆ ನೀಡಿದ ಮಹತ್ವ ಹಾಗೂ ಹಣ ವಿನಿಯೋಗ ಇಂದು ಅದಕ್ಕೆ ವಿಶ್ವದಲ್ಲಿ ಹೆಚ್ಚಿನ ಮಾನ್ಯತೆ ದೊರಕುತ್ತಿದೆ.

ಈಗಾಗಲೇ ವಿವರಿಸಿರುವಂತೆ ಭಾರತಕ್ಕೆ  ಬ್ರಿಟಿಷರು ಬರುವ ಹಲವಾರು ಶತಮಾನಗಳ ಪೂರ್ವದಲ್ಲಿಯೇ ಆಯುರ್ವೇದ ವೈದ್ಯಕೀಯದ ಸ್ಥಿತಿ ಅವನತಿಯತ್ತ ಸಾಗಿತ್ತು. ಆದರೂ ಸ್ವಾತಂತ್ರ್ಯಾನಂತರದ ಕಾಲದಲ್ಲಿ  ಭಾರತದಲ್ಲಿಯೂ ಹಲವು ವಿದ್ವಾಂಸರು ಆಯುರ್ವೇದವನ್ನು ಪುನರುಜ್ಜೀವನಗೊಳಿಸಬೇಕೆಂಬ ಪ್ರಯತ್ನ ನಡೆಸಿದರು. ಈಗಲೂ ಆಧುನಿಕ ವೈಜ್ಞಾನಿಕ ವೈದ್ಯಕೀಯದ ವ್ಯಾಪಕತೆಯ ನಡುವೆ ಭಾರತದಲ್ಲಿ ಹಾಗೂ ವಿಶ್ವಮಟ್ಟದಲ್ಲಿ ಆಯುರ್ವೇದಕ್ಕೆ ಪ್ರಾಶಸ್ತ್ಯ ದೊರಕಬೇಕೆಂದು ಕೆಲವರು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅವು ಏನೇನೂ ಸಾಲದಾಗಿದೆ. ಈಗ ನಡೆಯುತ್ತಿರುವ ಕಂದಾಚಾರ ವೈಭವೀಕರಣದಿಂದ, ನೈಜ ಸಂಶೋಧನೆಗೆ ಉಂಟಾಗುತ್ತಿರುವ ಸಮಸ್ಯೆಗಳಿಂದ ಈ ಪ್ರಾಮಾಣಿಕ ಪ್ರಯತ್ನಗಳಿಗೆ ಪೆಟ್ಟಾಗತೊಡಗಿದೆ.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

6 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading