’ಜಾತಸ್ಯ ಮರಣಂ ಧ್ರುವಂ…’ – ಜೋಗಿ ಬರೆದ ಲಾರೀ ಕಥೆ

ವಿನಾಕಾರಣ ಅಮಾನವೀಯ ವರದಿ

ಜೋಗಿ

ಅದೆಷ್ಟೋ ದೂರದಿಂದ ಮೈತುಂಬ ಸರಳುಗಳನ್ನು ಹೇರಿಕೊಂಡು ಬಂದ ಆ ಲಾರಿ ತಿರುವೊಂದರಲ್ಲಿ ಕೆಟ್ಟು ನಿಂತಿತ್ತು. ಕಪ್ಪಗಿನ ಡ್ರೈವರು ಲಾರಿಯಿಂದ ಇಳಿದು ತನ್ನ ಕೈಲಾದ ಪ್ರಯತ್ನ ಮಾಡಿದರೂ ಲಾರಿ ಸರಿಹೋಗಲಿಲ್ಲ. ಏನೋ ದೊಡ್ಡ ತೊಂದರೆಯೇ ಇರಬೇಕು ಅಂದುಕೊಂಡು ಅವನು ಅಲ್ಲಿಂದ ಮೂವತ್ತು ಮೈಲಿ ದೂರದ ದಾವಣಗೆರೆಯಿಂದ ಮೆಕ್ಯಾನಿಕ್ಕನ್ನು ಕರೆಸಬೇಕು ಅಂದುಕೊಳ್ಳುವಷ್ಟರಲ್ಲಿ ಮಳೆ ಶುರುವಾಯಿತು. ಡ್ರೈವರು ಲಾರಿಯ ಕ್ಯಾಬಿನ್ ಹತ್ತಿ ಕೊಳೆಯಾಗಿದ್ದ ದಿಂಬನ್ನು ತಲೆಯಡಿಗೆ ಇಟ್ಟುಕೊಂಡು ಸೀಟಿನ ಮೇಲೆಯೇ ನಿದ್ದೆಹೋದ.
ಸುಮಾರು ಒಂದೂವರೆ ಗಂಟೆ ಸುರಿದ ಮಳೆ ನಿಂತಿತು. ರಸ್ತೆಯಲ್ಲಿ ವಾಹನ ಸಂಚಾರ ಅಷ್ಟಾಗೇನೂ ಇರಲಿಲ್ಲ. ಅವನು ದಾವಣಗೆರೆಗೆ ಹೋಗುವುದಕ್ಕೆ ಯಾವುದಾದರೂ ವಾಹನ ಸಿಗುತ್ತದೇನೋ ಅಂತ ಕಾಯುತ್ತಾ ರಸ್ತೆ ಬದಿ ನಿಂತುಕೊಂಡ. ಅರ್ಧ ಗಂಟೆಯಾದರೂ ಒಂದು ಲಾರಿಯೂ ಬರಲಿಲ್ಲ. ಇನ್ನು ಕಾದು ಉಪಯೋಗವಿಲ್ಲ ಎಂದು ಅವನು ದಾರೀಲಿ ಯಾವುದಾದರೂ ವಾಹನ ಸಿಕ್ಕರೆ ಹತ್ತಿಕೊಂಡರಾಯಿತು ಎಂದು ಯೋಚಿಸುತ್ತಾ ದಾವಣಗೆರೆಯ ಕಡೆ ಹೆಜ್ಜೆ ಹಾಕತೊಡಗಿದ.
ಅವನು ದಾವಣಗೆರೆ ತಲುಪುವ ಹೊತ್ತಿಗೆ ರಾತ್ರಿ ಹತ್ತಾಗಿತ್ತು. ಮಳೆ ಬಂದು ನಿಂತ ಊರು ತಣ್ಣಗಿತ್ತು. ಆ ರಾತ್ರಿಯಲ್ಲಿ ಯಾರೂ ಮೆಕ್ಯಾನಿಕ್ ಸಿಗುವುದಿಲ್ಲವೆಂದೂ, ಸಿಕ್ಕರೂ ಅಷ್ಟು ದೂರ ಅವನು ಬರುವುದಿಲ್ಲವೆಂದೂ ಗೊತ್ತಿದ್ದ ಡ್ರೈವರು, ಪುಟ್ಟ ದಾಬಾವೊಂದಕ್ಕೆ ಹೋಗಿ ಹೊಟ್ಟೆತುಂಬ ಕುಡಿದು, ಊಟ ಮಾಡಿ, ಅದೇ ಹೋಟೆಲ್ಲಿನ ಹೊರಗೆ ದಿಕ್ಕಾಪಾಲಾಗಿ ಎಸೆದಿದ್ದ ಹಳೇ ಕಾಲದ ಮಂಚವೊಂದರಲ್ಲಿ ಮಲಗಿ ನಿದ್ದೆ ಹೋದ.
ಅದೇ ರಾತ್ರಿ ಬೆಂಗಳೂರಿನಿಂದ ಹೊರಟು ಹುಬ್ಬಳ್ಳಿ ಕಡೆ ಧಾವಿಸುತ್ತಿದ್ದ ಕಾರೊಂದರಲ್ಲಿ ಮೂರು ಮಂದಿಯ ಕುಟುಂಬವೊಂದು ಪ್ರಯಾಣಿಸುತ್ತಿತ್ತು. ಬೆಳಗ್ಗೆ ಆ ಕುಟುಂಬ ಹುಬ್ಬಳ್ಳಿಯಲ್ಲಿರುವ ಸಂಬಂಧಿಕರ ಮನೆ ತಲುಪಬೇಕಾಗಿತ್ತು. ಅಲ್ಲಿ ಹನ್ನೊಂದು ದಿನಗಳ ಹಿಂದೆ ಎರಡೂ ಕುಟುಂಬಗಳಿಗೂ ಸೇರಿದ ಹಿರಿಯರೊಬ್ಬರು ತೀರಿಕೊಂಡಿದ್ದರು.
ಅದೇ ರಾತ್ರಿ ಹುಬ್ಬಳ್ಳಿಯಿಂದ ಮತ್ತೊಂದು ಕುಟುಂಬ ಮತ್ತೊಂದು ಕಾರಲ್ಲಿ ಬೆಂಗಳೂರಿಗೆ ಹೊರಟಿತ್ತು. ಬೆಂಗಳೂರಿನ ಹೊಸ ಬಡಾವಣೆಯೊಂದರಲ್ಲಿ ಆ ಕುಟುಂಬದ ಮಿತ್ರರೊಬ್ಬರು ಹೊಸ ಮನೆಯೊಂದನ್ನು ಕಟ್ಟಿದ್ದರು. ಆ ಮನೆಯ ಗೃಹಪ್ರವೇಶ ಸಮಾರಂಭ ಮಾರನೇ ದಿನ ಬೆಳಗ್ಗೆ ನಡೆಯುವುದಿತ್ತು. ಮುಂಜಾನೆ ಎದ್ದು ಹೊರಟರೆ ತಡವಾಗುತ್ತದೆ ಎಂದು ಭಾವಿಸಿ, ಆ ಕುಟುಂಬ ಹುಬ್ಬಳ್ಳಿಯಿಂದ ರಾತ್ರೋ ರಾತ್ರಿಯೇ ಪ್ರಯಾಣ ಮಾಡಲು ನಿರ್ಧರಿಸಿತ್ತು. ರಾತ್ರಿ ವಾಹನ ಓಡಿಸಿ ಅಭ್ಯಾಸವಿದ್ದ ಡ್ರೈವರ್ ಎಂಟು ಗಂಟೇಲಿ ಬೆಂಗಳೂರು ತಲುಪಿಸ್ತೀನಿ, ನೀವೆಲ್ಲ ನೆಮ್ಮದಿಯಾಗಿ ನಿದ್ದೆ ಮಾಡಿ ಎಂದು ಭರವಸೆ ಕೊಟ್ಟಿದ್ದ.
ಮಧ್ಯರಾತ್ರಿ ಹೊತ್ತಿಗೆ ಮತ್ತೆ ಮಳೆ ಶುರುವಾಯಿತು. ದಾವಣಗೆರೆಯಲ್ಲೂ ಮಳೆಯಾಯಿತು. ಹೊರಗೆ ಎಸೆದಿದ್ದ ಮಂಚದಲ್ಲಿ ಮಲಗಿದ್ದ ಡ್ರೈವರು ಮೈಮೇಲೆ ಬಿದ್ದ ಹನಿಗಳಿಂದ ಎಚ್ಚರಗೊಂಡು, ಎದ್ದು ದಪದಪ ಓಡಿ ದಾಬಾದ ಒಳಗೆ ನಿಂತ. ಗೋಡೆಯೇ ಇಲ್ಲದ ದಾಬಾದ ಒಳಗೆ ನಾಲ್ಕು ಸುತ್ತಲಿಂದಲೂ ಗಾಳಿ ನುಗ್ಗುತ್ತಿತ್ತು. ಇಲ್ಲಿ ಒದ್ದಾಡುವ ಬದಲು ಲಾರಿಯಲ್ಲೇ ಮಲಗಿ ಬೆಳಗ್ಗೆ ಬರಬಹುದಾಗಿತ್ತು. ಈ ಮಳೆಯಲ್ಲಿ ಪಡಿಪಾಟಲು ಪಡುವುದು ತಪ್ಪುತ್ತಿತ್ತು ಎಂದು ಯೋಚಿಸುತ್ತಾ ಆತ ತನ್ನ ಉದ್ಯೋಗವನ್ನೂ ಕೆಟ್ಟು ನಿಂತ ಲಾರಿಯನ್ನೂ ಶಪಿಸಿದ.
ಮಳೆ ಆ ನಡುರಾತ್ರಿ ಇಡೀ ಚಿತ್ರದುರ್ಗ ಜಿಲ್ಲೆಯಾದ್ಯಂತ ಸುರಿಯಿತು. ಗಾಳಿಯೂ ಜೊತೆಯಾಗಿ ಬಿಳಿಯ ಪರದೆಯೊಂದು ನಿರ್ಮಾಣವಾಗಿ ರಸ್ತೆ ಬೆಳ್ಳಗೆ ಮಂಜು ಕವಿದಂತೆ ಕಾಣತೊಡಗಿತು. ದೂರದಲ್ಲಿ ಬರುತ್ತಿರುವ ವಾಹನಗಳ ಬೆಳಕನ್ನೇ ಗುರಿಯಾಗಿಟ್ಟುಕೊಂಡು ಚಾಲಕರು ವಾಹನ ಓಡಿಸುತ್ತಾ, ಮಳೆಯನ್ನೂ ಗಾಳಿಯನ್ನೂ ತಮ್ಮ ಉದ್ಯೋಗವನ್ನೂ ಅಪರಾತ್ರಿಯನ್ನೂ ಬೈಯುತ್ತಾ ಅನ್ಯಮನಸ್ಕರಾಗಿದ್ದರು.
ಇದ್ದಕ್ಕಿದ್ದಂತೆ ಮಿಂಚೊಂದು ಬೆಳಗಿತು. ಡಾಬಾದ ಒಳಗೆ ನಿಂತಿದ್ದ ಡ್ರೈವರನಿಗೆ ಆ ಬೆಳಕಲ್ಲಿ, ದಾಬಾದ ಹೊರಗೆ ಮುದುಕನೊಬ್ಬ ನಿಂತಿದ್ದಂತೆ ಕಾಣಿಸಿತು. ಕೈಯಲ್ಲೊಂದು ಕೋಲು ಹಿಡಕೊಂಡು ಹೊಟ್ಟೆ ತನಕ ಜೋತುಬಿದ್ದ ಬಿಳಿಗಡ್ಡ, ಇಳಿಬಿದ್ದ ಹುಬ್ಬು, ಕೆದರಿದ ಕೂದಲ ಮುದುಕ ಮಳೆಯ ನಡುವೆ ಗಂಭೀರವಾಗಿ ನಿಂತಿದ್ದ. ಅವನು ನಿಂತಿದ್ದ ಭಂಗಿ ಕೂಡ ಭಯಬೀಳಿಸುವಂತಿತ್ತು. ಆ ಮಳೆ ಮತ್ತು ಗಾಳಿಯನ್ನು ತಡಕೊಳ್ಳಲು ಕಂಠಪೂರ್ತಿ ಕುಡಿದ ತನ್ನಂಥ ತರುಣನಿಗೇ ಕಷ್ಟವಾಗುತ್ತಿರುವಾಗ, ಆ ಮುದುಕ ಹೇಗೆ ಮಳೆಯಲ್ಲೇ ನೆನೆಯುತ್ತಾ ನಿಂತಿದ್ದಾನೆ ಎಂದು ಡ್ರೈವರ್ ಅಚ್ಚರಿಪಡುತ್ತಾ, ದಾಬಾದ ಅಂಚಿಗೆ ಬಂದು ತಾನು ನೋಡಿದ್ದು ನಿಜವೋ ಸುಳ್ಳೋ ಎಂದು ನೋಡಿದ.

ಅದೇ ಮಿಂಚು ಚಿತ್ರದುರ್ಗದ ರಸ್ತೆಯಲ್ಲೂ ಮಿಂಚಿತ್ತು. ಆ ಬೆಳಕಿಗೆ ಮುದುಕನೊಬ್ಬ ರಸ್ತೆ ದಾಟುವುದನ್ನು ಬೆಂಗಳೂರಿನಿಂದ ಹೊರಟ ಕಾರಿನ ಡ್ರೈವರು ಪಕ್ಕನೆ ಗಮನಿಸಿದ. ಇನ್ನೇನು ಕಾರು ಅವನಿಗೆ ಡಿಕ್ಕಿ ಹೊಡೆಯುತ್ತದೆ ಅನ್ನುವ ಗಾಬರಿಯಲ್ಲಿ ಅಚಾನಕ ಕಾರನ್ನು ಎಡಕ್ಕೆ ತಿರುಗಿಸಿದ.
ಹುಬ್ಬಳ್ಳಿಯಿಂದ ಹೊರಟವನಿಗೆ ಮುದುಕ ಆನಂತರ ಕಾಣಿಸಿದ. ಎದುರಿನಿಂದ ಬರುತ್ತಿದ್ದ ಕಾರಿನ ನಡುವೆ ಆಕೃತಿಯೊಂದು ನಿಂತಂತೆ ಅನ್ನಿಸಿ ಅವನು ಬೆಚ್ಚಿಬಿದ್ದು ಕಾರನ್ನು ಬಲಕ್ಕೆ ತಿರುಗಿಸಿದ. ಹುಬ್ಬಳ್ಳಿಯಿಂದ ಬರುತ್ತಿದ್ದ ಕಾರು ಮತ್ತು ಬೆಂಗಳೂರಿನಿಂದ ಹೊರಟಿದ್ದ ಪರಸ್ಪರ ಡಿಕ್ಕಿ ಹೊಡೆದುಕೊಂಡವು. ಸ್ವಲ್ಪ ಹೊತ್ತಿಗೆಲ್ಲ ಸಣ್ಣದೊಂದು ಸ್ಪೋಟದ ಸದ್ದು ಕೇಳಿಸಿತು. ಲಾರಿಯ ಮುಂಭಾಗಕ್ಕೂ ಹಿಂಭಾಗಕ್ಕೂ ಡಿಕ್ಕಿ ಹೊಡೆದಿದ್ದ ಕಾರುಗಳು ಹೊತ್ತಿ ಉರಿದಿದ್ದವು. ಎರಡೂ ಕಾರಿನಲ್ಲಿದ್ದ ಅಷ್ಟೂ ಮಂದಿ ಪ್ರಾಣ ಕಳಕೊಂಡಿದ್ದರು.
ಮಾರನೆ ದಿನ ಮೆಕ್ಯಾನಿಕ್ಕನ್ನು ಕರಕೊಂಡು ಡ್ರೈವರ್ ಬಂದು ನೋಡುವ ಹೊತ್ತಿಗೆ ಅಲ್ಲಿ ಎರಡು ಕಾರುಗಳು ಮುದ್ದೆಯಾಗಿ ಬಿದ್ದಿದ್ದವು. ರಸ್ತೆ ನೆತ್ತರು ಕುಡಿದು ಕೆಂಪಾಗಿತ್ತು. ಛಿಲ್ಲನೆ ಹಾರಿದ ರಕ್ತ ಪಕ್ಕದಲ್ಲೇ ಇದ್ದ ಹುಣಸೇ ಮರದ ಎಲೆಗಳನ್ನು ತೋಯಿಸಿತ್ತು. ಎಲೆಗಳಿಗೆ ಅಂಟಿಕೊಂಡಿದ್ದ ರಕ್ತ ಕಡುಕಪ್ಪು ಬಣ್ಣಕ್ಕೆ ತಿರುಗಿತ್ತು. ಮೆಕ್ಯಾನಿಕ್ ಬಂದು ಲಾರಿಯ ಕ್ಯಾಬಿನ್ನಿನ್ನ ಬಾಗಿಲು ತೆರೆದು ಹತ್ತಿ ಕೂತ. ಅವನ ಪಕ್ಕದಲ್ಲೇ ಡ್ರೈವರ್ ಕೂಡ ಕುಳಿತುಕೊಂಡ. ಅದೇನಾಗಿದೆ ಅಂತ ನೋಡೋಣ ಎಂದುಕೊಂಡು ಮೆಕ್ಯಾನಿಕ್ ಲಾರಿ ಸ್ಟಾರ್ಟು ಮಾಡಿದ. ತಾನು ಯಾವ ತೊಂದರೆಯನ್ನೂ ಕೊಡಲಿಲ್ಲ ಎಂಬಂತೆ ಲಾರಿ ಸ್ಟಾರ್ಟಾಯಿತು.
ಹೀಟಾಗಿತ್ತೋ ಏನೋ, ಅರ್ಧ ಗಂಟೆ ಬಿಟ್ರೆ ಸರಿಹೋಗಿರೋದು ಮಾರಾಯ ಅಂತ ಹೇಳಿ ಮೆಕ್ಯಾನಿಕ್ ಐವತ್ತು ರುಪಾಯಿ ಜೋಬಿಗೆ ಹಾಕಿಕೊಂಡು ಹೊರಟು ಹೋದ. ಡ್ರೈವರು ಕೂಡ ತನ್ನ ದುರಾದೃಷ್ಟವನ್ನು ಬೈದುಕೊಂಡು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ.

-2-

ಬೆಂಗಳೂರು ತಲುಪಿ ಅಡ್ರೆಸ್ಸು ಹುಡುಕಿಕೊಂಡು ಹುಡುಕಿಕೊಂಡು ಮಾರನೇ ದಿನ ಮಧ್ಯಾಹ್ನದ ಹೊತ್ತಿಗೆ ಲಾರಿ, ಕಡಿದಾದ ರಸ್ತೆಯೊಂದನ್ನು ಏರುತ್ತಿತ್ತು. ಬೆಂಗಳೂರು ಸಮತಟ್ಟಾಗಿಲ್ಲ ಎಂದೂ, ಇಂಥ ರಸ್ತೆಯಲ್ಲಿ ಲಾರಿ ಓಡಿಸುವುದು ಕಷ್ಟ ಎಂದೂ ಯೋಚಿಸುತ್ತಾ ಯಾವ ಪೊಲೀಸನ ಕೈಗೂ ಸಿಗದಂತೆ ಗಮ್ಯ ತಲುಪುವುದು ಹೇಗೆ ಅಂತ ಡೈವರು ಉಪಾಯ ಹುಡುಕುತ್ತಿದ್ದ. ಲಾರಿ ಕೆಟ್ಟು ನಿಲ್ಲದೇ ಹೋಗಿದ್ದರೆ ನಡುರಾತ್ರಿ ಬೆಂಗಳೂರು ತಲುಪಬಹುದಾಗಿತ್ತು. ಆಗ ಯಾವ ತೊಂದರೆಯೂ ಇರುತ್ತಿರಲಿಲ್ಲ ಎಂದುಕೊಳ್ಳುತ್ತಿರಬೇಕಾದರೆ, ರಿಂಗ್ ರಸ್ತೆಯ ಏರುಹಾದಿಯಲ್ಲಿ ಲಾರಿ ಸುದೀರ್ಘ ನಿಟ್ಟುಸಿರೆಳೆದು ನಿಂತೇ ಬಿಟ್ಟಿತು. ಹಿಂದುಗಡೆಯಿಂದ ಬರುತ್ತಿದ್ದ ವಾಹನಗಳು ಏಕಕಾಲಕ್ಕೆ ಆಕಾಶ ಕಿತ್ತುಹೋಗುವಂತೆ ಹಾರನ್ನು ಮೊರೆಯತೊಡಗಿದವು. ಡ್ರೈವರ್ ಬೇರೆ ದಾರಿ ಕಾಣದೇ, ಲಾರಿಯಿಂದ ಇಳಿದು, ಹಿಂದಿನ ಚಕ್ರಕ್ಕೆ ಒಂದು ಕಲ್ಲು ಕೊಟ್ಟು, ಲಾರಿ ಹಿಂದಕ್ಕೆ ಚಲಿಸದಂತೆ ಎಚ್ಚರಿಕೆ ವಹಿಸಿದ. ಲಾರಿ ಕೆಟ್ಟು ನಿಂತಿದೆ ಎಂದು ಸೂಚಿಸುವುದಕ್ಕೆ ಅದರ ಎರಡೂ ಬದಿಗೆ, ರಸ್ತೆ ಬದಿಯಲ್ಲಿರುವ ಗಿಡವೊಂದರ ಕೊಂಬೆಗಳನ್ನು ಕಿತ್ತು ಸಿಕ್ಕಿಸಿದ. ಅದೇ ಹೊತ್ತಿಗೆ ಅಲ್ಲಿಗೆ ಬಂದ ಪೊಲೀಸನಿಗೆ ಲಾರಿ ಕೆಟ್ಟಿದೆ ಅಂತ ಹೇಳಿ ಐವತ್ತು ರುಪಾಯಿ ಕೊಟ್ಟು, ಮೆಕ್ಯಾನಿಕ್ನನ್ನು ಹುಡುಕಿಕೊಂಡು ಹೊರಟು ಹೋದ.

ಡ್ರೈವರನಿಗೆ ಹಸಿವಾಗಿತ್ತು. ಅಲ್ಲದೇ, ಗಾಡಿ ಮತ್ತೆ ಹೀಟಾಗಿರಬಹುದೆಂದೂ ಅರ್ಧ ಗಂಟೆಯ ನಂತರ ತಾನಾಗೇ ಚಾಲೂ ಆಗಬಹುದೆಂದೂ ಅನ್ನಿಸಿತು. ದೂರದಲ್ಲಿ ಕಾಣಿಸುತ್ತಿದ್ದ ರಸ್ತೆ ಬದಿಯ ಹೋಟೆಲಿಗೆ ಹೋಗಿ ದೊನ್ನೆ ಬಿರಿಯಾನಿ ತಿನ್ನುತ್ತಾ ಡ್ರೈವರ್ ಈ ಲಾರಿಯನ್ನು ಇನ್ನು ಮುಂದೆ ತರಬಾರದು. ಯಾವಾಗ ಬೇಕಾದರೂ ಕೈ ಕೊಡಬಹುದು. ತುಂಬಿದ ರಸ್ತೆಯಲ್ಲಿ ಕೈಕೊಟ್ಟರೆ ಜನರ ಕೈಲಿ ಏಟು ತಿನ್ನಬೇಕಾಗುತ್ತದೆ ಅಂತ ಅಂದುಕೊಂಡ. ಈ ಸಲದ ಲೋಡು ಖಾಲಿ ಮಾಡುತ್ತಲೇ ರಿಪೇರಿಗೆ ಬಿಟ್ಟುಬಿಡಬೇಕು ಅಂದುಕೊಂಡ.
ಆತ ಊಟ ಮುಗಿಸಿ ಬಂದು ಸ್ಟಾರ್ಟು ಮಾಡಿದರೂ ಲಾರಿ ಅಲ್ಲಾಡಲಿಲ್ಲ. ಕೊನೆಗೆ ಅವನು ಸಂಜೆಯ ಹೊತ್ತಿಗೆ ಮೆಕ್ಯಾನಿಕ್ ಒಬ್ಬನನ್ನು ಕರಕೊಂಡು ಬಂದು, ಲಾರಿ ರಿಪೇರಿ ಮಾಡಿಕೊಡುವಂತೆ ಕೇಳಿಕೊಂಡ. ಆ ಮೆಕ್ಯಾನಿಕ್ ಬಂದು ಲಾರಿಯನ್ನು ಸ್ಟಾರ್ಟು ಮಾಡಲು ಯತ್ನಿಸಿ, ಆಗ ಹೊರಡುತ್ತಿದ್ದ ಸದ್ದನ್ನೇ ಎಚ್ಚರಿಕೆಯಿಂದ ಆಲಿಸಿ ಏನಾಗಿರಬಹುದು ಎಂದು ಊಹಿಸಿಕೊಂಡ. ರಿಪೇರಿ ಇನ್ನೂ ಒಂದು ಮೂರು ಗಂಟೆಯಾದರೂ ಆಗುತ್ತೆ. ಆಗ್ಲೇ ಕತ್ತಲಾಗುತ್ತಾ ಬಂದಿದೆ. ಹೋಗಿ ಒಂದು ಟಾರ್ಚು ಲೈಟು, ಊಟ ತಂದುಬಿಡಿ ಅಂತ ಡ್ರೈವರನಿಗೆ ಹೇಳಿ ಮೆಕ್ಯಾನಿಕ್ ಲಾರಿ ರಿಪೇರಿ ಮಾಡುವುದರಲ್ಲಿ ಮುಳುಗಿದ. ಬಾನೆಟ್ಟು ತೆರೆದು. ತೆರೆದ ಬಾನೆಟ್ಟಿನ ಒಳಗೆ ಇಳಿದು, ಆ ಕತ್ತಲಲ್ಲೂ ತನ್ನ ಕೈಗೆ ಸ್ಪಷ್ಟವಾಗುತ್ತಾ ಹೋದ ಬಿಡಿಭಾಗಗಳನ್ನು ಒಂದೊಂದಾಗಿ ಸ್ಪರ್ಶಿಸುತ್ತಿದ್ದ.
ತುಮಕೂರಿನಿಂದ ಕತ್ತರಿಗುಪ್ಪೆಗೆ ಬರುತ್ತಿದ್ದ ಕಾರು ಸಾಕಷ್ಟು ವೇಗವಾಗಿಯೇ ಬರುತ್ತಿತ್ತು. ರಿಂಗ್ ರಸ್ತೆಯ ಆ ಏರುಹಾದಿಯಲ್ಲಿ ಬರುತ್ತಿದ್ದಂತೆ ಒಳಗೆ ಕುಳಿತಿದ್ದ ವ್ಯಕ್ತಿಯೊಬ್ಬ, ಮರಳು ಲಾರಿಗಳೆಲ್ಲ ಇಲ್ಲೇ ನಿಂತಿರುತ್ತವೆ. ಇದೊಂದು ಥರ ಮರಳುಗಾಡು ಕಣ್ರೀ ಅಂತ ನಕ್ಕ. ಡ್ರೈವ್ ಮಾಡುತ್ತಿದ್ದವನು ಮರಳಿನ ಲಾರಿಗಳನ್ನೇ ನೋಡುತ್ತಾ ಸುಡುಗಾಡಿನ ಥರಾನಾ ಅಂತ ತಮಾಷೆಯಾಗಿ ಕೇಳಿದ.
ಅದೇ ಹೊತ್ತಿಗೆ ಇದ್ದಕ್ಕಿದ್ದಂತೆ ಬೀಸಿದ ಗಾಳಿಗೆ ರಸ್ತೆ ಬದಿಯಲ್ಲಿದ ಮರಳು ಯಾರೋ ಎತ್ತಿ ಎಸೆದಂತೆ ಆಕಾಶಕ್ಕೆ ಜಿಗಿಯಿತು. ಅದೊಂದು ಮೋಡವಾಗಿ ಕಾರಿನ ಗಾಜಿನ ಮೇಲೆ ಬಿತ್ತು. ಗಾಬರಿಯಾದ ಡ್ರೈವರು ಬ್ರೇಕ್ ಹಾಕುವುದಕ್ಕೆ ಮೊದಲೇ ಕಾರು ಅಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಂತೆ ಡಿಕ್ಕಿ ಹೊಡೆದು, ಅಲ್ಲಿಂದ ರಸ್ತೆ ಬದಿಯಲ್ಲಿರುವ ಹನ್ನೆರಡು ಅಡಿ ಆಳದ ಪ್ರಪಾತಕ್ಕೆ ಬಿತ್ತು.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬಾನೆಟ್ಟಿನೊಳಗೆ ಜಾರಿ ಕುಳಿತಿದ್ದ ಮೆಕ್ಯಾನಿಕ್ ದೊಪ್ಪನೆ ಕೆಳಗೆ ಬಿದ್ದ. ಅದೇ ಹೊತ್ತಿಗೆ ಅದುರಿದ ಲಾರಿಯ ಬಾನೆಟ್ಟು ಹಾಗೇ ಮುಚ್ಚಿಕೊಂಡಿತು. ಕೆಳಗೆ ಬಿದ್ದ ಮೆಕ್ಯಾನಿಕ್ ಇನ್ನೇನು ಏಳಬೇಕು ಅನ್ನುವಷ್ಟರಲ್ಲಿ ಜಲ್ಲಿ ಕಲ್ಲಿನ ಲಾರಿಯೊಂದು ಅವನ ಮೇಲೆ ಒಂದು ರಾಶಿ ಜಲ್ಲಿ ಸುರಿಯಿತು. ಮಾರನೇ ದಿನ ಆ ಕೆಟ್ಟುಹೋದ ರಸ್ತೆಯನ್ನು ರಿಪೇರಿ ಮಾಡುವವರಿದ್ದರು.
ತುಂಬ ಹೊತ್ತಿನ ನಂತರ ಬಂದ ಡ್ರೈವರು ಅಲ್ಲೆಲ್ಲೂ ಮೆಕ್ಯಾನಿಕ್ ಕಾಣಿಸದೇ ಇರಲು, ಜಗತ್ತನ್ನೇ ಬೈಯುತ್ತಾ ಲಾರಿ ಸ್ಟಾರ್ಟು ಮಾಡಿದ. ಲಾರಿ ಎಂದಿನಂತೆ ಸ್ಟಾರ್ಟಾಯಿತು. ರಿಪೇರಿ ಮಾಡಿಹೋಗಿರಬೇಕು ಮೆಕ್ಯಾನಿಕ್ ಅಂತ ಅವನಿಗೊಂದು ಕೆಟ್ಟ ಭಾಷೆಯಲ್ಲಿ ಬೈದು ಡ್ರೈವರ್ ಕೋಣನಕುಂಟೆಯತ್ತ ಸಾಗಿದ.

-3-

ಲಾರಿ ಎಲ್ಲಿ ಬೇಕಾದರೂ ಕೆಟ್ಟು ನಿಂತಿರಬಹುದು. ಕೋಣನಕುಂಟೆ ರಸ್ತೆಯಲ್ಲಿ ಇವತ್ತೇನಾದರೂ ಹೋದರೆ ಜಾತಸ್ಯ ಮರಣಂ ಧ್ರುವಂ ಅಂತ ಆ ಲಾರಿಯ ಹಿಂದೆ ಬರೆದದ್ದನ್ನು ನೀವೂ ಓದಬಹುದು.
 

‍ಲೇಖಕರು avadhi

August 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. vikas negiloni

    ಇದನ್ನು ಮೊತ್ತಮೊದಲು ಓದಿದಾಗ ಸರಳವಾಗಿ ಅರ್ಥವಾಗುತ್ತೆ ಅಂತಂದುಕೊಂಡೆ. ಆದರೆ ಇನ್ನೊಂದು ಸಲ ಓದುವುದಕ್ಕೆ ಹೊರಟು ತುಂಬ ಸಂಕೀರ್ಣವಾಯಿತು. ನಾಲ್ಕೈದು ಸಲ ಓದುತ್ತಾ ಬಂದಿದ್ದೇನೆ, ಉದಯವಾಣಿಯಲ್ಲಿ ಇದು ಅಂಕಣರೂಪದಲ್ಲಿ ಪ್ರಕಟವಾದಂದಿನಿಂದ. ಪ್ರತಿ ಸಲವೂ ಏನನ್ನೋ ಹೊಳೆಸುತ್ತದೆ, ಏನೋ ಗೊಂದಲ, ಅರ್ಥ ಮಾಡಿಕೊಳ್ಳಲೇಬೇಕೆಂದು ಆ ಲಾರಿಯ ಹಿಂದೆ ಓಡುತ್ತಲೇ ಇರುವ ಅನುಭವ.
    ಏನೇನನ್ನೋ ಹೊಳೆಸುತ್ತಿರುವ ಕತೆಗಾರ, ನಿಮಗೆ ವಂದನೆ
    -ವಿಕಾಸ್ ನೇಗಿಲೋಣಿ

    ಪ್ರತಿಕ್ರಿಯೆ
  2. VidyaShankar Harapanahalli

    ವಿಕಾಸ್, ನಾನು ಈ ಕತೆ ಎರಡು-ಮೂರು ಸಲ ಓದಿದ್ದೇನೆ. ವೆಲ್ ರಿಟ್ಟನ್ ಥ್ರಿಲ್ಲರ್ ಅನಿಸಿದೆ. ಸ್ವಲ್ಪ ಆತಾರ್ಕಿಕ ವಿಷಯಗಳು ಇರುವುದರಿಂದ ಬೆಚ್ಚಿ ಬೀಳಿಸುವ, ಅವ್ಯಕ್ತ ಭಯವನ್ನು ಮೂಡಿಸುವ ಗುಣವಿದೆ. ಹಾಲಿವುಡ್ ಅಥವಾ ಕೊರಿಯನ್ ಚಲನಚಿತ್ರಗಳಲ್ಲಿ ಕಳೆದೊಂದು ದಶಕದಲ್ಲಿ ಟ್ರೆಂಡ್ ಆಗಿರುವ ಅತಾರ್ಕಿಕ ಹಾರರ್ ಚಲನಚಿತ್ರಗ ನೆನಪಿಸುತ್ತದೆ.ಇದಕ್ಕಿಂತ ಜೋಗಿವರ ‘ಸೀಳುನಾಲಿಗೆ’ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಕತೆಯನ್ನು ಅಂಕಣಕ್ಕೆ ಒಗ್ಗಿಸಿದ್ದು, ಬಗ್ಗಿಸಿದ್ದು ಕತೆಯ ಪರಿಣಾಮವನ್ನು, ಸಾಧ್ಯತೆಯನ್ನು ಹಿತಮಿತಗೊಳಿಸಿದೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ.

    ಪ್ರತಿಕ್ರಿಯೆ
  3. Sudha ChidanandaGowda

    “ಲಾರಿ ಎಲ್ಲಿ ಬೇಕಾದರೂ ಕೆಟ್ಟು ನಿಂತಿರಬಹುದು”
    ಎಂಬುದನ್ನು
    “ಮನುಷ್ಯ ಎಲ್ಲಿ, ಹೇಗೆ ಬೇಕಾದರೂ ಸತ್ತುಹೋಗಬಹುದು”
    ಎಂದು ಓದಿಕೊಂಡಾಗ
    ಸರಳವೂ, ಸಂಕೀರ್ಣವೂ ಆದ ಜೀವನದರ್ಶನದೊಂದಿಗೆ ಮುಖಾಮುಖಿಯಾದ ಅನುಭವ.
    ಕೆಟ್ಟಾಗ ಕೆಟ್ಟಿಲ್ಲವೆಂದೂ, ಕೆಡದೇ ಇದ್ದಾಗ ಏನೋ ಆಗಿಬಿಟ್ಟಿದೆಯೆಂದು ಭ್ರಮಿಸುತ್ತಾ
    ಅಂತೂ ಬದುಕಿನ ಪಯಣ ನಿಲ್ಲದೇ ಸಾಗುತ್ತಿರಬೇಕಾಗುತ್ತದೆ.

    ಪ್ರತಿಕ್ರಿಯೆ
  4. Sharadhi

    ಈ ಕತೆ ಇನ್ನೇನನ್ನೋ ಹೇಳುತ್ತಿದೆ. ತುಂಬಿದ ಲಾರಿ ಎನ್ನುವುದು ಹಲವು ಕಾಂಪ್ಲೆಕ್ಸಿಟಿ ಗಳಿಂದ ತುಂಬಿದ ಭಾರತೀಯ ಸಮಾಜದ ದ್ಯೊತಕ. ಪದೇ ಪದೇ ಕೆಟ್ಟು ನಿಲ್ಲುವುದು (ಯದಾ ಯದಾ ಹಿ ಧರ್ಮಸ್ಯ.. ಎನ್ನುವಂತೆ) ಅಖಂಡ ಬ್ರಷ್ಟಾಚಾರದ, ಮದ್ದಿಲ್ಲದ, ರಿಪೇರಿ ಆದಂತೆ ಮೇಲುನೋಟಕ್ಕೆ ಕಾಣುವ ಹಾಗೂ ಆಳದಲ್ಲಿ ಸಮಸ್ಯೆಯೇ ಅರ್ಥವಾಗದನ್ತಿರುವ ಬ್ರಷ್ಟ-ವ್ಯವಸ್ತೆಯ ಸೋಚಕ. ಅದೆಲ್ಲಿಂದಲೋ ಬಂದು ತಾತ್ಕಾಲಿಕವಾಗಿ ‘ರಿಪೇರಿ’ ಮಾಡಿ ಸಾಯುವ ಮೆಚಾನಿಕ್ಕುಗಳು, ಕಾಲಗತಿಯಲ್ಲಿ ಬಂದು, ಸಂದು ಹೋದ ಗಾಂಧೀ, ಬುದ್ಧ, ಬಸವಣ್ಣ , ಕೃಷ್ಣ ಇತ್ಯಾದಿ ಮಹಾ ಪುರುಷರನ್ನು ಸೋಚಿಸುತ್ತದೆ. ಈ ಎಲ್ಲವನ್ನೂ ನುಂಗಿ ನೊಣೆದು ಸಾಗುವ ಲಾರಿಯ ಗತಿ, ‘ಕಾಲೋ ಜಗದ್ಭಕ್ಷಹಃ’ ಎನ್ನುವುದರ ಸೂಚಕ.

    ಪ್ರತಿಕ್ರಿಯೆ
  5. Chalam

    ತುಂಬಾ ಪರಿಣಾಮಕಾರಿಯಾಗಿದೆ.ಬದುಕಿನ ಅನೂಹ್ಯ ಚಟುವಟಿಕೆಗಳನ್ನು ವಿವರಿಸುತ್ತಿರಬಹುದಾ ಅಂದುಕೂಂಡರೆ ಅದಕ್ಕೂ ಮಿಗಿಲಾಗಿ ಏನನ್ನೋ ಹೇಳುತ್ತಿದೆ ಅನ್ನಿಸುತ್ತದೆ.

    ಪ್ರತಿಕ್ರಿಯೆ
  6. Anil Talikoti

    ಕಥೆಯಲ್ಲಿ ಯಾವದೇ ತೀವ್ರತೆ ಕಾಣಿಸದೆ ಸಪ್ಪೆ ಎನಿಸಿತು. ಬರಹ ಚೆನ್ನಾಗಿದೆ – ಜೋಗಿ ಎಂದಮೇಲೆ ಅದು given. ಅಮಾನವೀಯಕ್ಕಿಂತ ಅಸಂಭವನೀಯತೆ ಜಾಸ್ತಿ ಎನಿಸಿದ್ದಕ್ಕೋ ಏನೋ ಕಥೆ ಯಾವದೇ ಪರಿಣಾಮ ಬೀರದೆ ಹತ್ತರಲ್ಲಿ ಇನ್ನೊಂದು ಎನಿಸುತ್ತದೆ. ಮೂವತ್ತು ಮೈಲಿ ನಡೆಯುವದು (ಪ್ರಾಯಶ -೫ ಘಂಟೆ), ಲಾರಿಯ ಮುಂಭಾಗಕ್ಕೂ ಹಿಂಭಾಗಕ್ಕೂ ಡಿಕ್ಕಿ ಹೊಡೆದಿದ್ದರೂ, ಕಾರಲ್ಲಿದ್ದವರೆಲ್ಲರೂ ಮರಣಿಸಿದಾಗ್ಯೂ – ಲಾರಿಗೆ ಏನು ಆಗದಿರಲು ಸಾಧ್ಯವೆ? ಬಿದ್ದ ಶವಗಳ ಮಧ್ಯೆ, ಅಪ್ಪಚ್ಚಿಯಾದ ಕಾರುಗಳ ಮಧ್ಯೆ -ಆರಾಮಾಗಿ ಲಾರಿ ಸ್ಟಾರ್ಟು ಮಾಡಿ (ಡ್ರೈವರ್ರು, ಮೆಕ್ಯಾನಿಕ್ ಇಬ್ಬರೂ) ಹೊರಟು ಹೋಗಲು ಯಾವದೆ ಮನುಷ್ಯನಿಗೂ ಸಾಧ್ಯವೆ?
    ಮತ್ತೆ ಮುಂದುವರಿದು -‘ಕೆಳಗೆ ಬಿದ್ದ ಮೆಕ್ಯಾನಿಕ್ ಇನ್ನೇನು ಏಳಬೇಕು ಅನ್ನುವಷ್ಟರಲ್ಲಿ ಜಲ್ಲಿ ಕಲ್ಲಿನ ಲಾರಿಯೊಂದು ಅವನ ಮೇಲೆ ಒಂದು ರಾಶಿ ಜಲ್ಲಿ ಸುರಿಯಿತು’ –ಇದೇನು ಲಾರಿಯೋ? iron man ಮಾದರಿಯ ಮಾರಿಯೋ? ಯಾರು ಬಂದು ಗುದ್ದಿದರೂ ಏನೂ ಆಗುವದಿಲ್ಲವೆ ಇದಕ್ಕೆ? ಅಷ್ಟು ದೊಡ್ಡ accident ಆದರೂ ಲಾರಿಯೊಂದು ಬಂದು ಜಲ್ಲಿಕಲ್ಲು ಮೆಕ್ಯಾನಿಕ್ ಮೇಲೆ ಸುರಿದು (ಮೆಕ್ಯಾನಿಕ್ ಇನ್ನೇನು ಏಳಬೇಕು) ಹೋಗುವದು ಸಾಧ್ಯವೆ? ಏನೂ ಆಗದವನಂತೆ ಡ್ರೈವರು ಮತ್ತೆ ಲಾರಿ ಸ್ಟಾರ್ಟ ಮಾಡಬಹುದೆ? ಇದನ್ನು ಬೇರೆ ನೆಲೆಯಲ್ಲಿ ನೋಡಲು (ಬ್ರಷ್ಟ-ವ್ಯವಸ್ತೆ ಇತ್ಯಾದಿ) ಈ ಅಸಂಭವನೀಯತೆ ನನಗೇಕೋ ಅಡಚಣಿ ಮಾಡಿದೆ ಎನಿಸುತ್ತದೆ-ಅಥವಾ ಈ ಅಸಂಭವನೀಯತೆಯೇ ಇದರ ಜೀವಾಳವೇನೊ?
    -ಅನೀಲ ತಾಳಿಕೋಟಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: