ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಕ್ಷ್ಮಿ ಪಾಟೀಲ್ ಅಂಕಣ- ಹೋಳಿ ಹುಣ್ಣಿಮೆಯ ಬಾಲ್ಯದ ದಿನಗಳು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

24

ಮನೆಯೊಳಗೆ ಕಾಲಿಟ್ಟವಳು ನನ್ನ ಮುಖದಲ್ಲಿನ ಬದಲಾದ ಹುಬ್ಬಿನಕಾರ ಕಾಣದಿರುವಂತೆ ಆದಷ್ಟು ತಲೆ ತಗ್ಗಿಸಿ, ಎದುರಿಗೆ ಬಂದವರ ಕಣ್ಣುತಪ್ಪಿಸಿ ಓಡಾಡಲು ಯತ್ನಿಸಿದೆನಾದರೂ ಅನಸೂಯತ್ತಿ ಮತ್ತು ಲತಾ ಚಿಕ್ಕಮ್ಮ ಇವರಿಬ್ಬರ ಕಣ್ಣಿಂದ ತಪ್ಪಿಸಿಕೊಳ್ಳಲಾಗದೆ ಸಿಕ್ಕುಬಿದ್ದೆ. ಅನಸೂಯತ್ತಿ ಅಂದರೆ ಅಶೋಕ ಮಾಮಾನ ಶ್ರೀಮತಿ; ಅನಸೂಯಾ ಬಾದರದಿನ್ನಿ. ಲತಾ ಚಿಕ್ಕಮ್ಮ ನನ್ನವ್ವನ ಎರಡನೇಯ ತಂಗಿ. ಇಬ್ಬರೂ ನನ್ನನ್ನು ನೋಡಿ, “ಏನವತಾರಾ ಇದು? ಸರೂ ಅಕ್ಕಗ ಗೊತ್ತಾದ್ರ ನಮಗ ಬೈತಾಳ. ಮದ್ಲೇ ಅಕ್ಕನ್ನ ಒಂದ ಮಾತು ಕೇಳಬೇಕಿತ್ತು ನೀನು” ಎಂದು ಗದರುತ್ತಿರುವಾಗಲೇ, ನಡುಮನೆಯಲ್ಲಿದ್ದ ನನ್ನ ಮುತ್ತಜ್ಜಿ ನೀಲಮ್ಮ, “ಏನಾತು? ಏನ್ ಮಾಡ್ಕೊಂಡಾಳ?” ಎಂದಾಗ ಇನ್ನು ಮಗೀತು ನನ್ನ ಕತಿ ಎಂದು ಅಂದುಕೊಂಡೆ, ಅನಸೂಯತ್ತಿ, “ಏನಿಲ್ಲೆಳಬೇ. ಚೆಂತನ ಹಂಡಿ ಅವ್ರ ಮನಿಗೆ ಹೋಗಿ ಕುಂದರ್ತಾಳಲ್ಲ ಅದಕ್ಕ ಬೈಯಾಕತ್ತಿದ್ದೆ” ಎಂದೇನೋ ಹೇಳಿ ನನ್ನನ್ನು ಬಚಾವ್ ಮಾಡಿದ್ದಳು ಅವತ್ತಿಗೆ. ಕೆಲ ದಿನಗಳ ಕಾಲ ಮನೆಯಲ್ಲಿ ಎಲ್ಲರೂ ನನ್ನನ್ನು ವಿಚಿತ್ರ ಎಂಬಂತೆ ನೋಡುವವರೇ. ಇದೇ ಸಮಯದಲ್ಲಿ ನಿಂಬಾಳದಿಂದ ಆಯಿ ಬರಬೇಕೆ! ಬಂದಾಗಿನಿಂದ ನನ್ನ ಮುಖವನ್ನು ಆಗಾಗ ಏನನ್ನೋ ಹುಡುಕುವಂತೆ ನೋಡಿದ್ದರು. ಊರಿಗೆ ಮರಳುವ ಮೊದಲು ನನ್ನನ್ನು ಹುಳುಹುಳು ನೋಡುತ್ತಾ, “ಪಪ್ಪಿ, ನಿನ್ನ ಮುಖಾ ಏನೋ ಬ್ಯಾರೇನೇ ಕಾಣಾಕತ್ತೈತಿ, ಯಾಕ?” ಅನ್ನುತ್ತಾ ಸಣ್ಣಗೆ ನಕ್ಕರೋ ನನಗೇ ಹಾಗನ್ನಿಸಿತೋ ಇಂದಿಗೂ ಗೊಂದಲ ನನಗೆ.

ಮತ್ತೆಂದೂ ಐಬ್ರೋ ಶೇಪ್ ಮಾಡಿಸಿಕೊಳ್ಳಲು ಹೋಗಬಾರದು ಎಂದುಕೊಂಡಿದ್ದ ನಾನು, ಈ ಸಲನಾದ್ರೂ ಚೆನ್ನಾಗಿ ಕಾಣಬಹುದು ಎಂದುಕೊಳ್ಳುತ್ತಾ ಮತ್ತೆ ಮತ್ತೆ ಹೋಗಿ ನಂತರ ಅದು ಅಭ್ಯಾಸವಾಯಿತು.

ಇದೇನು ಅಂಥಾ ಮಹತ್ವದ ವಿಷಯ ಅನಿಸದಿರಬಹುದು ಈಗ. ಆದರೆ ಆಗ ಅದು ಹೊಸತು. ಫ್ಯಾಶನ್ ಮಾಡುವ ಹೆಣ್ಣುಮಕ್ಕಳನ್ನು ಬೈಯುತ್ತಿದ್ದ ಕಾಲವದು. ಅಂಥಾ ಫ್ಯಾಶನೇಬಲ್ ಏನು ಅಲ್ಲದ ಮಧ್ಯಮವರ್ಗದ ಕುಟುಂಬ ನಮ್ಮದು. ಮನೆಯ ಹೆಣ್ಣುಮಕ್ಕಳು ಅನೇಕ ಕಟ್ಟಳೆಗಳನ್ನು ಸಹಜವೆಂಬಂತೆ ಸ್ವೀಕರಿಸಿ ಇರುತ್ತಿದ್ದ ಹೊತ್ತಲ್ಲಿ ಹುಬ್ಬು ಕತ್ತರಿಸಿಕೊಂಡು ಬರುವುದೆಂದರೆ ಸಣ್ಣ ಮಾತಲ್ಲ. ಅಲ್ಲಿಯವರೆಗೆ ಯಾವ ಹೆಣ್ಣುಮಕ್ಕಳೂ ಮಾಡದೇ ಇದ್ದುದ್ದನ್ನು ಮಾಡಿ, ಬೈಯಿಸಿಕೊಂಡು, ಕೆಲವರು ಹಿಂದಿನಿಂದ ಆಡಿಕೊಂಡು ನಗುವ ಹಾಗೆ ಆಗಿ ನೋವು ಅನುಭವಿಸಿದ್ದೇನೆ. ಆದರೆ ಅದ್ಯಾವುದೂ ಮಾಡಬಾರದ ಅಸಭ್ಯ ಕೆಲಸಗಳೇನಾಗಿರಲಿಲ್ಲ. ನಮ್ಮ ಮನೆಗಳಿಗೆ ಹೊಸತು ಅಷ್ಟೇ. ಮುಂದೆ ನನ್ನ ಮತ್ತು ನಂತರದ ಜನರೇಶನ್ನಿನ ನಮ್ಮ ಮನೆಯ ಹೆಣ್ಣುಮಕ್ಕಳು ಇತರರಂತೆ ಪಾರ್ಲರ್ ಗೆ ಹೋಗಿಬರುವುದು ಸಹಜವಾಯಿತು. ನಾನು ಮದುವೆಯಾಗಿ ಹತ್ತು ವರ್ಷಗಳ ನಂತರ ನಾಟಕ ಮಾಡಿದಾಗಲೂ ಅಷ್ಟೇ, “ಯಾಕ್ ಬೇಕಿತ್ತು?” ಎಂದೇ ಅನಿಸಿಕೊಂಡವಳು. ಈಗ ಹಾಗೆಂದವರು ಬಲು ಅಪ್ಯಾಯತೆಯಿಂದ ಮಾತನಾಡಿಸುತ್ತಾರೆ. ಕೆಲವರು ಧಾರಾವಾಹಿಗಳಲ್ಲಿ ತಮ್ಮ ಮಕ್ಕಳು ನಟಿಸಬೇಕೆಂದರೆ ಏನು ಮಾಡಬೇಕು ಎಂದು ನನ್ನಲ್ಲಿ ಸಲಹೆ ಕೇಳುತ್ತಾರೆ.

ಒಟ್ಟಿನಲ್ಲಿ ಯಾರೂ ನಡೆಯದ ಹಾದಿಯಲ್ಲಿ ಮೊದಲು ನಡೆಯುವವರಿಗೆ ದಾರಿಗುಂಟ ಕಲ್ಲು ಮುಳ್ಳುಗಳು ನೂರೆಂಟು. ಅಡ್ಡ ಬಂದವುಗಳನ್ನು ನಿವಾರಿಸಿಕೊಳ್ಳುತ್ತಾ, ಚುಚ್ಚಿದ ಮುಳ್ಳುಗಳನ್ನು ಕಿತ್ತು, ಕಲ್ಲುಗಳನ್ನು ಸರಿಸಿ ಇಲ್ಲಾ ದಾಟಿ, ನೋವ ಮರೆಯುತ್ತಾ, ಮುಂದೆ ಸಾಗುತ್ತಾ ಹತ್ತಾರು ಜನ ಹಿಂಬಾಲಿಸುತ್ತ ಆ ದಾರಿ ಹಸನಾಗುತ್ತದೆ. ಆದರೆ ಹೆಚ್ಚು ನೋವುಣ್ಣುವವರು ಮಾತ್ರ ಹೊಸ ಹಾದಿಯಲ್ಲಿ ಮೊದಲು ನಡೆಯುವ ಧೈರ್ಯ ಮಾಡುವವರು.

ಬಿಜಾಪುರದಲ್ಲಿನ ಹೋಳಿ ಹುಣ್ಣಿಮೆಯ ರಂಗೇ ಬೇರೆ. ದೋಟಿಹಾಳದಲ್ಲಿ ಹೋಳಿಹುಣ್ಣಿಮೆ ಅಷ್ಟೇನು ಭರ್ಜರಿ ಮಾಡುತ್ತಿರಲಿಲ್ಲ. ಹೀಗಾಗಿ ಐದಾರು ವರ್ಷಗಳ ನಂತರ ಹೋಳಿಹುಣ್ಣಿಮೆಯ ಬಣ್ಣ ಆಡುವ ಅವಕಾಶ ಎದುರಾಗಿತ್ತು. ತುಂಬಾ ಖುಷಿಯಲ್ಲಿದ್ದೆ. ಇದು ನೆನಪಾಗಲು ಕಾರಣ ಈ ಸಲ ಇದೇ ತಿಂಗಳು ಅಂದರೆ ಮಾರ್ಚ್ ೧೭ಕ್ಕೆ ಹೋಳಿಹುಣ್ಣಿಮೆ ಇದೆ. ಅದರ ಮಾರನೇ ದಿನ ಬೂದಿ ಚೆಲ್ಲುವ ದಿನ, ಐದನೇಯ ದಿನ ರಂಗಪಂಚಮಿ. ಆದ್ರೆ ಇತ್ತೀಚಿನ ಹಲವು ದಶಕಗಳಿಂದ ನಾವು ಪುರುಸೂತ್ತುಗೇಡಿಗಳು ಬೂದಿಚೆಲ್ಲುವ ದಿನವೆ ಅಂದ್ರೆ ಕಾಮದಹನದ ಮರುದಿನವೇ ಬಣ್ಣ ಆಡುವ ಮೂಲಕ ರಂಗಪಂಚಮಿಯನ್ನಾಚರಿಸುತ್ತೇವೆ.

ಹೋಳಿಹುಣ್ಣಿಮೆ ಎಂದ ತಕ್ಷಣ ನನಗೆ ನನ್ನ ಬಾಲ್ಯದ ದಿನಗಳು ರಂಗುರಂಗೀನಾಗಿ ಕಣ್ಮುಂದೆ ಹಲಗಿ ಬಾರಿಸುತ್ತಾ ಕುಣಿಯತೊಡಗಿತ್ತವೆ. ಡಂಕ್ ನಕ್ಕ್ ನಕದಿಕನಕ್ಕ ಡಂಕ ನಕ್ಕ ನಕದಿಕನಕ್ಕ ಡಂಕ್ ನಕ್ಕ ಡಂಕ್ ನಕ್ಕ್ ಡಂಕ್ ನಕ್ಕ್….

 ಸಣ್ಣೋಳಿದ್ದಾಗ ಹೋಳಿಹುಣ್ಣಿಮೆಯ ದಿನಗಳಲ್ಲಿ ನಾನು ನನ್ನ ಸಣ್ಣ ಮಾವಂದಿರ ಬಾಲಂಗೋಸಿ! ಅವರೆಲ್ಲ ಹತ್ತು ಹದಿನೈದು ದಿನ ಮುಂಚೆಯೇ ಕಟಗಿ ಕುಳ್ಳು ಕದಿಯಲು ಪ್ಲಾನ್ ಮಾಡಿಕೊಳ್ಳುತ್ತಾ ಕೆಲಸ ಶುರುವಿಟ್ಟುಕೊಳ್ಳುತ್ತಿದ್ದರು. ಹಲಿಗೆ ಬಾರಿಸುವುದೆಂದರೆ ಆಗ ನನಗದೊಂದು ದೊಡ್ಡ ಆಕರ್ಷಣೆ. ಸಣ್ಣಮಾವ ಉಮೇಶ ನನ್ನ ಕೈಗೆ ತನ್ನ ಹಲಗೆ ಸಿಗದಂತೆ ಅದನ್ನು ಬಚ್ಚಿಡುತ್ತಿದ್ದ. ಅದನ್ನು ಹುಡುಕಿ, ಉದ್ದುದಕೆ ಎದೆಗಾನಿಸಿಕೊಂಡು, ಅದರ ಕಡ್ಡಿಗಳನ್ನು ಎರಡೂ ಕೈಗಳಲ್ಲಿ ಹಿಡಿದು ಡಂಕಣಕ ಬಾರಿಸಿದರೆ ಅದೆಂಥಾ ಖುಷಿಯಾಗುತ್ತಿತ್ತು ಅಂತೀರಿ! ಆಹಾ! ನಾಲ್ಕಾರು ಬಡಿತ ಆಗಿರುತ್ತಿತ್ತೋ ಇಲ್ಲವೋ ಅದರ ಸದ್ದಿಗೆ ಎಲ್ಲಿದ್ದರೂ ಓಡಿಬಂದು ನನ್ನ ಬೆನ್ನಿಗೆ ಗುದ್ದುತ್ತಿದ್ದ ಮಾವ! ಯಮ್ಮಾ ಆಆಆ ಅನ್ನೋ ನನ್ನ ಅರಚುವಿಕೆ ಕೇಳಲಾಗದೆ ನನ್ನಜ್ಜಿ ನನಗೂ ಒಂದು ಹಲಗಿ ತೆಗೆಸಿಕೊಡೋರು. ಆಗ ಮಾವ ನನ್ನನ್ನ ಪುಸಲಾಯಿಸಿ ತನ್ನ ಹಳೆಯ ಹಲಗಿಯನ್ನು ನನಗೆ ಒಗಾಯಿಸಲು ನೋಡುತ್ತಿದ್ದ. ಆಗ ಮತ್ತೆ ನನ್ನ ಸೈರನ್ “ಯಮ್ಮಾಆಆಆಆ ಬೇ, ಉಮಿ ನನ್ನ ಹಲಗಿ ಕಸಗೊಳ್ಳಾಕತ್ಯಾನ…” ‘ಸಾಯಿ ನಿಮ್ಮೌರ ಎಲ್ಲಾಕ್ಕೂ ಯಮ್ಮಾಆಆಆ…’ ಎಂದು ಬೈಯುತ್ತಾ ಅಂವಾ ಕಾಲ್ಕೀಳುತ್ತಿದ್ದ ಅಲ್ಲಿಂದ. ಮನೆಯ ಮೊದಲ ಮೊಮ್ಮಗು ನಾನಾದ್ದರಿಂದ ಅಚ್ಚೆ ಹೆಚ್ಚಾಗಿ ಕೊನೆಯ ಚಿಕ್ಕಮ್ಮನನ್ನು ಮತ್ತು ಸಣ್ಣಮಾವಂದಿರಿಬ್ಬರನ್ನೂ ಹೆಸರಿನಿಂದಲೆ ಕರೆಯುವಷ್ಟು ಸದರ. ಈಗಲೂ ಈ ಇಬ್ಬರೂ ಮಾವಂದಿರನ್ನು ಹೆಸರಿನಿಂದಲೇ ಕರೆಯುತ್ತೇನೆ. ಚಿಕ್ಕಮ್ಮನಿಗೆ ಮಾತ್ರ ವಿನಾಯಿತಿ ದೊರೆತಿದೆ ನನ್ನ ಉದ್ಧಟನದಿಂದ.

ಶಿವರಾತ್ರಿ ಅಮವಾಸ್ಯೆ ಕಳೀತು ಅನ್ನುತ್ತಲೇ ಎಲ್ಲರ ಮನೆಯಲ್ಲೂ ಕುಳ್ಳು ಕಟ್ಟಿಗೆಗೆಗಳನ್ನು ಬಚಾವ್ ಮಾಡಿಕೊಳ್ಳುವ, ಅಡಗಿಸಿಡುವ ಎಚ್ಚರಿಕೆ ಜಾಗೃತವಾಗಿಬಿಡೋದು. ಆದರೇನು ಮನೆಮನೆಯಲ್ಲೂ ಕಾಮನ ಕಳ್ಳರೇ ತುಂಬಿರುತ್ತಿದ್ದರಿಂದ ಹಿರಿಯರು ಅವುಗಳನ್ನು ಅವಿಸಿಡುವುದು, ಈ ಚೋರರು ತಮ್ಮ ಸ್ನೇಹಿತರಿಗೆಲ್ಲ ಅವುಗಳ ಸುಳಿವು ಕೊಟ್ಟು ಮನೆಯವರಿಂದ ಒದೆ ತಿನ್ನೋದು ಸಾಮಾನ್ಯವಾಗಿದ್ದ ದಿನಗಳವು. ಹಗಲು ಬಲು ಸಭ್ಯರಂತೆ, ರಾತ್ರಿ ಕಳ್ಳತನ ಮಾಡಿದ್ದು ತಾವಲ್ಲವೇ ಅಲ್ಲ ಅನ್ನುವಂತೆ ಇದೇ ಮಕ್ಕಳು ಮನೆಮನೆಗೆ ಹೋಗಿ ೫-೫ ಇಲ್ಲಾ ೧೧-೧೧ ಕುಳ್ಳುಕಟ್ಟಿಗೆಗಳನ್ನು ಕಾಡಿ ಬೇಡಿ ವಸೂಲಿ ಮಾಡಲು ಬಂದಾಗ, ತಾವೀಗ ಕೊಟ್ಟರೂ ರಾತ್ರಿಯ ಕಳ್ಳತನ ತಪ್ಪಿದ್ದಲ್ಲ ಎಂದು ಗೊತ್ತಿದ್ದೂ ಎಲ್ಲ ಮನೆಯವರೂ ಕೊಡುತ್ತಿದ್ದರು. ಕೊಡದೆ ಬೈದು ಅಟ್ಟುವ ಮನೆಗಳ ಮುಂದೆ ಈ ಟೋಳಿಯ ಹೊಯ್ಕೊಳ್ಳುವಿಕೆ, ಹಲ್ಕಟ್ ಮಾತುಗಳ ಸುರಿಮಳೆ, ಹಲಗಿ ಬಾರಿಸುವಿಕೆ ಇನ್ನೂ ಜೋರಾಗುತ್ತಿತ್ತು. ಅಷ್ಟೇ ಅಲ್ಲ, ಈ ಗುಂಪು ಅಥವಾ ಟೋಳಿಯಲ್ಲಿ ಒಬ್ಬ ಹುಡುಗ ಹೆಣವಾಗುತ್ತಿದ್ದ, ಇನ್ನೊಬ್ಬ ಹುಡುಗ ಸೀರೆ ಉಟ್ಕೊಂಡು ಹೆಣ್ಣಾಗಿರುತ್ತಿದ್ದ (ರತಿ-ಮನ್ಮಥ).

ಆ ಹೆಣ ಕಟ್ಟಿಗೆ ಕೊಡದವರ ಮನೆಯ ಗೇಟನ್ನು ತೆರೆದುಕೊಂಡು ಅಂಗಳಕ್ಕೆ ಹೋಗಿ ಲಕ್ಷಣವಾಗಿ ಕಾಲು ಮಡಚಿಕೊಂಡು  ಆ ಮನೆಯ ಕಟ್ಟೆಯ ಮೇಲೆ ಮಲಗುತ್ತಿತ್ತು. ಸೀರೆ ಉಟ್ಟುಕೊಂಡ ಹುಡುಗ ಹಾಡ್ಯಾಡಿಕೊಂಡು ಅಳುತ್ತಾ, ಸತ್ತ ಗಂಡನನ್ನು ವರ್ಣಿಸುತ್ತಾ ಆ ಮನೆಯವರನ್ನ ಆಡಿಕೊಳ್ಳುತ್ತಾ, ಹೊಯ್ಕೊಳ್ತಾ (ಕೋರಸ್ ಥರಾ ಜೊತೆಗೆ ಬಂದ ಹುಡುಗರೂ ಹಲ್ಲುಕಿಸೀತಾ ಹೊಯ್ಕೊಳ್ಳೋರು) ಗೋಳಾಡುವುದನ್ನು ನೋಡಲಾಗದೆ  ಕೀಸರಬ್ಯಾಸರಾಗಿಯಾದರೂ ಆ ಮನೆಯವರು ಹಾಳಾಗಿಹೋಗಿ ಎಂದು ಕನಿಷ್ಟ ೫-೫ ಕುಳ್ಳುಕಟ್ಟಿಗೆ ಕೊಟ್ಟು ಕಳಿಸಬೇಕು. ಗೇಟು ತೆಗೆಯದವರ ಮನೆಯ ಮುಂದೆ ಕಲ್ಲು ಮಣ್ಣಿನ ನೆಲದಲ್ಲೂ ಮಲಗಲು ಹಿಂದೆಮುಂದೆ ನೋಡುತ್ತಿರಲಿಲ್ಲ ಈ ಹುಡುಗರು.

ಈ ಎಲ್ಲ ಆಟಕ್ಕೆ ಬಗ್ಗದ ಹಿರಿಯರೂ ಇದ್ದರು. ಅವರೆಲ್ಲ ಇವರ ಯಾವ ಸರ್ಕಸ್ಸಿಗೂ ಜಗ್ಗದೆ ಬಗ್ಗದೆ ಮನೆಯ ಅಗುಳಿ ಜಡಿದುಕೊಂಡು ತಾವು ಮನೆಯಲ್ಲಿಲ್ಲ ಎನ್ನುವಂತೆ ಗಪ್ಚುಪ್ ಇದ್ದುಬಿಡುತ್ತಿದ್ದರು. ಅಂಥವರಿಗಾಗಿ ಹೊರಗೆ ಕಾದೂ ಕಾದೂ ಬಸವಳಿದು, ಅವರಿಗೆ ಸಹರ್ಸ ನಾಮಾರ್ಚನೆ ಮಾಡುತ್ತಾ ಮುಂದಿನ ಮನೆಗೆ ಸಾಗುತ್ತಿದ್ದರು. ಮಜಾ ಅನಿಸೋದು ಅಂದ್ರೆ ಅಷ್ಟೆಲ್ಲ ಹಲ್ಕಟ್ ಮಾತುಗಳನ್ನು ಬಾಯಿಪಾಠ ಮಾಡಿದವರಂತೆ ಒದರುವ ಇದೇ ಹುಡುಗರು ತಮ್ಮ ತಮ್ಮ ಮನೆಯ ಸಾಲು ಬಂದ ತಕ್ಷಣ ಬಲು ಸಭ್ಯರಂತೆ ಸೈಲಂಟ್ ಆಗಿ ಬರೀ ಹಲಗಿ ಬಾರಿಸುತ್ತಾ ಕುಣಿಯೋರು. ಅದನ್ನು ಕಂಡು ಸಧ್ಯ ತಮ್ಮ ಮಗ ಹಾಳಾಗಿಲ್ಲ ಉಡಾಳ ಹುಡುಗರ ಜೊತೆ ಸೇರಿ ಅನ್ನೊ ಸಮಾಧಾನ ಅಮ್ಮಂದಿರದಾದರೆ ಅಪ್ಪಂದಿರು ಮನಸಲ್ಲೇ ಮಕ್ಕಳ ಸೋಗನ್ನು ಕಂಡು ನಗುತ್ತಿದ್ದರೋ ಏನೋ. ಅವರೂ ಇದನ್ನೆಲ್ಲ ಮಾಡಿಯೇ ಅಲ್ವಾ ದೊಡ್ಡೋರಾಗಿದ್ದು!

ಕಟ್ಟಿಗೆ ಕುಳ್ಳು ಬಚಾವು ಮಾಡಿಕೊಂಡೆವು ಎಂದು ದೊಡ್ಡವರು ನೆಮ್ಮದಿಯಿಂದ ಇರುವಾಗಲೇ ಈ ಕಳ್ಳಕಾಕರ ಗುಂಪು ಅವರ ಮನೆಯ ಬಿದರಿನ ಗೇಟನ್ನೋ, ಕೊಡ್ಡನ್ನೋ (ಕೊರಡು), ಕಂಪೌಂಡನ್ನೋ (ಆಗೆಲ್ಲ ಕೆಲವರು ಸಿಮೆಂಟಿನ ಕಂಪೌಂಡ್ ಬದಲಾಗಿ ಮನೆಯ ಸುತ್ತ ಕಟ್ಟಿಗೆ ನೆಟ್ಟು, ಮುಳ್ಳುತಂತಿಯ ಬೇಲಿ ಹಾಕಿಕೊಂಡಿರುತ್ತಿದ್ದರು), ಇಲ್ಲಾ ರೊಟ್ಟಿ ಮಾಡಿದ ಮೇಲೆ ಹಿತ್ತಲಲ್ಲಿ ನೆನಸಿಟ್ಟ ರೊಟ್ಟಿ ಕೊಮ್ಮಣ್ಗಿಯನ್ನೋ ಲಪಟಾಯಿಸಿ ಅದನ್ನು ಹುಣ್ಣಿಮೆಯವರೆಗೆ ಅಡಗಿಸಿಟ್ಟು, ಹುಡುಕಿಕೊಂಡು ಬಂದವರೆದುರು ಕದ್ದವರು ತಾವಲ್ಲವೇ ಅಲ್ಲ, ರೆಂಟ್ ಕಾಲನಿಯ (ಬಿಜಾಪುರದ ಕೆ.ಎಚ್.ಬಿ ಕಾಲನಿಯಲ್ಲಿ ನಮ್ಮ ಮನೆ. ಅದರ ಪಕ್ಕದಲ್ಲಿರೋದೇ ರೆಂಟ್ ಕಾಲನಿ) ಹುಡುಗರಿರಬೇಕೆಂದು ಸಾಧಿಸಿ ಸುಭಗರಂತಾಡಿ ಕಾಮನನ್ನು ಸುಡುವಾಗ ಅವೆಲ್ಲವನ್ನೂ ಕುಳ್ಳುಕಟ್ಟಿಗೆಯೊಳಗಡಗಿಸಿ ಇಷ್ಟೆತ್ತರ ಪೇರಿಸಿ ಗೋಪುರ ಮಾಡಿ, ಕಾಮದೇವನ ಪಟ ರಚಿಸಿ, ಪೂಜೆ ಮಾಡಿ ಸುಡೋರು. ಕಾಮಣ್ಣನನ್ನು ಸುಡಲು ಬೆಳಗಿನಿಂದಲೇ ಅಂಗಣ ಸಿದ್ಧಗೊಳ್ಳುತ್ತಿತ್ತು.

ಆಟದ ಮೈದಾನವಾಗಿದ್ದ ಆ ಜಾಗವನ್ನು ಗುಡಿಸಿ, ನೀರು ಹೊಡೆದು ಸುತ್ತಲೂ ಕಟ್ಟಿಗೆ ಊರಿ ಅವುಗಳಿಗೆ ಪರಪರಿಯ ದಾರ ಕಟ್ಟಿ ಸಿಂಗಾರ ಮಾಡುತ್ತಿದ್ದರು. ಮನೆಯಲ್ಲಿ ಹಿಟ್ಟಿನ ಸೆರೆ ಮಾಡಿಸಿಕೊಂಡು ಬಂದು ಬಣ್ಣ ಬಣ್ಣದ ತ್ರಿಕೋನಾಕಾರದ ಪರಪರಿಯ ಹಾಳೆಗಳನ್ನು ಕತ್ತರಿಸಿಕೊಂಡು ಅವುಗಳನ್ನ ಸಾಲಾಗಿ ಒಂದಂತರದಲ್ಲಿ ದಾರಕ್ಕೆ ಅಂಟಿಸುವ ಕೆಲಸವೂ ಹುಡುಗರದ್ದೇ. ಈಗಿನಂತೆ ಆಗೆಲ್ಲ ರೆಡಿಮೇಡ್ ಸಿಗುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಎಲ್ಲರ ಮನೆಯಲ್ಲೂ ನೈವೇದ್ಯದ ಸಿದ್ಧತೆ. ಮನೆಯಲ್ಲಿ ಮಾಡಿದ ನೈವೇದ್ಯಗಳನ್ನು ಆ ಕಟ್ಟಿಗೆಯ ರಾಶಿಯ ಸುತ್ತಲೂ ಇರಿಸಿ, ಕಾಮಣ್ಣನನ್ನು ಪೂಜಿಸಿ ಬೆಂಕಿ ಇಡಲಾಗುತ್ತಿತ್ತು. ಅದರಲ್ಲೂ ಯಾರ ಓಣಿಯ ಬೆಂಕಿ ಎಷ್ಟೆತ್ತರಕ್ಕೇರಿತ್ತು ಅನ್ನೊ ಕಾಂಪಿಟೇಶನ್! ಆಗ ನೋಡಿ ಗೇಟಿಗೇ ಗೇಟನ್ನೇ ಕದ್ದವರು ನಮ್ಮವರಾ ಇಲ್ಲಾ ಪಕ್ಕದ ಓಣಿಯವರಾ ಅನ್ನೋದು ಗೊತ್ತಾಗ್ತಿದ್ದುದು. ಕಿಚ್ಚಿನ ಎದುರು ತಮ್ಮ ಪೌರುಷವನ್ನು ಮೆರೆಯುತ್ತಾ ನಗುವ ಹುಡುಗರೇ ಆ ಮೂಲಕ ಗೊತ್ತುಮಾಡಿಕೊಡುತ್ತಿದ್ದರು.

ಕಾಮಣ್ಣನನ್ನು ಸುಡುವ ದಿನದವರೆಗೂ ಮಕ್ಕಳು ಹೊಯ್ಕೊಂಡರೆ ಏನೂ ಅನ್ನದ ಮನೆಯ ಹಿರಿಯರು, ತಾವೂ ಸುಡುವ ಜಾಗಕ್ಕೆ ಬಂದು, ಅರ್ಧ ಸಂಕೋಚ, ಅರ್ಧ ನಾಚಿಕೆಯಿಂದ ಬಾಯಿಗೆ ಕೈಹಚ್ಚಿ ಹೊಯ್ಕೊಳ್ಳುವ ಶಾಸ್ತ್ರ ಮಾಡಿ ಮುಂದಿನ ದಿನಗಳು ಸುಖಕರವಾಗಿರಲಿ ಹೊಯ್ಕೊಳ್ಳುವ ಪ್ರಸಂಗ ಬಾರದಿರಲಿ ಎಂದು ಆಶಿಸುತ್ತಿದ್ದರು. ಅವತ್ತೇ ಲಾಸ್ಟ್ ಮುಂದಿನ ಹೋಳಿ ಹುಣ್ಣಿಮೆಯವರೆಗೂ ಯಾರೂ ಬಾಯಿಗೆ ಕೈಹಚ್ಚುವಂತಿಲ್ಲ. ಅಕಸ್ಮಾತ್ ಬೇರೆ ದಿನಗಳಲ್ಲಿ ಯಾರ ಮನೆಯಲ್ಲಿಯಲ್ಲಾದ್ರೂ ಹಾಗೆ  ಹೊಯ್ಕೊಳ್ಳುವ ಸದ್ದು ಕೇಳಿತೋ ಆ ಮನೆಯಲ್ಲಿ ಏನೋ ಅನಾಹುತ ಘಟಿಸಿದೆ ಅಂತಲೇ ಅರ್ಥ. ಹಾಗಿಲ್ಲದೆ ಮಕ್ಕಳು ಮೋಜಿಗೆ ಬಾಯಿಗೆ ಕೈ ಹಚ್ಚಿದರೂ ಅದು ಅಪಶಕುನ ಎಂದು ಭಾವಿಸಲಾಗುತ್ತೆ ಮತ್ತು ಆ ಮಕ್ಕಳಿಗೆ ಒದೆ ಗ್ಯಾರಂಟಿ!

ಹೊಯ್ಕೊಂಡ ಬಾಯಿಗೆ ಹೋಳಗಿ ತುಪ್ಪ!

ಕಾಮಣ್ಣನನ್ನು ಸುಟ್ಟ ಮರುದಿನ ಅದೇ ಕಿಚ್ಚನ್ನು ತಂದು ತಮ್ಮನೆಯ ಒಲೆಯನ್ನು ಉರಿಯುವುದು ನಮ್ಮಲ್ಲಿನ ವಾಡಿಕೆ. ಅದೆಷ್ಟು ಕಟ್ಟಿಗೆ ಜಮಾ ಆಗಿರುತ್ತಿತ್ತು ಅಂದರೆ ರಾತ್ರಿ ಹನ್ನೊಂದು ಹನ್ನೊಂದೂವರೆಗೆಲ್ಲ ಉರಿಯತೊಡಗಿದ ಕಾಮಣ್ಣನ ಕಿಚ್ಚು ಮಾರನೇಯ ದಿನ ಹಗಲು ಹತ್ತಾದರೂ ನಿಗಿನಿಗಿ ಅನ್ನುವಷ್ಟು. ಆದರೆ ಅಷ್ಟರೊಳಗೆ ಎಲ್ಲರೂ ನಸುಕಿನಲ್ಲೇ ಬಂದೂ ಬಂದೂ ಕಿಚ್ಚನ್ನು ತಮ್ಮ ಮನೆಗೆ ಒಯ್ಯುತ್ತಿದ್ದರಾದ್ದರಿಂದ ಬೆಳಗಿನ ಎಂಟರ ವೇಳೆಗೆ ಅಲ್ಲಿ ಬೆಚ್ಚನೆಯ ಬೂದಿ ಮಾತ್ರ ಉಳಿದಿರೋದು.

ಈ ಮಾರನೇಯ ದಿನವನ್ನು ಬೂದಿ ಚೆಲ್ಲುವ ದಿನ ಅಂತಾರೆ. ಅಂದು ಮನೆಮನೆಯಲ್ಲೂ ಹೋಳಿಗೆ ಊಟ. ಹೊಯ್ಕೊಂಡ ಬಾಯಿಗೆ ಹೋಳ್ಗಿ ತುಪ್ಪಾ ಅನ್ನೊ ಆದರ. ಯಾವುದೇ ಶುಭಕಾರ್ಯಕ್ಕೂ ಪ್ರಶ್ಯಸ್ತವಾದ ದಿನವದು. ಶಿವರಾತ್ರಿ ಕಳೆದ ಮೇಲೆ ಹೋಳಿಹುಣ್ಣಿಮೆ ಆಗುವವರೆಗೂ ಉತ್ತರ ಕರ್ನಾಟಕದಲ್ಲಿ ಯಾವುದೇ ಶುಭಸಮಾರಂಭಗಳು ನಡೆಯುವುದಿಲ್ಲ. ಬೂದಿ ಚೆಲ್ಲುವ ದಿನದಿಂದ ಮೊದಲ್ಗೊಂಡು ಮತ್ತೆ ಸಮಾರಂಭಗಳ ಸಡಗರ ಶುರುವಾಗುತ್ತದೆ.

ಮೊದಲೆಲ್ಲ ರಂಗಪಂಚಮಿ ದಿನದಂದೇ ಬಣ್ಣ ಆಡುತ್ತಿದ್ದರಂತೆ. ನಾನು ಬಣ್ಣ ಆಡುವ ವೇಳೆಗಾಗಲೆ ಅದು ಬೂದಿಚೆಲ್ಲುವ ದಿನಕ್ಕೆ ಬಂದು ನಿಂತಿತ್ತು ಮತ್ತು ರಂಗಪಂಚಮಿಯ ದಿನ ಶಾಸ್ತ್ರಕ್ಕೆನ್ನುವಂತೆ ಗುಲಾಲ್ ಕೆಲವರ ಹಣೆ ಮತ್ತು ಕೆನ್ನೆಗಳನ್ನಲಂಕರಿಸುತ್ತಿತ್ತು. ಬಣ್ಣ ಆಡೋದು ಅಂದ್ರೆ ಈಗಿನಂತೆ ಪ್ಲಾಸ್ಟಿಕ್ ಕವರಿನಲ್ಲಿ ಬಣ್ಣದ ನೀರನ್ನು ತುಂಬಿಸಿ ಬೀಸಿ ಎಸೆದು ನೋಯಿಸುವುದಾಗಿರಲಿಲ್ಲ ಆಗ. ಆಗೇನಿದ್ದರೂ ಓಣಿ ಓಣಿಗಳಲ್ಲೂ ಗುಲಾಬಿ, ಹಸಿರು, ಜಾಂಬಳಿ, ಕೆಂಪು ಹಳದಿ ಬಣ್ಣಗಳನ್ನು ತುಂಬಿಸಿದ ಡ್ರಮ್ಮುಗಳ ಸಾಲು.

ನಮ್ಮಂಥಾ ಚಿಲ್ಟುಗಳನ್ನು ಸೀದಾ ಅದರಲ್ಲಿ ಮುಳುಗೇಳಿಸಿ ಮನೆಗೆ ಕಳಿಸುತ್ತಿದ್ದರು ದೊಡ್ಡ ಹುಡುಗರು. ಅಲ್ಲೂ ತಮ್ಮ ಮನೆಯ ಪುಟ್ಟ ಮಕ್ಕಳನ್ನು ಅದರಿಂದ ಬಚಾವು ಮಾಡುವ ಕಾಳಜಿ ಹುಡುಗರಿಗೆ. ಬಣ್ಣದ ದಿನ ನಾವೆಲ್ಲ ಹುಡುಗಿಯರು ಹಳೆಯ ಪೆಟ್ಟಿಕೋಟ್ ಮೇಲೆ ಇರುತ್ತಿದ್ದೆವು, ಹುಡುಗರು ಗಂಟಿನಲ್ಲಿರುವ ಹಳೆಯ ಅಂಗಿ ಚೊಣ್ಣ ಪ್ಯಾಂಟುಗಳನ್ನು ಹಿರಿದೆಳೆದುಕೊಂಡು ಹಾಕಿಕೊಳ್ಳುತ್ತಿದ್ದರು. ಈಗಿನಂತೆ ಅಥವಾ ಸಿನಿಮಾದಲ್ಲಿ ತೋರಿಸುವಂತೆ ಹೊಚ್ಚಹೊಸ ಬಿಳಿ ಬಿಳಿ ಬಟ್ಟೆಗಳನ್ನು ಒಂದು ದಿನಕ್ಕೆಲ್ಲ ಹಾಕಿಕೊಂಡು ಕಳಚಿ ಎಸೆಯಲು ನಮಗೇನು ಹುಚ್ಚಾ? ಆದ್ರೆ ಆಗಲೂ ಈಗಲೂ ಪುಟ್ಟಹುಡುಗಿಯ ಪೆಟ್ಟಿಕೋಟ್ಸ್ ಮಾತ್ರ ಬಿಳಿಬಿಳಿಯೆ.

ಒಮ್ಮೆಯಂತೂ ನನ್ನ ಮಾವಂದಿರೇ ನನ್ನನ್ನ ಕುಳ್ಳರಿಸಿ ಲಕ್ಷಣವಾಗಿ ವಾರ್ನಿಸಿನಿಂದ ನನ್ನ ಮುಖಕ್ಕೆ ಮೀಸೆ ದಾಡಿ ಬರೆದು ನಡುವೆ ಬಣ್ಣಗಳಿಂದ ಉಳಿದ ಮುಖವನ್ನು ತುಂಬಿಸಿ ಮನೆಯೊಳಗೆ ಬಿಟ್ಟಾಗ ನನ್ನಜ್ಜಿಯ ಗದರಿಕೆ ‘ನಿಮ್ಮಾರ್ಯಾಗರ ತಂದು! ಏನದು ಹೆಣ್ಣುಹುಡುಗೀಗೆ ಹಿಂಗ ಮಾಡೀರಿ. ಪಾಪ ಎಳೇ ಚರ್ಮ. ಏನರ ಆತಂದ್ರ ಗತಿ ಏನು?!” ಎನ್ನುತ್ತಾ ಕೊಬ್ಬರಿಯೆಣ್ಣೆಯಿಂದ ನನ್ನ ಮುಖ ಕ್ಲೀನ್ ಮಾಡುವಂತೆ ಅನಸೂಯತ್ತಿಗೆ ಹೇಳಿ ಸ್ವಚ್ಛ ಮಾಡಿಸಿದ್ದರು. ಬಣ್ಣ ಸೋರಿಸಿಕೊಂಡು ಮನೆತುಂಬಾ ಓಡಾಡುವ ನಮ್ಮನ್ನು ‘ನಿಮ್ಮ ಹೆಣಾ ಎತ್ಲಿ. ಏನ್ ಆಡ್ಕೋತೀರಿ ಮನಿ ಹೊರಗs ಆಡ್ಕೋರಿ. ಎಷ್ಟ ಸಲಾ ಅಂತ ನೆಲಾ ವರಸ್ಲಿ ನಾ! ಇನ್ನೊಮ್ಮೆ ಮನ್ಯಾಗ ಕಾಲಿಟ್ರ ಒಬ್ಬೊಬ್ರ ಕಾಲ್ ಮುರೀತೀನಿ’ ಎಂದು ಲತಾ ಚಿಕ್ಕಮ್ಮ ಬಯ್ಯದೆ ಹೋದರೆ ಬಣ್ಣ ಆಡಿದ ಖುಷಿ ಕಂಪ್ಲೀಟ್ ಆಗ್ತಾನೇ ಇರ್ಲಿಲ್ಲ, ಮತ್ತಾಕೆ ಯಾವತ್ತೂ ನಮ್ಮನ್ನ ಈ ವಿಷಯದಲ್ಲಿ ನಿರಾಸೆಗೊಳಿಸಲಿಲ್ಲ!

ಬಣ್ಣ ಆಡೋದು ಕೇವಲ ಅವರವರ ಓಣಿಗಷ್ಟೇ ಸೀಮಿತವಾಗಿರಲಿಲ್ಲ. ಈ ಓಣಿಯ ಟೋಳಿ ಆ ಓಣಿಗೆ ಹೋಗಿ ಅಲ್ಲಿಯವರಿಗೆ ಬಣ್ಣ ಎರಚಿ ಅವರಿಂದ ಬಣ್ಣ ಎರಚಿಸಿಕೊಳ್ಳದೇ ಓಡಿ ಬರುವುದೂ, ಅಕಸ್ಮಾತ್ ಇನ್ನೊಂದು ಓಣಿಯವರು ಯಾರಾದರೂ ಪಾಪದವರು ಕೈಗೆ ಸಿಕ್ಕರೆ ಅವರನ್ನು ಬಣ್ಣಗಳಿಂದ ಅಂದಗೊಳಿಸಿ ಕಳಿಸುವುದೂ ಒಂದು ಮೋಜು. ಅದಕ್ಕೆ ಪ್ರತಿಕಾರ ತೆಗೆದುಕೊಳ್ಳಲು ಎದುರಿನವರೂ ಸಜ್ಜಾಗೇ ಇರುತ್ತಿದ್ದರು. ಸಂಜೆ ನಾಲ್ಕರ ಹೊತ್ತಿಗೆ ಮನೆಗೆ ಮರಳಿ ಉಜ್ಜಿ ಉಜ್ಜಿ ತೊಳೆದುಕೊಂಡರೂ ಹೋಗದೆ ಕಿವಿ, ಕತ್ತು, ಕಣ್ಣ ಕೊನೆ, ಅಂಗೈ, ಕಾಲು, ಬೆನ್ನು ಎನ್ನುತ್ತಾ ಸಂದುಗಳಲ್ಲಿ ಅಲ್ಲಲ್ಲಿ ಉಳಿದೇಬಿಡುವ ಬಣ್ಣ ಸಂಪೂರ್ಣ ಹೋಗಲು ವಾರವೇ ಬೇಕಾಗೋದು.

ಬಸುರಿಯಾಗಿದ್ದಾಗ ನಾನು ಆಡಿದ ಬಣ್ಣವೇ ನಾನಾಡಿದ ಕೊನೆಯ ಅದ್ದೂರಿಯ ಬಣ್ಣ… ಡಾಕ್ಟ್ರು ನನಗೆ ಕಟ್ಟುನಿಟ್ಟಿನ ಬೆಡ್‍ರೆಸ್ಟ್ ಹೇಳಿದ್ದನ್ನೂ ಕಡೆಗಣಿಸಿ ಗುಡ್ಡದಂಥಾ ಹೊಟ್ಟೆಯನ್ನು ಹೊತ್ತುಕೊಂಡೇ ಓಣಿ ತಿರುಗಿ ಬಣ್ಣ ಆಡಿದ್ದೆ. ನಂತರದ ದಿನಗಳಲ್ಲಿ ಬೇರೆಯವರು ಬಣ್ಣ ಆಡುವುದನ್ನು ನೋಡುತ್ತಾ ಸಂತಸಪಡುತ್ತಿದ್ದೇನೆ. ಈಗ ಪ್ರತೀ ಹೋಳಿಹುಣ್ಣಿಮೆಯಂದು ಮತ್ತೆ ಮತ್ತೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ, ನನ್ನ ಹಳಬರಂತೆ ನಾನೂ ”ಏನೇ ಅನ್ರಿ, ಆಗಿನ ದಿನಗೋಳ ಮಾಜಾನ ಬ್ಯಾರೆ’ ಅನ್ನುತ್ತಾ, ಹೊಯ್ಕೊಳ್ಳೋದು ಅಂದ್ರೆ ಅಸಹ್ಯ ಎಂದು ಭಾವಿಸುವ ಸೊ ಕಾಲ್ಡ್ ಸಫೋಸ್ಟಿಕೇಟೆಡ್ ಮನೆಯ ಜನರಿಗಾಗಿ ಹೋಳಿಗೆಯ ತಯಾರಿಯಲ್ಲಿ ತೊಡಗುತ್ತೇನೆ, ಅವರಿಗೆ ಗೊತ್ತಾಗದಂತೆ ಸಣ್ಣದಾಗಿ ಬಾಯಿಗೆ ಕೈಹಚ್ಚಿ ಹೊಯ್ಕೊಂಡು, ಹೊಯ್ಕೊಳ್ಳುವ ಪ್ರಸಂಗಗಳು ವರ್ಷವಿಡೀ ಯಾವತ್ತೂ ಬರದಿರಲಿ ಎಂದು ಕಾಮನನ್ನು ಪ್ರಾರ್ಥಿಸುತ್ತೇನೆ.

ಅರೆರೇ! ಪಿಯೂಸಿಯಲ್ಲಿದ್ದವಳು ಹೋಳಿ ಹುಣ್ಣಿಮೆಯ ಸಡಗರ ಹೇಳ್ತಾ ಹೇಳ್ತಾ ಸೀದಾ ವರ್ತಮಾನಕ್ಕೆ ಬಂದುಬಿಟ್ಟೆ ನಾನು! ಇರಲಿ, ಮುಂದಿನ ವಾರ ಮತ್ತೆ ನನ್ನ ಕಾಲೇಜು ದಿನಗಳಿಗೆ ಮರಳುವೆ ನಾನು. ಹೋಳಿಹುಣ್ಣಿಮೆಯ ಶುಭಾಶಯಗಳು ನಿಮಗೆಲ್ಲ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

14 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading