
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.
ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.
ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.
‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.
‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.
ಈಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-
21
ಎಲ್ಲಿಗೆ ನಿಲ್ಲಿಸಿದ್ದೆ ನಾನು? ಮೂಢ ಆಚರಣೆಗಳ ಬಗ್ಗೆ ಹೇಳಿದ್ದೇ ಕೊನೆಯ ಕಂತಾಗಿತ್ತಲ್ಲವೇ? ಈಗೋ ಮತ್ತೆ ನಿಮ್ಮೆದುರು ನನ್ನ ಬದುಕಿನ ಕೆಲವು ಪುಟಗಳನ್ನು ತೆರೆದಿಡುತ್ತಿರುವೆ.
ನಾಲ್ಕು ತಿಂಗಳ ಹಿಂದೆ ಅಂದರೆ ೦೭ ಅಕ್ಟೋಬರ್ ೨೦೨೧ ರಂದು ನಮ್ಮ ಮನೆಯಲ್ಲಿ ದೇವತೆ ಜನಿಸಿದಳು, ಹೌದು ನನ್ನ ಮಗಳಿಗೆ ಮಗಳಾಗಿ, ನಾನು ಅಂದು ಅಜ್ಜಿಯಾದೆ. ಹೀಗಾಗಿ ಮಗುವಿನ ಪಾಲನೆ ಲಾಲನೆಯಲ್ಲಿ ಮುಳುಗಿಹೋಗಿದ್ದವಳಿಗೆ ಜಿ. ಎನ್ ಮೋಹನ್ ಸರ್ ಎಚ್ಚರಿಸಿ ಬರೆಯಲು ಸೂಚಿಸಲಾಗಿ ಮತ್ತೆ ನಿಮ್ಮ ಮುಂದೆ ಬಂದಿರುವೆ.
೧೯೮೨ರ ಜೂನ್ ತಿಂಗಳು. ಶಾಲೆಗಳು ಆಗಷ್ಟೇ ಆರಂಭಗೊಂಡಿದ್ದವು. ಆಗ ಊರ ತುಂಬೆಲ್ಲ ಡಾ. ರಾಜಕುಮಾರ ಅವರು ಕುಷ್ಟಗಿಗೆ ಬರುತ್ತಿದ್ದಾರೆ ಎನ್ನುವ ಸುದ್ದಿ ಮಕ್ಕಳಿಂದ ಮುದುಕರವರೆಗೆ ಎಲ್ಲರಲ್ಲೂ ಅವರನ್ನು ನೋಡಬೇಕು, ಈಗ ಕಣ್ಣಾರೆ ಎದುರೆದುರಿಗೇ ನೋಡಲು ಸಾಧ್ಯ ಎನ್ನುವ ಅನ್ನುವ ಪುಳಕ ಹುಟ್ಟಿಸಿತ್ತು. ರಾಜಕುಮಾರ್ ಕುಷ್ಟಗಿಗೆ ಬಂದುಹೋದ ದಿನಾಂಕ ನೆನಪಿಲ್ಲ ನನಗೆ ಆದರೆ ಅಂದು ಶಾಲೆಗೆ ರಜೆ ಇರಲಿಲ್ಲ. ಹೀಗಾಗಿ ಮಕ್ಕಳನ್ನೆಲ್ಲ ಮನೆಯಲ್ಲಿ ಬಿಟ್ಟೇ ಹೋಗುವುದಾಗಿ ನಿರ್ಧರಿಸಿ ಅವ್ವ, ಅವ್ವನ ಆತ್ಮೀಯ ಗೆಳತಿ ಲಕ್ಷ್ಮಿಬಾಯಿ ಅಕ್ಕೋರು ಹೊರಟು ನಿಂತರು.
ಮಕ್ಕಳ ಸೈನ್ಯ ಸುಮ್ಮನಿದ್ದೀತೇ? ನಾವೂ ರಾಜಕುಮಾರ್ ರನ್ನ ನೋಡಬೆಕು ಅಂತ ದುಂಬಾಲುಬಿದ್ದೆವು. ಪಾಪ ಮಕ್ಕಳು ಅನಿಸಿರಬೇಕು ಗೆಳತಿಯರಿಬ್ಬರಿಗೂ. ಕರೆದುಕೊಂಡು ಹೋಗಲು ಸಮ್ಮತಿಸಿದರು. ಆಗಿನ ನಮ್ಮ ಸಡಗರ ಹೇಳತೀರದು. ಅದೇನು ರಾಜ್ ಕುಮಾರ್ ಅವರು ನಮ್ಮನ್ನು ಖಾಸಗಿಯಾಗಿ ಭೇಟಿಯಾಗಲಿದ್ದಾರೆ ಎನ್ನುವಂತೆ ತೀಡಿ ತೀಡಿ ಬಟ್ಟೆಗಳನ್ನು ಇಸ್ತ್ರಿ ಮಾಡ್ಕೊಂಡು, ಏ ನನಗ ಕೊಡು, ನನಗೊಂದಿಷ್ಟು ಎನ್ನುತ್ತಾ ಪಾಂಡ್ಸ್ ಪೌಡರ್ ಮುಖಕ್ಕೆ ಬಳಿದುಕೊಂಡು ಮತ್ತೆ ಮತ್ತೆ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಚೆಂದ ಕಾಣುತ್ತಿದ್ದೇವೆ ಎಂದು ಸಂಭ್ರಮಿಸುತ್ತಾ ನಮ್ಮನೆಯ ೮ ಮಕ್ಕಳು ಅವ್ವ ಮತ್ತು ಲಕ್ಷ್ಮಿಬಾಯಿ ಅಕ್ಕೋರ ಬಾಲಂಗೋಸಿಯಾಗಿ ಹೊರಟೆವು. ಬಸ್ ಸ್ಟ್ಯಾಂಡಿನಲ್ಲಿ ನಿಂತಾಗ ಒಳಗೊಳಗೇ ನನಗೆ ಪುಕುಪುಕು ಶುರುವಾಯ್ತು. ಮುಖ್ಯರಸ್ತೆಗೇ ಅಂಟಿಕೊಂಡಂತಿದ್ದ ಶಾಲೆ.

ಈ ಮೊದಲೇ ಹೇಳಿದಂತೆ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಒಂದೇ ಕಂಪೌಂಡಿನಲ್ಲಿದ್ದವು. ಅಕಸ್ಮಾತ್ ಪಾಠ ಹೇಳಿತ್ತಿದ್ದ ಮೇಷ್ಟ್ರುಗಳಲ್ಲಿ ಯಾರಾದರೂ ಒಬ್ಬ ಮೇಷ್ಟ್ರು ಆಚೆ ಬಂದು ಬಸ್ ಸ್ಟ್ಯಾಂಡಿನಲ್ಲಿ ನಿಂತ ನನ್ನನ್ನು ನೋಡಿ, ನಾಳೆ ಬೆತ್ತದ ರುಚಿ ತೋರಿಸಿದರೇನು ಗತಿ ಅನಿಸಿ ಆದಷ್ಟು ಶಾಲೆಯೆಡೆಗೆ ಬೆನ್ನು ಮಾಡಿ ನಿಲ್ಲಲು ಯತ್ನಿಸುತ್ತಿದ್ದೆ. ಬಸ್ ಸ್ಟ್ಯಾಂಡ್ ಅಂದರೆ ಆಗ ಅದಕ್ಕಾಗಿ ಪ್ರತ್ಯೇಕ ಕಟ್ಟಡ ಅಂತೇನೂ ಇರಲಿಲ್ಲ ಆಗ. ರಸ್ತೆಯ ಎರಡೂ ಬದಿಯಲ್ಲಿ ಸಾಲಾಗಿರುವ ಹೊಟೆಲ್ಲುಗಳು, ಪಾನಪಟ್ಟಿ, ನಿಂಬೂ ಶರಬತ್ ಅಂಗಡಿಗಳಿದ್ದ ಜಾಗದಲ್ಲೇ ಎಲ್ಲಾ ಸರಕಾರಿ ಮತ್ತು ಖಾಸಗಿ ಬಸ್ಸುಗಳು ನಿಲ್ಲುತ್ತಿದ್ದವಾದ್ದರಿಂದ ಆ ಜಾಗವನ್ನು ಬಸ್ ಸ್ಟ್ಯಾಂಡ್ ಎಂದು ಕರೆಯುತ್ತಿದ್ದೆವು. ಇಳಕಲ್ ಕಡೆಯಿಂದ ಕುಷ್ಟಗಿ ಕಡೆಗೆ ಹೋಗುವ ಬಸ್ಸು ಇಂದು ಅದೆಷ್ಟಾರ ತಡ ಮಾಡುತ್ತಿದೆ ಅನಿಸತೊಡಗಿತ್ತು.
ರಾಜ್ ಕುಮಾರ್ ಅವರನ್ನು ನೋಡುವ ಉತ್ಸಾಹದಲ್ಲಿ ಊರ ಮುಂಚೆ ನಾವು ಬಂದು ನಿಂತರೆ ನಮ್ಮ ಸಮಯಕ್ಕೆ ಬಂದು ನಿಲ್ಲಲು ಕೆಂಪು ಬಸ್ಸೇನು ನಮ್ಮ ಮುತ್ತ್ಯಾಂದಾ? ಅದು ಬರಬೇಕಾದ ಸಮಯಕ್ಕೆ ಸರಿಯಾಗಿ ಬಂತು. ಬಸ್ ಏರಿದ ಮೇಲೆ ಕೇವಲ ಅರ್ಧ ಮುಕ್ಕಾಲು ಗಂಟೆಯ ದಾರಿ ನೂರಾರು ಮೈಲಿ ದೂರವಿದೆ ಕುಷ್ಟಗಿ ಇನ್ನೂ ಬರುತ್ತಿಲ್ಲ ಎನಿಸಿ ಬಸ್ ಡ್ರೈವರ್ ಮೇಲೆ ಸಿಟ್ಟು ಬರತೊಡಗಿತ್ತು. ಈ ಡ್ರೈವರ್ ನಿಂದಾಗಿ ರಾಜ್ ಕುಮಾರ್ ಅವರು ನಮಗೋಸ್ಕರ ಕಾದೂ ಕಾದೂ ಕುಷ್ಟಗಿಯಿಂದ ಬೆಂಗಳೂರಿಗೆ ಹೊರಟೇಹೋಗಿಬಿಡ್ತಾರೆ, ಅವರನ್ನು ಮಾತಾಡಿಸೋದಿರಲಿ ನೋಡಲೂ ಆಗುವುದಿಲ್ಲವಲ್ಲ ಎಂದು ಚಡಪಡಿಸತೊಡಗಿದೆ. ಅದೆಂಥಾ ಚಡಪಡಿಕೆ ಅದು! ಬಸ್ಸಿಂದ ಇಳಿದು ಓಡೋಡುತ್ತಾ ಹೋಗಿಬಿಡಲೇ ಎನ್ನುವಷ್ಟು. ಸಾಧ್ಯಾವಾದ ಮಾತು. ಅತ್ತಿತ್ತ ಕತ್ತು ತಿರುಗಿಸಿ ಜನರತ್ತ ನೋಡಿದರೆ ಎಲ್ಲರ ಬಾಯಲ್ಲಿ ಬಸ್ಸಿನ ತುಂಬಾ ರಾಜ್ ಕುಮಾರ್! ಕೆಲವರಿಗೆ ವಿಷಯ ಗೊತ್ತಿರಲಿಲ್ಲ. ತಿಳಿದಿದ್ದೇ ಅವರಲ್ಲಿ ಕೆಲವು ಜನ ತಮ್ಮ ಪ್ರಯಾಣ ಮೊಟಕುಗೊಳಿಸಿ ರಾಜ್ ಕುಮಾರ್ ರನ್ನ ನೋಡಿಯೇ ಮುಂದುವರೆಯೋದು ಎಂದುಕೊಂಡರೆ ಒಂದಿಷ್ಟು ಜನ ಟಿಕೇಟಿನ ಹಣ ಹೋಗುವುದು ಎಂದು ಚಿಂತಿಸುತ್ತಾ ಕಂಡಕ್ಟರ್ ಬಳಿ ವಿಚಾರಿಸುತ್ತಿದ್ದರು. ಕಂಡಕ್ಟರ್ ಡ್ರೈವರುಗಳಿಗೂ ರಾಜ್ ಕುಮಾರ್ ಅವರನ್ನು ನೋಡುವ ಆಸೆ ಇರದೇ ಇದ್ದೀತೇ? ತುಸುಹೊತ್ತು ನಿಂತು ನೋಡಿಯೇ ಮುಂದಕ್ಕೆ ಬಸ್ ಬಿಡೋದು ಎಂದು ತೀರ್ಮಾನಿಸಿದರು. ಹೀಗಾಗಿ ಬಸ್ಸು ಕುಷ್ಟಗಿ ಊರ ಅಂಚಿಗೆ ಇದ್ದ ಮೈದಾನದ ಬಳಿ ನಿಂತಿತು. ಬಸ್ಸಿನಿಂದಿಳಿದು ನೋಡಿದರೆ ಎದುರಿಗೆ ಎತ್ತ ನೋಡಿದರೂ ಜನವೋ ಜನ! ದೂರದಲ್ಲಿ ಪೆಂಡಾಲೊಂದು ಚುಕ್ಕೆಯಂತೆ ಕಾಣುತ್ತಿದೆ! ಬೇರೆ ಯಾರೋ ಮಾತಾಡುತ್ತಿದ್ದಾರೆ, ದನಿ ಕೇಳುತ್ತಿದೆ ಅದು ರಾಜ್ ಕುಮಾರದ್ದಲ್ಲ. ಜನಸಾಗರ ಕಂಡೇ ದಂಗು ಬಡಿದಿದ್ದ ನನಗೆ ಅಲ್ಲಿ ಬೇರೆಯವರ ದನಿ ಕೇಳಿ ಬಸ್ಸಿನವರು ಬಹುಶಃ ತಪ್ಪು ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದುಕೊಂಡೆ ಅಷ್ಟರಲ್ಲಿ ‘ನೀವೆಲ್ಲ ಇಲ್ಲಿ ನಿಮ್ಮ ಮೆಚ್ಚಿನ ನಟ ರಾಜ್ ಕುಮಾರ ಅವರ ಮಾತನ್ನು ಕೇಳಲು ಕಾತರರಾಗಿದ್ದೀರಿ ಎಂದು ಗೊತ್ತು’ ಎನ್ನುವ ಮಾತು ಅತ್ತ ಮೈಕಿನಿಂದ ಹೊಮ್ಮಿದ್ದೇ ಇಲ್ಲೇ ರಾಜ್ ಕುಮಾರ್ ಅವ್ರಿರೋದು ಅನ್ನುವುದು ಖಾತ್ರಿಯಾಗಿ, “ಯವ್ ಬೇ ಇನ್ನಾ ಮುಂದಕತ ಹೋಗೂನು, ಇಲ್ಲೇನೂ ಕಾಣವಲ್ತು” ಎಂದೆ. ಹೌದು ನಡೀರಿ ಅಂದ್ಳು ಅವ್ವ.
ಜನಸಾಗರದಲ್ಲಿ ಕೈಕಾಲು ಬಡಿಯುತ್ತಾ ಈಜತೊಡಗಿದೆವೆಂದೇ ಹೇಳಬೇಕು. ಎಲ್ಲರೂ ನಮ್ಮಂತೆಯೇ ಆದಷ್ಟು ಮುಂದೆ ಮುಂದೆ, ವೇದಿಕೆಗೆ ಸಮೀಪ ಆ ಮೂಲಕ ರಾಜ್ಕುಮಾರ್ ಅವರ ಸಮೀಪಕ್ಕೆ ಹೋಗಬೇಕು ಎನ್ನುವವರೇ ಆದ್ದರಿಂದ ನಮ್ಮ ಈಜಿಗೊಂದು ರಭಸ ಸಿಕ್ಕಿತ್ತು. ಸೆಳೆತವಿತ್ತು. ಇನ್ನು ಮುಂದೆ ಹೋಗಲಾಗದು ಎನ್ನುವಷ್ಟು ಕಿಕ್ಕಿರಿದ ಜಾಗ ತಲುಪಿದ ಮೇಲೆ ಒಂದೆಡೆ ನಿಲ್ಲುವುದು ಅನಿವಾರ್ಯವಾದಾಗ, ತಲೆ ಎತ್ತಿ ನೋಡಿದರೆ ವೇದಿಕೆ ಅಂದಾಜು ಮುನ್ನೂರು ನಾನ್ನೂರು ಅಡಿ ದೂರದಲ್ಲಿತ್ತು! ಅದಾಗಲೇ ರಾಜ್ ಕುಮಾರ್ ಮೈಕ್ ಮುಂದೆ ಬಂದು ನಿಂತು ಎಲ್ಲರೆಡೆ ಕೈ ಬೀಸುತ್ತಾ ನಗುತ್ತಾ ನಿಂತಿದ್ದರು. ಜನಸ್ತೋಮ ಹೋ ಎನ್ನುತ್ತಾ ಜೈಕಾರ ಹಾಕುತ್ತಿತ್ತು.
ರಾಜ್ ಕುಮಾರ್ ಅವರು ಮಾತನಾಡಲು ಆರಂಭಿಸುತ್ತಿದ್ದಂತೆಯೇ ಗಾಳಿಯೂ ಚಲಿಸುವುದು ನಿಂತಿತೇನೋ ಅನ್ನುವಷ್ಟು ಜನ ಸ್ಥಬ್ದರಾದರು. ಸುಳ್ಳು ಹೇಳಲಾರೆ, ಅಂದು ಅವರು ಏನೆಲ್ಲ ಮಾತಾಡಿದರೆನ್ನುವುದು ಕೇಳಿಸಿಕೊಳ್ಳಲೇಯಿಲ್ಲ. ತದೇಕವಾಗಿ ಅವರನ್ನೇ ನೋಡುತ್ತಿದ್ದೆ ಮತ್ತು ಡಾ. ರಾಜಕುಮಾರ್, ಕನ್ನಡದ ಮೇರು ಪರ್ವತ, ಪರಕಾರ ಜಂಪರ್ ತೊಟ್ಟ, ಎರಡು ಜಡೆಯ ಚೋಟುದ್ದದ ಹಳ್ಳಿಯ ಹೈಸ್ಕೂಲು ಹುಡುಗಿಯನ್ನು ಅರ್ಥಾರ್ಥ್ ಕೇವಲ ನನ್ನನ್ನು ಮಾತ್ರ ನೋಡುತ್ತಾ ಮಾತಾಡುತ್ತಿದ್ದರು! ಎಂಥಾ ಸುಂದರ ಭ್ರಮೆ ಅದು ಅಂತೀರಿ! ಆದರೆ ಅಂದು ಆ ಭ್ರಮೆಯನ್ನು ಜೀವಿಸಿದ್ದೆ ಮತ್ತು ಅನೇಕ ದಿನಗಳ ಕಾಲ ಅದೇ ಭ್ರಮೆಯಲ್ಲಿದ್ದೆ.

ನನ್ನನ್ನೇ ನೋಡುತ್ತಾ ಮಾತನಾಡುತ್ತಾರೆ ನನ್ನ ಮೆಚ್ಚಿನ ರಾಜಕುಮಾರ್ ಎಂದುಕೊಂಡಿದ್ದೆ. ವೇದಿಕೆಯ ಮೇಲೆ ಅನೇಕ ಸಾಹಿತಿಗಳು, ಕಲಾವಿದರು ಇದ್ದರಾದರೂ ಅಂದು ಡಾ. ರಾಜಕುಮಾರ್ ಮಾತ್ರ ನನ್ನ ಕಣ್ಣ ಗೊಂಬೆಯಾಗಿದ್ದರು. ನಿಜ ಹೇಳ್ತೀನಿ ಅಂದು ಅಲ್ಲಿಗೆ ಅಂದರೆ ಕುಷ್ಟಗಿಗೆ ಯಾಕೆ ಅವರೆಲ್ಲ ಬಂದಿದ್ದರು ಎನ್ನುವುದು ಗೊತ್ತಿರಲಿಲ್ಲ ನನಗೆ. ರಾಜಕುಮಾರ್ ಬರುತ್ತಿದ್ದಾರೆ ಅನ್ನುವುದಷ್ಟೇ ಮುಖ್ಯವಾಗಿತ್ತು. ನನ್ನಂತೆಯೇ ಅನೇಕರಿಗೂ ಸಹ. ಈಗ ನನ್ನ ಆಗಿನ ಹೊರಪ್ರಪಂಚದ ಆಗುಹೋಗುಗಳ ಬಗ್ಗೆ ಇದ್ದ ಅಲ್ಪ ಜ್ಞಾನದ ಬಗ್ಗೆ ಹಳಹಳಿಯಾಗುತ್ತದೆ. ಆದರೆ ಆಗ ನನ್ನ ಮಿತಿ ಅಷ್ಟೇ ಇತ್ತು ಅನ್ನುವುದು ವಾಸ್ತವ.
ವೇದಿಕೆ ಮೇಲಿದ್ದ ರಾಜಕುಮಾರ್ ಅವರ ಮಾತು ಮುಗಿಯುತ್ತಿದ್ದಂತಯೇ ಜನ ರಾಜ್ ಕುಮಾರ್ ಗೆ ಜಯವಾಗಲಿ ಎಂದು ಜನ ಜಯಘೋಷ ಮಾಡಿದರೆ, ವಿನಯವಂತ ವರನಟ ಕನ್ನಡಕ್ಕೆ ಜಯವಾಗಲಿ ಎನ್ನುತ್ತಿದ್ದರು. ಹಿಂದಿನಿಂದಲೇ ಜನಸಾಗರ ಅವರ ಮಾತನ್ನು ಪ್ರತಿಧ್ವನಿಸುತ್ತಿತ್ತು. ಆ ಮೂಲಕ ಕನ್ನಡಕ್ಕೆ ಜಯವಾಯಿತು. ಗೋಕಾಕ್ ವರದಿವನ್ನು ಅಂಗೀಕರಿಸಿತು ಸರಕಾರ. ಹೌದು ಅದು ಗೋಕಾಕ್ ಚಳುವಳಿ. ಪಾಟೀಲ್ ಪುಟ್ಟಪ್ಪನವರ ಕೋರಿಕೆಗೆ ಓಗೊಟ್ಟು ಚಳುವಳಿಯಲ್ಲಿ ಧುಮುಕಿದ್ದಷ್ಟೇ ಅಲ್ಲ ಬಿಸಿಲು ಮಳೆ ಎನ್ನದೇ ಕರ್ನಾಟಕದಾದ್ಯಂತ ಸಂಚರಿಸಿ ಜನರಲ್ಲಿ ಕನ್ನಡಾಭಿಮಾನವನ್ನು ಬಿತ್ತಿದವರು.
ಸರಕಾರ ಗೋಕಾಕ್ ವರದಿಯನ್ನು ಜಾರಿಗೊಳಿಸುವುದು ಅನಿವಾರ್ಯವಾಗುವಂತೆ ಮಾಡಿದವರು ಡಾ. ರಾಜಕುಮಾರ್. ಕರ್ನಾಟಕ ಸರಕಾರ ನೇಮಿಸಿದ್ದ ಭಾಷಾ ಸಮಿತಿಯ ಅಧ್ಯಕ್ಷರಾಗಿದ್ದ ವಿ.ಕೃ ಗೋಕಾಕರು ತಯಾರಿಸಿದ ವರದಿ ಈ ಚಳುವಳಿಯ ಮೂಲ. ಇಂದಿನಂತೆ ಅಂದಿನ ದಿನಗಳಲ್ಲಿ ಎಂಥದ್ದೇ ಸಣ್ಣ ಅಥವಾ ದೊಡ್ಡ ಸುದ್ದಿಯಾಗಲಿ ತತಕ್ಷಣ ಜನರಿಗೆ ತಲುಪುತ್ತಿರಲಿಲ್ಲವಾಗಿ ಕನ್ನಡಪರ ಹೋರಾಟಗಾರಾಗಿದ್ದ ಚಂಪಾ ಮತ್ತು ಇನ್ನು ಕೆಲ ಸಾಹಿತಿಗಳಿಗೆ ಗೋಕಾಕ್ ಅವರ ವರದಿ ಸಂಸ್ಕೃತಪರ ಎನಿಸಿ ಧಾರವಾಡದಲ್ಲಿ, ‘ಗೋ ಬ್ಯಾಕ್ ಗೋಕಾಕ್’ ಎಂದು ಘೋಷಣೆ ಕೂಗುವುದರ ಮೂಲಕ ವಿರೋಧಿಸಿದ್ದರಂತೆ.
ಮುಂದೆ ತಮ್ಮ ಅನುಮಾನ ಸುಳ್ಳೆನ್ನುವುದು ಗೊತ್ತಾಗಿ, ಪಾಟೀಲ್ ಪುಟ್ಟಪ್ಪನವರ ಮುಂದಾಳತ್ವದಲ್ಲಿ ಶಂ.ಭಾ ಜೋಷಿಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಗೋಕಾಕ್ ಚಳುವಳಿಯಲ್ಲಿ ಪುಟ್ಟಪ್ಪನವರ ಹೆಗಲಿಗೆ ಹೆಗಲಾಗಿ ನಿಂತು ಕೆಲಸ ಮಾಡಿದರು. ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿದರು. ಗೋಕಾಕ್ ಚಳುವಳಿ ಯಶಸ್ವಿಯಾಗಲು ಉತ್ತರ ಕರ್ನಾಟಕ ಭಾಗದ ಸಾಹಿತಿಗಳ ಕೊಡುಗೆ ಅನನ್ಯವಾದು. ಮತ್ತು ನಮ್ಮ ಬಿಜಾಪುರ(ವಿಜಯಪುರ)ದ ಶ್ರೀಯುತ ಕೋರಳ್ಳಿಯವರು ಉಪವಾಸ ಕೂರುವುದರ ಮೂಲಕ ಇದಕ್ಕೆ ಚಾಲನೆ ಸಿಕ್ಕಿತ್ತೆನ್ನುವುದನ್ನು ಓದಿದ ನನಗೆ ನನ್ನ ನೆಲದ ಬಗ್ಗೆ ಹೆಮ್ಮೆಯಾಯಿತು.
ಅದು ೧೯೮೪ರ ಇಸವಿ. ಶಿವರಾತ್ರಿಯ ದಿನದಂದು ಅವಧೂತ ಶುಕಮುನಿ ತಾತನ ಜಾತ್ರೆ ಮುಗಿದು, ಮುಂದೆಂಟು ದಿನಗಳಲ್ಲಿ ನಿಧಾನವಾಗಿ ಗುಡಿಯ ಎದುರಿನ ಹಾಕಲ್ಪಟ್ಟಿದ್ದ ತರಾವರಿ ಅಂಗಡಿಗಳು, ಜನಜಂಗುಳಿ ಕರಗಿಹೋಗಿದ್ದರೂ ಆ ಸಲದ ಜಾತ್ರೆಗೆ ದೋಟಿಹಾಳದಲ್ಲಿ ಟೆಂಟ್ ಹಾಕಿದ್ದ ಪಿ.ಬಿ ಧುತ್ತರಗಿ ಅವರ ನಾಟಕ ಕಂಪನಿಯ ನಾಟಕಗಳಿಗೆ ಜೋರಿನಿಂದ ರಂಗೇರತೊಡಗಿತ್ತು. ಒಂದೆಡೆ ಮನೆ ಎದುರಿಗೇ ಹಾಕಿದ ನಾಟಕದ ಟೆಂಟು, ಇನ್ನೊಂದೆಡೆ SSLC ಪರೀಕ್ಷೆಯ ತಯಾರಿ. ‘ಅಕ್ಕಿ ಮೇಲಾಸೆ ನೆಂಟರ ಮೇಲೆ ಪ್ರೀತಿ’ ಅನ್ನೊ ಹಾಗೆ ನನ್ನ ಸ್ಥಿತಿ. ಅಪ್ಪ ಪರೀಕ್ಷೆಗಳು ಮುಗಿದಾದ ಮೇಲೆ ದಿನವೂ ನಾಟಕಗಳನ್ನು ನೋಡಲು ಬಿಡುವುದಾಗಿ ಹೇಳಿದ್ದರಿಂದ ಓದಿನತ್ತ ಗಮನ ಹರಿಸಿದೆ.

ನಾನೊಂಥರಾ ಸಂತೆಗೆ ಮೂರು ಮೊಳ ನೇಯುವವರಂತೆ ಯಾವತ್ತೂ ಮುಂಚಿನಿಂದ ಓದೀ ಓದೀ ಪರೀಕ್ಷೆ ಬರೆದವಳಲ್ಲ. ಪರೀಕ್ಷೆ ಇನ್ನೇನು ಹದಿನೈದು ಇಪ್ಪತ್ತು ದಿನಗಳಿವೆ ಅನ್ನುವಾಗ ನನ್ನ ಬಿಟ್ಟರೆ ಇನ್ನೊಬ್ಬ ಒಳ್ಳೆಯ ವಿದ್ಯಾರ್ಥಿನಿ ಇಲ್ಲ ಅನ್ನುವಂತೆ ಓದುತ್ತಿದ್ದೆ. ಆದರೆ ಆಗಲೂ ರೇಡಿಯೋದಲ್ಲಿ ಬೆಳಿಗ್ಗೆ ೭.೪೫ರಿಂದ ೮ರವರೆಗೆ, ಮದ್ಯಾಹ್ನ ೧.೩೦ರಿಂದ ೨ ಮತ್ತು ಸಂಜೆ ೫.೩೦ರಿಂದ ೬ರವರೆಗೆ ಗುಲ್ಬರ್ಗಾ (ಕಲಬುರಗಿ) ಮತ್ತು ಧಾರವಾಡ ಆಕಾಶವಾಣಿಯಿಂದ ಪ್ರಸಾರಗೊಳ್ಳುತ್ತಿದ್ದ ಚಿತ್ರಗೀತೆಗಳನ್ನ, ಬುಧವಾರ ಮತ್ತು ಗುರುವಾರ ಪ್ರಸಾರವಾಗುತ್ತಿದ್ದ ಬಾನುಲಿ ನಾಟಕಗಳನ್ನ, ಭಾನುವಾರದ ಗಿಳಿವಿಂಡು ಕಾರ್ಯಕ್ರಮಗಳನ್ನ ಕೇಳುವುದು ತಪ್ಪಿ ಹೋಗದಂತೆ ನೋಡಿಕೊಳ್ಳುತ್ತಿದ್ದೆ ಮತ್ತು ಆ ಕಾರಣಕ್ಕಾಗಿ ಚಟಗೇಡಿ ಎಂದು ಬೈಸಿಕೊಳ್ಳುತ್ತಲೂ ಇದ್ದೆ. ಪರೀಕ್ಷೆ ಹತ್ತಿರ ಬಂದಂತೆಲ್ಲ ರೇಡಿಯೊ ನನ್ನಿಂದ ದೂರ ಸರಿಯಿತು.
ಪರೀಕ್ಷೆ ಬರೆಯಲು ಕುಷ್ಟಗಿಗೆ ಹೋಗಬೇಕು. ನಿತ್ಯವೂ ಹೋಗಿ ಬಂದು ಮಾಡಿದಲ್ಲಿ ಅಕಸ್ಮಾತ್ ಬಸ್ ತಪ್ಪಿಹೋದರೆ ಪರೀಕ್ಷೆ ಬರೆಯಲಾಗುವುದಿಲ್ಲ ಎನ್ನುವ ಮುನ್ನೆಚ್ಚರಿಕೆಯಿಂದಾಗಿ, ಪರೀಕ್ಷೆ ಬರೆಯಲಿರುವ ದೋಟಿಹಾಳದ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗಳು ಮುಗಿಯುವವರೆಗೆ ಖೋಲಿ ಬಾಡಿಗೆಗೆ ಹಿಡಿದು ಅಲ್ಲೇ ಇರುವುದು ಎಂದಾಯಿತು. ನಾವು ಕ್ಲೋಸ್ ಅಂದುಕೊಂಡ ಹುಡುಗರು ಒಟ್ಟಾಗಿ ಅಲ್ಲಲ್ಲಿ ಖೋಲಿಗಳನ್ನು ಬಾಡಿಗೆ ಹಿಡಿದರು.
ನನ್ನ ಸಹಪಾಠಿಗಳಾಗಿದ್ದ ಗಾಯತ್ರಿ ಮತ್ತು ಬಂದಮ್ಮ, ನಾನು ಮೂವರೂ ಗಾಯತ್ರಿಯ ತಾಯಿಯವರ ದೇಖರೇಖಿಯಲ್ಲಿ ಒಂದು ರೂಮಲ್ಲಿ ಉಳಿದುಕೊಂಡೆವು. ಪರೀಕ್ಷೆ ಬರೆಯಲು ಪರೀಕ್ಷಾ ಪ್ಯಾಡ್ (ಆಗ ಹಾಗೇ ಅನ್ನುತ್ತಿದ್ದೆವು), ಹಾಲ್ ಟಿಕೇಟ್, ಎರಡೆರೆಡು ಇಂಕ್ ಪೆನ್, ತನ್ನ ಎಲ್ಲ ಪರಿಕರಗಳನ್ನು ಹೊಂದಿದ ಕಂಪಾಸ್ ಬಾಕ್ಸ್, ರಬ್ಬರ್, ಪೆನ್ಸಿಲ್, ಮೈಂಡರ್ ಎಲ್ಲವನ್ನೂ ಮರೆಯದೆ ತಂದಿದ್ದೆವು. ಮೊದಲ ದಿನ ದೇವರನ್ನು ನೆನೆಯುತ್ತಾ ಅಳುಕುತ್ತಲೇ ಕುಷ್ಟಗಿಯ ಹೈಸ್ಕೂಲೊಂದರಲ್ಲಿ ಹಾಲ್ ಟಿಕೇಟ್ ಮೇಲಿದ್ದ ಸಿರಿಯಲ್ ನಂಬರ್ ಇರುವ ಖೋಲಿ ಹುಡುಕಿ, ನನ್ನ ನಂಬರ್ ಬರೆದ ಡೆಸ್ಕ್ ಮೇಲೆ ಕುಳಿತೆ.
|ಇನ್ನು ಮುಂದಿನ ವಾರಕ್ಕೆ|






0 Comments