
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.
ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.
ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.
ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.
ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.
50
ಆರ್ಯಭಟರ ಶೋಧಗಳ ಮೇಲೆ ವೈದಿಕ ಧಾಳಿ. ಭಾರತದ ಖಗೋಳ, ಗಣಿತ ಸಂಶೋಧನೆಗಳಿಗುಂಟಾದ ಅಪಾರ ನಷ್ಟ.
“ಭೂಗೋಲಃ ಸರ್ವತೋ ವೃತ್ತಃ”
ಭೂಮಿಯೂ ಎಲ್ಲ ದಿಕ್ಕುಗಳಲ್ಲಿಯೂ ಗುಂಡಾಗಿಯೇ ಇದೆ. – ಆರ್ಯಭಟೀಯ ಕೃತಿ.
ಇದು ಯುರೋಪಿನ 17-19 ನೇ ಶತಮಾನದ ನವೋದಯ ಕಾಲದ ಹೊಸ ಶೋಧವಲ್ಲ. ಭಾರತದಲ್ಲಿ ಐದನೇ ಶತಮಾನದಲ್ಲಿದ್ದ ( ಕ್ರಿಶ 476) ಆರ್ಯಭಟನ ಶೋಧ.
ಭೂಮಿ ಗುಂಡಗಿದೆ ಆದರೆ ಚಪ್ಪಟೆಯಾಗಿದೆ (ದೋಸೆಯಂತೆ) ಎಂಬುದು ಬಹುಕಾಲದ ನಂಬಿಕೆಯಾಗಿತ್ತು. ಬೈಬಲಿನ ನಮೂದು ಎಂದು ಎಲ್ಲರೂ ಬಲವಾಗಿ ಅದನ್ನು ನಂಬಿದ್ದರು. ಅದಕ್ಕಿಂತ ಬೇರೆಯಾಗಿ ಯಾರಾದರೂ ಮಾತನಾಡಿದರೆ ಅವರಿಗೆ ಕ್ರಿಶ್ಚಿಯನ್ ಚರ್ಚ್ಗಳ ನೇತಾರರಿಂದ ಎಂತಹ ಶಿಕ್ಷೆ ಸಿಗುತ್ತಿತ್ತು ಎಂಬ ಬಗ್ಗೆ ಗೆಲಿಲಿಯೋನಿಗೆ ನೀಡಿದ ಬಂಧನದ ಶಿಕ್ಷೆ, ಬ್ರನೋ ಎಂಬುವನನ್ನು ಬಹಿರಂಗವಾಗಿ ಸುಟ್ಟ ಉದಾಹರಣೆಗಳು ಬಹಳ ಜನರಿಗೆ ತಿಳಿದಿವೆ. ಯುರೋಪಿನಲ್ಲಿ ಚಪ್ಪಟೆ ಭೂಮಿ ಸಂಘ ಎಂಬ ಒಂದು ಸಂಘವೇ ಇತ್ತು.
ಇದರ ಜೊತೆಗೆ ಮತ್ತೊಂದು ಮುಖ್ಯ ಶೋಧ-
ಸೂರ್ಯ ಪೂರ್ವದಲ್ಲಿ ಹುಟ್ಟುವುದೂ ಇಲ್ಲ,ಪಶ್ಚಿಮದಲ್ಲಿ ಮುಳುಗುವುದೂ ಇಲ್ಲ. ಅದಕ್ಕೆ ಬದಲಾಗಿ ಭೂಮಿ ತನ್ನದೇ ಅಕ್ಷದ ಮೇಲೆ ತಾನೇ ತಿರುಗುತ್ತದೆ. ಹಾಗೆ ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ. ಹಾಗಾಗಿ ಸೂರ್ಯ ,ಚಂದ್ರ, ನಕ್ಷತ್ರಗಳೆಲ್ಲ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವಂತೆ ತೋರಿಕೆಯಾಗುತ್ತದೆ.
ಆದ್ದರಿಂದ ಒಂದೇ ಅಕ್ಷಾಂಶದ ಮೇಲಿದ್ದರೂ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಸೂರ್ಯೋದಯ, ಸೂರ್ಯಾಸ್ಥಗಳಾಗುತ್ತವೆ. ಆದರೆ ಒಂದೇ ರೇಖಾಂಶದ ಮೇಲಿರುವ ಬೇರೆ ಬೇರೆ ಸ್ಥಳಗಳಲ್ಲಿ ಒಂದೇ ಕಾಲಕ್ಕೆ ಸೂರ್ಯೋದಯ ಸೂರ್ಯಾಸ್ತಗಳಾಗುತ್ತವೆ.

ಈ ಪರಿಕಲ್ಪನೆಗಳು ಭೂಮಿಯನ್ನು ಹೊತ್ತು ನಿಂತಿರುವ ಆದಿಶೇಷ ಮೊದಲಾದ ಕತೆ ಪುರಾಣಗಳ ಬಹುಕಾಲದ ನಂಬಿಕೆಗಳಿಗೆ ವಿರುದ್ಧವಾಗಿದ್ದವು. ಆದಿಶೇಷ ಭೂಮಿಯನ್ನು ಯಾವಾಗಲೂ ಹೊತ್ತು ನಿಂತಿರುವಾಗ ಅದು ತನ್ನ ಅಕ್ಷದ ಮೇಲೆ ತಾನೇ ಪ್ರತಿದಿನ ತಿರುಗುವುದು ಎಂದರೇನು ? ಹೇಗೆ ಸಾಧ್ಯ ? ನೀವೇ ಹೇಳಿ !
ಆರ್ಯಭಟರ ಮತ್ತೊಂದು ಮುಖ್ಯ ಅಂಶವೆಂದರೆ ಸೂರ್ಯ ಹಾಗೂ ಚಂದ್ರ ಗ್ರಹಣಗಳ ಕಾರಣಗಳನ್ನು ವಿವರಿಸಿದ್ದು.
“ಛಾದಯತಿ ಶಶಿ ಸೂರ್ಯಂ ಶಶಿನಂ
ಮಹತೀ ಭೂಚ್ಛಾಯಾ” – ಆರ್ಯಭಟೀಯ
(ಸೂರ್ಯಗ್ರಹಣದಲ್ಲಿ) ಚಂದ್ರನು ಅಡ್ಡ ಬಂದು ಮರೆ ಮಾಡುತ್ತಾನೆ. (ಚಂದ್ರ ಗ್ರಹಣದಲ್ಲಿ) ಭೂಮಿಯ ದೊಡ್ಡ ನೆರಳು ಚಂದ್ರನನ್ನು ಮರೆಮಾಡುತ್ತದೆ.
ಹಾಗೆಯೇ “ಭೂಮಿ ಮತ್ತು ಗ್ರಹಗಳು ಸ್ವಯಂ ಬೆಳಕು ಇಲ್ಲದ ಗೋಳಗಳು. ಅವು ತಮ್ಮಷ್ಟಕ್ಕೆ ತಾವು ಕಾಂತಿಹೀನವಾಗಿದ್ದರೂ ಸೂರ್ಯನಿಗೆ ಎದುರಾಗಿರುವ ಅರ್ಧ ಭಾಗಗಳು ತಮ್ಮ ಮೇಲ್ಮೈ ಕ್ಷೇತ್ರಕ್ಕೆ ಅನುಸಾರವಾಗಿ ಪ್ರಕಾಶಮಾನವಾಗಿ ಕಾಣುತ್ತವೆ.”
ಅದೇ ಕಾರಣದಿಂದ ಭೂಮಿಯ ದಕ್ಷಿಣ ಹಾಗೂ ಉತ್ತರ ಧ್ರುವ ಪ್ರದೇಶಗಳಲ್ಲಿ ಆರು ತಿಂಗಳು ಪೂರ್ತಿ ಹಗಲು ಇನ್ನಾರು ತಿಂಗಳು ರಾತ್ರಿ ಉಂಟಾಗುತ್ತದೆ.
ಗ್ರಹಣ ಮತ್ತು ಸ್ವಯಂ ಪ್ರಕಾಶವಿಲ್ಲದುದರ ಬಗ್ಗೆ ಹಿಂದಿನಿಂದ ಬಂದ ತಿಳುವಳಿಕೆಯನ್ನು ತಮ್ಮ ಭೂಮಿಯ ಗೋಲಾಕಾರ ಮತ್ತು ದೈನಂದಿನ ಚಲನೆಯ ಬಗೆಗಿನ ಹೊಸ ಪರಿಕಲ್ಪನೆಗಳೊಂದಿಗೆ ಜೋಡಿಸಿ ಅವುಗಳಿಗೆ ಅತ್ಯಂತ ವೈಜ್ಞಾನಿಕ ವಿಶ್ಲೇಷಣೆ ನೀಡಿದರು. ಆದರೆ ಗ್ರಹಣಗಳ ಬಗ್ಗೆ ಪುರಾಣದ ಕತೆಗಳೇನು ? ಸಮುದ್ರ ಮಥನ, ದೇವತೆಗಳಿಗೆ ಮಾತ್ರ ಅಮೃತದ ಹಂಚಿಕೆ, ಆಗ ರಾಕ್ಷಸನೊಬ್ಬ ದೇವತೆಗಳ ವೇಷ ಧರಿಸಿ ಅಮೃತವನ್ನು ಪಡೆದದ್ದು, ಅದನ್ನು ಸೂರ್ಯ ಚಂದ್ರರು ಕಂಡುಹಿಡಿದದ್ದರಿಂದ ಆ ರಾಕ್ಷಸ ಸರ್ಪದ ರೂಪ ಧರಿಸಿ ಅವರನ್ನು ನುಂಗಲು ಪ್ರಯತ್ನಿಸಿದ್ದು, ಆಗ ವಿಷ್ಣು ತನ್ನ ಸುದರ್ಶನ ಚಕ್ರ ಎಸೆದು ಆ ಸರ್ಪವನ್ನು ಕತ್ತರಿಸಿದ್ದು, ಆ ಸರ್ಪದ ತಲೆ ಬಾಲಗಳ ಭಾಗಗಳೇ ರಾಹು ಕೇತುಗಳಾಗಿದ್ದು. ಅವುಗಳು ಈಗಲೂ ಸೂರ್ಯ ಚಂದ್ರರನ್ನು ನುಂಗಲು ಪ್ರಯತ್ನಿಸುವುದೇ ಸೂರ್ಯ,ಚಂದ್ರ ಗ್ರಹಣಗಳು. ಅಬ್ಬಾ ! ಎಷ್ಟೊಂದು ಘಟನೆಗಳು ಒಂದರೊಡನೊಂದು ಹೆಣೆದುಕೊಂಡು ಈ ಪುರಾಣವಾಗಿವೆ. ಇದರಲ್ಲಿ ವಿಷ್ಣುವಿನ ಪ್ರಮುಖ ಪಾತ್ರ ಬೇರೆ ಅಡಕವಾಗಿದೆ.
ಈಗ ಆರ್ಯಭಟರ ವೈಜ್ಞಾನಿಕ ಶೋಧ ಮತ್ತು ವಿಶ್ಲೇಷಣೆ ಈ ಎಲ್ಲ ಘಟನೆಗಳೊಂದಿಗೆ ಜೋಡಿಸಿಕೊಂಡ ಪುರಾಣವನ್ನು , ವಿಷ್ಣು ಜಗತ್ತಿಗೆ ಸೂರ್ಯನ ಬೆಳಕು, ಚಂದ್ರನ ಬೆಳುದಿಂಗಳೇ ಇಲ್ಲದಾಗುವ ಮಹಾ ಅಪಾಯದಿಂದ ರಕ್ಷಿಸುವ ಪಾತ್ರವನ್ನೂ ಒಂದೇ ಬಾರಿಗೆ ಹೊಡೆದು ಹಾಕಿ ಬಿಟ್ಟಿತಲ್ಲಾ ! ನಮ್ಮ ಪುರಾಣನಿಷ್ಟ ವೈದಿಕ ಧರ್ಮದ ಬುಡವೇ ಕಳಚಿದಂತಾಗುವುದಿಲ್ಲವೇ !
ಆದರೆ ಈ ಎಲ್ಲ ವೈಜ್ಞಾನಿಕ 20 ನೇ ಶತಮಾನದಿಂದ ಶಾಲೆ,ಕಾಲೇಜುಗಳಲ್ಲಿ ಕಲಿಯುತ್ತೇವೆ. ಆದರೆ ಇವೆಲ್ಲ ಯುರೋಪಿನ ಆಧುನಿಕ ವಿಜ್ಞಾನಿಗಳ ಸಂಶೋಧನೆ ಎಂದೇ ಕಲಿಸಲಾಗುತ್ತದೆ. ಇಲ್ಲಿಯೇ, ಯುರೋಪಿನ ವಿಜ್ಞಾನಿಗಳಿಗಿಂತ ಒಂದು ಸಾವಿರ ವರ್ಷಗಳ ಮೊದಲೇ ಆದ ಶೋಧಗಳು ಈ ಸಾವಿರ ವರ್ಷಗಳ ಕಾಲದಲ್ಲಿ ಭಾರತದಲ್ಲಿ ಬೆಳೆದ ಹಲ ಹಲವು ತಲೆಮಾರುಗಳ ಅರಿವನ್ನೇಕೆ ವಿಸ್ತರಿಸಲಿಲ್ಲ. ನಮ್ಮ ತಲೆಮಾರನ್ನೂ ತಲುಪಲಿಲ್ಲ.
ಅದೇಕೆ ನಮ್ಮ ಹಿರಿಯ ತಲೆಮಾರುಗಳಿರಲಿ , ಈಗಿನ ಮಹಾ ವಿಜ್ಞಾನಿಗಳೂ, ವಿಜ್ಞಾನದ ಪ್ರಾಧ್ಯಾಪಕರುಗಳೂ ಕೂಡಾ ಕಾಲೇಜುಗಳಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣದ ವೈಜ್ಞಾನಿಕ ಕಾರಣಗಳ ಪಾಠ ಹೇಳುವುದು, ಆದರೆ ಗ್ರಹಣ ಸಮಯದಲ್ಲಿ ಮನೆಯಿಂದ ಹೊರಬರದೆ ಹುದುಗಿಕೊಳ್ಳುವುದು, ಆಗ ಊಟ ಮಾಡದಿರುವುದು, ಮಂತ್ರೋಚ್ಛಾರಣೆಗಳೊಂದಿಗೆ ಮಡಿಯಾಗುವುದು ಇತ್ಯಾದಿ ಮೂಢಾಚರಣೆಗಳೇಕೇ ?
ಆಗ ಐದನೇ ಶತಮಾನದಲ್ಲಿ ಭೂಮಿಯ ಆಕಾರದ ಬಗ್ಗೆ, ಅದರ ಚಲನೆಯ ಬಗ್ಗೆ, ಗ್ರಹಣಗಳ ಬಗ್ಗೆ ವೈದಿಕ ಪುರಾಣಗಳು ರಾಹು ಕೇತು ಮೊದಲಾದ ವಿವಿಧ ಕತೆಗಳನ್ನು ಸೃಷ್ಡಿಸಿ ,ಅವುಗಳನ್ನೇ ಎಲ್ಲ ಕಡೆ ತುಂಬಿಸುತ್ತಿರುವಾಗ ಅವುಗಳ ವಿರುದ್ಧವಾದ ಇಂತಹ ಮಹತ್ವದ ವೈಜ್ಞಾನಿಕ ಸತ್ಯಗಳನ್ನು ಹೇಳಲು ಆರ್ಯಭಟರಿಗೆ ಎದೆಗಾರಿಕೆಯಾದರೂ ಹೇಗೆ ಬಂತು ? ಮತ್ತು ಹೀಗೆ ಸ್ಪಷ್ಟವಾಗಿ ಹೇಳಿದ ಮೇಲೆ ಏನಾಯಿತು ?
ಆರ್ಯಭಟರ ಬಗ್ಗೆ ಕಟು ಟೀಕೆ, ಅವಗಣನೆ :
ಇವು ಭಾರತದ ಖಗೋಳ ಮತ್ತು ಗಣಿತ ವಿಜ್ಞಾನಗಳ ಚರಿತ್ರೆಯ ಮೇಲೆ ಮಾತ್ರವಲ್ಲ, ಇಲ್ಲಿಯ ಸಮಾಜ ಮೇಲೆ ಬರಲಾಗದೆ ಮುಳುಗಿರುವ ಮೂಢನಂಬಿಕೆಗಳ ಸಾಗರದ ಬಗ್ಗೆಯೂ ಏಳುವ ಪ್ರಶ್ನೆಗಳು.
ಆರ್ಯಭಟ ಹಾಗೂ ಬ್ರಹ್ಮಗುಪ್ತರು ವಿಶ್ವದ ಬಹು ದೊಡ್ಡ ಗಣಿತ ಮತ್ತು ಖಗೋಳ ವಿಜ್ಞಾನಿಗಳು. ವಿಶ್ವದಲ್ಲೇ ಮೊತ್ತ ಮೊದಲು ಕೆಲವು ಖಗೋಳ ವಿಜ್ಞಾನ,ಗಣಿತಗಳ ಶೋಧಗಳನ್ನು ನೀಡಿದ ಪ್ರಸಿದ್ಧಿ ಅವರದು. ಭಾರತದ ಖಗೋಳ ವಿಜ್ಞಾನಿಗಳು ಹಾಗೂ ಗಣಿತಜ್ಞರಲ್ಲಿ ಅಪ್ರತಿಮರು ಎಂದು ಪ್ರಸಿದ್ಧರಾದವರು. ಆದರೆ ಇವರಿಬ್ಬರ ನಡುವೆ ಗಣನೀಯ ವ್ಯತ್ಯಾಸ. ಅದರಿಂದಾಗಿ ವಿಶ್ವ ಪ್ರಾಮುಖ್ಯತೆಯ ಬಹು ಮುಖ್ಯ ಶೋಧಗಳನ್ನು ಕಡೆಗಣಿಸುವುದಕ್ಕೆ ಕಾರಣವಾಯ್ತು ಮತ್ತು ಭಾರತದ ಖಗೋಳ ಶಾಸ್ತ್ರದ ಬೆಳವಣಿಗೆಯ ಮೇಲೆ ಹಾನಿಕರ ಪರಿಣಾಮ ಉಂಟು ಮಾಡಿತು ಎಂಬುದು ವಿಷಾದಕರ ಸಂಗತಿ.
ಆರ್ಯಭಟ ಭಾರತದ ಮುಖ್ಯ ಖಗೋಳ ಶಾಸ್ತ್ರಜ್ಞರು ಹಾಗೂ ಗಣಿತಜ್ಞರಲ್ಲಿ ಮೊದಲನೆಯವರು. ತಮಗಿಂತ ಹಿಂದೆ ಇದ್ದ ಖಗೋಳ ಶಾಸ್ತ್ರ ಹಾಗೂ ಗಣಿತದ ಜ್ಞಾನವನ್ನು ವ್ಯವಸ್ಥೆಗೊಳಿಸಿದ ಕೀರ್ತಿಯ ಜೊತೆಗೆ ವಿಶ್ವದಲ್ಲಿಯೇ ಮೊದಲು ಎನ್ನಬಹುದಾದ ಹಲವು ಶೋಧ ಹಾಗೂ ತೀರ್ಮಾನಗಳನ್ನು ಮಾಡಿದ್ದಾರೆ.
π (ಪೈ) ಎಂಬ ಜ್ಯಾಮಿತಿಯಲ್ಲಿ ವೃತ್ತದ ಪರಿಧಿ (ಸುತ್ತಳತೆ) ಯನ್ನು ಅದರ ವ್ಯಾಸದಿಂದ ಭಾಗಿಸಿದಾಗ ಬರುವ ಸೂಚ್ಯಾಂಕ. ಇದರ ನಿಖರವಾದ ಬೆಲೆ ಕಂಡು ಹಿಡಿಯುವುದು ಇಡೀ ವಿಶ್ವದಲ್ಲಿ ಇತ್ತೀಚಿನವರೆಗೆ ಸಮಸ್ಯೆಯಾಗಿತ್ತು. ಈ ಸಂಖ್ಯೆಗೆ ಆರ್ಯಭಟರು ಅಂದಿಗೇ ಒಂದು ನಿಖರವಾದ ಬೆಲೆಯನ್ನು ಲೆಕ್ಕಿಸಿದರು ಎಂಬುದೊಂದು ವಿಶೇಷ. ಹಾಗೇ ಕುಟ್ಟಕ ಎಂಬ ಎಂಬ ಬೀಜಗಣಿತದ ಸಮೀಕರಣವನ್ನು ಬಿಡಿಸುವ ವಿಧಾನವನ್ನು ವಿಶ್ವದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಂಡುಹಿಡಿದರು.
ಕಾಲದ ಗಣನೆಗೆ ಸಂಬಂಧಿಸಿದಂತೆ ಭಾರತದ ವೈದಿಕ ಗ್ರಂಥಗಳಲ್ಲಿ ಸೃಷ್ಟಿ, ಪ್ರಳಯ, ಅಷ್ಟ ಗ್ರಹ ಕೂಟಗಳು, ಸೃಷ್ಡಿಗೆಂದೇ ಒಂದಷ್ಟು ಮಹಾಯುಗಗಳನ್ನು ಮೀಸಲಿಟ್ಟು ನಂತರ ಯುಗಗಳ ಕಾಲವನ್ನು ಅಳೆಯುವ ಪದ್ಧತಿಗಳು , ಕೃತಯುಗ, ತ್ರೇತಾಯುಗ, ದ್ವಾಪರ ಯುಗ, ಕಲಿಯುಗಗಳ ಕಾಲಾವಧಿ ಮೊದಲಾದ ಹಲವು ಧಾರ್ಮಿಕ, ಪೌರಾಣಿಕ ನಂಬಿಕೆಗಳೊಡನೆ ಜೋಡಿಸಿಕೊಂಡಿದ್ದವು. ಆರ್ಯ ಭಟರು ತಮ್ಮ ಸಿದ್ಧಾಂತಗಳನ್ನು ದೀರ್ಘಕಾಲದ ಆಕಾಶ ಕಾಯಗಳ ವೀಕ್ಷಣೆಯ ಆಧಾರದ ಮೇಲೆಯೇ ರೂಪಿಸಿದವರು. ಜಗತ್ತಿನ ಸೃಷ್ಟಿ, ಪ್ರಳಯ, ಅಷ್ಟ ಗ್ರಹ ಕೂಟ ಮೊದಲಾದ ಈ ಎಲ್ಲ ಜೊಳ್ಳು ಧಾರ್ಮಿಕ ಕಲ್ಪನೆಗಳನ್ನು ಪಕ್ಕಕ್ಕೆ ತಳ್ಳಿ ಯುಗಮಾನದ ಲೆಕ್ಕಾಚಾರವನ್ನು ಸರಳೀಕರಣಗೊಳಿಸಿದರು. ಕಾಲವೆಂಬುದು ಅನಂತ,ಅನಾದಿ ಎಂದು ಪ್ರತಿಪಾದಿಸಿದರು.
ಆರ್ಯಭಟರು ಭೂಮಿ, ಅದರ ಸುತ್ತುವಿಕೆ, ಗ್ರಹಣ ಮೊದಲಾದವುಗಳ ಬಗ್ಗೆ, ಇತರ ಅಂಶಗಳ ಬಗ್ಗೆ ಮಾಡಿದ ಅತ್ಯಂತ ವೈಜ್ಞಾನಿಕವಾಗಿದ್ದ ಶೋಧಗಳನ್ನು ಇತರ ಖಗೋಳ ಶಾಸ್ತ್ರಜ್ಞರು, ಗಣಿತಜ್ಞರು ಮುಂದುವರೆಸಿ ಬೆಳೆಸಿದ್ದರೆ ಭಾರತ ಖಗೋಳ ಹಾಗೂ ಗಣಿತ ವಿಜ್ಞಾನಗಳಲ್ಲಿ ಮತ್ತಷ್ಟು ಎತ್ತರಕ್ಕೇರುತ್ತಿತ್ತು. ಇತರ ಹಲವು ವಿಜ್ಞಾನ ಶಾಖೆಗಳ ಬೆಳವಣಿಗೆಗೆ ವೇಗೋತ್ಕರ್ಷಕವಾಗಿ ಸಹಾಯಕವಾಗುತ್ತಿತ್ತು.
ಆದರೆ ಭಾರತದ ವೈದಿಕ ಧಾರ್ಮಿಕ ವ್ಯವಸ್ಥೆ ಸಂಪ್ರದಾಯ, ನಂಬಿಕೆಗಳ ಬುಡಕ್ಕೇ ಕೊಡಲಿ ಪೆಟ್ಟು ಹಾಕುವ ಈ ಶೋಧಗಳನ್ನು ಹಾಗೆ ಬೆಳೆಯಲು ಬಿಡುವುದಕ್ಕೆ ಸಾಧ್ಯವೇ ?
ಅವರ ಶೋಧಗಳನ್ನು ಮುಂದಿನ ಮಹತ್ವದ ಖಗೋಳ ಶಾಸ್ತ್ರಜ್ಞರುಗಳಾದ ವರಾಹ ಮಿಹಿರ, ಬ್ರಹ್ಮಗುಪ್ತರು ಒಪ್ಪಲಿಲ್ಲ ಮಾತ್ರವಲ್ಲ ಕಟುವಾದ ಟೀಕೆ, ವ್ಯಂಗ್ಯಗಳಿಗೆ ತುತ್ತಾಗಿಸಿದರು. ಮುಖ್ಯವಾಗಿ ಬ್ರಹ್ಮಗುಪ್ತರು ಅವರ ಕೃತಿ ಬ್ರಹ್ಮಸ್ಫುಟ ಸಿದ್ಧಾಂತದಲ್ಲಿ ಹಿಗ್ಗಾ ಮುಗ್ಗ ಜಾಡಿಸಿದ್ದಾರೆ.
“ಈ ಆರ್ಯಭಟನಿಗೆ ಗಣಿತ, ಕಾಲ ಗಣನೆ, ಆಕಾಶ ಕಾಯಗಳ ಬಗ್ಗೆ ಏನೇನೂ ಗೊತ್ತಿಲ್ಲ. ಆದ್ದರಿಂದ ಅವನ ದೋಷಗಳ ಬಗ್ಗೆ ಹೇಳಹೋಗುವುದಿಲ್ಲ” ಎಂದು ಹೇಳಿದ್ದಾರೆ.
ಆರ್ಯ ಭಟರ ವೈಜ್ಞಾನಿಕ ತೀರ್ಮಾನಗಳ ಬಗ್ಗೆ ಇವರ ಈ ಕೋಪ ಅವರು ಧಾರ್ಮಿಕ ನಂಬಿಕೆಗಳಿಗೆ ಸೊಪ್ಪು ಹಾಕದೆ ತಾವು ತಮ್ಮ ಆಕಾಶ ಕಾಯಗಳ ವೀಕ್ಷಣೆ, ಅದರ ಆಧಾರದ ಮೇಲಿನ ಕರಾರುವಾಕ್ಕಾದ ಲೆಕ್ಕಗಳು ನೀಡಿದ ವಾಸ್ತವ ಸಂಗತಿಗಳು ಹಾಗೂ ತೀರ್ಮಾನಗಳನ್ನು ಮಂಡಿಸಿದ್ದೇ ಕಾರಣವಾಗಿತ್ತೆಂದು ತೋರುತ್ತದೆ.
ಅದನ್ನೇ ಅವರ ಶಿಷ್ಯ ಬಳಗವೂ ತಮ್ಮ ಗುರುಗಳ ಪೂರ್ವಾಗ್ರಹ ಪೀಡಿತ ಟೀಕೆಗಳನ್ನು ಸಮರ್ಥಿಸಿಕೊಳ್ಳುತ್ತಾ ಮತ್ತಷ್ಟು ತೀಕ್ಷ್ಣವಾಗಿ ಮುಂದುವರೆಸಿತು.
ಈ ಎಲ್ಲದರ ಫಲವಾಗಿ ಆರ್ಯಭಟರ ಶೋಧಗಳು ಸುಮಾರು ಒಂದು ಸಾವಿರ ವರ್ಷಗಳ ಕಾಲ ಭಾರತದ ಖಗೋಳ ಹಾಗೂ ಗಣಿತ ವಿಜ್ಞಾನಗಳ ಚರ್ಚೆಯಿಂದ ಕಾಣೆಯಾಗಿ ಬಿಟ್ಟವು. ಆರ್ಯಭಟರದು ಮಾತ್ರವಲ್ಲ ಮುಂದೆ ಅವರ ಸಂಕ್ಷಿಪ್ತ ಸೂತ್ರಗಳನ್ನು ಅರ್ಥೈಸಲು, ವಿವರಿಸಲು, ಈ ಶೋಧಗಳನ್ನು ಮುಂದುವರೆಸಲು ಪ್ರಯತ್ನಿಸಿದ ಮೊದಲನೆಯ ಭಾಸ್ಕರ ಮೊದಲಾದ ಹಲವರ ಬಹು ಮುಖ್ಯ ಕೃತಿಗಳೂ ಮರೆಯಾಗಿ ಬಿಟ್ಟವು.
ಕೇರಳದಲ್ಲಿ ಆರ್ಯಭಟರ ಶೋಧಗಳು :
ಸುಮಾರು 800- 1,000 ವರ್ಷಗಳ ನಂತರ 14-15 ನೆಯ ಶತಮಾನದಲ್ಲಿ ಕೇರಳದಲ್ಲಿ ಮಾತ್ರವೇ ಆರ್ಯಭಟರ ಶೋಧಗಳು ಅಂಗೀಕಾರ ಪಡೆದು ಪ್ರಶಂಸೆಗೆ ಒಳಗಾಗಿದ್ದು. ಕೇರಳದಲ್ಲಿ ಪರಮೇಶ್ವರ, ನೀಲಕಂಠ ಸೋಮಯಾಜಿ, ಜ್ಯೇಷ್ಟ ದೇವ, ಅಚ್ಯುತ ಪಿಸಾರತಿ ಮೊದಲಾದ ಒಂದು ವಿಜ್ಞಾನಿಗಳ ಹೊಸ ಪರಂಪರೆಯೇ ಆರ್ಯಭಟರ ಕೃತಿಯನ್ನು, ಅವುಗಳ ವಿವರಣೆ ನೀಡಿದ ಮೊದಲನೇ ಭಾಸ್ಕರನ ಕೃತಿಗಳನ್ನು ಅಧ್ಯಯನ, ವ್ಯಾಖ್ಯಾನಗಳಿಗೆ ಒಳಪಡಿಸಿದ್ದು. ಆರ್ಯಭಟರ ದಾರಿಯಲ್ಲಿ ಮುಂದುವರೆದು ಇವರುಗಳು ಮಾಡಿದ ಹೊಸ ಶೋಧಗಳು ಯುರೋಪಿನಲ್ಲಿ ಮುಂದಿನ ಒಂದೆರಡು ಶತಮಾನಗಳ ನಂತರ ಮಾಡಿದ ವಿಶ್ವ ಪ್ರಸಿದ್ಧ ಶೋಧಗಳಿಗೆ ಹೆಗಲೆಣೆಯಾಗಿವೆ. ಕೆಲವು ಅವುಗಳನ್ನೂ ಮೀರಿಸುತ್ತವೆ. ಅವುಗಳನ್ನೆಲ್ಲ ಇಲ್ಲಿ ವಿವರಿಸ ಹೋಗುವುದಿಲ್ಲ. ಆದರೆ 15 ನೆಯ ಶತಮಾನದಲ್ಲಿ, ಕೋಪರ್ನಿಕಸನಿಗಿಂತ ಮೊದಲೇ ಪರಮೇಶ್ವರ ಮತ್ತು ನೀಲಕಂಠ ಸೋಮಯಾಜಿ ಭೂ ಕೇಂದ್ರಿತ ಆಕಾಶ ಕಾಯಗಳ ಚಲನೆಗೆ ಬದಲಾಗಿ ಸೂರ್ಯ ಕೇಂದ್ರಿತ ವ್ಯವಸ್ಥೆಯನ್ನು ಮನಗಂಡಿದ್ದರು ಮತ್ತು ವಿವರಿಸಿದ್ದರು ಎಂಬುದು ಬಹಳ ಪ್ರಮುಖವಾದದ್ದು. ಹಾಗೆಯೇ ಗಣಿತದಲ್ಲಿ ನ್ಯೂಟನ್ – ಗಾಸ್ ಸೂತ್ರ ಎಂದು ಪ್ರಸಿದ್ಧವಾಗಿರುವ ಸೂತ್ರವನ್ನು ಕಂಡುಹಿಡಿದರು.
ಹೀಗೆ ಕೇರಳದಲ್ಲಿ ಆರ್ಯಭಟರ ದಾರಿಯಲ್ಲಿ ಹಲವು ಶೋಧಗಳು ನಡೆಯುತ್ತಿದ್ದರೂ ಕೂಡಾ ಉತ್ತರ ಭಾರತದ ಖಗೋಳ, ಗಣಿತ ವಿಜ್ಞಾನದ ಕೇಂದ್ರಗಳಲ್ಲಿ, ಭಾರತದ ಇತರೆಡೆಗಳಲ್ಲಿ ಆರ್ಯಭಟರ ಶೋಧಗಳ ಅವಗಣನೆ ಮುಂದುವರೆದೇ ಇತ್ತು. ಕೇರಳದ ಹೊಸ ಶೋಧಗಳಿಗೆ ಸಂವಾದಿಯಾದ ಸ್ಪಂದನೆಯೂ ಕಾಣಲಿಲ್ಲ.
ಆರ್ಯಭಟರ ಶೋಧಗಳನ್ನು ಮೂಲೆಗುಂಪು ಮಾಡಿದುದರಿಂದ ಭಾರತ ಮತ್ತು ವಿಶ್ವದ ಖಗೋಳ ವಿಜ್ಞಾನ, ಗಣಿತಗಳಿಗೆ ಆದ ನಷ್ಟವೇನೆಂಬುದನ್ನು ಈ ಪರಿಸ್ಥಿತಿ ಸೂಚಿಸುತ್ತದೆ.
ವರಾಹ ಮಿಹಿರರ ಮೌಢ್ಯ ಪ್ರಸಾರ :
ಹೀಗೆ ಆರ್ಯಭಟರ ಶೋಧಗಳನ್ನು ನಿರಾಕರಿಸಿದ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಚಿಂತನೆಗಳನ್ನು ಪರಿಶೀಲಿಸೋಣ.
ವರಾಹ ಮಿಹಿರರದು ಜ್ಯೋತಿಷ್ಯದಲ್ಲಿ ಬಹು ಪ್ರಸಿದ್ಧ ಹೆಸರು. ಅವರ ಕೃತಿಯ ಹೆಸರೇ ಬೃಹತ್ ಜಾತಕ. ಶಿಲ್ಪ, ವೈದ್ಯಕೀಯ, ಶರೀರ ಶಾಸ್ತ್ರ, ಮನಶ್ಶಾಸ್ತ್ರ, ಸಸ್ಯ, ಪ್ರಾಣಿ ವಿವರಣೆ, ಛಂದಸ್ಸು, ವಾಸ್ತು ಶಾಸ್ತ್ರ, ಮುಖ ಸಾಮುದ್ರಿಕ, ಶಕುನಗಳು ಮೊದಲಾದ ಹಲ ಹಲವು ವಿಷಯಗಳಿಗೆ ಆಗರವಾದ ಈ ಕೃತಿಯಲ್ಲಿ ಖಗೋಳ ವಿಜ್ಞಾನ ಮತ್ತು ಗಣಿತದ ಬಗೆಗಿನ ವಿಷಯಗಳೂ ಇವೆ. ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಕುಂಡಲಿಗಳನ್ನು ರಚಿಸಿ ಜ್ಯೋತಿಷ್ಯ ಹೇಳುವ ತಂತ್ರವನ್ನೂ ವಿಷದೀಕರಿಸುತ್ತದೆ.

ಭಾರತದ ಖಗೋಳ ವಿಜ್ಞಾನದ ಮೇಲೆ ಬೀರಿದ ಐದು ವಿವಿಧ ಸಿದ್ಧಾಂತಗಳ ಬಗ್ಗೆ, ಗ್ರೀಸ್ ಮೊದಲಾದ ವಿದೇಶಿ ಮೂಲದ ಬಗ್ಗೆ ಈ ಕೃತಿ ವಿವರಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ವಿಷಯದಲ್ಲಿಯೂ ನಕ್ಷತ್ರಗಳಿಗೆ ಗ್ರೀಕ್ ಹೆಸರುಗಳ ಸಂಸ್ಕೃತಿಕರಣವನ್ನು ಬಳಸಿದೆ. ಇವರು ಧೂಮಕೇತುವಿನ ಬಗ್ಗೆ ಒಳ್ಳೆಯ ವಿವರಣೆ ಕೊಡುವುದರ ಜೊತೆಯಲ್ಲಿಯೇ ಈ ಧೂಮಕೇತುವು ಬಂದಾಗ ಪ್ರಯಾಗ ಮತ್ತು ಉಜ್ಜಯನಿಗಳ ನಡುವೆ ಇರುವ ಜನ ಧ್ವಂಸವಾಗುತ್ತಾರೆ ಎನ್ನುತ್ತಾರೆ. ಕಾಮನ ಬಿಲ್ಲಿನ ವಿವರಣೆ ನೀಡುತ್ತಾ ಸೂರ್ಯನ ಕಿರಣಗಳಲ್ಲಿ ಹಲವು ಬಣ್ಣಗಳಿವೆ. ಮೋಡ ಕವಿದಾಗ ಈ ಕಿರಣಗಳಿಂದ ಕಾಮನ ಬಿಲ್ಲಿನ ಬಣ್ಣಗಳು ಮೂಡುತ್ತವೆ ಎಂದು ಸರಿಯಾಗಿ ಗುರುತಿಸುವಾಗಲೇ ಪೂರ್ವ ದಿಕ್ಕಿನಲ್ಲಿ ಕಾಮನ ಬಿಲ್ಲು ಕಾಣಿಸಿಕೊಂಡಾಗ ರಾಜನಿಗೆ ಅನಾರೋಗ್ಯ ಉಂಟಾಗುತ್ತದೆ, ಬೇರೆ ಬೇರೆ ದಿಕ್ಕುಗಳಲ್ಲಿ ಕಾಣಿಸಿಕೊಂಡಾಗ ಸೇನಾಧಿಪತಿ, ಮಂತ್ರಿಗಳು ಕೊಲ್ಲಲ್ಪಡುತ್ತಾರೆ.
ಇವರ ಗ್ರಂಥದಲ್ಲಿ ಕಾಗೆಗಳು ಕಾಕಾ ಎಂದು ಶಬ್ದ ಮಾಡಿದರೆ ಏನೋ ನಾಶ ಕಾದಿದೆ, ಕವಕವ ಎಂದು ಶಬ್ದ ಮಾಡಿದರೆ ಹೊಸ ಸ್ನೇಹ ಲಭ್ಯವಾಗುತ್ತದೆ, ಕಾಗಾಕೂ ಎಂದು ಶಬ್ದ ಮಾಡಿದರೆ ಜೈಲುಪಾಲಾಗುವ ಸೂಚನೆ ಎಂಬ ಬಹಳ “ಮಹತ್ವ”ದ ವಿಷಯಗಳನ್ನೂ ತಿಳಿಸಿಕೊಡುತ್ತಾರೆ.
“ಅಪಚಾರೇಣ ನರಾಣಾಮುಪಸರ್ಗಃ ಪಾಪ ಸಂಚಯಾದ್ಭವತಿ/ ಸಂಸೂಚಯಂತಿ ದಿವ್ಯಾಂತರಿಕ್ಷ ಭೌಮಾಸ್ತ ಉತ್ಪಾತಾಃ//”
ನರರ ಪಾಪ ಸಂಚಯಗಳ ಫಲವಾಗಿ ಅಪಶಕುನಗಳು ಉಂಟಾಗುತ್ತವೆ. ಅವು ಭೂಮಿ, ಅಂತರಿಕ್ಷ ಮತ್ತು ಅದರಾಚೆಗಿನ ಲೋಕಗಳಿಂದ ಬರುವ ಎಚ್ಚರಿಕೆಯ ಸೂಚನೆಗಳು.
ಸಾವಿರಾರು ವರ್ಷಗಳಿಂದ ಪ್ರಚಲಿತವಾಗಿರುವ, ಇಂದೂ ಕೂಡಾ ಟಿವಿಗಳಲ್ಲಿ ಜ್ಯೋತಿಷ್ಕರು ಬೊಬ್ಬೆ ಹೊಡೆಯುವದಕ್ಕೆ ಅವಕಾಶ ಮಾಡಿಕೊಡುವ ಮೂಢ ನಂಬಿಕೆ, ಕಂದಾಚಾರಗಳ ಸಂಕಲನವೇ ಈ ಕೃತಿಯಲ್ಲಿದೆ. ಈ ಚರ್ಚೆಗಳಲ್ಲಿ ಮಹರ್ಷಿ ವರಾಹಮಿಹಿರರ ಉಲ್ಲೇಖ ಮತ್ತೆ ಮತ್ತೆ ಆಗುತ್ತಿರುತ್ತದೆ. ಒಬ್ಬ ಪ್ರಮುಖ ಖಗೋಳ ಶಾಸ್ತ್ರಜ್ಞರೇ ಹೀಗೆ ಹೇಳಿದ ಮೇಲೆ ಅದನ್ನು ನಂಬದೇ ಇರುವುದಕ್ಕಾಗುತ್ತದೆಯೇ ? ಅದೇ ಸಮಯದಲ್ಲಿ ಆರ್ಯಭಟರ ಕೃತಿಯಲ್ಲಿನ ವಿಚಾರಗಳು ಇಂದೂ ಕೂಡ ಮರೆಗೆ ತಳ್ಳಲ್ಪಡುತ್ತವೆ.
ಇದೇ ವ್ಯಕ್ತಿಯೇ ಗ್ರಹಣಗಳ ಬಗೆಗಿನ ರಾಹು, ಕೇತು ಮೊದಲಾದ ಕೆಲವು ಪುರಾಣದ ಕತೆ, ನಂಬಿಕೆಗಳನ್ನು ಪಟ್ಟಿ ಮಾಡಿ ಖಂಡಿಸುತ್ತಾರೆ, ಆರ್ಯಭಟರಿಗಿಂತ ವಿಶದವಾಗಿ ವೈಜ್ಞಾನಿಕ ಕಾರಣವನ್ನು ವಿವರಿಸುತ್ತಾರೆ ಎಂಬುದನ್ನೂ ಕಾಣಬಹುದು.
ಇಂತಹ ವೈದಿಕ ಕರ್ಮ, ಪೂರ್ವ ಜನ್ಮ, ವರ್ಣ ವಿಭಜನೆಯ ಚಿಂತನೆ, ಅವುಗಳು ಜನರಲ್ಲಿ ಮೂಡಿಸ ಬಯಸುವ ಅವೈಚಾರಿಕ ಮೌಢ್ಯಗಳನ್ನು ವೈಜ್ಞಾನಿಕ ಶೋಧಗಳ ಜೊತೆಗೆ ಬೆರೆಸದ ಆರ್ಯಭಟರ ವೈಜ್ಞಾನಿಕ ಶೋಧಗಳು ಹೇಗೆ ರಾಜ- ಪುರೋಹಿತಶಾಹಿಗೆ ಪ್ರಿಯವಾದಾವು ? ವರಾಹಮಿಹಿರನ ಕೃತಿಯೇ ಅತ್ಯಂತ ಜನಪ್ರಿಯ ಕೃತಿಯಾಗಿದ್ದು ಅಂದಿನ ಸಾಮಾಜಿಕ, ಬೌದ್ಧಿಕ ಪರಿಸರದ ಸೂಚಕವಾಗಿದೆ.
ಹಿಂದಿನ ಲೇಖನದಲ್ಲಿ ಹೇಳಿದಂತೆ ವೈಜ್ಞಾನಿಕ ಚಿಂತನೆ ಮತ್ತು ಶೋಧಗಳು ಜನರ ಮನಸ್ಸನ್ನು ಆವರಿಸದಿರುವಂತೆ ವೈದಿಕರು ಮಾಡುವ ಕುತಂತ್ರಗಳ ರೂಪಗಳು- ಒಂದು, ಅಂತಹ ವಿಚಾರಗಳನ್ನು ಇತರರು ಅನುಸರಿಸದಂತೆ ಖಂಡಿಸುವುದು, ನಿಂದಿಸುವುದು, ಅಪಹಾಸ್ಯ ಮಾಡುವುದು.
ಎರಡು, ಅವುಗಳು ಪಸರಿಸದಂತೆ ತಡೆ ಹಾಕುವುದು,
ಮೂರು, ಅವುಗಳನ್ನು ಮೌಢ್ಯಗಳು, ವೈದಿಕ ಚಿಂತನೆಗಳೊಡನೆ ಬೆರೆಸಿ ವಿರೂಪಗೊಳಿಸುವುದು.
ಈ ಮೂರನ್ನೂ ಖಗೋಳ ವಿಜ್ಞಾನದಂತಹ ವಿಷಯದಲ್ಲೂ ಎಗ್ಗಿಲ್ಲದೆ ಬಳಸಿರುವುದನ್ನು ಕಾಣಬಹುದು.
| ಇನ್ನು ಮುಂದಿನ ವಾರಕ್ಕೆ |






0 Comments