ಜಾಲಲೋಕದ ಬೀದಿಜಗಳ…

ಇ ಜ್ಞಾನ ಈಚಿನ ಕೆಲದಿನಗಳಲ್ಲಿ ಎಲ್ಲಿಲ್ಲಿ ನೋಡಿದರೂ ವಿಕಿಲೀಕ್ಸ್‌ನದೇ ಸುದ್ದಿ. ಈವರೆಗೂ ರಹಸ್ಯವಾಗಿಡಲಾಗಿದ್ದ ಸಾವಿರಾರು ಸಂಗತಿಗಳನ್ನು ಸಾರ್ವಜನಿಕವಾಗಿ ತಂದು ಸುರಿದಿರುವ ಈ ಜಾಲತಾಣ ಅತ್ಯಲ್ಪ ಸಮಯದಲ್ಲೇ ವಿಶ್ವದೆಲ್ಲೆಡೆ ಹೆಸರುಮಾಡಿಬಿಟ್ಟಿದೆ. ಹೀಗೆ ಬಹಿರಂಗವಾಗಿರುವ ಸಂಗತಿಗಳು ಅದೆಷ್ಟು ಸುದ್ದಿಮಾಡಿವೆಯೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವಿಕಿಲೀಕ್ಸ್ ತಾಣ ಕೂಡ ಸುದ್ದಿಯಲ್ಲಿದೆ. ವಿಶ್ವದೆಲ್ಲೆಡೆಯಿಂದ ವ್ಯಕ್ತವಾಗುತ್ತಿರುವ ಪರ-ವಿರೋಧವಾದ ಪ್ರತಿಕ್ರಿಯೆಗಳ ಜೊತೆಜೊತೆಯಲ್ಲೇ ಅಂತರಜಾಲ ಲೋಕದಲ್ಲೂ ವಿಕಿಲೀಕ್ಸ್ ಕುರಿತು ಸಾಕಷ್ಟು ಗಲಾಟೆಯಾಗುತ್ತಿದೆ. ಇದೆಲ್ಲ ಪ್ರಾರಂಭವಾದದ್ದು ವಿಕಿಲೀಕ್ಸ್ ಜಾಲತಾಣಕ್ಕೆ ಹೋಸ್ಟಿಂಗ್ ಸೇವೆ ಒದಗಿಸಿದ್ದ ಅಮೆಜಾನ್ ಡಾಟ್ ಕಾಂ ಸಂಸ್ಥೆ ತನ್ನ ಸೇವೆಯನ್ನು ಹಿಂತೆಗೆದುಕೊಂಡಾಗ. ತಾನು ವಿಧಿಸಿರುವ ನಿಬಂಧನೆಗಳನ್ನು ವಿಕಿಲೀಕ್ಸ್ ಪಾಲಿಸುತ್ತಿಲ್ಲ ಎನ್ನುವುದು ಅಮೆಜಾನ್‌ನ ಆರೋಪ. ಇದರ ನಂತರ ವಿಕಿಲೀಕ್ಸ್‌ಗೆ ಡೊಮೈನ್ ನೇಮ್ ಸರ್ವಿಸ್ ಒದಗಿಸುತ್ತಿದ್ದ ಸಂಸ್ಥೆ ಕೂಡ ತನ್ನ ಸೇವೆಯನ್ನು ನಿಲ್ಲಿಸಿಬಿಟ್ಟಿತು (ಯಾವುದೇ ತಾಣದ ಯುಆರ್‌ಎಲ್ ಅನ್ನು ಅದರ ಐ.ಪಿ. ವಿಳಾಸದೊಂದಿಗೆ ಹೊಂದಿಸಿಕೊಡುವ ಈ ವ್ಯವಸ್ಥೆ ಇಲ್ಲದಿದ್ದರೆ ಆ ತಾಣವನ್ನು ಯಾರೂ ನೋಡುವುದೇ ಸಾಧ್ಯವಿಲ್ಲ). ವಿಕಿಲೀಕ್ಸ್ ತಾಣದ ಮೇಲೆ ತೀವ್ರಪ್ರಮಾಣದ ಡಿಡಿಒಎಸ್ ದಾಳಿ ನಡೆಯುತ್ತಿದೆ ಹಾಗೂ ಇದರಿಂದ ತನ್ನ ವ್ಯವಸ್ಥೆಯೇ ಅಭದ್ರವಾಗುವ ಸಾಧ್ಯತೆಯಿದೆ; ಹೀಗಾಗಿ ಆ ತಾಣಕ್ಕೆ ನೀಡುತ್ತಿದ್ದ ಡೊಮೈನ್ ನೇಮ್ ಸರ್ವಿಸ್ ಅನ್ನು ನಿಲ್ಲಿಸುತ್ತಿದ್ದೇವೆ ಎನ್ನುವುದು ಆ ಸಂಸ್ಥೆ ನೀಡಿದ ಕಾರಣ. ಏನಿದು ಡಿಡಿಒಎಸ್ ದಾಳಿ? ಜಾಲತಾಣಗಳಿಗೆ ಅಸಂಖ್ಯಾತ ಕೃತಕ ಗ್ರಾಹಕರನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿ ಎಂದು ಕರೆಯುತ್ತಾರೆ. ಇದು ಸೈಬರ್ ಭಯೋತ್ಪಾದನೆಯ ವಿಧಗಳಲ್ಲೊಂದು. ಇಂತಹ ದಾಳಿಗೆ ಈಡಾಗುವ ತಾಣದ ಸರ್ವರ್‌ಗೆ ಇದ್ದಕ್ಕಿದ್ದಂತೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಆ ಜಾಲತಾಣದ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ಜಾಲತಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ. ಸ್ಪಾಮ್ ಕಳುಹಿಸುವ ದಂಧೆಯಂತೆಯೇ ಈ ದಾಳಿಗಳಲ್ಲೂ ಸ್ಪೈವೇರ್‌ಗಳು ಹಾಗೂ ಬಾಟ್‌ನೆಟ್‌ಗಳ ಬಳಕೆ ಸಾಮಾನ್ಯ. ಗೂಢಚಾರಿ ತಂತ್ರಾಂಶ ಅಥವಾ ಸ್ಪೈವೇರ್, ಗಣಕಲೋಕವನ್ನು ಕಾಡುವ ಕುತಂತ್ರಾಂಶಗಳಲ್ಲೊಂದು. ಇವು ಸಾಮಾನ್ಯವಾಗಿ ಉಪಯುಕ್ತ ತಂತ್ರಾಂಶಗಳ ಸೋಗಿನಲ್ಲಿ ಬಳಕೆದಾರರ ಗಣಕವನ್ನು ಪ್ರವೇಶಿಸುತ್ತವೆ. ಬಳಕೆದಾರರ ಗಣಕವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಈ ತಂತ್ರಾಂಶಗಳು ಹ್ಯಾಕರ್‌ಗಳಿಗೆ ನೆರವಾಗುತ್ತವೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುವ ಈ ತಂತ್ರಾಂಶ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುತ್ತದೆ; ಅಂದರೆ ಆ ಗಣಕ ಒಂದು ಜಾಂಬಿ ಗಣಕ ಅಥವಾ ‘ಬಾಟ್’ ಆಗಿ ಬದಲಾಗುತ್ತದೆ (ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ). ಪ್ರಪಂಚದಾದ್ಯಂತ ಇರುವ ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿದ ‘ಬಾಟ್‌ನೆಟ್’ಗಳೆಂಬ ಜಾಲಗಳೂ ಸಿದ್ಧವಾಗುತ್ತವೆ. ಡಿಡಿಒಎಸ್ ದಾಳಿಗೆ ತುತ್ತಾಗುವ ತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರುವುದು ಇವೇ ಬಾಟ್‌ನೆಟ್‌ಗಳಿಂದ. ಈ ಗಣಕಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ. ವಿಕಿಲೀಕ್ಸ್ ವಾರ್ ವಿಕಿಲೀಕ್ಸ್ ವಿರೋಧಿಗಳು ಪ್ರಾರಂಭಿಸಿದ ಡಿಡಿಒಎಸ್ ದಾಳಿಗಳ ಬೆನ್ನಲ್ಲೇ ಡಿಎನ್‌ಎಸ್ ಸೇವೆಯೂ ನಿಂತುಹೋದದ್ದರಿಂದ ವಿಕಿಲೀಕ್ಸ್ ತಾಣ ತನ್ನ ವಿಳಾಸವನ್ನು ಬದಲಾಯಿಸಿಕೊಳ್ಳಬೇಕಾಗಿಬಂತು. ಇದರ ಬೆನ್ನಲ್ಲೇ ವಿಕಿಲೀಕ್ಸ್ ತಾಣಕ್ಕೆ ಬರುವ ದೇಣಿಗೆಗಳನ್ನು ನಾವು ಇನ್ನುಮುಂದೆ ಸಂಗ್ರಹಿಸುವುದಿಲ್ಲ ಎಂದು ವೀಸಾ, ಮಾಸ್ಟರ್‌ಕಾರ್ಡ್ ಹಾಗೂ ಪೇಪಾಲ್ ಸಂಸ್ಥೆಗಳೂ ಘೋಷಿಸಿಬಿಟ್ಟವು. ಇಷ್ಟೆಲ್ಲ ಆದಾಗ ವಿಕಿಲೀಕ್ಸ್ ಬೆಂಬಲಿಗರಿಗೆ ಕೋಪಬಂತು. ತಮ್ಮ ಕೋಪ ತೋರಿಸಿಕೊಳ್ಳಲು ಅವರೂ ಡಿಡಿಒಎಸ್ ದಾಳಿಗಳ ಮೊರೆಹೋದರು. ಅಮೆಜಾನ್, ವೀಸಾ, ಮಾಸ್ಟರ್‌ಕಾರ್ಡ್ ಹಾಗೂ ಪೇಪಾಲ್ ತಾಣಗಳು ಅವರ ಕೋಪಕ್ಕೆ ಗುರಿಯಾಗಬೇಕಾಯಿತು. ಹಬ್ಬುತ್ತಿರುವ ಹಾವಳಿ ಹೀಗೆ ಡಿಡಿಒಎಸ್ ದಾಳಿಗಳನ್ನು ಮಾಡುವ ಮೂಲಕ ತಮ್ಮ ಸಿಟ್ಟುತೀರಿಸಿಕೊಳ್ಳುವ ಚಾಳಿ ಅಂತರಜಾಲ ಲೋಕದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ತಜ್ಞರು ಹೇಳುತ್ತಾರೆ. ವಿವಿಧ ಸಂಘಸಂಸ್ಥೆಗಳ ಜಾಲತಾಣಗಳ ಮೇಲೆ ಅವರ ವಿರೋಧಿಗಳು ಡಿಡಿಒಎಸ್ ದಾಳಿ ನಡೆಸುವುದು ಸಾಮಾನ್ಯವಾಗಿಹೋಗಿದೆಯಂತೆ. ಯಾವುದೋ ಸಿದ್ಧಾಂತವನ್ನು ವಿರೋಧಿಸುವ ಸೋಗಿನಲ್ಲ್ಲಿ ತಮ್ಮ ದುರುದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನಿಸುವ ಸೈಬರ್ ದುಷ್ಕರ್ಮಿಗಳೂ ಈ ತಂತ್ರ ಉಪಯೋಗಿಸುತ್ತಿರುವ ಸಂಶಯವೂ ಇದೆ. ಡಿಡಿಒಎಸ್ ದಾಳಿಗಳನ್ನು ನಡೆಸಲು ಅನುವುಮಾಡಿಕೊಡುವ ತಂತ್ರಾಂಶಗಳು ವಿಶ್ವವ್ಯಾಪಿ ಜಾಲದ ಮೂಲಕ ಸುಲಭವಾಗಿ ಲಭ್ಯವಾಗುತ್ತಿರುವುದೂ ಈ ದಾಳಿಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ. ಯಾವ ಉದ್ದೇಶಕ್ಕೇ ಆಗಲಿ, ಡಿಡಿಒಎಸ್ ದಾಳಿ ಅಥವಾ ಅದರಂತಹ ಇನ್ನಾವುದೇ ಸೈಬರ್ ದುಷ್ಕೃತ್ಯಗಳಲ್ಲಿ ಭಾಗಿಯಾಗುವುದು ಶಿಕ್ಷಾರ್ಹ ಅಪರಾಧವಾಗುತ್ತದೆ; ಹೀಗಾಗಿ ಇವೆಲ್ಲ ತಾಪತ್ರಯಗಳಿಂದ ದೂರವೇ ಇರಿ ಎನ್ನುವುದು ತಜ್ಞರ ಸಲಹೆ]]>

‍ಲೇಖಕರು G

December 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: