ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಶುರುವಾಯಿತು ಸ್ವಸ್ತಿಪಾನ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ‘ಮೀಡಿಯಾ ಡೈರಿ’ ಬಹುರೂಪಿಯಲ್ಲಿ ‘ಆ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ಪುಸ್ತಕವಾಗಿ ರೂಪುಗೊಂಡಿತು.

ಆ ಪತ್ರಿಕೋದ್ಯಮ‘ ಪ್ರತಿಗಾಗಿ ಸಂಪರ್ಕಿಸಿ : 70191 82729 ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3nWUsuJ

ಜಿ ಎನ್ ರಂಗನಾಥ ರಾವ್ ಅವರು ಹೊಸ ನಾಟಕ ಸರಣಿ ಬರೆಯಲಿದ್ದಾರೆ.

3

ಅಂಕ – ೨
ದೃಶ್ಯ – ೧

ಮೇಳ: ಶುರುವಾಯಿತು ಸ್ವಸ್ತಿಪಾನ
ಬುರುಬುರು ನೊರೆಯ ಬಿಯರ್ ಪಾನ
ರಂಭಾ ಊರ್ವಶೀ ಭರಪೂರ ಮೋಜುಗಾನ

ಯಶವಂತ: ತೇಲಿ ಬರುವ ಶಹನಾಯ ನಮ್ಮ ಕುಣತಕಲ್ಲವೇನ…
ಎಲ್ಲರೂ: ಹಾಯ್ ಹಾಯ್ ಹಾಯ್
ಕನ್ನಡ ಪ್ರೇಮಿ: ಯಶವಂತ, ನಾನೊ೦ದು ಗೀತ ರಚನಾ ಮಾಡಿದೀನಿ ಹಾಡ್ಲೇನೋ
ಯಶವಂತ; ಏನಪ್ ಅಭಿನವ
ಅಭಿನವ: ಕೇಳೋಣು…ಕೇಳೋಣು…ಕನ್ನಡಕ್ಕ ಎನಕರೇಜ್ ಮಾಡೋಣು
ಕನ್ನಡ ಪ್ರೇಮಿ: (ಹಾಡುವನು) ಜಂಟಿ ಜಡೆಗಳಾ ಹೆಣದವಳೇ
ಮುಡಿಗೊಂಟಿ ಗುಲಾಬಿಯ ಮುಡಿದವಳೇ
ಗಾಂಧಿ ಬಜಾರಿನ ಬಸ್ಟಾಪಿನಲಿ
ನಿಂತು ಮುಗುಳ್ನಗೆ ಬೀರುವಳೇ
ವರ್ಷಾ: ಛಲೋ ಇದ್ಯಪ ನಿನ್ನ ಕವಿತಾ..ಯಾರಾಕಿ?
(ಎಂದು ಛೇಡಿಸುವಳು. ಕನ್ನಡ ಪ್ರೇಮಿ ಕೆಂಪಾಗಿ ನಾಚುವನು)
ಯಶವಂತ: ಕೃಷ್ಣ ಬನ್ನಿ ಇಲ್ಲಿ…ಅಭಿನವ ನಾನಿನ್ನು ಶಾಂಪೇನಿಗೆ ಶಿಫ್ಟ್ ಆಗುವೆನು.
ಅಭಿನವ: ಆಯ್ತು ಯಾರಿಗೆ ಏನು ಪರಮಾಯಿಷೀನೋ ಅದು ತಗೊಳ್ಳಿ.. ವರ್ಷಾ ನೀನು ಸ್ವಲ್ಪ ಇತ್ತ ಬಾ ನಾವು ತುಸು ದೂರ
ಹೋಗಿ ಅಲ್ಲಿ ಕೋಡೋನು.
(ಗೆಳೆಯರು ಇಬ್ಬರು ಮೂವರಾಗಿ ಕುಳಿತು ನಿಂತು ಹರಟೆ ಹೊಡೆಯುತ್ತಾ ಕುಡಿಯುವರು. ಸೌದಾಮಿನಿ ಒಬ್ಬಳೇ ಒಂದು ಮೂಲೆಯಲ್ಲಿ ಕುಳಿತಿರುವಳು. ಅಭಿನವ-ವರ್ಷಾ ದೂರದಲ್ಲಿ ಹಾಕಿದ್ದ ಮೆತ್ತೆಯ ಕುರ್ಚಿಗಳಲ್ಲಿ ಕುಳಿತು ಪಿಸು ದನಿಯಲ್ಲಿ
ಮಾತಾಡಿಕೊಳ್ಳುವರು. ಅಭಿನವ ವರ್ಷಾಳ ಕೈಗಳನ್ನು ಎತ್ತಿ ತನ್ನ ಕೈಗಳಲ್ಲಿಟ್ಟುಕೊಂಡು….)
ಅಭಿನವ: ಆಹಾ! ಎಷ್ಟು ಕೋಮಲವಾದ ಕೈಗಳು….ಕವಿಗಳು ವರ್ಣಿಸಿದ್ಹಾಂಗ ನಿನ್ನ ಕರಪಲ್ಲವಗಳು ‘ತಳಿತಚೂತ ಹೈಮ
ವರ್ಣ…’ ಹೂವಿನಂತೆ, ಹಕ್ಕಿಯ ತುಪ್ಪದಂತೆ ಮೃದು…ಮೃದು…

ವರ್ಷಾ: ಓಹ್.. ಅನುಭವ್ ಡೋಂಟ ಬಿ ಸೋ ಮಚ್ ಎಮೋಷನಲ್. ಕವಿ ಥರಾ ನಾಟಕ ಮಾಡಬ್ಯಾಡ…
ಅಭಿನವ: ಇಲ್ಲ ವರ್ಷಾ, ಇದು ನಾಟಕಾನ.. ಐ ಲವ್ ಯೂ … ನಾನು ನಿನ್ನ ಎಷ್ಟು ಲವ್ ಮಾಡ್ತೀನಿ ಅಂತ ನಿನಗೆ ಗೊತ್ತಿಲ್ಲ…
ವರ್ಷಾ: ಎಷ್ಟು! ಫರ‍್ಟಿ ಪರ್ಸೆಂಟ್…
ಅಭಿನವ: ಛೀ ಆ ಹೊಲಸು ಪರ್ಸೆಂಟೇಜ್ ರಾಜಕೀಯಾನ ನಮ್ಮ ಪವಿತ್ರ ಸಂಬ೦ಧದಾಗ ಯಾಕ ತರ್ತೀ ನಮ್ಮದು ಹಂಡ್ರಡ್
ಪರ್ಸೆಂಟ್ ಲವ್ವೂ….
ವರ್ಷಾ: ಆಯ್ತೋ ಅಭಿನವ ನಿನ್ ಮಾತನ ನಾ ನಂಬ್ತೀನಿ…ಆದರ…
ಅಭಿನವ: ಏನ್ ಆದ್ರ ಅಂತ ರಾಗ ಏಳೀತಿ….ನನ್ನ ಹುಟ್ಟುಹಬ್ಬದ ಶುಭ ಮುಹೂರ್ತದಾಗ ನೀನು ಬಂದದ್ದು, ಲಿವ್‌ ಇನ್
ರಿಲೇಷನ್ಶಿಪ್ ಅರೇಂಜ್ಮೆ೦ಟಿಗೆ ಒಪ್ಪಿ ಬಂದು ತುಂಬ ಒಳ್ಳೇದಾ ಅಯ್ತು….
ವರ್ಷಾ: ಹೌದು ಇದೊಂದು ಶುಭ ಮುಹೂರ್ತ ಎಂದು ತಿಳಿದೇ ನಾ ಬಂದೀನಿ…ಆದರೆ ನನದು ಕೆಲವು ಶರತ್ತುಗಳಿವೆ…
ಅಭಿನವ: ನಿಂದು ಏನಾದ್ರೂ ಶರತ್ತಿರಲಿ ನನ್ನ ಒಪ್ಪಿಗೆ ಇದೆ
ವರ್ಷಾ: ಕೇಳಿಸಿಕೊಳ್ಳೋ ಮುಂಚೆ ಏನಾದರೂ ಬಡಿಬಡಿಸ ಬೇಡಾ…ನಿನ್ನ ಗ್ಲಾಸ್ನ ಆಕಡಿ ಇಡು…ನಮ್ಮ ಮಾತಿನ ಮಧ್ಯೆ
ನಿಶಾ ಬ್ಯಾಡ
(ಇಬ್ಬರೂ ಗ್ಲಾಸುಗಳನ್ನು ಪಕ್ಕಕ್ಕೆ ಸರಿಸುವರು)
ವರ್ಷಾ: ಪೂರ್ತಿ ಗಮನವಿಟ್ಟು ಕೇಳೀಸ್ಕೋ.. ನಾನು ಬಾಲ್ಯದಿಂದ ಪೂರ್ತಿ ಸ್ವಾತಂತ್ರ್ಯದಲ್ಲಿ ಹಾರೋ ಹಕ್ಕಿ ಹಾಂಗ ಬೆಳೆದವಳು.. ಆ
ಸ್ವಾತಂತ್ರ್ಯ ನನ್ನ ಬದುಕಿನ ಉಸಿರಾಗಿದೆ. ನಾನು ನನಗ ಬೇಕಾದ್ದ ಉಡೋಳೂ, ಉಣ್ಣೋಳು…. ಇಂಥದಾ ಡ್ರೆಸ್
ಹಾಕ್ಕೋ, ಇಂಥದಾ ಬಿಂದಿ ಇಟ್ಕೊ, ಇ೦ಥದಾ ಊಟ ಮಾಡು…ಭೈರಪ್ಪನ್ನ ಓದು ಕುವೆಂಪೂ
ಓದಬ್ಯಾಡ, ರಾಜಕುಮಾರ, ಕಲ್ಪನಾ ಚಿತ್ರಗಳನ್ನಾ ನೋಡು… ಹೀಂಗೆಲ್ಲ ಒತ್ತಡಗಳನ್ನ, ಕಟ್ಟುಪಾಡುಗಳನ್ನ ನನ್ನ
ಮೇಲೆ ಹೇರಬಾರದು…
ಅಭಿನವ: ಖಂಡಿತಾ ಇಲ್ಲ.. ಕುಲದೇವತಾ ಅಂಬಾ ಭವಾನಿ ಮೇಲೆ ಆಣೆ ಪ್ರಮಾಣ ಮಾಡಿ ಹೇಳ್ತೀನಿ…
ವರ್ಷಾ: ಇನ್ನೊಂದು ಮುಖ್ಯ ವಿಷಯಾ…. ನೀನು ನನ್ನ ಅನುಮತಿ ಇಲ್ಲದ ನನ್ನ ರೂಮಿಗೆ ಬರಬಾರದು.. ಆಮೇಲೆ ಸೆಕ್ಸು ಪಕ್ಸು
ಅಂತ ಒತ್ತಾಯ ಮಾಡಬಾರದು …
ಆಭನವ: ಛೀ..ಛೀ… ನನ್ನ ಎನ್ ಅಂಥಾ thirdಕ್ಲಾಸ್ ಅಂತ ತಿಳಿದಿಯೇನು ….ಸೆಕ್ಸುಪಕ್ಸು, ಮಾರ್ಕೆಟ್ನಲ್ಲಿ ಸುರಳೀತ
ಸಿಗೋದಕ್ಕೆ ನಾನು ಬಾಯಿ ಬಿಡೋನಲ್ಲ, ನಮ್ಮದು ಪವಿತ್ರ ಪ್ರೀತಿ, ಪವಿತ್ರ ಲಿವ್‌ ಇನ್ ರಿಲೇಷನ್‌ಶಿಪ್….
ವರ್ಷಾ: ಆಯ್ತು ಅಭಿನವ, ನಿನ್ನ ಮಾತ್ನಲ್ಲಿ ನಂಗೆ ಭರವಸೆ ಇದೆ….
(ಅಷ್ಟರಲ್ಲಿ ಹಿನ್ನೆಲೆ ರಂಗದಲ್ಲಿ ಸ್ವಲ್ಪ ಗಲಾಟೆ ಗದ್ಲ ಆಗುವುದು. ಅಭಿನವ ಎಚ್ಚೆತ್ತುಕೊಂಡು, ಯಶವಂತ ಎಲ್ಲಿದೀಯ ಎಂದು ಕೂಗುವನು…ಸೌದಾಮಿನಿ ಕುಳಿತಿರುವ ಮೂಲೆ. ಅಲ್ಲಿಗೆ ಸ್ವಲ್ಪ ನಿಶಾ ಏರಿದ ಗೆಳೆಯನೊಬ್ಬ ಅವಳಲ್ಲಿ ಆಕರ್ಷಿತನಾಗುವನು.)
ನಿಶಾ ಏರಿದ ಗೆಳೆಯ: ಏನ್ರೀ ಭರಪೂರ ಉತ್ಸಾಹದ ಈ ಪಾರ್ಟಿನಾಗ ಮಲೇರಿಯಾ ಜ್ವರದ್ಹಂಗ ಒಬ್ಬರೇ ಕುಳಿತೀರಲ್ಲ. ಒಂದು ಡ್ರಿಂಕ್ಸ್ ತಂದುಕೊಡ್ಲೇನ್ರೀ …)
ಸೌದಾಮಿನಿ: ಬೇಡ… ನೀವು ದೂರ ಸರೀರಿ
ವ್ಯಕ್ತಿ (ಪಾನಮತ್ತನಾಗಿ ಜೋಲಿ ಹೊಡೀತಿದಾನೆ): ಹೀಂಗ ಯಾಕಬ್ಯಾಡ ಅಂತರ‍್ರೀ…. ಒ೦ದು ಜಿನ್ ತಗೋರಿ….
ಸೌದಾಮಿನಿ; ಯ್ ಯಾರೋ ನೀನು…ವರ್ಷಾ ಅಕ್ಕಗ ಹೇಳ್ತೀನಿ ನೋಡು…
ವ್ಯಕ್ತಿ: ನಿನ್ನ ಶುಭನಾಮವನ್ನಾದರೂ ಹೇಳವ್ವಾ ತಂಗಿ…
ಸವಧಾಮಿನಿ; ನನ್ನ ಹೆಸರು ಕಟ್ಕೊಂಡು ನಿನಗೇನೂ?
ವ್ಯಕ್ತಿ: ನಿನ್ನ ಹೆಸರತಗೊಂಡು ಪದಮಾಡಿ ಹಾಡ್ತೀನವ್ವ..
ಸೌದಾಮಿನಿ: ಸೌದಾಮಿನಿ ಅಂತಾರ …
ವ್ಯಕ್ತಿ: ಆಹಾ! ಸೌದಾ …ಸೌದಾಮಿನಿ….
ಸೌದಾ ಸೌದಾ ವಿಧಾನ ಸೌಧ\ ಸೌದಾ ವಿಕಾಸ ಸೌಧಾ….

ವರ್ಷಾ: ಅಭಿನವ ಆ ಕಡೆ ಸ್ವಲ್ಪ ಚೇಷ್ಟೆ ಶುರುವಾಗಿದೆ… ನಿನ್ನ ಹಕ್ಕಿಗಳಿಗೆ ತಲೆ ತುಂಬ ರೆಕ್ಕೆ ಮೂಡಿವೆ… ಅವನ್ನ ಹಾರಲಿ೯ಕ್ಕೆ ಬಿಡು..

ಅಭಿನವ: ಕೃಷ್ಣ…ಕೃಷ್ಣ..
(ಕೃಷ್ಣ ಬರುವನು)
ಅಭಿನವ: ಕೃಷ್ಣ, ಯಾರಿಗೂ ಏನೂ ಕೊಡಬ್ಯಾಡ… ಪಾರ್ಟಿ ಬಂದ್ ಮಾಡು.. ಡ್ರೈವರ್ ಚರಣ ಸಿಂಗನ ಕರೀ
ಚರಣ ಸಿಂಗ (ಪ್ರವೇಶಿಸಿ): ಸಾಹೇಬ್ರಾ
ಅಭಿನವ: ನೋಡು ಇವರನೆಲ್ಲ ಅವರವರ ಮನಿ ಮುಟ್ಟಿಸು
ಚರಣ ಸಿಂಗ; ಆಯ್ತರೀ ಸಾಹೇಬ್ರಾ

[ಎಲ್ಲ ತೂರಾಡುತ್ತಾ ಹೊರಡುವರು. ರಂಗದಲ್ಲಿ ಒಂದು ಕ್ಷಣ ಮೌನ.]
ಅಭಿನವ: ಊಟ ಮಾಡೋಣೇನ್ರೀ….
ವರ್ಷಾ: ಇಲ್ಲ ನಾವು ನಮ್ಮ ರೂಮಿನಲ್ಲೆ ಊಟ ಮಾಡ್ತೀವಿ….
ಅಭಿನವ: ಕೃಷ್ಣಾ ….
ರಾಮಪ್ಫ: ಅಪ್ಪಣೆ ಸಾಹೇಬ್ರಾ
ಅಭಿನವ: ಮೇಡಂಗ ಅವರ ರೂಮು ತೋರಿಸು….
ವರ್ಷಾ: ಸೌದಾ ನೀ ಹೋಗಿ ರೂಮು ನೋಡಿ ಬಾ…
(ಸೌದಾಮಿನಿ ಕೃಷ್ಣನ ಜೊತೆ ಸೂಟ್ ಕೇಸ್ ಇತ್ಯಾದಿಯೊಂದಿಗೆ ಹೋಗಿ ರೂಮನ್ನು ನೋಡಿ ಬರುವಳು)
ಸೌದಾಮಿನಿ: ವರ್ಷಾ ಬಾಯಾರ ಘಾತ ಘಾತ ಆಯ್ತು
ವರ್ಷಾ: ಏನು …ಏನಾತ?
ಸೌಧಾಮಿನಿ: ರೂಮಿನ ಬಾಗಿಲಿಗೆ ಒಳಗಿಂದ ಚಿಲಕಾನೇ ಇಲ್ಲ…ಚಿಲಕ ಹಾಕ್ಕದೀರ ನಾವು ಮಲಗಬೇಕಾಗುತ್ತೆ…
ವರ್ಷಾ: ಅಭಿನವ ಏನ್ರೀ ಇದು….
ಅಭಿನವ: ವರ್ಷಾ ಮೇಡಂ ಸಲ್ಪ ಹೊಂದ್ಕೊ ಬೇಕು.. ನಮ್ಮ ತಾತಮುತ್ತಾಂದಿರು ಕಟ್ಟಿದ ಬಂಗ್ಲ ಇದು. ಆಗಿನಿಂದಲ್ಲೂ ಇಲ್ಲಿ
ಬಾಗಿಲುಗಳಿಗೆ ಚಿಲಕ ಇಲ್ಲ. ನಮ್ಮದು ಮುಕ್ತ ದ್ವಾರ
ವರ್ಷಾ : ಅಂದರೆ, ರಕ್ಷಣೆ, ಪ್ರೈವೆಸಿ
ಅಭಿನವ: ಅವರವರ ರಕ್ಷಣಾ, ಅವರವ ಪ್ರೈವೆಸಿ ಅವರವರ ಜವಾಬ್ದಾರಿ….

। ಉಳಿದದ್ದು ನಾಳೆಗೆ ।

‍ಲೇಖಕರು avadhi

13 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading