ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಬಿ ಕದ್ರಿ ಓದಿದ ‘ಛೂ ಮಂತ್ರಯ್ಯನ ಕತೆಗಳು’

ಜಯಶ್ರೀ ಬಿ ಕದ್ರಿ

“ಆಕಾಶ ಕೆಳಗೆ ಬಿದ್ರೆ
ಆಗಲು ನಾನು ಬದುಕೇ ಇದ್ರೆ
ಬಿದ್ದಿರ್ತಾವೆ ನೆಲದಲ್ಲೆಲ್ಲ
ಚೆಲ್ಲಾಪಿಲ್ಲಿ ನಕ್ಷತ್ರ

ಎಂದು ಏಕ ತಾರಿಯ ನಾದಕ್ಕೆ ಅವರು ಹಾಡುತ್ತಿದ್ದರೆ ಸಭೆ ನಿಶ್ಶಬ್ದ. ಅವರ
‘ಎಳ್ನೀರ್ ಎಳ್ನಿರ್ ಎಳ್ನೀರ್ ಎಳ್ನೀರ್ ಕುಡಿಯೋರ್ ಒಳ್ಳೆಯೋರ್’
ಪದ್ಯಕ್ಕೆ ಲಯಬದ್ಧವಾಗಿ ಹುಮ್ಮಸ್ಸಿನಿಂದ ಕುಣಿಯುವ ವಿದ್ಯಾರ್ಥಿಗಳು. ತಮಟೆಯ ಸದ್ದು, ಏಕತಾರಿಯ ನಾದ, ಮಿಂಚು ಹುಳುಗಳ ಬೆಳಕು, ನಿಸರ್ಗದ ತಾಳಿಕೊಳ್ಳುವ ಗುಣ, ಎಲ್ಲಕ್ಕಿಂತ ಮಿಗಿಲಾಗಿ ಉತ್ಕಟ ಹಸಿರು ಪ್ರೀತಿ ಬಿಳಿಗೆರೆ ಸರ್ ಅವರ ವ್ಯಕ್ತಿತ್ವದ ಭಾಗವೇ ಆಗಿದೆ. ಅವರು ಬರೆದ, ನಾದಾ ಮಣಿ ನಾಲ್ಕೂರು ಅವರು ಹಾಡಿದ ‘ಗೆಲ್ಲುವುದು ಗೆಲುವೇ ಅಲ್ಲ’ ಪದ್ಯವಂತೂ ೬೦ ಸಾವಿರಕ್ಕಿಂತಲೂ ಹೆಚ್ಚು ಸಲ ವೀಕ್ಷಿಸಲ್ಪಟ್ಟಿದೆ. ಅವರ ‘ಗಾಯಗೊಂಡಿದೆ ಗರಿಕೆ ಗಾನ’ ಕವನ ಸಂಕಲನಕ್ಕೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದ್ದು ಅವರ ಕೃಷಿಯ ಪ್ರೀತಿಗೆ ಸಂದ ಗೌರವ ಎಂದೇ ನಾನು ಭಾವಿಸುತ್ತೇನೆ. ಅದು ಅವರ ಸಾಹಿತ್ಯದ ಶಕ್ತಿ ಕೂಡಾ.

ಹಸಿರು ಪ್ರೀತಿ, ನಿಸರ್ಗದ ಬಗ್ಗೆ ಕಾಳಜಿ ಅವರಸ ಸಾಹಿತ್ಯದ, ವ್ಯಕ್ತಿತ್ವದ ಅವಿಭಾಜ್ಯ ಅಂಗವೇ ಆಗಿದೆ. ಜಿ ಎನ್ ಮೋಹನ್ ಅವರು ಈ ಪುಸ್ತಕದ ಪ್ರಸ್ತಾವನೆಯಲ್ಲಿ ಬರೆದಿರುವಂತೆ “ಆಳಕ್ಕಿಳಿದ ಬೇರುಗಳನ್ನು, ಹಾರುವ ದುಂಬಿಯನ್ನು, ಸರಿದಾಡುವ ಹಾವನ್ನು, ದಿಟ್ಟಿಸಿ ನೋಡುವ ಗೂಬೆಯನ್ನು, ಗರಿ ಬಿಚ್ಚುವ ನವಿಲನ್ನು, ತಣ್ಣಗಿರಲಿ ಈ ನೆಲ ಎಂದು ಅಳವದಿಸುವ ತಂತ್ರವನ್ನೂ, ಬೇಲಿ ಮರೆಯ ತರಕಾರಿ ಗಿಡಗಳನ್ನೂ, ಕುಣಿಕೆಗೆ ಕೊರಳೊಡ್ದಿದ ರೈತನನ್ನೂ, ಶಿವನಂಜಯ್ಯ ಬಾಳೇಕಾಯಿಯವರನ್ನೂ, ಜಲದ ಕಣ್ಣು ಬಿಡಿಸುವ ರಾಜೇಂದ್ರ ಸಿಂಗ್ ರನ್ನೂ, ನೆಲದವ್ವನ ಹಾಡಿಗೆ ಅರ್ಥ ಬರಿಸಿದ ಫುಕುವೋಕಾರನ್ನೂ ಹೀಗೆ ಈ ಕೃತಿ ತುಂಬಾ ಅಬ್ಬಾ.. “ಎಷ್ಟೊಂದು ಪ್ರೀತಿಯ ಒರತೆಗಳು..”

ಅದೇ ರೀತಿ ನಾಗೇಶ್ ಹೆಗಡೆಯವರು ಸರಿಯಾಗಿಯೇ ಗುರುತಿಸಿರುವಂತೆ “ಮಕ್ಕಳಿಗೆ, ಅದರಲ್ಲೂ ಓದಲು ಕಲಿತ ಹದಿ ಹರಯದ ಮಕ್ಕಳಿಗೆ ಕೃಷಿ ಲೋಕದ ವಾಸ್ತವವನ್ನು ಇಷ್ಟು ರಸವತ್ತಾಗಿ, ನಾಟಕೀಯವಾಗಿ ಯಾರೂ ಹೇಳಿರಲಿಲ್ಲ” (ಹಿನ್ನುಡಿ, ‘ಛೂ ಮಂತ್ರಯ್ಯನ ಕತೆಗಳು)

ಬಿಳಿಗೆರೆ ಸರ್ ಅವರದು ಲಲಿತವಾದ, ಸರಳವಾದ ಕಥನ ಶೈಲಿ. ‘ಛೂ ಮಂತ್ರಯ್ಯನವರ ತೋಟದ ಪಕ್ಕದಲ್ಲೇ ಒಂದು ತೆಂಗಿನ ತೋಟವಿತ್ತು.’ (ಕಥೆ: ಇಲಿಗಳು ಮತ್ತೆಚ್ಚಿ ಬೆಳೆದ ಕತೆ)

ಈ ರೀತಿಯಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಟೀನೇಜರುಗಳ ವರೆಗೆ ಅರ್ಥವಾಗುವ, ಆದರೆ ಹರಟೆ ಎನಿಸದ, ಮೌಲಿಕವಾದ ವಿಚಾರಗಳ ನ್ನು ರಮ್ಯ ಧಾಟಿಯಲ್ಲಿ ಒಂದು ಶ್ರುತಿಬದ್ಧ ಶೈಲಿಯಲ್ಲಿ ಪ್ರಸ್ತುತ ಪಡಿಸುವ ವಿಧ.

“ಹೀಗಿರುವಾಗ ಅವರ ತೋಟಕ್ಕೆ ಎಲ್ಲಿಂದಲೋ ಬಂದು ಸೇರಿಕೊಂಡದ್ದು ಇಲಿ ದಂಪತಿಗಳು. ಇಲಿಗಳ ಕತೆ ಗೊತ್ತಲ್ಲ. ಎರಡು ಇಲಿಗಳು ಮೂರು ತಿಂಗಳಲ್ಲಿ ಇಪ್ಪತ್ತು ಇಲಿಗಳಾಗುತ್ತವೆ.” ಈ ರೀತಿ ಕೃಷಿಯ ಹಿನ್ನೆಲೆ ಇರುವವರು, ಇಲ್ಲದವರು ಎಲ್ಲರಿಗೂ ಮನ ಮುಟ್ಟುವಂತೆ ಹೇಳುವ ಧಾಟಿ. ಪ್ರತಿ ಕತೆಯೂ ಕೃಷಿ ಜೀವನದ, ಜೀವ ಜಾಲ ವೈವಿಧ್ಯದ ಬೆರಗು, ಕುತೂಹಲಗ ಳನ್ನು ಉಳಿಸಿಕೊಂಡೇ ಜೀವ ಪ್ರೀತಿಯ, ಸಹನೆ, ಸಹ ಬಾಳ್ವೆಯ ಸಂದೇಶವನ್ನು ನೀಡುತ್ತವೆ. ಇನ್ನು ಹೆಸರುಗಳನ್ನು ವಿನೂತನವಾಗಿ ಬಳಸಿಕೊಂಡಿರುವುದು ಈ ಕೃತಿಯ ಇನ್ನೊಂದು ವೈಶಿಷ್ಟ್ಯ. ಛೂ ಮಂತ್ರಯ್ಯ, ಬಲು ಬುದ್ಧಿವಂತರು.. ಹೀಗೆ. ಬಿಳಿಗೆರೆಯವರ ಇನ್ನೊಂದು ವಿಶಿಷ್ಟತೆ ಅವರಲ್ಲಿ ಅಂತರ್ಗತವಾಗಿರುವ ಅನುಕಂಪ. ವಿಷವಿಕ್ಕಿದಾಗ ಇಲಿಗಳು ಸಾಯುವ ವರ್ಣನೆಯನ್ನು ನೋಡಿ.

‘ಬಂಟ ಇಲಿಗಳು, ತುಂಟ ಇಲಿಗಳು, ಇಷ್ಟದ ಇಲಿಗಳು, ಕಷ್ಟದ ಇಲಿಗಳು ಎಲ್ಲ ಜಮಾಯಿಸುತ್ತವೆ. ಅವೆಲ್ಲ ಸ್ವಲ್ಪ ಹೊತ್ತು ಅಳುತ್ತವೆ, ದು:ಖ ಪಡುತ್ತವೆ. ‘

ಒಂದು ಸಮಸ್ಯೆ, ಒಂದು ಪರಿಹಾರ ಈ ಎಲ್ಲ ಕತೆಗಳ ಇನ್ನೊಂದು ವೈಶಿಷ್ಟ್ಯ. ಉದಾಹರಣೆಗೆ ‘ತೋಟದ ತುಂಬಾ ಗೆಣಸಿನ ಬಳ್ಳಿ ನೆಟ್ಟರೆ, ಬೇಲಿ ಸಾಲಿನ ನೆರಳಲ್ಲಿ ಮುಚ್ಚಳಗಳಲ್ಲಿ ನೀರು ಇಟ್ಟರೆ, ಹಣ್ಣಿನ ಗಿಡಗಳನ್ನು ನೆಟ್ಟರೆ, ಇಲಿಗಳು ನಿಮ್ಮ ತೋಟದ ಉಳುಮೆ ಮಾದುತ್ತಾ ಗೆನಸು ಕೆತ್ತಿಕೊಂಡು ಹಾಯಾಗಿರುತ್ತವೆ (ಕತೆ: ಇಲಿಗಳು ಮತ್ತೆಚ್ಚಿ ಬೆಳೆದದ್ದು) ಬಿಳಿಗೆರೆಯವರ ಕತೆಗಳೆಲ್ಲವೂ ಸಹಜ ಕೃಷಿಯನ್ನು ಪ್ರತಿಪಾದಿಸುವ ಕತೆಗಳು.’ ಎರೆಹುಳು, ಇರುವೆ, ಗೊದ್ದ, ಗೆದ್ದಲು ಹುಳು ಮತ್ತು ಕೀಟಗಳು ನಮ್ಮ ತೋಟದ ಉಳುಮೆ ಮಾಡುತ್ತವೆ. ನಮ್ಮದು ಮರಾಧಾರಿತ ತೋಟ, ಗೆಡ್ದೆ ಗೆಣಸುಗಳ ತೋಟ, ಹಸುರು ಬೇಲಿಯ ತೋಟ. (ಕತೆ: ಎರೆ ಹುಳು ಕಚ್ಚಿ ಆದದ್ದೆಂದು ಹೇಳಲಾದ ಗಾಯ)

ವೈಕಂ ಮೊಹಮ್ಮದ್ ಬಶೀರ್ ಅವರ ‘The Rightful Inheritors of the Earth’ ನೆನಪಿಸುವ ‘ಬಾಳೆ ಹುಚ್ಚು ಬಾಳೇ ಹುಚ್ಚು’ ಕತೆಯಲ್ಲಿ ಬರುವ ‘ಅವರಿಗೆ ಸಿಕ್ಕಿದ್ದು ಬಾಳೆ ಗೊನೆ. ಅದರಲ್ಲಿ ಅರ್ಧ ಭಾಗದಷ್ಟು ಹಣ್ಣುಗಳನ್ನು ನವಿಲುಗಳು, ಅಳಿಲುಗಳು ಮತ್ತು ಇಲಿಗಳು ಹಂಚಿಕೊಂಡು ತಿಂದು ಮುಗಿಸಿದ್ದರು.’ ಈ ರೀತಿಯ ಚಿತ್ರಕ ಶಕ್ತಿಯ ವಾಕ್ಯಗಳು.

ಬಿಳಿಗೆರೆಯವರ ಕತೆಗಳನ್ನು ಓದುತ್ತಾ ಜಪಾನಿನ ‘ತೊತ್ತೋ ಚಾನ್’, ಕುವೆಂಪು ಅವರ ‘ಅಮಲನ ಕತೆ’, ರಾವ್ ಬಹದ್ದೂರ್ ಅವರ ‘ಗ್ರಾಮಾಯಣ’ ಹೀಗೆ ಗ್ರಾಮ ಭಾರತದ ಬಗ್ಗೆ ನಾವು ಓದಿದ ಅದೆಷ್ಟೋ ಕಥನಗಳು ಕಣ್ಣಿಗೆ ಕಟ್ಟುತ್ತವೆ. ಅವರು ಕೃಷಿಯಂತಹ ಶ್ರಮ ದಾಯಕ ಕೆಲಸವನ್ನು ಜೀವ ಪ್ರೀತಿಯ ಸಂಕೇತವಾಗಿ ಮಕ್ಕಳಿಗೆ ಬಣ್ಣಿಸುವ ವಿಧವೇ ಸೊಗಸು. “ಪುಟ್ಟ ಬಾಳೆ, ಪಚ್ಚ ಬಾಳೆ, ನೇಂದ್ರ ಬಾಳೆ, ಹುಳಿ ಬಾಳೆ, ರಸ ಬಾಳೆ, ಕಪ್ಪು ಬಾಳೆ, ಕೆಂಪು ಬಾಳೆ, ಕದ್ದಾಳೆ, ಬೂದು ಬಾಳೆ,.. ಹತ್ತು ತರದ ಬಾಳೆ ನೆಟ್ಟು, ಅವು ಚಿಗುರುವುದನ್ನಿ ನ್ಫೋಡಲು ಒಂದು ವಾರ ಬಿಟ್ಟು ಬರುವುದಾಗಿ ಮನೆಯತ್ತ ಹೊರಟರು. “ಇಲ್ಲಿನ ಛೂ ಮಂತ್ರಯ್ಯ ಫುಕುವೋಕಾರ ಹಾಗೆ . ಅವರ ತೋಟದಲ್ಲಿ ಉಳುಮೆ ಇಲ್ಲ, ತೋಟದ ಕಸ ಕಡ್ಡಿಗಳ ಉಳಿಕೆಯನ್ನು ಸುಡುವುದಿಲ್ಲ. ‘ಗಿಡ ಮರಗಳು ಛೂ ಮಂತ್ರಯ್ಯನವರು ಹೇಳಿದ ಹಾಗೆ ಕೇಳುತ್ತಿದ್ದವು’. ಹಾಗಾಗಿ ಅವರೊಬ್ಬ ಮಾಂತ್ರಿಕ.

ರಾತ್ರಿಯ ಕತ್ತಲೆಯನ್ನು ಕಣ್ನಲ್ಲಿ ತುಂಬಿಕೊಳ್ಳುವ, ಹಾವು, ಮುಳ್ಳು, ಹಂದಿ, ಕರಡಿ, ಗೂಬೆ, ಎರೆಹುಳುಗಳನ್ನು ದೇವತೆಗಳಂತೆ ಕಾಣುವ, ಆಗೊಮ್ಮೆ ಈಗೊಮ್ಮೆ “ಇಬ್ಬನಿ ಮುಖ ತೊಳೆಯುವಷ್ಟು ದಟ್ತವಾಗಿ ಬಿದ್ದಿತ್ತು” ಈ ರೀತಿಯ ಕಾವ್ಯಾತ್ಮಕ ಸಾಲುಗಳು ಇರುವ ಕತೆಗಳಿವು. (ಕತೆ: ನವ್ವಾಲೆ ಸುವ್ವಾಲೆಯರು ಕತ್ತಲಲ್ಲಿ ಕಂಡ ದೇವತೆಯರು” )

ಇನ್ನು ಕೆಲವು ಕತೆಗಳಲ್ಲಿನ ವೈಶಿಷ್ಟ್ಯ Magic Realism. M. ವಿಜಯನ್ ಅವರ The Legends of Khasak ನೆನಪಿಸುವ
“ಗೆಣಸಿನ ಗಿಡದ ಹಾಗೆ ನೆಲದಲ್ಲಿ ಮನುಷ್ಯರು ಗೆಡ್ಡೆಗಳಂತೆ ಜೀವ ಪಡೆಯುತ್ತಿದ್ದರು.” (ಕಥೆ: ಮಳೆಯಲ್ಲಿ ನೆಂದರೆ ಮೊಳಕೆಯೊಡೆಯುತ್ತಾರೆ. ” )

ಈ ಸಂಕಲನದಲ್ಲಿ ಒಟ್ಟು ೨೪ ಕತೆಗಳಿದ್ದು ಅವು ಕೆಲವೊಮ್ಮೆ ಪ್ರಬಂಧದಂತೆಯೋ, ಕವಿತೆಯಂತೆಯೋ ಭಾಸವಾಗುತ್ತವೆ. “ನವಿಲು, ಜೇನು ಹುಳುಗಳು, ಇರುವೆ, ಗೆದ್ದಲು, ಎರೆಹುಳುಗಳು ಎಲ್ಲವೂ ಛೂ ಮಂತ್ರಯ್ಯನವರೊಂದಿಗೆ ಮಾತನಾಡುತ್ತವೆ. ನಿಂತಲ್ಲೇ ನಿಂತಿರಬೇಕಾದ ಗಿಡ ಮರಗಳು ಅವರ ಕಷ್ಟಗಳನ್ನು ಅವರೊಂದಿಗೆ ಹೇಳಿಕೊಳ್ಳುತ್ತವೆ. “ ಜೇನು ನೊಣಗಳಿಗೋಸ್ಕರ ಹಸಿರು ಬೆಳೆಯುವ, ಹತ್ತು ತರದ ತರಕಾರಿ, ಹತ್ತು ತರಹದ ಹಣ್ಣುಗಳನ್ನು ತಿನ್ನುವ ಛೂ ಮಂತ್ರಯ್ಯನವರು ರೈತ ಮುಂದಾಳು. ಅವರೊಂದು ತತ್ವ ಜ್ನಾನಿ ಕೂಡ.

“ಮನುಷ್ಯರು ಮಳೆಯಲ್ಲಿ ನೆನೆಯುವುದಕ್ಕೂ ಮರಗಳು ಮಳೆಯಲ್ಲಿ ನೆನೆಯುವುದಕ್ಕೂ ಏನು ವ್ಯತ್ಯಾಸ? ಈ ರೀತಿಯ ಪ್ರಶ್ನೆಗಳು ಅವರದು. ಇನ್ನು ಅವರ ತೊಟವನ್ನಂತೂ ‘ಮಿಡತೆಗಳು, ರೆಕ್ಕೆ ಹುಳಗಳು, ವಾಟೆ ಹುಳುಗಳು, ಕಪ್ಪೆಗಳು ನೋಡಿಕೊಳ್ಳುತ್ತವೆ. “ಈ ಕೃತಿಯ ಬಗ್ಗೆ ಬರೆದ ಗಂಗಾಧರಯ್ಯ ಅವರು ಹೇಳುವಂತೆ “ಛೂ ಮಂತ್ರಯ್ಯ ಒಬ್ಬ ನಿಜ ದೇಸಿ ಜ್ನಾನಿ. ಅಂತೆಯೇ ಯಾರೇ ಆಗಲಿ ಒಂಚೂರು ಮನಸ್ಸು ಮಾಡಿದರೆ ಇಂಥದ್ದೊಂದು ಅದ್ಭುತವನ್ನು ತಾನೂ ಮಾಡಿ ತೋರಿಸಬಹುದು.” ಇದು ಇಲ್ಲಿನ ಕಥನಗಳ ಮೂಲ ಆಶಯವಾಗಿದೆ.ಒಟ್ಟಿನ ಮೇಲೆ ಈ ಪುಸ್ತಕದ ಎಲ್ಲ ಕಥೆಗಳೂ ತಮ್ಮ ರಮ್ಯಾದ್ಭುತ, ನಾಟಕೀಯ ಗುಣಗಳಿಂದಲೂ ಅಪ್ಪಟ ಕೃಷಿ ಪ್ರಿತಿಯಿಂದಲೂ ಓದಲೇ ಬೇಕಾದ ಕಥೆಗಳಾಗಿವೆ.

ಕೃತಿ : ‘ಛೂ ಮಂತ್ರಯ್ಯನ ಕತೆಗಳು’
ಲೇಖಕರು: ಕೃಷ್ಣಮೂರ್ತಿ ಬಿಳಿಗೆರೆ
ಪ್ರಕಾಶಕರು : ಬಹುರೂಪಿ

ಪುಸ್ತಕದ ಬೆಲೆ : 140 ರೂ

‍ಲೇಖಕರು Admin

19 February, 2022

1 Comment

  1. T S SHRAVANA KUMARI

    ಆಸಕ್ತಿದಾಯಕ ಪರಿಚಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading