
ನಳಿನಾ ಡಿ
ಪದ್ಮಶ್ರೀ ಪುರಸ್ಕೃತ ನಾಡೋಜ ಸುಕ್ರಿ ಬೊಮ್ಮ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ? ಅವರ ಸರಳತೆಯ ಕುರಿತು ಇನ್ನಷ್ಟು ಕುತೂಹಲವೂ ಎಲ್ಲರಿಗಿದೆ. ಇಂಥಾ ಕುತೂಹಲಗಳನ್ನು ತಣಿಸುತ್ತಾ, ಸುಕ್ರಜ್ಜಿಯವರ ಸರಳತೆ, ಬದುಕಿನ ಅನುಭವ, ತಿಳಿ ಹೇಳುವಲ್ಲೂ ಹೊಂದಿರುವ ಘನತೆ ನಮ್ಮನ್ನು ನಮ್ಮ ಮನೆ ಅಜ್ಜಿಯನ್ನೇ ಹತ್ತಿರದಿಂದ ನೋಡಿದ ಅನುಭವ ಒದಗಿಸುತ್ತದೆ.
ಸುಮಾರು ೨೧ ಮಂದಿ ವಿವಿಧ ಪತ್ರಕರ್ತರು, ಅನುಭವಿಗಳಿಂದ ಸುಕ್ರಿಯವರ ಬಗ್ಗೆ ಬರೆಸಿದ ಲೇಖನಗಳ ಸಂಗ್ರಹ ಇದಾಗಿದ್ದು, ಜೊತೆಗೆ ಕಾಳೇಗೌಡ ನಾಗವಾರ ಅವರ ಮುನ್ನುಡಿಯನ್ನು ಹೊಂದಿದೆ. ಸುಕ್ರಜ್ಜಿಯವ ಅದೀಮ ವ್ಯಕ್ತಿತ್ವದ ಪರಿಚಯವನ್ನುಇಲ್ಲಿ ಒಬ್ಬೊಬ್ಬರಾಗಿ ಮಾಡಿಕೊಡುತ್ತಾರೆ. ಜಾನಪದ ಜ್ಞಾನದ ಕಣಜ, ನಾಯಕಿ ಎಂದರೆ ಇವರೇ, ಕಲಾಸಿರಿ, ಲೋಕಸಿರಿ, ಹಾಡುವ ಹಾಲಕ್ಕಿ ಹೀಗೆ ಭಿನ್ನ ಆಯಾಮದಲ್ಲಿ ಸುಕ್ರಜ್ಜಿಯವ ಜ್ನಾನ, ಅಪಾರ ತಿಳುವಳಿಕೆಯ ವಿವಿಧ ಮಜಲುಗಳು ಓದುಗರ ಮುಂದೆ ತೆರೆದಿಡಲಾಗಿದೆ.
‘ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ?’ ಸುಕ್ರಜ್ಜಿಗೆ ಯಾವುದೇ ಸನ್ಮಾನ, ಪ್ರಶಸ್ತಿಗಳಲ್ಲಿಯೂ ಆಸೆ ಇಲ್ಲ. ಮನುಷ್ಯ ಮನುಷ್ಯರೊಡನೆ ಬಾಳಬೇಕೆಂದ ಸದಾಶಯ ಅವರದ್ದು. ‘ಪ್ರಶಸ್ತಿಗಳಿಂದ ಮನುಷ್ಯರಿಗೆ ಬೆಲೆ ಬರುವುದಿಲ್ಲ’ ಎಂಬ ತತ್ವದಲ್ಲಿ ನಂಬುಗೆ ಕೂಡಾ. ತಮ್ಮ ಪರಂಪರೆಯ ಉಡುಗೆ ತೊಡುಗೆಗಳಲ್ಲಿ ತಮ್ಮ ಜಾನಪದ್ಧತಿಗಳ ಅಧಿದೇವತೆಯಂತೆ ಕಂಗೊಳಿಸುವ ಸುಕ್ರಿಯವರ ಬದುಕಿನ ಏಳು ಬೀಳುಗಳ ಚಿತ್ರಣ ಇಲ್ಲಿದೆ.
ಮಗನ ಸಾವು, ಪಾಡು ಪಟ್ಟು ಕೂಲಿ ಮಾಡುವ ದಿನಗಳ ಬಗ್ಗೆ ಬರೆಯುತ್ತಾ ಅವರ ಈ ಹಾಡಿನ ಕುರಿತು ಡಾ.ಶ್ರೀಪಾದ ಶೆಟ್ಟಿ ಹೇಳಿದ್ದಾರೆ

‘ನಾ ಪಟ್ಟ ಪಾಡೆನಗಿರಲಿ
ಹಾಡಿನ ಸವಿಯನ್ನಷ್ಟೇ ನೀಡುವೆ
ರಸಿಕ ನಿನಗೆ
ಕಲ್ಲು ಸಕ್ಕರೆಯಂತ ನಿನ್ನೆದೆಯುಕರಗಿದರೆ
ಅದರ ಸವಿಯನ್ನಷ್ಟೆ ಹಣಿಸು ನನಗೆ’ – ದ. ರಾ. ಬೇಂದ್ರೆ.
ವೈಯಕ್ತಿಕ ನೋವು ನುಂಗಿ ಅವರು ಜನರಿಗಾಗಿ ಟೊಂಕ ಕಟ್ಟಿ ಹೋರಾಟದ ನದಿಯಾದವರು.. ಅರಣ್ಯ ಅತಿಕ್ರಮಣದಾರರ ಹೋರಾಟ, ಸೀಬರ್ಡ್ ನೌಕಾನೆಲೆ ನಿರಾಶ್ರೆ ಇತರ ಬೇಡಿಕೆಗಳಿಗಾಗಿ ಹೋರಾಟ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ, ಪರಿಸರ ಉಳಿಸಿ ಹೋರಾಟ, ಸರಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ.. ಹೀಗೆ ಸಾಲು ಸಾಲು ಈ ಮಹಾತಾಯಿಸಾಥ್ ನೀಡಿರುವ ಹಲವಾರು ಹೋರಾಟಗಳೇ ಇವೆ. ಇಳಿ ವಯೋಮಾನದಲ್ಲೂ ಉತ್ಸಾಹ ಬತ್ತಿಲ್ಲ. ನೊಂದವರಿಗೆ ನ್ಯಾಯ ಕೊಡಿಸುವ ಉಮೇದು ಅವರದ್ದು.
ತಮಗೆ ಪದ್ಮಶ್ರೀ ಬಂತೆಂದು ಹಿಗ್ಗಲಿಲ್ಲ, ಆಗಲೂ ಪ್ರದಾನಿ ಮೋದಿಯವರಿಗೆ ಹಾಲಕ್ಕಿ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆ ತಲುಪಿಸಿದ್ದರು.
ಅಂಕೋಲಾ ತಾಲೂಕಿನ ಶಿರಕುಳಿಯ ದೇವಿ-ಸುಬ್ಬಗೌಡ ದಂಪತಿಗಳ ಕಿರಿಯ ಮುದ್ದು ಮಗಳು ಶುಕ್ರಿ. ಮದುವೆಯಾದದ್ದು ಬಡಗೇರಿಯ ಬೊಮ್ಮಗೌಡರ ಮನೆ ಸೇರಿದರು. ಎಚ್.ಎಲ್ ನಾಗೇಗೌಡ ಮತ್ತು ಹಿ.ಚಿ. ಬೋರಲಿಂಗಯ್ಯನವರು ಶ್ರುಕ್ರಿಯವರ ಹಾಡು ಹಸೆ, ಜಾನಪದ ಜ್ಞಾನದ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.
ಸುಕ್ರಜ್ಜಿಯವರ ಮದುವೆ ಪದಗಳ ಒಂದು ಝಲಕ್

ಹಾಲಲ್ಲಿ ಧಾರೆಯಎರೆದುಅವರ ಪಾದ
ನೀರಲ್ಲಿಕೈರ ತೊಳದಾರೇ..
ಸಂತೋಷ ಆಗಲೆಂದು ಮಗಳಿಗೆ
ಸಂತೋಷ ಆಗಲೆಂದು ಮಗಳಿಗೆ
ಹಾಲಲ್ಲಿ ಧಾರೆಯಎರೆದು
ಆನಂದ ಆಗಲೆಂದು ಅಳಿಯಗೆ
ಹತ್ತು ಬೆರಳಿಟ್ಟು ಶರಣೆಂದು
ಹತ್ತು ಬೆರಳಿಟ್ಟು ಶರಣೆಂದು
ಹಾಲ ಹೆರವಗಿಂಡಿ
ಮೋರೆ ತೊಳಿವುದು ಗಿಂಡಿ
ಹಾಲಲ್ಲಿ ಧಾರೆಯಎರೆದು
ಅವರ ಪಾದ ನೀರಲ್ಲಿಕೈಯ ತೊಳದಾರೇ
ಜಾನಪದ ಜಗತ್ತಿನ ಉಗ್ರಾಣದಂತೆ ಸುಕ್ರಜ್ಜಿಯವರು ನಮಗೆ ಕಾಣಸಿಗುತ್ತಾರೆ. ಜಾನಪದ ಲೋಕದ ಅಕ್ಷರಗಳ ಅಧಿದೇವತೆಯಾಗಿ ಅಷ್ಟೇ ಕಾಣದ ಈ ತಾಯಿ, ಸಾರಾಯಿ ಹೋರಾಟ, ಸಾಕ್ಷರತಾ ಆಂದೋಲನದಲ್ಲೂ ಮುಂದಾಗಿ ಹೋರಾಟ ನಡೆಸಿದ್ದವರು, ಅಕ್ಷರದ ಅವ್ವನಂತೆ.
ಹಾಡಿನೊಂದಿಗೆ ಹಸೆ ಬರೆಯುವುದರಲ್ಲೂ ನುರಿತ ಕೈಗಳು ಅವರದ್ದು.
‘ಸ್ವಾಮೀಯ ನೆನೆದೀದೆ ಭೂಮಿಯ ಬಲದೀದೆ
ಪಾದ ಗುರುಗೋಳ ಪಾದ ಶರಣೆಂಬೆದ್ಯಾವರೆ
ಪಾದ ಗುರುಗೋಖ ಪಾದ ಶರಣೆಂಬೆದ್ಯಾವರೆ
ಮೆಟ್ಟಿನಿಂತ ಭುವಿಗೆ ಶರಣೆಂಬೆ
ಮೆಟ್ಟಿನಿಂತ ಭುವಿಗೆ ಶರಣೆಂಬೆ’
‘ತೊಳಸಿ ತೆಣೆಮೇನೆಕತ್ತು ದೀಪ ಕಂಡೆ
ಅದಕೆ ಬೀಸೀದೋ ಕರೆಗಾಳಿಯೋ
ಅದಕೆ ಬೀಸಿದೋ ಕರೆಗಾಳಿ ದ್ಯಾವರೇ
ಅದಕೆ ಇದಕೆಂತ ಹೊಡಪೆಟ್ಟೋ…’

ಇವರ ಹಾಡುಗಳನ್ನು ಧಾರವಾಡ ಆಕಾಶವಾಣಿ ನಿಲಯದಲ್ಲೂ ಮುದ್ರಿಸಿಕೊಂಡು ಪ್ರಸಾರ ಮಾಡಲಾಗಿದೆ. ಜಾನಪದ ಆಸಕ್ತ, ಸಂಶೋದಕರು, ವಿದ್ವಾಂಸರು ಹೀಗೆ ಅಜ್ಜಿಯನ್ನು ಹುಡುಕಿಕೊಂಡು ಬಂದು ಮಾಹಿತಿ ಪಡೆಯುವವರಿದ್ದಾರೆ. ನೂರಾರು ಬಿರುದುಬಾವಲಿಗಳು ಮನೆಯಲ್ಲಿ ತೂಗಾಡುತ್ತಿದ್ದರೂ ಸುಕ್ರಜ್ಜಿಯವರ ಬಾಳಿನಲ್ಲಿ ಆರ್ಥಿಕವಾಗಿ ಸದೃಢವಾಗಿ ನಿಲ್ಲಲು ಸಾಧ್ಯವಾಗಿಲ್ಲ. ಇಂದಿಗೂ ಕಷ್ಟದ ಜೀವನ ನಡೆಸುವುದೇ ಆಗಿದೆ.
ಸಂದರ್ಶನವೊಂದರಲ್ಲಿ ಸುಕ್ರಿಯವರು ಹೇಳಿದ ಮಾತು ಅವರ ಸರಳತೆ, ಹೃದಯ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ. ‘ಎಷ್ಟೇ ಬಡತನವಿದ್ದರೂ ನನಗೆ ಪ್ರತಿದಿನವೂ ಖುಷಿಯ ಕಾಹಣ ಅನಿಸುತ್ತಿತ್ತು. ಮುಖ್ಯ ಕಾರಣವೆಂದರೆ ನಾನು ಯಾವತ್ತಿಗೂ ಶ್ರೀಎಮಂತಿಕೆಯ ಕನಸು ಕಂಡವಳಲ್ಲ. ಯಾವುದನ್ನಾದರೂ ಪಡೆಯಬೇಕು ಎಂದು ಹಠ ಹಿಡಿದವಳಲ್ಲ. ನನ್ನಲ್ಲಿರುವ ಪರೋಪಕಾರಿಯ ಮನೋಭಾವವೇ ನನ್ನನ್ನು ಖುಷಿಯಾಗಿರುವಂತೆ ನೋಡಿಕೊಂಡಿದೆ.’ ಸುಕ್ರಜ್ಜಿ ಅಂದರೇನೆ ಜಾನಪದ ಬೆಳಕು.. ಈ ಬೆಳಕಿನ ಒಂದು ಕಿರಣವನ್ನಷ್ಟೇ ಇಲ್ಲಿ ಚರ್ಚಿಸಿದ್ದೇನೆ..
ಚಂದಾದ ಹೂದೋಟ
ಚಂದಾ ಇರುತೈತಿ
ತೋಟಕ್ಕೆ ಹೋದಾವ
ಹೂವಾ ಕೊಯ್ಯಬೇಡ
ಕೊಯ್ದ ಹೂವಾ ಮತ್ತೆಜೋಡಿಸಾಕೆ
ಆಗದಾ ಮ್ಯಾಲೆ ನೀ
ತೋಟದಚಂದಾಕೆಡಿಸಬ್ಯಾಡಾ.. ( ಹೆಣ್ಣನ್ನು ಹೂವಿಗೆ ಹೋಲಿಸಿ ಬಹಳ ತಿಳುವಳಿಕೆಯ ಮಾತನ್ನೇ ಹೇಳಿದ್ದಾರೆ ಸುಕ್ರಜ್ಜಿ )






0 Comments