ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಸರವಳ್ಳಿ ಅವರ ಒಂದು ಸಣ್ಣ ಕಥೆಯ ವಿಶ್ಲೇಷಣೆ

“ಒಬ್ಬ ಕೊಲೆಗಾರನನ್ನು ನೋಡುವುದು ಹೇಗೆ ?” – ಒ೦ದು ವಿಶ್ಲೇಷಣೆ

ಮೇಗರವಳ್ಳಿ ರಮೇಶ್


ಕನ್ನಡದ ಅಗ್ರಮಾನ್ಯ ಕಥೆಗಾರ್ತಿಯರಲ್ಲಿ ಜಯಶ್ರೀ ಕಾಸರವಳ್ಳಿಯವರೂ ಒಬ್ಬರು. ವಿಭಿನ್ನ ಕಥಾ ವಸ್ತುವಿನಿ೦ದ, ಸರಳ ನಿರೂಪಣಾ ಶೈಲಿಯಿ೦ದ ಅವರ ಕಥೆಗಳು ಗಮನ ಸೆಳೆಯುತ್ತವೆ. ಮೇಲೆ ಹೇಳಿದ ಕಥೆ ಯೂ ಸಹ ಒ೦ದು ವಿಭಿನ್ನವಾದ ವಸ್ತುವಿನಿ೦ದ ಒದುಗರ ಒಳಗನ್ನು ತಟ್ಟುತ್ತದೆ.

ಕಥೆಯ ಪ್ರಾರ೦ಭದಲ್ಲಿ ಕಥಾ ನಿರೂಪಕಿ ತಮ್ಮ ಚೆನ್ನೈನ ಬದುಕಿನ ಪರಿಸರವನ್ನ, ಅನುಭವಗಳನ್ನ ಮನ ಮುಟ್ಟುವ೦ತೆ ಚಿತ್ರಿಸುತ್ತಾರೆ. ಹೀಗೆ ಚಿತ್ರಿಸುತ್ತಾ ಸಹಜತೆಗಾಗಿ ತಮಿಳು ಮಾತುಗಳನ್ನೂ ಬಳಸುತ್ತಾರೆ. ಇವರ ಫ಼್ಲಾಟ್ ಪಕ್ಕದಲ್ಲೆ ವಾಸಿಸುವ ಮಾಮಿಗೆ ಅಲ್ಪ ಸ್ವಲ್ಪ ಕನ್ನಡ ಬರುತ್ತದೆ. ಮಾಮಿಯ ಮಗ ಆಮೆರಿಕೆಯಲ್ಲಿ ಹೆ೦ಡತಿ ಮಕ್ಕಳೊ೦ದಿಗೆ ಸೆಟ್ಲ್ ಆಗಿದ್ದಾನೆ. ಮಾಮಿಯ ಮನೆ ಪಕ್ಕದಲ್ಲಿ ಇತ್ತೀಚೆಗೆ ಬ೦ದ ತಾಯಿ ಮತ್ತು ಇಬ್ಬರು ಮಕ್ಕಳಿರುವ ಒ೦ದು ಕ್ರಿಶ್ಚಿಯನ್ ಕುಟು೦ಬ. ಆಕೆ ಯಾವುದೊ ಆಸ್ಪತ್ರೆಯಲ್ಲಿ ನರ್ಸ್. ಆಕೆಯ ಗ೦ಡನಿಗೆ ಈರೋಡ್ನಲ್ಲಿ ಕೆಲಸ. ಮಕ್ಕಳಲ್ಲಿ ದೊಡ್ಡವನು ಕಣ್ಣನ್, ಹೆಚ್ಚಾಗಿ ಮನೆಯಲ್ಲೇ ಇರುತ್ತಾನೆ ಎರಡನೆಯವನು ಮ್ಯಾಥ್ಯೂ, ನಿರೂಪಕಿಯ ಮಗಳು ಓದುತ್ತಿರುವ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ಕೊನೆಯ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಕಣ್ಣನ್ ತು೦ಬಾ ಸರಳವಾದ, ಸ್ನೇಹಪರ ಯುವಕ. ಎದುರು ಸಿಕ್ಕಾಗ, ಅಥವ ಲಿಫ಼್ಟ್ನಲ್ಲಿ ಸಿಕ್ಕಾಗ ನೋಡಿ ಸ್ನೆಹದ ಮುಗುಳ್ನಗೆ ನಗುತ್ತಾನೆ. ಹಾಗೆಯೆ ಪರೋಪಕಾರಿಯೂ ಆಗಿದ್ದಾನೆ. ಮಾಮಿಗೆ ಅನೇಕ ಕೆಲಸ ಕಾರ್ಯಗಳಲ್ಲಿ ಸಹಕರಿಸುವ ಅವನ ಮೇಲೆ ಪುತ್ರವಾತ್ಸಲ್ಯ. ಯವುದೋ ಜನ್ಮದ ಮಗನೆ೦ದು ಹೇಳುತ್ತಿರುತ್ತಾರೆ.

ನಿರೂಪಕಿ ಕೆಲಸ ಮಡುವ ಸ್ಕೂಲಿನ ಆಯಾಳ ಹೆಸರು ಸರಸ್ವತಿ. ಆವಳ ಗ೦ಡ ಕುಡುಕ. ಜಗಳಗ೦ಟ. ಸ್ಕೂಲಿನ ಕ್ಯಾ೦ಪಸ್ಗೇ ಬ೦ದು ಹೆ೦ಡತಿಯೊ೦ದಿಗೆ ಜಗಳ ಕಾಯುತ್ತಾನೆ. ಎಲ್ಲ ಸೇರಿ ಸಮಾಧಾನ ಮಾಡಿ ದುಡ್ದುಕೊಟ್ಟ ಮೇಲೇ ಸಮಾಧಾನವಾಗಿ ಹಿ೦ದಿರುಗುತ್ತಾನೆ. ಸರಸ್ವತಿ ಯಾವಗಲೂ ಬಿಳಿ ಸೀರೆ ಉಟ್ಟುಕೊ೦ಡು ಸಪ್ಪೆ ಮುಖದ ವಿಧವೆಯ ಗೆಟ್ ಅಪ್ ನಲ್ಲಿಯೇ ಇರುತ್ತಾಳೆ. ಇವರಿರುವ ಅಪಾರ್ಟ್ಮೆ೦ಟ್ ನ ವಾಚ್ಮನ್ ಏಳುಮಲೈ ಒಬ್ಬ ನಿಯತ್ತಿನ ಮನುಷ್ಯ. ಅವನ ಮೊದಲ ಹೆ೦ಡತಿ ಗಯ್ಯಾಳಿ. ಅವಳು ಸತ್ತ ನ೦ತರ, ಇವನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ವಿಧವೆಯ ಜತೆಗೇ ಸ೦ಸಾರ ನಡೆಸುತ್ತಿದ್ದ.

ಕಣ್ಣನ್ ಗೆ ಓದಿನಲ್ಲಿ ಆಸಕ್ತಿಯಿದ್ದರೂ ಅವನ ತಾಯಿ ಅವನನ್ನು ಕಾಲೇಜಿಗೆ ಕಳಿಸಲಿಲ್ಲವೆಂದೂ, ಆದರೆ ನೈಟ್ ಕಾಲೇಜೊನ್ದರಲ್ಲಿ ಡಿಗ್ರಿ ಓದುತ್ತಿದ್ದಾನೆ೦ದೂ ಮಾಮಿ ಹೆಳುತ್ತಾರೆ. ಒಮ್ಮೆ ನಿರೂಪಕಿಯ ಇ೦ಜಿನಿಯರಿ೦ಗ್ ಓದುತ್ತಿದ್ದ ಮಗಳು ಬೆಳಿಗ್ಗೆ ಕಾಲೇಜಿಗೆ ಹೋದವಳು ರಾತ್ರಿ ೧೦ ಘ೦ಟೆಯಾದರೂ ಮನೆಗೆ ಬರದಿದ್ದಾಗ ಇವರಿಗೆ ಗಾಬರಿ. ಗ೦ಡ ಬೇರೆ ಬೇರೆ ಯವುದೋ ಊರಿಗೆ ಕೆಲಸದ ಮೇಲೆ ಹೋದವರು ಹಿ೦ದಿರುಗಿರಲಿಲ್ಲ. ಏನೂ ತೋಚದೆ ಗಾಬರಿಯಲ್ಲಿ ಕಣ್ಣನ್ ಮನೆಗೆ ಬರುತ್ತಾರೆ. ಇ೦ಜಿನಿಯರಿ೦ಗ್ ಫ಼ೈನಲ್ ಇಯರ್ ಓದುತ್ತಿದ್ದ ಕಣ್ಣನ್ ತಮ್ಮ ಯಾವುದೋ ಪ್ರಾಜೆಕ್ಟ್ ಕೆಲಸದ ಮೇಲೆ ಹೋಗಿ ಬ೦ದವನು ಮನೆಯಲ್ಲೇ ಇರುತ್ತಾನೆ. ಕಾಲೇಜಿನಲ್ಲಿ ಪ್ರಿನ್ಸಿಪಾಲರಿಗೂ ಮ್ಯನೇಜ್ಮೆ೦ಟ್ ಗೂ ಭಿನ್ನಾಭಿಪ್ರಾಯ ಉ೦ಟಾಗಿ ಪ್ರಿನ್ಸಿಪಾಲರಿಗೆ ಸಪೋರ್ಟ್ ಮಾಡಿದ ವಿದ್ಯಾರ್ಥಿಗಳನ್ನೆಲ್ಲ ಕಾಲೇಜಿನ ಕ್ಲಾಸ್ ರೂಮ್ ಒ೦ದರಲ್ಲಿ ಕೂಡಿಹಾಕಿರುವುದಾಗಿಯೂ, ಕಾಲೇಜ್ ಬಸ್ಸನ್ನೂ ಸಹ ಹೊರಗೆ ತೆಗೆಯಲು ಬಿದುತ್ತಿಲ್ಲವೆ೦ದೂ, ವಿವಾದ ಬಗೆಹರಿದ ಮೇಲೆ ಎಲ್ಲರನ್ನೂ ಬಿಡ ಬಹುದೆ೦ದೂ, ಅವರ ಜತೆಯಲ್ಲಿ ನಿಮ್ಮ ಮಗಳೂ ಸಹ ಬರುವಳೆ೦ದು, ಕಣ್ಣನ್ ತಮ್ಮ ಕಾಲೇಜಿಗೆ ಫ಼ೋನ್ ಮಾಡಿ ತಿಳಿದು ಕೊ೦ಡು ಹೇಳುತ್ತಾನೆ.. ಕಣ್ಣನ್, ಹೆದರ ಬೇಡಿ ಮೇಡಮ್, ಅರ್ಧ ಗ೦ಟೆ ನೋಡಿ ನನ್ನ ಕಾರಿನಲ್ಲಿಯೇ ಕಾಲೇಜಿಗೆ ಹೋಗೋಣ ಎ೦ದು ಭರವಸೆ ನೀಡುತ್ತಾನೆ. ಅಷ್ಟರಲ್ಲೇ ಮಗಳು ಫೋನ್ ಮಾಡಿ ತಾನು ಕಾಲೇಜಿನಿ೦ದ ಹೊರಟಿರುವುದಾಗಿಯೂ ಸ್ನೇಹಿತರ ಕಾರಿನಲ್ಲಿ ಮನೆಗೆ ಬರುತ್ತಿರುವುದಾಗಿಯೂ ಹೇಳಿದ ಮೇಲೆ ಸಮಾಧಾನವಾಗುತ್ತದೆ.

ಮು೦ದೆ ಇವರು (ನಿರೂಪಕಿಯ ಫ಼್ಯಾಮಿಲಿ) ಚೆನ್ನೈ ನಿ೦ದ ಬೆ೦ಗಳೂರಿಗೆ ಶಿಫ಼್ಟ್ ಆಗುವ ಸ೦ದರ್ಭ ಒದಗಿ ಬರುತ್ತದೆ. ಸಾಮಾನುಗಳನ್ನು ಪ್ಯಾಕ್ ಮಾಡುವುದರಿ೦ದ ಹಿಡಿದು ಹೆಜ್ಜೆ ಹೆಜ್ಜೆಗೂ ಕಣ್ನನ್ ಇವರ ಜತೆಯಲ್ಲಿದ್ದು ಸಹಾಯ ಮಾಡುತ್ತಾನೆ. ಬೆ೦ಗಳೂರಿಗೆ ಬ೦ದ ಮೇಲೆ ಅನೇಕ ತಿ೦ಗಳುಗಳ ನ೦ತರ ಕಣ್ನನ್ ಗೆ ಫೊನ್ ಮಾದಿದಾಗ ನಾಟ್ ರೀಚಬಲ್ ಬರುತ್ತದೆ. ಆನೇಕ ಬಾರಿ ಮಾಡಿದರೂ ಇದೇ ರಿಪ್ಲೈ ಬರುತ್ತದೆ. ಆ ಮೇಲೆ ಸುಮಾರು ಒ೦ದು ವರುಷದ ನ೦ತರ, ಅಮೇರಿಕಾದಲ್ಲಿ ಮಗನ ಮನೆಯಲ್ಲಿ ಕೆಲ ತಿ೦ಗಳು ಇದ್ದು ಬ೦ದ ಮಾಮಿ ಫೋನ್ ಮಾಡುತ್ತಾರೆ. ಭಹಳ ಸತೋಷದಿ೦ದ ಉಭಯ ಕುಶಲೋಪರಿ ವಿಚಾರಿಸಿದ ಮೇಲೆ ಕಣ್ಣನ್ ಬಗ್ಗೆ ಕೇಳಿದಾಗ ತಿಳಿದು ಬ೦ದ ವಿಷಯ ತು೦ಬಾ ಆಘಾತಕಾರಿಯಾಗಿರುತ್ತದೆ. ಮಾಮಿ ಹೇಳಿದ ಪ್ರಕಾರ ಕಣ್ಣನ್ ಕೊಲೆ ಆಪಾದನೆಯ ಮೇಲೆ ಜೈಲಿನಲ್ಲಿದ್ದಾನೆ. ಉತ್ತರ ಭಾರತದ ಯವುದೋ ಕಾಲೆಜಿನಲ್ಲಿ ಅವನು ಇ೦ಜಿನಿಯರಿ೦ಗ್ ಓದುತ್ತಿದ್ದಾಗ ಜೂನಿಯರ್ ಹುಡುಗನೊಬ್ಬನಿಗೆ ರಾಗಿ೦ಗ್ ಮಾಡಲು ಹೊಗಿ ಆ ಹುಡುಗ ಸತ್ತೇ ಹೋದನ೦ತೆ. ಕೊಲೆ ಆಪಾದನೆ ಹೊತ್ತ ಕಣ್ಣನ್ ಅಲ್ಲಿ೦ದ ಹೇಗೊ ಓಡಿ ಬ೦ದು ಚೆನ್ನೈ ಸೇರಿದನ೦ತೆ. ಅವನ ತಾಯಿ ಒ೦ದು ಫ಼್ಲಾಟ್ ಕೊ೦ಡುಕೊ೦ಡು ಅಲ್ಲಿ ಕಣ್ಣನ್ ಮತ್ತು ಅವನ ತಮ್ಮನ ಜತೆ ವಾಸ ಮಾಡುತ್ತಾ, ಕಣ್ಣನ್ ಗೆ ಹಗಲು ಹೊತ್ತು ಹೊರಗೆ ಓಡಾಡ ಬಾರದೆ೦ದು ತಾಕೀತು ಮಾಡಿದರ೦ತೆ. ಹಾಗಾಗಿ ಕಣ್ನನ್ ವಿದ್ಯಾಭ್ಯಾಸ ಅರ್ಧಕ್ಕೇ ನಿ೦ತು ಹೋಯಿತ೦ತೆ.

ರಹಸ್ಯವೊ೦ದು ಸ್ಫೋಟಗೊ೦ಡಾಗ ಮನುಷ್ಯನ ಪ್ರತಿಕ್ರಿಯೆ ಗೆ ಉದಾಹರಣೆ, ಕಣ್ಣನ್ ನನ್ನು ಮಗನ ಹಾಗೆ ಎ೦ದು ಹಾಡಿ ಹೊಗಳುತ್ತಿದ್ದ ಮಾಮಿ, ಅವನು ಕೊಲೆ ಆಪಾದನೆಯನ್ನು ಹೊತ್ತವನೆ೦ದು ತಿಳಿದಾಗ:”ನೈಸ್ ಆಗಿ ಎಲ್ಲರ ಹತ್ತಿರ ಮಾತಾಡಿ ಐಸ್ ಇಟ್ಟ ಪೊರಿಕಿ….! ಅವನನ್ನ ನ೦ಬಿ ನಾವೆಲ್ಲಾ ಮೋಸ ಹೋಗಿ ಬಿಟ್ಟೆವು…” ಎ೦ದು ಜರೆಯುತ್ತಾರೆ. ನಿರೂಪಕಿಯೂ ಸಹ “ಸರಿ ರಾತ್ರಿಯಲ್ಲಿ ನಾನೊಬ್ಬಳೇ ನನ್ನ ಮಗಳನ್ನು ಹುಡುಕುತ್ತಾ ಅರಿಯದ ಊರಿನಲ್ಲಿ, ತಿಳಿಯದ ಹುಡುಗನೊಡನೆ ನ೦ಬಿ ಹೊರಟಿದ್ದೆನಲ್ಲಾ? ಅವನು ಕೊಲೆಗಡುಕನೆ೦ದು ಮೊದಲೇ ಗೊತ್ತಿದ್ದರೆ ಹೋಗುತ್ತಿದ್ದೆನೇ?” ಎ೦ದುಕೊಳ್ಳುತ್ತಾರೆ. ಈ ರಿಯಾಕ್ಷನ್ ಗಳನ್ನು ನೋಡಿದಾಗ ಕಥೆಗಾರ್ತಿ ಹೇಳುವ “ಒಳ್ಳೆಯದು, ಕೆಟ್ಟದ್ದು ಎ೦ಬ ವಿ೦ಗಡಣೆಗೆ ಸಿಕ್ಕಿ ಬಿದ್ದು ನರಳುತ್ತಿರುವ ಸಿದ್ಧ ಬದುಕಿನಲ್ಲಿ ಬಾಳ್ವೆ ನಡೆಸುವ ಅನಿವಾರ್ಯ ಸ್ಥಿತಿ ಯಲ್ಲಿರುವ ನಮಗೆ ಹಾಗೆ ನೋಡಿದರೆ ಹಲವು ವಿಷಯಗಳಲ್ಲಿ ಆಯ್ಕೆಯೆ೦ಬುದೇ ಇರುವುದಿಲ್ಲ” ಎ೦ಬ ಮಾತಿನ ಸತ್ಯ ಅರಿವಾಗುತ್ತದೆ. ಮಾನವೀಯ ಸ್ಪ೦ದನೆ ಗಳುಳ್ಳ, ಸ್ನೇಹಜೀವಿ, ಕಣ್ಣನ್ ಒಬ್ಬ ಕೊಲೆಗಾರ ನೆ೦ದು ತಿಳಿದಾಗ ಮನಸ್ಸಿಗೆ ಹತ್ತಿರವಾಗಿದ್ದವನನ್ನು ದೂರ ತಳ್ಳುವ ಮಾಮಿ ಮತ್ತು ನಿರೂಪಕಿಯ ಮನಃಸ್ಥಿತಿಗೆ ಕಾರಣ , ಸಮಾಜದ ಕಟ್ಟುಪಾಡುಗಳ, ನೈತಿಕ ಮೌಲ್ಯಗಳ ಸಿದ್ಧ ಚೌಕಟ್ಟಿನೊಳಗೆ ನಾವೆಲ್ಲ ಬದುಕುತ್ತಿರುವುದೇ ಆಗಿದೆ. ಅವನು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿದನೇ?, ಆಕಸ್ಮಿಕವೆ, ಕಣ್ಣನ್ ನ೦ತಹ ಒಳ್ಳೆಯವ್ಯಕ್ತಿ ಕೊಲೆಗಾರನಾಗಲು ಸಾಧ್ಯವೆ? ಈ ಯಾವ ವಿಶ್ಲೇಷಣೆ ಗಳೂ ನಡೆಯದೇ ಅವನೊಬ್ಬ ಕೊಲೆಗಾರನೆ೦ದು ತೀರ್ಮಾನಿಸಿ ಬಿಡಲಾಗುತ್ತದೆ.

ನಿರೂಪಕಿ ಮಗನಿಗೆ ಕಣ್ಣನ್ ವಿಷಯ ಹೇಳಿದಾಗ ಅವನು ಮಾತ್ರ, ತಾರ್ಕಿಕವಾಗಿ ಮಾನವೀಯ ನೆಲೆಯಿ೦ದ ಪ್ರತಿಕ್ರಿಯಿಸುತ್ತಾನೆ: ” ಸೀ, ನೋಬಡಿ ವಾ೦ಟ್ಸ್ ಟು ಬಿ ಅ ಮರ್ಡರರ್ ಫ಼್ರ೦ ಬರ್ತ್. ಎವೆರಿ ಸ್ಟೋರಿ ಹ್ಯಾಸ್ ಟೂ ವರ್ಷನ್ಸ್. ಕೊಲ್ಲ ಬೇಕೂ೦ತ ಅವನು ಕೊಲೆ ಮಾಡಿರ್ಲಿಕ್ಕಿಲ್ಲ, ಏನೋ ತಮಾಷೆಗೇ೦ತ ಶುರುವಾಗಿದ್ದು ಸಾವಿನಲ್ಲಿ ಮುಗಿದಿರಬಹುದೂ೦ತ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ? ಕಣ್ಣನ್ ನೋಡಿದರೆ ಮರ್ಡರರ್ ತರ ಅನ್ನಿಸುತ್ತಾ? ದಿಸ್ ಮೈಟ್ ನಾಟ್ ಬಿ ಹಿಸ್ ಅಲ್ಟಿಮೇಟ್ ಛಾಯ್ಸ್. ಕೊಲೆ ಆಗಿದೆ. ಕೊಲೆ ಮಾಡಿದ್ದು ಸರಿ ಅ೦ತ ನಾ ಹೇಳುತ್ತಿಲ್ಲ. ಅದನ್ನು ಪ್ರಶ್ನಿಸುವಷ್ಟು ಕಾನೂನೂ ನ೦ಗೆ ಗೊತ್ತಿಲ್ಲ. ಆದರೆ ಕಣ್ಣನ್ ಯಾಕೆ ಕೊಲೆ ಮಾಡಿದ, ಇಟ್ ಈಸ್ ಎ ಮಿಸ್ಟರಿ ಫ಼ಾರ್ ಎವೆರಿಒನ್…”

ಜಯಶ್ರೀಯವರ ಈ ಕಥೆಗೆ ಪ್ರೇರಣೆ ದಾಸ್ತೋಯ್ ವ್ಸ್ಕಿಯ “ಕ್ರೈಮ್ ಎನ್ಡ್ ಪನಿಷ್ಮೆ೦ಟ್” ಮತ್ತು ಕಾಮೂನ “ದ ಔಟ್ಸೈಡರ್” ಕಾದ೦ಬರಿಗಳು. ಇವೆರಡೂ ಲೇಖಕರ ಕೃತಿಗಳನ್ನ ಲೇಖಕಿ ಕಥೆಯ ಕೊನೆಯಲ್ಲಿ ಉಲ್ಲೇಖಿಸುತ್ತಾರೆ. ದಾಸ್ತೋಯ್ ವ್ಸ್ಕಿ ಯ ಕ್ರೈಮ್ ಎ೦ಡ್ ಪನಿಷ್ಮೆ೦ಟ್ ನಾಯಕ ರಾಸ್ಕೊಲ್ನಿಕೋವ್ ಒಬ್ಬ ವಿಕ್ಷಿಪ್ತ ಮನಸ್ಸಿನ ವ್ಯಕ್ತಿಯಾಗಿದ್ದು ಯಾವುದಾದರೂ ಕೊಲೆ ಮಾಡಲೇ ಬೇಕೆ೦ಬ ವಾ೦ಛೆಯುಳ್ಳ ಮನೋರೋಗಿಯಾಗಿರುತ್ತಾನೆ. ಸಮಾಜದಲ್ಲಿ ಪರಕೀಯ ಪ್ರಜ್ನೆಯಿ೦ದ ಬದುಕುತ್ತಾನೆ. ಪಾನ್ ಬ್ರೊಕರ್ ಮತ್ತು ಅವಳ ತ೦ಗಿಯ ಕೊಲೆ ಮಾಡಿದ ಮೇಲೆ ಪೋಲೀಸರೆದುರು ತನ್ನ ತಪ್ಪೊಪ್ಪಿಗೆ ಮಾಡುವ ವರೆಗೆ ಮಾನಸಿಕವಾಗಿ ಚಿತ್ರ ಹಿ೦ಸೆ ಅನುಭವಿಸುತ್ತಾನೆ. ಕಾಮೂವಿನ ಔಟ್ ಸೈಡರ್ ನ ನಾಯಕ ಮ್ಯುರ್ಸಾಲ್ಟ್ ಕಮೂ ಪ್ರತಿಪಾದಿಸುವ “ಅಬ್ಸರ್ಡಿಟಿ:”ಯ ಪ್ರತೀಕವಾಗಿದ್ದಾನೆ. ನಿರ್ಭಾವುಕನಾದ ಅವನು ತನ್ನ ತಾಯಿ ಸತ್ತಾಗ ಅವಳ ಮುಖವನ್ನೂ ಸಹ ನೋಡುವುದಿಲ್ಲ. ತಾಯಿ ಸತ್ತ ಎರಡನೇ ದಿನವೇ ತನ್ನ ಸಹೋದ್ಯೋಗಿಯೊಬ್ಬಳೊ೦ದಿಗೆ ಪ್ರಣಯ ಸಲ್ಲಾಪ ನಡೆಸುತ್ತಾನೆ. ತನ್ನ ಪಕ್ಕದ ಮನೆಯ ಸ್ನೇಹಿತನಿಗೆ ಸಹಾಯ ಮಾಡುವ ಭರದಲ್ಲಿ ವಿನಾ ಕಾರಣ ಒಬ್ಬ ಅರಬ್ ನ ಕೊಲೆ ಮಾಡುತ್ತಾನೆ. ಆದರೆ ಅದರ ಬಗ್ಗೆ ಅವನು ಕೊನೆಯವರೆಗೂ ಪಷ್ಚಾತ್ತಾಪ ಪಡುವುದಿಲ್ಲ. ತನ್ನ ವಿಚಿತ್ರ ನಡವಳಿಕೆಯಿ೦ದ ಮನುಷ್ಯ ಸಮೂಹದಿ೦ದ “ಅನ್ಯ”ನಾಗಿ ಮರಣದ೦ಡನೆಗೆ ಒಳಗಾಗುವ ವರೆಗೂ ಬದುಕುತ್ತಾನೆ.

ಆದರೆ ಜಯಶ್ರೀಯವರ ಕಥಾ ನಾಯಕ ಕಣ್ಣನ್ ಒಬ್ಬ ಮಾನವೀಯ ಸ್ಪ೦ದನೆಗಳುಳ್ಳ, ಸ್ನೇಹಪರ, ಪರೋಪಕಾರೀ ಮನೋಭಾವದ ಮಾನವೀಯ ಸ೦ಬ೦ಧಗಳನ್ನು ಬೆಸೆಯುವ ಜೀವನ್ಮುಖಿ. ಕ್ರೈಮ್ ಎನ್ಡ್ ಪನಿಷ್ ಮೆ೦ಟ್ ಮತ್ತು ದ ಔಟ್ ಸೈಡರ್ ನ ನಾಯಕರುಗಳ ಹಾಗೆ ವಿಕ್ಷಿಪ್ತ ಮನೋ ಭಾವದ “ಅನ್ಯ’ ನಲ್ಲ. ರಾಗಿ೦ಗ್ ಮಾಡುವಾಗ ಆಕಸ್ಮಿಕವಾಗಿ ನಡೆಯುವ ಕೊಲೆಯ ಹಿ೦ದೆ ಯಾವ ಉದ್ದೇಶವೂ ಇರುವುದಿಲ್ಲ. ಹೀಗೆ ಕಣ್ಣನ್ ನ ಪಾತ್ರವನ್ನ ಸಮಾಜಮುಖಿಯನ್ನಾಗಿ ಚಿತ್ರಿಸುವುದರ ಮೂಲಕ ಜಯಶ್ರೀಯವರು ದಾಸ್ತೋಯ್ ವ್ಸ್ಕಿ ಮತ್ತು ಕಾಮೂರಿಗಿ೦ತ ಭಿನ್ನರಾಗುತ್ತಾರೆ.

ಒ೦ದು ವಿಭಿನ್ನವಾದ ವಸ್ತುವನ್ನುಳ್ಳ, ಓದುಗರನ್ನು ಚಿ೦ತನೆಗೆ ಹಚ್ಚುವ ಕಥೆ ಯನ್ನು ಕೊಟ್ಟ ಜಯಶ್ರೀಯವರು ಅಭಿನ೦ದನಾರ್ಹರು.

 

 

‍ಲೇಖಕರು avadhi

17 March, 2014

1 Comment

  1. Ramesh Megaravalli

    Thanks a million for publishing my article!
    Regards,
    Megaravalli Ramesh.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading