ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಕ್ಷ್ಮಿ ಪಾಟೀಲ್ ಅಂಕಣ – ಸತ್ಯಭಾಮಾರ ಸುಂದರ ಕಣ್ಣುಗಳಲ್ಲಿನ ಕನಸುಗಳೂ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

48

ನಾನು ದೇವಸ್ಥಾನಗಳಿಗೆ ಹೋಗುವುದು ತುಂಬಾ ಕಮ್ಮಿ. ಆದರೆ ಜನಜಂಗುಳಿ ಇಲ್ಲದಾಗಿನ ಅಲ್ಲಿನ ಪ್ರಶಾಂತತೆ, ಗರ್ಭ ಗುಡಿಯಲ್ಲಿನ ಎಣ್ಣೆ ದೀಪದ ಮಂದ ಬೆಳಕು ಇಷ್ಟ ನನಗೆ. ಒಂದು ಚೆಂದದ ನೆಮ್ಮದಿಯ ಭಾವ. ದೇವಸ್ಥಾನಕ್ಕೆ ಹೋಗದಿದ್ದಲ್ಲಿ ಹಾಗಾಗುತ್ತದೆ ಹೀಗಾಗುತ್ತದೆ ಎನ್ನುವುದರಲ್ಲಿ ನಂಬಿಕೆ ಇಲ್ಲ ನನಗೆ. ಲೋಣಿಗೆ ಬಂದ ಮೇಲೆಯೇ ಶಿರ್ಡಿ ಸಾಯಿಬಾಬಾರ ಜೀವನ ಚರಿತ್ರೆ ತಿಳಿದಿದ್ದು ಮತ್ತು ನಾನವರನ್ನು ಆರಾಧಿಸತೊಡಗಿದ್ದು. ಸಹಬಾಳ್ವೆಗೆ ಅವರೊಂದು ನಿದರ್ಶನದಂತೆ ಕಾಣುತ್ತಾರೆ ನನಗೆ ಸದಾ. ಅನೇಕ ಅಧೈರ್ಯದ ಸಮಯಗಳಲ್ಲಿ ನನ್ನೊಳಗಿನ ನಂಬಿಕೆಯಾಗಿ, ನನ್ನ ಧೈರ್ಯವಾಗಿ ಅವರನ್ನು ಪರಿಗಣಿಸುತ್ತೇನೆ. ಆದರೆ ಹಾಗಂತ ಇಲ್ಲಿಯವರೆಗೆ ಬಾಬಾ ಹೆಸರಲ್ಲಿ ಉಪವಾಸವನ್ನಾಗಲಿ, ಯಾವುದೇ ವ್ರತವನ್ನಾಗಲಿ ಕೈಗೊಂಡಿಲ್ಲ. ನಂಬುತ್ತೇನೆ ಅವರನ್ನು ಪಾಲಿಸುತ್ತೇನೆ ಅಷ್ಟೇ. ನನಗೆ ಯಾವುದೇ ದೇವರುಗಳ ಬಗ್ಗೆ ಅಸಡ್ಡೆ ಇಲ್ಲ ಮತ್ತು ಮೂಢನಂಬಿಕೆ ಮಟ್ಟದ ಭಕ್ತಿಯೂ ಇಲ್ಲ! ಇಂಥ ನನಗೆ ಅಂಬಾಭವಾನಿಯ ಮೂರ್ತಿ ಪ್ರತಿಷ್ಠಾಪನೆಯ ಸಮಯದಲ್ಲಿ ಪೂಜೆ ಮಾಡುವ ಅವಕಾಶವೊಂದು ಬಂದಿತ್ತು.

ಲೋಣಿಯ PMT ಜಾಗದಲ್ಲಿದ್ದ ಅಂಬಾಭವಾನಿಯ ದೇವಸ್ಥಾನವೊಂದನ್ನು ವಿಕೆ ಪಾಟೀಲರ ಇಚ್ಛೆಯ ಮೇರೆಗೆ ನನ್ನ ಪತಿ ಆ ಕಟ್ಟಡದ ಇಂಜಿನಿಯರ್ ಆಗಿದ್ದರ‌ ಗೌರವಾರ್ಥ ನಾವು ದಂಪತಿ ಪ್ರತಿಷ್ಠಾಪನೆಯ ಪೂಜೆಯನ್ನು ನೆರವೇರಿಸಬೇಕು ಎಂದಿದ್ದರು. ಹಾಗಾಗಿ ಅಂದು ನಾವು ದೇವಸ್ಥಾನದ ಪೂಜಾರಿಗಳ ನಿರ್ದೇಶನದಲ್ಲಿ ಪೂಜೆ ಮಾಡಿದ್ದೆವು. ಆಗ ಮನೆಗೆಲಸ, ಮಕ್ಕಳ ಆರೈಕೆಯಲ್ಲಿ ನಾನು ಅಶಕ್ತಳಾಗಿದ್ದೆನಾದ್ದರಿಂದ ಬಿಂದಿಗೆ ಬಿಂದಿಗೆ ನೀರು ಎತ್ತಿ ಸುರಿಯುವುದರಲ್ಲಿ ಸುಸ್ತಾಗಿ ಹೋಗಿದ್ದೆ. ನಂತರದಲ್ಲಿ ದೇವಿಗೆ ಸೀರೆ ಉಡಿಸಿ ಅಲಂಕಾರ ಮಾಡಬೇಕು. ಉಳಿದ ವಿಧಿಗಳಿಗಿಂತ ನನಗೆ ಅದರತ್ತ ಗಮನ ಹೆಚ್ಚಿದ್ದಿದ್ದು ಸುಳ್ಳಲ್ಲ. ಎಲ್ಲಿ ನನಗಾಗುತ್ತಿರುವ ಸುಸ್ತಿಗೆ ಅದು ತಪ್ಪಿ ಹೋಗುತ್ತದೋ ಅನ್ನುವ ಭಯವಿತ್ತು. ಆದರೆ ಹಾಗಾಗದೇ ಎಲ್ಲವೂ ಅಂದುಕೊಂಡಂತೆಯೇ ನೆರವೇರಿದಾಗ ಸಮಾಧಾನವಾಗಿತ್ತು. ದಸರಾ ವೇಳೆಯಲ್ಲಿ ಹಗಲು ರಾತ್ರಿ ಹತ್ತು ದಿನಗಳ ಕಾಲ ಅಲ್ಲಿ ನೆರವೇರುತ್ತಿದ್ದ ಪೂಜೆ ಪುನಸ್ಕಾರಗಳು ಈಗ ಜಾತ್ರೆಯ ಮಟ್ಟಕ್ಕೆ ಮುಂದುವರೆದಿವೆ.

ಲೋಣಿಯ ನಾವಿದ್ದ 425/6 ನಂಬರಿನ ಅಪಾರ್ಟ್ಮೆಂಟ್ ಒಂದರಲ್ಲೇಗಟ್ಟಿ, ಅಸಹಾಯಕ, ಅನುಸರಿಸಿಕೊಂಡು ಹೋಗುವ, ಎಲ್ಲವನ್ನೂ ಸುಮ್ಮನೆ ಸಹಿಸಿಕೊಂಡು ಹೋಗುವ, ಕಾರ್ಯ ಸಿದ್ಧಿಗಾಗಿ ಯಾರು ಏನು ಹೇಳಿದರೂ ಮಾಡುವ, ಸಿಡಿದು ನಿಲ್ಲುವ ಹೆಣ್ಣುಮಕ್ಕಳಿದ್ದುದು ಅಪರೂಪವೇ ಸರಿ. ಹಾಗೆ ನಾನು ಅಲ್ಲಿ ಕಂಡ ಗಟ್ಟಿ ಹೆಣ್ಣುಮಗಳೆಂದರೆ ಸತ್ಯಭಾಮಾ ಶಿಂಗಾರೆ ಅಜ್ಜಿ. ಮರಾಠಿ ಜನ. ಸತ್ಯಭಾಮಾ ಅವರ ಗಂಡನಿಗೆ ಮೂರನೇ ಹೆಂಡತಿ. ಮೊದಲನೇಯವಳಿಗೆ ಮಕ್ಕಳಾಗಲಿಲ್ಲವೆಂದು ಎರಡನೇಯವಳನ್ನು, ಚೆಂದ ಇದ್ದಾಳೆಂದು ಸತ್ಯಭಾಮಾರನ್ನು ಮದುವೆಯಾಗಿದ್ದ ಆಕೆಯ ಪತಿಗಾಗಲಿ ಅವರ ಜಾತಿಯಲ್ಲಿ ಯಾರಿಗೇ ಆಗಲಿ ವಿದ್ಯೆ ಎನ್ನುವುದು ನಮ್ಮಂಥವರಿಗಲ್ಲ, ದುಡಿತವೊಂದೇ ಸತ್ಯ ಎಂದು ನಂಬಿ ಅದರಂತೆಯೇ ಬದುಕಿದವರು. ಆದರೆ ಸತ್ಯಭಾಮಾರ ಸುಂದರ ಕಣ್ಣುಗಳಲ್ಲಿನ ಕನಸುಗಳೂ ಸುಂದರವಾಗಿದ್ದವು.

ಒಬ್ಬನೇ ಮಗ ಅವರಿಗೆ. ಮಗ ಹುಟ್ಟುತ್ತಲೇ ಗಂಡನ ಪಿರಿಪಿರಿ ಸಹಿಸಲಾಗದೆ ಮನೆಬಿಟ್ಟು ಸೊಲ್ಲಾಪುರದ ಹತ್ತಿರದ ಕುರಡ್ವಾಡಿಗೆ ಬಂದು ವಯಸ್ಕರ ಸಾಕ್ಷರತಾ ತರಗತಿಯಲ್ಲಿ ನಾಲ್ಕಕ್ಷರ ಕಲಿತು, ದಾದಿಯರ ತರಬೇತಿ ಪಡೆದು ಕೆಲಸ ಮಾಡುತ್ತಾ ಮಗನನ್ನು ಮಾತ್ರವಲ್ಲದೇ ಗಂಡನ ಎರಡನೇ ಹೆಂಡತಿಯ ಮಕ್ಕಳಿಗೂ ಶಿಕ್ಷಣ ಸಿಗುವಂತೆ ವ್ಯವಸ್ಥೆ ಮಾಡಿದವರು. ಆದರೆ ಆ ಮಕ್ಕಳು ಅಕ್ಷರ ಕಲಿಕೆಗೆ ಒಗ್ಗದೇ ಹೋದಾಗ, ತನ್ನ ಮಗ ಹಾಗಾಗಲು ಬಿಡಬಾರದು ಎಂದು ನಿರ್ಧರಿಸಿ, ಕಠೋರವಾಗಬೇಕಾದ ಸಮದಲ್ಲಿ ಕಲ್ಲಾಗಿ, ಕರಬೇಕಾದಾಗ ನೀರಾಗಿ ಮಗ ನರ್ಸಿಂಗಲ್ಲಿ ಪದವಿ ಪಡೆಯುವಂತೆ ಮಾಡಿದವರು.

ಶಿಸ್ತಿಗೆ ಬಡತನ ಅಡ್ಡಿಯಲ್ಲ ಅನ್ನುವುದನ್ನು ಪಾಲಿಸಿ ತೋರಿಸಿದವರು ಆಕೆ. ಅವರ ಮಗ ದೀಪಕ್ ಶಿಂಗಾರೆ ಬೇರೆ ಊರುಗಳಲ್ಲಿ ಕೆಲಸ ಮಾಡಿ, ಲೋಣಿಯ ನರ್ಸಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಲಿಸಲು ಬರುವ ವೇಳೆಗೆ ಸತ್ಯಭಾಮಾ ಮೂರು ಮೊಮ್ಮಕ್ಕಳಿಗೆ ಅಜ್ಜಿ ಆಗಿದ್ದರಲ್ಲದೇ ಕಣ್ಣಿಲ್ಲದ ತಂಗಿಯ ಬದುಕಿಗೆ ಆಸರೆಯಾಗಿ ಅವರ ಮಗನನ್ನು ಓದಿಸುತ್ತಿದ್ದರು, ಕಣ್ಣಿಲ್ಲದ ತಂಗಿಯ ಮಗಳಿಗೂ ಕುರುಡು. ಆಕೆಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಅವರ ಬದುಕಲ್ಲಿ ಇಷ್ಟೆಲ್ಲಾ ಆದ ಮೇಲೆ ನಾವು ಲೋಣಿಗೆ ಹೋಗಿ ಅವರ ಪರಿಚಯವಾಗಿದ್ದು. ಅಜ್ಜಿಗೆ ಮನೆ ಸದಾ ನೀಟಾಗಿರಬೇಕು, ಮೊಮ್ಮಕ್ಕಳು ಶಿಸ್ತಿನಿಂದ ಬೆಳೆಯಬೇಕು. ಹಾಗೇ ನೋಡಿಕೊಳ್ಳುತ್ತಿದ್ದರು. 

ನಮ್ಮ ಪರಿಚಯ ಬೆಳೆದು ಆತ್ಮೀಯತೆ ಹುಟ್ಟಿದ ಮೇಲೆ ನಾನವರ ಮಾನಸಪುತ್ರಿಯಾಗಿಹೋಗಿದ್ದೆ. ಜಯಾ ಅನ್ನೋರು ನನ್ನನ್ನ. ಅದೊಂದು ದಿನ ನಮ್ಮನೆಗೆ ಬಂದವರು, “ನಿನಗೊತ್ತಾ? ನೀನು ನಮ್ಮನೆಯ ಜನರಿಗೆ ಏನೇ ಕೊಟ್ಟರೂ ನಂತರದಲ್ಲಿ ಅದು ನಾಲ್ಕು ಪಟ್ಟು ಹೆಚ್ಚಾಗುತ್ತೆ. ನಿನ್ನ ಕೈಗುಣ ವಿಶೇಷವಾದುದು!” ಎಂದರು. “ಏ ಹೋಗಿ ಅಜ್ಜಿ ನೀವೊಳ್ಳೆ! ಆಗಾಗ ಕಾಕತಾಳೀಯ ಆಗ್ತಿರುತ್ತೆ ಎಲ್ಲಾ ಕಡೆ. ಅದಕ್ಕೆಲ್ಲಾ ಕೈಗುಣ ಮತ್ತೊಂದು ಅಂತೆಲ್ಲಾ ಹೇಳಬೇಡಿ” ಎಂದೆ ನಾನು. ನನ್ನ ಮಾತನ್ನು ಒಪ್ಪದ ಅವರು, ನಾನು ಆ ಮನೆಯ ಜನರಿಗೆ ಅವರ ಹುಟ್ಟುಹಬ್ಬಕ್ಕೆ, ಆನಿವರ್ಸರಿಗೆ, ಆಗೀಗ ಉಡುಗೊರೆಗಳನ್ನು ಕೊಟ್ಟ ನಂತರ, ಅಂಥಂಥವೇ ಉಡುಗರೆಗಳು ಬೇರೆಯವರಿಂದಲೂ ಬಂದ ವಿಷಯವನ್ನು ಸಾಲಾಗಿ ಪಟ್ಟಿ ಮಾಡುತ್ತಾ (ಬಟ್ಟೆ, ಪಾತ್ರೆ ಪುಸ್ತಕ, ಬೆಳ್ಳಿ ಹೀಗೇ) ಹೇಳತೊಡಗಿದರು.

ಮೊದಮೊದಲು ನಾನದನ್ನು ನಂಬಲಿಲ್ಲವಾದರೂ, ಕೇಳಿದಾಗ ಮನಸ್ಸಿಗೆ ಮುದವೆನಿಸಿದ್ದು ಸುಳ್ಳಲ್ಲ. ಅವರು ಹೆಸರಿಸಿದ ಆ ಉಡುಗೊರೆಗಳೆಲ್ಲವೂ ನಾನು ಅತ್ಯಂತ ಪ್ರೀತಿಯಿಂದ ಇವರಿಗಿದನ್ನು ಕೊಡಲೇಬೇಕು ಎಂದೆನಿಸಿ ಕೊಟ್ಟ ಉಡುಗೊರೆಗಳಾಗಿದ್ದವು. ಯಾರಿಗಾದರೂ  ಇಂಥದ್ದನ್ನು ಇವರಿಗೆ ಕೊಡಬೇಕು ಅನ್ನುವ ಹಂಬಲ ಹುಟ್ಟಿದರೆ ಅದು ನನ್ನಲ್ಲಿ ತೀವ್ರವಾಗುತ್ತಿತ್ತು. ಕೊಡುವವರೆಗೆ ಸಮಾಧಾನವಿರುತ್ತಿರಲಿಲ್ಲ. ಅಂಥ ಅವಕಾಶವೊಂದು ಎದುರಾದರೆ ಇಲ್ಲವೇ ಆ ವ್ಯಕ್ತಿಗಳು ಎದುರಾದರೆ ಅವರಿಗೆ ಕೊಟ್ಟ ಮೇಲೆಯೇ ನನಗೆ ಸಮಾಧಾನವಾಗುತ್ತಿತ್ತು. ಈಗಲೂ ನನ್ನ ಆ ಸ್ವಭಾವ ಬದಲಾಗಿಲ್ಲವಾದರೂ ನನ್ನೊಳಗಿನ ತೀವ್ರತೆಗೆ ಕಡಿವಾಣ ಹಾಕುವುದನ್ನು ಬದುಕು ಕಲಿಸಿದೆ. ಸತ್ಯಭಾಮಾ ಅಜ್ಜಿ ಮಾತ್ರವಲ್ಲ ಮುಂದೆ ನನ್ನ ದೊಡ್ಡ ಸೋದರಮಾವನ ಹೆಂಡತಿ ಅನಸೂಯಾ ಅತ್ತಿ ಹಾಗೂ ಇನ್ನೂ ಹತ್ತಾರು ಜನರೂ ಕೂಡ ಹಾಗೇ ಹೇಳೀ ಹೇಳಿ, ಅದನ್ನು ನಾನೂ ನಂಬುವಂತಾಗಿ ಹೋಗಿತ್ತು. 

ಸತ್ಯಭಾಮಾ ಶಿಂಗಾರೆ ವ್ಯವಸ್ಥೆಗೆ ಸೆಡ್ಡು ಹೊಡೆದು ಬದುಕು ಕಟ್ಟಿಕೊಂಡ, ಮಗನನ್ನು ನೆಲೆಗೆ ಹಚ್ಚಿ, ನಾಲ್ಕಾರು ಕುಟುಂಬಗಳಿಗೆ ನೆರಳಾದ ಗಟ್ಟಿ ಹೆಣ್ಣುಮಗಳಾದರೆ, ಅವರ ಸೊಸೆ ನಳಿನಿ ಶಿಂಗಾರೆ ರಾತ್ರಿ ವೇಳೆ ಕುಡಿದ ಗಂಡನ ಆಜ್ಞೆಗಳನ್ನು, ಚೇಷ್ಟೆಗಳನ್ನು ಸಹಿಸುತ್ತಾ, ಬ್ಯಾಚುಲರ್ ವೈದ್ಯರುಗಳಿಗೆ ಮನೆಯಿಂದ ಎರಡೂ ಹೊತ್ತು ಊಟ ತಯಾರಿಸಿ ಡಬ್ಬಿ ಕಳಿಸುತ್ತಾ, ಗಂಡನಿಗೆ ಹಣಕಾಸಿನ ವಿಷಯದಲ್ಲೂ ನೆರವಾಗುತ್ತಾ ಮನೆಯನ್ನು ತೂಗಿಸುತ್ತಿದ್ದ ಗಟ್ಟಿ ಹೆಣ್ಣುಮಗಳು. ಸಾಕಷ್ಟು ಅಸಹಾಯಕ ಪರಿಸ್ಥಿತಿಗಳನ್ನೂ ತನ್ನ ಸಹನೆಯಿಂದಲೇ ಗೆದ್ದವರು ಆಕೆ. ನಾನಾಗಿದ್ದ್ರೆ ಅದೆಲ್ಲಾ ನನ್ನಿಂದ ಸಾಧ್ಯವೇ ಆಗುತ್ತಿರಲಿಲ್ಲವೆಂದು ಎಷ್ಟೋ ಬಾರಿ ನಾನವರಿಗೆ ಹೇಳಿದ್ದಿದೆ..

ಗ್ರೌಂಡ್ ಫ್ಲೋರಿನಲ್ಲಿದ್ದ ನಮ್ಮ ಮನೆಯ ಎಡ ಬದಿಯಲ್ಲಿದ್ದ ಮನೆಯಲ್ಲಿ ವಯಸ್ಕರ ಶಿಕ್ಷಣ ಪಡೆದ ಅತ್ತೆ, ಹತ್ತನೇ ತರಗತಿ ಓದಿದ ಸೊಸೆಯ ಕಥೆ ಹೀಗಾದರೆ, ಬಲಬದಿಯಲ್ಲಿದ್ದ ಸಿಂಧಿ ವೈದ್ಯ ದಂಪತಿ ಮಕ್ಕಳಿಗಾಗಿ ಹಂಬಲಿಸುತ್ತಿದ್ದವರು. ಪಾಪ ಯಾರೋ ಆಕೆಗೆ ಮಕ್ಕಳಿದ್ದವರ ಮನೆಯಲ್ಲಿ ಮಕ್ಕಳಿಗಾಗಿ ಉಪಯೋಗಿಸುವ ಪ್ಲೇಟು ಚಮಚ ಥರದ ಪಾತ್ರೆಗಳನ್ನು ಕದ್ದು ತಂದು ಅದರಲ್ಲಿ ಆಕೆ ಉಂಡರೆ ಮಕ್ಕಳಾಗುತ್ತವೆ ಎಂದು ಹೇಳಿದ್ದನ್ನು ನಂಬಿ ನಮ್ಮನೆಯಲ್ಲಿನ ಸ್ಟೀಲ್ ಪ್ಲೇಟು ಚಮಚ ಗ್ಲಾಸನ್ನು ನನಗೆ ತಿಳಿಯದಂತೆ ಒಯ್ದಿದ್ದರು ಅಥವಾ ಕೆಲಸವಳಿಂದ ತರಿಸಿಕೊಂಡಿದ್ದರು ಅನಿಸುತ್ತೆ. ಮುಂದೊಂದು ದಿನ ಅವರ ಮನೆಯಲ್ಲಿ ನಮ್ಮ ಆ ಸಾಮಾನುಗಳನ್ನು ಕಂಡ ನನ್ನ ಕಣ್ಣುಗಳನ್ನು ಓದಿದ ಆಕೆ, ಅಪರಾಧಿ ಭಾವದಲ್ಲಿ ಅವು ನಮ್ಮವೇ ಸಾಮಾನುಗಳು ಎಂದು ಹೇಳುತ್ತಾ, ಅವು ತಮ್ಮನೆಯಲ್ಲಿರುವ ಕಾರಣ ವಿವರಿಸುತ್ತಾ ಕಣ್ಣೀರಾಗಿದ್ದರು. ಅವರ ಆ ನಂಬಿಕೆ ಆಧಾರವಿಲ್ಲದ್ದು ಎಂದು ಗೊತ್ತಿದ್ದರೂ, ಅವರ ಸಮಾಧಾನಕ್ಕಾಗಿ, ‘ತೊಂದ್ರೆ ಇಲ್ಲ, ಅವೆಲ್ಲಾ ನಿಮ್ಮಲ್ಲೇ ಇರಲಿ, ಬೇಗ ನಿಮ್ಮ ಮಡಿಲು ತುಂಬಲಿ’ ಎಂದು ಹಾರೈಸಿ ಮನೆಗೆ ಬಂದಿದ್ದೆ. ಮುಂದೆ ಅವರು ಲೋಣಿಯಿಂದ ಬೇರೆಡೆ ಹೋಗಿ ಐದಾರು ವರ್ಷಗಳ ನಂತರ ಮಗುವಾದ ವಿಷಯ ತಿಳಿಸಿದ್ದರು ಫೋನ್ ಮಾಡಿ. ಟ್ರೀಟ್ಮೆಂಟ್ ತೆಗೆದುಕೊಂಡ ಬಳಿಕ ಮಗುವಾಗಿದ್ದನ್ನು ಹೇಳುತ್ತಾ ತಾನು ಮಗುವಿನ ಹಂಬಲದಲ್ಲಿ ನಮ್ಮನೆಯ ಸಾಮಾನನ್ನು ಕದ್ದಿದ್ದು ಎಂಥಾ ಸ್ಟುಪಿಡಿಟಿ ಆಗಿತ್ತು ಎನ್ನುತ್ತಾ ಬಾಯ್ತುಂಬಾ ನಕ್ಕಿದ್ದರು. 

ಮೊದಲನೇ ಫ಼್ಲೋರಿನಲ್ಲಿದ್ದ ಮಧ್ಯಪ್ರದೇಶದ ವೈದ್ಯ ದಂಪತಿ ಇಬ್ಬರೂ ಕಣ್ಣಿನ ವೈದ್ಯರು. ತುಂಬಾ ಮೃದು ಸ್ವಭಾವದ ಡಾ. ನೀತಾ ಮಿಶ್ರಾ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ಬುದ್ದಿವಂತ ಹೆಣ್ಣುಮಗಳಾದರೂ ಗಂಡನ ತಣ್ಣಗಿನ ಕ್ರೌರ್ಯವನ್ನು ಸಹಿಸುತ್ತಾ ನಲುಗುತ್ತಿದ್ದವರು. ವಾರದಲ್ಲಿ ಕನಿಷ್ಠ ಎರಡು ಬೆಳಗಾದರೂ ನಾವು ಅವರ ಅತ್ತೂ ಅತ್ತೂ ಊದಿದ ಕಣ್ಣುಗಳನ್ನು ನೋಡಿ ಮರುಗುತ್ತಿದ್ದೆವು. ಏನಾದರೂ ಸಹಾಯ ಮಾಡಬಹುದಾ ನಾವು ಎಂದು ಒಮ್ಮೆ ಧೈರ್ಯ ಮಾಡಿ ಆಕೆಯನ್ನು ಕೇಳಿದ್ದೆ. ಆಗ ಅವರು, “ಬೇಡ ಭಾಬಿ, ಅದರಿಂದ ನನ್ನ ಗಂಡ ಇನ್ನಷ್ಟು ಕ್ರೂರವಾಗಿ ವರ್ತಿಸುತ್ತಾನೆ. ನನ್ನ ತವರಿನವರು ಒಮ್ಮೆ ಯಾಕೆ ನಮ್ಮ ಮಗಳನ್ನು ಹೀಗೆ ಗೋಳುಹೊಯ್ದುಕೊಳ್ಳುತ್ತಿ ಅಂತ ಸೌಮ್ಯವಾಗೇ ಕೇಳಿದ್ದಕ್ಕೇನೇ, ಮುಂದೆ ಅದನ್ನೇ ನೆಪ ಮಾಡಿಕೊಂಡು ಎಷ್ಟೋ ತಿಂಗಳು ನನ್ನನ್ನು ಹಿಂಸಿಸಿದ್ದಾರೆ ಆತ. ಈಗ ನೀವು ಏನಾದರೂ ಹೇಳಹೋದರೆ ಮತ್ತೂ ರಂಪವಾಗಿ ಹಿಂಸೆ ಹೆಚ್ಚುತ್ತದೆ” ಎಂದಿದ್ದರು ಆಕೆ. ವಿದ್ಯೆ ಧೈರ್ಯ ನೀಡುತ್ತದೆ ಅನ್ನುತ್ತೇವೆ ನಾವು. ಆದರೆ ಅಕ್ಷರ ಕಲಿಕೆಗೂ ಆತ್ಮ ಸ್ಥೈರ್ಯಕ್ಕೂ ಏನೇನೂ ಸಂಬಂಧವಿಲ್ಲ ಅನ್ನುವುದಕ್ಕೆ ಸಾಕ್ಷಿ ಎಂಬಂತಿದ್ದರು ಡಾ. ನೀತಾ ಮಿಶ್ರಾ. ಇವರಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿದ್ದಾಕೆ ಇವರದೇ ಫ್ಲೋರಿನಲ್ಲಿದ್ದ ಡಾ. ಕಮಲ್ ರಾಠೋಡ್…

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

10 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading