
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..
ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.
‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ‘ಮೀಡಿಯಾ ಡೈರಿ’ ಬಹುರೂಪಿಯಲ್ಲಿ ‘ಆ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ಪುಸ್ತಕವಾಗಿ ರೂಪುಗೊಂಡಿತು.
‘ಆ ಪತ್ರಿಕೋದ್ಯಮ‘ ಪ್ರತಿಗಾಗಿ ಸಂಪರ್ಕಿಸಿ : 70191 82729 ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3nWUsuJ
ಜಿ ಎನ್ ರಂಗನಾಥ ರಾವ್ ಅವರು ಹೊಸ ನಾಟಕ ಸರಣಿ ಬರೆಯಲಿದ್ದಾರೆ.
9
ವಕೀಲ: ಅದರಿಂದಾಗಿ ನೀವು ಲಿವ್ ಇನ್ ರಿಲೇಷನ್ ಗೆ ಒಪ್ಪಿಕೊಂಡಿರಾ?
ವರ್ಷಾ: ಹೌದು ನಮ್ಮಿಬ್ಬರಿಗೂ ಸ್ವಾತಂತ್ರ್ಯಬೇಕಾಗಿತ್ತು….
ವಕೀಲ: ಎಷ್ಟು ದಿವಸಗಳಿಂದ ಹೀಗಿದ್ದೀರಿ….
ವರ್ಷಾ: ಸುಮಾರು ಒಂದು ವರ್ಷದಿಂದ… ಹದಿನೈದು ದಿವಸಗಳಿಂದ ಒಂದೇ ಮನೇಲಿ ಇದ್ದೀವಿ…
ವಕೀಲ: ಹದಿನೈದೇ ದಿವಸಗಳಲ್ಲಿ ಈ ವ್ಯವಸ್ಥೆಯಿಂದ ನಿಮಗೆ ಭ್ರಮ ನಿರಸನವಾಯಿತೆ? ನೀವೇಕೆ ಆತ್ಮಹತೆಗೆ ಯತ್ನಿಸಿದಿರಿ..
ವರ್ಷಾ: ಹೌದು ಹದಿನೈದು ದಿನಗಳ ಕಾಲ ಸಮಾನತೆಗೆ, ಸ್ವಾತಂತ್ರ್ಯಕ್ಕೆ ಏನೂ ಆಗಲಿಲ್ಲ. ಆದರೆ ಹದಿನಾರನೆಯ ದಿನ ಅಂಥ
ಪರಿಸ್ಥಿತಿ ಒದಗಿ ಬಂತು
ವಕೀಲ: ಏನದು?
ವರ್ಷಾ: ಅಂದು ಅವರ ತಾಯಿಯ ಶ್ರಾದ್ಧದ ದಿನ… ಅಂದು ಚಿಕ್ಕಡಿಗೆ, ಅಂದರೆ ಪಿಂಡದ ಅಡುಗೆ, ಅನ್ನ ಪಾಯಿಸ ನಾನೇ ಮಾಡುವೆ
ಎಂದೆ. ಅಭಿನವ ಬೇಡ ಆಂದರು…
ವಕೀಲ: ಕಾರಣ?
ವರ್ಷಾ: ನಮ್ಮ ಮನೆಯಲ್ಲಿ ನನ್ನ ತಾಯಿಯೇ ಈ ಅಡುಗೆ ಮಾಡುತ್ತಿದ್ದರು. ಆದ್ದರಿಂದ ಕುಟುಂಬದ ಹಿರಿಯರಿಗೆ ಇದು ನಾವು ಸಲ್ಲಿಸುವ ಗೌರವ ಎಂದು ಭಾವಿಸಿದ್ದೆ. ಆದರೆ ಶಾಸ್ತ್ರೋಕ್ತವಾಗಿ ಮದುವೆಯಾಗದ ಹೆಂಗಸರು ಈ ಅಡುಗೆ ಮಾಡುವಂತಿಲ್ಲ ಎಂದಾಗ ನನಗೆ, ನನ್ನ ಸ್ತ್ರೀತ್ವಕ್ಕೆ ತೋರಿದ ಅವಮಾನ ಎನ್ನಿಸಿತು. ನನಗೆ ಈ ಮನೆಯಲ್ಲಿ ಸಮಾನ ಸ್ಥಾನಮಾನವಿಲ್ಲ. ನಾನು ಎರಡನೆ ದರ್ಜೆಯವಳು ಎನ್ನಿಸಿತು….
ವಕೀಲ: ಆತ್ಮಹತ್ಯೆ ಯತ್ನಕ್ಕೆ ಇದೇ ಕಾರಣವೇ?
ವರ್ಷಾ: ಹೌದು ಆ ಮನೆಯಲ್ಲಿ ನನ್ನ ಸ್ಥಾನ ಭದ್ರಪಡಿಸಿಕೊಳ್ಳಲು ನಾನು ಮದುವೆಗೆ ಒತ್ತಾಯ ಮಾಡಿದೆ. ಆದರೆ ಅಭಿನವ ಒಪ್ಪಲಿಲ್ಲ…. ಮ್ಯಾರೇಜ್ ಅಸ್ ಅನ್ ಇನಸ್ಟಿಟ್ಯೂಷನ್ ತನಗೆ ನಂಬಿಕೆ ಇಲ್ಲ ಎಂದ…. ಅವಿವಾಹಿತ ಸ್ತ್ರೀಗೆ ಈ ಸಮಾಜದಲ್ಲಿ ಸ್ಥಾನಮಾನವಿಲ್ಲ ಎನ್ನಿಸಿತು. ಪರಲೋಕದಲ್ಲೂ ಅವಿವಾಹಿತರಿಗೆ ಸ್ಥಾನಮಾನವಿಲ್ಲ ಎಂದೂ ಅವರು ವಂಶದ ಹಿರಿಯರ ಉಚ್ಚಿಷ್ಟ ತಿಂದು ಬದುಕಬೇಕಾಗುತ್ತದೆಂದೂ ಆಚಾರ‍್ರ ಮಾತಿನಿಂದ ತಿಳಿಯಿತು.. ಇದರಿಂದ ಇಹಪರಳಲ್ಲಿ ಹೆಣ್ಣಿನ ಸ್ಥಾನಮಾನ ಎಷ್ಟು ಕ್ಷುಲ್ಲಕ ಎನ್ನಿಸಿ ನನಗೆ ಬದುಕು ಅಸಹನೀಯವೆನಿಸಿತು….
ವಕೀಲ: ದಟಿ ಈಸ್ ಆಲ್ ಯುವರ್ ಆನರ್…..
ವರ್ಷಾಳ ವಕೀಲರು: ಯುವರ್ ಆನರ್ ನಾನು ಅಭಿನವ ಕುಮಾರರನ್ನು ಪಾಟೀ ಸವಾಲು ಮಾಡ ಬಯಸುತ್ತೇನೆ..
ನ್ಯಾಯಾಧೀಶರು: ಎಸ್ ಯು ಕೆನ್ ಪ್ರೊಸೀಡ್
(ಅಭಿನವ ಕುಮಾರನನ್ನು ಕರೆಯಲಾಗುವುದು. ಅವನು ಕಟಕಟೆಗೆ ಬಂದು ನಿಂತು ಸತ್ಯವನ್ನೇ ನುಡಿಯುತ್ತೇನೆ ಎಂದು ಪ್ರಮಾಣ ಮಾಡುವನು)
ವರ್ಷಾಳ ವಕೀಲ: ನಿಮಗೂ ವರ್ಷಾ ಅವರಿಗೂ ಎಷ್ಟು ವರ್ಷಗಳಿಂದ ಪರಿಚಯ
ಅಭಿನವ: ಐದಾರು ವರ್ಷಗಳಿಂದ
ವಕೀಲ: ಪರಿಚಯ ಹೇಗಾಯಿತು?
ಅಭಿನವ: ನನ್ನ ತಂದೆ ಅವರ ತಂದೆ ಇಬ್ಬರೂ ಆಪ್ತ ಮಿತ್ರರು… ಇಬ್ಬರೂ ರಾಜಕೀಯದಲ್ಲಿದ್ದಾರೆ… ಅವರು ತಮ್ಮ ತಂದೆ ಜೊತೆ ನಮ್ಮ ಮನೆಗೆ ಬರ್ತಿದ್ದರು… ಹೀಗೆ ಪರಿಚಯವಾಯಿತು… ನಾವಿಬ್ಬರೂ ಒಳ್ಳೇ ಸ್ನೇಹಿತರಾದೆವು… ಪರಸ್ಪರ ಮನೆಗಳಿಗೆ ಹೋಗಿ ಬರಲಾರಂಭಿಸಿದೆವು.
ವಕೀಲ: ಸ್ನೇಹವಷ್ಟೇನೋ ಅಥವಾ ಪ್ರೀತಿನೂ…ಓ
ಅಭಿನವ: ಕ್ರಮೇಣ ಪರಸ್ಪರ ಪ್ರೀತಿಸಲಾರಂಭಿಸಿದೆವು
ವಕೀಲ: ಪ್ರೀತಿಯೋ ಲೈಂಗಿಕ ಆಕರ್ಷಣೆಯೋ?
ಅಭಿನವ: ಎರಡೂನು
ವಕೀಲ: ಮದುವೆಗೇಕೆ ವಿರೋಧ?
ಅಭಿನವ: ಮದುವೆಯ ಬಂಧನ ನನಗೆ ಬೇಕಿಲ್ಲ.. ಮ್ಯಾರೇಜ್ ಆಸ್ ಅನ್ ಇನ್ ಸ್ಟಿಟ್ಯೂಷನ್ ಐ ಹೇಟ್…ಇಟೀಸ್
ಎ ಬಾಂಡೇಜ್….
ವಕೀಲ: ಧರ್ಮಶಾಸ್ತ್ರಗಳ ಪ್ರಕಾರ ಗಂಡು ಹೆಣ್ಣಿಗೆ ತಾಳಿ ಕಟ್ಟಿ ಸಪ್ತಪದಿ ತುಳಿಯದ ಮದುವೆ ಸಿಂಧುವಲ್ಲ
ಅನುಭವ: ನಮ್ಮಿಬ್ಬರಿಗೂ ಮದುವೆ ಇಷ್ಟವಿಲ್ಲ… ನಾವು ಜೀವಮಾನವಿಡೀ ಸ್ನೇಹಿತರಾಗೇ ಒಟ್ಟಿಗೆ ಬಾಳಲಿಕ್ಕೆ
ಇಷ್ಟಪಡ್ತೀವಿ…. ವಿ ಬಿಲೀವ್ ಇನ್ ಮಾಡರ್ನ್ ಕಾನ್ಸೆಪ್ಟ್, ಲಿವ್ ಇನ್ ರಿಲೇಶನ್ ಶಿಪ್ ತರಹ…
ವಕೀಲ: ಆದರೆ ನಿಮ್ಮ ಗೆಳತಿಗೆ ಅದರಲ್ಲಿ ನಂಬಿಕೆ ಇದ್ದಂತಿಲ್ಲ
ಅನುಭವ: ಲೀವ್ ಇನ್ ರಿಲೇಶನ್ ಶಿಪ್ ಗೆ ಒಪ್ಪಿಕೊಂಡೇ ಬಂದರು… ಈಗ ಅವರು ಬೇರೆಯವರ ಮಾತನ್ನು ಕೇಳಿಕೊಂಡು ಹಾಗೆ
ಹೇಳ್ತಿದಾರೆ
ವಕೀಲ: ನಿಮ್ಮ ಮೇಲೆ ಲೈಂಗಿಕ ಬಲತ್ಕಾರದ ಆರೋಪಾನೂ ಮಾಡಿದಾರಲ್ಲ
ಅಭಿನವ: ಅದು ಸುಳ್ಳು ನಾನು ಯಾವತ್ತೂ ಅವರು ಇಷ್ಟಪಡದೆ ಅವರನ್ನು ಮುಟ್ಟಿಲ್ಲ
ವಕೀಲ: ಅವರ ಆತ್ಮಹತ್ಯೆ ಪ್ರಯತ್ನಕ್ಕೆ ನೀವೇ ಕಾರಣ ಎಂದು ಹೇಳಿದಾರಲ್ಲ?
ಅಭಿನವ: ಅದೂ ಸುಳ್ಳು
ವಕೀಲ: ಪಾಟೀ ಸವಾಲು ಇಷ್ಟೆ
ಪಬ್ಲಿಕ್ ಪ್ರಾಸಿಕ್ಯೂಟರ್: ಮಹಾಸ್ವಾಮಿ… ಮದುವೆಗೆ ನಿರಾಕರಿಸುವ ಮೂಲಕ ಆರೋಪಿ ಅಭಿನವ ಕುಮಾರ್ ರಿಂದ ಆತ್ಮಹತ್ಯೆಗೆ
ಪ್ರೇರಣೆಯಾಗಿದೆ. ಆದ್ದರಿಂದ ಅವರಿಗೆ ಶಿಕ್ಷೆಯಾಗಬೇಕು ಹಾಗೂ ವರ್ಷಾಳ ಖುಲಾಸೆಯಾಗಬೇಕು
ನ್ಯಾಯಾಧೀಶರು: ತೀರ್ಪು ಕಾಯ್ದಿರಿಸಲಾಗಿದೆ. ಮೊಕದ್ದಮೆಯನ್ನು ಮುಂದಿನ ವರ್ಷದ ಜನವರಿ ೧೦ಕ್ಕೆ ಮು೦ದೂಡಲಾಗಿದೆ… ಅಂದು
ತೀರ್ಪು ನೀಡಲಾಗುವುದು.
(ನ್ಯಾಯಾಲಯ ಬರಖಾಸ್ತ್ ಆಗುವುದು. ಸ್ವಲ್ಪಕಾಲ ರಂಗದ ಮೇಲೆ ಕತ್ತಲು ಆವರಿಸುವುದು. ನಂತರ ನಿಧಾನವಾಗಿ ಮಂದ ಬೆಳಕು ಮೂಡುವುದು. ರಂಗದ ಮಧ್ಯದಲ್ಲಿ ಸೂತ್ರಧಾರ ನಿಂತಿದ್ದಾನೆ. ಅವನ ಸುತ್ತ ಪ್ರಜೆಗಳು ಮುತ್ತಿಕೊಂಡಿದ್ದಾರೆ)
ಪ್ರಜೆ೧: ಅಪ್ಪಾ ಸೂತ್ರಧಾರ ಏನ್ ಕಥೆ ನಿಂದು. ಎಲವನ್ನೂ ಆಯೋಮಯ ಮಾಡಿಟ್ಟಿದಿಯಲ್ಲ.
ಸೂತ್ರಧಾರ: ಎಲ್ಲಾನೂ ಸರಿ ಹೋಗುತ್ತೆ ಮುಂದಿನ ದಿನಗಳಲ್ಲಿ…
ಪ್ರಜೆ-೨: ಏನ್ ಸರಿ ಹೋಗುತ್ತೆ. ನ್ಯಾಯಾಧೀಶರು ಒಂದರಲ್ಲು ತೀರ್ಪು ಕೊಡಲಿಲ್ಲ…
ಪ್ರಜೆ-೩: ನ್ಯಾಯ ಎಲ್ಲಿದೆ?
ಸೂತ್ರಧಾಋ: ನ್ಯಾಯ ನ್ಯಾಯಾಲಯದೊಳಗಿದೆ. ನಿಮಗೋಸ್ಕರಾನೆ ನ್ಯಾಯದ ಬಾಗಿಲು ತೆಗೆದಿತ್ತು. ಹೋಗಿ ತಗೋಬೇಕಿತ್ತು..
ಪ್ರಜೆ-೧: ಅಪ್ಪಾ ಸೂತ್ರಧಾರ, ನಲವತ್ತು ಪರ್ಸೆಂಟ್ ಕೇಸ್ ಏನಾಯ್ತು?
ಪ್ರಜೆ-೨: ನಲವತ್ತು ಪರ್ಸೆಂಟ್ ಸೂಟ್ ಕೇಸ್ ನೊಳಗೆ ಸೇರಿಕೊಂಡಿತು.
ಪ್ರಜೆ-೩: ಸೂಟ್ ಕೇಸ್ ಏನಾಯ್ತು?
ಮತ್ತೊಬ್ಬ ಪ್ರಜೆ: ಸೂಟ್ ಕೇಸ್ ಸಚಿವರು, ಶಾಸಕರುಗಳ ಮನೇಗೆ ಹೋಯ್ತು
ಪ್ರಜೆ-೧: ನಲವತ್ತು ಪರ್ಸೆ೦ಟ್ ಹೋಯ್ತು ಸೂಟ್ ಕೇಸ್ ಬಂತು ಡುಂ… ಡು…
ಪ್ರಜೆ-೨: ಸೂಟ್ ಕೇಸ್ ಹೋಯ್ತು ಕೆಲಸ ಆಯ್ತು ಡುಂ… ಡು೦..
ಪ್ರಜೆಗಳು ಎಲ್ಲರೂ: ನಲವತ್ತು ಪರ್ಸೆ೦ಟ್ ಹೋಯ್ತು ಡುಂ..ಡು೦..
ಸೂಟ್ ಕೇಸ್ ಬಂತು ಡುಂ…ಡು೦..
ಮಂತ್ರಿಗಳು ಶಾಸಕರು ಡುಂ…ಡು….
ಸೂಟ್ ಕೇಸ್ ಎಲ್ಲಿ ಹೋಯ್ತು ಡುಂ…ಡು೦…
ಹಿತ್ತಲ ಬಾಗಿಲಿಂದ ಮಂತ್ರಿಗಳು, ಶಾಸಕರ ಮನೆಗೆ ಹೋಯ್ತು ಡುಂ…ಡುಂ
ಆ ಮೇಲೆ ಏನಾಯ್ತು ಡುಂ..ಡು…
ಕೆಲಸ ಆಯ್ತು ಡುಂ…ಡುಂ…
ಪ್ರಜೆಗಳಿಗಾಯ್ತು ಪಂಗನಾಮ ಡುಂ..ಡು…
(ಎ೦ದು ರಾಗವಾಗಿ ಪಲುಕುತ್ತ ಸೂತ್ರಧಾರನ ಸುತ್ತ ಕುಣಿಯುವರು. ಸೂತ್ರಧಾರ ಇವರಿಂದ ತಪ್ಪಿಸಿಕೊಳ್ಳಲು ಹವಣಿಸುವನು.
ಅಷ್ಟರಲ್ಲಿ ಪ್ರಜೆಯೊಬ್ಬ ಅವನ ರಟ್ಟೆ ಹಿಡಿದು ನಿಲ್ಲಿಸಿ.)
ಏಯ್ ಎಲ್ಲಿ ಹೋಗ್ತೀಯ. ಇನ್ನೂ ಕಥೆ ಮುಗಿದಿಲ್ಲ. ಆ ಯುವತಿ ಆತ್ಮಹತ್ಯೆ ಕೇಸ್… ಅವರಿಬ್ಬರ ಗತಿ ಏನು?
ಸೂತ್ರಧಾರ: ನ್ಯಾಯಾಲಯ ಇಬ್ಬರ ವಾದ ಪ್ರತಿವಾದಗಳನ್ನು ಕೇಳಿದೆ. ತೀರ್ಪು ಕಾಯ್ದಿರಿಸಿದೆ. ನಾವೂ ಕಾಯೋಣ.
ಪ್ರಜೆ-೧: ಅಲ್ಲಿಯವರೆಗೂ ಆಕಿ ಏನ್ ಮಾಡಬೇಕು
ಸೂತ್ರಧಾರ: ಈಗಿನ ವ್ಯವಸ್ಥೆಯೇ ಮುಂದುವರಿಯುತ್ತೆ.
ಪ್ರಜೆ-೨: ಅಂದರೆ
ಸೂತಧಾರ: ಅದೇನೋ ಮಾಡ್ಕೊಂಡಾರಲ್ಲ…ಲಿವ್ ಇನ್ ಅರೇಂಜ್‌ಮೆ೦ಟ್.
ಪ್ರಜೆ-೩ (ಮಹಿಳೆ): ಅದು ಸರಿ ಇಲ್ಲ…ಅವಳದು ಇಹಪರದ ಪ್ರಶ್ನೆ ಇದೆ. ಹೆಣ್ಣು ಇಹದಲ್ಲೂ ಪರದಲ್ಲೂ ಉಚ್ಚಿಷ್ಟ ತಿಂದುಕೊ೦ಡು
ಗುಲಾಮಳಾಗೇ ಇರಬೇಕು ಅನ್ನೋ ಹೊಸ ವ್ಯವಸ್ಥಾ ಏನು ಇದು?
ಸೂತ್ರಧಾರ: ನಂಗೆ ತಿಳೀದು…
ಪ್ರಜೆ-೧: ಏಯ್ ನೀನು ಹಾಗೆಲ್ಲ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು. ಹೋಗಿ ನೀನೆ ನಿಂತು ಇಬ್ಬರ ಮದುವೆ ಮಾಡಿಸು…
ಸೂತ್ರಧಾರ: (ಸ್ವಗತ) ತಗೊಳ್ಳಪ್ಪ ಸಮಸ್ಯೆ ನನ್ನ ಮೈಮೇಲೆ ಬಂತು… ನಾವೇನಿದ್ದರೂ ನಾಟಕದ ಮಂದೀನಪ್ಪ ಮದುವೆ ಮಾಡಿಸೊ
ಪುರೋಹಿತರಲ್ಲ…..
ಪ್ರಜೆ-೨: ಆದರೆ ನೀನು ಸೂತ್ರಧಾರ ಇದ್ದೀಯ
ಸೋತ್ರಧಾರ : ಹೌದೇನ್ರೀ… ನಂಗೀಗ ಒಂದು ದಾಸರ ಪದ ನೆನಪಾಗ್ತಿದೆ…
“ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೆ
……………………………………………….
(ಮೇಳ ಈ ಹಾಡು ಹೇಳುತ್ತಿದ್ದಂತೆ ಸೂತ್ರಧಾರ ಪ್ರಜೆಗಳತ್ತ ಬೆರಳು ಮಾಡಿ)
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ. ಆದರೂ ಸಾಕ್ಷಿ ಪ್ರಜ್ಞೆ ಆಗಿ ಒಂದು ಮಾತ ಹೇಳ್ತೀನಿ ಕಿವಿಗೊಟ್ಟುಕೇಳಿ…
ಪ್ರಜೆಗಳಾದ ನೀವು ಎಚ್ಚೆತ್ತುಕೊಳ್ಳುವವರೆಗೆ ಪರಿಸ್ಥಿತಿ ಸುಧಾರಿಸುವುದಿಲ್ಲ…
( ಎನ್ನುತ್ತ ಉಪಾಯವಾಗಿ ಪ್ರಜೆಗಳಿಂದ ತಪ್ಪಿಸಿಕೊಂಡು ರಂಗದಿ೦ದ ಜಿಗಿದು ಪ್ರೇಕ್ಷಕರ ಮಧ್ಯ ಅಡಗಿ ಕುಳಿತುಕೊಳ್ಳುವನು…
ಪ್ರಜೆಗಳು ದಾರಿ ಕಾಣದವರಂತೆ ಅನಾಥರಂತೆ ನಿಂತಿರುವರು. ಅವರಲ್ಲಿ ಒಬ್ಬನ ಮೇಲೆ ಸ್ಪಾಟ್ ನ ಬೆಳಕು ಬೀಳುವುದು.)
ಪ್ರಜೆ-೧: ಮುಂದೇನು?
ಪ್ರಜೆ -೨: ಸೂತ್ರಧಾರ ಅಪ್ಪಣೆ ಕೊಡಿಸಿದನಲ್ಲ ನಮ್ಮದೇ ಅಪರಾಧ ಅಂತ…
ಪ್ರಜೆ-೩: ಹೌದು ಮುಂದೆ ಹಾಗಾಗದಂತೆ ನೋಡಿಕೋ ಬೇಕು.
ಪ್ರಜೆಗಳು: ಹೌದು ಎಚ್ಚೆತ್ತುಕೊಳ್ಳಬೇಕು.
ಎಲ್ಲರೂ: ನಾವು ಎಚ್ಚೆತ್ತುಕೊಳ್ಳ ಬೇಕು… ಜಾಗೃತರಾಗಬೇಕು… ಜವಾಬ್ದಾರರಾಗಬೇಕು
(ನಂತರ ತೆರೆ ಇಳಿಯುವುದು)
। ಮುಕ್ತಾಯ ।






0 Comments