ಜಾತ್ರೆಯ ಸಿಂಡ್ರೆಲಾ

ಸಿಂಧುಚಂದ್ರ ಹೆಗಡೆ ಶಿರಸಿ

ನಮ್ಮೂರ ಜಾತ್ರೆಯಲಿ ಸಾವಿರ ಸಾವಿರ ,”ಸಿಂಡ್ರೆಲಾ” ಕಾಣಸಿಗುತ್ತಾರೆ…
ಚಕಮಕಿ ಚಕಮಕಿ ರಾತ್ರಿಯಲಿ
ಸಿಂಗಾರಗೊಂಡ ಚೆಲುವೆಯರು
ರಸ್ತೆಗಿಳಿಯುತ್ತಾರೆ..
ಹರಳಿನ ಚಪ್ಪಲಿಗೆ ಆತುಗೊಂಡಿರುವ ಬಿರುಕು
ಬಿಂಬಿಸುತ್ತದೆ ಅವರೆಲ್ಲರ ಬದುಕು…
ಪಾತ್ರೆ ತೊಳೆದಿಟ್ಟು, ಎಂಜಲು ಬಳಿದಿಟ್ಟು ಬಂದಿರುವ ಕುರುಹು
ಅವರ ಕಪ್ಪಂಚಿನ ಉಗುರು..
ಲಕಲಕ ಬಲ್ಬುಗಳ ಬೆಳಕಿನಲ್ಲಿ
ಅವರ ಕಣ್ಣುಗಳು ಬಳಲಿದ ಗುರುತು….
ಜಗತ್ತಿನ ಮೇಲೆ ತೊಟ್ಟಿಲು ತೂಗುವ ದೈತ್ಯ ಚಕ್ರಗಳಲ್ಲಿ
ಕುಳಿತು ಕೂಗುತ್ತಾರೆ..
ಆಕ್ರಂದನ ದ ಪ್ರತಿಧ್ವನಿ ಅಲ್ಲಿಯೂ ಇಣುಕುತ್ತದೆ..
ಮಹಾದೇವಿಯ ತೇರಿನ ಕೆಳಗೆ ಬಣ್ಣದಂಗಿಗಳ ನಡುವೆ ನಕ್ಕರೂ

ಅಡಗಿದ ವಿಷಾದವೊಂದು
ಕಣ್ಣಂಚಿನ ಗೆರೆಯಲ್ಲಿ ಹಾದುಹೋಗುತ್ತದೆ…
ಪದಿಕಾರದಗಲದ ರುಮಾಲಿ
ರೋಟಿಗಳು, ಗುಲಾಬಿ ಗ್ಯಾಂಗನ್ನು ನೆನಪಿಸುವ ಬಾಂಬೆ ಮಿಠಾಯಿಗಳ ತಿನ್ನುತ್ತಾ, ನಾಳಿನ
ತಿಂಡಿಗೇನೆಂದು ಯೋಚಿಸುತ್ತಿದ್ದಾರೆ…
ಹುಡುಗಿಯನ್ನು ಕತ್ತರಿಸುವ ಜಾದುಗಾರನನ್ನು ನೋಡಿ
ವಾಸ್ತವವೂ ಇದೇ ಅಲ್ಲವೇ?
ಎನ್ನುತ್ತಾ ಚಳಿರಾತ್ರಿಯಲ್ಲೂ
ಬೆವರುತ್ತಿದ್ದಾರೆ..
ಮರಣಬಾವಿಯ ಆಟದ ಗಂಡಸೊಬ್ಬ ಹೆಂಗಸಿನ ವೇಷ ಧರಿಸಿ ನುಲಿಯುತ್ತಿರುವುದನು
ಕಂಡು, ಜೊಲ್ಲು ಸುರಿಸುವವರ ನೋಡಿ ಇವರು ಮುಸಿಮುಸಿ
ನಗುತ್ತಿದ್ದಾರೆ…
ಕುಣಿಯುವ ಖುರ್ಚಿ, ಹಾರುವ ರೈಲು, ಓಡುವ ದೋಣಿ
ಯಾವುದೂ ಅಚ್ಚರಿಯಲ್ಲ..
ತಾಯಿತ, ಉಂಗುರ, ಲೋಹದ
ಬಳೆಗಳ ನಡುವೆ ರುದ್ರಾಕ್ಷಿ, ಕರಿಮಣಿ ಗಳ ಬದಿಯಲ್ಲೇ , ಚಪ್ಪು ವಸ್ತ್ರದ ಮೇಲೆ ಕರುಳಕುಡಿಗಳ ಮಲಗಿಸುವ ತಾಯಂದಿರೇ
ಇವರ ಸೋಜಿಗ…
ನಿರಾಳ ನಿದ್ರೆಯ ಮಕ್ಕಳು
ಒಮ್ಮೆಗೇ ಎದ್ದು ಕಿರುಚಾಡಿದರೆ
ಜಾತ್ರೆಯ ಎಲ್ಲಾ ಗದ್ದಲವೂ ಮಾಯ…
ಗಾಳಿಯದಿಂಬಿನ ಬೆಟ್ಟ, ಹತ್ತಿಯ
ಮೆತ್ತಗಿನ ಗೊಂಬೆ, ಜೇನುತುಪ್ಪದ ಜಿಲೇಬಿ, ಹಿಮದಂತಹ ಮಿಠಾಯಿ, ಕಡ್ಡಿ ಖರೆ, ಅಕರಾಳ ವಿಕರಾಳ ಖಾಜುಮಾಜಿ
ಎಲ್ಲವನ್ನೂ ದಾಟಿದರೆ
ಸಿಗುವ ಬಳೆಯಂಗಡಿ…
ಪದ್ಮಾವತಿ ಬಳೆ, ಮಸ್ತಾನಿ ಬಳೆ
ಎಂದೆಲ್ಲಾ ಕೂಗುತ್ತಿದ್ದರೂ ಇವರ ಚಿತ್ತ ಹಸಿರುಚಿಕ್ಕಿ ಬಳೆಯತ್ತ..
ಈ ಬಾರಿ ಗಾಜಿನ ಬಳೆ ದುಬಾರಿ
ಎನ್ನುತ್ತಲೇ, ಅತ್ತಿಗೆಗೆ, ಅತ್ತೆಗೆ, ನಾದಿನಿಗೆ, ಜಾತ್ರೆಗೆ ಬರದ ಓರಗಿತ್ತಿಗೆ ಖರೀದಿಸುವ ಸೂಕ್ಷ್ಮಾತಿಸೂಕ್ಷ್ಮ ಬಳೆಗಳಿಗೆ ಒಂದೇ ಸುತ್ತಿನ ಪೇಪರ್ ಪ್ಯಾಕಿಂಗ್..
ಜಾತ್ರೆ ಮುಗಿದಾದ ಮೇಲೆ ದರ
ಇಳಿಯುತ್ತದೆ ಎಂದವಳು ಸ್ವಲ್ಪ ಶಾಣ್ಯಾ…
ದೇವಿ ಗದ್ದುಗೆ ಇಳಿದಾದ ಮೇಲೆ ಬಳೆ ತೊಡಬಾರದು ಎಂದವಳು ಹಳಬಿ ಸುಬ್ಬತ್ತೆ…
ನಡುರಾತ್ರಿ ದಾಟುತ್ತಿದೆ
ಸಿಂಡ್ರೆಲಾ ವೇಷ ಮಾಯವಾಗುವ ಹೊತ್ತು….
ಮನೆ ಸೇರಬೇಕು ಬೇಗ
ಹಳೆಯ ನೈಟಿ ಕಾಯುತ್ತಿದೆ.

‍ಲೇಖಕರು avadhi

May 26, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: