ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕದ್ರಿ ಕಂಡಂತೆ ಜೋಗಿಯವರ 108 ಕಥೆಗಳು

ಜಯಶ್ರೀ ಬಿ ಕದ್ರಿ

ಜೀವನವೆನ್ನುವುದೇ ಒಂದು ಕಥೆ, ಸಂಕಥನ ಎಂದು ಇತ್ತೀಚೆಗೆ ನನಗೆ ಗಾಢವಾಗಿ ಅನಿಸುತ್ತಿರುತ್ತದೆ. ನಾವು ‘ನಿಜ’ ಎಂದು ಪರಿಭಾವಿಸಿದ ತತ್ವಗಳು, ಧಾರ್ಮಿಕ ವಿಚಾರಗಳು, ಚರಿತ್ರೆಯಲ್ಲಿ ಸಂಭವಿಸಿವೆ ಎಂದು ಹೇಳಲಾದ ಘಟನೆಗಳು, ಹೆಚ್ಚೇಕೆ ನಾವು ಶೋಕಿಸುವ, ಸಂಭ್ರಮಿಸುವ, ಆಸಕ್ತಿಯಿಂದ ಸ್ಮೃತಿಪಟಲದ ಭಾಗವಾಗಿ ಕಾಪಿಟ್ಟುಕೊಳ್ಳುವ ಘಟನೆಗಳೆಲ್ಲ ನಮಗೆ ಅನುಭವಗಳೂ, ಅವುಗಳನ್ನು ಕೇಳುವವರಿಗೆ ಕಥೆಗಳಾಗಿಯೂ ಅನಿಸುತ್ತವೆ.

ಮುಂದೊಂದು ದಿನ ನಮಗೂ ಕೂಡ ನಮ್ಮದೇ ಜೀವನದ ಘಟನೆಗಳು ಕಥೆಗಳಂತೆ ಕಾಣಬಹುದೇನೋ ಎನ್ನುವ ಗುಮಾನಿ ನನಗಿದೆ. ಕಥೆಗಳ ಬಗ್ಗೆ, ಕಥನ ಕಟ್ಟುವ, ಆಸ್ವಾದಿಸುವ, ವಿಮರ್ಶೆಗಳ ಬಗ್ಗೆ ಇರುವ ಹಲವಾರು ಥಿಯರಿಗಳು, ಅವುಗಳನ್ನು ಅರ್ಥೈಸಿಕೊಂಡು ಬೋಧಿಸಲು ಪ್ರಯತ್ನಿಸುವ ನನ್ನಂತಹ ಮೇಷ್ಟ್ರುಗಳಿಗೆಲ್ಲ ಕಥೆಗಳೆಂದರೆ ವಿಸ್ಮಯವೇ.

ಕತೆಯೊಂದನ್ನು ಪಾಠ ಮಾಡಿದಷ್ಟು ಕತೆ ಬರೆಯುವುದು ಸುಲಭವೇನಲ್ಲ ಎನ್ನುವುದು ಅನುಭವಕ್ಕೆ ವೇದ್ಯವಾದ ವಿಚಾರ. ಕತೆಗಳನ್ನು ವಿಮರ್ಶಿಸುವುದೇ ಬರೆಯುವುದಕ್ಕಿಂತ ಸುಲಭವೆಂದು ಜೋಗಿಯವರ ‘ನಾಕು ದಶಕಗಳ ಕತೆಗಳು’ ಓದಿ ಅನಿಸಿಬಿಟ್ಟಿತು. ಈ ರೀತಿಯ ‘ಅನಿಸಿಕೆ’ಗಳು, ‘ವಿಚಾರ’ಗಳು, ಕೊಂಚ ಅಂಟಿಯೂ ಅಂಟದಂತಿರುವ ತಿಳಿ ಹಾಸ್ಯ ಭರಿತ, ರಂಜನೀಯವಾದ, ಅಷ್ಟಿಷ್ಟು ಫಿಲಾಸಫಿಯೂ ಬೆರೆತ, ಜೀವನದ ಗೂಢತೆ, ಹುಚ್ಚು ವ್ಯಾಪಾರಗಳ ಬಗ್ಗೆ ಒಳನೋಟಗಳು ಜೋಗಿಯವರ ಬರಹದ ಒಟ್ಟಂದದ ಶೈಲಿ ಹಾಗೂ ಶಕ್ತಿ. ಅವರ ಕಥೆಗಳ ವಸ್ತುಗಳ ಬಗ್ಗೆ, ವ್ಯಾಪ್ತಿಯ ಬಗ್ಗೆ ಚರ್ಚಿಸಲು ನನ್ನ ಸೀಮಿತತೆಯ ಬಗ್ಗೆ ಅರಿವಿದೆ. ಹೀಗಾಗಿ ಅಸಾಮಾನ್ಯ ಹೊಳಹುಗಳನ್ನು ಹೊಳೆಯಿಸುವ ಜೋಗಿಯವರ ಶೈಲಿಯ ಬಗ್ಗೆ ಈ ಲೇಖನ.

ಈ ಕಥಾ ಸಂಕಲನದಲ್ಲಿ 108 ಕಥೆಗಳಿವೆ. ನನ್ನ ಬರಹ ಕಥೆಗಾರಿಕೆಯ ಬಗ್ಗೆ ಹೊಳಹುಗಳನ್ನು ಕೊಡುವ ಕಥೆಗಳ ಬಗ್ಗೆ ಉದಾಹರಣೆಗೆ ‘ಓ ಗಾಳಿ… ಆ ಕಥೆಯನೊಂದು ಮುಂದಕೆ ತೆರಳು’ ಕಥೆಯಲ್ಲಿ ಕಥೆಯ ಕುರಿತು ನಿರ್ಮಲೆಗೆ ತನ್ನದೇ ಆದ ಚಿಂತನೆಗಳಿವೆ, ಅಭಿಪ್ರಾಯಗಳಿವೆ. ‘ಕಥೆಯೆಂದರೆ ತನ್ನದಲ್ಲದ ಬದುಕು’ ಅನ್ನುವ ನಂಬಿಕೆ ಅವಳದು. ತನ್ನ ಬದುಕು ಕೂಡಾ ಇನ್ನೊಬ್ಬರಿಗೆ ಕಥೆಯಂತೆ ಕಂಡೀತೆಂಬ ಅನುಮಾನ ಅವಳಿಗಿವೆ.

ಜೋಗಿಯವರ ಕಥೆಗಳ ಪ್ರಮುಖ ಪಾತ್ರಧಾರಿಗಳ ಮನೋಭೂಮಿಕೆಯ ‘ಸ್ಪೇಸ್’ ಇರುವುದು ನಗರಗಳಲ್ಲಿ. ನಗರದ ಬದುಕಿನ ಬಣ್ಣಗಳು, ವಿಶಿಷ್ಟವೂ, ವಿಚಿತ್ರವೂ ಆದ ವಿಹ್ವಲತೆ. ಬದುಕಿನ ಭಾರ ತಾಳಲಾರದೆ ತಮ್ಮದೇ ಆದ ರೀತಿಯಲ್ಲಿ ಅದನ್ನು ಹಗುರಗೊಳಿಸಲು ಪ್ರಯತ್ನಿಸುವ ಜೀವಗಳು ಇಲ್ಲಿ ಕಾಣಸಿಗುತ್ತವೆ. ಜೋಗಿಯವರ ಕತೆಗಳು ಯಾವುದೇ ಪರಿಹಾರವನ್ನು ಕೊಡದೇ ಇರುವುದೂ ಇಲ್ಲಿನ ಕತೆಗಳ ಮುಖ್ಯ ಲಕ್ಷಣ.

ಕತೆಗಾರನೇ ಕತೆಯ ಪಾತ್ರವಾಗಿರುವ ‘ವೃತ್ತಾಂತ’ ಕತೆಯಲ್ಲಿ ಕೂಡ ಈ ರೀತಿ ಕತೆ ಬರೆಯುವ ಕಷ್ಟಗಳ ಬಗ್ಗೆ ಇದೆ. ಕಲೆ ಹಾಕಿದ ಮಾಹಿತಿಗಳೆಲ್ಲ ಪರಸ್ಪರ ಸಂಬಂಧವಿಲ್ಲದ ಪ್ರತ್ಯೇಕ ವಿವರಗಳಂತೆ ತೋರುವುದೂ ನಿಜವಾಗಿಯೂ ಏನೂ ‘ಘಟಿಸದಿರುವುದು’.. ಹೀಗೆಲ್ಲ.

ಜೋಗಿಯವರ ಹೆಚ್ಚಿನ ಕತೆಗಳಲ್ಲಿ ಕಂಡು ಬರುವ, ‘ಮಾತಿಗೆ ಎಡೆಯಿಲ್ಲದೆ, ಮೌನದ ಜತೆಗೆ ಏಗಲಾರದೆ’ ಬದುಕುವ ಏಕತಾನತೆ ನಮ್ಮದೂ ಆಗಿರುವುದರಿಂದಲೇ ಈ ಕತೆಗಳಿಗೆ ವಿಶಿಷ್ಟವಾದ ಸಾರ್ವಕಾಲಿಕತೆ, ‘ಕಾಣ್ಕೆ’ ಲಭಿಸಿದೆ.

ಮೊದಲೇ ಹೇಳಿದಂತೆ ನನ್ನ ಕುತೂಹಲ ಇರುವುದು ‘ಕಥೆಗಾರಿಕೆ’ ಬಗ್ಗೆ ಜೋಗಿಯವರ ಪಾತ್ರಗಳು ಹೇಳುವ ವಾಕ್ಯಗಳ ಬಗ್ಗೆ. ಕಥೆ ಬರೆಯಲು ಹವಣಿಸಿ, ಏನೂ ಹೊಳೆಯದೆ ತಬ್ಬಿಬ್ಬಾಗುವ ಹೆಚ್ಚಿನವರಿಗೂ ಈ ವಾಕ್ಯ ಆಪ್ತವಾಹಬಹುದು. ‘ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ, ನಾನೂ ಅವನು ‘ಕತೆ ಹೇಗೆ ಹುಟ್ಟುತ್ತದೆ’ ಎಂದು ಮಾತನಾಡುತ್ತಾ ಕೂತೆವು. ‘ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ ಆವಿಯಾಗಿ ಹೋಯಿತು’ ಎಂಬ ಒಂದೇ ಒಂದು ಸಾಲು ಬರೆದು ನಾನು ಸುಮ್ಮನೆ ಕೂತೆ’ (ಕಥೆ : ನಾನು ಅವನು ಮತ್ತು ಹೇಳದೇ ಉಳಿದ ಕತೆ). ಈ ಕತೆಯಲ್ಲಿ ಕತೆ ಹೇಳುವವನಿಗೆ ವಿವೇಕ ಇರಬೇಕಾ? ವಿವೇಕಕ್ಕಿಂತ ಕಲ್ಪನೆ ಹೆಚ್ಚಿರಬೇಕಾ? ಹೊಸದೊಂದು ಲೋಕ ಸೃಷ್ಟಿಸಬೇಕಾ? ಈ ರೀತಿಯ ಪ್ರಶ್ನೆಗಳಿವೆ.

ಕೊನೆಗೂ ಕತೆಗಾರನ ಅಂತಃ ಸತ್ವ ಬಸಿದು ಹೇಳುವ ಕತೆಗಳೇ ಕೇಳಲ್ಪಡುತ್ತವೆ ಎನ್ನುವುದೇ ಇಲ್ಲಿನ ಸಂದೇಶ. ಬಹುಶಃ ಕತೆ ಬರೆಯಲು ಪ್ರಯತ್ನಿಸುವ ಹೆಚ್ಚಿನವರಿಗೆ ಈ ವಾಕ್ಯಗಳು ಮಾರ್ಗದರ್ಶಿಯಾಗಬಲ್ಲವು; ‘ನನ್ನ ಮುಂದೆ ಅವನಿದ್ದಾನೆ ಅನ್ನುವುದನ್ನೇ ಮರೆತು ನಾನು ಕತೆ ಹೇಳಲು ಆರಂಭಿಸಿದೆ. ಅದು ನನ್ನ ಕತೆ ಅನ್ನುವ ಅರಿವೂ ನನಗಿರಲಿಲ್ಲ. ನನ್ನ ಅವಮಾನದ ಕ್ಷಣಗಳು, ಸಂಭ್ರಮದ ಗಳಿಗೆಗಳು, ಪ್ರೇಮದ ಪಿಸುಮಾತುಗಳು, ವಿರಹದ ತಲ್ಲಣಗಳು, ನೋಯಿಸಿದ ಘಟನೆಗಳು, ವಂಚನೆಯ ಪ್ರಕರಣಗಳು, ಸುಳ್ಳಿನ ಕಂತೆಗಳು, ಒಂದೊಂದಾಗಿ ಅನಾವರಣಗೊಳ್ಳುತ್ತ ಬಂದವು.

ಈ ತನ್ಮಯತೆ ಕತೆಗಳ ಯಶಸ್ಸಿಗೆ ಕಾರಣ ಎನ್ನುವ ಧ್ವನಿ ಇಲ್ಲಿದೆ. ಹಾಗೆಂದು ಜೋಗಿಯವರ ಕತೆಗಳಲ್ಲಿ ಕತೆಗಾರ ಒಂದು ಸಾಕ್ಷಿ ಪ್ರಜ್ಞೆಯಂತೆ, ಎಚ್ಚರದಿಂದಲೇ ಕತೆ ಹೇಳುತ್ತಾರೆ ಎಂದು ನನಗನಿಸುತ್ತದೆ. ಈ ಸಂಕಲನದ 108 ಕತೆಗಳೂ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಕೆಲವೇ ಎಳೆಗಳನ್ನು ನೇಯುವ ವಿಶಿಷ್ಟವೂ ವಿನೂತನವೂ ಆದ ಶೈಲಿಯನ್ನು ಹೊಂದಿವೆ. ಇನ್ನು ಜೋಗಿಯವರ ಕತೆಗಳಿಂತ, ಕತೆಗಳಲ್ಲಿನ ವಿಚಾರಗಳೇ ಕೋರೈಸುವಂತಿರುತ್ತದೆ. ‘ವೃತ್ತಾಂತ’ ಕತೆಯಲ್ಲಿನ ‘ನೀನು ಯಾರ ಬಗ್ಗೆ ಕತೆ ಬರೆದರೂ ಅದು ನೀನು ನಿನ್ನ ಬಗ್ಗೆಯೇ ಬರೆದುಕೊಂಡ ಕತೆಯಾಗುತ್ತದೆ. ಪ್ರತಿ ಕಲಾವಿದನ ಸೃಷ್ಟಿಯೂ ಆತನ ದೀರ್ಘ ಆತ್ಮಚರಿತ್ರೆಯ ಬಿಡಿಭಾಗಗಳು.

‘ಕುಂತಿಯೊಡನೆ ಕೂಡಿದ ಸೂರ್ಯ’ ಕತೆಯಲ್ಲಿ ಬರುವ ‘ಶಬ್ದಗಳ ಮೂಲಕ, ಭಾಷೆಯ ಮೂಲಕ ಹೇಳುವ ಎಲ್ಲ ಕತೆಗಳೂ ಕೃತಕವೋ, ಇಲ್ಲವೇ ನಿರ್ಜಿವವೋ ಆಗಿರುತ್ತದೆ. ಕತೆಯೆಂದರೆ ಭಾಷೆಯ ಮೂಲಕ ಹೇಳಲು ಸಾಧ್ಯವಾಗುವ ಸಂಗತಿಯೇ ಅಲ್ಲ’. ಈ ರೀತಿಯ ವಾಕ್ಯಗಳು ನಮ್ಮನ್ನು ತಲ್ಲಣಗೊಳಿಸುವ, ಆದರೆ ಸಾಂತ್ವನ ಕೊಡದೇ ಥೇಟ್ ಜೀವನದಷ್ಟೇ ನಿರ್ಲಿಪ್ತವಾಗಿರುವ  ಒಳನೋಟಗಳಿವು.

ಇನ್ನು ಜೋಗಿಯವರ ಹೆಚ್ಚಿನ ಕತೆಗಳ ಪ್ರಧಾನ ಪಾತ್ರಗಳು ಯುವಕರು, ಮಧ್ಯವಯಸ್ಕರು. ಕೊಂಚ ಕೀಳರಿಮೆ, ಉಡಾಫೆ, ತಳಮಳಗಳು ಮೇಳೈಸಿದ, ಹೀರೋಯಿಸಂ ತೋರಿಸುವ ಅವಕಾಶಗಳಿದ್ದೂ ಅವನ್ನು ಬಳಸಿಕೊಳ್ಳದ, ಆಪ್ಯಾಯತೆಗೆ ಹಂಬಲಿಸುವ, ಅಷ್ಟೇ ಹೆದರುವ ಪಾತ್ರಗಳು ಈ ನಾಯಕರ ಬದುಕು ಒಂದು ರೀತಿಯ ವೃತ್ತದಂತೆ. ಹೊರಟ ಬಿಂದುವಿಗೇ ವಾಪಸ್ ಬರುತ್ತವೆ. ಅದೇ ಸಮಯ ಅವರ ವ್ಯಕ್ತಿತ್ವದಲ್ಲೊಂದು ಬದಲಾವಣೆಯೂ ಸಂಭವಿಸುತ್ತವೆ. ಆಳವಾದ ನೋವಿನಿಂದ ಮಾತ್ರ ಸಾಧ್ಯವಾಗಬಹುದಾದ, ಮಾನಸಿಕ ವಿಪ್ಲವದಿಂದ ಮಾತ್ರ ಸಂಭವಿಸಬಹುದಾದ, ಶಾಂತಿಯಂತೆ ಕಾಣುವ ಅಶಾಂತಿ ಇಲ್ಲಿನ ಸ್ಥಾಯಿ ಭಾವವೇನೋ ಎಂದು ಕೆಲವೊಮ್ಮೆ ಅನಿಸುತ್ತದೆ. ಜೋಗಿಯವರ ಕತೆಗಳೆಂದರೆ ಕಾದಂಬರಿಗಳ ಮಿನಿಯೇಚರ್‍ನಂತೆ. ‘ಸೀಳುನಾಲಿಗೆ’ಯಂತಹ ಕತೆಗಳು ಪರಿಣಾಮಕಾರಿ ಕಥನ ಶೈಲಿಯಿಂದ, ವಿಹ್ವಲಗೊಳಿಸುವ ಕಥಾ ಹಂದರದಿಂದ ಓದುಗರನ್ನು ಕಂಗಾಲಾಗಿಸುತ್ತೇವೆ.

ಕತೆಗಾರ ಏನಾದರೂ ಸಂದೇಶ ನೀಡಬೇಕೆ ? ತಾತ್ವಿಕವಾಗಿ ಉಪದೇಶ, ಸಾಂತ್ವನ ನೀಡಬೇಕೆ ಎನ್ನುವುದು ಇಲ್ಲಿನ ಪ್ರಶ್ನೆ. ‘ಇಲ್ಲ’ ಎನ್ನುವುದು ಇಲ್ಲಿನ ಕತೆಗಳ ಉತ್ತರವಾಗಿದ್ದಂತಿದೆ. ದಿಢೀರನೆ ನಿಂತುಬಿಟ್ಟಂತೆ ಕಾಣುವ ‘ತವರೂರ ಹಾದಿಯಲ್ಲಿ’ ಕತೆ, ‘ಇರುವುದೆಲ್ಲವ ಬಿಟ್ಟು’ ಕತೆಯಲ್ಲಿನ ಗೊಂದಲ, ‘ಪರ್ಯಾಯ ಕತೆಯಲ್ಲಿನ ಭ್ರಮ ನಿರಸನ… ಇದನ್ನೇ ಹೇಳುವಂತಿದೆ. ಪ್ರೇಮ, ವಿರಹ, ದೈನಂದಿನ ಕ್ಷುದ್ರತೆ, ಮನುಷ್ಯ ಮನಸಿನ ನೀಚತನಗಳು, ವಿಧಿ ಅಚಾನಕ್ಕಾಗಿ ತಂದೊಡ್ಡುವ ಸವಾಲುಗಳು ಹೀಗೆ ಈ ಕತೆಗಳು ವಿಭಿನ್ನವಾಗಿವೆ.

ಜೋಗಿಯವರ ಕತೆಗಳಲ್ಲಿನ ಸ್ತ್ರೀಪಾತ್ರಗಳಲ್ಲಿ ಮಾನಸ ಜೋಶಿಯ ಪಾತ್ರ ಗಮನ ಸೆಳೆಯುತ್ತದೆ. (ಕಥೆ : ಫೇಸ್‍ಬುಕ್ ಡಾಟ್‍ಕಾಮ್, ಮಾನಸ ಜೋಶಿ) ‘ನನ್ನ ವಿದ್ಯಾಭ್ಯಾಸ, ಸಾಮಾಜಿಕ ಸ್ಥಾನಮಾನ, ನನ್ನನ್ನು ಅಸಹಾಯಕಳನ್ನಾಗಿ ಮಾಡುತ್ತ ಬಂದಿದೆಯೇ ?’ ಬಹುಶಃ ತಾವು ಆಧುನಿಕ ಅಂದುಕೊಂಡೇ ಉದ್ಯೋಗ-ವೃತ್ತಿ-ಸಂಸಾರದ ತಿರುಗಣೆಯಲ್ಲಿ ಮ್ಲಾನವಾಗುವ ಎಲ್ಲ ಹೆಣ್ಣು ಮಕ್ಕಳ ದನಿ ಇದು.

ಅಸಂಗತ ಕತೆಗಳು, ವಿಡಂಬನೆಯ ಕತೆಗಳು, ಹಾರರ್ ಕತೆಗಳು, ವಿಶಿಷ್ಟವೂ ವಿಕ್ಷಿಪ್ತವೂ ಆದ ಪ್ರೇಮಕತೆಗಳು, ಕರುಣೆಯ ಕತೆಗಳು.. ಹೀಗೆ ಜೋಗಿಯವರ ಕತೆಗಳು ನೂರೆಂಟು ಭಾವ ಹೊಮ್ಮಿಸುವಂತೆ ಇವೆ ಹಾಗೂ ತಲ್ಲಣಗಳನ್ನು ಹುಟ್ಟಿಸುವ ಶಕ್ತಿ ಹೊಂದಿವೆ.

‍ಲೇಖಕರು Avadhi

6 April, 2021

1 Comment

  1. Girish Rao Hatwar

    Thank you very much.
    ನಿಮ್ಮ ಅಭಿಪ್ರಾಯ ಸಂತೋಷ ಕೊಟ್ಟಿತು. ನೀವು ಓದಿದ್ದಕ್ಕೆ ಥ್ಯಾಂಕ್ಸ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading