ಜವಳಿ ಪರವಶ!

ಜಿ ಎನ್  ಅಶೋಕವರ್ಧನ

ಅತ್ರಿ ಬುಕ್ ಸೆಂಟರ್

[ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು]
“ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತೆ ಎಮ್ಮಾರ್) ಮತ್ತು ಎಸ್ವೀಪಿ (ಮಹಾಮಾನವ ಪ್ರೊ|ಎಸ್.ವಿ ಪರಮೇಶ್ವರ ಭಟ್ಟ) ಶಿಷ್ಯತ್ವದೊಡನೆ ಅವರ ಆಶಯದ ‘ದಂಡಧಾರಿ’ (ಕ್ವೀನ್ಸ್ ಬೇಟನ್ ಹಾಗೆ) ಅಂದರೆ ಅಕ್ಷರಶಃ ಸಾಹಿತ್ಯ ಕಲೆಗಳ ಕಿಂಕರ ಈ ನಾಗರಾಜರಾವ್ ಜವಳಿ. ಮಂಗಳೂರಿನ ಕೆನರಾ ಕಾಲೇಜಿನ ಖಾಲೀ ಕನ್ನಡ (ಇಲ್ಲಿ ಪಾಠಪಟ್ಟಿಯಲ್ಲಿ ಐಚ್ಛಿಕ ಕನ್ನಡ ಇಲ್ಲ) ಮೇಷ್ಟ್ರಾದರೂ ಇವರ ಆಸಕ್ತಿಗಳ ಹರಹು ಅಪಾರ. ಕನಿಷ್ಠ ವಾರಕ್ಕೊಮ್ಮೆಯಾದರೂ ನನ್ನ ಅಂಗಡಿ ಬಿಡಿ, ಊರಿನ ಎಲ್ಲಾ ಪುಸ್ತಕ ಮಳಿಗೆ ಶೋಧಿಸಿ ಪುಸ್ತಕ ಸಂಗ್ರಹ ನಡೆಸುತ್ತಿದ್ದರು. ಸಾಲದು ಎಂಬಂತೆ ಸ್ಟ್ಯಾಂಡರ್ಡ್ ಸರ್ಕ್ಯುಲೇಟಿಂಗ್ ಲೈಬ್ರೆರಿಯ ಖಾಯಂ ಸದಸ್ಯತ್ವ. ಇದ್ದ ಬದ್ದ ಆಡಿಯೋ ವೀಡಿಯೋ ಕೇಬಲ್ಲು, ವಿಡಿಯೋ ಲೈಬ್ರೆರಿಗಳು ಕೊಡುವ ಒಳ್ಳೇದೆಲ್ಲಾ ಇವರಿಗೆ ಅನುಭವಿಸಲು ಬೇಕೇಬೇಕು.

ಯಾವುದೇ ವ್ಯಂಗ್ಯಾರ್ಥವಿಲ್ಲದೇ ಹೇಳ್ತೇನೆ – ನಾದಾ (ಪ್ರೊ| ನಾ ದಾಮೋದರ ಶೆಟ್ಟಿ), ವಿದ್ವದ್ಗಾಂಭೀರ್ಯದ ಸತ್ಯ (ಪ್ರೊ| ಸತ್ಯನಾರಾಯಣ ಮಲ್ಲಿಪಟ್ನ), ಸರಸಿ ನರಸಿಂಹಮೂರ್ತಿಯರ ಗೆಳೆತನದ ಬಂಧದ ‘ದಾಸಜನ’ದಲ್ಲಿ ಜವಳಿ ಸ್ವಲ್ಪ ಸಾರ್ವಜನಿಕಕ್ಕೆ ತೆರೆದುಕೊಂಡರು. ಬಯಸದೇ ಬಂದ ಪ್ರಾಂಶುಪಾಲತ್ವವನ್ನು ಹೊಣೆಯಲ್ಲಿ ಗಟ್ಟಿಯಾಗಿಯೂ ಸಾರ್ವಜನಿಕದಲ್ಲಿ ತೀರಾ ಹಗುರಾಗಿಯೂ (ಇವರು ಕೋಟು, ಕಂಠಕೌಪೀನ ಕಟ್ಟಿದ್ದು ನಾ ನೋಡಿಲ್ಲ!) ನಿರ್ವಹಿಸಿದರು. ಎಸ್‌ವೀಪೀ ಅಥವಾ ಎಮ್ಮಾರ್ (ಎಂ ರಾಮಚಂದ್ರ) ಬಗೆಗಿನ ಅಖಂಡ ಅನುರಕ್ತಿಯಲ್ಲಿ ‘ಸಮ್ಮಾನ’ ನಡೆಸಿದರು. ಇಂದೂ ಹಳೇ ಪ್ರೀತಿಗಳು ಅವರನ್ನು ಮಂಗಳೂರಿಗೆ ಎಳೆದರೆ ಬೆನ್ನುಚೀಲ, ಹೆಲ್ಮೆಟ್ ಏರಿಸಿ, ಕಿವಿಗೆ ಮ್ಯೂಸಿಕ್ ಖಾರ್ಡ್ ತಗುಲಿಸಿ ವಿರಾಮದಲ್ಲಿ ಬೈಕರೂಢರಾಗುವುದೇ ಹೆಚ್ಚು! ಕುರಿತು ನೋಡದಿದ್ದರೆ ಜವಳಿ ಸಿಗರೇಟಿನ ಒಂದು ಕಿಡಿ, ಚಿಟಿಕೆ ಬೂದಿ. “ಅಶೋಕಾ ರಿಟೈರ್ ಆದ ಮೇಲೆ ಊರಿನಲ್ಲಿ ಮನೆ ಕಟ್ಟಿಸಿ ಆರಾಮಾಗಿ ಕೂತು ಬಿಡ್ತೇನೆ. ಇರೋ ಅಷ್ಟೂ ಪುಸ್ತಕ, ಸಂಗೀತವನ್ನು ‘ಬನ್ರಯ್ಯಾ ಅನುಭವಿಸಿ’ ಎಂದು ಸಾರ್ವಜನಿಕರಿಗೆ ತೆರೆದಿಟ್ಟು, ನನ್ನ ಪಾಡಿಗೆ ಸಂಗೀತ ಹಾಕಿ, ಪುಸ್ತಕ ಹಿಡಿದು, ಆಗೀಗ ಚಾ ಕುಡಿಯುತ್ತಾ ದಂ ಎಳೆಯುತ್ತಾ ಮಝವಾಗಿರ್ತೇನೆ’ ಎಂದದ್ದನ್ನು ತೀರ್ಥಳ್ಳಿಯಲ್ಲಿ ಅಕ್ಷರಶಃ ನಡೆಸುತ್ತಿದ್ದಾರೆ.”

ಇದಿಷ್ಟೂ ನಾನು ‘ತೀರ್ಥಯಾತ್ರೆ’ (ಇಲ್ಲೇ ಹಳೇ ಕಡತದಲ್ಲಿರುವ ಪ್ರವಾಸ ಕಥನ) ಬರೆಯುತ್ತಿದ್ದಾಗ ಸಹಜವಾಗಿ ದಾಖಲಿಸಿದ್ದೆ. ಈಗಷ್ಟೇ ಅಭಯ ಬೆಂಗಳೂರಿನಿಂದ ದೂರವಾಣಿಸಿ ತಿಳಿಸಿದ ಮೇಲೆ ತೀವ್ರ ವಿಷಾದಗಳೊಡನೆ ತಿದ್ದುಪಡಿ ಹಾಕಬೇಕಾಗಿದೆ – ನಡೆಸುತ್ತಿದ್ದರು; ಜವಳಿ ಇನ್ನಿಲ್ಲ.

ಜವಳಿಯವರ ಸಹೋದ್ಯೋಗಿ, ಏಕವಚನದ ಮಿತ್ರ – ಪಾವಲಕೋಡಿ ನಾರಾಯಣ ಭಟ್ಟರ  ಮಗನ ಮದುವೆಗೆ ಬಂದವರು ನನ್ನಂಗಡಿಗೆ ಬಂದದ್ದು ಕೊನೆ. ಅವರು ಮಂಗಳೂರಿಗೆ ಕೆಲಸದ ಮೇಲೆ ಬರುವುದಿದ್ದಾಗೆಲ್ಲಾ ಹಳೆಯ ಶಿಷ್ಯ – ಜಗದೀಶ, ಜವಳಿಯವರ ಮಾತಿನಲ್ಲೇ ಹೇಳುವುದಾದರೆ ‘ಜಗ್ಗನಿಗೆ’ ಮೊದಲೇ ಸುದ್ದಿ ಹೋಗುತ್ತಿತ್ತು. ಕೋಟೆಕಾರಿನಲ್ಲಿದ್ದ ಈ ಜಗ್ಗ ಈಚೆಗೆ ಅನಿವಾರ್ಯವಾಗಿ ಗುಜರಾಥಿಗೆ ಹೋಗಿ ನೆಲೆಸಿದ್ದಾರೆ. ನಾನು ತಮಾಷೆಗೆ “ನಿಮ್ಮ ಪ್ರಿಯ ಸಾರಥಿ ಜಗ್ಗ ಇಲ್ಲವಲ್ಲಾ ಸ್ವಾಮೀ” ಅಂತ ಹೇಳಿದಾಗ ಅವರು ನಗಲಿಲ್ಲ. ಹಿಂದೆ ಒಂದೆರಡು ಬಾರಿ ನಾನು ದೂರವಾಣಿಸಿದಾಗ, ಅಂತರ್ಜಾಲದಲ್ಲಿ ಸಿಕ್ಕು ವಿಸ್ತಾರ ಚಾಟಿಗೆ ಎಳೆದಾಗಲೂ ಹೀಗೇ ಮುದುರಿಕೊಂಡಿದ್ದರು. ಹಾಗೇ ನನ್ನ ಲೇಖನಗಳಿಗೆ ಪ್ರತಿಕ್ರಿಯೆ ಕೇಳಿದಾಗಲೂ ಮಾತಿನಲ್ಲೇ “ಏ ಅಶೋಕಾ, ಕುಶ್ಶೀಲಿ ಒಂದನ್ನೂ ಬಿಡದೆ ಓದ್ತೀನಿ. ಪ್ರತಿಕ್ರಿಯೆ ನಮ್ದೆಲ್ಲಾ ಎಂಥ ಮಾರಾಯಾ” ಅಂತ ಜಾರಿಸಿ ಬಿಡುತ್ತಿದ್ದರು. ಎಷ್ಟೋ ಸಮಯದ ಮೇಲೆ ಅವರೂ ಒಂದು ಬ್ಲಾಗ್ ಬರೆಯುತ್ತಿದ್ದಾರೆಂದು (http://tungatheera.blogspot.com)ಯಾರದ್ದೋ ಮೂಲಕ ತಿಳಿದು ಬಂದಾಗ “ನೇರ ನೀವೇ ಯಾಕೆ ತಿಳಿಸಲಿಲ್ಲ” ಅಂತ ಮುನಿಸಿದೆ. ಕಿರು ನಗೆ ಮಾತ್ರ ಸೂಸಿದರು. ಮತ್ತೆ ಬ್ಲಾಗ್ ನೋಡಿದೆ. ಯಾರೂ ಅವರನ್ನು ದೊಡ್ಡದಾಗಿ ಕಂಡಾಗ ಅವರ ಪ್ರತಿಕ್ರಿಯೆಗಳಲ್ಲಿರುತ್ತಿದ್ದ ಯಾವುದೋ ತೀವ್ರ ವಿಷಾದದ ಸುಳುಹು ಬ್ಲಾಗಿನಲ್ಲೂ ಕಾಣಿಸಿತು. ‘ಅಯ್ಯೋ ಎಲ್ಲರೂ ಬಿಜಿ ಇರ್ತಾರೆ ಮಾರಾಯ. ನಂದ್ಯಾಕೆ.’ ಎಲ್ಲರಿಗೂ ಬೇಕಾಗಿಯೂ ಏಕಾಂತದಲ್ಲೇ ಕಳೆದುಹೋಗುತ್ತಿದ್ದ ಜವಳಿ, ಕಾಲದ ಫಿತೂರಿಯಲ್ಲಿ ಮನೆಯಲ್ಲಿ ಒಬ್ಬರೇ ಇದ್ದಾಗ ಏನೂ ಬಿಚ್ಚಿಕೊಳ್ಳದೇ ಸಂದುಹೋದರು! (ಅವರ ಹೆಂಡತಿ ಬೆಂಗಳೂರಿನಲ್ಲಿದ್ದರಂತೆ. ಏಕೈಕ ಮಗ ವೃತ್ತಿ ನಿಮಿತ್ತ ಇನ್ನೆಲ್ಲೋ ಇದ್ದ. ಪಕ್ಕದ ಮನೆಯಲ್ಲೇ ಇದ್ದ ಇವರಣ್ಣನ ಮೊಮ್ಮಗ, ಪುಟಾಣಿ ಎಂದಿನಂತೆ ಅಜ್ಜನೊಡನೆ ಬೆಳಗ್ಗಿನ ಹರಟೆ ಹೊಡೆಯಲು ಬಂದಾಗ ಬಾಗಿಲು ತೆರೆಯಲಿಲ್ಲವಂತೆ. ದೊಡ್ಡವರು ಬಂದು ಕದಮುರಿದು ನೋಡಿದಾಗ (ಅನಂತರ ತಿಳಿದಂತೆ ಹೃದಯಾಘಾತವಾಗಿ) ಕುಳಿತಲ್ಲೇ ಪೂರ್ಣ ಪರವಶರಾಗಿದ್ದರು. ಅಧ್ಯಾಪನ, ಪ್ರಾಂಶುಪಾಲತ್ವದ ಅಧಿಕಾರದಲ್ಲಿದ್ದಾಗಲೂ ಗುರುಹಿರಿಯರ, ವಿದ್ಯಾರ್ಥಿಗಳ, ಮಿತ್ರರ, ಅಜ್ಞಾತರೇ ಇರಲಿ ಒಳ್ಳೆಯ ಸಾಹಿತಿ ಕಲಾಕಾರರ ಗುಣಗಳಿಗೆ ವೇದಿಕೆ ಕಲ್ಪಿಸುವಲ್ಲೂ ತನ್ನನ್ನು ಮುಂದುಮಾಡಿಕೊಳ್ಳದ ಸ್ವಭಾವಕ್ಕನುಗುಣವಾಗಿ ಮರಣಾಂತಿಕ ನೋವಿನಲ್ಲೂ ಮೌನವಾಗುಳಿದದ್ದು ಮತ್ತೆ ನೆನಪಿಗೆ ತರುತ್ತದೆ ‘ಮಹಾತ್ಮರನ್ನು ಮರಣದಲ್ಲಿ ನೋಡು.’

‍ಲೇಖಕರು avadhi

November 28, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Geetha R Shenoy

    ಹತ್ತು ವರ್ಷಗಳ ಹಿಂದೆ ನನ್ನ ಒಂದು ಯೋಜನೆಗೆ ಮಾರ್ಗದರ್ಶಕರಾಗುವಂತೆ ಕೇಳಿದಾಗ
    ತಕ್ಷಣ ಒಪ್ಪಿಕೊಂಡದ್ದು ಮಾತ್ರವಲ್ಲ ಮನೆಗೆ ಕರೆದು ಊಟ ಹಾಕಿ, ತಮ್ಮಲ್ಲಿದ್ದ ಅಮೂಲ್ಯ
    ಪುಸ್ತಕಗಳನ್ನು ನೀಡಿ ತಂಗಿಯೆಂದು ಕರೆದು ಉಪಚರಿಸಿದ ಈ ಅಪರೂಪದ ವ್ಯಕ್ತಿ ಇವತ್ತು
    ಇಲ್ಲವೆಂದರೆ ನಂಬುವುದು ಸಾಧ್ಯವಾಗುತ್ತಿಲ್ಲ. ಬದುಕಿನಲ್ಲಿ ಭರವಸೆಯನ್ನು ಇಟ್ಟುಕೊಳ್ಳಲು
    ಇವರಂತಹವರೇ ನಮಗೆ ಬೇಕಾಗಿರುವುದು.

    ಗೀತಾ ಶೆಣೈ, ಬೆಂಗಳೂರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: