ಜಸ್ಟ್ ಅನದರ್ ಮ್ಯಾನ್..

ಸುಷ್ಮಿತಾ ಶೆಟ್ಟಿ 

ಹಿಡಿದು ಹೋಗುವುದಿದೆ ಬಿಟ್ಟ‌ ಊರಿನ ಹಾದಿ…

ಹಿಡಿದು ಹೋಗುವುದಿದೆ ಬಿಟ್ಟ‌ ಊರಿನ ಹಾದಿ
ಹತ್ತಿರಕೆ ಸುಳಿಯಾದ ಸಲುಗೆ ಗಾಳಿಯ ನೆನಸಿ
ರಾಚು ಬಿಸಿಲಿಂದ ತಲೆತಪ್ಪಿಸುವ ನೆಪ ಹೇಳಿ
ಮುಂದೆ ಬರುವವಗೆ ಅಡ್ಡಾಗಿ ಕೊಡೆ ಸೂಡಿ
ಒಯ್ಯುವುದಿದೆ ಒಂದೇ ಚೀಲ, ಜಾಸ್ತಿ ನಿಲ್ಲಬಾರದೆಂತಲೇ

ಅತ್ತದ್ದಿದೆ, ಕರೆದದ್ದಿದೆ, ಬಿಕ್ಕಳಿಸಿ ಮಲಗಿದ್ದಿದೆ,
ನಗುವೂ ಇದೆ ನಡುನಡುವೆ, ಮುಖಕೆಡಬಾರದೆನಿಸಿ
ಓದು ಕತೆಗಳನ್ನೆಲ್ಲ ದಿನದಾಟದಲ್ಲಿಳಿಸಿ
ಪಾತ್ರಪಾತ್ರಗಳಲ್ಲೂ ಹೊಕ್ಕು ಹೊರಟುವರ ಲೆಕ್ಕಿಸಿ
ಹತ್ತುವುದಿದೆ ಕೆಂಬಸ್ಸುಗಳ ಕಾಯುವ ರಗಳೆ ಬೇಡವೆಂತಲೇ

ಮುಟ್ಟಿ ಹೋದವರು, ದೂರಾಗಿ ಮೆರೆದವರು
ಕ್ಷಣದೊಡನೆ ಜತೆಯಾಗಿ ಜಾಡುಜಾಡೆನಿಸಿ
ಬಿಸಿಲೊಯ್ಯುವ ಸಂಜೆಗಳ ಗುರುತಿದ್ದ ಹಾದಿ
ಮರಳಿ ನಡೆವಾಗ ಮರೆವೇ ಕ್ಷಮೆಯೆನಿಸಿ
ಹುಡುಕುವುದಿದೆ ಬದಿಯ ಜಾಗ ಹೊರಗೆ ತೂರಬೇಕಂತಲೇ

ನೆರಳರಿಸಿ ಓಟ ಬಿರುಸಾಗುವಾಗ
ಪಕ್ಕಕ್ಕೆ ಕಟ್ಟಿದವರು ತೆವಳಿದಂತೆನಿಸಿ
ಬೇವಿನ ತೊಪ್ಪಲುಗಳೇ ತೋರುತ್ತಿದ್ದ ಬೀದಿಯಲಿ
ಮಾವ ಗೊಂಚಲುಗಳು ಇಳಿದಿತೆನಿಸಿ
ಕೊಳ್ಳುವುದಿದೆ ಟಿಕೇಟುಗಳ ಮುಂಚಿನದರಕ್ಕೆ ಹೋಲಿಸುವಾಗಲೇ

ಮೈಲಿಗಲ್ಲು ಬಸ್ಸಿನ ಹಿಂದಿಂದೆ ಓಡಿ
ಹಿಡಿದ ಸಾಲು ಗತಿಯೆಂಬುದೇ ಒಪ್ಪೆನಿಸಿ
ಉದ್ದ ನಿದ್ದೆ ತೂಗುವ ಮೊದಲೇ
ತಂಪು ಗಾಳಿಯೂ ಚೂರು ಕುಂದಿತೆನಿಸಿ
ನೋಡುವುದಿದೆ ಇನ್ನೆಷ್ಟು ಕಾಲ ಊರ ಮುಟ್ಟಬೇಕಂತಲೇ

ನಿಲುಗಡೆಗೆ ಮೊದಲೇ ನಿಂತು ನೆಟ್ಟಗಾಗಿ
ಬಟ್ಟೆ ನೆರಿಗೆ ಮುದುಡಿತೆನಿಸಿ
ಮೈಯ ಮುರಿದ ಹಾಗೆ ಹೊರಗೆ ನಿಲುಕಿ
ಕಾದಿದ್ದವರ ಕಡು ಕೆಂಪಿಗೆ ಉಸಿರೆಳೆದಿತೆನಿಸಿ
ಇಳಿಯುವುದಿದೆ ಬಸ್ಸುಗಳ ಆದರೂ ಬರಬಾರದಿತ್ತೇನೋ ಅಂತಲೇ


“ಜಸ್ಟ್ ಅನದರ್ ಮ್ಯಾನ್”

ಅವಳಿನ್ನೂ ನೆನಪಿದೆ ನನಗೆ ಏನೇನೂ ಅರ್ಥವೇ ಆಗದವಳು
ನಿನ್ನ ಬಿಟ್ಟು ಮತ್ಯಾರನ್ನೂ ಹಚ್ಚಿಕೊಂಡಿರಲಿಲ್ಲ ಅನ್ನುತ್ತಿದ್ದವಳು
ಪ್ರತಿ ಬಾರಿ ಹಣೆಯತ್ತ ಬಾಗಿ ಹನಿಗೂಡುತ್ತಿದ್ದ ಕಣ್ಣುಗಳಿಗೆ
ನೀನಿಲ್ಲದ ರಾತ್ರಿಗಳನ್ನು ತುಂಬಿಕೊಡಲು ಬೇಕಿದೆ ಅನ್ನುತ್ತಿದ್ದವಳು
ಎಷ್ಟೋ ಓದದ ಮಂತ್ರಗಳಲ್ಲಿ ಗಟ್ಟಿಮೇಳವನ್ನು ಆಲಿಸುತ್ತಾ
ನನಗಂತೂ ನಿನ್ನ ಪಕ್ಕವೇ ಕೂತಂತೆ ಅನಿಸುತ್ತದೆ ಎಂದವಳು
ತನ್ನ ಎಲ್ಲಾ ಬೇಗುದಿಗಳ ನಡುವೆಯೂ ಸುಮ್ಮಸುಮ್ಮನೆ
ನೀ ಕೈ ಹಿಡಿದದ್ದನ್ನೇ ನೆನೆಸಿಕೊಳ್ಳುತ್ತೇನೆಂದು ಸುಮ್ಮನಾಗುತ್ತಿದ್ದವಳು

ಆದರೂ
ನಾನು ಆಗಾಗ ಕೇಳಬೇಕೆಂದುಕೊಳ್ಳುತ್ತಿದ್ದೆ
ಅಂದುಕೊಂಡಾಗೆಲ್ಲಾ ಮರೆತೇ ಬಿಡುತ್ತಿದ್ದೆ
ಕೇಳ ಮರೆತೆನೋ ಕೇಳಿ ಮರೆತೆನೋ
ಅದೂ ನೆನಪಾಗುತ್ತಿಲ್ಲ ನೋಡು
ಏನೇನೋ ಮಾತಲ್ಲಿ ಮರೆತೆನೆನಿಸುತ್ತದೆ
ಕೇಳಬೇಕೆಂದುಕೊಳ್ಳುತ್ತಿದ್ದದ್ದು ಇಷ್ಟೇ ಅನಿಸುತ್ತದೆ
ಅವಳಿಗೆ ನಾನು ಏನಾಗಬೇಕಿತ್ತು?

ಇದಿಷ್ಟು ಮರೆವಿನ ನಡುವಿನಲ್ಲೂ ಅವಳ ನೆನಪಾಗುವುದೆಂದರೆ
ಖಾಲಿಯಿದ್ದ ಬಸ್ಸಿನೊಳಗೆ ಯಾರೋ ತೀಡಿ ಹೋಗುವಾಗ
ದಾಹಕ್ಕೆ ನಳದ ಬಾಯಿಂದ ನೀರು ಲೋಟ ತುಂಬುವಾಗ
ರಾಚುವ ಬಿಸಿಲನ್ನ ಪಕ್ಕ ಹೋದವರ ಕೊಡೆ ಅಡ್ಡ ಮಾಡಿದಾಗ
ಜೋರು ಗದ್ದಲದ ಮದ್ಯವೇ ಬೀಳುವ ಮುತ್ತುಗಳ ಸದ್ದಾದಾಗ
ಇದಿರಿದ್ದವರು ತರಿಸಿದ ಚಾ ಎದುರಿದ್ದವರ ಕೈ ದಾಟಿದಾಗ

ಅದೇ
ನೆನೆಸಿಕೊಂಡದ್ದಾಯಿತು ಎಲ್ಲಾ ಸರತಿಯಲ್ಲೇ
ಆದರೂ ಮರೆತದ್ದು ಮಾತ್ರ ನೆನಪಾಗಲಿಲ್ಲ‌
ನಾನು ಏನಾಗಬೇಕು ಅವಳಿಗೆ ಅಂತಲೇ
ಹೇಳಿದ್ದಳೇನೋ ಇರಲಿಕ್ಕೂ ಇಲ್ಲ
ನನಗೆ ಮಾತ್ರ ನೆನಪಾಗುತ್ತಿರಲಿಲ್ಲ
ಆದರೂ ನಾನು ಮಾತ್ರ ಅವಳಿಗೆ!
ನೆನಪಾದಂತಾಗುತ್ತಿತ್ತು ಮರೆಯುತ್ತಿತ್ತು

“ಜಸ್ಟ್ ಅನದರ್ ಮ್ಯಾನ್”
ಅಲ್ಲೇ ನಡೆದು ಹೋಗುತ್ತಿದ್ದ ನಾಗರಿಕ
ತಾನು ಕೇಳಿದ್ದ ಹಾಡೊಂದ ನೆನೆಸುತ್ತಿದ್ದ

‍ಲೇಖಕರು avadhi

May 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: