ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ದೇಶಪಾಂಡೆ ಬರೆದ ಸಣ್ಣಕಥೆ 'ಪತಿ ಪತ್ನಿ ಔರ್ ವೋ'

ಜಯಶ್ರೀ ದೇಶಪಾಂಡೆ

ನಿನ್ನೆ ಮಧ್ಯಾಹ್ನ ಸನಿ ಆಫೀಸಿನಿ೦ದ ಫೋನು ಮಾಡಿ ”ಇವೊತ್ತು ಸ೦ಜೆ ಸಿ೦ಘಾನಿಯಾ ಮನೆಗೆ ನೀನೂ ಬರ್ತೀ ತಾನೇ?” ”ಎ೦ದು ಕೇಳಿದ್ದ.
”ಇಲ್ಲ ನನ್ನನ್ನು ಲೆಕ್ಕೆಕ್ಕೆ ಹಿಡಿಬೇಡ” ಎ೦ದಿದ್ದೆ. ‘ನೀನೂ ಹೋಗಬೇಡ ‘ ಎ೦ದೂ ಹೇಳಬೇಕೆನಿಸಿದ್ದನ್ನು ಕಷ್ಟಪಟ್ಟು ತಡೆದುಕೊ೦ಡೆ. ಯಾಕೆ ಬೇಡ ಅನ್ನುತ್ತೇನೆ ಎ೦ಬುದಕ್ಕೆ ಸಮಝಾಯಿಷಿ ಕೊಡಲಾರೆನಾದರೂ ಅವನು ಅಲ್ಲಿಗೆ ಹೋಗದೇ ಇರುವುದೇ ನನಗೆ ಇಷ್ಟ, ಆದರೆ ಅವನ ಮೇಲೆ ನನ್ನ ಇಷ್ಟವನ್ನು ಹೇರುವುದೂ ನನಗಿಷ್ಟವಿಲ್ಲ!.
ಮು೦ಬಯಿ…ಬಿಸಿನೆಸ್ ಜಗತ್ತಿನವರಿಗೆಲ್ಲ ಇದೇ ಸ್ವ೦ತ ತವರೂರು. ಎಲ್ಲೆಲ್ಲಿ೦ದಲೋ ಬ೦ದು ಇಲ್ಲಿಗೆ ಸೇರಿದವರಾಗಿ ತಳವೂರಿ ಕಚ್ಚಿಕೊ೦ಡು ದೇಶ ಉದ್ಧಾರ ಮಾಡುತ್ತಿರುವ ಈ ಸಿ೦ಘಾನಿಯಾನ೦ಥ ಪಕ್ಕಾ ಬ೦ಡವಾಳಶಾಹೀ ಜನಗಳು ಪಾರ್ಟಿ ಮಾಡುವ ಹೊಸ ಹೊಸ ನಮೂನೆಗಳನ್ನು ನಾನು ಇದೇ ಮು೦ಬಯಿಯಲ್ಲೇ ಕ೦ಡದ್ದು.. ಬರಪೂರ ಲಾಭ ತರುವ ಬಿಸಿನೆಸ್ ಎ೦ಬ ಸು೦ದರ ವಿಷೇಷಣವನ್ನ೦ಟಿಸಿಕೊ೦ಡ ವ್ಯಾಪಾರಗಳನ್ನು ದಿನವಿಡೀ ಕನಸಿ, ಅದನ್ನು ಸಾಕಾರಕ್ಕೆ ತರಲು ಅಹರ್ನಿಶಿ ದುಡಿದು ಖರೀದಿದಾರನಾದ ‘ಕ್ಲೈ೦ಟ್ ಎ೦ಬ ಪ್ರಾಣಿಗೆ ತಾನು ಹಾಕಿಸಿಕೊ೦ಡ ಟೋಪಿಯ ಅನುಮಾನವೇ ಬಾರದ೦ತೆ ಯಾಮಾರಿಸಿ ತಮ್ಮ ತಿಜೋರಿ ತು೦ಬಿಕೊ೦ಡು ಮುಚ್ಚಿ ಮುಗುಳ್ನಕ್ಕು ಮತ್ತೆ ನಾಳೆಯ ಲಾಭಕ್ಕೆ ಅಣಿಯಾಗುವ ಚ೦ದ ಇವರದೇ!
ಅದೇ ಇಡೀ ವಾರದ, ತಿ೦ಗಳ ಮತ್ತು ವರ್ಷದ ಕತೆ. ಇದೆಲ್ಲದರಲ್ಲಿ ಮುಳುಮುಳುಗಿ ಏಳುತ್ತಾ ವಾರಕ್ಕೊಮ್ಮೆ ಬರುವ ಶನಿವಾರದ ರಾತ್ರಿಯ ಒ೦ಬತ್ತರ ನ೦ತರ ಹತ್ತೆ೦ಟು ಜನ ಕಾಕ್ ಟೇಲ್ ಕುಡಿಯಲು ಶುರು ಹಚ್ಚಿದರೆ ಒಬ್ಬಿಬ್ಬರು ವಾ೦ತಿ ಆಗಿ ಬಿದ್ದರೂ ಬಿದ್ದರೆ೦ತಲೇ ಲೆಕ್ಕ. ಅದೇ ಭಯ ಸನಿಯ ಬಗ್ಗೆ ನನಗಿದ್ದದ್ದು.
ನಿನ್ನೆಯೂ ಅಷ್ಟೇ ಸಿ೦ಘಾನಿಯ ಮನೆಯ ಪಾರ್ಟಿ ಮುಗಿಸಿ ಅವನು ಬರುವಾಗ ರಾತ್ರಿ ಆಗಲೇ ತಾರೀಖು ತನ್ನನ್ನು ಬದಲಿಸಿಕೊ೦ಡಿತ್ತು..
ಹೊರಡುವಾಗಲೇ ಸನಿ ಹೇಳಿದ್ದ, ”ವಾಪಸ್ ಬರಲಿಕ್ಕೆ ಸ್ವಲ್ಪ ತಡ ಆದೀತು ಪ್ರೀ –ನನ್ನ ಹೆಸರನ್ನು ಪೂರ್ತಿಯಾಗಿ ಪ್ರೀತೀ ಅ೦ತ ಕರೆಯುವುದಿಲ್ಲ ಅವನು, -ಇರುವ ಎರಡಕ್ಷರವನ್ನೇ ಸಣ್ಣದು ಮಾಡಿ ಪ್ರೀ ಅ೦ತಾನೆ- ಆಮೇಲೆ ಗುರ್ರ್ ಅ೦ದುಗಿ೦ದೀಯ ನನ್ಮೇಲೆ”
ನಾನು ನಕ್ಕೆ, ”ನೀನು ಒ೦ದೇ ಗ೦ಟೆಯಲ್ಲಿ ಮರಳಿ ಬ೦ದರೂ ನಾ ಗುರ್ರೆನ್ನುವುದಿಲ್ಲ ಅ೦ಅತ ಖಾತ್ರಿ ಇದೆಯೇನು ನಿ೦ಗೆ?”
ನನ್ನ ಎಡತೋಳನ್ನು ಹಿಡಿದು ತಿರುಗಿಸಿಕೊ೦ಡು ನನ್ನ ಮೂಗಿನ ತುದಿಯನ್ನು ತನ್ನ ತೋರು-ತರ್ಜನಿ ಬೆರಳುಗಳ ನಡುವೆ ಹಿಡಿದು ಹಿ೦ಡಿದ ಸನಿ–ಅ೦ದ ಹಾಗೆ ನಾನೂ ಅವನನ್ನು ಸುನೀಲ ಅನ್ನಲ್ಲ -ಸನಿ ಅ೦ತೇನೆ..
”ಯ್ಯೋ ನೋಯುತ್ತೆ ಬಿಡು.. ಏಯ್ ” ನಾನು ಕೂಗಿದೆ. ಸನಿ ನಕ್ಕ.
”ಮತ್ತೆ ನನ್ನ ಜೊತೆ ಬ೦ದುಬಿಡು ಅ೦ದರೆ ಡೌಲು ಬಡೀತಾ ಇದ್ದೀಯಲ್ಲ..ಇಲ್ಲಿ ಕೂತೇನು ಕಡೀತೀಯ…”
ನಾನು ಮೈ ಮುರಿದು ಆಕಳಿಸಿದೆ, ”ಇಲ್ಲ ನೀನು ಹೋಗು ನನಗೊ೦ದಿಷ್ಟು ಫ್ರೀಡಂ ಬೇಕು..”
” ಓಯ್ ಚೆಲುವೆ ಅದೇನು ಸಮಾಚಾರ? ನನಗೇನೋ ವಾಸನೆ ಬರ್ತಾ ಇದೆ,,ಫ್ರೀಡಂ ಬೇಕ೦ತೆ..ನಿನ್ನ ಫೇಸ್ ಬುಕ್ಕು, ವಾಟ್ಸ್ಆಪನ್ನೂ ಮೀರಿದ್ದೇನಾದರೂ ಉ೦ಟಾ೦ತ..”
ಈಗ ನಾನವನನ್ನು ಜೋರಾಗಿ ಜಿಗುಟಿದೆ ..”ನೀನು ಬ೦ದ ಮೇಲೆ ಎಲ್ಲಾ ಗುಟ್ಟು ತಿಳ್ಕೋ ಆಯ್ತಾ..ಮತ್ತೆ ನಿನ್ನದೇ ಈ ಕ೦ಬದ೦ಥ ಕಾಲುಗಳ ಮೇಲೆ ವಾಪಸ್ ಬಾ ಮರೀ..”

ಸನಿ ನನ್ನ ಪಕ್ಕ ಉರುಳಿ ನನ್ನ ಕೈಯೆಳೆದ ..”ನೀ ಇಷ್ಟೆಲ್ಲ ಹೇಳಿದಾಗ ಎರಡು ಪೆಗ್ ಅಲ್ಲಿ ಯಾಕೆ ಇಲ್ಲೇ ಏನಾದರೂ ..” ನನ್ನ ಕುತ್ತಿಗೆಯ ಹಿ೦ದಿನ ಕೂದಲ ರಾಶಿಯಲ್ಲಿ ಕೈ ತೂರಿಸಿದ ಅವನನ್ನು ತೋಳು ಹಿಡಿದು ನೂಕಿ ನಾನಲ್ಲಿ೦ದ ಎದ್ದೆ.
ಟಿ ವಿ ಹಚ್ಚಿದರೆ ಮತ್ತದೇ ಮೈ , ಕೈ ಕಾಲುಗಳಿಗೆ ಸ್ಟ್ರೋಕ್ ಹೊಡೆದ೦ತೆ ಅದುರಿಸುವ ಡ್ಯಾನ್ಸ್ ಇಲ್ಲ , ಸಾವಿನ ಸುದ್ದಿಯನ್ನೂ ಐಟೆಮ್ ಸಾಂಗ್ ನಷ್ಟು ಅಲ೦ಕರಿಸಿ ಹಗಲಿರುಳೂ ಬಿತ್ತರಿಸುವ ಸುದ್ದಿ ಚಾನಲ್ಲುಗಳ ಗಲಾಟೆ, . ತಲೆ ಚಿಟ್ಟು ಹಿಡಿಸುವ ಡಿಬೇಟ್ ಗಳು..ಕ್ರಿಸ್ ಮಸ್ ಕೇಕಿನ೦ತೆ ಭರ್ಜರಿ ಬಣ್ಣ ಮೆತ್ತಿಕೊ೦ಡು ಬಗೆ ಬಗೆಯ ಹುನ್ನಾರ ನಡೆಸುವ ಹೆಣ್ಣುಗಳು ತು೦ಬಿರುವ ಹಿ೦ದೀ, ಕನ್ನಡ, ಮರಾಠೀ ಸೀರಿಯಲ್ ಗಳು…, ಅವೆಲ್ಲ ದಾಟಿ ಮು೦ದೆ ಹೋದರೆ ಹೊಡಿ, ಬಡಿ ,ಕಡಿ ಸಿನಿಮಾಗಳು..
ಸನಿ ಕೈಯೊಳಗಿನ ಆಕರ್ಷಕ ಬಾಟಲಿಯಿ೦ದ ಪುಸಪುಸನೆ ಸೆ೦ಟ್ ಬೀರಿಕೊಳ್ಳುತ್ತಿದ್ದ ” ಓಯ್, ಸಾಕು ಬಿಡು ಅಲ್ಲಿ ಯಾರನ್ನ ಇ೦ಪ್ರೆಸ್ ಮಾಡುವ ಇರಾದೆ ನಿ೦ದು?” ನಾನು ಛೇಡಿಸಿದ್ದಕ್ಕೆ ಅವ ನಕ್ಕ, ”ಛೆ,,ಛೆ,, ಆ ಹಕ್ಕು ನಿನಗೇ ಇರಲಿ..”
ನನ್ನ ಕೈಯೊಳಗಿನ ಮ್ಯಾಗಸೀನ್ ಎತ್ತಿ ಸುರುಳಿ ಮಾಡಿ ಅವನತ್ತ ಬೀಸಿದೆ..ತಪ್ಪಿಸಿಕೊ೦ಡು ಕ್ಷಣಾರ್ಧದಲ್ಲಿ ಬಾಗಿಲು ದಾಟಿದ ಸನಿ. ಮತ್ತೆ ಅರೆನಿಮಿಷದಲ್ಲಿ ಅವನ- ದಡದಡನೆ ಹಾರಿ ಹಾರಿ ಮೆಟ್ಟಿಲುಗಳನ್ನಿಳಿಯುವ- ಸದ್ದು.
”ಅಲ್ಲ ನೀನು ಲಿಫ್ಟಿನಲ್ಲಿ ಯಾಕೆ ಓಡಾಡಲ್ಲ ” ಅ೦ದರೆ
”ಇಳಿಯಲು ಲಿಫ್ಟ್ ಯಾಕೆ? ನನ್ನ ಕಾಲು ನೋಡು ಹೇಗೆ ಫುಟ್ಬಾಲ್ ಆಟಗಾರನ ಕಾಲಿದ್ದ ಹಾಗಿವೆ ..ಲಿಫ್ಟು ಗಿಫ್ಟು ಎಲ್ಲ ನಿಮ್ಮ೦ಥಾ ಕೈಲಾಗದವರ ಸಾಧನಗಳು …ನನ್ನ ಕೇಳಿದರೆ ಮನುಷ್ಯರು ತಮ್ಮ ಕಾಲುಗಳ ಪ್ರಯೋಜನವನ್ನು …” ಅ೦ತ ಕಾಲುಗಳ ಸಮರ್ಥ ಬಳಕೆಯ ಬಗ್ಗೆ ಒ೦ದು ದೊಡ್ಡ ಉಪನ್ಯಾಸವನ್ನೇ ಶುರು ಹಚ್ಚಿಕೊಳ್ಳುವ ಭಂಡ ಅವನು.
ಆದರೆ ಅವನ ಒ೦ದೊ೦ದು ಮಾತೂ ಸತ್ಯ ಅ೦ತ ನನಗೇ ಗೊತ್ತಿದ್ದ ಸ೦ಗತಿ..ಆರಡಿ ಎತ್ತರದ ಶರೀರಕ್ಕೆ ಎ೦ಬತ್ತು ಕೆ. ಜಿ ತೂಕದ ಕಬ್ಬಿಣದ೦ಥ ಫಿಸಿಕ್ ಅವನದು..ಅದೂ ನಮ್ಮ ಫ್ಲ್ಯಾಟ್ ಇರುವ ಎ೦ಟನೆಯ ಮಹಡಿಯ ವರೆಗಿನ ತೊ೦ಬತ್ತು ಮೆಟ್ಟಿಲುಗಳನ್ನು ದಡದಡನೆ ಏರಿಳಿವ ಅವನ ಹುಡುಗಾಟಿಕೆ ಕ೦ಡು ” ನೀನೇ ಡಾರ್ವಿನ್ನನ ಮೂಲ ಮಾನವನ ಇ೦ದಿನ ಅವತಾರ ”ಅ೦ತ ಛೇಡಿಸಿ ಖುಷಿಪಡುವವಳು ನಾನು…ಅಷ್ಟರಲ್ಲಿ ಕೆಳಗಿನ ಕಾರು ಪಾರ್ಕಿ೦ಗ್ ನಿ೦ದ ಅವನು ಹೊರಟದ್ದಕ್ಕೆ ಸಾಕ್ಷಿಯಾಗಿ ನಮ್ಮ ಕಾರಿನ ವಿಚಿತ್ರ,ವಿಶಿಷ್ಟ ಹಾರ್ನ್ ಕೇಳಿಸಿತು..
”ಅಬ್ಬ.. ಅ೦ತೂ ಇಲ್ಲಿ೦ದ ಹೊರಟ ”… ಅ೦ದುಕೊ೦ಡು ಅವನಿ೦ದ ಕೇಳಿ ಪಡೆದಿದ್ದ ‘ಸ್ವಾತ೦ತ್ರ್ಯ’ವನ್ನು ಮನಸೋ ಇಚ್ಚೆ ಅನುಭವಿಸುವ ಮನಸ್ಸಾಗಿ ರೂಮಿಗೆ ಹೋಗಿ ಉರುಳಿಕೊ೦ಡೆ. ಅವನೇ ಹೇಳಿ ಹೋದ೦ತೆ, ವಾಟ್ಸಾಪ್ , ಟ್ವಿಟ್ಟರು, ಫೇಸ್ ಬುಕ್ಕು ತೆರೆಯಲು ಹೋದರೆ ಯಾವುದೂ ಬೇಡವಾಗಿ ,ಮಲಗಿದರೆ ನಿದ್ದೆಯೂ ಬಾರದೆ ಹೋಗಿ ಬೇಜಾರು ತರಿಸಿ ”ಅರೆ ಹೀಗೆ ಸಮಯ ಕೊಲ್ಲಲು ಮನೆಯಲ್ಲುಳಿದೆನೇ?” ಅ೦ದುಕೊಳ್ಳುತ್ತ ಹೊರಬ೦ದರೆ ಅಲ್ಲಿದ್ದ ಗಾಜಿನ ಕಪಾಟಿನ ತು೦ಬ ಪುಸ್ತಕಗಳು, ಸನಿ ಊರಲ್ಲಿದ್ದರೆ ಎಳೆದಾಡಿಸಿಕೊ೦ಡು ಅಸ್ತವ್ಯಸ್ತವಾಗಿಬಿಡುವ ಆ ನೂರೆ೦ಟು ಪುಸ್ತಕಗಳನ್ನು ನೀಟಾಗಿ ಜೋಡಿಸಿ ಇತ್ತ ಹೊರಳಿದರೆ ಪಕ್ಕದಲ್ಲಿದ್ದ ಬೆಳ್ಳಿ ಚೌಕಟ್ಟಿನ ಭಾವಚಿತ್ರದೊಳಗೆ ಕಪ್ಪು ಬಣ್ಣದ ಎತ್ತರವಾದ ಕುದುರೆ ಏರಿ ಕೂತು ಲಗಾಮು ಹಿಡಿದು ಓಡಿಸಲಣಿಯಾಗಿದ್ದ ಸನಿ ನನ್ನನ್ನೇ ನೋಡಿ ನಕ್ಕ೦ತೆನಿಸಿತು.
ಕುದುರೆ ಸವಾರಿ ಅ೦ದರೆ ಈ ಮನುಷ್ಯನ ಅತ್ಯ೦ತ ಪ್ರಿಯ ಹವ್ಯಾಸವಾಗಿತ್ತು, ಹಿ೦ದೊಮ್ಮೆ ಅವನ ಕುದುರೆಗಳ ಖಯಾಲಿ ಕ೦ಡು ”ನೀನೋ ನಿನ್ನ ಕತ್ತೆಗಳೋ”ಎ೦ದು ನಾನವನನ್ನು ಛೇಡಿಸಿ ಕಾಡಿದ್ದು ನೆನಪಾಗಿ ನಗು ಬ೦ತು.ಈಗಲೂ ಅದನ್ನೇ ಅವನ ಫೋಟೋಗೆ ಒಮ್ಮೆ ಅ೦ದು ನನ್ನಷ್ಟಕ್ಕೆ ನಾನೇ ನಕ್ಕು ಇತ್ತ ಹೊರಳಿದರೆ ನಾನವನಿಗೆ ಹೊರಡುವ ಹೊತ್ತಿಗೆ ಬೀಸಿದ್ದ ಮ್ಯಾಗ್ ಜಿನ್ ಬಾಯಿ ತೆರೆದುಕೊ೦ಡು ಬಿದ್ದಿತ್ತು, ಅದರಲ್ಲಿ ಶಹನಾಜಳ ಪುಟ. ಅವಳ ಲಿಪ್ ಸ್ಟಿಕ್ ಮೆಟ್ಟಿದ ತುಟಿಗಳು ಚಿಮ್ಮುತ್ತಿದ್ದ ನಗು. ಹಾಗೆ ಅವಳೊ೦ದು ಅ೦ಕಣ ನಡೆಸುತ್ತಿದ್ದಳು. ಅದು ನಮ್ಮಿಬ್ಬರ ಒಳ್ಳೇ ಟೈಮ್ ಪಾಸ್ ಆಗಿತ್ತು ..’ನಿಮ್ಮ ಸ್ವಭಾವವನ್ನು ಗುರುತಿಸಿಕೊಳ್ಳಿ. ಎ೦ಬ .ಅ೦ಕಣದಲ್ಲಿ ಹತ್ತು ಪ್ರಶ್ನೆಗಳು ಮತ್ತೆ ಅವಕ್ಕೆಲ್ಲ ಅದೇಪುಟದಲ್ಲಿ ತಲೆ ಕೆಳಗಾಗಿ ಕೊಟ್ಟ ಉತ್ತರಗಳು.. ಸನಿ ಆಟದ ಮೂಡ್ ನಲ್ಲಿದ್ದಾಗ ನಾನವನಿಗೆ ಆ ಪ್ರಶ್ನೆಗಳನ್ನೇ ತಿರುವುಮುರುವಾಗಿ ಕೇಳಿ ಅವನ ಉತ್ತರಗಳ ತಬ್ಬಿಬ್ಬನ್ನು ಆನ0ದಿಸುತ್ತಿದ್ದದ್ದು ನೆನಪಾಗುವಾಗ ಹಿ೦ದಿನಿ೦ದ ”ಹೇ ಬಿಡದನ್ನು” ಅ0ದ೦ತೆ ಕೇಳಿಸಿ..ಬೆಚ್ಚಿದರೆ ಅವನೆಲ್ಲಿದ್ದಾನೆ ಈಗ? ಅಲ್ಲಿ ಸಿ೦ಘಾನಿಯನ ಮನೆಯ ಲಿವಿ೦ಗ್ ರೂಮಿನಲ್ಲಿ ಬೆಲ್ಜಿಯನ್ ಕಟ್ ಗ್ಲಾಸ್ ಹಿಡಿದು ಅವನಿಗಿ೦ತಲೂ ಹೆಚ್ಚು ನಯದ ನಗೆ ಬೀರುತ್ತ –ಈಗಿನ ಮಟ್ಟಿಗೆ ಭಾರೀ ಸಾಫ಼ಿಸ್ಟಿಕೇಟೆಡ್ ಆಗಿ ನಟಿಸುವ ಅವನ0ಥದೇ ಬಿಳೀ ಕಾಲರಿನ ಜನದ ಗು೦ಪಿನೊಳಗಿದ್ದಾನು.
ಈ ಸಭ್ಯತೆಯ ಹೊದಿಕೆಗಳೆಲ್ಲ ಹತ್ತು ಗ೦ಟೆಯ ಅನ೦ತರ ಕಳಚುತ್ತ ಹೋಗಿ ಒಬ್ಬೊಬ್ಬರ ನಿಜರೂಪ ದರ್ಶನವಾಗುವುದೂ ಅಷ್ಟೇ ನಿಜ..ಆಗ ನೋಡಬೇಕು, ಎ೦ದೋ ಒಮ್ಮೆ, ಸರಿಯಾಗಿ ದಿನ, ವಾರ ನೆನಪಿಲ್ಲ..ಮೀರ್ ಚ೦ದಾನಿಯ ಕತೆ.. ಅ೦ದ್ಯಾಕೋ ಕೇವಲ ನಾಲ್ಕು ಪೆಗ್ಗಿಗೆ –ಸಾಮಾನ್ಯವಾಗಿ ಪೆಗ್ಗು ಎ೦ಟಾದರೂ ಜಪ್ಪೆನ್ನದ ಆಸಾಮಿಯದು– ಭೋರಾಡಿ ಅತ್ತುಬಿಟ್ಟಿದ್ದ …ಹೆ೦ಡತಿಯೊ೦ದಿಗಿನ ಅವನ ವಿರಸ ಡೈವೋರ್ಸಿನ ಮೆಟ್ಟಿಲ ಬಳಿಗೆ ಹೋಗಿ ನಿ೦ತಿತ್ತು..ಕಷ್ಟ ಆಗುವುದು ಸಹಜವೇ, ಆದರೆ ಅವನ ಹೆಂಡತಿ ಶೆರ್ಲಿನ್ ಹೇಳುತ್ತಿದ್ದ ಕತೆಯೇ ಬೇರೆ.. ಇವನನ್ನೂ ಇವನ ಅಫೇರ್ ಗಳನ್ನೂ ಸಹಿಸಿ ಸಹಿಸಿ ಅವಳ ಸಹನೆಯ ಕಟ್ಟೆ ಒಡೆದಿದ್ದರಲ್ಲಿ ಆಶ್ಚರ್ಯ ಯಾಕೆ? ಆದರೆ ಶೆರ್ಲಿನ್ ಮಿತಭಾಷಿ..ಇಲ್ಲದ ಗುಲ್ಲಿಗೆ ಅವಕಾಶ ಕೊಟ್ಟಿರಲಿಲ್ಲ, ಮಾತಿಲ್ಲದೆ ಎದ್ದು ತನ್ನ ತಾಯಿಗೂ ಜೊತೆಯಾಗಿರತೀನಿ ಅಂತ ಬಾಂದ್ರಾಕ್ಕೆ ಹೊರಟುಬಿಟ್ಟಿದ್ದಳು..
ಇನ್ನು ವರ್ಷದಲ್ಲಿ ಹತ್ತು ಬಾರಿ ಅಮೇರಿಕೆಗೆ ಹಾರಿ ಬರುವ ವಿದೀಶ್ ಪಟೇಲ್ ಎ೦ಟುಗ೦ಟೆಗೆ ಗ್ಲಾಸೆತ್ತಿದವನು ಒ೦ಬತ್ತೂವರೆಯಷ್ಟೊತ್ತಿಗೆ ಪೂರ್ಣ ಫ್ಲ್ಯಾಟ್ ಆಗಿ ಎ೦ದೋ ಬಿಟ್ಟು ಹೋಗಿದ್ದ ತನ್ನ ಹೆ೦ಡತಿ ಕೋಕಿಲಾ ”ನಿಮ್ಮ ಮನೆಯಲ್ಲಿ ಇದ್ದಾಳೆಯೇ …ದಯವಿಟ್ಟು ಅವಳನ್ನು ಬೇಗ ನನಗೆ ಮರಳಿ ಕಳಿಸಿಕೊಡಿ ”ಎ೦ದು ಎಲ್ಲರ ಕೈ ಹಿಡಿದು ಬೇಡಿಕೊಳ್ಳುತ್ತಿದ್ದ…ಇ೦ಥ ದೃಶ್ಯಗಳನ್ನು ಕಾಣುವುದೇ ನನಗೆ ಸಾಧ್ಯವಿಲ್ಲವೆನಿಸುತ್ತದೆ..ಆದ್ರೆ ಸನಿ ಹಾಗಲ್ಲ. ಸ್ವಲ್ಪ ಬೇರೆ ಅವನು..ಹೀಗೆಲ್ಲ ಸಡಿಲಾಗುವವನಲ್ಲ..’ನಿನ್ನದೇ ಕಾಲುಗಳ ಮೇಲೆ ಬಾ”ಅ೦ತ ಹೇಳಿಲ್ಲವೇ ನಾನವನಿಗೆ…!!
ಈ ಸನಿ ಅನ್ನುವ ಪ್ರಾಣಿ ಒ೦ದಿಷ್ಟು ಮಗೂ ಥರ..ಹುಡುಗು ಬುದ್ಧಿ, ನನ್ನ ಮಟ್ಟಿಗ೦ತೂ ಅವನು ಅಡೋಲಸೆ೦ಟ್ ಹ೦ತವನ್ನೇ ದಾಟಿಲ್ಲದ ಪೋರನ೦ತೆ… ಆದರೂ ಒ೦ದು ಸಾವಿರ ಕೋಟಿಯ ಟರ್ನ್ ಓವರ್ ಇರುವ ಸಾಫ್ಟ್ ವೇರ್ ಉದ್ಯಮದ ಹತ್ತು ಪೆರ್ಸೆ೦ಟ್ ಪಾಲುದಾರ ಮತ್ತೆ ವೈಸ್ ಪ್ರೆಸಿಡೆ೦ಟ್ ಇವನು ಅ೦ದರೆ ನ೦ಬುವುದೇ ಕಷ್ಟ…ಕಾಲೇಜಿನ ಕೊನೆಯ ವರ್ಷದ ಹುಡುಗನ೦ತಿದ್ದಾನೆ ಮಾರಾಯ..ಇತ್ತೀಚೆಗೆ ಬೇರಾವುದೋ ದೇಶಕ್ಕೆ ಖಂಡಾಂತರ ವಾಸಿಯಾಗಿ ತಳವೂರುವರೇ ಜಾಸ್ತಿ ಆಗಿರುವಾಗ ಇವನು ಮಾತ್ರ ಈ ನಾಡು ಬಿಟ್ಟು ಅಲ್ಲಾಡುತ್ತಿಲ್ಲ..”ಅಲ್ವೋ ನೀನ್ಯಾಕೆ ಇಲ್ಲೇ ಝಾಂಡಾ ಊರಿಬಿಟ್ಟಿದ್ದೀಯ ..ಬೇರೆ ಯಾವುದಾದರೂ ದ್ವೀಪಕ್ಕೆ ತೊಲಗಬಾರದೇ ” ಅ೦ತ ಅವನ ದೋಸ್ತ್ ಪರ್ಜನ್ಯ ಪಾ೦ಡೆ ಒಮ್ಮೂಮ್ಮೆ ಕೆದರುತ್ತಾನೆ.. ನಾನೇ ಒ೦ದೆರಡು ಬಾರಿ ಅ೦ಥ ಸೂಚನೆ ಕೊಟ್ಟದ್ದೂ ಇತ್ತು,
”ಬೇಡ ಪ್ರೀ..ಬೇಡ..ನನ್ನ ಬೇರುಗಳು ಇಲ್ಲಿ ತು೦ಬಾ ಆಳಕ್ಕಿಳಿದು ಸುಖವಾಗಿವೆ..ಹೋದರೆ ಅವನ್ನು ಮಧ್ಯವೇ ಕತ್ತರಿಸಿಕೊ೦ಡು ಏಳಬೇಕು..ನನಗಿಷ್ಟವಿಲ್ಲ ..”ಅ೦ದುಬಿಟ್ಟ. ಅವನ ಮಾತು, ವಿಚಾರಗಳೇ ಹಾಗೆ, ಸ್ಪಷ್ಟ, ಕರಾರುವಾಕ್ , ತಾನೇನು ಮಾಡುತ್ತಿರುವ, ಮಾಡಬೇಕು ಎ೦ಬ ಬಗ್ಗೆ ಖಚಿತವಾದ ನಿಲುವುಗಳು…ಕೊ೦ಚ ಮೊಂಡ ಅನಿಸಿದರೂ ಈ ಸುವಿಚಾರಗಳು ನನಗಿಷ್ಟವಾಗದೆ ಇಲ್ಲ..
”ಸರಿ ಬಿಡು ನೀಎಲ್ಲಿದ್ದರೆ ನಾನಲ್ಲಿ..ರಾಮನೆಲ್ಲಿಯೋ ಸೀತೆ ಅಲ್ಲೇ ತಾನೇ?”ಅ೦ದು ಅವನ ತೋಳು ಬಳಸಿ ಒರಗಿದ್ದೆ.
” ಅದೀಗ ಜಾಣೆಯ ಮಾತು ..ನನ್ನ ಜೊತೆ ಇದ್ದು ಇದ್ದು ನಿನಗೂ ಒ೦ದಿಷ್ಟು ಬುದ್ಧಿ ಅ೦ತ ಬ೦ದಿದೆ” ಮತ್ತೆ ನನ್ನ ರಾಶಿ ಕೂದಲಿಗೆ ಬೆರಳು ತೂರಿಸುತ್ತಾನೆ..ಅವನ ಬಲು ಇಷ್ಟದ ಆಟ ಅದು…ಅದೇಕೆ ಅ೦ದರೆ ನಗುತ್ತಾನೆ!
ಸನಿಯೊ೦ದಿಗೆ ನಾನೆಷ್ಟು ಸುಖಿ ಎ೦ಬ ಪ್ರಶ್ನೆ ನಾನ್ನನ್ನು ಕಾಡಿಲ್ಲ, ಸುಖ ಹಾಗೂ ನೆಮ್ಮದಿಗಳ ಅರ್ಥ- ಕಲ್ಪನೆ- ಪರಿಣಾಮಗಳು ಅವರವರ ಕಲ್ಪನೆಯ, ದೃಶ್ಟಿಕೋನದ ಬಿ೦ಬಗಳು.ನನ್ನ ಸುಖ , ಅವನ ಸುಖ ಎ೦ಬ ಎರಡು ಪ್ರತ್ಯೇಕಗಳು ನಮ್ಮ ಸ೦ಬ೦ಧದಲ್ಲಿಲ್ಲ. ಹುಡುಗುತನವೇ ಎದ್ದು ಕಾಣುವ ಅವನ ಮನಸ್ಸಿನ ಒಳಾವರಣದ ಹಿ೦ದಿರುವ ಸೂಕ್ಷ್ಮ ಸ೦ವೇದನೆಗಳನ್ನು ನಾನು ಚೆನ್ನಾಗಿ ಬಲ್ಲೆ…ಈ ಹತ್ತು ವರ್ಷಗಳಲ್ಲಿ ನಾನವನನ್ನು ಅರಿತುಕೊ0ಡಿದ್ದೇನೆ ಎ೦ಬ ಖಾತ್ರಿಯಲ್ಲಿದ್ದೇನೆ.. ಹತ್ತು ವರ್ಷಗಳು ಒಬ್ಬರನ್ನು ಅರ್ಥ ಮಾಡಿಕೊಳ್ಳಲು ಸಾಕಲ್ಲವೇ?
ಅದರಲ್ಲೂ ಮೊದಲಿನ ಆರೇಳು ವರ್ಷಗಳು ನಾನೆ೦ದೂ ಮರೆಯಲಾರದ೦ಥ , ಕಹಿ ನೆನಪುಗಳು ಎ೦ಬುದರ ಸುಳಿವೇ ಇಲ್ಲದ ವರ್ಷಗಳು..ಆದರೂ ನನ್ನ ತೊಡೆಯ ಮೇಲೆ ಉಚ್ಚೆ ಮಾಡಿ ಕೆಳಗಿಳಿದು ಅ೦ಬೆಗಾಲಿಟ್ಟು ನಗುವ ಒಬ್ಬ ಅತಿಥಿ ಬರುತ್ತಲೇ ಇಲ್ಲ ಎ೦ಬ ವಾಸ್ತವ ನನ್ನ ನಿದ್ರೆಯನ್ನೇ ಕಸಿಯುತ್ತಿರುವುದು ಸುಳ್ಳಲ್ಲ…”ಸೋ, ವಾಟ್ ..ಆದಾಗ ಆಗಲಿ, ನಾನೇನು ಈಗ ಖುಷಿಯಾಗಿಲ್ಲವೇ? ” ಎ೦ದು ಸಮಝಾಯಿಷಿ ಕೊಟ್ಟುಕೊಳ್ಳುತ್ತಲೇ ಪಾಠಕ್ಕೆ ಬರುವ ಮಕ್ಕಳ ನಗೆಯೊ೦ದಿಗೆ ನನ್ನ ನಗು ಬೆರೆಸಲು ಯತ್ನಿಸುತ್ತಿದ್ದೆ..ಅದರಲ್ಲೂ ಇತ್ತೀಚೆಗೆ ಸೋಲಾಗುತ್ತಿದೆಯೇ? ನಕ್ಕು ನನ್ನ ನಗಿಸಿ ಮುಗಿಸಿದ ಮಕ್ಕಳು ಮತ್ತೆ ತನ್ನಪ್ಪ ಅಮ್ಮನಲ್ಲಿಗೆ ಓಡಿ ಹೋದಾಗ ನಾ ಇಲ್ಲಿ ಒ೦ಟಿಹಕ್ಕಿ…ಸನಿ ತನ್ನ ಆಫೀಸಿನ ಕ೦ಪ್ಯೂಟರಿನಲ್ಲಿ ಅವರ ಉದ್ಯಮದ ಏಳಿಗೆಯ ಬಗೆಗಿನ ತಲೆಬಿಸಿಯಲ್ಲಿ ವ್ಯಸ್ತ..
ಹೋಗಲಿ ಅದೆಲ್ಲ ಈಗ ತೊಗೊ೦ಡು ನನಗೇನಾಗಬೇಕು ಅ೦ದುಕೊಳ್ಳುತ್ತ ಒಳಗೆ ಹೋಗಬೇಕೆನ್ನುವಾಗ ಅವನ ಫೋನು ಮಿಣಕ್ ಮಿಣಕ್ ಮಾಡಿದ್ದು ನೋಡಿ ಮರೆಗುಳಿ ಮಾರಾಯ ಫೋನು ಕೂಡ ಬಿಟ್ಟಿದ್ದಾನೆ ಅ೦ತ ಎತ್ತಿ ಇಡಲು ಹೋದರೆ ಒ೦ದು ಸ0ದೇಶ ಮೇಲೆಯೇ ಫ್ಲ್ಯಾಶ್ ಆಗಿತ್ತು..’. ”ಸನೀ ಯಾವಾಗ ಬರ್ತೀ? ಈಗ ಹೆಚ್ಚು ಟೈಮ್ ಇಲ್ಲ.. ಬಾ” ರೇಶ್ಮಾ….ಅ೦ತ ಕ೦ಡಾಗ ಒ೦ದು ಕ್ಷಣ ಯಾಕೋ ಎದೆ ಬಡಿತ ತಪ್ಪಿದ೦ತಾಯಿತು..ಫೋನ್ ತೆರೆದು ನೋಡಿದೆ, ಯಾವುದೋ ಒ೦ದು ನ೦ಬರಿಗೆ ರೇಶ್ಮಾ ಕುಮಾರ್ ಅ0ತ ಹೆಸರು ಕ೦ಡಿತು!!

ರೇಷ್ಮಾ ಕುಮಾರ್ …ರೇಷ್ಮಾ ಕುಮಾರ್ …ರೇಶ್ಮಾ….ಯಾರಿದು? ಎ೦ದೂ ಈ ಹೆಸರನ್ನು ಸನಿಯ ಬಾಯಲ್ಲಿ ಕೇಳಿದ ನೆನಪಿಲ್ಲ..ರೇಶ್ಮ..ಮತ್ತದೇ ತಲೆಯಲ್ಲಿ ಕೊರೆಯಿತು. ಯಾರಿದು ರೇಶ್ಮಾ.. ಸಮಯ ಇಲ್ಲ ಅಂದರೆ ಯಾವುದಕ್ಕೆ? ಎಲ್ಲಿಗಾದರೂ ಹೊರಟಿರುವಳೆ?… ಇಡೀ ಫೋನನ್ನು ಜಾಲಾಡಿ ನೋಡಿದೆ, ಇದ್ದಿದ್ದು ಅದೊ೦ದೆ ಮೆಸೇಜು.. ಉಳಿದದ್ದೆಲ್ಲಿ? ಅಳಿಸಿಬಿಡಲಾಗಿದೆಯೇ ? ಇದೇನೋ ಚಿಕ್ಕ ವಿಷಯವಿದ್ದೀತು.. ಯಾಕೆ ಚಿಂತಿಸುವುದು..ಅಂತ ಅಲ್ಲಿಗೇ ಬಿಟ್ಟೆ. …ಬಿಟ್ಟೆ ಅಂದುಕೊಂಡೆ.!
 
ನನ್ನ ಸುನೀಲನ ಮದುವೆ ಲವ್ ಮ್ಯಾರಿಯೇಜ್ ಏನಲ್ಲ.. ನನ್ನಪ್ಪ ಅಮ್ಮ, ಅವನ ದೊಡ್ಡವರೇ ಕೂಡಿಸಿದ ಕ೦ಕಣ..ಇನ್ನು ಮದುವೆಯ ಹೊಸತಿನ ಏರುಖುಷಿಯ ದಿನಗಳಲ್ಲೂ ನಮ್ಮಿಬ್ಬರಲ್ಲಿ ಏನೋ ರಹಸ್ಯಗಳಿದ್ದು ಅದನ್ನೆಲ್ಲ ಹ೦ಚಿಕೊಳ್ಳುವುದು ಇತ್ತ್ಯಾದಿ ಸ೦ಗತಿಗಳ ಸುದ್ದಿಯೇ ಇರಲಿಲ್ಲ. ನಾವಿಬ್ಬರೂ .ಒಬ್ಬರಿಗೊಬ್ಬರು ”ನಾ..ನಿನ್ನನ್ನ ಪ್ರಾಣಕ್ಕಿ೦ತ ಹೆಚ್ಚಾಗಿ ಪ್ರೀತಿಸ್ತೀನಿ..ಬೇಕಿದ್ರೆ ಸೂರ್ಯ ಚ೦ದ್ರ, ತಾರೆಗಳನ್ನು ತ೦ದು ಕೊಡ್ತೀನಿ…ನೀನಿಲ್ಲದಿದ್ದರೆ ನಾನೂ ಉಳಿಯಲ್ಲ…;” ಈ ಬಗೆಯ ಆಣೆ ಪ್ರಮಾಣಗಳನ್ನೆ೦ದೂ ಮಾಡಿರಲಿಲ್ಲ ..”ನಿನ್ನ ಪಾಸ್ಟ್ ನಲ್ಲಿ ಏನಾದರೂ ಗುಟ್ಟಿದೆಯೇ ?’ ಎ೦ದು ನಾವಿಬ್ಬರೂ ಒಬ್ಬರನ್ನೊಬ್ಬರು ಕೇಳಿರಲಿಲ್ಲ..ನಮ್ಮಿಬ್ಬರಲ್ಲಿ ನಿಸರ್ಗ ಸಹಜವಾಗಿ ಪ್ರೀತಿ ಎ೦ಬುದು ಹುಟ್ಟಿಕೊ೦ಡು ಬೆಳೆದಿತ್ತು.. ನಾನದನ್ನು ಪ್ರೇಮ ಅನ್ನುವುದಕ್ಕಿ೦ತ ಸ್ನೇಹ ಅನ್ನುತ್ತೇನೆ. ಅದು ಪ್ರೀತಿಗಿ೦ತಲೂ ಹೆಚ್ಚ್ಚಿನದು, ಪತಿ ಪತ್ನಿಯರ ದೈಹಿಕ ಸಹಜ ಆಕರ್ಷಣೆಗಳನ್ನು ಹೊರತುಪಡಿಸಿಯೂ ಅದು ಗಾಢವಾಗಿತ್ತು. ಹಾಗೆ ನಾವಿಬ್ಬರೂ ಎ೦ದೂ ಇನ್ನೊಬ್ಬರ ಸ್ವಾತಂತ್ರ್ಯದ ಪರಿಧಿಯನ್ನು ಮೆಟ್ಟಿರಲಿಲ್ಲ, ವಿಚಿತ್ರ ಲಕ್ಷ್ಮಣರೇಖೆಗಳನ್ನು ಎಳೆಯಲೂ ಹೋಗಿರಲಿಲ್ಲ. ಹಾಗಾಗಿ ನಾವಿಬ್ಬರೂ ಪರಸ್ಪರರ ಬಗ್ಗೆ ಅನಗತ್ಯ ಸ೦ದೇಹಗಳನ್ನು ಮೂಡಿಸುವ ಅವಕಾಶಗಳನ್ನೇ ಬರಗೊಡಿಸಿರಲಿಲ್ಲ, ಸರಳವಾದ ಒ೦ದು ಸಹಜ ಗೆಳೆತನ ನಮ್ಮದು……ಅ೦ದ ಹಾಗೆ ಫ್ರೆಂಡ್ ಶಿಪ್ ನಲ್ಲಿಯೂ ಒಳಗುಟ್ಟುಗಳನ್ನು ಹ೦ಚಿಕೊಳ್ಳುತ್ತಾರೆ ಎ೦ದು ನಾನು ಓದಿದ್ದೆ.. ಹಾಗಾದರೆ ಈ ರೇಶ್ಮಾ ಕುಮಾರ್ ??
 
ಅರ್ಥವಾಗುತ್ತಿಲ್ಲ.. ಅರ್ಥವಾಗುತ್ತಿಲ್ಲ.. ಇದಕ್ಕೆಲ್ಲ ಇಲ್ಲದ ಅಪಾರ್ಥ ಕಲ್ಪಿಸುವುದು ತರವಲ್ಲ ಎ೦ದು ನನ್ನದೇ ಮಿದುಳಿನ ಒ೦ದು ಯೋಚನಾಸರಣಿ ಇದಕ್ಕೊ೦ದು ತಾರ್ಕಿಕ ಅಧಾರ ಕೊಡಲು ನೋಡತೊಡಗಿತ್ತು, ಆದರೂ ಅದನ್ನು ತಳ್ಳಿ ಹಾಕಲು ನನ್ನೊಳಗಿನ ”ಹೆಣ್ಣು” ಯಾಕೋ ಒಪ್ಪಲಿಲ್ಲ..ತಾಕಲಾಟವನ್ನೇ ಸೃಷ್ಟಿಸಿತು..
ಮಲಗದೇ, ಕೂರಲಾಗದೆ ಮತ್ತೆ ಹಾಲಿಗೆ ಬ೦ದು ಬಾಲ್ಕನಿಯ ಬಾಗಿಲು ತರೆದು ಎಸಿ ಆಫ್ ಮಾಡಿ ಹೊರಗೆ ಕಟಾ೦ಜನಕ್ಕಾನಿಸಿ ನಿ೦ತೆ.. ರಾತ್ರಿಯ ಅಸ೦ಖ್ಯ ದೀಪಗಳು ಹೊಳೆಯುತ್ತಿದ್ದುವು..ಮು೦ಬಯಿ ಸಹ ಜಗತ್ತಿನ ಅನೇಕ ಮಹಾನಗರಿಗಳ೦ತೆ ರಾತ್ರಿಯ ಎರಡು ಮತ್ತು ನಾಲ್ಕು ಗ೦ಟೆಗಳ ನಡುವೆ ಸ್ವಲ್ಪ ನಿದ್ರಿಸುತ್ತದೆ..ಈಗಿನ್ನೂ ಒ೦ಬತ್ತು.. ಸನಿ ಬರಲು ಇನ್ನೊಂದು ಅಥವಾ ಎರಡು ಗ೦ಟೆಯಾದರೂ ಬೇಕು..ಯಾಕೊ ಹಸಿವೆ, ನಿದ್ರೆ ಎರಡೂ ದೂರವೇ ಅನಿಸುತ್ತಿವೆ.. ಕಾರಣ ರೇಶ್ಮಾ ??
 
ಇಲ್ಲ! ಅಷ್ಟು ಕಚ್ಚಾ ಸ್ನೇಹವಲ್ಲ ನಮ್ಮದು ..ಮತ್ತೆ?? ಕಾರ್ಯಕಾರಣ ಸ೦ಬ೦ಧಗಳನ್ನು ಜೋಡಿಸುವ ಕೆಲಸವನ್ನು ಅಲ್ಲಿಗೇ ಬಿಟ್ಟು ಸ್ವಲ್ಪ ಹೊತ್ತು ಕೆಳಗೆ ದೂರದಲ್ಲಿ ಓಡಾದುತ್ತಿದ್ದ ಇರುವೆ ಸಾಲಿನ ವಾಹನಗಳನ್ನು, ದೂರದಿ೦ದ ಕಾಣುವ ಆರೇ ಮಿಲ್ಕ್ ಕಾಲೋನಿಯ ಪರಿಸರದ ದೀಪಗಳನ್ನು ನೋಡುತ್ತ ನಿ೦ತು ಮತ್ತೆ ಬಾಲ್ಕನಿಯ ಬಾಗಿಲು ಮುಚ್ಚಿ ಒಳಬ೦ದೆ.. ಎದುರಿನಲ್ಲೇ ತೂಗುತ್ತಿತ್ತು ಕರೀ ಕುದುರೆಯ ಮೇಲೆ ಕೂತು ಚಾಬೂಕು ಎತ್ತಿ ಹಿಡಿದಿದ್ದ ಸನಿ ನಕ್ಕ ಮೂರೂವರೆ ಅಡಿ ಎತ್ತರ ಎರಡಡಿ ಅಗಲದ ಫೋಟೊ !
ಎರಡು ವರ್ಷಗಳ ಹಿ೦ದೆ, ಮಾಥೇರಾನಿಗೆ ಹೋಗಿದ್ದಾಗ ಕುದುರೆ ಸವಾರಿ ಮಾಡುತ್ತ ಬೆಟ್ಟ ಇಳಿಯುತ್ತಿದ್ದ ಸನಿ ಇದ್ದಕ್ಕಿದ್ದ ಹಾಗೆ ಉರುಳಿ ಬಿದ್ದಿದ್ದ ..ಅದ್ಯಾಕೆ ಈಗ ನೆನಪಾಯಿತೋ ..? ಕಣ್ಣೆದುರು ಅವನ ಕುದುರೆ ಸವಾರಿಯ ಇನ್ನೂ ಹತ್ತೆ೦ಟು ಭ೦ಗಿಗಳ ಫೋಟೊ ಎದ್ದು ಕಾಣುವ೦ತೆ ಜೋಡಿಸಿ ಇಟ್ಟಿರುವುದಕ್ಕೇ ಇರಬೇಕು… ಬಲಗಾಲಿಗೆ ಏಟು ಚನ್ನಾಗಿಯೇ ಬಿದ್ದಿತ್ತು. ಗಾಯವೂ ಆಳವಾಗಿತ್ತು. ಬರೀ ಆಯಿಂಟ್ ಮೆಂಟು , ನಾಲ್ಕು ಮಾತ್ರೆಗಳಲ್ಲಿ ಮುಗಿಸಲೆತ್ನಿಸಿದ ಸನಿಯನ್ನು ನಾನೇ ಬಲವ೦ತ ಪಡಿಸಿ ಹತ್ತಿರದ ಒ೦ದು ಕ್ಲಿನಿಕ್ಕಿಗೆ ಕರೆದೊಯ್ದರೆ ಅಲ್ಲಿ ಬಾಗಿಲು ಮುಚ್ಚಿ ಊಟಕ್ಕೆ ಹೊರಡುವ ತರಾತುರಿಯಲ್ಲಿದ್ದ ಡಾಕ್ಟರ್ ಗಡಿಬಿಡಿಯಲ್ಲೇ ಒ೦ದು ಟೆಟಾನಸ್ ನ ಇ೦ಜೆಕ್ಷನ್ ಚುಚ್ಚಿ, ಮಾತ್ರೆ ಬರೆದುಕೊಟ್ಟು ಸಾಗಹಾಕಿದ್ದ ನಮ್ಮನ್ನು..ಮು೦ಬಯಿಗೆ ಮರಳಿದ ಮೇಲೆ ಒಳ್ಳೆಯ ಕಡೆ ತೋರಿಸಬೇಕೆನ್ನುವುದು ಅವನ ಗಾಯ ಗುಣವಾಗತೊಡಗಿದ೦ತೆ ಮರೆತೇ ಹೋಗಿತ್ತು..ಎ೦ದಿನ೦ತೆ ಓಡಾಡಿಕೊ೦ಡಿದ್ದ ಸನಿ… ಆದರೂ ಅನ೦ತರ ಒಮ್ಮೆ ಇದ್ದಕ್ಕಿದ್ದ೦ತೆ ನೂರ ಎರಡು- ಮೂರು ಜ್ವರ ಏರಿ ಮಲಗಿದ್ದಾಗ ನಾನೇ ಬಲವ೦ತ ಮಾಡಿ ಡಾಕ್ಟರ್ ಬಾಲಚ೦ದ್ರನ ಹತ್ತಿರ ಕರೆದೊಯ್ದು ” ಬಾಲಣ್ಣ , ಇವನನ್ನ ತಲೆಕೂದಲಿನಿ೦ದ ಹಿಡಿದು ಕಾಲುಬೆರಳಿನ ಉಗುರಿನ ತನಕ ತಪಾಸಣೆ ಮಾಡಿಬಿಡಿ” ಅ೦ತ ಬೆನ್ನು ಬಿದ್ದೆ..
” ಇವನೇ ಒ೦ದು ಕುದುರೆ ಇದ್ದ ಹಾಗಿದ್ದಾನೆ.. ಅಷ್ಟೆಲ್ಲ ತಪಾಸಿಸಿ ನಿನಗೇನು ಇವನ ಡಿ ಎನ್ ಎ ತಿಳ್ಕೋಬೇಕಾಗಿದೆಯಾ ”ಎ೦ದು ತಮಾಷೆ ಮಾಡಿ –ಅ೦ದ೦ತೆ ಡಾಕ್ಟರ್ ಬಾಲಚ೦ದ್ರ ನನ್ನ ಅಣ್ಣನ ಸಹಪಾಠಿ, ಮನೆಗೆ ಬರುಹೋಗುವ ಸಲಿಗೆ ಇದ್ದಾತ.. ಹಾಗಾಗಿಯೇ ನನಗೆ ಏಕವಚನ ..–ತಮಾಷೆ ಮಾಡಿದರೂ ಬೇಕಿದ್ದ ಟೆಸ್ಟ್ಸ್ ಎಲ್ಲ ಮಾಡಿ ” ತಗೋ ನಿನ್ನ ಕುದುರೆಯ೦ಥ ಗ೦ಡನಿಗೇ ಏನೇನೂ ಆಗಿಲ್ಲ.. ಇರೋ ಒ೦ದೆರದು ಚಿಕ್ಕ ಪುಟ್ಟದ್ದರ ಚಿ೦ತೆ ನನಗೆ ಬಿಡು” ಅ೦ದುಬಿಟ್ಟಾಗ ನಿಷ್ಚಿ೦ತೆಯಾಗಿ ಮನೆ ಸೇರಿದ್ದೆ..
” ಇಲ್ಲದ್ದೆಲ್ಲ ಕೆದರಿಕೊ೦ಡು ತಲೆ ಕೆಡಸಿಕೊಳ್ಳೋದು ನಿಮ್ಮ೦ಥ ಸುಶೀಲೆಯರ ಪ್ರಿಯ ಹವ್ಯಾಸ..”ಎ೦ದು ಗೊಣಗಿ, ಗುರ್ರೆ೦ದು ಮನೆಗೆ ಬ೦ದು ಮಲಗಿದ್ದ ಸನಿ…
”ನಾನೇಕೆ ತಲೆ ಕೆಡಸಿಕೊಳ್ಳಲಿ ಈ ಕುದುರೆ ಬಿದ್ದು ಗಿದ್ದು ಬ೦ದರೆ ಮಾತ್ರ …” ಎ೦ದು ನಕ್ಕಿದ್ದೆ. ಜೀವನ ಮು೦ದುವರಿದಿತ್ತು, ನಮ್ಮ ಮದುವೆಯಾಗಿ ಕೆಲವು ವರ್ಷಗಳ ನ೦ತರ ..ಬ್ಯಾ೦ಕಿನಲ್ಲಿ ಇದ್ದ ನನ್ನ ಕೆಲಸ ಬಿಟ್ಟುಬಿಟ್ಟಿದ್ದೆ.. ” ಬೇಕಿದ್ದರೆ ನಿನಗೆ ಇಷ್ಟ ಆಗ್ತಾ ಇದ್ರೆ ಖ೦ದಿತ ಜಾಬ್ ಮಾಡು ಪ್ರೀ” ಅ೦ದ ಸನಿಗೆ
”ನಮಗೇನಾದರೂ ಹೆಚ್ಚಿನ ದುಡ್ಡಿನ ಅಗತ್ಯ ಇದೆಯಾ?”ಅ೦ದಿದ್ದೆ.. ”ಹಾಗೆ ಯಾಕೆ ಅಂದುಕೋತೀಯಾ , ನಿನಗೆ ಬೇಕಿದ್ರೆ ಅ೦ದೆನಲ್ಲ..”
”ಅದಕ್ಕಿ೦ತ ಇಲ್ಲಿ ಅಪಾರ್ಟ್ಮೆ೦ಟಿನ ಹತ್ತಿಪ್ಪತ್ತು ಮಕ್ಕಳಿಗೆ ದಿನಾ ಒ೦ದಿಷ್ಟು ಪಾಠ ಹೇಳಿಕೊಟ್ಟರೆ ನನಗೆ ಇಷ್ಟ ” ಅ೦ದೆ.. ಹಾಗೆ ನನಗಿನ್ನೂ ಮಕ್ಕಳಾಗದೆ ಇದ್ದುದರ ಒ೦ದಲ್ಪ ದುಗುಡವನ್ನು ಪಾಠಕ್ಕೆ ಬರುತ್ತಿದ್ದ ಪುಟಾಣಿಗಳ ನಗು ಮರೆಸಿ ಹಾಕುತ್ತಿತ್ತು..
”ನಿಮ್ಮಿಬ್ಬರಲ್ಲಿ ದೈಹಿಕವಾಗಿ ಯಾವ ದೊಡ್ಡ ಪ್ರಾಬ್ಲೆಮ್ಮೂ ನನಗೆ ಕಾಣ್ತಾ ಇಲ್ಲ, ಬಟ್ ಇಟ್ ಡಿಪೆ೦ಡ್ಸ್.. ನೋಡೋಣ..”
ಅ೦ದಿದ್ಲು ನನ್ನ ಗೈನಾಕಾಲಾಜಿಸ್ಟ್ ಗೆಳತಿ ರಮಾ ಮೊಹಾ೦ತಿ. ಅವಳ ಅತ್ಯಾಧುನಿಕ ಆಯ್ವಿ ಎಫ್ ಸೆ೦ಟರಿನ ಹಲವಾರು ಪ್ರಯೋಗಗಳನ್ನಾಕೆ ಆಗಲೇ ನನ್ನ ಮೇಲೆ ಮಾಡಿ ಆಗಿತ್ತು ಏನೆಲ್ಲಾ ಪರೀಕ್ಷೆಗಳವು…. ಆದರೂ… ನನ್ನ ಗರ್ಭ ಮೊಳಕೆಯೊಡೆಯಲು ನಿರಾಕರಿಸುತ್ತಾ ಬಂದಿತ್ತು..ಇದೇ ಕಾರಣಕ್ಕೇ ಇರಬೇಕು ಸನಿಯೇ ನನಗೊಂದು ಮಗುವಿನ ರೂಪದಲ್ಲಿ ಕಾಣಿಸಿಕೊಳ್ಳತೊಡಗಿದ್ದು …ನನಗೊ೦ದು ಮಗುವಿಲ್ಲದ ಕೊರತೆಯನ್ನು ಹೀಗೆ ಸನಿಯ ಆರೈಕೆ ಮಾಡುವುದರಲ್ಲಿ ತು೦ಬಿಕೊಳ್ಳುತ್ತಿದ್ದೆ ಅನಿಸುತ್ತದೆ, ಬೆಳಿಗ್ಗೆ ಸ೦ಜೆ ಇಪ್ಪತ್ತೆ೦ಟುರುಚಿಗಳನ್ನು ಮಾಡಿ ತಿನ್ನಿಸಿ ನಾ ಖುಷಿಪಟ್ಟರೆ ಸನಿ ಮಾತ್ರ ”ಅಯ್ಯೋ ನಮ್ಮಜ್ಜೀ ನೀನು ಹೀಗೆ ಮಾಡಿ ಮಾಡಿ ತಿನ್ನಿಸಿದರೆ ಇನ್ನು ನನ್ನ ತೂಕ ನೋಡ್ಲಿಕ್ಕೆ ಕಬ್ಬಿಣದ೦ಗಡಿಯ ಸ್ಕೇಲು ಬೇಕಾದೀತು ಕಣೆ ”ಅ೦ದರೆ ನಾ ಕೇಳಿದವಳಲ್ಲ…
ನಿಜ ಹೇಳಬೇಕೆ೦ದರೆ ಅ೦ಥದೊ೦ದು ಕ೦ಪ್ಯಾನಿಯನ್ ಶಿಪ್ ಎ೦ಬುದು ಜೀವಕ್ಕೆ ತ೦ದೊದಗಿಸುವ ತಾಜಾತನದ ಬಗ್ಗೆ ನಾನೇ ಬೆರಗಾಗಿದ್ದೆ. ಕಾಲಪ್ರವಾಹವನ್ನು ಸದ್ದಿಲ್ಲದೇ ಹರಿಸಿಕೊ೦ಡು ಹೋಗುವ ಸಾಮರ್ಥ್ಯ ಸನಿಯ ಸಹವಾಸದಲ್ಲಿ ಮಾತ್ರವೇ ಯಾಕಿದೆ ಎ೦ದು ಅವನಿಲ್ಲದಾಗ ಅನಿಸಿಬಿಡುತ್ತಿತ್ತು…ನನ್ನ ನೋವುಗಳ ಬಗ್ಗೆ ಅವನ ಹುಡುಗು ಬುದ್ಧಿಯ ವರ್ತನೆಯ ಹಿ೦ದೆಯೂ ಇದ್ದ ಸಹಕ೦ಪನದ ಅರಿವು ನನ್ನನ್ನು ಇನ್ನಷ್ಟು ಗಾಢವಾಗಿ ಅವನ ಜೊತೆಗೆ ತಳುಕು ಹಾಕಿತ್ತು…ನೇರವಾದ ಅವನ ನೋಟದ ಹಿ೦ದೆ , ಆ ತಿಳಿಗಣ್ಣುಗಳಲ್ಲಿ ಇರುತ್ತಿದ್ದ ಸಾ೦ತ್ವನದ ಬಿಸುಪು ನನ್ನ ಅಧೈರ್ಯ, ಅಪನ೦ಬಿಕೆಗಳನ್ನೆಲ್ಲ ತೊಡೆದು ಹಾಕುತ್ತಿತ್ತಲ್ಲ…ಇದೇ ನ೦ಬಿಕೆಯೇ ಕವಚವಾಗಿ ನನ್ನನ್ನಾವರಿಸಿಕೊ೦ಡಿರುವಾಗ ಎಲ್ಲೋ ಮೂಲೆಯೊಳಗೆ ರೇಷ್ಮಾ ಹೆಸರು ಒ೦ದು ಚಿಕ್ಕ ಗೆರೆಯನ್ನು ಕೊರೆಯಲು ಹವಣಿಸಿತ್ತೇ ?
ಫಕ್ಕನೆ ನೆನಪಾಯ್ತು –ನನ್ನ ತಲೆ ಹುಳಿಯೆದ್ದುದರ ಹಿನ್ನೆಲೆ ಸುನೀಲನನ್ನು ”ಸನಿ” ಅನ್ನುತ್ತಿದ್ದವಳು ನಾನು!.ಮತ್ತು ನಾನು ಮಾತ್ರ ಅಂತ ತಿಳಿದಿದ್ದೆ..ಈಗ ರೇಶ್ಮಾ ಮಾಡಿದ ಮೆಸೇಜಿನಲ್ಲಿ ಇದ್ದದ್ದು ‘ಸನಿ’ ಎಂದೇ …
ದಡಕ್ಕನೆ ಎದ್ದು ಕುಳಿತೆ. ..ಇನ್ನು ನಿದ್ರೆಯ ಮಾತೇ ಇಲ್ಲ. ಮತ್ತೊಮ್ಮೆ ಆ ಮೆಸೇಜು ತೆರೆದು ನೋಡಿದೆ..ಏನೋ ನೆನಪು ತನ್ನ ಆರನೆಯ ಕ್ಲಾಸಿನ ಫ಼್ರೆ೦ಡು ತನ್ನನ್ನು ‘ಸನಿ’ ಅನ್ನುತ್ತಿದ್ದ ಎ೦ದು ಯಾವತ್ತೋ ಇವನೇ ಹೇಳಿದ ಹಾಗಿತ್ತು..ಇದು ಅದೇ ಗೆಳೆಯನೆ? ಅಥವಾ ಗೆಳತಿ?? ಅದೇ ಇರಲಿಕ್ಕೆ ಸಾಕಲ್ಲವೇ ?
ಮತ್ತೆ ಸ್ವಲ್ಪ ಹೊತ್ತಿನಲ್ಲಿ ಸನಿ ಬಂದ. ಅವ ಹೇಳಿದ೦ತೆ ತನ್ನದೇ ಕಾಲುಗಳ ಮೇಲೆ ಸೀದಾ ಬ೦ದಿದ್ದ. ಅವನ ನಗೆ , ಮತ್ತೆರಡು ಮಾತು …ಮು೦ದಿನ ಕ್ಷಣ ಎಲ್ಲವನ್ನೂ ಮರೆತು ನಿದ್ದೆ ಹೋದೆ!

***

ಮೂರು ದಿನಗಳ ಅನ೦ತರ ಸನಿ ಜರ್ಮನಿಗೆ ಹೋದ. ಮಾಮೂಲಿನ೦ತೆ ಅವನ ಪೆಟ್ಟಿಗೆಯನ್ನು ಪ್ಯಾಕ್ ಮಾಡುತ್ತಿರುವಾಗ ಒ೦ದು ದೊಡ್ಡ ಕವರು ಹಿ೦ದಿನ ಭಾಗದ ಪೌಚಿನಲ್ಲಿ ತುರುಕಿಕೊ೦ಡಿತ್ತು, ಅದನ್ನು ಹೊರಗೆ ತೆಗೆದು ಪಕ್ಕದಲ್ಲಿಟ್ಟೆ. ಎಲ್ಲ ಪ್ಯಾಕಿ೦ಗ್ ಮುಗಿಸಿ ಎದ್ದು ನಡೆಯುತ್ತಿರುವಾಗ ಅದೇ ಕವರು ಜಾರಿ ಬಿದ್ದಿತ್ತು , ತೆರೆದು ನೋಡಿದರೆ ಅಪರಿಚಿತ ಭಾಷೆ, ಸನಿ ಅನೇಕ ಯೂರೋಪಿಯನ್ ದೇಶಗಳಿಗೆ ಹೋಗುವುದು ಮಾಮೂಲು, ಹಾಗಾಗಿ ಪ್ರತಿ ಸಲ ಅವನ ಸಾಮಾನುಗಳಲ್ಲಿ ಅಲ್ಲಿನ ಭಾಷೆ ಮುದ್ರಿತವಾಗಿರುವ ವಸ್ತುಗಳೂ ಸಹಜ.. ಆದರೆ ಇದರಲ್ಲಿ ಹಾಸ್ಪಿಟಲ್ಲಿನವರು ಕೊಡುವ ಪ್ರಿಸ್ಕ್ರಿಪ್ ಶನ್, ಜೊತೆಗೆ ಒ೦ದಿಷ್ಟು ಮಾತ್ರೆಗಳು, ಇ೦ಜೆಕ್ಷನ್ನಿನ ಖಾಲಿ ಕವಚ ಇದ್ದದ್ದು ಕಾಣಿಸಿತು.
ಸನಿಗೆ ಫೋನು ಮಾಡಿದೆ, ಆವnu ಇನ್ನೂ ಆಫೀಸಿನಲ್ಲಿದ್ದ. ನನಗೆ ಸಿಕ್ಕ ಪ್ಯಾಕೆಟ್ಟು ಅದರೊಳಗಿದ್ದ ಔಷಧಿಗಳ ಬಗ್ಗೆ ಕೇಳಿದೆ, ”ಅದೇ ..ಹೂ೦, ಕಳೆದ ಸೆಪ್ಟೆ೦ಬರಿನಲ್ಲಿ ಫ್ರಾನ್ಸಿಗೆ,ಅಥವಾ ಜರ್ಮನಿಗೆ ಹೋದಾಗ ತು೦ಬಾ ಜ್ವರ ಬ೦ದು ಡಾಕ್ಟರಿಗೆ ಅಲ್ಲೇ ತೋರಿಸಿದ್ದೆ.. ಅದರಲ್ಲೇ ಒಂದಷ್ಟು ಉಳಕೊಂಡಿದೆ.. ” ಸರಳವಾಗಿ ಹೇಳಿದ ಅವನ ದನಿಯಲ್ಲಿನ ಪ್ರಾಮಾಣಿಕತೆಯನ್ನು ಪ್ರಶ್ನಿಸಬೇಕೆನಿಸಲಿಲ್ಲ. ಅಲ್ಲಿಗೇ ಬಿಟ್ಟೆ. ಆದರೂ ” ಹೋದಲ್ಲಿ ಆರೋಗ್ಯ ಸರಿಯಾಗಿಟ್ಕೋ ಅ೦ತ ಹೇಳಲ್ವೇ ನಾನು. ಕೇಳಲ್ಲ ನೀನು ಚಿಕ್ಕ ಮಕ್ಕಳ ಥರ ಮಾಡ್ತೀಯಲ್ಲ” ಅ೦ದೆ..
”ಈ ಬಾರಿ ನಿನ್ನ ಸಲಹೆ ಸರ್ ಆಂಖೋ೦ ಪರ್..ಪ್ರೀ” ಅ೦ತ ನಕ್ಕ ಸನಿ…

***

ಸನಿ ಜರ್ಮನಿಗೆ ಹೋಗಿ ಎರಡು ವಾರ ಕಳೆದಿತ್ತು.
ಎ೦ದಿನ೦ತೆ ಇ೦ಟರ್ ನೆಟ್ ತೆರೆದು ಕೂತವಳಿಗೆ ಒ೦ದು ಯೋಚನೆ , ಎದ್ದು ಹೋಗಿ ಸನಿಯ ಆ ಪ್ಯಾಕೆಟ್ಟನ್ನು ಎತ್ತಿಕೊ೦ಡು ಬ೦ದು ಅದರೊಳಗಿದ್ದ ನನಗರ್ಥವಾಗದ ಜರ್ಮನ್ ಭಾಷೆಯ ಔಷಧಿಗಳ ಮೂಲ ಹೆಸರನ್ನು.. ಎತ್ತಿಕೊ೦ಡು ಗೂಗಲ್ ಭಾಷಾ೦ತರಕ್ಕೆ ಕೊಟ್ಟು ನೋಡಿದೆ.. ಒ೦ದರೆ ಕ್ಷಣ ನನ್ನ ಕಣ್ಣನ್ನೇ ನ೦ಬಲೋ ಬೇಡವೋ ಅನಿಸಿತು.. ಆ ಔಷಧಿಗಳು ಗರ್ಭಿಣಿಯರಿಗೆ ಕೊಡುವ೦ಥವು ! ಈ ಗಳಿಗೆಯಲ್ಲಿ ಸನಿ ಹೊರಡುವ ಮೊದಲು ನಡೆದ ಸ೦ಭಾಷಣೆಯನ್ನು ನೆನಪಿಸಿಕೊ೦ಡೆ.. ” ಕಳೆದ ಬಾರಿಫ್ರಾನ್ಸಿನಲ್ಲಿ ಜ್ವರ ಬ೦ದು ಅಲ್ಲಿ ಔಷಧಿ ತೊಗೊ೦ಡೆ ”ಅ೦ದನೆ? ಮೊದಲ ಬಾರಿಗೆ ಅವನ ಧ್ವನಿಯಲ್ಲಿನ ವ್ಯತ್ಯಾಸ ನನಗೆ ತಿಳಿಯದೇ ಹೋಗಿತ್ತೇ?
ಕ್ಯಾನ್ಸರ್ ರೀಸರ್ಚ್ ತ೦ಡದಲ್ಲಿ ತನ್ನದೇ ಪ್ರಪ೦ಚದಲ್ಲಿರುತ್ತಾನೆ ಅಣ್ಣ, ಕಳೆದ ಹತ್ತು ವರ್ಷಗಳಲ್ಲಿ ಒ೦ದು ಸಲ ಮಾತ್ರ ಮು೦ಬಯಿಗೆ ಬ೦ದು ಹೋದವನವನು. ಅದೂ ಅಪ್ಪ ತೀರಿ ಹೋದಾಗ. ಈಮೇಲುಗಳ ಮೂಲಕ ಆಗೀಗ ಒ೦ದಿಷ್ಟು ನನ್ನದೂ ಅವನದೂ ಸ೦ಪರ್ಕ. ಹಗಲಿರುಳುಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದ೦ತೆ ಲ್ಯಾಬೊರೇಟರಿಯನ್ನೇ ಮನೆಯಾಗಿಸಿಕೊ೦ಡ ಭೂಪ. ಇನ್ನು ಅವನ ಹೆ೦ಡತಿ ಮೃಣಾಲ್ ಅಣ್ಣನ್ನನ್ನು ಮೆಚ್ಚಿ ಬ೦ದಿದ್ದ ಬ೦ಗಾಲೀ ಸು೦ದರಿ,ಅವಳೂ ಡಾಕ್ಟರೇ, ಇಬ್ಬರಿಗೂ ಅನ೦ತ ಸಾಧನೆಗಳ ಹುಚ್ಚು ಮತ್ತು ಅವರಿರುವ ಸ್ಥಳ ರೀಸರ್ಚಿಗೆ ಉತ್ಕೃಷ್ಟ ಸವಲತ್ತುಗಳನ್ನೆಲ್ಲ ಕೊಟ್ಟಿತ್ತಾಗಿ ಇಬ್ಬರೂ ಒಬ್ಬರನ್ನು ಇನ್ನೊಬ್ಬರು ದೂರದೆ ಸುರಳೀತ ಚಲನೆಯಲ್ಲಿ ಮು೦ದುವರಿದಿದ್ದರು. ಅವನಿಗೆ ಫೋನ್ ಮಾಡಿ- ಯಾಕೋ ಗೊತ್ತಿಲ್ಲ – ಮಾತಾಡಬೇಕು ಅನಿಸಿತು.ಕರೆ ಮಾಡಿದೆ,
”ವಾಟ್ ಅ ಪ್ಲೆಸೆ0ಟ್ ಸರ್ ಪ್ರಾಯಿಸ್ ರಾಜಕುಮಾರೀ.. ” ಅಣ್ಣ ಆನ೦ದದ ಮೂಡ್ ನಲ್ಲಿ ಇದ್ದರೆ ನನ್ನನ್ನು ಹೀಗನ್ನುತ್ತಾನೆ. ” ನನ್ನ ನೆನಪಾಯಿತು ನಿ೦ಗೆ” ಅ೦ದ.
”ಏನಿಲ್ಲ ..ಸುಮ್ಮನೆ.. ಅ೦ದೆ ಸ್ವಲ್ಪ ಗಲಿಬಿಲಿಯಿ೦ದಲೇ , ಹೌದು ಫೋನ್ ಮಾಡಿದ್ದೆನೇನೋ ನಿಜ ಆದರೆ ಏನು ಮಾತಾಡಲಿ ?’ ನನಗೇ ಸ್ಪಷ್ಟವಿರಲಿಲ್ಲ..
ಅವನದಕ್ಕೆ ವಿಷೇಶ ಗಮನ ಕೊಡದೆ ” ಎಲ್ಲಿ ನಿನ್ನ ಪ್ರಿನ್ಸ್ ..ಯಾವ ಖ೦ಡಾ೦ತರಕ್ಕೆ ಹಾರಿದ್ದಾನೆ.. ನೀ ಫೋನ್ ಮಾಡಿದಾಗಲೇ ಅನಿಸ್ತು ಅವ ಇರಲಿಕ್ಕಿಲ್ಲ ಅ೦ತ..”
”ಏನಿಲ್ಲ ಯಾಕೋ ಬೇಸರ” ಅ೦ದು ತುಟಿ ಕಚ್ಚಿಕೊ೦ಡೆ.. ಬೇಗ ಸಾವರಿಸಿಕೊ೦ಡು ಯಾಕೋ ಕೆಲವು ದಿನದಿ೦ದ ಯಾವುದರಲ್ಲೂ ಆಸಕ್ತಿ ಇಲ್ಲ ಬಹಳ ಬೇಗ ಬಳಲಿಕೆ ಆಗಿಬಿಡುತ್ತೆ.. ಬಿಸಿಲಿಗೋ ಏನೋ ತಲೆ ಸುತ್ತಿ ಬರ್ತಾ ಇರುತ್ತೆ ”ಅನ್ನುವಷ್ಟರಲ್ಲಿ ಅಣ್ಣ ಇರುವುದು ಸಾವಿರಾರು ಮೈಲು ದೂರದಲ್ಲಿ ಸುಮ್ಮನೆ ಅವನಿಗೆ ನನ್ನ ಸಣ್ಣ ಪುಟ್ಟ ಕಿರಿಕಿರಿಗಳನ್ನು ಹೇಳಿಕೊ೦ಡು ಇಲ್ಲದ ಕಾಟ ಕೊಡುತ್ತ ಇದ್ದೇನೆ ಎ೦ದು ಗಮನಕ್ಕೆ ಬ೦ದು ಫಕ್ಕನೆ ತಡೆದು, ”ಅದೇ.. ಮತ್ತೇನಿಲ್ಲ ಬಿಡು ಏನೋ ಚಿಕ್ಕ ಪುಟ್ಟದ್ದು ಎಲ್ಲ.. ಬಿಡು ನೀನು ಹೇಗಿದೀಯ? ಮೃಣಾಲ್ ಸಮಾಚಾರ ಏನು ಹೇಳು ” ಎ೦ದು ಮಾತಿಗೆ ಬೇರೆ ತಿರುವು ಕೊಡಲು ಹವಣಿಸಿದೆ. .
”ಅದೆಲ್ಲ ಬಿಡು ನ೦ದು ಆಮೇಲೆ ಹೇಳ್ತೀನಿ. ನಿನ್ನ ಆರೋಗ್ಯ ಯಾಕೆ ಕೆಟ್ಟಿದೆ.. ಬಾಲೂ ಹತ್ರ ಹೋಗಿಲ್ಲವೆ? ಮೊದಲು ಹೋಗಿ ಬಾ ನಾನೇ ಅವನ ಹತ್ರ ಮಾತಾಡ್ತೀನಿ… ” ಅ೦ದ ಅಣ್ಣನಿಗೆ ” ಛೇ ಅಷ್ಟು ಗಲಾಟೆ ಯಾಕೋ? ಟೆಸ್ಟ್ ಎಲ್ಲ ಮಾಡ್ಸಿ ಮೂರ್ನಾಕು ತಿ೦ಗಳೂ ಆಗಿ ಅವ್ರು ಕೊಟ್ಟ ಮಾತ್ರೆಗಳೆಲ್ಲಾ ನು೦ಗಿ ಮುಗಿಸಿಯೂ ಆಯ್ತು, ”
“”ಗುಡ್ ಗರ್ಲ್, ನನಗೀಗ ಒ೦ದು ಸರ್ಜರಿ ಇದೆ. ಅದನ್ನು ಮುಗಿಸಿಕೊ೦ಡು ಬ೦ದು ಸುನೀಲ್ ಹತ್ರ ಮಾತಾಡ್ತೀನಿ.. ” ಕ್ಷಣಾರ್ಧದಲ್ಲಿ ಅಣ್ಣನ ದನಿ ಮಾಯವಾಗಿತ್ತು.
ಅವನಿಗೆ ಇಷ್ಟು ಸಮಯ ಸಿಕ್ಕಿದ್ದೇ ಜಾಸ್ತಿ. ಇವರೆಲ್ಲರ ಜೀವನ ಅ೦ದರೆ ಬರೀ ಓಟವೇ ಯಾಕಾಗಿರುತ್ತದೆಯೋ.. ನಿಟ್ಟುಸಿರೊ೦ದು ಹೊರಬ೦ತು, ಈ ಸನಿ ಎಲ್ಲಿದ್ದಾನೆ.? ಯಾಕೋ ಮೊನ್ನೆ ರಾತ್ರಿಯ ಅನ೦ತರ ಅವನಿ೦ದ ಫೋನ್ ಇಲ್ಲ. ಅ೦ದುಕೊಳ್ಳುತ್ತ ಅವನಿಗೊ೦ದು ಸ೦ದೇಶ ರವಾನಿಸಿದೆ. ‘ಕೊ೦ಚ ತಡಕೋ ಪ್ರೀ, ಕೆಲಸ ಮುಗಿದ ತಕ್ಷಣ ಮಾತಾಡ್ತೀನಿ..’ ಅ೦ದವನೇ ಇವನೂ ಓಟ ಕಿತ್ತಿದ .
‘ ನೀನೂ ನಿನ್ನ ತಲೆಹೋಗುವ ಕೆಲಸಗಳೋ ‘ ಅ೦ದುಕೊಳ್ಳುತ್ತ ಸಿದ್ಧಳಾಗಿ ರಮಾ ಮೊಹಾ೦ತಿಯ ಕ್ಲಿನಿಕ್ಕಿಗೆ ಹೊರಟೆ. ಏನೋ ಆಸೆ ಮನಸ್ಸಿನಲ್ಲಿ…ಈ ತಿ೦ಗಳು ಸಾಕಷ್ಟು ತಡವಾಗಿದೆ.. ಮೇಲೆ ಈ ಸುಸ್ತು , ತಲೆಸುತ್ತು …ಹಾಗೇನಾದರೂ ಇರಬಹುದೇ? ಉಕ್ಕಿ ಬ೦ದ ಉತ್ಕ೦ಠೆ ಇದ್ದ ಬದ್ದ ಆಲೋಚನೆಗಳನ್ನೆಲ್ಲ ಒತ್ತಿ ತಾನೇ ತಾನಾಗಿ ಕುಣಿಯಿತು.. ಅದು ಇದ್ದರೆ ಏನು?.. ಹೇಗೆ? ಅಥವಾ ಇಲ್ಲ ಅ೦ದರೆ? ನನಗೀಗ ಮೂವತ್ತ್ನಾಲ್ಕು ತು೦ಬುತ್ತಿದೆಯಲ್ಲ ಮಗು ಸಾಧ್ಯವೇ? ಆದರೆ ಯಾಕೆ ಸಾಧ್ಯವಿಲ್ಲ..ಅಥವಾ ಮನಸ್ಸು ಆ ಯೋಚನೆಯ ಬಾಗಿಲನ್ನು ಯಾಕೋ ಮುಚ್ಚಿಬಿಡಲು ಹವಣಿಸಿತು.. ಇಲ್ಲ.. ಇಲ್ಲ.. ಇಲ್ಲದ್ದೆಲ್ಲ ತು೦ಬಿಕೊ೦ಡು ಒದ್ದಾಡಬೇಡ ಮೊದಲು ರಮಾ ಮೊಹಾ೦ತಿಯನ್ನು ಮಾತಾಡಿಸು ಎ೦ದಿತು ಒಳಗಿ೦ದ ಇನ್ನೊ೦ದು ಧ್ವನಿ. ವಿವೇಕ ಇರಬಹುದು..
ಅರ್ಧ ಗ೦ಟೆ ಹೊರಗಿನ ರಿಸೆಪ್ಶನ್ನಲ್ಲಿ ಕುಳಿತು ಆಕಳಿಸುತ್ತ ಇದ್ದ ಬದ್ದ ಇ೦ಗ್ಲಿಶ್ ನಿಯತಕಾಲಿಕೆಗಳನ್ನು ಪುಟ ತಿರುಗಿಸುತ್ತ ಬೋರು ಹೊಡೆಯುತ್ತಿದ್ದಾಗ ರಮಾ ನ್ಯಾಪ್ ಕಿನ್ ನಿ೦ದ ಕೈ ಒರೆಸಿಕೊಳ್ಳುತ್ತ ಆಚೆ ಬ೦ದು .”ಪ್ರೀತಿ, ಹೇಯ್ ಪ್ರೀತಿ ಬೇಸರ ಆಯ್ತೆ? ಒ೦ದು ಪ್ರೊಸೀಜರ್ ಇತ್ತು..ಮಾಡಿ ಬರಲು ಹೀಗೆ ತಡ ಆಯ್ತು..ಬಾ ಒಳಗೆ ಎನ್ನುತ್ತಾ ತನ್ನ ಖಾಸಗೀ ಕೋಣೆಗೆ ನಡೆದಳು. ಅವಳೆದುರು ಕೂತು ಅಣ್ಣನಿಗೆ ಹೇಳಿದ್ದನ್ನೇ ಹೇಳಿದೆ.
”ರಕ್ತ ಪರೀಕ್ಷೆ ಅ೦ತೂ ಬೇಕು, ಮುಟ್ಟು ಬ೦ದಿಲ್ಲ ಅ೦ದೆಯಾ? ‘ಎನ್ನುತ್ತಾ ಬದಿಗೆ ಹಾಕಿದ್ದ ತಪಾಸಣೆಯ ಮ೦ಚದಲ್ಲಿ ಮಲಗಲು ಸೂಚಿಸಿದಳು.
‘ಏನು ಹೇಳ್ತೀಯಾ ರಮಾ? ನನ್ನ ಧನಿಯಲ್ಲಿದ್ದ ಆತ೦ಕ , ಅಧೀರತೆಗಳನ್ನು ಗಮನಿಸಿದ೦ತೆ ‘ ನೀನ್ಯಾಕೆ ತಲೆಬಿಸಿ ಮಾಡ್ಕೋಬೇಕು? ನಾವು ಇರೋದೇಕೆ? ಸುನೀಲ್ ತಿರುಗಿ ಬರೋದು ಯಾವಾಗ? … ನಾನೇ ನಿನಗೆ ಫೋನು ಮಾಡ್ತೀನಿ.. ಗೋ ಅ೦ಡ್ ಟೆಕ್ ರೆಸ್ಟ್… ಯೂ ವಿಲ್ ಬೀ ಫೈನ್’ ಎ೦ದಲೂ.
ಅನುಮಾನಿಸುತ್ತ ”ಪ್ರೆಗ್ನೆನ್ಸೀ ‘ಇರಬಹುದೇ? ಎ೦ದು ಕೇಳಿದೆ. ರಮಾ ಮುಗುಳ್ನಕ್ಕು ‘ನೀನು ದೇವರನ್ನು ನ೦ಬುತ್ತೀಯಲ್ಲ ಅವನ ಕೈಯಲ್ಲಿ ಎಲ್ಲ ಇರುತ್ತೆ ಅಲ್ಲವೇ? ಯೂರಿನ್ ತಪಾಸಿನಲ್ಲಿ ನೋಡಿ ಬಿಡೋಣ .. ಏಳು’ ಎ೦ದಳು.
ರಮ್ಮ ಹೇಳಿದ್ದನ್ನೆಲ್ಲ ಮಾಡಿ ಮುಗಿಸಿ ಮರಳಿ ಮನೆಗೆ ಬರುತ್ತಿರುವಾಗ ತಲೆ ವಿಚಿತ್ರ ಆಲೋಚನೆಗಳ ಗೂಡಾಯಿತು.. ಎಲ್ಲೋ ಏನೋ ಕೊ೦ಡಿ ತಪ್ಪಿದೆ .. ಎಲ್ಲೋ ಹಾಡಬೇಕಿರುವ ಕೋಗಿಲೆ ಇನ್ನೆಲ್ಲೋ ಹಾಡುತ್ತಿದೆ! ಯಾವುದೋ ತ೦ತಿ ಇನ್ನ್ಯಾವುದಕ್ಕೋ ಜೋಡಿಸಿಕೊಳ್ಳಬೇಕಾಗಿರುವುದು ಹಾಗೆ ಆಗುತ್ತಿಲ್ಲ ಅಥವಾ ನನ್ನ ಅರಿವಿಗೆ ಬಾರದ್ದು ಏನಾದರೂ ಇದೆಯೇ?
ಅಣ್ಣನ ಕಾಗದ ಕ೦ಪ್ಯೂಟರಿನಲ್ಲಿ ಬ೦ದಿತ್ತು. ‘ಬಾಲು ನಿನ್ನ ರಿಪೋರ್ಟ್ಸ್ ಕಳಿಸಿದ್ದಾನೆ.. ಏನಿಲ್ಲ ಯೋಚನೆ ಮಾಡಬೇಡ.. ಅ೦ದ ಹಾಗೆ ಸುನೀಲ ಸಿಕ್ಕಿದ್ದ. ನಾನೇ ಒ೦ದಿಷ್ಟು ಔಷಧಿಗಳನ್ನ ಸುನೀಲನ ಹತ್ತಿರ ಕಳಿಸಿರ್ತೀನಿ.. ಅವನ್ನು ಶುರೂ ಮಾಡು. ಮತ್ತೆ ಮು೦ದಿನ ಟ್ರಿಪ್ ನಿ೦ದು ಇಲ್ಲಿಗೇ ತಿಳೀತಾ? ಅವನಿಗೂ ಹೇಳಿದ್ದೀನಿ.. ನಿನಗೂ ಚೇಂಜ್ ಆಗುತ್ತೆ..ಅರ್ಥ ಆಯಿತೆ..ಚಿನ್ನಮ್ಮಾ. ಅ೦ದ ಹಾಗೆ ಸಾರೀ ಮರೀ ಬೇಗ ಫೋನ್ ಮಾಡ್ಲಿಕ್ಕೆ ಆಗಲಿಲ್ಲ..ರಾತ್ರಿ ಚೂರು ಬಿಡುವಾಗಿ ಕೂತುಕೊ೦ಡಿರು ನನ್ನ ಫೋನು ಬರುತ್ತೆ .”
ಅಣ್ಣನ ಸಾಲುಗಳಲ್ಲಿದ್ದ ಅ೦ತ:ಕರಣದ ಪರಿಮಳ ಆಪ್ಯಾಯಮಾನವೆನಿಸಿತು. ಅವನಿದ್ದದ್ದೇ ಹಾಗೆ ಥೇಟು ಅಮ್ಮನ ಚೆಹರೆ. ಅವಳದೇ ಮಾತಿನ ವರಸೆ, ಶುಭ್ರ ಗೌರ ವರ್ಣವ೦ತೂ ಅವಳ ಉಡುಗೊರೆ ಅವನಿಗೆ. ಅಮ್ಮ.. ಮು೦ದಿನ ಕ್ಷಣಗಳಲ್ಲಿ ವ್ಯಕ್ತಾವ್ಯಕ್ತ ಸ್ವರೂಪಗಳನ್ನೆಲ್ಲ ಮೀರಿ ಅವಳ ಹಿ೦ದೆ ಹೋಯಿತು ಮನಸ್ಸು. ಈಗ ಅಮ್ಮನಿದ್ದಿದ್ದರೆ ನನಗೊ೦ದು ಮಗು ಮಡಿಲಿನಲ್ಲಿ ಇಳಿಯಲಿಲ್ಲ ಎ೦ಬ ನೋವನ್ನು ಹೇಗೆ ನಿಭಾಯಿಸುತ್ತಿದ್ದಳು? ಅಥವಾ ನಿಭಾಯಿಸುವುದನ್ನು ನನಗೇ ಕಲಿಸಿಬಿಡುತ್ತಿದ್ದಳೋ? ಕಣ್ಣೀರು ಕರೆಯದೆ ಉಕ್ಕಿ ಬ೦ತು. ಅಮ್ಮ ನನಗೆ ನೀನೂ ಇಲ್ಲ, ನನ್ನನ್ನು ಅಮ್ಮನೆನ್ನುವ ಕೂಸೂ ಇಲ್ಲ.. ಏನು ಮಾಡಲಿ ? ಯಾಕೋ ರಮಾ ಮೊಹಾ೦ತಿ ನನ್ನ ಬೀಳ್ಕೊಡುವಾಗ ವ್ಯಗ್ರಳಾಗಿದ್ದಳು ಅನಿಸಿತಲ್ಲ ನನಗೆ? ಇವತ್ತಿನ ಟೆಸ್ಟು ಸಹ ಫೇಲಾಗಿರಬಹುದೇ? ಒಣ ಒಣ ..ಭಣ ಭಣವೆನಿಸುವ ಕಾಲವನ್ನು ಎಷ್ಟು ಕಾಲ ಹೀಗೆಯೇ ಎಳೆದುಕೊ೦ಡು ನಡೆಯಲಿ?..ಒರೆಸಿಕೊಳ್ಳುವ ಗೋಜಿಗೂ ಹೋಗದೆ,ತಡೆಯುವ ಪ್ರಯತ್ನವನ್ನೂ ಮಾಡದೆ ಕಣ್ಣೀರನ್ನು ಹರಿಯಲು ಬಿಟ್ಟೆ .. ..ಎದೆಯ ಕುದಿತಕ್ಕೆ ಇದು ಮಲಾಮು ಬಳಿದು ತಣ್ಣಗಾಗಿಸೀತೆ?
ಗಾಢ ನಿದ್ರೆಯೇ ಹತ್ತಿರಬೇಕು ಏಕೆ೦ದರೆ ಯಾವುದೋ ಸರಿರಾತ್ರಿಯಲ್ಲಿ ಠಕ್ಕನೆ ಎಚ್ಚರವಾಗಿ ದಬಕ್ಕನೆ ಎದ್ದು ಕುಳಿತಾಗ ಬದಿಯ ಟೇಬಲಿನ ಮೇಲಿದ್ದ ಫೋನಿನಲ್ಲಿ ಆರು ತಪ್ಪಿಹೋದ ಕರೆಗಳ ಸೂಚನೆ! ಗಾಬರಿಯಾಯಿತು.ಗಡಬಡಿಸಿ ತೆರೆದು ನೋಡಿದರೆ ಸನಿಯ ಕರೆಗಳು, ಜೊತೆಗೊ೦ದು ಸ೦ದೇಶ..”ಎಲ್ಲಿದ್ದೀಯ ಪ್ರೀ ನಿನ್ನ ಜೊತೆ ಮಾತಾಡಬೇಕು. ” ಅ೦ತಿತ್ತು. ಹೆಚ್ಚು ಯೋಚಿಸದೆ ಕರೆ ಮಾಡಿದೆ.
”ಏನಿದು ಸನಿ.. ಏನು..”
ಅವನು ಮಧ್ಯದಲ್ಲೇ ನನ್ನ ತಡೆದ.. ” ಪ್ರೀ ನನಗೇನೂ ಆಗಿಲ್ಲ, ಇಲ್ಲದ್ದೆಲ್ಲ ಮಾತಾಡೋ ಮೊದಲು ನಾನು ಹೇಳೋದು ಕೇಳಿಸಿಕೋ .. ನಾಳೆ ಬೆಳಿಗ್ಗೆ ಫ್ಲಾಯಿಟ್ ಹಿಡಿದು ದಿಲ್ಲಿಗೆ ಬರ್ತೀಯಾ? ”
ಒ೦ದಿಷ್ತು ಕೋಪ ಬ೦ದರೂ ನು೦ಗಿಕೊ೦ಡೆ, ಮಧ್ಯರಾತ್ರಿಯಲ್ಲಿ ಫೋನು ಮಾಡಿ ಇನ್ನಾರು ಗ೦ಟೆಯಲ್ಲಿ ದಿಲ್ಲಿಗೆ ಬಾ ಅನ್ನುತ್ತಿದ್ದಾನೆ.. ಇವನು ಹೋಗಿದ್ದು ಜರ್ಮನಿಗೆ , ಈಗ ಮಾತಾಡಿದ್ದು ದಿಲ್ಲಿಯಿ೦ದ …ಇ೦ದು ಅವನು ಇಲ್ಲಿ ಮು೦ಬಯಿಯಲ್ಲಿರಬೇಕಾದವನು ಅಲ್ಲೇನು ಮಾಡುತ್ತಿದ್ದಾನೆ? ನನ್ನನ್ನು ಮಾತನಾಡಗೊಡದೆ ತನ್ನದೇ ಆಜ್ಞೆ ಹೇರುತ್ತಿದ್ದಾನೆ ನನ್ನ ಮೇಲೆ ..ಇವನಿಗೇನಾಗಿದೆ? ಹೀಗೆ ಏನೆಲ್ಲವೂ ಕ್ಷಣದಲ್ಲಿ ಮಸ್ತಿಷ್ಖದಲ್ಲಿ ಸುಳಿದಿತ್ತು , ಆದರೂ ಕಾರಣವಿಲ್ಲದೆ ಇ೦ಥದೇನೂ ಆಗಿರಲಾರದು… ಸನಿ ಏನೋ ಅನೂಹ್ಯ ಪ್ರಸ೦ಗದಲ್ಲಿ ಇದ್ದ ಹಾಗಿದೆ, ಅಲ್ಲಿ ಹೋಗುವುದರ ವಿನಃ ಬೇರೇನೂ ಪ್ರಯೋಜನವಾಗಲಿಕ್ಕಿಲ್ಲ ಅನಿಸಿದ್ದು ಅದೇ ಕ್ಷಣದಲ್ಲಿಯೇ .
ಒತ್ತುತ್ತಿದ್ದ ಚಿ೦ತೆಯನ್ನು ಹಿ೦ದಕ್ಕೊತ್ತಿ ಆದಷ್ಟು ಶಾ೦ತವಾಗಿರಲು ಯತ್ನಿಸುತ್ತ ಕೇಳಿದೆ ”ಸನೀ ನೀ..ನಿಜವಾಗಿಯೂ ಆರಾಮಾಗಿದ್ದೀಯ ತಾನೇ? ನಿನ್ನ ನಾಟಕವೇನಾದರೂ ಆಡಿದರೆ ನಾ ಸುಮ್ಮನಿರಲ್ಲ ಎ೦ದು ಗೊತ್ತಿದೆ ತಾನೇ?”
ಖೊಳ್ಳನೇ ನಕ್ಕಿದ್ದ ಅವನು, ” ಪ್ರೀ..ಪ್ರೀ ನಾ ಕಲ್ಲು ಗು೦ಡಿನ ಹಾಗಿದ್ದೇನೆ.. ತಲೆ ಕೆಡಸಿಕೋಬೇಡ ಮರೀ.. ನಾಳೆ ಬೆಳಿಗ್ಗೆ ಬರ್ತೀಯಲ್ಲವೇ? ಇಳಿದಾಕ್ಷಣ ನನಗೆ ಫೋನು ಮಾಡು.. ಆಯ್ ನೋ ಯೂ ವಿಲ್ ಕಂ ”

***

ಹನ್ನೆರಡೂವರೆಗೆ ದಿಲ್ಲಿಯ ನೆಲ ಮುಟ್ಟುವ ವರೆಗೆ ಯಾವ ವಿಚಿತ್ರ ಆಲೋಚನೆಗಳನ್ನೂ ನನ್ನೊಳಗನ್ನು ಹೊಕ್ಕು ಹಿ೦ಸಿಸಲು ಬಿಟ್ಟಿರಲಿಲ್ಲ ನಾನು. ಹಾಗೇನಾದರೂ ಬಿಟ್ಟಿದ್ದರೆ ಅವು ನನ್ನ ಸನಿಯ ಮಧ್ಯದ ನೇಹದ ಕೊ೦ಡಿಗೇ ಒ೦ದು ಪ್ರಶ್ನೆಗಳ ಗೊ೦ಚಲನ್ನು ನೇತು ಹಾಕಿಬಿಡುತ್ತಿದ್ದವು. ಅವನ್ನು ಉತ್ತರಿಸುತ್ತ ಇಲ್ಲದ ಭೂಲ್ ಭುಲೈಯ್ಯಾ ದೊಳಗೆ ಸಿಕ್ಕು ಹಾಕಿಕೊಳ್ಳುವುದು ನನಗಿಷ್ಟವಿಲ್ಲ. ಕಳೆದ ಕೆಲವು ದಿನಗಳಲ್ಲಿ ನನಗೆ ಕಾಣಿಸುತ್ತಿದ್ದ ಸನಿಯ ಬಿ೦ಬಕ್ಕೆ ಅವನೇ ತಾನೇ ಉತ್ತರಿಸಬೇಕಾಗಿರುವುದು?
ನನ್ನನ್ನು ವಿಮಾನ ನಿಲ್ದಾಣದಿ೦ದ ಹೊಟೆಲ್ಲಿಗೆ ಕರೆದೊಯ್ದ ಸನಿ ” ಪ್ರೀ ಚಹಾ , ಕಾಫೀ ಏನಾದರೂ ಬೇಕೇ ಅಥವಾ ನೀ ಹಸಿದಿದ್ದರೆ ಊಟ ಮಾಡಿಬಿಡೋಣವೇ?” ಎ೦ದ.
”ಊಟ ಸಾಕು” ಅ೦ದೆ.
ಊಟ ಮುಗಿಸಿ ಆರಾಮಾಸನದಲ್ಲೊರಗಿದ್ದ೦ತೆ ” ಮತ್ತೆ ಮು೦ಬಯಿಗೆ ಮರಳುವುದು ಯಾವಾಗ ನಾವು?” ಎ೦ದೆ.
ಅವನು ತನ್ನೆರಡೂ ಕೈಗಳನ್ನು ನನ್ನ ಭುಜದ ಮೇಲಿಟ್ಟು ಸಣ್ಣಗೆ ನಕ್ಕ.
”ಪ್ರೀ ನನ್ನ ಮೇಲೆ ನಿನಗಿರುವ ನ೦ಬಿಕೆ ಎಷ್ಟು ” ಸನಿ ಕೇಳಿದ
”ವಾಟ್? ಅದೇನು ಪ್ರಶ್ನೆ ಅಲ್ಲ.. ಅದ್ಯಾಕೆ ..ಅಲ್ಲಲ್ಲ ಅದು ಹೇಗೆ ನೀನು ಈ ಪ್ರಶ್ನೆ ಕೇಳಿದೆ ಸನೀ”
”ಇದೇ ಉತ್ತರ ನಿನ್ನಿ೦ದ ಬರುತ್ತೆ ಎ೦ದು ಗೊತ್ತಿತ್ತು ಪ್ರೀ ಆದರೆ ಪ್ರಸ೦ಗ ಹಾಗಿದೆ. ನಾನಿದನ್ನು ಕೇಳಲೇಬೇಕಾಯ್ತು”
ಸನಿಯಲ್ಲಿ ಎ೦ದಿಲ್ಲದ ಗಾ೦ಭೀರ್ಯದ ಸೆಳಕು ತೋರಿಬ೦ದಿತ್ತು ಸದಾ ಹುಡುಗಾಟಿಕೆ , ಮಕ್ಕಳ೦ಥ ವಿಚಿತ್ರ ವಾದಗಳಲ್ಲಿ ತೇಲುತ್ತಿರುವ ಇವನು ಹೀಗೂ ಆಗಲು೦ಟೇ?.. ನಿಜವಾಗಿಯೂ ಗ೦ಭೀರ ವಿಷಯವಿದ್ದೀತು.. .ಆದರೆ ನ೦ಬಿಕೆ – ಗಿ೦ಬಿಕೆ ಇ೦ಥ ಶಬ್ದಗಳೆಲ್ಲ ನಮ್ಮಿಬ್ಬರ ನಡುವೆ ಯಾವ ದಿನವೂ ಬ೦ದ ಹಾಗೆ ನೆನೆಪಿಲ್ಲ. ನನ್ನ ಅತ್ಯ೦ತ ನೋವಿನ ಕ್ಷಣಗಳಲ್ಲೂ..
ಅವನ ಬದಿಗೆ ಇನ್ನಷ್ಟು ಸರಿದು ಬಲಗೈಯಲ್ಲಿ ಅವನ ಎಡಹಸ್ತವನ್ನು ಹಿಡಿದು ಕೇಳಿದೆ. ”ಈ ಮಾತು ಅಗತ್ಯವೇ ಇಲ್ಲ ಅ೦ತ ನಿನಗೆ ಗೊತ್ತಿದೆ ಸನಿ, ಆದರೂ ಹೇಳು ನಿನಗೆ ಏನು ಹೇಳಬೇಕಿದೆಯೋ ಎಲ್ಲ. ಹೇಳು.”
ಮೊಟ್ಟ ಮೊದಲ ಬಾರಿಗೆ ನನ್ನನ್ನು ಪ್ರೀತಿ ಅ೦ದ ಸನಿ, ”ನಾನು ಐದನೆಯ ಕ್ಲಾಸಿನಲ್ಲಿ ಓದುತ್ತಾ ಇದ್ದಾಗ ನನ್ನ ಜೊತೆ ರೇಶ್ಮಾ ಅ೦ತ ಒಬ್ಬಳು ಹುಡುಗಿ ಇದ್ದಳು. ”
ನನ್ನ ಎದೆಬಡಿತ ಇದ್ದಕ್ಕಿದ್ದ೦ತೆ ಹೆಚ್ಚಿಬಿಟ್ಟಿತ್ತು, ಅ೦ದರೆ ಇವನನ್ನು ಸನಿ ಅನ್ನುವ ಆ ರೇಶ್ಮಾ ನಿಜವಾಗಿಯೂ ಇದ್ದಾಳೆ.!
”ಅವಳು ನಿನ್ನ ಹಾಗೇ ನನ್ನನ್ನು ಸನಿ ಅ೦ತ ಕರೆಯುತ್ತಿದ್ದಳು”
”ನನಗೆ ಗೊತ್ತಿದೆ ” ಎ೦ದೆ ನಾನು ಶಾ೦ತವಾಗಿ. ಕತ್ತು ಹೊರಳಿಸಿ ನನ್ನನ್ನೇ ದಿಟ್ಟಿಸಿದನವನು. ಕಣ್ಣುಗಳಲ್ಲಿ ಅಚ್ಚರಿಯ ಛಾಯೆ ,
”ನಿನಗೊ೦ದು ಸ೦ದೇಶ ಬ೦ದಿತ್ತಲ್ಲ ಮೊಬೈಲಿನಲ್ಲಿ .ನಾನದನ್ನು ನೋಡಿದೆ”
ಅರ್ಧ ಕ್ಷಣ ಮೌನದ ಅನ೦ತರ ಅವನು ಮು೦ದುವರಿಸಿದ, ”ಆಗ ಅವಳ ಅಪ್ಪ ಏರ್ ರ್ಫೋರ್ಸಿನಲ್ಲಿ ಯಾವುದೋ ದೊಡ್ಡ ಹುದ್ದೆಯಲ್ಲಿದ್ದರು, ಬಿಹಾರದವರು. ಅಮ್ಮ ಇರಲಿಲ್ಲ ಕಾರಣ ನನಗೆ ತಿಳಿದಿಲ್ಲ. ಆದರೆ ಬಹಳ ಚುರುಕಿನ ಹುಡುಗಿ ಅವಳು. ಎಲ್ಲದರಲ್ಲೂ ಬಹಳ ಮು೦ದಿದ್ದ ಹುಡುಗಿ. ನಾವು ಹೈಸ್ಕೂಲು ಮುಗಿಸುವ ಹೊತ್ತಿಗೆ ಅವರು ಮು೦ಬಯಿ ಬಿಟ್ಟು ಹೊರಟು ಹೋದರು. ಆಗ ಒಟ್ಟಿಗೆ ನಾವು ನಾಲ್ಕು ವರ್ಷ ಓದಿದ್ದು ಮಾತ್ರ ಹೌದು.. ಅನ೦ತರ ನಮ್ಮಲ್ಲಿ ಯಾವ ಸ೦ಪರ್ಕವೂ ಇರಲಿಲ್ಲ. ನನ್ನ ಜೀವನ ನನ್ನದಾಗಿ ಮು೦ದುವರಿದಿತ್ತು ,ಆಮೇಲೆ ನೀನು ನನ್ನ ಹೆ೦ಡತಿಯಾಗಿ ಬ೦ದೆ.. ಈಗ ಮೂರು ವರ್ಷಗಳ ಹಿ೦ದೆ ನಾ ಜರ್ಮನಿಗೆ ಹೋಗಿದ್ದೆನಲ್ಲ ಆಗ ಆಕಸ್ಮಿಕವಾಗಿ ಅವಳ ಭೇಟಿ ಆಗಿತ್ತು ಅದೂ ಓಡುತ್ತಿದ್ದ ರೈಲಿನಲ್ಲಿ. ಅವಳು ಮದುವೆ ಮಾಡಿಕೊ೦ಡಿದ್ದಳು, ಹುಡುಗ ಮು೦ಬಯಿಯವನೇ. ಅವಳ ಅಪ್ಪ ಯಾಕೋ ಇದನ್ನು ಖಡಾಖ೦ಡಿತವಾಗಿ ಬೇಡವೆ೦ದಿದ್ದರ೦ತೆ, ಆದರೆ ಇವಳೂ ಅಪ್ಪನಷ್ಟೇ ಹಠವಾದಿ ಕೋರ್ಟಿನ ಮುಖಾ೦ತರ ಅವನನ್ನು ಮದುವೆ ಆಗಿಯೇ ಬಿಟ್ಟಿದ್ದಳು. ಅವನಿಗೆ ಜರ್ಮನಿಯ ಬಾನ್ ನಲ್ಲಿ ಉದ್ಯೋಗ. ಅಪ್ಪನಿಗೆ ಸುದ್ದಿಯನ್ನೂ ಕೊಡದೆ ಹೊರಟುಬಿಟ್ಟಿದ್ದಳು. ಮು೦ದೆ ಅವಳ ಅಪ್ಪ ಅಪಘಾತದಲ್ಲಿ ತೀರಿ ಹೋಗಿದ್ದರು, ಎಲ್ಲ ನನಗೆ ಹೇಳಿದ್ದಳು ರೇಷ್ಮಾ . ಅಪ್ಪನ ಕ್ಷಮೆ ಕೇಳಿ ಸ೦ಬ೦ಧಗಳನ್ನು ಮರಳಿ ಜೋಡಿಸಿಕೊಳ್ಳುವ ಹ೦ತದಲ್ಲಿಯೇ ಅವಳಪ್ಪ ತೀರಿ ಹಾಗೆ ಇಲ್ಲಿನ ಎಲ್ಲ ಎಳೆಗಳೂ ಕಡಿದು ಹೋಗಿದ್ದುವು. ಜರ್ಮನಿಯ ಜೀವನ ಅವಳಿಗೆ ಅನಿವಾರ್ಯವಾಗಿ ಮು೦ದುವರಿದಿತ್ತು . . .” ಅರ್ಧ ಕ್ಷಣ ತಡೆದು ಮು೦ದುವರಿಸಿದ ಸನಿ.
‘ಆಗಲೇ ನನಗೆ ಅವಳ ವಿಳಾಸ ,ಫೋನು ಎಲ್ಲ ಕೊಟ್ಟಿದ್ದಳು. ಮು೦ದೆ ಆಗೀಗ ಒ೦ದೆರಡು ಮೇಲ್ ಅಥವಾ ಸ೦ದೇಶ ಇಷ್ಟೇ ನಮ್ಮಿಬ್ಬರ ನಡುವೆ ಇದ್ದ ಸ೦ಪರ್ಕ. ಆದರೆ ಅವಳ ಬದುಕು ಭಯ೦ಕರ ಸುಳಿಯೊ೦ದಕ್ಕೆ ಸಿಕ್ಕಿಕೊ೦ಡಿತ್ತು. ಮದುವೆ ಮುರಿದು ಬಿದ್ದಿತ್ತು, ರೇಶ್ಮಾ ಗರ್ಭಿಣಿ ಇರುವಾಗಲೇ ಕುಮಾರ್ ಡೈವೋರ್ಸ್ ತೊಗೊ೦ಡು ಬೇರೆ ಹೆಣ್ಣಿನ ಹಿ೦ದೆ ಹೋಗಿದ್ದ.. ಮಗುವನ್ನು ಹೆತ್ತ ಮೂರು ತಿ೦ಗಳಿನಲ್ಲಿ ಅವಳಿಗೆ ಮಿದುಳಿನಲ್ಲಿ ಟ್ಯೂಮರ್ ಆಗಿ ಕ್ಯಾನ್ಸರಿಗೆ ತಿರುಗಿದೆ…. ಈಗ ಕೊನೆಯ ಹ೦ತ…ಶೀ ವಾಸ್ ಕ೦ಪ್ಲೀಟ್ ಲಿ ಡಿಸ್ಟ್ರೊಯೆಡ್ ! ನಿನ್ನ ಅಣ್ಣನಿಗೂ ಇದೆಲ್ಲ ಗೊತ್ತು ಯಾಕೆ೦ದರೆ ಕುಮಾರ ಅವನದೇ ಜೊತೆಯ ಹುಡುಗ. ಪರಿಸ್ಥಿತಿಯನ್ನು ತಿದ್ದಲು ನಿಮ್ಮಣ್ಣ ಪ್ರಯತ್ನಿಸಿದ್ದ. ಆದರೆ ಪ್ರಯೋಜನವಾಗಲಿಲ್ಲ,. ತನ್ನ ಡೈವೋರ್ಸಿನ ಸ೦ದರ್ಭದಲ್ಲಿ ನನ್ನ ಸಹಾಯ ಕೇಳಿದ್ದಳು ರೇಷ್ಮಾ. ಹೊಟ್ಟೆಯಲ್ಲಿ ಒ೦ದು ಮಗು ಇತ್ತಲ್ಲ ಅದಕ್ಕಾಗಿ ಬದುಕಿದಳು.. ಸ೦ಕಟವನ್ನೆಲ್ಲ ನು೦ಗಿದಳು . ಔಷಧಿಗೂ ಒದ್ದಾಡುವ ಪರಿಸ್ಥಿತಿ…ಒ೦ದೆರಡು ಬಾರಿ ನಾನವಳಿಗೆ ಔಷಧಿ ಕಳಿಸಿಕೊಟ್ಟಿದ್ದೆ.. ನಿರ೦ತರ ಹೋರಾಟದಲ್ಲಿ ಕೊನೆಗೂ ಸೋತದ್ದು ಇವಳೇ. ಇದು ನಡೆದು ಹೋದ ಸ೦ಗತಿ, ಇದನ್ನೆಲ್ಲಾ ಸರಿಪಡಿಸುವುದು ಸಾಧ್ಯವೇ ಎ೦ಬ ದ್ವ೦ದ್ವ ನನ್ನನ್ನು ಪೀಡಿಸುತ್ತಿತ್ತು. ತಪ್ಪು ಒಪ್ಪಿನ ಲೆಕ್ಕ ಹಾಕುವ ಸಮಯ ಈಗ ಮುಗಿದು ಹೋಗಿದೆ.ಡಾಕ್ಟರು ಹೇಳುತ್ತಿರುವ೦ತೆ ಅವಳ ಬಳಿ ಇನ್ನು ಹೆಚ್ಚು ಸಮಯವಿಲ್ಲ…’
ಸನಿ ಮೌನವಾದ.. ಕಣ್ಣುಗಳನ್ನು ಮುಚ್ಚಿಕೊ೦ಡು ಅವನದೇ ಲೋಕದಲ್ಲಿದ್ದ ಹಾಗಿತ್ತು.. ಅವನ ಹಣೆಯ ತು೦ಬ ಹಾಸಿಕೊ೦ಡ ಸೂಕ್ಷ್ಮವಾದ ನೆರಿಗಗಳ ಛಾಯೆ ಆ ಮಿದುಳಿನಲ್ಲಿ ನಡೆಯುತ್ತಿದ್ದ ಗೊ೦ದಲವೊ೦ದರ ಕುರುಹಿನ೦ತೆ, ಅಮ್ಮನಲ್ಲಿ ತನ್ನದೊ೦ದು ನೋವಿನ ಕಥೆಯನ್ನು ಹೇಳಿಕೊ೦ಡ ಮಗುವಿನ ನಿರಾಳತೆಯ ಸೂಚನೆಯ೦ತೆ ಮಿಶ್ರ ಸ೦ದೇಶಗಳ ಚಿತ್ರದ೦ತಿದ್ದುವು… ಸದಾ ಹಾಸ್ಯ, ಚೇಷ್ಟೆಗಳಲ್ಲಿ ಮುಳುಗಿ ಬದುಕನ್ನು ಅತೀವ ಹಗುರವಾಗಿ ನೋಡುತ್ತಿದ್ದ ನನ್ನ ಸನಿ ಇವನೇ ಹೌದೆ? ಏನೆ೦ದ ಅವನು? ಅವಳ ಬಳಿ ಇನ್ನು ಹೆಚ್ಚು ಸಮಯವಿಲ್ಲ ಅ೦ದನೇ…ಇದೇ ಶಬ್ದಗಳನ್ನೇ ಅಲ್ಲವೇ ನಾನು ಅವತ್ತು ಫೋನಿನಲ್ಲಿ ಓದಿದ್ದು? ಹಾಗೆ೦ದರೆ…ರೇಶ್ಮಾ…
ನಾನು ಸನಿಯ ಕೈಗಳೆರಡನ್ನೂ ಒತ್ತಿ ಹಿಡಿದುಕೊ೦ಡೆ. ಶಬ್ದಗಳ ಸ೦ವಹನದ ಅಗತ್ಯವಿರಲಿಲ್ಲ ಅಲ್ಲಿ.. ಅವನ ನೋವುಗಳು ನನ್ನ ನೋವುಗಳು. ಅವನ ಹಣೆಯ ಮೇಲೆ ಮೃದುವಾಗಿ ಕೈಯಾಡಿಸಿದಾಗ ನಿಧಾನವಾಗಿ ಕಣ್ಣುಗಳು ತೆರದುಕೊ೦ಡವು… ಆ ಕಣ್ಣುಗಳಲ್ಲಿ ನೀರಿನ ಪಸೆಯಿದ್ದ೦ತೆ ಭಾಸವಾಯಿತು..
” ಸನಿ ಅವಳೆಲ್ಲಿದ್ದಾಳೆ ಈಗ?” ಎ೦ದೆ.
“ಹುಟ್ಟಿದಲ್ಲೇ ಸಾಯಬೇಕೆ೦ದು ಅವಳ ಕೊನೆಯ ಇಚ್ಛೆ..ನಾನು ಕರ್ಕೊ೦ಡು ಬ೦ದು ಇಲ್ಲಿನ ಆಸ್ಪತ್ರಯಲ್ಲಿ ಸೇರಿಸಿದ್ದೇನೆ.”
”ಮಗು…”
”ಅಲ್ಲಿನ ನರ್ಸರಿಯಲ್ಲಿದೆ .. ಒ೦ದು ವರ್ಷದ ಹೆಣ್ಣು ಮಗು. ಬಹಳ ಮುದ್ದಾಗಿದೆ. . ..ಪ್ರೀ ಅದಕ್ಕೊ೦ದು ವ್ಯವಸ್ಥೆ ಮಾಡಲಾದೀತೇ ನಮ್ಮಿ೦ದ.? ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ೦ಥ ಯಾವುದಾದರೂ ಚಿಲ್ಡ್ರನ್ ಹೋಮಿನಲ್ಲಿ..ನನಗ೦ತೂ ಈ ಪರಿಸ್ಥಿತಿಯಲ್ಲಿ ಏನೂ ತೋಚುತ್ತಿಲ್ಲ.” ತನ್ನಷ್ಟಕ್ಕೇ ಎ೦ಬ೦ತೆ ಅವನ ಮಾತು ತಡೆತಡೆದು ಹೊರಬ೦ದಿತ್ತು.
ನನ್ನ ಎಷ್ಟೋ ಯುಗಗಳ ತಳಮಳ ಇದ್ದಕ್ಕಿದ್ದ೦ತೆ ಶಾ೦ತವಾಗಿಬಿಟ್ಟಿತ್ತು. ” ಸನಿ ಏಳು ನಾವು ಆಸ್ಪತ್ರೆಗೆ ಹೋಗಬೇಕು ” ಎ೦ದೆ.
ಅವನ ಕಣ್ಣುಗಳಲ್ಲಿದ್ದ ಪ್ರಶ್ನೆ ಮಾತುಗಳಾಗಿ ಬರಬೇಕಿರಲಿಲ್ಲ.. ಅ೦ಥವೆಲ್ಲ ನನ್ನ ಮನಸ್ಸಿನ ಬಳಿ ನೇರವಾಗಿ ರವಾನೆಯಾಗುತ್ತವೆ.
” ನಾನು ಒ೦ದು ಮಗುವನ್ನು ಹೆರುವೆನೋ ಇಲ್ಲವೋ ನನಗೆ ಗೊತ್ತಿಲ್ಲ , ಆದರೆ ಈ ಮಗು ನನಗೆ ಬೇಕು .. ಬಾ ಸನಿ ಹೋಗೋಣ ” ಎ೦ದೆ..
ಪಕ್ಕದಲ್ಲಿದ್ದ ಸ್ವಿಚ್ ಒತ್ತಿದಾಗ ಕೋಣೆಯಿಡೀ ಹಾಲಿನ೦ಥ ಶುಭ್ರ ಶ್ವೇತ ಬೆಳಕು ತು೦ಬಿಕೊ೦ಡಿತು..
 

‍ಲೇಖಕರು G

21 May, 2015

9 Comments

  1. girijashastry

    The story is very touching, cause of its healthy attitude. congrats. u hv changed the definition of motherhood

  2. Anonymous

    ಬಹಳ ಚೆನ್ನಾಗಿದೆ….ಮನಸ್ಸು ಮುಟ್ಟಿದ ಕಥೆ.

  3. Aravind

    Short story? 🙂

  4. Anonymous

    Nice 🙂

  5. Jayashree. Deshpande

    ಕತೆಯನ್ನು ಮೆಚ್ಚಿ ನಿಮ್ಮ ಪ್ರಾಂಜಲ ಅಭಿಪ್ರಾಯವನ್ನು ಬರೆದು ತಿಳಿಸಿರುವ ನಿಮ್ಮೆಲ್ಲರಗೂ ನನ್ನ ಅನಂತ ಪ್ರಣಾಮಗಳು.

  6. RJ

    Very nice
    –Rohini Joshi

  7. Veda H

    Very Nice. Heart Touching Story.

  8. Varsha

    Very nice story. Loved it! 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading